ಅರಣ್ಯಕಾಂಡ
31 ಆಮೇಲೆ ಯೆಹೋವ ಮೋಶೆಗೆ 2 “ಮಿದ್ಯಾನ್ಯರು+ ಇಸ್ರಾಯೇಲ್ಯರಿಗೆ ಮಾಡಿದ್ದಕ್ಕೆ ಸೇಡು ತೀರಿಸು.+ ಇದಾದ ಮೇಲೆ ನೀನು ಸಾಯ್ತೀಯ”+ ಅಂದನು.
3 ಹಾಗಾಗಿ ಮೋಶೆ ಜನ್ರಿಗೆ “ನಿಮ್ಮಲ್ಲಿ ಸ್ವಲ್ಪ ಗಂಡಸರನ್ನ ಯುದ್ಧಕ್ಕೆ ಕಳಿಸೋಕೆ ಸಿದ್ಧಮಾಡಿ. ಅವರು ಮಿದ್ಯಾನ್ಯರ ವಿರುದ್ಧ ಯುದ್ಧ ಮಾಡಿ ಯೆಹೋವನ ಪರವಾಗಿ ಸೇಡು ತೀರಿಸ್ಲಿ. 4 ಇಸ್ರಾಯೇಲ್ಯರ ಪ್ರತಿಯೊಂದು ಕುಲದಿಂದ 1,000 ಗಂಡಸರನ್ನ ಯುದ್ಧಕ್ಕೆ ಕಳಿಸಬೇಕು” ಅಂದ. 5 ಇಸ್ರಾಯೇಲ್ಯರು ಲಕ್ಷಗಟ್ಲೆ ಇದ್ರು.+ ಪ್ರತಿ ಕುಲದಿಂದ 1,000 ಗಂಡಸರಂತೆ ಒಟ್ಟು 12,000 ಗಂಡಸರನ್ನ ಆರಿಸ್ಕೊಂಡ್ರು. ಅವರೆಲ್ಲ ಯುದ್ಧಕ್ಕೆ ತಯಾರಾದ್ರು.
6 ಇಸ್ರಾಯೇಲ್ಯರ ಎಲ್ಲ ಕುಲದಿಂದ ಆರಿಸ್ಕೊಂಡ ಒಟ್ಟು 12,000 ಗಂಡಸರನ್ನ ಮೋಶೆ ಯುದ್ಧಕ್ಕೆ ಕಳಿಸಿದ. ಅವರ ಜೊತೆ ಪುರೋಹಿತ ಎಲ್ಲಾಜಾರನ ಮಗ ಫೀನೆಹಾಸನನ್ನ+ ಕೂಡ ಕಳಿಸಿದ. ಫೀನೆಹಾಸ ಪವಿತ್ರ ಉಪಕರಣಗಳನ್ನ, ಯುದ್ಧದ ತುತ್ತೂರಿಗಳನ್ನ+ ತಗೊಂಡು ಹೋದ. 7 ಯೆಹೋವ ಮೋಶೆಗೆ ಆಜ್ಞೆ ಕೊಟ್ಟ ಹಾಗೆ ಅವರು ಮಿದ್ಯಾನ್ಯರ ವಿರುದ್ಧ ಯುದ್ಧ ಮಾಡಿದ್ರು. ಅಲ್ಲಿರೋ ಎಲ್ಲ ಗಂಡಸರನ್ನ ಕೊಂದು ಹಾಕಿದ್ರು. 8 ಎವೀ, ರೆಕೆಮ್, ಚೂರ್, ಹೂರ್, ರೆಬಾ ಅನ್ನೋ ಮಿದ್ಯಾನಿನ ಐದು ರಾಜರನ್ನ ಕೊಂದ್ರು. ಬೆಯೋರನ ಮಗ ಬಿಳಾಮನನ್ನ+ ಸಹ ಕತ್ತಿಯಿಂದ ಕೊಂದ್ರು. 9 ಆದ್ರೆ ಇಸ್ರಾಯೇಲ್ಯರು ಅಲ್ಲಿನ ಸ್ತ್ರೀಯರನ್ನ, ಮಕ್ಕಳನ್ನ ಕೊಲ್ಲದೆ ಸೆರೆಹಿಡಿದ್ರು. ಅವರ ಸಾಕುಪ್ರಾಣಿ, ಬೇರೆ ಪ್ರಾಣಿ, ಸೊತ್ತುಗಳನ್ನೆಲ್ಲ ಸೂರೆಮಾಡಿದ್ರು. 10 ಮಿದ್ಯಾನ್ಯರು ವಾಸವಾಗಿದ್ದ ಎಲ್ಲ ಪಟ್ಟಣಗಳನ್ನ ಪಾಳೆಯಗಳನ್ನ* ಬೆಂಕಿ ಹಾಕಿ ಸುಟ್ಟುಬಿಟ್ರು. 11 ಆಮೇಲೆ ಅವರು ಸೆರೆಹಿಡಿದ ಎಲ್ರನ್ನ ಕೊಳ್ಳೆಹೊಡೆದ ಸೊತ್ತುಗಳನ್ನ ಪ್ರಾಣಿಗಳನ್ನ ತಗೊಂಡು 12 ಮೋಶೆ, ಪುರೋಹಿತ ಎಲ್ಲಾಜಾರ್, ಎಲ್ಲ ಇಸ್ರಾಯೇಲ್ಯರು ಇದ್ದ ಪಾಳೆಯದ ಹತ್ರ ಬಂದ್ರು. ಇಸ್ರಾಯೇಲ್ಯರ ಪಾಳೆಯ ಯೆರಿಕೋ ಪಟ್ಟಣದ ಹತ್ರ, ಯೋರ್ದನ್ ನದಿ ಪಕ್ಕದಲ್ಲಿದ್ದ ಮೋವಾಬಿನ ಬಯಲು ಪ್ರದೇಶಗಳಲ್ಲಿ+ ಇತ್ತು.
13 ಆಗ ಮೋಶೆ, ಪುರೋಹಿತ ಎಲ್ಲಾಜಾರ್, ಎಲ್ಲ ಪ್ರಧಾನರು ಅವರನ್ನ ಭೇಟಿಯಾಗೋಕೆ ಪಾಳೆಯದ ಹೊರಗೆ ಹೋದ್ರು. 14 ಯುದ್ಧ ಮುಗಿಸಿ ಬಂದಿದ್ದ ಸೈನ್ಯದ ಅಧಿಕಾರಿಗಳನ್ನ ಅಂದ್ರೆ ಸಾವಿರ ಸಾವಿರ ಸೈನಿಕರ ಮೇಲೆ, ನೂರು ನೂರು ಸೈನಿಕರ ಮೇಲೆ ಅಧಿಕಾರಿಗಳಾಗಿದ್ದ ಗಂಡಸರನ್ನ ನೋಡಿ ಮೋಶೆಗೆ ತುಂಬ ಕೋಪ ಬಂತು. 15 ಮೋಶೆ ಅವರಿಗೆ “ಸ್ತ್ರೀಯರನ್ನೆಲ್ಲ ಯಾಕೆ ಉಳಿಸಿದ್ದೀರ? 16 ಬಿಳಾಮನ ಮಾತು ಕೇಳಿ ಇಸ್ರಾಯೇಲ್ಯರನ್ನ ಬುಟ್ಟಿಗೆ ಹಾಕೊಂಡಿದ್ದು ಈ ಸ್ತ್ರೀಯರಲ್ವಾ? ಇವರಿಂದಾನೇ ಇಸ್ರಾಯೇಲ್ಯರು ಪೆಗೋರನ ವಿಷ್ಯದಲ್ಲಿ+ ಯೆಹೋವನಿಗೆ ನಂಬಿಕೆ ದ್ರೋಹ ಮಾಡಿದ್ರು.+ ಅದಕ್ಕೇ ಯೆಹೋವನ ಜನ್ರ ಮೇಲೆ ಕಷ್ಟ ಬಂತು.+ 17 ಹಾಗಾಗಿ ಗಂಡಸರ ಜೊತೆ ಲೈಂಗಿಕ ಸಂಬಂಧ ಇಟ್ಟ ಎಲ್ಲ ಸ್ತ್ರೀಯರನ್ನ, ಅವರ ಎಲ್ಲ ಗಂಡು ಮಕ್ಕಳನ್ನ ಸಾಯಿಸಿ. 18 ಆದ್ರೆ ಲೈಂಗಿಕ ಸಂಬಂಧ ಇಡದ ಹುಡುಗಿಯರನ್ನ+ ಸಾಯಿಸಬೇಡಿ. 19 ಏಳು ದಿನ ಪಾಳೆಯದ ಹೊರಗೆ ಡೇರೆ ಹಾಕೊಳ್ಳಿ. ಕೊಲೆಗಾರರು, ಶವ ಮುಟ್ಟಿದವರು+ ಮೂರನೇ ದಿನ ಮತ್ತೆ ಏಳನೇ ದಿನ ತಮ್ಮನ್ನ ಶುದ್ಧ ಮಾಡ್ಕೊಬೇಕು.+ ನೀವು, ನೀವು ಸೆರೆಹಿಡಿದು ತಂದ ಎಲ್ರೂ ತಮ್ಮನ್ನ ಶುದ್ಧ ಮಾಡ್ಕೊಬೇಕು. 20 ನಿಮ್ಮೆಲ್ಲ ಬಟ್ಟೆಗಳನ್ನ ಚರ್ಮದ ವಸ್ತುಗಳನ್ನ ಆಡುಕೂದಲಿಂದ ಮಾಡಿದ ಎಲ್ಲ ವಸ್ತುಗಳನ್ನ ಮರದ ವಸ್ತುಗಳನ್ನ ಶುದ್ಧ ಮಾಡಬೇಕು” ಅಂದ.
21 ಆಮೇಲೆ ಪುರೋಹಿತ ಎಲ್ಲಾಜಾರ ಯುದ್ಧದಿಂದ ಬಂದ ಗಂಡಸರಿಗೆ “ಯೆಹೋವ ಮೋಶೆ ಮೂಲಕ ಕೊಟ್ಟ ನಿಯಮ ಏನಂದ್ರೆ 22 ‘ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ, ತವರ, ಸೀಸವನ್ನ 23 ಅಂದ್ರೆ ಬೆಂಕಿಯಲ್ಲಿ ಸುಟ್ಟುಹೋಗದ ಎಲ್ಲವನ್ನ ಬೆಂಕಿಗೆ ಹಾಕಿ ಶುದ್ಧ ಮಾಡಬೇಕು. ಅವುಗಳನ್ನ ಶುದ್ಧೀಕರಣದ ನೀರಿಂದ+ ಸಹ ಶುದ್ಧ ಮಾಡಬೇಕು. ಬೆಂಕಿಯಲ್ಲಿ ಸುಟ್ಟುಹೋಗೋ ವಸ್ತುಗಳನ್ನ ನೀರಿಂದ ತೊಳಿಬೇಕು. 24 ಏಳನೇ ದಿನ ನಿಮ್ಮ ಬಟ್ಟೆಗಳನ್ನ ಒಗಿಬೇಕು. ಆಗ ಶುದ್ಧ ಆಗ್ತೀರ. ಆಮೇಲೆ ನೀವು ಪಾಳೆಯದ ಒಳಗೆ ಬರಬಹುದು’”+ ಅಂದನು.
25 ಯೆಹೋವ ಮೋಶೆಗೆ 26 “ನೀನು ಪುರೋಹಿತ ಎಲ್ಲಾಜಾರನ ಜೊತೆ, ಇಸ್ರಾಯೇಲ್ಯರ ಕುಟುಂಬಗಳ ಮುಖ್ಯಸ್ಥರ ಜೊತೆ ಸೇರಿ ಕೊಳ್ಳೆಯ ಎಲ್ಲ ಸಾಮಾನು, ಪ್ರಾಣಿ, ಸೆರೆಹಿಡಿದು ತಂದ ಜನ್ರನ್ನ ಲೆಕ್ಕ ಮಾಡು. 27 ಆಮೇಲೆ ಎಲ್ಲ ಕೊಳ್ಳೆಯನ್ನ ಎರಡು ಪಾಲು ಮಾಡು. ಒಂದು ಪಾಲನ್ನ ಯುದ್ಧಮಾಡಿ ಬಂದ ಸೈನಿಕರಿಗೆ, ಇನ್ನೊಂದನ್ನ ಜನ್ರಲ್ಲಿ ಉಳಿದವರಿಗೆ ಕೊಡು.+ 28 ಯುದ್ಧಕ್ಕೆ ಹೋದ ಸೈನಿಕರು ತಮಗೆ ಸಿಕ್ಕಿದ ಪಾಲಿಂದ 500 ಜನ್ರಲ್ಲಿ ಒಬ್ರನ್ನ* ಮತ್ತು ಹಸು, ಕತ್ತೆ, ಆಡು-ಕುರಿ ಪ್ರತಿಯೊಂದ್ರಲ್ಲೂ 500ರಲ್ಲಿ ಒಂದೊಂದನ್ನ* ಯೆಹೋವನಿಗೋಸ್ಕರ ತೆರಿಗೆ ಕೊಡಬೇಕು. 29 ನೀನು ಆ ತೆರಿಗೆ ತಗೊಂಡು ಪುರೋಹಿತ ಎಲ್ಲಾಜಾರನಿಗೆ ಕೊಡಬೇಕು. ಅದು ಯೆಹೋವನಿಗೆ ಕೊಡೋ ಕಾಣಿಕೆ.+ 30 ಇಸ್ರಾಯೇಲ್ಯರು ತಮಗೆ ಸಿಕ್ಕಿದ ಪಾಲಿಂದ 50 ಜನ್ರಲ್ಲಿ ಒಬ್ರನ್ನ ಮತ್ತು ಹಸು, ಕತ್ತೆ, ಆಡು-ಕುರಿ, ಎಲ್ಲ ರೀತಿಯ ಸಾಕುಪ್ರಾಣಿಗಳಲ್ಲಿ ಪ್ರತಿಯೊಂದ್ರಿಂದ 50ರಲ್ಲಿ ಒಂದೊಂದನ್ನ ಕೊಡಬೇಕು. ನೀನು ಅದನ್ನ ತಗೊಂಡು ಯೆಹೋವನ ಪವಿತ್ರ ಡೇರೆಗೆ ಸಂಬಂಧಿಸಿದ ಜವಾಬ್ದಾರಿ ನಿರ್ವಹಿಸೋ+ ಲೇವಿಯರಿಗೆ ಕೊಡಬೇಕು”+ ಅಂದನು.
31 ಯೆಹೋವ ಮೋಶೆಗೆ ಆಜ್ಞೆ ಕೊಟ್ಟ ಹಾಗೇ ಮೋಶೆ, ಪುರೋಹಿತ ಎಲ್ಲಾಜಾರ ಮಾಡಿದ್ರು. 32 ಕೊಳ್ಳೆಹೊಡೆದು ತಂದದ್ರಲ್ಲಿ ಸೈನಿಕರು ತಿಂದು ಉಳಿದಿದ್ದನ್ನ ಲೆಕ್ಕ ಮಾಡಿದಾಗ 6,75,000 ಆಡು-ಕುರಿ, 33 72,000 ಹಸು, 34 61,000 ಕತ್ತೆ ಇತ್ತು. 35 ಗಂಡಸರ ಜೊತೆ ಲೈಂಗಿಕ ಸಂಬಂಧ ಇಡದ ಸ್ತ್ರೀಯರು 32,000 ಇದ್ರು.+ 36 ಯುದ್ಧಕ್ಕೆ ಹೋದವರಿಗೆ ಸಿಕ್ಕಿದ ಪಾಲಲ್ಲಿ 3,37,500 ಆಡು-ಕುರಿ ಇತ್ತು. 37 ಇದ್ರಲ್ಲಿ ಯೆಹೋವನಿಗೆ ತೆರಿಗೆಯಾಗಿ ಕೊಟ್ಟ ಆಡು-ಕುರಿ 675. 38 ಅವರಿಗೆ 36,000 ಹಸುಗಳು ಸಿಕ್ತು. ಅದ್ರಲ್ಲಿ ಯೆಹೋವನಿಗೆ 72 ಹಸುಗಳನ್ನ ತೆರಿಗೆಯಾಗಿ ಕೊಟ್ರು. 39 ಅವರಿಗೆ 30,500 ಕತ್ತೆಗಳು ಸಿಕ್ತು. ಅದ್ರಲ್ಲಿ ಯೆಹೋವನಿಗೆ 61 ಕತ್ತೆಗಳನ್ನ ತೆರಿಗೆಯಾಗಿ ಕೊಟ್ರು. 40 ಅವರಿಗೆ 16,000 ಕನ್ಯೆಯರು ಸಿಕ್ಕಿದ್ರು. ಅವ್ರಲ್ಲಿ 32 ಕನ್ಯೆಯರನ್ನ ಯೆಹೋವನಿಗೆ ತೆರಿಗೆಯಾಗಿ ಕೊಟ್ರು. 41 ಯೆಹೋವ ಆಜ್ಞೆ ಕೊಟ್ಟ ಪ್ರಕಾರ ಮೋಶೆ ಆ ತೆರಿಗೆ ತಗೊಂಡು ಪುರೋಹಿತ ಎಲ್ಲಾಜಾರನಿಗೆ ಕೊಟ್ಟ.+ ಅದು ಯೆಹೋವನಿಗೆ ಕೊಟ್ಟ ಕಾಣಿಕೆ.
42 ಮೋಶೆ ಕೊಳ್ಳೆಯಲ್ಲಿ ಅರ್ಧ ಭಾಗವನ್ನ ಯುದ್ಧಕ್ಕೆ ಹೋದವರಿಗೆ ಕೊಟ್ಟ ಮೇಲೆ ಉಳಿದ ಇನ್ನರ್ಧ ಭಾಗವನ್ನ ಇಸ್ರಾಯೇಲ್ಯರಿಗೆ ಕೊಟ್ಟ. 43 ಅದ್ರಲ್ಲಿ 3,37,500 ಆಡು-ಕುರಿ, 44 36,000 ಹಸು, 45 30,500 ಕತ್ತೆ ಇತ್ತು. 46 16,000 ಕನ್ಯೆಯರು ಇದ್ರು. 47 ಇಸ್ರಾಯೇಲ್ಯರಿಗೆ ಸಿಕ್ಕಿದ ಭಾಗದಿಂದ 50 ಜನ್ರಲ್ಲಿ ಒಬ್ರನ್ನ, ಪ್ರಾಣಿಗಳಲ್ಲಿ 50ರಲ್ಲಿ ಒಂದೊಂದನ್ನ ತಗೊಂಡು ಯೆಹೋವನ ಪವಿತ್ರ ಡೇರೆಗೆ ಸಂಬಂಧಿಸಿದ ಜವಾಬ್ದಾರಿ ನಿರ್ವಹಿಸೋ+ ಲೇವಿಯರಿಗೆ ಕೊಟ್ಟ.+ ಹೀಗೆ ಯೆಹೋವ ಹೇಳಿದ ಹಾಗೇ ಮೋಶೆ ಮಾಡಿದ.
48 ಆಮೇಲೆ ಸೇನಾ ವಿಭಾಗಗಳ ಅಧಿಪತಿಗಳು ಅಂದ್ರೆ ಸಾವಿರ ಸೈನಿಕರ ಮೇಲೆ,+ ನೂರು ಸೈನಿಕರ ಮೇಲೆ ಅಧಿಪತಿಗಳಾಗಿದ್ದ ಗಂಡಸರು ಮೋಶೆ ಹತ್ರ ಬಂದು 49 “ಸ್ವಾಮಿ, ನಿನ್ನ ಸೇವಕರಾದ ನಾವು ನಮ್ಮ ಕೈಕೆಳಗಿರೋ ಸೈನಿಕರನ್ನ ಲೆಕ್ಕ ಮಾಡಿದ್ವಿ. ನಮ್ಮಲ್ಲಿ ಒಬ್ರೂ ಕಡಿಮೆ ಆಗಿಲ್ಲ, ಎಲ್ರೂ ಇದ್ದಾರೆ.+ 50 ಹಾಗಾಗಿ ನಮಗೆ ಸಿಕ್ಕಿದ ಚಿನ್ನದ ಆಭರಣಗಳನ್ನ ಅಂದ್ರೆ ಕಡಗ, ಬಳೆ, ಮುದ್ರೆ ಉಂಗುರ, ಕಿವಿಯೋಲೆ, ಬೇರೆ ಆಭರಣಗಳನ್ನ ಯೆಹೋವನಿಗೆ ಅರ್ಪಿಸೋಕೆ ನಮ್ಮಲ್ಲಿ ಪ್ರತಿಯೊಬ್ರು ಬಯಸ್ತೀವಿ. ಯೆಹೋವನ ಮುಂದೆ ನಮಗಾಗಿ ಪ್ರಾಯಶ್ಚಿತ್ತ ಮಾಡೋಕೆ ಇವುಗಳನ್ನ ಕೊಡ್ತೀವಿ” ಅಂದ್ರು.
51 ಅವರು ಕೊಟ್ಟ ಚಿನ್ನದ ಎಲ್ಲ ಆಭರಣಗಳನ್ನ ಮೋಶೆ, ಪುರೋಹಿತ ಎಲ್ಲಾಜಾರ್ ತಗೊಂಡ್ರು. 52 ಸಾವಿರ ಸೈನಿಕರ ಮೇಲೆ, ನೂರು ಸೈನಿಕರ ಮೇಲೆ ಅಧಿಪತಿಗಳಾಗಿದ್ದ ಗಂಡಸರು ಯೆಹೋವನಿಗೆ ಕಾಣಿಕೆಯಾಗಿ ಕೊಟ್ಟ ಚಿನ್ನದ ಒಟ್ಟು ತೂಕ 16,750 ಶೆಕೆಲ್.* 53 ಯುದ್ಧಕ್ಕೆ ಹೋದ ಪ್ರತಿಯೊಬ್ಬ ಸೈನಿಕನಿಗೂ ಕೊಳ್ಳೆಯಲ್ಲಿ ಪಾಲು ಸಿಕ್ತು. 54 ಸಾವಿರ ಸೈನಿಕರ ಮೇಲೆ, ನೂರು ಸೈನಿಕರ ಮೇಲೆ ಅಧಿಪತಿಗಳಾಗಿದ್ದ ಗಂಡಸರು ಕೊಟ್ಟ ಚಿನ್ನವನ್ನ ಮೋಶೆ, ಪುರೋಹಿತ ಎಲ್ಲಾಜಾರ್ ದೇವದರ್ಶನ ಡೇರೆ ಒಳಗೆ ತಂದ್ರು. ಯುದ್ಧದಲ್ಲಿ ದೇವರು ಹೇಗೆಲ್ಲ ಸಹಾಯ ಮಾಡಿದನು ಅಂತ ನೆನಪಿಸೋಕೆ ಇಸ್ರಾಯೇಲ್ಯರು ಅದನ್ನ ಯೆಹೋವನ ಮುಂದೆ ಇಟ್ರು.