ಕ್ರೈಸ್ತ ಬಿಡುಗಡೆಯಲ್ಲಿ ಸ್ಥಿರವಾಗಿ ನಿಲ್ಲಿರಿ!
ಗಲಾತ್ಯದವರಿಗೆ ಪತ್ರದಿಂದ ಅತ್ಯುಜಲ್ವ ಭಾಗಗಳು
ಯೆಹೋವನು ಬಿಡುಗಡೆಯ ದೇವರು. (2 ಕೊರಿಂಥ 3:17) ಆತನ ಕುಮಾರ ಯೇಸು ಕ್ರಿಸ್ತನು ಹೇಳಿದ್ದು: “ಸತ್ಯವನ್ನು ತಿಳಿದುಕೊಳ್ಳುವಿರಿ; ಮತ್ತು ಸತ್ಯವು ನಿಮ್ಮನ್ನು ಬಿಡುಗಡೆ ಮಾಡುವದು.” (ಯೋಹಾನ 8:32) ಮತ್ತು ಕ್ರಿಸ್ತನ ಅನುಕರಣೆಯಲ್ಲಿ ಅಪೊಸ್ತಲನಾದ ಪೌಲನು, ಬಿಡುಗಡೆಯ ಸುವಾರ್ತೆಯನ್ನು ಸಾರಿದನು.—ರೋಮಾಪುರದವರಿಗೆ 6:18; 8:21.
ಆ ಬಿಡುಗಡೆಯ ಸಂದೇಶವನ್ನು ಸಾರಿದ ಮೂಲಕ ಪೌಲನು ಗಲಾತ್ಯ (ಏಷ್ಯಾ ಮೈನರ್ನಲ್ಲಿನ ಒಂದು ರೋಮನ್ ಪ್ರಾಂತ್ಯ) ದ ಸಭೆಯನ್ನು, ತನ್ನ ಮೊದಲನೆ ಮಿಶನೆರಿ ಸಂಚಾರದ ಸಮಯದಲ್ಲಿ (ಸಾ. ಶ. 47-48) ಸ್ಥಾಪಿಸಿದನು. ಕ್ರೈಸ್ತರಿಗೆ ಸುನ್ನತಿಯ ಅವಶ್ಯವಿಲ್ಲವೆಂದು ಆಡಳಿತ ಮಂಡಲಿಯು ಕೊಟ್ಟ ನಿರ್ಣಯ ಗಲಾತ್ಯದವರಿಗೆ ತಿಳಿದಿತ್ತು. (ಅಪೊಸ್ತಲರ ಕೃತ್ಯ 15:22-29) ಆದರೆ ಸುನ್ನತಿ ಮಾಡಿಕೊಳ್ಳಲೇ ಬೇಕೆಂದು ಒತ್ತಾಯಿಸಿದ ಮೂಲಕ ಯೆಹೂದಿ ಮತದವರು ಅವರನ್ನು ದಾಸತ್ವದೊಳಗೆ ತರಲು ಹುಡುಕುತ್ತಿದ್ದರು. ಆದ್ದರಿಂದ, ಪೌಲನು ಕೊರಿಂಥ ಅಥವಾ ಸಿರಿಯನ್ ಅಂತಿಯೋಕ್ಯದಿಂದ ಸಾ. ಶ. 50-52 ರ ಸುಮಾರಿಗೆ ಬರೆದ ಗಲಾತ್ಯದವರಿಗೆ ಪತ್ರದಲ್ಲಿ ಕ್ರಿಸ್ತೀಯ ಬಿಡುಗಡೆಯನ್ನು ಒತ್ತಿ ಹೇಳಿದನು. ಉದಾಹರಣೆಗೆ ಅವನಂದದ್ದು: “ಕ್ರಿಸ್ತನು ನಮ್ಮನ್ನು ಸ್ವತಂತ್ರದಲ್ಲಿ ಇರಿಸಬೇಕೆಂದು ಬಿಡುಗಡೆ ಮಾಡಿದನು. ಅದರಲ್ಲಿ ಸ್ಥಿರವಾಗಿ ನಿಲ್ಲಿರಿ; ದಾಸತ್ವದ ನೊಗದಲ್ಲಿ ಪುನಃ ಸಿಕ್ಕಿಕೊಳ್ಳಬೇಡಿರಿ.”—ಗಲಾತ್ಯದವರಿಗೆ 5:1.
ಪೌಲನು ತನ್ನ ಅಪೊಸ್ತಲತ್ವವನ್ನು ಸಮರ್ಥಿಸುತ್ತಾನೆ
ತನ್ನ ಅಪೊಸ್ತಲತ್ವವನ್ನು “ಕ್ರಿಸ್ತನ ಮುಖಾಂತರ . . . ದೇವರಿಂದ” ಹೊಂದಿದ್ದೇನೆಂದು ಮೊದಲಾಗಿ ಪೌಲನು ತೋರಿಸುತ್ತಾನೆ. (1:1-2:14) ಒಂದು ಪ್ರಕಟನೆಯ ಕಾರಣ ಪೌಲನು, (ಬಾರ್ನಬ ಮತ್ತು ತೀತರೊಂದಿಗೆ) ಸುನ್ನತಿಯ ಪ್ರಶ್ನೆಯ ನಿಮಿತ್ತ ಯೆರೂಸಲೇಮಿಗೆ ಹೋದನು. ಅಲ್ಲಿ ಯಾಕೋಬ, ಕೇಫ (ಪೇತ್ರ ) ಮತ್ತು ಯೋಹಾನರು ಅವನು ಅನ್ಯದೇಶಗಳವರಿಗೆ ಅಪೊಸ್ತಲನಾಗಿರುವ ಶಕ್ತಿ ಹೊಂದಿರುವದನ್ನು ಮನಗಾಣುತ್ತಾರೆ. ಮತ್ತು ಪೇತ್ರನು ಅನಂತರ ಅಂತಿಯೋಕ್ಯದಲ್ಲಿ ಯೆರೂಸಲೇಮಿನ ಯೆಹೂದಿ ಕ್ರೈಸ್ತರಿಗೆ ಹೆದರಿ ಅನ್ಯ ವಿಶ್ವಾಸಿಗಳಿಂದ ತನ್ನನ್ನು ಪ್ರತ್ಯೇಕಿಸಿ ಕೊಂಡಾಗ ಪೌಲನು ಅವನನ್ನು ಗದರಿಸಿದನು.
ನೀತಿವಂತರಾಗಿ ನಿರ್ಣಯಿಸಲ್ಪಡುವುದು ಹೇಗೆ?
ಯಾವನಾದರೂ ನೀತಿವಂತನಾಗಿ ನಿರ್ಣಯಿಸಲ್ಪಡುವುದು ಯೇಸು ಕ್ರಿಸ್ತನಲ್ಲಿ ನಂಬಿಕೆಯನ್ನಿಡುವ ಮೂಲಕ ಮಾತ್ರವೇ ಎಂಬ ಬಲವಾದ ವಾದವನ್ನೂ ಪೌಲನು ಮಾಡಿದನು. (2:15–3:29) ಗಲಾತ್ಯದವರು ದೇವರಾತ್ಮವನ್ನು ಪಡೆದದ್ದು ನೇಮನಿಷ್ಠೆಗಳನ್ನು ಅನುಸರಿಸಿಯಲ್ಲ, ಶುಭವರ್ತಮಾನವನ್ನು ನಂಬಿಕೆಯಿಂದ ಸ್ವೀಕರಿಸಿದ ಕಾರಣದಿಂದಲೇ. ಅಬ್ರಹಾಮನ ನಿಜ ಮಕ್ಕಳಲ್ಲಿ ನಂಬಿಕೆಯಿದೆ ಆದರೆ “ನೇಮನಿಷ್ಠೆಗಳನ್ನು ಆಧಾರಮಾಡಿಕೊಂಡು” ತಮ್ಮನ್ನು ನೀತಿವಂತರಾಗಿ ನಿರ್ಣಯಿಸಲು ಪ್ರಯತ್ನಿಸುವವರೆಲ್ಲರೂ “ಶಾಪಾಧೀನರು.” ಏಕೆ? ಏಕೆಂದರೆ ನಿಯಮವನ್ನು ಪರಿಪೂರ್ಣತೆಯಲ್ಲಿ ಪಾಲಿಸಲು ಅವರು ಶಕ್ತರಲ್ಲ. ಕಾರ್ಯಥಃ ನಿಯಮವು, ಪಾಪಗಳನ್ನು ಪ್ರಕಟವಾಗಿ ತೋರಿಸಿತು ಮತ್ತು “ಕ್ರಿಸ್ತನ ಬಳಿಗೆ ನಡಿಸುವ ಉಪಾಧ್ಯಾಯನಂತಿದೆ.”
ಸ್ಥಿರವಾಗಿ ನಿಲ್ಲಿರಿ!
ತನ್ನ ಮರಣದ ಮೂಲಕ ಕ್ರಿಸ್ತನು ‘ಧರ್ಮಶಾಸ್ತ್ರಾಧೀನರನ್ನು ವಿಮೋಚಿಸಿದನು.’ ಆದರೆ, ಅವನ ಹಿಂಬಾಲಕರು ಕ್ರಿಸ್ತೀಯ ಬಿಡುಗಡೆಯಲ್ಲಿ ಸ್ಥಿರವಾಗಿ ನಿಲ್ಲಬೇಕು. (4:1–6:18) ಆದ್ದರಿಂದ ಗಲಾತ್ಯದವರು, ದಾಸತ್ವದ ನೊಗದೊಳಗೆ ಪುನಃ ಸಿಕ್ಕಿಕೊಳ್ಳುವಂತೆ ಅವರನ್ನು ಪ್ರೇರಿಸುವ ಯಾವನನ್ನಾದರೂ ಎದುರಿಸತಕ್ಕದ್ದು. ಅದಲ್ಲದೆ ಅವರು, ತಮ್ಮ ಸ್ವಾತಂತ್ರ್ಯವನ್ನು ದುರುಪಯೋಗಿಸಬಾರದಿತ್ತು, “ಶರೀರ ಭಾವದ ಕರ್ಮಗಳನ್ನು” ವಿಸರ್ಜಿಸಿ ಆತ್ಮದ ಫಲಗಳನ್ನು ಫಲಿಸಬೇಕಿತ್ತು. ನೇಮನಿಷ್ಠೆಯ ದಾಸತ್ವದೊಳಗೆ ಅವರನ್ನು ತರಲು ಪ್ರಯತ್ನಿಸುವವರು “ಬಹಿರಾಚಾರಗಳಿಂದ ಮಾನ ಪಡೆಯಬೇಕೆಂದಿರುತ್ತಾರೆ,” ಹಿಂಸೆಯಿಂದ ದೂರ ಸರಿಯುತ್ತಾರೆ, ಹೆಚ್ಚಳ ಪಟ್ಟುಕೊಳ್ಳುತ್ತಾರೆ. ಸುನ್ನತಿಯಾಗುವುದರಲ್ಲಿ ಅಥವಾ ಸುನ್ನತಿಯಾಗದೆ ಇರುವುದರಲ್ಲಿ ಏನೂ ಇಲ್ಲ ಎಂದು ಪೌಲನು ತೋರಿಸಿದನು. “ಹೊಸ ಸೃಷ್ಟಿಯೇ ಬೇಕು” ಎಂದನು. ಆ ಹೊಸ ಸೃಷ್ಟಿಯಾದ ಆತ್ಮಿಕ ಇಸ್ರಾಯೇಲ್ಯರಿಗೆ ಶಾಂತಿಯೂ ಕರುಣೆಯೂ ಆಗಲಿ ಎಂದು ಅವನು ಪ್ರಾರ್ಥಿಸಿದನು.
ಆತ್ಮಿಕ ದಾಸತ್ವದೊಳಗೆ ಹಾಕಲು ಹುಡುಕುವವರನ್ನು ಎದುರಿಸುವಂತೆ ಪೌಲನ ಪತ್ರವು ಗಲಾತ್ಯದವರಿಗೆ ಸಹಾಯ ಮಾಡಿತು. ಆತ್ಮದ ಫಲವನ್ನು ಪ್ರದರ್ಶಿಸಲು ಮತ್ತು ಕ್ರೈಸ್ತ ಬಿಡುಗಡೆಯಲ್ಲಿ ಸ್ಥಿರವಾಗಿ ನಿಲ್ಲಲು ಅದು ನಮಗೂ ಸಹಾಯ ಮಾಡುವಂತಾಗಲಿ. (w90 11/15)
[ಪುಟ 30 ರಲ್ಲಿರುವ ಚೌಕ/ಚಿತ್ರಗಳು]
ಮುದ್ರೆಗಳು: “ಇನ್ನು ಮೇಲೆ ಯಾರೂ ನನ್ನನ್ನು ತೊಂದರೆ ಪಡಿಸಬಾರದು, ನನ್ನ ದೇಹದಲ್ಲಿ ಯೇಸುವಿನ ಮುದ್ರೆಗಳು ಹಾಕಿರುತ್ತವಲ್ಲಾ” ಎಂದು ಪೌಲನು ಬರೆದನು. (ಗಲಾತ್ಯದವರಿಗೆ 6:17) ಕೆಲವು ಪ್ರಾಚೀನ ವಿಧರ್ಮಿಗಳಲ್ಲಿ ಗುಲಾಮರಿಗೆ, ಅವರ ಧನಿಗಳು ಯಾರೆಂದು ಗುರುತಿಸಲಿಕ್ಕಾಗಿ ಮುದ್ರೆಗಳನ್ನು ಹಾಕುತ್ತಿದ್ದರು. ವಿಧವಿಧದ ಚಿತ್ರಗಳನ್ನು ಅವರ ದೇಹದ ಮೇಲೆ ಬರೆಹಾಕುತ್ತಿದ್ದರು ಅಥವಾ ಕೊರೆಯುತ್ತಿದ್ದರು. ನಿಸ್ಸಂದೇಹವಾಗಿ ಪೌಲನ ಕ್ರೈಸ್ತಸೇವೆಗಾಗಿ ಬಿದ್ದ ಅನೇಕ ಶಾರೀರಿಕ ಪೆಟ್ಟುಗಳು ನಿರ್ದಿಷ್ಟ ಬರೆಗಳನ್ನು ಉಳಿಸಿರಬೇಕು. ಕ್ರಿಸ್ತನಿಗಾಗಿ ಹಿಂಸೆಯನ್ನು ಅನುಭವಿಸಿದ, ಕ್ರಿಸ್ತನ ದಾಸನು ಅವನೆಂಬದಕ್ಕೆ ಅದು ಸಾಕ್ಷಿ. (2 ಕೊರಿಂಥದವರಿಗೆ 11:23-27) ಪೌಲನು ತಿಳಿಸಿದ ಮುದ್ರೆಗಳು ಇವೇ ಆಗಿದ್ದಿರಬಹುದು, ಅಥವಾ ದೇವರಾತ್ಮದ ಫಲವನ್ನು ಪ್ರದರ್ಶಿಸುತ್ತಾ ತನ್ನ ಶುಶ್ರೂಷೆಯನ್ನು ನಿರ್ವಹಿಸಿದ, ಕ್ರಿಸ್ತೀಯ ಜೀವಿತ ಮಾರ್ಗದ ಕುರಿತಾಗಿ ಅವನು ಯೋಚಿಸುತ್ತಿದ್ದಿರಬಹುದು.
[ಚಿತ್ರ]
ರೋಮೀಯ ಗುಲಾಮರನ್ನು ತಮ್ಮ ಯಜಮಾನರ ಸೇವೆ ಮಾಡುವಂತೆ ಒತ್ತಾಯಿಸಲಾಗುತ್ತಿತ್ತು, ಆದರೆ ಪೌಲನು ಯೇಸು ಕ್ರಿಸ್ತನ ಸ್ವ-ಇಷ್ಟದ ಮತ್ತು ಸಂತೋಷಿತ ದಾಸನು