ನಿಮ್ಮ ಮೇಜನ್ನು ಹಿಡಿಸುವಂಥದ್ದು ಗ್ರಂಥಾಲಯ
ನಿಮ್ಮ ಬೆರಳ ಕೊನೆಗಳಲ್ಲಿ, ಲೋಕದ ಅತ್ಯಂತ ದೊಡ್ಡ ಗ್ರಂಥಾಲಯಗಳನ್ನು ಮೀರಿಸುವ ಸಾಹಿತ್ಯ ಸಂಗ್ರಹವಿರುವುದನ್ನು ಭಾವಿಸಿರಿ. ಪುಸ್ತಕ, ಪತ್ರಿಕೆ, ವಾರ್ತಾಪತ್ರಿಕೆ ಮತಿತ್ತರ ಸಾಹಿತ್ಯಗಳಿಂದ ತೆಗೆದಿರುವ, ಕೋಟ್ಯಂತರ ಲೇಖನಗಳು ನಿಮ್ಮ ಮೇಜಿನಲ್ಲೇ ಹಿಡಿಸುವದನ್ನು ಭಾವಿಸಿರಿ.
‘ಇದು ಹೇಗೆ?’ ಎಂದು ನೀವು ಪ್ರಶ್ನಿಸಬಹುದು. ಇದಕ್ಕೆ ಉತ್ತರ ಆಧುನಿಕ ತಾಂತ್ರಿಕ ವಿಜ್ಞಾನ ಕಂಡುಹಿಡಿದಿರುವ ವಸ್ತುಗಳ ರೂಪದಲ್ಲಿ ಬರುತ್ತದೆ: ಪರ್ಸನಲ್ ಕಂಪ್ಯೂಟರ್, ಮೋಡಮ್ ಮತ್ತು ಟೆಲಿಪೋನ್. (ಮೋಡಮ್ ಎಂಬದು ಕಂಪ್ಯೂಟರ್ ಸಮಾಚಾರಗಳನ್ನು ಟೆಲಿಪೋನ್ ಮೂಲಕ ರವಾನಿಸಿ ಸ್ವೀಕರಿಸುವ ಉಪಕರಣ) ಈ ಮೂರು ಸಾಧನಗಳು ನಿಮ್ಮ ಮೇಜಿನ ಮೇಲ್ಭಾಗವನ್ನು ಪುಸ್ತಕಾಲಯವಾಗಿ ರೂಪಾಂತರಿಸಬಲ್ಲವು.
ಸಾಂಪ್ರದಾಯಿಕ ಗ್ರಂಥಾಲಯದಲ್ಲಿ ಸಹಸ್ರಾರು ಪುಸ್ತಕ, ಪತ್ರಿಕೆಗಳು ಶ್ರಮಶೃದ್ಧೆಯಿಂದ ಏರ್ಪಡಿಸಲ್ಪಟ್ಟಿರುವುದಾದರೂ, ಜಾಗ್ರತೆಯಿಂದ ಮಾಡಿರುವ ಮುದ್ರಿತ ಪುಸ್ತಕಗಳ ವಿವರಪಟ್ಟಿಯನ್ನು ಹುಡುಕಲು ಸಮಯ ಅಗತ್ಯ. ಈ ವಿವರಪಟ್ಟಿಯನ್ನು ಹುಡುಕಿದ ಮೇಲೆಯೂ ನೀವು ಬಯಸುವ ಪುಸ್ತಕವು ಗ್ರಂಥಾಲಯದಲ್ಲಿದೆ ಎಂಬುದಕ್ಕೆ ಯಾವ ಖಾತರಿಯೂ ಇಲ್ಲ.
ಹೊಸ ಯುಗ
ಆದರೆ ಡೆಸ್ಕ್ಟಾಪ್ ಕಂಪ್ಯೂಟರ್ ಮತ್ತು ಮೋಡಮ್ನ ಮೂಲಕ ಒಬ್ಬನು ಪುಸ್ತಕ, ಪತ್ರಿಕೆ, ವಾರ್ತಾವಾಹಕ ಮತ್ತು ಇತರ ಮೂಲಗಳಿಂದ ತೆಗೆಯಲ್ಪಟ್ಟು ಕಂಪ್ಯೂಟರ್ ಫೈಲು (ಡೇಟಾಬೇಸ್)ಗಳಾಗಿ ವಿವರ ಪಟ್ಟಿ ಮಾಡಲ್ಪಟ್ಟಿದ್ದು ಸುಲಭ ನಿರ್ದೇಶಗಳಿಂದ ದೊರೆಯುವ ಲಕ್ಷಾಂತರ ವಿಷಯಗಳಿರುವ ದೊಡ್ಡ ಕಂಪ್ಯೂಟರ್ ವ್ಯವಸ್ಥೆಯಿಂದ ಸಮಾಚಾರಗಳನ್ನು ಪಡೆಯಬಲ್ಲನು.
ದೃಷ್ಟಾಂತಕ್ಕೆ, ಒಬ್ಬ ವ್ಯಾಪಾರಿಯು ಬಂಡವಾಳ ಕೊಳ್ಳುವ (‘ಲೀವರೆಜ್ಡ್ ಬೈಔಟ್ಸ್’) ವಿಷಯ ಸಮಾಚಾರ ಪಡೆಯಬಯಸುತ್ತಾನೆ. ಆಗ ಆತನು ಸಂಕೇತಪದವನ್ನುಪಯೋಗಿಸಿ ಕಂಪ್ಯೂಟರನ್ನು ಆರಂಭಿಸಿ ಪತ್ರಿಕೆ (ಮ್ಯಾಗಜೀನ್)ಗಳ ಕುರಿತು ಸಮಾಚಾರವನ್ನು ಕೇಳಿಕೊಳ್ಳುತ್ತಾನೆ. ಪತ್ರಿಕೆಗಳಿಗೆ ಜೋಡಿಸಲ್ಪಡುವ ಅವನು ಈಗ ‘ಲೀವರೆಜ್ಡ್ ಬೈಔಟ್ಸ್’ ಎಂಬ ಪದಗಳನ್ನು ಟೈಪ್ ಮಾಡಿ ವಿಷಯವನ್ನು ಹುಡುಕುವುದಾದರೆ ಒಡನೆ 16 ವರ್ಷಗಳಿಂದ ಸಂಗ್ರಹಿಸಲ್ಪಟ್ಟಿರುವ 14 ಲಕ್ಷ ಲೇಖನಗಳನ್ನು ಕೆಲವೇ ಸೆಕಂಡುಗಳಲ್ಲಿ ಕಂಪ್ಯೂಟರ್ ಹುಡುಕುತ್ತದೆ.
“ಲೀವರೆಜ್ಡ್ ಬೈಔಟ್ಸ್” ಎಂಬ ಪದಗಳಿರುವ ಪ್ರತಿಯೊಂದು ಲೇಖನವನ್ನು ಕರೆದು ಅವುಗಳ ಒಟ್ಟು ಮೊತ್ತ ಪ್ರದರ್ಶಿಸಲ್ಪಡುತ್ತದೆ. ಬಳಿಕ “ಡಿಸ್ಪ್ಲೇ” ಎಂದು ಆಜ್ಞಾಪಿಸಿದಾಗ ಇತ್ತೀಚೆಗೆ ಪ್ರಕಟಿಸಲಾಗಿದ್ದ ಲೇಖನದಿಂದ ಹಿಡಿದು ಪ್ರತಿಯೊಂದು ಲೇಖನದ ಹೆಸರು, ತಾರೀಕು, ಲೇಖಕ ಮತ್ತು ಹೆಚ್ಚು ಮಾಹಿತಿ ಕೊಡುವ ಸಾರಾಂಶವು ಕೆಲವೇ ಸೆಕೆಂಡುಗಳಲ್ಲಿ ಪ್ರದರ್ಶಿಸಲ್ಪಡುತ್ತದೆ. ಇದರ ಖರ್ಚು? ಎರಡು ಅಥವಾ ಮೂರು ಡಾಲರು (ರೂ.30—45), ಅಷ್ಟೇ.
ಒಬ್ಬ ಗ್ರಹಿಣಿ ಈ ಪದ್ಧತಿಯ ಮೂಲಕ ಲೋಕದಾದ್ಯಂತವಾಗಿ ವಿವಿಧ ದೇಶಗಳ ಪಾಕವಿಧಾನವನ್ನು ನೋಡಿ ಅಡಿಗೆಯ ಹೊಸ ವಿಚಾರಗಳನ್ನು ಪಡೆಯಬಲ್ಲಳು. ಗೃಹಾಲಂಕಾರ, ಹೊಸ ಸ್ಟೈಲು ಮತ್ತು ಫ್ಯಾಶನುಗಳು ಸಹ ಕಂಪ್ಯೂಟರಿನಲ್ಲಿ ದೊರೆಯುತ್ತವೆ. ವೈದ್ಯರು ಸೂಕ್ಷ್ಮದರ್ಶಕಜೀವಿಶಾಸ್ತ್ರ (ಮೈಕ್ರೊಬಯಾಲಜಿ) ದ ಅತ್ಯಂತ ಆಧುನಿಕ ಸಂಶೋಧನೆ ಮತ್ತು ಔಷಧಶಾಸ್ತ್ರ ಉದ್ಯೋಗದ ಹೊಸ ನಿಯಮಗಳನ್ನು ಹುಡುಕಿ ಇದರಿಂದ ಪಡೆಯಬಲ್ಲರು. ವಕೀಲರು ತಮ್ಮ ಈಗಿನ ಕೇಸುಗಳಿಗೆ ಹೋಲುವ ಕೇಸುಗಳನ್ನು ಹುಡುಕಿ ಕೋರ್ಟುಗಳು ಕೊಟ್ಟಿರುವ ವಿವಿಧ ರೀತಿಯ ನ್ಯಾಯತೀರ್ಪುಗಳನ್ನು ಸಂಶೋಧಿಸಬಹುದು.
ವಿದ್ಯಾರ್ಥಿಯು ಶಾಲೆಯಲ್ಲಿ ಕಲಿಸಲ್ಪಡುವ ಯಾವುದೇ ಪಾಠವನ್ನು ಪರೀಕ್ಷಿಸಬಹುದು. ವ್ಯಾಪಾರಿಯು “ಲೀವರೆಜ್ಡ್ ಬೈಔಟ್ಸ್”ನ ಕುರಿತು ಕಂಡುಹಿಡಿದ ರೀತಿಯಲ್ಲೇ ವಿದ್ಯಾರ್ಥಿಯು ಕಲ್ಪನಾತ್ಮಕವಾದ “ಕರಿ ರಂಧ್ರ” ದ ವಿಷಯದಲ್ಲಿ ಕಂಡುಹಿಡಿಯಬಹುದು. ಈ ಸಂಶೋಧನೆಯ ಸಹಾಯವು ಶಿಕ್ಷಕ, ಲೇಖಕ, ಸಂಶೋಧಕ ಮತ್ತು ಸಂಸ್ಥಾರೂಪದ ವ್ಯಕ್ತಿಗಳಿಗೂ ರಸಕರವಾಗಿರುವುದು.
ಖರ್ಚಿನ ವಿಷಯ ಹೆಚ್ಚಿನ ಮಾಹಿತಿ
ಇದಕ್ಕೆ ಬೆಲೆ ಕಡಿಮೆಯಾದರೂ ಆಗುವ ಖರ್ಚು ನೀವು ಯಾವ ಕಂಪ್ಯೂಟರ್ ಫೈಲನ್ನು ಉಪಯೋಗಿಸುತ್ತೀರಿ ಎಂಬುದರ ಮೇಲೆ ಹೊಂದಿಕೊಂಡಿದೆ. ಉದ್ಯಮಗಳಂತೆ, ಖರ್ಚಿನಲ್ಲಿ ಕಂಪೆನಿಯಿಂದ ಕಂಪೆನಿಗೆ ವ್ಯತ್ಯಾಸವಿದೆ.
ಆದರೆ ಸಾಧಾರಣವಾಗಿ, ನೀವು ಕಂಪ್ಯೂಟರಿಗೆ ಎಷ್ಟು ಸಮಯ ಜೋಡಿಸಿಟ್ಟಿರುತ್ತೀರಿ ಮತ್ತು ನಿಮ್ಮ ಅನ್ವೇಷಣೆಗೆ ಸಿಕ್ಕಿದ ಫಲದ ಮೇಲೆ ಖರ್ಚು ಹೊಂದಿಕೊಂಡಿದೆ. ಒಂದು ಸಮಾಚಾರ ಸಂಸ್ಥೆಯು ಸರಾಸರಿಯಾಗಿ, ನಿಮಿಶಕ್ಕೆ 1 ಡಾಲರ್ ಖರ್ಚು ಹೊರಿಸುತ್ತದೆ. ಆದರೆ ಸರಾಸರಿ ಅನ್ವೇಷಣೆಗೆ 10 ನಿಮಿಷ ಹಿಡಿಯುತ್ತದೆ. ಖರ್ಚನ್ನು ಪರಿಗಣಿಸುವಾಗ, ದಿನದ ಯಾವ ಸಮಯದಲ್ಲಿ ನೀವು ಕಂಪ್ಯೂಟರನ್ನು ಉಪಯೋಗಿಸುತ್ತೀರೆಂಬುದೂ ವ್ಯತ್ಯಾಸ ತರುವ ಕೆಲವು ವಿಷಯಗಳಲ್ಲಿ ಒಂದು. ಸಾಮಾನ್ಯ ವ್ಯಾಪಾರ ಸಮಯದ ಹೊರಗಿನ ಸಮಯದಲ್ಲಿ ಅನ್ವೇಷಣೆ ನಡೆಯುವಲ್ಲಿ ಖರ್ಚು ಅರ್ಧದಷ್ಟೂ ಕಡಮೆಯಾಗಬಲ್ಲದು.
ಖರ್ಚನ್ನು ಇನ್ನೂ ಕಡಮೆ ಮಾಡಲಿಕ್ಕಾಗಿ ಇಂಥ ಸಂಸ್ಥೆಗಳು ಗಿರಾಕಿಗಳ ಪ್ರತಿನಿಧಿಗಳನ್ನು ಅಥವಾ ವಿಷಯ ನಿಪುಣರನ್ನು ಒದಗಿಸುತ್ತದೆ. ಈ ಪರಿಣಿತ ಲೈಬ್ರೇರಿಯನರು ಅನ್ವೇಷಣೆಯ ಮೊದಲೇ, ಒಂದು ಅನ್ವೇಷಣೆಯ ಉಪಾಯವನ್ನು ನಿರ್ಣಯಿಸಲು ಸಹಾಯಮಾಡುತ್ತಾರೆ. ಇದು ಸಮಯವನ್ನು ಉಳಿಸುವುದರಿಂದ ಹಣವನ್ನೂ ಉಳಿಸುತ್ತದೆ. ಉದ್ಯೋಗಸ್ಥರಿಗೆ ಮತ್ತು ವಿಶೇಷವಾಗಿ ವಕೀಲರಿಗೆ ಸಹಾಯ ನೀಡುವ ಸಮಾಚಾರ ಸಂಸ್ಥೆಗಳು ಮಾಸಿಕವಾಗಿ ಖರ್ಚನ್ನು ಹೊರಿಸುತ್ತವೆ. ರಸಕರವಾದ ವಿಷಯವೇನಂದರೆ ಕೆಲವು ವಕೀಲರ ಚಿಕ್ಕ ಕಂಪೆನಿಗಳು ಸಮಾಚಾರಸಂಸ್ಥೆಯ ಚಂದಾದಾರರಾಗಿರುವ ಮತ್ತು ಪೂರ್ಣ ಸಮಯದ ಸಂಶೋಧಕರಿರುವ ವಕೀಲರ ದೊಡ್ಡ ಕಂಪೆನಿಗಳಿಂದ ಸಮಯ ತಕ್ಕೊಂಡು ತಮ್ಮ ಖರ್ಚನ್ನು ಕಡಿಮೆಮಾಡುತ್ತವೆ.
ಆದರೆ ಕಂಪ್ಯೂಟರುಗಳು ನಿಮ್ಮನ್ನು ಹೆದರಿಸುವುದಾದರೆ ಏನು? ಡೆಸ್ಕ್ಟಾಪ್ ಕಂಪ್ಯೂಟರ್, ಮೋಡಮ್ ಮತ್ತು ಇನ್ನೊಂದು ಪೋನ್ ಲೈನನ್ನು ಖರೀದಿಸಲು ನಿಮಗೆ ಸಾಧ್ಯವಿಲ್ಲದಿರುವುದಾದರೆ ಏನು? ಒಂದು ವೇಳೆ ಸಾಧ್ಯವಿರುವುದಾದರೂ ಸ್ವಂತ ಅನ್ವೇಷಣೆ ನಡೆಸಲು ಸಮಯವಿಲ್ಲದಿರುವುದಾದರೆ ಏನು?
ಈ ಸೇವೆಯ ಆರಂಭದಿಂದ, ಗ್ರಂಥಾಲಯ ಮತ್ತು ಕಾಲೇಜುಗಳು ಇದರಲ್ಲಿ ಆಸಕ್ತಿ ವಹಿಸಿವೆ. ಅವುಗಳ ಕುರಿತು ಹೆಚ್ಚು ಸಮಾಚಾರವನ್ನು ಪಡೆಯಪ್ರಯತ್ನಿಸಿದಾಗ ಆಕರ್ಷಣೆ ಪರಸ್ಪರವೆಂದು ಅವುಗಳು ಕಂಡುಹಿಡಿದರು. ಸಮಾಚಾರ ಸಂಸ್ಥೆಗಳು, ನಗರದ ಮತ್ತು ಕಾಲೇಜ್ ಲೈಬ್ರೆರಿಗಳು ತಮ್ಮ ಸೇವೆಗೆ ಬಹಿರ್ದ್ವಾರವೆಂದು ನೋಡಿದಾಗ ಲೈಬ್ರೆರಿಗಳು ಇಂಥ ಸೇವೆ ಆಕರ್ಷಕ ಹಾಗೂ ಬಲಾಢ್ಯವಾದ ಉಪಕರಣವೆಂದು ತಿಳಿದವು. ಇದರ ಸಾಧ್ಯತೆಯನ್ನು ಕಂಡುಹಿಡಿದ ಬಳಿಕ ಅವುಗಳ ಮಧ್ಯ ಸಂಬಂಧ ಹೊರಹೊಮ್ಮಿತು.
ಇಂಥ ಸಮಾಚಾರ ಸಂಸ್ಥೆಗಳು ಕಡಮೆ ಖರ್ಚಿಗೆ ತಮ್ಮ ಸೇವೆಯನ್ನು ಇಂಥ ಸಂಘಗಳಿಗೆ ಒದಗಿಸಿದಾಗ ಅವು ತಮ್ಮ ಉಳಿತಾಯವನ್ನು ತಮ್ಮ ಗಿರಾಕಿಗಳಿಗೆ ಒದಗಿಸಿದವು. ಈಗ ಪೋಷಕ ಗಿರಾಕಿಗಳಾದ ಅಥವಾ ವಿದ್ಯಾರ್ಥಿಗಳಾದ ನೀವು ಕಂಪ್ಯೂಟರ್ ಸಾಧನವಿಲ್ಲದೆನೇ ಅನ್ವೇಷಣೆಯನ್ನು ಏರ್ಪಡಿಸಬಹುದು.
ಆಧುನಿಕ ತಾಂತ್ರಿಕ ವಿಜ್ಞಾನದ ಉಪಕರಣಗಳಾದ ಮೈಕ್ರೊವೇವ್ ಅವನ್ ಮತ್ತು ಡಿಜಿಟಲ್ ವಾಚುಗಳಂತೆ ಈ ಅನ್ವೇಷಣೆಗಳ ಖರ್ಚು ಕಡಮೆಯಾಗುತ್ತಾ ಇದೆ. ಇದು, ನಿಮ್ಮ ಮೇಜನ್ನು ಹಿಡಿಸುವ ಗ್ರಂಥಾಲಯವನ್ನು ಅನೇಕ ಜನರು ಖರೀದಿಸ ಶಕ್ತರಾಗುವಂತೆ ಮಾಡುತ್ತದೆ. (g89 8/8)
[ಪುಟ 27ರಲ್ಲಿರುವಚೌಕ]
ಹೊಸ ಲೈಬ್ರೆರಿಯನ್
ನಗರದಲ್ಲಿ ಹೊಸ ಲೈಬ್ರೆರಿಯನ್ ಬಂದಿದ್ದಾನೆ ಮತ್ತು ಅವನ ಭೇಟಿಗೆ ನೀವು ನಿಮ್ಮ ಮೇಜನ್ನು ಬಿಟ್ಟು ಹೋಗಬೇಕೆಂದಿಲ್ಲ. ಬದಲಿಗೆ, ನಿಮ್ಮ ಟೆಲಿಪೋನ್ ಮೇಲೆತ್ತಿರಿ. ಅವನನ್ನು ಸಮಾಚಾರ ದಳ್ಳಾಳಿಯೆಂದು ಕರೆಯುತ್ತಾರೆ. ಆದರೆ ಅವನು ಸ್ಥಳೀಕ ಲೈಬ್ರೆರಿಯಲ್ಲಿಲ್ಲ. ಅವನು ಆಫೀಸಿನ ಮೇಜಿನ ಮುಂದೆ ಕುಳಿತು, ಈ ಪುಟಗಳಲ್ಲಿ ಹೇಳಿರುವ ವಿಶೇಷ ಟೆಲಿಪೋನ್ ಮೂಲಕ ನಿಮಗೆ ಬೇಕಾದ ಸಂಶೋಧನೆಯನ್ನು, ಹಣ ತೆರುವುದಾದರೆ ನಡೆಸುತ್ತಾನೆ.
ಅವನ ಕೆಲಸ ಕಾಣುವಷ್ಟು ಸುಲಭವಲ್ಲ. 3,000ಕ್ಕೂ ಹೆಚ್ಚು ಕಂಪ್ಯೂಟರ್ ಫೈಲು(ಡೇಟಾಬೇಸ್)ಗಳಲ್ಲಿ ಯಾವುದನ್ನು ಹುಡುಕಬೇಕೆಂದು ಅವನಿಗೆ ಗೊತ್ತಿರಬೇಕು, ಮಾತ್ರವಲ್ಲ ಒಂದು ನಿರ್ದಿಷ್ಟ ಡೇಟಾಬೇಸಿನ ಮಧ್ಯೆ ಹೇಗೆ ಸರಾಗವಾಗಿ ಮುಂದುವರಿಯಬೇಕು ಮತ್ತು ಅನ್ವೇಷಣೆಗೆ ಯಾವ ಮುಖ್ಯ ಪದವನ್ನು ಉಪಯೋಗಿಸಬೇಕೆಂದೂ ತಿಳಿದಿರಬೇಕು.