ಯಾಜಕಕಾಂಡ
6 ಯೆಹೋವ ಮೋಶೆಗೆ ಇನ್ನೂ ಹೇಳಿದ್ದು ಏನಂದ್ರೆ 2 “ಒಬ್ಬ ತನ್ನ ವಶಕ್ಕೆ ನೆರೆಯವನು ಕೊಟ್ಟ ಅಥವಾ ಅಡವಿಟ್ಟ ವಸ್ತುವಿನ ವಿಷ್ಯದಲ್ಲಿ ಮೋಸ ಮಾಡಿದ್ರೆ,+ ಬೇರೆಯವರಿಂದ ಸುಲಿಗೆ ಮಾಡಿದ್ರೆ, ನೆರೆಯವನನ್ನ ವಂಚಿಸಿದ್ರೆ ಅದು ಪಾಪ. ಹಾಗೆ ಮಾಡಿದ್ರೆ ಅವನು ಯೆಹೋವನಿಗೆ ನಂಬಿಗಸ್ತನಾಗಿ ನಡ್ಕೊಂಡಿಲ್ಲ.+ 3 ಬೇರೆಯವರು ಕಳ್ಕೊಂಡಿದ್ದು ಸಿಕ್ಕಿದಾಗ ಅದ್ರ ಬಗ್ಗೆ ಸುಳ್ಳು ಹೇಳಿದ್ರೂ ಅದು ಪಾಪನೇ. ಈ ಪಾಪಗಳಲ್ಲಿ ಯಾವುದನ್ನಾದ್ರೂ ಮಾಡಿ ‘ನಾನು ಮಾಡ್ಲೇ ಇಲ್ಲ’ ಅಂತ ಸುಳ್ಳು ಆಣೆ ಇಟ್ರೆ ಅದೂ ಪಾಪಾನೇ.+ ಹಾಗೆ ಮಾಡಿದ್ರೆ ಅವನು ದೇವರಿಗೆ ನಂಬಿಗಸ್ತನಾಗಿಲ್ಲ. 4 ದೇವರ ಮುಂದೆ ಅವನು ಅಪರಾಧಿ. ತಾನು ಕದ್ದದ್ದನ್ನ ಅಥವಾ ಬಲವಂತವಾಗಿ ಕಿತ್ಕೊಂಡಿದ್ದನ್ನ ಅಥವಾ ಮೋಸದಿಂದ ತಗೊಂಡಿದ್ದನ್ನ ಹಿಂದೆ ಕೊಡಬೇಕು. ಅವನ ವಶಕ್ಕೆ ನೆರೆಯವನು ಕೊಟ್ಟಿದ್ದನ್ನ ಅಥವಾ ಅವನಿಗೆ ಸಿಕ್ಕಿದ ಬೇರೆಯವರ ವಸ್ತುನ ವಾಪಸ್ ಕೊಡಬೇಕು. 5 ಯಾವುದನ್ನ ತಗೊಂಡೇ ಇಲ್ಲ ಅಂತ ಸುಳ್ಳು ಪ್ರಮಾಣ ಮಾಡಿದ್ನೋ ಅದಕ್ಕೆ ಪೂರ್ತಿ ನಷ್ಟಭರ್ತಿ ಮಾಡಬೇಕು.+ ಜೊತೆಗೆ ಅದ್ರ ಬೆಲೆಯ ಐದನೇ ಒಂದು ಭಾಗ ಕೂಡ ಸೇರಿಸಿ ಕೊಡಬೇಕು. ಅವನು ತಪ್ಪು ಮಾಡಿದ್ದಾನೆ ಅಂತ ಸಾಬೀತಾದ ದಿನಾನೇ ಅದನ್ನ ಅದ್ರ ಯಜಮಾನನಿಗೆ ಕೊಡಬೇಕು. 6 ಅಷ್ಟೇ ಅಲ್ಲ ಅವನು ದೋಷಪರಿಹಾರಕ ಬಲಿಯಾಗಿ ಯೆಹೋವನಿಗೆ ಅರ್ಪಿಸೋಕೆ ಒಂದು ಟಗರನ್ನ ತಂದು ಪುರೋಹಿತನಿಗೆ ಕೊಡಬೇಕು. ಪುರೋಹಿತ ನಿರ್ಧರಿಸಿದ ಬೆಲೆಯ ಟಗರನ್ನ ಅವನು ತರಬೇಕು. ಅದ್ರಲ್ಲಿ ಯಾವುದೇ ದೋಷ ಇರಬಾರದು.+ 7 ಪುರೋಹಿತ ಅವನಿಗಾಗಿ ಯೆಹೋವ ದೇವರ ಮುಂದೆ ಪ್ರಾಯಶ್ಚಿತ್ತ ಮಾಡಬೇಕು. ಅವನು ಯಾವುದೇ ವಿಷ್ಯದಲ್ಲಿ ಅಪರಾಧಿ ಆಗಿದ್ರೂ ಆಗ ದೇವರು ಕ್ಷಮಿಸ್ತಾನೆ.”+
8 ಯೆಹೋವ ಮೋಶೆಗೆ ಮತ್ತೂ ಏನು ಹೇಳಿದನಂದ್ರೆ 9 “ಆರೋನನಿಗೆ, ಅವನ ಮಕ್ಕಳಿಗೆ ಹೀಗೆ ಆಜ್ಞೆ ಕೊಡು: ‘ಸರ್ವಾಂಗಹೋಮ ಬಲಿಯ ನಿಯಮಗಳು+ ಯಾವುದಂದ್ರೆ, ಸರ್ವಾಂಗಹೋಮ ಬಲಿ ಇಡೀ ರಾತ್ರಿಯಿಂದ ಬೆಳಿಗ್ಗೆ ತನಕ ಯಜ್ಞವೇದಿ ಮೇಲೆ ಉರಿತಾ ಇರಬೇಕು. ಯಜ್ಞವೇದಿ ಮೇಲೆ ಬೆಂಕಿ ಯಾವಾಗ್ಲೂ ಉರಿತಾ ಇರಬೇಕು. 10 ಪುರೋಹಿತ ನಾರುಬಟ್ಟೆಯಿಂದ ತಯಾರಿಸಿದ ಬಟ್ಟೆ ಹಾಕಬೇಕು.+ ಅವನ ಗುಪ್ತಾಂಗಗಳು ಕಾಣದ ಹಾಗೆ ನಾರಿನ ಚಡ್ಡಿ*+ ಹಾಕಬೇಕು. ಆಮೇಲೆ ಅವನು ಯಜ್ಞವೇದಿ ಮೇಲೆ ಬೆಂಕಿಯಿಂದ ಸುಟ್ಟುಹೋದ ಸರ್ವಾಂಗಹೋಮ ಬಲಿಯ ಬೂದಿ ತೆಗೆದು+ ಯಜ್ಞವೇದಿ ಪಕ್ಕಕ್ಕೆ ಹಾಕಬೇಕು. 11 ಆಮೇಲೆ ಆ ಬಟ್ಟೆ ಬಿಚ್ಚಿ+ ಬೇರೆ ಬಟ್ಟೆ ಹಾಕೊಂಡು ಆ ಬೂದಿಯನ್ನ ಪಾಳೆಯದ ಹೊರಗೆ ಶುದ್ಧವಾದ ಒಂದು ಸ್ಥಳಕ್ಕೆ ತಗೊಂಡು ಹೋಗಿ ಹಾಕಬೇಕು.+ 12 ಯಜ್ಞವೇದಿ ಮೇಲಿನ ಬೆಂಕಿ ಆರಿಹೋಗಬಾರದು, ಉರಿತಾ ಇರಬೇಕು. ಪ್ರತಿದಿನ ಬೆಳಿಗ್ಗೆ ಪುರೋಹಿತ ಆ ಬೆಂಕಿ ಮೇಲೆ ಕಟ್ಟಿಗೆಗಳನ್ನ ಇಡಬೇಕು,+ ಅದ್ರ ಮೇಲೆ ಸರ್ವಾಂಗಹೋಮ ಬಲಿಯ ಪ್ರಾಣಿಯ ತುಂಡುಗಳನ್ನ ಜೋಡಿಸಿಡಬೇಕು. ಅದ್ರ ಮೇಲೆ ಸಮಾಧಾನ ಬಲಿಯ ಪ್ರಾಣಿಗಳ ಕೊಬ್ಬು ಇಟ್ಟು ಸುಡಬೇಕು. ಅದ್ರ ಹೊಗೆ ಮೇಲೆ ಹೋಗಬೇಕು.+ 13 ಯಜ್ಞವೇದಿ ಮೇಲೆ ಬೆಂಕಿ ಯಾವಾಗ್ಲೂ ಉರಿತಾ ಇರಬೇಕು, ಆರಿಹೋಗಬಾರದು.
14 ಧಾನ್ಯ ಅರ್ಪಣೆಯ ನಿಯಮಗಳು+ ಯಾವುದಂದ್ರೆ, ಆರೋನನ ಮಕ್ಕಳು ಧಾನ್ಯ ಅರ್ಪಣೆಯನ್ನ ಯೆಹೋವನ ಮುಂದೆ ಯಜ್ಞವೇದಿ ಎದುರಿಗೆ ತರಬೇಕು. 15 ಅವ್ರಲ್ಲಿ ಒಬ್ಬ ಧಾನ್ಯ ಅರ್ಪಣೆಯ ನುಣ್ಣಗಿನ ಹಿಟ್ಟಿಂದ ಎಣ್ಣೆ ಬೆರೆತ ಹಿಟ್ಟನ್ನ ಮತ್ತು ಅದ್ರ ಮೇಲಿರೋ ಎಲ್ಲ ಸಾಂಬ್ರಾಣಿಯನ್ನ ಒಂದು ಹಿಡಿತುಂಬ ತಗೊಂಡು ಯಜ್ಞವೇದಿ ಮೇಲೆ ಅರ್ಪಿಸಬೇಕು. ಇದು ಧಾನ್ಯ ಅರ್ಪಣೆಯನ್ನ ಪೂರ್ತಿಯಾಗಿ ಅರ್ಪಿಸಿದ್ದಾರೆ ಅಂತ ಸೂಚಿಸುತ್ತೆ. ಅದ್ರಿಂದ ಮೇಲೇರೋ ಹೊಗೆಯ ಸುವಾಸನೆಯಿಂದ ಯೆಹೋವನಿಗೆ ಸಂತೋಷ* ಆಗುತ್ತೆ.+ 16 ಉಳಿದ ಹಿಟ್ಟು ಆರೋನನಿಗೆ ಅವನ ಮಕ್ಕಳಿಗೆ ಸೇರುತ್ತೆ.+ ಆ ಹಿಟ್ಟಿಂದ ಹುಳಿ ಇಲ್ಲದ ರೊಟ್ಟಿಗಳನ್ನ ಮಾಡಿ ಪವಿತ್ರವಾದ ಒಂದು ಜಾಗದಲ್ಲಿ ಅಂದ್ರೆ ದೇವದರ್ಶನ ಡೇರೆಯ ಅಂಗಳದಲ್ಲಿ ತಿನ್ನಬೇಕು.+ 17 ರೊಟ್ಟಿಗಳನ್ನ ಮಾಡುವಾಗ ಸ್ವಲ್ಪನೂ ಹುಳಿ ಬೆರೆಸಬಾರದು.+ ಬೆಂಕಿಯಲ್ಲಿ ನನಗೆ ಕೊಟ್ಟ ಅರ್ಪಣೆಗಳಿಂದ ಅವರಿಗೆ ಈ ಪಾಲನ್ನ ಕೊಟ್ಟಿದ್ದೀನಿ.+ ಇದು ಪಾಪಪರಿಹಾರಕ ಬಲಿ ತರ, ದೋಷಪರಿಹಾರಕ ಬಲಿ ತರ ಅತಿ ಪವಿತ್ರ.+ 18 ಆರೋನನ ವಂಶದ ಪ್ರತಿಯೊಬ್ಬ ಪುರುಷ ಅದನ್ನ ತಿನ್ನಬೇಕು.+ ಬೆಂಕಿಯಲ್ಲಿ ಯೆಹೋವನಿಗೆ ಕೊಡಲಾದ ಅರ್ಪಣೆಗಳಿಂದ ಅವರಿಗೆ ಆ ಪಾಲು ಸಿಗಬೇಕು. ಈ ರೀತಿ ಅವರಿಗೆ ತಲೆಮಾರು ತಲೆಮಾರುಗಳ ತನಕ ಪಾಲು ಸಿಗಬೇಕು.+ ಆ ಅರ್ಪಣೆಗಳನ್ನ ಮಾಡೋಕೆ ಬಳಸೋ ವಸ್ತುಗಳೆಲ್ಲ ಪವಿತ್ರವಾಗುತ್ತೆ.’”
19 ಯೆಹೋವ ಮೋಶೆಗೆ ಇನ್ನೂ ಹೇಳಿದ್ದೇನಂದ್ರೆ 20 “ಆರೋನನನ್ನ ಮಹಾ ಪುರೋಹಿತನಾಗಿ ಅಭಿಷೇಕಿಸೋ+ ದಿನ ಅವನು ಏಫಾ ಅಳತೆಯ ಹತ್ತನೇ ಒಂದು ಭಾಗದಷ್ಟು*+ ನುಣ್ಣಗಿನ ಹಿಟ್ಟನ್ನ ಯೆಹೋವನಿಗೆ ಅರ್ಪಿಸೋಕೆ ತರಬೇಕು. ಅದ್ರಲ್ಲಿ ಅರ್ಧ ಭಾಗನ ಬೆಳಿಗ್ಗೆ, ಇನ್ನು ಅರ್ಧ ಭಾಗನ ಸಂಜೆ ಅರ್ಪಿಸಬೇಕು. ಮುಂದೆ ಆರೋನನ ಮಕ್ಕಳಲ್ಲಿ ಮಹಾ ಪುರೋಹಿತ ತನ್ನನ್ನ ಅಭಿಷೇಕಿಸೋ ದಿನ ಇದೇ ತರ ಅರ್ಪಣೆಯನ್ನ ಕೊಡಬೇಕು.+ 21 ಅರ್ಪಿಸೋ ಮೊದ್ಲು ಹಿಟ್ಟಿಗೆ ಎಣ್ಣೆ ಬೆರೆಸಿ ನಾದಿ ಹಂಚಿನ ಮೇಲೆ ಸುಟ್ಟಿರಬೇಕು.+ ಅದನ್ನ ಚೂರುಚೂರು ಮಾಡಿ ಚೆನ್ನಾಗಿ ಎಣ್ಣೆ ಹಾಕಿ ಯೆಹೋವನ ಮುಂದೆ ತರಬೇಕು. ಇದ್ರ ಸುವಾಸನೆಯಿಂದ ಆತನಿಗೆ ಸಂತೋಷ* ಆಗುತ್ತೆ. 22 ಆರೋನನ ನಂತ್ರ ಅವನ ಮಕ್ಕಳಲ್ಲಿ ಯಾರಿಗೆ ಮಹಾ ಪುರೋಹಿತನಾಗಿ ಅಭಿಷೇಕ ಆಗುತ್ತೋ+ ಅವನು ಈ ಧಾನ್ಯ ಅರ್ಪಣೆಯನ್ನ ಕೊಡಬೇಕು. ಈ ಇಡೀ ಧಾನ್ಯ ಅರ್ಪಣೆಯನ್ನ ಸುಡೋ ಮೂಲಕ ಯೆಹೋವನಿಗೆ ಅರ್ಪಿಸಬೇಕು. ಅದ್ರ ಹೊಗೆ ಮೇಲೇ ಹೋಗಬೇಕು. ಇದು ಶಾಶ್ವತ ನಿಯಮ. 23 ಹೀಗೆ ಪ್ರತಿಯೊಬ್ಬ ಮಹಾ ಪುರೋಹಿತನನ್ನ ಅಭಿಷೇಕಿಸುವಾಗ ಅವನು ಕೊಡೋ ಧಾನ್ಯ ಅರ್ಪಣೆಯನ್ನ ಪೂರ್ತಿಯಾಗಿ ಸುಡಬೇಕು. ಅದನ್ನ ತಿನ್ನಬಾರದು.”
24 ಯೆಹೋವ ಮೋಶೆ ಜೊತೆ ಮತ್ತೆ ಮಾತಾಡಿ ಹೀಗಂದನು: 25 “ಆರೋನನಿಗೆ, ಅವನ ಮಕ್ಕಳಿಗೆ ಹೀಗೆ ಹೇಳು: ‘ಪಾಪಪರಿಹಾರಕ ಬಲಿಯ ನಿಯಮಗಳು+ ಯಾವದಂದ್ರೆ, ಯೆಹೋವನ ಮುಂದೆ ಸರ್ವಾಂಗಹೋಮ ಬಲಿಯ ಪ್ರಾಣಿ ಕಡಿಯೋ ಜಾಗದಲ್ಲೇ+ ಪಾಪಪರಿಹಾರಕ ಬಲಿಯ ಪ್ರಾಣಿಯನ್ನೂ ಕಡಿಬೇಕು. ಈ ಪಾಪಪರಿಹಾರಕ ಬಲಿ ಅತಿ ಪವಿತ್ರವಾಗಿದೆ. 26 ಪಾಪಪರಿಹಾರಕ್ಕಾಗಿ ಆ ಪ್ರಾಣಿನ ಅರ್ಪಿಸೋ ಪುರೋಹಿತ ಅದ್ರ ಮಾಂಸ ತಿನ್ನಬೇಕು.+ ಇದನ್ನ ಪವಿತ್ರವಾದ ಒಂದು ಜಾಗದಲ್ಲಿ ಅಂದ್ರೆ ದೇವದರ್ಶನ ಡೇರೆಯ ಅಂಗಳದಲ್ಲಿ ತಿನ್ನಬೇಕು.+
27 ಆ ಪ್ರಾಣಿಯ ಬಲಿಗಾಗಿ ಉಪಯೋಗಿಸೋ ಎಲ್ಲ ವಸ್ತುಗಳು ಪವಿತ್ರವಾಗುತ್ತೆ. ಪುರೋಹಿತನ ಬಟ್ಟೆ ಮೇಲೆ ಆ ಪ್ರಾಣಿಯ ರಕ್ತ ಬಿದ್ರೆ ಆ ಬಟ್ಟೆಯನ್ನ ಪವಿತ್ರವಾದ ಒಂದು ಜಾಗದಲ್ಲಿ* ತೊಳಿಬೇಕು. 28 ಆ ಪ್ರಾಣಿಯ ಮಾಂಸನ ಮಣ್ಣಿನ ಪಾತ್ರೆಯಲ್ಲಿ ಬೇಯಿಸಿದ್ರೆ ಆ ಪಾತ್ರೆಯನ್ನ ಒಡೆದುಬಿಡಬೇಕು. ತಾಮ್ರದ ಪಾತ್ರೆಯಲ್ಲಿ ಬೇಯಿಸಿದ್ರೆ ಆ ಪಾತ್ರೆಯನ್ನ ಚೆನ್ನಾಗಿ ತಿಕ್ಕಿ ನೀರಲ್ಲಿ ತೊಳಿಬೇಕು.
29 ಪುರೋಹಿತರಾಗಿ ಸೇವೆ ಮಾಡೋರು ಮಾತ್ರ ಆ ಪಾಪಪರಿಹಾರಕ ಬಲಿಯ ಪ್ರಾಣಿಯ ಮಾಂಸ ತಿನ್ನಬೇಕು.+ ಆ ಬಲಿ ಅತಿ ಪವಿತ್ರವಾಗಿದೆ.+ 30 ಆದ್ರೆ ಪ್ರಾಯಶ್ಚಿತ್ತ ಮಾಡೋಕೆ ಪಾಪಪರಿಹಾರಕ ಬಲಿಯ ಪ್ರಾಣಿಯ ರಕ್ತನ ದೇವದರ್ಶನ ಡೇರೆಯ ಒಳಗೆ ಪವಿತ್ರ ಜಾಗದಲ್ಲಿ+ ತಂದ್ರೆ ಆ ಪ್ರಾಣಿಯ ಮಾಂಸ ತಿನ್ನಬಾರದು. ಅದನ್ನ ಬೆಂಕಿಯಿಂದ ಸುಟ್ಟುಬಿಡಬೇಕು.