ಅಪೊಸ್ತಲರ ಕಾರ್ಯ
27 ನಾವು ಹಡಗಲ್ಲಿ ಪ್ರಯಾಣ ಮಾಡಿ ಇಟಲಿಗೆ ಹೋಗಬೇಕಂತ ಫೆಸ್ತ ತೀರ್ಮಾನ ಮಾಡಿದ.+ ಆಗ ಅವರು ಪೌಲನನ್ನ ಮತ್ತು ಬೇರೆ ಕೈದಿಗಳನ್ನ ಯೂಲ್ಯ ಅನ್ನೋ ಸೇನಾಪತಿಗೆ ಒಪ್ಪಿಸಿದ್ರು. ಇವನು ಅಗಸ್ಟಸ್ ಚಕ್ರವರ್ತಿಯ ಸೈನ್ಯದಲ್ಲಿದ್ದ. 2 ಆಗ ಏಷ್ಯಾ ಪ್ರದೇಶದ ಕರಾವಳಿಯಲ್ಲಿ ಇರೋ ಸ್ಥಳಗಳಿಗೆ ಹೋಗೋ ಹಡಗನ್ನ ಹತ್ತಿದ್ವಿ. ಆ ಹಡಗು ಅದ್ರಮಿತ್ತಿಯದಿಂದ ಹೊರಟು ಬಂದಿತ್ತು. ಥೆಸಲೊನೀಕದಿಂದ ಬಂದ ಮಕೆದೋನ್ಯದ ಅರಿಸ್ತಾರ್ಕ+ ನಮ್ಮ ಜೊತೆ ಇದ್ದ. 3 ಮಾರನೇ ದಿನ ನಾವು ಸೀದೋನ್ ತಲಪಿದ್ವಿ. ಯೂಲ್ಯ ಪೌಲನ ಜೊತೆ ದಯೆಯಿಂದ ನಡ್ಕೊಂಡ. ಸ್ನೇಹಿತರ ಹತ್ರ ಹೋಗಿ ಅವ್ರ ಸಹಾಯ ಪಡ್ಕೊಳ್ಳೋಕೆ ಅನುಮತಿ ಕೊಟ್ಟ.
4 ಅಲ್ಲಿಂದ ಹಡಗು ಮುಂದೆ ಹೋಗ್ತಾ ಇದ್ದಾಗ ಗಾಳಿ ಜೋರಾಗಿ ಬೀಸ್ತಾ ಇತ್ತು. ಹಾಗಾಗಿ ಗಾಳಿ ಬಡಿದೇ ಇರೋ ತರ ನಾವು ಸೈಪ್ರಸ್ ದ್ವೀಪಕ್ಕೆ ಅಂಟ್ಕೊಂಡು ಪ್ರಯಾಣ ಮಾಡಿದ್ವಿ. 5 ಆಮೇಲೆ ನಾವು ಸಮುದ್ರದಲ್ಲಿ ಪ್ರಯಾಣ ಮುಂದುವರಿಸಿ ಕಿಲಿಕ್ಯ ಮತ್ತು ಪಂಫುಲ್ಯ ದಾಟಿ ಲುಕೀಯ ಪ್ರದೇಶದಲ್ಲಿ ಇರೋ ಮುರ ಅನ್ನೋ ಬಂದರಿಗೆ ಬಂದ್ವಿ. 6 ಅಲ್ಲಿ ಅಲೆಕ್ಸಾಂದ್ರಿಯದಿಂದ ಇಟಲಿಗೆ ಹೋಗ್ತಿದ್ದ ಒಂದು ಹಡಗನ್ನ ಸೇನಾಪತಿ ನೋಡಿ ನಮ್ಮನ್ನ ಅದಕ್ಕೆ ಹತ್ತಿಸಿದ. 7 ತುಂಬ ದಿನ ನಿಧಾನವಾಗಿ ಪ್ರಯಾಣ ಮಾಡ್ತಾ ಕಷ್ಟಪಟ್ಟು ಕ್ನೀದಕ್ಕೆ ತಲಪಿದ್ವಿ. ಗಾಳಿ ಜೋರಾಗಿ ಬೀಸ್ತಾ ಇದ್ದ ಕಾರಣ ನಾವು ಸಲ್ಮೋನೆಯನ್ನ ದಾಟಿ ಕ್ರೇತ ದ್ವೀಪಕ್ಕೆ ಅಂಟ್ಕೊಂಡು ಪ್ರಯಾಣಿಸಿದ್ವಿ. 8 ಆ ದ್ವೀಪದ ಕರಾವಳಿಯಲ್ಲೇ ಕಷ್ಟಪಟ್ಟು ಮುಂದೆ ಸಾಗಿ ಚಂದರೇವು ಅನ್ನೋ ಸ್ಥಳಕ್ಕೆ ಬಂದ್ವಿ. ಹತ್ರದಲ್ಲೇ ಲಸಾಯ ಅನ್ನೋ ಪಟ್ಟಣ ಇತ್ತು.
9 ಹೀಗೆ ತುಂಬ ದಿನ ಕಳಿತು. ದೋಷಪರಿಹಾರಕ ದಿನದ+ ಉಪವಾಸ ಮುಗಿದಿತ್ತು. ಹಾಗಾಗಿ ಸಮುದ್ರದಲ್ಲಿ ಪ್ರಯಾಣ ಮಾಡೋದು ಅಪಾಯ ಆಗಿತ್ತು. ಆಗ ಪೌಲ 10 ಅವ್ರಿಗೆ “ಜನ್ರೇ, ಈ ಪ್ರಯಾಣದಿಂದ ಹಡಗಿಗೆ ಮತ್ತು ಅದ್ರಲ್ಲಿರೋ ಸಾಮಾನಿಗೆ ಮಾತ್ರ ಅಲ್ಲ ನಮ್ಮ ಜೀವಕ್ಕೂ ಅಪಾಯ ಆಗುತ್ತೆ. ತುಂಬ ನಷ್ಟನೂ ಆಗುತ್ತೆ ಅಂತ ನನಗನಿಸುತ್ತೆ” ಅಂತ ಸಲಹೆ ಕೊಟ್ಟ. 11 ಆದ್ರೆ ಸೇನಾಪತಿ ಪೌಲನ ಮಾತು ಕೇಳದೆ ಹಡಗನ್ನ ನಡೆಸುವವನ ಮತ್ತು ಅದ್ರ ಯಜಮಾನನ ಮಾತು ಕೇಳಿದ. 12 ಆ ಬಂದರಲ್ಲಿ ಚಳಿಗಾಲ ಕಳೆಯೋದು ಕಷ್ಟ ಆಗಿತ್ತು. ಅದಕ್ಕೆ ಅಲ್ಲಿಂದ ಪ್ರಯಾಣ ಮಾಡಿ ಹೇಗಾದ್ರೂ ಕ್ರೇತದ ಬಂದರಾದ ಪೊಯಿನಿಕ್ಸಕ್ಕೆ ಹೋದ್ವಿ. ಚಳಿಗಾಲ ಅಲ್ಲೇ ಕಳಿಬೇಕು ಅಂತ ತುಂಬ ಜನ ಸಲಹೆ ಕೊಟ್ರು. ಇದು ಎಂಥಾ ಬಂದರಾಗಿತ್ತು ಅಂದ್ರೆ ಉತ್ತರ-ಪೂರ್ವ ದಿಕ್ಕಲ್ಲೂ ದಕ್ಷಿಣ-ಪೂರ್ವ ದಿಕ್ಕಲ್ಲೂ ಹಡಗು ಬಂದು ನಿಲ್ಲುತ್ತಿತ್ತು.
13 ಅಷ್ಟೇ ಅಲ್ಲ ದಕ್ಷಿಣ ದಿಕ್ಕಿಂದ ಮೆಲ್ಲಗೆ ಗಾಳಿ ಬೀಸ್ತಾ ಇತ್ತು. ಹಾಗಾಗಿ ಅವರು ಅಂದ್ಕೊಂಡ ತರಾನೇ ಪೊಯಿನಿಕ್ಸಕ್ಕೆ ಹೋಗಿ ತಲಪಬಹುದು ಅಂತ ನೆನಸಿದ್ರು. ಅವರು ಲಂಗರನ್ನ ಮೇಲೆ ಎತ್ತಿ ಕ್ರೇತ ದ್ವೀಪದ ತೀರದಲ್ಲೇ ಹಡಗು ನಡೆಸಿದ್ರು. 14 ಆದ್ರೆ ಸ್ವಲ್ಪ ಹೊತ್ತು ಆದಮೇಲೆ ಉರಕುಲೋನ್* ಅನ್ನೋ ಬಿರುಗಾಳಿ ಬೀಸಿತು. 15 ಆ ಗಾಳಿಗೆ ಹಡಗು ಸಿಕ್ಕಿಹಾಕೊಂಡಿತು. ಗಾಳಿಯನ್ನ ಸೀಳ್ಕೊಂಡು ಮುಂದೆ ಹೋಗೋಕೆ ಆಗಲಿಲ್ಲ. ಹಾಗಾಗಿ ಗಾಳಿ ಹಡಗನ್ನ ನೂಕೊಂಡು ಹೋಗುವಾಗ ಸುಮ್ಮನೆ ಬಿಟ್ಟುಬಿಟ್ವಿ. 16 ಆಮೇಲೆ ಕೌಡ ಅನ್ನೋ ಒಂದು ಚಿಕ್ಕ ದ್ವೀಪಕ್ಕೆ ಅಂಟ್ಕೊಂಡು ಪ್ರಯಾಣ ಮಾಡಿದ್ವಿ. ಆದ್ರೂ ಹಡಗಿನ ಹಿಂದಿನ ಭಾಗದಲ್ಲಿದ್ದ ಚಿಕ್ಕದೋಣಿಯನ್ನ ಕಾಪಾಡ್ಕೊಳ್ಳೋಕೆ ತುಂಬ ಕಷ್ಟಪಟ್ವಿ. 17 ಆ ಚಿಕ್ಕ ದೋಣಿಯನ್ನ ಹಡಗಿಗೆ ಎಳ್ಕೊಂಡ ಮೇಲೆ ನಾವಿಕರು ಹಗ್ಗಗಳಿಂದ ಅದನ್ನ ಬಿಗಿಯಾಗಿ ಕಟ್ಟಿದ್ರು. ಎಲ್ಲಿ ಈ ಹಡಗು ಸುರ್ತಿಸ್ ಅನ್ನೋ ಮರಳಲ್ಲಿ ಸಿಕ್ಕಿಹಾಕೊಳ್ಳುತ್ತೋ ಅಂತ ಭಯಪಟ್ಟು ಅವರು ಹಡಗಿಗೆ ಕಟ್ಟಿದ್ದ ಬಟ್ಟೆಯನ್ನ ಕೆಳಗೆ ಇಳಿಸಿ ಗಾಳಿಗೆ ತೇಲಿ ಹೋಗೋಕೆ ಬಿಟ್ರು. 18 ಆದ್ರೆ ಬಿರುಗಾಳಿಯ ರಭಸ ಕಡಿಮೆ ಆಗಲಿಲ್ಲ. ಹಾಗಾಗಿ ಮಾರನೇ ದಿನ ಅವರು ಸಾಮಾನುಗಳನ್ನೆಲ್ಲ ಎಸೆದು ಹಡಗನ್ನ ಹಗುರ ಮಾಡಿದ್ರು. 19 ಮೂರನೇ ದಿನ ಅವರು ಆ ಬಟ್ಟೆಯ ಹಗ್ಗಗಳನ್ನ ಬಿಚ್ಚಿ ತಮ್ಮ ಕೈಯಾರೆ ಸಮುದ್ರಕ್ಕೆ ಎಸೆದ್ರು.
20 ತುಂಬ ದಿನದ ತನಕ ಸೂರ್ಯನೂ ಕಾಣಲಿಲ್ಲ, ನಕ್ಷತ್ರನೂ ಕಾಣಲಿಲ್ಲ. ಆ ದೊಡ್ಡ ಬಿರುಗಾಳಿ ಇನ್ನೂ ಬೀಸ್ತಾನೇ ಇತ್ತು. ನಾವು ಬದುಕಿ ಉಳಿಯೋದು ಬರೀ ಕನಸಾಗಿತ್ತು. 21 ತುಂಬ ದಿನಗಳ ತನಕ ಅವರು ಊಟ ಮುಟ್ಟಿರ್ಲಿಲ್ಲ. ಆಗ ಪೌಲ ಎದ್ದುನಿಂತು “ಸ್ನೇಹಿತರೇ, ನಾನು ಹೇಳಿದ ಹಾಗೆ ಕ್ರೇತ ದ್ವೀಪದಿಂದ ಪ್ರಯಾಣ ಮಾಡದೇ ಇದ್ದಿದ್ರೆ ಈ ಹಾನಿ, ಈ ನಷ್ಟ ಆಗ್ತಿರ್ಲಿಲ್ಲ.+ 22 ಆದ್ರೂ ಪರವಾಗಿಲ್ಲ. ಧೈರ್ಯ ತಂದ್ಕೊಳ್ಳಿ ಅಂತ ಬೇಡ್ಕೊಳ್ತೀನಿ. ಯಾಕಂದ್ರೆ ನಾವು ಹಡಗನ್ನ ಮಾತ್ರ ಕಳ್ಕೊಳ್ತೀವಿ. ಆದ್ರೆ ನಮ್ಮಲ್ಲಿ ಒಬ್ರೂ ಸಾಯಲ್ಲ. 23 ನಾನು ಆರಾಧಿಸೋ ದೇವರು, ನಾನು ಪವಿತ್ರ ಸೇವೆ ಸಲ್ಲಿಸೋ ಆ ದೇವರು ಒಬ್ಬ ದೂತನನ್ನ+ ನಿನ್ನೆ ರಾತ್ರಿ ನನ್ನ ಹತ್ರ ಕಳಿಸಿದ. ಅವನು ನನ್ನ ಪಕ್ಕದಲ್ಲಿ ನಿಂತು 24 ‘ಪೌಲ, ಭಯಪಡಬೇಡ. ನೀನು ರೋಮಿಗೆ ಹೋಗ್ತೀಯ, ಅಲ್ಲಿ ನೀನು ರೋಮಿನ ರಾಜನನ್ನ+ ನೋಡ್ತೀಯ. ದೇವರು ನಿನ್ನನ್ನ ಮತ್ತು ನಿನ್ನ ಜೊತೆ ಪ್ರಯಾಣ ಮಾಡ್ತಿರೋ ಎಲ್ರನ್ನ ಕಾಪಾಡ್ತಾನೆ’ ಅಂದ. 25 ಅದಕ್ಕೇ ಗೆಳೆಯರೇ, ಧೈರ್ಯವಾಗಿರಿ. ನಂಗೆ ದೇವ್ರ ಮೇಲೆ ನಂಬಿಕೆ ಇದೆ. ಆ ದೇವದೂತ ನಂಗೆ ಹೇಳಿದ ತರಾನೇ ದೇವರು ಮಾಡ್ತಾನೆ. 26 ಆದ್ರೆ ನಮ್ಮ ಹಡಗು ಯಾವುದಾದ್ರೂ ಒಂದು ದ್ವೀಪದಲ್ಲಿ ಒಡೆದುಹೋಗುತ್ತೆ” ಅಂದ.+
27 ಆದ್ರಿಯ ಸಮುದ್ರದಲ್ಲಿ ಹೀಗೆ 14 ಹಗಲೂರಾತ್ರಿ ಓಲಾಡಿದ ಮೇಲೆ ಅವತ್ತು ಮಧ್ಯರಾತ್ರಿಯಲ್ಲಿ ನಾವಿಕರಿಗೆ ತಾವು ಯಾವುದೋ ದೇಶದ ದಡದ ಹತ್ರ ಬಂದಿದ್ದೀವಿ ಅಂತ ಅನಿಸ್ತು. 28 ಅವರು ನೀರಿನ ಆಳ ನೋಡಿದಾಗ ಅದು 120 ಅಡಿ ಅಂತ ಗೊತ್ತಾಯ್ತು. ಇನ್ನೂ ಸ್ವಲ್ಪ ಮುಂದೆ ಹೋಗಿ ಮತ್ತೆ ನೋಡಿದಾಗ 90 ಅಡಿ ಇದೆ ಅಂತ ಗೊತ್ತಾಯ್ತು. 29 ಹಡಗು ದೊಡ್ಡ ಕಲ್ಲುಬಂಡೆಗೆ ಡಿಕ್ಕಿಹೊಡಿಬಹುದು ಅಂತ ಹೆದರಿದ್ರು. ನಾವು ಹಡಗಿನ ಹಿಂಭಾಗದಿಂದ ನಾಲ್ಕು ಲಂಗರುಗಳನ್ನ ಕೆಳಕ್ಕೆ ಬಿಟ್ಟು ಬೆಳಗಾಗಲಿ ಅಂತ ಕಾಯ್ತಾ ಇದ್ವಿ. 30 ಆದ್ರೆ ನಾವಿಕರು ಹಡಗಿನ ಮುಂದಿನ ಭಾಗದಲ್ಲಿ ಲಂಗರುಗಳನ್ನ ಕೆಳಗೆ ಇಳಿಸೋ ತರ ನಟಿಸ್ತಾ ಚಿಕ್ಕ ದೋಣಿಯನ್ನ ಸಮುದ್ರಕ್ಕೆ ಇಳಿಸಿ ತಪ್ಪಿಸ್ಕೊಂಡು ಹೋಗಬೇಕಂತ ಪ್ರಯತ್ನ ಮಾಡ್ತಿದ್ರು. 31 ಆಗ ಪೌಲ ಸೇನಾಪತಿ ಮತ್ತು ಸೈನಿಕರಿಗೆ “ಈ ಜನ ಹಡಗಲ್ಲಿ ಇದ್ರೆ ಮಾತ್ರ ನೀವು ಬದುಕಿ ಉಳಿತೀರ” ಅಂದ.+ 32 ಆಗ ಸೈನಿಕರು ಚಿಕ್ಕ ದೋಣಿಯ ಹಗ್ಗಗಳನ್ನ ಕತ್ತರಿಸಿ ಅದು ಬಿದ್ದುಹೋಗಲಿ ಅಂತ ಬಿಟ್ಟುಬಿಟ್ರು.
33 ಬೆಳಕು ಹರಿಯೋ ಮುಂಚೆ ಪೌಲ ಅವ್ರಿಗೆಲ್ಲ ಸ್ವಲ್ಪ ಊಟ ಮಾಡೋಕೆ ಹೇಳ್ತಾ “ನೀವು ಊಟ ಮಾಡದೆ ಇವತ್ತಿಗೆ 14 ದಿನ ಆಯ್ತು. ಬರೀ ಚಿಂತೆನೇ ಮಾಡ್ತಾ ಇದ್ದೀರ. 34 ಅದಕ್ಕೇ ಸ್ವಲ್ಪ ಊಟ ಮಾಡಿ ಅಂತ ನಿಮ್ಮನ್ನ ಕೇಳ್ಕೊಳ್ತೀನಿ. ನಿಮ್ಮ ಒಳ್ಳೇದಕ್ಕೆ ನಾನು ಹೇಳ್ತಾ ಇದ್ದೀನಿ. ನಿಮ್ಮಲ್ಲಿ ಯಾರಿಗೂ ಏನೂ ಆಗಲ್ಲ. ನಿಮ್ಮಲ್ಲಿ ಒಬ್ರೂ ಸಾಯಲ್ಲ” ಅಂದ. 35 ಇದೆಲ್ಲ ಹೇಳಿದ ಮೇಲೆ ಒಂದು ರೊಟ್ಟಿ ತಗೊಂಡು ಎಲ್ರ ಮುಂದೆ ದೇವ್ರಿಗೆ ಧನ್ಯವಾದ ಹೇಳಿ ಅದನ್ನ ಮುರಿದು ತಿನ್ನೋಕೆ ಶುರುಮಾಡಿದ. 36 ಆಗ ಅವ್ರೆಲ್ಲ ಧೈರ್ಯ ತಂದ್ಕೊಂಡ್ರು, ಊಟ ಮಾಡೋಕೆ ಶುರುಮಾಡಿದ್ರು. 37 ಆ ಹಡಗಲ್ಲಿ ನಾವು ಒಟ್ಟು 276 ಜನ ಇದ್ವಿ. 38 ಅವರು ಊಟಮಾಡಿ ಹೊಟ್ಟೆ ತುಂಬಿದಾಗ ಹಡಗಲ್ಲಿದ್ದ ಗೋದಿಯನ್ನ ಸಮುದ್ರಕ್ಕೆ ಎಸೆದು ಅದನ್ನ ಹಗುರ ಮಾಡಿದ್ರು.+
39 ಬೆಳಕು ಹರಿದಾಗ ಅವ್ರಿಗೆ ಎಲ್ಲಿದ್ದೀವಿ ಅಂತಾನೇ ಗೊತ್ತಾಗಲಿಲ್ಲ.+ ಆದ್ರೆ ದೂರದಲ್ಲಿ ಮರಳಿದ್ದ ತೀರ ಕಾಣಿಸ್ತು. ಹೇಗಾದ್ರೂ ಮಾಡಿ ಅಲ್ಲಿಗೆ ಹೋಗಬೇಕಂತ ಅಂದ್ಕೊಂಡ್ರು. 40 ಹಾಗಾಗಿ ಹಗ್ಗಗಳನ್ನ ಕತ್ತರಿಸಿ ಲಂಗರುಗಳನ್ನ ಸಮುದ್ರದಲ್ಲಿ ಬಿಟ್ಟುಬಿಟ್ರು. ಅದೇ ಸಮಯದಲ್ಲಿ ಚುಕ್ಕಾಣಿಗಳಿಗೆ ಕಟ್ಟಿದ ಹಗ್ಗ ಬಿಚ್ಚಿದ್ರು. ಹಡಗನ್ನ ತೀರದ ಕಡೆ ಗಾಳಿ ತಳ್ಕೊಂಡು ಹೋಗೋ ತರ ಹಡಗಿನ ಮುಂದಿನ ಭಾಗದಲ್ಲಿರೋ ಬಟ್ಟೆಯನ್ನ ಮೇಲೆ ಎತ್ತಿದ್ರು. 41 ಆದ್ರೆ ಹಡಗು ಸಮುದ್ರದಲ್ಲಿ ಮರಳದಿಬ್ಬಕ್ಕೆ ಡಿಕ್ಕಿ ಹೊಡಿತು. ಆಗ ಹಡಗಿನ ಮುಂದಿನ ಭಾಗ ಮರಳಲ್ಲಿ ಸಿಕ್ಕಿಹಾಕಿಕೊಳ್ತು. ಆದ್ರೆ ಹಿಂದಿನ ಭಾಗ ಅಲೆಗಳ ಹೊಡೆತಕ್ಕೆ ಚೂರುಚೂರಾಯ್ತು.+ 42 ಆಗ ಕೈದಿಗಳು ಯಾರೂ ಈಜಿ ತಪ್ಪಿಸ್ಕೊಳ್ಳಬಾರದು ಅಂತ ಸೈನಿಕರು ಅವ್ರನ್ನ ಕೊಲ್ಲಬೇಕಂತ ಅಂದ್ಕೊಂಡ್ರು. 43 ಆದ್ರೆ ಪೌಲನಿಗೆ ಏನೂ ಆಗಬಾರದಂತ ಸೇನಾಧಿಪತಿ ಯೋಚನೆ ಮಾಡಿದ್ರಿಂದ ಯಾರಿಗೂ ಏನೂ ಮಾಡಬೇಡಿ ಅಂತ ಸೈನಿಕರಿಗೆ ಹೇಳಿದ. ಈಜು ಬರುವವ್ರೆಲ್ಲ ಈಜಿ ತೀರ ಮುಟ್ಟೋಕೆ ಹೇಳಿದ. 44 ಉಳಿದವರು ಮರದ ಹಲಗೆ ಹಿಡ್ಕೊಂಡು, ಒಡೆದುಹೋಗಿರೋ ಹಡಗಿನ ಚೂರುಗಳನ್ನ ಹಿಡ್ಕೊಂಡು ತೀರ ತಲಪೋಕೆ ಆಜ್ಞೆ ಕೊಟ್ಟ. ಹೀಗೆ ಎಲ್ರೂ ಸುರಕ್ಷಿತವಾಗಿ ತೀರ ಮುಟ್ಟಿದ್ರು.+