ಯೋಹಾನ
7 ಇದಾದ ಮೇಲೆ ಯೇಸು ಗಲಿಲಾಯದಲ್ಲಿ ಪ್ರಯಾಣ ಮುಂದುವರಿಸಿದನು. ಆದ್ರೆ ಯೂದಾಯಕ್ಕೆ ಹೋಗಲಿಲ್ಲ. ಯಾಕಂದ್ರೆ ಆತನನ್ನ ಕೊಲ್ಲೋಕೆ ಯೆಹೂದ್ಯರು ಪ್ರಯತ್ನ ಮಾಡ್ತಿದ್ದಾರೆ ಅಂತ ಗೊತ್ತಿತ್ತು.+ 2 ಆದ್ರೆ ಯೆಹೂದ್ಯರ ಡೇರೆಗಳ ಹಬ್ಬ+ ಹತ್ರ ಇತ್ತು. 3 ಹಾಗಾಗಿ ಯೇಸುವಿನ ತಮ್ಮಂದಿರು+ “ನೀನು ಯೂದಾಯಕ್ಕೆ ಹೋಗು. ಆಗ ನೀನು ಮಾಡೋದನ್ನ ನಿನ್ನ ಶಿಷ್ಯರೂ ನೋಡೋಕಾಗುತ್ತೆ. 4 ತಾನು ಮಾಡೋದೆಲ್ಲ ಜನ್ರಿಗೆ ಗೊತ್ತಾಗಬೇಕು ಅಂತ ಇಷ್ಟಪಡೋನು ಯಾವ ಕೆಲಸಾನೂ ಗುಟ್ಟಾಗಿ ಮಾಡಲ್ಲ. ನೀನು ಮಾಡೋದನ್ನ ಹೋಗಿ ಲೋಕದ ಮುಂದೆ ಮಾಡು” ಅಂದ್ರು. 5 ನಿಜ ಹೇಳಬೇಕಂದ್ರೆ ತಮ್ಮಂದಿರು ಆತನ ಮೇಲೆ ನಂಬಿಕೆ ಇಟ್ಟಿರ್ಲಿಲ್ಲ.+ 6 ಹಾಗಾಗಿ ಯೇಸು “ನನ್ನ ಸಮಯ ಇನ್ನೂ ಬಂದಿಲ್ಲ.+ ನಿಮಗೆ ಯಾವ ಸಮಯ ಆದ್ರೂ ಪರ್ವಾಗಿಲ್ಲ. 7 ನಿಮ್ಮನ್ನ ದ್ವೇಷಿಸೋಕೆ ಜನ್ರ ಹತ್ರ ಕಾರಣನೇ ಇಲ್ಲ. ಆದ್ರೆ ಜನ ನನ್ನನ್ನ ದ್ವೇಷಿಸ್ತಾರೆ. ಯಾಕಂದ್ರೆ ನಾನು ಅವರು ಮಾಡೋ ಕೆಲಸಗಳನ್ನ ತಪ್ಪು ಅಂತ ಹೇಳ್ತೀನಿ.+ 8 ನೀವು ಹಬ್ಬಕ್ಕೆ ಹೋಗಿ. ನಾನು ಈಗಲೇ ಬರೋಕಾಗಲ್ಲ, ಯಾಕಂದ್ರೆ ನನ್ನ ಸಮಯ ಇನ್ನೂ ಬಂದಿಲ್ಲ”+ ಅಂದನು. 9 ಈ ವಿಷ್ಯಗಳನ್ನ ಹೇಳಿದ ಮೇಲೆ ಗಲಿಲಾಯದಲ್ಲೇ ಇದ್ದನು.
10 ತಮ್ಮಂದಿರು ಹಬ್ಬಕ್ಕೆ ಹೋದ ಮೇಲೆ ಯೇಸು ಗುಟ್ಟಾಗಿ ಅಲ್ಲಿಗೆ ಹೋದನು. 11 “ಯೇಸು ಎಲ್ಲಿದ್ದಾನೆ?” ಅಂತ ಹಬ್ಬದಲ್ಲಿ ಯೆಹೂದ್ಯರು ಕೇಳ್ತಾ ಹುಡುಕ್ತಾ ಇದ್ರು. 12 ಜನ ಆತನ ಬಗ್ಗೆ ಗುಸುಗುಸು ಅಂತ ಮಾತಾಡ್ಕೊಳ್ತಾ ಇದ್ರು. ಕೆಲವರು “ಯೇಸು ಒಳ್ಳೆಯವನು” ಅಂತ ಹೇಳಿದ್ರೆ, ಇನ್ನು ಕೆಲವರು “ಒಳ್ಳೆಯವನಲ್ಲ. ಜನ್ರನ್ನ ದಾರಿತಪ್ಪಿಸ್ತಾನೆ”+ ಅಂತಿದ್ರು. 13 ಆದ್ರೆ ಎಲ್ಲರ ಮುಂದೆ ಜೋರಾಗಿ ಯಾರೂ ಮಾತಾಡ್ತಾ ಇರ್ಲಿಲ್ಲ. ಯಾಕಂದ್ರೆ ಅವ್ರಿಗೆ ಯೆಹೂದ್ಯರ ಭಯ ಇತ್ತು.+
14 ಹಬ್ಬ ಅರ್ಧ ಮುಗಿದಿದ್ದಾಗ ಯೇಸು ದೇವಾಲಯಕ್ಕೆ ಹೋಗಿ ಕಲಿಸೋಕೆ ಶುರುಮಾಡಿದನು. 15 ಇದನ್ನ ನೋಡಿ ಯೆಹೂದ್ಯರಿಗೆ ಆಶ್ಚರ್ಯ ಆಯ್ತು. “ರಬ್ಬಿಗಳ ಶಾಲೆಗೆ ಹೋಗದೇ ಇರೋ ಇವನಿಗೆ ಪವಿತ್ರ ಗ್ರಂಥದ ವಚನಗಳು+ ಇಷ್ಟು ಚೆನ್ನಾಗಿ ಹೇಗೆ ಗೊತ್ತು?”+ ಅಂತಿದ್ರು. 16 ಅದಕ್ಕೆ ಯೇಸು “ನಾನು ಏನು ಕಲಿಸ್ತಿನೋ ಅದು ನನ್ನದಲ್ಲ, ದೇವರೇ ನನಗೆ ಹೇಳಿಕೊಟ್ಟಿದ್ದು.+ 17 ನಾನು ಕಲಿಸ್ತಾ ಇರೋದು ದೇವರ ವಿಚಾರಗಳಾ+ ಅಥವಾ ನನ್ನ ಸ್ವಂತ ವಿಚಾರಗಳಾ ಅಂತ ದೇವರ ಇಷ್ಟ ಮಾಡೋಕೆ ಮನಸ್ಸು ಇರೋರು ಕಂಡುಹಿಡಿತಾರೆ. 18 ತನ್ನ ಸ್ವಂತ ವಿಚಾರಗಳನ್ನ ಕಲಿಸುವವನು ಹೊಗಳಿಕೆ ಬೇಕು ಅಂತ ಇಷ್ಟಪಡ್ತಾನೆ. ಆದ್ರೆ ತನ್ನನ್ನ ಕಳಿಸಿದ ದೇವರಿಗೆ ಹೊಗಳಿಕೆ+ ಸಿಗಬೇಕು ಅಂತ ಇಷ್ಟಪಡುವವನು ಸತ್ಯವನ್ನೇ ಹೇಳ್ತಾನೆ. ಯಾವಾಗ್ಲೂ ಸರಿಯಾಗಿ ಇರೋದನ್ನೇ ಮಾಡ್ತಾನೆ. 19 ಮೋಶೆ ನಿಮಗೆ ನಿಯಮ+ ಪುಸ್ತಕ ಕೊಟ್ಟನಲ್ವಾ? ಆದ್ರೆ ಒಬ್ರೂ ಅದನ್ನ ಪಾಲಿಸ್ತಿಲ್ಲ. ನೀವ್ಯಾಕೆ ನನ್ನನ್ನ ಕೊಲ್ಲಬೇಕಂತ ಇದ್ದೀರಾ?”+ ಅಂದನು. 20 ಅದಕ್ಕೆ ಜನ “ನಿನ್ನನ್ನ ಯಾರು ಕೊಲ್ಲಬೇಕಂತ ಇದ್ದಾರೆ? ನಿನಗೆ ಕೆಟ್ಟ ದೇವದೂತ ಹಿಡಿದಿರಬೇಕು” ಅಂದ್ರು. 21 ಅದಕ್ಕೆ ಯೇಸು “ನಾನು ಸಬ್ಬತ್ ದಿನದಲ್ಲಿ ಒಂದು ಅದ್ಭುತ ಮಾಡಿದೆ. ಅದನ್ನ ನೋಡಿ ನಿಮಗೆಲ್ಲ ಆಶ್ಚರ್ಯ ಆಯ್ತು. 22 ಇದ್ರ ಬಗ್ಗೆ ಯೋಚನೆ ಮಾಡಿ ಮೋಶೆ ನಿಮಗೆ ಸುನ್ನತಿ ಬಗ್ಗೆ ನಿಯಮ ಕೊಟ್ಟ.+ (ಮೋಶೆ ಕಾಲದಲ್ಲಿ ಅಲ್ಲ, ಅದಕ್ಕಿಂತ ಮುಂಚೆನೇ ಪೂರ್ವಜರ ಕಾಲದಿಂದಾನೇ+ ಅದು ಇತ್ತು.) ಸಬ್ಬತ್ ದಿನದಲ್ಲಿ ನೀವು ಒಬ್ಬನಿಗೆ ಸುನ್ನತಿ ಮಾಡ್ತೀರ. 23 ಅಂದ್ರೆ ಮೋಶೆಯ ನಿಯಮ ಮುರಿಬಾರದು ಅಂತ ಒಬ್ಬ ಸಬ್ಬತ್ ದಿನದಲ್ಲಿ ಸುನ್ನತಿ ಮಾಡಿಸ್ಕೊಂಡ್ರೂ ತಪ್ಪಿಲ್ಲ. ಆದ್ರೆ ನಾನು ಸಬ್ಬತ್ ದಿನದಲ್ಲಿ ಯಾರನ್ನಾದ್ರೂ ವಾಸಿಮಾಡಿದ್ರೆ ಯಾಕೆ ಕೋಪ ಮಾಡ್ಕೊಳ್ತೀರಾ?+ 24 ನೋಡಿದ್ದೇ ನಿಜ ಅಂದ್ಕೊಂಡು ತೀರ್ಪು ಮಾಡೋದನ್ನ ನಿಲ್ಲಿಸಿ. ಸತ್ಯ ಏನಂತ ತಿಳ್ಕೊಂಡು ತೀರ್ಪುಮಾಡಿ”+ ಅಂದನು.
25 ಆಗ ಯೆರೂಸಲೇಮಿನ ಕೆಲವರು ಹೀಗೆ ಮಾತಾಡ್ಕೊಂಡ್ರು “ಅವರು ಕೊಲ್ಲಬೇಕಂತ ಇದ್ದಿದ್ದು ಇವನನ್ನೇ ಅಲ್ವಾ?+ 26 ಎಲ್ಲರ ಮುಂದೆ ಮಾತಾಡ್ತಾ ಇದ್ರೂ ಅವರು ಏನೂ ಹೇಳ್ತಿಲ್ಲ ನೋಡಿ. ಅಪ್ಪಿತಪ್ಪಿ ಇವನೇ ಕ್ರಿಸ್ತ ಅಂತ ನಾಯಕರು ನಂಬಿಬಿಟ್ರಾ? 27 ಇವನು ಎಲ್ಲಿಂದ ಬಂದ ಅಂತ ನಮಗೆ ಗೊತ್ತು.+ ಆದ್ರೆ ಕ್ರಿಸ್ತ ಬರುವಾಗ ಎಲ್ಲಿಂದ ಬಂದ ಅಂತ ಯಾರಿಗೂ ಗೊತ್ತಾಗಲ್ಲ.” 28 ಯೇಸು ದೇವಾಲಯದಲ್ಲಿ ಕಲಿಸ್ತಿದ್ದಾಗ ಜೋರಾಗಿ ಹೀಗಂದನು “ನಾನು ಯಾರು, ಎಲ್ಲಿಂದ ಬಂದೆ ಅಂತ ನಿಮಗೆ ಚೆನ್ನಾಗಿ ಗೊತ್ತು. ನಾನಾಗಿ ಬರ್ಲಿಲ್ಲ.+ ನನ್ನನ್ನ ಕಳಿಸಿದ ದೇವರು ನಿಜವಾಗ್ಲೂ ಇದ್ದಾನೆ. ಆತನ ಬಗ್ಗೆ ನಿಮಗೆ ಗೊತ್ತಿಲ್ಲ.+ 29 ನನಗೆ ಗೊತ್ತು.+ ಯಾಕಂದ್ರೆ ನಾನು ಆತನ ಹತ್ರದಿಂದ* ಬಂದೆ. ಆತನೇ ನನ್ನನ್ನ ಕಳಿಸಿದ್ದಾನೆ.” 30 ಆಗ ಅವರು ಯೇಸುವನ್ನ ಬಂಧಿಸೋಕೆ ಪ್ರಯತ್ನಿಸಿದ್ರು.+ ಆದ್ರೆ ಯಾರಿಗೂ ಹಿಡಿಯೋಕಾಗಲಿಲ್ಲ. ಯಾಕಂದ್ರೆ ಆತನ ಸಮಯ ಇನ್ನೂ ಬಂದಿರ್ಲಿಲ್ಲ.+ 31 ಹಾಗಿದ್ರೂ ತುಂಬ ಜನ ಆತನಲ್ಲಿ ನಂಬಿಕೆ ಇಟ್ರು.+ “ಕ್ರಿಸ್ತ ಬಂದಾಗ ತುಂಬ ಅದ್ಭುತಗಳನ್ನ ಮಾಡ್ತಾನೆ. ಇವನು ಮಾಡಿದ್ದೂ ಅದೇ ಅಲ್ವಾ?” ಅಂದ್ರು.
32 ಜನ ಯೇಸು ಬಗ್ಗೆ ಗುಸುಗುಸು ಅಂತ ಮಾತಾಡಿದ್ದು ಫರಿಸಾಯರ ಕಿವಿಗೆ ಬಿತ್ತು. ಮುಖ್ಯ ಪುರೋಹಿತರು, ಫರಿಸಾಯರು ಯೇಸುವನ್ನ ಹಿಡಿಯೋಕೆ ಕಾವಲುಗಾರರನ್ನ ಕಳಿಸಿದ್ರು. 33 ಯೇಸು ಜನ್ರಿಗೆ “ನಾನಿನ್ನ ಸ್ವಲ್ಪ ಸಮಯ ಮಾತ್ರ ನಿಮ್ಮ ಜೊತೆ ಇರ್ತಿನಿ. ಆಮೇಲೆ ನನ್ನನ್ನ ಕಳಿಸಿದ ಅಪ್ಪನ ಹತ್ರ ಹೋಗ್ತೀನಿ.+ 34 ನನ್ನನ್ನ ಹುಡುಕ್ತೀರ, ಆದ್ರೆ ನಾನು ಸಿಗಲ್ಲ. ನಾನು ಹೋಗೋ ಸ್ಥಳಕ್ಕೆ ನಿಮಗೆ ಬರೋಕಾಗಲ್ಲ”+ ಅಂದನು. 35 ಅದಕ್ಕೆ ಯೆಹೂದ್ಯರು “ಹುಡುಕಿದ್ರೂ ಸಿಗದಿರೋ ತರ ಇವನು ಎಲ್ಲಿಗೆ ಹೋಗ್ತಾನೆ? ಗ್ರೀಕರ ಮಧ್ಯ ಚೆಲ್ಲಾಪಿಲ್ಲಿಯಾಗಿರೋ ಯೆಹೂದ್ಯರ ಹತ್ರ ಹೋಗಿ ಗ್ರೀಕರಿಗೂ ಕಲಿಸಬೇಕಂತ ಇದ್ದಾನಾ? 36 ‘ನನ್ನನ್ನ ಹುಡುಕ್ತೀರ, ಆದ್ರೆ ನಾನು ಸಿಗಲ್ಲ. ನಾನು ಹೋಗೋ ಸ್ಥಳಕ್ಕೆ ನಿಮಗೆ ಬರೋಕಾಗಲ್ಲ’ ಅನ್ನೋ ಮಾತಿನ ಅರ್ಥ ಏನು?” ಅಂತ ಮಾತಾಡ್ಕೊಂಡ್ರು.
37 ಹಬ್ಬದ ಕೊನೇ ದಿನ ಮುಖ್ಯವಾದ ದಿನ.+ ಅವತ್ತು ಯೇಸು ನಿಂತು ಜೋರಾಗಿ ಹೀಗಂದನು “ಯಾರಿಗಾದ್ರೂ ಬಾಯಾರಿಕೆ ಆಗಿದ್ರೆ ನನ್ನ ಹತ್ರ ಬನ್ನಿ. ನೀರು ಕೊಡ್ತೀನಿ.+ 38 ಯಾರಾದ್ರೂ ನನ್ನ ಮೇಲೆ ನಂಬಿಕೆ ಇಟ್ರೆ ಪವಿತ್ರ ಗ್ರಂಥದಲ್ಲಿ ಹೇಳಿರೋ ಪ್ರಕಾರ ‘ಜೀವ ಕೊಡೋ ನೀರು ಅವನ ಒಳಗಿಂದ ನದಿಯಾಗಿ ಹರಿಯುತ್ತೆ.’”+ 39 ಯೇಸು ಇಲ್ಲಿ ತನ್ನ ಮೇಲೆ ನಂಬಿಕೆ ಇಡುವವರಿಗೆ ಸಿಗಲಿರೋ ಪವಿತ್ರಶಕ್ತಿ ಬಗ್ಗೆ ಮಾತಾಡ್ತಿದ್ದ. ಅಲ್ಲಿ ತನಕ ಅವ್ರಿಗೆ ಪವಿತ್ರಶಕ್ತಿ ಸಿಕ್ಕಿರ್ಲಿಲ್ಲ.+ ಯಾಕಂದ್ರೆ ದೇವರು ಆ ಶಕ್ತಿಶಾಲಿ ಸ್ಥಾನವನ್ನ ಯೇಸುಗಿನ್ನೂ ಕೊಟ್ಟಿರ್ಲಿಲ್ಲ.+ 40 ಯೇಸು ಹೇಳಿದ್ದನ್ನ ಕೇಳಿಸ್ಕೊಂಡಾಗ ಕೆಲವರು “ಬರಬೇಕಾದ ಪ್ರವಾದಿ ಇವನೇ ಆಗಿರಬೇಕು”+ ಅಂದ್ರು. 41 ಇನ್ನು ಕೆಲವರು “ಇವನೇ ಆ ಕ್ರಿಸ್ತ”+ ಅಂದ್ರು. ಆದ್ರೆ ಬೇರೆಯವರು “ಕ್ರಿಸ್ತ ಗಲಿಲಾಯದಿಂದ ಬರ್ತಾನಾ?+ 42 ಕ್ರಿಸ್ತ ದಾವೀದನ ವಂಶದಲ್ಲಿ ಹುಟ್ತಾನೆ,+ ದಾವೀದನ ಊರಾದ ಬೆತ್ಲೆಹೇಮಿಂದ+ ಬರ್ತಾನೆ ಅಂತ ಪವಿತ್ರ ಗ್ರಂಥ ಹೇಳ್ತಲ್ವಾ?”+ ಅಂದ್ರು. 43 ಹೀಗೆ ಯೇಸು ವಿಷ್ಯದಲ್ಲಿ ಜನ್ರ ಮಧ್ಯ ಕಿತ್ತಾಟ ಶುರು ಆಯ್ತು. 44 ಕೆಲವರು ಯೇಸುವನ್ನ ಬಂಧಿಸಬೇಕಂತ ಇದ್ರು. ಆದ್ರೆ ಯಾರೂ ಆತನನ್ನ ಮುಟ್ಟೋಕೂ ಹೋಗಲಿಲ್ಲ.
45 ಆ ಕಾವಲುಗಾರರು ಬರೀಗೈಯಲ್ಲಿ ಬಂದಿದ್ದನ್ನ ನೋಡಿ ಮುಖ್ಯ ಪುರೋಹಿತರು, ಫರಿಸಾಯರು “ನೀವ್ಯಾಕೆ ಅವನನ್ನ ಹಿಡ್ಕೊಂಡು ಬರಲಿಲ್ಲ?” ಅಂತ ಕೇಳಿದ್ರು. 46 ಅದಕ್ಕೆ ಕಾವಲುಗಾರರು “ಇಲ್ಲಿ ತನಕ ಅವನು ಮಾತಾಡೋ ತರ ಯಾರೂ ಮಾತಾಡಿದ್ದನ್ನ ನಾವು ನೋಡಿಲ್ಲ”+ ಅಂದ್ರು. 47 ಆಗ ಫರಿಸಾಯರು “ನೀವೂ ಮೋಸಹೋದ್ರಾ? 48 ನಾಯಕರಲ್ಲಿ, ಫರಿಸಾಯರಲ್ಲಿ ಒಬ್ಬನಾದ್ರೂ ಅವನನ್ನ ನಂಬ್ತಾರಾ? ಇಲ್ಲ ತಾನೇ?+ 49 ಅವನನ್ನ ನಂಬೋ ಜನ್ರಿಗೆ ನಿಯಮ ಪುಸ್ತಕದ ಗಂಧಗಾಳಿ ಗೊತ್ತಿಲ್ಲ. ಅವ್ರನ್ನ ಕಂಡ್ರೆ ದೇವರಿಗೆ ಇಷ್ಟ ಇಲ್ಲ” ಅಂದ್ರು. 50 ಆ ಫರಿಸಾಯರಲ್ಲಿ ಯೇಸು ಹತ್ರ ಬಂದಿದ್ದ ನಿಕೊದೇಮ ಸಹ ಇದ್ದ. ಅವನು ಫರಿಸಾಯರಿಗೆ 51 “ನಮ್ಮ ನಿಯಮ ಪುಸ್ತಕದ ಪ್ರಕಾರ ಮೊದಲು ಒಬ್ಬನನ್ನ ವಿಚಾರಿಸಿ, ಏನು ತಪ್ಪು ಮಾಡಿದ್ದಾನೆ ಅಂತ ತಿಳ್ಕೊಂಡ ಮೇಲೆ ತಾನೇ ತೀರ್ಪು ಕೊಡೋದು?”+ ಅಂತ ಕೇಳಿದ. 52 ಅದಕ್ಕೆ “ನೀನೂ ಗಲಿಲಾಯದಿಂದ ಬಂದಿದ್ದೀಯಾ? ಪವಿತ್ರ ಗ್ರಂಥದಲ್ಲಿ ಸರಿಯಾಗಿ ಹುಡುಕಿ ನೋಡು, ಗಲಿಲಾಯದಿಂದ ಯಾವ ಪ್ರವಾದಿನೂ ಬರಲ್ಲ” ಅಂದ್ರು.*