ಯೋಹಾನ
1 ವಾಕ್ಯ+ ಅನ್ನೋನು ಮೊದಲಿಂದಾನೂ ಇದ್ದನು. ಆ ವಾಕ್ಯ ದೇವರ ಜೊತೆ ಇದ್ದನು.+ ದೇವರ ತರ ಇದ್ದನು.*+ 2 ಮೊದಲಿಂದಾನೂ ದೇವರ ಜೊತೆ ಇದ್ದನು. 3 ಎಲ್ಲಾ ಆತನ ಮೂಲಕ ಸೃಷ್ಟಿ ಆಯ್ತು,+ ಆತನಿಲ್ಲದೆ ಒಂದೂ ಸೃಷ್ಟಿ ಆಗಲಿಲ್ಲ.
4 ಆತನ ಮೂಲಕ ಜೀವ ಚಿಗುರಿತು. ಆತನ ಜೀವ ಜನ್ರಿಗೆ ಬೆಳಕಾಗಿತ್ತು.+ 5 ಆ ಬೆಳಕು ಕತ್ತಲೆಯಲ್ಲಿ ಪ್ರಕಾಶಿಸ್ತಾ ಇದೆ.+ ಆದ್ರೆ ಕತ್ತಲೆಗೆ ಆ ಬೆಳಕನ್ನ ಆರಿಸೋಕೆ ಆಗ್ತಿಲ್ಲ.
6 ದೇವರು ತನ್ನ ಒಬ್ಬ ಪ್ರತಿನಿಧಿಯನ್ನ ಕಳಿಸಿದನು. ಅವನ ಹೆಸ್ರು ಯೋಹಾನ.+ 7 ಎಲ್ಲ ರೀತಿಯ ಜನ ಆ ಬೆಳಕನ್ನ ನಂಬಬೇಕು ಅಂತ ಆ ಬೆಳಕಿನ ಬಗ್ಗೆ ಜನ್ರಿಗೆ ಹೇಳೋಕೆ ಬಂದ.+ 8 ಯೋಹಾನ ಆ ಬೆಳಕಾಗಿರಲಿಲ್ಲ.+ ಆದ್ರೆ ಆ ಬೆಳಕಿನ ಬಗ್ಗೆ ಸಾಕ್ಷಿಕೊಡೋಕೆ ಬಂದ.
9 ಎಲ್ಲ ರೀತಿಯ ಜನ್ರಿಗೆ ಬೆಳಕು ಕೊಡೋ ನಿಜವಾದ ಬೆಳಕು ಲೋಕಕ್ಕೆ ಬರೋ ಸಮಯ ಹತ್ರ ಆಗಿತ್ತು.+ 10 ನಿಜ ಹೇಳಬೇಕಂದ್ರೆ ಆತನು* ಲೋಕದಲ್ಲಿದ್ದನು.+ ಲೋಕ ಆತನಿಂದಾನೇ ಸೃಷ್ಟಿ ಆಯ್ತು.+ ಆದ್ರೆ ಲೋಕ ಆತನ ಬಗ್ಗೆ ತಿಳ್ಕೊಳ್ಳಲಿಲ್ಲ. 11 ಆತನು ತನ್ನ ಸ್ವಂತ ಊರಿಗೆ ಬಂದನು. ಆದ್ರೆ ಸ್ವಂತ ಜನ್ರೇ ಆತನನ್ನ ಒಪ್ಕೊಳ್ಳಲಿಲ್ಲ. 12 ಯಾರೆಲ್ಲ ಆತನನ್ನ ಒಪ್ಪಿಕೊಂಡ್ರೋ ಅವ್ರಿಗೆಲ್ಲ ಆತನು ದೇವರ ಮಕ್ಕಳಾಗೋ ಅಧಿಕಾರ ಕೊಟ್ಟನು.+ ಯಾಕಂದ್ರೆ ಅವರು ಆತನ ಹೆಸ್ರಲ್ಲಿ ನಂಬಿಕೆ ಇಟ್ರು.+ 13 ಅವರು ರಕ್ತದಿಂದ, ಹೆತ್ತವರ ಆಸೆಯಿಂದ, ತಂದೆಯ ಇಷ್ಟದಿಂದ ಹುಟ್ಟಲಿಲ್ಲ. ದೇವರ ಇಷ್ಟದಿಂದ ಹುಟ್ಟಿದ್ರು.+
14 ಆ ವಾಕ್ಯ ಮನುಷ್ಯನಾಗಿ ಹುಟ್ಟಿ+ ನಮ್ಮ ಜೊತೆ ವಾಸ ಮಾಡಿದನು. ನಾವು ಆತನ ಮಹಿಮೆಯನ್ನ ನೋಡಿದ್ವಿ. ಅಂಥ ಮಹಿಮೆ ತಂದೆಯ ಒಬ್ಬನೇ ಒಬ್ಬ ಮಗನಿಗೆ+ ಇತ್ತು. ಆತನ ಮೇಲೆ ದೇವರ ಅಪಾರ ಕೃಪೆ* ಇತ್ತು. ಆತನು ಯಾವಾಗ್ಲೂ ಸತ್ಯವನ್ನೇ ಮಾತಾಡ್ತಿದ್ದ. 15 (ಯೋಹಾನ ಆತನ ಬಗ್ಗೆ ಜನ್ರ ಹತ್ರ ಮಾತಾಡ್ತಾ ಹೀಗಂದ “ನನ್ನ ನಂತ್ರ ಬರೋನು ನನಗಿಂತ ಮುಂದೆ ಹೋಗ್ತಾನೆ. ಯಾಕಂದ್ರೆ ಆತನು ನನಗಿಂತ ಮುಂಚೆನೇ ಇದ್ದನು” ಅಂತ ನಾನು ಹೇಳ್ತಾ ಇದ್ದಿದ್ದು ಇವನ ಬಗ್ಗೆನೇ.)+ 16 ನಾವೆಲ್ರೂ ಆತನಿಂದ ಅಪಾರ ಕೃಪೆ ಪಡ್ಕೊಂಡ್ವಿ. ಯಾಕಂದ್ರೆ ಆತನಲ್ಲಿ ಅಪಾರ ಕೃಪೆ ತುಂಬ ಇದೆ. 17 ದೇವರು ಮೋಶೆ ಮೂಲಕ ನಿಯಮ ಪುಸ್ತಕ ಕೊಟ್ಟನು.+ ಆದ್ರೆ ಅಪಾರ ಕೃಪೆಯನ್ನ,+ ಸತ್ಯವನ್ನ ಯೇಸು ಕ್ರಿಸ್ತನ ಮೂಲಕ ಕೊಟ್ಟನು.+ 18 ಯಾವ ಮನುಷ್ಯನೂ ದೇವರನ್ನ ನೋಡಿಲ್ಲ.+ ಆದ್ರೆ ತಂದೆಯ ಪಕ್ಕದಲ್ಲಿರೋ*+ ಒಬ್ಬನೇ ಮಗ+ ನಮಗೆ ದೇವರ ಬಗ್ಗೆ ವಿವರಿಸಿದ್ದಾನೆ. ಆ ಮಗ ದೇವರ ತರ ಇದ್ದಾನೆ.+
19 ಯೆಹೂದ್ಯರು ಯೆರೂಸಲೇಮಿಂದ ಪುರೋಹಿತರನ್ನ, ಲೇವಿಯರನ್ನ ಯೋಹಾನನ ಹತ್ರ ಕಳಿಸಿ “ನೀನ್ಯಾರು?” ಅಂತ ಕೇಳಿದ್ರು.+ 20 ಅದಕ್ಕೆ ಅವನು ಉತ್ತರ ಕೊಡದೆ ಸುಮ್ಮನಿರ್ಲಿಲ್ಲ. ಬದಲಿಗೆ “ನಾನು ಕ್ರಿಸ್ತನಲ್ಲ” ಅಂತ ಒಪ್ಕೊಂಡ. 21 ಆಗ ಅವರು “ಹಾಗಾದ್ರೆ ನೀನ್ಯಾರು? ಎಲೀಯನಾ?”+ ಅಂತ ಕೇಳಿದ್ರು. ಅದಕ್ಕೆ “ಅಲ್ಲ” ಅಂದ. “ಪ್ರವಾದಿನಾ?”+ ಅಂತ ಕೇಳಿದಾಗ “ಅಲ್ಲ” ಅಂದ. 22 ಆಗ ಅವರು “ಹಾಗಾದ್ರೆ ನೀನ್ಯಾರು? ನಮ್ಮನ್ನ ಕಳಿಸಿದವ್ರಿಗೆ ನಾವು ಹೋಗಿ ಏನಂತ ಹೇಳಬೇಕು?” ಅಂದ್ರು. 23 ಅದಕ್ಕೆ “‘ಯೆಹೋವನ* ದಾರಿ ಸರಾಗಗೊಳಿಸಿ’+ ಅಂತ ಯಾರೋ ಬಯಲು ಪ್ರದೇಶದಿಂದ ಕೂಗ್ತಾರೆ ಅಂತ ಪ್ರವಾದಿ ಯೆಶಾಯ ಹೇಳಿದ್ದನಲ್ಲಾ. ಅವನು ನಾನೇ” ಅಂದ.+ 24 ಯೋಹಾನನ ಹತ್ರ ಬಂದವರು ಫರಿಸಾಯರ ಕಡೆಯವರಾಗಿದ್ರು. 25 ಹಾಗಾಗಿ ಅವರು “ನೀನು ಕ್ರಿಸ್ತನಲ್ಲ, ಎಲೀಯ ಅಲ್ಲ, ಪ್ರವಾದಿನೂ ಅಲ್ಲ. ಮತ್ಯಾಕೆ ದೀಕ್ಷಾಸ್ನಾನ ಮಾಡಿಸ್ತೀಯಾ?” ಅಂತ ಕೇಳಿದ್ರು. 26 ಅದಕ್ಕೆ ಯೋಹಾನ “ನಾನು ನೀರಲ್ಲಿ ದೀಕ್ಷಾಸ್ನಾನ ಮಾಡಿಸ್ತೀನಿ. ಆದ್ರೆ ನಿಮ್ಮ ಮಧ್ಯದಲ್ಲಿ ಒಬ್ಬನಿದ್ದಾನೆ. ಆತನು ಯಾರಂತ ನಿಮಗೆ ಗೊತ್ತಿಲ್ಲ. 27 ಆತನು ನನ್ನ ನಂತರ ಬರ್ತಾನೆ. ಆತನ ಚಪ್ಪಲಿ ಬಿಚ್ಚೋಕೂ ನಂಗೆ ಯೋಗ್ಯತೆ ಇಲ್ಲ” ಅಂದ.+ 28 ಇದೆಲ್ಲ ಯೋರ್ದನ್ ನದಿಯ ಆಕಡೆ ಇದ್ದ ಬೇಥಾನ್ಯದಲ್ಲಿ ನಡಿತು. ಅಲ್ಲೇ ಯೋಹಾನ ಜನ್ರಿಗೆ ದೀಕ್ಷಾಸ್ನಾನ ಮಾಡಿಸ್ತಿದ್ದ.+
29 ಮಾರನೇ ದಿನ ಯೇಸು ಬರೋದನ್ನ ನೋಡಿ ಯೋಹಾನ “ದೇವರ ಕುರಿಮರಿಯನ್ನ+ ನೋಡಿ! ಇವನು ಲೋಕದ ಪಾಪವನ್ನ+ ತೆಗೆದುಹಾಕ್ತಾನೆ.+ 30 ‘ನನ್ನ ನಂತ್ರ ಬರೋನು ನನಗಿಂತ ಮುಂದೆ ಹೋಗ್ತಾನೆ. ಯಾಕಂದ್ರೆ ಆತನು ನನಗಿಂತ ಮುಂಚೆನೇ ಇದ್ದನು’ ಅಂತ ಹೇಳಿದನಲ್ಲಾ, ಆತನೇ ಇವನು.+ 31 ಇವನು ಯಾರಂತ ನನಗೂ ಆಗ ಗೊತ್ತಿರ್ಲಿಲ್ಲ. ಆತನು ಯಾರಂತ ಇಸ್ರಾಯೇಲ್ಯರಿಗೆ ಗೊತ್ತಾಗಲಿ ಅಂತ ನಾನು ನೀರಲ್ಲಿ ಜನ್ರಿಗೆ ದೀಕ್ಷಾಸ್ನಾನ ಮಾಡಿಸ್ತಾ ಇದ್ದೆ” ಅಂದ.+ 32 ಆಮೇಲೆ ಯೋಹಾನ ಕಣ್ಣಾರೆ ನೋಡಿದ್ದರ ಬಗ್ಗೆ ಹೀಗಂದ “ಪವಿತ್ರಶಕ್ತಿ ಪಾರಿವಾಳದ ರೂಪದಲ್ಲಿ ಆಕಾಶದಿಂದ ಬರೋದನ್ನ ನೋಡಿದೆ. ಅದು ಬಂದು ಆತನ ಮೇಲೆನೇ ಇದ್ದುಬಿಟ್ಟಿತು.+ 33 ಇವನು ಯಾರಂತ ನನಗೂ ಆಗ ಗೊತ್ತಿರ್ಲಿಲ್ಲ. ಆದ್ರೆ ಜನ್ರಿಗೆ ನೀರಲ್ಲಿ ದೀಕ್ಷಾಸ್ನಾನ ಮಾಡಿಸು ಅಂತ ದೇವರು ನನ್ನನ್ನ ಕಳಿಸಿದಾಗ ‘ಯಾರ ಮೇಲೆ ಪವಿತ್ರಶಕ್ತಿ ಬಂದು ಹಾಗೇ ಇರುತ್ತೋ+ ಆತನೇ ಪವಿತ್ರಶಕ್ತಿಯಲ್ಲಿ ದೀಕ್ಷಾಸ್ನಾನ ಮಾಡಿಸುವವನು’ ಅಂತ ಹೇಳಿದ್ದನು.+ 34 ನಾನೇ ಅದನ್ನ ಕಣ್ಣಾರೆ ನೋಡಿದೆ. ಆತನೇ ದೇವರ ಮಗ ಅನ್ನೋದಕ್ಕೆ ನಾನೇ ಸಾಕ್ಷಿ.”+
35 ಮಾರನೇ ದಿನ ಯೋಹಾನ ತನ್ನ ಇಬ್ಬರು ಶಿಷ್ಯರ ಜೊತೆ ನಿಂತಿದ್ದ. 36 ಯೇಸು ನಡ್ಕೊಂಡು ಹೋಗೋದು ಯೋಹಾನನ ಕಣ್ಣಿಗೆ ಬಿತ್ತು. ಆಗ ಯೋಹಾನ “ನೋಡಿ! ಆತನೇ ದೇವರ ಕುರಿಮರಿ!”+ ಅಂದ. 37 ಆ ಮಾತನ್ನ ಕೇಳಿದ ತಕ್ಷಣ ಆ ಶಿಷ್ಯರು ಯೇಸು ಹಿಂದೆ ಹೋದ್ರು. 38 ಅದನ್ನ ಯೇಸು ನೋಡಿ ಅವ್ರಿಗೆ “ಏನು ಹುಡುಕ್ತಾ ಇದ್ದೀರಾ?” ಅಂತ ಕೇಳಿದನು. ಅದಕ್ಕೆ ಅವರು “ರಬ್ಬೀ (ಅಂದ್ರೆ ಗುರು ಅಂತರ್ಥ) ನೀನು ಎಲ್ಲಿ ಇರೋದು?” ಅಂತ ಕೇಳಿದ್ರು. 39 ಅದಕ್ಕೆ ಯೇಸು “ಬನ್ನಿ, ನೀವೇ ನೋಡಿ” ಅಂದನು. ಆಗ ಅವರು ಜೊತೆಗೆ ಹೋಗಿ ಯೇಸು ಎಲ್ಲಿ ಉಳ್ಕೊಂಡಿದ್ದಾನೆ ಅಂತ ನೋಡಿ ಆ ದಿನ ಅಲ್ಲೇ ಇದ್ರು. ಆಗ ಹೆಚ್ಚುಕಡಿಮೆ ಸಂಜೆ ನಾಲ್ಕು ಗಂಟೆ ಆಗಿತ್ತು. 40 ಯೋಹಾನನ ಮಾತು ಕೇಳಿಸ್ಕೊಂಡು ಯೇಸು ಹಿಂದೆ ಹೋದ ಆ ಇಬ್ಬರಲ್ಲಿ ಸೀಮೋನ ಪೇತ್ರನ ತಮ್ಮ ಅಂದ್ರೆಯ+ ಒಬ್ಬ. 41 ಅವನು ಮೊದಲು ತನ್ನ ಅಣ್ಣ ಸೀಮೋನನ ಹತ್ರ ಹೋಗಿ “ನಮಗೆ ಮೆಸ್ಸೀಯ+ (ಅಂದ್ರೆ ಕ್ರಿಸ್ತ ಅಂತರ್ಥ) ಸಿಕ್ಕಿದ” ಅಂದ. 42 ಆಮೇಲೆ ಅಣ್ಣನನ್ನೂ ಯೇಸು ಹತ್ರ ಕರ್ಕೊಂಡು ಹೋದ. ಯೇಸು ಅವನನ್ನ ನೋಡಿ “ಯೋಹಾನನ ಮಗ ಸೀಮೋನ,+ ಇನ್ನು ಮೇಲಿಂದ ನಿನ್ನನ್ನ ಕೇಫ (ಗ್ರೀಕ್ ಭಾಷೆಯಲ್ಲಿ ಕೇಫ ಅಂದ್ರೆ ‘ಪೇತ್ರ’ ಅಂತರ್ಥ) ಅಂತ ಕರಿತಾರೆ” ಅಂದನು.+
43 ಮಾರನೇ ದಿನ ಯೇಸು ಗಲಿಲಾಯಕ್ಕೆ ಹೋಗಬೇಕಂತಿದ್ದನು. ಆಗ ಆತನಿಗೆ ಫಿಲಿಪ್ಪ+ ಸಿಕ್ಕಿದ. ಯೇಸು ಅವನಿಗೆ “ಬಾ ನನ್ನ ಶಿಷ್ಯನಾಗು” ಅಂತ ಕರೆದನು. 44 ಫಿಲಿಪ್ಪ ಬೇತ್ಸಾಯಿದ ಊರಿನವನು. ಅಂದ್ರೆಯ ಮತ್ತು ಪೇತ್ರ ಸಹ ಅದೇ ಊರಿನವರು. 45 ಫಿಲಿಪ್ಪ ನತಾನಯೇಲನ+ ಹತ್ರ ಹೋಗಿ “ನಿಯಮ ಪುಸ್ತಕದಲ್ಲಿ ಮೋಶೆ ಬರೆದಿರೋ, ಪ್ರವಾದಿಗಳು ಮಾತಾಡಿರೋ ಆ ವ್ಯಕ್ತಿ ನಮಗೆ ಸಿಕ್ಕಿದ್ದಾನೆ. ಆತನೇ ಯೋಸೇಫನ+ ಮಗನಾದ ಯೇಸು. ಆತನು ನಜರೇತಿನವನು” ಅಂದ. 46 ಆದ್ರೆ ನತಾನಯೇಲ “ನಜರೇತಿಂದ ಏನಾದ್ರೂ ಒಳ್ಳೇದು ಬರುತ್ತಾ?” ಅಂದ. ಅದಕ್ಕೆ ಫಿಲಿಪ್ಪ “ನೀನೇ ಬಂದು ನೋಡು” ಅಂದ. 47 ನತಾನಯೇಲ ತನ್ನ ಹತ್ರ ಬರೋದನ್ನ ಯೇಸು ನೋಡಿ “ಇವನೇ ನಿಜವಾದ ಇಸ್ರಾಯೇಲ್ಯ. ಅವನಲ್ಲಿ ಸ್ವಲ್ಪನೂ ಮೋಸ ಇಲ್ಲ” ಅಂದನು.+ 48 ಆಗ ನತಾನಯೇಲ “ನನ್ನ ಬಗ್ಗೆ ನಿನಗೆ ಹೇಗೆ ಗೊತ್ತು?” ಅಂತ ಕೇಳಿದ. ಅದಕ್ಕೆ ಯೇಸು “ಫಿಲಿಪ್ಪ ಬಂದು ನಿನ್ನನ್ನ ಕರಿಯೋ ಮುಂಚೆನೇ, ನೀನು ಅಂಜೂರ ಮರದ ಕೆಳಗೆ ಇದ್ದಾಗಲೇ ನಿನ್ನನ್ನ ನೋಡಿದೆ” ಅಂದನು. 49 ಆಗ ನತಾನಯೇಲ “ರಬ್ಬೀ, ನೀನು ನಿಜಕ್ಕೂ ದೇವರ ಮಗ, ಇಸ್ರಾಯೇಲ್ಯರ ರಾಜ” ಅಂದ.+ 50 ಅದಕ್ಕೆ ಯೇಸು “ಅಂಜೂರ ಮರದ ಕೆಳಗೆ ನಿನ್ನನ್ನ ನೋಡಿದೆ ಅಂತ ಹೇಳಿದ್ದಕ್ಕೆ ನೀನು ನಂಬ್ತಿದ್ದೀಯಾ? ನೀನು ಇದಕ್ಕಿಂತ ದೊಡ್ಡ ಅದ್ಭುತಗಳನ್ನ ನೋಡ್ತೀಯ” ಅಂದನು. 51 ಆಮೇಲೆ ಯೇಸು “ನಿಮಗೆ ನಿಜ ಹೇಳ್ತೀನಿ, ಆಕಾಶ ತೆರೆದು ದೇವದೂತರು ಮನುಷ್ಯಕುಮಾರನ ಹತ್ರ ಕೆಳಗೆ ಬರೋದನ್ನ, ವಾಪಸ್ ಸ್ವರ್ಗಕ್ಕೆ ಹೋಗೋದನ್ನ ನೀವು ನೋಡ್ತೀರ” ಅಂದನು.+