ಯೋಹಾನ
14 “ದುಃಖದಲ್ಲಿ ಮುಳುಗಿಹೋಗಬೇಡಿ.+ ದೇವ್ರ ಮೇಲೆ ನಂಬಿಕೆ ಇಡಿ,+ ನನ್ನ ಮೇಲೂ ನಂಬಿಕೆ ಇಡಿ. 2 ನನ್ನ ಅಪ್ಪನ ಮನೆಯಲ್ಲಿ ಉಳ್ಕೊಳ್ಳೋಕೆ ತುಂಬ ಜಾಗ ಇದೆ. ಇಲ್ಲದಿದ್ರೆ ನಾನು ಈ ಮಾತನ್ನ ನಿಮಗೆ ಹೇಳ್ತಾನೇ ಇರ್ಲಿಲ್ಲ. ಯಾಕಂದ್ರೆ ನಿಮಗೋಸ್ಕರ ಜಾಗ ಸಿದ್ಧಮಾಡೋಕೆ ಹೋಗ್ತಾ ಇದ್ದೀನಿ.+ 3 ನಾನು ಹೋಗಿ ನಿಮಗೋಸ್ಕರ ಜಾಗ ಸಿದ್ಧಮಾಡಿದ ಮೇಲೆ ಬಂದು ನಿಮ್ಮನ್ನ ಕರ್ಕೊಂಡು ಹೋಗ್ತೀನಿ. ಆಗ ನಾನು ಇರೋ ಜಾಗದಲ್ಲಿ ನೀವೂ ಇರ್ತಿರ.+ 4 ನಾನು ಹೋಗ್ತಾ ಇರೋ ಜಾಗಕ್ಕೆ ಬರೋ ದಾರಿ ನಿಮಗೆ ಗೊತ್ತು” ಅಂದನು.
5 ಅದಕ್ಕೆ ತೋಮ+ “ಪ್ರಭು, ನೀನು ಎಲ್ಲಿಗೆ ಹೋಗ್ತಾ ಇದ್ದೀಯ ಅಂತ ನಮಗೆ ಗೊತ್ತಿಲ್ಲ ಅಂದಮೇಲೆ ಅಲ್ಲಿಗೆ ಬರೋ ದಾರಿ ಹೇಗೆ ಗೊತ್ತಾಗುತ್ತೆ?” ಅಂತ ಕೇಳಿದ.
6 ಅದಕ್ಕೆ ಯೇಸು “ನಾನೇ ಆ ದಾರಿ,+ ಸತ್ಯ,+ ಜೀವ+ ಆಗಿದ್ದೀನಿ. ನನ್ನ ಮೂಲಕ ಅಲ್ಲದೆ ಯಾರೂ ತಂದೆ ಹತ್ರ ಬರೋಕಾಗಲ್ಲ.+ 7 ನಿಮಗೆ ನಾನು ಗೊತ್ತಿದ್ರೆ ನನ್ನ ಅಪ್ಪನೂ ಗೊತ್ತಿರ್ತಾನೆ. ಈ ಕ್ಷಣದಿಂದ ನಿಮಗೆ ಆತನ ಬಗ್ಗೆ ಗೊತ್ತು ಮತ್ತು ಆತನನ್ನ ನೋಡಿದ್ದೀರ”+ ಅಂದನು.
8 ಆಗ ಫಿಲಿಪ್ಪ “ಪ್ರಭು, ಸ್ವರ್ಗದಲ್ಲಿರೋ ನಿನ್ನ ಅಪ್ಪನನ್ನ ತೋರಿಸು. ನಮಗೆ ಅದೇ ಸಾಕು” ಅಂದ.
9 ಅದಕ್ಕೆ ಯೇಸು “ಇಷ್ಟು ದಿನ ನಿಮ್ಮ ಜೊತೆ ಇದ್ರೂ ನನ್ನ ಬಗ್ಗೆ ತಿಳ್ಕೊಂಡೇ ಇಲ್ವಲ್ಲಾ, ಫಿಲಿಪ್ಪ? ನನ್ನನ್ನ ನೋಡಿದವನು ನನ್ನ ಅಪ್ಪನನ್ನೂ ನೋಡಿದ್ದಾನೆ.+ ಹಾಗಿರುವಾಗ ‘ಸ್ವರ್ಗದಲ್ಲಿರೋ ಅಪ್ಪನನ್ನ ತೋರಿಸು’ ಅಂತ ಯಾಕೆ ಕೇಳ್ತೀಯಾ? 10 ನಾನು ಮತ್ತು ಅಪ್ಪ ಆಪ್ತರಾಗಿ ಇದ್ದೀವಿ ಅಂತ ನೀನು ನಂಬಲ್ವಾ?+ ನಾನು ಯಾವತ್ತೂ ನನಗೆ ಅನಿಸಿದ್ದನ್ನ ಮಾತಾಡಲ್ಲ.+ ನನಗೆ ಆಪ್ತವಾಗಿ ಇರೋ ನನ್ನ ಅಪ್ಪಾ ನನ್ನ ಮೂಲಕ ಮಾತಾಡ್ತಾನೆ, ನನ್ನ ಮೂಲಕ ಕೆಲಸಗಳನ್ನ ಮಾಡ್ತಾನೆ. 11 ನಂಬಿ, ನಾನು ಮತ್ತು ಅಪ್ಪ ಆಪ್ತರಾಗಿ ಇದ್ದೀವಿ. ನನ್ನ ಮಾತನ್ನ ನಂಬಿಲ್ಲಾಂದ್ರೂ ನಾನು ಮಾಡೋ ಕೆಲಸಗಳನ್ನ ನೋಡಿ ನಂಬಿ.+ 12 ನಿಜ ಹೇಳ್ತೀನಿ, ನನ್ನ ಮೇಲೆ ನಂಬಿಕೆ ಇಡೋನು ನಾನು ಮಾಡೋ ಕೆಲಸಗಳನ್ನೇ ಮಾಡ್ತಾನೆ. ಅದಕ್ಕಿಂತ ದೊಡ್ಡದೊಡ್ಡ ಕೆಲಸ ಮಾಡ್ತಾನೆ.+ ಯಾಕಂದ್ರೆ ನಾನು ಅಪ್ಪನ ಹತ್ರ ಹೋಗ್ತೀನಿ.+ 13 ಅಷ್ಟೇ ಅಲ್ಲ ನನ್ನ ಮೂಲಕ* ನೀವು ಏನೇ ಕೇಳಿದ್ರೂ ಅದನ್ನ ನಾನು ಮಾಡ್ತೀನಿ. ಮಗನ ಮೂಲಕ ಅಪ್ಪನಿಗೆ ಹೊಗಳಿಕೆ ಸಿಗೋ ತರ ಮಾಡ್ತೀನಿ.+ 14 ನನ್ನ ಮೂಲಕ* ಏನೇ ಬೇಡ್ಕೊಂಡ್ರೂ ನಾನು ಅದನ್ನ ಮಾಡ್ತೀನಿ.
15 ನಿಮಗೆ ನನ್ನ ಮೇಲೆ ಪ್ರೀತಿ ಇದ್ರೆ ನನ್ನ ಆಜ್ಞೆಗಳನ್ನೆಲ್ಲ ಪಾಲಿಸ್ತೀರ.+ 16 ನಿಮ್ಮ ಜೊತೆ ಯಾವಾಗ್ಲೂ ಇರೋಕೆ ಇನ್ನೊಬ್ಬ ಸಹಾಯಕನನ್ನ* ಕಳಿಸು ಅಂತ ಅಪ್ಪನ ಹತ್ರ ಬೇಡ್ತೀನಿ. ಆತನು ಕಳಿಸ್ತಾನೆ.+ 17 ಸತ್ಯ ಯಾವುದು ಅಂತ ತೋರಿಸೋ ಪವಿತ್ರಶಕ್ತಿನೇ+ ಆ ಸಹಾಯಕ. ಅದು ಲೋಕಕ್ಕೆ ಸಿಗಲ್ಲ. ಯಾಕಂದ್ರೆ ಲೋಕ ಅದನ್ನ ನೋಡ್ತಾ ಇಲ್ಲ, ಲೋಕಕ್ಕೆ ಅದ್ರ ಬಗ್ಗೆ ಗೊತ್ತಿಲ್ಲ.+ ಆದ್ರೆ ನಿಮಗೆ ಅದ್ರ ಬಗ್ಗೆ ಗೊತ್ತು. ಯಾಕಂದ್ರೆ ಅದು ನಿಮ್ಮ ಜೊತೆ ಇದೆ, ನಿಮ್ಮ ಜೊತೆನೇ ಇರುತ್ತೆ. 18 ನಾನು ನಿಮ್ಮನ್ನ ಅನಾಥರನ್ನಾಗಿ ಬಿಟ್ಟುಬಿಡಲ್ಲ. ನಾನು ಮತ್ತೆ ನಿಮ್ಮ ಹತ್ರ ಬರ್ತಿನಿ.+ 19 ಸ್ವಲ್ಪ ಸಮಯ ಆದಮೇಲೆ ಲೋಕ ನನ್ನನ್ನ ಯಾವತ್ತೂ ನೋಡಲ್ಲ. ಆದ್ರೆ ನೀವು ನೋಡ್ತೀರ.+ ಯಾಕಂದ್ರೆ ನಾನು ಜೀವಿಸ್ತಾ ಇರ್ತಿನಿ, ನೀವೂ ಜೀವಿಸ್ತಾ ಇರ್ತಿರ. 20 ನಾನೂ ನನ್ನ ಅಪ್ಪ ಆಪ್ತರಾಗಿ ಇದ್ದೀವಿ ಅಂತ, ನೀವು ಮತ್ತು ನಾನು ಆಪ್ತರಾಗಿ ಇದ್ದೀವಿ ಅಂತ ಅವತ್ತು ನಿಮಗೆ ಗೊತ್ತಾಗುತ್ತೆ.+ 21 ನಾನು ಕೊಟ್ಟ ಆಜ್ಞೆಗಳನ್ನ ಒಪ್ಕೊಂಡು ಪಾಲಿಸೋ ಜನ ನನ್ನನ್ನ ಪ್ರೀತಿಸ್ತಾ ಇದ್ದಾರೆ. ನನ್ನನ್ನ ಪ್ರೀತಿಸುವವರನ್ನ ನನ್ನ ಅಪ್ಪ ಪ್ರೀತಿಸ್ತಾನೆ. ನಾನು ಸಹ ಅವ್ರನ್ನ ಪ್ರೀತಿಸಿ ನನ್ನ ಬಗ್ಗೆ ಚೆನ್ನಾಗಿ ತಿಳ್ಕೊಳ್ಳೋ ತರ ಮಾಡ್ತೀನಿ” ಅಂದನು.
22 ಯೂದ+ (ಇಸ್ಕರಿಯೂತನಲ್ಲ) ಯೇಸುಗೆ “ಪ್ರಭು, ಲೋಕದ ಜನ್ರನ್ನ ಬಿಟ್ಟು ನಾವು ಮಾತ್ರ ನಿನ್ನನ್ನ ತಿಳ್ಕೊಳ್ಳೋ ತರ ಮಾಡೋಕೆ ಕಾರಣ ಏನು?” ಅಂತ ಕೇಳಿದ.
23 ಅದಕ್ಕೆ ಯೇಸು ಹೀಗಂದನು “ನನ್ನ ಮೇಲೆ ಪ್ರೀತಿ ಇರೋನು ನಾನು ಹೇಳಿದ ಪ್ರಕಾರ ನಡಿತಾನೆ.+ ಅಪ್ಪ ಅವನನ್ನ ಪ್ರೀತಿಸ್ತಾನೆ. ನಾವು ಆತನ ಹತ್ರ ಹೋಗ್ತೀವಿ, ಆತನ ಜೊತೆ ವಾಸ ಮಾಡ್ತೀವಿ.+ 24 ನನ್ನ ಮೇಲೆ ಪ್ರೀತಿ ಇಲ್ಲದವನು ನಾನು ಹೇಳಿದ ಹಾಗೆ ನಡಿಯಲ್ಲ. ನೀವು ಕೇಳಿಸ್ಕೊಳ್ತಾ ಇರೋ ಮಾತು ನನ್ನದಲ್ಲ, ನನ್ನನ್ನ ಕಳಿಸಿದ ಅಪ್ಪನದ್ದು.+
25 ನಾನು ನಿಮ್ಮ ಜೊತೆ ಇರುವಾಗಲೇ ಈ ಎಲ್ಲಾ ವಿಷ್ಯಗಳನ್ನ ಹೇಳಿದ್ದೀನಿ. 26 ಆದ್ರೆ ನನ್ನ ಹೆಸ್ರಲ್ಲಿ ತಂದೆ ಕಳಿಸೋ ಸಹಾಯಕ ಅಂದ್ರೆ ಆ ಪವಿತ್ರಶಕ್ತಿ ನಿಮಗೆ ಎಲ್ಲ ವಿಷ್ಯಗಳನ್ನ ಕಲಿಸುತ್ತೆ. ನಾನು ಹೇಳಿದ ಎಲ್ಲ ವಿಷ್ಯಗಳನ್ನ ನಿಮ್ಮ ನೆನಪಿಗೆ ತರುತ್ತೆ.+ 27 ನಾನು ಶಾಂತಿ ಕೊಟ್ಟುಹೋಗ್ತೀನಿ. ನನ್ನ ಶಾಂತಿಯನ್ನೇ ಕೊಡ್ತೀನಿ.+ ನಾನು ಕೊಡೋ ಶಾಂತಿ ಲೋಕ ಕೊಡೋ ಶಾಂತಿ ತರ ಇಲ್ಲ. ಹಾಗಾಗಿ ಚಿಂತೆ ಮಾಡಬೇಡಿ. ಭಯಪಡಬೇಡಿ. 28 ‘ನಾನು ಹೋಗಿ ಮತ್ತೆ ನಿಮ್ಮ ಹತ್ರ ಬರ್ತಿನಿ’ ಅಂತ ಹೇಳಿದ ಮಾತನ್ನ ಕೇಳಿಸ್ಕೊಂಡ್ರಿ ಅಲ್ವಾ? ನಿಮಗೆ ನನ್ನ ಮೇಲೆ ಪ್ರೀತಿ ಇದ್ರೆ ನಾನು ಅಪ್ಪನ ಹತ್ರ ಹೋಗ್ತಾ ಇದ್ದೀನಿ ಅಂತ ಖುಷಿಪಡ್ತೀರ. ಯಾಕಂದ್ರೆ ಅಪ್ಪ ನನಗಿಂತ ದೊಡ್ಡವನು.+ 29 ನಾನು ಹೇಳಿದ್ದು ನಡೆದಾಗ ನೀವು ನನ್ನ ಮಾತು ನಂಬಬೇಕು ಅಂತ ಮುಂಚೆನೇ ಹೇಳ್ತಾ ಇದ್ದೀನಿ.+ 30 ಇನ್ನು ಮುಂದೆ ನಾನು ನಿಮ್ಮ ಹತ್ರ ಜಾಸ್ತಿ ಮಾತಾಡಲ್ಲ. ಯಾಕಂದ್ರೆ ಈ ಲೋಕದ ನಾಯಕ+ ಬರ್ತಿದ್ದಾನೆ. ಅವನಿಗೆ ನನ್ನ ಮೇಲೆ ಯಾವ ಅಧಿಕಾರನೂ ಇಲ್ಲ.+ 31 ಆದ್ರೆ ನಾನು ನನ್ನ ಅಪ್ಪನನ್ನ ಎಷ್ಟು ಪ್ರೀತಿಸ್ತೀನಿ ಅಂತ ಲೋಕ ತಿಳ್ಕೊಳ್ಳೋಕೆ ಅಪ್ಪ ನನಗೆ ಹೇಳಿದ ತರಾನೇ ಮಾಡ್ತಾ ಇದ್ದೀನಿ.+ ಎದ್ದೇಳಿ, ಇಲ್ಲಿಂದ ಹೋಗೋಣ.