ಪ್ರಕಟನೆ ಪುಸ್ತಕದ ಹರ್ಷಚಿತ್ತ ವಾಚಕರಾಗಿರಿ
“ಈ ಪ್ರವಾದನ ವಾಕ್ಯಗಳನ್ನು ಓದುವಂಥವನೂ ಕೇಳುವಂಥವರೂ ಈ ಪ್ರವಾದನೆಯಲ್ಲಿ ಬರೆದಿರುವ ಮಾತುಗಳನ್ನು ಕೈಕೊಂಡು ನಡೆಯುವಂಥವರೂ ಧನ್ಯರು [“ಸಂತೋಷಿತರು,” “NW”].”—ಪ್ರಕಟನೆ 1:3.
1. ಪ್ರಕಟನೆ ಪುಸ್ತಕವನ್ನು ಬರೆದಾಗ ಅಪೊಸ್ತಲ ಪೌಲನು ಯಾವ ಸನ್ನಿವೇಶದಲ್ಲಿದ್ದನು, ಮತ್ತು ಯಾವ ಉದ್ದೇಶದಿಂದ ಈ ದರ್ಶನಗಳು ಲಿಖಿತರೂಪದಲ್ಲಿ ನಮೂದಿಸಲ್ಪಟ್ಟವು?
“ಯೋಹಾನನೆಂಬ ನಾನು ದೇವರ ವಾಕ್ಯಕ್ಕೋಸ್ಕರವೂ ಯೇಸುವಿನ ವಿಷಯವಾದ ಸಾಕ್ಷಿಗೋಸ್ಕರವೂ ಪತ್ಮೊಸ್ ದ್ವೀಪದಲ್ಲಿದ್ದೆನು.” (ಪ್ರಕಟನೆ 1:9) ಈ ಸನ್ನಿವೇಶಗಳ ಕೆಳಗೆ ಅಪೊಸ್ತಲ ಯೋಹಾನನು ಅಪಾಕಲಿಪ್ಸ್ ಅಥವಾ ಪ್ರಕಟನೆ ಪುಸ್ತಕವನ್ನು ಬರೆದನು. ಯಾರು ಚಕ್ರವರ್ತಿಯ ಆರಾಧನೆಯನ್ನು ಕಡ್ಡಾಯವಾಗಿ ಜಾರಿಗೆ ತಂದು, ಕ್ರೈಸ್ತರ ಹಿಂಸಕನಾಗಿ ಪರಿಣಮಿಸಿದನೋ ಆ ರೋಮನ್ ಚಕ್ರವರ್ತಿಯಾದ ಡಮಿಷನ್ನ (ಸಾ.ಶ. 81-96) ಆಳ್ವಿಕೆಯ ಸಮಯದಲ್ಲಿ, ಪತ್ಮೊಸ್ ದ್ವೀಪಕ್ಕೆ ಅವನು ದೇಶಭ್ರಷ್ಟನಾಗಿ ಒಯ್ಯಲ್ಪಟ್ಟಿದ್ದನು ಎಂದು ಅಭಿಪ್ರಯಿಸಲಾಗಿದೆ. ಪತ್ಮೊಸ್ ದ್ವೀಪದಲ್ಲಿದ್ದಾಗ, ಯೋಹಾನನು ಅನೇಕ ದರ್ಶನಗಳನ್ನು ಪಡೆದುಕೊಂಡು, ಅವುಗಳನ್ನು ಲಿಖಿತರೂಪದಲ್ಲಿ ನಮೂದಿಸಿದನು. ಆದಿ ಕ್ರೈಸ್ತರಿಗೆ ಭಯವನ್ನು ಉಂಟುಮಾಡಲಿಕ್ಕಾಗಿ ಅಲ್ಲ, ಬದಲಾಗಿ ಅವರು ಅನುಭವಿಸುತ್ತಿದ್ದ ಮತ್ತು ಮುಂದೆ ಅನುಭವಿಸಲಿಕ್ಕಿದ್ದ ಪರೀಕ್ಷೆಗಳ ದೃಷ್ಟಿಯಿಂದ ಅವರನ್ನು ಬಲಪಡಿಸಲಿಕ್ಕಾಗಿ, ಸಾಂತ್ವನ ನೀಡಲಿಕ್ಕಾಗಿ, ಮತ್ತು ಉತ್ತೇಜಿಸಲಿಕ್ಕಾಗಿ ಅವನು ಅದನ್ನು ಬರೆದನು.—ಅ. ಕೃತ್ಯಗಳು 28:22; ಪ್ರಕಟನೆ 1:4; 2:3, 9, 10, 13.
2. ಯೋಹಾನನು ಮತ್ತು ಅವನ ಜೊತೆ ಕ್ರೈಸ್ತರು ಯಾವ ಪರಿಸ್ಥಿತಿಯಲ್ಲಿ ತಮ್ಮನ್ನು ಕಂಡುಕೊಂಡರೋ ಅದು ಇಂದು ಜೀವಿಸುತ್ತಿರುವ ಕ್ರೈಸ್ತರಿಗೆ ಏಕೆ ಆಸಕ್ತಿದಾಯಕವಾದದ್ದಾಗಿದೆ?
2 ಯಾವ ಪರಿಸ್ಥಿತಿಗಳ ಕೆಳಗೆ ಬೈಬಲಿನ ಈ ಪುಸ್ತಕವು ಬರೆಯಲ್ಪಟ್ಟಿತು ಎಂಬುದು ಇಂದು ಜೀವಿಸುತ್ತಿರುವ ಕ್ರೈಸ್ತರಿಗೆ ತುಂಬ ಮಹತ್ವದ ಸಂಗತಿಯಾಗಿದೆ. ಯೋಹಾನನು ಯೆಹೋವನಿಗೂ ಆತನ ಮಗನಾದ ಯೇಸು ಕ್ರಿಸ್ತನಿಗೂ ಒಬ್ಬ ಸಾಕ್ಷಿಯಾಗಿದ್ದುದರಿಂದ, ಹಿಂಸೆಯನ್ನು ಅನುಭವಿಸುತ್ತಿದ್ದನು. ಅವನು ಹಾಗೂ ಅವನ ಜೊತೆ ಕ್ರೈಸ್ತರು ತುಂಬ ಹಗೆತನವಿದ್ದ ಒಂದು ಸನ್ನಿವೇಶದಲ್ಲಿ ಜೀವಿಸುತ್ತಿದ್ದರು. ಏಕೆಂದರೆ ಅವರು ಒಳ್ಳೆಯ ಪ್ರಜೆಗಳಾಗಿ ಬದುಕಲು ಪ್ರಯತ್ನಿಸುತ್ತಿರುವಾಗ, ಚಕ್ರವರ್ತಿಯನ್ನು ಆರಾಧಿಸುವುದು ಅವರಿಗೆ ಅಸಾಧ್ಯವಾದ ಕೆಲಸವಾಗಿತ್ತು. (ಲೂಕ 4:8) ಕೆಲವು ದೇಶಗಳಲ್ಲಿ, ಇಂದು ಸತ್ಯ ಕ್ರೈಸ್ತರು ತದ್ರೀತಿಯ ಒಂದು ಸನ್ನಿವೇಶದಲ್ಲಿ ತಮ್ಮನ್ನು ಕಂಡುಕೊಳ್ಳುತ್ತಾರೆ; ಇಂತಹ ದೇಶಗಳಲ್ಲಿ ಯಾವುದು “ಧಾರ್ಮಿಕವಾಗಿ ಸರಿಯಾಗಿದೆ” ಎಂಬುದನ್ನು ನಿರ್ಧರಿಸುವ ಜವಾಬ್ದಾರಿಯನ್ನು ಸರಕಾರವೇ ತೆಗೆದುಕೊಳ್ಳುತ್ತದೆ. ಆದುದರಿಂದ, ಪ್ರಕಟನೆ ಪುಸ್ತಕದ ಪೀಠಿಕೆಯಲ್ಲಿ ಕಂಡುಬರುವ ಮಾತುಗಳು ಎಷ್ಟು ಸಾಂತ್ವನದಾಯಕವಾಗಿವೆ: “ಈ ಪ್ರವಾದನ ವಾಕ್ಯಗಳನ್ನು ಓದುವಂಥವನೂ ಕೇಳುವಂಥವರೂ ಈ ಪ್ರವಾದನೆಯಲ್ಲಿ ಬರೆದಿರುವ ಮಾತುಗಳನ್ನು ಕೈಕೊಂಡು ನಡೆಯುವಂಥವರೂ ಸಂತೋಷಿತರು.” (ಪ್ರಕಟನೆ 1:3) ಹೌದು, ಪ್ರಕಟನೆ ಪುಸ್ತಕದ ಬಗ್ಗೆ ತೀವ್ರಾಸಕ್ತಿಯನ್ನು ತೋರಿಸುವ ಹಾಗೂ ಅದಕ್ಕೆ ವಿಧೇಯರಾಗುವ ಓದುಗರು, ನಿಜವಾದ ಸಂತೋಷವನ್ನು ಕಂಡುಕೊಳ್ಳಸಾಧ್ಯವಿದೆ ಹಾಗೂ ಅನೇಕ ಆಶೀರ್ವಾದಗಳನ್ನು ಪಡೆದುಕೊಳ್ಳಸಾಧ್ಯವಿದೆ.
3. ಯೋಹಾನನಿಗೆ ಕೊಡಲ್ಪಟ್ಟ ಪ್ರಕಟನೆಗಳ ಮೂಲನು ಯಾರಾಗಿದ್ದನು?
3 ಪ್ರಕಟನೆ ಪುಸ್ತಕದ ಆರಂಭದ ಮೂಲಕರ್ತನು ಯಾರಾಗಿದ್ದಾನೆ, ಮತ್ತು ಇದನ್ನು ತಲಪಿಸಲಿಕ್ಕಾಗಿ ಯಾವ ಮಾಧ್ಯಮವನ್ನು ಉಪಯೋಗಿಸಲಾಗಿದೆ? ಆರಂಭದ ವಚನವು ನಮಗೆ ಹೇಳುವುದು: “ಯೇಸು ಕ್ರಿಸ್ತನ ಪ್ರಕಟನೆಯು. ಆತನು ಬೇಗನೆ ಸಂಭವಿಸಬೇಕಾಗಿರುವ ಸಂಗತಿಗಳನ್ನು ತನ್ನ ದಾಸರಿಗೆ ತೋರಿಸುವದಕ್ಕಾಗಿ ದೇವರಿಂದ ಈ ಪ್ರಕಟನೆಯನ್ನು ಹೊಂದಿದನು; ಇದಲ್ಲದೆ ಆತನು ತನ್ನ ದೂತನನ್ನು ಕಳುಹಿಸಿ ಅವನ ಮೂಲಕ ಈ ಸಂಗತಿಗಳನ್ನು ತನ್ನ ದಾಸನಾದ ಯೋಹಾನನಿಗೆ ಸೂಚಿಸಿದನು.” (ಪ್ರಕಟನೆ 1:1) ಸರಳವಾಗಿ ಹೇಳುವುದಾದರೆ, ಪ್ರಕಟನೆ ಪುಸ್ತಕದ ನಿಜವಾದ ಮೂಲನು ಯೆಹೋವ ದೇವರೇ ಆಗಿದ್ದು, ಆತನು ಅದನ್ನು ಯೇಸುವಿಗೆ ಕೊಟ್ಟನು, ಮತ್ತು ಒಬ್ಬ ದೇವದೂತನ ಮೂಲಕ ಯೇಸು ಅದನ್ನು ಯೋಹಾನನಿಗೆ ತಿಳಿಯಪಡಿಸಿದನು. ಇನ್ನೂ ಹೆಚ್ಚಿನ ಪರಿಶೀಲನೆಯು, ಈ ಸಂದೇಶಗಳನ್ನು ಸಭೆಗಳಿಗೆ ತಿಳಿಸಲಿಕ್ಕಾಗಿ ಮತ್ತು ಯೋಹಾನನಿಗೆ ದರ್ಶನಗಳನ್ನು ನೀಡಲಿಕ್ಕಾಗಿ ಯೇಸು ಪವಿತ್ರಾತ್ಮವನ್ನು ಸಹ ಉಪಯೋಗಿಸಿದನು ಎಂಬುದನ್ನು ತಿಳಿಯಪಡಿಸುತ್ತದೆ.—ಪ್ರಕಟನೆ 2:7, 11, 17, 29; 3:6, 13, 22; 4:2; 17:3; 21:10; ಹೋಲಿಸಿರಿ ಅ. ಕೃತ್ಯಗಳು 2:33.
4. ಭೂಮಿಯಲ್ಲಿರುವ ತನ್ನ ಜನರನ್ನು ಮಾರ್ಗದರ್ಶಿಸಲಿಕ್ಕಾಗಿ ಯೆಹೋವನು ಇಂದು ಸಹ ಯಾವ ಮಾಧ್ಯಮವನ್ನು ಉಪಯೋಗಿಸುತ್ತಿದ್ದಾನೆ?
4 ಈಗಲೂ ಭೂಮಿಯಲ್ಲಿರುವ ತನ್ನ ಸೇವಕರಿಗೆ ಕಲಿಸಲಿಕ್ಕಾಗಿ ಯೆಹೋವನು “ಸಭೆಗೆ ತಲೆಯಾಗಿರುವ” ತನ್ನ ಮಗನನ್ನು ಉಪಯೋಗಿಸುತ್ತಾನೆ. (ಎಫೆಸ 5:23; ಯೆಶಾಯ 54:13; ಯೋಹಾನ 6:45) ತನ್ನ ಜನರಿಗೆ ಬೋಧಿಸಲಿಕ್ಕಾಗಿ ಯೆಹೋವನು ತನ್ನ ಆತ್ಮವನ್ನು ಸಹ ಉಪಯೋಗಿಸುತ್ತಾನೆ. (ಯೋಹಾನ 15:26; 1 ಕೊರಿಂಥ 2:10) ಮತ್ತು ಪ್ರಥಮ ಶತಮಾನದ ಸಭೆಗಳಿಗೆ ಪೋಷಣೆಯನ್ನು ನೀಡುವಂತಹ ಆತ್ಮಿಕ ಆಹಾರವನ್ನು ಒದಗಿಸಲಿಕ್ಕಾಗಿ ಯೇಸು “ತನ್ನ ದಾಸನಾದ ಯೋಹಾನನನ್ನು” ಉಪಯೋಗಿಸಿದಂತೆಯೇ, ಇಂದು ಸಹ ತನ್ನ ಮನೆಯವರಿಗೆ ಮತ್ತು ಅವರ ಸಂಗಡಿಗರಿಗೆ “ಹೊತ್ತುಹೊತ್ತಿಗೆ ಆಹಾರ ಕೊಡಲಿಕ್ಕಾಗಿ,” ಭೂಮಿಯ ಮೇಲಿರುವ ಅಭಿಷಿಕ್ತ ‘ಸಹೋದರರಿಂದ’ ರಚಿತವಾಗಿರುವ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳ”ನ್ನು ಉಪಯೋಗಿಸುತ್ತಾನೆ. (ಮತ್ತಾಯ 24:45-47; 25:40) ಆತ್ಮಿಕ ಆಹಾರದ ರೂಪದಲ್ಲಿ ನಾವು ಪಡೆದುಕೊಳ್ಳುವ ‘ಒಳ್ಳೇ ವರಗಳ’ ಮೂಲಕರ್ತನನ್ನು ಹಾಗೂ ಆತನು ಉಪಯೋಗಿಸುತ್ತಿರುವ ಮಾಧ್ಯಮವನ್ನು ಗುರುತಿಸುವವರು ಸಂತೋಷಿತರಾಗಿದ್ದಾರೆ.—ಯಾಕೋಬ 1:17.
ಕ್ರಿಸ್ತನಿಂದ ನಿರ್ದೇಶಿಸಲ್ಪಟ್ಟಿರುವ ಸಭೆಗಳು
5. (ಎ) ಕ್ರೈಸ್ತ ಸಭೆಗಳು ಮತ್ತು ಅವುಗಳ ಮೇಲ್ವಿಚಾರಕರನ್ನು ಯಾವುದಕ್ಕೆ ಹೋಲಿಸಲಾಗಿದೆ? (ಬಿ) ಮಾನವ ಅಪರಿಪೂರ್ಣತೆಗಳಿರುವುದಾದರೂ, ನಮ್ಮ ಸಂತೋಷಕ್ಕೆ ಯಾವುದು ಸಹಾಯ ಮಾಡುವುದು?
5 ಪ್ರಕಟನೆಯ ಆರಂಭದ ಅಧ್ಯಾಯಗಳಲ್ಲಿ, ಕ್ರೈಸ್ತ ಸಭೆಗಳನ್ನು ದೀಪಸ್ತಂಭಗಳಿಗೆ ಹೋಲಿಸಲಾಗಿದೆ. ಅವುಗಳ ಮೇಲ್ವಿಚಾರಕರನ್ನು ದೇವದೂತರಿಗೆ (ಸಂದೇಶವಾಹಕರು) ಮತ್ತು ನಕ್ಷತ್ರಗಳಿಗೆ ಹೋಲಿಸಲಾಗಿದೆ. (ಪ್ರಕಟನೆ 1:20)a ಸ್ವತಃ ತನ್ನ ಕುರಿತು ಮಾತಾಡುತ್ತಾ, ಕ್ರಿಸ್ತನು ಯೋಹಾನನಿಗೆ ಹೀಗೆ ಬರೆಯುವಂತೆ ಆಜ್ಞಾಪಿಸಿದನು: ‘ಏಳು ನಕ್ಷತ್ರಗಳನ್ನು ಬಲಗೈಯಲ್ಲಿ ಹಿಡುಕೊಂಡು ಏಳು ಚಿನ್ನದ ದೀಪಸ್ತಂಭಗಳ ಮಧ್ಯದಲ್ಲಿ ತಿರುಗಾಡುವಾತನು ಈ ಸಂಗತಿಗಳನ್ನು ಹೇಳುತ್ತಾನೆ.’ (ಪ್ರಕಟನೆ 2:1) ಸಾ.ಶ. ಪ್ರಥಮ ಶತಮಾನದಲ್ಲಿ, ಸಭೆಗಳಿಗೆ ಮತ್ತು ಅವುಗಳ ಹಿರಿಯರಿಗೆ ತಮ್ಮದೇ ಆದ ವಿಶೇಷ ಗುಣಗಳಿದ್ದವು ಹಾಗೂ ಅದೇ ಸಮಯದಲ್ಲಿ ದೌರ್ಬಲ್ಯಗಳೂ ಇದ್ದವು ಎಂಬುದನ್ನು ಏಷ್ಯಾದ ಏಳು ಸಭೆಗಳಿಗೆ ಕಳುಹಿಸಲ್ಪಟ್ಟ ಏಳು ಸಂದೇಶಗಳು ತೋರಿಸುತ್ತವೆ. ಇಂದು ಸಹ ಇದು ಸತ್ಯವಾಗಿದೆ. ಆದುದರಿಂದ, ನಮ್ಮ ತಲೆಯಾಗಿರುವ ಕ್ರಿಸ್ತನು ಸಭೆಗಳ ಮಧ್ಯದಲ್ಲಿದ್ದಾನೆ ಎಂಬ ವಾಸ್ತವಾಂಶವನ್ನು ನಾವು ಎಂದಿಗೂ ಮರೆಯದಿರುವಲ್ಲಿ, ಹೆಚ್ಚು ಸಂತೋಷದಿಂದ ಇರಸಾಧ್ಯವಿದೆ. ಸಭೆಯ ಆಗುಹೋಗುಗಳನ್ನು ಅವನು ಬಲ್ಲವನಾಗಿದ್ದಾನೆ. ಸಭೆಗಳ ಮೇಲ್ವಿಚಾರಕರು ಸಾಂಕೇತಿಕವಾಗಿ ಅವನ “ಬಲಗೈಯಲ್ಲಿ” ಇದ್ದಾರೆ, ಅಂದರೆ ಅವರು ಅವನ ನಿಯಂತ್ರಣ ಹಾಗೂ ಮಾರ್ಗದರ್ಶನದ ಕೆಳಗಿದ್ದಾರೆ. ಹಾಗೂ ಯಾವ ರೀತಿಯಲ್ಲಿ ಅವರು ಸಭೆಗಳನ್ನು ನೋಡಿಕೊಳ್ಳುತ್ತಾರೋ ಅದಕ್ಕೋಸ್ಕರ ಅವರು ಯೇಸುವಿಗೆ ಉತ್ತರವಾದಿಗಳಾಗಿದ್ದಾರೆ.—ಅ. ಕೃತ್ಯಗಳು 20:28; ಇಬ್ರಿಯ 13:17.
6. ಮೇಲ್ವಿಚಾರಕರು ಮಾತ್ರ ಕ್ರಿಸ್ತನಿಗೆ ಉತ್ತರವಾದಿಗಳಾಗಿಲ್ಲ ಎಂಬುದನ್ನು ಯಾವುದು ತೋರಿಸುತ್ತದೆ?
6 ಆದರೂ, ತಮ್ಮ ಕೃತ್ಯಗಳಿಗಾಗಿ ಕೇವಲ ಮೇಲ್ವಿಚಾರಕರು ಮಾತ್ರ ಕ್ರಿಸ್ತನಿಗೆ ಉತ್ತರವಾದಿಗಳಾಗಿದ್ದಾರೆ ಎಂದು ನೆನಸುವಲ್ಲಿ, ನಾವು ನಮ್ಮನ್ನು ವಂಚಿಸಿಕೊಳ್ಳುವೆವು. ತನ್ನ ಸಂದೇಶಗಳಲ್ಲೊಂದರಲ್ಲಿ ಕ್ರಿಸ್ತನು ಹೇಳಿದ್ದು: “ನಾನು ಮನುಷ್ಯರ ಅಂತರಿಂದ್ರಿಯವನ್ನೂ ಹೃದಯವನ್ನೂ ಪರೀಕ್ಷಿಸುವವನಾಗಿದ್ದೇನೆಂಬದು ಎಲ್ಲಾ ಸಭೆಗಳಿಗೆ ಗೊತ್ತಾಗುವದು. ನಿಮ್ಮಲ್ಲಿ ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳಿಗೆ ತಕ್ಕ ಹಾಗೆ ಪ್ರತಿಫಲ ಕೊಡುವೆನು.” (ಪ್ರಕಟನೆ 2:23) ಇದು ಒಂದು ಎಚ್ಚರಿಕೆಯಾಗಿದೆ ಮತ್ತು ಅದೇ ಸಮಯದಲ್ಲಿ ಉತ್ತೇಜನವೂ ಆಗಿದೆ; ನಮ್ಮ ಮನಸ್ಸಿನಲ್ಲಿ ಆಳವಾಗಿ ಬೇರೂರಿರುವ ಹೇತುಗಳ ಬಗ್ಗೆ ಕ್ರಿಸ್ತನಿಗೆ ತಿಳಿದಿದೆ ಎಂಬುದು ಒಂದು ಎಚ್ಚರಿಕೆಯಾಗಿದೆ ಮತ್ತು ನಮ್ಮ ಪ್ರಯತ್ನಗಳ ಬಗ್ಗೆ ಕ್ರಿಸ್ತನು ಅರಿವುಳ್ಳವನಾಗಿದ್ದಾನೆ ಹಾಗೂ ನಮ್ಮಿಂದ ಸಾಧ್ಯವಿರುವುದನ್ನು ನಾವು ಮಾಡುವಲ್ಲಿ ಅವನು ನಮ್ಮನ್ನು ಆಶೀರ್ವದಿಸುವನು ಎಂಬ ಆಶ್ವಾಸನೆಯನ್ನು ಇದು ನಮಗೆ ಕೊಡುವುದರಿಂದ ಇದೊಂದು ಉತ್ತೇಜನವಾಗಿದೆ.—ಮಾರ್ಕ 14:6-9; ಲೂಕ 21:3, 4.
7. ಫಿಲದೆಲ್ಫಿಯದಲ್ಲಿರುವ ಸಭೆಯ ಕ್ರೈಸ್ತರು ಹೇಗೆ ‘ಯೇಸುವಿನ ಸಹನವಾಕ್ಯವನ್ನು ಕಾಪಾಡಿಕೊಂಡಿದ್ದರು?’
7 ಲುದ್ಯ ದೇಶದ ಫಿಲದೆಲ್ಫಿಯ ಪಟ್ಟಣದಲ್ಲಿದ್ದ ಸಭೆಗೆ ಕ್ರಿಸ್ತನು ಕಳುಹಿಸಿದ ಸಂದೇಶದಲ್ಲಿ, ಯಾವುದೇ ತಿದ್ದುಪಾಟು ಕೊಡಲ್ಪಟ್ಟಿರುವುದಿಲ್ಲವಾದರೂ, ಅದು ನಮಗೆ ಅತ್ಯಂತ ಆಸಕ್ತಿಕರವಾಗಿರಬೇಕಾದ ಒಂದು ವಾಗ್ದಾನವನ್ನು ಮಾಡುತ್ತದೆ. “ನೀನು ನನ್ನ ಸಹನವಾಕ್ಯವನ್ನು ಕಾಪಾಡಿದ್ದರಿಂದ ಭೂನಿವಾಸಿಗಳನ್ನು ಪರೀಕ್ಷಿಸುವದಕ್ಕಾಗಿ ಲೋಕದ ಮೇಲೆಲ್ಲಾ ಬರುವದಕ್ಕಿರುವ ಶೋಧನೆಯ ಸಮಯದಲ್ಲಿ ನಿನ್ನನ್ನು ತಪ್ಪಿಸಿ ಕಾಪಾಡುವೆನು.” (ಪ್ರಕಟನೆ 3:10) “ನನ್ನ ಸಹನವಾಕ್ಯವನ್ನು ಕಾಪಾಡಿ”ದ್ದೀ ಎಂಬುದಕ್ಕಾಗಿರುವ ಗ್ರೀಕ್ ಶಬ್ದವು, “ಸಹನೆಯ ಕುರಿತು ನಾನು ಏನು ಹೇಳಿದೆನೋ ಅದನ್ನು ಕಾಪಾಡಿ”ಕೊಂಡಿದ್ದೀ ಎಂಬುದನ್ನು ಸಹ ಅರ್ಥೈಸುತ್ತದೆ. ಫಿಲದೆಲ್ಫಿಯದಲ್ಲಿದ್ದ ಕ್ರೈಸ್ತರು ಕ್ರಿಸ್ತನ ಆಜ್ಞೆಗಳಿಗೆ ವಿಧೇಯರಾಗಿದ್ದರು ಮಾತ್ರವಲ್ಲ, ನಂಬಿಕೆಯಿಂದ ತಾಳಿಕೊಳ್ಳುವಂತೆ ಅವನು ಕೊಟ್ಟ ಸಲಹೆಯನ್ನು ಸಹ ಅನುಸರಿಸಿದ್ದರು ಎಂದು 8ನೆಯ ವಚನವು ಸೂಚಿಸುತ್ತದೆ.—ಮತ್ತಾಯ 10:22; ಲೂಕ 21:19.
8. (ಎ) ಫಿಲದೆಲ್ಫಿಯದಲ್ಲಿರುವ ಕ್ರೈಸ್ತರಿಗೆ ಯೇಸು ಯಾವ ವಾಗ್ದಾನವನ್ನು ಮಾಡಿದನು? (ಬಿ) “ಶೋಧನೆಯ ಸಮಯ”ದಿಂದ ಇಂದು ಯಾರು ಬಾಧಿಸಲ್ಪಟ್ಟಿದ್ದಾರೆ?
8 ತಾನು ಅವರನ್ನು “ಶೋಧನೆಯ ಸಮಯದಲ್ಲಿ” ಕಾಪಾಡುವೆನೆಂದು ಸಹ ಯೇಸು ಹೇಳಿದನು. ಆಗ ಇದ್ದ ಕ್ರೈಸ್ತರಿಗೆ ಇದು ಏನನ್ನು ಅರ್ಥೈಸಿತು ಎಂಬುದು ನಮಗೆ ಸ್ಪಷ್ಟವಾಗಿ ಗೊತ್ತಿಲ್ಲ. ಸಾ.ಶ. 96ರಲ್ಲಿ ಡಮಿಷನ್ ಮರಣಪಟ್ಟ ಕಾರಣ ಸ್ವಲ್ಪಕಾಲದ ಮಟ್ಟಿಗೆ ಹಿಂಸೆಯು ವಿಳಂಬಿಸಿತಾದರೂ, ಟ್ರೇಜನ್ (ಸಾ.ಶ. 98-117)ನ ಆಳ್ವಿಕೆಯ ಕೆಳಗೆ ಹಿಂಸೆಯ ಹೊಸ ಅಲೆಯು ಎದ್ದಿತು. ಇದು ಇನ್ನೂ ಹೆಚ್ಚಿನ ಪರೀಕ್ಷೆಗಳನ್ನು ತಂದೊಡ್ಡಿತು ಎಂಬುದರಲ್ಲಿ ಸಂದೇಹವಿಲ್ಲ. ಆದರೆ “ಅಂತ್ಯಕಾಲ”ದಲ್ಲಿ, ಅಂದರೆ ನಾವು ಜೀವಿಸುತ್ತಿರುವ “ಕರ್ತನ ದಿನ”ದಲ್ಲಿ ದೊಡ್ಡ “ಶೋಧನೆಯ ಸಮಯವು” ಬರುತ್ತದೆ. (ಪ್ರಕಟನೆ 1:10; ದಾನಿಯೇಲ 12:4) Iನೆಯ ಲೋಕ ಯುದ್ಧದ ಸಮಯದಲ್ಲಿ ಮತ್ತು ತದನಂತರ ಆತ್ಮಾಭಿಷಿಕ್ತ ಕ್ರೈಸ್ತರು ನಿರ್ದಿಷ್ಟ ಕಾಲಾವಧಿಯ ವರೆಗೆ ಪರೀಕ್ಷೆಗೊಳಗಾದರು. ಆದರೂ, “ಶೋಧನೆಯ ಸಮಯವು” ಇನ್ನೂ ಮುಂದುವರಿಯುತ್ತಿದೆ. ಇದು ಮಹಾ ಸಂಕಟವನ್ನು ಪಾರಾಗುವ ನಿರೀಕ್ಷೆಯಿರುವ ಮಹಾ ಸಮೂಹದ ಭಾಗವಾಗಿರುವ ಲಕ್ಷಾಂತರ ಮಂದಿಯನ್ನು ಒಳಗೊಂಡು, ಇಡೀ “ಭೂನಿವಾಸಿಗಳನ್ನು” ಬಾಧಿಸುತ್ತದೆ. (ಪ್ರಕಟನೆ 3:10; 7:9, 14) ‘ಸಹನೆಯ ವಿಷಯದಲ್ಲಿ ಯೇಸು ಏನು ಹೇಳಿದ್ದಾನೋ’ ಅದಕ್ಕನುಸಾರ ನಡೆಯುವಲ್ಲಿ ನಾವು ಸಂತೋಷದಿಂದಿರುವೆವು, ಅವನು ಹೇಳಿದ್ದು: “ಕಡೇ ವರೆಗೂ ತಾಳುವವನು ರಕ್ಷಣೆ ಹೊಂದುವನು.”—ಮತ್ತಾಯ 24:13.
ಯೆಹೋವನ ಪರಮಾಧಿಕಾರಕ್ಕೆ ಸಂತೋಷಭರಿತ ಅಧೀನತೆ
9, 10. (ಎ) ಯೆಹೋವನ ಸಿಂಹಾಸನದ ದರ್ಶನವು ನಮ್ಮ ಮೇಲೆ ಯಾವ ರೀತಿಯಲ್ಲಿ ಪ್ರಭಾವವನ್ನು ಬೀರಬೇಕು? (ಬಿ) ಪ್ರಕಟನೆ ಪುಸ್ತಕವನ್ನು ಓದುವುದು, ನಮ್ಮ ಸಂತೋಷಕ್ಕೆ ಹೇಗೆ ಸಹಾಯಕರವಾಗಿರಸಾಧ್ಯವಿದೆ?
9 ಪ್ರಕಟನೆ ಪುಸ್ತಕದ 4 ಹಾಗೂ 5ನೆಯ ಅಧ್ಯಾಯಗಳಲ್ಲಿ ಕೊಡಲ್ಪಟ್ಟಿರುವ ಯೆಹೋವನ ಸಿಂಹಾಸನ ಹಾಗೂ ಆತನ ಸ್ವರ್ಗೀಯ ಆಸ್ಥಾನದ ದರ್ಶನವು, ನಮ್ಮಲ್ಲಿ ಭಯಭಕ್ತಿಯನ್ನು ಮೂಡಿಸಬೇಕು. ತುಂಬ ಪ್ರಬಲವಾದ ಸ್ವರ್ಗೀಯ ಜೀವಿಗಳು ಯೆಹೋವನ ನೀತಿಯ ಪರಮಾಧಿಕಾರಕ್ಕೆ ಆನಂದದಿಂದ ಅಧೀನತೆ ತೋರಿಸುತ್ತಿರುವಾಗ, ಅವರು ನುಡಿದಂತಹ ಹೃತ್ಪೂರ್ವಕವಾದ ಸ್ತುತಿಯ ಅಭಿವ್ಯಕ್ತಿಗಳಿಂದ ನಾವು ಪ್ರಭಾವಿತರಾಗಬೇಕು. (ಪ್ರಕಟನೆ 4:8-11) “ಸಿಂಹಾಸನಾಸೀನನಿಗೂ ಯಜ್ಞದ ಕುರಿಯಾದಾತನಿಗೂ ಸ್ತೋತ್ರ ಮಾನ ಪ್ರಭಾವ ಆಧಿಪತ್ಯಗಳು ಯುಗಯುಗಾಂತರಗಳಲ್ಲಿಯೂ ಇರಲಿ” ಎಂದು ಹೇಳುವವರ ಮಧ್ಯದಿಂದ ನಮ್ಮ ಧ್ವನಿಗಳು ಸಹ ಕೇಳಿಬರಬೇಕು.—ಪ್ರಕಟನೆ 5:13.
10 ಪ್ರಾಯೋಗಿಕ ದೃಷ್ಟಿಕೋನದಲ್ಲಿ, ಸರ್ವ ವಿಷಯಗಳಲ್ಲಿಯೂ ಆನಂದದಿಂದ ಯೆಹೋವನ ಚಿತ್ತಕ್ಕೆ ಅಧೀನತೆ ತೋರಿಸುತ್ತಿರುವವರಾಗಿರಬೇಕು ಎಂಬುದೇ ಇದರ ಅರ್ಥವಾಗಿದೆ. ಅಪೊಸ್ತಲ ಪೌಲನು ಬರೆದುದು: “ನೀವು ನುಡಿಯಿಂದಾಗಲಿ ನಡತೆಯಿಂದಾಗಲಿ ಏನು ಮಾಡಿದರೂ ಅದೆಲ್ಲವನ್ನೂ ಕರ್ತನಾದ ಯೇಸುವಿನ ಹೆಸರಿನಲ್ಲಿಯೇ ಮಾಡಿರಿ. ಆತನ ಮೂಲಕ ತಂದೆಯಾದ ದೇವರಿಗೆ ಕೃತಜ್ಞತಾಸ್ತುತಿಯನ್ನು ಸಲ್ಲಿಸಿರಿ.” (ಕೊಲೊಸ್ಸೆ 3:17) ನಮ್ಮ ಹೃದಮನಗಳ ಅಂತರಾಳದಲ್ಲಿ ಯೆಹೋವನ ಪರಮಾಧಿಕಾರವನ್ನು ಅಂಗೀಕರಿಸಿ, ನಮ್ಮ ಜೀವಿತದ ಪ್ರತಿಯೊಂದು ಅಂಶದಲ್ಲಿಯೂ ಆತನ ಚಿತ್ತವನ್ನು ಪರಿಗಣನೆಗೆ ತೆಗೆದುಕೊಳ್ಳುವಲ್ಲಿ, ಪ್ರಕಟನೆ ಪುಸ್ತಕವನ್ನು ನಾವು ಓದುವುದು ನಿಜವಾಗಿಯೂ ನಮ್ಮನ್ನು ಸಂತೋಷಿತರನ್ನಾಗಿ ಮಾಡುವುದು.
11, 12. (ಎ) ಸೈತಾನನ ಭೂವ್ಯವಸ್ಥೆಯು ಹೇಗೆ ಕಂಪಿಸಲ್ಪಟ್ಟು ನಾಶಪಡಿಸಲ್ಪಡುವುದು? (ಬಿ) ಪ್ರಕಟನೆ 7ನೆಯ ಅಧ್ಯಾಯಕ್ಕನುಸಾರ, ಆ ಸಮಯದಲ್ಲಿ ಯಾರು ‘ಮುಂದೆ ನಿಲ್ಲುವುದಕ್ಕೆ ಶಕ್ತರಾಗಿರುವರು?’
11 ಯೆಹೋವನ ಪರಮಾಧಿಕಾರಕ್ಕೆ ಆನಂದದಿಂದ ಅಧೀನರಾಗುವುದು, ವೈಯಕ್ತಿಕ ಮಟ್ಟದಲ್ಲಿ ಹಾಗೂ ಸಾರ್ವತ್ರಿಕ ಮಟ್ಟದಲ್ಲಿ ಸಂತೋಷವನ್ನು ಅನುಭವಿಸುವುದಕ್ಕೆ ಆಧಾರವಾಗಿದೆ. ಅತಿ ಬೇಗನೆ ಸಾಂಕೇತಿಕವಾದ ಒಂದು ಭೂಕಂಪವು ಸೈತಾನನ ಲೌಕಿಕ ವ್ಯವಸ್ಥೆಯ ಬುಡವನ್ನೇ ಅಲುಗಾಡಿಸಿ, ಅದನ್ನು ಸಂಪೂರ್ಣವಾಗಿ ನಾಶಮಾಡುವುದು. ದೇವರ ನ್ಯಾಯಬದ್ಧ ಪರಮಾಧಿಕಾರವನ್ನು ಪ್ರತಿನಿಧಿಸುವಂತಹ ಕ್ರಿಸ್ತನ ಸ್ವರ್ಗೀಯ ರಾಜ್ಯ ಸರಕಾರಕ್ಕೆ ಅಧೀನರಾಗಲು ನಿರಾಕರಿಸುವ ಮಾನವರಿಗೆ ಆಶ್ರಯ ಪಡೆದುಕೊಳ್ಳಲು ಸ್ಥಳವೇ ಇರುವುದಿಲ್ಲ. ಪ್ರವಾದನೆಯು ಹೇಳುವುದು: “ಇದಲ್ಲದೆ ಭೂರಾಜರೂ ಪ್ರಭುಗಳೂ ಸಹಸ್ರಾಧಿಪತಿಗಳೂ ಐಶ್ವರ್ಯವಂತರೂ ಪರಾಕ್ರಮಶಾಲಿಗಳೂ ಎಲ್ಲಾ ದಾಸರೂ ಸ್ವತಂತ್ರರೂ ಬೆಟ್ಟಗಳ ಗವಿಗಳಿಗೂ ಬಂಡೆಗಳ ಸಂದುಗಳಿಗೂ ಓಡಿಹೋಗಿ ತಮ್ಮನ್ನು ಮರೆಮಾಡಿಕೊಂಡು ಬೆಟ್ಟಗಳಿಗೂ ಬಂಡೆಗಳಿಗೂ—ನಮ್ಮ ಮೇಲೆ ಬೀಳಿರಿ, ಸಿಂಹಾಸನದ ಮೇಲೆ ಕೂತಿರುವಾತನ ಮುಖಕ್ಕೂ ಯಜ್ಞದ ಕುರಿಯಾದಾತನ ಕೋಪಕ್ಕೂ ನಮ್ಮನ್ನು ಮರೆಮಾಡಿರಿ; ಅವರ ಕೋಪವು ಕಾಣಿಸುವ ಮಹಾ ದಿನ ಬಂದದೆ; ಅದರ ಮುಂದೆ ನಿಲ್ಲುವದಕ್ಕೆ ಯಾರು ಶಕ್ತರು ಎಂದು ಹೇಳಿದರು.”—ಪ್ರಕಟನೆ 6:12, 15-17.
12 ಈ ಪ್ರಶ್ನೆಗೆ ಸಂಬಂಧಿಸಿ, ಮುಂದಿನ ಅಧ್ಯಾಯದಲ್ಲಿ, ಮಹಾ ಸಂಕಟದಿಂದ ಹೊರಬಂದು, ಮಹಾ ಸಮೂಹವನ್ನು ರಚಿಸುವಂತಹ ಜನರು “ಸಿಂಹಾಸನದ ಮುಂದೆಯೂ ಯಜ್ಞದ ಕುರಿಯಾದಾತನ ಮುಂದೆಯೂ ನಿಂತಿರು”ವುದನ್ನು ಅಪೊಸ್ತಲ ಯೋಹಾನನು ವರ್ಣಿಸುತ್ತಾನೆ. (ಪ್ರಕಟನೆ 7:9, 14, 15) ಅವರು ದೇವರ ಸಿಂಹಾಸನದ ಮುಂದೆ ನಿಂತುಕೊಂಡಿರುವುದು, ಅವರು ಆ ಸಿಂಹಾಸನವನ್ನು ಗುರುತಿಸುತ್ತಾರೆ ಹಾಗೂ ಯೆಹೋವನ ಪರಮಾಧಿಕಾರಕ್ಕೆ ಸಂಪೂರ್ಣವಾಗಿ ಅಧೀನರಾಗುತ್ತಾರೆ ಎಂಬುದನ್ನು ತೋರಿಸುತ್ತದೆ. ಆದುದರಿಂದ ಅವರು ಅಂಗೀಕೃತ ಸ್ಥಾನದಲ್ಲಿ ನಿಂತಿದ್ದಾರೆ.
13. (ಎ) ಭೂನಿವಾಸಿಗಳಲ್ಲಿ ಅಧಿಕಾಂಶ ಮಂದಿ ಯಾವುದನ್ನು ಆರಾಧಿಸುತ್ತಾರೆ, ಮತ್ತು ಅವರ ಹಣೆಯ ಮೇಲೆ ಅಥವಾ ಬಲಗೈಯ ಮೇಲಿರುವ ಗುರುತಿನಿಂದ ಏನು ಸಂಕೇತಿಸಲ್ಪಡುತ್ತದೆ? (ಬಿ) ಹಾಗಾದರೆ ತಾಳ್ಮೆಯು ಏಕೆ ಅತ್ಯಗತ್ಯವಾಗಿದೆ?
13 ಇನ್ನೊಂದು ಕಡೆಯಲ್ಲಿ, ಭೂನಿವಾಸಿಗಳಲ್ಲಿ ಉಳಿದವರು, ಕಾಡುಮೃಗದಿಂದ ಸಂಕೇತಿಸಲ್ಪಟ್ಟ ಸೈತಾನನ ರಾಜಕೀಯ ವ್ಯವಸ್ಥೆಯನ್ನು ಆರಾಧಿಸುತ್ತಿರುವುದನ್ನು 13ನೆಯ ಅಧ್ಯಾಯವು ವರ್ಣಿಸುತ್ತದೆ. ಅವರು ತಮ್ಮ “ಹಣೆಯ” ಮೇಲೆ ಅಥವಾ ತಮ್ಮ “ಬಲಗೈಯ” ಮೇಲೆ ಒಂದು ಗುರುತನ್ನು ಹಾಕಿಸಿಕೊಳ್ಳುತ್ತಾರೆ ಮತ್ತು ಇದು ಸೈತಾನನ ವ್ಯವಸ್ಥೆಗಾಗಿರುವ ಅವರ ಮಾನಸಿಕ ಹಾಗೂ ಭೌತಿಕ ಬೆಂಬಲವನ್ನು ತೋರಿಸುತ್ತದೆ. (ಪ್ರಕಟನೆ 13:1-8, 16, 17) ತದನಂತರ 14ನೆಯ ಅಧ್ಯಾಯವು ಕೂಡಿಸುವುದು: “ಯಾವನಾದರೂ ಮೊದಲನೆಯ ಮೃಗಕ್ಕೂ ಅದರ ವಿಗ್ರಹಕ್ಕೂ ನಮಸ್ಕಾರಮಾಡಿ ತನ್ನ ಹಣೆಯ ಮೇಲಾಗಲಿ ಕೈಯ ಮೇಲಾಗಲಿ ಗುರುತು ಹಾಕಿಸಿಕೊಂಡರೆ ಅವನು ಸಹ ದೇವರ ಕೋಪವೆಂಬ ಪಾತ್ರೆಯಲ್ಲಿ ಏನೂ ಬೆರಸದೆ ಹಾಕಿದ ದೇವರ ರೌದ್ರವೆಂಬ ದ್ರಾಕ್ಷಾರಸವನ್ನು ಕುಡಿಯುವನು; . . . ಇದರಲ್ಲಿ ದೇವರ ಆಜ್ಞೆಗಳನ್ನೂ ಯೇಸುವಿನ ಮೇಲಣ ನಂಬಿಕೆಯನ್ನೂ ಕೈಕೊಂಡು ನಡೆಯುತ್ತಿರುವ ದೇವಜನರ ತಾಳ್ಮೆಯು ತೋರಿಬರುತ್ತದೆ.” (ಪ್ರಕಟನೆ 14:9, 10, 12) ಸಮಯ ಕಳೆದಂತೆ, ಪ್ರಶ್ನೆಯು ಹೆಚ್ಚಾಗಿ ಹೀಗಿರುವುದು: ನೀವು ಯಾರಿಗೆ ಬೆಂಬಲ ನೀಡುತ್ತೀರಿ? ಯೆಹೋವನಿಗೆ ಮತ್ತು ಆತನ ಪರಮಾಧಿಕಾರಕ್ಕೊ ಅಥವಾ ಕಾಡುಮೃಗದಿಂದ ಸಂಕೇತಿಸಲ್ಪಟ್ಟ ದೇವಭಕ್ತಿಯಿಲ್ಲದ ರಾಜಕೀಯ ವ್ಯವಸ್ಥೆಗೊ? ಯಾರು ಕಾಡುಮೃಗದ ಗುರುತನ್ನು ಪಡೆದುಕೊಳ್ಳದೆ, ಯೆಹೋವನ ಪರಮಾಧಿಕಾರಕ್ಕೆ ಅಧೀನತೆ ತೋರಿಸುತ್ತಾ ನಂಬಿಗಸ್ತಿಕೆಯಿಂದ ತಾಳಿಕೊಳ್ಳುವರೋ ಅವರು ಸಂತೋಷಿತರು.
14, 15. ಪ್ರಕಟನೆಯ ಅರ್ಮಗೆದೋನ್ನ ವರ್ಣನೆಗೆ ಯಾವ ಸಂದೇಶವು ತಡೆಯನ್ನುಂಟುಮಾಡುತ್ತದೆ, ಮತ್ತು ಇದು ನಮಗೆ ಯಾವ ಅರ್ಥದಲ್ಲಿದೆ?
14 “ಭೂಲೋಕದಲ್ಲೆಲ್ಲೆಲ್ಲಿಯೂ” ಇರುವ ರಾಜರು ಶತ್ರುಪಕ್ಷದಲ್ಲಿದ್ದಾರೆ, ಮತ್ತು ಪರಮಾಧಿಕಾರದ ವಾದಾಂಶದ ವಿಷಯದಲ್ಲಿ ಯೆಹೋವನನ್ನು ಎದುರಿಸಲು ಮುನ್ನುಗ್ಗುತ್ತಿದ್ದಾರೆ. ಇದರ ಪರಮಾವಧಿಯು ಅರ್ಮಗೆದೋನ್, ಅಂದರೆ “ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧ”ವೇ ಆಗಿದೆ. (ಪ್ರಕಟನೆ 16:14, 16) ಯೆಹೋವನೊಂದಿಗೆ ಯುದ್ಧ ನಡೆಸಲಿಕ್ಕಾಗಿ ಒಟ್ಟುಗೂಡಿಸಲ್ಪಡುವ ಭೂರಾಜರ ವರ್ಣನೆಯ ಮಧ್ಯದಲ್ಲಿ, ಈ ವರ್ಣನೆಗಿಂತ ತೀರ ಭಿನ್ನವಾದ, ಕುತೂಹಲವನ್ನು ಕೆರಳಿಸುವಂತಹ ಒಂದು ವಾಕ್ಯವು ಒಳಸೇರಿಸಲ್ಪಟ್ಟಿದೆ. ಯೇಸು ತಾನೇ ಈ ದರ್ಶನದ ಮಧ್ಯೆ ಅಡ್ಡಬಂದು ಹೀಗೆ ಹೇಳುತ್ತಾನೆ: “ಇಗೋ, ಕಳ್ಳನು ಬರುವಂತೆ ಬರುತ್ತೇನೆ; ತಾನು ನಿರ್ವಾಣನಾಗಿ ತಿರುಗಾಡಿ ಅವಮಾನಕ್ಕೆ ಗುರಿಯಾದೇನೆಂದು ಎಚ್ಚರವಾಗಿದ್ದು ತನ್ನ ವಸ್ತ್ರಗಳನ್ನು ಕಾಪಾಡಿಕೊಳ್ಳುವವನು ಧನ್ಯನು.” (ಪ್ರಕಟನೆ 16:15) ಒಂದುವೇಳೆ ದೇವಾಲಯದ ಲೇವ್ಯ ಕಾವಲುಗಾರರು ತಮ್ಮ ಕಾವಲು ಕಾಯುವ ಅವಧಿಯಲ್ಲಿ ನಿದ್ರಿಸುತ್ತಿರುವುದು ಕಂಡುಬರುತ್ತಿದ್ದಲ್ಲಿ, ಅವರ ವಸ್ತ್ರಗಳನ್ನು ತೆಗೆದು ಸಾರ್ವಜನಿಕವಾಗಿ ಅವರನ್ನು ಅವಮಾನಕ್ಕೆ ಗುರಿಪಡಿಸಲಾಗುತ್ತಿತ್ತು. ಈ ಮೇಲಿನ ವರ್ಣನೆಯು ಅಂತಹ ಕಾವಲುಗಾರರಿಗೆ ಸೂಚಿತವಾಗಿದ್ದಿರಬಹುದು.
15 ಇದರ ಸಂದೇಶವು ತುಂಬ ಸ್ಪಷ್ಟವಾಗಿದೆ: ನಾವು ಅರ್ಮಗೆದೋನನ್ನು ಪಾರಾಗಲು ಬಯಸುವಲ್ಲಿ, ಆತ್ಮಿಕವಾಗಿ ಎಚ್ಚರವಾಗಿರಬೇಕು ಮತ್ತು ಯೆಹೋವ ದೇವರ ನಂಬಿಗಸ್ತ ಸಾಕ್ಷಿಗಳೋಪಾದಿ ನಮ್ಮನ್ನು ಗುರುತಿಸುವ ಸಾಂಕೇತಿಕ ವಸ್ತ್ರಗಳನ್ನು ಧರಿಸಿಕೊಂಡಿರಬೇಕು. ನಾವು ಆತ್ಮಿಕವಾಗಿ ಜಡರಾಗಿರದೆ, ದೇವರ ಸ್ಥಾಪಿತ ರಾಜ್ಯದ “ನಿತ್ಯವಾದ ಶುಭವರ್ತಮಾನ”ವನ್ನು ಸಾರುವುದರಲ್ಲಿ ಹುರುಪಿನಿಂದ ಪಾಲ್ಗೊಳ್ಳುತ್ತಾ, ಎಡೆಬಿಡದೆ ಮುಂದುವರಿಯುವಲ್ಲಿ ನಾವು ಸಂತೋಷದಿಂದಿರುವೆವು.—ಪ್ರಕಟನೆ 14:6.
‘ಈ ಪ್ರವಾದನೆಯ ಮಾತುಗಳನ್ನು ಕೈಕೊಂಡು ನಡೆಯುವವನು ಧನ್ಯನು’
16. ಪ್ರಕಟನೆ ಪುಸ್ತಕದ ಕೊನೆಯ ಅಧ್ಯಾಯಗಳು ಏಕೆ ಸಂತೋಷಕ್ಕೆ ವಿಶೇಷ ಕಾರಣವಾಗಿವೆ?
16 ಪ್ರಕಟನೆ ಪುಸ್ತಕದ ಹರ್ಷಚಿತ್ತ ವಾಚಕರು, ನಮ್ಮ ಮಹಿಮಾಯುತವಾದ ನಿರೀಕ್ಷೆಯನ್ನು ವರ್ಣಿಸುವಂತಹ ಕೊನೆಯ ಅಧ್ಯಾಯಗಳನ್ನು ಓದುವಾಗ, ಆನಂದದಿಂದ ಪುಳಕಿತರಾಗಸಾಧ್ಯವಿದೆ. ಒಂದು ನೂತನಾಕಾಶಮಂಡಲ ಮತ್ತು ನೂತನ ಭೂಮಂಡಲ, ಅಂದರೆ, ಒಂದು ನೀತಿಯ ಸ್ವರ್ಗೀಯ ರಾಜ್ಯ ಸರಕಾರವು, ಶುದ್ಧೀಕರಿಸಲ್ಪಟ್ಟ ಒಂದು ಹೊಸ ಮಾನವ ಸಮಾಜದ ಮೇಲೆ, “ಸರ್ವಶಕ್ತನಾದ ಯೆಹೋವ ದೇವರಿಗೆ” ಸ್ತುತಿಯು ಸಲ್ಲುವಂತಹ ರೀತಿಯಲ್ಲಿ ಆಳ್ವಿಕೆ ನಡಿಸುವುದೇ ಈ ನಿರೀಕ್ಷೆಯಾಗಿದೆ. (ಪ್ರಕಟನೆ 21:22) ಅದ್ಭುತಕರವಾದ ದರ್ಶನಗಳ ಸರಣಿಯು ಮುಕ್ತಾಯಗೊಂಡಾಗ, ದೇವದೂತ ಸಂದೇಶವಾಹಕನು ಯೋಹಾನನಿಗೆ ಹೇಳಿದ್ದು: “ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ; ಪ್ರವಾದಿಗಳ ಆತ್ಮಗಳನ್ನು ಪ್ರೇರೇಪಿಸುವ ದೇವರಾದ ಕರ್ತನು ಬೇಗನೆ ಸಂಭವಿಸಬೇಕಾಗಿರುವ ಸಂಗತಿಗಳನ್ನು ತನ್ನ ದಾಸರಿಗೆ ತಿಳಿಯಪಡಿಸುವದಕ್ಕಾಗಿ ತನ್ನ ದೂತನನ್ನು ಕಳುಹಿಸಿಕೊಟ್ಟನು. ಇಗೋ, ಬೇಗನೆ ಬರುತ್ತೇನೆ. ಈ ಪುಸ್ತಕದಲ್ಲಿ [“ಸುರುಳಿಯಲ್ಲಿ,” NW] ಬರೆದಿರುವ ಪ್ರವಾದನೆಯ ಮಾತುಗಳನ್ನು ಕೈಕೊಂಡು ನಡೆಯುವವನು ಧನ್ಯನು.”—ಪ್ರಕಟನೆ 22:6, 7.
17. (ಎ) ಪ್ರಕಟನೆ 22:6ರಲ್ಲಿ ಯಾವ ಆಶ್ವಾಸನೆಯನ್ನು ಕೊಡಲಾಗಿದೆ? (ಬಿ) ನಾವು ಯಾವುದರಿಂದ ದೂರವಿರಲು ಎಚ್ಚರವಾಗಿರತಕ್ಕದ್ದು?
17 ಇದೇ ರೀತಿಯ ಮಾತುಗಳು ಈ “ಸುರುಳಿಯ” ಆರಂಭದಲ್ಲಿಯೂ ಕಂಡುಬರುತ್ತವೆ ಎಂಬುದನ್ನು ಪ್ರಕಟನೆಯ ಹರ್ಷಚಿತ್ತ ವಾಚಕರು ಜ್ಞಾಪಿಸಿಕೊಳ್ಳುವರು. (ಪ್ರಕಟನೆ 1:1, 3) ಬೈಬಲಿನ ಈ ಕೊನೆಯ ಪುಸ್ತಕದಲ್ಲಿ ಪ್ರವಾದಿಸಲ್ಪಟ್ಟಿರುವ ಎಲ್ಲ “ಸಂಗತಿಗಳು,” “ಬೇಗನೆ ಸಂಭವಿಸು”ವವು ಎಂದು ಈ ಮಾತುಗಳು ನಮಗೆ ಆಶ್ವಾಸನೆ ನೀಡುತ್ತವೆ. ನಾವು ಅಂತ್ಯಕಾಲದ ಎಂತಹ ಸಮಯಾವಧಿಯಲ್ಲಿ ಜೀವಿಸುತ್ತಿದ್ದೇವೆಂದರೆ, ಪ್ರಕಟನೆ ಪುಸ್ತಕದಲ್ಲಿ ಮುಂತಿಳಿಸಲ್ಪಟ್ಟಿರುವ ಅರ್ಥಗರ್ಭಿತ ಘಟನೆಗಳು, ಖಂಡಿತವಾಗಿಯೂ ಅತಿ ಬೇಗನೆ ಒಂದಾದ ನಂತರ ಇನ್ನೊಂದರಂತೆ ಸಂಭವಿಸಲೇಬೇಕು. ಆದುದರಿಂದ, ಸೈತಾನನ ವ್ಯವಸ್ಥೆಯಲ್ಲಿ ಸ್ಥಿರವಾಗಿ ಕಂಡುಬರುವ ಯಾವುದೇ ವಿಚಾರವು ನಮ್ಮನ್ನು ನಿದ್ರಾವಶರನ್ನಾಗಿ ಮಾಡಬಾರದು. ಜಾಗರೂಕ ವಾಚಕನು, ಏಷ್ಯಾದ ಏಳು ಸಭೆಗಳಿಗೆ ಕಳುಹಿಸಲ್ಪಟ್ಟ ಎಲ್ಲ ಸಂದೇಶಗಳಲ್ಲಿ ಕೊಡಲ್ಪಟ್ಟಿರುವ ಎಚ್ಚರಿಕೆಯ ಮಾತುಗಳನ್ನು ಜ್ಞಾಪಕದಲ್ಲಿಟ್ಟುಕೊಳ್ಳುವನು ಮತ್ತು ಪ್ರಾಪಂಚಿಕತೆ, ವಿಗ್ರಹಾರಾಧನೆ, ಅನೈತಿಕತೆ, ನಿರಾಸಕ್ತಿ, ಮತ್ತು ಧರ್ಮಭ್ರಷ್ಟ ಪಂಥಾಭಿಮಾನದ ಪಾಶಗಳಿಂದ ದೂರವಿರುವನು.
18, 19. (ಎ) ಯೇಸು ಇನ್ನೂ ಬರಲಿಕ್ಕಿದ್ದಾನೆ ಏಕೆ, ಮತ್ತು ಯೋಹಾನನಿಂದ ವ್ಯಕ್ತಪಡಿಸಲ್ಪಟ್ಟ ಯಾವ ನಿರೀಕ್ಷೆಯಲ್ಲಿ ನಾವು ಪಾಲ್ಗೊಳ್ಳುತ್ತೇವೆ? (ಬಿ) ಯಾವ ಉದ್ದೇಶಕ್ಕಾಗಿ ಯೆಹೋವನು ಇನ್ನೂ ‘ಬರಲಿಕ್ಕಿದ್ದಾನೆ?’
18 ಪ್ರಕಟನೆ ಪುಸ್ತಕದಲ್ಲಿ, “ಬೇಗನೆ ಬರುತ್ತೇನೆ” ಎಂದು ಯೇಸು ಅನೇಕ ಬಾರಿ ಹೇಳುತ್ತಾನೆ. (ಪ್ರಕಟನೆ 2:16; 3:11; 22:7, 20ಎ) ಮಹಾ ಬಾಬೆಲಿನ ಮೇಲೆ, ಸೈತಾನನ ರಾಜಕೀಯ ವ್ಯವಸ್ಥೆಯ ಮೇಲೆ ಮತ್ತು ಮೆಸ್ಸೀಯ ಸಂಬಂಧಿತ ರಾಜ್ಯದಿಂದ ಈಗ ವ್ಯಕ್ತಪಡಿಸಲ್ಪಟ್ಟಿರುವ ಯೆಹೋವನ ಪರಮಾಧಿಕಾರಕ್ಕೆ ಅಧೀನರಾಗಲು ನಿರಾಕರಿಸುವ ಎಲ್ಲ ಮಾನವರ ಮೇಲೆ ನ್ಯಾಯತೀರ್ಪನ್ನು ವಿಧಿಸಲಿಕ್ಕಾಗಿ ಅವನು ಇನ್ನೂ ಬರಲಿಕ್ಕಿದ್ದಾನೆ. “ಹಾಗೆಯೇ ಆಗಲಿ; ಕರ್ತನಾದ ಯೇಸುವೇ, ಬಾ” ಎಂದು ಉದ್ಗರಿಸಿದಂತಹ ಅಪೊಸ್ತಲ ಯೋಹಾನನ ಧ್ವನಿಯೊಂದಿಗೆ ನಾವು ಧ್ವನಿಗೂಡಿಸುವೆವು.—ಪ್ರಕಟನೆ 22:20ಬಿ.
19 ಯೆಹೋವನು ತಾನೇ ಹೇಳುವುದು: “ಇಗೋ, ಬೇಗ ಬರುತ್ತೇನೆ; ನಾನು ಪ್ರತಿಯೊಬ್ಬನಿಗೆ ಅವನವನ ನಡತೆಯ ಪ್ರಕಾರ ಕೊಡತಕ್ಕ ಪ್ರತಿಫಲವು ನನ್ನ ಕೈಯಲ್ಲಿ ಅದೆ.” (ಪ್ರಕಟನೆ 22:12) ವಾಗ್ದಾನಿಸಲ್ಪಟ್ಟ “ನೂತನಾಕಾಶಮಂಡಲ” ಅಥವಾ “ನೂತನ ಭೂಮಂಡಲದ” ಭಾಗವಾಗಿ ನಾವು ಅಂತ್ಯರಹಿತ ಜೀವನದ ಮಹಿಮಾನ್ವಿತ ಬಹುಮಾನವನ್ನು ಎದುರುನೋಡುತ್ತಿರುವಾಗ, ಎಲ್ಲ ಪ್ರಾಮಾಣಿಕ ಹೃದಯದ ಜನರಿಗೆ ಈ ಕೆಳಗಿನ ಆಮಂತ್ರಣವನ್ನು ನೀಡುವ ಕೆಲಸದಲ್ಲಿ ಹುರುಪಿನಿಂದ ಪಾಲ್ಗೊಳ್ಳೋಣ: “ಬಾ ಅನ್ನಲಿ. ಬಾಯಾರಿದವನು ಬರಲಿ. ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ.” (ಪ್ರಕಟನೆ 22:17) ಅವರು ಸಹ ಪ್ರೇರಿತವಾದ ಹಾಗೂ ಪ್ರೇರಿಸುವಂತಹ ಪ್ರಕಟನೆ ಪುಸ್ತಕದ ಹರ್ಷಚಿತ್ತ ವಾಚಕರಾಗಲಿ!
[ಅಧ್ಯಯನ ಪ್ರಶ್ನೆಗಳು]
a ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ! ಎಂಬ ಪುಸ್ತಕದ 28-9, 136 (ಪಾದಟಿಪ್ಪಣಿ)ನೆಯ ಪುಟಗಳನ್ನು ನೋಡಿ.
ಪುನರ್ವಿಮರ್ಶೆಗಾಗಿರುವ ಅಂಶಗಳು
◻ ಪ್ರಕಟನೆ ಪುಸ್ತಕವನ್ನು ತಲಪಿಸಲಿಕ್ಕಾಗಿ ಯೆಹೋವನು ಯಾವ ಮಾಧ್ಯಮವನ್ನು ಉಪಯೋಗಿಸಿದನು, ಮತ್ತು ನಾವು ಇದರಿಂದ ಯಾವ ಪಾಠವನ್ನು ಕಲಿತುಕೊಳ್ಳಬಲ್ಲೆವು?
◻ ಏಷ್ಯಾದ ಏಳು ಸಭೆಗಳಿಗೆ ಕಳುಹಿಸಲ್ಪಟ್ಟ ಸಂದೇಶಗಳನ್ನು ಓದಲು ನಾವು ಏಕೆ ಹರ್ಷಚಿತ್ತರಾಗಿರಬೇಕು?
◻ “ಶೋಧನೆಯ ಸಮಯದಲ್ಲಿ” ನಾವು ಹೇಗೆ ಕಾಪಾಡಲ್ಪಡಸಾಧ್ಯವಿದೆ?
◻ ಪ್ರಕಟನೆಯನ್ನು ಒಳಗೊಂಡಿರುವ ಸುರುಳಿಯ ಮಾತುಗಳನ್ನು ನಾವು ಕೈಕೊಂಡು ನಡೆಯುವಲ್ಲಿ ಯಾವ ಸಂತೋಷವು ನಮ್ಮದಾಗುವುದು?
[ಪುಟ 15 ರಲ್ಲಿರುವ ಚಿತ್ರ]
ಶುಭವರ್ತಮಾನಗಳ ಮೂಲನನ್ನು ಗುರುತಿಸುವವರು ಸಂತೋಷಭರಿತ ಜನರಾಗಿದ್ದಾರೆ
[ಪುಟ 18 ರಲ್ಲಿರುವ ಚಿತ್ರ]
ಎಚ್ಚರವಾಗಿರುವಂತಹ ವ್ಯಕ್ತಿಯು ಸಂತೋಷಿತನು