ನ್ಯಾಯಸ್ಥಾಪಕರು
1 ಯೆಹೋಶುವ+ ತೀರಿಹೋದ ಮೇಲೆ ಇಸ್ರಾಯೇಲ್ಯರು* ಯೆಹೋವನ ಹತ್ರ “ಕಾನಾನ್ಯರ ವಿರುದ್ಧ ಹೋರಾಡೋಕೆ ನಮ್ಮಲ್ಲಿ ಮೊದ್ಲು ಯಾರು ಹೋಗಬೇಕು?” ಅಂತ ವಿಚಾರಿಸಿದ್ರು.+ 2 ಅದಕ್ಕೆ ಯೆಹೋವ “ಯೆಹೂದ ಕುಲದವರು ಹೋಗ್ಲಿ.+ ದೇಶವನ್ನ ಅವ್ರ ಕೈಗೆ ಕೊಡ್ತೀನಿ” ಅಂದನು. 3 ಆಮೇಲೆ ಯೆಹೂದ ಕುಲದವರು ತಮ್ಮ ಸಹೋದರರಾದ ಸಿಮೆಯೋನ್ ಕುಲದವ್ರಿಗೆ “ನಮಗೆ ಸಿಕ್ಕಿರೋ ಪ್ರದೇಶಕ್ಕೆ ಹೋಗಿ+ ಅಲ್ಲಿರೋ ಕಾನಾನ್ಯರ ವಿರುದ್ಧ ಹೋರಾಡೋಕೆ ನಮಗೆ ಸಹಾಯ ಮಾಡಿ. ಆಮೇಲೆ ನಿಮಗೆ ಸಿಕ್ಕಿರೋ ಪ್ರದೇಶಕ್ಕೆ ನಾವು ಬಂದು ಸಹಾಯ ಮಾಡ್ತೀವಿ” ಅಂದ್ರು. ಹಾಗಾಗಿ ಸಿಮೆಯೋನ್ ಕುಲದವರು ಅವ್ರ ಜೊತೆ ಹೋದ್ರು.
4 ಯೆಹೂದ ಕುಲದವರು ಯುದ್ಧ ಮಾಡಿದಾಗ ಕಾನಾನ್ಯರನ್ನ ಪೆರಿಜೀಯರನ್ನ ಯೆಹೋವ ಅವ್ರ ಕೈಗೆ ಒಪ್ಪಿಸಿದನು.+ ಅವರು ಬೆಜೆಕಿನಲ್ಲಿ 10,000 ಗಂಡಸ್ರನ್ನ ಸೋಲಿಸಿದ್ರು. 5 ಕಾನಾನ್ಯರನ್ನ+ ಪೆರಿಜೀಯರನ್ನ+ ಸೋಲಿಸುವಾಗ ಬೆಜೆಕಿನಲ್ಲಿ ಅದೋನೀಬೆಜೆಕನನ್ನ ನೋಡಿ ಅವನ ವಿರುದ್ಧ ಕೂಡ ಹೋರಾಡಿದ್ರು. 6 ಅದೋನೀಬೆಜೆಕ ಓಡಿಹೋದಾಗ ಅವನನ್ನ ಅಟ್ಟಿಸ್ಕೊಂಡು ಹೋಗಿ ಹಿಡಿದು ಕೈಕಾಲಿನ ಹೆಬ್ಬೆರಳುಗಳನ್ನ ಕತ್ತರಿಸಿಬಿಟ್ರು.7 ಆಗ ಅದೋನೀಬೆಜೆಕ “70 ರಾಜರ ಕೈಕಾಲಿನ ಹೆಬ್ಬೆರಳುಗಳನ್ನ ನಾನು ಕತ್ತರಿಸಿದ್ದೆ. ಅವರು ನನ್ನ ಮೇಜಿಂದ ಕೆಳಗೆ ಬೀಳೋ ಆಹಾರ ಆಯ್ದುಕೊಂಡು ತಿಂತಿದ್ರು. ನಾನು ಬೇರೆಯವ್ರಿಗೆ ಏನು ಮಾಡಿದ್ನೋ ಅದನ್ನೇ ದೇವರು ಈಗ ನನಗೆ ಮಾಡಿದ್ದಾನೆ” ಅಂದ. ಆಮೇಲೆ ಅವನನ್ನ ಯೆರೂಸಲೇಮಿಗೆ+ ಕರ್ಕೊಂಡು ಬಂದ್ರು. ಅಲ್ಲಿ ಅವನು ಸತ್ತುಹೋದ.
8 ಅಷ್ಟೇ ಅಲ್ಲ ಯೆಹೂದದ ಗಂಡಸ್ರು ಯೆರೂಸಲೇಮಿನ+ ವಿರುದ್ಧ ಹೋರಾಡಿ ವಶ ಮಾಡ್ಕೊಂಡ್ರು. ಅವರು ಆ ಪಟ್ಟಣದವ್ರನ್ನ ಕತ್ತಿಯಿಂದ ಕೊಂದು ಪಟ್ಟಣಕ್ಕೆ ಬೆಂಕಿ ಇಟ್ರು. 9 ಆಮೇಲೆ ಬೆಟ್ಟ ಪ್ರದೇಶದಲ್ಲಿ, ನೆಗೆಬಿನಲ್ಲಿ, ಷೆಫೆಲಾದಲ್ಲಿ+ ವಾಸವಾಗಿದ್ದ ಕಾನಾನ್ಯರ ವಿರುದ್ಧ ಯುದ್ಧಕ್ಕೆ ಹೋದ್ರು. 10 ಆಮೇಲೆ ಯೆಹೂದ ಕುಲದವರು ಹೆಬ್ರೋನಲ್ಲಿ ವಾಸವಾಗಿದ್ದ ಕಾನಾನ್ಯರ ಮೇಲೆ ದಾಳಿ ಮಾಡಿದ್ರು. (ಈ ಮುಂಚೆ ಹೆಬ್ರೋನಿಗೆ ಕಿರ್ಯತ್-ಅರ್ಬ ಅಂತ ಹೆಸ್ರಿತ್ತು) ಅಲ್ಲಿ ಅವರು ಶೇಷೈ, ಅಹೀಮನ್, ತಲ್ಮೈಯನ್ನ ಕೊಂದ್ರು.+
11 ಆಮೇಲೆ ಅವರು ದೆಬೀರಿನ ಜನ್ರ ವಿರುದ್ಧ ಯುದ್ಧ ಮಾಡಿದ್ರು.+ (ದೆಬೀರಿಗೆ ಮುಂಚೆ ಕಿರ್ಯತ್-ಸೇಫೆರ್ ಅಂತ ಹೆಸ್ರಿತ್ತು.)+ 12 ಕಾಲೇಬ+ “ಕಿರ್ಯತ್-ಸೇಫೆರ ಮೇಲೆ ದಾಳಿ ಮಾಡಿ ವಶ ಮಾಡ್ಕೊಳ್ಳೋನಿಗೆ ನನ್ನ ಮಗಳು ಅಕ್ಷಾಳನ್ನ ಮದುವೆ ಮಾಡ್ಕೊಡ್ತೀನಿ”+ ಅಂದ. 13 ಕಾಲೇಬನ ತಮ್ಮನಾದ ಕೆನಜನ+ ಮಗ ಒತ್ನೀಯೇಲ+ ಅದನ್ನ ವಶ ಮಾಡ್ಕೊಂಡ. ಆಗ ಕಾಲೇಬ ಅಕ್ಷಾಳನ್ನ ಒತ್ನೀಯೇಲನಿಗೆ ಕೊಟ್ಟು ಮದುವೆ ಮಾಡ್ದ. 14 ಅವಳು ತನ್ನ ಗಂಡನ ಮನೆಗೆ ಹೋಗುವಾಗ ತಂದೆ ಹತ್ರ ಹೊಲ ಕೇಳು ಅಂತ ಗಂಡನನ್ನ ಒತ್ತಾಯಿಸಿದಳು. ಅವಳು ಕತ್ತೆ ಮೇಲಿಂದ ಕೆಳಗೆ ಇಳಿದಾಗ* ಕಾಲೇಬ “ನಿನಗೇನು ಬೇಕು?” ಅಂತ ಕೇಳಿದ. 15 ಅದಕ್ಕೆ ಅವಳು “ದಯವಿಟ್ಟು ನನ್ನನ್ನ ಆಶೀರ್ವದಿಸು. ನನಗೆ ದಕ್ಷಿಣದಲ್ಲಿ ಇರೋ* ಹೊಲದ ಒಂದು ಭಾಗ ಕೊಟ್ಯಲ್ಲಾ, ಅದೇ ತರ ಗುಲ್ಲೊತ್-ಮಯಿಮ್* ಕೂಡ ಕೊಡು” ಅಂದಳು. ಆಗ ಕಾಲೇಬ ಅವಳಿಗೆ ಮೇಲಿನ ಮತ್ತೆ ಕೆಳಗಿನ ಬುಗ್ಗೆಗಳನ್ನ ಕೊಟ್ಟ.
16 ಮೋಶೆಯ ಮಾವ+ ಒಬ್ಬ ಕೇನ್ಯನಾಗಿದ್ದ.+ ಅವನ ವಂಶದವರು ಯೆಹೂದದ ಜನ್ರ ಜೊತೆ ಖರ್ಜೂರ ಮರಗಳ ಪಟ್ಟಣದಿಂದ+ ಅರಾದಿನ+ ದಕ್ಷಿಣದಲ್ಲಿದ್ದ ಯೆಹೂದದ ಕಾಡಿಗೆ ಬಂದು ಅಲ್ಲಿನ ಜನ್ರ ಜೊತೆ ವಾಸ ಮಾಡಿದ್ರು.+ 17 ಯೆಹೂದ ಕುಲದವರು ತಮ್ಮ ಸಹೋದರರಾದ ಸಿಮೆಯೋನ್ ಕುಲದವ್ರ ಜೊತೆ ಬಂದು ಚೆಫತಿನಲ್ಲಿ ವಾಸ ಇದ್ದ ಕಾನಾನ್ಯರ ಮೇಲೆ ದಾಳಿ ಮಾಡಿ ಆ ಪಟ್ಟಣವನ್ನ ಪೂರ್ತಿ ನಾಶ ಮಾಡಿದ್ರು.+ ಹಾಗಾಗಿ ಅವರು ಆ ಪಟ್ಟಣಕ್ಕೆ ಹೊರ್ಮಾ*+ ಅಂತ ಹೆಸ್ರಿಟ್ರು. 18 ಆಮೇಲೆ ಯೆಹೂದ ಕುಲದವರು ಗಾಜಾ,+ ಅಷ್ಕೆಲೋನ್,+ ಎಕ್ರೋನ್ ಪಟ್ಟಣಗಳನ್ನ,+ ಅವುಗಳಿಗೆ ಸೇರಿದ ಪ್ರದೇಶಗಳನ್ನ ವಶ ಮಾಡ್ಕೊಂಡ್ರು. 19 ಯೆಹೋವ ಯೆಹೂದ ಕುಲದವ್ರ ಜೊತೆ ಇದ್ದದ್ರಿಂದ ಅವರು ಬೆಟ್ಟ ಪ್ರದೇಶವನ್ನ ಸೊತ್ತಾಗಿ ಪಡ್ಕೊಂಡ್ರು. ಆದ್ರೆ ಅಲ್ಲಿನ ತಗ್ಗು ಪ್ರದೇಶದಲ್ಲಿ ವಾಸ ಇದ್ದ ಜನ್ರನ್ನ ಓಡಿಸೋಕೆ ಆಗಲಿಲ್ಲ. ಯಾಕಂದ್ರೆ ಆ ಜನ್ರ ಹತ್ರ ಕಬ್ಬಿಣದ ಕುಡುಗೋಲಿನ ಚಕ್ರಗಳಿರೋ ಯುದ್ಧರಥಗಳು ಇದ್ವು.*+ 20 ಮೋಶೆ ಮಾತು ಕೊಟ್ಟ ಹಾಗೇ ಯೆಹೂದ ಕುಲದವರು ಕಾಲೇಬನಿಗೆ ಹೆಬ್ರೋನನ್ನ ಕೊಟ್ರು.+ ಅವನು ಅನಾಕನ ಮೂರು ಗಂಡು ಮಕ್ಕಳನ್ನ+ ಅಲ್ಲಿಂದ ಓಡಿಸಿಬಿಟ್ಟ.
21 ಆದ್ರೆ ಬೆನ್ಯಾಮೀನ್ಯರು ಯೆರೂಸಲೇಮಲ್ಲಿ ವಾಸವಾಗಿದ್ದ ಯೆಬೂಸಿಯರನ್ನ ಅಲ್ಲಿಂದ ಓಡಿಸಲಿಲ್ಲ. ಹಾಗಾಗಿ ಯೆಬೂಸಿಯರು ಇವತ್ತಿಗೂ ಬೆನ್ಯಾಮೀನ್ಯರ ಜೊತೆ ಯೆರೂಸಲೇಮಲ್ಲೇ ಇದ್ದಾರೆ.+
22 ಅದೇ ಸಮಯದಲ್ಲಿ, ಯೋಸೇಫನ ವಂಶದವರು+ ಬೆತೆಲಿನ ವಿರುದ್ಧ ಯುದ್ಧ ಮಾಡಿದ್ರು. ಅವ್ರ ಜೊತೆ ಯೆಹೋವ ಇದ್ದನು.+ 23 ಯೋಸೇಫನ ವಂಶದವರು ಬೆತೆಲನ್ನ ಗೂಢಚಾರಿಕೆ ಮಾಡ್ತಿದ್ರು. (ಈ ಮುಂಚೆ ಆ ಪಟ್ಟಣಕ್ಕೆ ಲೂಜ್ ಅನ್ನೋ ಹೆಸ್ರಿತ್ತು.)+ 24 ಆ ಪಟ್ಟಣದಿಂದ ಒಬ್ಬ ವ್ಯಕ್ತಿ ಹೊರಗೆ ಬರೋದನ್ನ ಗೂಢಚಾರರು ನೋಡಿ ಅವನಿಗೆ “ದಯವಿಟ್ಟು, ಪಟ್ಟಣದ ಒಳಗೆ ಹೋಗೋಕೆ ನಮಗೆ ದಾರಿ ತೋರಿಸು. ನಿನ್ನನ್ನ ಬಿಟ್ಟುಬಿಡ್ತೀವಿ”* ಅಂದ್ರು. 25 ಆಗ ಆ ವ್ಯಕ್ತಿ ಪಟ್ಟಣದ ಒಳಗೆ ಹೋಗೋಕೆ ದಾರಿ ತೋರಿಸಿದ. ಅವರು ಆ ಪಟ್ಟಣದ ಎಲ್ಲ ಜನ್ರನ್ನ ಕತ್ತಿಯಿಂದ ಕೊಂದ್ರು. ಆದ್ರೆ ಆ ವ್ಯಕ್ತಿಯನ್ನ, ಅವನ ಕುಟುಂಬದವ್ರನ್ನ ಬಿಟ್ಟುಬಿಟ್ರು.+ 26 ಆ ವ್ಯಕ್ತಿ ಹಿತ್ತಿಯರ ಪ್ರದೇಶಕ್ಕೆ ಹೋಗಿ ಅಲ್ಲಿ ಒಂದು ಪಟ್ಟಣ ಕಟ್ಟಿ ಅದಕ್ಕೆ ಲೂಜ್ ಅಂತ ಹೆಸ್ರಿಟ್ಟ. ಆ ಪಟ್ಟಣಕ್ಕೆ ಇವತ್ತಿಗೂ ಅದೇ ಹೆಸ್ರಿದೆ.
27 ಮನಸ್ಸೆ ಕುಲದವರು ಬೇತ್-ಷೆಯಾನ್, ತಾನಕ್,+ ದೋರ್, ಇಬ್ಲೆಯಾಮ್, ಮೆಗಿದ್ದೋ ಪಟ್ಣಣಗಳನ್ನ, ಅದ್ರ ಸುತ್ತಮುತ್ತ ಇದ್ದ ಊರುಗಳನ್ನ ವಶ ಮಾಡ್ಕೊಳ್ಳಲಿಲ್ಲ.+ ಹಾಗಾಗಿ ಈ ಪ್ರದೇಶಗಳಲ್ಲಿ ಕಾನಾನ್ಯರು ಇನ್ನೂ ವಾಸ ಮಾಡ್ತಾ ಇದ್ರು. 28 ಇಸ್ರಾಯೇಲ್ಯರ ಬಲ ಹೆಚ್ಚಾದಾಗ ಅವರು ಕಾನಾನ್ಯರನ್ನ ತಮ್ಮ ಗುಲಾಮರಾಗಿ ಮಾಡ್ಕೊಂಡ್ರು.+ ಆದ್ರೆ ಅವ್ರನ್ನ ಅಲ್ಲಿಂದ ಪೂರ್ತಿಯಾಗಿ ಓಡಿಸಿಬಿಡಲಿಲ್ಲ.+
29 ಎಫ್ರಾಯೀಮ್ಯರು ಕೂಡ ಗೆಜೆರಿನಲ್ಲಿದ್ದ ಕಾನಾನ್ಯರನ್ನ ಓಡಿಸಿಬಿಡಲಿಲ್ಲ. ಹಾಗಾಗಿ ಕಾನಾನ್ಯರು ಅವ್ರ ಜೊತೆ ಅಲ್ಲೇ ವಾಸ ಮಾಡ್ತಾ ಇದ್ರು.+
30 ಜೆಬುಲೂನ್ಯರು ಸಹ ಕಿಟ್ರೋನ್ ಮತ್ತು ನಹಲೋಲಿನ+ ಜನ್ರಾದ ಕಾನಾನ್ಯರನ್ನ ಓಡಿಸಿಬಿಡಲಿಲ್ಲ. ಹಾಗಾಗಿ ಕಾನಾನ್ಯರು ಅವ್ರ ಗುಲಾಮರಾಗಿ ಅಲ್ಲೇ ವಾಸ ಮಾಡ್ತಾ ಇದ್ರು.+
31 ಅಶೇರ್ ಕುಲದವರು ಅಕ್ಕೋ, ಸೀದೋನ್,+ ಅಹ್ಲಾಬ್, ಅಕ್ಜೀಬ್,+ ಹೆಲ್ಬಾ, ಅಫೀಕ್+ ಮತ್ತು ರೆಹೋಬಿನ+ ಜನ್ರ ಜೊತೆನೇ ವಾಸ ಮಾಡಿದ್ರು. 32 ಯಾಕಂದ್ರೆ ಅಶೇರಿನ ಜನರು ಆ ಪ್ರದೇಶಗಳಲ್ಲಿದ್ದ ಕಾನಾನ್ಯರನ್ನ ಅಲ್ಲಿಂದ ಓಡಿಸಿಬಿಡಲಿಲ್ಲ.
33 ನಫ್ತಾಲಿ ಕುಲದವರು ಬೇತ್-ಷೆಮೆಷ್ ಮತ್ತು ಬೇತನಾತಿನಲ್ಲಿ+ ವಾಸವಾಗಿದ್ದ ಜನ್ರನ್ನ ಓಡಿಸಿಬಿಡಲಿಲ್ಲ. ಆ ಪ್ರದೇಶಗಳಲ್ಲಿದ್ದ ಕಾನಾನ್ಯರ ಜೊತೆನೇ ಅವರು ವಾಸ ಮಾಡಿದ್ರು.+ ಬೇತ್-ಷೆಮೆಷ್ ಮತ್ತು ಬೇತನಾತಿನ ಜನ್ರನ್ನ ಗುಲಾಮರಾಗಿ ಮಾಡ್ಕೊಂಡ್ರು.
34 ಅಮೋರಿಯರು ದಾನ್ ಕುಲದವ್ರನ್ನ ಬೆಟ್ಟ ಪ್ರದೇಶದಲ್ಲೇ ಇರೋ ಹಾಗೆ ಮಾಡಿ, ತಗ್ಗು ಪ್ರದೇಶಕ್ಕೆ ಹೋಗೋಕೆ ಬಿಡಲಿಲ್ಲ.+ 35 ಹೀಗೆ ಅಮೋರಿಯರು ಹರ್ಹೆರೆಸ್ ಬೆಟ್ಟದಲ್ಲಿ, ಅಯ್ಯಾಲೋನ್+ ಮತ್ತು ಶಾಲ್ಬೀಮ್+ ಅನ್ನೋ ಪಟ್ಟಣಗಳಲ್ಲೇ ವಾಸ ಮಾಡ್ತಾ ಇದ್ರು. ಆದ್ರೆ ಯೋಸೇಫನ ವಂಶದವ್ರ ಬಲ ಹೆಚ್ಚಾದಾಗ* ಅವರು ಅಮೋರಿಯರನ್ನ ತಮ್ಮ ಗುಲಾಮರಾಗಿ ಮಾಡ್ಕೊಂಡ್ರು. 36 ಅಮೋರಿಯರ ಪ್ರದೇಶಗಳು ಅಕ್ರಬ್ಬೀಮಿಗೆ+ ಹತ್ತಿ ಹೋಗೋ ದಾರಿಯಿಂದ ಹಿಡಿದು ಮೇಲೆ ಸೆಲದ ತನಕ ಇತ್ತು.