ಯಾಜಕಕಾಂಡ
23 ಯೆಹೋವ ಮೋಶೆಗೆ ಇನ್ನೂ ಹೇಳಿದ್ದು ಏನಂದ್ರೆ 2 “ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ನೀವು ವರ್ಷದ ಬೇರೆಬೇರೆ ಸಮಯದಲ್ಲಿ ಹಬ್ಬಗಳನ್ನ ಆಚರಿಸಬೇಕು+ ಅಂತ ಯೆಹೋವ ಹೇಳಿದ್ದಾನೆ.+ ಆ ಹಬ್ಬದ ದಿನಗಳಲ್ಲಿ ನೀವು ದೇವರ ಆರಾಧನೆಗೆ ಸೇರಿಬರಬೇಕು.* ವರ್ಷದ ಬೇರೆಬೇರೆ ಸಮಯದಲ್ಲಿ ಆಚರಿಸಬೇಕಾದ ಹಬ್ಬಗಳು ಯಾವುದಂದ್ರೆ,
3 ಆರು ದಿನ ನೀವು ಕೆಲಸ ಮಾಡಬಹುದು. ಆದ್ರೆ ಏಳನೇ ದಿನ ಪೂರ್ತಿ ವಿಶ್ರಾಂತಿ ಪಡ್ಕೊಬೇಕು.+ ಯಾಕಂದ್ರೆ ಏಳನೇ ದಿನ ಸಬ್ಬತ್ ದಿನ. ಅವತ್ತು ನೀವೆಲ್ರೂ ದೇವರ ಆರಾಧನೆಗೆ ಸೇರಿಬರಬೇಕು, ಯಾವ ಕೆಲಸನೂ ಮಾಡಬಾರದು. ನೀವು ಎಲ್ಲೇ ಇದ್ರೂ ಆ ದಿನ ಯೆಹೋವನಿಗೆ ಗೌರವ ಕೊಡೋಕೆ ಸಬ್ಬತ್ತನ್ನ ಆಚರಿಸಬೇಕು.+
4 ಯೆಹೋವ ಹೇಳಿರೋ ಹಬ್ಬಗಳನ್ನ ಆಚರಿಸಬೇಕು. ಆ ದಿನಗಳಲ್ಲಿ ಆರಾಧನೆಗೆ ಸೇರಿಬರಬೇಕು ಅಂತ ನೀವು ಸರಿಯಾದ ಸಮಯಕ್ಕೆ ಜನ್ರಿಗೆ ಹೇಳಬೇಕು. ಆ ಹಬ್ಬಗಳು ಯಾವುದಂದ್ರೆ, 5 ಮೊದಲನೇ ತಿಂಗಳ 14ನೇ ದಿನ+ ಸೂರ್ಯ ಮುಳುಗಿದ ಮೇಲೆ* ನೀವು ಪಸ್ಕ* ಹಬ್ಬ ಆಚರಿಸಬೇಕು.+ ಯೆಹೋವನಿಗೆ ಗೌರವ ಕೊಡೋಕೆ ಆ ಹಬ್ಬ ಮಾಡಬೇಕು.
6 ಅದೇ ತಿಂಗಳ 15ನೇ ದಿನ ನೀವು ಯೆಹೋವನಿಗೆ ಗೌರವ ಕೊಡೋಕೆ ಹುಳಿ ಇಲ್ಲದ ರೊಟ್ಟಿ ಹಬ್ಬ ಆಚರಿಸಬೇಕು.+ ಏಳು ದಿನ ಆ ಹಬ್ಬ ಮಾಡಬೇಕು. ಆ ದಿನಗಳಲ್ಲಿ ನೀವು ಹುಳಿ ಇಲ್ಲದ ರೊಟ್ಟಿ ತಿನ್ನಬೇಕು.+ 7 ಹಬ್ಬದ ಮೊದಲನೇ ದಿನ ದೇವರ ಆರಾಧನೆಗೆ ಸೇರಿಬರಬೇಕು.+ ಆ ದಿನ ಕಷ್ಟದ ಕೆಲಸ ಮಾಡಬಾರದು. 8 ಆ ಏಳೂ ದಿನ ನೀವು ಯೆಹೋವನಿಗೆ ಬೆಂಕಿಯಲ್ಲಿ ಅರ್ಪಣೆಗಳನ್ನ ಕೊಡಬೇಕು. ಏಳನೇ ದಿನಾನೂ ಸಭೆ ಸೇರಬೇಕು. ಆ ದಿನ ನೀವು ಕಷ್ಟದ ಕೆಲಸ ಮಾಡಬಾರದು.’”
9 ಯೆಹೋವ ಮೋಶೆಗೆ ಇನ್ನೂ ಹೇಳಿದ್ದು 10 “ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ನಾನು ನಿಮಗೆ ಕೊಡೋ ದೇಶಕ್ಕೆ ನೀವು ಹೋದ್ಮೇಲೆ ಹೊಲದ ಮೊದಲ ಬೆಳೆನ ಕೊಯ್ದಾಗ ತೆನೆಗಳ ಒಂದು ಕಟ್ಟನ್ನ+ ತಂದು ಪುರೋಹಿತನಿಗೆ ಕೊಡಬೇಕು.+ 11 ಪುರೋಹಿತ ಆ ಕಟ್ಟನ್ನ ಯೆಹೋವ ದೇವರ ಎದುರಲ್ಲಿ ಹಿಂದೆ ಮುಂದೆ ಆಡಿಸಬೇಕು. ನೀವು ದೇವರ ಮೆಚ್ಚುಗೆ ಪಡಿಯೋಕೆ ಹಾಗೆ ಮಾಡಬೇಕು. ಸಬ್ಬತ್ತಿನ ಮಾರನೇ ದಿನ ಪುರೋಹಿತ ಹೀಗೆ ಮಾಡ್ತಾನೆ. 12 ಅದೇ ದಿನ ನೀವು ದೋಷ ಇರದ ಒಂದು ವರ್ಷದ ಒಳಗಿನ ಟಗರನ್ನ ಯೆಹೋವನಿಗೆ ಸರ್ವಾಂಗಹೋಮ ಬಲಿಯಾಗಿ ಕೊಡಬೇಕು. 13 ಜೊತೆಗೆ ಧಾನ್ಯ ಅರ್ಪಣೆಯನ್ನ, ಪಾನ ಅರ್ಪಣೆಯನ್ನ ಕೊಡಬೇಕು. ಧಾನ್ಯ ಅರ್ಪಣೆಗಾಗಿ ಒಂದು ಏಫಾ ಅಳತೆಯ ಹತ್ತರಲ್ಲಿ ಎರಡು ಭಾಗದಷ್ಟು* ನುಣ್ಣಗಿನ ಹಿಟ್ಟನ್ನ ಕೊಡಬೇಕು, ಅದಕ್ಕೆ ಎಣ್ಣೆ ಬೆರೆಸಿ ಕೊಡಬೇಕು. ಆ ಹಿಟ್ಟನ್ನ ಯೆಹೋವನಿಗೆ ಬೆಂಕಿಯಲ್ಲಿ ಅರ್ಪಿಸಬೇಕು. ಇದ್ರಿಂದ ಬರೋ ಸುವಾಸನೆ ಆತನಿಗೆ ಖುಷಿ* ತರುತ್ತೆ. ಪಾನ ಅರ್ಪಣೆಗಾಗಿ ಒಂದು ಹಿನ್* ಅಳತೆಯ ನಾಲ್ಕನೇ ಒಂದು ಭಾಗದಷ್ಟು ದ್ರಾಕ್ಷಾಮದ್ಯವನ್ನ ಕೊಡಬೇಕು. 14 ಆ ಏಳನೇ ದಿನ ನೀವು ದೇವರಿಗೆ ಅರ್ಪಣೆ ಕೊಡೋ ತನಕ ಹೊಸ ಬೆಳೆಯನ್ನ ತಿನ್ನಬಾರದು. ಅದನ್ನ ಸುಟ್ಟು ಅಥವಾ ಅದ್ರಿಂದ ರೊಟ್ಟಿ ಮಾಡಿ ತಿನ್ನಬಾರದು. ನೀವು ಎಲ್ಲೇ ಇದ್ರೂ ಇದು ಶಾಶ್ವತ ನಿಯಮ.
15 ನೀವು ಸಬ್ಬತ್ತಿನ ಮಾರನೇ ದಿನ ಅಂದ್ರೆ ತೆನೆಗಳ ಕಟ್ಟನ್ನ ಓಲಾಡಿಸೋ ಅರ್ಪಣೆಯಾಗಿ ಕೊಡೋ ದಿನ ಏಳು ಸಬ್ಬತ್ಗಳನ್ನ ಅಂದ್ರೆ ಏಳು ವಾರಗಳನ್ನ ಲೆಕ್ಕ ಮಾಡಬೇಕು.+ 16 ಏಳನೇ ಸಬ್ಬತ್ತಿನ ಮಾರನೇ ದಿನ ಅಂದ್ರೆ 50ನೇ ದಿನ+ ನೀವು ಇನ್ನೊಂದು ಸಲ ಯೆಹೋವನಿಗೆ ಹೊಸ ಬೆಳೆಯನ್ನ ಅರ್ಪಿಸಬೇಕು.+ 17 ಓಲಾಡಿಸೋ ಅರ್ಪಣೆಗಾಗಿ ಮನೆಯಿಂದ ಎರಡು ರೊಟ್ಟಿ ತರಬೇಕು. ಒಂದು ಏಫಾ ಅಳತೆಯ ಹತ್ತರಲ್ಲಿ ಎರಡು ಭಾಗದಷ್ಟು* ನುಣ್ಣಗಿನ ಹಿಟ್ಟಿಗೆ ಹುಳಿ ಬೆರೆಸಿ, ಸುಟ್ಟು ಆ ಎರಡು ರೊಟ್ಟಿ ಮಾಡಿರಬೇಕು.+ ಅವನ್ನ ಮೊದಲ ಬೆಳೆಯ ಅರ್ಪಣೆಯಾಗಿ ಯೆಹೋವನಿಗೆ ಕೊಡಬೇಕು.+ 18 ಆ ರೊಟ್ಟಿಗಳ ಜೊತೆ ದೋಷ ಇರದ ಒಂದು ವರ್ಷದ ಏಳು ಗಂಡು ಕುರಿಮರಿಗಳನ್ನ, ಒಂದು ಎತ್ತನ್ನ ಎರಡು ಟಗರುಗಳನ್ನ ಕೊಡಬೇಕು.+ ಆ ಪ್ರಾಣಿಗಳನ್ನ ಧಾನ್ಯ ಅರ್ಪಣೆ, ಪಾನ ಅರ್ಪಣೆ ಜೊತೆ ಬೆಂಕಿಯಲ್ಲಿ ಸರ್ವಾಂಗಹೋಮ ಬಲಿಯಾಗಿ ಯೆಹೋವನಿಗೆ ಕೊಡಬೇಕು. ಅದ್ರ ಸುವಾಸನೆ ಯೆಹೋವನಿಗೆ ಖುಷಿ* ತರುತ್ತೆ. 19 ಒಂದು ಆಡು ಮರಿಯನ್ನ ಪಾಪಪರಿಹಾರಕ ಬಲಿಯಾಗಿ ಅರ್ಪಿಸಬೇಕು.+ ಒಂದು ವರ್ಷದ ಎರಡು ಗಂಡು ಕುರಿಮರಿಗಳನ್ನ ಸಮಾಧಾನ ಬಲಿಯಾಗಿ ಕೊಡಬೇಕು.+ 20 ಪುರೋಹಿತ ಆ ಗಂಡು ಕುರಿಮರಿಗಳನ್ನ ಮತ್ತು ಮೊದಲ ಬೆಳೆಯ ಅರ್ಪಣೆಯಾಗಿ ತಂದು ಕೊಟ್ಟ ರೊಟ್ಟಿಗಳನ್ನ ಓಲಾಡಿಸೋ ಅರ್ಪಣೆಯಾಗಿ ಕೊಡಬೇಕು ಅಂದ್ರೆ ಯೆಹೋವನ ಎದುರಲ್ಲಿ ಹಿಂದೆ ಮುಂದೆ ಆಡಿಸಬೇಕು. ಅದು ಯೆಹೋವನಿಗೆ ಪವಿತ್ರ ಆಗಿರೋದ್ರಿಂದ ಪುರೋಹಿತನಿಗೆ ಸೇರಬೇಕು.+ 21 ಆ ದಿನ ದೇವರ ಆರಾಧನೆಗೆ ಸೇರಿಬರಬೇಕು ಅಂತ ನೀವು ಎಲ್ರಿಗೂ ಹೇಳಬೇಕು.+ ಅವತ್ತು ನೀವು ಕಷ್ಟದ ಕೆಲಸ ಮಾಡಬಾರದು. ನೀವು ಎಲ್ಲೇ ಇದ್ರೂ ಈ ನಿಯಮನ ಶಾಶ್ವತವಾಗಿ ಪಾಲಿಸಬೇಕು.
22 ಬೆಳೆಯನ್ನ ಕೊಯ್ಯೋವಾಗ ನಿಮ್ಮ ಹೊಲದ ಅಂಚಲ್ಲಿರೋ ಬೆಳೆನ ಪೂರ್ತಿಯಾಗಿ ಕೊಯ್ಯಬಾರದು. ಹೊಲದಲ್ಲಿ ನೀವು ಬಿಟ್ಟಿರೋ ತೆನೆಗಳನ್ನ ತಗೊಂಡು ಬರಬಾರದು.+ ಅವನ್ನ ಬಡವರಿಗೆ,*+ ನಿಮ್ಮ ಮಧ್ಯ ವಾಸ ಮಾಡೋ ವಿದೇಶಿಯರಿಗೆ+ ಬಿಟ್ಟುಬಿಡಬೇಕು. ನಾನು ನಿಮ್ಮ ದೇವರಾದ ಯೆಹೋವ.’”
23 ಮೋಶೆಗೆ ಯೆಹೋವ ಇನ್ನೂ ಹೇಳಿದ್ದು ಏನಂದ್ರೆ 24 “ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ನೀವು ಏಳನೇ ತಿಂಗಳಿನ ಮೊದಲನೇ ದಿನ ಪೂರ್ತಿ ವಿಶ್ರಾಂತಿ ಪಡ್ಕೊಳ್ಳಬೇಕು. ಅವತ್ತು ಎಲ್ರೂ ದೇವರ ಆರಾಧನೆಗೆ ಸೇರಿಬರಬೇಕು. ಅದನ್ನ ನಿಮಗೆ ನೆನಪಿಸೋಕೆ ತುತ್ತೂರಿ ಊದಿ ಹೇಳ್ತಾರೆ.+ 25 ಆ ದಿನ ನೀವು ಕಷ್ಟದ ಕೆಲಸ ಮಾಡಬಾರದು. ಅಷ್ಟೇ ಅಲ್ಲ ಯೆಹೋವನಿಗೆ ಬೆಂಕಿಯಲ್ಲಿ ಅರ್ಪಣೆ ಕೊಡಬೇಕು.’”
26 ಯೆಹೋವ ಮೋಶೆಗೆ ಇನ್ನೂ ಹೇಳಿದ್ದು ಏನಂದ್ರೆ 27 “ಏಳನೇ ತಿಂಗಳಿನ ಹತ್ತನೇ ದಿನ ಪ್ರಾಯಶ್ಚಿತ್ತ ದಿನ.+ ಅವತ್ತು ನೀವು ದೇವರ ಆರಾಧನೆಗೆ ಸೇರಿಬರಬೇಕು, ನಿಮ್ಮ ಪಾಪಗಳಿಗಾಗಿ ದುಃಖಪಡಬೇಕು.*+ ಯೆಹೋವನಿಗೆ ಬೆಂಕಿಯಲ್ಲಿ ಅರ್ಪಣೆ ಕೊಡಬೇಕು. 28 ಆ ದಿನ ನೀವು ಕೆಲಸ ಮಾಡಬಾರದು. ಯಾಕಂದ್ರೆ ಅದು ಪ್ರಾಯಶ್ಚಿತ್ತ ದಿನ. ಆ ದಿನ ಪುರೋಹಿತ ನಿಮಗೋಸ್ಕರ ನಿಮ್ಮ ದೇವರಾದ ಯೆಹೋವನ ಮುಂದೆ ಪ್ರಾಯಶ್ಚಿತ್ತ ಮಾಡ್ತಾನೆ.+ 29 ಆ ದಿನ ಯಾರಾದ್ರೂ ತನ್ನ ಪಾಪಕ್ಕಾಗಿ ದುಃಖಪಡದಿದ್ರೆ* ಅವನನ್ನ ಸಾಯಿಸಬೇಕು.+ 30 ಆ ದಿನ ಯಾರಾದ್ರೂ ಏನಾದ್ರೂ ಕೆಲಸ ಮಾಡಿದ್ರೆ ಅವನನ್ನ ನಾಶಮಾಡ್ತೀನಿ. 31 ಆ ದಿನ ನೀವು ಯಾವ ಕೆಲಸನೂ ಮಾಡಬಾರದು. ನೀವು ಎಲ್ಲೇ ಇದ್ರೂ ಇದು ಶಾಶ್ವತ ನಿಯಮ. 32 ಇದು ಸಬ್ಬತ್ ದಿನ ಆಗಿರೋದ್ರಿಂದ ನೀವು ಪೂರ್ತಿ ವಿಶ್ರಾಂತಿ ತಗೊಳ್ಳಬೇಕು. ಆ ತಿಂಗಳ ಒಂಬತ್ತನೇ ದಿನ ಸಂಜೆಯಿಂದ ನಿಮ್ಮ ಪಾಪಗಳಿಗಾಗಿ ದುಃಖಪಡೋಕೆ ಶುರುಮಾಡಬೇಕು.+ ಆ ದಿನ ಸಂಜೆಯಿಂದ ಮಾರನೇ ದಿನ ಸಂಜೆ ತನಕ ಸಬ್ಬತ್ತನ್ನ ಮಾಡಬೇಕು.”
33 ಯೆಹೋವ ಮೋಶೆಗೆ ಇನ್ನೂ ಹೇಳಿದ್ದು ಏನಂದ್ರೆ 34 “ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು, ‘ಏಳನೇ ತಿಂಗಳಿನ 15ನೇ ದಿನ ನೀವು ಯೆಹೋವನಿಗೆ ಗೌರವ ಕೊಡೋಕೆ ಚಪ್ಪರಗಳ* ಹಬ್ಬ* ಮಾಡಬೇಕು. ಆ ಹಬ್ಬವನ್ನ ಏಳು ದಿನ ಮಾಡಬೇಕು.+ 35 ಹಬ್ಬದ ಮೊದಲ ದಿನ ದೇವರ ಆರಾಧನೆಗೆ ಸೇರಿಬರಬೇಕು. ಅವತ್ತು ಕಷ್ಟದ ಕೆಲಸ ಮಾಡಬಾರದು. 36 ಆ ಏಳೂ ದಿನ ನೀವು ಯೆಹೋವನಿಗೆ ಬೆಂಕಿಯಲ್ಲಿ ಅರ್ಪಣೆ ಕೊಡಬೇಕು. ಎಂಟನೇ ದಿನ ದೇವರ ಆರಾಧನೆಗೆ ಸೇರಿಬರಬೇಕು.+ ಯೆಹೋವನಿಗೆ ಬೆಂಕಿಯಲ್ಲಿ ಅರ್ಪಣೆ ಕೊಡಬೇಕು. ಆ ದಿನ ದೇವರ ಆರಾಧನೆಗೆ ಸೇರಿಬರಬೇಕಾದ ವಿಶೇಷ ದಿನ. ಅವತ್ತು ನೀವು ಕಷ್ಟದ ಕೆಲಸ ಮಾಡಬಾರದು.
37 ವರ್ಷದ ಬೇರೆಬೇರೆ ತಿಂಗಳು ನೀವು ಆಚರಿಸಬೇಕು ಅಂತ ಯೆಹೋವ ಹೇಳಿರೋ ಹಬ್ಬಗಳು ಇವೇ.+ ಆ ದಿನಗಳಲ್ಲಿ ಪವಿತ್ರ ಅಧಿವೇಶನಕ್ಕೆ ಬರಬೇಕು+ ಅಂತ ನೀವು ಜನ್ರಿಗೆ ಹೇಳಬೇಕು. ಆ ದಿನಗಳಲ್ಲಿ ಯೆಹೋವನಿಗೆ ಬೆಂಕಿಯಲ್ಲಿ ಅರ್ಪಿಸಬೇಕಾದ ಬಲಿಗಳು ಯಾವುದಂದ್ರೆ, ಸರ್ವಾಂಗಹೋಮ ಬಲಿ,+ ಧಾನ್ಯ ಅರ್ಪಣೆ,+ ಪಾನ ಅರ್ಪಣೆ.+ ಆಯಾ ದಿನಗಳಲ್ಲಿ ಯಾವ್ಯಾವ ಬಲಿಯನ್ನ ಅರ್ಪಿಸಬೇಕು ಅಂತ ಹೇಳಿದ್ಯೋ ಆ ಬಲಿಗಳನ್ನ ನೀವು ಅರ್ಪಿಸಬೇಕು. 38 ಯೆಹೋವನಿಗೆ ಗೌರವ ಕೊಡೋಕೆ ಆಚರಿಸೋ ಸಬ್ಬತ್ಗಳಲ್ಲಿ+ ಕೊಡೋ ಅರ್ಪಣೆ, ನೀವು ಕೊಡೋ ಉಡುಗೊರೆ,+ ಹರಕೆಯ ಕಾಣಿಕೆ,+ ಸ್ವಇಷ್ಟದ ಕಾಣಿಕೆ ಅಷ್ಟೇ ಅಲ್ಲ+ ಹಬ್ಬದ ಸಮಯದಲ್ಲಿ ಯಾವ್ಯಾವ ಬಲಿಗಳನ್ನ ಕೊಡಬೇಕು ಅಂತ ಹೇಳಿದ್ಯೋ ಆ ಬಲಿಗಳನ್ನ ಸಹ ಯೆಹೋವನಿಗೆ ಕೊಡಬೇಕು. 39 ಏಳನೇ ತಿಂಗಳಿನ 15ನೇ ದಿನ ಅಂದ್ರೆ ನೀವು ನಿಮ್ಮ ಹೊಲದ ಬೆಳೆಯನ್ನ ಕೂಡಿಸಿದ ಮೇಲೆ ಏಳು ದಿನಗಳ ತನಕ ಯೆಹೋವ ಹೇಳಿದ ಹಾಗೆ ಹಬ್ಬ ಮಾಡಬೇಕು.+ ಹಬ್ಬದ ಮೊದಲನೇ ದಿನ ಮತ್ತು ಎಂಟನೇ ದಿನ ಪೂರ್ತಿ ವಿಶ್ರಾಂತಿ ತಗೊಳ್ಳಬೇಕು.+ 40 ಮೊದಲನೇ ದಿನ ಒಳ್ಳೇ ಮರದ ಹಣ್ಣುಗಳನ್ನ, ಖರ್ಜೂರ ಮರದ ಗರಿಗಳನ್ನ,+ ತುಂಬ ಎಲೆ ಇರೋ ಮರದಿಂದ ಕೊಂಬೆಗಳನ್ನ, ಕಣಿವೆಯಲ್ಲಿ ಬೆಳಿಯೋ ನೀರವಂಜಿ* ಮರಗಳ ಕೊಂಬೆಗಳನ್ನ ಹಬ್ಬದ ಸಮಯದಲ್ಲಿ ಬಳಸೋಕೆ ತಗೊಂಡು ಬರಬೇಕು. ಏಳು ದಿನ ನಿಮ್ಮ ದೇವರಾದ ಯೆಹೋವನ ಮುಂದೆ ಹಬ್ಬ ಮಾಡ್ತಾ ಖುಷಿಯಾಗಿ ಇರಬೇಕು.+ 41 ನೀವು ವರ್ಷದಲ್ಲಿ ಏಳು ದಿನ ಈ ಹಬ್ಬನ ಯೆಹೋವನಿಗೆ ಗೌರವ ಕೊಡೋಕೆ ಆಚರಿಸಬೇಕು.+ ವರ್ಷದ ಏಳನೇ ತಿಂಗಳಲ್ಲಿ ಇದನ್ನ ಆಚರಿಸಬೇಕು. ಇದು ಶಾಶ್ವತ ನಿಯಮ. 42 ಆ ಏಳು ದಿನ ನೀವು ಚಪ್ಪರಗಳಲ್ಲಿ ಇರಬೇಕು.+ ಎಲ್ಲಾ ಇಸ್ರಾಯೇಲ್ಯರು ಚಪ್ಪರಗಳಲ್ಲೇ ವಾಸಿಸಬೇಕು. 43 ಇದ್ರಿಂದ ನಾನು ಇಸ್ರಾಯೇಲ್ಯರನ್ನ ಈಜಿಪ್ಟ್ ದೇಶದಿಂದ ಕರ್ಕೊಂಡು ಬರ್ತಿದ್ದಾಗ+ ಅವರಿಗೆ ಚಪ್ಪರಗಳಲ್ಲೇ ಇರೋಕೆ ವ್ಯವಸ್ಥೆ ಮಾಡಿದ್ದೆ ಅಂತ ನಿಮ್ಮ ಮುಂದಿನ ಪೀಳಿಗೆಗೆ ಗೊತ್ತಾಗುತ್ತೆ.+ ನಾನು ನಿಮ್ಮ ದೇವರಾದ ಯೆಹೋವ.’”
44 ವರ್ಷದ ಬೇರೆಬೇರೆ ಸಮಯದಲ್ಲಿ ಯಾವ್ಯಾವ ಹಬ್ಬ ಮಾಡಬೇಕು ಅಂತ ಯೆಹೋವ ಹೇಳಿದ್ನೋ ಅದನ್ನೆಲ್ಲ ಮೋಶೆ ಇಸ್ರಾಯೇಲ್ಯರಿಗೆ ಹೇಳಿದನು.