ಯಾಜಕಕಾಂಡ
4 ಯೆಹೋವ ಮೋಶೆಗೆ ಇನ್ನೂ ಹೇಳಿದ್ದೇನಂದ್ರೆ 2 “ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು ‘ಮಾಡಬಾರದು ಅಂತ ಯೆಹೋವ ಹೇಳಿರೋ ಒಂದು ಪಾಪವನ್ನ ಯಾರಾದ್ರೂ ಗೊತ್ತಿಲ್ಲದೆ ಮಾಡಿದ್ರೆ+ ಅವನು ಹೀಗೆ ಮಾಡಬೇಕು:
3 ಒಂದುವೇಳೆ ಮಹಾ ಪುರೋಹಿತ*+ ಪಾಪಮಾಡಿ,+ ಅದ್ರಿಂದ ಇಸ್ರಾಯೇಲ್ಯರನ್ನ ಅಪರಾಧಿಗಳನ್ನಾಗಿ ಮಾಡಿದ್ರೆ ಅವನು ತನ್ನ ಪಾಪಪರಿಹಾರಕ್ಕಾಗಿ ಒಂದು ಹೋರಿಯನ್ನ ಯೆಹೋವನಿಗೆ ಅರ್ಪಿಸಬೇಕು. ಪಾಪಪರಿಹಾರಕ ಬಲಿಯಾಗಿ ಅರ್ಪಿಸೋ ಆ ಹೋರಿಯಲ್ಲಿ ಯಾವುದೇ ದೋಷ ಇರಬಾರದು.+ 4 ಅವನು ಆ ಹೋರಿಯನ್ನ ದೇವದರ್ಶನ ಡೇರೆಯ ಬಾಗಿಲಲ್ಲಿ+ ಯೆಹೋವನ ಮುಂದೆ ತಂದು ಅದ್ರ ತಲೆ ಮೇಲೆ ಕೈ ಇಟ್ಟು ಅದನ್ನ ಯೆಹೋವನ ಮುಂದೆ ಕಡಿಬೇಕು.+ 5 ಆಮೇಲೆ ಅವನು+ ಆ ಹೋರಿಯ ರಕ್ತದಲ್ಲಿ ಸ್ವಲ್ಪ ತಗೊಂಡು ದೇವದರ್ಶನ ಡೇರೆ ಒಳಗೆ ಬರಬೇಕು. 6 ಅವನು ಬೆರಳನ್ನ ಆ ರಕ್ತದಲ್ಲಿ ಅದ್ದಿ+ ಯೆಹೋವನ ಮುಂದೆ ಪವಿತ್ರ ಸ್ಥಳದ ಪರದೆ ಮುಂದೆ ಅದನ್ನ ಏಳು ಸಾರಿ ಚಿಮಿಕಿಸಬೇಕು.+ 7 ದೇವದರ್ಶನ ಡೇರೆಯಲ್ಲಿ ಯೆಹೋವನ ಮುಂದೆ ಇರೋ ಧೂಪವೇದಿಯ ಕೊಂಬುಗಳಿಗೆ ಸಹ ಅವನು ಸ್ವಲ್ಪ ರಕ್ತ ಹಚ್ಚಬೇಕು.+ ಆ ಹೋರಿಯ ಉಳಿದ ರಕ್ತವನ್ನೆಲ್ಲ ದೇವದರ್ಶನ ಡೇರೆಯ ಬಾಗಿಲ ಹತ್ರ ಇರೋ ಸರ್ವಾಂಗಹೋಮದ ಯಜ್ಞವೇದಿ ಬುಡದಲ್ಲಿ ಸುರಿಬೇಕು.+
8 ಆಮೇಲೆ ಮಹಾ ಪುರೋಹಿತ ಆ ಹೋರಿಯ ಎಲ್ಲ ಕೊಬ್ಬು ತೆಗಿಬೇಕು. ಕರುಳುಗಳ ಸುತ್ತ ಇರೋ ಕೊಬ್ಬು, ಕರುಳುಗಳಿಗೆ ಅಂಟ್ಕೊಂಡಿರೋ ಕೊಬ್ಬು, 9 ಎರಡು ಮೂತ್ರಪಿಂಡಗಳು, ಅವುಗಳ ಮೇಲಿರೋ ಕೊಬ್ಬು ಅಂದ್ರೆ ಸೊಂಟದ ಹತ್ರ ಇರೋ ಕೊಬ್ಬು ತೆಗಿಬೇಕು. ಮೂತ್ರಪಿಂಡಗಳ ಜೊತೆ ಪಿತ್ತಜನಕಾಂಗದ ಮೇಲಿರೋ ಕೊಬ್ಬು ಸಹ ತೆಗಿಬೇಕು.+ 10 ಸಮಾಧಾನ ಬಲಿಯಾಗಿ ಅರ್ಪಿಸೋ ಹೋರಿಯ ಕೊಬ್ಬನ್ನ ತೆಗೆಯೋ ಹಾಗೇ ಈ ಹೋರಿಯ ಕೊಬ್ಬನ್ನ ತೆಗೆದು ಪ್ರತ್ಯೇಕಿಸಬೇಕು.+ ಅದನ್ನೆಲ್ಲ ಸರ್ವಾಂಗಹೋಮದ ಯಜ್ಞವೇದಿ ಮೇಲೆ ಸುಟ್ಟು ಅದ್ರ ಹೊಗೆ ಮೇಲೆ ಹೋಗಬೇಕು.
11 ಆದ್ರೆ ಆ ಹೋರಿಯ ಚರ್ಮ, ಎಲ್ಲ ಮಾಂಸ, ತಲೆ, ಕಾಲುಗಳು, ಕರುಳುಗಳು, ಸಗಣಿ+ 12 ಹೀಗೆ ಉಳಿದ ಎಲ್ಲವನ್ನ ಪಾಳೆಯದ ಹೊರಗೆ ಯಜ್ಞವೇದಿಯ ಬೂದಿಯನ್ನ ಹಾಕೋ ಶುದ್ಧವಾದ ಸ್ಥಳಕ್ಕೆ ತಗೊಂಡು ಹೋಗಿ ಅಲ್ಲಿ ಕಟ್ಟಿಗೆಗಳ ಮೇಲಿಟ್ಟು ಬೆಂಕಿಯಿಂದ ಸುಡಬೇಕು.+ ಬೂದಿಯನ್ನ ಹಾಕೋ ಆ ಸ್ಥಳದಲ್ಲೇ ಅವುಗಳನ್ನ ಸುಡಬೇಕು.
13 ಇಸ್ರಾಯೇಲ್ಯರು ಗೊತ್ತಿಲ್ಲದೆ ಪಾಪಮಾಡಿ ಅಪರಾಧಿಗಳಾದ್ರೆ+ ಮತ್ತು ಮಾಡಬಾರದು ಅಂತ ಯೆಹೋವ ಆಜ್ಞೆ ಕೊಟ್ಟ ವಿಷ್ಯಗಳಲ್ಲಿ ಯಾವುದನ್ನೋ ಮಾಡಿದ್ದೀವಿ ಅಂತ ಇಸ್ರಾಯೇಲ್ ಸಭೆಗೆ ಗೊತ್ತಿಲ್ಲದಿದ್ರೆ+ 14 ಮುಂದೆ ಆ ವಿಷ್ಯ ಗೊತ್ತಾದಾಗ ಇಸ್ರಾಯೇಲ್ ಸಭೆ ಪಾಪಪರಿಹಾರಕ ಬಲಿಗಾಗಿ ಒಂದು ಎಳೇ ಹೋರಿ ಕೊಡಬೇಕು. ಆ ಹೋರಿಯನ್ನ ದೇವದರ್ಶನ ಡೇರೆ ಮುಂದೆ ತರಬೇಕು. 15 ಇಸ್ರಾಯೇಲ್ ಸಮೂಹದ ಹಿರಿಯರು ಯೆಹೋವನ ಮುಂದೆ ಆ ಹೋರಿಯ ತಲೆ ಮೇಲೆ ತಮ್ಮ ಕೈಗಳನ್ನ ಇಟ್ಟು ಅದನ್ನ ಯೆಹೋವನ ಮುಂದೆ ಕಡಿಬೇಕು.
16 ಆಮೇಲೆ ಮಹಾ ಪುರೋಹಿತ ಆ ಹೋರಿಯ ರಕ್ತದಲ್ಲಿ ಸ್ವಲ್ಪ ತಗೊಂಡು ದೇವದರ್ಶನ ಡೇರೆ ಒಳಗೆ ಬರಬೇಕು. 17 ಬೆರಳನ್ನ ಆ ರಕ್ತದಲ್ಲಿ ಅದ್ದಿ ಯೆಹೋವನ ಮುಂದೆ ಪರದೆ ಮುಂದೆ ಏಳು ಸಾರಿ ಚಿಮಿಕಿಸಬೇಕು.+ 18 ಆಮೇಲೆ ದೇವದರ್ಶನ ಡೇರೆಯಲ್ಲಿ ಯೆಹೋವನ ಮುಂದಿರೋ ಧೂಪವೇದಿಯ+ ಕೊಂಬುಗಳಿಗೆ ಸ್ವಲ್ಪ ರಕ್ತ ಹಚ್ಚಬೇಕು. ಆ ಹೋರಿಯ ಉಳಿದ ರಕ್ತನ ದೇವದರ್ಶನ ಡೇರೆಯ ಬಾಗಿಲ ಹತ್ರ ಇರೋ ಸರ್ವಾಂಗಹೋಮದ ಯಜ್ಞವೇದಿಯ ಬುಡದಲ್ಲಿ ಸುರಿಬೇಕು.+ 19 ಆ ಹೋರಿಯ ಎಲ್ಲ ಕೊಬ್ಬು ತೆಗೆದು ಯಜ್ಞವೇದಿ ಮೇಲೆ ಸುಡಬೇಕು. ಅದ್ರ ಹೊಗೆ ಮೇಲೆ ಹೋಗಬೇಕು.+ 20 ಮಹಾ ಪುರೋಹಿತ ಪಾಪ ಮಾಡಿದಾಗ ಅವನು ಹೋರಿನ ಹೇಗೆ ಅರ್ಪಿಸಬೇಕೋ ಅದೇ ತರ ಈ ಹೋರಿಯನ್ನೂ ಅರ್ಪಿಸಬೇಕು. ಮಹಾ ಪುರೋಹಿತ ಎಲ್ಲ ಇಸ್ರಾಯೇಲ್ಯರ ಪಾಪಕ್ಕಾಗಿ ಪ್ರಾಯಶ್ಚಿತ್ತ ಮಾಡಬೇಕು.+ ಆಗ ಅವರ ಪಾಪವನ್ನ ದೇವರು ಕ್ಷಮಿಸ್ತಾನೆ. 21 ಅವನು ಹೋರಿಯ ಉಳಿದ ಭಾಗಗಳನ್ನ ಮೊದ್ಲು ಹೇಳಿದ ತರಾನೇ ಪಾಳೆಯದ ಹೊರಗೆ ತಗೊಂಡು ಹೋಗಿ ಸುಡಬೇಕು.+ ಇದು ಇಸ್ರಾಯೇಲ್ ಸಭೆಗಾಗಿ ಕೊಡೋ ಪಾಪಪರಿಹಾರಕ ಬಲಿ.+
22 ಮಾಡಬಾರದು ಅಂತ ಯೆಹೋವ ದೇವರು ಹೇಳಿರೋ ಒಂದು ಪಾಪವನ್ನ ಒಬ್ಬ ಪ್ರಧಾನ+ ಗೊತ್ತಿಲ್ಲದೆ ಮಾಡಿ ಅಪರಾಧಿ ಆದ್ರೆ 23 ಅಥವಾ ಆ ಆಜ್ಞೆಗಳನ್ನ ಮೀರಿ ಪಾಪ ಮಾಡಿದ್ದೀನಿ ಅಂತ ಆಮೇಲೆ ಅವನಿಗೆ ಗೊತ್ತಾದ್ರೆ ತನ್ನ ಪಾಪ ಪರಿಹಾರಕ್ಕಾಗಿ ಯಾವುದೇ ದೋಷ ಇಲ್ಲದ ಒಂದು ಗಂಡು ಆಡುಮರಿನ ಅರ್ಪಿಸೋಕೆ ತರಬೇಕು. 24 ಅದ್ರ ತಲೆ ಮೇಲೆ ತನ್ನ ಕೈ ಇಟ್ಟು ಅದನ್ನ ಯೆಹೋವನ ಮುಂದೆ ಸರ್ವಾಂಗಹೋಮ ಬಲಿಯ ಪ್ರಾಣಿಯನ್ನ ಕಡಿಯೋ ಸ್ಥಳದಲ್ಲೇ ಕಡಿಬೇಕು.+ ಇದು ಪಾಪಪರಿಹಾರಕ ಬಲಿ. 25 ಪುರೋಹಿತ ಆ ಆಡುಮರಿಯ ರಕ್ತದಲ್ಲಿ ಸ್ವಲ್ಪ ಬೆರಳಿಂದ ತಗೊಂಡು ಸರ್ವಾಂಗಹೋಮ ಬಲಿಯನ್ನ ಅರ್ಪಿಸೋ ಯಜ್ಞವೇದಿಯ ಕೊಂಬುಗಳಿಗೆ ಹಚ್ಚಬೇಕು.+ ಉಳಿದ ರಕ್ತನ ಅದೇ ಯಜ್ಞವೇದಿಯ ಬುಡದಲ್ಲಿ ಸುರಿಬೇಕು.+ 26 ಅವನು ಆ ಆಡುಮರಿಯ ಎಲ್ಲ ಕೊಬ್ಬನ್ನ ತೆಗೆದು ಸಮಾಧಾನ ಬಲಿಯಲ್ಲಿ ಕೊಬ್ಬನ್ನ ಅರ್ಪಿಸೋ ಹಾಗೇ ಯಜ್ಞವೇದಿ ಮೇಲೆ ಸುಡಬೇಕು.+ ಅದ್ರ ಹೊಗೆ ಮೇಲೆ ಹೋಗಬೇಕು. ಪುರೋಹಿತ ಪ್ರಧಾನನ ಪಾಪಕ್ಕಾಗಿ ಪ್ರಾಯಶ್ಚಿತ್ತ ಮಾಡಬೇಕು. ಆಗ ದೇವರು ಅವನ ಪಾಪವನ್ನ ಕ್ಷಮಿಸ್ತಾನೆ.
27 ಮಾಡ್ಬಾರದು ಅಂತ ಯೆಹೋವ ಹೇಳಿರೋ ಒಂದು ಪಾಪವನ್ನ ಸಾಮಾನ್ಯ ಜನ್ರಲ್ಲಿ ಒಬ್ಬ ಗೊತ್ತಿಲ್ಲದೆ ಮಾಡಿ ಅಪರಾಧಿಯಾದ್ರೆ+ 28 ಅಥವಾ ತಾನು ಪಾಪ ಮಾಡಿದ್ದೀನಿ ಅಂತ ಆಮೇಲೆ ಗೊತ್ತಾದ್ರೆ ಆಗ ಅವನು ತನ್ನ ಪಾಪ ಪರಿಹಾರಕ್ಕಾಗಿ ಯಾವುದೇ ದೋಷ ಇಲ್ಲದ ಒಂದು ಹೆಣ್ಣು ಆಡುಮರಿಯನ್ನ ಅರ್ಪಿಸಬೇಕು. 29 ಅದ್ರ ತಲೆ ಮೇಲೆ ತನ್ನ ಕೈ ಇಡಬೇಕು, ಅದನ್ನ ಸರ್ವಾಂಗಹೋಮ ಬಲಿಯ ಪ್ರಾಣಿಯನ್ನ ಕಡಿಯೋ ಸ್ಥಳದಲ್ಲೇ ಕಡಿಬೇಕು.+ 30 ಪುರೋಹಿತ ಆ ಆಡುಮರಿಯ ರಕ್ತದಲ್ಲಿ ಸ್ವಲ್ಪ ಬೆರಳಿಂದ ತಗೊಂಡು ಸರ್ವಾಂಗಹೋಮದ ಯಜ್ಞವೇದಿಯ ಕೊಂಬುಗಳಿಗೆ ಹಚ್ಚಬೇಕು. ಉಳಿದ ರಕ್ತನ ಅದೇ ಯಜ್ಞವೇದಿಯ ಬುಡದಲ್ಲಿ ಸುರಿಬೇಕು.+ 31 ಅವನು ಸಮಾಧಾನ ಬಲಿ ಕೊಡೋ ಪ್ರಾಣಿಯ ಕೊಬ್ಬನ್ನ ತೆಗಿಯೋ+ ಹಾಗೇ ಆ ಆಡುಮರಿಯ ಎಲ್ಲ ಕೊಬ್ಬನ್ನ ತೆಗೆದು+ ಯಜ್ಞವೇದಿ ಮೇಲೆ ಸುಡಬೇಕು. ಅದ್ರಿಂದ ಮೇಲೇರೋ ಹೊಗೆಯ ಸುವಾಸನೆಯಿಂದ ಯೆಹೋವನಿಗೆ ಸಂತೋಷ* ಆಗುತ್ತೆ. ಪುರೋಹಿತ ಆ ವ್ಯಕ್ತಿಯ ಪಾಪಕ್ಕಾಗಿ ಪ್ರಾಯಶ್ಚಿತ್ತ ಮಾಡಿದಾಗ ದೇವರು ಅವನ ಪಾಪವನ್ನ ಕ್ಷಮಿಸ್ತಾನೆ.
32 ಅವನು ಪಾಪಪರಿಹಾರಕ ಬಲಿಗಾಗಿ ಕುರಿಮರಿ ಕೊಡೋಕೆ ಇಷ್ಟಪಟ್ರೆ ಯಾವುದೇ ದೋಷ ಇಲ್ಲದ ಹೆಣ್ಣು ಕುರಿಮರಿಯನ್ನ ತರಬೇಕು. 33 ಅದ್ರ ತಲೆ ಮೇಲೆ ಕೈ ಇಟ್ಟು ಅದನ್ನ ಸರ್ವಾಂಗಹೋಮ ಬಲಿಯ ಪ್ರಾಣಿಯನ್ನ ಕಡಿಯೋ ಸ್ಥಳದಲ್ಲೇ ಕಡಿಬೇಕು.+ 34 ಪುರೋಹಿತ ಆ ಕುರಿಮರಿಯ ರಕ್ತದಲ್ಲಿ ಸ್ವಲ್ಪ ಬೆರಳಿಂದ ತಗೊಂಡು ಸರ್ವಾಂಗಹೋಮದ ಯಜ್ಞವೇದಿಯ ಕೊಂಬುಗಳಿಗೆ ಹಚ್ಚಬೇಕು.+ ಉಳಿದ ರಕ್ತನ ಅದೇ ಯಜ್ಞವೇದಿಯ ಬುಡದಲ್ಲಿ ಸುರಿಬೇಕು. 35 ಅವನು ಸಮಾಧಾನ ಬಲಿಯ ಗಂಡು ಕುರಿಮರಿಯ ಕೊಬ್ಬನ್ನ ತೆಗಿಯೋ ಹಾಗೇ ಈ ಹೆಣ್ಣು ಕುರಿಮರಿಯ ಎಲ್ಲ ಕೊಬ್ಬನ್ನ ತೆಗಿಬೇಕು, ಅದನ್ನೆಲ್ಲ ಯಜ್ಞವೇದಿ ಮೇಲೆ ಅರ್ಪಿಸಲಾದ ಯೆಹೋವನ ಅರ್ಪಣೆಗಳ ಮೇಲಿಟ್ಟು ಸುಡಬೇಕು.+ ಅದ್ರ ಹೊಗೆ ಮೇಲೆ ಹೋಗಬೇಕು. ಪುರೋಹಿತ ಆ ವ್ಯಕ್ತಿಯ ಪಾಪಕ್ಕಾಗಿ ಪ್ರಾಯಶ್ಚಿತ್ತ ಮಾಡಿದಾಗ ದೇವರು ಅವನ ಪಾಪವನ್ನ ಕ್ಷಮಿಸ್ತಾನೆ.+