ಕೊಲೊಸ್ಸೆಯವರಿಗೆ ಬರೆದ ಪತ್ರ
2 ನಾನು ನಿಮಗಾಗಿ, ಲವೊದಿಕೀಯದಲ್ಲಿ+ ಇರುವವ್ರಿಗಾಗಿ, ನನ್ನನ್ನ ಇನ್ನೂ ನೋಡದ ಎಲ್ರಿಗಾಗಿ ಕಷ್ಟಪಡ್ತಿರೋದು ನಿಮಗೆ ಗೊತ್ತಿರಬೇಕು ಅನ್ನೋದು ನನ್ನಾಸೆ. 2 ಅವ್ರಿಗೆ ಸಾಂತ್ವನ ಸಿಗಬೇಕು,+ ಪ್ರೀತಿಯಿಂದ ಒಗ್ಗಟ್ಟಾಗಿ ಇರಬೇಕು+ ಅಂತಾನೇ ಈ ತರ ಕಷ್ಟಪಡ್ತಾ ಇದ್ದೀನಿ. ಆಗ ಅವರು ಶ್ರೀಮಂತರಾಗ್ತಾರೆ ಅಂದ್ರೆ ಸತ್ಯವನ್ನ ಸ್ಪಷ್ಟವಾಗಿ ಅರ್ಥ ಮಾಡ್ಕೊಂಡಿದ್ದೀವಿ ಅನ್ನೋ ಪೂರ್ಣ ವಿಶ್ವಾಸ ಅವ್ರಿಗೆ ಇರುತ್ತೆ. ಜೊತೆಗೆ ಕ್ರಿಸ್ತನ ಬಗ್ಗೆ ಇರೋ ದೇವರ ಪವಿತ್ರ ರಹಸ್ಯವನ್ನ ಚೆನ್ನಾಗಿ ತಿಳ್ಕೊಳ್ತಾರೆ.+ 3 ಕ್ರಿಸ್ತನಲ್ಲಿ ಜ್ಞಾನ ವಿವೇಕ ಅನ್ನೋ ನಿಧಿಯನ್ನ ಜಾಗ್ರತೆಯಿಂದ ಅಡಗಿಸಿ ಇಡಲಾಗಿದೆ.+ 4 ಮನವೊಲಿಸೋ ಯಾವ ವಾದಗಳಿಂದಾನೂ ನೀವು ಮೋಸ ಹೋಗಬಾರದು ಅಂತ ನಾನು ಇದನ್ನ ಹೇಳ್ತಿದ್ದೀನಿ. 5 ನಾನು ನಿಮ್ಮ ಜೊತೆ ಇಲ್ಲಾಂದ್ರೂ ನನ್ನ ಮನಸ್ಸೆಲ್ಲ ಅಲ್ಲೇ ಇದೆ. ನೀವು ಎಲ್ಲವನ್ನ ವ್ಯವಸ್ಥಿತವಾಗಿ ನಡಿಸ್ತಾ ಇದ್ದೀರ+ ಮತ್ತು ಕ್ರಿಸ್ತನಲ್ಲಿ ನಿಮಗೆ ಬಲವಾದ ನಂಬಿಕೆ ಇದೆ+ ಅಂತ ಕೇಳಿ ತುಂಬ ಖುಷಿ ಆಯ್ತು.
6 ಹಾಗಾಗಿ ನೀವು ಪ್ರಭು ಕ್ರಿಸ್ತ ಯೇಸು ಮೇಲೆ ನಂಬಿಕೆ ಇಟ್ಟ ಹಾಗೆ ಆತನ ಮಾತು ಕೇಳಿ ನಡಿತಾ ಇರಿ. 7 ನೀವು ಕಲಿತ ಹಾಗೆ ಕ್ರಿಸ್ತನ ಮೇಲೆ ನಿಮಗಿರೋ ನಂಬಿಕೆ ಆಳವಾಗಿ ಬೇರುಬಿಟ್ಟ ಮರದ ತರ ಬಲವಾಗಿ+ ಸ್ಥಿರವಾಗಿ ಇರಲಿ.+ ನೀವು ದೇವರಿಗೆ ಧನ್ಯವಾದ ಹೇಳುವಾಗ+ ನಿಮ್ಮ ನಂಬಿಕೆ ಉಕ್ಕಿ ಹರಿಲಿ.
8 ಈ ಲೋಕದ ಜ್ಞಾನದಿಂದ,* ಅರ್ಥವಾಗದ ಮೋಸದ ಮಾತುಗಳಿಂದ ಯಾರೂ ನಿಮ್ಮನ್ನ ಕೈದಿಯಾಗಿ* ಹಿಡ್ಕೊಂಡು ಹೋಗೋಕೆ ಬಿಡಬೇಡಿ, ಹುಷಾರು!+ ಯಾಕಂದ್ರೆ ಅವು ಕ್ರಿಸ್ತ ಕಲಿಸಿದ ವಿಷ್ಯಗಳಿಗೆ ತಕ್ಕ ಹಾಗಿಲ್ಲ, ಮಾನವ ಸಂಪ್ರದಾಯಗಳಿಗೆ, ಲೋಕದ ವಿಷ್ಯಗಳಿಗೆ ತಕ್ಕ ಹಾಗಿವೆ. 9 ದೇವರ ಎಲ್ಲ ಗುಣಗಳು ಪೂರ್ತಿ ಇರೋದು ಕ್ರಿಸ್ತನಲ್ಲೇ.+ 10 ಎಲ್ಲ ಸರ್ಕಾರ ಮತ್ತು ಅಧಿಕಾರದ ಯಜಮಾನನಾಗಿರೋ* ಆತನ ಮೂಲಕ ನಿಮಗೆ ಎಲ್ಲ ಸಂಪೂರ್ಣವಾಗಿ ಸಿಕ್ಕಿದೆ.+ 11 ನೀವು ಆತನ ಜೊತೆ ಒಂದಾಗಿ ಇರೋದ್ರಿಂದ ನಿಮಗೆ ಸುನ್ನತಿ ಆಗಿದೆ, ಆದ್ರೆ ಅದು ಮನುಷ್ಯರಿಂದ ಮಾಡಿಸೋ ಸುನ್ನತಿ ಅಲ್ಲ. ಪಾಪದಿಂದ ತುಂಬಿರೋ ದೇಹದ ಆಸೆಗಳನ್ನ ನೀವು ಬಿಟ್ಟುಬಿಟ್ಟಿದ್ದೀರ.+ ಇದೇ ಕ್ರಿಸ್ತನ ಶಿಷ್ಯರು ಮಾಡಿಸ್ಕೊಳ್ಳಬೇಕಾದ ಸುನ್ನತಿ.+ 12 ಯಾಕಂದ್ರೆ ಕ್ರಿಸ್ತ ತಗೊಂಡ ಅದೇ ದೀಕ್ಷಾಸ್ನಾನವನ್ನ ನೀವು ತಗೊಳ್ಳೋ ಮೂಲಕ ಆತನ ಜೊತೆ ಸಮಾಧಿ ಆದ್ರಿ.+ ಆದ್ರೆ ಆತನ ಜೊತೆ ನಿಮಗೆ ಒಳ್ಳೇ ಸಂಬಂಧ ಇದ್ದಿದ್ರಿಂದ ಕ್ರಿಸ್ತನ ಹಾಗೆ ನಿಮಗೂ ಮತ್ತೆ ಜೀವ ಸಿಕ್ತು.+ ಕ್ರಿಸ್ತನಿಗೆ ಮತ್ತೆ ಜೀವ ಕೊಟ್ಟ ದೇವರ+ ಬಲಿಷ್ಠ ಕೆಲಸದ ಮೇಲೆ ನಿಮಗೆ ನಂಬಿಕೆ ಇತ್ತು.
13 ಅಷ್ಟೇ ಅಲ್ಲ, ನೀವು ಅಪರಾಧಗಳನ್ನ ಮಾಡಿದ್ದಕ್ಕಾಗಿ ಸತ್ತಿದ್ರೂ ನಿಮಗೆ ಸುನ್ನತಿ ಆಗಿರದಿದ್ರೂ ದೇವರು ನಿಮ್ಮನ್ನ ಬದುಕಿಸಿ ಕ್ರಿಸ್ತನ ಜೊತೆ ಒಂದು ಮಾಡಿದನು.+ ದೇವರು ದಯೆಯಿಂದ ನಮ್ಮೆಲ್ಲ ಅಪರಾಧಗಳನ್ನ ಕ್ಷಮಿಸಿದನು.+ 14 ತುಂಬ ಆಜ್ಞೆಗಳಿದ್ದ,+ ನಮ್ಮ ತಪ್ಪುಗಳನ್ನ ಎತ್ತಿತೋರಿಸ್ತಿದ್ದ+ ನಿಯಮ ಪುಸ್ತಕವನ್ನ ಆತನು ಅಳಿಸಿ ಹಾಕಿದನು.+ ಅದನ್ನ ಹಿಂಸಾ ಕಂಬದ* ಮೇಲೆ ಮೊಳೆಗಳಿಂದ ಜಡಿಯೋ ಮೂಲಕ ತೆಗೆದುಹಾಕಿದನು.+ 15 ಆ ಹಿಂಸಾ ಕಂಬದಿಂದ* ಆತನು ಸರ್ಕಾರಗಳನ್ನ, ಅಧಿಕಾರಿಗಳನ್ನ ಸೋಲಿಸಿದನು. ವಿಜಯೋತ್ಸವದ ಮೆರವಣಿಗೆಯಲ್ಲಿ ಎಲ್ರ ಮುಂದೆ ಅವ್ರನ್ನ ಕೈದಿಗಳ ತರ ಎಳ್ಕೊಂಡು ಹೋದನು.+
16 ಹಾಗಾಗಿ ತಿನ್ನೋ, ಕುಡ್ಯೋ ವಿಷ್ಯದಲ್ಲಿ,+ ಹಬ್ಬ ಅಮಾವಾಸ್ಯೆ+ ಸಬ್ಬತ್ ಆಚರಿಸೋ ವಿಷ್ಯದಲ್ಲಿ ಯಾರೂ ನಿಮಗಾಗಿ ನಿರ್ಣಯ ಮಾಡೋಕೆ ಬಿಡಬೇಡಿ.+ 17 ಅವು ಮುಂದೆ ಬರಬೇಕಾಗಿದ್ದ ವಿಷ್ಯಗಳ ನೆರಳಷ್ಟೆ,+ ಆದ್ರೆ ನಿಜವಾದ ವ್ಯಕ್ತಿ ಕ್ರಿಸ್ತ.+ 18 ದೀನರ ಹಾಗೆ ನಾಟಕ ಮಾಡುವವ್ರಿಂದ, ದೇವದೂತರನ್ನ ಆರಾಧಿಸೋಕೆ ಇಷ್ಟಪಡೋ ಜನ್ರಿಂದ ಹುಷಾರಾಗಿರಿ. ಯಾಕಂದ್ರೆ ನಿಮಗೆ ಸಿಗೋ ಬಹುಮಾನವನ್ನ+ ಅವರು ಸಿಗದ ಹಾಗೆ ಮಾಡಬಹುದು. ಅಂಥವರು ತಾವು ನೋಡಿದ ದರ್ಶನಗಳ ಬಗ್ಗೆ ಕೊಚ್ಕೊಳ್ತಾರೆ,* ಪಾಪಿ ಮನುಷ್ಯರ ತರ ಯೋಚ್ನೆ ಮಾಡ್ತಾ ಕಾರಣ ಇಲ್ದೆ ಕೊಚ್ಕೊಳ್ತಾರೆ. 19 ಅವರು ತಲೆಯಾಗಿರೋ+ ನಾಯಕನನ್ನ ಬಿಗಿಯಾಗಿ ಹಿಡ್ಕೊಂಡಿಲ್ಲ. ಆದ್ರೆ ಆತನೇ ಇಡೀ ದೇಹಕ್ಕೆ ಬೇಕಾಗಿರೋದನ್ನ ಕೊಡ್ತಾನೆ. ದೇಹದ ಎಲ್ಲ ಭಾಗಗಳು ಒಂದಕ್ಕೊಂದು ಸೇರಿರೋ ಹಾಗೆ ಮಾಡ್ತಾನೆ. ಆತನಿಂದಾನೇ ದೇವರು ಇಡೀ ದೇಹವನ್ನ ಬೆಳೆಸ್ತಿದ್ದಾನೆ.+
20 ನೀವು ಈ ಲೋಕದ ವಿಷ್ಯಗಳನ್ನ+ ಬಿಟ್ಟು ಕ್ರಿಸ್ತನ ಜೊತೆ ಸತ್ತಿದ್ದೀರ. ಹಾಗಿದ್ರೂ ಇನ್ನೂ ಯಾಕೆ ಲೋಕದವ್ರ ತರ ಜೀವಿಸ್ತಿದ್ದೀರಾ? ಈ ಆಜ್ಞೆಗಳನ್ನ ಅಂದ್ರೆ+ 21 “ಅದನ್ನ ತಗೊಬೇಡ, ರುಚಿ ನೋಡಬೇಡ, ಮುಟ್ಟಬೇಡ” ಅನ್ನೋದನ್ನ ಯಾಕೆ ಪಾಲಿಸ್ತಾ ಇದ್ದೀರಾ? 22 ಇವೆಲ್ಲ ತಿಂದು-ಕುಡಿದ ಮೇಲೆ ಇಲ್ಲದೆ ಹೋಗೋ ವಿಷ್ಯಗಳು, ಇದೆಲ್ಲ ಮನುಷ್ಯರು ಮಾಡಿರೋ ಆಜ್ಞೆಗಳು.+ 23 ಈ ಆಜ್ಞೆಗಳಲ್ಲಿ ವಿವೇಕ ಇದೆ ಅಂತ ಅನಿಸುತ್ತೆ. ಆದ್ರೆ ಅದನ್ನೆಲ್ಲ ಪಾಲಿಸುವವರು ದೇವರನ್ನ ಹೇಗೆ ಆರಾಧಿಸಬೇಕಂತ ಅವ್ರೇ ತೀರ್ಮಾನ ಮಾಡ್ತಾರೆ. ತುಂಬ ದೀನರು ಅಂತ ತೋರಿಸೋಕೆ ತಮ್ಮ ದೇಹಕ್ಕೆ ಶಿಕ್ಷೆ ಕೊಟ್ಕೊಳ್ತಾರೆ.+ ಆದ್ರೆ ಇದು ಯಾವುದೂ ದೇಹದ ಆಸೆಗಳ ವಿರುದ್ಧ ಹೋರಾಡೋಕೆ ಸಹಾಯ ಮಾಡಲ್ಲ.