ಗಲಾತ್ಯದವರಿಗೆ ಬರೆದ ಪತ್ರ
5 ನಾವು ಈ ರೀತಿ ಸ್ವತಂತ್ರವಾಗಿ ಇರಬೇಕಂತಾನೇ ಕ್ರಿಸ್ತ ನಮ್ಮನ್ನ ಬಿಡಿಸಿದನು. ಹಾಗಾಗಿ ನಿಮ್ಮ ಈ ಸ್ವಾತಂತ್ರ್ಯ ಕಳ್ಕೊಬೇಡಿ.+ ಮತ್ತೆ ಗುಲಾಮಗಿರಿಯ ನೊಗಕ್ಕೆ ಹೆಗಲು ಕೊಡಬೇಡಿ.+
2 ನೋಡಿ! ನಾನು, ಪೌಲ ಹೇಳ್ತಿದ್ದೀನಿ, ನೀವು ಸುನ್ನತಿ ಮಾಡಿಸ್ಕೊಂಡ್ರೆ ಕ್ರಿಸ್ತನಿಂದ ನಿಮಗೆ ಏನೂ ಪ್ರಯೋಜನ ಆಗಲ್ಲ.+ 3 ನಾನು ಮತ್ತೆ ಹೇಳ್ತಿದ್ದೀನಿ, ಸುನ್ನತಿ ಮಾಡಿಸ್ಕೊಳ್ಳೋ ಪ್ರತಿಯೊಬ್ಬನು ನಿಯಮ ಪುಸ್ತಕದಲ್ಲಿ ಇರೋದನ್ನೆಲ್ಲ ಪಾಲಿಸ್ಲೇಬೇಕಾಗುತ್ತೆ.+ 4 ನಿಯಮ ಪುಸ್ತಕದಲ್ಲಿ ಇರೋದನ್ನ ಪಾಲಿಸೋದ್ರಿಂದ ನೀತಿವಂತರಾಗೋಕೆ ಪ್ರಯತ್ನ ಮಾಡ್ತಿರೋ ನೀವು ಕ್ರಿಸ್ತನಿಂದ ದೂರ ಹೋಗಿದ್ದೀರ.+ ನೀವು ಆತನ ಅಪಾರ ಕೃಪೆಯನ್ನ ಬಿಟ್ಟುಹೋಗಿದ್ದೀರ. 5 ಆದ್ರೆ ನಾವು ದೇವರ ದೃಷ್ಟಿಯಲ್ಲಿ ನೀತಿವಂತರಾಗೋಕೆ ಕಾತುರದಿಂದ ಕಾಯ್ತಾ ಇದ್ದೀವಿ, ಪವಿತ್ರಶಕ್ತಿ ಮತ್ತು ನಮ್ಮ ನಂಬಿಕೆಯಿಂದ ಮಾತ್ರ ಹೀಗೆ ನೀತಿವಂತರಾಗೋಕೆ ಆಗುತ್ತೆ. 6 ಯಾಕಂದ್ರೆ ಕ್ರಿಸ್ತ ಯೇಸು ಜೊತೆ ಒಂದಾಗಿರುವವ್ರಿಗೆ ಸುನ್ನತಿ ಆದ್ರೂ ಆಗ್ದೆ ಇದ್ರೂ ಅದೇನೂ ಮುಖ್ಯ ಅಲ್ಲ,+ ಆದ್ರೆ ಪ್ರೀತಿಯಿಂದ ಕೆಲಸ ಮಾಡೋ ನಂಬಿಕೆನೇ ಮುಖ್ಯ.
7 ನೀವು ಸತ್ಯದ ದಾರೀಲಿ ಚೆನ್ನಾಗಿ ಓಡ್ತಿದ್ದೀರ.+ ಹಾಗಿರುವಾಗ ನೀವು ಸತ್ಯಕ್ಕೆ ತಕ್ಕ ಹಾಗೆ ನಡೀದೇ ಇರೋಕೆ ನಿಮ್ಮನ್ನ ಯಾರು ತಡೆದ್ರು? 8 ಈ ತರ ನಿಮ್ಮ ತಲೆ ಕೆಡಿಸಿದ್ದು ಯಾರು? ನಿಮ್ಮನ್ನ ಕರೆದ ದೇವರಂತೂ ಅಲ್ಲ. 9 ಸ್ವಲ್ಪ ಹುಳಿ ನಾದಿದ ಹಿಟ್ಟನ್ನೆಲ್ಲ ಹುಳಿಮಾಡುತ್ತೆ.+ 10 ಪ್ರಭು ಜೊತೆ ಒಂದಾಗಿರೋ ನೀವು+ ನನ್ನ ಮಾತನ್ನ ಒಪ್ತೀರ ಅನ್ನೋ ನಂಬಿಕೆ ನನಗಿದೆ. ನಿಮಗೆ ತೊಂದ್ರೆ ಮಾಡ್ತಾ ಇರುವವನು+ ಯಾರೇ ಆಗಿದ್ರೂ ಅವನಿಗೆ ತಕ್ಕ ಶಿಕ್ಷೆ ಸಿಗುತ್ತೆ. 11 ಸಹೋದರರೇ, ಸುನ್ನತಿ ಮಾಡಬೇಕಂತ ನಾನು ಸಾರುತ್ತಿರೋದಾದ್ರೆ ನನಗ್ಯಾಕೆ ಇನ್ನೂ ಹಿಂಸೆ ಕೊಡ್ತಿದ್ದಾರೆ? ನಾನು ಹಾಗೆ ಸಾರುತ್ತಿದ್ರೆ ಹಿಂಸಾ ಕಂಬದ* ಬಗ್ಗೆ ನಾನು ಸಾರಿದ್ದು ಅವ್ರಿಗೆ ಕೋಪ ಬರಿಸ್ತಾ ಇರಲಿಲ್ಲ ಅಲ್ವಾ?+ 12 ಸುನ್ನತಿಯ ಹೆಸ್ರಲ್ಲಿ ನಿಮ್ಮ ತಲೆಯೊಳಗೆ ಗೊಂದಲ ಹುಟ್ಟಿಸೋಕೆ ಪ್ರಯತ್ನಿಸ್ತಾ ಇರುವವರು ಅವ್ರನ್ನೇ ನಪುಂಸಕರಾಗಿ ಮಾಡ್ಕೊಬೇಕು* ಅನ್ನೋದು ನನ್ನ ಅಭಿಪ್ರಾಯ.
13 ಸಹೋದರರೇ, ಸ್ವತಂತ್ರರಾಗಿ ಇರೋಕೆ ನಿಮ್ಮನ್ನ ಕರೆಯಲಾಗಿದೆ ನಿಜ. ಆದ್ರೆ ಈ ಸ್ವಾತಂತ್ರ್ಯವನ್ನ, ದೇಹದ ಆಸೆಗಳನ್ನ ತೀರಿಸ್ಕೊಳ್ಳೋಕೆ ಅವಕಾಶವಾಗಿ ಬಳಸಬೇಡಿ,+ ಬದಲಿಗೆ ಪ್ರೀತಿಯಿಂದ ಒಬ್ರು ಇನ್ನೊಬ್ರ ಸೇವೆಮಾಡಿ.+ 14 ಯಾಕಂದ್ರೆ ನಿಯಮ ಪುಸ್ತಕದ ಎಲ್ಲ ನಿಯಮಗಳು “ನೀನು ನಿನ್ನನ್ನ ಪ್ರೀತಿಸೋ ತರಾನೇ ಬೇರೆಯವ್ರನ್ನೂ ಪ್ರೀತಿಸಬೇಕು” ಅನ್ನೋ ಒಂದೇ ಆಜ್ಞೆಯಿಂದ ನಿಜ ಆಗುತ್ತೆ.*+ 15 ನೀವು ಯಾವಾಗ್ಲೂ ಒಬ್ರನ್ನೊಬ್ರು ಕಚ್ಚಿ ಹರಿದು ನುಂಗುತ್ತಿದ್ರೆ+ ಒಬ್ರಿಂದ ಒಬ್ರು ನಾಶ ಆಗ್ತೀರ, ಹುಷಾರಾಗಿರಿ.+
16 ನಾನು ಹೇಳೋದು ಏನಂದ್ರೆ, ಪವಿತ್ರಶಕ್ತಿಯ ಮಾರ್ಗದರ್ಶನಕ್ಕೆ ತಕ್ಕ ಹಾಗೆ ನಡಿತಾ ಇರಿ.+ ಆಗ ನೀವು ದೇಹದ ಆಸೆಗಳ ಪ್ರಕಾರ ನಡ್ಕೊಳಲ್ಲ.+ 17 ಯಾಕಂದ್ರೆ ದೇಹ ಅದ್ರ ಆಸೆಗಳಿಂದಾಗಿ ಪವಿತ್ರಶಕ್ತಿಗೆ ವಿರುದ್ಧವಾಗಿದೆ ಮತ್ತು ಪವಿತ್ರಶಕ್ತಿ ದೇಹಕ್ಕೆ ವಿರುದ್ಧವಾಗಿದೆ. ಇವೆರಡು ಒಂದಕ್ಕೊಂದು ವಿರುದ್ಧವಾಗಿವೆ. ಹಾಗಾಗಿ ನೀವೇನು ಮಾಡಬೇಕಂತ ಇಷ್ಟಪಡ್ತೀರೋ ಅದನ್ನ ಮಾಡಲ್ಲ.+ 18 ಪವಿತ್ರಶಕ್ತಿ ನಿಮ್ಮನ್ನ ಮಾರ್ಗದರ್ಶಿಸ್ತಿದ್ರೆ ನೀವು ನಿಯಮ ಪುಸ್ತಕದ ಕೈಕೆಳಗಿಲ್ಲ.
19 ಪಾಪದಿಂದ ತುಂಬಿರೋ ದೇಹದ ಕೆಲಸಗಳು ಸ್ಪಷ್ಟವಾಗಿ ಗೊತ್ತಾಗುತ್ತೆ. ಅವು ಯಾವುದಂದ್ರೆ ಲೈಂಗಿಕ ಅನೈತಿಕತೆ,*+ ಅಶುದ್ಧತೆ, ನಾಚಿಕೆಗೆಟ್ಟ ನಡತೆ,*+ 20 ಮೂರ್ತಿಪೂಜೆ, ಮಾಟಮಂತ್ರ,*+ ದ್ವೇಷ, ಜಗಳ, ಹೊಟ್ಟೆಕಿಚ್ಚು, ಕೋಪದಿಂದ ಕೆರಳೋದು, ಕಲಹ, ಒಡಕು, ಪಂಗಡಗಳು, 21 ಅಸೂಯೆ, ಕುಡಿದು ಅಮಲೇರೋದು,+ ಲಂಗುಲಗಾಮಿಲ್ಲದ ಮೋಜು ಇಂಥ ವಿಷ್ಯಗಳೇ.+ ಇವುಗಳನ್ನ ನಡಿಸುವವರು ದೇವರ ಆಳ್ವಿಕೆಯಲ್ಲಿ ಇರಲ್ಲ.*+ ಇದ್ರ ಬಗ್ಗೆ ನಾನು ನಿಮಗೆ ಮೊದಲೇ ಎಚ್ಚರಿಕೆ ಕೊಟ್ಟ ಹಾಗೆ ಈಗ್ಲೂ ಎಚ್ಚರಿಕೆ ಕೊಡ್ತೀನಿ.
22 ಆದ್ರೆ ಪವಿತ್ರಶಕ್ತಿಯಿಂದ ಬರೋ ಗುಣಗಳು ಯಾವುದಂದ್ರೆ ಪ್ರೀತಿ, ಆನಂದ, ಶಾಂತಿ, ತಾಳ್ಮೆ,* ದಯೆ, ಒಳ್ಳೇತನ,+ ನಂಬಿಕೆ, 23 ಸೌಮ್ಯತೆ, ಸ್ವನಿಯಂತ್ರಣ.+ ಇಂಥ ಗುಣಗಳನ್ನ ತಪ್ಪಂತ ಯಾವ ನಿಯಮ ಕೂಡ ಹೇಳಲ್ಲ. 24 ಅಷ್ಟೇ ಅಲ್ಲ, ಕ್ರಿಸ್ತ ಯೇಸುಗೆ ಸೇರಿದವರು ತಮ್ಮ ಪಾಪ ತುಂಬಿರೋ ದೇಹವನ್ನ ಅದ್ರ ಆಸೆ-ಆಕಾಂಕ್ಷೆಗಳ ಜೊತೆ ಮರದ ಕಂಬಕ್ಕೆ ಜಡಿದು ಸಾಯಿಸಿದ್ದಾರೆ.+
25 ನಾವು ಪವಿತ್ರಶಕ್ತಿಗೆ ತಕ್ಕ ಹಾಗೆ ಜೀವಿಸ್ತಾ ಇದ್ರೆ ಮುಂದಕ್ಕೂ ಪವಿತ್ರಶಕ್ತಿಯ ಮಾರ್ಗದರ್ಶನಕ್ಕೆ ತಕ್ಕ ಹಾಗೆ ಸರಿಯಾಗಿ ನಡಿತಾ ಇರೋಣ.+ 26 ನಾವು ಅಹಂಕಾರಪಡದೆ,+ ಒಬ್ರ ಜೊತೆ ಒಬ್ರು ಪೈಪೋಟಿ ಮಾಡದೆ,+ ಅಸೂಯೆಪಡದೆ ಇರೋಣ.