ನೆಹೆಮೀಯ
13 ಅವತ್ತು ಎಲ್ಲ ಜನ್ರ ಮುಂದೆ ಕೇಳಿಸೋ ತರ ಮೋಶೆಯ ಪುಸ್ತಕವನ್ನ ಓದಲಾಯ್ತು.+ ಅಮ್ಮೋನಿಯರಾಗಲಿ ಮೋವಾಬ್ಯರಾಗಲಿ+ ಸತ್ಯ ದೇವರ ಸಭೆಗೆ ಯಾವತ್ತೂ ಬರಬಾರದು+ ಅಂತ ಅದ್ರಲ್ಲಿ ಬರೆದಿರೋದು ಗಮನಕ್ಕೆ ಬಂತು. 2 ಯಾಕಂದ್ರೆ ಅವರು ಇಸ್ರಾಯೇಲ್ಯರಿಗೆ ಊಟ ನೀರು ಕೊಟ್ಟಿರಲಿಲ್ಲ. ಅವರು ಇಸ್ರಾಯೇಲ್ಯರನ್ನ ಶಪಿಸೋಕೆ ಬಿಳಾಮನಿಗೆ ಹಣಕೊಟ್ಟಿದ್ರು.+ ಆದ್ರೆ ನಮ್ಮ ದೇವರು ಆ ಶಾಪವನ್ನ ಆಶೀರ್ವಾದವಾಗಿ ಬದಲಾಯಿಸಿದ್ದನು.+ 3 ನಿಯಮ ಪುಸ್ತಕದ ಈ ಮಾತುಗಳನ್ನ ಕೇಳಿಸ್ಕೊಂಡ ತಕ್ಷಣ ಜನ ಇಸ್ರಾಯೇಲ್ಯರ ಮಧ್ಯದಲ್ಲಿ ಉಳ್ಕೊಂಡಿದ್ದ ವಿದೇಶಿ ಜನ್ರನ್ನೆಲ್ಲ* ಬೇರ್ಪಡಿಸೋಕೆ ಶುರು ಮಾಡಿದ್ರು.+
4 ಈ ಮುಂಚೆ, ನಮ್ಮ ದೇವರ ಆಲಯದ ಕಣಜಗಳ*+ ಮೇಲ್ವಿಚಾರಣೆಯನ್ನ ಪುರೋಹಿತ ಎಲ್ಯಾಷೀಬ+ ಮಾಡ್ತಿದ್ದ. ಟೋಬೀಯ+ ಇವನ ಸಂಬಂಧಿಕ. 5 ಹಾಗಾಗಿ ಇವನು ಟೋಬೀಯನಿಗೆ ಒಂದು ದೊಡ್ಡ ಕಣಜ* ಕೊಟ್ಟಿದ್ದ. ಈ ಮುಂಚೆ ಅದ್ರಲ್ಲಿ ಧಾನ್ಯ ಅರ್ಪಣೆಯನ್ನ, ಸಾಂಬ್ರಾಣಿಯನ್ನ, ಪಾತ್ರೆಗಳನ್ನ, ಲೇವಿಯರಿಗೆ,+ ಗಾಯಕರಿಗೆ, ಬಾಗಿಲು ಕಾಯೋರಿಗೆ ಕೊಡಬೇಕಾದ ಧಾನ್ಯದ ಹತ್ತರಲ್ಲಿ ಒಂದು ಭಾಗವನ್ನ,* ಹೊಸ ದ್ರಾಕ್ಷಾಮದ್ಯವನ್ನ, ಎಣ್ಣೆಯನ್ನ+ ಅಷ್ಟೇ ಅಲ್ಲ ಪುರೋಹಿತರಿಗಾಗಿ ಬರ್ತಿದ್ದ ಕಾಣಿಕೆಗಳನ್ನ ಇಡ್ತಿದ್ರು.+
6 ಇದೆಲ್ಲ ನಡಿತಿದ್ದ ಸಮಯದಲ್ಲಿ ನಾನು ಯೆರೂಸಲೇಮಲ್ಲಿ ಇರಲಿಲ್ಲ. ಯಾಕಂದ್ರೆ ಬಾಬೆಲಿನ ರಾಜ ಅರ್ತಷಸ್ತ+ ಆಳ್ತಿದ್ದ 32ನೇ ವರ್ಷದಲ್ಲಿ+ ನಾನು ರಾಜನ ಹತ್ರ ವಾಪಸ್ ಹೋಗಿದ್ದೆ. ಸ್ವಲ್ಪ ಸಮಯ ಆದ್ಮೇಲೆ ರಾಜನ ಹತ್ರ ರಜೆ ಕೇಳಿ 7 ಯೆರೂಸಲೇಮಿಗೆ ವಾಪಸ್ ಬಂದೆ. ಆಗ ಟೋಬೀಯನಿಗಾಗಿ+ ಎಲ್ಯಾಷೀಬ+ ಮಾಡಿದ ಕೆಟ್ಟ ಕೆಲಸವನ್ನ ನೋಡ್ದೆ. ಅವನು ಸತ್ಯ ದೇವರ ಆಲಯದ ಅಂಗಳದಲ್ಲಿ ಟೋಬೀಯನಿಗೆ ಒಂದು ಕಣಜದ ಕೋಣೆಯನ್ನ ಕೊಟ್ಟಿದ್ದ. 8 ಅದನ್ನ ನೋಡಿ ನನಗೆ ತುಂಬ ಕೋಪ ಬಂತು. ಟೋಬೀಯನ ಎಲ್ಲ ವಸ್ತುಗಳನ್ನ ಆ ಕೋಣೆಯಿಂದ* ಹೊರಗೆ ಎಸೆದೆ. 9 ಆಮೇಲೆ ಕಣಜಗಳನ್ನ* ಶುದ್ಧ ಮಾಡೋಕೆ ಹೇಳ್ದೆ. ನಾನು ಸತ್ಯ ದೇವರ ಆಲಯದ ಪಾತ್ರೆಗಳನ್ನ, ಧಾನ್ಯ ಅರ್ಪಣೆಯನ್ನ, ಸಾಂಬ್ರಾಣಿಯನ್ನ+ ಮತ್ತೆ ಅದ್ರಲ್ಲಿಟ್ಟೆ.+
10 ಲೇವಿಯರಿಗೆ ಕೊಡಬೇಕಾಗಿದ್ದ ಭಾಗಗಳನ್ನ+ ಅವ್ರಿಗೆ ಕೊಟ್ಟಿಲ್ಲ+ ಅಂತ ನಂಗೆ ಗೊತ್ತಾಯ್ತು. ಹಾಗಾಗಿ ಸೇವೆ ಮಾಡ್ತಿದ್ದ ಲೇವಿಯರು ಮತ್ತು ಗಾಯಕರು ತಮ್ಮತಮ್ಮ ಹೊಲಗಳಿಗೆ ವಾಪಸ್ ಹೋಗಿದ್ರು.+ 11 ಅದಕ್ಕೇ ನಾನು ಉಪಾಧಿಪತಿಗಳಿಗೆ+ “ಸತ್ಯ ದೇವರ ಆಲಯವನ್ನ ಯಾಕೆ ಅಸಡ್ಡೆ ಮಾಡಿದ್ದೀರಾ?”+ ಅಂತ ಕೇಳಿದೆ. ಆಮೇಲೆ ನಾನು ವಾಪಸ್ ಹೋಗಿದ್ದವ್ರನ್ನ* ಸೇರಿಸಿ ಅವ್ರ ಸ್ಥಾನಕ್ಕೆ ಮತ್ತೆ ನೇಮಿಸಿದೆ. 12 ಯೆಹೂದ್ಯರೆಲ್ಲ ಧಾನ್ಯ, ಹೊಸ ದ್ರಾಕ್ಷಾಮದ್ಯ, ಎಣ್ಣೆಯ ಹತ್ತರಲ್ಲಿ ಒಂದು ಭಾಗವನ್ನ+ ತಂದ್ಕೊಟ್ರು.+ 13 ಆಮೇಲೆ ನಾನು ಪುರೋಹಿತ ಶೆಲೆಮ್ಯ, ನಕಲುಗಾರ* ಚಾದೋಕ, ಲೇವಿಯನಾದ ಪೆದಾಯನ ಕಣಜಗಳನ್ನ ನೋಡ್ಕೊಳ್ಳೋಕೆ ನೇಮಿಸಿದೆ. ಮತ್ತನ್ಯನ ಮೊಮ್ಮಗನೂ ಜಕ್ಕೂರನ ಮಗನೂ ಆದ ಹಾನಾನನನ್ನ ಅವ್ರ ಸಹಾಯಕನಾಗಿ ಇಟ್ಟೆ. ಇವ್ರೆಲ್ಲ ನಂಬಿಗಸ್ತರಾಗಿದ್ರು. ತಮ್ಮ ಸಹೋದರರಿಗೆ ಅವ್ರವ್ರ ಪಾಲನ್ನ ಹಂಚಿಕೊಡೋ ಜವಾಬ್ದಾರಿ ಇವರಿಗಿತ್ತು.
14 ನನ್ನ ದೇವರೇ, ಈ ವಿಷ್ಯದಲ್ಲಿ ನನ್ನನ್ನ ನೆನಪಿಸ್ಕೊ,+ ನಿನ್ನ ಆಲಯದ ವಿಷ್ಯದಲ್ಲಿ, ಅದ್ರ ಸೇವೆ* ವಿಷ್ಯದಲ್ಲಿ ಶಾಶ್ವತ ಪ್ರೀತಿಯಿಂದ ನಾನು ಮಾಡಿದ ಕೆಲಸಗಳನ್ನ ಮರೀಬೇಡ.+
15 ಆಗೆಲ್ಲ ಯೆಹೂದದ ಜನ್ರು ಸಬ್ಬತ್ ದಿನದಲ್ಲಿ ದ್ರಾಕ್ಷಿತೊಟ್ಟಿಯಲ್ಲಿ ದ್ರಾಕ್ಷಿ ತುಳಿತಿದ್ರು,+ ಧಾನ್ಯಗಳ ಚೀಲಗಳನ್ನ ಕತ್ತೆ ಮೇಲೆ ಹೇರಿಸ್ಕೊಂಡು ತರ್ತಿದ್ರು. ಅಷ್ಟೇ ಅಲ್ಲ ದ್ರಾಕ್ಷಾಮದ್ಯ, ದ್ರಾಕ್ಷಿ, ಅಂಜೂರ, ಎಲ್ಲ ತರದ ಸಾಮಾನುಗಳನ್ನ ಸಬ್ಬತ್ ದಿನ ಯೆರೂಸಲೇಮಿಗೆ ತರ್ತಿದ್ರು.+ ಇದನ್ನ ನಾನು ನೋಡ್ದೆ. ಹಾಗಾಗಿ ಸಬ್ಬತ್ ದಿನದಲ್ಲಿ ವಸ್ತುಗಳನ್ನ ಮಾರಬಾರದು ಅಂತ ಅವ್ರಿಗೆ ಎಚ್ಚರಿಸಿದೆ.* 16 ಆ ಪಟ್ಟಣದಲ್ಲಿ ವಾಸವಿದ್ದ ತೂರ್ಯರು ಮೀನುಗಳನ್ನ ಎಲ್ಲ ತರದ ವಸ್ತುಗಳನ್ನ ತಗೊಂಡು ಬಂದು ಸಬ್ಬತ್ ದಿನ ಯೆಹೂದದ, ಯೆರೂಸಲೇಮಿನ ಜನ್ರಿಗೆ ಮಾರ್ತಿದ್ರು.+ 17 ಹಾಗಾಗಿ ನಾನು ಯೆಹೂದದ ಪ್ರಧಾನರಿಗೆ “ನೀವು ಎಂಥ ಕೆಟ್ಟ ಕೆಲಸ ಮಾಡ್ತಿದ್ದೀರ? ಸಬ್ಬತ್ ದಿನವನ್ನ ಅಪವಿತ್ರ ಮಾಡ್ತಾ ಇದ್ದೀರ. 18 ನಿಮ್ಮ ಪೂರ್ವಜರು ಇದನ್ನೇ ಮಾಡಿದ್ರು. ಅದಕ್ಕೆ ನಮ್ಮ ದೇವರು ಈ ಎಲ್ಲ ಕಷ್ಟಗಳನ್ನ ನಮ್ಮ ಮೇಲೆ, ಈ ಪಟ್ಟಣದ ಮೇಲೆ ಬರೋ ಹಾಗೆ ಮಾಡಿದನು. ಈಗ ನೀವು ಸಬ್ಬತ್ ದಿನವನ್ನ ಅಪವಿತ್ರ ಮಾಡಿ ಇಸ್ರಾಯೇಲಿನ ಮೇಲೆ ಆತನಿಗಿರೋ ಕೋಪ ಇನ್ನೂ ಜಾಸ್ತಿ ಮಾಡ್ತಿದ್ದೀರ?”+ ಅಂತ ಗದರಿಸಿದೆ.
19 ಕತ್ತಲೆ ಆಗೋ ಮುಂಚೆನೇ ಅಂದ್ರೆ ಸಬ್ಬತ್ ದಿನ ಶುರು ಆಗೋ ಮುಂಚೆನೇ ಯೆರೂಸಲೇಮಿನ ಬಾಗಿಲುಗಳನ್ನ ಮುಚ್ಚೋಕೆ ಹೇಳ್ದೆ. ಅಷ್ಟೇ ಅಲ್ಲ ಸಬ್ಬತ್ ದಿನ ಮುಗಿಯೋ ತನಕ ಬಾಗಿಲುಗಳನ್ನ ತೆರಿಬಾರದು ಅಂತ ಹೇಳ್ದೆ. ಸಬ್ಬತ್ ದಿನ ಯಾವ ವಸ್ತುವನ್ನೂ ಒಳಗೆ ತಗೊಂಡು ಬರದ ಹಾಗೆ ನೋಡ್ಕೊಳ್ಳೋಕೆ ನನ್ನ ಸೇವಕರಲ್ಲಿ ಕೆಲವ್ರನ್ನ ಬಾಗಿಲುಗಳ ಹತ್ರ ನಿಲ್ಲಿಸಿದೆ. 20 ಇದ್ರಿಂದಾಗಿ ವ್ಯಾಪಾರಿಗಳು, ಎಲ್ಲ ತರದ ವಸ್ತುಗಳನ್ನ ಮಾರೋ ವ್ಯಾಪಾರಿಗಳು ಒಂದೆರಡು ಸಾರಿ ಯೆರೂಸಲೇಮಿನ ಹೊರಗೆ ರಾತ್ರಿ ಕಳೆದ್ರು. 21 ಆಗ ನಾನು ಅವ್ರಿಗೆ “ಗೋಡೆ ಮುಂದೆ ಯಾಕೆ ರಾತ್ರಿ ಕಳಿತೀರಾ? ನೀವು ಹೀಗೆ ಇನ್ನೊಂದು ಸಾರಿ ಮಾಡಿದ್ರೆ ನಾನು ನಿಮ್ಮನ್ನ ಬಲವಂತವಾಗಿ ಕಳಿಸಬೇಕಾಗುತ್ತೆ” ಅಂತ ಎಚ್ಚರಿಸಿದೆ. ಅವತ್ತಿಂದ ಅವರು ಸಬ್ಬತ್ ದಿನದಲ್ಲಿ ಬರಲಿಲ್ಲ.
22 ತಮ್ಮನ್ನ ತಾವು ಕ್ರಮವಾಗಿ ಶುದ್ಧ ಮಾಡ್ಕೊಳ್ಳಬೇಕು, ಸಬ್ಬತ್ ದಿನವನ್ನ ಪವಿತ್ರವಾಗಿ ಇಡೋಕೆ+ ಬಾಗಿಲುಗಳನ್ನ ಕಾವಲು ಕಾಯಬೇಕು ಅಂತ ಲೇವಿಯರಿಗೆ ಹೇಳ್ದೆ. ನನ್ನ ದೇವರೇ, ನನ್ನ ವಿಷ್ಯದಲ್ಲಿ ಇದನ್ನೂ ನೆನಪಿಸ್ಕೊಂಡು ದಯೆ ತೋರಿಸು. ಯಾಕಂದ್ರೆ ನೀನು ತುಂಬಾ ಶಾಶ್ವತ ಪ್ರೀತಿ ತೋರಿಸ್ತೀಯ.+
23 ಆ ಕಾಲದಲ್ಲಿ ಅಷ್ಡೋದಿನ,+ ಅಮ್ಮೋನಿಯರ ಮತ್ತು ಮೋವಾಬ್ಯರ+ ಸ್ತ್ರೀಯರನ್ನ ಯೆಹೂದ್ಯರು ಮದುವೆ ಆಗಿರೋದು*+ ನಂಗೆ ಗೊತ್ತಾಯ್ತು. 24 ಅವ್ರ ಮಕ್ಕಳಲ್ಲಿ ಅರ್ಧ ಜನ ಅಷ್ಡೋದಿನವ್ರ ಭಾಷೆಯನ್ನ ಇನ್ನರ್ಧ ಜನ ಬೇರೆಬೇರೆ ಭಾಷೆಗಳನ್ನ ಮಾತಾಡ್ತಿದ್ರು. ಆದ್ರೆ ಅವ್ರಲ್ಲಿ ಯಾರಿಗೂ ಯೆಹೂದ್ಯರ ಭಾಷೆ ಮಾತಾಡೋಕೆ ಬರ್ತಿರಲಿಲ್ಲ. 25 ಹಾಗಾಗಿ ನಾನು ಆ ಯೆಹೂದ್ಯರಿಗೆ ಬೈದು, ಅವ್ರಿಗೆ ಶಾಪ ಹಾಕ್ದೆ. ಕೆಲವು ಗಂಡಸ್ರನ್ನ ಹೊಡೆದು+ ಅವ್ರ ಕೂದಲುಗಳನ್ನ ಎಳೆದು ಅವ್ರಿಂದ ದೇವರ ಹೆಸ್ರಲ್ಲಿ ಆಣೆ ಮಾಡಿಸಿ ಅವ್ರಿಗೆ ಹೀಗೆ ಹೇಳ್ದೆ: “ನಿಮ್ಮ ಹೆಣ್ಣು ಮಕ್ಕಳನ್ನ ಅವ್ರ ಗಂಡು ಮಕ್ಕಳಿಗೆ ಮದುವೆ ಮಾಡ್ಕೊಡಬಾರದು. ಅವ್ರ ಹೆಣ್ಣು ಮಕ್ಕಳನ್ನ ನಿಮಗಾಗ್ಲಿ ನಿಮ್ಮ ಗಂಡು ಮಕ್ಕಳಿಗಾಗ್ಲಿ ತರಬಾರದು.+ 26 ಇದ್ರಿಂದ ತಾನೇ ಇಸ್ರಾಯೇಲ್ ರಾಜ ಸೊಲೊಮೋನ ಪಾಪ ಮಾಡಿದ್ದು? ಎಷ್ಟೋ ದೇಶಗಳಲ್ಲಿ ಅವನಂಥ ಒಬ್ಬ ರಾಜ ಇರಲಿಲ್ಲ.+ ದೇವರು ಅವನನ್ನ ತುಂಬ ಪ್ರೀತಿಸ್ತಿದ್ದನು.+ ಅದಕ್ಕೇ ದೇವರು ಸೊಲೊಮೋನನನ್ನ ಇಡೀ ಇಸ್ರಾಯೇಲಿನ ಮೇಲೆ ರಾಜನಾಗಿ ಮಾಡಿದ್ದನು. ಆದ್ರೆ ವಿದೇಶಿ ಹೆಂಡತಿಯರು ಅವನೂ ಪಾಪ ಮಾಡೋ ತರ ಮಾಡಿದ್ರು.+ 27 ಈಗ ನೀವು ವಿದೇಶಿ ಸ್ತ್ರೀಯರನ್ನ ಮದುವೆಯಾಗಿ ನಂಬಿಕೆದ್ರೋಹ ಮಾಡಿ ನಮ್ಮ ದೇವ್ರಿಗೆ ವಿರುದ್ಧವಾಗಿ ನಡ್ಕೊಂಡಿದ್ದೀರ.+ ನೀವು ಇಂಥ ದೊಡ್ಡ ತಪ್ಪನ್ನ ಮಾಡಿದ್ದೀರಂತ ನನಗೆ ನಂಬೋಕೂ ಆಗ್ತಿಲ್ಲ.”
28 ಮಹಾ ಪುರೋಹಿತನೂ ಎಲ್ಯಾಷೀಬನ+ ಮಗನೂ ಆದ ಯೋಯಾದನ+ ಗಂಡು ಮಕ್ಕಳಲ್ಲಿ ಒಬ್ಬ ಹೊರೋನ್ಯನಾದ ಸನ್ಬಲ್ಲಟನ+ ಅಳಿಯನಾಗಿದ್ದ. ಹಾಗಾಗಿ ನಾನು ಅವನನ್ನ ನನ್ನ ಕಣ್ಮುಂದಿಂದ ಓಡಿಸಿಬಿಟ್ಟೆ.
29 ನನ್ನ ದೇವರೇ, ಮರೆಯದೆ ಅವ್ರಿಗೆ ಶಿಕ್ಷೆ ಕೊಡು. ಯಾಕಂದ್ರೆ ಅವರು ಪುರೋಹಿತ ಸೇವೆಯನ್ನ, ಪುರೋಹಿತರ ಜೊತೆ ಮತ್ತು ಲೇವಿಯರ ಜೊತೆ ಮಾಡ್ಕೊಂಡಿರೋ ಒಪ್ಪಂದವನ್ನ+ ಅಪವಿತ್ರ ಮಾಡಿದ್ದಾರೆ.
30 ವಿದೇಶಿಯರ ಎಲ್ಲ ಪ್ರಭಾವಗಳಿಂದ ನಾನು ಅವ್ರನ್ನ ಶುದ್ಧ ಮಾಡ್ದೆ. ನಾನು ಪುರೋಹಿತರಿಗೆ, ಲೇವಿಯರಿಗೆ ಅವರವರು ಮಾಡಬೇಕಾದ ಸೇವೆಯನ್ನ ನೇಮಿಸಿದೆ.+ 31 ಸಮಯಕ್ಕೆ ಸರಿಯಾಗಿ ಕಟ್ಟಿಗೆಗಳನ್ನ,+ ಪ್ರಥಮ ಫಲಗಳನ್ನ ತರೋಕೆ ಏರ್ಪಾಡು ಮಾಡ್ದೆ.
ನನ್ನ ದೇವರೇ, ನನ್ನನ್ನ ನೆನಪಿಸ್ಕೊಂಡು ಆಶೀರ್ವಾದ ಮಾಡು.+