ಮಾರ್ಕ
12 ಆಮೇಲೆ ಯೇಸು ಉದಾಹರಣೆ ಕೊಟ್ಟು ಹೀಗಂದನು “ಒಬ್ಬ ಯಜಮಾನ ದ್ರಾಕ್ಷಿತೋಟ ಮಾಡಿ+ ಸುತ್ತಲೂ ಬೇಲಿ ಹಾಕಿಸಿದ. ದ್ರಾಕ್ಷಾರಸ ತೆಗಿಯೋಕೆ ಒಂದು ದೊಡ್ಡ ತೊಟ್ಟಿ ಮಾಡಿಸಿದ. ಕಾವಲುಗೋಪುರ ಕಟ್ಟಿಸಿದ.+ ಆಮೇಲೆ ಅದನ್ನ ರೈತರಿಗೆ ಗುತ್ತಿಗೆಗೆ ಕೊಟ್ಟು ವಿದೇಶಕ್ಕೆ ಹೋದ.+ 2 ದ್ರಾಕ್ಷಿಹಣ್ಣನ್ನ ಕೀಳೋ ಸಮಯ ಬಂದಾಗ ಯಜಮಾನ ತನ್ನ ಪಾಲನ್ನ ತಗೊಂಡು ಬರೋಕೆ ಆ ರೈತರ ಹತ್ರ ಸೇವಕನನ್ನ ಕಳಿಸಿದ. 3 ಆದ್ರೆ ರೈತರು ಅವನನ್ನ ಹೊಡೆದು ಬರಿಗೈಲಿ ಕಳಿಸಿಬಿಟ್ರು. 4 ಆಗ ಯಜಮಾನ ಮತ್ತೆ ಇನ್ನೊಬ್ಬ ಸೇವಕನನ್ನ ಕಳಿಸಿದ. ಅವನಿಗೂ ಆ ರೈತರು ತಲೆಗೆ ಹೊಡೆದು ಅವಮಾನ ಮಾಡಿದ್ರು.+ 5 ಆಮೇಲೆ ಯಜಮಾನ ಇನ್ನೊಬ್ಬನನ್ನ ಕಳಿಸಿದ. ಅವನನ್ನ ಅವರು ಕೊಂದ್ರು. ಇನ್ನೂ ತುಂಬ ಜನ್ರನ್ನ ಕಳಿಸಿದ. ರೈತರು ಅವ್ರಲ್ಲಿ ಕೆಲವ್ರಿಗೆ ಹೊಡೆದ್ರು, ಕೆಲವ್ರನ್ನ ಕೊಂದ್ರು. 6 ಯಜಮಾನನಿಗೆ ಒಬ್ಬ ಮುದ್ದಿನ ಮಗ ಇದ್ದ.+ ಕೊನೆಗೆ ಯಜಮಾನ ಅವನನ್ನ ಕಳಿಸಿದ. ‘ಅವರು ನನ್ನ ಮಗನಿಗಾದ್ರೂ ಗೌರವ ಕೊಡಬಹುದು’ ಅಂದ್ಕೊಂಡ. 7 ಆದ್ರೆ ಆ ರೈತರು ಅವನನ್ನ ನೋಡಿ ತಮ್ಮಲ್ಲೇ ‘ಇವನೇ ವಾರಸುದಾರ.+ ಬನ್ನಿ, ಇವನನ್ನ ಕೊಂದುಹಾಕೋಣ. ಆಗ ಆಸ್ತಿಯೆಲ್ಲಾ ನಮ್ಮದೇ ಆಗುತ್ತೆ’ ಅಂತ ಮಾತಾಡ್ಕೊಂಡ್ರು. 8 ಅವರು ಅವನನ್ನ ಹಿಡ್ಕೊಂಡು ದ್ರಾಕ್ಷಿತೋಟದಿಂದ ಹೊರಗೆ ಎಳ್ಕೊಂಡು ಹೋಗಿ ಕೊಂದು ಎಸೆದುಬಿಟ್ರು.+ 9 ದ್ರಾಕ್ಷಿತೋಟದ ಯಜಮಾನ ಬಂದಾಗ ಆ ರೈತರಿಗೆ ಏನು ಮಾಡ್ತಾನೆ? ಅವನು ಬಂದು ರೈತರನ್ನ ಕೊಂದುಹಾಕಿ ದ್ರಾಕ್ಷಿತೋಟವನ್ನ ಬೇರೆಯವರಿಗೆ ಕೊಡ್ತಾನೆ.+ 10 ‘ಕಟ್ಟುವವರು ಬೇಡ ಅಂತ ಬಿಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯ್ತು.+ 11 ಯೆಹೋವನೇ* ಈ ಕೆಲಸ ಮಾಡಿದ್ದಾನೆ. ನೋಡೋಕೆ ಅದೆಂಥ ಆಶ್ಚರ್ಯ?’ ನೀವು ಯಾವತ್ತೂ ಈ ವಚನ ಓದಿಲ್ವಾ?”+
12 ತಮ್ಮನ್ನ ಮನಸ್ಸಲ್ಲಿ ಇಟ್ಕೊಂಡೇ ಯೇಸು ಈ ಉದಾಹರಣೆ ಹೇಳಿದನು ಅನ್ನೋದು ಆತನ ವಿರೋಧಿಗಳಿಗೆ ಅರ್ಥ ಆಯ್ತು. ಅವರು ಯೇಸುವನ್ನ ಬಂಧಿಸಬೇಕಂತ ಇದ್ರೂ ಜನ್ರಿಗೆ ಹೆದರಿ ಸುಮ್ಮನಿದ್ರು. ಯೇಸುವನ್ನ ಬಿಟ್ಟು ಅಲ್ಲಿಂದ ಹೋಗಿಬಿಟ್ರು.+
13 ಆಮೇಲೆ ಅವರು ಯೇಸುವಿನ ಮಾತಲ್ಲಿ ತಪ್ಪು ಹುಡುಕೋಕೆ ಫರಿಸಾಯರನ್ನ ಮತ್ತು ಹೆರೋದನ ಹಿಂಬಾಲಕರನ್ನ ಯೇಸು ಹತ್ರ ಕಳಿಸಿದ್ರು.+ 14 ಅವರು ಬಂದು “ಗುರು, ನಮಗೆ ಗೊತ್ತು, ನೀನು ಯಾವಾಗ್ಲೂ ಸತ್ಯನೇ ಹೇಳ್ತೀಯ, ದೇವರ ಮಾರ್ಗದ ಬಗ್ಗೆ ಸತ್ಯವನ್ನೇ ಕಲಿಸ್ತೀಯ. ನೀನು ಜನ್ರನ್ನ ಮೆಚ್ಚಿಸೋಕೆ ಪ್ರಯತ್ನ ಮಾಡಲ್ಲ. ಯಾಕಂದ್ರೆ ನೀನು ಮನುಷ್ಯರ ಸ್ಥಾನಮಾನ ನೋಡಲ್ಲ. ಆದ್ರೆ ಒಂದು ವಿಷ್ಯ ನಮಗೆ ಹೇಳು, ರಾಜನಿಗೆ ತೆರಿಗೆ ಕೊಡೋದು ಸರಿನಾ?* 15 ನಾವು ಕೊಡಬೇಕಾ? ಬೇಡ್ವಾ?” ಅಂತ ಕೇಳಿದ್ರು. ಅವ್ರ ಸಂಚನ್ನ ತಿಳಿದ ಯೇಸು “ನೀವ್ಯಾಕೆ ನನ್ನನ್ನ ಪರೀಕ್ಷಿಸ್ತೀರಾ? ಒಂದು ದಿನಾರು* ನಾಣ್ಯ ಕೊಡಿ” ಅಂದನು. 16 ಅವರು ಒಂದು ನಾಣ್ಯ ಕೊಟ್ರು. ಆಗ ಯೇಸು “ಇದ್ರ ಮೇಲಿರೋ ಚಿತ್ರ, ಹೆಸ್ರು ಯಾರದು?” ಅಂತ ಕೇಳಿದನು. ಅವರು “ರಾಜಂದು” ಅಂದ್ರು. 17 “ಹಾಗಾದ್ರೆ ರಾಜಂದು ರಾಜನಿಗೆ ಕೊಡಿ,+ ಆದ್ರೆ ದೇವರದ್ದು ದೇವರಿಗೆ ಕೊಡಿ”+ ಅಂದನು ಯೇಸು. ಆತನ ಮಾತನ್ನ ಕೇಳಿ ಅವರು ಬೆಚ್ಚಿಬೆರಗಾದ್ರು.
18 ಸತ್ತವರು ಮತ್ತೆ ಬದುಕಿ ಬರಲ್ಲ ಅಂತ ಹೇಳೋ ಸದ್ದುಕಾಯರು+ ಆತನ ಹತ್ರ ಬಂದು ಹೀಗೆ ಕೇಳಿದ್ರು+ 19 “ಗುರು, ‘ಒಬ್ಬ ವ್ಯಕ್ತಿ ಮಕ್ಕಳಿಲ್ಲದೆ ಸತ್ರೆ ಅವನ ಹೆಂಡತಿನ ಅವನ ತಮ್ಮ ಮದುವೆ ಮಾಡ್ಕೊಂಡು ಅಣ್ಣನಿಗೋಸ್ಕರ ಮಕ್ಕಳು ಪಡೀಬೇಕು’ ಅಂತ ಮೋಶೆ ಹೇಳಿದ.+ 20 ಒಂದು ಕುಟುಂಬದಲ್ಲಿ ಏಳು ಅಣ್ಣತಮ್ಮಂದಿರು ಇದ್ರು. ಮೊದಲನೆಯವನು ಮದುವೆಯಾಗಿ ಸತ್ತುಹೋದ. ಅವನಿಗೆ ಮಕ್ಕಳು ಇರ್ಲಿಲ್ಲ. 21 ಹಾಗಾಗಿ ಎರಡನೆಯವನು ಅವಳನ್ನೇ ಮದುವೆಯಾದ. ಅವನೂ ಮಕ್ಕಳಾಗದೆ ಸತ್ತುಹೋದ. ಮೂರನೆಯವನಿಗೂ ಹೀಗೇ ಆಯ್ತು. 22 ಏಳನೆಯವನ ತನಕ ಎಲ್ರಿಗೂ ಹೀಗೇ ಆಯ್ತು. ಕೊನೆಗೆ ಅವಳೂ ಸತ್ತುಹೋದಳು. 23 ಹಾಗಾದ್ರೆ ಸತ್ತವ್ರೆಲ್ಲ ಮತ್ತೆ ಬದುಕುವಾಗ ಅವಳು ಆ ಏಳು ಜನ್ರಲ್ಲಿ ಯಾರಿಗೆ ಹೆಂಡತಿ ಆಗ್ತಾಳೆ? ಯಾಕಂದ್ರೆ ಏಳೂ ಜನ ಅವಳನ್ನ ಮದುವೆ ಮಾಡ್ಕೊಂಡ್ರಲ್ಲಾ” ಅಂದ್ರು. 24 ಅದಕ್ಕೆ ಯೇಸು “ನೀವು ತಪ್ಪಾಗಿ ಅರ್ಥ ಮಾಡ್ಕೊಂಡಿದ್ದೀರ. ಪವಿತ್ರ ಗ್ರಂಥದಲ್ಲಿ ಇರೋ ವಿಷ್ಯಗಳಾಗಲಿ ದೇವರ ಶಕ್ತಿ ಬಗ್ಗೆಯಾಗಲಿ ನಿಮಗೆ ಗೊತ್ತಿಲ್ಲ.+ 25 ಸತ್ತವರು ಬದುಕಿ ಬಂದಾಗ ಸ್ತ್ರೀಯರಾಗಲಿ ಪುರುಷರಾಗಲಿ ಮದುವೆ ಆಗಲ್ಲ. ಅವರು ಸ್ವರ್ಗದಲ್ಲಿರೋ ದೇವದೂತರ ತರ ಇರ್ತಾರೆ.+ 26 ಸತ್ತವರು ಬದುಕೋ ವಿಷ್ಯಕ್ಕೆ ಬಂದ್ರೆ, ನೀವು ಮೋಶೆ ಪುಸ್ತಕದಲ್ಲಿ ಓದಿಲ್ವಾ? ದೇವರು ಮುಳ್ಳಿನ ಪೊದೆ ಹತ್ರ ಮೋಶೆಗೆ ‘ನಾನು ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು’ ಅಂದನು.+ 27 ಆತನು ಸತ್ತವರಿಗಲ್ಲ, ಬದುಕಿರುವವರಿಗೆ ದೇವರು. ನೀವು ತುಂಬ ತಪ್ಪಾಗಿ ಅರ್ಥಮಾಡ್ಕೊಂಡಿದ್ದೀರ” ಅಂದನು.+
28 ಅಲ್ಲಿ ಆಗ್ತಾ ಇರೋ ವಾದವಿವಾದಗಳನ್ನ ಬಂದಿದ್ದ ಪಂಡಿತರಲ್ಲಿ ಒಬ್ಬ ಕೇಳಿಸ್ಕೊಳ್ತಾ ಇದ್ದ. ಯೇಸು ಕೊಟ್ಟ ಒಳ್ಳೇ ಉತ್ತರವನ್ನ ಕೇಳಿ ಅವನು ಯೇಸುಗೆ “ಎಲ್ಲ ಆಜ್ಞೆಗಳಲ್ಲಿ ತುಂಬ ಪ್ರಾಮುಖ್ಯವಾದ* ಆಜ್ಞೆ ಯಾವುದು?” ಅಂತ ಕೇಳಿದನು.+ 29 ಅದಕ್ಕೆ ಯೇಸು “‘ಇಸ್ರಾಯೇಲ್ ಜನ್ರೇ ಕೇಳಿ, ನಮ್ಮ ದೇವರಾದ ಯೆಹೋವ* ಒಬ್ಬನೇ ಯೆಹೋವ,* 30 ನಿನ್ನ ದೇವರಾದ ಯೆಹೋವನನ್ನ* ನಿನ್ನ ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ, ಪೂರ್ಣ ಮನಸ್ಸಿಂದ ಮತ್ತು ಪೂರ್ಣ ಶಕ್ತಿಯಿಂದ ಪ್ರೀತಿಸಬೇಕು.’ ಇದೇ ಪ್ರಾಮುಖ್ಯವಾದ ಆಜ್ಞೆ.+ 31 ಎರಡನೇ ಆಜ್ಞೆ ‘ನೀನು ನಿನ್ನನ್ನ ಪ್ರೀತಿಸೋ ಹಾಗೇ ಬೇರೆಯವ್ರನ್ನೂ ಪ್ರೀತಿಸಬೇಕು.’+ ಇವುಗಳಿಗಿಂತ ದೊಡ್ಡ ಆಜ್ಞೆ ಇನ್ನೊಂದಿಲ್ಲ” ಅಂದನು. 32 ಆಗ ಆ ಪಂಡಿತ “ಗುರು, ನೀನು ಚೆನ್ನಾಗಿ ಹೇಳ್ದೆ, ನೀನು ಹೇಳಿದ್ದು ಸತ್ಯ. ‘ದೇವರು ಒಬ್ಬನೇ, ಆತನ ಹಾಗೆ ಬೇರೆ ಯಾರೂ ಇಲ್ಲ’.+ 33 ಆತನನ್ನ ಪೂರ್ಣ ಹೃದಯದಿಂದ, ಪೂರ್ಣ ತಿಳುವಳಿಕೆಯಿಂದ, ಪೂರ್ಣ ಶಕ್ತಿಯಿಂದ ಪ್ರೀತಿಸೋದು ಮತ್ತು ಬೇರೆಯವ್ರನ್ನ ನಮ್ಮ ತರಾನೇ ಪ್ರೀತಿಸೋದು ಎಲ್ಲ ಸರ್ವಾಂಗಹೋಮ, ಬಲಿಗಳಿಗಿಂತ ಎಷ್ಟೋ ಹೆಚ್ಚು ಬೆಲೆಬಾಳುತ್ತೆ” ಅಂದನು.+ 34 ಅವನು ಚೆನ್ನಾಗಿ ಯೋಚಿಸಿ ಉತ್ರ ಕೊಟ್ಟದ್ದನ್ನ ನೋಡಿ ಯೇಸು “ನೀನು ದೇವರ ಆಳ್ವಿಕೆಗೆ ಜಾಸ್ತಿ ದೂರದಲ್ಲೇನೂ ಇಲ್ಲ” ಅಂದನು. ಆಮೇಲೆ ಯೇಸುವನ್ನ ಪ್ರಶ್ನೆ ಮಾಡೋಕೆ ಯಾರೂ ಧೈರ್ಯ ಮಾಡಲಿಲ್ಲ.+
35 ಆದ್ರೆ ಯೇಸು ದೇವಾಲಯದಲ್ಲಿ ಕಲಿಸೋದನ್ನ ನಿಲ್ಲಿಸಲಿಲ್ಲ. ಆತನು ಹೀಗೆ ಹೇಳಿದನು: “ಕ್ರಿಸ್ತ ದಾವೀದನ ಮಗ ಅಂತ ಪಂಡಿತರು ಯಾಕೆ ಹೇಳ್ತಾರೆ?+ 36 ‘ಯೆಹೋವ* ನನ್ನ ಒಡೆಯನಿಗೆ, ನಿನ್ನ ಶತ್ರುಗಳನ್ನ ನಾನು ನಿನ್ನ ಕಾಲಿನ ಕೆಳಗೆ ಹಾಕೋ ತನಕ ನೀನು ನನ್ನ ಬಲಗಡೆಯಲ್ಲಿ ಕೂತ್ಕೊ’+ ಅಂತ ಹೇಳಿದ್ದನ್ನ ದಾವೀದ ಪವಿತ್ರಶಕ್ತಿಯ ಸಹಾಯದಿಂದ+ ಬರೆದ. 37 ಇಲ್ಲಿ ದಾವೀದ ಕ್ರಿಸ್ತನನ್ನ ಒಡೆಯ ಅಂತಿದ್ದಾನೆ. ಹಾಗಿದ್ರೆ ಕ್ರಿಸ್ತ ದಾವೀದನ ಮಗ ಹೇಗೆ ಆಗ್ತಾನೆ?”+ ಅಂತ ಕೇಳಿದನು.
ಯೇಸು ಹೇಳೋದನ್ನ ತುಂಬ ಜನ ಸಂತೋಷದಿಂದ ಕೇಳ್ತಾ ಇದ್ರು. 38 ಆತನು ಕಲಿಸ್ತಾ ಇರುವಾಗ “ಪಂಡಿತರ ವಿಷ್ಯದಲ್ಲಿ ಎಚ್ಚರವಾಗಿ ಇರಿ. ಅವರು ಉದ್ದವಾದ ಅಂಗಿಗಳನ್ನ ಹಾಕೊಂಡು ತಿರುಗಾಡೋದು, ಸಾರ್ವಜನಿಕ ಸ್ಥಳಗಳಲ್ಲಿ ಜನ್ರಿಂದ ನಮಸ್ಕಾರ ಹೊಡಿಸ್ಕೊಳ್ಳೋದು ಅವ್ರಿಗೆ ತುಂಬ ಇಷ್ಟ.+ 39 ಅವ್ರಿಗೆ ಸಭಾಮಂದಿರಗಳಲ್ಲಿ ಮೊದಲ ಸಾಲು ಬೇಕು. ಔತಣದಲ್ಲಿ ವಿಶೇಷ ಸ್ಥಾನ ಬೇಕು.+ 40 ಅವರು ವಿಧವೆಯರ ಆಸ್ತಿ* ನುಂಗಿಬಿಡ್ತಾರೆ, ಎಲ್ರಿಗೆ ಕಾಣಿಸಬೇಕಂತ ದೊಡ್ಡದೊಡ್ಡ ಪ್ರಾರ್ಥನೆ ಮಾಡ್ತಾರೆ. ಇದಕ್ಕೆಲ್ಲ ಅವ್ರಿಗೆ ಕಠಿಣ ತೀರ್ಪು ಕಾದಿದೆ” ಅಂದನು.
41 ಆಮೇಲೆ ಯೇಸು ಆಲಯದಲ್ಲಿ ಕಾಣಿಕೆ ಪೆಟ್ಟಿಗೆಗಳು ಕಾಣುವಷ್ಟು ದೂರದಲ್ಲಿ ಕೂತು+ ಜನ ಕಾಣಿಕೆ ಹಾಕೋದನ್ನ ನೋಡ್ತಾ ಇದ್ದನು. ತುಂಬ ಜನ ಶ್ರೀಮಂತರು ತುಂಬ ನಾಣ್ಯಗಳನ್ನ ಹಾಕ್ತಿದ್ರು.+ 42 ಆಗ ಒಬ್ಬ ಬಡ ವಿಧವೆ ಅಲ್ಲಿಗೆ ಬಂದು ತುಂಬ ಕಡಿಮೆ ಬೆಲೆಯ ಎರಡು ಚಿಕ್ಕ ನಾಣ್ಯ* ಹಾಕಿದಳು.+ 43 ಇದನ್ನ ನೋಡಿ ಆತನು ತನ್ನ ಶಿಷ್ಯರನ್ನ ಹತ್ರ ಕರೆದು “ನಿಮಗೆ ನಿಜ ಹೇಳ್ತೀನಿ, ಕಾಣಿಕೆ ಪೆಟ್ಟಿಗೆಯಲ್ಲಿ ಹಣ ಹಾಕಿದ ಅವ್ರೆಲ್ಲರಿಗಿಂತ ಈ ಬಡ ವಿಧವೆ ಹೆಚ್ಚು ಕಾಣಿಕೆ ಹಾಕಿದ್ದಾಳೆ.+ 44 ಯಾಕಂದ್ರೆ ಅವ್ರೆಲ್ಲ ತಮ್ಮ ಹತ್ರ ಇದ್ದ ಜಾಸ್ತಿ ಹಣದಿಂದ ಕಾಣಿಕೆ ಹಾಕಿದ್ರು. ಆದ್ರೆ ಈ ವಿಧವೆ ಜೀವನ ನಡಿಸೋಕೆ ಬೇಕಾಗಿದ್ದ* ಎಲ್ಲಾ ಹಣ ಹಾಕಿಬಿಟ್ಟಳು. ತನ್ನ ಹತ್ರ ಇದ್ದದನ್ನೆಲ್ಲ ಹಾಕಿಬಿಟ್ಟಳು” ಅಂದನು.+