3 ನನ್ನ ಮಗನೇ, ನಾನು ಕಲಿಸೋದನ್ನ ಮರಿಬೇಡ,
ನನ್ನ ಆಜ್ಞೆಗಳನ್ನ ಮನಸಾರೆ ಪಾಲಿಸು.
2 ಆಗ ನೀನು ಜಾಸ್ತಿ ವರ್ಷ ಬದುಕ್ತೀಯ,
ನೆಮ್ಮದಿಯಾಗಿ ಇರ್ತಿಯ.+
3 ಶಾಶ್ವತ ಪ್ರೀತಿ, ಸತ್ಯವನ್ನ ಬಿಟ್ಟುಬಿಡಬೇಡ.+
ಅವುಗಳನ್ನ ನಿನ್ನ ಕೊರಳಿಗೆ ಸುಂದರ ಸರದ ಹಾಗೆ ಕಟ್ಕೊ,
ನಿನ್ನ ಹೃದಯದ ಹಲಗೆ ಮೇಲೆ ಬರ್ಕೊ.+
4 ಆಗ ದೇವರಿಗೆ, ಮನುಷ್ಯರಿಗೆ ಖುಷಿ ಆಗುತ್ತೆ,
ನಿನಗೆ ನಿಜವಾಗ್ಲೂ ತುಂಬ ತಿಳುವಳಿಕೆ ಇದೆ ಅಂತ ಅವರು ಒಪ್ಕೊಳ್ತಾರೆ.+
5 ಪೂರ್ಣ ಹೃದಯದಿಂದ ಯೆಹೋವನ ಮೇಲೆ ನಂಬಿಕೆ ಇಡು,+
ನಿನ್ನ ಸ್ವಂತ ಬುದ್ಧಿ ಮೇಲೆ ಆತ್ಕೊಳ್ಳಬೇಡ.+
6 ಅದನ್ನ ಮನಸ್ಸಲ್ಲಿ ಇಟ್ಕೊಂಡು ಎಲ್ಲ ಕೆಲಸ ಮಾಡು,+
ಆಗ ದೇವರು ನಿನಗೆ ಸರಿ ದಾರಿ ತೋರಿಸ್ತಾನೆ.+
7 ನೀನೇ ತುಂಬ ಬುದ್ಧಿವಂತ ಅಂದ್ಕೊಳ್ಳಬೇಡ.+
ಯೆಹೋವನಿಗೆ ಭಯಪಡು, ಕೆಟ್ಟದು ಮಾಡಬೇಡ.
8 ಆಗ ಆರೋಗ್ಯವಾಗಿ ಇರ್ತಿಯ,
ನಿನ್ನ ಮೂಳೆಗಳಿಗೆ ಹೊಸ ಬಲ ಸಿಗುತ್ತೆ.
9 ನಿನ್ನ ಬೆಲೆ ಬಾಳೋ ವಸ್ತುಗಳಿಂದ ಯೆಹೋವನನ್ನ ಸನ್ಮಾನಿಸು,+
ನಿನ್ನ ಬೆಳೆಯ ಮೊದಲ ಫಲದಿಂದ ಆತನನ್ನ ಗೌರವಿಸು.+
10 ಆಗ ನಿನ್ನ ಗೋಡೌನ್ಗಳು ತುಂಬಿ ತುಳುಕುತ್ತೆ,+
ನಿನ್ನ ದ್ರಾಕ್ಷಿತೊಟ್ಟಿಗಳಲ್ಲಿ ಹೊಸ ದ್ರಾಕ್ಷಾಮದ್ಯ ತುಂಬಿ ಹರಿಯುತ್ತೆ.
11 ನನ್ನ ಮಗನೇ, ಯೆಹೋವ ಶಿಸ್ತು ಕೊಡುವಾಗ ಬೇಡ ಅನ್ನಬೇಡ,+
ಆತನು ತಿದ್ದುವಾಗ ಬೇಜಾರು ಮಾಡ್ಕೊಳ್ಳಬೇಡ.+
12 ಅಪ್ಪ ತಾನು ಪ್ರೀತಿಸೋ ಮಗನನ್ನ ತಿದ್ದೋ ತರ,+
ಯೆಹೋವ ಯಾರನ್ನ ಪ್ರೀತಿಸ್ತಾನೋ ಅವ್ರನ್ನೇ ತಿದ್ದುತ್ತಾನೆ.+
13 ವಿವೇಕ ಪಡ್ಕೊಳ್ಳುವವನು,+
ವಿವೇಚನಾ ಶಕ್ತಿಯನ್ನ ಸಂಪಾದಿಸುವವನು ಖುಷಿಯಾಗಿ ಇರ್ತಾನೆ.
14 ಬೆಳ್ಳಿ ಪಡಿಯೋದಕ್ಕಿಂತ ವಿವೇಕ ಪಡಿಯೋದು ಒಳ್ಳೆದು,
ಚಿನ್ನ ಪಡಿಯೋದಕ್ಕಿಂತ ವಿವೇಕ ಸಂಪಾದಿಸೋದು ಒಳ್ಳೆದು.+
15 ವಿವೇಕಕ್ಕೆ ಹವಳಕ್ಕಿಂತ ಬೆಲೆ ಜಾಸ್ತಿ,
ನೀನು ಆಸೆಪಡೋ ಯಾವುದೂ ಅದಕ್ಕೆ ಸಮವಲ್ಲ.
16 ಅದ್ರ ಬಲಗೈಯಲ್ಲಿ ತುಂಬ ಆಯಸ್ಸಿದೆ,
ಅದ್ರ ಎಡಗೈಯಲ್ಲಿ ಆಸ್ತಿ, ಅಂತಸ್ತು ಇದೆ.
17 ವಿವೇಕದ ದಾರಿಯಲ್ಲಿ ಹೋದ್ರೆ ಸಂತೋಷ ಸಿಗುತ್ತೆ,
ಶಾಂತಿ ಸಮಾಧಾನ ಇರುತ್ತೆ.+
18 ವಿವೇಕ ಹಿಡ್ಕೊಳ್ಳುವವನಿಗೆ ಅದು ಜೀವದ ಮರ ಆಗಿರುತ್ತೆ,
ಅದನ್ನ ಗಟ್ಟಿಯಾಗಿ ಹಿಡ್ಕೊಳ್ಳುವವನು ಸಂತೋಷವಾಗಿ ಇದ್ದಾನೆ ಅಂತ ಬೇರೆಯವ್ರಿಗೆ ಗೊತ್ತಾಗುತ್ತೆ.+
19 ಯೆಹೋವ ವಿವೇಕದಿಂದ ಭೂಮಿಗೆ ಅಡಿಪಾಯ ಹಾಕಿದ್ದಾನೆ,+
ವಿವೇಚನಾ ಶಕ್ತಿಯಿಂದ ಆಕಾಶವನ್ನ ಗಟ್ಟಿಯಾಗಿ ನಿಲ್ಲಿಸಿದ್ದಾನೆ.+
20 ಆತನ ಜ್ಞಾನದಿಂದ ಆಳವಾದ ನೀರು ಎರಡು ಭಾಗ ಆಯ್ತು,
ಮೋಡ ಕವಿದ ಆಕಾಶದಿಂದ ಇಬ್ಬನಿ ಬಿತ್ತು.+
21 ನನ್ನ ಮಗನೇ, ಇದನ್ನೆಲ್ಲ ನಿನ್ನ ಮನಸ್ಸಲ್ಲಿ ಇಟ್ಕೊ,
ವಿವೇಕವನ್ನ, ಯೋಚ್ನೆ ಮಾಡೋ ಶಕ್ತಿಯನ್ನ ಕಾಪಾಡ್ಕೊ.
22 ಅವು ನಿನಗೆ ಜೀವ ಕೊಡುತ್ತೆ,
ನಿನ್ನ ಕತ್ತಿಗೆ ಅಲಂಕಾರ ಆಗಿರುತ್ತೆ.
23 ಆಗ ನೀನು ನಿನ್ನ ದಾರಿಯಲ್ಲಿ ಸುರಕ್ಷಿತವಾಗಿ ನಡಿತೀಯ,
ನಿನ್ನ ಕಾಲುಗಳು ಯಾವತ್ತೂ ಎಡವಲ್ಲ.+
24 ಭಯ ಇಲ್ಲದೆ ಮಲಗಿರ್ತಿಯ,+
ಸುಖವಾಗಿ ನಿದ್ದೆ ಮಾಡ್ತೀಯ.+
25 ಅಚಾನಕ್ಕಾಗಿ ಕಷ್ಟ ಬಂದ್ರೂ ನೀನು ಹೆದರಲ್ಲ,+
ಕೆಟ್ಟವನ ಮೇಲೆ ಬರೋ ಬಿರುಗಾಳಿಗೂ ನೀನು ಅಂಜಲ್ಲ.+
26 ಯಾಕಂದ್ರೆ ನಿನಗೆ ಯೆಹೋವನ ಮೇಲೆ ಪೂರ್ತಿ ನಂಬಿಕೆ ಇದೆ,+
ನಿನ್ನ ಕಾಲುಗಳು ಉರುಲಿಗೆ ಸಿಕ್ಕಿಹಾಕೊಳ್ಳದ ಹಾಗೆ ಆತನು ನೋಡ್ಕೊಳ್ತಾನೆ.+
27 ನಿನ್ನ ಕೈಯಿಂದ ಒಳ್ಳೇದು ಮಾಡೋಕೆ ಆದ್ರೆ ಖಂಡಿತ ಮಾಡು,
ಅಗತ್ಯ ಇರುವವ್ರಿಗೆ ಒಳ್ಳೇದು ಮಾಡದೇ ಇರಬೇಡ.+
28 ಅಕ್ಕಪಕ್ಕದ ಮನೆಯವ್ರಿಗೆ ನಿನ್ನಿಂದ ಏನಾದ್ರೂ ಕೊಡೋಕಾದ್ರೆ,
“ಆಮೇಲೆ ಬಾ! ನಾಳೆ ಕೊಡ್ತೀನಿ” ಅಂತ ಹೇಳಬೇಡ.
29 ಪಕ್ಕದ ಮನೆಯವನು ನಿನ್ನ ಮೇಲೆ ನಂಬಿಕೆ ಇಟ್ಟು ವಾಸ ಮಾಡ್ತಾ ಇರುವಾಗ,+
ಅವನಿಗೆ ಹಾನಿ ಮಾಡೋಕೆ ಪಿತೂರಿ ಮಾಡಬೇಡ.
30 ಒಬ್ಬ ವ್ಯಕ್ತಿ ನಿನ್ನ ವಿರುದ್ಧ ಏನೂ ಮಾಡಿರದಿದ್ರೆ,
ಕಾಲು ಕೆರ್ಕೊಂಡು ಜಗಳಕ್ಕೆ ಹೋಗಬೇಡ.+
31 ಕ್ರೂರಿಯನ್ನ ನೋಡಿ ಹೊಟ್ಟೆಕಿಚ್ಚುಪಡಬೇಡ,+
ಅವನ ತರ ನಡ್ಕೊಳ್ಳಬೇಡ.
32 ಯಾಕಂದ್ರೆ ಯೆಹೋವ ಮೋಸಗಾರನನ್ನ ಇಷ್ಟಪಡಲ್ಲ,+
ಆದ್ರೆ ಆತನು ಪ್ರಾಮಾಣಿಕನ ಆಪ್ತ ಸ್ನೇಹಿತ.+
33 ಕೆಟ್ಟವನ ಮನೆ ಮೇಲೆ ಯೆಹೋವನ ಶಾಪ ಇರುತ್ತೆ,+
ಆದ್ರೆ ನೀತಿವಂತನ ಮನೆಯನ್ನ ಆತನು ಆಶೀರ್ವದಿಸ್ತಾನೆ.+
34 ಯಾಕಂದ್ರೆ ಆತನು ಗೇಲಿ ಮಾಡುವವ್ರನ್ನ ನೋಡಿ ನಗ್ತಾನೆ,+
ಆದ್ರೆ ಸೌಮ್ಯ ಸ್ವಭಾವದವ್ರಿಗೆ ದಯೆ ತೋರಿಸ್ತಾನೆ.+
35 ವಿವೇಕಿಗಳಿಗೆ ದೇವರಿಂದ ಸಿಗೋ ಆಸ್ತಿ ಗೌರವ,
ಆದ್ರೆ ಮೂರ್ಖರಿಗೆ ಸಿಗೋ ಆಸ್ತಿ ಅವಮಾನ.+