ಅಭದ್ರತೆ—ಒಂದು ಭೌಗೋಲಿಕ ಪಿಡುಗು
ನಿಮ್ಮ ಜೀವ ಮತ್ತು ಜೀವನ ಶೈಲಿಯು, ಅಭದ್ರವೂ ಅನಿಶ್ಚಿತವೂ ಆಗಿದೆಯೆಂದು ಕೆಲವೊಮ್ಮೆ ನಿಮಗೆ ಅನಿಸುತ್ತದೊ? ಈ ರೀತಿಯ ಅನಿಸಿಕೆ ನಿಮಗೊಬ್ಬರಿಗೇ ಅಲ್ಲ, ಅನೇಕರಿಗೆ ಆಗುತ್ತದೆ. ಅಭದ್ರತೆಯು, ರಾಷ್ಟ್ರೀಯ, ಧಾರ್ಮಿಕ, ಇಲ್ಲವೆ ಸಾಮಾಜಿಕ ಅಡೆತಡೆಗಳಿಂದ ನಿರ್ಬಂಧಿಸಲ್ಪಡದೆ, ಒಂದು ವ್ಯಾಧಿಯಂತೆ ಹಬ್ಬುತ್ತಾ, ಲೋಕದ ಮೂಲೆ ಮೂಲೆಯಲ್ಲಿರುವ ಜನರನ್ನು ಬಾಧಿಸುತ್ತದೆ.
ನಮ್ಮ ಜೀವಿತವು ಅಭದ್ರತೆಯಿಂದ ಕೂಡಿರುವಾಗ, ನಾವು “ಭೀತಿ ಮತ್ತು ಕಳವಳದಿಂದ ಸುತ್ತುವರಿಯಲ್ಪಡುತ್ತೇವೆ” ಎಂದು, ಒಂದು ಶಬ್ದಕೋಶವು ಹೇಳುತ್ತದೆ. ಕಳವಳವು ಒಂದು ಭಾವನಾತ್ಮಕ ಹೊರೆಯಾಗಿದ್ದು, ಒತ್ತಡವನ್ನು ಉಂಟುಮಾಡುತ್ತದೆ. ಇದು ನಮ್ಮ ಆರೋಗ್ಯವನ್ನು ಕೆಡಿಸಬಲ್ಲದು. ಆದರೆ, ನಮ್ಮಲ್ಲಿ ಕಳವಳ ಮತ್ತು ಅಭದ್ರತೆಯ ಅನಿಸಿಕೆಯಾಗುವುದಾದರೂ ಏಕೆ?
ಯೂರೋಪಿನಲ್ಲಿ ಕಳವಳ
ಐರೋಪ್ಯ ರಾಷ್ಟ್ರಗಳ ಒಕ್ಕೂಟ (ಈಯೂ)ದಲ್ಲಿ, ಆರು ವ್ಯಕ್ತಿಗಳಲ್ಲಿ ಒಬ್ಬನು ಬಡತನ ರೇಖೆಯ ಕೆಳಗೆ ಜೀವಿಸುತ್ತಾನೆ, 1.8 ಕೋಟಿಯಷ್ಟು ಜನರು ಉದ್ಯೋಗವಿಲ್ಲದೆ ಇದ್ದಾರೆ, ಮತ್ತು ಅಸಂಖ್ಯಾತ ಜನರು ತಮ್ಮ ಕೆಲಸಗಳನ್ನು ಕಳೆದುಕೊಳ್ಳುವ ಭಯದಲ್ಲಿ ಜೀವಿಸುತ್ತಾರೆ. ಐರೋಪ್ಯ ಒಕ್ಕೂಟದ ಹಲವಾರು ರಾಷ್ಟ್ರಗಳಲ್ಲಿರುವ ಹೆತ್ತವರು, ಮಕ್ಕಳಕಾಮಿಗಳಿಂದ ತಮ್ಮ ಮಕ್ಕಳು ಎದುರಿಸುವ ಬೆದರಿಕೆಯ ಕಾರಣ ಭಯಭೀತರಾಗಿದ್ದಾರೆ. ಐರೋಪ್ಯ ಒಕ್ಕೂಟದ ಒಂದು ರಾಷ್ಟ್ರದಲ್ಲಿ, ಮೂವರಲ್ಲಿ ಇಬ್ಬರು, ಅಪರಾಧದ ಬೆದರಿಕೆಯಿಂದ ಕಳವಳಗೊಂಡಿದ್ದಾರೆ. ಐರೋಪ್ಯ ಒಕ್ಕೂಟದ ಇತರ ನಿವಾಸಿಗಳು, ಖಾಸಗಿ ಸ್ವತ್ತಿನ ನಾಶನ, ಭಯೋತ್ಪಾದನೆ, ಮತ್ತು ಮಾಲಿನ್ಯದ ಕಾರಣದಿಂದ ದಿಗಿಲುಗೊಂಡಿದ್ದಾರೆ.
ಜೀವನ ಮತ್ತು ಜೀವನೋಪಾಯವು ಇಂತಹ ಸಾಮಾಜಿಕ ಕುಂದುಕೊರತೆಗಳಿಂದ ಮಾತ್ರವಲ್ಲ, ನೈಸರ್ಗಿಕ ವಿಪತ್ತುಗಳ ಕಾರಣದಿಂದಲೂ ಗಂಡಾಂತರದಲ್ಲಿದೆ. ಉದಾಹರಣೆಗೆ, 1997 ಮತ್ತು 1998ರಲ್ಲಿ, ಧಾರಾಕಾರವಾದ ಮಳೆ, ಮಣ್ಣಿನ ಪ್ರವಾಹಗಳು, ಮತ್ತು ಸುಂಟರಗಾಳಿಗಳು, ಅಮೆರಿಕದ ಕೆಲವೊಂದು ಭಾಗಗಳನ್ನು ಧ್ವಂಸಮಾಡಿದವು. 1997ರಲ್ಲಿ, ಓಡರ್ ಮತ್ತು ನೈಸ್ ನದಿಗಳು ದಡಮೀರಿ ಹರಿದಾಗ, ಮಧ್ಯ ಯೂರೋಪಿನ ಕ್ಷೇತ್ರವು ನೀರಿನ ಪ್ರವಾಹದಲ್ಲಿ ಸಿಲುಕಿಕೊಂಡಿತು. ಪೋಲಿಟಿಕಾ ಎಂಬ ಪೋಲಿಷ್ ವಾರಪತ್ರಿಕೆಗನುಸಾರ, ಆ ಪ್ರವಾಹವು ವ್ಯವಸಾಯದ ದೊಡ್ಡ ಕ್ಷೇತ್ರಗಳನ್ನು ಮತ್ತು 86 ನಗರಗಳು ಹಾಗೂ ಪಟ್ಟಣಗಳನ್ನು ಮತ್ತು ಸುಮಾರು 900 ಹಳ್ಳಿಗಳನ್ನು ನೀರಿನಲ್ಲಿ ಮುಳುಗಿಸಿತು. ಸುಮಾರು 50,000ದಷ್ಟು ಕುಟುಂಬದವರ ಬೆಳೆಗಳು ನಷ್ಟವಾದವು, ಹಾಗೂ ಸುಮಾರು 50 ಜನರು ಮೃತಪಟ್ಟರು. ಮತ್ತು 1998ರ ಆರಂಭದಲ್ಲಾದ ಮಣ್ಣಿನ ಪ್ರವಾಹಗಳಲ್ಲಿ, ದಕ್ಷಿಣ ಇಟಲಿಯಲ್ಲಿ ಅಸಂಖ್ಯಾತ ಜನರನ್ನು ಕೊಂದವು.
ವೈಯಕ್ತಿಕ ಭದ್ರತೆಯ ವಿಷಯ
ಹತ್ತು ವರ್ಷಗಳ ಹಿಂದೆ ಇದ್ದುದಕ್ಕಿಂತಲೂ, ಈಗ ಜೀವಿತವು ಹೆಚ್ಚು ಭದ್ರವಾಗಿದೆ ಎಂಬ ಆಶ್ವಾಸನೆ ನಮಗೆ ನೀಡಲ್ಪಟ್ಟಿಲ್ಲವೊ? ಶೀತಲ ಯುದ್ಧದ ಸಮಾಪ್ತಿಯು, ಸಶಸ್ತ್ರ ಸೇನೆಗಳ ಸಂಖ್ಯೆಯಲ್ಲಿ ಕಡಿತವನ್ನು ಅರ್ಥೈಸಲಿಲ್ಲವೊ? ಹೌದು, ರಾಷ್ಟ್ರೀಯ ಭದ್ರತೆಯು ಸುಧಾರಿಸಿರಬಹುದು. ಆದರೆ, ವೈಯಕ್ತಿಕ ಭದ್ರತೆಯು, ಮನೆಯಲ್ಲಿ ಮತ್ತು ಬೀದಿಯಲ್ಲಿ ಸಂಭವಿಸುವ ವಿಷಯಗಳಿಂದ ಬಾಧಿಸಲ್ಪಡುತ್ತದೆ. ನಾವು ನಮ್ಮ ಕೆಲಸವನ್ನು ಕಳೆದುಕೊಳ್ಳುವುದಾದರೆ, ಅಥವಾ ಕಳ್ಳನೊಬ್ಬನು ಇಲ್ಲವೆ ಮಕ್ಕಳಕಾಮಿಯೊಬ್ಬನು ಹೊರಗೆ ಅವಿತುಕೊಂಡಿದ್ದಾನೆಂದು ನಮಗೆ ಅನಿಸುವುದಾದರೆ, ದೇಶವು ಎಷ್ಟೇ ಶಸ್ತ್ರಗಳನ್ನು ನಾಶಪಡಿಸಿದರೂ, ನಮ್ಮಲ್ಲಿ ಕಳವಳದ ಹಾಗೂ ಅಭದ್ರತೆಯ ಅನಿಸಿಕೆ ಇನ್ನೂ ಇರುವುದು.
ಜೀವಿತದ ಅಭದ್ರತೆಯನ್ನು ಕೆಲವರು ಹೇಗೆ ನಿಭಾಯಿಸುತ್ತಿದ್ದಾರೆ? ಇದಕ್ಕಿಂತಲೂ ಹೆಚ್ಚಾಗಿ, ನಿಮ್ಮನ್ನೂ ಸೇರಿಸಿ, ಪ್ರತಿಯೊಬ್ಬರ ಜೀವಿತವನ್ನು ಶಾಶ್ವತವಾಗಿ ಭದ್ರವಾಗಿರಿಸಲು ಯಾವುದಾದರೂ ಒಂದು ಮಾರ್ಗವಿದೆಯೊ? ಈ ವಿಷಯಗಳು ಮುಂದಿನ ಎರಡು ಲೇಖನಗಳಲ್ಲಿ ಚರ್ಚಿಸಲ್ಪಡುವವು.
[ಪುಟ 3 ರಲ್ಲಿರುವ ಚಿತ್ರ ಕೃಪೆ]
UN PHOTO 186705/J. Isaac
[ಪುಟ 3 ರಲ್ಲಿರುವ ಚಿತ್ರ ಕೃಪೆ]
FAO photo/B. Imevbore