ಹೊಸ ಪುಸ್ತಕ ಲಕ್ಷಾಂತರ ಜನರನ್ನು ಪುಳಕಿತಗೊಳಿಸುತ್ತದೆ
ಕಳೆದ ಜೂನ್ನಲ್ಲಿ ಪ್ರಾರಂಭಿಸಿದ “ಸ್ವಾತಂತ್ರ್ಯ ಪ್ರಿಯರು” ಜಿಲ್ಲಾ ಅಧಿವೇಶನಗಳ ಒಂದು ವೈಶಿಷ್ಟ್ಯವು “ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ” ಎಂಬ ಭಾಷಣವಾಗಿತ್ತು. ಅದರ ಅತ್ಯುಜಲ್ವ ಬಿಂದುವು ಅದೇ ಮೇಲ್ಬರಹದ ಒಂದು ಹೊಸ ಪುಸ್ತಕದ ಹೊರಡಿಸುವಿಕೆಯೇ. ಲೋಕವ್ಯಾಪಕವಾಗಿ ಈವಾಗಲೇ ಸುಮಾರು 60 ಲಕ್ಷಕ್ಕಿಂತಲೂ ಹೆಚ್ಚು ಜನರು ಅದಕ್ಕೆ ಹಾಜರಾಗಿದ್ದಾರೆ ಮತ್ತು ಆ ಭಾಷಣ ಕೇಳಿದ್ದಾರೆ, ಮತ್ತು ಈ ಪತ್ರಿಕೆಯಲ್ಲಿ ಮೊದಲಿನ ಎರಡು ಲೇಖನಗಳಲ್ಲಿ ಅದನ್ನು ಅಲ್ಪ ಬದಲಾವಣೆಗಳೊಂದಿಗೆ ಪ್ರಕಟಿಸಲಾಗಿದೆ.
ದ ಗ್ರೇಟೆಸ್ಟ್ ಮ್ಯಾನ್ ಹು ಎವರ್ ಲಿವ್ಡ್ ಎಂಬ ಈ ಪುಸ್ತಕದ 1 ಕೋಟಿ 20 ಲಕ್ಷ ಪ್ರತಿಗಳನ್ನು ಸುಮಾರು 60 ಭಾಷೆಗಳಲ್ಲಿ ಮುದ್ರಿಸಲಾಗಿದೆ. ಪೂರ್ವ ಯೂರೋಪಿನ ಭಾಷೆಗಳಾದ ಅಲ್ಪೇನಿಯನ್, ಕ್ರೋಷಿಯನ್, ಹಂಗೇರಿಯನ್, ಮ್ಯಾಸೆಡೋನಿಯನ್, ಪೋಲಿಶ್, ರಶ್ಯನ್, ಸರ್ಬಿಯನ್ ಮತ್ತು ಸ್ಲಾವೆನ್ಯನ್ ಭಾಷೆಗಳಲ್ಲೂ ಅದು ದೊರೆಯುತ್ತದೆ. ಸೋವಿಯೆಟ್ ಯೂನಿಯನ್ನಲ್ಲಿ ನಡೆದ ಏಳು ಅಧಿವೇಶನಗಳಿಗೆ ಹಾಜರಾದ 74,000 ಕ್ಕಿಂತಲೂ ಹೆಚ್ಚು ಜನರು ಇದನ್ನು ರಶ್ಯನ್ ಭಾಷೆಯಲ್ಲಿ ಪಡೆಯಲು ವಿಶೇಷವಾಗಿ ಆನಂದಿಸಿದರು.
ಪುಸ್ತಕದ ಮೂಲ
ಈ ಪುಸ್ತಕದ ಸಮಾಚಾರವು ಮೂಲದಲ್ಲಿ ವಾಚ್ಟವರ್ನ 149 ಅನುಕ್ರಮ ಸಂಚಿಕೆಗಳಲ್ಲಿ ಲೇಖನಮಾಲೆಯಾಗಿ, ಏಪ್ರಿಲ್ 1, 1985ರ ಸಂಚಿಕೆಯಿಂದ ಪ್ರಾರಂಭವಾಗಿತ್ತು. ಜೂನ್ 1, 1991ರ ಸಂಚಿಕೆಯೊಂದಿಗೆ ಈ ಲೇಖನಮಾಲೆಯು ಅಂತ್ಯಗೊಂಡಾಗ ಅನೇಕ ವಾಚಕರು ವಿಷಾದ ವ್ಯಕ್ತಪಡಿಸಿದರು. ವಾಚ್ಟವರ್ ನಲ್ಲಿ ಅದರ ಕೊನೆಯ ವೃತ್ತಾಂತವನ್ನು ಓದಿದಾಗ ಇಟೆಲಿಯ 12-ವರ್ಷ ವಯಸ್ಸಿನ ಮಿಲಿಸ್ಸಗೆ ಕಣ್ಣೀರು ಬಂತು. “ನಮ್ಮ ಅಧಿವೇಶನದ ಮುಂಚಿನ ರಾತ್ರಿ,” ಅವಳಂದದ್ದು, “ಯೇಸುವಿನ ಜೀವನ ವೃತ್ತಾಂತದ ಒಂದು ಪುಸ್ತಕವನ್ನು ಕೊಡುವಂತೆ ನಾನು ಯೆಹೋವನಿಗೆ ಪ್ರಾರ್ಥಿಸಿದೆ. ಪುಸ್ತಕವು ನೀಡಲ್ಪಟ್ಟಾಗ, ಎಷ್ಟು ಚಪ್ಪಾಳೆ ತಟ್ಟಿದೆನೆಂದರೆ ಇನ್ನು ತಟ್ಟಲಾರದೆ ಹೋದೆ.”
ವಾಚ್ಟವರ್ನಲ್ಲಿ ಲೇಖನಮಾಲೆಯಾಗಿ ಬಂದ ಸಮಾಚಾರವನ್ನು ಪರಿಷ್ಕರಿಸಿ, ಸುಂದರವಾದ ಚಿತ್ರಗಳುಳ್ಳ 133 ಅಧ್ಯಾಯಗಳ 448-ಪುಟದ ಈ ಹೊಸ ಪುಸ್ತಕವನ್ನು ಸಂಘಟಿಸಲಾಯಿತು. ಯೇಸು ಕೊಟ್ಟ ಪ್ರತಿಯೊಂದು ಉಪನ್ಯಾಸ ಮತ್ತು ಆತನ ಭೂಜೀವಿತದಲ್ಲಿ ದಾಖಲೆಯಾದ ಪ್ರತಿಯೊಂದು ಘಟನೆ, ಆತನ ಎಲ್ಲಾ ಸಾಮ್ಯಗಳು ಮತ್ತು ಅದ್ಭುತಗಳನ್ನು ಸಹಾ ಅದರಲ್ಲಿ ನೀಡುವ ಯತ್ನವನ್ನು ಮಾಡಲಾಯಿತು. ಸಾಧ್ಯವಾದ ಮಟ್ಟಿಗೆ ಬಹಳಷ್ಟು ಪ್ರತಿಯೊಂದನ್ನು ಅದು ಸಂಭವಿಸಿದ ಕಾಲಕ್ರಮಾನುಸಾರ ವಿವರಿಸಲಾಗಿದೆ. ಪ್ರತಿಯೊಂದು ಅಧ್ಯಾಯದ ಕೊನೆಯಲ್ಲಿ, ಅಧ್ಯಾಯವು ಯಾವುದರಲ್ಲಿ ಆಧಾರಿತವೂ ಆ ಬೈಬಲ್ ವಚನಗಳ ಪಟ್ಟಿಯು ಇದೆ.
ಕೆಲವರು ಹೀಗೆ ಯೋಚಿಸಬಹುದು, ‘ಒಳ್ಳೇದು, ನಾನು ಈವಾಗಲೇ ಪುಸ್ತಕವನ್ನು ಓದಿದ್ದೇನೆ ಯಾಕಂದರೆ ಕಾವಲಿನಬರುಜು ಲೇಖನಮಾಲೆಯನ್ನು ನಾನು ಓದಿರುವೆ.’ ಆದರೆ ಕಾವಲಿನಬುರುಜು ವಾಚಕರು ಯೇಸುವಿನ ಜೀವನ ವೃತ್ತಾಂತವನ್ನು ಪಡೆದದ್ದು ಪ್ರತಿ ಎರಡು ವಾರಕ್ಕೊಮ್ಮೆ ಸುಮಾರು ಆರು ವರ್ಷಗಳಿಗಿಂತಲೂ ಹೆಚ್ಚು ಕಾಲಾವಧಿಯಲ್ಲಿ ಪ್ರಕಟವಾದ ಲೇಖನಗಳ ಚಿಕ್ಕ ಖಂಡಗಳಲ್ಲಿ. ಮಾಲಾ ರೂಪದಲ್ಲಿ ಬಂದ ಆ ಲೇಖನಗಳು ಸಮಾಚಾರಯುಕ್ತವಾಗಿದ್ದರೂ, ಕೊಂಚ ಸಮಯದೊಳಗೇ ಆ ಇಡೀ ವೃತ್ತಾಂತವನ್ನು ಓದುವ ಮತ್ತು ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷನ ಪೂರ್ಣ ಸ್ವರೂಪವನ್ನು ಅವಲೋಕಿಸುವ ರೋಮಾಂಚನೆಯನ್ನು ಸ್ವಲ್ಪ ಊಹಿಸಿಕೊಳ್ಳಿರಿ!
ನಂಬಿಕೆಯನ್ನು ಬಲಗೊಳಿಸುತ್ತದೆ
“ಎರಡು ವಾರಗಳಲ್ಲಿ ನಾನು ಆ ಪುಸ್ತಕದ ವಾಚನವನ್ನು ಮುಗಿಸಿದೆನು,” ಎಂದು ವರದಿ ಮಾಡಿದಳು ಅಮೆರಿಕದ ವಾಷಿಂಗ್ಟನ್ ಡಿ.ಸಿ.ಯ ಒಬ್ಬಾಕೆ ಮಹಿಳೆ. “ನಾನು ಅದನ್ನು ಓದುತ್ತಿದ್ದಾಗ ನನ್ನ ಕಣ್ಣುಗಳಿಂದ ಅಶ್ರುಗಳು ಸುರಿಯುತ್ತಿದ್ದವು. ನಾನು ಓದುವುದನ್ನು ನಿಲ್ಲಿಸುತ್ತಿದ್ದೆ, ಪ್ರಾರ್ಥಿಸುತ್ತಿದ್ದೆ ಮತ್ತು ಅಳುತ್ತಿದ್ದೆ. ನಾನು ಅಲ್ಲಿ ಯೇಸುವಿನೊಂದಿಗೇ ಇದ್ದೇನೋ, ಆತನೊಂದಿಗೆ ಕಷ್ಟವನ್ನು ಅನುಭವಿಸುತ್ತಿದ್ದೇನೋ ಎಂಬ ಅನಿಸಿಕೆಯನ್ನು ಅದು ನನಗೆ ಕೊಟ್ಟಿತ್ತು. ಪುಸ್ತಕವನ್ನೋದಿ ಒಂದು ವಾರವಾದ ನಂತರವೂ, ನಾನು ಓದಿದ್ದ ವಿಷಯಗಳ ಕುರಿತು ಯೋಚಿಸುವಾಗ ಕಣ್ಣೀರು ಬರುತ್ತಿತ್ತು. ತನ್ನ ಮಗನನ್ನು ಒಪ್ಪಿಸಿ ಕೊಟ್ಟದ್ದಕ್ಕಾಗಿ ಯೆಹೋವನಿಗೆ ನಾನು ಮತ್ತಷ್ಟು ಹತ್ತಿರವಾಗಿದ್ದೇನೆ.”
“ಯೇಸುವಿನ ಕುರಿತಾದ ಪುಸ್ತಕವನ್ನು ನಾನು ಇಂದು ಮುಗಿಸಿದೆ,” ಎಂದು ಬರೆದಳು ಅಮೆರಿಕದ ಪಿಟ್ಸ್ಬರ್ಗ್, ಪೆನ್ಸಿಲ್ವೇನಿಯದ ಒಬ್ಬ ಹೆಂಗಸು. “ಅದು ಆಶ್ಚರ್ಯಕರವಾಗಿತ್ತು. ಕೊನೆಯ ಕೆಲವು ಅಧ್ಯಾಯಗಳನ್ನು ಓದುವಾಗ ನನ್ನ ಕಣ್ಣುಗಳು ತೇವಗೊಂಡವು. ಪುಸ್ತಕದ ಎಲ್ಲವನ್ನು ಒಂದೇ ಸವನೆ ಓದಿ ಮುಗಿಸುವುದೆಷ್ಟೋ ಹಿತಕರವಾಗಿತ್ತು. ಅದರ ಕುರಿತಾದ ನನ್ನ ಅನಿಸಿಕೆಯನ್ನು ನನಗೆ ನಿಜವಾಗಿ ವರ್ಣಿಸಲಶಕ್ಯ—ಆದರೆ ನಾನದನ್ನು ಬಹಳಷ್ಟು ಮೆಚ್ಚಿದ್ದೆ!”
ಒಬ್ಬ ಗಣ್ಯತೆಯುಕ್ತ ವಾಚಕನು ಗಮನಿಸಿದ ಪ್ರಕಾರ, ಪುಸ್ತಕದ ಸುಂದರವಾದ ಚಿತ್ರಗಳು ಭಾವನಾತ್ಮಕ ಅಚ್ಚನ್ನು ಹಾಕಲು ನೆರವಾಗುತ್ತವೆ: “ಸತ್ತ ಮಗುವಿಗಾಗಿ (ಅಧ್ಯಾಯ 47) ಅವರು ರೋದಿಸುವುದು ಬಹಳಮಟ್ಟಿಗೆ ನನಗೆ ಕೇಳಿಸುತ್ತದೋ ಎಂಬಂಥ ಅಥವಾ ರಕ್ತ ಕುಸುಮ ರೋಗದ ಆ ಸ್ತ್ರೀ ಯೇಸುವನ್ನು ಸ್ಪರ್ಶಿಸಿ, ವಾಸಿಯಾದಾಗ (ಅಧ್ಯಾಯ 46) ಯೇಸು ಏನು ನೆನಸಿದ್ದನೆಂದು ನಮಗೆ ತಿಳಿಯುತ್ತದೋ ಎಂಬ ಅನಿಸಿಕೆಯನ್ನು ಅದು ನನಗೆ ಕೊಡುತ್ತದೆ. ಅವರ ಮುಖಚರ್ಯೆಯು ಎಷ್ಟು ನೈಜವಾಗಿದೆಯೆಂದರೆ ಅದು ನೋಯಿಸುತ್ತದೆ. . . . ಓದುವುದು ಒಂದು ಕೆಲಸವಾಗುವ ಬದಲಿಗೆ, ಈ ಪುಸ್ತಕವು ಅದನ್ನು ಒಂದು ಮನೋರಂಜನೆಯಾಗಿ ಅಥವಾ ನನ್ನ ದಿನದಂತ್ಯದ ಒಂದು ಔತಣವಾಗಿ ಮಾಡುತ್ತದೆ. ಪುಸ್ತಕವು ಬರೆಯಲ್ಪಟ್ಟ ಸೂಕ್ಷ್ಮಸಂವೇದನಾ ವಿಧಾನವು ಯೇಸು ಏನನ್ನು ಮಾಡಿದನು ಎಂದು ಹೇಳುತ್ತದೆ ಮಾತ್ರವಲ್ಲ ಆತನ ಯೋಚನೆ ಮತ್ತು ಅನಿಸಿಕೆ ಏನಾಗಿತ್ತು ಎಂಬದರ ನಸುನೋಟವನ್ನೂ ಕೊಡುತ್ತದೆ.
ವಿವಿಧ ಉಪಯೋಗಗಳು
ಅನೇಕರು ಈ ಪುಸ್ತಕವನ್ನು ತಮ್ಮ ಕುಟುಂಬ ಬೈಬಲಭ್ಯಾಸದಲ್ಲಿ ಉಪಯೋಗಿಸ ತೊಡಗಿದ್ದಾರೆ. “ನಮಗೆ ಮೂರು ಚಿಕ್ಕ ಮಕ್ಕಳಿವೆ,” ಅಮೆರಿಕದ ಸಿಲ್ವರ್ಟನ್, ಅರಿಗಾನ್ನ ಹೆತ್ತವರು ಬರೆದದ್ದು, “ಮತ್ತು ಈ ಪುಸ್ತಕವು ನಮ್ಮ ‘ಪ್ರತಿ ರಾತ್ರಿಯ ಕುಟುಂಬ ಅಧ್ಯಯನ’ಕ್ಕೆ ತೀರಾ ಉತ್ತಮ.’ ನಿಜವಾಗಿಯೂ, ನಮ್ಮ ಪ್ರೀತಿಯ ಅರಸನಾದ ಕ್ರಿಸ್ತ ಯೇಸುವಿನ ಹಿನ್ನೆಲೆಯನ್ನು ಜಾಗರೂಕತೆಯಿಂದ ಅಧ್ಯಯನ ಮಾಡುವುದೆಷ್ಟು ಯುಕ್ತವು.”
ಜಾಪಾನಿನ ಒಬ್ಬ ಹದಿವಯಸ್ಕಳು ವಿವರಿಸುವುದು: “ನಮ್ಮ ಸಂಜೆಯೂಟದ ನಂತರ ನಾವು ವಿರಮಿಸುವಾಗ ನಮ್ಮ ತಂದೆಯು ನಮಗದನ್ನು ಓದುತ್ತಿದ್ದಾರೆ. ಕುಟುಂಬವಾಗಿ ನಾವದನ್ನು ಮೊದಲಿನಿಂದ ಓದುತ್ತೇವೆ, ಆದರೆ ಪ್ರತಿ ರಾತ್ರಿ ಮಲಗುವ ಮುಂಚೆ ಪುಸ್ತಕದ ಕೊನೆಯಿಂದ ಒಂದೊಂದೇ ಅಧ್ಯಾಯವನ್ನು ಓದಲು ನಾನು ನಿರ್ಣಯಿಸಿದೆ. ಅದರೆ ಪುಸ್ತಕವೆಷ್ಟು ಆನಂದ ಪರವಶಗೊಳಿಸುತ್ತದೆಂದರೆ ನಾನು ವೇಳೆ ನೋಡಲು ಕಣ್ಣೆತ್ತುವಾಗ ಹೆಚ್ಚಾಗಿ ಬೆಳಿಗ್ಗೆ ಒಂದು ಗಂಟೆಯಾಗಿರುತ್ತದೆ.”
ವೃತ್ತಾಂತಗಳಲ್ಲಿ ಸೇರಿರುವ ಎಷ್ಟೋ ಸವಿವರಗಳಿಗಾಗಿ ಅನೇಕರು ಅಚ್ಚರಿಯನ್ನು ವ್ಯಕ್ತಪಡಿಸಿರುವರು. “ನನಗೆ ಗೊತ್ತೇ ಇರದಿದ್ದ ಎಷ್ಟೋ ಹೆಚ್ಚು ವಿಷಯಗಳನ್ನು ನಾನು ಕಲಿತೆನು,” ಎಂದು ಒಬ್ಬಾಕೆ ಸಾಕ್ಷಿಯು ಬರೆದಳು. ಅಮೆರಿಕದ ಕ್ಯಾಲಿಫೋರ್ನಿಯದಿಂದ ಒಂದು ಪತ್ರವು ಹೇಳಿದ್ದು: “ನನ್ನ ಪತ್ನಿ ಮತ್ತು ನಾನು 35 ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ಸತ್ಯದಲ್ಲಿದ್ದೇವೆ. ಇಷ್ಟು ಹೆಚ್ಚು ಪುಳಕಿತಗೊಳಿಸುವ ಒಂದು ಪ್ರಕಾಶನವು ಇಷ್ಟರ ತನಕ ನಮ್ಮ ಕೈಗೆ ಬರಲಿಲ್ಲವೆಂದು ನಾವು ಯಥಾರ್ಥವಾಗಿ ಹೇಳಬಲ್ಲೆವು.”
ಯೆಹೋವನ ಸಾಕ್ಷಿಗಳು ಯೇಸುವನ್ನು ನಂಬುವುದಿಲ್ಲ ಎಂಬ ಸುಳ್ಳನ್ನು ಈ ಪುಸ್ತಕವು ನೆಲಸಮಮಾಡಲು ಸಹಾಯ ಮಾಡಬೇಕು. ಒಬ್ಬ ಕೃತಜ್ಞ ವಾಚಕನು ಹೀಗೆ ಹೇಳಿದನು: “ಯೆಹೋವನ ಜನರು ಯೇಸು ಕ್ರಿಸ್ತನನ್ನು ನಂಬುವುದಿಲ್ಲ ಅಥವಾ ಗೌರವಿಸುವುದಿಲ್ಲ ಎಂದು ಹೇಳುವ ಜನರ ಮೂಢತೆಗೆ ಇದೊಂದು ಮಹತ್ತಾದ ಪ್ರತಿಪ್ರಮಾಣವಾಗಿದೆ. ಅವರ ಅಜ್ಞಾನತೆಗೆ ಈ ಉತ್ತರವನ್ನು ಅವರ ಕೈಯಲ್ಲಿ ಹಾಕುವುದೇ ನಮಗೀಗ ಮಾಡಲಿಕ್ಕಿರುವ ವಿಷಯ.”
ನಿಶ್ಚಯವಾಗಿಯೂ ಈ ಪುಸ್ತಕವು ಯೆಹೋವನ ಸಾಕ್ಷಿಗಳ ಶುಶ್ರೂಷೆಯಲ್ಲಿ ಒಂದು ಮಹತ್ವದ ಸ್ಥಾನವನ್ನು ಪಡೆಯುವುದು. “ನಾನು ಬೈಬಲಭ್ಯಾಸ ಮಾಡುವ ಒಬ್ಬ ಸ್ತ್ರೀಗೆ ನಾನು ಇದರ ಒಂದು ಪ್ರತಿಯನ್ನು ಕೊಟ್ಟೆನು,” ಎಂದು ಒಬ್ಬಾಕೆ ಸಾಕ್ಷಿಯು ಬರೆದಳು, “ಮತ್ತು ಅದು ಅವಳ ಮೇಲೆ ಹಾಕಿದ ಪ್ರಭಾವವು ಒಂದು ಅದ್ಭುತದಂತೆ ಕಾಣುತ್ತದೆ. ಅವಳು ಒಂದು ವರ್ಷದಿಂದ ಅಧ್ಯಯನಿಸುತ್ತಿದ್ದಾಳೆ ಮತ್ತು ಅವಳನ್ನು ಕೂಟಗಳಿಗೆ ತರುವುದು ನನಗೆ ಕಷ್ಟಕರವಾಗಿತ್ತು.” ವಿದ್ಯಾರ್ಥಿಯು ಹೊಸ ಪುಸ್ತಕದ 45 ಅಧ್ಯಾಯಗಳನ್ನು ಓದಿದ ನಂತರ, ಸಾಕ್ಷಿಯು ವಿವರಿಸಿದ್ದು, “ಭಾನುವಾರ ಅವಳು ಕೂಟಕ್ಕೆ ಬರುವೆನೆಂದಳು ಯಾಕಂದರೆ ಅವಳಿಗೆ ಅವಳ ನಿಲುವನ್ನು ತಕ್ಕೊಳ್ಳುವ ಸಮಯ ಬಂದಿದೆ ಎಂದು ಹೇಳಿದಳು.”
ಬೆಲೆಯುಳ್ಳ ವೈಶಿಷ್ಟ್ಯಗಳು
ವಾಸ್ತವವಾಗಿ ದ ಗ್ರೇಟೆಸ್ಟ್ ಮ್ಯಾನ್ ಹು ಎವರ್ ಲಿವ್ಡ್ ಪುಸ್ತಕವು ಸುವಾರ್ತೆಗಳ ಮೇಲಣ ಒಂದು ವಾಖ್ಯಾನವನ್ನು ಒದಗಿಸುತ್ತದೆ. ಯೇಸು ಹೇಳಿದ ಮತ್ತು ಕಲಿಸಿದ ಅನೇಕ ವಿಷಯಗಳ ವಿವರಣೆಗಳು ಒದಗಿಸಲ್ಪಟ್ಟಿರುವುದರಿಂದ ಪುಸ್ತಕವನ್ನು ಒಂದು ಬೆಲೆಯುಳ್ಳ ಸಂಶೋಧನಾ ಸಾಧನವಾಗಿ ಉಪಯೋಗಿಸಬಹುದು, ಯಾಕಂದರೆ ಬೈಬಲ್ ವೃತ್ತಾಂತಗಳನ್ನು ಅದು ನಿಕಟವಾಗಿ ಪಾಲಿಸುತ್ತದೆ.
ಒಂದು ವಿಶೇಷವಾದ ಉತ್ತಮ ವೈಶಿಷ್ಟ್ಯವು ಮೂಲತಃ ಎಲ್ಲವನ್ನು ಕಾಲಾನುಕ್ರಮದಲ್ಲಿ ತಿಳಿಸಲಾಗಿರುವುದೇ. ಇದನ್ನು ಮನಸ್ಸಿನಲ್ಲಿಟ್ಟು ಕೇವಲ ಪುಟಗಳನ್ನು ತೆರೆದು ನೋಡುವ ಮೂಲಕ, ಯೇಸುವಿನ ಶುಶ್ರೂಷೆಯಲ್ಲಿ ನಿರ್ದಿಷ್ಟ ಘಟನೆಗಳು ಯಾವಾಗ ಸಂಭವಿಸಿದವೆಂದು ಗುರುತಿಸಲು ಅದೊಂದು ನಿಜ ಸಹಾಯವಾಗಿ ರುಜುವಾಗುವುದು. ಸುವಾರ್ತೆಗಳ ಓದುಗರಿಗೆ ವಿರುದ್ಧೋಕ್ತಿಗಳೆಂದು ತೋರಿಬರುವ ಕೆಲವು ಸಂಗತಿಗಳು ಆಗಿಂದಾಗ್ಯೆ ಎದುರಾಗುತ್ತವೆ. ಈ ಹೊಸ ಪುಸ್ತಕವು, ಅವುಗಳಿಗೆ ಅನಾವಶ್ಯಕವಾಗಿ ಗಮನ ಸೆಳೆಯದೇ, ಅದರ ನಿರೂಪಣೆಯಲ್ಲಿ ಅವಕ್ಕೆ ಸಾಮರಸ್ಯವನ್ನು ತಂದದೆ.
ಕ್ರೈಸ್ತರಾದ ನಾವು ನಮ್ಮ ನಂಬಿಗಸ್ತ ಮಾದರಿಯಾದ ಯೇಸು ಕ್ರಿಸ್ತನ ಜೀವನ ವೃತ್ತಾಂತದ ಒಂದು ಜಾಗ್ರತೆಯ ಅಧ್ಯಯನವನ್ನು ಅಸಡ್ಡೆ ಮಾಡ ಬಯಸಲಾರೆವು. ಆದುದರಿಂದ ನಾವು, ಈ ಹೊಸ ಪುಸ್ತಕವಾದ ದ ಗ್ರೇಟೆಸ್ಟ್ ಮ್ಯಾನ್ ಹು ಎವರ್ ಲಿವ್ಡ್ ಇದರ ಸಹಾಯದೊಂದಿಗೆ ಸುವಾರ್ತೆಯ ವೃತ್ತಾಂತಗಳನ್ನು ನಿಕಟವಾಗಿ ಪರಿಶೀಲಿಸೋಣ. (w92 2/15)