ಧರ್ಮೋಪದೇಶಕಾಂಡ
16 ಅಬೀಬ್* ತಿಂಗಳು ನಿಮಗೆ ತುಂಬ ಪ್ರಾಮುಖ್ಯ ಅನ್ನೋದನ್ನ ಮರಿಬೇಡಿ. ನಿಮ್ಮ ದೇವರಾದ ಯೆಹೋವ ನಿಮ್ಮನ್ನ ರಾತ್ರಿ ಹೊತ್ತಲ್ಲಿ ಈಜಿಪ್ಟಿಂದ ಬಿಡಿಸ್ಕೊಂಡು ಬಂದಿದ್ದು ಆ ತಿಂಗಳಲ್ಲೇ ಅಲ್ವಾ?+ ಹಾಗಾಗಿ ಆ ತಿಂಗಳಲ್ಲಿ ನಿಮ್ಮ ದೇವರಾದ ಯೆಹೋವನ ಗೌರವಕ್ಕಾಗಿ ಪಸ್ಕ ಹಬ್ಬ ಆಚರಿಸಬೇಕು.+ 2 ನಿಮ್ಮ ದೇವರಾದ ಯೆಹೋವನಿಗೆ ಪಸ್ಕದ ಬಲಿ ಕೊಡೋಕೆ+ ನಿಮ್ಮ ಆಡು-ಕುರಿ, ಹೋರಿ-ದನಗಳಲ್ಲಿ+ ಒಂದು ಪ್ರಾಣಿಯನ್ನ ಆರಿಸ್ಕೊಳ್ಳಬೇಕು. ಅದನ್ನ ಯೆಹೋವ ತನ್ನ ಹೆಸ್ರಿನ ಗೌರವಕ್ಕಾಗಿ ಆರಿಸ್ಕೊಳ್ಳೋ ಸ್ಥಳದಲ್ಲಿ ಅರ್ಪಿಸಬೇಕು.+ 3 ಆ ಮಾಂಸದ ಜೊತೆ ಹುಳಿ ಸೇರಿಸಿರೋ ಯಾವುದನ್ನೂ ತಿನ್ನಬಾರದು.+ ಅವತ್ತಿಂದ ಏಳು ದಿನ ತನಕ ಹುಳಿ ಇಲ್ಲದ ರೊಟ್ಟಿಗಳನ್ನ ತಿನ್ನಬೇಕು. ಈಜಿಪ್ಟಿಂದ ಅವಸರ ಅವಸರವಾಗಿ+ ಹೊರಟ ದಿನ ಹುಳಿ ಇಲ್ಲದ ರೊಟ್ಟಿಗಳನ್ನ ತಿಂದ ಹಾಗೇ ಈಗ್ಲೂ ಹುಳಿ ಇಲ್ಲದ ರೊಟ್ಟಿಗಳನ್ನೇ ತಿನ್ನಬೇಕು. ಅವು ಈಜಿಪ್ಟಲ್ಲಿ ಪಟ್ಟ ಕಷ್ಟನ ನಿಮಗೆ ನೆನಪಿಸುತ್ತೆ. ಈಜಿಪ್ಟಿಂದ ಹೊರಗೆ ಬಂದ ದಿನವನ್ನ ಜೀವನಪೂರ್ತಿ ನೆನಪಲ್ಲಿಡೋಕೆ ಹೀಗೆ ಮಾಡಬೇಕು.+ 4 ಆ ಏಳು ದಿನ ನಿಮ್ಮ ಪ್ರದೇಶದಲ್ಲೆಲ್ಲೂ ಹುಳಿ ಸೇರಿಸಿದ ಹಿಟ್ಟು ಇರಬಾರದು.+ ಮೊದಲ್ನೇ ದಿನ ಸಂಜೆ ಅರ್ಪಿಸಿದ ಬಲಿಯ ಮಾಂಸದಲ್ಲಿ ಸ್ವಲ್ಪನೂ ಮಾರನೇ ದಿನ ಬೆಳಿಗ್ಗೆ ತನಕ ಇಡಬಾರದು.+ 5 ನಿಮ್ಮ ದೇವರಾದ ಯೆಹೋವ ನಿಮಗೆ ಕೊಡೋ ದೇಶದಲ್ಲಿ ಪಸ್ಕದ ಪ್ರಾಣಿಯನ್ನ ನಿಮಗೆ ಇಷ್ಟಬಂದ ಪಟ್ಟಣದಲ್ಲಿ ಬಲಿ ಅರ್ಪಿಸಬಾರದು. 6 ಅದನ್ನ ಯೆಹೋವ ತನ್ನ ಹೆಸ್ರಿನ ಗೌರವಕ್ಕಾಗಿ ಆರಿಸ್ಕೊಳ್ಳೋ ಸ್ಥಳದಲ್ಲೇ ಅರ್ಪಿಸಬೇಕು. ನೀವು ಈಜಿಪ್ಟನ್ನ ಬಿಟ್ಟು ಬಂದ ದಿನ ಮಾಡಿದ ಹಾಗೇ, ಸಂಜೆ ಸೂರ್ಯ ಮುಳುಗಿದ ತಕ್ಷಣ+ ಪಸ್ಕದ ಪ್ರಾಣಿಯನ್ನ ಅರ್ಪಿಸಬೇಕು. 7 ಅದನ್ನ ನಿಮ್ಮ ದೇವರಾದ ಯೆಹೋವ ಆರಿಸ್ಕೊಳ್ಳೋ ಸ್ಥಳದಲ್ಲಿ+ ಬೆಂಕಿಯಿಂದ ಸುಟ್ಟು ತಿನ್ನಬೇಕು.+ ಬೆಳಿಗ್ಗೆ ನಿಮ್ಮನಿಮ್ಮ ಡೇರೆಗಳಿಗೆ ವಾಪಸ್ ಹೋಗಬಹುದು. 8 ಆರು ದಿನ ಹುಳಿ ಇಲ್ಲದ ರೊಟ್ಟಿಗಳನ್ನ ತಿನ್ನಬೇಕು. ಏಳನೇ ದಿನ ನಿಮ್ಮ ದೇವರಾದ ಯೆಹೋವನ ಆರಾಧನೆಗಾಗಿ ನೀವು ಕೂಡಿ ಬರಬೇಕಾದ ವಿಶೇಷ ದಿನ. ಆ ದಿನ ಯಾವ ಕೆಲಸನೂ ಮಾಡಬಾರದು.+
9 ಕೊಯ್ಲಿಗೆ ಸಿದ್ಧವಾಗಿರೋ ಬೆಳೆನ ಕುಡುಗೋಲಿಂದ* ಕೊಯ್ಯೋಕೆ ಶುರು ಮಾಡೋ ದಿನದಿಂದ ಏಳು ವಾರಗಳನ್ನ ಲೆಕ್ಕ ಮಾಡಬೇಕು.+ 10 ಆ ಏಳು ವಾರಗಳಾದ ಮೇಲೆ ನಿಮ್ಮ ದೇವರಾದ ಯೆಹೋವನ ಗೌರವಕ್ಕಾಗಿ ವಾರಗಳ ಹಬ್ಬ ಆಚರಿಸಬೇಕು.+ ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಎಷ್ಟರ ಮಟ್ಟಿಗೆ ಆಶೀರ್ವಾದ ಮಾಡಿದ್ದಾನೋ ಅದಕ್ಕೆ ತಕ್ಕ ಹಾಗೆ ಸ್ವಇಷ್ಟದ ಕಾಣಿಕೆ ತರಬೇಕು.+ 11 ನಿಮ್ಮ ದೇವರಾದ ಯೆಹೋವ ತನ್ನ ಹೆಸ್ರಿನ ಗೌರವಕ್ಕಾಗಿ ಆರಿಸ್ಕೊಳ್ಳೋ ಸ್ಥಳದಲ್ಲಿ ನೀವು, ನಿಮ್ಮ ಗಂಡುಹೆಣ್ಣು ಮಕ್ಕಳು, ದಾಸದಾಸಿಯರು, ನಿಮ್ಮ ಪಟ್ಟಣಗಳಲ್ಲಿ ವಾಸಿಸೋ ಲೇವಿಯರು, ನಿಮ್ಮ ಮಧ್ಯ ವಾಸಿಸೋ ವಿದೇಶಿಯರು, ಅನಾಥ ಮಕ್ಕಳು,* ವಿಧವೆಯರು ಎಲ್ರೂ ನಿಮ್ಮ ದೇವರಾದ ಯೆಹೋವನ ಮುಂದೆ ಸಂತೋಷ ಸಂಭ್ರಮದಿಂದ ಇರಬೇಕು.+ 12 ನೀವು ಈಜಿಪ್ಟಲ್ಲಿ ಗುಲಾಮರಾಗಿ ಇದ್ರಿ ಅನ್ನೋದನ್ನ ನೆನಪು ಮಾಡ್ಕೊಳ್ಳಿ.+ ಈ ಎಲ್ಲ ನಿಯಮಗಳನ್ನ ಪಾಲಿಸಿ, ಅದೇ ಪ್ರಕಾರ ನಡೀರಿ.
13 ನಿಮ್ಮ ಕಣದಿಂದ ಬೆಳೆಯನ್ನ, ದ್ರಾಕ್ಷಿತೊಟ್ಟಿಯಿಂದ ದ್ರಾಕ್ಷಾಮದ್ಯವನ್ನ, ಎಣ್ಣೆ ಗಾಣದಿಂದ ಎಣ್ಣೆನ ಕೂಡಿಸಿದಾಗ ಏಳು ದಿನ ಚಪ್ಪರಗಳ* ಹಬ್ಬ* ಆಚರಿಸಬೇಕು.+ 14 ಆ ಸಮಯದಲ್ಲಿ ನೀವು, ನಿಮ್ಮ ಗಂಡುಹೆಣ್ಣು ಮಕ್ಕಳು, ದಾಸದಾಸಿಯರು, ನಿಮ್ಮ ಪಟ್ಟಣಗಳಲ್ಲಿ ವಾಸಿಸೋ ಲೇವಿಯರು, ವಿದೇಶಿಯರು, ಅನಾಥ ಮಕ್ಕಳು, ವಿಧವೆಯರು ಎಲ್ರೂ ಸಂತೋಷ ಸಂಭ್ರಮದಿಂದ ಇರಬೇಕು.+ 15 ಯೆಹೋವ ಆರಿಸ್ಕೊಳ್ಳೋ ಸ್ಥಳದಲ್ಲಿ ಆ ಹಬ್ಬವನ್ನ ನಿಮ್ಮ ದೇವರಾದ ಯೆಹೋವನ ಗೌರವಕ್ಕಾಗಿ ಏಳು ದಿನ ಆಚರಿಸಬೇಕು.+ ನಿಮ್ಮ ದೇವರಾದ ಯೆಹೋವ ನಿಮ್ಮ ಬೆಳೆಗಳನ್ನ, ನೀವು ಮಾಡೋ ಎಲ್ಲ ಕೆಲಸಗಳನ್ನ ಆಶೀರ್ವದಿಸೋದ್ರಿಂದ+ ತುಂಬ ಸಂತೋಷವಾಗಿ ಇರ್ತಿರ.+
16 ವರ್ಷದಲ್ಲಿ ಮೂರು ಸಲ ಅಂದ್ರೆ ಹುಳಿ ಇಲ್ಲದ ರೊಟ್ಟಿ ಹಬ್ಬ,+ ವಾರಗಳ ಹಬ್ಬ,+ ಚಪ್ಪರಗಳ ಹಬ್ಬದ+ ಸಮಯದಲ್ಲಿ ನಿಮ್ಮಲ್ಲಿರೋ ಗಂಡಸ್ರೆಲ್ಲ ನಿಮ್ಮ ದೇವರಾದ ಯೆಹೋವ ಆರಿಸ್ಕೊಳ್ಳೋ ಸ್ಥಳದಲ್ಲಿ ಆತನ ಮುಂದೆ ಬರಬೇಕು. ಒಬ್ಬ ಕೂಡ ಕೈಯಲ್ಲಿ ಕಾಣಿಕೆ ಇಲ್ಲದೆ ಯೆಹೋವನ ಮುಂದೆ ಬರಬಾರದು. 17 ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಎಷ್ಟು ಆಶೀರ್ವಾದ ಮಾಡಿದ್ದಾನೋ ಅದಕ್ಕೆ ತಕ್ಕ ಹಾಗೆ ನಿಮ್ಮಲ್ಲಿ ಪ್ರತಿಯೊಬ್ಬ ಉಡುಗೊರೆ ತರಬೇಕು.+
18 ನೀವು ಪ್ರತಿಯೊಂದು ಕುಲಕ್ಕೋಸ್ಕರ ನ್ಯಾಯಾಧೀಶರನ್ನ+ ಅಧಿಕಾರಿಗಳನ್ನ ನೇಮಿಸಬೇಕು. ನಿಮ್ಮ ದೇವರಾಗಿರೋ ಯೆಹೋವ ಕೊಡೋ ಎಲ್ಲ ಪಟ್ಟಣಗಳಲ್ಲೂ ಹೀಗೆ ಮಾಡಬೇಕು. ಅವರು ಜನ್ರಿಗೆ ನ್ಯಾಯವಾಗಿ ತೀರ್ಪು ಮಾಡಬೇಕು. 19 ನ್ಯಾಯವನ್ನ ತಿರುಚಬಾರದು,+ ಭೇದಭಾವ ಮಾಡಬಾರದು.+ ಲಂಚ ತಗೊಳ್ಳಬಾರದು. ಯಾಕಂದ್ರೆ ಲಂಚ ವಿವೇಕಿಯ ಕಣ್ಣುಗಳನ್ನ ಕುರುಡು ಮಾಡುತ್ತೆ.+ ನೀತಿವಂತ ಮಾತು ಬದಲಾಯಿಸೋ ತರ ಮಾಡುತ್ತೆ. 20 ನೀವು ಯಾವಾಗ್ಲೂ ನ್ಯಾಯವಾಗಿರೋದನ್ನೇ ಮಾಡಬೇಕು.+ ಹಾಗೆ ಮಾಡಿದ್ರೆ ನೀವು ಬಾಳ್ತೀರ, ನಿಮ್ಮ ದೇವರಾದ ಯೆಹೋವ ಕೊಡೋ ದೇಶವನ್ನ ವಶ ಮಾಡ್ಕೊಳ್ತೀರ.
21 ನಿಮ್ಮ ದೇವರಾದ ಯೆಹೋವನಿಗಾಗಿ ಕಟ್ಟೋ ಯಜ್ಞವೇದಿ ಪಕ್ಕದಲ್ಲಿ ಯಾವುದೇ ವಿಧದ ಮರ ಬೆಳೆಸಿ ಅದನ್ನ ಪೂಜಾಕಂಬವಾಗಿ*+ ಮಾಡಬಾರದು.
22 ವಿಗ್ರಹಸ್ತಂಭವನ್ನ ಕೂಡ ನಿಲ್ಲಿಸಬಾರದು.+ ಯಾಕಂದ್ರೆ ನಿಮ್ಮ ದೇವರಾದ ಯೆಹೋವ ಅದನ್ನ ದ್ವೇಷಿಸ್ತಾನೆ.