ಮತ್ತಾಯ
7 ಬೇರೆಯವ್ರ ಬಗ್ಗೆ ತೀರ್ಪು ಮಾಡೋದನ್ನ ನಿಲ್ಲಿಸಿ,+ ಆಗ ಯಾರೂ ನಿಮ್ಮನ್ನ ತೀರ್ಪು ಮಾಡಲ್ಲ. 2 ನೀವು ಹೇಗೆ ತೀರ್ಪು ಮಾಡ್ತೀರೋ ಅದೇ ತರ ನಿಮಗೂ ತೀರ್ಪಾಗುತ್ತೆ.+ ನೀವು ಜನ್ರ ಹತ್ರ ಹೇಗೆ ನಡ್ಕೊಳ್ತೀರೋ ಅದೇ ತರ ಅವ್ರೂ ನಿಮ್ಮ ಹತ್ರ ನಡ್ಕೊಳ್ತಾರೆ.*+ 3 ಹಾಗಿರುವಾಗ ನಿನ್ನ ಕಣ್ಣಲ್ಲಿರೋ ಮರದ ಕಂಬ ನೋಡದೆ ನಿನ್ನ ಸಹೋದರನ ಕಣ್ಣಲ್ಲಿರೋ ಮರದ ಚೂರನ್ನ ಯಾಕೆ ನೋಡ್ತೀಯಾ?+ 4 ನಿನ್ನ ಕಣ್ಣಲ್ಲೇ ಮರದ ಕಂಬ ಇಟ್ಟುಕೊಂಡು ನಿನ್ನ ಸಹೋದರನಿಗೆ ‘ಬಾ, ನಿನ್ನ ಕಣ್ಣಿಂದ ಮರದ ಚೂರನ್ನ ತೆಗಿತೀನಿ’ ಅಂತ ಹೇಗೆ ಹೇಳ್ತೀಯಾ? 5 ಕಪಟಿಯೇ, ಮೊದ್ಲು ನಿನ್ನ ಕಣ್ಣಿಂದ ಮರದ ಕಂಬ ತೆಗಿ. ಆಮೇಲೆ ನಿನ್ನ ಸಹೋದರನ ಕಣ್ಣಿಂದ ಮರದ ಚೂರನ್ನ ನೋಡಿ ತೆಗಿಯೋಕಾಗುತ್ತೆ.
6 ದೇವರಿಗೆ ಕೊಡೋದನ್ನ ನಾಯಿಗಳಿಗೆ ಹಾಕಬೇಡಿ. ನಿಮ್ಮ ಮುತ್ತುಗಳನ್ನ ಹಂದಿಗಳ ಮುಂದೆ ಚೆಲ್ಲಬೇಡಿ.+ ಚೆಲ್ಲಿದ್ರೆ ಅವು ಆ ಮುತ್ತುಗಳನ್ನ ತುಳಿದು ನಿಮ್ಮ ಮೇಲೆನೇ ದಾಳಿ ಮಾಡ್ತವೆ.
7 ಕೇಳ್ತಾ ಇರಿ, ದೇವರು ನಿಮಗೆ ಕೊಡ್ತಾನೆ.+ ಹುಡುಕ್ತಾ ಇರಿ, ನಿಮಗೆ ಸಿಗುತ್ತೆ. ತಟ್ಟುತ್ತಾ ಇರಿ, ತೆರಿಯುತ್ತೆ.+ 8 ಯಾಕಂದ್ರೆ ಕೇಳೋ ಪ್ರತಿಯೊಬ್ಬನೂ ಪಡ್ಕೊಳ್ತಾನೆ,+ ಹುಡುಕೋ ಪ್ರತಿಯೊಬ್ಬನಿಗೆ ಸಿಗುತ್ತೆ, ತಟ್ಟೋ ಪ್ರತಿಯೊಬ್ಬನಿಗೆ ಬಾಗಿಲು ತೆರೆಯುತ್ತೆ. 9 ನಿಮ್ಮ ಮಗ ರೊಟ್ಟಿ ಕೇಳಿದ್ರೆ ಕಲ್ಲು ಕೊಡ್ತೀರಾ? 10 ಮೀನು ಕೇಳಿದ್ರೆ ಹಾವು ಕೊಡ್ತೀರಾ? 11 ಪಾಪಿಗಳಾಗಿರೋ ನೀವೇ ನಿಮ್ಮ ಮಕ್ಕಳಿಗೆ ಒಳ್ಳೇ ಉಡುಗೊರೆ ಕೊಡುವಾಗ ಸ್ವರ್ಗದಲ್ಲಿರೋ ನಿಮ್ಮ ತಂದೆ ತನ್ನ ಹತ್ರ ಕೇಳೋರಿಗೆ ಅದಕ್ಕಿಂತ ಹೆಚ್ಚು ಒಳ್ಳೇ ವಿಷ್ಯಗಳನ್ನ ಕೊಡಲ್ವಾ?+
12 ಹಾಗಾಗಿ ಜನ ನಿಮಗೆ ಏನು ಮಾಡಬೇಕಂತ ಇಷ್ಟಪಡ್ತೀರೋ ಅದನ್ನೇ ಅವ್ರಿಗೆ ಮಾಡಿ.+ ನಿಯಮ ಪುಸ್ತಕ ಮತ್ತು ಪ್ರವಾದಿಗಳು ಹೇಳಿರೋದು ಇದನ್ನೇ ಅಲ್ವಾ?+
13 ಇಕ್ಕಟ್ಟಾದ ಬಾಗಿಲಿಂದ ಹೋಗಿ.+ ಯಾಕಂದ್ರೆ ನಾಶಕ್ಕೆ ಹೋಗೋ ಬಾಗಿಲು ಅಗಲ. ದಾರಿ ವಿಶಾಲ. ಆ ದಾರೀಲಿ ತುಂಬ ಜನ ಹೋಗ್ತಾರೆ. 14 ಜೀವಕ್ಕೆ ನಡೆಸೋ ಬಾಗಿಲು ಇಕ್ಕಟ್ಟು, ಆ ದಾರೀಲಿ ಹೋಗೋದು ತುಂಬ ಕಷ್ಟ. ಸ್ವಲ್ಪ ಜನ ಮಾತ್ರ ಆ ದಾರಿ ಕಂಡುಹಿಡಿತಾರೆ.+
15 ಎಚ್ಚರವಾಗಿರಿ. ಕುರಿವೇಷ ಹಾಕಿ+ ನಿಮ್ಮ ಹತ್ರ ಸುಳ್ಳು ಪ್ರವಾದಿಗಳು ಬರ್ತಾರೆ.+ ಅವರು ತುಂಬ ಹಸಿದಿರೋ ತೋಳಗಳ ತರ ನಿಮ್ಮನ್ನ ನುಂಗೋಕೆ ಕಾಯ್ತಿದ್ದಾರೆ.+ 16 ಅವರು ಮಾಡೋ ಕೆಲಸಗಳಿಂದಾನೇ* ನೀವು ಅವ್ರನ್ನ ಕಂಡುಹಿಡಿತೀರ. ನಿಮಗೆ ಮುಳ್ಳುಗಿಡಗಳಲ್ಲಿ ದ್ರಾಕ್ಷಿಯಾಗಲಿ ಅಂಜೂರವಾಗಲಿ ಯಾವತ್ತೂ ಸಿಗಲ್ಲ.+ 17 ಒಳ್ಳೇ ಮರ ಒಳ್ಳೇ ಹಣ್ಣು ಕೊಡುತ್ತೆ. ಕೆಟ್ಟ ಮರ ಕೆಟ್ಟ ಹಣ್ಣು ಕೊಡುತ್ತೆ.+ 18 ಒಳ್ಳೇ ಮರ ಕೆಟ್ಟ ಹಣ್ಣು ಕೊಡಲ್ಲ. ಕೆಟ್ಟ ಮರ ಒಳ್ಳೇ ಹಣ್ಣು ಕೊಡಲ್ಲ.+ 19 ಒಳ್ಳೇ ಹಣ್ಣು ಕೊಡದ ಎಲ್ಲ ಮರಗಳನ್ನ ಕಡಿದು ಬೆಂಕಿಗೆ ಹಾಕ್ತಾರೆ.+ 20 ಅದೇ ತರ ಅವರು ಮಾಡೋ ಕೆಲಸಗಳಿಂದಾನೇ* ಅವ್ರನ್ನ ಕಂಡುಹಿಡಿತೀರ.+
21 ನನ್ನನ್ನ ‘ಸ್ವಾಮಿ, ಸ್ವಾಮಿ’ ಅಂತ ಹೇಳೋರೆಲ್ಲ ದೇವರ ಆಳ್ವಿಕೆಯಲ್ಲಿ ಇರ್ತಾರಂತ ಅಂದ್ಕೊಬೇಡಿ. ಸ್ವರ್ಗದಲ್ಲಿರೋ ನನ್ನ ತಂದೆ ಇಷ್ಟದ ಪ್ರಕಾರ ಯಾರು ಮಾಡ್ತಾರೋ ಅವ್ರೇ ಇರ್ತಾರೆ.+ 22 ತುಂಬ ಜನ ನನಗೆ ‘ಸ್ವಾಮಿ, ಸ್ವಾಮಿ,+ ನಾವು ನಿನ್ನ ಹೆಸ್ರಲ್ಲಿ ಭವಿಷ್ಯವಾಣಿ ಹೇಳಿಲ್ವಾ? ನಿನ್ನ ಹೆಸ್ರಲ್ಲಿ ಕೆಟ್ಟ ದೇವದೂತರನ್ನ ಬಿಡಿಸಿಲ್ವಾ? ನಿನ್ನ ಹೆಸ್ರಲ್ಲಿ ತುಂಬ ಅದ್ಭುತಗಳನ್ನ ಮಾಡಿಲ್ವಾ?’+ ಅಂತ ಹೇಳೋ ದಿನ ಬರುತ್ತೆ. 23 ಆದ್ರೆ ನಾನು ಅವ್ರಿಗೆ ‘ನೀವು ಯಾರಂತಾನೇ ನಂಗೊತ್ತಿಲ್ಲ! ಕೆಟ್ಟ ಕೆಲಸಗಳನ್ನ ಮಾಡುವವರೇ, ಇಲ್ಲಿಂದ ಹೋಗಿ’+ ಅಂತ ಹೇಳ್ತೀನಿ.
24 ಹಾಗಾಗಿ ನನ್ನ ಈ ಮಾತು ಕೇಳಿ ಅದೇ ತರ ನಡೆಯುವವನು ಬಂಡೆ ಮೇಲೆ ಮನೆ ಕಟ್ಟಿದ ಬುದ್ಧಿವಂತನ ತರ ಇರ್ತಾನೆ.+ 25 ಮಳೆ ಸುರಿತು, ನೆರೆ ಬಂತು, ಗಾಳಿ ಜೋರಾಗಿ ಬೀಸಿತು. ಆದ್ರೆ ಅದು ಕುಸಿಲಿಲ್ಲ. ಯಾಕಂದ್ರೆ ಅಡಿಪಾಯ ಬಂಡೆ ಮೇಲಿತ್ತು. 26 ಆದ್ರೆ ನನ್ನ ಈ ಮಾತು ಕೇಳಿ ಅದ್ರ ತರ ನಡೆಯದವನು ಮರಳಿನ ಮೇಲೆ ಮನೆ ಕಟ್ಟಿದ ಮೂರ್ಖನ ತರ ಇರ್ತಾನೆ.+ 27 ಮಳೆ ಸುರಿತು, ನೆರೆ ಬಂತು, ಗಾಳಿ ಜೋರಾಗಿ ಬೀಸಿತು.+ ಆ ಮನೆ ಕುಸಿದು ನೆಲಸಮ ಆಯ್ತು.”
28 ಯೇಸು ಈ ಮಾತುಗಳನ್ನ ಹೇಳಿದ ಮೇಲೆ ಆತನು ಕಲಿಸೋ ರೀತಿ ನೋಡಿ ಜನ ತುಂಬ ಆಶ್ಚರ್ಯಪಟ್ರು.+ 29 ಯಾಕಂದ್ರೆ ಆತನು ಅವ್ರ ಪಂಡಿತರ ಹಾಗೆ ಕಲಿಸ್ತಿರಲಿಲ್ಲ. ದೇವರಿಂದ ಅಧಿಕಾರ ಸಿಕ್ಕವನ ತರ ಕಲಿಸ್ತಿದ್ದ.+