ಒಂದನೇ ಅರಸು
8 ಆಗ ಸೊಲೊಮೋನ ಇಸ್ರಾಯೇಲಿನ ಹಿರಿಯರಿಗೆ, ಎಲ್ಲ ಕುಲದ ಮುಖ್ಯಸ್ಥರಿಗೆ ಮತ್ತು ಕುಲದ ಪ್ರಧಾನರಿಗೆ+ ಸೇರಿ ಬರೋಕೆ ಹೇಳಿದ.+ ದಾವೀದಪಟ್ಟಣದಿಂದ ಅಂದ್ರೆ ಚೀಯೋನಿಂದ+ ಯೆಹೋವನ ಒಪ್ಪಂದದ ಮಂಜೂಷ ತಗೊಂಡು ಬರೋಕೆ+ ಅವರೆಲ್ಲ ಯೆರೂಸಲೇಮಿನಲ್ಲಿದ್ದ ರಾಜ ಸೊಲೊಮೋನನ ಹತ್ರ ಬಂದ್ರು. 2 ಇಸ್ರಾಯೇಲಿನ ಎಲ್ಲ ಗಂಡಸ್ರು ಏಳನೇ ತಿಂಗಳು ಅಂದ್ರೆ ಎಥನಿಮ್* ತಿಂಗಳಲ್ಲಿ ನಡಿಯೋ ಹಬ್ಬದ*+ ಸಮಯಕ್ಕೆ ರಾಜ ಸೊಲೊಮೋನನ ಹತ್ರ ಸೇರಿ ಬಂದ್ರು. 3 ಇಸ್ರಾಯೇಲಿನ ಎಲ್ಲ ಹಿರಿಯರು ಸೇರಿ ಬಂದಾಗ ಪುರೋಹಿತರು ಮಂಜೂಷವನ್ನ ಎತ್ಕೊಂಡ್ರು.+ 4 ಪುರೋಹಿತರು ಮತ್ತು ಲೇವಿಯರು ಯೆಹೋವನ ಮಂಜೂಷವನ್ನ, ದೇವದರ್ಶನ ಡೇರೆಯನ್ನ+ ಮತ್ತು ಅದರೊಳಗೆ ಇಟ್ಟಿದ್ದ ಪವಿತ್ರ ವಸ್ತುಗಳನ್ನೆಲ್ಲ ತಂದ್ರು. 5 ರಾಜ ಸೊಲೊಮೋನ ಮತ್ತು ಅವನು ಕರೆಸಿದ್ದ ಎಲ್ಲ ಇಸ್ರಾಯೇಲ್ಯರು ಮಂಜೂಷದ ಮುಂದೆ ನಿಂತಿದ್ರು. ಅಲ್ಲಿ ಅವರು ದನಕುರಿಗಳನ್ನ ಬಲಿಯಾಗಿ ಕೊಟ್ರು.+ ಅವು ಲೆಕ್ಕ ಮಾಡೋಕೆ ಆಗದಷ್ಟು ಇದ್ವು.
6 ಆಮೇಲೆ ಪುರೋಹಿತರು ಯೆಹೋವನ ಒಪ್ಪಂದದ ಮಂಜೂಷವನ್ನ ಅದ್ರ ಜಾಗಕ್ಕೆ+ ಅಂದ್ರೆ ಅತಿ ಪವಿತ್ರ ಸ್ಥಳಕ್ಕೆ ತಂದ್ರು. ಅವರು ಅದನ್ನ ಕೆರೂಬಿಗಳ ರೆಕ್ಕೆಗಳ ಕೆಳಗೆ ಇಟ್ರು.+
7 ಮಂಜೂಷವನ್ನ ಇಟ್ಟ ಜಾಗದ ಮೇಲೆ ಕೆರೂಬಿಗಳ ರೆಕ್ಕೆಗಳು ಚಾಚಿದ್ವು. ಹೀಗೆ ಮಂಜೂಷ ಮತ್ತು ಅದ್ರ ಕೋಲುಗಳು ಕೆರೂಬಿಗಳ ರೆಕ್ಕೆಗಳ ನೆರಳಲ್ಲಿ ಇದ್ವು.+ 8 ಮಂಜೂಷದ ಕೋಲುಗಳು+ ಎಷ್ಟು ಉದ್ದ ಇದ್ವು ಅಂದ್ರೆ ಅವುಗಳ ತುದಿ ಅತಿ ಪವಿತ್ರ ಸ್ಥಳದ ಮುಂದೆ ಇದ್ದ ಪವಿತ್ರ ಸ್ಥಳದಿಂದ ಕಾಣ್ತಿದ್ವು. ಆದ್ರೆ ಅವುಗಳ ತುದಿ ಆಲಯದ ಹೊರಗಿಂದ ಕಾಣಿಸ್ತಿರಲಿಲ್ಲ. ಆ ಕೋಲುಗಳು ಇವತ್ತಿನ ತನಕ ಹಾಗೇ ಇವೆ. 9 ಈಜಿಪ್ಟಿಂದ ಹೊರಗೆ ಬಂದಿದ್ದ+ ಇಸ್ರಾಯೇಲ್ ಜನ್ರ ಜೊತೆ ಯೆಹೋವ ಹೋರೇಬ್ ಬೆಟ್ಟದಲ್ಲಿ ಒಂದು ಒಪ್ಪಂದ ಮಾಡ್ಕೊಂಡಾಗ+ ಮೋಶೆ ಮಂಜೂಷದ ಒಳಗೆ ಕಲ್ಲಿನ ಎರಡು ಹಲಗೆಗಳನ್ನ+ ಇಟ್ಟಿದ್ದ.+ ಅದನ್ನ ಬಿಟ್ರೆ ಅದರೊಳಗೆ ಬೇರೇನೂ ಇರಲಿಲ್ಲ.
10 ಪವಿತ್ರ ಸ್ಥಳದಿಂದ ಪುರೋಹಿತರು ಹೊರಗೆ ಬಂದಾಗ ಯೆಹೋವನ ಆಲಯವನ್ನ ಮೋಡ+ ಮುಚ್ಕೊಳ್ತು.+ 11 ಅದ್ರಿಂದ ಪುರೋಹಿತರಿಗೆ ಸೇವೆ ಮಾಡೋದನ್ನ ಮುಂದುವರಿಸೋಕೆ ಆಗಲಿಲ್ಲ. ಯಾಕಂದ್ರೆ ಯೆಹೋವನ ಮಹಿಮೆ ಯೆಹೋವನ ಆಲಯದಲ್ಲಿ ತುಂಬ್ಕೊಳ್ತು.+ 12 ಆಗ ಸೊಲೊಮೋನ “ಯೆಹೋವನೇ, ನೀನು ದಟ್ಟ ಮೋಡಗಳಲ್ಲಿ ವಾಸಿಸ್ತೀನಿ+ ಅಂತ ಹೇಳಿದ್ದೆ. 13 ಈಗ ನಾನು ನಿನಗೋಸ್ಕರ ಭವ್ಯವಾದ ಒಂದು ಆಲಯವನ್ನ, ನೀನು ಶಾಶ್ವತವಾಗಿ ಇಲ್ಲೇ ಇರೋ ತರ ಸ್ಥಿರವಾದ ಒಂದು ಜಾಗವನ್ನ ಕಟ್ಟಿದ್ದೀನಿ”+ ಅಂದ.
14 ಆಮೇಲೆ ರಾಜ ಸೊಲೊಮೋನ, ಎದ್ದು ನಿಂತಿದ್ದ ಎಲ್ಲ ಇಸ್ರಾಯೇಲ್ಯರ ಕಡೆ ತಿರುಗಿ ಅವ್ರನ್ನ ಆಶೀರ್ವಾದ ಮಾಡ್ತಾ+ 15 ಹೀಗಂದ: “ಇಸ್ರಾಯೇಲ್ ದೇವರಾದ ಯೆಹೋವನಿಗೆ ಹೊಗಳಿಕೆ ಸಿಗಲಿ. ನನ್ನ ಅಪ್ಪ ದಾವೀದನಿಗೆ ಆತನು ಕೊಟ್ಟ ಮಾತನ್ನ ನಿಜ ಮಾಡಿದ್ದಾನೆ. 16 ಆತನು ‘ನಾನು ನನ್ನ ಜನ್ರಾದ ಇಸ್ರಾಯೇಲ್ಯರನ್ನ ಈಜಿಪ್ಟಿಂದ ಕರ್ಕೊಂಡು ಬಂದ ದಿನದಿಂದ ಹಿಡಿದು ಇಲ್ಲಿ ತನಕ ನನ್ನ ಹೆಸ್ರಿಗಾಗಿ ಒಂದು ಆಲಯ ಕಟ್ಟೋಕೆ ಇಸ್ರಾಯೇಲ್ಯರ ಕುಲದಿಂದ ಯಾವ ಪಟ್ಟಣವನ್ನೂ ಆರಿಸ್ಕೊಳ್ಳಲಿಲ್ಲ.+ ಆದ್ರೆ ನನ್ನ ಜನ್ರಾದ ಇಸ್ರಾಯೇಲ್ಯರನ್ನ ಆಳೋಕೆ ದಾವೀದನನ್ನ ಆರಿಸ್ಕೊಂಡೆ’ ಅಂತ ಹೇಳಿದ್ದನು. 17 ಇಸ್ರಾಯೇಲ್ ದೇವರಾದ ಯೆಹೋವನ ಹೆಸ್ರಿಗಾಗಿ ಒಂದು ಆಲಯ ಕಟ್ಟಬೇಕು ಅನ್ನೋದು ನನ್ನ ಅಪ್ಪ ದಾವೀದನ ದೊಡ್ಡ ಆಸೆ ಆಗಿತ್ತು.+ 18 ಯೆಹೋವ ನನ್ನ ಅಪ್ಪ ದಾವೀದನಿಗೆ ‘ನನ್ನ ಹೆಸ್ರಿಗಾಗಿ ಒಂದು ಆಲಯ ಕಟ್ಟಬೇಕು ಅನ್ನೋ ನಿನ್ನ ಮನದಾಳದ ಆಸೆ ಒಳ್ಳೇದೇ. 19 ಆದ್ರೆ ನೀನು ಆಲಯ ಕಟ್ಟಲ್ಲ. ನಿನಗೆ ಹುಟ್ಟೋ ನಿನ್ನ ಸ್ವಂತ ಮಗ ನನ್ನ ಹೆಸ್ರಿಗಾಗಿ ಒಂದು ಆಲಯ ಕಟ್ತಾನೆ’+ ಅಂತ ಹೇಳಿದ್ದನು. 20 ಯೆಹೋವ ಕೊಟ್ಟ ಮಾತನ್ನ ನಿಜ ಮಾಡಿದ್ದಾನೆ. ಯೆಹೋವ ಮಾತು ಕೊಟ್ಟ ಹಾಗೆ ನನ್ನ ಅಪ್ಪ ದಾವೀದನ ಸ್ಥಾನದಲ್ಲಿ ನಾನು ರಾಜ ಆದೆ. ಇಸ್ರಾಯೇಲ್ ಸಿಂಹಾಸನದ ಮೇಲೆ ಕೂತ್ಕೊಂಡೆ. ಅಷ್ಟೇ ಅಲ್ಲ ಇಸ್ರಾಯೇಲ್ ದೇವರಾದ ಯೆಹೋವನ ಹೆಸ್ರಿಗಾಗಿ ಆಲಯ ಕಟ್ಟಿದೆ.+ 21 ಈ ಆಲಯದಲ್ಲಿ ನಾನು ಮಂಜೂಷ ಇಡೋಕೆ ಒಂದು ಜಾಗ ಮಾಡಿದ್ದೀನಿ. ನಮ್ಮ ಪೂರ್ವಜರು ಈಜಿಪ್ಟನ್ನ ಬಿಟ್ಟು ಬರುವಾಗ ಯೆಹೋವ ಅವರ ಜೊತೆ ಮಾಡಿದ ಒಪ್ಪಂದದ ಕಲ್ಲಿನ ಹಲಗೆಗಳು ಆ ಮಂಜೂಷದ ಒಳಗೆ ಇವೆ.”+
22 ಆಮೇಲೆ ಸೊಲೊಮೋನ ಎಲ್ಲ ಇಸ್ರಾಯೇಲ್ಯರು ನೋಡ್ತಾ ಇರುವಾಗ ಯೆಹೋವನ ಯಜ್ಞವೇದಿ ಮುಂದೆ ನಿಂತು ಆಕಾಶದ ಕಡೆ ಕೈಗಳನ್ನ ಎತ್ತಿ,+ 23 ಹೀಗೆ ಪ್ರಾರ್ಥಿಸಿದ: “ಯೆಹೋವನೇ, ಇಸ್ರಾಯೇಲ್ ದೇವರೇ, ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ನಿನಗೆ ಸಮಾನನಾದ ದೇವರು ಯಾರೂ ಇಲ್ಲ.+ ನಿನ್ನ ಮುಂದೆ ಪೂರ್ಣ ಹೃದಯದಿಂದ ನಡ್ಕೊಳ್ಳೋ ನಿನ್ನ ಸೇವಕರಿಗೆ+ ನೀನು ಕೊಟ್ಟ ಮಾತನ್ನ ಉಳಿಸ್ಕೊಳ್ತೀಯ, ಅವ್ರಿಗೆ ಶಾಶ್ವತ ಪ್ರೀತಿ ತೋರಿಸ್ತೀಯ.+ 24 ನಿನ್ನ ಸೇವಕನಾದ ನನ್ನ ಅಪ್ಪ ದಾವೀದನಿಗೆ ಕೊಟ್ಟ ಮಾತನ್ನ ನೀನು ಉಳಿಸ್ಕೊಂಡೆ. ಆ ಮಾತನ್ನ ಇವತ್ತು ನಿಜ ಮಾಡ್ದೆ.+ 25 ಯೆಹೋವನೇ, ಇಸ್ರಾಯೇಲ್ ದೇವರೇ, ನೀನು ನಿನ್ನ ಸೇವಕನಾದ ನನ್ನ ಅಪ್ಪ ದಾವೀದನಿಗೆ ‘ನಿನ್ನ ತರಾನೇ ನಿನ್ನ ಮಕ್ಕಳೂ ನಾನು ಹೇಳಿದ ದಾರಿಯಲ್ಲಿ ನಡೆದ್ರೆ, ಅವರು ನಡ್ಕೊಳ್ಳೋ ರೀತಿ ಬಗ್ಗೆ ಜಾಗ್ರತೆಯಿಂದ ಇದ್ರೆ, ಇಸ್ರಾಯೇಲಿನ ಸಿಂಹಾಸನದ ಮೇಲೆ ಕೂತ್ಕೊಳ್ಳೋಕೆ ನಿನ್ನ ವಂಶದವ್ರಲ್ಲಿ ಯಾವಾಗ್ಲೂ ಒಬ್ಬ ಇದ್ದೇ ಇರ್ತಾನೆ’ ಅಂತ ಮಾತು ಕೊಟ್ಟಿದ್ದೆ. ಈಗ ಆ ಮಾತನ್ನ ನಿಜ ಮಾಡು.+ 26 ಇಸ್ರಾಯೇಲ್ ದೇವರೇ ನೀನು ನಿನ್ನ ಸೇವಕನಾದ ದಾವೀದನಿಗೆ ಕೊಟ್ಟ ಆ ಮಾತನ್ನ ದಯವಿಟ್ಟು ಮರೀಬೇಡ.
27 ಆದ್ರೆ ದೇವರು ನಿಜಕ್ಕೂ ಭೂಮಿ ಮೇಲೆ ವಾಸಿಸ್ತಾನಾ?+ ಆಕಾಶ, ಹೌದು ವಿಶಾಲ ಆಕಾಶವೇ ನಿನಗೆ ಸಾಕಾಗಲ್ಲ.+ ಹಾಗಿರುವಾಗ ನಾನು ಕಟ್ಟಿದ ಈ ಆಲಯ ಏನೂ ಅಲ್ಲ!+ 28 ಯೆಹೋವನೇ, ನನ್ನ ದೇವರೇ ಇವತ್ತು ಈ ನಿನ್ನ ಸೇವಕನ ಪ್ರಾರ್ಥನೆಗೆ ಗಮನಕೊಡು. ನಿನ್ನ ಕೃಪೆಗಾಗಿ ಬೇಡ್ತಿರೋ ಈ ಬಿನ್ನಹ ಕೇಳು. ನಿನ್ನ ಸೇವಕ ಸಹಾಯಕ್ಕಾಗಿ ಇಡೋ ಮೊರೆಯನ್ನ ಕೇಳಿಸ್ಕೋ. ನಿನ್ನ ಮುಂದೆ ಮಾಡ್ತಿರೋ ಈ ಪ್ರಾರ್ಥನೆ ಸ್ವೀಕರಿಸು. 29 ಈ ಆಲಯದ ಬಗ್ಗೆ ನೀನು ‘ಇಲ್ಲಿ ನನ್ನ ಹೆಸ್ರು ಇರುತ್ತೆ’+ ಅಂತ ಹೇಳಿದ್ದೆ. ಹಾಗಾಗಿ ಈ ಆಲಯವನ್ನ ಹಗಲಿರುಳು ನಿನ್ನ ಕಣ್ಣು ಕಾಯಲಿ. ನಿನ್ನ ಸೇವಕ ಇದ್ರ ಕಡೆ ತಿರುಗಿ ಪ್ರಾರ್ಥಿಸಿದಾಗೆಲ್ಲಾ ನೀನು ಅವನ ಪ್ರಾರ್ಥನೆ ಕೇಳಿಸ್ಕೋ.+ 30 ನಿನ್ನ ಸೇವಕ ಮತ್ತು ನಿನ್ನ ಜನ್ರಾದ ಇಸ್ರಾಯೇಲ್ಯರು ಈ ಕಡೆ ತಿರುಗಿ ನಿನ್ನ ಕೃಪೆಗಾಗಿ ಬೇಡುವಾಗ ನೀನು ಅದನ್ನ ಕೇಳಿಸ್ಕೋ. ನಿನ್ನ ವಾಸಸ್ಥಳವಾದ ಆಕಾಶದಿಂದ ಅವ್ರ ಪ್ರಾರ್ಥನೆ ಕೇಳಿಸ್ಕೋ.+ ಅವ್ರನ್ನ ಕ್ಷಮಿಸು.+
31 ಒಂದುವೇಳೆ ಒಬ್ಬ ವ್ಯಕ್ತಿ ಇನ್ನೊಬ್ಬನ ಮೇಲೆ ‘ನೀನು ನನ್ನ ವಿರುದ್ಧ ಪಾಪ ಮಾಡಿದ್ದೀಯ’ ಅಂತ ಆರೋಪ ಹಾಕಿ ಅವನಿಂದ ಆಣೆ ಮಾಡಿಸಬಹುದು.* ಆಣೆ ಮಾಡಿದ್ರಿಂದ ಅವನು ಈ ಆಲಯಕ್ಕೆ ಬಂದು ನಿನ್ನ ಯಜ್ಞವೇದಿಯ ಮುಂದೆ ನಿಂತಿರುವಾಗ,+ 32 ಸ್ವರ್ಗದಲ್ಲಿರೋ ನೀನು ಅದನ್ನ ಕೇಳಿಸ್ಕೊಂಡು ನಿನ್ನ ಸೇವಕರಿಗೆ ತೀರ್ಪು ಕೊಡು. ಅವ್ರಲ್ಲಿ ಯಾರು ಕೆಟ್ಟವನೋ ಅವನನ್ನ ಅಪರಾಧಿ ಅಂತ ನಿರ್ಣಯಿಸಿ ಅವನು ಮಾಡಿದ ತಪ್ಪಿಗೆ ಶಿಕ್ಷೆ ಕೊಡು. ಯಾರು ನೀತಿವಂತನೋ ಅವನನ್ನ ನಿರಪರಾಧಿ* ಅಂತ ನಿರ್ಣಯಿಸಿ ಅವನ ನೀತಿಗೆ ತಕ್ಕ ಆಶೀರ್ವಾದ ಕೊಡು.+
33 ನಿನ್ನ ಜನ್ರಾದ ಇಸ್ರಾಯೇಲ್ಯರು ನಿನ್ನ ವಿರುದ್ಧ ಪಾಪಮಾಡ್ತಾ ಇದ್ದಿದ್ರಿಂದ ಶತ್ರುಗಳಿಂದ ಸೋತು+ ನಿನ್ನ ಹತ್ರ ವಾಪಸ್ ಬಂದು ನಿನ್ನ ಹೆಸ್ರನ್ನ ಹೊಗಳಿದ್ರೆ,+ ನಿನ್ನ ಆಲಯಕ್ಕೆ ಬಂದು ಪ್ರಾರ್ಥಿಸಿದ್ರೆ, ನಿನ್ನ ಕೃಪೆಗಾಗಿ ಅತ್ತು ಬೇಡ್ಕೊಂಡ್ರೆ,+ 34 ಸ್ವರ್ಗದಲ್ಲಿರೋ ನೀನು ಅದನ್ನ ಕೇಳಿಸ್ಕೊಂಡು ನಿನ್ನ ಜನ್ರಾದ ಇಸ್ರಾಯೇಲ್ಯರ ಪಾಪ ಕ್ಷಮಿಸು. ನೀನು ಅವ್ರ ಪೂರ್ವಜರಿಗೆ ಕೊಟ್ಟ ಈ ದೇಶಕ್ಕೆ ಅವರು ವಾಪಸ್ ಬರೋ ತರ ಮಾಡು.+
35 ಅವರು ನಿನ್ನ ವಿರುದ್ಧ ಪಾಪಮಾಡ್ತಾ ಇದ್ದಿದ್ರಿಂದ+ ಆಕಾಶ ಮುಚ್ಚಿಹೋಗಿ ಮಳೆಯಾಗದೆ ಇದ್ದಾಗ+ ನೀನು ಅವ್ರಿಗೆ ದೀನತೆಯ ಪಾಠ ಕಲಿಸಿದ್ರಿಂದ ಅವರು ಈ ಕಡೆ ತಿರುಗಿ ಪ್ರಾರ್ಥಿಸಿದ್ರೆ, ನಿನ್ನ ಹೆಸ್ರನ್ನ ಹೊಗಳಿದ್ರೆ, ತಮ್ಮ ಪಾಪಗಳನ್ನ ಬಿಟ್ಟು ತಿರುಗಿದ್ರೆ+ 36 ಸ್ವರ್ಗದಲ್ಲಿರೋ ನೀನು ನಿನ್ನ ಸೇವಕರಾದ ಇಸ್ರಾಯೇಲ್ ಜನ್ರ ಪ್ರಾರ್ಥನೆ ಕೇಳಿ ಅವ್ರ ತಪ್ಪುಗಳನ್ನ ಕ್ಷಮಿಸು. ಯಾಕಂದ್ರೆ ಅವರು ಯಾವ ದಾರೀಲಿ ನಡಿಬೇಕೊ ಆ ಒಳ್ಳೇ ದಾರಿಯನ್ನ ನೀನು ಅವ್ರಿಗೆ ಕಲಿಸ್ತೀಯ.+ ನಿನ್ನ ಜನ್ರಿಗೆ ಆಸ್ತಿಯಾಗಿ ನೀನು ಕೊಟ್ಟಿರೋ ಈ ದೇಶದಲ್ಲಿ ಮಳೆಯಾಗೋ ತರ ಮಾಡು.+
37 ಒಂದುವೇಳೆ ದೇಶಕ್ಕೆ ಬರ,+ ಮಾರಕ ರೋಗ, ಬಿಸಿಗಾಳಿ, ಬೂಷ್ಟು,+ ಮಿಡತೆಗಳ ಗುಂಪು ಅಥವಾ ಹೊಟ್ಟೆಬಾಕ ಮಿಡತೆಗಳು ಬಂದ್ರೆ ಅಥವಾ ದೇಶದ ಯಾವುದಾದ್ರೂ ಒಂದು ಪಟ್ಟಣಕ್ಕೆ ಶತ್ರುಗಳು ಮುತ್ತಿಗೆ ಹಾಕಿದ್ರೆ ಅಥವಾ ಬೇರೆ ಯಾವುದೇ ತರದ ವ್ಯಾಧಿ ಅಥವಾ ರೋಗ ಬಂದ್ರೆ,+ 38 ಒಬ್ಬ ವ್ಯಕ್ತಿಯಾಗಲಿ ಇಡೀ ಇಸ್ರಾಯೇಲ್ ಜನ್ರೇ ಆಗಲಿ ಈ ಆಲಯದ ಕಡೆ ಕೈಗಳನ್ನ ಚಾಚಿ ಏನೇ ಪ್ರಾರ್ಥನೆ ಮಾಡಿದ್ರೂ (ಪ್ರತಿಯೊಬ್ಬನಿಗೂ ತನ್ನ ಹೃದಯದ ನೋವು ಏನಂತ ಗೊತ್ತು)+ ಕೃಪೆಗಾಗಿ ಯಾವುದೇ ತರದ ಬಿನ್ನಹ ಮಾಡಿದ್ರೂ,+ 39 ನಿನ್ನ ವಾಸಸ್ಥಳವಾದ ಸ್ವರ್ಗದಿಂದ+ ಅದನ್ನ ಕೇಳಿಸ್ಕೊಂಡು ಕ್ಷಮಿಸು,+ ಸಹಾಯ ಮಾಡು. ಹೃದಯ ತಿಳಿದಿರೋ ನೀನು (ನೀನೊಬ್ಬನೇ ಮನುಷ್ಯರೆಲ್ಲರ ಹೃದಯವನ್ನ ಓದುವವನು)+ ಪ್ರತಿಯೊಬ್ಬನಿಗೂ ಅವನವನ ಕೆಲಸಕ್ಕೆ ತಕ್ಕ ಹಾಗೆ ಪ್ರತಿಫಲ ಕೊಡು.+ 40 ಆಗ ಅವರು, ತಾವು ಬದುಕಿರೋ ತನಕ ನೀನು ನಮ್ಮ ಪೂರ್ವಜರಿಗೆ ಕೊಟ್ಟಿರೋ ಈ ದೇಶದಲ್ಲಿ ನಿನಗೆ ಭಯಪಟ್ಟು ನಡೀತಾರೆ.
41 ಅಷ್ಟೇ ಅಲ್ಲ, ಇಸ್ರಾಯೇಲ್ಯರಲ್ಲದ ವಿದೇಶಿಗಳು, ನಿನ್ನ ಹೆಸ್ರನ್ನ ಕೇಳಿ ದೂರ ದೇಶದಿಂದ ಬರೋ ಜನ್ರು+ 42 (ಅವರು ನಿನ್ನ ಮಹಾ ಹೆಸ್ರಿನ ಬಗ್ಗೆ,+ ನಿನ್ನ ಬಲಿಷ್ಠ ಕೈಗಳ ಬಗ್ಗೆ, ಚಾಚಿಕೊಂಡಿರೋ ನಿನ್ನ ತೋಳಿನ ಬಗ್ಗೆ ಕೇಳಿಸ್ಕೊಂಡು) ಈ ಆಲಯದ ಮುಂದೆ ನಿಂತು ನಿನಗೆ ಪ್ರಾರ್ಥನೆ ಮಾಡಿದ್ರೆ, 43 ನಿನ್ನ ವಾಸಸ್ಥಳವಾದ ಸ್ವರ್ಗದಿಂದ+ ನೀನು ಅದನ್ನ ಕೇಳಿಸ್ಕೊಂಡು ಅವರು ನಿನ್ನ ಹತ್ರ ಕೇಳೋ ಎಲ್ಲವನ್ನ ಅವ್ರಿಗೆ ಕೊಡು. ಆಗ ನಿನ್ನ ಜನ್ರಾದ ಇಸ್ರಾಯೇಲ್ಯರ ತರ ಭೂಮಿಯಲ್ಲಿರೋ ಎಲ್ಲ ಜನ ನಿನ್ನ ಹೆಸ್ರನ್ನ ತಿಳ್ಕೊಂಡು ನಿನಗೆ ಭಯಪಡ್ತಾರೆ.+ ಈ ಆಲಯವನ್ನ ನಾನು ನಿನ್ನ ಹೆಸ್ರಿಗಾಗಿ ಕಟ್ಟಿಸಿದ್ದೀನಿ ಅಂತ ತಿಳ್ಕೊತಾರೆ.
44 ಒಂದುವೇಳೆ ನೀನು ನಿನ್ನ ಜನ್ರನ್ನ ಶತ್ರುಗಳ ವಿರುದ್ಧ ಯುದ್ಧಮಾಡೋಕೆ ಎಲ್ಲಿಗಾದ್ರೂ ಕಳಿಸಿದಾಗ+ ಅವರು ನೀನು ಆರಿಸ್ಕೊಂಡಿರೋ ಪಟ್ಟಣದ+ ಕಡೆ, ನಾನು ನಿನ್ನ ಹೆಸ್ರಿಗಾಗಿ ಕಟ್ಟಿರೋ ಈ ಆಲಯದ+ ಕಡೆ ತಿರುಗಿ ಯೆಹೋವನಾದ ನಿನಗೆ ಪ್ರಾರ್ಥಿಸಿದ್ರೆ,+ 45 ನೀನು ಸ್ವರ್ಗದಿಂದ ಅವ್ರ ಪ್ರಾರ್ಥನೆ, ನಿನ್ನ ಕೃಪೆಗಾಗಿ ಅವರು ಮಾಡೋ ಬಿನ್ನಹ ಕೇಳಿಸ್ಕೊ. ಅವ್ರಿಗೆ ನ್ಯಾಯ ಕೊಡಿಸು.
46 ಒಂದುವೇಳೆ ಅವರು ನಿನ್ನ ವಿರುದ್ಧ ಪಾಪ ಮಾಡಿದ್ರೆ (ಯಾಕಂದ್ರೆ ಪಾಪ ಮಾಡದ ವ್ಯಕ್ತಿ ಯಾರೂ ಇಲ್ಲ),+ ನಿನಗೆ ಅವ್ರ ಮೇಲೆ ತುಂಬ ಕೋಪ ಬಂದು ನೀನು ಅವ್ರನ್ನ ಶತ್ರುಗಳ ಕೈಗೆ ಒಪ್ಪಿಸಿದ್ರೆ, ಆ ಶತ್ರುಗಳು ಅವ್ರನ್ನ ಕೈದಿಗಳಾಗಿ ದೂರದ ದೇಶಕ್ಕಾಗಲಿ ಹತ್ತಿರದ ದೇಶಕ್ಕಾಗಲಿ ಕರ್ಕೊಂಡು ಹೋದ್ರೆ,+ 47 ಆ ದೇಶದಲ್ಲಿ ನಿನ್ನ ಜನ್ರಿಗೆ ತಮ್ಮ ತಪ್ಪಿನ ಅರಿವಾಗಿ,+ ನಿನ್ನ ಕಡೆ ತಿರುಗಿಕೊಂಡ್ರೆ+ ಮತ್ತು ತಮ್ಮ ಶತ್ರುಗಳ ದೇಶದಲ್ಲಿ ‘ನಾವು ಪಾಪ ಮಾಡಿದ್ದೀವಿ, ತಪ್ಪು ಮಾಡಿದ್ದೀವಿ. ದುಷ್ಟರ ತರ ನಡ್ಕೊಂಡಿದ್ದೀವಿ’+ ಅಂತ ನಿನ್ನ ಕೃಪೆಗಾಗಿ ಕೋರಿದ್ರೆ,+ 48 ತಮ್ಮನ್ನ ಬಂದಿಗಳಾಗಿ ಕರ್ಕೊಂಡು ಹೋಗಿರೋ ಶತ್ರುಗಳ ದೇಶದಲ್ಲಿ ಅವರು ಪೂರ್ಣ ಹೃದಯದಿಂದ ಪೂರ್ಣ ಪ್ರಾಣದಿಂದ ನಿನ್ನ ಕಡೆ ತಿರುಗಿದ್ರೆ+ ಮತ್ತು ನೀನು ಅವರ ಪೂರ್ವಜರಿಗೆ ಕೊಟ್ಟಿರೋ ಈ ದೇಶದ ಕಡೆ, ನೀನು ಆರಿಸ್ಕೊಂಡಿರೋ ಪಟ್ಟಣದ ಕಡೆ, ನಿನ್ನ ಹೆಸರಿಗಾಗಿ ನಾನು ಕಟ್ಟಿಸಿರೋ ಈ ಆಲಯದ ಕಡೆ ತಿರುಗಿ ಪ್ರಾರ್ಥಿಸಿದ್ರೆ,+ 49 ನಿನ್ನ ವಾಸಸ್ಥಳವಾಗಿರೋ ಸ್ವರ್ಗದಿಂದ+ ನೀನು ಅವರ ಪ್ರಾರ್ಥನೆನ ಕೇಳಿಸ್ಕೋ, ಕೃಪೆಗಾಗಿ ಅವರು ಮಾಡೋ ಬಿನ್ನಹನ ಕೇಳಿಸ್ಕೊ. ಅವ್ರಿಗೆ ನ್ಯಾಯ ಕೊಡಿಸು. 50 ನಿನ್ನ ವಿರುದ್ಧ ಪಾಪಮಾಡಿದ್ದ ನಿನ್ನ ಜನ್ರನ್ನ ಕ್ಷಮಿಸು. ನಿನ್ನ ವಿರುದ್ಧ ಅವರು ಮಾಡಿರೋ ಅಪರಾಧಗಳನ್ನ ಕ್ಷಮಿಸು. ಅವ್ರ ಶತ್ರುಗಳಿಗೆ ಅವ್ರ ಮೇಲೆ ಅನುಕಂಪ ಹುಟ್ಟೋ ತರ ಮಾಡು. ಆಗ ಅವರ ಶತ್ರುಗಳು ಅವರಿಗೆ ಅನುಕಂಪ ತೋರಿಸ್ತಾರೆ.+ 51 (ಯಾಕಂದ್ರೆ ಅವರು ನಿನ್ನ ಜನರು, ನಿನ್ನ ಆಸ್ತಿ.+ ಕಬ್ಬಿಣವನ್ನ ಕರಗಿಸೋ ಕುಲುಮೆ+ ತರ ಇದ್ದ ಈಜಿಪ್ಟಿಂದ ನೀನು ಅವರನ್ನ ಬಿಡಿಸಿ ಕರ್ಕೊಂಡು ಬಂದೆ).+ 52 ನಿನ್ನ ಸೇವಕ ಮತ್ತು ನಿನ್ನ ಜನ್ರಾದ ಇಸ್ರಾಯೇಲ್ಯರು ನಿನ್ನ ಕೃಪೆಗಾಗಿ ಬೇಡ್ಕೊಳ್ಳುವಾಗೆಲ್ಲ ನೀನು ಅದನ್ನ ಕೇಳು.+ ಯಾವಾಗೆಲ್ಲ ಅವರು ನಿನ್ನನ್ನ ಕರೀತಾರೋ ಆಗೆಲ್ಲ ನೀನು ಕೇಳಿಸ್ಕೊ.+ 53 ಯಾಕಂದ್ರೆ ವಿಶ್ವದ ರಾಜ ಯೆಹೋವನೇ, ನಮ್ಮ ಪೂರ್ವಜರನ್ನ ಈಜಿಪ್ಟಿಂದ ಬಿಡಿಸ್ಕೊಂಡು ಬರುವಾಗ ನಿನ್ನ ಸೇವಕ ಮೋಶೆಗೆ ನೀನು ಹೇಳಿದ ಹಾಗೇ ನೀನು ಈ ಜನ್ರನ್ನ ಭೂಮಿಯ ಬೇರೆ ಎಲ್ಲ ಜನ್ರಿಂದ ಆರಿಸ್ಕೊಂಡು, ನಿನ್ನ ಸೊತ್ತಾಗಿ ಮಾಡ್ಕೊಂಡೆ.”+
54 ಸೊಲೊಮೋನ ಈ ಇಡೀ ಪ್ರಾರ್ಥನೆನ ಮತ್ತು ಕೃಪೆಗಾಗಿ ಮಾಡಿದ ಬಿನ್ನಹನ ಯೆಹೋವನಿಗೆ ಮಾಡಿದ. ಆಮೇಲೆ ಯೆಹೋವನ ಯಜ್ಞವೇದಿಯ ಮುಂದಿಂದ ಎದ್ದ. ಅಲ್ಲಿ ತನಕ ಅವನು ಆಕಾಶದ ಕಡೆ ಕೈಗಳನ್ನ ಎತ್ಕೊಂಡು ಮಂಡಿಯೂರಿದ್ದ.+ 55 ಆಮೇಲೆ ಸೊಲೊಮೋನ ಅಲ್ಲಿ ನಿಂತು ಎಲ್ಲ ಇಸ್ರಾಯೇಲ್ಯರನ್ನ ಆಶೀರ್ವದಿಸ್ತಾ ಗಟ್ಟಿಯಾಗಿ ಹೀಗಂದ: 56 “ಎಲ್ರೂ ಯೆಹೋವನನ್ನ ಹೊಗಳೋ ತರ ಆಗ್ಲಿ. ಆತನು ಮಾತು ಕೊಟ್ಟ ಹಾಗೇ ತನ್ನ ಜನ್ರಾದ ಇಸ್ರಾಯೇಲ್ಯರಿಗೆ ವಿಶ್ರಾಂತಿಯ ಸ್ಥಳ ಕೊಟ್ಟನು.+ ತನ್ನ ಸೇವಕ ಮೋಶೆ ಮೂಲಕ ಆತನು ಕೊಟ್ಟ ಮಾತುಗಳೆಲ್ಲ ನಿಜ ಆದ್ವು. ಅವುಗಳಲ್ಲಿ ಒಂದೂ ಸುಳ್ಳಾಗಲಿಲ್ಲ.+ 57 ನಮ್ಮ ಪೂರ್ವಜರ ಜೊತೆ ಇದ್ದ ಹಾಗೇ ನಮ್ಮ ದೇವರಾದ ಯೆಹೋವ ನಮ್ಮ ಜೊತೆನೂ ಇರಲಿ.+ ಆತನು ಯಾವತ್ತೂ ನಮ್ಮನ್ನ ತಿರಸ್ಕರಿಸದಿರಲಿ. ಯಾವತ್ತೂ ನಮ್ಮ ಕೈಬಿಡದಿರಲಿ.+ 58 ನಮ್ಮ ಹೃದಯಗಳನ್ನ ಆತನು ತನ್ನ ಕಡೆ ತಿರುಗಿಸ್ಕೊಳ್ಳಲಿ.+ ಆತನು ನಮ್ಮ ಪೂರ್ವಜರಿಗೆ ಪಾಲಿಸೋಕೆ ಹೇಳಿದ ಆತನ ಎಲ್ಲ ದಾರಿಗಳಲ್ಲಿ ನಾವು ನಡಿಯೋ ಹಾಗೆ, ಆತನ ಆಜ್ಞೆಗಳನ್ನ, ನಿಯಮಗಳನ್ನ ಮತ್ತು ತೀರ್ಪುಗಳನ್ನ ನಾವು ಪಾಲಿಸೋ ಹಾಗೆ ಆಗಲಿ. 59 ಇಲ್ಲಿ ತನಕ ನಾನು ಯೆಹೋವನ ಕೃಪೆಗಾಗಿ ಆತನ ಹತ್ರ ಬೇಡಿದಂಥ ಎಲ್ಲವನ್ನ ನಮ್ಮ ದೇವರಾದ ಯೆಹೋವ ಹಗಲೂರಾತ್ರಿ ಜ್ಞಾಪಕ ಮಾಡ್ಕೊಂಡು ಆತನ ಈ ಸೇವಕನಿಗೆ ಮತ್ತು ಆತನ ಜನ್ರಾದ ಇಸ್ರಾಯೇಲ್ಯರಿಗೆ ಪ್ರತಿ ದಿನದ ಅಗತ್ಯಕ್ಕೆ ತಕ್ಕಂತೆ ತೀರ್ಪು ಮಾಡಲಿ. 60 ಆತನು ಹೀಗೆ ಮಾಡೋದನ್ನ ನೋಡಿ ಭೂಮಿ ಮೇಲಿರೋ ಎಲ್ಲ ಜನ್ರು ಯೆಹೋವನೇ ಸತ್ಯ ದೇವರು,+ ಆತನನ್ನ ಬಿಟ್ರೆ ಬೇರೆ ದೇವರಿಲ್ಲ+ ಅಂತ ತಿಳ್ಕೊಳ್ಳಲಿ. 61 ಹಾಗಾಗಿ ಇವತ್ತು ಹೇಗೆ ನಿಮ್ಮ ಹೃದಯ ಸಂಪೂರ್ಣವಾಗಿ+ ನಮ್ಮ ದೇವರಾದ ಯೆಹೋವನ ಕಡೆ ಇದ್ಯೋ ಅದೇ ತರ ಯಾವಾಗ್ಲೂ ಇದ್ದು ಆತನ ನಿಯಮಗಳನ್ನ ಮತ್ತು ಆತನ ಆಜ್ಞೆಗಳನ್ನ ಪಾಲಿಸ್ತಾ ಇರಿ.”
62 ಆಮೇಲೆ ರಾಜ ಮತ್ತು ಎಲ್ಲ ಇಸ್ರಾಯೇಲ್ಯರು ಯೆಹೋವನ ಮುಂದೆ ತುಂಬ ಬಲಿಗಳನ್ನ ಕೊಟ್ರು.+ 63 ಸೊಲೊಮೋನ ಯೆಹೋವನಿಗಾಗಿ 22,000 ಹೋರಿಗಳನ್ನ, 1,20,000 ಕುರಿಗಳನ್ನ ಸಮಾಧಾನ ಬಲಿಯಾಗಿ+ ಕೊಟ್ಟ. ಹೀಗೆ ರಾಜ ಮತ್ತು ಇಡೀ ಇಸ್ರಾಯೇಲ್ಯರು ಯೆಹೋವನ ಆಲಯವನ್ನ ಉದ್ಘಾಟನೆ ಮಾಡಿದ್ರು.+ 64 ಅವತ್ತು ರಾಜ ಯೆಹೋವನ ಆಲಯದ ಮುಂದೆ ಇದ್ದ ಅಂಗಳದ ಮಧ್ಯ ಭಾಗದಲ್ಲಿ ಸರ್ವಾಂಗಹೋಮ ಬಲಿಗಳನ್ನ, ಧಾನ್ಯ ಅರ್ಪಣೆಗಳನ್ನ ಮತ್ತು ಸಮಾಧಾನ ಬಲಿಗಳ ಕೊಬ್ಬಿದ ಭಾಗಗಳನ್ನ ಕೊಡೋಕೆ ಅದನ್ನ ಪವಿತ್ರ ಮಾಡಬೇಕಾಯ್ತು. ಯಾಕಂದ್ರೆ ಯೆಹೋವನ ಮುಂದಿದ್ದ ತಾಮ್ರದ ಯಜ್ಞವೇದಿ+ ತುಂಬ ಚಿಕ್ಕದ್ದಾಗಿತ್ತು, ಹಾಗಾಗಿ ಸರ್ವಾಂಗಹೋಮ ಬಲಿಗಳನ್ನ, ಧಾನ್ಯ ಅರ್ಪಣೆಗಳನ್ನ ಮತ್ತು ಸಮಾಧಾನ ಬಲಿಗಳ ಕೊಬ್ಬಿದ+ ಭಾಗಗಳನ್ನ ಅಲ್ಲಿ ಕೊಡೋಕೆ ಆಗಲಿಲ್ಲ. 65 ಈ ಸಮಯದಲ್ಲಿ ಸೊಲೊಮೋನ ಎಲ್ಲ ಇಸ್ರಾಯೇಲ್ಯರ ಜೊತೆ ಸೇರಿ ನಮ್ಮ ದೇವರಾದ ಯೆಹೋವನಿಗೆ ಹಬ್ಬ+ ಮಾಡಿದ. ಲೆಬೊ-ಹಾಮಾತಿನಿಂದ* ಈಜಿಪ್ಟಿನ ನಾಲೆ*+ ತನಕ ಇದ್ದ ಎಲ್ಲ ಜನ್ರು ಅಲ್ಲಿದ್ರು. ಸೊಲೊಮೋನ ಅವ್ರೆಲ್ಲರ ಜೊತೆ 7 ದಿನ ಹಬ್ಬ ಮಾಡಿದ. ಆಮೇಲೆ ಅವರು ಇನ್ನೂ 7 ದಿನ ಹಬ್ಬ ಮಾಡಿದ್ರು. ಹೀಗೆ ಒಟ್ಟು 14 ದಿನ ಹಬ್ಬ ಆಚರಿಸಿದ್ರು. 66 ಮಾರನೇ ದಿನ* ರಾಜ ಜನ್ರನ್ನ ಕಳಿಸಿಕೊಟ್ಟ, ಜನ ರಾಜನನ್ನ ಆಶೀರ್ವದಿಸಿದ್ರು. ಯೆಹೋವ ತನ್ನ ಸೇವಕನಾದ ದಾವೀದ ಮತ್ತು ತನ್ನ ಜನ್ರಾದ ಇಸ್ರಾಯೇಲ್ಯರ ಕಡೆ ತೋರಿಸಿದಂಥ ಒಳ್ಳೇತನ+ ನೋಡಿ ಸಂತೋಷದಿಂದ ಅವರ ಹೃದಯ ತುಂಬಿ ಬಂತು. ಅವ್ರೆಲ್ಲ ಆನಂದದಿಂದ ತಮ್ಮತಮ್ಮ ಮನೆಗಳಿಗೆ ವಾಪಸ್ ಹೋದ್ರು.