ಒಂದು ನಿಕ್ಷೇಪವು ಬೆಳಕಿಗೆ ಬರುತ್ತದೆ—
ಮಾಕಾರ್ಯಾಸ್ ಬೈಬಲಿನ ಕಥೆ
ಇಸವಿ 1993ರಲ್ಲಿ ಸಂಶೋಧಕನೊಬ್ಬನು, ಸೆಂಟ್ ಪೀಟರ್ಸ್ಬರ್ಗ್ನಲ್ಲಿರುವ ರಷ್ಯನ್ ನ್ಯಾಷನಲ್ ಲೈಬ್ರರಿಯಲ್ಲಿ, ಹಳೆಯ, ಹಳದಿ ಬಣ್ಣಕ್ಕೆ ತಿರುಗಿದ್ದ ಆರ್ತೊಡಾಕ್ಸ್ ರಿವ್ಯೂ ಪತ್ರಿಕೆಗಳ ಒಂದು ರಾಶಿಯನ್ನು ಕಂಡುಕೊಂಡನು. 1860ರಿಂದ 1867ರ ವರೆಗಿನ ಪತ್ರಿಕೆಗಳ ಪುಟಗಳೊಳಗೆ, ಒಂದು ಶತಮಾನಕ್ಕಿಂತಲೂ ಹೆಚ್ಚಿನ ಸಮಯದ ವರೆಗೆ ರಷ್ಯನ್ ಸಾರ್ವಜನಿಕರಿಂದ ಹುದುಗಿಡಲ್ಪಟ್ಟಿದ್ದ ಒಂದು ನಿಧಿಯಿತ್ತು. ಅದು ರಷ್ಯನ್ ಭಾಷೆಯಲ್ಲಿ ಬೈಬಲಿನ ಸಂಪೂರ್ಣ ಹೀಬ್ರು ಶಾಸ್ತ್ರಗಳ ಇಲ್ಲವೆ “ಹಳೆಯ ಒಡಂಬಡಿಕೆ”ಯ ಭಾಷಾಂತರವಾಗಿತ್ತು!
ಈ ಶಾಸ್ತ್ರಗಳ ಭಾಷಾಂತರಕಾರರು, ಆರ್ಕಿಮ್ಯಾಂಡ್ರೈಟ್ (ಚರ್ಚಿನ ಮುಖ್ಯಾಧಿಕಾರಿ) ಮಾಕಾರ್ಯಾಸ್ ಎಂಬುದಾಗಿ ವಿದಿತನಾಗಿದ್ದ, ಮ್ಯಿಕಯೀಲ್ ಯಾಕೋವ್ಲವ್ಯಿಚ್ ಗ್ಲುಕಾರೆಫ್ ಮತ್ತು ಗ್ಯಿರಾಸ್ಯಿಮ್ ಪ್ಯಿಟ್ರಾವ್ಯಿಚ್ ಪಾವ್ಸ್ಕೀ ಆಗಿದ್ದರು. ಇಬ್ಬರೂ ರಷ್ಯನ್ ಆರ್ತೊಡಾಕ್ಸ್ ಚರ್ಚಿನ ಪ್ರಮುಖ ಸದಸ್ಯರೂ ಭಾಷಾ ಪಂಡಿತರೂ ಆಗಿದ್ದರು. ಈ ಪುರುಷರು ಕಳೆದ ಶತಮಾನದ ಆದಿಭಾಗದಲ್ಲಿ ತಮ್ಮ ಕೆಲಸವನ್ನು ಆರಂಭಿಸಿದಾಗ, ಸಂಪೂರ್ಣ ಬೈಬಲು ರಷ್ಯನ್ ಭಾಷೆಯಲ್ಲಿ ಇನ್ನೂ ಭಾಷಾಂತರಿಸಲ್ಪಟ್ಟಿರಲಿಲ್ಲ.
ನಿಜ, ಬೈಬಲು, ಆಧುನಿಕ ದಿನದ ರಷ್ಯನ್ ಭಾಷೆಯ ಪೂರ್ವಭಾವಿ ಭಾಷೆಯಾದ ಸ್ಲವಾನಿಕ್ ಭಾಷೆಯಲ್ಲಿತ್ತು. ಆದಾಗಲೂ, 19ನೆಯ ಶತಮಾನದ ಮಧ್ಯಭಾಗದೊಳಗಾಗಿ, ಸ್ಲವಾನಿಕ್ ಭಾಷೆಯು ಧಾರ್ಮಿಕ ಕೂಟಗಳಲ್ಲಿ—ಎಲ್ಲಿ ಅದು ವೈದಿಕರಿಂದ ಬಳಸಲ್ಪಟ್ಟಿತೊ ಅಲ್ಲಿ—ಹೊರತುಪಡಿಸಿ, ದೀರ್ಘ ಸಮಯದಿಂದ ಬಳಕೆಯಲ್ಲಿರಲಿಲ್ಲ. ತದ್ರೀತಿಯ ಒಂದು ಸನ್ನಿವೇಶವು ಪಾಶ್ಚಾತ್ಯದಲ್ಲಿತ್ತು. ಅಲ್ಲಿ, ಲ್ಯಾಟಿನ್ ಭಾಷೆಯು ಒಂದು ಮೃತ ಭಾಷೆಯಾಗಿ ದೀರ್ಘ ಸಮಯವು ಗತಿಸಿದ ಬಳಿಕವೂ, ಬೈಬಲನ್ನು ಪ್ರತ್ಯೇಕವಾಗಿ ಲ್ಯಾಟಿನ್ ಭಾಷೆಯಲ್ಲಿಡಲು ರೋಮನ್ ಕ್ಯಾತೊಲಿಕ್ ಚರ್ಚು ಪ್ರಯತ್ನಿಸಿತು.
ಜನಸಾಮಾನ್ಯರಿಗೆ ಬೈಬಲು ಅರ್ಥವಾಗುವಂತೆ ಮಾಡಲು ಮಾಕಾರ್ಯಾಸ್ ಮತ್ತು ಪಾವ್ಸ್ಕೀ ಪ್ರಯತ್ನಿಸಿದರು. ಆದುದರಿಂದ, ದೀರ್ಘ ಸಮಯದ ವರೆಗೆ ಮರೆತುಹೋಗಿದ್ದ ಅವರ ಕೆಲಸದ ಕಂಡುಹಿಡಿತವು, ರಷ್ಯದ ಸಾಹಿತ್ಯಕ ಹಾಗೂ ಧಾರ್ಮಿಕ ಸ್ವತ್ತಿನ ಒಂದು ಪ್ರಾಮುಖ್ಯ ಭಾಗವನ್ನು ಪುನಃ ಸ್ಥಾಪಿಸಲು ಸಾಧ್ಯಗೊಳಿಸಿದೆ.
ಆದರೆ, ಮಾಕಾರ್ಯಾಸ್ ಮತ್ತು ಪಾವ್ಸ್ಕೀ ಯಾರಾಗಿದ್ದರು? ಮತ್ತು ಜನರ ಸಾಮಾನ್ಯ ಭಾಷೆಯಲ್ಲಿ ಬೈಬಲನ್ನು ಭಾಷಾಂತರಿಸುವ ಅವರ ಪ್ರಯತ್ನಗಳು ಏಕೆ ಅಷ್ಟೊಂದು ಪ್ರತಿಭಟನೆಯನ್ನು ಎದುರಿಸಿದವು? ಅವರ ವೃತ್ತಾಂತವು, ಬೈಬಲನ್ನು ಪ್ರೀತಿಸುವ ಸಕಲರಿಗೆ ಆಕರ್ಷಕವಾದದ್ದೂ ವಿಶ್ವಾಸವನ್ನು ಬಲಪಡಿಸುವಂತಹದ್ದೂ ಆಗಿದೆ.
ರಷ್ಯನ್ ಬೈಬಲಿನ ಅಗತ್ಯ
ಜನರ ಸಾಮಾನ್ಯ ಭಾಷೆಯಲ್ಲಿ ಬೈಬಲನ್ನು ಹೊರತರುವ ಅಗತ್ಯವನ್ನು ಮನಗಂಡವರಲ್ಲಿ ಮಾಕಾರ್ಯಾಸ್ ಮತ್ತು ಪಾವ್ಸ್ಕೀ ಪ್ರಥಮರಾಗಿರಲಿಲ್ಲ. ಒಂದು ನೂರು ವರ್ಷಗಳ ಮುಂಚೆಯೇ, ರಷ್ಯನ್ ಸಾರ್ Iನೆಯ ಪೀಟರ್ ಇಲ್ಲವೆ ಮಹಾ ಪೀಟರ್ ಸಹ ಅಂತಹ ಒಂದು ಅಗತ್ಯವನ್ನು ಮನಗಂಡನು. ಅರ್ಥಗರ್ಭಿತವಾಗಿ, ಅವನು ಪವಿತ್ರ ಶಾಸ್ತ್ರಗಳನ್ನು ಗೌರವದಿಂದ ಕಂಡನು ಮತ್ತು ಹೀಗೆ ಹೇಳಿದನೆಂದು ಉದಾಹರಿಸಲಾಗಿದೆ: “ಬೈಬಲು ಇತರ ಎಲ್ಲ ಗ್ರಂಥಗಳನ್ನು ಅತಿಶಯಿಸುವ ಒಂದು ಗ್ರಂಥವಾಗಿದೆ, ಮತ್ತು ಅದರಲ್ಲಿ ದೇವರ ಕಡೆಗೆ ಹಾಗೂ ತನ್ನ ನೆರೆಯವನ ಕಡೆಗಿನ ಮನುಷ್ಯನ ಕರ್ತವ್ಯಕ್ಕೆ ಸಂಬಂಧಿಸಿದ ಸಕಲ ವಿಷಯವೂ ಅಡಕವಾಗಿದೆ.”
ಹೀಗೆ, 1716ರಲ್ಲಿ, ಪೀಟರ್ ತನ್ನ ಸ್ವಂತ ಖರ್ಚಿನಲ್ಲಿ ಆ್ಯಮ್ಸ್ಟರ್ಡ್ಯಾಮ್ನಲ್ಲಿ ಒಂದು ಬೈಬಲನ್ನು ಮುದ್ರಿಸುವಂತೆ, ತನ್ನ ರಾಜಸಭೆಗೆ ಆಜ್ಞೆಯಿತ್ತನು. ಪ್ರತಿಯೊಂದು ಪುಟದಲ್ಲಿ, ರಷ್ಯನ್ ಗ್ರಂಥಪಾಠದ ಅಂಕಣ ಮತ್ತು ಡಚ್ ಗ್ರಂಥಪಾಠದ ಅಂಕಣವಿರಲಿತ್ತು. ಕೇವಲ ಒಂದು ವರ್ಷದ ತರುವಾಯ, 1717ರಲ್ಲಿ, ಕ್ರೈಸ್ತ ಗ್ರೀಕ್ ಶಾಸ್ತ್ರಗಳು, ಇಲ್ಲವೆ “ಹೊಸ ಒಡಂಬಡಿಕೆ”ಯ ಭಾಗವು ಸಿದ್ಧವಾಗಿತ್ತು.
1721ರೊಳಗಾಗಿ, ಹೀಬ್ರು ಶಾಸ್ತ್ರಗಳ ನಾಲ್ಕು ಸಂಪುಟ ಭಾಷಾಂತರದ ಡಚ್ ವಿಭಾಗವು ಸಹ ಮುದ್ರಿಸಲ್ಪಟ್ಟಿತ್ತು. ಒಂದು ಅಂಕಣವನ್ನು, ತದನಂತರ ರಷ್ಯನ್ ಗ್ರಂಥಪಾಠದಿಂದ ತುಂಬಿಸಲಿಕ್ಕಾಗಿ ಖಾಲಿ ಬಿಡಲಾಯಿತು. ಬೈಬಲುಗಳನ್ನು ಪೀಟರ್, ರಷ್ಯನ್ ಆರ್ತೊಡಾಕ್ಸ್ ಚರ್ಚಿನ ಅತ್ಯುಚ್ಚ ಧಾರ್ಮಿಕ ಅಧಿಕಾರಿಯಾದ “ಪವಿತ್ರ ಆಡಳಿತ ಸಭೆ”ಗೆ, ಅದರ ಮುದ್ರಣವನ್ನು ನಿರ್ಧರಿಸಲು ಮತ್ತು ವಿತರಣೆಯನ್ನು ನಿರ್ವಹಿಸಲು ವರ್ಗಾಯಿಸಿದನು. ಆದರೆ, ಆಡಳಿತ ಸಭೆಯು ಆ ಕೆಲಸವನ್ನು ಪೂರ್ಣಗೊಳಿಸಲಿಲ್ಲ.
ನಾಲ್ಕು ವರ್ಷಗಳು ಪೂರ್ಣಗೊಳ್ಳುವ ಮುಂಚೆಯೇ ಪೀಟರ್ ಮೃತಪಟ್ಟಿದ್ದನು. ಅವನ ಬೈಬಲುಗಳಿಗೆ ಏನಾಯಿತು? ರಷ್ಯನ್ ಗ್ರಂಥಪಾಠಕ್ಕೆಂದು ಬಿಡಲ್ಪಟ್ಟಿದ್ದ ಖಾಲಿ ಅಂಕಣಗಳು ಖಾಲಿಯಾಗಿಯೇ ಉಳಿದವು. ಈ ಬೈಬಲುಗಳು ನೆಲಮಾಳಿಗೆಯೊಂದರಲ್ಲಿ, ದೊಡ್ಡ ರಾಶಿಗಳಲ್ಲಿ ಹಾಕಲ್ಪಟ್ಟವು. ಅಲ್ಲಿ ಅವು ನಶಿಸಿಹೋಗಿ, ತದನಂತರ ಹಾನಿಗೊಳ್ಳದ ಒಂದೇ ಒಂದು ಪ್ರತಿಯನ್ನೂ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ! “ಉಳಿದಿದ್ದ ಎಲ್ಲವನ್ನು ವ್ಯಾಪಾರಿಗಳಿಗೆ ಮಾರುವುದು” ಆಡಳಿತ ಸಭೆಯ ನಿರ್ಧಾರವಾಗಿತ್ತು.
ಭಾಷಾಂತರಿಸುವ ಪ್ರಯತ್ನಗಳು ಆರಂಭಗೊಳ್ಳುತ್ತವೆ
1812ರಲ್ಲಿ, ಬ್ರಿಟಿಷ್ ಮತ್ತು ವಿದೇಶಿ ಬೈಬಲ್ ಸೊಸೈಟಿಯ ಸದಸ್ಯನಾದ ಜಾನ್ ಪ್ಯಾಟರ್ಸನ್ ರಷ್ಯಾಗೆ ಬಂದನು. ಒಂದು ಬೈಬಲ್ ಸೊಸೈಟಿಯನ್ನು ರಚಿಸುವುದರಲ್ಲಿ ಪ್ಯಾಟರ್ಸನ್, ಸೆಂಟ್ ಪೀಟರ್ಸ್ಬರ್ಗ್ನ ಬುದ್ಧಿಜೀವಿಗಳ ಆಸಕ್ತಿಯನ್ನು ಕೆರಳಿಸಿದನು. 1812ರ ಡಿಸೆಂಬರ್ 6ರಂದು—Iನೆಯ ನೆಪೋಲಿಯನ್ನ ಆಕ್ರಮಿಸುತ್ತಿರುವ ಪಡೆಗಳನ್ನು ರಷ್ಯನ್ ಸೇನೆಯು ಹಿಮ್ಮೆಟ್ಟಿಸಿದ ಅದೇ ವರ್ಷ—ಸಾರ್ Iನೆಯ ಅಲೆಕ್ಸಾಂಡರ್, ರಷ್ಯನ್ ಬೈಬಲ್ ಸೊಸೈಟಿಯ ರಚನೆಗಾಗಿದ್ದ ಸನ್ನದಿಗೆ ಒಪ್ಪಿಗೆ ನೀಡಿದನು. “ರಷ್ಯನರಿಗೂ ದೇವರ ವಾಕ್ಯವನ್ನು ತಮ್ಮ ಸ್ವಂತ ರಷ್ಯನ್ ಮಾತೃಭಾಷೆಯಲ್ಲಿ ಓದುವ ಅವಕಾಶವಿರಬೇಕೆಂದು,” ಆ ಸೊಸೈಟಿಯ ಅಧ್ಯಕ್ಷನಾಗಿದ್ದ ರಾಜಕುಮಾರ ಅಲ್ಯಿಕ್ಸಾಂಡರ್ ಗಲ್ಯೀಟ್ಸಿನ್, ಆಡಳಿತ ಸಭೆಗೆ ಸೂಚಿಸುವಂತೆ 1815ರಲ್ಲಿ ಸಾರ್ ಅವನಿಗೆ ಅಪ್ಪಣೆ ನೀಡಿದನು.
ಪ್ರಶಂಸನೀಯವಾಗಿ, ಹೀಬ್ರು ಶಾಸ್ತ್ರಗಳನ್ನು ಮೂಲ ಹೀಬ್ರುವಿನಿಂದ ನೇರವಾಗಿ ರಷ್ಯನ್ ಭಾಷೆಗೆ ಭಾಷಾಂತರಿಸಲು ಒಪ್ಪಿಗೆಯು ನೀಡಲಾಯಿತು. ಸ್ಲವಾನಿಕ್ ಭಾಷೆಯಲ್ಲಿ ಹೀಬ್ರು ಶಾಸ್ತ್ರಗಳ ಭಾಷಾಂತರಗಳಿಗೆ, ಪ್ರಾಚೀನ ಗ್ರೀಕ್ ಸೆಪ್ಟೂಅಜಿಂಟ್ ಆಧಾರವಾಗಿತ್ತು. ಬೈಬಲನ್ನು ರಷ್ಯನ್ ಭಾಷೆಗೆ ಭಾಷಾಂತರಿಸಲಿದ್ದವರಿಗೆ, ಭಾಷಾಂತರದ ಮುಖ್ಯ ತತ್ವಗಳು, ನಿಷ್ಕೃಷ್ಟತೆ, ಸ್ಪಷ್ಟತೆ, ಮತ್ತು ಶುದ್ಧತೆ ಆಗಿರಬೇಕೆಂದು ಹೇಳಲಾಯಿತು. ಬೈಬಲನ್ನು ರಷ್ಯನ್ ಭಾಷೆಯಲ್ಲಿ ಒದಗಿಸಲು ಮಾಡಲ್ಪಟ್ಟ ಈ ಮೊದಲಿನ ಪ್ರಯತ್ನಗಳಿಗೆ ಏನು ಸಂಭವಿಸಿತು?
ಬೈಬಲ್ ಭಾಷಾಂತರಕ್ಕೆ ಒಂದು ಸಾವೇಟೊ?
ಚರ್ಚು ಮತ್ತು ಸರಕಾರ—ಎರಡರಲ್ಲಿಯೂ ಇದ್ದ ಸಾಂಪ್ರದಾಯಿಕ ಶಕ್ತಿಗಳು, ವಿದೇಶಿ ಧಾರ್ಮಿಕ ಹಾಗೂ ರಾಜಕೀಯ ಪ್ರಭಾವದ ವಿಷಯವಾಗಿ ಬೇಗನೆ ಎಚ್ಚರಗೊಂಡವು. ಅಲ್ಲದೆ, ಪ್ರಾರ್ಥನಾವಿಧಿಯ ಭಾಷೆಯಾದ ಸ್ಲವಾನಿಕ್, ಬೈಬಲಿನ ಸಂದೇಶವನ್ನು ರಷ್ಯನ್ ಭಾಷೆಗಿಂತಲೂ ಹೆಚ್ಚು ಉತ್ತಮವಾಗಿ ವ್ಯಕ್ತಪಡಿಸಿತೆಂದು ಚರ್ಚಿನ ಕೆಲವು ಮುಖಂಡರು ಪ್ರತಿಪಾದಿಸಿದರು.
ಹೀಗೆ, 1826ರಲ್ಲಿ ರಷ್ಯನ್ ಬೈಬಲ್ ಸೊಸೈಟಿಯನ್ನು ವಿಘಟಿಸಲಾಯಿತು. ಬೈಬಲ್ ಸೊಸೈಟಿಯಿಂದ ಉತ್ಪಾದಿಸಲ್ಪಟ್ಟ, ಭಾಷಾಂತರಗಳ ಹಲವಾರು ಸಾವಿರ ಪ್ರತಿಗಳನ್ನು ಸುಟ್ಟುಬಿಡಲಾಯಿತು. ಫಲಸ್ವರೂಪವಾಗಿ, ಬೈಬಲು ಮತಸಂಸ್ಕಾರ ಮತ್ತು ಸಂಪ್ರದಾಯಕ್ಕೆ ಹೋಲಿಕೆಯಲ್ಲಿ ಗೌಣವಾಯಿತು. ರೋಮನ್ ಕ್ಯಾತೊಲಿಕ್ ಚರ್ಚಿನಿಂದ ಸ್ಥಾಪಿಸಲ್ಪಟ್ಟ ನಮೂನೆಯನ್ನು ಅನುಸರಿಸುತ್ತಾ, 1836ರಲ್ಲಿ ಆಡಳಿತ ಸಭೆಯು ಈ ರೀತಿಯ ಕಟ್ಟಳೆಯನ್ನು ವಿಧಿಸಿತು: “ಯಾವನೇ ಧರ್ಮನಿಷ್ಠ ಜನಸಾಮಾನ್ಯನಿಗೆ ಶಾಸ್ತ್ರಗಳನ್ನು ಕೇಳಿಸಿಕೊಳ್ಳುವ ಅನುಮತಿಯಿದೆಯಾದರೂ, ಶಾಸ್ತ್ರಗಳ ಕೆಲವು ಭಾಗಗಳನ್ನು, ವಿಶೇಷವಾಗಿ ಹಳೆಯ ಒಡಂಬಡಿಕೆಯನ್ನು ಮಾರ್ಗದರ್ಶನವಿಲ್ಲದೆ ಓದುವ ಅನುಮತಿ ಯಾರಿಗೂ ಇರುವುದಿಲ್ಲ.” ಬೈಬಲ್ ಭಾಷಾಂತರಕ್ಕೆ ಒಂದು ತೋರಿಕೆಯ ಸಾವೇಟನ್ನು ಕೊಡಲಾಗಿತ್ತು.
ಪಾವ್ಸ್ಕೀಯ ಕೆಲಸ
ಈ ಮಧ್ಯೆ, ಹೀಬ್ರು ಭಾಷೆಯ ಪ್ರೊಫೆಸರನಾದ ಗ್ಯಿರಾಸ್ಯಿಮ್ ಪಾವ್ಸ್ಕೀ, ಹೀಬ್ರು ಶಾಸ್ತ್ರಗಳನ್ನು ರಷ್ಯನ್ ಭಾಷೆಗೆ ಭಾಷಾಂತರಿಸುವ ಕಾರ್ಯವನ್ನು ವಹಿಸಿಕೊಂಡನು. 1821ರಲ್ಲಿ ಅವನು ಕೀರ್ತನೆಗಳ ಭಾಷಾಂತರವನ್ನು ಮುಗಿಸಿದನು. ಸಾರ್ ತಡವಿಲ್ಲದೆ ಅದಕ್ಕೆ ಒಪ್ಪಿಗೆ ನೀಡಿದನು, ಮತ್ತು ಜನವರಿ 1822ರೊಳಗಾಗಿ ಕೀರ್ತನೆಗಳ ಪುಸ್ತಕವು ಸಾರ್ವಜನಿಕರಿಗೆ ಬಿಡುಗಡೆ ಮಾಡಲ್ಪಟ್ಟಿತ್ತು. ಜನರು ಅದನ್ನು ಕೂಡಲೇ ಸ್ವೀಕರಿಸಿದರು ಮತ್ತು ಅದನ್ನು 12 ಬಾರಿ—1,00,000 ಪ್ರತಿಗಳ ಒಟ್ಟು ಸಂಖ್ಯೆ—ಪುನರ್ಮುದ್ರಿಸಬೇಕಾಗಿತ್ತು!
ಪಾವ್ಸ್ಕೀಯ ಪಾಂಡಿತ್ಯಪೂರ್ಣ ಪ್ರಯತ್ನಗಳು, ಅನೇಕ ಭಾಷಾ ಪಂಡಿತರ ಹಾಗೂ ದೇವತಾಶಾಸ್ತ್ರಜ್ಞರ ಗೌರವವನ್ನು ಅವನಿಗೆ ತಂದುಕೊಟ್ಟಿತು. ಅವನು, ತನ್ನ ಸುತ್ತಲೂ ಇದ್ದ ಒಳಸಂಚುಗಳಿಂದ ಪ್ರಭಾವಿತನಾಗದ, ಮುಚ್ಚುಮರೆಯಿಲ್ಲದ ಹಾಗೂ ಪ್ರಾಮಾಣಿಕನಾದ ಮನುಷ್ಯನಾಗಿ ವರ್ಣಿಸಲ್ಪಟ್ಟಿದ್ದಾನೆ. ರಷ್ಯನ್ ಬೈಬಲ್ ಸೊಸೈಟಿಯು ಎದುರಿಸಿದ ಚರ್ಚ್ ವಿರೋಧ ಮತ್ತು ಅದು ವಿದೇಶಿ ಅಭಿರುಚಿಗಳನ್ನು ಪ್ರತಿನಿಧಿಸಿತೆಂದು ಕೆಲವರು ಭಾವಿಸಿಕೊಂಡ ನಿಜತ್ವದ ಎದುರಿನಲ್ಲಿಯೂ, ಪ್ರೊಫೆಸರ್ ಪಾವ್ಸ್ಕೀ ತನ್ನ ಉಪನ್ಯಾಸಗಳಲ್ಲಿ ಬೈಬಲ್ ವಚನಗಳನ್ನು ರಷ್ಯನ್ ಭಾಷೆಗೆ ಭಾಷಾಂತರಿಸುವುದನ್ನು ಮುಂದುವರಿಸಿದನು. ಅವನ ಅಭಿಮಾನಿ ವಿದ್ಯಾರ್ಥಿಗಳು, ಅವನ ತರ್ಜುಮೆಗಳನ್ನು ಕೈಯಿಂದ ನಕಲು ಮಾಡಿದರು ಮತ್ತು ಸಕಾಲದಲ್ಲಿ ಅವನ ಕೆಲಸವನ್ನು ಸಂಕಲಿಸಲು ಶಕ್ತರಾಗಿದ್ದರು. 1839ರಲ್ಲಿ ಈ ವಿದ್ಯಾರ್ಥಿಗಳು, ವಿದ್ಯಾಸಂಸ್ಥೆಯ ಮುದ್ರಣಾಲಯದಲ್ಲಿ—ದೋಷವಿಮರ್ಶಕರ ಪರವಾನಗಿ ಇಲ್ಲದೆ—150 ಪ್ರತಿಗಳನ್ನು ಪ್ರಕಟಿಸಲು ಸ್ವತಃ ಧೈರ್ಯತಂದುಕೊಂಡರು.
ಪಾವ್ಸ್ಕೀಯ ಭಾಷಾಂತರವು ಓದುಗರ ಮೇಲೆ ಗಮನಾರ್ಹವಾದ ಪ್ರಭಾವವನ್ನು ಬೀರಿತು, ಮತ್ತು ಅದಕ್ಕಾಗಿದ್ದ ಬೇಡಿಕೆಯು ಹೆಚ್ಚುತ್ತಾ ಹೋಯಿತು. ಆದರೆ 1841ರಲ್ಲಿ, ಈ ಭಾಷಾಂತರವು ಆರ್ತೊಡಾಕ್ಸ್ ಸಿದ್ಧಾಂತದಿಂದ ದಾರಿತಪ್ಪಿತೆಂದು ಪ್ರತಿಪಾದಿಸುತ್ತಾ, ಅದರ “ಅಪಾಯ”ದ ಸಂಬಂಧದಲ್ಲಿ ಆಡಳಿತ ಸಭೆಗೆ ಒಂದು ಅನಾಮಧೇಯ ದೂರು ನೀಡಲಾಯಿತು. ಎರಡು ವರ್ಷಗಳ ತರುವಾಯ ಆಡಳಿತ ಸಭೆಯು ಒಂದು ಕಟ್ಟಳೆಯನ್ನು ವಿಧಿಸಿತು: “ಜಿ. ಪಾವ್ಸ್ಕೀಯ ಹಳೆಯ ಒಡಂಬಡಿಕೆಯ ಭಾಷಾಂತರದ ಎಲ್ಲ ಲಿಖಿತ ಹಾಗೂ ಶಿಲಾಮುದ್ರಿತ ಪ್ರತಿಗಳನ್ನು ವಶಪಡಿಸಿಕೊಂಡು, ಅವುಗಳನ್ನು ನಾಶಮಾಡಿರಿ.”
ದೇವರ ಹೆಸರನ್ನು ಮಹಿಮೆಪಡಿಸುವುದು
ಆದರೂ, ಪಾವ್ಸ್ಕೀ ಬೈಬಲ್ ಭಾಷಾಂತರದಲ್ಲಿ ಆಸಕ್ತಿಯನ್ನು ಮತ್ತೆ ಕೆರಳಿಸಿದ್ದನು. ಮತ್ತೊಂದು ಪ್ರಧಾನ ವಿವಾದಾಂಶವಾದ ದೇವರ ಹೆಸರಿನ ಸಂಬಂಧದಲ್ಲಿಯೂ, ಅವನು ಭಾವಿ ಭಾಷಾಂತರಕಾರರಿಗೆ ಒಂದು ಪ್ರಾಮುಖ್ಯ ಪೂರ್ವನಿದರ್ಶನವನ್ನು ಸ್ಥಾಪಿಸಿದ್ದನು.
ರಷ್ಯನ್ ಸಂಶೋಧಕನಾದ ಕಾರ್ಸೂನ್ಸ್ಕೀ ವಿವರಿಸಿದ್ದು: ‘ದೇವರ ಹೆಸರುಗಳಲ್ಲಿ ಅತ್ಯಂತ ಪವಿತ್ರವಾದ ಆತನ ಸಾಕ್ಷಾತ್ ಹೆಸರೇ, יהדה ಎಂಬ ನಾಲ್ಕು ಹೀಬ್ರು ಅಕ್ಷರಗಳಿಂದ ರಚಿತವಾಗಿದ್ದು, ಈಗ ಯೆಹೋವ ಎಂಬುದಾಗಿ ಉಚ್ಚರಿಸಲ್ಪಡುತ್ತದೆ.’ ಬೈಬಲಿನ ಪ್ರಾಚೀನ ಪ್ರತಿಗಳಲ್ಲಿ, ದೇವರ ಆ ವೈಶಿಷ್ಟ್ಯಪೂರ್ಣ ಹೆಸರು ಹೀಬ್ರು ಶಾಸ್ತ್ರಗಳಲ್ಲೊಂದರಲ್ಲಿಯೇ ಸಾವಿರಾರು ಬಾರಿ ಕಾಣಿಸಿಕೊಳ್ಳುತ್ತದೆ. ಆದರೂ, ಬರೆಯಲು ಇಲ್ಲವೆ ಉಚ್ಚರಿಸಲು ಆ ದೈವಿಕ ಹೆಸರು ತೀರ ಪವಿತ್ರವಾಗಿತ್ತೆಂದು ಯೆಹೂದ್ಯರು ತಪ್ಪಾಗಿ ನಂಬತೊಡಗಿದರು. ಇದರ ಕುರಿತು, ಕಾರ್ಸೂನ್ಸ್ಕೀ ಗಮನಿಸಿದ್ದು: ‘ನುಡಿಯಲ್ಲಿ ಇಲ್ಲವೆ ಬರವಣಿಗೆಯಲ್ಲಿ ಅದು, “ಕರ್ತನು” ಎಂಬುದಾಗಿ ಸಾಮಾನ್ಯವಾಗಿ ಭಾಷಾಂತರಿಸಲ್ಪಡುವ ಆ್ಯಡೊನೈ ಎಂಬ ಪದದಿಂದ ಸ್ಥಾನಭರ್ತಿಮಾಡಲ್ಪಟ್ಟಿತು.’
ಸ್ಪಷ್ಟವಾಗಿಯೇ, ಆ ದೈವಿಕ ಹೆಸರಿನ ಬಳಕೆಯ ತ್ಯಜಿಸುವಿಕೆಯು, ದೈವಿಕ ಭಯದ ನಿಮಿತ್ತವಲ್ಲ ಮೂಢನಂಬಿಕೆಯ ಭಯದ ನಿಮಿತ್ತವೇ ಆಗಿತ್ತು. ಸ್ವತಃ ಬೈಬಲೇ ಎಲ್ಲಿಯೂ ದೇವರ ಹೆಸರಿನ ಬಳಕೆಯನ್ನು ಅಸಮ್ಮತಿಸುವುದಿಲ್ಲ. ಸ್ವತಃ ದೇವರೆ ಮೋಶೆಗೆ ಹೇಳಿದ್ದು: “ನೀನು ಇಸ್ರಾಯೇಲ್ಯರಿಗೆ ನಿಮ್ಮ ಪಿತೃಗಳ . . . ದೇವರಾಗಿರುವ ಯೆಹೋವನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ ಎಂದು ಹೇಳಬೇಕು. ಇದು ಸದಾಕಾಲಕ್ಕೂ ನನ್ನ ಹೆಸರು; ಇದು ತಲತಲಾಂತರಕ್ಕೂ ನನ್ನನ್ನು ಸ್ಮರಿಸಬೇಕಾದ ನಾಮ.” (ವಿಮೋಚನಕಾಂಡ 3:15) ಅನೇಕಾವರ್ತಿ ಶಾಸ್ತ್ರಗಳು ಆರಾಧಕರನ್ನು ಹೀಗೆ ಪ್ರೇರಿಸುತ್ತವೆ: “ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ, ಆತನ ನಾಮದ ಮಹತ್ವವನ್ನು ವರ್ಣಿಸಿರಿ.” (ಯೆಶಾಯ 12:4) ಆದರೂ, ಹೆಚ್ಚಿನ ಬೈಬಲ್ ಭಾಷಾಂತರಕಾರರು ಯೆಹೂದಿ ಸಂಪ್ರದಾಯವನ್ನು ಹಿಂಬಾಲಿಸಲು ಆರಿಸಿಕೊಂಡರು ಮತ್ತು ದೈವಿಕ ಹೆಸರನ್ನು ಬಳಸುವುದರಿಂದ ದೂರವಿದ್ದರು.
ಆದರೆ ಪಾವ್ಸ್ಕೀ ಈ ಸಂಪ್ರದಾಯಗಳನ್ನು ಹಿಂಬಾಲಿಸಲಿಲ್ಲ. ಅವನ ಕೀರ್ತನೆಗಳ ಭಾಷಾಂತರವೊಂದರಲ್ಲಿಯೇ, ಯೆಹೋವ ಎಂಬ ಹೆಸರು 35ಕ್ಕಿಂತಲೂ ಹೆಚ್ಚು ಬಾರಿ ಕಾಣಿಸಿಕೊಳ್ಳುತ್ತದೆ. ಅವನ ಧೈರ್ಯವು, ಅವನ ಸಮಕಾಲೀನರಲ್ಲಿ ಒಬ್ಬನ ಮೇಲೆ ಮಹತ್ತರವಾದ ಪ್ರಭಾವವನ್ನು ಬೀರಲಿತ್ತು.
ಆರ್ಕಿಮ್ಯಾಂಡ್ರೈಟ್ (ಚರ್ಚಿನ ಮುಖ್ಯಾಧಿಕಾರಿ) ಮಾಕಾರ್ಯಾಸ್
ಈ ಸಮಕಾಲೀನ ವ್ಯಕ್ತಿಯು, ಚರ್ಚಿನ ಮುಖ್ಯಾಧಿಕಾರಿ ಮಾಕಾರ್ಯಾಸ್ ಆಗಿದ್ದನು. ಇವನು, ಅಗಾಧವಾದ ಭಾಷಾಸಂಬಂಧಿತ ಕೌಶಲಗಳುಳ್ಳ ಒಬ್ಬ ರಷ್ಯನ್ ಆರ್ತೊಡಾಕ್ಸ್ ಮಿಷನೆರಿಯಾಗಿದ್ದನು. ಏಳರ ಎಳೆಯ ಪ್ರಾಯದಲ್ಲೇ, ಅವನಿಗೆ ಚಿಕ್ಕ ರಷ್ಯನ್ ಗ್ರಂಥಪಾಠಗಳನ್ನು ಲ್ಯಾಟಿನ್ ಭಾಷೆಗೆ ಭಾಷಾಂತರಿಸಸಾಧ್ಯವಿತ್ತು. ಅವನು 20 ವರ್ಷದವನಾಗುವುದರೊಳಗಾಗಿ, ಹೀಬ್ರು, ಜರ್ಮನ್ ಮತ್ತು ಫ್ರೆಂಚ್ ಭಾಷೆಗಳನ್ನು ಬಲ್ಲವನಾಗಿದ್ದನು. ಹಾಗಿದ್ದರೂ, ದೀನಭಾವ ಮತ್ತು ದೇವರ ಮುಂದೆ ಹೊಣೆಗಾರಿಕೆಯ ತೀಕ್ಷ್ಣ ಅರಿವು, ಆತ್ಮಭರವಸೆಯ ಪಾಶದಿಂದ ದೂರವಿರುವಂತೆ ಅವನಿಗೆ ಸಹಾಯಮಾಡಿತು. ಅವನು ಸತತವಾಗಿ ಇತರ ಭಾಷಾ ಪಂಡಿತರು ಮತ್ತು ವಿದ್ವಾಂಸರ ಸಲಹೆಯನ್ನು ಕೋರಿದನು.
ರಷ್ಯದಲ್ಲಿ ಮಿಷನೆರಿ ಚಟುವಟಿಕೆಯನ್ನು ಸುಧಾರಿಸಲು ಮಾಕಾರ್ಯಾಸ್ ಬಯಸಿದನು. ಕ್ರೈಸ್ತತ್ವವನ್ನು ರಷ್ಯದಲ್ಲಿರುವ ಮುಸ್ಲಿಮರಿಗೂ ಯೆಹೂದ್ಯರಿಗೂ ಪರಿಚಯಿಸುವ ಮೊದಲು, ಚರ್ಚು “ಶಾಲೆಗಳನ್ನು ಸ್ಥಾಪಿಸುವ ಮೂಲಕ ಮತ್ತು ರಷ್ಯನ್ ಭಾಷೆಯಲ್ಲಿ ಬೈಬಲುಗಳನ್ನು ವಿತರಿಸುವ ಮೂಲಕ ಜನಸಮೂಹಗಳಿಗೆ ಜ್ಞಾನೋದಯ ಉಂಟುಮಾಡ”ಬೇಕಿತ್ತೆಂದು ಅವನಿಗೆ ಅನಿಸಿತು. ಮಾರ್ಚ್ 1839ರಲ್ಲಿ, ಹೀಬ್ರು ಶಾಸ್ತ್ರಗಳನ್ನು ರಷ್ಯನ್ ಭಾಷೆಗೆ ಭಾಷಾಂತರಿಸಲು ಅನುಮತಿ ಸಿಗುವುದೆಂದು ನಿರೀಕ್ಷಿಸುತ್ತಾ, ಮಾಕಾರ್ಯಾಸ್ ಸೆಂಟ್ ಪೀಟರ್ಸ್ಬರ್ಗ್ ಅನ್ನು ತಲಪಿದನು.
ಮಾಕಾರ್ಯಾಸ್ ಈಗಾಗಲೇ ಯೆಶಾಯ ಮತ್ತು ಯೋಬರ ಬೈಬಲ್ ಪುಸ್ತಕಗಳನ್ನು ಭಾಷಾಂತರಿಸಿದ್ದನು. ಆದರೆ, ಹೀಬ್ರು ಶಾಸ್ತ್ರಗಳನ್ನು ರಷ್ಯನ್ ಭಾಷೆಗೆ ಭಾಷಾಂತರಿಸುವ ಅನುಮತಿಯನ್ನು ಅವನಿಗೆ ನೀಡಲು ಆಡಳಿತ ಸಭೆಯು ನಿರಾಕರಿಸಿತು. ವಾಸ್ತವದಲ್ಲಿ, ಹೀಬ್ರು ಶಾಸ್ತ್ರಗಳನ್ನು ರಷ್ಯನ್ ಭಾಷೆಗೆ ಭಾಷಾಂತರಿಸುವ ವಿಚಾರವನ್ನೇ ಮರೆತುಬಿಡುವಂತೆ ಮಾಕಾರ್ಯಾಸ್ಗೆ ಹೇಳಲಾಯಿತು. 1841, ಎಪ್ರಿಲ್ 11ರ ತಾರೀಖಿನಂದು ಆಡಳಿತ ಸಭೆಯು ಒಂದು ಕಟ್ಟಳೆಯನ್ನು ವಿಧಿಸಿತು. ಅದು ಮಾಕಾರ್ಯಾಸನಿಗೆ, “ಪ್ರಾರ್ಥನೆ ಮತ್ತು ಮೊಣಕಾಲೂರುವಿಕೆಗಳ ಮುಖಾಂತರ ತನ್ನ ಮನಸ್ಸಾಕ್ಷಿಯನ್ನು ಶುದ್ಧಮಾಡಿಕೊಳ್ಳುವುದಕ್ಕಾಗಿ, ಟಾಮ್ಸ್ಕ್ನಲ್ಲಿರುವ ಬಿಷಪನ ಮನೆಯಲ್ಲಿ ಮೂರರಿಂದ ಆರು ವಾರಗಳ ಪ್ರಾಯಶ್ಚಿತ್ತವನ್ನು ಮಾಡಬೇಕೆಂದು” ಆಜ್ಞಾಪಿಸಿತು.
ಮಾಕಾರ್ಯಾಸನ ದಿಟ್ಟ ನಿಲುವು
1841ರ ಡಿಸೆಂಬರ್ನಿಂದ 1842ರ ಜನವರಿ ತಿಂಗಳಿನ ವರೆಗೆ, ಮಾಕಾರ್ಯಾಸ್ ತನ್ನ ಪ್ರಾಯಶ್ಚಿತ್ತವನ್ನು ಮುಗಿಸಿದನು. ಆದರೆ ಅದು ಮುಗಿದೊಡನೆ, ಅವನು ತಡಮಾಡದೆ ಹೀಬ್ರು ಶಾಸ್ತ್ರಗಳ ಉಳಿದ ಭಾಗವನ್ನು ಭಾಷಾಂತರಿಸತೊಡಗಿದನು. ಅವನು ಪಾವ್ಸ್ಕೀಯ ಹೀಬ್ರು ಶಾಸ್ತ್ರಗಳ ಭಾಷಾಂತರದ ಒಂದು ಪ್ರತಿಯನ್ನು ಪಡೆದಿದ್ದು, ತನ್ನ ಸ್ವಂತ ತರ್ಜುಮೆಗಳನ್ನು ಪರಿಶೀಲಿಸಲು ಅದನ್ನು ಉಪಯೋಗಿಸಿದನು. ಪಾವ್ಸ್ಕೀಯಂತೆ, ಅವನು ದೈವಿಕ ಹೆಸರನ್ನು ಅಸ್ಪಷ್ಟಗೊಳಿಸಲು ನಿರಾಕರಿಸಿದನು. ವಾಸ್ತವವಾಗಿ, ಮಾಕಾರ್ಯಾಸ್ ಭಾಷಾಂತರದಲ್ಲಿ ಯೆಹೋವ ಎಂಬ ಹೆಸರು 3,500ಕ್ಕಿಂತಲೂ ಹೆಚ್ಚು ಬಾರಿ ಕಂಡುಬರುತ್ತದೆ!
ಮಾಕಾರ್ಯಾಸ್ ತನ್ನ ಕೃತಿಯ ಪ್ರತಿಗಳನ್ನು ತನ್ನೊಂದಿಗೆ ಸಮ್ಮತಿಸುವ ಮಿತ್ರರಿಗೆ ಕಳುಹಿಸಿದನು. ಕೆಲವು ಲಿಖಿತ ಪ್ರತಿಗಳು ವಿತರಿಸಲ್ಪಟ್ಟವಾದರೂ, ಅವನ ಕೃತಿಯ ಪ್ರಕಟನೆಯನ್ನು ಚರ್ಚು ತಡೆಯುತ್ತಾ ಇತ್ತು. ತನ್ನ ಬೈಬಲನ್ನು ವಿದೇಶದಲ್ಲಿ ಪ್ರವರ್ಧಿಸಲು ಮಾಕಾರ್ಯಾಸ್ ಯೋಜನೆಗಳನ್ನು ಮಾಡಿದನು. ತನ್ನ ನಿರ್ಗಮನದ ಹಿಂದಿನ ದಿನ ಅವನು ಅಸ್ವಸ್ಥನಾಗಿ, ತರುವಾಯ ಸ್ವಲ್ಪ ಸಮಯದಲ್ಲೆ ಇಸವಿ 1847ರಲ್ಲಿ ಮೃತಪಟ್ಟನು. ಅವನ ಬೈಬಲ್ ಭಾಷಾಂತರವು ಅವನ ಜೀವಿತದ ಸಮಯದಲ್ಲಿ ಪ್ರಕಾಶಿಸಲ್ಪಡಲೇ ಇಲ್ಲ.
ಕಟ್ಟಕಡೆಗೆ ಪ್ರಕಾಶಿಸಲ್ಪಟ್ಟದ್ದು!
ಕೊನೆಗೆ, ರಾಜಕೀಯ ಹಾಗೂ ಧಾರ್ಮಿಕ ಪ್ರವೃತ್ತಿಗಳು ಬದಲಾದವು. ಒಂದು ನವೀನ ಉದಾರವಾದವು ಆ ದೇಶದ ಆದ್ಯಂತ ಬೀಸಿ, 1856ರಲ್ಲಿ ಆಡಳಿತ ಸಭೆಯು ಮತ್ತೊಮ್ಮೆ ರಷ್ಯನ್ ಭಾಷೆಗೆ ಬೈಬಲನ್ನು ಭಾಷಾಂತರಿಸುವ ಸಮ್ಮತಿಯನ್ನು ನೀಡಿತು. ಈ ಉತ್ತಮಗೊಂಡ ವಾತಾವರಣದಲ್ಲಿ, ರಷ್ಯನ್ ಭಾಷೆಗೆ ಭಾಷಾಂತರದ ಒಂದು ಪ್ರಯೋಗ ಎಂಬ ಶೀರ್ಷಿಕೆಯ ಕೆಳಗೆ, ಮಾಕಾರ್ಯಾಸ್ ಬೈಬಲು, 1860 ಮತ್ತು 1867ರ ನಡುವೆ ಆರ್ತೊಡಾಕ್ಸ್ ರಿವ್ಯೂವಿನಲ್ಲಿ ಕಂತುಗಳಲ್ಲಿ ಪ್ರಕಟಿಸಲ್ಪಟ್ಟಿತು.
ರಷ್ಯನ್ ಧಾರ್ಮಿಕ ಸಾಹಿತ್ಯದ ಪಂಡಿತನಾದ, ಚೆರ್ನಿಗೋವ್ನ ಆರ್ಚ್ಬಿಷಪ್ ಫೀಲರೇ, ಮಾಕಾರ್ಯಾಸ್ ಬೈಬಲಿನ ಕುರಿತು ಈ ಗುಣವಿಮರ್ಶೆಯನ್ನು ನೀಡಿದನು: “ಅವನ ಭಾಷಾಂತರವು ಹೀಬ್ರು ಗ್ರಂಥಪಾಠಕ್ಕೆ ಅಂಟಿಕೊಂಡಿದೆ, ಮತ್ತು ಭಾಷಾಂತರದ ಭಾಷೆಯು ಶುದ್ಧವಾದದ್ದೂ ವಿಷಯಕ್ಕೆ ಯೋಗ್ಯವಾದದ್ದೂ ಆಗಿದೆ.”
ಹಾಗಿದ್ದರೂ, ಸಾಮಾನ್ಯ ಜನರಿಗೆ ಮಾಕಾರ್ಯಾಸ್ ಬೈಬಲನ್ನು ಬಿಡುಗಡೆ ಮಾಡಲೇ ಇಲ್ಲ. ವಾಸ್ತವದಲ್ಲಿ, ಅದನ್ನು ಸಂಪೂರ್ಣವಾಗಿ ಮರೆತುಬಿಡಲಾಗಿತ್ತು. 1876ರಲ್ಲಿ ಇಡೀ ಬೈಬಲು—ಹೀಬ್ರು ಮತ್ತು ಗ್ರೀಕ್ ಶಾಸ್ತ್ರಗಳೆರಡನ್ನೂ ಸೇರಿಸಿ—ಆಡಳಿತ ಸಭೆಯ ಸಮ್ಮತಿಯೊಂದಿಗೆ ರಷ್ಯನ್ ಭಾಷೆಗೆ ಅಂತಿಮವಾಗಿ ಭಾಷಾಂತರಿಸಲ್ಪಟ್ಟಿತು. ಈ ಸಂಪೂರ್ಣ ಬೈಬಲನ್ನು ಅನೇಕ ವೇಳೆ ಆಡಳಿತ ಸಭೆಯ ಭಾಷಾಂತರವೆಂದು ಕರೆಯಲಾಗುತ್ತದೆ. ಹಾಸ್ಯವ್ಯಂಗ್ಯವಾಗಿ, ಪಾವ್ಸ್ಕೀಯ ಭಾಷಾಂತರದ ಜೊತೆಗೆ ಮಾಕಾರ್ಯಾಸ್ ಭಾಷಾಂತರವು, ಈ “ಅಧಿಕೃತ” ರಷ್ಯನ್ ಆರ್ತೊಡಾಕ್ಸ್ ಚರ್ಚಿನ ಭಾಷಾಂತರಕ್ಕೆ ಪ್ರಧಾನ ಮೂಲವಾಗಿ ಕಾರ್ಯನಡೆಸಿತು. ಆದರೆ ಆ ದೈವಿಕ ನಾಮವು, ಹೀಬ್ರು ಭಾಷೆಯಲ್ಲಿ ಎಲ್ಲಿ ಕಂಡುಬರುತ್ತದೊ ಆ ಕೆಲವೊಂದು ಸ್ಥಳಗಳಲ್ಲಿ ಮಾತ್ರ ಬಳಸಲ್ಪಟ್ಟಿತು.
ಇಂದು ಮಾಕಾರ್ಯಾಸ್ ಬೈಬಲ್
1993ರ ತನಕ ಮಾಕಾರ್ಯಾಸ್ ಬೈಬಲ್ ಕತ್ತಲೆಯಲ್ಲಿ ಉಳಿಯಿತು. ಪೀಠಿಕೆಯಲ್ಲಿ ಗಮನಿಸಲ್ಪಟ್ಟಂತೆ, ಆ ಸಮಯದಲ್ಲಿ ಅದರ ಒಂದು ಪ್ರತಿಯು, ರಷ್ಯನ್ ನ್ಯಾಷನಲ್ ಲೈಬ್ರರಿಯ ದುರ್ಲಭ ಪುಸ್ತಕಗಳ ವಿಭಾಗದಲ್ಲಿರುವ, ಹಳೆಯ ಆರ್ತೊಡಾಕ್ಸ್ ರಿವ್ಯೂ ಪ್ರತಿಕೆಗಳಲ್ಲಿ ಗುರುತಿಸಲ್ಪಟ್ಟಿತು. ಈ ಬೈಬಲನ್ನು ಸಾರ್ವಜನಿಕರಿಗೆ ಲಭ್ಯಗೊಳಿಸುವುದರ ಮಹತ್ವವನ್ನು ಯೆಹೋವನ ಸಾಕ್ಷಿಗಳು ಗುರುತಿಸಿದರು. ಪ್ರಕಟಿಸಲಿಕ್ಕಾಗಿ ಅದನ್ನು ತಯಾರುಗೊಳಿಸಲು ಸಾಧ್ಯವಾಗುವಂತೆ, ಮಾಕಾರ್ಯಾಸ್ ಬೈಬಲಿನ ಒಂದು ಪ್ರತಿಯನ್ನು ಮಾಡುವಂತೆ ರಷ್ಯದಲ್ಲಿರುವ ಯೆಹೋವನ ಸಾಕ್ಷಿಗಳ ಧಾರ್ಮಿಕ ಸಂಸ್ಥೆಗೆ ಲೈಬ್ರರಿಯು ಅನುಮತಿ ನೀಡಿತು.
ಆಗ, ರಷ್ಯದ ಆದ್ಯಂತ ಮತ್ತು ರಷ್ಯನ್ ಭಾಷೆಯು ಮಾತಾಡಲ್ಪಡುವ ಅನೇಕ ಇತರ ದೇಶಗಳಲ್ಲಿ ವಿತರಣೆಗಾಗಿ, ಈ ಬೈಬಲಿನ ಸುಮಾರು 3,00,000 ಪ್ರತಿಗಳು ಇಟಲಿಯಲ್ಲಿ ಮುದ್ರಿಸಲ್ಪಡುವಂತೆ ಯೆಹೋವನ ಸಾಕ್ಷಿಗಳು ಏರ್ಪಡಿಸಿದರು. ಮಾಕಾರ್ಯಾಸ್ ಭಾಷಾಂತರಿಸಿದ ಹೀಬ್ರು ಶಾಸ್ತ್ರಗಳ ಹೆಚ್ಚಿನ ಭಾಗದ ಭಾಷಾಂತರಕ್ಕೆ ಕೂಡಿಸಿ, ಬೈಬಲಿನ ಈ ಮುದ್ರಣದಲ್ಲಿ ಪಾವ್ಸ್ಕೀಯ ಕೀರ್ತನೆಗಳ ಭಾಷಾಂತರ ಅಲ್ಲದೆ ಆರ್ತೊಡಾಕ್ಸ್ ಚರ್ಚು ಅಧಿಕೃತಗೊಳಿಸಿದ ಗ್ರೀಕ್ ಶಾಸ್ತ್ರಗಳ ಆಡಳಿತ ಸಭೆಯ ಭಾಷಾಂತರವೂ ಸೇರಿದೆ.
ಈ ವರ್ಷದ ಜನವರಿ ತಿಂಗಳಿನಲ್ಲಿ, ಅದನ್ನು ರಷ್ಯದ ಸೆಂಟ್ ಪೀಟರ್ಸ್ಬರ್ಗ್ನಲ್ಲಿ ನಡೆದ ಒಂದು ಪತ್ರಿಕಾ ಗೋಷ್ಠಿಯಲ್ಲಿ ಬಿಡುಗಡೆಗೊಳಿಸಲಾಯಿತು. (26ನೆಯ ಪುಟವನ್ನು ನೋಡಿರಿ.) ರಷ್ಯನ್ ಓದುಗರು ಈ ಹೊಸ ಬೈಬಲಿನಿಂದ ನಿಜವಾಗಿಯೂ ಜ್ಞಾನೋದಯಗೊಳಿಸಲ್ಪಡುವರು ಮತ್ತು ಆಧ್ಯಾತ್ಮಿಕವಾಗಿ ಉತ್ತಮಗೊಳಿಸಲ್ಪಡುವರು.
ಹೀಗೆ, ಈ ಬೈಬಲಿನ ಪ್ರಕಟನೆಯು ಒಂದು ಧಾರ್ಮಿಕ ಹಾಗೂ ಸಾಹಿತ್ಯಕ ವಿಜಯವಾಗಿದೆ! ಅದು ಯೆಶಾಯ 40:8ರ ಮಾತುಗಳ ಸತ್ಯತೆಯ ಕುರಿತಾದ ವಿಶ್ವಾಸವನ್ನು ಬಲಪಡಿಸುವ ಜ್ಞಾಪನವೂ ಆಗಿದೆ: “ಹುಲ್ಲು ಒಣಗಿಹೋಗುವದು, ಹೂವು ಬಾಡಿ ಹೋಗುವದು, ನಮ್ಮ ದೇವರ ಮಾತೋ ಸದಾಕಾಲವೂ ಇರುವದು.”
[ಪುಟ 26 ರಲ್ಲಿರುವ ಚೌಕ]
ಬೈಬಲು ವಿಮರ್ಶಾತ್ಮಕ ಪ್ರಶಂಸೆಯನ್ನು ಪಡೆಯುತ್ತದೆ
“ಶಾಶ್ವತ ಸ್ಮಾರಕವಾದ ಇನ್ನೊಂದು ಸಾಹಿತ್ಯವು ಬಿಡುಗಡೆಗೊಳಿಸಲ್ಪಟ್ಟಿದೆ: ಮಾಕಾರ್ಯಾಸ್ ಬೈಬಲ್.” ಆ ಪೀಠಿಕೆಯೊಂದಿಗೆ, ಕಾವ್ಸಾಮಾಲ್ಸ್ಕ್ಯಾ ಪ್ರಾವ್ಡ ಎಂಬ ವಾರ್ತಾಪತ್ರಿಕೆಯು ಮಾಕಾರ್ಯಾಸ್ ಬೈಬಲಿನ ಬಿಡುಗಡೆಯನ್ನು ಪ್ರಕಟಿಸಿತು.
ರಷ್ಯನ್ ಭಾಷೆಯಲ್ಲಿ ಬೈಬಲು ಪ್ರಥಮವಾಗಿ ಕಾಣಿಸಿಕೊಂಡಿದ್ದು ಸುಮಾರು “120 ವರ್ಷಗಳ ಹಿಂದೆ” ಎಂಬುದಾಗಿ ಗಮನಿಸಿದ ತರುವಾಯ, ಈ ವಾರ್ತಾಪತ್ರಿಕೆಯು ಪ್ರಲಾಪಿಸಿದ್ದು: “ಅನೇಕ ವರ್ಷಗಳ ವರೆಗೆ, ಓದಲು ಸುಲಭವಾದ ಭಾಷೆಗೆ ಪವಿತ್ರ ಗ್ರಂಥಗಳ ಭಾಷಾಂತರವನ್ನು ಚರ್ಚು ವಿರೋಧಿಸಿತು. ಹಲವಾರು ಭಾಷಾಂತರಗಳನ್ನು ನಿರಾಕರಿಸಿದ ತರುವಾಯ, ಚರ್ಚು ಕೊನೆಯದಾಗಿ 1876ರಲ್ಲಿ ಅವುಗಳಲ್ಲಿ ಒಂದಕ್ಕೆ ಸಮ್ಮತಿಯನ್ನು ನೀಡಿತು, ಮತ್ತು ಅದು ಆಡಳಿತ ಸಭೆಯ ಭಾಷಾಂತರವೆಂದು ವಿದಿತವಾಯಿತು. ಹಾಗಿದ್ದರೂ, ಅದನ್ನು ಚರ್ಚುಗಳಲ್ಲಿ ಅನುಮತಿಸಲಿಲ್ಲ. ರಷ್ಯನ್ ಆರ್ತೊಡಾಕ್ಸ್ ಚರ್ಚಿನಲ್ಲಿ, ಈ ದಿನದ ವರೆಗೂ ಮಾನ್ಯಮಾಡಲ್ಪಡುವ ಏಕೈಕ ಬೈಬಲ್, ಸ್ಲವಾನಿಕ್ ಭಾಷೆಯ ಬೈಬಲಾಗಿದೆ.”
ಸೆಂಟ್ ಪೀಟರ್ಸ್ಬರ್ಗ್ ಎಕೋ ಎಂಬ ವಾರ್ತಾಪತ್ರಿಕೆಯು ಕೂಡ, ಮಾಕಾರ್ಯಾಸ್ ಬೈಬಲನ್ನು ಪ್ರಕಟಮಾಡಿದುದರ ಮಹತ್ವವನ್ನು ಸೂಚಿಸುತ್ತಾ ಗಮನಿಸಿದ್ದು: “ಸೆಂಟ್ ಪೀಟರ್ಸ್ಬರ್ಗ್ ರಾಜ್ಯ ವಿಶ್ವವಿದ್ಯಾನಿಲಯ, ಹರ್ಟ್ಸನ್ ಪೆಡಗಾಜಿಕಲ್ ವಿಶ್ವವಿದ್ಯಾನಿಲಯ, ಮತ್ತು ಧಾರ್ಮಿಕ ಇತಿಹಾಸದ ರಾಜ್ಯ ವಸ್ತುಸಂಗ್ರಹಾಲಯದ ಅಧಿಕಾರವುಳ್ಳ ಪಂಡಿತರು, ಬೈಬಲಿನ ಈ ಹೊಸ ಮುದ್ರಣವನ್ನು ಬಹಳವಾಗಿ ಪ್ರಶಂಸಿಸಿದರು.” ಕಳೆದ ಶತಮಾನದ ಪ್ರಥಮ ಅರ್ಧ ಭಾಗದಲ್ಲಿ, ರಷ್ಯನ್ ಭಾಷೆಗೆ ಮಾಕಾರ್ಯಾಸ್ ಮತ್ತು ಪಾವ್ಸ್ಕೀಯವರಿಂದ ಮಾಡಲ್ಪಟ್ಟ ಬೈಬಲಿನ ಭಾಷಾಂತರವನ್ನು ಸೂಚಿಸುತ್ತಾ, ಆ ವಾರ್ತಾಪತ್ರಿಕೆಯು ಗಮನಿಸಿದ್ದು: “ಆ ಸಮಯದ ವರೆಗೆ, ರಷ್ಯದಲ್ಲಿ ಬೈಬಲನ್ನು ಕೇವಲ ಸ್ಲವಾನಿಕ್ ಭಾಷೆಯಲ್ಲಿ ಓದಸಾಧ್ಯವಿತ್ತು. ಅದು ವೈದಿಕವರ್ಗದ ಸದಸ್ಯರಿಗೆ ಮಾತ್ರ ಗ್ರಾಹ್ಯವಾಗಿತ್ತು.”
ಯೆಹೋವನ ಸಾಕ್ಷಿಗಳಿಂದ ಮಾಡಲ್ಪಟ್ಟ ಮಾಕಾರ್ಯಾಸ್ ಬೈಬಲಿನ ಬಿಡುಗಡೆಯು, ಈ ವರ್ಷದ ಪ್ರಥಮಭಾಗದಲ್ಲಿ ಸೆಂಟ್ ಪೀಟರ್ಸ್ಬರ್ಗ್ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ವರದಿಸಲ್ಪಟ್ಟಿತು. ಸ್ಥಳಿಕ ವಾರ್ತಾಪತ್ರಿಕೆಯಾದ ನ್ಯೆಫ್ಸ್ಕಾಯ ವ್ರೆಮ್ಯಾ ಗಮನಿಸಿದ್ದು: “ಈ ಮುದ್ರಣವು, ರಷ್ಯ ಮತ್ತು ಸೆಂಟ್ ಪೀಟರ್ಸ್ಬರ್ಗ್ನ ಸಾಂಸ್ಕೃತಿಕ ಜೀವನದಲ್ಲಿ ಅತ್ಯಂತ ಗಮನಾರ್ಹವಾದ ಸಂಗತಿಯಾಗಿ ಮಾನ್ಯಮಾಡಲ್ಪಡಬೇಕೆಂದು . . . ಅಧಿಕಾರವುಳ್ಳ ಪಂಡಿತರು ಒತ್ತಿಹೇಳಿದರು. ಈ ಧಾರ್ಮಿಕ ಸಂಸ್ಥೆಯ ಚಟುವಟಿಕೆಯ ಕುರಿತು ಒಬ್ಬನು ಏನೇ ಯೋಚಿಸಲಿ, ಈ ಮುಂಚೆ ಅಜ್ಞಾತವಾಗಿದ್ದ ಬೈಬಲಿನ ಈ ಭಾಷಾಂತರದ ಪ್ರಕಾಶನವು ನಿಸ್ಸಂದೇಹವಾಗಿಯೂ ಬಹಳಷ್ಟು ಪ್ರಯೋಜನದ್ದಾಗಿದೆ.”
ನಿಶ್ಚಯವಾಗಿಯೂ, ದೇವರನ್ನು ಪ್ರೀತಿಸುವ ಸಕಲರೂ, ಜನಸಾಮಾನ್ಯರಿಂದ ಓದಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವ ಒಂದು ಭಾಷೆಯಲ್ಲಿ ಆತನ ಲಿಖಿತ ವಾಕ್ಯವು ಲಭ್ಯಗೊಳಿಸಲ್ಪಡುವಾಗ ಸಂತೋಷಿಸುತ್ತಾರೆ. ಎಲ್ಲೆಡೆಯಲ್ಲೂ ಇರುವ ಬೈಬಲ್ ಪ್ರೇಮಿಗಳು, ಲೋಕದ ಸುತ್ತಲೂ ರಷ್ಯನ್ ಭಾಷೆಯನ್ನಾಡುವ ಕೋಟಿಗಟ್ಟಲೆ ಜನರಿಗೆ ಮತ್ತೊಂದು ಬೈಬಲ್ ಭಾಷಾಂತರವು ಲಭ್ಯಗೊಳಿಸಲ್ಪಟ್ಟಿರುವ ಕಾರಣ ಹರ್ಷಿಸುತ್ತಾರೆ.
[ಚಿತ್ರ]
ಮಾಕಾರ್ಯಾಸ್ ಬೈಬಲಿನ ಬಿಡುಗಡೆ ಈ ಪತ್ರಿಕಾ ಗೋಷ್ಠಿಯಲ್ಲಿ ಪ್ರಕಟಿಸಲ್ಪಟ್ಟಿತು
[ಪುಟ 23 ರಲ್ಲಿರುವ ಚಿತ್ರ]
ಎಲ್ಲಿ ನಿಕ್ಷೇಪವು ಕಂಡುಕೊಳ್ಳಲ್ಪಟ್ಟಿತೊ ಆ ರಷ್ಯನ್ ನ್ಯಾಷನಲ್ ಲೈಬ್ರರಿ
[ಪುಟ 23 ರಲ್ಲಿರುವ ಚಿತ್ರ]
ರಷ್ಯನ್ ಭಾಷೆಯಲ್ಲಿ ಬೈಬಲು ಮುದ್ರಿಸಲ್ಪಡುವಂತೆ ಮಹಾ ಪೀಟರ್ ಪ್ರಯತ್ನಿಸಿದನು
[ಕೃಪೆ]
Corbis-Bettmann
[ಪುಟ 24 ರಲ್ಲಿರುವ ಚಿತ್ರ]
ಬೈಬಲನ್ನು ರಷ್ಯನ್ ಭಾಷೆಗೆ ಭಾಷಾಂತರಿಸಲು ನೆರವಾದ ಗ್ಯಿರಾಸ್ಯಿಮ್ ಪಾವ್ಸ್ಕೀ
[ಪುಟ 25 ರಲ್ಲಿರುವ ಚಿತ್ರ]
ಯಾರ ಹೆಸರು ಈ ಹೊಸ ರಷ್ಯನ್ ಬೈಬಲಿಗೆ ಕೊಡಲ್ಪಟ್ಟಿದೆಯೊ ಆ ಆರ್ಕಿಮ್ಯಾಂಡ್ರೈಟ್ ಮಾಕಾರ್ಯಾಸ್