ಎರಡನೇ ಅರಸು
15 ಇಸ್ರಾಯೇಲ್ ರಾಜ ಯಾರೊಬ್ಬಾಮ* ಆಳ್ತಿದ್ದ 27ನೇ ವರ್ಷದಲ್ಲಿ ಯೆಹೂದದ ರಾಜ ಅಮಚ್ಯನ+ ಮಗ ಅಜರ್ಯ*+ ರಾಜನಾದ.+ 2 ರಾಜನಾದಾಗ ಅವನಿಗೆ 16 ವರ್ಷ. ಅವನು ಯೆರೂಸಲೇಮಿಂದ 52 ವರ್ಷ ಆಳಿದ. ಅವನ ತಾಯಿ ಹೆಸ್ರು ಯೆಕೊಲ್ಯ. ಅವಳು ಯೆರೂಸಲೇಮಿನವಳು. 3 ಅವನು ತನ್ನ ತಂದೆ ಅಮಚ್ಯ ಮಾಡಿದ ತರಾನೇ ಯೆಹೋವನಿಗೆ ಇಷ್ಟ ಆಗೋದನ್ನೇ ಮಾಡ್ತಾ ಇದ್ದ.+ 4 ಆದ್ರೆ ಅವನು ಪೂಜಾ ಸ್ಥಳಗಳನ್ನ ತೆಗೆದುಹಾಕಲಿಲ್ಲ.+ ಜನ ಇನ್ನೂ ಆ ಸ್ಥಳಗಳಲ್ಲಿ ಬಲಿಗಳನ್ನ ಅರ್ಪಿಸಿ ಬಲಿಯ ಹೊಗೆ ಏರೋ ತರ ಮಾಡ್ತಿದ್ರು.+ 5 ರಾಜ ಅನಾರೋಗ್ಯದಿಂದ ಬಳಲೋ ತರ ಯೆಹೋವ ಮಾಡಿದನು. ಅವನಿಗೆ ಸಾಯೋ ತನಕ ಕುಷ್ಠರೋಗ ಇತ್ತು.+ ಹಾಗಾಗಿ ಅವನು ಪ್ರತ್ಯೇಕವಾಗಿ ಬೇರೆ ಮನೇಲಿ ಇದ್ದ.+ ಆ ಸಮಯದಲ್ಲಿ ಅವನ ಮಗ ಯೋತಾಮ+ ಅರಮನೆ ನೋಡ್ಕೊಳ್ತಾ ದೇಶದ ಪ್ರಜೆಗಳಿಗೆ ನ್ಯಾಯತೀರಿಸ್ತಿದ್ದ.+ 6 ಅಜರ್ಯನ+ ಉಳಿದ ಜೀವನಚರಿತ್ರೆ, ಅವನು ಮಾಡಿದ ಎಲ್ಲ ಕೆಲಸಗಳ ಬಗ್ಗೆ ಯೆಹೂದದ ರಾಜರ ಕಾಲದ ಇತಿಹಾಸ ಪುಸ್ತಕದಲ್ಲಿ ಇದೆ. 7 ಕೊನೆಗೆ ಅಜರ್ಯ ತೀರಿಹೋದ.+ ಅವನನ್ನ ದಾವೀದಪಟ್ಟಣದಲ್ಲಿ ಸಮಾಧಿ ಮಾಡಿದ್ರು. ಅವನ ನಂತ್ರ ಅವನ ಮಗ ಯೋತಾಮ ರಾಜನಾದ.
8 ಯೆಹೂದದ ರಾಜ ಅಜರ್ಯ+ ಆಳ್ತಿದ್ದ 38ನೇ ವರ್ಷದಲ್ಲಿ ಯಾರೊಬ್ಬಾಮನ ಮಗ ಜೆಕರ್ಯ+ ಸಮಾರ್ಯದಲ್ಲಿ ಇಸ್ರಾಯೇಲಿನ ರಾಜನಾದ. ಅವನು ಆರು ತಿಂಗಳು ಆಳಿದ. 9 ಅವನು ತನ್ನ ಪೂರ್ವಜರ ತರಾನೇ ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದನ್ನೇ ಮಾಡಿದ. ಅವನು ಪಾಪ ಮಾಡೋದನ್ನ ಬಿಡಲಿಲ್ಲ. ನೆಬಾಟನ ಮಗ ಯಾರೊಬ್ಬಾಮ ಇಸ್ರಾಯೇಲ್ಯರಿಂದ ಮಾಡಿಸಿದ ಪಾಪಗಳನ್ನೇ ಅವನೂ ಮಾಡಿಸಿದ.+ 10 ಯಾಬೇಷನ ಮಗ ಶಲ್ಲೂಮ ಜೆಕರ್ಯನ ವಿರುದ್ಧ ಸಂಚು ಮಾಡಿ ಇಬ್ಲೆಯಾಮಿನಲ್ಲಿ+ ಅವನನ್ನ ಕೊಂದುಹಾಕಿದ.+ ಅವನನ್ನ ಸಾಯಿಸಿದ ಮೇಲೆ ಅವನ ಸ್ಥಾನದಲ್ಲಿ ಶಲ್ಲೂಮ ರಾಜನಾದ. 11 ಜೆಕರ್ಯನ ಉಳಿದ ಜೀವನಚರಿತ್ರೆ ಬಗ್ಗೆ ಇಸ್ರಾಯೇಲ್ ರಾಜರ ಕಾಲದ ಇತಿಹಾಸ ಪುಸ್ತಕದಲ್ಲಿ ಇದೆ. 12 ಯೆಹೋವ ಯೇಹುಗೆ “ನಿನ್ನ ಸಂತಾನದ ನಾಲ್ಕು ತಲೆಮಾರುಗಳು+ ಇಸ್ರಾಯೇಲಿನ ಸಿಂಹಾಸನದ ಮೇಲೆ ಕೂತ್ಕೊಳ್ಳುತ್ತೆ”+ ಅಂತ ಕೊಟ್ಟ ಮಾತು ಈ ರೀತಿ ನಿಜ ಆಯ್ತು.
13 ಯೆಹೂದದ ರಾಜ ಉಜ್ಜೀಯ+ ಆಳ್ತಿದ್ದ 39ನೇ ವರ್ಷದಲ್ಲಿ ಯಾಬೇಷನ ಮಗ ಶಲ್ಲೂಮ ರಾಜನಾದ. ಅವನು ಸಮಾರ್ಯದಿಂದ ಒಂದು ತಿಂಗಳು ಆಳಿದ. 14 ಆಮೇಲೆ ಗಾದಿಯ ಮಗ ಮೆನಹೇಮ ತಿರ್ಚದಿಂದ+ ಸಮಾರ್ಯಕ್ಕೆ ಬಂದು ಯಾಬೇಷನ ಮಗ ಶಲ್ಲೂಮನನ್ನ+ ಅಲ್ಲೇ ಕೊಂದುಹಾಕಿದ. ಅವನು ತೀರಿಹೋದ ಮೇಲೆ ಅವನ ಸ್ಥಾನದಲ್ಲಿ ಮೆನಹೇಮ ರಾಜನಾದ. 15 ಶಲ್ಲೂಮನ ಉಳಿದ ಜೀವನಚರಿತ್ರೆ ಬಗ್ಗೆ, ಅವನು ಮಾಡಿದ ಸಂಚಿನ ಬಗ್ಗೆ ಇಸ್ರಾಯೇಲ್ ರಾಜರ ಕಾಲದ ಇತಿಹಾಸ ಪುಸ್ತಕದಲ್ಲಿ ಇದೆ. 16 ನಂತ್ರ ಮೆನಹೇಮ ತಿರ್ಚದಿಂದ ತಿಪ್ಸಹುವಿಗೆ ಬಂದು ಅಲ್ಲಿದ್ದ ಎಲ್ಲ ಜನ್ರನ್ನ, ಅದ್ರ ಸುತ್ತಮುತ್ತ ಇದ್ದ ಪ್ರಾಂತ್ಯಗಳಲ್ಲಿದ್ದ ಜನ್ರನ್ನ ನಾಶಮಾಡಿದ. ಯಾಕಂದ್ರೆ ಆ ಪಟ್ಟಣದವರು ಅವನು ಬಂದಾಗ ಬಾಗಿಲು ತೆರಿಲಿಲ್ಲ. ಅವನು ಆ ಪಟ್ಟಣದವ್ರನ್ನ ನಾಶ ಮಾಡಿ, ಅದ್ರಲ್ಲಿದ್ದ ಗರ್ಭಿಣಿ ಸ್ತ್ರೀಯರ ಹೊಟ್ಟೆಯನ್ನ ಸೀಳಿಬಿಟ್ಟ.
17 ಯೆಹೂದದ ರಾಜ ಅಜರ್ಯ ಆಳ್ತಿದ್ದ 39ನೇ ವರ್ಷದಲ್ಲಿ ಗಾದಿಯ ಮಗ ಮೆನಹೇಮ ಇಸ್ರಾಯೇಲಿನ ರಾಜನಾದ. ಅವನು ಸಮಾರ್ಯದಿಂದ 10 ವರ್ಷ ಆಳಿದ. 18 ಅವನು ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದನ್ನೇ ಮಾಡ್ತಾ ಇದ್ದ. ಅವನು ತನ್ನ ಪಾಪಗಳನ್ನ ಬಿಡಲಿಲ್ಲ. ತಾನು ಬದುಕಿರುವಷ್ಟು ಕಾಲ ನೆಬಾಟನ ಮಗ ಯಾರೊಬ್ಬಾಮ ಇಸ್ರಾಯೇಲ್ಯರಿಂದ ಮಾಡಿಸಿದ ಪಾಪಗಳನ್ನೇ ಮಾಡಿಸಿದ.+ 19 ಅಶ್ಶೂರ್ಯರ ರಾಜ ಪೂಲ+ ಇಸ್ರಾಯೇಲ್ ದೇಶದ ಮೇಲೆ ದಾಳಿ ಮಾಡೋಕೆ ಬಂದ. ಮೆನಹೇಮ ರಾಜ್ಯದ ಮೇಲೆ ತನ್ನ ಹಿಡಿತವನ್ನ ಸಾಧಿಸೋಕೆ ಪೂಲನಿಗೆ 1,000 ತಲಾಂತು* ಬೆಳ್ಳಿ ಕೊಟ್ಟ.+ 20 ಮೆನಹೇಮ ಇಸ್ರಾಯೇಲಲ್ಲಿ ಹೆಸ್ರುವಾಸಿಯಾದ ಶ್ರೀಮಂತ ವ್ಯಕ್ತಿಗಳಿಂದ ಆ ಬೆಳ್ಳಿಯನ್ನ ವಸೂಲಿ ಮಾಡಿದ.+ ಅವನು ಒಬ್ಬೊಬ್ರಿಂದ 50 ಬೆಳ್ಳಿ ಶೆಕೆಲನ್ನ* ವಸೂಲಿ ಮಾಡಿ ಅಶ್ಶೂರದ ರಾಜನಿಗೆ ಕೊಟ್ಟ. ಆಗ ಅಶ್ಶೂರದ ರಾಜ ದೇಶದ ಮೇಲೆ ದಾಳಿ ಮಾಡದೆ ವಾಪಸ್ ಹೋದ. 21 ಮೆನಹೇಮನ+ ಉಳಿದ ಜೀವನಚರಿತ್ರೆ ಬಗ್ಗೆ, ಅವನು ಮಾಡಿದ ಎಲ್ಲ ಕೆಲಸಗಳ ಬಗ್ಗೆ ಇಸ್ರಾಯೇಲ್ ರಾಜರ ಕಾಲದ ಇತಿಹಾಸ ಪುಸ್ತಕದಲ್ಲಿ ಇದೆ. 22 ಕೊನೆಗೆ ಮೆನಹೇಮ ತೀರಿಹೋದ. ಅವನ ನಂತ್ರ ಅವನ ಮಗ ಪೆಕಹ್ಯ ರಾಜನಾದ.
23 ಯೆಹೂದದ ರಾಜ ಅಜರ್ಯ ಆಳ್ತಿದ್ದ 50ನೇ ವರ್ಷದಲ್ಲಿ ಮೆನಹೇಮನ ಮಗ ಪೆಕಹ್ಯ ಸಮಾರ್ಯದಲ್ಲಿ ಇಸ್ರಾಯೇಲಿನ ರಾಜನಾದ. ಅವನು ಎರಡು ವರ್ಷ ಆಳಿದ. 24 ಅವನು ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದನ್ನೇ ಮಾಡ್ತಾ ಹೋದ. ಅವನು ತನ್ನ ಪಾಪಗಳನ್ನ ಬಿಡಲಿಲ್ಲ. ನೆಬಾಟನ ಮಗ ಯಾರೊಬ್ಬಾಮ ಇಸ್ರಾಯೇಲ್ಯರಿಂದ ಮಾಡಿಸಿದ ಪಾಪಗಳನ್ನೇ ಅವನೂ ಮಾಡಿಸಿದ.+ 25 ರೆಮಲ್ಯನ ಮಗ ಪೆಕಹ+ ಸೇನಾಪತಿಯಾಗಿದ್ದ. ಅವನು ಸಂಚು ಮಾಡಿ ಸಮಾರ್ಯದಲ್ಲಿದ್ದ ಅರಮನೆಯ ಭದ್ರ ಕೋಟೆಯಲ್ಲಿ ಅರ್ಗೋಬ್ ಮತ್ತು ಅರ್ಯೇ ಅನ್ನುವವರ ಜೊತೆ ಸೇರಿ ಪೆಕಹ್ಯನನ್ನ ಸಾಯಿಸಿದ. ಅಷ್ಟೇ ಅಲ್ಲ ಪೆಕಹನ ಜೊತೆ ಗಿಲ್ಯಾದಿನ 50 ಗಂಡಸ್ರಿದ್ರು. ಪೆಕಹ್ಯನನ್ನ ಕೊಂದ ಮೇಲೆ ಅವನ ಸ್ಥಾನದಲ್ಲಿ ಪೆಕಹ ರಾಜನಾದ. 26 ಪೆಕಹ್ಯನ ಉಳಿದ ಜೀವನಚರಿತ್ರೆ ಬಗ್ಗೆ, ಅವನು ಮಾಡಿದ ಎಲ್ಲ ಕೆಲಸಗಳ ಬಗ್ಗೆ ಇಸ್ರಾಯೇಲ್ ರಾಜರ ಕಾಲದ ಇತಿಹಾಸ ಪುಸ್ತಕದಲ್ಲಿ ಇದೆ.
27 ಯೆಹೂದದ ರಾಜ ಅಜರ್ಯ ಆಳ್ತಿದ್ದ 52ನೇ ವರ್ಷದಲ್ಲಿ ರೆಮಲ್ಯನ ಮಗ ಪೆಕಹ+ ಸಮಾರ್ಯದಲ್ಲಿ ಇಸ್ರಾಯೇಲಿನ ರಾಜನಾದ. ಅವನು 20 ವರ್ಷ ಆಳಿದ. 28 ಅವನು ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದನ್ನೇ ಮಾಡ್ತಿದ್ದ. ಅವನು ತನ್ನ ಪಾಪಗಳನ್ನ ಬಿಡಲಿಲ್ಲ. ನೆಬಾಟನ ಮಗ ಯಾರೊಬ್ಬಾಮ ಇಸ್ರಾಯೇಲ್ಯರಿಂದ ಮಾಡಿಸಿದ ಪಾಪಗಳನ್ನೇ ಅವನೂ ಮಾಡಿಸಿದ.+ 29 ಇಸ್ರಾಯೇಲ್ ರಾಜ ಪೆಕಹನ ಕಾಲದಲ್ಲಿ ಅಶ್ಶೂರ್ಯರ ರಾಜ ತಿಗ್ಲತ್-ಪಿಲೆಸೆರ+ ಇಯ್ಯೋನ್, ಆಬೇಲ್-ಬೇತ್-ಮಾಕಾ,+ ಯಾನೋಹ, ಕೆದೆಷ್,+ ಹಾಚೋರ್, ಗಿಲ್ಯಾದ್+ ಮತ್ತು ಗಲಿಲಾಯ ಅಂದ್ರೆ ನಫ್ತಾಲಿಯ+ ಇಡೀ ಪ್ರದೇಶದ ಮೇಲೆ ದಾಳಿ ಮಾಡಿ ಅವುಗಳನ್ನ ವಶ ಮಾಡ್ಕೊಂಡ. ಅವನು ಆ ಪ್ರದೇಶಗಳ ಜನ್ರನ್ನ ಅಶ್ಶೂರ್ ದೇಶಕ್ಕೆ ಕೈದಿಗಳನ್ನಾಗಿ ಕರ್ಕೊಂಡು ಹೋದ.+ 30 ಆಮೇಲೆ ಏಲಾನ ಮಗ ಹೋಷೇಯ+ ರೆಮಲ್ಯನ ಮಗ ಪೆಕಹನ ವಿರುದ್ಧ ಸಂಚು ಮಾಡಿ ಅವನನ್ನ ಕೊಂದುಹಾಕಿದ. ಹೀಗೆ ಉಜ್ಜೀಯನ ಮಗ ಯೋತಾಮ+ ಆಳ್ತಿದ್ದ 20ನೇ ವರ್ಷದಲ್ಲಿ ಪೆಕಹನ ಸ್ಥಾನದಲ್ಲಿ ಹೋಷೇಯ ರಾಜನಾದ. 31 ಪೆಕಹನ ಉಳಿದ ಜೀವನಚರಿತ್ರೆ ಬಗ್ಗೆ, ಅವನು ಮಾಡಿದ ಎಲ್ಲ ಕೆಲಸಗಳ ಬಗ್ಗೆ ಇಸ್ರಾಯೇಲ್ ರಾಜರ ಕಾಲದ ಇತಿಹಾಸ ಪುಸ್ತಕದಲ್ಲಿ ಇದೆ.
32 ಇಸ್ರಾಯೇಲ್ ರಾಜ ರೆಮಲ್ಯನ ಮಗ ಪೆಕಹ ಆಳ್ತಿದ್ದ ಎರಡ್ನೇ ವರ್ಷದಲ್ಲಿ ಯೆಹೂದದ ರಾಜ ಉಜ್ಜೀಯನ+ ಮಗ ಯೋತಾಮ+ ರಾಜನಾದ. 33 ಅವನು ರಾಜನಾದಾಗ ಅವನಿಗೆ 25 ವರ್ಷ. ಅವನು ಯೆರೂಸಲೇಮಿಂದ 16 ವರ್ಷ ಆಳಿದ. ಅವನ ತಾಯಿ ಹೆಸ್ರು ಯೆರೂಷಾ. ಅವಳು ಚಾದೋಕನ ಮಗಳು.+ 34 ಯೋತಾಮ ತನ್ನ ತಂದೆ ಉಜ್ಜೀಯ ಮಾಡಿದ ತರಾನೇ ಯೆಹೋವನಿಗೆ ಇಷ್ಟ ಆಗೋದನ್ನೇ ಮಾಡ್ತಿದ್ದ.+ 35 ಆದ್ರೆ ಅವನು ಪೂಜಾ ಸ್ಥಳಗಳನ್ನ ತೆಗೆದುಹಾಕಲಿಲ್ಲ. ಜನ ಇನ್ನೂ ಆ ಸ್ಥಳಗಳಲ್ಲಿ ಬಲಿಗಳನ್ನ ಅರ್ಪಿಸಿ ಬಲಿಯ ಹೊಗೆ ಏರೋ ತರ ಮಾಡ್ತಿದ್ರು.+ ಯೋತಾಮನೇ ಯೆಹೋವನ ಆಲಯದ ‘ಮೇಲಿನ ಬಾಗಿಲನ್ನ’ ಮಾಡಿಸಿದ.+ 36 ಯೋತಾಮನ ಉಳಿದ ಜೀವನಚರಿತ್ರೆ ಬಗ್ಗೆ, ಅವನು ಮಾಡಿದ ಕೆಲಸಗಳ ಬಗ್ಗೆ ಯೆಹೂದದ ರಾಜರ ಕಾಲದ ಇತಿಹಾಸ ಪುಸ್ತಕದಲ್ಲಿ ಇದೆ. 37 ಆ ಕಾಲದಲ್ಲಿ ಯೆಹೋವ ಅರಾಮ್ಯರ ರಾಜ ರೆಚೀನನನ್ನ ಮತ್ತು ರೆಮಲ್ಯನ ಮಗ ಪೆಕಹನನ್ನ+ ಯೆಹೂದದ ವಿರುದ್ಧ ದಾಳಿ ಮಾಡೋಕೆ ಕಳಿಸಿದ.+ 38 ಕೊನೆಗೆ ಯೋತಾಮ ತೀರಿಹೋದ. ಅವನನ್ನ ಅವನ ಪೂರ್ವಜರ ಪಟ್ಟಣವಾಗಿದ್ದ ದಾವೀದಪಟ್ಟಣದಲ್ಲಿ ಸಮಾಧಿ ಮಾಡಿದ್ರು. ಅವನ ಮಗ ಆಹಾಜ ಅವನ ಸ್ಥಾನದಲ್ಲಿ ರಾಜನಾದ.