ಜೀವನದ ಬದಲಾಗುತ್ತಿರುವ ಸನ್ನಿವೇಶಗಳನ್ನು ನಿಭಾಯಿಸುವಾಗ ದೇವರಾತ್ಮದ ಮೇಲೆ ಆತುಕೊಳ್ಳಿರಿ
“ನಿನ್ನನ್ನು ದೇವರಿಗೆ ಒಪ್ಪಿಗೆಯವನಾಗಿ ಕಾಣಿಸಿಕೊಳ್ಳಲು ನಿನ್ನ ಕೈಲಾಗುವುದನ್ನೆಲ್ಲ ಮಾಡು.” —2 ತಿಮೊಥೆಯ 2:15, NW.
ನಮ್ಮ ಸುತ್ತಮುತ್ತಲಿನ ಲೋಕವು ಬದಲಾಗುತ್ತಾ ಇರುತ್ತದೆ. ಹೃದಯಂಗಮವಾದ ವೈಜ್ಞಾನಿಕ ಮತ್ತು ಯಂತ್ರಕಲಾ ಪ್ರಗತಿಗಳ ಜೊತೆಯಲ್ಲೇ ನಾವು ನೈತಿಕ ಮೌಲ್ಯಗಳಲ್ಲಿ ತೀವ್ರ ಕುಸಿತವನ್ನೂ ನೋಡುತ್ತೇವೆ. ನಾವು ಹಿಂದಿನ ಲೇಖನದಲ್ಲಿ ಪರಿಗಣಿಸಿದಂತೆ, ಕ್ರೈಸ್ತರು ಈ ಲೋಕದ ದೇವವಿರೋಧಿ ಆತ್ಮವನ್ನು ಪ್ರತಿರೋಧಿಸಲೇಬೇಕು. ಆದರೆ ಲೋಕವು ಬದಲಾಗುತ್ತಾ ಇರುವಾಗ ನಾವೂ ಅನೇಕ ವಿಧಗಳಲ್ಲಿ ಬದಲಾಗುತ್ತೇವೆ. ನಾವು ಬಾಲ್ಯಾವಸ್ಥೆಯನ್ನು ದಾಟಿ ಪ್ರಾಪ್ತವಯಸ್ಕರಾಗುತ್ತೇವೆ. ನಾವು ಸಂಪತ್ತು, ಆರೋಗ್ಯ, ಮತ್ತು ಪ್ರಿಯರನ್ನು ಒಂದೇ ಗಳಿಸಿಕೊಳ್ಳಬಹುದು ಇಲ್ಲವೆ ಕಳೆದುಕೊಳ್ಳಬಹುದು. ಇಂತಹ ಅನೇಕ ಬದಲಾವಣೆಗಳು ನಮ್ಮ ನಿಯಂತ್ರಣಕ್ಕೆ ಮೀರಿದವುಗಳಾಗಿದ್ದು, ಅವು ನಮ್ಮ ಆಧ್ಯಾತ್ಮಿಕತೆಗೆ ಹೊಸತಾದ ಹಾಗೂ ಕಷ್ಟಸಾಧ್ಯ ಪಂಥಾಹ್ವಾನಗಳನ್ನು ಒಡ್ಡುತ್ತವೆ.
2 ಇಷಯನ ಮಗನಾದ ದಾವೀದನಂತೆ ತಮ್ಮ ಜೀವಿತಗಳಲ್ಲಿ ತೀವ್ರ ಬದಲಾವಣೆಗಳನ್ನು ಅನುಭವಿಸಿರುವವರು ಕೊಂಚ ಮಂದಿ ಮಾತ್ರ. ಒಬ್ಬ ಸಾಮಾನ್ಯ ಕುರುಬನಾಗಿದ್ದ ದಾವೀದನು ತ್ವರಿತವಾಗಿ ಆ ಸ್ಥಾನದಿಂದ ಮೇಲೇರಿಸಲ್ಪಟ್ಟು ರಾಷ್ಟ್ರೀಯ ವೀರನಾಗಿ ಪ್ರಸಿದ್ಧಿಹೊಂದಿದನು. ಬಳಿಕ, ಮತ್ಸರ ತುಂಬಿದ ಅರಸನೊಬ್ಬನು ಅವನನ್ನು ಒಂದು ಮೃಗದಂತೆ ಅಟ್ಟಿಕೊಂಡು ಬರುತ್ತಿದ್ದದರಿಂದ ಅವನು ಸದಾ ಪಲಾಯನಗೈಯುತ್ತಾ ಇರಬೇಕಾಯಿತು. ಆಮೇಲೆ ದಾವೀದನು ಒಬ್ಬ ಅರಸನೂ ಯುದ್ಧವಿಜೇತನೂ ಆದನು. ಘೋರ ಪಾಪದ ಕಾರಣದಿಂದಾಗಿ ಬಂದ ವೇದನಾಮಯ ಫಲಿತಾಂಶಗಳನ್ನು ಅವನು ತಾಳಿಕೊಂಡನು. ತನ್ನ ಕುಟುಂಬದೊಳಗೆ ನಡೆದ ದುರಂತ ಮತ್ತು ವಿಭಜನೆಯ ನೋವನ್ನು ಅವನು ಅನುಭವಿಸಿದನು. ಅವನು ಐಶ್ವರ್ಯವನ್ನು ಗಳಿಸಿದನು, ವೃದ್ಧನಾದನು ಮತ್ತು ಆ ವಾರ್ಧಕ್ಯದ ದುರ್ಬಲತೆಗಳನ್ನು ಅನುಭವಿಸಿದನು. ಆದರೆ ಅವನ ಜೀವನದಲ್ಲಿ ಅನೇಕ ಬದಲಾವಣೆಗಳು ಸಂಭವಿಸಿದರೂ ದಾವೀದನು ತನ್ನ ಜೀವನಪರ್ಯಂತವೂ ಯೆಹೋವನ ಮೇಲೆ ಮತ್ತು ಆತನ ಆತ್ಮದ ಮೇಲೆ ದೃಢವಿಶ್ವಾಸ ಮತ್ತು ಭರವಸೆಯನ್ನು ಪ್ರದರ್ಶಿಸಿದನು. ಅವನು ತನ್ನನ್ನು “ದೇವರಿಗೆ ಒಪ್ಪಿಗೆಯವನಾಗಿ” ಕಾಣಿಸಿಕೊಳ್ಳಲು ತನ್ನ ಕೈಲಾದದ್ದನ್ನೆಲ್ಲ ಮಾಡಿದನು ಮತ್ತು ದೇವರು ಅವನನ್ನು ಆಶೀರ್ವದಿಸಿದನು. (2 ತಿಮೊಥೆಯ 2:15, NW) ನಮ್ಮ ಸನ್ನಿವೇಶಗಳು ದಾವೀದನದ್ದಕ್ಕಿಂತ ಭಿನ್ನವಾಗಿರುವುದಾದರೂ, ಅವನು ತನ್ನ ಜೀವನದಲ್ಲಿ ವಿಷಯಗಳನ್ನು ಹೇಗೆ ನಿಭಾಯಿಸಿದನೊ ಅದರಿಂದ ನಾವು ಪಾಠಗಳನ್ನು ಕಲಿತುಕೊಳ್ಳಬಲ್ಲೆವು. ನಾವು ನಮ್ಮ ಜೀವನದಲ್ಲಾಗುವ ಬದಲಾವಣೆಗಳನ್ನು ಎದುರಿಸುವಾಗ ದೇವರಾತ್ಮದ ಸಹಾಯವನ್ನು ಹೇಗೆ ಪಡೆಯುತ್ತ ಹೋಗಬಹುದೆಂಬುದನ್ನು ಗ್ರಹಿಸಿಕೊಳ್ಳಲು ಅವನ ಮಾದರಿ ನಮಗೆ ಸಹಾಯಮಾಡಬಲ್ಲದು.
ದಾವೀದನ ದೈನ್ಯ—ಒಂದು ಉತ್ತಮ ಮಾದರಿ
3 ದಾವೀದನು ಹುಡುನಾಗಿದ್ದಾಗ ತನ್ನ ಸ್ವಂತ ಕುಟುಂಬದಲ್ಲಿಯೂ ಪ್ರಮುಖನಾಗಿರಲಿಲ್ಲ. ಪ್ರವಾದಿಯಾದ ಸಮುವೇಲನು ಬೇತ್ಲೆಹೇಮಿಗೆ ಬಂದಾಗ, ದಾವೀದನ ತಂದೆ ತನ್ನ ಎಂಟು ಮಂದಿ ಪುತ್ರರಲ್ಲಿ ಏಳು ಮಂದಿಯನ್ನು ಪ್ರವಾದಿಗೆ ತೋರಿಸಿದನು. ಇವರೆಲ್ಲರಲ್ಲಿ ಕಿರಿಯವನಾಗಿದ್ದ ದಾವೀದನನ್ನು ಕುರಿಮೇಯಿಸುವಂತೆ ಬಿಡಲಾಗಿತ್ತು. ಆದರೆ, ಯೆಹೋವನು ಈ ದಾವೀದನನ್ನೇ ಇಸ್ರಾಯೇಲಿನ ಭಾವೀ ಅರಸನಾಗಿರಲು ಆರಿಸಿಕೊಂಡಿದ್ದನು. ದಾವೀದನನ್ನು ಹೊಲದಿಂದ ಬರುವಂತೆ ಕರೆಕಳುಹಿಸಲಾಯಿತು. ಮುಂದಕ್ಕೆ ಬೈಬಲ್ ದಾಖಲೆ ತಿಳಿಸುವುದು: “ಸಮುವೇಲನು ಎಣ್ಣೆಯ ಕೊಂಬನ್ನು ತೆಗೆದುಕೊಂಡು ಅವನನ್ನು ಅವನ ಸಹೋದರರ ಮಧ್ಯದಲ್ಲೇ ಅಭೀಷೇಕಿಸಿದನು. ಕೂಡಲೆ ಯೆಹೋವನ ಆತ್ಮವು ದಾವೀದನ ಮೇಲೆ ಬಂದು ನೆಲೆಗೊಂಡಿತು.” (1 ಸಮುವೇಲ 16:12, 13) ದಾವೀದನು ತನ್ನ ಜೀವಮಾನದಾದ್ಯಂತ ಆ ಆತ್ಮದ ಮೇಲೆ ಅವಲಂಬಿಸಿದ್ದನು.
4 ಈ ಕುರುಬ ಹುಡುಗನು ಬೇಗನೇ ತನ್ನ ದೇಶದಲ್ಲಿ ಪ್ರಸಿದ್ಧನಾಗಲಿದ್ದನು. ರಾಜನ ಸೇವೆಮಾಡುತ್ತಾ ಸಂಗೀತ ನುಡಿಸುವಂತೆ ಅವನನ್ನು ಕರೆಯಲಾಯಿತು. ಅನುಭವಸ್ಥ ಇಸ್ರಾಯೇಲ್ ಯೋಧರೂ ಯಾರಿಗೆ ಎದುರಾಗಿ ಬರಲು ಭಯಪಟ್ಟರೊ ಆ ದೈತ್ಯ ಯುದ್ಧವೀರ ಗೊಲ್ಯಾತನನ್ನೇ ದಾವೀದನು ಸಂಹರಿಸಿದನು. ದಾವೀದನು ಸೇನಾಪತಿಯಾಗಿ ಮಾಡಲ್ಪಟ್ಟಾಗ, ಅವನು ಫಿಲಿಷ್ಟಿಯರ ಮೇಲೆ ಯುದ್ಧಹೂಡಿ ಜಯಶಾಲಿಯಾದನು. ಜನರು ಅವನನ್ನು ತುಂಬ ಇಷ್ಟಪಟ್ಟರು. ಅವರು ಅವನನ್ನು ಹೊಗಳುತ್ತ ಗೀತೆಗಳನ್ನು ರಚಿಸಿದರು. ಇದಕ್ಕೆ ಮುಂಚಿತವಾಗಿ, ಸೌಲ ರಾಜನ ಸಲಹೆಗಾರನೊಬ್ಬನು ಯುವ ದಾವೀದನು ಕಿನ್ನರಿಯನ್ನು “ಚೆನ್ನಾಗಿ ಬಾರಿಸಬಲ್ಲವನು” ಎಂದು ಮಾತ್ರವಲ್ಲ, “ಪರಾಕ್ರಮಶಾಲಿಯೂ ರಣಶೂರನೂ ವಾಕ್ಚತುರನೂ ಸುಂದರನೂ” ಎಂದೂ ವರ್ಣಿಸಿದ್ದನು.—1 ಸಮುವೇಲ 16:18; 17:23, 24, 45-51; 18:5-7.
5 ಪ್ರಸಿದ್ಧಿ, ಸೌಂದರ್ಯ, ಯೌವನ, ವಾಕ್ಚಾತುರ್ಯ, ಸಂಗೀತ ಕೌಶಲ, ಯುದ್ಧ ಕುಶಲತೆ, ಮತ್ತು ದೈವಿಕ ಅನುಗ್ರಹ—ಒಬ್ಬ ವ್ಯಕ್ತಿಯು ಬಯಸುವಂಥದ್ದೆಲ್ಲವೂ ದಾವೀದನ ಬಳಿ ಇದ್ದಂತೆ ತೋರುತ್ತಿತ್ತು. ಇವುಗಳಲ್ಲಿ ಒಂದೇ ಒಂದು ಸಾಮರ್ಥ್ಯವು ಸಹ ಅವನಲ್ಲಿ ಅಹಂಕಾರವನ್ನು ಹುಟ್ಟಿಸಬಹುದಾಗಿದ್ದರೂ, ಹಾಗಾಗಲಿಲ್ಲ. ತನ್ನ ಪುತ್ರಿಯನ್ನು ದಾವೀದನಿಗೆ ವಿವಾಹಮಾಡಿಕೊಡುತ್ತೇನೆಂದು ರಾಜ ಸೌಲನಂದಾಗ ದಾವೀದನು ಕೊಟ್ಟ ಉತ್ತರವನ್ನು ಗಮನಿಸಿರಿ. ನಿಜ ದೈನ್ಯಭಾವದಿಂದ ದಾವೀದನು ಹೇಳಿದ್ದು: “ಅರಸನ ಅಳಿಯನಾಗುವದಕ್ಕೆ ನಾನೆಷ್ಟರವನು? ಇಸ್ರಾಯೇಲ್ಯರಲ್ಲಿ ನನ್ನ ಕುಲವೂ ಕುಟುಂಬವೂ ಎಷ್ಟರವು”? (1 ಸಮುವೇಲ 18:18) ಈ ವಚನದ ಮೇಲೆ ಹೇಳಿಕೆಯನ್ನು ಮಾಡುತ್ತ ಒಬ್ಬ ವಿದ್ವಾಂಸನು ಹೇಳಿದ್ದು: “ದಾವೀದನ ಮಾತುಗಳ ಅರ್ಥವು, ಅವನು ತನ್ನ ಸ್ವಂತ ಯೋಗ್ಯತೆ, ಸಾಮಾಜಿಕ ಸ್ಥಾನ, ಇಲ್ಲವೆ ತನ್ನ ವಂಶಾವಳಿಯ ಕಾರಣದಿಂದಲೂ ರಾಜನ ಅಳಿಯನಾಗುವ ಸನ್ಮಾನವನ್ನು ಪಡೆಯುವ ಅರ್ಹತೆಯನ್ನು ಪಡೆದಿಲ್ಲ ಎಂದಾಗಿತ್ತು.”
6 ದಾವೀದನ ದೈನ್ಯಭಾವವು, ಅಪರಿಪೂರ್ಣ ಮಾನವರಿಗೆ ಹೋಲಿಸುವಾಗ ಯೆಹೋವನು ಪ್ರತಿಯೊಂದು ವಿಧದಲ್ಲಿಯೂ ತೀರ ಶ್ರೇಷ್ಠನೆಂಬುದನ್ನು ಅವನು ಅಂಗೀಕರಿಸಿದ್ದರ ಮೇಲೆ ಹೊಂದಿಕೊಂಡಿತ್ತು. ಹಾಗಿದ್ದರೂ ದೇವರು ಮನುಷ್ಯನನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳುತ್ತಾನೆಂಬ ವಿಷಯವು ದಾವೀದನನ್ನು ಬೆರಗುಗೊಳಿಸಿತು. (ಕೀರ್ತನೆ 144:3) ಮತ್ತು ತನಗೆ ದೊರೆತಿರುವ ಯಾವುದೇ ಮಹತ್ತು ಯೆಹೋವನು ದೈನ್ಯವನ್ನು ತೋರಿಸಿದ ಕಾರಣವೇ ಅಂದರೆ ತನ್ನನ್ನು ಪೋಷಿಸಿ, ಸಂರಕ್ಷಿಸಿ, ಪರಾಮರಿಸಲು ಆತನು ತಗ್ಗಿಸಿಕೊಂಡ ಕಾರಣವೇ ಎಂದೂ ದಾವೀದನಿಗೆ ತಿಳಿದಿತ್ತು. (ಕೀರ್ತನೆ 18:35) ನಮಗೆ ಎಷ್ಟೊಂದು ಸೊಗಸಾದ ಪಾಠವಿದು! ನಮ್ಮ ಪ್ರತಿಭೆಗಳು, ಸಾಧನೆಗಳು, ಮತ್ತು ದೇವಪ್ರಭುತ್ವಾತ್ಮಕ ನೇಮಕಗಳು ನಮ್ಮನ್ನು ಎಂದಿಗೂ ಗರ್ವಿಷ್ಠರನ್ನಾಗಿ ಮಾಡಬಾರದು. ಅಪೊಸ್ತಲ ಪೌಲನು ಬರೆದುದು: “ದೇವರಿಂದ ಹೊಂದದೆ ಇರುವಂಥದು ನಿನ್ನಲ್ಲಿ ಒಂದಾದರೂ ಉಂಟೋ? ಹೊಂದಿದ ಮೇಲೆ ಹೊಂದದವನಂತೆ ನೀನು ಯಾಕೆ ಹಿಗ್ಗಿಕೊಳ್ಳುತ್ತೀ?” (1 ಕೊರಿಂಥ 4:7) ದೇವರಾತ್ಮವನ್ನು ಹೊಂದಿ ಆತನ ಒಪ್ಪಿಗೆಯನ್ನು ಪಡೆಯಲು ನಾವು ದೈನ್ಯಭಾವವನ್ನು ಬೆಳೆಸಿಕೊಳ್ಳುತ್ತ, ಅದನ್ನು ಕಾಪಾಡಿಕೊಳ್ಳಬೇಕು.—ಯಾಕೋಬ 4:6.
‘ಮುಯ್ಯಿಗೆ ಮುಯ್ಯಿ ತೀರಿಸಬೇಡಿ’
7 ದಾವೀದನ ಪ್ರಖ್ಯಾತಿ ಸ್ವತಃ ಅವನ ಹೃದಯದಲ್ಲಿ ಗರ್ವವನ್ನು ಹುಟ್ಟಿಸದಿದ್ದರೂ, ದೇವರಾತ್ಮವನ್ನು ಕಳೆದುಕೊಂಡಿದ್ದ ರಾಜ ಸೌಲನಲ್ಲಿ ಅದು ಮಾರಕವಾದ ಮತ್ಸರವನ್ನು ಹುಟ್ಟಿಸಿತು. ಈ ಕಾರಣದಿಂದ, ದಾವೀದನು ಯಾವುದೇ ತಪ್ಪನ್ನು ಮಾಡಿರದಿದ್ದರೂ ತನ್ನ ಜೀವಕ್ಕಾಗಿ ಪಲಾಯನಗೈದು, ಅರಣ್ಯದಲ್ಲಿ ವಾಸಿಸಬೇಕಾಯಿತು. ಒಮ್ಮೆ ಅರಸನಾದ ಸೌಲನು ದಾವೀದನನ್ನು ಪಟ್ಟುಹಿಡಿದು ಬೆನ್ನಟ್ಟುತ್ತಿದ್ದಾಗ, ತಿಳಿಯದೆ ದಾವೀದನೂ ಅವನ ಸಂಗಾತಿಗಳೂ ಅಡಗಿದ್ದ ಅದೇ ಗುಹೆಯೊಳಗೆ ಹೋದನು. ಸೌಲನನ್ನು ಕೊಲ್ಲಲು ದೇವರು ಕೊಟ್ಟಿರುವ ಅವಕಾಶದಂತೆ ತೋರಿದ ಈ ಸಂದರ್ಭವನ್ನು ಸದುಪಯೋಗಿಸುವಂತೆ ದಾವೀದನ ಸಂಗಾತಿಗಳು ಅವನನ್ನು ಪ್ರೋತ್ಸಾಹಿಸಿದರು. ಆ ಗುಹೆಯ ಕತ್ತಲೆಯಲ್ಲಿ ಅವರು ಪಿಸುಗುಟ್ಟುತ್ತ ದಾವೀದನಿಗೆ, “ನಿನ್ನ ಶತ್ರುವನ್ನು ನಿನ್ನ ಕೈಗೆ ಒಪ್ಪಿಸಿಕೊಡುವೆನು; ಆಗ ನೀನು ಅವನನ್ನು ಮನಸ್ಸಿಗೆ ಬಂದಂತೆ ನಡಿಸಬಹುದು ಎಂದು ಯೆಹೋವನು ನಿನಗೆ ಹೇಳಿದ ಮಾತು ನೆರವೇರುವ ದಿವಸ ಇದೇ” ಎಂದು ಹೇಳುವುದನ್ನು ನಾವು ಮನಸ್ಸಲ್ಲೇ ಚಿತ್ರಿಸಿಕೊಳ್ಳಬಹುದು.—1 ಸಮುವೇಲ 24:2-6.
8 ಆದರೆ ಸೌಲನಿಗೆ ಹಾನಿ ಬಗೆಯಲು ದಾವೀದನು ನಿರಾಕರಿಸಿದನು. ನಂಬಿಕೆ ಮತ್ತು ತಾಳ್ಮೆಯನ್ನು ತೋರಿಸುತ್ತ ಅವನು ವಿಷಯಗಳನ್ನು ಯೆಹೋವನ ಕೈಯಲ್ಲಿ ಬಿಡಲು ತೃಪ್ತನಾಗಿದ್ದನು. ಅರಸನು ಗುಹೆ ಬಿಟ್ಟುಹೋದ ಮೇಲೆ ದಾವೀದನು ಅವನನ್ನು ಕೂಗಿ ಹೇಳಿದ್ದು: “ಯೆಹೋವನೇ ನಮ್ಮ ಉಭಯರ ವ್ಯಾಜ್ಯವನ್ನು ತೀರಿಸಲಿ; ಆತನೇ ನನಗೋಸ್ಕರ ನಿನಗೆ ಮುಯ್ಯಿಸಲ್ಲಿಸಲಿ; ನಾನಂತೂ ನಿನಗೆ ವಿರೋಧವಾಗಿ ಕೈಯೆತ್ತುವದಿಲ್ಲ.” (1 ಸಮುವೇಲ 24:12) ಸೌಲನು ದೋಷಿಯೆಂದು ದಾವೀದನಿಗೆ ತಿಳಿದಿದ್ದರೂ, ಅವನು ಮುಯ್ಯಿ ತೀರಿಸಲೂ ಇಲ್ಲ, ಸೌಲನನ್ನು ಬೈಯುತ್ತಾ ಮಾತಾಡಲೂ ಇಲ್ಲ ಇಲ್ಲವೆ ಅವನ ಬಗ್ಗೆ ನಿಂದಿಸಿ ಇತರರೊಂದಿಗೆ ಮಾತಾಡಿದ್ದೂ ಇಲ್ಲ. ಇತರ ಅನೇಕ ಸಂದರ್ಭಗಳಲ್ಲಿಯೂ ತಾನೇ ಸೇಡು ತೀರಿಸುವ ವಿಷಯದಲ್ಲಿ ದಾವೀದನು ತನ್ನನ್ನು ನಿಯಂತ್ರಿಸಿಕೊಂಡನು. ಇದಕ್ಕೆ ಬದಲಾಗಿ, ಯೆಹೋವನೇ ವಿಷಯವನ್ನು ಸರಿಪಡಿಸುವಂತೆ ಆತನ ಮೇಲೆ ಆತುಕೊಂಡನು.—1 ಸಮುವೇಲ 25:32-34; 26:10, 11.
9 ದಾವೀದನಂತೆ ನೀವೂ ಕಷ್ಟಕರ ಸನ್ನಿವೇಶಗಳಲ್ಲಿ ಸಿಕ್ಕಿಕೊಳ್ಳಬಹುದು. ಪ್ರಾಯಶಃ, ಶಾಲಾಸ್ನೇಹಿತರು, ಸಹೋದ್ಯೋಗಿಗಳು, ಕುಟುಂಬದ ಸದಸ್ಯರು ಅಥವಾ ನಿಮ್ಮ ನಂಬಿಕೆಯಲ್ಲಿ ಪಾಲುಗಾರರಾಗದ ಇತರರು ನಿಮ್ಮನ್ನು ವಿರೋಧಿಸುತ್ತಿರಬಹುದು ಅಥವಾ ಹಿಂಸಿಸುತ್ತಿರಬಹುದು. ಪ್ರತೀಕಾರ ಸಲ್ಲಿಸಬೇಡಿರಿ. ಪವಿತ್ರಾತ್ಮದ ಸಹಾಯಕ್ಕಾಗಿ ಯೆಹೋವನಲ್ಲಿ ಕೇಳಿಕೊಂಡು ಆತನಿಗಾಗಿ ಕಾಯಿರಿ. ಆಗ ಆ ಅವಿಶ್ವಾಸಿಗಳು ನಿಮ್ಮ ಸುನಡತೆಯಿಂದ ಪ್ರಭಾವಿಸಲ್ಪಟ್ಟು ವಿಶ್ವಾಸಿಗಳಾಗುವುದು ಸಂಭಾವ್ಯ. (1 ಪೇತ್ರ 3:1, 2) ಹೇಗಿದ್ದರೂ, ನಿಮ್ಮ ಸನ್ನಿವೇಶವನ್ನು ಯೆಹೋವನು ನೋಡುತ್ತಾನೆಂಬ ಮತ್ತು ತನ್ನ ಕ್ಲುಪ್ತ ಕಾಲದಲ್ಲಿ ಏನಾದರೂ ಮಾಡುವನೆಂಬ ಆಶ್ವಾಸನೆ ನಿಮಗಿರಲಿ. ಅಪೊಸ್ತಲ ಪೌಲನು ಬರೆದುದು: “ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವದನ್ನು ದೇವರಿಗೆ ಬಿಡಿರಿ. ಯಾಕಂದರೆ ಮುಯ್ಯಿಗೆ ಮುಯ್ಯಿ ತೀರಿಸುವದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು ಎಂದು ಕರ್ತನು [“ಯೆಹೋವನು,” NW] ಹೇಳುತ್ತಾನೆಂಬದಾಗಿ ಬರೆದದೆ.”—ರೋಮಾಪುರ 12:19.
‘ಶಿಸ್ತಿಗೆ ಕಿವಿಗೊಡಿ’
10 ವರುಷಗಳು ಕಳೆದವು. ದಾವೀದನು ಭಾರೀ ಪ್ರಖ್ಯಾತಿ ಪಡೆದ ಒಬ್ಬ ಜನಪ್ರಿಯ ಅರಸನಾದನು. ಅವನ ಎದ್ದುಕಾಣುವ ನಂಬಿಗಸ್ತಿಕೆಯ ಜೀವನ ಮಾರ್ಗ ಮತ್ತು ಯೆಹೋವನ ಸ್ತುತಿಗಾಗಿ ಅವನು ಬರೆದ ಸೊಗಸಾದ ಕೀರ್ತನೆಗಳು, ಅವನು ಗುರುತರವಾದ ಪಾಪವನ್ನು ಎಂದಿಗೂ ಮಾಡನೆಂಬ ಅಭಿಪ್ರಾಯವನ್ನು ಕೊಟ್ಟೀತು. ಆದರೂ ಅವನು ಗುರುತರವಾದ ಪಾಪದಲ್ಲಿ ಸಿಕ್ಕಿಕೊಂಡನು. ಒಂದು ದಿನ, ಅರಸನು ತನ್ನ ಮಾಳಿಗೆಯಿಂದ ಒಬ್ಬ ಸುಂದರ ಸ್ತ್ರೀಯು ಸ್ನಾನಮಾಡುವುದನ್ನು ಕಂಡನು. ಅವಳ ಬಗ್ಗೆ ಅವನು ವಿಚಾರಿಸಲಾಗಿ, ಆಕೆ ಬತ್ಷೆಬೆಯೆಂದೂ ಆಕೆಯ ಪತಿ ಊರೀಯನೆಂದೂ, ಮತ್ತು ಅವನು ಯುದ್ಧಕ್ಕೆ ಹೋಗಿದ್ದಾನೆಂದೂ ತಿಳಿದುಬಂದಾಗ, ದಾವೀದನು ಆಕೆಯನ್ನು ಕರೇಕಳುಹಿಸಿ ಆಕೆಯೊಂದಿಗೆ ಸಂಭೋಗಮಾಡಿದನು. ತರುವಾಯ ಆಕೆ ಗರ್ಭವತಿಯಾಗಿದ್ದಾಳೆಂದು ಅವನಿಗೆ ತಿಳಿದುಬಂತು. ಈ ವಿಷಯ ಬಯಲಾಗುವಲ್ಲಿ ಅದೆಂಥ ಗುಲ್ಲೆಬ್ಬಿಸುವುದು! ಮೋಶೆಯ ಧರ್ಮಶಾಸ್ತ್ರಾನುಸಾರ ಹಾದರವು ಮರಣದಂಡನೆಗರ್ಹವಾದ ಅಪರಾಧವಾಗಿತ್ತು. ಈ ಪಾಪವನ್ನು ಹೇಗೊ ಮುಚ್ಚಿಡಸಾಧ್ಯವಿದೆಯೆಂದು ಅರಸನು ನೆನಸಿದನೆಂಬುದು ಸುವ್ಯಕ್ತ. ಆದಕಾರಣ ಅವನು ಊರೀಯನನ್ನು ಯೆರೂಸಲೇಮಿಗೆ ಹಿಂದಿರುಗಿಸುವಂತೆ ಸೈನ್ಯಕ್ಕೆ ಆಜ್ಞೆ ಕೊಟ್ಟನು. ಹಿಂದೆ ಬಂದ ಊರೀಯನು ಬತ್ಷೆಬೆಯೊಂದಿಗೆ ರಾತ್ರಿಯನ್ನು ಕಳೆಯುವನೆಂದು ದಾವೀದನು ನಿರೀಕ್ಷಿಸಿದರೂ ಹಾಗಾಗಲಿಲ್ಲ. ಇದರಿಂದ ಹತಾಶನಾದ ದಾವೀದನು ಸೇನಾಪತಿಯಾದ ಯೋವಾಬನಿಗೆ ಬರೆದ ಒಂದು ಪತ್ರದೊಂದಿಗೆ ಊರೀಯನನ್ನು ಯುದ್ಧರಂಗಕ್ಕೆ ಹಿಂದೆ ಕಳುಹಿಸಿದನು. ಆ ಪತ್ರದಲ್ಲಿ, ಊರೀಯನು ಸಾಯುವಂತೆ ಯುದ್ಧ ಜೋರಾಗಿ ನಡೆಯುವ ಸ್ಥಳದಲ್ಲಿ ಅವನನ್ನು ಹಾಕಬೇಕೆಂದು ಹೇಳಲಾಗಿತ್ತು. ಯೋವಾಬನು ಅದಕ್ಕೆ ವಿಧೇಯನಾದನು ಮತ್ತು ಊರೀಯನು ಕೊಲ್ಲಲ್ಪಟ್ಟನು. ಬತ್ಷೆಬೆ ವಾಡಿಕೆಯ ಶೋಕಾವಧಿಯನ್ನು ಆಚರಿಸಿದ ಬಳಿಕ ದಾವೀದನು ಆಕೆಯನ್ನು ಪತ್ನಿಯಾಗಿ ತೆಗೆದುಕೊಂಡನು.—2 ಸಮುವೇಲ 11:1-27.
11 ಈ ಒಳಸಂಚು ಕಾರ್ಯಸಾಧಕವಾಯಿತು ಎಂಬಂತೆ ತೋರಿತು. ಆದರೆ ಈ ವಿಷಯವೆಲ್ಲ ಯೆಹೋವನ ಮುಂದೆ ಬಯಲಾಗಿದೆ ಎಂಬುದು ದಾವೀದನಿಗೆ ತಿಳಿದಿರಬೇಕಿತ್ತು. (ಇಬ್ರಿಯ 4:13) ತಿಂಗಳುಗಳು ದಾಟಲಾಗಿ, ಮಗು ಜನಿಸಿತು. ಆಗ ದೇವರ ನಿರ್ದೇಶನದ ಮೇರೆಗೆ ಪ್ರವಾದಿಯಾದ ನಾತಾನನು ದಾವೀದನ ಬಳಿಗೆ ಹೋದನು. ಆ ಪ್ರವಾದಿಯು ಅರಸನಿಗೆ, ತುಂಬ ಕುರಿಗಳಿದ್ದ ಐಶ್ವರ್ಯವಂತನೊಬ್ಬನು ಒಬ್ಬ ಬಡವನಲ್ಲಿದ್ದ ಒಂದೇ ಒಂದು ಪ್ರೀತಿಯ ಕುರಿಯನ್ನು ತೆಗೆದುಕೊಂಡು ವಧಿಸಿದ ಒಂದು ಸನ್ನಿವೇಶವನ್ನು ವರ್ಣಿಸಿದನು. ಈ ಕಥೆಯು ದಾವೀದನ ನ್ಯಾಯಪ್ರಜ್ಞೆಯನ್ನು ಉದ್ರೇಕಿಸಿದರೂ ಅದರ ಗೂಢಾರ್ಥದ ಕುರಿತು ಅವನ ಮನಸ್ಸಿನಲ್ಲಿ ಯಾವ ಸಂಶಯವನ್ನೂ ಎಬ್ಬಿಸಲಿಲ್ಲ. ದಾವೀದನು ಆ ಐಶ್ವರ್ಯವಂತನ ಎದುರಾಗಿ ಥಟ್ಟನೆ ನ್ಯಾಯತೀರ್ಪನ್ನು ಕೊಟ್ಟನು. “ಆ ಮನುಷ್ಯನು ಸಾಯಲೇ ಬೇಕು” ಎಂದು ಅವನು ಕೋಪೋದ್ರಿಕ್ತನಾಗಿ ನಾತಾನನಿಗೆ ಹೇಳಿದನು.—2 ಸಮುವೇಲ 12:1-6.
12 ಇದಕ್ಕೆ ಆ ಪ್ರವಾದಿಯು “ಆ ಮನುಷ್ಯನು ನೀನೇ” ಎಂದು ಪ್ರತ್ಯುತ್ತರಿಸಿದನು. ದಾವೀದನು ತನಗೆ ತಾನೇ ತೀರ್ಪನ್ನು ವಿಧಿಸಿದ್ದನು. ಕೂಡಲೇ ದಾವೀದನ ಕೋಪದ ಸ್ಥಾನವನ್ನು ಅತಿಯಾದ ನಾಚಿಕೆ ಮತ್ತು ಅಗಾಧ ಶೋಕವು ಆಕ್ರಮಿಸಿತೆಂಬುದು ನಿಶ್ಚಯ. ಸ್ತಬ್ಧನಾಗಿಬಿಟ್ಟಿದ್ದ ಅವನು, ನಾತಾನನು ಯೆಹೋವನ ಅನಿವಾರ್ಯ ತೀರ್ಪನ್ನು ಕೊಡುತ್ತಿದ್ದಾಗ ಕಿವಿಗೊಟ್ಟನು. ಅದರಲ್ಲಿ ಉಪಶಮನ ಅಥವಾ ಸಾಂತ್ವನದ ಪದಗಳಿರಲಿಲ್ಲ. ದಾವೀದನು ಕೆಟ್ಟದ್ದನ್ನು ಮಾಡುವ ಮೂಲಕ ಯೆಹೋವನ ಮಾತನ್ನು ತುಚ್ಛೀಕರಿಸಿದ್ದನು. ವೈರಿಗಳ ಕತ್ತಿಯಿಂದ ಅವನು ಊರೀಯನನ್ನು ಕೊಂದುಹಾಕಿದನಲ್ಲವೆ? ಆದಕಾರಣ, ಅವನ ಕುಟುಂಬದಿಂದ ಕತ್ತಿಯು ಅಗಲಿಹೋಗದು. ಅವನು ಗುಪ್ತವಾಗಿ ಊರೀಯನ ಹೆಂಡತಿಯನ್ನು ತೆಗೆದುಕೊಂಡಿರಲಿಲ್ಲವೆ? ಆದಕಾರಣ, ತದ್ರೀತಿಯ ಕೇಡು ಅವನ ಮೇಲೆ ಗುಪ್ತವಾಗಿಯಲ್ಲ, ಬಹಿರಂಗವಾಗಿ ಬರಲಿತ್ತು.—2 ಸಮುವೇಲ 12:7-12.
13 ದಾವೀದನು ತನ್ನ ಪಾಪವನ್ನು ಅಲ್ಲಗಳೆಯದೆ ಇದ್ದದ್ದು ಪ್ರಶಂಸಾರ್ಹ. ಅವನು ಪ್ರವಾದಿ ನಾತಾನನ ಮೇಲೆ ಕೋಪಗೊಂಡು ಕಿರಿಚಿಕೊಳ್ಳಲಿಲ್ಲ. ಅವನು ಇತರರನ್ನು ದೂರಲೂ ಇಲ್ಲ, ಇಲ್ಲವೆ ತನ್ನ ತಪ್ಪಿಗೆ ನೆವಗಳನ್ನೂ ಕೊಡಲಿಲ್ಲ. ಅವನ ಪಾಪಗಳನ್ನು ಅವನ ಮುಖದ ಮೇಲೆಯೇ ತಿಳಿಸಿದಾಗ, ದಾವೀದನು ಅದಕ್ಕೆ ತಾನು ಜವಾಬ್ದಾರನೆಂದು ಒಪ್ಪಿಕೊಳ್ಳುತ್ತ, “ನಾನು ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದ್ದೇನೆ” ಎಂದು ಹೇಳಿದನು. (2 ಸಮುವೇಲ 12:13) ಕೀರ್ತನೆ 51, ಅವನ ಅಪರಾಧೀಭಾವದಿಂದಾಗಿ ಉಂಟಾದ ಸಂಕಟವನ್ನು ಮತ್ತು ಅವನ ಪಶ್ಚಾತ್ತಾಪದ ಆಳವನ್ನು ತೋರಿಸುತ್ತದೆ. ಅವನು ಯೆಹೋವನಿಗೆ, “ನಿನ್ನ ಸನ್ನಿಧಿಯಿಂದ ನನ್ನನ್ನು ತಳ್ಳಬೇಡ; ನಿನ್ನ ಪರಿಶುದ್ಧಾತ್ಮವನ್ನು ನನ್ನಿಂದ ತೆಗೆಯಬೇಡ,” ಎಂದು ಬೇಡಿಕೊಂಡನು. ಯೆಹೋವನು ತನ್ನ ಕರುಣೆಯಿಂದ, ಪಾಪದ ಕಾರಣ “ಪಶ್ಚಾತ್ತಾಪದಿಂದ ಜಜ್ಜಿಹೋದ ಮನಸ್ಸನ್ನು” ತಿರಸ್ಕರಿಸುವುದಿಲ್ಲವೆಂದು ಅವನು ನಂಬಿದ್ದನು. (ಕೀರ್ತನೆ 51:11, 17) ದಾವೀದನು ದೇವರಾತ್ಮದ ಮೇಲೆ ಆತುಕೊಳ್ಳುವುದನ್ನು ಮುಂದುವರಿಸಿದನು. ಯೆಹೋವನು ದಾವೀದನ ಪಾಪದ ಕಹಿ ಪರಿಣಾಮಗಳಿಂದ ಅವನನ್ನು ರಕ್ಷಿಸಲಿಲ್ಲವಾದರೂ ಅವನನ್ನು ಕ್ಷಮಿಸಿದನು.
14 ನಾವೆಲ್ಲರೂ ಅಪರಿಪೂರ್ಣರಾಗಿದ್ದೇವೆ ಮತ್ತು ಎಲ್ಲರೂ ಪಾಪಮಾಡುತ್ತೇವೆ. (ರೋಮಾಪುರ 3:23) ಕೆಲವೊಮ್ಮೆ ನಾವು ದಾವೀದನಂತೆ ಘೋರ ಪಾಪದಲ್ಲಿ ಸಿಕ್ಕಿಬೀಳಬಹುದು. ಪ್ರೀತಿಯ ತಂದೆಯು ತನ್ನ ಮಕ್ಕಳಿಗೆ ಶಿಸ್ತನ್ನು ಕೊಡುವಂತೆಯೇ, ತನ್ನನ್ನು ಸೇವಿಸಬಯಸುವವರನ್ನು ಯೆಹೋವನು ತಿದ್ದುತ್ತಾನೆ. ಶಿಸ್ತು ಉಪಯುಕ್ತವಾದರೂ, ಅದನ್ನು ಅಂಗೀಕರಿಸುವುದು ಸುಲಭವಲ್ಲ. ವಾಸ್ತವದಲ್ಲಿ, ಕೆಲವು ಸಲ, ಅದು “ದುಃಖಕರ”ವಾಗಿರುತ್ತದೆ. (ಇಬ್ರಿಯ 12:6, 11) ಆದರೂ ನಾವು “ಶಿಸ್ತಿಗೆ ಕಿವಿ”ಗೊಟ್ಟರೆ ನಾವು ಯೆಹೋವನೊಂದಿಗೆ ರಾಜಿಮಾಡಿಕೊಳ್ಳುವೆವು. (ಜ್ಞಾನೋಕ್ತಿ 8:33, NW) ಯೆಹೋವನ ಆತ್ಮದ ಆಶೀರ್ವಾದಗಳನ್ನು ಸದಾ ಅನುಭವಿಸಬೇಕಾದರೆ, ನಾವು ತಿದ್ದುಪಾಟನ್ನು ಅಂಗೀಕರಿಸಿ, ದೇವರಿಗೆ ಒಪ್ಪಿಗೆಯವರಾಗಲು ಕಾರ್ಯನಡಿಸಬೇಕು.
ಅಸ್ಥಿರವಾದ ಐಶ್ವರ್ಯದ ಮೇಲೆ ನಿರೀಕ್ಷೆಯನ್ನಿಡಬೇಡಿ
15 ದಾವೀದನು ಒಂದು ಪ್ರತಿಷ್ಠಿತ ಸಾಮಾಜಿಕ ದರ್ಜೆಯಿಂದ ಬಂದಿದ್ದನೆಂಬುದಕ್ಕೆ ಅಥವಾ ಅವನ ಕುಟುಂಬ ಧನಿಕವಾಗಿತ್ತೆಂಬುದಕ್ಕೆ ಯಾವ ಆಧಾರವೂ ಇಲ್ಲ. ಆದರೆ, ಅವನು ರಾಜನಾಗಿದ್ದ ಸಮಯದಲ್ಲಿ ಭಾರೀ ಸಂಪತ್ತನ್ನು ಗಳಿಸಿದನು. ನಿಮಗೆ ತಿಳಿದಿರುವಂತೆ, ಅನೇಕರು ಧನವನ್ನು ಶೇಖರಿಸಿಟ್ಟು, ಅದನ್ನು ಲೋಭದಿಂದ ಹೆಚ್ಚಿಸಲು ಪ್ರಯತ್ನಿಸುತ್ತಾರೆ ಇಲ್ಲವೆ ಅದನ್ನು ಸ್ವಾರ್ಥ ರೀತಿಯಲ್ಲಿ ಖರ್ಚುಮಾಡುತ್ತಾರೆ. ಇತರರು ತಮ್ಮನ್ನೇ ಹೆಚ್ಚಿಸಿಕೊಳ್ಳಲಿಕ್ಕೋಸ್ಕರ ಹಣವನ್ನು ಉಪಯೋಗಿಸುತ್ತಾರೆ. (ಮತ್ತಾಯ 6:2) ದಾವೀದನು ತನ್ನ ಧನವನ್ನು ಬೇರೆ ರೀತಿಯಾಗಿ ಬಳಸಿದನು. ಯೆಹೋವನನ್ನು ಗೌರವಿಸುವುದೇ ಅವನ ಹಂಬಲವಾಗಿತ್ತು. ಆಗ ಯೆರೂಸಲೇಮಿನಲ್ಲಿ ಒಂದು “ಬಟ್ಟೆಯ ಮನೆಯಲ್ಲಿ” ಇದ್ದ ಮಂಜೂಷವನ್ನು ಇಡಲು ಯೆಹೋವನಿಗಾಗಿ ಒಂದು ಆಲಯವನ್ನು ಕಟ್ಟುವ ತನ್ನ ಅಪೇಕ್ಷೆಯನ್ನು ದಾವೀದನು ನಾತಾನನಿಗೆ ತಿಳಿಸಿದನು. ದಾವೀದನ ಇಂಗಿತವನ್ನು ಯೆಹೋವನು ಮೆಚ್ಚಿದರೂ ಆಲಯವನ್ನು ದಾವೀದನ ಪುತ್ರ ಸೊಲೊಮೋನನು ಕಟ್ಟುವನೆಂದು ನಾತಾನನ ಮೂಲಕ ಹೇಳಿಸಿದನು.—2 ಸಮುವೇಲ 7:1, 2, 12, 13.
16 ಈ ಬೃಹತ್ ಕಟ್ಟಡ ರಚನೆಯ ಯೋಜನೆಯಲ್ಲಿ ಬಳಸಲು ಬೇಕಾದ ಸಾಮಗ್ರಿಗಳನ್ನು ದಾವೀದನು ಶೇಖರಿಸಿದನು. ದಾವೀದನು ಸೊಲೊಮೋನನಿಗೆ ಹೇಳಿದ್ದು: “ಯೆಹೋವನ ಆಲಯಕ್ಕೋಸ್ಕರ ಒಂದು ಲಕ್ಷ ತಲಾಂತು ಬಂಗಾರವನ್ನೂ ಹತ್ತು ಲಕ್ಷ ತಲಾಂತು ಬೆಳ್ಳಿಯನ್ನೂ ಲೆಕ್ಕವಿಲ್ಲದಷ್ಟು ತಾಮ್ರ ಕಬ್ಬಿಣ ಇವುಗಳನ್ನೂ ಕಲ್ಲುಮರಗಳನ್ನೂ ಕೂಡಿಸಿದ್ದೇನೆ. ನೀನು ಇನ್ನೂ ಹೆಚ್ಚು ಕೂಡಿಸುವಿ.” ತನ್ನ ಸ್ವಂತ ಭಂಡಾರದಿಂದ ಅವನು 3,000 ತಲಾಂತು ಚಿನ್ನ ಮತ್ತು 7,000 ತಲಾಂತು ಬೆಳ್ಳಿಯನ್ನು ವಂತಿಗೆಯಾಗಿ ಕೊಟ್ಟನು.a (1 ಪೂರ್ವಕಾಲವೃತ್ತಾಂತ 22:14, 15; 29:3, 4) ದಾವೀದನ ಈ ಉದಾರ ದಾನವು ಒಂದು ಡಂಭಾಚಾರವಾಗಿರದೆ, ಯೆಹೋವ ದೇವರಲ್ಲಿ ಅವನಿಗಿದ್ದ ನಂಬಿಕೆ ಮತ್ತು ಭಕ್ತಿಯ ಅಭಿವ್ಯಕ್ತಿಯಾಗಿತ್ತು. ತನ್ನ ಸಂಪತ್ತಿನ ಉಗಮನನ್ನು ಅಂಗೀಕರಿಸುತ್ತಾ ಅವನು ಯೆಹೋವನಿಗೆ ಹೇಳಿದ್ದು: “ಸಮಸ್ತವು ನಿನ್ನಿಂದಲೇ; ನೀನು ಕೊಟ್ಟದ್ದನ್ನೇ ನಿನಗೆ ಕೊಟ್ಟೆವು.” (1 ಪೂರ್ವಕಾಲವೃತ್ತಾಂತ 29:14) ದಾವೀದನ ಉದಾರ ಹೃದಯವು ಶುದ್ಧಾರಾಧನೆಯನ್ನು ವರ್ಧಿಸಲಿಕ್ಕಾಗಿ ಕೈಲಾದದ್ದನ್ನೆಲ್ಲವನ್ನು ಮಾಡುವಂತೆ ಅವನನ್ನು ಪ್ರೇರಿಸಿತು.
17 ತದ್ರೀತಿ, ನಾವೂ ನಮ್ಮ ಪ್ರಾಪಂಚಿಕ ಸ್ವತ್ತುಗಳನ್ನು ಒಳಿತನ್ನು ಮಾಡಲು ಉಪಯೋಗಿಸುವಂತಾಗಲಿ. ಪ್ರಾಪಂಚಿಕತೆಯ ಜೀವನರೀತಿಯನ್ನು ಅನುಸರಿಸುವ ಬದಲಿಗೆ ದೇವರ ಒಪ್ಪಿಗೆಯನ್ನು ಪಡೆಯಲು ಪ್ರಯತ್ನಿಸುವುದು ಹೆಚ್ಚು ಉತ್ತಮ, ಏಕೆಂದರೆ ಅದೇ ನಿಜ ವಿವೇಕ ಮತ್ತು ಸಂತೋಷದ ಮಾರ್ಗವಾಗಿದೆ. ಪೌಲನು ಬರೆದುದು: “ಇಹಲೋಕ ವಿಷಯದಲ್ಲಿ ಐಶ್ವರ್ಯವುಳ್ಳವರು ಅಹಂಕಾರಿಗಳಾಗಿರದೆ ಅಸ್ಥಿರವಾದ ಐಶ್ವರ್ಯದ ಮೇಲೆ ನಿರೀಕ್ಷೆಯನ್ನಿಡದೆ ನಮ್ಮ ಅನುಭೋಗಕ್ಕೋಸ್ಕರ ನಮಗೆ ಎಲ್ಲವನ್ನೂ ಹೇರಳವಾಗಿ ದಯಪಾಲಿಸುವ ದೇವರ ಮೇಲೆ ನಿರೀಕ್ಷೆಯನ್ನಿಡಬೇಕೆಂತಲೂ ವಾಸ್ತವವಾದ ಜೀವವನ್ನು ಹೊಂದುವದಕ್ಕೋಸ್ಕರ ಅವರು ಒಳ್ಳೇದನ್ನು ಮಾಡುವವರೂ ಸತ್ಕಾರ್ಯಗಳಲ್ಲಿ ಐಶ್ವರ್ಯವಂತರೂ ದಾನಧರ್ಮಗಳನ್ನು ಮಾಡುವವರೂ ಪರೋಪಕಾರಮಾಡುವವರೂ ಆಗಿದ್ದು ಮುಂದಿನ ಕಾಲಕ್ಕೆ ಒಳ್ಳೇ ಅಸ್ತಿವಾರವಾಗುವಂಥವುಗಳನ್ನು ತಮಗೆ ಕೂಡಿಸಿಟ್ಟುಕೊಳ್ಳಬೇಕೆಂತಲೂ ಅವರಿಗೆ ಆಜ್ಞಾಪಿಸು.” (1 ತಿಮೊಥೆಯ 6:17-19) ನಮ್ಮ ಆರ್ಥಿಕ ಪರಿಸ್ಥಿತಿ ಹೇಗೇ ಇರಲಿ, ನಾವು ದೇವರಾತ್ಮದ ಮೇಲೆ ಆತುಕೊಂಡು “ದೇವರ ವಿಷಯಗಳಲ್ಲಿ ಐಶ್ವರ್ಯವಂತ”ರನ್ನಾಗಿ ಮಾಡುವ ಜೀವನಮಾರ್ಗವನ್ನು ಅನುಸರಿಸೋಣ. (ಲೂಕ 12:21) ನಮ್ಮ ಸ್ವರ್ಗೀಯ ಪ್ರಿಯ ಪಿತನೊಂದಿಗೆ ಒಪ್ಪಿಗೆಯ ಸಂಬಂಧದಲ್ಲಿರುವುದಕ್ಕಿಂತಲೂ ಹೆಚ್ಚು ಅಮೂಲ್ಯವಾದ ವಿಷಯವು ಮತ್ತೊಂದಿಲ್ಲ.
ದೇವರಿಗೆ ಒಪ್ಪಿಗೆಯವರಾಗಿ ಕಾಣಿಸಿಕೊಳ್ಳಿ
18 ತನ್ನ ಜೀವನದಾದ್ಯಂತ, ದಾವೀದನು ಯೆಹೋವನ ಒಪ್ಪಿಗೆಯನ್ನು ಗಿಟ್ಟಿಸಿಕೊಳ್ಳಲು ಪ್ರಯತ್ನಿಸಿದನು. ತನ್ನ ಗೀತೆಯಲ್ಲಿ ಅವನು, “ದೇವರೇ, ಕರುಣಿಸು. . . . ನೀನೇ ನನ್ನ ಆಶ್ರಯಸ್ಥಾನವಲ್ಲವೇ?” ಎಂದು ಮೊರೆಯಿಟ್ಟನು. (ಕೀರ್ತನೆ 57:1) ಅವನು ಯೆಹೋವನಲ್ಲಿಟ್ಟ ಭರವಸೆ ವ್ಯರ್ಥವಾಗಲಿಲ್ಲ. ದಾವೀದನು “ದೀರ್ಘಾಯುಷ್ಯ”ವುಳ್ಳವನಾಗಿ ಮುದುಕನಾದನು. (1 ಪೂರ್ವಕಾಲವೃತ್ತಾಂತ 29:28) ದಾವೀದನು ಗುರುತರವಾದ ತಪ್ಪುಗಳನ್ನು ಮಾಡಿದ್ದರೂ, ಗಮನಾರ್ಹ ನಂಬಿಕೆಯನ್ನು ಪ್ರದರ್ಶಿಸಿದ ದೇವರ ಸಾಕ್ಷಿಗಳಲ್ಲಿ ಒಬ್ಬನಾಗಿ ಅವನನ್ನು ಜ್ಞಾಪಿಸಿಕೊಳ್ಳಲಾಗುತ್ತದೆ.—ಇಬ್ರಿಯ 11:32.
19 ನೀವು ಜೀವನದಲ್ಲಿ ಬದಲಾಗುತ್ತಿರುವ ಸನ್ನಿವೇಶಗಳನ್ನು ಎದುರಿಸುವಾಗ, ಯೆಹೋವನು ದಾವೀದನನ್ನು ಪೋಷಿಸಿ, ಬಲಪಡಿಸಿ, ತಿದ್ದಿದಂತೆಯೇ ನಿಮಗೂ ಮಾಡಬಲ್ಲನೆಂಬದನ್ನು ಜ್ಞಾಪಕದಲ್ಲಿಡಿರಿ. ಅಪೊಸ್ತಲ ಪೌಲನು, ದಾವೀದನಂತೆಯೇ ತನ್ನ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ಅನುಭವಿಸಿದನು. ಆದರೆ ಅವನೂ ದೇವರಾತ್ಮದ ಮೇಲೆ ಆತುಕೊಂಡು ನಂಬಿಗಸ್ತನಾಗಿ ಉಳಿದನು. ಅವನು ಬರೆದುದು: “ನನ್ನನ್ನು ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ.” (ಫಿಲಿಪ್ಪಿ 4:12, 13) ನಾವು ಯೆಹೋವನ ಮೇಲೆ ಆತುಕೊಳ್ಳುವಲ್ಲಿ, ನಾವು ಯಶಸ್ವಿಯಾಗುವಂತೆ ಆತನು ನಮಗೆ ಸಹಾಯಮಾಡುವನು. ನಾವು ಜಯಹೊಂದಬೇಕೆಂಬುದು ಆತನ ಅಪೇಕ್ಷೆ. ನಾವು ಆತನಿಗೆ ಕಿವಿಗೊಟ್ಟು ಆತನ ಸಮೀಪಕ್ಕೆ ಬರುವಲ್ಲಿ, ಆತನ ಚಿತ್ತವನ್ನು ಮಾಡಲು ಆತನು ಬಲವನ್ನು ದಯಪಾಲಿಸುವನು. ಮತ್ತು ನಾವು ದೇವರಾತ್ಮದ ಮೇಲೆ ಆತುಕೊಳ್ಳುತ್ತಾ ಹೋಗುವುದಾದರೆ ಈಗಲೂ ನಿತ್ಯಕ್ಕೂ ‘ದೇವರಿಗೆ ಒಪ್ಪಿಗೆಯವರಾಗಿ ಕಾಣಿಸಿಕೊಳ್ಳುವುದಕ್ಕೆ’ ನಾವು ಶಕ್ತರಾಗುವೆವು.—2 ತಿಮೊಥೆಯ 2:15, NW.
[ಪಾದಟಿಪ್ಪಣಿ]
a ಇಂದಿನ ಲೆಕ್ಕದಲ್ಲಿ, ದಾವೀದನ ಕಾಣಿಕೆಯ ಒಟ್ಟು ಬೆಲೆ ರೂ. 5,600 ಕೋಟಿಗಿಂತಲೂ ಹೆಚ್ಚಾಗಿರುತ್ತದೆ.
ಹೇಗೆ ಉತ್ತರಿಸುವಿರಿ?
• ಗರ್ವದ ವಿರುದ್ಧ ನಾವು ಹೇಗೆ ಎಚ್ಚರಿಕೆ ವಹಿಸಬಹುದು?
• ನಾವು ಏಕೆ ಮುಯ್ಯಿಗೆ ಮುಯ್ಯಿ ತೀರಿಸಬಾರದು?
• ಶಿಸ್ತಿನ ವಿಷಯದಲ್ಲಿ ನಮ್ಮ ದೃಷ್ಟಿಕೋನ ಏನಾಗಿರಬೇಕು?
• ನಾವು ಐಶ್ವರ್ಯದ ಮೇಲಲ್ಲ ಬದಲಾಗಿ ದೇವರಲ್ಲಿ ಏಕೆ ಭರವಸೆಯಿಡಬೇಕು?
[ಅಧ್ಯಯನ ಪ್ರಶ್ನೆಗಳು]
1. ನಮ್ಮ ಆಧ್ಯಾತ್ಮಿಕ ಕ್ಷೇಮಕ್ಕೆ ಯಾವ ಬದಲಾವಣೆಗಳು ಪಂಥಾಹ್ವಾನವನ್ನು ಒಡ್ಡುತ್ತವೆ?
2. ದಾವೀದನ ಜೀವನ ಹೇಗೆ ಬದಲಾವಣೆಗೀಡಾಯಿತು?
3, 4. ಒಬ್ಬ ಸಾಮಾನ್ಯ ಕುರುಬನಾಗಿದ್ದ ದಾವೀದನು ರಾಷ್ಟ್ರೀಯ ಪ್ರಸಿದ್ಧಿಗೇರಿದ್ದು ಹೇಗೆ?
5. ದಾವೀದನನ್ನು ಯಾವುದು ಅಹಂಕಾರಿಯಾಗಿ ಮಾಡಬಹುದಾಗಿತ್ತು, ಆದರೆ ಅವನು ಹಾಗಾಗಲಿಲ್ಲವೆಂದು ನಮಗೆ ಹೇಗೆ ಗೊತ್ತು?
6. ನಾವು ದೈನ್ಯಭಾವವನ್ನು ಏಕೆ ಬೆಳೆಸಿಕೊಳ್ಳಬೇಕು?
7. ರಾಜ ಸೌಲನನ್ನು ಕೊಲ್ಲಲು ದಾವೀದನಿಗೆ ಯಾವ ಸಂದರ್ಭವು ಒದಗಿಬಂತು?
8. ಸೇಡು ತೀರಿಸುವ ವಿಷಯದಲ್ಲಿ ದಾವೀದನು ತನ್ನನ್ನು ನಿಯಂತ್ರಿಸಿಕೊಂಡದ್ದೇಕೆ?
9. ನಾವು ವಿರೋಧ ಅಥವಾ ಹಿಂಸೆಯನ್ನು ಅನುಭವಿಸುವಲ್ಲಿ ನಾವೇಕೆ ಪ್ರತೀಕಾರ ಸಲ್ಲಿಸಬಾರದು?
10. ದಾವೀದನು ಪಾಪಕ್ಕೆ ಸಿಕ್ಕಿಬಿದ್ದದ್ದು ಹೇಗೆ, ಮತ್ತು ಅವನು ಅದನ್ನು ಮುಚ್ಚಿಹಾಕಲು ಹೇಗೆ ಪ್ರಯತ್ನಿಸಿದನು?
11. ನಾತಾನನು ದಾವೀದನಿಗೆ ಯಾವ ಸನ್ನಿವೇಶವನ್ನು ವರ್ಣಿಸಿದನು, ಮತ್ತು ದಾವೀದನು ಹೇಗೆ ಪ್ರತಿಕ್ರಿಯಿಸಿದನು?
12. ಯೆಹೋವನು ದಾವೀದನಿಗೆ ಯಾವ ತೀರ್ಪನ್ನು ಕೊಟ್ಟನು?
13. ದಾವೀದನು ಯೆಹೋವನ ಶಿಸ್ತಿಗೆ ಹೇಗೆ ಪ್ರತಿಕ್ರಿಯಿಸಿದನು?
14. ಯೆಹೋವನ ಶಿಸ್ತಿಗೆ ನಾವು ಹೇಗೆ ಪ್ರತಿಕ್ರಿಯಿಸಬೇಕು?
15. (ಎ) ಕೆಲವರು ತಮ್ಮ ಐಶ್ವರ್ಯವನ್ನು ಯಾವ ವಿಧಗಳಲ್ಲಿ ಉಪಯೋಗಿಸುತ್ತಾರೆ? (ಬಿ) ದಾವೀದನು ತನ್ನ ಐಶ್ವರ್ಯವನ್ನು ಹೇಗೆ ಬಳಸಲು ಅಪೇಕ್ಷಿಸಿದನು?
16. ದೇವಾಲಯದ ನಿರ್ಮಾಣಕ್ಕಾಗಿ ದಾವೀದನು ಯಾವ ಸಿದ್ಧತೆಗಳನ್ನು ಮಾಡಿದನು?
17. ಒಂದನೆಯ ತಿಮೊಥೆಯ 6:17-19ರ ಸಲಹೆಯು ಧನಿಕರಿಗೂ ಬಡವರಿಗೂ ಹೇಗೆ ಅನ್ವಯಿಸುತ್ತದೆ?
18. ದಾವೀದನು ಕ್ರೈಸ್ತರಿಗೆ ಯಾವ ವಿಧದಲ್ಲಿ ಒಂದು ಉತ್ತಮ ಮಾದರಿಯನ್ನಿಟ್ಟನು?
19. ನಾವು ಹೇಗೆ ದೇವರಿಗೆ ಒಪ್ಪಿಗೆಯವರಾಗಿ ಕಾಣಿಸಿಕೊಳ್ಳಬಲ್ಲೆವು?
[ಪುಟ 16, 17ರಲ್ಲಿರುವ ಚಿತ್ರ]
ದಾವೀದನು ದೇವರಾತ್ಮದ ಮೇಲೆ ಆತುಕೊಂಡು ದೇವರ ಒಪ್ಪಿಗೆಯನ್ನು ಕೋರಿದನು. ನೀವೂ ಹಾಗೆ ಮಾಡುತ್ತಿದ್ದೀರೊ?
[ಪುಟ 18ರಲ್ಲಿರುವ ಚಿತ್ರ]
“ಸಮಸ್ತವು ನಿನ್ನಿಂದಲೇ; ನೀನು ಕೊಟ್ಟದ್ದನ್ನೇ ನಿನಗೆ ಕೊಟ್ಟೆವು”