ಅವರು ಯೆಹೋವನ ಚಿತ್ತವನ್ನು ಮಾಡಿದರು
ಇಸಾಕನಿಗಾಗಿ ಒಬ್ಬ ಪತ್ನಿಯನ್ನು ಹುಡುಕುವುದು
ಬಾವಿಯ ಬಳಿ ಕುಳಿತುಕೊಂಡಿದ್ದ ವೃದ್ಧ ಮನುಷ್ಯನು ಬಹಳ ದಣಿದಿದ್ದನು. ಅವನೂ ಅವನ ಜೊತೆಗಾರರೂ, ಜೊತೆಗೆ ಕರೆತಂದಿದ್ದ ಹತ್ತು ಒಂಟೆಗಳೂ, ಬೆರ್ಷೆಬದ ನೆರೆಹೊರೆಯ ಪ್ರಾಂತದಿಂದ, ಉತ್ತರ ಮೆಸಪಟೇಮಿಯದ ಉದ್ದಕ್ಕೂ ಪ್ರಯಾಣಿಸಿದ್ದವು. ಇದು 800 ಕಿಲೊಮೀಟರುಗಳಿಗಿಂತಲೂ ಹೆಚ್ಚಿನ ದೂರವಾಗಿತ್ತು.a ಈಗ ಅವರು ತಮ್ಮ ಗಮ್ಯಸ್ಥಾನವನ್ನು ತಲಪಿದ್ದರು. ಆಯಾಸಗೊಂಡಿದ್ದ ಈ ಪ್ರಯಾಣಿಕನು, ತನ್ನ ಕಷ್ಟಕರ ನಿಯೋಗದ ಕುರಿತು ಪುನರಾಲೋಚಿಸಲಿಕ್ಕಾಗಿ ವಿರಮಿಸಿದನು. ಈ ಮನುಷ್ಯನು ಯಾರಾಗಿದ್ದನು, ಮತ್ತು ಅವನೇಕೆ ಈ ಕಷ್ಟಸಾಧ್ಯ ಪ್ರಯಾಣವನ್ನು ಕೈಕೊಂಡಿದ್ದನು?
ಆ ಮನುಷ್ಯನು ಅಬ್ರಹಾಮನ ಸೇವಕ, ‘ಅವನ ಆಸ್ತಿಯ ಮೇಲೆ ಆಡಳಿತಮಾಡುತ್ತಿದ್ದ ಹಿರೀ ಸೇವಕ’ನಾಗಿದ್ದನು. (ಆದಿಕಾಂಡ 24:2) ವೃತ್ತಾಂತದಲ್ಲಿ ಅವನ ಹೆಸರು ಇಲ್ಲವಾದರೂ, ಇವನು ಎಲೀಯೆಜರನಾಗಿದ್ದನೆಂಬುದು ಸುವ್ಯಕ್ತ. ಒಂದು ಕಾಲದಲ್ಲಿ ಅಬ್ರಹಾಮನು ಅವನನ್ನು ‘ನನ್ನ ಮನೆಯಲ್ಲಿ ಹುಟ್ಟಿದವನೇ’ ಎಂದು ಸೂಚಿಸಿದ್ದನು. ಮತ್ತು ‘ತನ್ನ ಬಾಧ್ಯಸ್ಥ’ನಾಗುವ ಸ್ಥಾನದಲ್ಲಿರುವುದಾಗಿ ಅಬ್ರಹಾಮನು ಅವನ ಕುರಿತಾಗಿ ಮಾತಾಡಿದ್ದನು. (ಆದಿಕಾಂಡ 15:2, 3) ಅದು ಅಬ್ರಹಾಮನಿಗೂ ಸಾರಳಿಗೂ ಮಕ್ಕಳಾಗಿರದಿದ್ದಾಗ ಎಂಬುದು ನಿಶ್ಚಯ. ಈಗ ಅವರ ಮಗನಾದ ಇಸಾಕನು 40 ವರ್ಷ ಪ್ರಾಯದವನಾಗಿದ್ದನು. ಮತ್ತು ಎಲೀಯೆಜರನು ಇನ್ನುಮುಂದೆ ಅಬ್ರಹಾಮನ ಮೂಲ ಬಾಧ್ಯಸ್ಥನಾಗಿರದಿದ್ದರೂ, ಅವನಿನ್ನೂ ಅಬ್ರಹಾಮನ ಸೇವಕನಾಗಿದ್ದನು. ಆದುದರಿಂದ ಅಬ್ರಹಾಮನು ಪಂಥಾಹ್ವಾನವನ್ನೊಡ್ಡುವ ಒಂದು ಬಿನ್ನಹವನ್ನು ಮಾಡಿದಾಗ, ಅವನು ಅನುವರ್ತಿಸಿದನು. ಅದೇನಾಗಿತ್ತು?
ಒಂದು ಪಂಥಾಹ್ವಾನದಾಯಕ ನಿಯೋಗ
ಅಬ್ರಹಾಮನ ದಿನದಲ್ಲಿ, ಒಂದು ವಿವಾಹವು ಕುಟುಂಬವನ್ನು ಮಾತ್ರವಲ್ಲ, ಇಡೀ ಕುಲವನ್ನು, ಅಥವಾ ಪೂರ್ವಜರ ಸಮುದಾಯವನ್ನು ಸಹ ಪ್ರಭಾವಿಸುತ್ತಿತ್ತು. ಆದುದರಿಂದ ಹೆತ್ತವರು ತಮ್ಮ ಮಕ್ಕಳಿಗಾಗಿ ಒಬ್ಬ ಸಂಗಾತಿಯನ್ನು ಆಯ್ಕೆಮಾಡುವುದು ಸಂಪ್ರದಾಯಬದ್ಧವಾಗಿತ್ತು. ಹಾಗಿದ್ದರೂ, ತನ್ನ ಮಗನಾದ ಇಸಾಕನಿಗಾಗಿ ಒಬ್ಬ ಪತ್ನಿಯನ್ನು ಹುಡುಕುವುದರಲ್ಲಿ, ಅಬ್ರಹಾಮನಿಗೆ ಒಂದು ಸಂದಿಗ್ಧತೆಯು ಎದುರಾಗಿತ್ತು. ಸ್ಥಳಿಕ ಜನರಾದ ಕಾನಾನ್ಯರ ಅದೈವಿಕ ಮಾರ್ಗಗಳು, ಅವರಲ್ಲಿ ಒಬ್ಬರೊಡನೆ ವಿವಾಹವಾಗುವ ವಿಷಯವನ್ನು ಯೋಚಿಸಲಸಾಧ್ಯವಾದದ್ದನ್ನಾಗಿ ಮಾಡಿದವು. (ಧರ್ಮೋಪದೇಶಕಾಂಡ 18:9-12) ಮತ್ತು ತನ್ನ ಸ್ವಕುಲದಲ್ಲಿ ವಿವಾಹವಾಗುವುದು ಪುರುಷನೊಬ್ಬನಿಗೆ ಸಂಪ್ರದಾಯಬದ್ಧವಾಗಿತ್ತು. ಆದರೆ ಅಬ್ರಹಾಮನ ಸಂಬಂಧಿಕರು ನೂರಾರು ಕಿಲೊಮೀಟರ್ಗಳಷ್ಟು ದೂರದ ಉತ್ತರ ಮೆಸೊಪೊಟಾಮಿಯದಲ್ಲಿ ವಾಸಿಸುತ್ತಿದ್ದರು. ಅವನು ಸುಮ್ಮನೆ ಇಸಾಕನನ್ನು ಅಲ್ಲಿಗೆ ಪುನಃ ನೆಲೆಸುವಂತೆ ಕಳುಹಿಸಲು ಸಾಧ್ಯವಿರಲಿಲ್ಲ. ಏಕೆಂದರೆ ಯೆಹೋವನು ಅಬ್ರಹಾಮನಿಗೆ ಹೀಗೆ ವಾಗ್ದಾನಿಸಿದ್ದನು: “ನಿನ್ನ ಸಂತತಿಗೆ ಈ ದೇಶವನ್ನು,” ಕಾನಾನ್ ದೇಶವನ್ನು “ಕೊಡುವೆನು.” (ಆದಿಕಾಂಡ 24:7, ಓರೆಅಕ್ಷರಗಳು ನಮ್ಮವು.) ಆದುದರಿಂದ, ಅಬ್ರಹಾಮನು ಎಲೀಯೆಜರನಿಗೆ ಹೇಳಿದ್ದು: “ನನ್ನ ಸ್ವದೇಶಕ್ಕೂ ನನ್ನ ಬಂಧುಗಳ ಬಳಿಗೂ ಹೋಗಿ ಅವರಲ್ಲೇ ನನ್ನ ಮಗನಾದ ಇಸಾಕನಿಗೆ ಹೆಣ್ಣನ್ನು ತೆಗೆದುಕೊಳ್ಳಬೇಕು.”—ಆದಿಕಾಂಡ 24:4.
ತನ್ನ ಸುದೀರ್ಘ ಪ್ರಯಾಣವನ್ನು ಮುಗಿಸಿದ ಬಳಿಕ, ಎಲೀಯೆಜರನು ಬಾವಿಯ ಬಳಿಯಲ್ಲಿ ವಿರಮಿಸಿ, ತನ್ನ ನಿಯೋಗದ ಕುರಿತು ಆಲೋಚಿಸಿದನು. ರಾತ್ರಿಗೋಸ್ಕರ ನೀರನ್ನು ತುಂಬಿಸಲಿಕ್ಕಾಗಿ ಬೇಗನೆ ಸ್ತ್ರೀಯರು ಬಾವಿಯ ಬಳಿಗೆ ಬರಲಿರುವರೆಂಬುದನ್ನು ಅವನು ಅರಿತುಕೊಂಡನು. ಆದುದರಿಂದ ಅವನು ಯೆಹೋವನಿಗೆ ಮೊರೆಯಿಟ್ಟದ್ದು: “ನಾನು ಯಾವ ಹುಡುಗಿಗೆ—ನೀನು ದಯವಿಟ್ಟು ನಿನ್ನ ಕೊಡವನ್ನು ಇಳಿಸಿ ನನಗೆ ಕುಡಿಯುವದಕ್ಕೆ ಕೊಡು ಎಂದು ಹೇಳುವಾಗ—ನೀನು ಕುಡಿಯಬಹುದು, ಮತ್ತು ನಿನ್ನ ಒಂಟೆಗಳಿಗೂ ನೀರುಕೊಡುತ್ತೇನೆ ಅನ್ನುವಳೋ, ಅವಳೇ ನಿನ್ನ ದಾಸನಾದ ಇಸಾಕನಿಗೆ ನೀನು ನೇಮಿಸಿರುವ ಕನ್ಯೆಯಾಗಲಿ. ನನ್ನ ದಣಿಯ ಮೇಲೆ ನಿನ್ನ ದಯವದೆ ಎಂದು ಇದರಿಂದ ನನಗೆ ಗೊತ್ತಾಗುವದು.”—ಆದಿಕಾಂಡ 24:14.
ಅವನಿನ್ನೂ ಪ್ರಾರ್ಥಿಸುತ್ತಿದ್ದಾಗ, ರೆಬೆಕ್ಕ ಎಂಬ ಹೆಸರಿನ ಸುಂದರ ಯುವತಿಯೊಬ್ಬಳು ಅಲ್ಲಿಗೆ ಬಂದಳು. “ಅಮ್ಮಾ, ದಯಮಾಡಿ ನಿನ್ನ ಕೊಡದಿಂದ ನನಗೆ ಸ್ವಲ್ಪ ನೀರನ್ನು ಕುಡಿಯುವದಕ್ಕೆ ಕೊಡು” ಎಂದು ಎಲೀಯೆಜರನು ಅವಳಿಗೆ ಹೇಳಿದನು. ರೆಬೆಕ್ಕಳು ಹಾಗೆಯೇ ಮಾಡಿದಳು. ಮತ್ತು ತದನಂತರ ಅವಳು ಹೇಳಿದ್ದು: “ನಾನು ನಿನ್ನ ಒಂಟೆಗಳಿಗೂ ಬೇಕಾದಷ್ಟು ನೀರುತಂದುಕೊಡುತ್ತೇನೆ.” ಇದು ಒಂದು ಉದಾರವಾದ ನಿವೇದನೆಯಾಗಿತ್ತು. ಏಕೆಂದರೆ ಬಾಯಾರಿದ ಒಂದು ಒಂಟೆಯು ಕೇವಲ ಹತ್ತು ನಿಮಿಷಗಳಲ್ಲಿ 95 ಲೀಟರ್ಗಳಷ್ಟು ನೀರನ್ನು ಕುಡಿಯಬಲ್ಲದು! ಎಲೀಯೆಜರನ ಒಂಟೆಗಳು ಅಷ್ಟೊಂದು ಬಾಯಾರಿದ್ದವೊ ಇಲ್ಲವೊ, ತಾನು ಮಾಡಲಿಕ್ಕಾಗಿ ನಿವೇದಿಸಿಕೊಂಡ ಕಾರ್ಯವು ಕಷ್ಟಪರೀಕ್ಷೆಯದ್ದಾಗಿರುವುದೆಂಬುದು ರೆಬೆಕ್ಕಳಿಗೆ ತಿಳಿದಿದ್ದಿರಬಹುದು. ಅವಳು “ಕೊಡದಲ್ಲಿದ್ದ ನೀರನ್ನು ದೋಣಿಯೊಳಗೆ ಹೊಯಿದು ತಿರಿಗಿ ತರುವದಕ್ಕೆ ಬಾವಿಗೆ ತ್ವರೆಯಾಗಿ ಹೋದಳು. ಹೀಗೆ ಅವನ ಎಲ್ಲಾ ಒಂಟೆಗಳಿಗೂ ತಂದು ಕೊಟ್ಟಳು.”—ಆದಿಕಾಂಡ 24:15-20.
ಯೆಹೋವನ ಮಾರ್ಗದರ್ಶನೆಯನ್ನು ಅರ್ಥಮಾಡಿಕೊಂಡವನಾಗಿ, ಎಲೀಯೆಜರನು ರೆಬೆಕ್ಕಳಿಗೆ ಒಂದು ಚಿನ್ನದ ಮೂಗುತಿಯನ್ನೂ, ಇಂದಿನ ಮೌಲ್ಯಗಳಲ್ಲಿ ಸುಮಾರು 1,400 ಡಾಲರ್ಗಳಷ್ಟು ಬೆಲೆಬಾಳುವ ಎರಡು ಚಿನ್ನದ ಬಳೆಗಳನ್ನೂ ಕೊಟ್ಟನು. ತಾನು ಅಬ್ರಹಾಮನ ಸಹೋದರನಾದ ನಾಹೋರನ ಮೊಮ್ಮಗಳೆಂದು ರೆಬೆಕ್ಕಳು ಅವನಿಗೆ ಹೇಳಿದಾಗ, ಎಲೀಯೆಜರನು ದೇವರಿಗೆ ಉಪಕಾರದ ಪ್ರಾರ್ಥನೆಯನ್ನು ಮಾಡಿದನು. “ಯೆಹೋವನು ನನ್ನನ್ನು ನನ್ನ ದಣಿಯ ಬಂಧುಗಳ ಮನೆಗೆ ನೀಟಾದ ದಾರಿಯಿಂದಲೇ ಕರಕೊಂಡು ಬಂದಿದ್ದಾನೆ” ಎಂದು ಅವನು ಹೇಳಿದನು. (ಆದಿಕಾಂಡ 24:22-27) ಎಲೀಯೆಜರನನ್ನು ರೆಬೆಕ್ಕಳ ಕುಟುಂಬಕ್ಕೆ ಕರೆತರಲಾಯಿತು. ಸಕಾಲದಲ್ಲಿ ರೆಬೆಕ್ಕಳು ಇಸಾಕನ ಪತ್ನಿಯಾದಳು. ಮತ್ತು ಮೆಸ್ಸೀಯನಾದ ಯೇಸುವಿನ ಪೂರ್ವಜಳಾಗುವ ಸುಯೋಗ ಅವಳಿಗಿತ್ತು.
ನಮಗಾಗಿ ಪಾಠಗಳು
ಇಸಾಕನಿಗಾಗಿ ದೇವಭಯವುಳ್ಳ ಸಂಗಾತಿಯನ್ನು ಹುಡುಕುವುದಕ್ಕಾಗಿರುವ ಎಲೀಯೆಜರನ ಪ್ರಾರ್ಥನಾಪೂರ್ವಕ ಪ್ರಯತ್ನವನ್ನು ಯೆಹೋವನು ಆಶೀರ್ವದಿಸಿದನು. ಆದರೂ, ಇಸಾಕನ ವಿವಾಹವು, ಅಬ್ರಹಾಮನ ಮೂಲಕ ಒಂದು ಸಂತತಿಯನ್ನು ಉಂಟುಮಾಡುವ ದೇವರ ಉದ್ದೇಶದೊಂದಿಗೆ ಸಮ್ಮಿಳಿತವಾಗಿತ್ತೆಂಬುದನ್ನು ನೆನಪಿನಲ್ಲಿಡಿರಿ. ಆದುದರಿಂದ ಈ ವೃತ್ತಾಂತವು ನಮ್ಮನ್ನು, ಒಬ್ಬ ಸಂಗಾತಿಗಾಗಿ ಪ್ರಾರ್ಥಿಸುವ ಪ್ರತಿಯೊಬ್ಬರಿಗೂ, ಅದ್ಭುತಕರವಾಗಿ ಒಬ್ಬ ಸಂಗಾತಿಯು ದೊರಕುತ್ತಾನೆಂಬ ನಿರ್ಧಾರಕ್ಕೆ ಬರುವಂತೆ ಮಾಡಬಾರದು. ಆದರೂ, ನಾವು ಯೆಹೋವನ ಮೂಲತತ್ವಗಳಿಗೆ ಅಂಟಿಕೊಳ್ಳುವುದಾದರೆ, ವಿವಾಹವಾಗಲಿ ಅಥವಾ ಅವಿವಾಹಿತತನವಾಗಲಿ, ಜೀವಿತದಲ್ಲಿನ ಯಾವುದೇ ಪರಿಸ್ಥಿತಿಯೊಂದಿಗೆ ಎದುರಾಗುವ ಪಂಥಾಹ್ವಾನಗಳನ್ನು ತಾಳಿಕೊಳ್ಳುವ ಬಲವನ್ನು ಆತನು ನಮಗೆ ಕೊಡುವನು.—1 ಕೊರಿಂಥ 7:8, 9, 28; ಹೋಲಿಸಿರಿ ಫಿಲಿಪ್ಪಿ 4:11-13.
ಯೆಹೋವನ ಮಾರ್ಗಕ್ಕನುಸಾರ ಕಾರ್ಯನಡಿಸಲು ಎಲೀಯೆಜರನು ಅತ್ಯಧಿಕ ಪ್ರಯತ್ನವನ್ನು ಪ್ರಯೋಗಿಸಬೇಕಾಗಿತ್ತು. ಯೆಹೋವನ ಮಟ್ಟಗಳಿಗೆ ದೃಢವಾಗಿ ಅಂಟಿಕೊಳ್ಳುವುದು ಯಾವಾಗಲೂ ಸುಲಭವಾಗಿರುವುದಿಲ್ಲ ಎಂಬುದನ್ನು ನಾವು ಸಹ ಕಂಡುಕೊಳ್ಳಬಹುದು. ಉದಾಹರಣೆಗೆ, ದೇವಪ್ರಭುತ್ವ ಚಟುವಟಿಕೆಗೆ ತಡೆಯನ್ನುಂಟುಮಾಡದಿರುವ ಉದ್ಯೋಗವನ್ನು ಕಂಡುಕೊಳ್ಳುವುದು, ದೇವಭಯವುಳ್ಳವಳಾಗಿರುವ ಒಬ್ಬ ಸಂಗಾತಿಯನ್ನು ಕಂಡುಕೊಳ್ಳುವುದು, ಆತ್ಮೋನ್ನತಿಮಾಡುವ ಜೊತೆಗಾರರನ್ನು ಕಂಡುಕೊಳ್ಳುವುದು, ಕೀಳ್ಮಟ್ಟದ್ದಾಗಿರದ ಮನೋರಂಜನೆಯನ್ನು ಕಂಡುಕೊಳ್ಳುವುದು ಕಷ್ಟಕರವಾಗಿರಬಹುದು. (ಮತ್ತಾಯ 6:33; 1 ಕೊರಿಂಥ 7:39; 15:33; ಎಫೆಸ 4:17-19) ಆದರೆ, ಬೈಬಲ್ ಮೂಲತತ್ವಗಳೊಂದಿಗೆ ಒಪ್ಪಂದಮಾಡಿಕೊಳ್ಳಲು ನಿರಾಕರಿಸುವವರನ್ನು ಯೆಹೋವನು ಪೋಷಿಸಬಲ್ಲನು. ಬೈಬಲ್ ಹೀಗೆ ವಾಗ್ದಾನಿಸುತ್ತದೆ: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಿಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.”—ಜ್ಞಾನೋಕ್ತಿ 3:5, 6.
[ಅಧ್ಯಯನ ಪ್ರಶ್ನೆಗಳು]
a ಒಂಟೆಗಳ ಸರಾಸರಿ ವೇಗವನ್ನು ಪರಿಗಣಿಸುವಲ್ಲಿ, ಆ ಪ್ರಯಾಣವನ್ನು ಮುಗಿಸಲು, 25ಕ್ಕಿಂತಲೂ ಹೆಚ್ಚಿನ ದಿನಗಳು ತಗಲಿದ್ದಿರಬಹುದು.