ಯೆಹೆಜ್ಕೇಲ
34 ಯೆಹೋವ ಮತ್ತೆ ನನಗೆ ಹೀಗಂದನು: 2 “ಮನುಷ್ಯಕುಮಾರನೇ, ಇಸ್ರಾಯೇಲ್ಯರ ಕುರುಬರ ವಿರುದ್ಧ ಭವಿಷ್ಯ ಹೇಳು. ನೀನು ಆ ಕುರುಬರಿಗೆ ಏನು ಹೇಳಬೇಕಂದ್ರೆ ‘ವಿಶ್ವದ ರಾಜ ಯೆಹೋವ ಹೀಗಂತಾನೆ: “ನಿಮ್ಮ ಹೊಟ್ಟೆಯನ್ನೇ ತುಂಬಿಸ್ಕೊಳ್ತಿರೋ ಇಸ್ರಾಯೇಲ್ಯರ ಕುರುಬರೇ, ನಿಮಗೆ ಬರೋ ಗತಿಯನ್ನ ಏನು ಹೇಳಲಿ!+ ಕುರುಬರ ಕೆಲಸ ಕುರಿಗಳ ಹೊಟ್ಟೆಯನ್ನ ತುಂಬಿಸೋದು ಅಲ್ವಾ?+ 3 ನೀವು ಕೊಬ್ಬನ್ನ ತಿಂತೀರ, ಉಣ್ಣೆಬಟ್ಟೆಗಳನ್ನ ಹಾಕ್ಕೊಳ್ತೀರ, ಚೆನ್ನಾಗಿ ಕೊಬ್ಬಿದ ಪ್ರಾಣಿಯನ್ನ ಕಡಿತೀರ,+ ಆದ್ರೆ ನೀವು ಕುರಿಗಳನ್ನ ಮೇಯಿಸಲ್ಲ.+ 4 ಬಡಕಲು ಕುರಿಗಳನ್ನ ನೀವು ಬಲಪಡಿಸಲಿಲ್ಲ, ಕಾಯಿಲೆ ಬಿದ್ದಾಗ ವಾಸಿಮಾಡ್ಲಿಲ್ಲ, ಗಾಯ ಆದಾಗ ಪಟ್ಟಿ ಕಟ್ಟಲಿಲ್ಲ, ತಪ್ಪಿಸ್ಕೊಂಡು ಹೋಗಿ ಅಲೆದಾಡ್ತಿದ್ದ ಕುರಿಗಳನ್ನ ವಾಪಾಸ್ ತರಲಿಲ್ಲ, ಅವು ಕಳೆದು ಹೋದಾಗ ಹುಡುಕಲಿಲ್ಲ.+ ಇದನ್ನ ಮಾಡದೆ ಅವುಗಳ ಮೇಲೆ ಒಂಚೂರು ಕನಿಕರ ಇಲ್ಲದೆ ದಬ್ಬಾಳಿಕೆಯಿಂದ ಅಧಿಕಾರ ನಡಿಸಿದ್ದೀರ.+ 5 ಕುರುಬ ಇಲ್ಲದೆ ಕುರಿಗಳು ಓಡಿ ಹೋದ್ವು.+ ಹೀಗೆ ಚೆಲ್ಲಾಪಿಲ್ಲಿಯಾಗಿ ಹೋಗಿ ಎಲ್ಲ ಕಾಡುಪ್ರಾಣಿಗಳಿಗೆ ಆಹಾರ ಆದ್ವು. 6 ನನ್ನ ಕುರಿಗಳು ಎಲ್ಲ ಪರ್ವತಗಳ ಮೇಲೆ, ಎತ್ತರವಾದ ಎಲ್ಲ ಬೆಟ್ಟಗಳ ಮೇಲೆ ಅಲೆದಾಡ್ತಿದ್ವು. ಭೂಮಿ ಮೇಲೆಲ್ಲ ನನ್ನ ಕುರಿಗಳು ಚೆಲ್ಲಾಪಿಲ್ಲಿಯಾಗಿ ಹೋಗಿದ್ವು. ಅವನ್ನ ಯಾರೂ ಹುಡುಕಲಿಲ್ಲ, ಅವು ಎಲ್ಲಿವೆ ಅಂತಾನೂ ಕಂಡುಹಿಡಿಲಿಲ್ಲ.
7 ಹಾಗಾಗಿ ಕುರುಬರೇ, ಯೆಹೋವನ ಈ ಮಾತನ್ನ ಕೇಳಿ: 8 ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನನ್ನಾಣೆ, ನಾನು ಹೆಜ್ಜೆ ತಗೊಳ್ತೀನಿ. ಕುರುಬ ಇಲ್ಲದ್ರಿಂದ ನನ್ನ ಕುರಿಗಳು ಬೇಟೆಗೆ ಬಲಿಯಾಗಿವೆ, ಎಲ್ಲ ಕಾಡುಪ್ರಾಣಿಗಳಿಗೆ ಆಹಾರವಾಗಿವೆ. ನನ್ನ ಕುರುಬರು ನನ್ನ ಕುರಿಗಳನ್ನ ಹುಡುಕಲಿಲ್ಲ. ಅವರು ತಮ್ಮ ಹೊಟ್ಟೆ ತುಂಬಿಸ್ಕೊಳ್ತಿದ್ರೇ ವಿನಃ ಕುರಿಗಳ ಹೊಟ್ಟೆಯನ್ನ ತುಂಬಿಸಲಿಲ್ಲ.”’ 9 ಹಾಗಾಗಿ ಕುರುಬರೇ, ಯೆಹೋವನ ಮಾತನ್ನ ಕೇಳಿ. 10 ವಿಶ್ವದ ರಾಜ ಯೆಹೋವ ಹೀಗಂತಾನೆ: ‘ನಾನು ಕುರುಬರ ವಿರುದ್ಧ ನಿಲ್ತೀನಿ. ನನ್ನ ಕುರಿಗಳಿಗೆ ಅವರೇನು ಮಾಡಿದ್ರೋ ಅದಕ್ಕಾಗಿ ನಾನು ಅವ್ರಿಂದ ಲೆಕ್ಕ ಕೇಳ್ತೀನಿ.* ನನ್ನ ಕುರಿಗಳನ್ನ ಮೇಯಿಸೋ* ಕೆಲಸದಿಂದ ಅವ್ರನ್ನ ತೆಗೆದುಹಾಕ್ತೀನಿ.+ ಅವರು ಇನ್ಮುಂದೆ ಅವ್ರ ಹೊಟ್ಟೆ ತುಂಬಿಸ್ಕೊಳ್ಳೋಕೆ ಆಗಲ್ಲ. ನನ್ನ ಕುರಿಗಳು ಅವ್ರ ಬಾಯಿಗೆ ತುತ್ತಾಗದ ಹಾಗೆ ಕಾಪಾಡ್ತೀನಿ. ಇನ್ಮುಂದೆ ನನ್ನ ಕುರಿಗಳು ಅವ್ರಿಗೆ ಆಹಾರ ಆಗಲ್ಲ.’”
11 ವಿಶ್ವದ ರಾಜ ಯೆಹೋವ ಹೀಗಂತಾನೆ: “ನೋಡಿ, ನನ್ನ ಕುರಿಗಳನ್ನ ನಾನೇ ಹುಡುಕ್ತೀನಿ, ನಾನೇ ಅವುಗಳ ಆರೈಕೆ ಮಾಡ್ತೀನಿ.+ 12 ಚೆಲ್ಲಾಪಿಲ್ಲಿ ಆಗಿರೋ ಕುರಿಗಳನ್ನ ಹುಡುಕಿ ಅವನ್ನ ಕರ್ಕೊಂಡು ಬಂದು ಒಬ್ಬ ಕುರುಬನ ತರ ನಾನು ನನ್ನ ಕುರಿಗಳ ಆರೈಕೆ ಮಾಡ್ತೀನಿ.+ ಮೋಡ ಮುಚ್ಚಿ ಕಾರ್ಗತ್ತಲು ಕವಿದ ದಿನ+ ಅವು ಎಲ್ಲೆಲ್ಲ ಚೆಲ್ಲಾಪಿಲ್ಲಿ ಆದ್ವೋ ಆ ಜಾಗಗಳಿಂದ ನಾನು ಅವುಗಳನ್ನ ಕಾಪಾಡಿ ಕರ್ಕೊಂಡು ಬರ್ತಿನಿ. 13 ಅವುಗಳನ್ನ ಜನಾಂಗಗಳಿಂದ ಬಿಡಿಸಿ, ದೇಶ ದೇಶಗಳಿಂದ ಒಟ್ಟುಸೇರಿಸಿ ಅವುಗಳ ಸ್ವದೇಶಕ್ಕೆ ಕರ್ಕೊಂಡು ಬರ್ತಿನಿ. ಇಸ್ರಾಯೇಲಿನ ಬೆಟ್ಟಗಳ ಮೇಲೆ,+ ತೊರೆಗಳ ಹತ್ರ, ದೇಶದ ಎಲ್ಲ ಕಡೆ ಅವುಗಳನ್ನ ಮೇಯಿಸ್ತೀನಿ. 14 ಹಸಿರು ಹುಲ್ಲುಗಾವಲಲ್ಲಿ ಅವುಗಳನ್ನ ಮೇಯಿಸ್ತೀನಿ. ಇಸ್ರಾಯೇಲಿನ ಎತ್ತರವಾದ ಬೆಟ್ಟಗಳ ಮೇಲೆ ಅವು ಮೇಯುತ್ತೆ.+ ಅಲ್ಲಿ ಒಳ್ಳೇ ಮೇವಿರೋ ಜಾಗದಲ್ಲಿ ಅವು ಮಲಗುತ್ತೆ.+ ಇಸ್ರಾಯೇಲಿನ ಬೆಟ್ಟಗಳಲ್ಲಿ ತುಂಬ ಒಳ್ಳೇ ಹುಲ್ಲುಗಾವಲುಗಳಲ್ಲಿ ಅವು ಮೇಯುತ್ತೆ.”
15 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನನ್ನ ಕುರಿಗಳನ್ನ ನಾನೇ ಮೇಯಿಸ್ತೀನಿ,+ ಅವು ಹಾಯಾಗಿ ಮಲಗೋ ಹಾಗೆ ಮಾಡ್ತೀನಿ.+ 16 ಕಳೆದು ಹೋಗಿದ್ದನ್ನ ಹುಡುಕ್ತೀನಿ,+ ತಪ್ಪಿಸ್ಕೊಂಡು ಹೋಗಿದ್ದನ್ನ ವಾಪಸ್ ತರ್ತಿನಿ, ಗಾಯ ಆಗಿದ್ರೆ ಪಟ್ಟಿ ಕಟ್ತೀನಿ, ಬಡಕಲಾಗಿದ್ರೆ ಬಲಪಡಿಸ್ತೀನಿ. ಆದ್ರೆ ಕೊಬ್ಬಿರೋದನ್ನ, ಬಲಿಷ್ಠವಾದದ್ದನ್ನ ನಾಶಮಾಡ್ತೀನಿ. ಅದಕ್ಕೆ ತಕ್ಕ ಶಿಕ್ಷೆ ಕೊಡ್ತೀನಿ.”
17 ನನ್ನ ಕುರಿಗಳೇ, ವಿಶ್ವದ ರಾಜ ಯೆಹೋವ ನಿಮಗೆ ಹೀಗಂತಾನೆ: “ನಾನು ನನ್ನ ಕುರಿಗಳಿಗೆ ನ್ಯಾಯತೀರಿಸ್ತೀನಿ, ಟಗರುಗಳಿಗೆ ಮತ್ತು ಹೋತಗಳಿಗೆ ನ್ಯಾಯತೀರಿಸ್ತೀನಿ.+ 18 ಒಳ್ಳೇ ಹುಲ್ಲುಗಾವಲುಗಳಲ್ಲಿ ನೀವು* ಮೇದಿದ್ದು ಸಾಕಾಗಿಲ್ವಾ? ಹುಲ್ಲುಗಾವಲುಗಳಲ್ಲಿ ಉಳಿದದ್ದನ್ನೂ ಕಾಲಿಂದ ತುಳಿದು ಹಾಕ್ತಿದ್ದೀರಲ್ಲಾ? ಶುದ್ಧ ನೀರು ಕುಡಿದ ಮೇಲೆ ಆ ನೀರಲ್ಲಿ ಕಾಲು ಹಾಕಿ ಅದನ್ನ ಗಬ್ಬೆಬ್ಬಿಸ್ತಿದ್ದೀರಲ್ಲಾ? 19 ನೀವು ತುಳಿದು ಹಾಳುಮಾಡಿದ ಹುಲ್ಲುಗಾವಲಲ್ಲಿ ನನ್ನ ಕುರಿಗಳು ಮೇಯಬೇಕಾ? ನೀವು ಕಾಲಿಟ್ಟು ಗಲೀಜು ಮಾಡಿದ ನೀರನ್ನ ಅವು ಕುಡೀಬೇಕಾ?”
20 ಹಾಗಾಗಿ ವಿಶ್ವದ ರಾಜ ಯೆಹೋವ ಅವ್ರಿಗೆ ಹೇಳೋದು ಏನಂದ್ರೆ “ನೋಡಿ, ಕೊಬ್ಬಿದ ಕುರಿಗೆ ಮತ್ತು ಬಡಕಲು ಕುರಿಗೆ ನಾನೇ ನ್ಯಾಯತೀರಿಸ್ತೀನಿ. 21 ಯಾಕಂದ್ರೆ ನೀವು ಕಾಯಿಲೆಬಿದ್ದ ಕುರಿಗಳನ್ನೆಲ್ಲ ನಿಮ್ಮ ಪಕ್ಕೆ, ಮುಂಗಾಲಿಂದ ನೂಕ್ತಾ, ಕೊಂಬುಗಳಿಂದ ಹಾಯುತ್ತಾ ತಳ್ತಿದ್ದೀರ. ಅವು ದೂರದೂರಕ್ಕೆ ಚದರಿ ಹೋಗೋ ತನಕ ನೀವು ಹಾಗೆ ಮಾಡ್ತಿದ್ದೀರ. 22 ಹಾಗಾಗಿ ನಾನು ನನ್ನ ಕುರಿಗಳನ್ನ ಕಾಪಾಡ್ತೀನಿ. ಅವು ಇನ್ಮುಂದೆ ಬೇಟೆಗೆ ಬಲಿಯಾಗಲ್ಲ.+ ನಾನು ಎಲ್ಲಾ ಕುರಿಗೂ ನ್ಯಾಯತೀರಿಸ್ತೀನಿ. 23 ಅವುಗಳನ್ನ ನೋಡ್ಕೊಳ್ಳೋಕೆ ನಾನು ಒಬ್ಬ ಕುರುಬನನ್ನ ನೇಮಿಸ್ತೀನಿ.+ ನನ್ನ ಸೇವಕ ದಾವೀದನೇ+ ಆ ಕುರುಬ. ಅವನು ಅವುಗಳನ್ನ ಮೇಯಿಸ್ತಾನೆ. ಅವನೇ ಅವುಗಳ ಕುರುಬನಾಗಿದ್ದು ಅವುಗಳನ್ನ ಮೇಯಿಸ್ತಾನೆ.+ 24 ಯೆಹೋವನಾದ ನಾನು ಅವುಗಳ ದೇವರಾಗಿ ಇರ್ತಿನಿ.+ ನನ್ನ ಸೇವಕ ದಾವೀದ ಅವುಗಳ ಪ್ರಧಾನನಾಗಿ ಇರ್ತಾನೆ.+ ಯೆಹೋವನಾದ ನಾನೇ ಇದನ್ನ ಹೇಳಿದ್ದೀನಿ.
25 ನಾನು ಅವುಗಳ ಜೊತೆ ಶಾಂತಿಯ ಒಪ್ಪಂದ ಮಾಡ್ಕೊತೀನಿ.+ ಕ್ರೂರ ಕಾಡುಪ್ರಾಣಿಗಳನ್ನ ದೇಶದಿಂದ ಓಡಿಸಿಬಿಡ್ತೀನಿ.+ ಆಗ ನನ್ನ ಕುರಿಗಳು ಕಾಡಲ್ಲಿ ಸುರಕ್ಷಿತವಾಗಿ ಇರುತ್ತೆ. ಕಾಡುಗಳಲ್ಲಿ ನೆಮ್ಮದಿಯಿಂದ ನಿದ್ದೆ ಮಾಡುತ್ತೆ.+ 26 ನಾನು ಅವುಗಳನ್ನ ಮತ್ತು ನನ್ನ ಬೆಟ್ಟದ ಸುತ್ತಮುತ್ತ ಇರೋ ಪ್ರದೇಶವನ್ನ ಒಂದು ಆಶೀರ್ವಾದವಾಗಿ ಮಾಡ್ತೀನಿ.+ ಕಾಲಕಾಲಕ್ಕೆ ಮಳೆ ಸುರಿಸ್ತೀನಿ. ಆಶೀರ್ವಾದಗಳ ಸುರಿಮಳೆಯನ್ನ ಸುರಿಸ್ತೀನಿ.+ 27 ದೇಶದಲ್ಲಿರೋ ಮರಗಳು ಹಣ್ಣುಬಿಡುತ್ತೆ. ನೆಲ ಬೆಳೆ ಕೊಡುತ್ತೆ,+ ನನ್ನ ಕುರಿಗಳು ದೇಶದಲ್ಲಿ ಸುರಕ್ಷಿತವಾಗಿ ವಾಸಿಸುತ್ತೆ. ನಾನು ಅವುಗಳ ನೊಗಗಳನ್ನ ಮುರಿದು+ ಅವುಗಳನ್ನ ದಾಸರಾಗಿ ಮಾಡಿದವ್ರಿಂದ ಬಿಡಿಸಿ ಕರ್ಕೊಂಡು ಬರುವಾಗ ನಾನೇ ಯೆಹೋವ ಅಂತ ಅವಕ್ಕೆ ಗೊತ್ತಾಗುತ್ತೆ. 28 ಇನ್ಮುಂದೆ ಜನಾಂಗಗಳು ಅವುಗಳನ್ನ ಬೇಟೆಯಾಡಲ್ಲ, ಕಾಡುಪ್ರಾಣಿಗಳು ಅವುಗಳನ್ನ ತಿಂದುಹಾಕಲ್ಲ. ಅವು ಸುರಕ್ಷಿತವಾಗಿ ಇರುತ್ತೆ. ಅವುಗಳನ್ನ ಯಾರೂ ಹೆದರಿಸಲ್ಲ.+
29 ನಾನು ಅವುಗಳಿಗಾಗಿ ಒಂದು ತೋಟ ಕೊಡ್ತೀನಿ. ಅದು ತುಂಬ ಹೆಸರುವಾಸಿ ಆಗುತ್ತೆ. ಅದಾದ್ಮೇಲೆ ಅವು ದೇಶದಲ್ಲಿ ಬರಗಾಲದಿಂದ ಸಾಯಲ್ಲ,+ ಜನಾಂಗಗಳಿಂದ ತಲೆ ತಗ್ಗಿಸಲ್ಲ.+ 30 ‘ಆಗ ಅವರ ದೇವರಾಗಿರೋ ಯೆಹೋವನಾದ ನಾನು ಅವ್ರ ಜೊತೆ ಇದ್ದೀನಿ ಮತ್ತು ಇಸ್ರಾಯೇಲ್ಯರಾದ ಅವರು ನನ್ನ ಜನ್ರಾಗಿದ್ದಾರೆ ಅಂತ ಅವ್ರಿಗೆ ಗೊತ್ತಾಗುತ್ತೆ’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”’
31 ‘ನನ್ನ ಕುರಿಗಳೇ,+ ನಾನು ಆರೈಕೆ ಮಾಡೋ ಕುರಿಗಳೇ ನೀವು ಸಾಮಾನ್ಯ ಮನುಷ್ಯರು, ನಾನು ನಿಮ್ಮ ದೇವರು’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”