ಅಪಾಕಲಿಪ್ಸ್ನಿಂದ ಬರುವ “ಶುಭವರ್ತಮಾನಗಳು”
“ಮತ್ತೊಬ್ಬ ದೇವದೂತನು ಆಕಾಶಮಧ್ಯದಲ್ಲಿ ಹಾರಿಹೋಗುವದನ್ನು ಕಂಡೆನು. ಭೂನಿವಾಸಿಗಳಾಗಿರುವ ಸಕಲ ಜನಾಂಗ ಕುಲ ಪ್ರಜೆಗಳವರಿಗೂ . . . ಸಾರಿಹೇಳುವದಕ್ಕೆ ನಿತ್ಯವಾದ ಶುಭವರ್ತಮಾನವು ಅವನಲ್ಲಿತ್ತು.”—ಪ್ರಕಟನೆ 14:6.
1. ಯೆಹೋವನ ಸಾಕ್ಷಿಗಳು ಅಪಾಕಲಿಪ್ಸ್ ಪುಸ್ತಕವು ದೈವಪ್ರೇರಣೆಯಿಂದ ಬರೆಯಲ್ಪಟ್ಟಿದೆ ಎಂಬುದನ್ನು ನಂಬುತ್ತಾರಾದರೂ, ಅವರು ಏಕೆ “ಪ್ರಳಯಸೂಚಕ (ಅಪಾಕಲಿಪ್ಟಿಕ್) ಪಂಥ”ಕ್ಕೆ ಸೇರಿದವರಾಗಿರುವುದಿಲ್ಲ?
ತಮ್ಮ ವಿರುದ್ಧ ಮಾಡಲ್ಪಡುವ ಆಪಾದನೆಗಳಿಗೆ ವ್ಯತಿರಿಕ್ತವಾಗಿ, ಯೆಹೋವನ ಸಾಕ್ಷಿಗಳು ಒಂದು “ಪ್ರಳಯಸೂಚಕ (ಅಪಾಕಲಿಪ್ಟಿಕ್) ಪಂಥ”ಕ್ಕಾಗಲಿ, “ಪ್ರಳಯದಿನದ ಕುಪಂಥ”ಕ್ಕಾಗಲಿ ಸೇರಿದವರಲ್ಲ. ಆದರೂ, ಅವರು ಅಪಾಕಲಿಪ್ಸನ್ನು ಅಥವಾ ಪ್ರಕಟನೆ ಪುಸ್ತಕವನ್ನು ದೇವರ ಪ್ರೇರಿತ ವಾಕ್ಯದ ಭಾಗವಾಗಿ ಅಂಗೀಕರಿಸುತ್ತಾರೆ. ಪ್ರಕಟನೆ ಪುಸ್ತಕವು ದುಷ್ಟರ ವಿರುದ್ಧವಾದ ನ್ಯಾಯತೀರ್ಪಿನ ಸಂದೇಶಗಳನ್ನು ಒಳಗೊಂಡಿದೆ ಎಂಬುದೇನೋ ನಿಜ. ಆದರೆ ದೇವರ ಸೇವಕರು ತಮ್ಮ ಸಾರ್ವಜನಿಕ ಸಾಕ್ಷಿಕಾರ್ಯದಲ್ಲಿ, ಅಪಾಕಲಿಪ್ಸ್, ಅಥವಾ ಪ್ರಕಟನೆ ಪುಸ್ತಕದಲ್ಲಿ ಒಳಗೂಡಿರುವುದನ್ನೂ ಸೇರಿಸಿ, ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ ಅದ್ಭುತಕರ ನಿರೀಕ್ಷೆಯ ಮೇಲೆ ತಮ್ಮ ಗಮನವನ್ನು ಹೆಚ್ಚಾಗಿ ಕೇಂದ್ರೀಕರಿಸುತ್ತಾರೆ. ಹೀಗೆ, ಇದರಲ್ಲಿ ಕಂಡುಬರುವ ಪ್ರವಾದನ ಮಾತುಗಳಿಗೆ ಅವರು ಯಾವ ವಿಚಾರವನ್ನೂ ಕೂಡಿಸುವುದಿಲ್ಲ ಅಥವಾ ಅವುಗಳಿಂದ ಯಾವ ವಿಚಾರವನ್ನೂ ತೆಗೆಯುವುದಿಲ್ಲ.—ಪ್ರಕಟನೆ 22:18, 19.
ಶುಭವರ್ತಮಾನಗಳ ಘೋಷಕರು
2. ಯೆಹೋವನ ಸಾಕ್ಷಿಗಳು ತಮ್ಮ ಸಾರುವ ಕೆಲಸದಲ್ಲಿ ಹೆಚ್ಚಾಗಿ ಉಪಯೋಗಿಸುವ ಕೆಲವು ಶಾಸ್ತ್ರವಚನಗಳು ಯಾವುವು?
2 ಯೆಹೋವನ ಸಾಕ್ಷಿಗಳ ಸಾರ್ವಜನಿಕ ಶುಶ್ರೂಷೆಗಾಗಿ ಅನೇಕವೇಳೆ ಉಪಯೋಗಿಸಲ್ಪಡುವ ಶಾಸ್ತ್ರೀಯ ಆಧಾರವು ಯೇಸುವಿನ ಹೇಳಿಕೆಯಲ್ಲಿ ಅಡಕವಾಗಿದೆ: “ಪರಲೋಕ ರಾಜ್ಯದ ಈ ಶುಭವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.” (ಮತ್ತಾಯ 24:14, NW ಪಾದಟಿಪ್ಪಣಿ) ಹಾಗಾದರೆ “ಪರಲೋಕ ರಾಜ್ಯದ ಈ ಶುಭವಾರ್ತೆಯು” ಏನಾಗಿದೆ? ಅನೇಕ ಸಾಕ್ಷಿಗಳು, ಕ್ರಿಸ್ತನ ಸಾವಿರ ವರ್ಷದಾಳಿಕೆ ಮತ್ತು ಅವನ ರಾಜ್ಯ ಸರಕಾರ ಮತ್ತು “ಇನ್ನು” ಮರಣ, ದುಃಖ, ಹಾಗೂ ವೇದನೆಯಾಗಲಿ ‘ಇರದಂತಹ’ ಮಾನವ ಸಮಾಜವನ್ನು ಸೂಚಿಸುವ, ಪ್ರಕಟನೆ ಪುಸ್ತಕದ 20 ಮತ್ತು 21ನೆಯ ಅಧ್ಯಾಯಗಳಲ್ಲಿರುವ ವಚನಗಳನ್ನು ಉದ್ಧರಿಸುವ ಮೂಲಕ ಈ ಪ್ರಶ್ನೆಗೆ ಉತ್ತರವನ್ನು ಕೊಡುವರು.—ಪ್ರಕಟನೆ 20:6; 21:1, 4.
3. ಯೆಹೋವನ ಸಾಕ್ಷಿಗಳ ಸಾರ್ವಜನಿಕ ಶುಶ್ರೂಷೆಯು ಯಾವ ಕಾರ್ಯಾಚರಣೆಗೆ ಅನುರೂಪವಾಗಿದೆ?
3 ಈ ಶುಭವರ್ತಮಾನಗಳನ್ನು ಘೋಷಿಸುವವರೋಪಾದಿ ಯೆಹೋವನ ಸಾಕ್ಷಿಗಳು, ಯಾರ ನಿಯೋಗದ ಬಗ್ಗೆ ಪ್ರಕಟನೆ ಪುಸ್ತಕದಲ್ಲಿ ವರ್ಣಿಸಲ್ಪಟ್ಟಿದೆಯೋ ಆ ಸಾಂಕೇತಿಕ ಸ್ವರ್ಗೀಯ ಸಂದೇಶವಾಹಕನ ನಿಜ ವದನಕರಾಗಿದ್ದಾರೆ. “ಮತ್ತೊಬ್ಬ ದೇವದೂತನು ಆಕಾಶಮಧ್ಯದಲ್ಲಿ ಹಾರಿಹೋಗುವದನ್ನು ಕಂಡೆನು. ಭೂನಿವಾಸಿಗಳಾಗಿರುವ ಸಕಲ ಜನಾಂಗ ಕುಲ ಪ್ರಜೆಗಳವರಿಗೂ ಸಕಲ ಭಾಷೆಗಳನ್ನಾಡುವವರಿಗೂ ಸಾರಿಹೇಳುವದಕ್ಕೆ ನಿತ್ಯವಾದ ಶುಭವರ್ತಮಾನವು ಅವನಲ್ಲಿತ್ತು.” (ಪ್ರಕಟನೆ 14:6) “ನಿತ್ಯವಾದ ಶುಭವರ್ತಮಾನ”ದಲ್ಲಿ, “ಲೋಕದ ರಾಜ್ಯಾಧಿಕಾರವು ನಮ್ಮ ಕರ್ತನಿಗೂ ಆತನು ಅಭಿಷೇಕಿಸಿದವನಿಗೂ [ಕ್ರಿಸ್ತನಿಗೂ] ಉಂಟಾಯಿತು” ಮತ್ತು ಯೆಹೋವನು ‘ಲೋಕನಾಶಕರನ್ನು ನಾಶಮಾಡುವ’ “ಸಮಯ”ವು ಬಂದಿದೆ ಎಂಬ ಪ್ರಕಟನೆಯು ಸಹ ಒಳಗೂಡಿದೆ. (ಪ್ರಕಟನೆ 11:15, 17, 18) ನಿಜವಾಗಿಯೂ ಇದು ಶುಭವಾರ್ತೆಯಾಗಿರುವುದಿಲ್ಲವೊ?
ಪ್ರಕಟನೆಯು ನಮಗೆ ಮುಂತಿಳಿಸುವ ಪ್ರತೀಕ್ಷೆಗಳು
4. (ಎ) ಪ್ರಕಟನೆಯ 1ನೆಯ ಅಧ್ಯಾಯದಲ್ಲಿ ಯಾವ ಮೂಲಭೂತ ಸತ್ಯತೆಗಳು ತಿಳಿಸಲ್ಪಟ್ಟಿವೆ? (ಬಿ) ಶುಭವರ್ತಮಾನಗಳಿಂದ ಪ್ರಯೋಜನವನ್ನು ಪಡೆದುಕೊಳ್ಳಲು ಬಯಸುವವರಿಂದ ಏನು ಕೇಳಿಕೊಳ್ಳಲ್ಪಡುತ್ತದೆ?
4 ಮೊದಲ ಅಧ್ಯಾಯ—ಪ್ರಕಟನೆ ಪುಸ್ತಕದ ಈ ಅಧ್ಯಾಯವು ಯೆಹೋವನನ್ನು “ಆದಿಯೂ ಅಂತವೂ ವರ್ತಮಾನ ಭೂತ ಭವಿಷ್ಯತ್ಕಾಲಗಳಲ್ಲಿರುವವನೂ ಸರ್ವಶಕ್ತನೂ” ಎಂದು ಪರಿಚಯಿಸುತ್ತದೆ. ಮತ್ತು ಆತನ ಪುತ್ರನಾದ ಯೇಸು ಕ್ರಿಸ್ತನನ್ನು “ನಂಬತಕ್ಕ ಸಾಕ್ಷಿ,” “ಸತ್ತವರೊಳಗಿಂದ ಮೊದಲು ಎದ್ದುಬಂದವನು,” ಮತ್ತು “ಭೂರಾಜರ ಒಡೆಯನು” ಎಂದು ವರ್ಣಿಸುತ್ತದೆ. ಅದು ಯೇಸುವಿನ ಕುರಿತು ‘ನಮ್ಮನ್ನು ಪ್ರೀತಿಸುವವನು ಮತ್ತು ತನ್ನ ರಕ್ತದ ಮೂಲಕ ನಮ್ಮನ್ನು ಪಾಪಗಳಿಂದ ಬಿಡಿಸಿದವನು’ ಎಂದು ಸಹ ತಿಳಿಸುತ್ತದೆ. (ಪ್ರಕಟನೆ 1:5, 8) ಹೀಗೆ, ಆರಂಭದಿಂದಲೂ ಪ್ರಕಟನೆ ಪುಸ್ತಕವು ಮೂಲಭೂತವಾದ ಜೀವಸಂರಕ್ಷಕ ಸತ್ಯತೆಗಳನ್ನು ತಿಳಿಯಪಡಿಸುತ್ತದೆ. “ಭೂನಿವಾಸಿಗಳು” ಯೆಹೋವನ ಪರಮಾಧಿಕಾರವನ್ನು ಅಂಗೀಕರಿಸಿ, ಯೇಸು ಸುರಿಸಿದ ರಕ್ತದಲ್ಲಿ ನಂಬಿಕೆಯನ್ನಿಟ್ಟು, ಯೆಹೋವನೇ ಅವನನ್ನು ಪುನರುತ್ಥಾನಗೊಳಿಸಿದನು ಮತ್ತು ಕ್ರಿಸ್ತನು ಈಗ ಭೂಮಿಯ ದೇವನೇಮಿತ ಅರಸನಾಗಿದ್ದಾನೆ ಎಂಬುದನ್ನು ನಂಬಿದರೆ ಮಾತ್ರ, ತಮಗೆ ದೊರಕುವ ಶುಭವರ್ತಮಾನಗಳಿಂದ ಪ್ರಯೋಜನವನ್ನು ಪಡೆದುಕೊಳ್ಳುವರು.—ಕೀರ್ತನೆ 2:6-8.
5. ಪ್ರಕಟನೆಯ 2 ಮತ್ತು 3ನೆಯ ಅಧ್ಯಾಯಗಳಲ್ಲಿ ಕ್ರಿಸ್ತನು ಯಾವ ಪಾತ್ರದಲ್ಲಿ ಚಿತ್ರಿಸಲ್ಪಟ್ಟಿದ್ದಾನೆ?
5 ಮುಂದಿನ ಎರಡು ಅಧ್ಯಾಯಗಳು, ಯೇಸು ಕ್ರಿಸ್ತನನ್ನು ಭೂಮಿಯಲ್ಲಿರುವ ತನ್ನ ಶಿಷ್ಯರ ಸಭೆಗಳನ್ನು ನೋಡಿಕೊಳ್ಳುವ ಪ್ರೀತಿಯ ಸ್ವರ್ಗೀಯ ಮೇಲ್ವಿಚಾರಕನಾಗಿ ಚಿತ್ರಿಸುತ್ತವೆ. ಸಾ.ಶ. ಒಂದನೆಯ ಶತಮಾನದಲ್ಲಿ ಏಷ್ಯಾ ಮೈನರಿನಲ್ಲಿದ್ದ ಏಳು ಕ್ರೈಸ್ತ ಸಭೆಗಳಿಗೆ ಸಂಬೋಧಿಸಲ್ಪಟ್ಟ ಸುರುಳಿಯು, ಪ್ರೋತ್ಸಾಹವನ್ನು ಹಾಗೂ ದೃಢವಾದ ಸಲಹೆಯನ್ನು ಒಳಗೊಂಡಿತ್ತು, ಮತ್ತು ಇದು ಇಂದಿಗೂ ಅನ್ವಯವಾಗುತ್ತದೆ. ಈ ಸಭೆಗಳಿಗೆ ಕಳುಹಿಸಲ್ಪಟ್ಟ ಸಂದೇಶಗಳು ಸಾಮಾನ್ಯವಾಗಿ ‘ನಿನ್ನ ಕೃತ್ಯಗಳನ್ನು ಬಲ್ಲೆನು’ ಅಥವಾ ‘ನಿನ್ನ ಸಂಕಟವನ್ನು ಬಲ್ಲೆನು’ ಎಂಬಂತಹ ಮಾತುಗಳಿಂದ ಆರಂಭವಾಗುತ್ತವೆ. (ಪ್ರಕಟನೆ 2:2, 9) ಹೌದು, ತನ್ನ ಶಿಷ್ಯರ ಸಭೆಗಳಲ್ಲಿ ಏನು ನಡೆಯುತ್ತಿದೆ ಎಂಬುದು ಕ್ರಿಸ್ತನಿಗೆ ಚೆನ್ನಾಗಿ ಗೊತ್ತಿತ್ತು. ಅವನು ಕೆಲವರ ಪ್ರೀತಿ, ನಂಬಿಕೆ, ಶುಶ್ರೂಷೆಯಲ್ಲಿನ ಪರಿಶ್ರಮ, ತಾಳ್ಮೆ, ಮತ್ತು ತನ್ನ ಹೆಸರು ಹಾಗೂ ವಾಕ್ಯಕ್ಕಾಗಿರುವ ನಂಬಿಗಸ್ತಿಕೆಯ ಕುರಿತು ಅವರನ್ನು ಪ್ರಶಂಸಿಸಿದನು. ಇನ್ನಿತರರು ಯೆಹೋವನಿಗಾಗಿ ಮತ್ತು ಆತನ ಪುತ್ರನಿಗಾಗಿರುವ ತಮ್ಮ ಪ್ರೀತಿಯು ತಣ್ಣಗಾಗುವಂತೆ ಬಿಟ್ಟದ್ದರಿಂದ, ಅಥವಾ ಲೈಂಗಿಕ ಅನೈತಿಕತೆ, ವಿಗ್ರಹಾರಾಧನೆ, ಅಥವಾ ಧರ್ಮಭ್ರಷ್ಟ ಪಂಥಾಭಿಮಾನಕ್ಕೆ ಒಳಗಾಗಿದ್ದುದರಿಂದ ಅವರಿಗೆ ಅವನು ತಿದ್ದುಪಾಟನ್ನು ನೀಡಿದನು.
6. ನಾಲ್ಕನೆಯ ಅಧ್ಯಾಯದಲ್ಲಿ ದಾಖಲಿಸಲ್ಪಟ್ಟಿರುವ ದರ್ಶನವು, ಏನನ್ನು ಅರ್ಥಮಾಡಿಕೊಳ್ಳುವಂತೆ ಜನರಿಗೆ ಸಹಾಯ ಮಾಡುತ್ತದೆ?
6 ನಾಲ್ಕನೆಯ ಅಧ್ಯಾಯವು, ಯೆಹೋವ ದೇವರ ಸ್ವರ್ಗೀಯ ಸಿಂಹಾಸನದ ಭಯಭಕ್ತಿಪ್ರೇರಕವಾದ ದರ್ಶನವನ್ನು ಒದಗಿಸುತ್ತದೆ. ಯೆಹೋವನ ಸಾನ್ನಿಧ್ಯ ಮತ್ತು ಆತನು ಉಪಯೋಗಿಸುವ ಸ್ವರ್ಗೀಯ ಆಡಳಿತ ರಚನೆಯ ಮಹಾನ್ ವೈಭವದ ನಸುನೋಟವನ್ನು ಅದು ನಮಗೆ ನೀಡುತ್ತದೆ. ವಿಶ್ವದ ಕೇಂದ್ರದಲ್ಲಿರುವ ಸಿಂಹಾಸನದ ಸುತ್ತಲೂ ಕಿರೀಟಗಳನ್ನು ಧರಿಸಿಕೊಂಡಿರುವ ಅರಸರ ಸಿಂಹಾಸನಗಳು ಇದ್ದವು, ಮತ್ತು ಆ ಅರಸರು ಯೆಹೋವನ ಪಾದಕ್ಕೆ ಬಿದ್ದು, ಹೀಗೆ ಹೇಳುತ್ತಿದ್ದರು: “ಕರ್ತನೇ [“ಯೆಹೋವನೇ,” NW], ನಮ್ಮ ದೇವರೇ, ನೀನು ಪ್ರಭಾವ ಮಾನ ಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಸಮಸ್ತವನ್ನು ಸೃಷ್ಟಿಸಿದಾತನು ನೀನೇ; ಎಲ್ಲವು ನಿನ್ನ ಚಿತ್ತದಿಂದಲೇ ಇದ್ದವು, ನಿನ್ನ ಚಿತ್ತದಿಂದಲೇ ನಿರ್ಮಿತವಾದವು.”—ಪ್ರಕಟನೆ 4:11.
7. (ಎ) ಭೂನಿವಾಸಿಗಳು ಏನು ಮಾಡುವಂತೆ ದೇವದೂತನು ಕರೆಕೊಡುತ್ತಾನೆ? (ಬಿ) ನಮ್ಮ ಶೈಕ್ಷಣಿಕ ಕೆಲಸದ ಬಹಳ ಪ್ರಾಮುಖ್ಯವಾದ ಭಾಗವು ಯಾವುದಾಗಿದೆ?
7 ಇಂದಿನ ಜನರಿಗೆ ಇದು ಏನನ್ನಾದರೂ ಅರ್ಥೈಸುತ್ತದೋ? ಹೌದು. ಸಹಸ್ರವರ್ಷದ ರಾಜ್ಯದ ಕೆಳಗೆ ಅವರು ಜೀವಿಸಲು ಬಯಸುವಲ್ಲಿ, ‘ಆಕಾಶಮಧ್ಯದಲ್ಲಿ ಹಾರುತ್ತಿರುವ ದೇವದೂತನು’ ಏನನ್ನು ಘೋಷಿಸುತ್ತಾನೋ ಅದಕ್ಕೆ ಗಮನ ಕೊಡಬೇಕು: “ನೀವೆಲ್ಲರು ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಿರಿ, ಆತನು ನ್ಯಾಯತೀರ್ಪುಮಾಡುವ ಗಳಿಗೆಯು ಬಂದಿದೆ.” (ಪ್ರಕಟನೆ 14:6, 7) ಯೆಹೋವನ ಸಾಕ್ಷಿಗಳು ಕೈಕೊಳ್ಳುವ ಬೈಬಲ್ ಶೈಕ್ಷಣಿಕ ಕೆಲಸದ ಪ್ರಮುಖ ಉದ್ದೇಶಗಳಲ್ಲಿ ಒಂದು, ಯೆಹೋವನ ಬಗ್ಗೆ ತಿಳಿದುಕೊಳ್ಳುವಂತೆ, ಆತನನ್ನು ಆರಾಧಿಸುವಂತೆ, ಆತನೇ ಸೃಷ್ಟಿಕರ್ತನು ಎಂಬುದನ್ನು ಅಂಗೀಕರಿಸುವಂತೆ, ಮತ್ತು ಆತನ ನೀತಿಯ ಪರಮಾಧಿಕಾರಕ್ಕೆ ಮನಃಪೂರ್ವಕವಾಗಿ ಅಧೀನರಾಗುವಂತೆ “ಭೂನಿವಾಸಿಗಳಿಗೆ” ಸಹಾಯ ಮಾಡುವುದೇ ಆಗಿದೆ.
ಮಾನಕ್ಕೆ ಅರ್ಹವಾದ ಯಜ್ಞದ ಕುರಿ
8. (ಎ) ಕ್ರಿಸ್ತನು 5 ಮತ್ತು 6ನೆಯ ಅಧ್ಯಾಯಗಳಲ್ಲಿ ಹೇಗೆ ಚಿತ್ರಿಸಲ್ಪಟ್ಟಿದ್ದಾನೆ? (ಬಿ) ಶುಭವರ್ತಮಾನಗಳಿಗೆ ಕಿವಿಗೊಡುವವರೆಲ್ಲರೂ ಈ ದರ್ಶನದಿಂದ ಏನನ್ನು ಕಲಿತುಕೊಳ್ಳಸಾಧ್ಯವಿದೆ?
8 ಮುಂದಿನ 5 ಮತ್ತು 6ನೆಯ ಅಧ್ಯಾಯಗಳು, ಯೇಸು ಕ್ರಿಸ್ತನನ್ನು ಏಳು ಮುದ್ರೆಗಳಿದ್ದ ಒಂದು ಸುರುಳಿಯನ್ನು ತೆರೆಯಲು ಅರ್ಹನಾಗಿ ಕಂಡುಬಂದ ಒಂದು ಯಜ್ಞದ ಕುರಿಮರಿಯೋಪಾದಿ ಚಿತ್ರಿಸುತ್ತದೆ. ಹೀಗೆ ಅದು ನಮ್ಮ ದಿನದಲ್ಲಿ ಸಂಭವಿಸುತ್ತಿರುವ ಘಟನೆಗಳನ್ನು ಸಾಂಕೇತಿಕ ಭಾಷೆಯಲ್ಲಿ ಪ್ರಕಟಪಡಿಸುತ್ತಿದೆ. (ಯೋಹಾನ 1:29ನ್ನು ಹೋಲಿಸಿರಿ.) ಈ ಸಾಂಕೇತಿಕ ಕುರಿಮರಿಗೆ ಸ್ವರ್ಗೀಯ ಧ್ವನಿಗಳು ಹೀಗೆ ಹೇಳುತ್ತವೆ: “ನೀನು ಸುರುಳಿಯನ್ನು ತೆಗೆದುಕೊಂಡು ಅದರ ಮುದ್ರೆಗಳನ್ನು ಒಡೆಯುವದಕ್ಕೆ ಯೋಗ್ಯನೇ; ನೀನು ಯಜ್ಞಾರ್ಪಿತನಾಗಿ ನಿನ್ನ ರಕ್ತದಿಂದ ಸಕಲ ಕುಲ ಭಾಷೆ ಪ್ರಜೆ ಜನಾಂಗಗಳವರಿಂದ ಮನುಷ್ಯರನ್ನು ದೇವರಿಗಾಗಿ ಕೊಂಡುಕೊಂಡಿ; ಅವರನ್ನು ನಮ್ಮ ದೇವರಿಗೋಸ್ಕರ ರಾಜ್ಯವನ್ನಾಗಿಯೂ ಯಾಜಕರನ್ನಾಗಿಯೂ ಮಾಡಿದಿ; ಅವರು ಭೂಮಿಯ ಮೇಲೆ [ರಾಜರೋಪಾದಿ] ಆಳುವರು.” (ಪ್ರಕಟನೆ 5:9, 10) ಕ್ರಿಸ್ತನಿಂದ ಸುರಿಸಲ್ಪಟ್ಟ ರಕ್ತದ ಆಧಾರದ ಮೇಲೆ, ಎಲ್ಲ ಮೂಲಗಳಿಂದ ಬಂದ ಕೆಲವು ಮಾನವರು, ಅವನೊಂದಿಗೆ ಸ್ವರ್ಗದಲ್ಲಿ ‘ಭೂಮಿಯ ಮೇಲೆ [ರಾಜರೋಪಾದಿ] ಆಳಲಿಕ್ಕಾಗಿ’ ಕರೆಯಲ್ಪಟ್ಟಿದ್ದಾರೆ ಎಂದು ಈ ದರ್ಶನವು ಕಲಿಸುತ್ತದೆ. (ಪ್ರಕಟನೆ 1:5, 6ನ್ನು ಹೋಲಿಸಿರಿ.) ಅವರ ಸೀಮಿತ ಸಂಖ್ಯೆಯು ಪ್ರಕಟನೆ ಪುಸ್ತಕದಲ್ಲಿ ಮುಂದೆ ತಿಳಿಸಲ್ಪಟ್ಟಿದೆ.
9. ಆರನೆಯ ಅಧ್ಯಾಯದಲ್ಲಿ ಕ್ರಿಸ್ತನು ಹೇಗೆ ಪರಿಚಯಿಸಲ್ಪಟ್ಟಿದ್ದಾನೆ?
9 ಇನ್ನೊಂದು ದರ್ಶನದಲ್ಲಿ ಕ್ರಿಸ್ತನು, ಕಿರೀಟವನ್ನು ಧರಿಸಿಕೊಂಡಿರುವ ಬಿಳಿ ಕುದುರೆಯ ಸವಾರನೋಪಾದಿ, “ಜಯಿಸಲು ಮತ್ತು ತನ್ನ ವಿಜಯವನ್ನು ಪೂರ್ಣಗೊಳಿಸಲು” (NW) ಹೋಗುತ್ತಿರುವವನಂತೆ ಪರಿಚಯಿಸಲ್ಪಟ್ಟಿದ್ದಾನೆ. ಸಂತೋಷಕರವಾಗಿಯೇ, 1914ರ ನಿರ್ಣಾಯಕ ವರ್ಷದಿಂದ ಯಾರ ಆವೇಶಭರಿತ ಸವಾರಿಯು ಮಾನವಕುಲಕ್ಕೆ ಯುದ್ಧ, ಕ್ಷಾಮ, ಮತ್ತು ಮರಣವನ್ನು ತಂದೊಡ್ಡಿದೆಯೋ, ಆ ಅಪಾಕಲಿಪ್ಸ್ನ ಮೂವರು ಕುದುರೆ ಸವಾರರಿಂದ ಸಂಕೇತಿಸಲ್ಪಟ್ಟಿರುವ ದುಷ್ಪರಿಣಾಮಗಳನ್ನು ಅವನು ಜಯಿಸುವನು. (ಪ್ರಕಟನೆ 6:1-8) ಮಾನವಕುಲದ ರಕ್ಷಣೆಯಲ್ಲಿ ಹಾಗೂ ಯೆಹೋವನ ಅದ್ಭುತಕರವಾದ ಉದ್ದೇಶಗಳ ನೆರವೇರಿಕೆಯಲ್ಲಿ, ದೇವರ ಕುರಿಮರಿಯಾಗಿರುವ ಕ್ರಿಸ್ತನು ವಹಿಸುವ ಅಪೂರ್ವ ಪಾತ್ರವೇ, ಯೆಹೋವನ ಸಾಕ್ಷಿಗಳ ಬೈಬಲ್ ಶಿಕ್ಷಣದ ಮೂಲಭೂತ ವಿಷಯವಾಗಿದೆ.
10. (ಎ) ಏಳನೆಯ ಅಧ್ಯಾಯದಲ್ಲಿ ಯಾವ ಪ್ರಮುಖ ಮಾಹಿತಿಯು ಕೊಡಲ್ಪಟ್ಟಿದೆ? (ಬಿ) ಯಾರು ರಾಜ್ಯವನ್ನು ಪಡೆದುಕೊಳ್ಳುತ್ತಾರೋ ಅವರ ಕುರಿತು ಯೇಸು ಏನು ಹೇಳಿದ್ದಾನೆ?
10 ಏಳನೆಯ ಅಧ್ಯಾಯವು ಶುಭವರ್ತಮಾನಗಳನ್ನು ನಿಶ್ಚಯವಾಗಿ ಒಳಗೊಂಡಿದೆ ಎಂಬುದು ಸತ್ಯ. ಯಜ್ಞದ ಕುರಿಮರಿಯ ತಂದೆಯು ಯಾರಿಗೆ ರಾಜ್ಯವನ್ನು ವಹಿಸಿಕೊಡುತ್ತಾನೋ ಆ ಗುಂಪನ್ನು ಯೇಸು ಚಿಕ್ಕ ಹಿಂಡು ಎಂದು ಕರೆದಿದ್ದು, ಆ ಗುಂಪಿನ ಸಂಖ್ಯೆಯನ್ನು ಪ್ರಕಟನೆ ಪುಸ್ತಕದಲ್ಲಿ ಮಾತ್ರ ನಾವು ಕಂಡುಕೊಳ್ಳುತ್ತೇವೆ. (ಲೂಕ 12:32; 22:28-30) ಯೆಹೋವ ದೇವರು ತನ್ನ ಆತ್ಮದ ಮೂಲಕ ಇವರಿಗೆ ಮುದ್ರೆಯೊತ್ತಿದ್ದಾನೆ. (2 ಕೊರಿಂಥ 1:21, 22) ಪ್ರಕಟನೆಯನ್ನು ಪಡೆದುಕೊಂಡ ಅಪೊಸ್ತಲ ಯೋಹಾನನು ದೃಢೀಕರಿಸುವುದು: “ಮುದ್ರೆ ಒತ್ತಿಸಿಕೊಂಡವರ ಸಂಖ್ಯೆಯು ಪ್ರಸಿದ್ಧವಾದಾಗ ನಾನು ಕೇಳಿದೆನು. . . . ಅವರ ಸಂಖ್ಯೆ ಒಂದು ಲಕ್ಷ ನಾಲ್ವತ್ತುನಾಲ್ಕು ಸಾವಿರ ಮಂದಿ.” (ಪ್ರಕಟನೆ 7:4) ಈ ನಿಗದಿತ ಸಂಖ್ಯೆಯು, ಸ್ವರ್ಗೀಯ ಚೀಯೋನ್ ಪರ್ವತದ ಮೇಲೆ ಯಜ್ಞದ ಕುರಿಯಾದಾತನೊಂದಿಗೆ ಆಳಲಿಕ್ಕಾಗಿ “ಭೂಲೋಕದೊಳಗಿಂದ ಕೊಂಡುಕೊಳ್ಳಲ್ಪಟ್ಟಿ”ರುವವರ ಒಟ್ಟು ಸಂಖ್ಯೆಯಾಗಿದೆಯೆಂದು ತದನಂತರದ ಅಧ್ಯಾಯದಲ್ಲಿ ದೃಢಪಡಿಸಲ್ಪಟ್ಟಿದೆ. (ಪ್ರಕಟನೆ 14:1-4) ಕ್ರೈಸ್ತಪ್ರಪಂಚದ ಚರ್ಚುಗಳು ಈ ಸಂಖ್ಯೆಯ ಕುರಿತು ಅನಿಶ್ಚಿತವಾದ ಹಾಗೂ ಅಸಮರ್ಪಕವಾದ ವಿವರಣೆಗಳನ್ನು ಕೊಡುತ್ತವಾದರೂ, ಇದರ ಕುರಿತು ಬೈಬಲ್ ವಿದ್ವಾಂಸ ಈ. ಡಬ್ಲ್ಯೂ. ಬುಲಿಂಗರ್ ಹೇಳುವುದು: “ಇದು ಈ ವಾಸ್ತವಾಂಶದ ಸರಳ ಹೇಳಿಕೆ: ಇದೇ ಅಧ್ಯಾಯದಲ್ಲಿ ತಿಳಿಸಲ್ಪಟ್ಟಿರುವ ಅನಿರ್ದಿಷ್ಟ ಸಂಖ್ಯೆಗೆ ವ್ಯತಿರಿಕ್ತವಾಗಿ ಇದು ಒಂದು ನಿರ್ದಿಷ್ಟವಾದ ಸಂಖ್ಯೆಯಾಗಿದೆ.”
11. (ಎ) ಏಳನೆಯ ಅಧ್ಯಾಯದಲ್ಲಿ ಯಾವ ಶುಭವರ್ತಮಾನಗಳು ಕಂಡುಬರುತ್ತವೆ? (ಬಿ) “ಮಹಾ ಸಮೂಹ”ದ ಸದಸ್ಯರ ಮುಂದೆ ಯಾವ ಪ್ರತೀಕ್ಷೆಗಳು ತೆರೆಯಲ್ಪಡುತ್ತವೆ?
11 ಯಾವ ಅನಿರ್ದಿಷ್ಟ ಸಂಖ್ಯೆಯ ಬಗ್ಗೆ ಬುಲಿಂಗರ್ ಮಾತಾಡುತ್ತಿದ್ದರು? 9ನೆಯ ವಚನದಲ್ಲಿ, ಅಪೊಸ್ತಲ ಯೋಹಾನನು ಬರೆದುದು: “ಇವುಗಳಾದ ಮೇಲೆ ಇಗೋ, ಯಾರಿಂದಲೂ ಎಣಿಸಲಾಗದಂಥ ಮಹಾ ಸಮೂಹವು ಸಿಂಹಾಸನದ ಮುಂದೆಯೂ ಯಜ್ಞದ ಕುರಿಯಾದಾತನ ಮುಂದೆಯೂ ನಿಂತಿರುವದನ್ನು ಕಂಡೆನು. ಅವರು ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲಭಾಷೆಗಳನ್ನಾಡುವವರೂ ಆಗಿದ್ದರು.” (ಪ್ರಕಟನೆ 7:9) ಈ ಮಹಾ ಸಮೂಹದಲ್ಲಿ ಯಾರು ಸೇರಿದ್ದಾರೆ, ದೇವರ ಮುಂದೆ ಅವರ ಸದ್ಯದ ನಿಲುವು ಏನಾಗಿದೆ, ಮತ್ತು ಅವರಿಗಾಗಿ ಯಾವ ಭವಿಷ್ಯತ್ತು ಕಾದಿರಿಸಲ್ಪಟ್ಟಿದೆ? ಅಪಾಕಲಿಪ್ಸ್ನ ಉತ್ತರವು ಭೂನಿವಾಸಿಗಳಿಗೆ ಶುಭವಾರ್ತೆಯಾಗಿದೆ. ನಾವು ಓದುವುದು: “ಇವರು ಆ ಮಹಾ ಹಿಂಸೆಯನ್ನು ಅನುಭವಿಸಿ ಬಂದವರು; ಯಜ್ಞದ ಕುರಿಯಾದಾತನ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರಮಾಡಿದ್ದಾರೆ.” ಕ್ರಿಸ್ತನು ಸುರಿಸಿದ ರಕ್ತದಲ್ಲಿ ನಂಬಿಕೆಯನ್ನಿಡುವ ಮೂಲಕ, “ಮಹಾ ಹಿಂಸೆಯ” ಸಮಯದಲ್ಲಿ ಇವರು ರಕ್ಷಿಸಲ್ಪಡುವರು. ಕ್ರಿಸ್ತನು “ಅವರಿಗೆ ಕುರುಬನಂತಿದ್ದು ಜೀವಜಲದ ಒರತೆಗಳ ಬಳಿಗೆ ನಡಿಸುತ್ತಾನೆ. ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು.” (ಪ್ರಕಟನೆ 7:14-17) ಹೌದು, ಇಂದು ಜೀವಿಸುತ್ತಿರುವ ಲಕ್ಷಾಂತರ ಮಂದಿ, ಸದ್ಯದ ದುಷ್ಟ ವಿಷಯಗಳ ವ್ಯವಸ್ಥೆಯ ಅಂತ್ಯವನ್ನು ಪಾರಾಗುವ ಎಣಿಸಲಸಾಧ್ಯವಾದ ಒಂದು ಗುಂಪಿನ ಭಾಗವಾಗಸಾಧ್ಯವಿದೆ. ಅರಸನಾದ ಯೇಸು ಕ್ರಿಸ್ತನ ಸಹಸ್ರ ವರ್ಷದಾಳಿಕೆಯ ಸಮಯದಲ್ಲಿ ಅವನ ಪ್ರಜೆಗಳೋಪಾದಿ, ಭೂಮಿಯ ಮೇಲೆ ನಿತ್ಯಜೀವವನ್ನು ಪಡೆದುಕೊಳ್ಳುವಂತೆ ಅವರು ಅವನಿಂದ ಮಾರ್ಗದರ್ಶಿಸಲ್ಪಡುವರು. ಇದು ಶುಭವಾರ್ತೆಯಾಗಿರುವುದಿಲ್ಲವೊ?
“ಆತನ ನ್ಯಾಯತೀರ್ಪುಗಳು ಸತ್ಯವೂ ನ್ಯಾಯವೂ ಆಗಿವೆ”
12, 13. (ಎ) ಪ್ರಕಟನೆಯ 8ರಿಂದ 19ನೆಯ ಅಧ್ಯಾಯಗಳಲ್ಲಿ ಏನು ಒಳಗೂಡಿದೆ? (ಬಿ) ಇಂತಹ ಪ್ರವಾದನೆಗಳಿಂದ ಪ್ರಾಮಾಣಿಕ ಹೃದಯದ ಜನರು ಏಕೆ ಕ್ಷೋಭೆಗೊಳಗಾಗಬಾರದು?
12 ಈ ಪುಸ್ತಕದ 8ರಿಂದ 19ನೆಯ ಅಧ್ಯಾಯಗಳು, ಅಪಾಕಲಿಪ್ಸ್ ಅಥವಾ ಪ್ರಕಟನೆ ಪುಸ್ತಕವು ಭೀತಿದಾಯಕವಾದ ಮಹಾ ದುರಂತಗಳನ್ನು ಮುಂತಿಳಿಸುವಂತಹ ಒಂದು ಪುಸ್ತಕವಾಗಿದೆ ಎಂಬ ಪ್ರಸಿದ್ಧಿಯನ್ನು ಪಡೆದುಕೊಳ್ಳಲು ಬಹುಮಟ್ಟಿಗೆ ಕಾರಣವಾಗಿವೆ. ಈ ಅಧ್ಯಾಯಗಳಲ್ಲಿ, ಸೈತಾನನ ವಿಷಯಗಳ ವ್ಯವಸ್ಥೆಯ ಬೇರೆ ಬೇರೆ ಭಾಗಗಳ ವಿರುದ್ಧ ತಿಳಿಸಲ್ಪಟ್ಟಿರುವ ತೀಕ್ಷ್ಣವಾದ ನ್ಯಾಯತೀರ್ಪಿನ ಸಂದೇಶಗಳು (ತುತೂರಿ ಊದುವಿಕೆಗಳು, ಉಪದ್ರವಗಳು, ಮತ್ತು ದೇವರ ರೌದ್ರವನ್ನು ಸೂಚಿಸುವ ಪಾತ್ರೆಗಳ ಮೂಲಕ ಸಂಕೇತಿಸಲ್ಪಟ್ಟಿವೆ) ಒಳಗೂಡಿವೆ. ಪ್ರಪ್ರಥಮವಾಗಿ ಸುಳ್ಳು ಧರ್ಮ (“ಬಾಬೆಲೆಂಬ ಮಹಾ ನಗರಿ”)ದ ವಿರುದ್ಧ, ತದನಂತರ ಕಾಡುಮೃಗಗಳಿಂದ ಸಂಕೇತಿಸಲ್ಪಟ್ಟ ದೇವಭಕ್ತಿಯಿಲ್ಲದ ರಾಜಕೀಯ ವ್ಯವಸ್ಥೆಗಳ ವಿರುದ್ಧ ಈ ನ್ಯಾಯತೀರ್ಪುಗಳು ಬರಮಾಡಲ್ಪಡುವವು.—ಪ್ರಕಟನೆ 13:1, 2; 17:5-7, 15, 16.a
13 ಸೈತಾನನನ್ನೂ ಅವನ ದೆವ್ವಗಳನ್ನೂ ಭೂಮಿಗೆ ದೊಬ್ಬುವ ಮೂಲಕ ಪರಲೋಕವು ಶುದ್ಧೀಕರಿಸಲ್ಪಟ್ಟದ್ದನ್ನು ಈ ಅಧ್ಯಾಯಗಳು ಚಿತ್ರಿಸುತ್ತವೆ. ಹಿಂದೆಂದೂ ಸಂಭವಿಸದಿದ್ದಷ್ಟು ವಿಪತ್ತುಗಳು 1914ರಿಂದ ಲೋಕದಲ್ಲಿ ನಡೆಯುತ್ತಿರುವುದಕ್ಕಿರುವ ಏಕಮಾತ್ರ ತರ್ಕಬದ್ಧ ವಿವರಣೆಯನ್ನು ಇದು ಒದಗಿಸುತ್ತದೆ. (ಪ್ರಕಟನೆ 12:7-12) ಭೂಮಿಯಲ್ಲಿ ಸೈತಾನನ ದುಷ್ಟ ವಿಷಯಗಳ ವ್ಯವಸ್ಥೆಯ ವಿನಾಶವನ್ನು ಸಹ ಅವು ಸಾಂಕೇತಿಕ ಭಾಷೆಯಲ್ಲಿ ವರ್ಣಿಸುತ್ತವೆ. (ಪ್ರಕಟನೆ 19:19-21) ಪ್ರಾಮಾಣಿಕ ಹೃದಯದ ಜನರು ಇಂತಹ ನಾಟಕೀಯ ಘಟನೆಗಳಿಂದ ತಲ್ಲಣಗೊಳ್ಳಬೇಕೊ? ಇಲ್ಲ, ಏಕೆಂದರೆ ದೇವರು ನ್ಯಾಯತೀರ್ಪಿನ ಸಮಯದಲ್ಲಿ ಸ್ವರ್ಗೀಯ ಸಮೂಹವು ಕೂಗಿಹೇಳಿದ್ದು: “ಹಲ್ಲೆಲೂಯಾ. ಜಯವೂ ಪ್ರಭಾವವೂ ಶಕ್ತಿಯೂ ನಮ್ಮ ದೇವರಲ್ಲಿ ಉಂಟು; ಆತನ ನ್ಯಾಯತೀರ್ಪುಗಳು ಸತ್ಯವೂ ನ್ಯಾಯವೂ ಆಗಿವೆ.”—ಪ್ರಕಟನೆ 19:1, 2.
14, 15. (ಎ) ಸದ್ಯದ ದುಷ್ಟ ವ್ಯವಸ್ಥೆಯು ನೀತಿಗನುಸಾರವಾಗಿ ಹೇಗೆ ಅಂತ್ಯಗೊಳಿಸಲ್ಪಡುವುದು? (ಬಿ) ಅಪಾಕಲಿಪ್ಸ್ನ ಈ ಭಾಗವು ಪ್ರಾಮಾಣಿಕ ಹೃದಯದ ಜನರು ಆನಂದಿಸುವುದಕ್ಕೆ ಒಂದು ಕಾರಣವಾಗಿರಬೇಕು ಏಕೆ?
14 ಯಾರು ಈ ಭೂಮಿಯನ್ನು ಹಾಳುಮಾಡುತ್ತಿದ್ದಾರೋ ಅವರನ್ನು ತೆಗೆದುಹಾಕದೆ ಯೆಹೋವನು ಒಂದು ನೀತಿಯ ವ್ಯವಸ್ಥೆಯನ್ನು ಸ್ಥಾಪಿಸುವುದಿಲ್ಲ. (ಪ್ರಕಟನೆ 11:17, 18; 19:11-16; 20:1, 2) ಆದರೂ, ಇದನ್ನು ಪೂರೈಸಲು ಯಾವುದೇ ಮಾನವ ಅಥವಾ ರಾಜಕೀಯ ಸರಕಾರಕ್ಕೆ ಅಧಿಕಾರವಿಲ್ಲ ಅಥವಾ ಶಕ್ತಿಯಿಲ್ಲ. ಕೇವಲ ಯೆಹೋವನು ಹಾಗೂ ಆತನ ನೇಮಿತ ಅರಸನೂ ನ್ಯಾಯಾಧಿಪತಿಯೂ ಆದ ಯೇಸು ಕ್ರಿಸ್ತನು ಮಾತ್ರ ಇದನ್ನು ನೀತಿಗನುಸಾರವಾಗಿ ಮಾಡಬಲ್ಲರು.—2 ಥೆಸಲೊನೀಕ 1:6-9.
15 ಅಪಾಕಲಿಪ್ಸ್ ಪುಸ್ತಕವು ಸ್ಪಷ್ಟವಾಗಿ ತೋರಿಸುವಂತೆ, ಯೆಹೋವನು ಸದ್ಯದ ದುಷ್ಟ ವ್ಯವಸ್ಥೆಗೆ ಅಂತ್ಯವನ್ನು ತರಲು ಉದ್ದೇಶಿಸಿದ್ದಾನೆ. ಈ ವಾಸ್ತವಾಂಶವು, “ಸಮಸ್ತ ಅಸಹ್ಯಕಾರ್ಯಗಳಿಗಾಗಿ ನರಳಿ ಗೋಳಾಡುತ್ತಿರುವ” ಸ್ತ್ರೀಪುರುಷರ ಆನಂದಕ್ಕೆ ಕಾರಣವಾಗಿರಬೇಕು. (ಯೆಹೆಜ್ಕೇಲ 9:4) ಶುಭವರ್ತಮಾನವನ್ನು ಸಾರುತ್ತಿದ್ದ ದೇವದೂತನಿಂದ ನೀಡಲ್ಪಟ್ಟ ಕರೆಗೆ ಕಿವಿಗೊಡುವುದು ಜರೂರಿಯದ್ದಾಗಿದೆ ಎಂಬುದನ್ನು ಇದು ಅವರ ಮನಸ್ಸುಗಳ ಮೇಲೆ ಅಚ್ಚೊತ್ತಬೇಕು. ಆ ದೇವದೂತನು ಘೋಷಿಸಿದ್ದು: “ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಿರಿ. ಆತನು ನ್ಯಾಯತೀರ್ಪುಮಾಡುವ ಗಳಿಗೆಯು ಬಂದಿದೆ. ಭೂಲೋಕ ಪರಲೋಕಗಳನ್ನೂ . . . ಉಂಟುಮಾಡಿದಾತನಿಗೆ ನಮಸ್ಕಾರ ಮಾಡಿರಿ [“ಆರಾಧಿಸಿರಿ,” NW].” (ಪ್ರಕಟನೆ 14:7) “ದೇವರ ಆಜ್ಞೆಗಳನ್ನು ಕೈಕೊಂಡು ನಡೆದು ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೇಳು”ವಂತಹ ಯೆಹೋವನ ಸಾಕ್ಷಿಗಳೊಂದಿಗೆ ಜೊತೆಗೂಡಿ, ಇಂತಹ ಜನರು ಸಹ ಆತನನ್ನು ಆರಾಧಿಸಲಿ ಮತ್ತು ಆತನ ಸೇವೆಮಾಡುವಂತಾಗಲಿ.—ಪ್ರಕಟನೆ 12:17.
ಮಹಿಮಾಯುತವಾದ ಸಹಸ್ರ ವರ್ಷದಾಳಿಕೆ
16. (ಎ) ಕ್ರೈಸ್ತಪ್ರಪಂಚದ ಚರ್ಚುಗಳು ಸಹಸ್ರವರ್ಷದ ನಿರೀಕ್ಷೆಯನ್ನು ಏಕೆ ತಿರಸ್ಕರಿಸಿವೆ? (ಬಿ) ಮಾದರಿ ಪ್ರಾರ್ಥನೆಯು ಉತ್ತರಿಸಲ್ಪಡುವುದು ಎಂದು ಯೆಹೋವನ ಸಾಕ್ಷಿಗಳು ಏಕೆ ನಂಬುತ್ತಾರೆ?
16 ಪ್ರಕಟನೆ ಪುಸ್ತಕದ 20ರಿಂದ 22ನೆಯ ಅಧ್ಯಾಯಗಳು, ಸಹಸ್ರ ವರ್ಷದಾಳಿಕೆಯಲ್ಲಿ ನಿರೀಕ್ಷೆಯನ್ನಿಡಲು ಅಗತ್ಯವಿರುವ ಶಾಸ್ತ್ರೀಯ ಆಧಾರವನ್ನು ಕೊಡುತ್ತವೆ. ಬೈಬಲಿನ ಈ ಭಾಗದಲ್ಲಿ ಮಾತ್ರವೇ ಒಂದು ಸಾವಿರ ವರ್ಷಗಳ ಕಾಲಾವಧಿಯ ಕುರಿತು ತಿಳಿಸಲಾಗಿದೆ; ಮತ್ತು ಇದು ಪರಲೋಕದಲ್ಲಿ ಹಾಗೂ ಭೂಮಿಯಲ್ಲಿ ಶಾಶ್ವತವಾದ ಸಂತೋಷದ ಆರಂಭವಾಗಿರುವುದು. ಕ್ರೈಸ್ತಪ್ರಪಂಚದ ಚರ್ಚುಗಳು ಸಹಸ್ರ ವರ್ಷದಾಳಿಕೆಯ ನಿರೀಕ್ಷೆಯನ್ನು ತಿರಸ್ಕರಿಸಿವೆ. ಒಳ್ಳೆಯವರು ಸ್ವರ್ಗಕ್ಕೆ ಹೋಗುತ್ತಾರೆ ಮತ್ತು ಕೆಟ್ಟವರು ನರಕಕ್ಕೆ ಹೋಗುತ್ತಾರೆ ಎಂಬುದು ಚರ್ಚ್ ಸಿದ್ಧಾಂತವಾಗಿರುವುದರಿಂದ, ಒಂದು ಪ್ರಮೋದವನ ಭೂಮಿಗೆ ಚರ್ಚಿನಲ್ಲಿ ಅವಕಾಶವೇ ಇಲ್ಲವಾಗಿದೆ. ದೇವರ “ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿ ನೆರವೇರಲಿ” ಎಂದು ಕೇಳಿಕೊಳ್ಳುವಂತಹ ಮಾದರಿ ಪ್ರಾರ್ಥನೆಯು, ಕ್ರೈಸ್ತಪ್ರಪಂಚದ ಚರ್ಚುಗಳ ಅಧಿಕಾಂಶ ಸದಸ್ಯರ ದೃಷ್ಟಿಯಲ್ಲಿ ಅರ್ಥಹೀನವಾಗಿದೆ. (ಮತ್ತಾಯ 6:10) ಆದರೆ ಯೆಹೋವನ ಸಾಕ್ಷಿಗಳ ವಿಷಯದಲ್ಲಿ ಇದು ಸತ್ಯವಾಗಿರುವುದಿಲ್ಲ. ಯೆಹೋವ ದೇವರು ಭೂಮಿಯನ್ನು “ಶೂನ್ಯಸ್ಥಾನವಾಗಿರಲೆಂದು ಸೃಷ್ಟಿಸದೆ ಜನನಿವಾಸಕ್ಕಾಗಿಯೇ ರೂಪಿಸಿದನು” ಎಂಬುದನ್ನು ಅವರು ಬಲವಾಗಿ ನಂಬುತ್ತಾರೆ. (ಯೆಶಾಯ 45:12, 18) ಹೀಗೆ, ಪುರಾತನ ಪ್ರವಾದನೆ, ಮಾದರಿ ಪ್ರಾರ್ಥನೆ, ಮತ್ತು ಸಹಸ್ರ ವರ್ಷದಾಳಿಕೆಯ ಕುರಿತಾದ ಅಪಾಕಲಿಪ್ಸ್ನ ನಿರೀಕ್ಷೆಗಳೆಲ್ಲವೂ ಒಂದಕ್ಕೊಂದು ತಾಳೆಹೊಂದುತ್ತವೆ. ತನ್ನ ಸಾವಿರ ವರ್ಷದಾಳಿಕೆಯ ಸಮಯದಲ್ಲಿ ಯೇಸು, ಯೆಹೋವನ ಚಿತ್ತವು ಪರಲೋಕದಲ್ಲಿ ನೆರವೇರುವಂತೆಯೇ ಭೂಮಿಯಲ್ಲಿಯೂ ನೆರವೇರುವಂತೆ ಮಾಡುವನು.
17. ‘ಆ ಸಾವಿರ ವರುಷಗಳನ್ನು’ ಅಕ್ಷರಾರ್ಥವಾಗಿ ಪರಿಗಣಿಸಬೇಕೆಂದು ಯಾವುದು ಸೂಚಿಸುತ್ತದೆ?
17 ಪ್ರಕಟನೆ ಪುಸ್ತಕದ 20ನೆಯ ಅಧ್ಯಾಯದ ಮೊದಲ ಏಳು ವಚನಗಳಲ್ಲಿ, “ಸಾವಿರ ವರುಷ” ಎಂಬ ಶಬ್ದವು ಆರು ಬಾರಿ ಕಂಡುಬರುತ್ತದೆ. “ಆ” ಎಂಬ ನಿರ್ದೇಶಕ ಗುಣವಾಚಿಯನ್ನು ನಾಲ್ಕು ಬಾರಿ ಉಪಯೋಗಿಸಿರುವಂತಹ ಸಂಗತಿಯು ತುಂಬ ಗಮನಾರ್ಹವಾಗಿದೆ; ಇದು ಕ್ರೈಸ್ತಪ್ರಪಂಚದ ವಿಮರ್ಶಕರಲ್ಲಿ ಬಹುತೇಕ ಮಂದಿ ನಾವು ನಂಬುವಂತೆ ಬಯಸುವ ಒಂದು ಅನಿಶ್ಚಿತವಾದ ದೀರ್ಘ ಕಾಲಾವಧಿಯನ್ನಲ್ಲ, ಬದಲಾಗಿ ಅಕ್ಷರಾರ್ಥವಾದ ಸಹಸ್ರ ವರ್ಷವನ್ನು ಸೂಚಿಸುತ್ತದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಸಹಸ್ರ ವರ್ಷದ ಕಾಲಾವಧಿಯಲ್ಲಿ ಏನು ಸಂಭವಿಸುವುದು? ಮೊದಲಾಗಿ, ಸಹಸ್ರ ವರ್ಷದ ಕಾಲಾವಧಿಯಲ್ಲಿ ಸೈತಾನನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಲ್ಪಡುವನು. (ಪ್ರಕಟನೆ 20:1-3; ಹೋಲಿಸಿರಿ ಇಬ್ರಿಯ 2:14.) ಇದು ಎಂತಹ ಒಂದು ಶುಭವಾರ್ತೆ!
18. (ಎ) ಸಹಸ್ರ ವರ್ಷದಾಳಿಕೆಯನ್ನು ನ್ಯಾಯತೀರ್ಪಿನ “ದಿನ” ಎಂದು ಏಕೆ ಕರೆಯಸಾಧ್ಯವಿದೆ? (ಬಿ) ಸಾವಿರ ವರ್ಷದಾಳಿಕೆಯ ಅಂತ್ಯದಲ್ಲಿ ಏನು ಸಂಭವಿಸುವುದು?
18 “ಯಾಜಕರಾಗಿ [ಅರಸರಾಗಿ] ಕ್ರಿಸ್ತನೊಂದಿಗೆ ಆ ಸಾವಿರ ವರುಷ ಆಳುವ”ವರಿಗೆ “ನ್ಯಾಯ ತೀರಿಸುವ ಅಧಿಕಾರವು” ಕೊಡಲ್ಪಟ್ಟಿರುವುದರಿಂದ, ಈ ಕಾಲಾವಧಿಯು ನ್ಯಾಯತೀರ್ಪಿನ ಒಂದು ಸಾವಿರ ವರ್ಷಗಳ “ದಿನ”ವಾಗಿದೆ. (ಪ್ರಕಟನೆ 20:4, 6; ಹೋಲಿಸಿರಿ ಅ. ಕೃತ್ಯಗಳು 17:31; 2 ಪೇತ್ರ 3:8.) ಮೃತರು ಪುನರುತ್ಥಾನಗೊಳಿಸಲ್ಪಡುವರು ಮತ್ತು ಇವರು ಹಾಗೂ “ಮಹಾ ಹಿಂಸೆಯನ್ನು” ಪಾರಾಗುವವರು, ಆ ಸಮಯದಲ್ಲಿ ತಮ್ಮ ತಮ್ಮ ಕೆಲಸಗಳು ಅಥವಾ ಕೃತ್ಯಗಳಿಗನುಸಾರ ಸಮಾನ ರೀತಿಯಲ್ಲಿ ನ್ಯಾಯತೀರಿಸಲ್ಪಡುವರು. (ಪ್ರಕಟನೆ 20:12, 13) ಸಾವಿರ ವರ್ಷಗಳ ಕೊನೆಯಲ್ಲಿ, ಮಾನವಕುಲವನ್ನು ಅಂತಿಮ ಪರೀಕ್ಷೆಗೆ ಒಳಪಡಿಸಲಿಕ್ಕಾಗಿ ಸೈತಾನನು ಸ್ವಲ್ಪಕಾಲದ ವರೆಗೆ ಬಿಡುಗಡೆಗೊಳಿಸಲ್ಪಡುವನು. ತದನಂತರ ಸೈತಾನನು, ಅವನ ದೆವ್ವಗಳು ಮತ್ತು ಭೂಮಿಯಲ್ಲಿ ಅವನನ್ನು ಹಿಂಬಾಲಿಸುವ ಯಾವುದೇ ದಂಗೆಕೋರರು ಶಾಶ್ವತವಾಗಿ ನಾಶಮಾಡಲ್ಪಡುವರು. (ಪ್ರಕಟನೆ 20:7-10) ಯಾರು ಈ ಅಂತಿಮ ಪರೀಕ್ಷೆಯಿಂದ ಪಾರಾಗುವರೋ ಅಂತಹ ಮಾನವರ ಹೆಸರುಗಳು “ಜೀವಬಾಧ್ಯರ ಪಟ್ಟಿಯಲ್ಲಿ” ಶಾಶ್ವತವಾಗಿ ಬರೆಯಲ್ಪಡುವವು. ಮತ್ತು ಒಂದು ಪ್ರಮೋದವನ ಭೂಮಿಯಲ್ಲಿ ಯೆಹೋವನ ಸೇವೆಮಾಡುತ್ತಾ, ಆತನನ್ನು ಆರಾಧಿಸುತ್ತಾ ಇರುವಂತೆ, ಸಂತೋಷಭರಿತ ಜೀವನದ ನಿತ್ಯತೆಯ ಅವಕಾಶವು ಇವರಿಗೆ ಕೊಡಲ್ಪಡುವುದು.—ಪ್ರಕಟನೆ 20:14, 15; ಕೀರ್ತನೆ 37:9, 29; ಯೆಶಾಯ 66:22, 23.
19. (ಎ) ಪ್ರಕಟನೆ ಪುಸ್ತಕದಲ್ಲಿ ಮುಂತಿಳಿಸಲ್ಪಟ್ಟಿರುವ ಅದ್ಭುತಕರವಾದ ಆಶೀರ್ವಾದಗಳು ಖಂಡಿತವಾಗಿಯೂ ನೆರವೇರಿಸಲ್ಪಡುವವು ಎಂಬ ವಿಷಯದಲ್ಲಿ ನಾವು ಏಕೆ ಖಾತ್ರಿಯಿಂದಿರಸಾಧ್ಯವಿದೆ? (ಬಿ) ಮುಂದಿನ ಲೇಖನದಲ್ಲಿ ಯಾವ ವಿಷಯವನ್ನು ಪರಿಗಣಿಸಲಾಗುವುದು?
19 ಅಪಾಕಲಿಪ್ಸ್ ಪುಸ್ತಕದಲ್ಲಿ ಮುಂತಿಳಿಸಲ್ಪಟ್ಟಿರುವ ಶುಭವರ್ತಮಾನಗಳು ಇವೇ ಆಗಿವೆ. ಇವು ಮಾನವರು ಮಾಡುವಂತಹ ಪೊಳ್ಳು ವಾಗ್ದಾನಗಳಾಗಿರುವುದಿಲ್ಲ. ಅಪೊಸ್ತಲ ಯೋಹಾನನು ಬರೆದುದು: “ಇಗೋ, ಎಲ್ಲವನ್ನು ಹೊಸದುಮಾಡುತ್ತೇನೆ . . . ಇದನ್ನು ಬರೆ; ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ.” (ಪ್ರಕಟನೆ 21:5) ಈ ಶುಭವರ್ತಮಾನದ ನೆರವೇರಿಕೆಯಲ್ಲಿ ಪಾಲ್ಗೊಳ್ಳಲಿಕ್ಕಾಗಿ ನಾವೇನು ಮಾಡತಕ್ಕದ್ದು? ಯಾರು ದೇವರನ್ನು ಮೆಚ್ಚಿಸಲು ಬಯಸುತ್ತಾರೋ ಅವರಿಗಾಗಿ ಪ್ರಕಟನೆ ಪುಸ್ತಕದಲ್ಲಿ ಅನೇಕ ಸಲಹೆಗಳಿವೆ. ಮುಂದಿನ ಲೇಖನವು ತೋರಿಸಲಿರುವಂತೆ, ಅಂತಹ ಸಲಹೆಗಳನ್ನು ಅನುಸರಿಸುವುದರಿಂದ ನಮಗೆ ಈಗ ಮಾತ್ರವಲ್ಲ, ಸದಾಕಾಲಕ್ಕೂ ಅಪಾರ ಸಂತೋಷವು ದೊರಕುವುದು.
[ಅಧ್ಯಯನ ಪ್ರಶ್ನೆಗಳು]
a ಪ್ರಕಟನೆ ಪುಸ್ತಕದ ಸಂಪೂರ್ಣ ವಿವರಕ್ಕಾಗಿ, 1988ರಲ್ಲಿ ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ, ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ! ಎಂಬ ಪುಸ್ತವನ್ನು ನೋಡಿರಿ.
ಪುನರ್ವಿಮರ್ಶೆಗಾಗಿರುವ ಅಂಶಗಳು
◻ ಶುಭವರ್ತಮಾನಗಳ ಒಂದು ಪ್ರಮುಖ ಭಾಗದೋಪಾದಿ, ಪ್ರಕಟನೆ ಪುಸ್ತಕದ 4ರಿಂದ 6ನೆಯ ಅಧ್ಯಾಯಗಳಲ್ಲಿ ಯಾವ ಮೂಲಭೂತ ಸತ್ಯತೆಗಳನ್ನು ಕಂಡುಕೊಳ್ಳಸಾಧ್ಯವಿದೆ?
◻ ಪ್ರಕಟನೆ ಪುಸ್ತಕದ 7ನೆಯ ಅಧ್ಯಾಯದಲ್ಲಿ ಯಾವ ಶುಭವರ್ತಮಾನಗಳನ್ನು ಕಂಡುಕೊಳ್ಳಸಾಧ್ಯವಿದೆ?
◻ ಪ್ರಕಟನೆ ಪುಸ್ತಕದಲ್ಲಿ ಕಂಡುಬರುವ ನ್ಯಾಯತೀರ್ಪಿನ ಸಂದೇಶಗಳಿಂದ ಪ್ರಾಮಾಣಿಕ ಹೃದಯದ ಜನರು ಏಕೆ ಕ್ಷೋಭೆಗೊಳಗಾಗಬಾರದು?
◻ ಯಾವ ರೀತಿಯಲ್ಲಿ ಸಹಸ್ರ ವರ್ಷದಾಳಿಕೆಯು ನ್ಯಾಯತೀರ್ಪಿನ “ದಿನ”ವಾಗಿರುವುದು?
[ಪುಟ 10 ರಲ್ಲಿರುವ ಚಿತ್ರ]
ಅರಸನಾದ ಯೇಸು ಕ್ರಿಸ್ತನು ಈ ಭೂಮಿಯಿಂದ ಯುದ್ಧ, ಕ್ಷಾಮ, ಮತ್ತು ಮರಣವನ್ನು ಸಂಪೂರ್ಣವಾಗಿ ತೆಗೆದುಹಾಕುವನು