ಒಂದು ಭದ್ರವಾದ ಜೀವಿತದ ಅನ್ವೇಷಣೆಯಲ್ಲಿ
ಭದ್ರತೆಯು, ವಿಭಿನ್ನ ಜನರಿಗೆ ವಿಭಿನ್ನ ವಿಷಯಗಳನ್ನು ಅರ್ಥೈಸುತ್ತದೆ. ಒಬ್ಬನಿಗೆ ಭದ್ರತೆಯು ಕೆಲಸವನ್ನು ಅರ್ಥೈಸಿದರೆ, ಮತ್ತೊಬ್ಬನಿಗೆ ಅದು ಸಂಪತ್ತನ್ನು ಅರ್ಥೈಸುತ್ತದೆ; ಮೂರನೆಯ ವ್ಯಕ್ತಿಗೆ ಅಪರಾಧಮುಕ್ತ ಪರಿಸರವೇ ಭದ್ರತೆಯಾಗಿದೆ. ನಿಮಗೆ ಅದು ಬೇರೆ ಏನನ್ನಾದರೂ ಅರ್ಥೈಸುತ್ತದೊ?
ನಿಮ್ಮ ದೃಷ್ಟಿಕೋನವು ಏನೇ ಆಗಿರಲಿ, ನಿಮ್ಮ ಜೀವಿತವನ್ನು ನೀವು ಬಯಸುವಷ್ಟು ಭದ್ರವನ್ನಾಗಿ ಮಾಡಿಕೊಳ್ಳಲು ನೀವು ಪ್ರಯತ್ನಿಸುತ್ತೀರೆಂಬುದರಲ್ಲಿ ಸಂದೇಹವಿಲ್ಲ. ಯೂರೋಪಿನಲ್ಲಿರುವ ಜನರು ಒಂದಿಷ್ಟು ವೈಯಕ್ತಿಕ ಭದ್ರತೆಯನ್ನು ಪಡೆದುಕೊಳ್ಳಲು ಏನು ಮಾಡುತ್ತಿದ್ದಾರೆಂಬುದನ್ನು ಪರಿಗಣಿಸಿರಿ.
ಉಚ್ಚ ಶಿಕ್ಷಣ
ಐರೋಪ್ಯ ಕಮಿಷನ್ನ ಅಧ್ಯಕ್ಷರಾದ ಸಾಕ್ ಸಾಂಟೆಗನುಸಾರ, ಐರೋಪ್ಯ ಒಕ್ಕೂಟದಲ್ಲಿರುವ 20 ಪ್ರತಿಶತದಷ್ಟು ಯುವ ಜನರು ನಿರುದ್ಯೋಗಿಗಳಾಗಿದ್ದಾರೆ. ಆದಕಾರಣ, ಆ ಯುವ ಜನರ ಮನಸ್ಸಿನಲ್ಲಿ, ನನ್ನ ಜೀವಿತವನ್ನು ಭದ್ರಗೊಳಿಸುವ ಒಂದು ಕೆಲಸವನ್ನು ನಾನು ಹೇಗೆ ಪಡೆದುಕೊಳ್ಳಸಾಧ್ಯವಿದೆ? ಎಂಬ ಪ್ರಶ್ನೆಯೇ ಕಾಡುತ್ತಿರುತ್ತದೆ. ಈ ಗುರಿಯು ಉಚ್ಚ ಶಿಕ್ಷಣದ ಮೂಲಕ ಅತ್ಯುತ್ತಮವಾಗಿ ಸಾಧಿಸಲ್ಪಡಸಾಧ್ಯವೆಂದು ಅನೇಕರು ನಂಬುತ್ತಾರೆ. ಇದು ವಿದ್ಯಾರ್ಥಿಗಳಿಗೆ, “ಕೆಲಸವನ್ನು ಕಂಡುಕೊಳ್ಳುವುದರಲ್ಲಿ ಮಹತ್ತರವಾದ ಅವಕಾಶವನ್ನು” ಕೊಡುತ್ತದೆಂದು, ಲಂಡನಿನ ದ ಸಂಡೆ ಟೈಮ್ಸ್ ಹೇಳುತ್ತದೆ.
ಉದಾಹರಣೆಗೆ, ಜರ್ಮನಿಯಲ್ಲಿ “ಶಿಕ್ಷಣ ಮತ್ತು ಶೈಕ್ಷಣಿಕ ಸ್ಥಾನಮಾನಕ್ಕಾಗಿರುವ ಬಯಕೆಯು ಹಿಂದೆಂದಿಗಿಂತಲೂ ಹೆಚ್ಚಾಗಿದೆ” ಎಂದು ನಾಸ್ಅವಿಶೆ ನಾಯೆ ಪ್ರೆಸೆ ವರದಿಸುತ್ತದೆ. ಆ ದೇಶದಲ್ಲಿ, ವಿಶ್ವವಿದ್ಯಾನಿಲಯದ ಕೋರ್ಸನ್ನು ಮಾಡುತ್ತಾ ಒಬ್ಬ ವಿದ್ಯಾರ್ಥಿಯಾಗಿ ಜೀವಿಸಲು, ಸರಾಸರಿಯಾಗಿ 22,00,000 ರೂಪಾಯಿಗಳಷ್ಟು ವೆಚ್ಚವು ತಗಲಿದರೂ ಜನರು ಅದನ್ನೇ ಬಯಸುತ್ತಾರೆ.
ಶಿಕ್ಷಣವನ್ನು ಗಂಭೀರವಾಗಿ ಎಣಿಸುವ ಮತ್ತು ಕೆಲಸದ ಭದ್ರತೆಯನ್ನು ಬಯಸುವ ಯುವ ಜನರು ಪ್ರಶಂಸಾರ್ಹರಾಗಿದ್ದಾರೆ. ಮತ್ತು ಒಬ್ಬನಿಗೆ ಕೌಶಲತೆಗಳು ಹಾಗೂ ಅರ್ಹತೆಗಳಿರುವಾಗ, ಉದ್ಯೋಗವನ್ನು ಪಡೆದುಕೊಳ್ಳುವುದು ಹೆಚ್ಚು ಸುಲಭವಾಗಿರುತ್ತದೆ. ಆದರೆ ಉಚ್ಚ ಶಿಕ್ಷಣವು ಕೆಲಸದ ಭದ್ರತೆಯನ್ನು ಯಾವಾಗಲೂ ಒದಗಿಸುತ್ತದೊ? ಒಬ್ಬ ವಿದ್ಯಾರ್ಥಿನಿಯು ಹೇಳಿದ್ದು: “ನನ್ನ ಅಧ್ಯಯನವು ನನ್ನನ್ನು ನಿಖರವಾದ ವೃತ್ತಿಗೆ ನಡೆಸಲಾರದೆಂದು ಮತ್ತು ಕೆಲಸದ ಭದ್ರತೆಯನ್ನು ನೀಡಲಾರದೆಂದು ನನಗೆ ಮೊದಲೇ ಗೊತ್ತಿತ್ತು.” ಇಂತಹ ಅನುಭವ ಅನೇಕರಿಗೆ ಆಗುತ್ತದೆ. ಇತ್ತೀಚಿನ ಒಂದು ವರ್ಷದಲ್ಲಿ, ಜರ್ಮನಿಯಲ್ಲಿನ ವಿಶ್ವವಿದ್ಯಾನಿಲಯದ ನಿರುದ್ಯೋಗಿ ಪದವೀಧರರ ಸಂಖ್ಯೆಯು ಹಿಂದೆಂದಿಗಿಂತಲೂ ಹೆಚ್ಚಾಗಿತ್ತು.
ಫ್ರಾನ್ಸ್ನಲ್ಲಿ ನಿರುದ್ಯೋಗ ಸಮಸ್ಯೆಯು ಹೆಚ್ಚಾಗುತ್ತಿರುವ ಕಾರಣ, ಅಲ್ಲಿನ ಯುವ ಜನರು ವಿಶ್ವವಿದ್ಯಾನಿಲಯಗಳಿಗೆ ಹೋಗುತ್ತಾರೆ. ಇದು, ಪ್ರೌಢ ಶಾಲೆಯ ಶಿಕ್ಷಣಕ್ಕೆ ಯಾವ ಮೌಲ್ಯವೂ ಇಲ್ಲದಿರುವ ಕಾರಣದಿಂದಲೇ ಎಂದು ಒಂದು ವಾರ್ತಾಪತ್ರಿಕೆಯು ಹೇಳುತ್ತದೆ. ಹಾಗಿದ್ದರೂ, ತಮ್ಮ ಶಿಕ್ಷಣದ ಕೊನೆಯಲ್ಲಿ, “ಅವರು ಪದವೀಧರರಾದರೂ, ಇದರಿಂದ ಯಾವ ಪ್ರಯೋಜನವೂ ಇಲ್ಲವೆಂದು” ವಿಶ್ವವಿದ್ಯಾನಿಲಯದ ಅನೇಕ ವಿದ್ಯಾರ್ಥಿಗಳು ಅಂಗೀಕರಿಸುತ್ತಾರೆ. ಬ್ರಿಟನ್ನಲ್ಲಿ, “ಶೈಕ್ಷಣಿಕ ಜೀವಿತದ ಒತ್ತಡಗಳು, ವಿದ್ಯಾರ್ಥಿಗಳ ಮೇಲೆ ಭಯಂಕರವಾದ ಪರಿಣಾಮವನ್ನು ಬೀರುತ್ತಿವೆ” ಎಂದು ದಿ ಇಂಡಿಪೆಂಡೆಂಟ್ ಪತ್ರಿಕೆಯು ವರದಿಸುತ್ತದೆ. ಜೀವಿತದ ಅಭದ್ರತೆಯನ್ನು ನಿಭಾಯಿಸುವಂತೆ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಬದಲು, ವಿಶ್ವವಿದ್ಯಾನಿಲಯಗಳಲ್ಲಿನ ಒತ್ತಡವು ಕೆಲವೊಮ್ಮೆ ಖಿನ್ನತೆ, ಕಳವಳ, ಮತ್ತು ಕೀಳರಿಮೆಯಂತಹ ಸಮಸ್ಯೆಗಳಿಗೆ ನಡೆಸುತ್ತದೆಂದು ವರದಿಸಲಾಗಿದೆ.
ಅನೇಕ ವೇಳೆ, ವಿಶ್ವವಿದ್ಯಾನಿಲಯದ ಡಿಗ್ರಿಯು ನೀಡಬಲ್ಲ ಉದ್ಯೋಗಕ್ಕಿಂತಲೂ, ಒಂದು ವೃತ್ತಿಯನ್ನು ಕಲಿತುಕೊಳ್ಳುವುದು ಇಲ್ಲವೆ ಉತ್ಪಾದನೆಯ ಯಾವುದಾದರೊಂದು ಕ್ಷೇತ್ರದಲ್ಲಿ ತರಬೇತಿಯನ್ನು ಪಡೆದುಕೊಳ್ಳುವುದು, ಹೆಚ್ಚು ಭದ್ರವಾದ ಉದ್ಯೋಗವನ್ನು ಒಬ್ಬನು ಗಿಟ್ಟಿಸಿಕೊಳ್ಳುವುದಕ್ಕೆ ಸಹಾಯಮಾಡುತ್ತದೆ.
10,000 ಸ್ವತ್ತುಗಳು ಸಾಕೊ?
ಒಂದು ಭದ್ರವಾದ ಜೀವಿತದ ರಹಸ್ಯವು ಸಂಪತ್ತಿನಲ್ಲಿ ಅಡಗಿದೆಯೆಂದು ಅನೇಕರು ನಂಬುತ್ತಾರೆ. ಇಂತಹ ಯೋಚನೆಯು ಸರಿಯೆಂದು ನಿಮಗೆ ಅನಿಸಬಹುದು. ಇದು ಏಕೆಂದರೆ, ಬ್ಯಾಂಕಿನಲ್ಲಿ ನಿಮಗಿರುವ ಭಾರಿ ಹಣದ ಮೊತ್ತವು, ತೊಂದರೆಯ ಸಮಯಗಳಲ್ಲಿ ನಿಮಗೆ ಸಹಾಯಮಾಡಬಲ್ಲದು. “ಧನವು . . . ಆಶ್ರಯ”ವಾಗಿದೆ ಎಂದು ಬೈಬಲು ವಿವರಿಸುತ್ತದೆ. (ಪ್ರಸಂಗಿ 7:12) ಹಾಗಿದ್ದರೂ, ಹೆಚ್ಚಿನ ಸಂಪತ್ತು ವೈಯಕ್ತಿಕ ಭದ್ರತೆಯನ್ನು ಹೆಚ್ಚಿಸುತ್ತದೊ?
ಹೆಚ್ಚಿಸಬೇಕೆಂದಿಲ್ಲ. ಕಳೆದ 50 ವರ್ಷಗಳಲ್ಲಿ, ಜನರಲ್ಲಿರುವ ಸಂಪತ್ತು ಹೇಗೆ ಹೆಚ್ಚಿದೆ ಎಂಬುದನ್ನು ಪರಿಗಣಿಸಿರಿ. ಎರಡನೆಯ ಜಾಗತಿಕ ಯುದ್ಧದ ಕೊನೆಯಲ್ಲಿ, ಜರ್ಮನ್ ನಿವಾಸಿಗಳಲ್ಲಿ ಹೆಚ್ಚಿನವರು ಏನನ್ನೂ ಹೊಂದಿರಲಿಲ್ಲ. ಇಂದು, ಒಂದು ಜರ್ಮನ್ ವಾರ್ತಾಪತ್ರಿಕೆಗನುಸಾರ, ಒಬ್ಬ ಸಾಮಾನ್ಯ ಜರ್ಮನ್ ನಿವಾಸಿಯಲ್ಲಿ ಬೆಲೆಬಾಳುವ 10,000 ವಸ್ತುಗಳಿವೆ. ಹಣಕಾಸಿನ ಕುರಿತಾದ ಭವಿಷ್ಯನುಡಿಗಳು ಸರಿಯಾಗಿರುವಲ್ಲಿ, ಮುಂದಿನ ಸಂತತಿಗಳು ಇನ್ನೂ ಹೆಚ್ಚನ್ನು ಹೊಂದಿರುವವು. ಆದರೆ ಸಂಪತ್ತಿನ ಈ ಶೇಖರಣೆಯು ಜೀವಿತವನ್ನು ಹೆಚ್ಚು ಭದ್ರಗೊಳಿಸುತ್ತದೊ? ಇಲ್ಲ. ಜೀವಿತವು 20 ಇಲ್ಲವೆ 30 ವರ್ಷಗಳ ಹಿಂದೆ ಇದ್ದಷ್ಟು ಈಗ ಭದ್ರವಾಗಿಲ್ಲವೆಂದು, ಮೂವರಲ್ಲಿ ಇಬ್ಬರು ನೆನಸುವುದಾಗಿ ಜರ್ಮನಿಯಲ್ಲಿ ನಡೆಸಲ್ಪಟ್ಟ ಒಂದು ಸಮೀಕ್ಷೆಯು ಪ್ರಕಟಿಸಿತು. ಆದುದರಿಂದ ಸಂಪತ್ತಿನಲ್ಲಿನ ಭಾರಿ ಹೆಚ್ಚಳವು, ಜನರಲ್ಲಿ ಹೆಚ್ಚಿನ ಭದ್ರತೆಯ ಅನಿಸಿಕೆಯನ್ನು ಉಂಟುಮಾಡಿಲ್ಲ.
ಇದರಲ್ಲಿ ವಾಸ್ತವಾಂಶವಿದೆ ಏಕೆಂದರೆ, ಹಿಂದಿನ ಲೇಖನದಲ್ಲಿ ತಿಳಿಸಲ್ಪಟ್ಟಂತೆ, ಅಭದ್ರತೆಯು ಒಂದು ಭಾವನಾತ್ಮಕ ಹೊರೆಯಾಗಿದೆ. ಮತ್ತು ಈ ಹೊರೆಯನ್ನು ಪ್ರಾಪಂಚಿಕ ಸ್ವತ್ತಿನಿಂದ ಸಂಪೂರ್ಣವಾಗಿ ಕಡಮೆಮಾಡಸಾಧ್ಯವಿಲ್ಲ. ಸಂಪತ್ತು, ಬಡತನ ಹಾಗೂ ತೊಂದರೆಯ ಸಮಯಗಳಲ್ಲಿ, ನಿಶ್ಚಯವಾಗಿಯೂ ಸಹಾಯವನ್ನು ಒದಗಿಸುತ್ತದೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ, ಅದು ದಾರಿದ್ರ್ಯದಂತೆಯೇ ಒಂದು ಹೊರೆಯಾಗಿರಸಾಧ್ಯವಿದೆ.
ಆದಕಾರಣ, ಪ್ರಾಪಂಚಿಕ ಸ್ವತ್ತುಗಳ ವಿಷಯದಲ್ಲಿ ನಮಗೆ ಸಮತೂಕದ ಮನೋಭಾವವಿರಬೇಕು. ಅಂತಹ ಮನೋಭಾವವು, ಸಂಪತ್ತು ಒಂದು ಆಶೀರ್ವಾದವಾಗಿರುವುದಾದರೂ, ಭದ್ರವಾದ ಜೀವಿತಕ್ಕೆ ಮುಖ್ಯವಾದ ಅಂಶವಲ್ಲ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳುವಂತೆ ನಮಗೆ ಸಹಾಯಮಾಡುವುದು. ಯೇಸು ಕ್ರಿಸ್ತನು ಭೂಮಿಯಲ್ಲಿದ್ದಾಗ, ಹೀಗೆ ಹೇಳುವ ಮೂಲಕ ತನ್ನ ಹಿಂಬಾಲಕರನ್ನು ಉತ್ತೇಜಿಸಿದನು: “ಒಬ್ಬನಿಗೆ ಎಷ್ಟು ಆಸ್ತಿಯಿದ್ದರೂ ಅದು ಅವನಿಗೆ ಜೀವಾಧಾರವಾಗುವದಿಲ್ಲ.” (ಲೂಕ 12:15) ಜೀವಿತದಲ್ಲಿ ಪರಿಪೂರ್ಣ ಭದ್ರತೆಯನ್ನು ಅನುಭವಿಸಲು, ಒಬ್ಬ ವ್ಯಕ್ತಿಗೆ ಪ್ರಾಪಂಚಿಕ ಸಂಪತ್ತಿಗಿಂತಲೂ ಹೆಚ್ಚಿನದರ ಅಗತ್ಯವಿದೆ.
ವೃದ್ಧರು, ಸ್ವತ್ತುಗಳನ್ನು ಅವುಗಳ ಬೆಲೆಯಿಂದಾಗಿ ಅಲ್ಲ, ಬದಲಿಗೆ ಅವುಗಳೊಂದಿಗೆ ಅವರಿಗಿರುವ ಭಾವನಾತ್ಮಕ ಸಂಬಂಧದಿಂದಾಗಿಯೇ ಮೌಲ್ಯವುಳ್ಳವುಗಳೆಂದು ಎಣಿಸುತ್ತಾರೆ. ಸಂಪತ್ತಿಗಿಂತ ಕಳ್ಳತನಕ್ಕೆ ಬಲಿಯಾಗುವ ಗಂಡಾಂತರವೇ ವೃದ್ಧರನ್ನು ಬಹಳವಾಗಿ ಕಳವಳಗೊಳಿಸುತ್ತದೆ.
ಜಾಗರೂಕರಾಗಿರಿ!
“ಕಳೆದ 30 ವರ್ಷಗಳಲ್ಲಿ, ಅಪರಾಧವು . . . ಲೋಕದಾದ್ಯಂತ ಹೆಚ್ಚಾಗುತ್ತಿರುವ ಒಂದು ಸಮಸ್ಯೆಯಾಗಿ ಪರಿಣಮಿಸಿದೆ” ಎಂದು ಬ್ರಿಟನ್ನಲ್ಲಿ ಪ್ರಕಾಶಿಸಲ್ಪಟ್ಟ, ಅಪರಾಧವನ್ನು ತಡೆಯಲಿಕ್ಕಾಗಿರುವ ಪ್ರಾಯೋಗಿಕ ವಿಧಗಳು (ಇಂಗ್ಲಿಷ್) ಎಂಬ ಪುಸ್ತಿಕೆಯು ಹೇಳುತ್ತದೆ. ಪೊಲೀಸರು ಬಿಡುವಿಲ್ಲದೆ ಕೆಲಸಮಾಡುತ್ತಿದ್ದರೂ, ಈ ಸಮಸ್ಯೆಯು ಕಡಿಮೆಯಾಗುತ್ತಿಲ್ಲ. ಹೀಗಿರುವಾಗ, ಆ ಸಮಸ್ಯೆಯನ್ನು ಕೆಲವು ಜನರು ಹೇಗೆ ನಿಭಾಯಿಸುತ್ತಿದ್ದಾರೆ?
ವೈಯಕ್ತಿಕ ಸುರಕ್ಷತೆಯು ಮನೆಯಲ್ಲೇ ಆರಂಭಿಸುತ್ತದೆ. ಉದಾಹರಣೆಗೆ, ಸ್ವಿಟ್ಸರ್ಲೆಂಡ್ನಲ್ಲಿರುವ ಒಬ್ಬ ವಾಸ್ತುಶಿಲ್ಪಿಯು, ಭದ್ರತಾ ಕೀಲಿಗಳನ್ನು, ಬಲವಾದ ಬಾಗಿಲುಗಳನ್ನು, ಮತ್ತು ಕಂಬಿಯುಳ್ಳ ಕಿಟಕಿಗಳನ್ನೊಳಗೊಂಡ ಕನ್ನಹಾಕಲಾಗದ ಮನೆಗಳನ್ನು ವಿನ್ಯಾಸಿಸುವುದರಲ್ಲಿ ವಿಶೇಷಜ್ಞನಾಗಿದ್ದಾನೆ. ಈ ಮನೆಗಳಲ್ಲಿರುವವರು, “ನನ್ನ ಮನೆಯೇ ನನ್ನ ಕೋಟೆಯಾಗಿದೆ” ಎಂಬ ಸುಪ್ರಸಿದ್ಧ ನಾಣ್ಣುಡಿಯನ್ನು ಶಾಬ್ದಿಕವಾಗಿ ಅರ್ಥೈಸಿಕೊಂಡಿರುವಂತೆ ತೋರುತ್ತದೆ. ಫೋಕಸ್ ಎಂಬ ವಾರ್ತಾಪತ್ರಿಕೆಗನುಸಾರ, ಈ ಮನೆಗಳು ದುಬಾರಿಯಾಗಿದ್ದರೂ, ಅವುಗಳಿಗೆ ಬಹಳಷ್ಟು ಬೇಡಿಕೆಯಿದೆ.
ವೈಯಕ್ತಿಕ ಸುರಕ್ಷತೆಯನ್ನು ಮನೆಯ ಒಳಗೂ ಹೊರಗೂ ಹೆಚ್ಚಿಸಲಿಕ್ಕಾಗಿ ಕೆಲವು ಜನರು, ನೆರೆಹೊರೆಯಲ್ಲಿ ಕಾವಲುಗಾರರನ್ನು ನೇಮಿಸಿದ್ದಾರೆ. ಕೆಲವೊಂದು ಕ್ಷೇತ್ರಗಳ ನಿವಾಸಿಗಳು ಇನ್ನೂ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಾರೆ. ನಿರ್ದಿಷ್ಟವಾದ ಸಮಯಗಳಲ್ಲಿ ಅವರ ಕ್ಷೇತ್ರದಲ್ಲಿ ಗಸ್ತುತಿರುಗುವಂತೆ ಅವರು ಒಂದು ಭದ್ರತಾ ಕಂಪನಿಗೆ ಹಣವನ್ನೂ ಕೊಡುತ್ತಾರೆ. ನಗರದ ನಿರ್ಜನ ಬೀದಿಗಳಲ್ಲಿ ರಾತ್ರಿಯ ಸಮಯ ಒಬ್ಬಂಟಿಗರಾಗಿರುವುದು ಉಚಿತವಲ್ಲವೆಂದು ಅನೇಕರಿಗೆ ಅನಿಸುತ್ತದೆ. ಮತ್ತು ತಮ್ಮ ಮಕ್ಕಳ ಕ್ಷೇಮದ ಕುರಿತು ಸ್ವಾಭಾವಿಕವಾಗಿ ಚಿಂತಿತರಾಗಿರುವ ಹೆತ್ತವರು, ಅವರನ್ನು ರಕ್ಷಿಸಲು ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬಹುದು. ಈ ಪುಟದಲ್ಲಿರುವ ರೇಖಾಚೌಕದಲ್ಲಿನ ಸಲಹೆಗಳನ್ನು ಪರಿಗಣಿಸಿರಿ.
ಆದರೆ ಎಲ್ಲರಿಗೂ ಕನ್ನಹಾಕಲಾಗದ ಮನೆಯನ್ನು ಖರೀದಿಸಲು ಸಾಧ್ಯವಿಲ್ಲ. ಅಲ್ಲದೆ, ಕಾವಲು ಯೋಜನೆಗಳು ಮತ್ತು ಗಸ್ತುತಿರುಗುವಿಕೆಗಳು ಅಪರಾಧವನ್ನು ಕಡಿಮೆಮಾಡಲಾರವು, ಅದನ್ನು ಸುಲಭವಾಗಿ ಅಸುರಕ್ಷಿತ ಕ್ಷೇತ್ರಗಳಿಗೆ ಸ್ಥಳಾಂತರಿಸಬಹುದು. ಹೀಗೆ, ವೈಯಕ್ತಿಕ ಭದ್ರತೆಯ ಮುಖ್ಯ ಬೆದರಿಕೆಗಳಲ್ಲಿ ಅಪರಾಧವು ಒಂದಾಗಿದೆ. ನಮ್ಮ ಜೀವಿತಗಳು ಭದ್ರವಾಗಿರಬೇಕಾದರೆ, ಅಪರಾಧವನ್ನು ಸದೆಬಡಿಯಲಿಕ್ಕಾಗಿರುವ ಸಮಗ್ರವಾದ ಪ್ರಯತ್ನಕ್ಕಿಂತಲೂ ಹೆಚ್ಚಿನದರ ಅಗತ್ಯವಿದೆ.
ರೋಗಲಕ್ಷಣವನ್ನಲ್ಲ ರೋಗವನ್ನು ಗುಣಪಡಿಸಿರಿ
ಭದ್ರವಾದ ಜೀವಿತವನ್ನು ಹೊಂದಿರುವ ಸ್ವಾಭಾವಿಕವಾದ ಬಯಕೆ ನಮ್ಮೆಲ್ಲರಲ್ಲಿಯೂ ಇದೆ. ಮತ್ತು ಆ ಗುರಿಯನ್ನು ಸಾಧಿಸಲು ಸಮಂಜಸವಾದ ಹಾಗೂ ಪ್ರಾಯೋಗಿಕವಾದ ಹೆಜ್ಜೆಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು. ಆದರೆ ನಮ್ಮ ಜೀವಿತಗಳನ್ನು ಅಭದ್ರಗೊಳಿಸುತ್ತಿರುವ ಅಪರಾಧ, ನಿರುದ್ಯೋಗ, ಮತ್ತು ಇತರ ಎಲ್ಲ ವಿಷಯಗಳು, ಇಡೀ ಮಾನವಕುಲವನ್ನು ಬಾಧಿಸುತ್ತಿರುವ ರೋಗದ ಲಕ್ಷಣಗಳೇ ಆಗಿವೆ. ಈ ಪರಿಸ್ಥಿತಿಯನ್ನು ಗುಣಪಡಿಸಲಿಕ್ಕಾಗಿ, ಕೇವಲ ಲಕ್ಷಣಗಳನ್ನಲ್ಲ, ಬದಲಾಗಿ ಮೂಲ ಕಾರಣವನ್ನೇ ಗುಣಪಡಿಸಬೇಕಾಗಿದೆ.
ನಮ್ಮ ಜೀವಿತಗಳಲ್ಲಿರುವ ಅಭದ್ರತೆಯ ಮೂಲ ಕಾರಣವು ಏನಾಗಿದೆ? ಅದನ್ನು ನಾವು ನಿರ್ಮೂಲಗೊಳಿಸಿ, ಅಭದ್ರತೆಯನ್ನು ನಮ್ಮ ಜೀವಿತದಿಂದ ಶಾಶ್ವತವಾಗಿ ಹೇಗೆ ತೆಗೆದುಬಿಡಸಾಧ್ಯವಿದೆ? ಇದು ಮುಂದಿನ ಲೇಖನದಲ್ಲಿ ಚರ್ಚಿಸಲ್ಪಡುವುದು.
[ಪುಟ 6 ರಲ್ಲಿರುವ ಚೌಕ]
ಎಳೆಯ ಮಕ್ಕಳನ್ನು ಸಂರಕ್ಷಿಸುವ ವಿಧಗಳು
ಮಕ್ಕಳ ಮೇಲಾಗುವ ಆಕ್ರಮಣಗಳು, ಅಪಹರಣಗಳು, ಮತ್ತು ಕೊಲೆಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ, ಅನೇಕ ಹೆತ್ತವರು, ಈ ಕೆಳಗಿನ ವಿಷಯಗಳನ್ನು ತಮ್ಮ ಮಕ್ಕಳಿಗೆ ಕಲಿಸುವುದನ್ನು ಸಹಾಯಕರವಾಗಿ ಕಂಡುಕೊಂಡಿದ್ದಾರೆ:
1. ಯಾವುದು ಕೆಟ್ಟದ್ದಾಗಿದೆಯೊ ಅದನ್ನು ಮಾಡುವಂತೆ ತಮ್ಮನ್ನು ಒತ್ತಾಯಿಸುವ ಯಾವುದೇ ವ್ಯಕ್ತಿಗೆ, ಇಲ್ಲ ಎಂದು ಖಡಾಖಂಡಿತವಾಗಿ ಹೇಳಿರಿ.
2. ಯಾರೊಬ್ಬರೂ ನಿಮ್ಮ ದೇಹದ ಗುಪ್ತಾಂಗಗಳನ್ನು ಮುಟ್ಟುವಂತೆ ಬಿಡಬೇಡಿರಿ. ನಿಮ್ಮ ಹೆತ್ತವರೊಬ್ಬರು ಎದುರಿಗಿರುವಾಗ, ಒಬ್ಬ ವೈದ್ಯನು ಇಲ್ಲವೆ ನರ್ಸೊಬ್ಬಳು ಹಾಗೆ ಮಾಡಬಹುದು.
3. ಅಪಾಯದ ಸ್ಥಿತಿಯಲ್ಲಿರುವಾಗ ಅಲ್ಲಿಂದ ಓಡಿಹೋಗಿರಿ, ಬೊಬ್ಬೆಯಿಡಿರಿ, ಅರಚಿಕೊಳ್ಳಿರಿ, ಇಲ್ಲವೆ ಹತ್ತಿರವಿರುವ ವಯಸ್ಕನೊಬ್ಬನ ಸಹಾಯವನ್ನು ಕೋರಿರಿ.
4. ತಮಗೆ ವಿಚಿತ್ರವೆನಿಸುವ ಯಾವುದೇ ಘಟನೆ ಇಲ್ಲವೆ ಸಂಭಾಷಣೆಯ ಕುರಿತು ಮಕ್ಕಳು ಹೆತ್ತವರಿಗೆ ಹೇಳಬೇಕು.
5. ಹೆತ್ತವರಿಂದ ಯಾವ ವಿಷಯವನ್ನೂ ಮರೆಮಾಚದಿರಿ.
ಕೊನೆಯ ಮಾತೇನೆಂದರೆ, ಮಗುವನ್ನು ನೋಡಿಕೊಳ್ಳುವ ವ್ಯಕ್ತಿಯನ್ನು ಆರಿಸುವಾಗ, ಹೆತ್ತವರು ಜಾಗರೂಕರಾಗಿರಬೇಕು.
[ಪುಟ 5 ರಲ್ಲಿರುವ ಚಿತ್ರ]
ನಮ್ಮ ಜೀವಿತಗಳು ಭದ್ರವಾಗಿರಬೇಕಾದರೆ, ನಮಗೆ ಶಿಕ್ಷಣ, ಸಂಪತ್ತು, ಅಥವಾ ಅಪರಾಧವನ್ನು ಸದೆಬಡಿಯಲಿಕ್ಕಾಗಿ ಸಮಗ್ರವಾದ ಪ್ರಯತ್ನಕ್ಕಿಂತಲೂ ಹೆಚ್ಚಿನದರ ಅಗತ್ಯವಿದೆ