ಕೊಲೊಸ್ಸೆಯವರಿಗೆ ಬರೆದ ಪತ್ರ
1 ದೇವರ ಇಷ್ಟದಿಂದ ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲ ಮತ್ತು ನಮ್ಮ ಸಹೋದರ ತಿಮೊತಿ ಈ ಪತ್ರ ಬರಿತಾ ಇದ್ದೀವಿ.+ 2 ಇದನ್ನ ಕೊಲೊಸ್ಸೆಯಲ್ಲಿ ಇರೋ ಪವಿತ್ರ ಜನ್ರಿಗೆ ಅಂದ್ರೆ ಕ್ರಿಸ್ತನ ಜೊತೆ ಒಂದಾಗಿರೋ ನಂಬಿಗಸ್ತ ಸಹೋದರರಿಗೆ ಬರಿತಾ ಇದ್ದೀವಿ.
ನಮ್ಮ ತಂದೆಯಾದ ದೇವರು ನಿಮಗೆ ಅಪಾರ ಕೃಪೆ ತೋರಿಸ್ಲಿ, ಶಾಂತಿ ಕೊಡ್ಲಿ.
3 ನಾವು ನಿಮಗಾಗಿ ಪ್ರಾರ್ಥನೆ ಮಾಡುವಾಗೆಲ್ಲ ನಮ್ಮ ಪ್ರಭು ಯೇಸು ಕ್ರಿಸ್ತನ ತಂದೆಯಾದ ದೇವರಿಗೆ ಧನ್ಯವಾದ ಹೇಳ್ತೀವಿ. 4 ಯಾಕಂದ್ರೆ ಕ್ರಿಸ್ತ ಯೇಸು ಮೇಲೆ ನಿಮಗಿರೋ ನಂಬಿಕೆ ಬಗ್ಗೆ, ಪವಿತ್ರ ಜನ್ರೆಲ್ಲರ ಮೇಲೆ ನಿಮಗಿರೋ ಪ್ರೀತಿಯ ಬಗ್ಗೆ ನಾವು ಕೇಳಿಸ್ಕೊಂಡಿದ್ದೀವಿ. 5 ಮುಂದೆ ಸ್ವರ್ಗದಲ್ಲಿ ಸಿಗೋ ಆಶೀರ್ವಾದಕ್ಕಾಗಿ ನೀವು ಕಾಯ್ತಾ ಇರೋದ್ರಿಂದ+ ಆ ಒಳ್ಳೇ ಗುಣ ನಿಮ್ಮಲ್ಲಿದೆ. ನೀವು ಸತ್ಯದ ಸಂದೇಶವನ್ನ ಅಂದ್ರೆ ಸಿಹಿಸುದ್ದಿಯನ್ನ ಕೇಳಿಸ್ಕೊಂಡಾಗ ಆ ಆಶೀರ್ವಾದದ ಬಗ್ಗೆ ಕೇಳಿಸ್ಕೊಂಡ್ರಿ. 6 ಸಿಹಿಸುದ್ದಿ ಭೂಮಿಯಲ್ಲೆಲ್ಲ ಹಬ್ಬುತ್ತಾ ಫಲ ಕೊಡ್ತಿದೆ.+ ಅದೇ ತರ ದೇವರ ಅಪಾರ ಕೃಪೆ ನಿಜವಾಗ್ಲೂ ಏನಂತ ನೀವು ಕೇಳಿಸ್ಕೊಂಡು ಚೆನ್ನಾಗಿ ತಿಳ್ಕೊಂಡ ದಿನದಿಂದ ಸಿಹಿಸುದ್ದಿ ನಿಮ್ಮ ಮಧ್ಯ ಹಬ್ಬುತ್ತಾ ಫಲ ಕೊಡ್ತಿದೆ. 7 ನೀವು ಅದನ್ನ ನಮ್ಮ ಪ್ರಿಯ ಜೊತೆ ಸೇವಕ ಎಪಫ್ರನಿಂದ+ ತಿಳ್ಕೊಂಡ್ರಿ. ಕ್ರಿಸ್ತನ ನಂಬಿಗಸ್ತ ಸೇವಕನಾದ ಅವನು ನಮ್ಮ ಪರವಾಗಿ ಸೇವೆ ಮಾಡ್ತಿದ್ದಾನೆ. 8 ದೇವರ ಪವಿತ್ರಶಕ್ತಿಯ ಸಹಾಯದಿಂದ ನೀವು ಬೆಳೆಸ್ಕೊಂಡ ಪ್ರೀತಿ ಬಗ್ಗೆನೂ ಅವನು ನಮಗೆ ಹೇಳಿದ್ದಾನೆ.
9 ಅದಕ್ಕೇ ನಿಮ್ಮ ಬಗ್ಗೆ ಕೇಳಿಸ್ಕೊಂಡ ದಿನದಿಂದ ನಿಮಗಾಗಿ ಪ್ರಾರ್ಥನೆ ಮಾಡ್ತಾ ಇದ್ದೀವಿ.+ ನೀವು ದೇವರ ಇಷ್ಟ ಏನು ಅಂತ ಸರಿಯಾಗಿ ತಿಳ್ಕೊಬೇಕು,+ ಎಲ್ಲ ವಿವೇಕವನ್ನ, ದೇವರ ಪವಿತ್ರಶಕ್ತಿಯಿಂದ ಅರ್ಥ ಮಾಡ್ಕೊಳ್ಳೋ ಸಾಮರ್ಥ್ಯವನ್ನ ಪಡಿಬೇಕು ಅಂತ ಪ್ರಾರ್ಥಿಸ್ತಾ ಇದ್ದೀವಿ.+ 10 ಅಷ್ಟೇ ಅಲ್ಲ, ಯೆಹೋವನನ್ನ* ಆರಾಧಿಸುವವರು ಹೇಗಿರಬೇಕೋ ಹಾಗೆ ನೀವು ನಡ್ಕೊಂಡು ಆತನನ್ನ ತುಂಬ ಖುಷಿಪಡಿಸಬೇಕು, ಒಳ್ಳೇ ಕೆಲಸಗಳನ್ನ ಮಾಡ್ತಾ, ದೇವರ ಬಗ್ಗೆ ಸರಿಯಾದ ಜ್ಞಾನವನ್ನ ಇನ್ನೂ ಪಡೀತಾ ಇರಬೇಕು ಅಂತ ಪ್ರಾರ್ಥಿಸ್ತಾ ಇದ್ದೀವಿ.+ 11 ಮಹಿಮೆಯಿಂದ ತುಂಬಿರೋ ದೇವರ ಶಕ್ತಿ ನಿಮಗೆ ಎಲ್ಲವನ್ನ ತಾಳ್ಮೆ, ಆನಂದದಿಂದ ಸಹಿಸ್ಕೊಳ್ಳೋಕೆ ಬೇಕಾದ ಶಕ್ತಿ ಕೊಡ್ಲಿ,+ 12 ಬೆಳಕಲ್ಲಿರೋ ಪವಿತ್ರ ಜನ್ರಿಗೆ ಸೇರಿದ ಆಸ್ತಿಯನ್ನ+ ಪಡಿಯೋಕೆ ನಿಮ್ಮನ್ನ ಯೋಗ್ಯರಾಗಿ ಮಾಡಿದ ತಂದೆಗೆ ಧನ್ಯವಾದ ಹೇಳಬೇಕು ಅಂತನೂ ಪ್ರಾರ್ಥಿಸ್ತಾ ಇದ್ದೀವಿ.
13 ದೇವರು ನಮ್ಮನ್ನ ಕತ್ತಲೆಯ ಅಧಿಕಾರದಿಂದ ಬಿಡಿಸಿ+ ತನ್ನ ಪ್ರೀತಿಯ ಮಗನ ಆಳ್ವಿಕೆಯ ಕೆಳಗೆ ಕರ್ಕೊಂಡು ಬಂದನು. 14 ಆ ಮಗನ ಮೂಲಕ ಬಿಡುಗಡೆ ಬೆಲೆ ಕೊಟ್ಟು ನಮ್ಮನ್ನ ಬಿಡಿಸಿದನು ಅಂದ್ರೆ ನಮ್ಮ ಪಾಪಗಳಿಗೆ ಕ್ಷಮೆ ಕೊಟ್ಟನು.+ 15 ಆ ಮಗನು ನಾವ್ಯಾರೂ ನೋಡೋಕೆ ಆಗದ ದೇವರ ಸ್ವರೂಪ ಆಗಿದ್ದಾನೆ.+ ಎಲ್ಲ ಸೃಷ್ಟಿಗಳಿಗಿಂತ ಮೊಟ್ಟಮೊದ್ಲು ಸೃಷ್ಟಿಯಾದವನು ಆತನೇ.+ 16 ಯಾಕಂದ್ರೆ ಸ್ವರ್ಗ, ಭೂಮಿಯಲ್ಲಿರೋ ಎಲ್ಲ ವಿಷ್ಯಗಳು, ಕಣ್ಣಿಗೆ ಕಾಣೋ ಕಾಣದಿರೋ ವಿಷ್ಯಗಳು,+ ರಾಜರು, ಸರ್ಕಾರಗಳು, ಅಧಿಕಾರಿಗಳು ಹೀಗೆ ಎಲ್ಲ ಆತನ ಮೂಲಕ ಸೃಷ್ಟಿ ಆಯ್ತು. ಇಡೀ ಸೃಷ್ಟಿ ಆತನಿಂದ,+ ಆತನಿಗಾಗಿ ಸೃಷ್ಟಿ ಆಯ್ತು. 17 ಬೇರೆಲ್ಲ ಸೃಷ್ಟಿ ಆಗೋದಕ್ಕಿಂತ ಮುಂಚಿನಿಂದ್ಲೂ ಆತನು ಇದ್ದ.+ ಆತನ ಮೂಲಕ ಬೇರೆಲ್ಲವನ್ನ ಸೃಷ್ಟಿಸಲಾಯ್ತು. 18 ಸಭೆ ಅನ್ನೋ ದೇಹಕ್ಕೆ ಆತನೇ ತಲೆ.+ ಎಲ್ಲ ವಿಷ್ಯಗಳ ಆರಂಭ ಆತನೇ, ಸತ್ತವ್ರಲ್ಲಿ ಮೊದ್ಲು ಬದುಕಿದ್ದೂ ಆತನೇ.+ ಹೀಗೆ ಎಲ್ಲದ್ರಲ್ಲೂ ಆತನೇ ಮೊದ್ಲು. 19 ಯಾಕಂದ್ರೆ ಆತನು ಎಲ್ಲದ್ರಲ್ಲೂ ಸಂಪೂರ್ಣನಾಗಿ ಇರಬೇಕಂತ ದೇವರು ಇಷ್ಟಪಟ್ಟನು.+ 20 ಕ್ರಿಸ್ತನಿಂದ ಅಂದ್ರೆ ಹಿಂಸಾ ಕಂಬದ* ಮೇಲೆ ಆತನು ಸುರಿಸಿದ ರಕ್ತದಿಂದ+ ದೇವರು ಸ್ವರ್ಗದಲ್ಲೂ ಭೂಮಿಯಲ್ಲೂ ಇರೋ ಎಲ್ಲವನ್ನ ತನ್ನ ಜೊತೆ ಶಾಂತಿ ಸಂಬಂಧಕ್ಕೆ ತಂದನು.+
21 ಒಂದು ಕಾಲದಲ್ಲಿ ನೀವು ದೇವರಿಂದ ದೂರ ಇದ್ರಿ, ಆತನ ಶತ್ರುಗಳಾಗಿ ಇದ್ರಿ. ಯಾಕಂದ್ರೆ ನೀವು ಬರೀ ಕೆಟ್ಟದೇ ಯೋಚಿಸ್ತಿದ್ರಿ. 22 ಆದ್ರೆ ತನ್ನ ಮಾನವ ದೇಹವನ್ನ ಬಲಿಯಾಗಿ ಕೊಟ್ಟ ಮಗನ ಮರಣದಿಂದ ದೇವರು ಈಗ ನಿಮ್ಮ ಜೊತೆ ಶಾಂತಿ ಮಾಡ್ಕೊಂಡಿದ್ದಾನೆ. ನೀವು ಆತನ ಮುಂದೆ ಪವಿತ್ರರಾಗಿ, ಯಾವ ದೋಷ, ಆರೋಪನೂ ಇಲ್ಲದೆ ಇರಬೇಕಂತ ಹೀಗೆ ಮಾಡಿದನು.+ 23 ಹಾಗಾಗಿ ನೀವು ನಂಬಿಕೆಯನ್ನ ಬಿಟ್ಟುಬಿಡಬೇಡಿ,+ ನಂಬಿಕೆಯ ಅಡಿಪಾಯದ ಮೇಲೆ ದೃಢವಾಗಿ,+ ಕದಲದೆ ನಿಲ್ಲಿ.+ ನೀವು ಕೇಳಿಸ್ಕೊಂಡ ಸಿಹಿಸುದ್ದಿಯಿಂದ ಸಿಕ್ಕಿದ ನಿರೀಕ್ಷೆಯನ್ನ ಬಿಟ್ಟುಬಿಡಬೇಡಿ. ಆ ಸುದ್ದಿ ಭೂಮಿಯಲ್ಲೆಲ್ಲ ಮುಟ್ಟಿದೆ.+ ಆ ಸುದ್ದಿ ಸಾರೋಕೆ ಅಂತಾನೇ ಪೌಲನಾದ ನನ್ನನ್ನ ನೇಮಿಸಲಾಗಿದೆ.+
24 ನಿಮ್ಮ ಪ್ರಯೋಜನಕ್ಕಾಗಿ ನಾನೀಗ ಕಷ್ಟಪಡ್ತಿದ್ರೂ ಖುಷಿಪಡ್ತೀನಿ.+ ಕ್ರಿಸ್ತನ ದೇಹ ಅಂದ್ರೆ ಸಭೆಗೆ+ ಸೇರಿರೋ ನಾನು ಸಭೆಯ ಪ್ರಯೋಜನಕ್ಕಾಗಿ ಕಷ್ಟ ಅನುಭವಿಸೋದು ಇನ್ನೂ ಮುಗಿದಿಲ್ಲ.+ 25 ನಾನು ಈ ಸಭೆಯ ಸೇವಕ. ಈ ಸೇವೆಗೆ ನನ್ನನ್ನ ನೇಮಿಸಿದ್ದು ದೇವರೇ. ನಿಮ್ಮ ಪ್ರಯೋಜನಕ್ಕೆ ನಾನು ದೇವರ ಸಂದೇಶವನ್ನ ಪೂರ್ತಿಯಾಗಿ ಸಾರುತ್ತಾ ಇದ್ದೀನಿ.+ 26 ಆ ಸಂದೇಶದಲ್ಲಿರೋ ಪವಿತ್ರ ರಹಸ್ಯ+ ಹಿಂದಿನ ಕಾಲದಲ್ಲೂ* ಹಿಂದಿನ ಪೀಳಿಗೆಯವ್ರಿಗೂ ರಹಸ್ಯವಾಗಿತ್ತು.+ ಆದ್ರೆ ಈಗ ಅದು ಆತನ ಪವಿತ್ರ ಜನ್ರಿಗೆ ಗೊತ್ತಾಗಿದೆ.+ 27 ದೇವರು ಈ ಅದ್ಭುತ ನಿಧಿಯಾಗಿರೋ ಪವಿತ್ರ ರಹಸ್ಯವನ್ನ+ ಬೇರೆ ಜನಾಂಗಗಳ ಮಧ್ಯ ಇರೋ ಪವಿತ್ರ ಜನ್ರಿಗೆ ಹೇಳೋಕೆ ಇಷ್ಟಪಟ್ಟನು. ಆ ರಹಸ್ಯ ಏನಂದ್ರೆ, ಕ್ರಿಸ್ತ ನಿಮ್ಮ ಜೊತೆ ಒಂದಾಗಿ ಇರೋದ್ರಿಂದ ಆತನ ಜೊತೆ ಮಹಿಮೆ ಪಡ್ಕೊಳ್ಳೋ ನಿರೀಕ್ಷೆ ನಿಮಗಿದೆ.+ 28 ನಾವು ಹೇಳ್ತಿರೋದು ಆತನ ಬಗ್ಗೆನೇ. ಕ್ರಿಸ್ತನ ಜೊತೆ ಒಂದಾಗಿರೋ ಎಲ್ರನ್ನ ಪ್ರೌಢರಾಗಿ ದೇವರ ಮುಂದೆ ನಿಲ್ಲಿಸೋಕೆ ನಾವು ಪ್ರತಿಯೊಬ್ರಿಗೂ ಬುದ್ಧಿ ಹೇಳ್ತಾ ವಿವೇಕದಿಂದ ಕಲಿಸ್ತಾ ಇದ್ದೀವಿ.+ 29 ಇದಕ್ಕೇ ನಾನು ಕಷ್ಟಪಡ್ತಿದ್ದೀನಿ, ನನ್ನಲ್ಲಿ ಬಲವಾಗಿ ಕೆಲಸ ಮಾಡ್ತಿರೋ ಆತನ ಶಕ್ತಿಯ ಸಹಾಯದಿಂದ ಶ್ರಮಪಟ್ಟು ದುಡಿತಾ ಇದ್ದೀನಿ.+