ಮಾರ್ಕ
11 ಅವರು ಪ್ರಯಾಣ ಮಾಡಿ ಯೆರೂಸಲೇಮಿನ ಹತ್ರ ಅಂದ್ರೆ ಆಲೀವ್ ಗುಡ್ಡದ ಮೇಲಿದ್ದ ಬೇತ್ಫಗೆ ಮತ್ತು ಬೇಥಾನ್ಯದ+ ಹಳ್ಳಿಗಳಿಗೆ ಬಂದ್ರು. ಯೇಸು ಇಬ್ರು ಶಿಷ್ಯರನ್ನ ಕರೆದು+ 2 ಅವ್ರಿಗೆ “ಅಲ್ಲಿ ಮುಂದೆ ಕಾಣ್ತಾ ಇದ್ಯಲ್ಲಾ, ಆ ಹಳ್ಳಿಗೆ ಹೋಗಿ. ಅಲ್ಲಿ ಒಂದು ಕತ್ತೆ ಮರಿಯನ್ನ ಕಟ್ಟಿಹಾಕಿರ್ತಾರೆ. ಅದ್ರ ಮೇಲೆ ಇಲ್ಲಿ ತನಕ ಯಾರೂ ಕೂತಿಲ್ಲ. ಅದನ್ನ ಬಿಚ್ಚಿ ನನ್ನ ಹತ್ರ ತನ್ನಿ. 3 ಯಾಕೆ ಬಿಚ್ತಿದ್ದೀರಾ ಅಂತ ಯಾರಾದ್ರೂ ಕೇಳಿದ್ರೆ ‘ನಮ್ಮ ಸ್ವಾಮಿಗೆ ಬೇಕು. ಬೇಗ ವಾಪಸ್ ಕೊಟ್ಟುಬಿಡ್ತಾನೆ’” ಅಂತ ಹೇಳಿ ಅಂದನು. 4 ಅವರು ಹೋದಾಗ ಒಂದು ಬೀದಿಯಲ್ಲಿ ಮನೆ ಮುಂದೆ ಒಂದು ಕತ್ತೆಮರಿಯನ್ನ ಕಟ್ಟಿಹಾಕಿರೋದು ಅವ್ರ ಕಣ್ಣಿಗೆ ಬಿತ್ತು. ಅದನ್ನ ಬಿಚ್ಚಿದ್ರು.+ 5 ಅಲ್ಲಿ ನಿಂತಿದ್ದ ಸ್ವಲ್ಪ ಜನ “ಯಾಕೆ ಕತ್ತೆಮರಿನ ಬಿಚ್ತಿದ್ದೀರಾ?” ಅಂತ ಕೇಳಿದ್ರು. 6 ಅದಕ್ಕೆ ಅವರು ಯೇಸು ಹೇಳಿದ್ದನ್ನೇ ಹೇಳಿದ್ರು. ಆಗ ಜನ ಏನೂ ಹೇಳಲಿಲ್ಲ.
7 ಶಿಷ್ಯರು ಆ ಕತ್ತೆಮರಿಯನ್ನ+ ತಂದು ಅದ್ರ ಮೇಲೆ ತಮ್ಮ ಬಟ್ಟೆ ಹಾಕಿದ್ರು. ಯೇಸು ಅದ್ರ ಮೇಲೆ ಹತ್ತಿ ಕೂತ.+ 8 ತುಂಬ ಜನ ಅವ್ರ ಬಟ್ಟೆಯನ್ನ ದಾರಿಯಲ್ಲಿ ಹಾಸಿದ್ರು. ಇನ್ನು ಕೆಲವರು ತೋಟಗಳಿಂದ ಖರ್ಜೂರದ ಗರಿಗಳನ್ನ ಕತ್ತರಿಸಿ ತಂದು ಹರಡಿದ್ರು.+ 9 ಆತನ ಹಿಂದೆ-ಮುಂದೆ ಇದ್ದ ಜನ “ದೇವರೇ, ಇವನಿಗೆ ಜಯವಾಗಲಿ!+ ಯೆಹೋವನ* ಹೆಸ್ರಲ್ಲಿ ಬರ್ತಿರೋ ಇವನಿಗೆ ಆಶೀರ್ವಾದ ಸಿಗಲಿ!+ 10 ಬರಲಿರೋ ನಮ್ಮ ತಂದೆಯಾದ ದಾವೀದನ ಆಳ್ವಿಕೆಯನ್ನ ದೇವರು ಆಶೀರ್ವದಿಸಲಿ!+ ಸ್ವರ್ಗದಲ್ಲಿರೋ ದೇವರೇ, ಇವನಿಗೆ ಜಯವಾಗಲಿ!” ಅಂತ ಕೂಗ್ತಿದ್ರು. 11 ಯೇಸು ಯೆರೂಸಲೇಮಿಗೆ ಬಂದು ದೇವಾಲಯಕ್ಕೆ ಹೋಗಿ ಅಲ್ಲಿ ಸುತ್ತಲೂ ಇದ್ದ ಎಲ್ಲದರ ಮೇಲೆ ಕಣ್ಣಾಡಿಸಿದನು. ಆದ್ರೆ ಆಗಲೇ ಸಂಜೆ ಆಗಿದ್ರಿಂದ 12 ಶಿಷ್ಯರ ಜೊತೆ ಬೇಥಾನ್ಯಕ್ಕೆ ಹೋದನು.+
12 ಮಾರನೇ ದಿನ ಅವರು ಬೇಥಾನ್ಯದಿಂದ ಬರ್ತಿದ್ದಾಗ ಯೇಸುಗೆ ಹಸಿವಾಯ್ತು.+ 13 ದೂರದಲ್ಲಿ ಎಲೆಗಳಿದ್ದ ಒಂದು ಅಂಜೂರದ ಮರ ಆತನಿಗೆ ಕಾಣಿಸ್ತು. ಅದ್ರಲ್ಲಿ ಹಣ್ಣು ಸಿಗಬಹುದು ಅಂತ ಆತನು ಅದ್ರ ಹತ್ರ ಹೋದನು. ಅಲ್ಲಿ ಹೋಗಿ ನೋಡಿದ್ರೆ ಎಲೆ ಬಿಟ್ಟು ಬೇರೇನೂ ಇರ್ಲಿಲ್ಲ. ಯಾಕಂದ್ರೆ ಅದು ಅಂಜೂರ ಹಣ್ಣಿನ ಕಾಲ ಆಗಿರ್ಲಿಲ್ಲ. 14 ಯೇಸು ಅದಕ್ಕೆ “ಇನ್ಮುಂದೆ ಯಾವತ್ತೂ ನಿನ್ನ ಹಣ್ಣನ್ನ ಜನ ತಿನ್ನದ ಹಾಗಾಗಲಿ” ಅಂದನು.+ ಶಿಷ್ಯರು ಇದನ್ನ ಕೇಳಿಸ್ಕೊಂಡ್ರು.
15 ಆಮೇಲೆ ಯೇಸು ಯೆರೂಸಲೇಮಿಗೆ ಬಂದನು. ಆಲಯಕ್ಕೆ ಹೋಗಿ ಅಲ್ಲಿದ್ದ ವ್ಯಾಪಾರಿಗಳನ್ನ, ಗಿರಾಕಿಗಳನ್ನ ಹೊರಗೆ ಓಡಿಸಿದನು. ಹಣ ಬದಲಾಯಿಸ್ತಿದ್ದ ಜನ್ರ ಮೇಜುಗಳನ್ನ, ಪಾರಿವಾಳ ಮಾರ್ತಿದ್ದ ಜನ್ರ ಕುರ್ಚಿಗಳನ್ನ ಎತ್ತಿ ಬಿಸಾಡಿದನು.+ 16 ದೇವಾಲಯದ ಒಳಗಿಂದ ವಸ್ತುಗಳನ್ನ ಹೊತ್ಕೊಂಡು ಹೋಗೋಕೆ ಯಾರಿಗೂ ಆತನು ಬಿಡಲಿಲ್ಲ. 17 ಆತನು ಜನ್ರಿಗೆ ಕಲಿಸ್ತಾ “‘ನನ್ನ ಆಲಯಕ್ಕೆ ಎಲ್ಲ ದೇಶದ ಜನ್ರ ಪ್ರಾರ್ಥನಾ ಮಂದಿರ ಅನ್ನೋ ಹೆಸ್ರು ಬರುತ್ತೆ’ ಅಂತ ಬರೆದಿದೆ.+ ಆದ್ರೆ ನೀವು ಇದನ್ನ ‘ಕಳ್ಳರ ಸಂತೆ’ ಮಾಡ್ತಾ ಇದ್ದೀರ” ಅಂದನು.+ 18 ಇದನ್ನ ಕೇಳಿಸ್ಕೊಂಡ ಮುಖ್ಯ ಪುರೋಹಿತರು, ಪಂಡಿತರು ಆತನನ್ನ ಕೊಲ್ಲೋಕೆ ದಾರಿ ಹುಡುಕ್ತಾ ಇದ್ರು.+ ಆದ್ರೆ ಆತನ ಮೇಲೆ ಅವ್ರಿಗೆ ಭಯ ಇತ್ತು. ಯಾಕಂದ್ರೆ ಜನ್ರೆಲ್ಲ ಆತನು ಕಲಿಸೋದನ್ನ ಕೇಳಿಸ್ಕೊಂಡು ಯಾವಾಗ್ಲೂ ಆಶ್ಚರ್ಯಪಡ್ತಾ ಇದ್ರು.+
19 ಸಂಜೆ ಆದಾಗ ಯೇಸು ಮತ್ತು ಶಿಷ್ಯರು ಪಟ್ಟಣ ಬಿಟ್ಟು ಹೊರಗೆ ಹೋದ್ರು. 20 ಆದ್ರೆ ಬೆಳಬೆಳಿಗ್ಗೆ ಅವರು ದಾರಿಯಲ್ಲಿ ಹೋಗ್ತಿದ್ದಾಗ ಆ ಅಂಜೂರ ಮರ ಒಣಗಿ ಹೋಗಿದ್ದನ್ನ ನೋಡಿದ್ರು.+ 21 ಆಗ ಪೇತ್ರನಿಗೆ ಯೇಸು ಹೇಳಿದ್ದು ನೆನಪಾಯ್ತು. ಅವನು ಯೇಸುಗೆ “ಗುರು, ಅಲ್ಲಿ ನೋಡು! ನೀನು ಶಾಪಕೊಟ್ಟ ಅಂಜೂರ ಮರ ಒಣಗಿಹೋಗಿದೆ” ಅಂದ.+ 22 ಅದಕ್ಕೆ ಯೇಸು “ದೇವರಲ್ಲಿ ನಂಬಿಕೆ ಇಡಿ. 23 ನಿಮಗೆ ನಿಜ ಹೇಳ್ತೀನಿ, ನೀವು ಆ ಬೆಟ್ಟಕ್ಕೆ ‘ಹೋಗಿ ಸಮುದ್ರಕ್ಕೆ ಬೀಳು’ ಅಂತ ಹೇಳಿ, ಸಂಶಯಪಡದೆ ಹೇಳಿದ್ದು ಆಗುತ್ತೆ ಅಂತ ನಂಬಿಕೆ ಇಟ್ರೆ ಅದು ಖಂಡಿತ ಆಗೇ ಆಗುತ್ತೆ.+ 24 ಅದಕ್ಕೆ ಹೇಳ್ತಿದ್ದೀನಿ, ನೀವು ಯಾವುದಕ್ಕಾಗಿ ಪ್ರಾರ್ಥನೆ ಮಾಡ್ತಿರೋ ಅದು ಈಗಾಗ್ಲೇ ನಿಮಗೆ ಸಿಕ್ಕಿದೆ ಅಂತ ನಂಬಿದ್ರೆ ಖಂಡಿತ ಸಿಗುತ್ತೆ.+ 25 ನೀವು ಪ್ರಾರ್ಥಿಸುವಾಗೆಲ್ಲ ಯಾರ ಮೇಲಾದ್ರೂ ಬೇಜಾರಿದ್ರೆ ಅವ್ರನ್ನ ಕ್ಷಮಿಸಿಬಿಡಿ. ಹೀಗೆ ಮಾಡಿದ್ರೆ ಸ್ವರ್ಗದಲ್ಲಿರೋ ನಿಮ್ಮ ತಂದೆ ಸಹ ನಿಮ್ಮ ತಪ್ಪುಗಳನ್ನ ಕ್ಷಮಿಸ್ತಾನೆ”+ ಅಂದನು. 26 *——
27 ಅವರು ಮತ್ತೆ ಯೆರೂಸಲೇಮಿಗೆ ಬಂದ್ರು. ಯೇಸು ದೇವಾಲಯದಲ್ಲಿ ನಡಿತಿದ್ದಾಗ ಮುಖ್ಯ ಪುರೋಹಿತರು, ಪಂಡಿತರು, ಹಿರಿಯರು ಬಂದು 28 “ಯಾವ ಅಧಿಕಾರದಿಂದ ನೀನು ಇದೆಲ್ಲ ಮಾಡ್ತಿದ್ದೀಯ? ಈ ಅಧಿಕಾರ ನಿಂಗ್ಯಾರು ಕೊಟ್ರು?” ಅಂತ ಕೇಳಿದ್ರು.+ 29 ಯೇಸು ಅವ್ರಿಗೆ “ನಾನೂ ಒಂದು ಪ್ರಶ್ನೆ ಕೇಳ್ತೀನಿ. ನೀವು ಅದಕ್ಕೆ ಉತ್ರ ಕೊಟ್ರೆ ನಾನು ಯಾವ ಅಧಿಕಾರದಿಂದ ಇದೆಲ್ಲ ಮಾಡ್ತಾ ಇದ್ದೀನಿ ಅಂತ ಹೇಳ್ತೀನಿ. 30 ದೀಕ್ಷಾಸ್ನಾನ ಮಾಡಿಸೋ ಅಧಿಕಾರ ಯೋಹಾನನಿಗೆ+ ಯಾರು ಕೊಟ್ರು? ದೇವರಾ? ಮನುಷ್ಯರಾ? ಉತ್ರ ಕೊಡಿ” ಅಂದನು.+ 31 ಆಗ ಅವರು ಒಬ್ರಿಗೊಬ್ರು “ನಾವು ಏನಾದ್ರೂ ದೇವರು ಅಂತ ಹೇಳಿದ್ರೆ, ‘ಹಾಗಾದ್ರೆ ನೀವ್ಯಾಕೆ ಅವನನ್ನ ನಂಬಲಿಲ್ಲ?’ ಅಂತಾನೆ. 32 ಮನುಷ್ಯರು ಅಂತ ಹೇಳಿದ್ರೆ ಜನ ನಮ್ಮನ್ನ ಸುಮ್ನೆ ಬಿಡ್ತಾರಾ?” ಅಂತ ಮಾತಾಡ್ಕೊಂಡ್ರು. ಯೋಹಾನ ಒಬ್ಬ ಪ್ರವಾದಿ ಅಂತ ಜನ ನಂಬಿದ್ರು.+ ಹಾಗಾಗಿ ಅವರು ಜನ್ರಿಗೆ ಹೆದರಿ 33 “ನಮಗೆ ಗೊತ್ತಿಲ್ಲ” ಅಂತ ಉತ್ರ ಕೊಟ್ರು. ಆಗ ಯೇಸು “ಹಾಗಾದ್ರೆ ಯಾವ ಅಧಿಕಾರದಿಂದ ಇದನ್ನೆಲ್ಲ ಮಾಡ್ತೀನಿ ಅಂತ ನಾನೂ ಹೇಳಲ್ಲ” ಅಂದನು.