ಧಾರ್ಮಿಕವಾಗಿ ವಿಭಜಿತವಾಗಿರುವ ಕುಟುಂಬವೊಂದರಲ್ಲಿ ದೈವಿಕ ವಿಧೇಯತೆ
“ಯಾವುದೇ ದೈಹಿಕ ಹೊಡೆತಕ್ಕಿಂತ ಅದು ನನ್ನನ್ನು ಹೆಚ್ಚು ನೋಯಿಸುತ್ತದೆ. . . . ನನ್ನ ದೇಹದಲ್ಲೆಲ್ಲಾ ನನಗೆ ಗಾಯಗಳಾದರೂ ಯಾರೂ ಅದನ್ನು ನೋಡಲಾರರೆಂದು ನನಗೆ ಅನಿಸುತ್ತದೆ.” “ಕೆಲವೊಮ್ಮೆ ನನಗೆ ಜೀವವನ್ನೇ ತ್ಯಜಿಸುವ ಹಾಗೆನಿಸುತ್ತದೆ . . . ಅಥವಾ ಮನೆಯನ್ನು ಬಿಟ್ಟು ಹೋಗಿ ಎಂದಿಗೂ ಹಿಂದೆ ಬರಬಾರದೆಂದು ಅನಿಸುತ್ತದೆ.” “ಕೆಲವೊಮ್ಮೆ ಸರಿಯಾದ ರೀತಿಯಲ್ಲಿ ಯೋಚಿಸುವುದು ಕಷ್ಟ.”
ಆ ಭಾವನಾಭರಿತ ಮಾತುಗಳು ಹತಾಶೆ ಮತ್ತು ಒಂಟಿತನದ ಅನಿಸಿಕೆಗಳನ್ನು ಹೊರಗೆಡಹುತ್ತವೆ. ಅವು ವಿವಾಹ ಸಂಗಾತಿಗಳಿಂದ ಹಾಗೂ ಕುಟುಂಬ ಸದಸ್ಯರಿಂದ ಶಾಬ್ದಿಕ ತೆಗಳುವಿಕೆಗೆ—ಆಪಾದನೆಗಳು, ಬೆದರಿಕೆಗಳು, ಹೀನೈಸುವ ಶೀಲಗೆಟ್ಟ ಹೆಸರುಗಳಿಂದ ಕರೆಯಲ್ಪಡುವುದು, ಮೌನ ಉಪಚಾರ—ಶಾರೀರಿಕ ದುರಾಚಾರಕ್ಕೂ ಗುರಿಯಾದವರಿಂದ ಬರುತ್ತವೆ. ಈ ಜನರು ಯಾಕೆ ಇಷ್ಟು ಕೆಟ್ಟದ್ದಾಗಿ ಉಪಚರಿಸಲ್ಪಡುತ್ತಾರೆ? ಕೇವಲ ಅವರ ಭಿನ್ನವಾದ ಧಾರ್ಮಿಕ ನಂಬಿಕೆಗಳಿಗೋಸ್ಕರ. ಈ ಪರಿಸ್ಥಿತಿಗಳಡಿಯಲ್ಲಿ, ಧಾರ್ಮಿಕವಾಗಿ ವಿಭಜಿತವಾಗಿರುವ ಕುಟುಂಬವೊಂದರಲ್ಲಿ ಜೀವಿಸುವುದು, ಯೆಹೋವನ ಆರಾಧನೆಯನ್ನು ಒಂದು ನಿಜವಾದ ಪಂಥಾಹ್ವಾನವನ್ನಾಗಿ ಮಾಡುತ್ತದೆ. ಆದರೂ, ಅಂತಹ ಕಷ್ಟಕ್ಕೆ ಗುರಿಯಾದ ಕ್ರೈಸ್ತರಲ್ಲಿ ಅನೇಕರು ದೈವಿಕ ವಿಧೇಯತೆಯನ್ನು ಯಶಸ್ವಿಯಾಗಿ ತೋರಿಸುತ್ತಾರೆ.
ಕೃತಜ್ಞತಾಸೂಚಕವಾಗಿ, ಅಂತಹ ಬೇಗುದಿ ಮತ್ತು ಒತ್ತಡವು ಧಾರ್ಮಿಕವಾಗಿ ವಿಭಜಿತವಾಗಿರುವ ಎಲ್ಲಾ ಮನೆಗಳಲ್ಲಿ ಕಂಡುಬರುವದಿಲ್ಲ. ಆದರೂ, ಅದು ಅಸ್ತಿತ್ವದಲ್ಲಿದೆ. ಈ ವರ್ಣನೆಯು ನಿಮ್ಮ ಮನೆಗೆ ಹೊಂದಿಕೆಯಾಗುತ್ತದೋ? ಹಾಗಿದ್ದಲ್ಲಿ, ನಿಮ್ಮ ವಿವಾಹ ಸಂಗಾತಿಗಾಗಿ ಅಥವಾ ನಿಮ್ಮ ಹೆತ್ತವರಿಗಾಗಿ ಗೌರವವನ್ನು ಕಾಪಾಡಿಕೊಳ್ಳುವುದು ಕಷ್ಟಕರವೆಂದು ನೀವು ಕಂಡುಕೊಳ್ಳಬಹುದು. ಆ ಸನ್ನಿವೇಶದಲ್ಲಿ ನೀವು ಒಬ್ಬ ಪತ್ನಿಯಾಗಿರುವಲ್ಲಿ, ಅಥವಾ ಅಂತಹ ಒಂದು ಪರಿಸರದಲ್ಲಿ ಮಕ್ಕಳಾಗಿರುವಲ್ಲಿ, ಧಾರ್ಮಿಕವಾಗಿ ವಿಭಜಿತವಾಗಿರುವ ಒಂದು ಮನೆಯಲ್ಲಿ ದೈವಿಕ ವಿಧೇಯತೆಯನ್ನು ತೋರಿಸುವುದರಲ್ಲಿ ನೀವು ಹೇಗೆ ಯಶಸ್ವಿಯಾಗಬಲ್ಲಿರಿ? ಇತರರು ಯಾವ ಬೆಂಬಲವನ್ನು ಕೊಡಬಲ್ಲರು? ಮತ್ತು ದೇವರು ಆ ವಿಷಯವನ್ನು ಹೇಗೆ ವೀಕ್ಷಿಸುತ್ತಾನೆ?
ವಿಧೇಯರಾಗಿರುವುದು ಅಷ್ಟು ಕಷ್ಟಕರವಾಗಿದೆ ಏಕೆ?
ಲೋಕದ ಸ್ವ-ಆಸಕ್ತಿ ಮತ್ತು ಕೃತಘ್ನತೆಯು ನಿಮ್ಮ ಸ್ವಂತ ಅಪರಿಪೂರ್ಣ ಪ್ರವೃತ್ತಿಗಳೊಂದಿಗೆ ಕೆಲಸ ಮಾಡುತ್ತದೆ ಮತ್ತು ದೈವಿಕ ವಿಧೇಯತೆಯನ್ನು ಒಂದು ಸತತ ಹೋರಾಟವನ್ನಾಗಿ ಮಾಡುತ್ತದೆ. ಸೈತಾನನಿಗೆ ಇದು ತಿಳಿದಿದೆ, ಮತ್ತು ಕ್ರೈಸ್ತರಾಗಿರುವ ನಿಮ್ಮ ನಿರ್ಧಾರವನ್ನು ಮುರಿಯುವುದು ಅವನ ಉದ್ದೇಶವಾಗಿದೆ. ದೈವಿಕ ಮಟ್ಟಗಳಿಗಾಗಿ ಸ್ವಲ್ಪವೇ ಆಥವಾ ಗಣ್ಯತೆಯೇ ಇಲ್ಲದ ಕುಟುಂಬ ಸದಸ್ಯರನ್ನು ಅವನು ಅನೇಕಸಲ ಉಪಯೋಗಿಸುತ್ತಾನೆ. ನಿಮ್ಮ ಉನ್ನತ ಆತ್ಮಿಕ ಮತ್ತು ನೈತಿಕ ಮೌಲ್ಯಗಳು ನಿಮ್ಮ ಅವಿಶ್ವಾಸಿ ಕುಟುಂಬದವರಿಗಿಂತ ಅನೇಕ ಸಲ ಭಿನ್ನವಾಗಿರುತ್ತವೆ. ಇದರ ಅರ್ಥ ನಡತೆ ಮತ್ತು ಚಟುವಟಿಕೆಯ ಮೇಲೆ ಅಸಂಗತ ನೋಟಗಳು. (1 ಪೇತ್ರ 4:4) “ಕತ್ತಲೆಗೆ ಸಂಬಂಧವಾದ ಕೃತ್ಯಗಳಿಂದ ಯಾವ ಪ್ರಯೋಜನವೂ ಬರಲಾರದು; ಅವುಗಳಲ್ಲಿ ಪಾಲುಗಾರ” ರಾಗದಿರ್ರಿ ಎಂಬ ಆಜೆಗ್ಞೆ ನೀವು ವಿಧೇಯರಾಗಿರುವದರಿಂದ, ಕ್ರೈಸ್ತ ಮಟ್ಟದಿಂದ ನಿಮ್ಮನ್ನು ತಿರುಗಿಸುವ ಒತ್ತಡವು ತೀವ್ರವಾಗಿರಬಹುದು. (ಎಫೆಸ 5:11) ಅವರ ದೃಷ್ಟಿಕೋನದಲ್ಲಿ, ಇನ್ನು ಮುಂದೆ ನೀವು ಏನು ಮಾಡುತ್ತೀರೋ ಅದು ಯಾವುದೂ ಸರಿಯಲ್ಲ. ಅದೆಲ್ಲವು ನಿಮ್ಮ ಧರ್ಮದ ಕಾರಣದಿಂದಲೇ. ಅಸ್ವಸ್ಥರಾಗಿದ್ದ ಮಕ್ಕಳಿಂದಾಗಿ ಭಾರ ಹೊತ್ತಿದ್ದ ಒಬ್ಬ ತಾಯಿ, ತನ್ನ ಗಂಡನಿಂದ ಸಹಾಯವನ್ನು ಕೇಳಿದಾಗ ಈ ಅಣಕದ ಉತ್ತರವನ್ನು ಪಡೆದಳು: “ನಿನಗೆ ನಿನ್ನ ಧರ್ಮಕ್ಕಾಗಿ ಸಮಯವಿದೆ; ನಿನಗೆ ಸಹಾಯದ ಅಗತ್ಯವಿಲ್ಲ.” ಅಂತಹ ಹೇಳಿಕೆಗಳು ವಿಧೇಯರಾಗಿರುವ ಪಂಥಾಹ್ವಾನಕ್ಕೆ ಕೂಡಿಸುತ್ತವೆ.
ಅನಂತರ ಶಾಸ್ತ್ರವಚನಗಳ ನೇರವಾದ ಉಲ್ಲಂಘನೆಯಾಗದ ವಿಷಯಗಳ ಮೇಲೆ ನೀವು ಅಸಮ್ಮತಿಸುವ ಸಮಯಗಳಿರಬಹುದು. ಆದರೂ, ನೀವು ಒಂದು ಕುಟುಂಬದ ಭಾಗವಾಗಿದ್ದೀರಿ ಮತ್ತು ಈ ಕಾರಣದಿಂದಾಗಿ ನಿಮಗೆ ನಿರ್ದಿಷ್ಟ ಹಂಗುಗಳಿವೆಯೆಂಬದನ್ನು ನೀವು ಗ್ರಹಿಸುತ್ತೀರಿ. “ತಾನು ಏಕಾಂಗಿಯಾಗಿದ್ದೇನೆಂದು ಅವನಿಗೆ ಅನಿಸುತ್ತದೆಂದು ನಾನು ಗ್ರಹಿಸುವ ಕಾರಣದಿಂದಾಗಿ ನನ್ನ ತಂದೆಯು ನಮ್ಮನ್ನು ಉಪಚರಿಸುವ ವಿಧದ ಕುರಿತಾಗಿ ಯೋಚಿಸುವಾಗ ನಾನು ತುಂಬ ಭಾವುಕಳಾಗುತ್ತೇನೆ” ಎನ್ನುತ್ತಾಳೆ ಕಾನಿ. “ನನ್ನ ತಂದೆಯ ವಿರೋಧಕ್ಕೆ ನಾನು ಕೋಪಿಸಿಕೊಳ್ಳಬಾರದೆಂದು ನಾನು ಅನೇಕ ಸಲ ಸ್ವತಃ ನೆನಪಿಸಿಕೊಳ್ಳಬೇಕಾಗುತ್ತದೆ. ನಮ್ಮ ನಿಲುವಿಗೆ ಆತನು ಪ್ರತಿವರ್ತಿಸುವ ಅಥವಾ ಅದನ್ನು ತಿರಸ್ಕರಿಸುವದಕ್ಕೆ ಒಂದು ಬಲವಾದ ಕಾರಣವಿದೆಯೆಂದು ಸ್ವತಃ ನನಗೆ ಹೇಳುವ ಅಗತ್ಯವಿರುತ್ತದೆ. ಸೈತಾನನು ಈ ವಿಷಯಗಳ ವ್ಯವಸ್ಥೆಯ ಅಧಿಪತಿಯಾಗಿದ್ದಾನೆ.” ಒಬ್ಬ ಅವಿಶ್ವಾಸಿಯನ್ನು ಮದುವೆಯಾಗಿರುವ ಸೂಸನ್ ತಿಳಿಸುವುದು: “ಆರಂಭದಲ್ಲಿ ನಾನು ನನ್ನ ಗಂಡನಿಂದ ಪ್ರತ್ಯೇಕವಾಗಲು ಬಯಸುತ್ತಿದ್ದೇನೆಂದು ನನಗೆ ಅನಿಸಿತು—ಆದರೆ ಇನ್ನು ಮುಂದೆ ಹಾಗೆ ಅನಿಸುವದಿಲ್ಲ. ನನ್ನನ್ನು ಪರೀಕ್ಷಿಸಲಿಕ್ಕಾಗಿ ಸೈತಾನನು ಅವನನ್ನು ಉಪಯೋಗಿಸುತ್ತಿದ್ದನೆಂದು ನನಗೆ ತಿಳಿದಿತ್ತು.”
ನೀವು ಅಯೋಗ್ಯರೆಂದು ಭಾವಿಸಿಕೊಳ್ಳುವಂತೆ ಮಾಡುವ ಸೈತಾನನ ಪ್ರಯತ್ನಗಳು ಬಹುಮಟ್ಟಿಗೆ ಕಡಮೆಯಾಗದಿರುವಂತೆ ತೋರಬಹುದು. ನಿಮ್ಮ ಸಂಗಾತಿಯೊಂದಿಗೆ ಯಾವದೇ ಸಂಸರ್ಗವಿಲ್ಲದೆ ದಿನಗಳು ಕಳೆಯಬಹುದು. ಜೀವನವು ತೀರಾ ಒಂಟಿತನದ್ದಾಗಬಲ್ಲದು. ಇದು ಭರವಸೆ ಮತ್ತು ಸ್ವಗೌರವವನ್ನು ಸವೆಯಿಸುತ್ತದೆ ಮತ್ತು ನಿಮ್ಮ ದೈವಿಕ ವಿಧೇಯತೆಯನ್ನು ಪರೀಕ್ಷಿಸುತ್ತದೆ. ಮಕ್ಕಳು ಸಹ ಭಾವನಾತ್ಮಕ ಮತ್ತು ಶಾರೀರಿಕ ಬರಿದಾಗುವಿಕೆಯನ್ನು ಅನುಭವಿಸುತ್ತಾರೆ. ಒಂದು ಉದಾಹರಣೆಯಲ್ಲಿ, ತಮ್ಮ ಹೆತ್ತವರು ಆಕ್ಷೇಪಿಸಿದರೂ, ದೇವರ ಮೂರು ಯುವ ಸೇವಕರು ನಂಬಿಗಸ್ತಿಕೆಯಿಂದ ಕ್ರೈಸ್ತ ಕೂಟಗಳಿಗೆ ಹಾಜರಾದರು. ಅವರಲ್ಲಿ ಈಗ ಒಬ್ಬ ಪೂರ್ಣಸಮಯದ ಶುಶ್ರೂಷಕಿಯಾಗಿರುವ, ಒಬ್ಬಳು ಒಪ್ಪಿಕೊಂಡದ್ದು: “ನಮಗೆ ಜಡವಾದಂತೆ ಮತ್ತು ಭಾವನಾತ್ಮಕವಾಗಿ ಶಕಿಕ್ತಳೆದುಕೊಂಡಂತೆ ಅನಿಸುತ್ತಿತ್ತು; ನಮಗೆ ನಿದ್ರಿಸಲು ಸಾಧ್ಯವಾಗುತ್ತಿರಲಿಲ್ಲ; ನಾವು ತುಂಬಾ ದುಃಖಿತರಾಗಿದ್ದೆವು.”
ದೇವರು ನಿಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ?
ದೇವರಿಗೆ ವಿಧೇಯತೆ ಯಾವಾಗಲೂ ಮೊದಲು ಬರುತ್ತದೆ, ಮತ್ತು ಗಂಡನಂತಹ ಶಿರಸ್ಸಿಗೆ ಸಂಬಂಧಿತ ವಿಧೇಯತೆಯು ಯಾವಾಗಲೂ ಯೆಹೋವನು ನಿರ್ದೇಶಿಸಿದಂತೆ ಇರಬೇಕು. (ಅ. ಕೃತ್ಯಗಳು 5:29) ಅದು ಕಷ್ಟಕರವಾಗಿರಬಹುದು, ಆದರೂ ಅದು ಸಾಧ್ಯ. ಸಹಾಯಕ್ಕಾಗಿ ದೇವರೆಡೆಗೆ ನೋಡುತ್ತಾ ಇರ್ರಿ. ನೀವು “ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ” ಆರಾಧಿಸಲು ಮತ್ತು ಆತನ ನಿರ್ದೇಶನಕ್ಕೆ ಕಿವಿಗೊಟ್ಟು ಅಧೀನರಾಗಲು ಆತನು ಬಯಸುತ್ತಾನೆ. (ಯೋಹಾನ 4:24) ದೇವರ ವಾಕ್ಯದಿಂದ ದೊರಕುವ ಜ್ಞಾನವು, ಸರಿಯಾದ ರೀತಿಯ ಹೃದಯವನ್ನು ತುಂಬಿದಂತೆ, ಸಿದ್ಧಮನಸ್ಸಿನ ವಿಧೇಯತೆಯನ್ನು ಪ್ರೇರಿಸುತ್ತದೆ. ನಿಮ್ಮ ವೈಯಕ್ತಿಕ ಪರಿಸ್ಥಿತಿಗಳು ಬದಲಾಗಬಹುದಾದರೂ, ಯೆಹೋವನಾಗಲಿ ಆತನ ವಾಕ್ಯವಾಗಲಿ ಬದಲಾಗುವದಿಲ್ಲ. (ಮಲಾಕಿಯ 3:6; ಯಾಕೋಬ 1:17) ಯೆಹೋವನು ಶಿರಸ್ಸುತನವನ್ನು ಗಂಡನಿಗೆ ನೇಮಿಸಿದ್ದಾನೆ. ಅವನು ಕ್ರಿಸ್ತನ ಶಿರಸ್ಸುತನವನ್ನು ಸ್ವೀಕರಿಸಲಿ ಅಥವಾ ಸ್ವೀಕರಿಸದಿರಲಿ ಇದು ಸತ್ಯವಾಗಿ ಉಳಿಯುತ್ತದೆ. (1 ಕೊರಿಂಥ 11:3) ನೀವು ಸತತ ದೂಷಣೆ ಮತ್ತು ಅವಮಾನವನ್ನು ಎದುರಿಸುತ್ತಿರುವಲ್ಲಿ, ಇದನ್ನು ಸ್ವೀಕರಿಸಿ ತಾಳಿಕೊಳ್ಳುವುದು ಕಷ್ಟಕರವಾಗಿರುವುದಾದರೂ, ಶಿಷ್ಯನಾದ ಯಾಕೋಬನು ಹೇಳುವುದು: “ಮೇಲಣಿಂದ ಬರುವ ಜ್ಞಾನವು [ವಿವೇಕವು, NW] . . . ಸಂತೋಷವಾಗಿ ಒಪ್ಪಿಕೊಳ್ಳುವಂಥದು.” (ಯಾಕೋಬ 3:17) ಈ ಶಿರಸ್ಸುತನವನ್ನು ನಿಸ್ಸಂದಿಗ್ಧವಾಗಿ ಅಂಗೀಕರಿಸಲು ಮತ್ತು ಅದನ್ನು ಸ್ವೀಕರಿಸಲು, ದೇವರ ಆತ್ಮದ, ವಿಶೇಷವಾಗಿ ಪ್ರೀತಿಯೆಂಬ ಅದರ ಫಲದ ಆವಶ್ಯಕತೆಯಿದೆ.—ಗಲಾತ್ಯ 5:22, 23.
ನೀವು ಒಬ್ಬರನ್ನು ಪ್ರೀತಿಸುವಾಗ, ದೈವಿಕವಾಗಿ ಸಂಘಟಿಸಲ್ಪಟ್ಟಿರುವ ಅಧಿಕಾರದ ಕಡೆಗೆ ದೈವಿಕ ವಿಧೇಯತೆಯನ್ನು ತೋರಿಸುವುದು ಹೆಚ್ಚು ಸುಲಭ. ಎಫೆಸ 5:33 ಸಲಹೆ ಕೊಡುವುದು: “ನಿಮ್ಮಲ್ಲಿ ಪ್ರತಿ ಪುರುಷನು ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಬೇಕು; ಪ್ರತಿ ಹೆಂಡತಿಯು ತನ್ನ ಗಂಡನಿಗೆ ಭಯಭಕ್ತಿಯಿಂದ ನಡೆದುಕೊಳ್ಳಬೇಕು.”
ಯೇಸುವನ್ನು ಪರಿಗಣಿಸಿರಿ. ಅವನು ಶಾಬ್ದಿಕವಾಗಿ ಹಾಗೂ ಶಾರೀರಿಕವಾಗಿ ತೆಗಳಲ್ಪಟ್ಟಿದ್ದನು, ಆದರೂ ಅವನು ಎಂದೂ ಯಾರನ್ನೂ ದೂಷಿಸಲಿಲ್ಲ. ಅವನು ಒಂದು ಕುಂದಿಲ್ಲದ ದಾಖಲೆಯನ್ನು ಕಾಪಾಡಿಕೊಂಡನು. (1 ಪೇತ್ರ 2:22, 23) ಅಂತಹ ಮಹತ್ತಾದ ಅವಮಾನಗಳನ್ನು ಅನುಭವಿಸಲು ಯೇಸುವಿಗೆ, ಮಹತ್ತರವಾದ ಧೈರ್ಯ ಹಾಗೂ ಆತನ ತಂದೆಯಾದ ಯೆಹೋವನಿಗೋಸ್ಕರ ದೃಢವಾದ ಪ್ರೀತಿಯ ಅಗತ್ಯವಿತ್ತು. ಆದರೆ ಪ್ರೀತಿಯು “ಎಲ್ಲವನ್ನೂ ಸಹಿಸಿಕೊಳ್ಳುತ್ತದೆ.”—1 ಕೊರಿಂಥ 13:4-8.
ತನ್ನ ಸಹಕರ್ಮಿಯಾಗಿದ್ದ ತಿಮೊಥೆಯನಿಗೆ ಪೌಲನು ನೆನಪಿಸಿದ್ದು ಮತ್ತು ಇಂದು ಆತನು ನಮಗೆ ನೆನಪಿಸುವುದು: “ದೇವರು ನಮಗೆ ಕೊಟ್ಟಿರುವ ಆತ್ಮವು ಬಲ ಪ್ರೀತಿ ಶಿಕ್ಷಣಗಳ ಆತ್ಮವೇ ಹೊರತು ಹೇಡಿತನದ ಆತ್ಮವಲ್ಲ.” (2 ತಿಮೊಥೆಯ 1:7) ಯೆಹೋವನಿಗಾಗಿ ಮತ್ತು ಯೇಸು ಕ್ರಿಸ್ತನಿಗಾಗಿ ಆಳವಾದ ಪ್ರೀತಿಯು, ಪರಿಸ್ಥಿತಿಯು ಸಹಿಸಲು ಅಸಾಧ್ಯವೆಂದು ತೋರುವಾಗ ದೈವಿಕ ವಿಧೇಯತೆಯಲ್ಲಿ ನಿಮ್ಮನ್ನು ಪ್ರಚೋದಿಸುವುದು. ಮನಸ್ಸಿನ ಸ್ವಸ್ಥಚಿತ್ತತೆಯು ನಿಮಗೆ ಒಂದು ಸಮತೂಕದ ಹೊರನೋಟವನ್ನಿಡಲು ಮತ್ತು ಯೆಹೋವನ ಹಾಗೂ ಯೇಸು ಕ್ರಿಸ್ತನೊಂದಿಗಿನ ನಿಮ್ಮ ಸಂಬಂಧದ ಮೇಲೆ ಕೇಂದ್ರೀಕರಿಸಲು ನಿಮಗೆ ಸಹಾಯ ಮಾಡುವುದು.—ಫಿಲಿಪ್ಪಿ 3:8-11ನ್ನು ಹೋಲಿಸಿರಿ.
ದೈವಿಕ ವಿಧೇಯತೆಯನ್ನು ತೋರಿಸುವುದರಲ್ಲಿ ಯಶಸ್ವಿಯಾಗುವ ಸಂಗಾತಿಗಳು
ಯೆಹೋವನು ನಿಮ್ಮ ಸಮಸ್ಯೆಗಳನ್ನು ಹೇಗೆ ನಿರ್ವಹಿಸುವನೆಂದು ನೋಡಲು ಕೆಲವೊಮ್ಮೆ ನಿಮಗೆ ಒಂದು ದೀರ್ಘ ಸಮಯ ಕಾಯಬೇಕು. ಆದರೂ, ಅವನ ಕೈ ಎಂದೂ ಮೊಟಕಾಗಿರುವದಿಲ್ಲ. “ಯೆಹೋವನು ನಿಮಗೆ ಮಾಡಲು ಹಕ್ಕು ಮತ್ತು ಸುಯೋಗಗಳಾಗಿ ಕೊಡುವ—ಆತನನ್ನು ಕೂಟಗಳಲ್ಲಿ ಮತ್ತು ಸಮ್ಮೇಳನಗಳಲ್ಲಿ ಆರಾಧಿಸುವ, ಅಭ್ಯಾಸಿಸುವ, ಸೇವೆಗೆ ಹೋಗುವ, ಮತ್ತು ಪ್ರಾರ್ಥಿಸುವ—ಸಂಗತಿಗಳನ್ನು ಯಾವಾಗಲೂ ಮಾಡಿರಿ” ಎಂದು ದೈವಿಕ ವಿಧೇಯತೆಯನ್ನು ತೋರಿಸುವುದರಲ್ಲಿ ಯಶಸ್ವಿಯಾಗುತ್ತಿರುವವಳೊಬ್ಬಳು ಸಲಹೆ ಕೊಡುತ್ತಾಳೆ. ಯೆಹೋವನು ಆಶೀರ್ವದಿಸುವುದು ನಿಮ್ಮ ಪ್ರಯತ್ನಗಳನ್ನು ಕೇವಲ ನಿಮ್ಮ ಸಾಧನೆಗಳನ್ನಲ್ಲ. 2 ಕೊರಿಂಥ 4:17 ರಲ್ಲಿ, ‘ಸಂಕಟವು ಕ್ಷಣಮಾತ್ರದ್ದು, ಆದರೆ ಅದು ನಿರಂತರವಾಗಿರುವ ಗೌರವವಾದ ಪ್ರಭಾವವನ್ನು ದೊರಕಿಸುತ್ತದೆ’ ಎಂದು ಅಪೊಸ್ತಲ ಪೌಲನು ಹೇಳಿದನು. ಇದರ ಕುರಿತು ಮನನ ಮಾಡಿರಿ. ಇದು ನಿಮಗಾಗಿ ಒಂದು ಸ್ಥಿರಪಡಿಸುವ ಅಂಶವಾಗಿರುವುದು. ಒಬ್ಬ ಹೆಂಡತಿ ಪುನರಾಲೋಚಿಸುವುದು: “ನನ್ನ ಕುಟುಂಬ ಜೀವಿತವು ಹೆಚ್ಚು ಉತ್ತಮಗೊಳ್ಳುತ್ತಿಲ್ಲ, ಮತ್ತು ಯೆಹೋವನು ನನ್ನನ್ನು ಮೆಚ್ಚುತ್ತಾನೋ ಎಂದು ನಾನು ಕೆಲವೊಮ್ಮೆ ಕೌತುಕಪಡುತ್ತೇನೆ. ಆದರೆ ನಾನು ಅವನ ಆಶೀರ್ವಾದವೆಂದು ತೆಗೆದುಕೊಳ್ಳುವ ಒಂದು ವಿಷಯವೇನಂದರೆ ಈ ಕಷ್ಟಕರ ಸನ್ನಿವೇಶಗಳಿಂದ ನನ್ನ ಗಂಡನಿಗಿಂತ ನಾನು ಹೆಚ್ಚು ಉತ್ತಮವಾದ ಮಾನಸಿಕ ಸ್ಥಿತಿಯೊಂದಿಗೆ ಹೊರಬರುತ್ತೇನೆ ಎಂಬ ವಾಸ್ತವಾಂಶವೇ. ನಮ್ಮ ಕಾರ್ಯಗಳು ಯೆಹೋವನನ್ನು ಮೆಚ್ಚಿಸುತ್ತಿವೆಯೆಂದು ತಿಳಿದಿರುವುದು ಇಡೀ ಹೋರಾಟವನ್ನು ಅರ್ಹವನ್ನಾಗಿ ಮಾಡುತ್ತದೆ.”
ನೀವು ಸಹಿಸಲು ಶಕ್ತರಾಗಿರುವುದಕ್ಕೆ ಹೊರತಾದ ಪರಿಸ್ಥಿತಿಗಳನ್ನು ನೀವು ಅನುಭವಿಸಲು ತಾನು ಬಿಡುವುದಿಲ್ಲವೆಂದು ಯೆಹೋವನು ವಾಗ್ದಾನಿಸುತ್ತಾನೆ. ಅವನ ಮೇಲೆ ಭರವಸೆಯಿಡಿರಿ. ಅವನು ನಿಮಗಿಂತ ಹೆಚ್ಚು ಉತ್ತಮವಾದದ್ದನ್ನು ಬಲ್ಲನು, ಮತ್ತು ನೀವು ನಿಮ್ಮ ಕುರಿತಾಗಿಯೇ ತಿಳಿದಿರುವದಕ್ಕಿಂತ ಹೆಚ್ಚು ಉತ್ತಮವಾಗಿ ಆತನು ನಿಮ್ಮನ್ನು ಬಲ್ಲಾತನಾಗಿದ್ದಾನೆ. (ರೋಮಾಪುರ 8:35-39; 11:33; 1 ಕೊರಿಂಥ 10:13) ಕಷ್ಟಕರ ಪರಿಸ್ಥಿತಿಗಳಲ್ಲಿ ಯೆಹೋವನಿಗೆ ಪ್ರಾರ್ಥಿಸುವುದು ಸಹಾಯ ಮಾಡುತ್ತದೆ. ವಿಶೇಷವಾಗಿ, ನೀವು ಯಾವ ಮಾರ್ಗದಲ್ಲಿ ಹೋಗಬೇಕು ಅಥವಾ ಒಂದು ಸನ್ನಿವೇಶವನ್ನು ಹೇಗೆ ನಿರ್ವಹಿಸಬೇಕೆಂದು ನಿಮಗೆ ತಿಳಿಯದೆ ಇರುವಾಗ, ನಿಮ್ಮನ್ನು ಮಾರ್ಗದರ್ಶಿಸಲು ಆತನ ಆತ್ಮಕ್ಕಾಗಿ ಪ್ರಾರ್ಥಿಸಿರಿ. (ಜ್ಞಾನೋಕ್ತಿ 3:5; 1 ಪೇತ್ರ 3:12) ತಾಳ್ಮೆ, ಸ್ವ-ನಿಯಂತ್ರಣ ಮತ್ತು ನಿಮ್ಮ ಜೀವಿತದಲ್ಲಿರುವ ಅಧಿಕಾರಕ್ಕೆ ವಿಧೇಯರಾಗಲು ನಮ್ರತೆಗಾಗಿ ಆತನನ್ನು ಸತತವಾಗಿ ಬೇಡಿಕೊಳ್ಳಿರಿ. ಕೀರ್ತನೆಗಾರನು ಅಂದದ್ದು: “ಯೆಹೋವನು ನನ್ನ ಬಂಡೆಯೂ ನನ್ನ ಕೋಟೆಯೂ ನನ್ನ ವಿಮೋಚಕನೂ . . . ಆಗಿದ್ದಾನೆ.” (ಕೀರ್ತನೆ 18:2) ಇದನ್ನು ನೆನಪಿನಲ್ಲಿಡುವುದು, ಧಾರ್ಮಿಕವಾಗಿ ವಿಭಜಿತವಾಗಿರುವ ಮನೆತನಗಳಲ್ಲಿರುವವರಿಗೆ ಒಂದು ಬಲವರ್ಧಕ ಸಹಾಯಕವಾಗಿದೆ.
ಎಲ್ಲಕ್ಕಿಂತ ಮಿಗಿಲಾಗಿ, ನಿಮ್ಮ ವಿವಾಹವನ್ನು ಸಂತೋಷಕರವಾದದ್ದಾಗಿ ಮಾಡಲು ಪ್ರತಿಯೊಂದು ಪ್ರಯತ್ನವನ್ನು ಮಾಡಿರಿ. ಹೌದು, ಸುವಾರ್ತೆಯು ವಿಭಜನೆಗಳನ್ನು ಉಂಟುಮಾಡುವುದೆಂದು ಯೇಸು ಮುನ್ನೋಡಿದನು. ಆದರೂ, ಯಾವುದೇ ವಿಭಜನೆಯು ನಿಮ್ಮ ಮನೋಭಾವ ಅಥವಾ ನಡತೆಯಿಂದಾಗದಿರಲೆಂದು ಪ್ರಾರ್ಥಿಸಿರಿ. (ಮತ್ತಾಯ 10:35, 36) ಮನಸ್ಸಿನಲ್ಲಿ ಈ ಹೇತುವಿರುವಾಗ, ಸಹಕಾರವು ವೈವಾಹಿಕ ಸಮಸ್ಯೆಗಳನ್ನು ಕಡಿಮೆಮಾಡುತ್ತದೆ. ಕೇವಲ ನೀವು ಈ ಸರಿಯಾದ ಮನೋಭಾವವನ್ನು ಪ್ರದರ್ಶಿಸುತ್ತಿರುವಾಗಲೂ, ಸಮಸ್ಯೆಗಳು ವಿಪರೀತವಾದ ಘರ್ಷಣೆ ಮತ್ತು ವೈಮನಸ್ಸಿನ ಬಿಂದುವಿಗೆ ತಲಪುವುದರಿಂದ ತಡೆಗಟ್ಟಲು ಇದು ಹೆಚ್ಚನ್ನು ಮಾಡಬಲ್ಲದು. ತಾಳ್ಮೆ ಮತ್ತು ಪ್ರೀತಿ ಬಹಳ ಪ್ರಾಮುಖ್ಯ. “ಸಾಧುವೂ” “ಕೇಡನ್ನು ಸಹಿಸಿಕೊಳ್ಳುವವ”ರೂ ಆಗಿರ್ರಿ.—2 ತಿಮೊಥೆಯ 2:24.
ಅಪೊಸ್ತಲ ಪೌಲನು “ಯಾರಾರಿಗೆ ಎಂಥೆಂಥವನಾಗಬೇಕೋ ಅಂಥಂಥವ”ನಾದನು. (1 ಕೊರಿಂಥ 9:22) ತದ್ರೀತಿಯಲ್ಲಿ, ಕ್ರೈಸ್ತ ಕರ್ತವ್ಯಗಳನ್ನು ರಾಜಿಮಾಡದಿರುವಾಗಲೇ, ನಿಮ್ಮ ಸಂಗಾತಿ ಹಾಗೂ ಕುಟುಂಬದೊಂದಿಗೆ ನೀವು ಹೆಚ್ಚು ಸಮಯವನ್ನು ಕಳೆಯಲಿಕ್ಕಾಗಿ ನಿಮ್ಮ ಕಾರ್ಯತಖ್ತೆಯನ್ನು ಕೆಲವೊಮ್ಮೆ ಅಳವಡಿಸುವ ಅಗತ್ಯವಿರಬಹುದು. ನಿಮ್ಮ ಜೀವನದಲ್ಲಿ ಪಾಲಿಗರಾಗಲು ನೀವು ಆರಿಸಿಕೊಂಡಂತಹ ವ್ಯಕ್ತಿಗೆ ಸಾಧ್ಯವಿದ್ದಷ್ಟು ಹೆಚ್ಚು ಸಮಯವನ್ನು ಕೊಡಿರಿ. ಕ್ರೈಸ್ತ ಪರಿಗಣನೆಯನ್ನು ತೋರಿಸಿರಿ. ಇದು ದೈವಿಕ ವಿಧೇಯತೆಯ ಒಂದು ಅಭಿವ್ಯಕ್ತಿಯಾಗಿದೆ.
ಮಣಿಯುವ ಮತ್ತು ಸಹಾನುಭೂತಿಯುಳ್ಳ ಒಬ್ಬ ದೇವ-ಭೀರು ಮತ್ತು ಅಧೀನ ಹೆಂಡತಿಯು ದೈವಿಕ ವಿಧೇಯತೆಯನ್ನು ಪ್ರದರ್ಶಿಸುವುದನ್ನು ಹೆಚ್ಚು ಸುಲಭವನ್ನಾಗಿ ಕಂಡುಕೊಳ್ಳುತ್ತಾಳೆ. (ಎಫೆಸ 5:22, 23) “ರಸವತ್ತಾಗಿ” ಹಿತಕರವಾಗಿರುವ ನುಡಿಗಳು, ಸಂಭಾವನಾ ಎದುರಿಸುವಿಕೆಗಳ ಸಂಭವ ಪ್ರಮಾಣಗಳನ್ನು ಕಡಿಮೆಗೊಳಿಸಲು ಸಹಾಯಮಾಡುತ್ತವೆ.—ಕೊಲೊಸ್ಸೆ 4:6; ಜ್ಞಾನೋಕ್ತಿ 15:1.
ನೀವು ‘ಸಿಟ್ಟಿನಲ್ಲಿ’ ನಿದ್ರಿಸುವುದಕ್ಕಿಂತ, ಭಿನ್ನತೆಗಳನ್ನು ಬೇಗನೇ ಇತ್ಯರ್ಥಗೊಳಿಸಲು ಮತ್ತು ಆತ್ಮೋನ್ನತಿ ಮಾಡುವ ಒಳ್ಳೆಯ ಮಾತುಗಳಿಂದ ಶಾಂತಿಯನ್ನು ಪುನಃಸ್ಥಾಪಿಸಲು ದೈವಿಕ ವಿವೇಕವು ನಿಮಗೆ ಬುದ್ಧಿ ನೀಡುತ್ತದೆ. (ಎಫೆಸ 4:26, 29, 31) ಇದಕ್ಕೆ ನಮ್ರತೆ ಬೇಕಾಗಿದೆ. ಬಲಕ್ಕಾಗಿ ಯೆಹೋವನ ಮೇಲೆ ಬಲವಾಗಿ ಆತುಕೊಳ್ಳಿರಿ. ಒಬ್ಬ ಕ್ರೈಸ್ತ ಹೆಂಡತಿಯು ನಮ್ರವಾಗಿ ಒಪ್ಪಿಕೊಂಡದ್ದು: “ತೀವ್ರ ಪ್ರಾರ್ಥನೆಯ ನಂತರ, ನಾನು ನನ್ನ ಸಂಗಾತಿಯ ಕಡೆಗೆ ಒಂದು ಹೆಚ್ಚು ಪ್ರೀತಿಯ ಮನೋಭಾವವನ್ನು ಹೊಂದುವಂತೆ ಯೆಹೋವನ ಆತ್ಮವು ನನ್ನನ್ನು ಬಲಪಡಿಸಿದ ಅನುಭವ ನನಗಿದೆ.” ದೇವರ ವಾಕ್ಯವು ಸಲಹೆ ಕೊಡುವುದು: “ಯಾರಿಗೂ ಅಪಕಾರಕ್ಕೆ ಅಪಕಾರವನ್ನು ಮಾಡಬೇಡಿರಿ. . . . ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸು.” (ರೋಮಾಪುರ 12:17-21) ಇದು ವಿವೇಕದ ಸಲಹೆಯಾಗಿದೆ ಮತ್ತು ದೈವಿಕ ವಿಧೇಯತೆಯ ಪಥವಾಗಿದೆ.
ದೈವಿಕ ವಿಧೇಯತೆಯನ್ನು ತೋರಿಸುವ ಮಕ್ಕಳು
ಧಾರ್ಮಿಕವಾಗಿ ವಿಭಜಿತವಾಗಿರುವ ಕುಟುಂಬಗಳಲ್ಲಿರುವ ಮಕ್ಕಳಾದ ನಿಮಗೆ ಯೆಹೋವನ ಸಲಹೆಯು ಇದಾಗಿದೆ: “ಎಲ್ಲಾ ವಿಷಯಗಳಲ್ಲಿ ನಿಮ್ಮ ತಂದೆತಾಯಿಗಳ ಮಾತನ್ನು ಕೇಳಿರಿ. ಇದು ಕರ್ತನ ದೃಷ್ಟಿಯಲ್ಲಿ ಮೆಚ್ಚಿಕೆಯಾಗಿದೆ.” (ಕೊಲೊಸ್ಸೆ 3:20) ಕರ್ತನಾದ ಯೇಸು ಕ್ರಿಸ್ತನನ್ನು ಪರಿಗಣನೆಗಾಗಿ ತಿಳಿಸಲಾಗಿದೆಯೆಂಬದನ್ನು ಗಮನಿಸಿರಿ. ಆದುದರಿಂದ, ಹೆತ್ತವರಿಗೆ ವಿಧೇಯತೆಯು ಸಂಪೂರ್ಣವಾಗಿರುವದಿಲ್ಲ. ಒಂದು ವಿಧದಲ್ಲಿ “ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರ” ಬೇಕು ಎಂಬ ಅ. ಕೃತ್ಯಗಳು 5:29ರ ಸಲಹೆಯು ಕ್ರೈಸ್ತ ಯುವಕರಿಗೂ ಅನ್ವಯಿಸುತ್ತದೆ. ಶಾಸ್ತ್ರವಚನಗಳಿಗನುಸಾರ ಸರಿಯಾದದ್ದೆಂದು ನಿಮಗೆ ತಿಳಿದಿರುವ ವಿಷಯದ ಆಧಾರದ, ಮೇಲೆ ಏನನ್ನು ಮಾಡಬೇಕೆಂದು ನೀವು ನಿರ್ಣಯಿಸಬೇಕಾದ ಸಂದರ್ಭಗಳು ಏಳುವವು. ಸುಳ್ಳು ಧರ್ಮದ ಒಂದು ಕ್ರಿಯೆಯಲ್ಲಿ ತೊಡಗಲು ನಿರಾಕರಿಸಿದ್ದಕ್ಕಾಗಿ ಶಿಕ್ಷೆಯ ರೂಪದಲ್ಲಿ ಅದು ಪರಿಣಮಿಸಬಹುದು. ಇದೊಂದು ಅಹಿತಕರ ಪ್ರತೀಕ್ಷೆಯಾಗಿರುವಾಗ್ಯೂ, ನೀವು ದೇವರ ದೃಷ್ಟಿಯಲ್ಲಿ ಯೋಗ್ಯವಾಗಿರುವದನ್ನು ಮಾಡುತ್ತಿರುವದಕ್ಕಾಗಿ ಕಷ್ಟಾನುಭವಿಸುತ್ತೀರಿ ಎಂಬ ವಾಸ್ತವಾಂಶದಲ್ಲಿ, ನೀವು ಸಾಂತ್ವನವನ್ನು ಪಡೆಯಬಲ್ಲಿರಿ ಹಾಗೂ ಆನಂದಿಸಲೂ ಸಾಧ್ಯವಿದೆ.—1 ಪೇತ್ರ 2:19, 20.
ನಿಮ್ಮ ವಿಚಾರಗಳು ಬೈಬಲ್ ಸೂತ್ರಗಳಿಂದ ಮಾರ್ಗದರ್ಶಿಸಲ್ಪಟ್ಟಿರುವದರಿಂದ, ನಿರ್ದಿಷ್ಟ ವಿವಾದಾಂಶಗಳ ಮೇಲೆ ನೀವು ನಿಮ್ಮ ಹೆತ್ತವರೊಂದಿಗೆ ಸಮ್ಮತಿಸದಿರಬಹುದು. ಇದು ಅವರನ್ನು ನಿಮ್ಮ ಶತ್ರುಗಳನ್ನಾಗಿ ಮಾಡುವದಿಲ್ಲ. ಅವರು ಯೆಹೋವನ ಸಮರ್ಪಿತ ಸೇವಕರಾಗಿಲ್ಲದಿದ್ದರೂ, ಅವರು ತಕ್ಕದಾದ್ದ ಸನ್ಮಾನಕ್ಕೆ ಅರ್ಹರಾಗಿದ್ದಾರೆ. (ಎಫೆಸ 6:2) ಸೊಲೊಮೋನನಂದದ್ದು: “ಹೆತ್ತ ತಂದೆಯ ಮಾತಿಗೆ ಕಿವಿಗೊಡು; . . . ತಾಯಿಯನ್ನು ಅಸಡ್ಡೆಮಾಡಬೇಡ.” (ಜ್ಞಾನೋಕ್ತಿ 23:22) ಅವರಿಗೆ ವಿಚಿತ್ರವೆಂದು ತೋರುವ ಒಂದು ನಂಬಿಕೆಯನ್ನು ನೀವು ಬೆನ್ನಟ್ಟುವದರಿಂದ ಅವರಿಗೆ ಆಗುವ ನೋವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿರಿ. ಅವರೊಂದಿಗೆ ಸಂಸರ್ಗ ಮಾಡಿರಿ ಮತ್ತು “ನಿಮ್ಮ ಸೈರಣೆಯು . . . ಗೊತ್ತಾಗಲಿ.” (ಫಿಲಿಪ್ಪಿ 4:5) ನಿಮ್ಮ ಅನಿಸಿಕೆಗಳು ಮತ್ತು ಚಿಂತೆಗಳನ್ನು ಹಂಚಿಕೊಳ್ಳಿರಿ. ದೈವಿಕ ಸೂತ್ರಗಳಿಗಾಗಿ ದೃಢರಾಗಿರ್ರಿ, ಆದರೂ, “ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ.” (ರೋಮಾಪುರ 12:18) ಈಗ ನೀವು ಹೆತ್ತವರ ಆಧಿಪತ್ಯಕ್ಕೆ ವಿಧೇಯರಾಗಿರುವದು ಯೆಹೋವನಿಗೆ ತೋರಿಸುತ್ತದೇನಂದರೆ ನೀವು ರಾಜ್ಯದ ಪ್ರಜೆಯಾಗಿ ವಿಧೇಯರಾಗಿ ಮುಂದುವರಿಯಲು ಆಶಿಸುತ್ತೀರಿ.
ಇತರರು ಮಾಡಸಾಧ್ಯವಿರುವ ಸಂಗತಿಗಳು
ಧಾರ್ಮಿಕವಾಗಿ ವಿಭಜಿತವಾಗಿರುವ ಕುಟುಂಬಗಳಲ್ಲಿ ಜೀವಿಸುತ್ತಿರುವ ಕ್ರೈಸ್ತರಿಗೆ ಜೊತೆ ಆರಾಧಕರಿಂದ ಬೆಂಬಲ ಮತ್ತು ತಿಳಿವಳಿಕೆಯ ಅಗತ್ಯವಿರುತ್ತದೆ. ಹೀಗೆ ಹೇಳಿದವರ ಶಬ್ದಗಳಿಂದ ಇದು ವ್ಯಕ್ತವಾಗುತ್ತದೆ: “ಸಂಪೂರ್ಣವಾಗಿ ನಿರೀಕ್ಷಾಹೀನ ಮತ್ತು ನಿಸ್ಸಹಾಯಕತೆಯ ಅನಿಸಿಕೆ ನನಗಾಗುತ್ತದೆ, ಯಾಕಂದರೆ ಯಾರೂ ಅದರ ಕುರಿತಾಗಿ ಮಾಡಸಾಧ್ಯವಿರುವಂತಹದ್ದೇನೂ ಇಲ್ಲ, ಮತ್ತು ನಾನು ಅದನ್ನು ಬದಲಾಯಿಸಲು ಮಾಡಸಾಧ್ಯವಿರುವಂತಹದ್ದೇನೂ ಇಲ್ಲ. ಅದು ಏನೇ ಆಗಿರಲಿ, ಆತನ ಚಿತ್ತವನ್ನು ನಮ್ಮ ಕುಟುಂಬದಲ್ಲಿ ನೆರವೇರಿಸುವಂತೆ ನಾನು ಯೆಹೋವನಲ್ಲಿ ಭರವಸೆಯಿಡುತ್ತೇನೆ.”
ಕ್ರೈಸ್ತ ಕೂಟಗಳಲ್ಲಿ ಆತ್ಮಿಕ ಸಹೋದರಸಹೋದರಿಯರೊಂದಿಗಿನ ಸಹವಾಸವು ಒಂದು ಆಶ್ರಯವಾಗಿದೆ. ಇದೇ ವ್ಯಕ್ತಿಯು ತನ್ನ ಜೀವಿತವನ್ನು “ಎರಡು ವಿಭಿನ್ನ ಲೋಕಗಳಾಗಿರುವಂತೆ” ವರ್ಣಿಸಿದಳು. “ಒಂದು ತಾನು ಇರಲೇಬೇಕಾದಂತಹದ್ದು ಮತ್ತು ಇನ್ನೊಂದು ತಾನು ಇರಲು ಇಷ್ಟಪಡುವಂತಹದ್ದು.” ಎಲ್ಲಾ ಪರಿಸ್ಥಿತಿಗಳಲ್ಲಿ ತಾಳಿಕೊಳ್ಳಲು ಮತ್ತು ಸೇವೆ ಸಲ್ಲಿಸಲು ಈ ಬಾಧಿಸಲ್ಪಟ್ಟವರಿಗೆ ಸಾಧ್ಯಮಾಡುವಂತಹದ್ದು ಸಹೋದರತ್ವದ ಪ್ರೀತಿಯೇ ಆಗಿದೆ. ಅವರನ್ನು ನಿಮ್ಮ ಪ್ರಾರ್ಥನೆಗಳಲ್ಲಿ ಒಳಗೂಡಿಸಿರಿ. (ಎಫೆಸ 1:16) ಕ್ರಮವಾಗಿ, ಪ್ರತಿಯೊಂದು ಸಂದರ್ಭದಲ್ಲಿ, ಅವರಿಗೆ ಪ್ರೋತ್ಸಾಹದಾಯಕ, ಸಕಾರಾತ್ಮಕ, ಮತ್ತು ಸಾಂತ್ವನದಾಯಕ ಮಾತುಗಳನ್ನಾಡಿರಿ. (1 ಥೆಸಲೊನೀಕ 5:14) ವ್ಯಾವಹಾರಿಕ ಮತ್ತು ಸೂಕ್ತವಾಗಿರುವಲ್ಲಿ, ಅವರನ್ನು ನಿಮ್ಮ ದೇವಪ್ರಭುತ್ವ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಒಳಗೂಡಿಸಿರಿ.
ದೈವಿಕ ವಿಧೇಯತೆಯ ಆಶೀರ್ವಾದಗಳು ಮತ್ತು ಪ್ರಯೋಜನಗಳು
ಧಾರ್ಮಿಕವಾಗಿ ವಿಭಜಿತವಾಗಿರುವ ಮನೆಯೊಂದರಲ್ಲಿ, ದೈವಿಕ ವಿಧೇಯತೆಯನ್ನು ಪ್ರದರ್ಶಿಸುವ ಆಶೀರ್ವಾದಗಳು ಮತ್ತು ಪ್ರಯೋಜನಗಳ ಮೇಲೆ ದಿನಾಲೂ ಮನನ ಮಾಡಿರಿ. ವಿಧೇಯರಾಗಿರಲು ಸತತವಾದ ಶ್ರದ್ಧಾಪೂರ್ವಕ ಪ್ರಯತ್ನವನ್ನು ಮಾಡಿರಿ. “ಮನಗುಂದ” ದಿರ್ರಿ. (ಗಲಾತ್ಯ 6:9) “ದೇವರು ನೋಡುತ್ತಾನೆಂದು ಅರಿತು” ಅಹಿತಕರ ಪರಿಸ್ಥಿತಿಗಳು ಮತ್ತು ಅನ್ಯಾಯಗಳನ್ನು ತಾಳಿಕೊಳ್ಳುವುದು ದೇವರ “ಮುಂದೆ ಶ್ಲಾಘ್ಯವಾಗಿದೆ.” (1 ಪೇತ್ರ 2:19, 20) ಯೆಹೋವನ ನೀತಿಯ ಸೂತ್ರಗಳು ಮತ್ತು ನಿಯಮಗಳು ರಾಜಿಗೊಳಿಸಲ್ಪಡದಿರುವ ಮಟ್ಟಿಗೆ ವಿಧೇಯರಾಗಿರ್ರಿ. ಇದು ಯೆಹೋವನ ಏರ್ಪಾಡಿಗೆ ನಿಷ್ಠೆಯನ್ನು ತೋರಿಸುತ್ತದೆ. ನಿಮ್ಮ ದೈವಿಕ ನಡತೆಯು ನಿಮ್ಮ ಸಂಗಾತಿ, ಮಕ್ಕಳು ಅಥವಾ ಹೆತ್ತವರ ಜೀವವನ್ನೂ ಉಳಿಸಬಹುದು.—1 ಕೊರಿಂಥ 7:16; 1 ಪೇತ್ರ 3:1.
ಧಾರ್ಮಿಕವಾಗಿ ವಿಭಜಿತವಾಗಿರುವ ಕುಟುಂಬವೊಂದರ ಬೇಡಿಕೆಗಳು ಮತ್ತು ನಿರೀಕ್ಷಣೆಗಳನ್ನು ನೀವು ನಿಭಾಯಿಸುತ್ತಿರುವಂತೆಯೇ, ಯೆಹೋವ ದೇವರಿಗೆ ಮತ್ತು ಯೇಸು ಕ್ರಿಸ್ತನಿಗೆ ಸಮಗ್ರತೆಯನ್ನು ಕಾಪಾಡಿಕೊಳ್ಳುವ ಮಹತ್ವವನ್ನು ನೆನಪಿನಲ್ಲಿಡಿರಿ. ನೀವು ತಿಕ್ಕಾಟದ ಅನೇಕ ಅಂಶಗಳ ವಿಷಯದಲ್ಲಿ ಬಗಬ್ಗಹುದು ಆದರೆ, ಸಮಗ್ರತೆಯನ್ನು ಬಿಟ್ಟುಕೊಡುವುದೆಂದರೆ, ಸ್ವತಃ ಜೀವವನ್ನು ಒಳಗೂಡಿಸಿ ಎಲ್ಲವನ್ನು ಬಿಟ್ಟುಕೊಡುವುದೆಂದರ್ಥ. ಅಪೊಸ್ತಲ ಪೌಲನಂದದ್ದು: “ದೇವರು ಈ ಅಂತ್ಯದಿನಗಳಲ್ಲಿ ನಮ್ಮ ಸಂಗಡ ಮಗನ ಮುಖಾಂತರ ಮಾತಾಡಿದ್ದಾನೆ. ಈತನನ್ನು ಎಲ್ಲಕ್ಕೂ ಬಾಧ್ಯನನ್ನಾಗಿ ನೇಮಿಸಿದನು, ಈತನ ಮೂಲಕವೇ ಜಗತ್ತನ್ನು ಉಂಟುಮಾಡಿದನು.” ಈ “ಅತ್ಯಂತ ವಿಶೇಷ ರಕ್ಷಣೆಯನ್ನು” ಅಂಗೀಕರಿಸುವುದು ನೀವು ವಿಧೇಯರಾಗಿರುವಂತೆ ಬಲಪಡಿಸುವುದು.—ಇಬ್ರಿಯ 1:1, 2; 2:3.
ಸರಿಯಾದ ನೈತಿಕತೆಗಳು ಮತ್ತು ಮೌಲ್ಯಗಳಿಗಾಗಿ ನಿಮ್ಮ ರಾಜಿಯಾಗದ ವಿಧೇಯತೆ ಮತ್ತು ದೃಢತೆಯು ನಿಮಗಾಗಿ ಮತ್ತು ನಿಮ್ಮ ಅವಿಶ್ವಾಸಿ ಸಂಗಾತಿಗಾಗಿ ಒಂದು ಸ್ವಸ್ಥಕರ ಸಂರಕ್ಷಣೆಯಾಗಿದೆ. ಸಂಗಾತಿನಿಷ್ಠೆಯು ಬಲವಾದ ಕುಟುಂಬ ಬಂಧಗಳನ್ನು ಕಟ್ಟುತ್ತದೆ. ಒಬ್ಬ ಸಮರ್ಥ ಹಾಗೂ ನಿಷ್ಠಾವಂತ ಪತ್ನಿಯ ಕುರಿತಾಗಿ ಜ್ಞಾನೋಕ್ತಿ 31:11 ಹೇಳುವುದು: “ಪತಿಹೃದಯವು ಆಕೆಯಲ್ಲಿ ಭರವಸಪಡುವದು.” ನಿಮ್ಮ ನಿರ್ಮಲ ನಡತೆ ಮತ್ತು ಆಳವಾದ ಗೌರವವು ನಿಮ್ಮ ಅವಿಶ್ವಾಸಿ ಗಂಡನ ಕಣ್ಣುಗಳನ್ನು ತೆರೆಸಬಹುದು. ದೇವರ ಸತ್ಯವನ್ನು ಸ್ವೀಕರಿಸುವಂತೆ ಅದು ಅವನನ್ನು ನಡಿಸಬಹುದು.
ದೈವಿಕ ವಿಧೇಯತೆಯು ನಿಶ್ಚಯವಾಗಿಯೂ ಅಮೂಲ್ಯವೂ ಜೀವರಕ್ಷಕವೂ ಆಗಿದೆ. ನಿಮ್ಮ ಕುಟುಂಬ ಜೀವಿತದಲ್ಲಿ ಅದಿರುವಂತೆ ಅದಕ್ಕಾಗಿ ಪ್ರಾರ್ಥಿಸಿರಿ. ಅದು ಮನಶ್ಶಾಂತಿಯಲ್ಲಿ ಫಲಿಸುವುದು ಮತ್ತು ಯೆಹೋವನಿಗೆ ಸುತ್ತಿಯನ್ನು ತರುವುದು.