ನೀವು ಬಹುಮಾನದ ಮೇಲೆ ದೃಷ್ಟಿಯನ್ನು ಕೇಂದ್ರೀಕರಿಸುತ್ತಿದ್ದೀರೋ?
ಆ ರೋಗವು ನಿಧಾನವಾಗಿ ಹೆಚ್ಚುತ್ತಾ ಹೋಗುತ್ತದೆ. ಆರಂಭದಲ್ಲಿ ಅದು ಒಬ್ಬ ವ್ಯಕ್ತಿಯ ಬಾಹ್ಯ ಪರಿಧಿಯ ದೃಷ್ಟಿಯನ್ನು ಕಡಿಮೆಗೊಳಿಸುತ್ತದೆ. ಅದಕ್ಕೆ ಚಿಕಿತ್ಸೆ ಮಾಡಿಸದಿದ್ದಲ್ಲಿ, ಅದು ದೃಷ್ಟಿ ಕ್ಷೇತ್ರದ ಮಧ್ಯ ಭಾಗದ ತನಕವೂ ಹಬ್ಬಸಾಧ್ಯವಿದೆ. ಕಟ್ಟಕಡೆಗೆ, ಅದು ಪೂರ್ಣ ರೀತಿಯಲ್ಲಿ ದೃಷ್ಟಿಯನ್ನು ಕಳೆದುಕೊಳ್ಳುವಂತೆ ಮಾಡಸಾಧ್ಯವಿದೆ. ಯಾವ ರೋಗವಿದು? ದೃಷ್ಟಿಹೀನತೆಗೆ ಮುಖ್ಯ ಕಾರಣವಾಗಿರುವ ಗ್ಲಾಕೋಮ ರೋಗವೇ.
ನಾವು ನಿಧಾನವಾಗಿ ಮತ್ತು ಅಗೋಚರವಾದ ರೀತಿಯಲ್ಲಿ ಅಕ್ಷರಾರ್ಥ ದೃಷ್ಟಿಯನ್ನು ಕಳೆದುಕೊಳ್ಳಸಾಧ್ಯವಿರುವಂತೆಯೇ, ಇದಕ್ಕಿಂತಲೂ ಹೆಚ್ಚು ಅಮೂಲ್ಯವಾದ ರೀತಿಯ ದೃಷ್ಟಿಯನ್ನು ಅಂದರೆ ನಮ್ಮ ಆಧ್ಯಾತ್ಮಿಕ ದೃಷ್ಟಿಯನ್ನು ಸಹ ನಾವು ಕಳೆದುಕೊಳ್ಳಸಾಧ್ಯವಿದೆ. ಆದುದರಿಂದಲೇ, ಆಧ್ಯಾತ್ಮಿಕ ವಿಷಯಗಳನ್ನು ನಮ್ಮ ದೃಷ್ಟಿ ಕ್ಷೇತ್ರದ ಕೇಂದ್ರ ಭಾಗದಲ್ಲಿ ಸರಿಯಾಗಿ ಕೇಂದ್ರೀಕರಿಸುವುದು ಅತ್ಯಾವಶ್ಯಕವಾದದ್ದಾಗಿದೆ.
ಬಹುಮಾನದ ಮೇಲೆ ದೃಷ್ಟಿಯಿಡುವುದು
ನಮ್ಮ ಅಕ್ಷರಾರ್ಥ ಕಣ್ಣುಗಳಿಗೆ “ಕಾಣದಿರುವಂಥ” ವಿಷಯಗಳಲ್ಲಿ, ಯೆಹೋವನು ತನ್ನ ನಿಷ್ಠಾವಂತ ಸೇವಕರಿಗೆ ನೀಡಲಿರುವ ನಿತ್ಯಜೀವದ ಮಹಿಮಾಯುತ ಬಹುಮಾನವು ಒಳಗೂಡಿದೆ. (2 ಕೊರಿಂಥ 4:18) ಕ್ರೈಸ್ತರು ದೇವರ ಸೇವೆಮಾಡುವ ಪ್ರಮುಖ ಕಾರಣವು ಅವರು ಆತನನ್ನು ಪ್ರೀತಿಸುವುದೇ ಆಗಿದೆ ಎಂಬುದಂತೂ ನಿಶ್ಚಯ. (ಮತ್ತಾಯ 22:37) ಆದರೂ, ನಾವು ನಮ್ಮ ಬಹುಮಾನಕ್ಕಾಗಿ ಆತುರದಿಂದ ಎದುರುನೋಡುವಂತೆ ಯೆಹೋವನು ಬಯಸುತ್ತಾನೆ. “ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು” ಕೊಡುವಂಥ ಒಬ್ಬ ಉದಾರಭಾವವುಳ್ಳ ತಂದೆಯೋಪಾದಿ ನಾವು ಆತನನ್ನು ಪರಿಗಣಿಸಬೇಕೆಂಬುದು ಆತನ ಬಯಕೆಯಾಗಿದೆ. (ಇಬ್ರಿಯ 11:6) ಆದುದರಿಂದ, ಯಾರು ನಿಜವಾಗಿಯೂ ದೇವರ ಕುರಿತು ತಿಳಿದುಕೊಂಡು ಆತನನ್ನು ಪ್ರೀತಿಸುತ್ತಾರೋ ಅವರು, ಆತನು ವಾಗ್ದಾನಿಸಿರುವ ಆಶೀರ್ವಾದಗಳನ್ನು ಅಮೂಲ್ಯವಾಗಿ ಪರಿಗಣಿಸುತ್ತಾರೆ ಮತ್ತು ಅವುಗಳ ನೆರವೇರಿಕೆಗಾಗಿ ಹಾತೊರೆಯುತ್ತಾರೆ.—ರೋಮಾಪುರ 8:19, 24, 25.
ಈ ಪತ್ರಿಕೆಯ ಹಾಗೂ ಎಚ್ಚರ! ಎಂಬ ಇದರ ಜೊತೆ ಪತ್ರಿಕೆಯ ಅನೇಕ ವಾಚಕರು, ಬರಲಿರುವ ಪರದೈಸ್ ಭೂಮಿಯನ್ನು ಚಿತ್ರಿಸುವಂಥ ಕಲಾಚಿತ್ರಗಳನ್ನು ತುಂಬ ಇಷ್ಟಪಡುತ್ತಾರೆ. ಪರದೈಸ್ ಹೇಗೆ ಕಾಣುತ್ತದೆ ಎಂಬುದು ನಮಗೆ ನಿಖರವಾಗಿ ಗೊತ್ತಿಲ್ಲ ಮತ್ತು ಪ್ರಕಾಶಿಸಲ್ಪಡುವ ಚಿತ್ರಗಳು ಯೆಶಾಯ 11:6-9ರಂತಹ ಬೈಬಲ್ ಭಾಗಗಳ ಮೇಲಾಧಾರಿತವಾದ ಕಲಾತ್ಮಕ ಚಿತ್ರಣಗಳಾಗಿವೆಯಷ್ಟೆ ಎಂಬುದಂತೂ ನಿಶ್ಚಯ. ಆದರೂ, ಒಬ್ಬ ಕ್ರೈಸ್ತ ಸ್ತ್ರೀಯು ಹೇಳಿದ್ದು: “ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಲ್ಲಿ ಬರುವ ಭಾವೀ ಪರದೈಸ್ನ ಚಿತ್ರಗಳನ್ನು ನಾನು ನೋಡಿದಾಗೆಲ್ಲಾ, ಪ್ರವಾಸಿ ತಾಣಗಳನ್ನು ವರ್ಣಿಸುವಂಥ ಒಂದು ಬ್ರೋಷರನ್ನು ಒಬ್ಬ ವ್ಯಕ್ತಿಯು ಹೇಗೆ ಜಾಗರೂಕತೆಯಿಂದ ಗಮನಿಸುತ್ತಾನೋ ಅದೇ ರೀತಿಯಲ್ಲಿ ಗಮನಿಸುತ್ತೇನೆ. ನಾನು ಸಹ ಅಲ್ಲಿರುವಂತೆ ಚಿತ್ರಿಸಿಕೊಳ್ಳಲು ಪ್ರಯತ್ನಿಸುತ್ತೇನೆ, ಏಕೆಂದರೆ ದೇವರ ಕ್ಲುಪ್ತ ಸಮಯದಲ್ಲಿ ನಾನು ನಿಜವಾಗಿಯೂ ಇರಲು ಬಯಸುವುದು ಅಲ್ಲಿಯೇ.”
ತನ್ನ ‘ಮೇಲಣ ಕರೆಯ’ ವಿಷಯದಲ್ಲಿ ಅಪೊಸ್ತಲ ಪೌಲನಿಗೆ ಇದೇ ಅನಿಸಿಕೆಯಾಯಿತು. ಈಗಾಗಲೇ ಅದನ್ನು ಪಡೆದುಕೊಂಡಿದ್ದಾನೋ ಎಂಬಂತೆ ಅವನು ತನ್ನನ್ನು ಪರಿಗಣಿಸಿಕೊಳ್ಳಲಿಲ್ಲ, ಏಕೆಂದರೆ ಅವನು ಕಡೇ ತನಕ ತನ್ನನ್ನು ನಂಬಿಗಸ್ತನಾಗಿ ರುಜುಪಡಿಸಿಕೊಳ್ಳಬೇಕಾಗಿತ್ತು. ಆದರೆ ಅವನು “ಮುಂದಿನವುಗಳನ್ನು ಹಿಡಿಯುವದಕ್ಕೆ ಎದೆಬೊಗ್ಗಿದವನಾಗಿ”ರುವುದನ್ನು ಮುಂದುವರಿಸಿದನು. (ಫಿಲಿಪ್ಪಿ 3:13, 14) ತದ್ರೀತಿಯಲ್ಲಿ, ಯೇಸು “ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ” ಯಾತನಾ ಸ್ತಂಭದ ಮೇಲಿನ ಮರಣವನ್ನು ಸಹ ಸಹಿಸಿಕೊಂಡನು.—ಇಬ್ರಿಯ 12:2.
ಹೊಸ ಲೋಕವನ್ನು ನೀವು ಪ್ರವೇಶಿಸುವಿರೋ ಇಲ್ಲವೋ ಎಂದು ನೀವೆಂದಾದರೂ ಸಂದೇಹಪಟ್ಟಿದ್ದೀರೋ? ನಾವು ಅತಿಯಾದ ಆತ್ಮವಿಶ್ವಾಸವುಳ್ಳವರಾಗಿರುವುದು ಒಳ್ಳೇದಲ್ಲ ಎಂಬುದಂತೂ ನಿಶ್ಚಯ, ಏಕೆಂದರೆ ನಾವು ಜೀವದ ಬಹುಮಾನವನ್ನು ಪಡೆದುಕೊಳ್ಳುವುದು, ನಾವು ಕಡೇ ತನಕ ನಂಬಿಗಸ್ತರಾಗಿ ಉಳಿಯುವುದರ ಮೇಲೆ ಹೊಂದಿಕೊಂಡಿದೆ. (ಮತ್ತಾಯ 24:13) ಆದರೂ, ಒಂದುವೇಳೆ ನಾವು ದೇವರ ಆವಶ್ಯಕತೆಗಳನ್ನು ತಲಪಲಿಕ್ಕಾಗಿ ನಮ್ಮಿಂದಾದುದೆಲ್ಲವನ್ನೂ ಮಾಡಲು ಪ್ರಯತ್ನಿಸುತ್ತಿರುವಲ್ಲಿ, ಈ ಬಹುಮಾನವನ್ನು ಖಂಡಿತವಾಗಿಯೂ ಪಡೆದುಕೊಳ್ಳುತ್ತೇವೆ ಎಂಬ ದೃಢವಿಶ್ವಾಸದಿಂದಿರಲು ನಮಗೆ ಸಕಲ ಕಾರಣಗಳೂ ಇವೆ. ಯೆಹೋವನು ‘ಯಾವನಾದರೂ ನಾಶವಾಗುವದರಲ್ಲಿ ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸುವವನಾಗಿದ್ದಾನೆ’ ಎಂಬುದನ್ನು ನೆನಪಿನಲ್ಲಿಡಿರಿ. (2 ಪೇತ್ರ 3:9) ನಾವು ಯೆಹೋವನಲ್ಲಿ ಭರವಸವಿಡುವುದಾದರೆ, ನಮ್ಮ ಗುರಿಯನ್ನು ಸಾಧಿಸಲು ಆತನು ನಮಗೆ ಸಹಾಯಮಾಡುವನು. ವಾಸ್ತವದಲ್ಲಿ, ಯಾರು ಯಥಾರ್ಥ ಮನಸ್ಸಿನಿಂದ ಆತನ ಮೆಚ್ಚುಗೆಯನ್ನು ಪಡೆಯಲು ಬಯಸುತ್ತಾರೋ ಅವರನ್ನು ಅನರ್ಹರನ್ನಾಗಿ ಮಾಡಲಿಕ್ಕಾಗಿ ಯಾವುದಾದರೊಂದು ಕಾರಣವನ್ನು ಹುಡುಕುವುದು ಆತನ ಸ್ವಭಾವಕ್ಕೆ ವಿರುದ್ಧವಾದದ್ದಾಗಿದೆ.—ಕೀರ್ತನೆ 103:8-11; ಕೀರ್ತನೆ 130:3, 4; ಯೆಹೆಜ್ಕೇಲ 18:32.
ತನ್ನ ಜನರ ಕಡೆಗೆ ಯೆಹೋವನಿಗೆ ಯಾವ ಅನಿಸಿಕೆಯಿದೆ ಎಂಬುದನ್ನು ತಿಳಿದಿರುವುದು ಸಹ ನಿರೀಕ್ಷೆಯನ್ನು ನೀಡುತ್ತದೆ. ನಿರೀಕ್ಷೆಯೆಂಬ ಈ ಗುಣವು ನಮ್ಮ ನಂಬಿಕೆಯಷ್ಟೇ ಪ್ರಾಮುಖ್ಯವಾದದ್ದಾಗಿದೆ. (1 ಕೊರಿಂಥ 13:13) ಬೈಬಲಿನಲ್ಲಿ “ನಿರೀಕ್ಷೆ” ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್ ಪದವು, ಅತ್ಯಾತುರದಿಂದ “ಒಳ್ಳೇದನ್ನು ನಿರೀಕ್ಷಿಸುವ” ಸಂಗತಿಯನ್ನು ಸೂಚಿಸುತ್ತದೆ. ಈ ರೀತಿಯ ನಿರೀಕ್ಷೆಯನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಅಪೊಸ್ತಲ ಪೌಲನು ಬರೆದುದು: “ನಿಮ್ಮ ನಿರೀಕ್ಷೆ ದೃಢ ಮಾಡಿಕೊಂಡು ಕಡೇ ತನಕ ಹಿಡಿಯುವದರಲ್ಲಿಯೂ ನಿಮ್ಮಲ್ಲಿ ಪ್ರತಿಯೊಬ್ಬರು ಅದೇ ಆಸಕ್ತಿಯನ್ನು ತೋರಿಸಬೇಕೆಂದು ಅಪೇಕ್ಷಿಸುತ್ತೇವೆ. ನೀವು ಮಂದಮತಿಗಳಾಗಿರದೆ ಯಾರು ವಾಗ್ದಾನಗಳನ್ನು ನಂಬಿ ಅವುಗಳ ಫಲಕ್ಕೋಸ್ಕರ ಬಹು ದಿವಸಗಳ ವರೆಗೂ ಕಾದಿದ್ದು ಆ ಫಲವನ್ನು ಹೊಂದುತ್ತಾರೋ ಅವರನ್ನು ಅನುಸರಿಸುವವರಾಗಬೇಕೆಂದು ಕೋರುತ್ತೇನೆ.” (ಇಬ್ರಿಯ 6:11, 12) ಒಂದುವೇಳೆ ನಾವು ನಂಬಿಗಸ್ತಿಕೆಯಿಂದ ಯೆಹೋವನ ಸೇವೆಮಾಡುವುದನ್ನು ಮುಂದುವರಿಸುವಲ್ಲಿ, ನಮ್ಮ ನಿರೀಕ್ಷೆಯು ಖಂಡಿತವಾಗಿಯೂ ಕೈಗೂಡುತ್ತದೆ ಎಂಬ ಆಶ್ವಾಸನೆ ನಮಗಿರಸಾಧ್ಯವಿದೆ ಎಂಬುದನ್ನು ಗಮನಿಸಿರಿ. ಅನೇಕ ಲೌಕಿಕ ಮಹತ್ವಾಕಾಂಕ್ಷೆಗಳಿಗೆ ಅಸದೃಶವಾಗಿ, ಈ ನಿರೀಕ್ಷೆಯು “ನಮ್ಮ ಆಶೆಯನ್ನು ಭಂಗಪಡಿಸುವದಿಲ್ಲ.” (ರೋಮಾಪುರ 5:5) ಹಾಗಾದರೆ ನಾವು ಹೇಗೆ ನಮ್ಮ ನಿರೀಕ್ಷೆಯನ್ನು ಸಜೀವವಾಗಿಡಸಾಧ್ಯವಿದೆ ಮತ್ತು ಸ್ಪಷ್ಟವಾಗಿ ಮನಸ್ಸಿನಲ್ಲಿಡಸಾಧ್ಯವಿದೆ?
ನಮ್ಮ ಆಧ್ಯಾತ್ಮಿಕ ದೃಷ್ಟಿಯನ್ನು ಉತ್ತಮಗೊಳಿಸುವ ವಿಧ
ನಮ್ಮ ಭೌತಿಕ ಕಣ್ಣುಗಳು ಏಕಕಾಲದಲ್ಲೇ ಎರಡು ವಸ್ತುಗಳ ಮೇಲೆ ಗಮನವನ್ನು ಕೇಂದ್ರೀಕರಿಸಲಾರವು. ನಮ್ಮ ಆಧ್ಯಾತ್ಮಿಕ ದೃಷ್ಟಿಯ ವಿಷಯದಲ್ಲಿಯೂ ಇದು ಸತ್ಯವಾಗಿದೆ. ಸದ್ಯದ ವ್ಯವಸ್ಥೆಯ ವಿಷಯಗಳ ಮೇಲೆ ಗಮನವನ್ನು ಕೇಂದ್ರೀಕರಿಸುವುದು, ದೇವರ ವಾಗ್ದತ್ತ ಹೊಸ ಲೋಕದ ಮೇಲಿನ ನಮ್ಮ ಗಮನವನ್ನು ನಮ್ಮ ಮನಸ್ಸುಗಳಿಂದ ಬೇರೆ ಕಡೆಗೆ ವಿಮುಖಗೊಳಿಸುವುದಂತೂ ಖಂಡಿತ. ಸಕಾಲದಲ್ಲಿ ಈ ಮೊಬ್ಬಾದ, ಬಾಹ್ಯ ಪರಿಧಿಯ ಬಿಂಬವು ಕ್ರಮೇಣ ತನ್ನ ಆಕರ್ಷಣೆಯನ್ನು ಕಳೆದುಕೊಳ್ಳಬಹುದು ಮತ್ತು ದೃಷ್ಟಿಯಿಂದ ಕಣ್ಮರೆಯಾಗಬಹುದು. ಅದೆಷ್ಟು ದುರಂತಮಯವಾಗಿರುವುದು! (ಲೂಕ 21:34) ನಾವು ಯಾವಾಗಲೂ ದೇವರ ರಾಜ್ಯದ ಮೇಲೆ ಮತ್ತು ನಿತ್ಯಜೀವದ ಬಹುಮಾನದ ಮೇಲೆ ದೃಷ್ಟಿಯನ್ನು ಕೇಂದ್ರೀಕರಿಸುವಂಥ ‘ಸರಳವಾದ ಕಣ್ಣನ್ನು’ ಕಾಪಾಡಿಕೊಳ್ಳುವುದು ಎಷ್ಟು ಪ್ರಾಮುಖ್ಯವಾಗಿದೆ!—ಮತ್ತಾಯ 6:22, NW.
ಕಣ್ಣನ್ನು ಸರಳವಾಗಿಟ್ಟುಕೊಳ್ಳುವುದು ಯಾವಾಗಲೂ ಸುಲಭವಾದದ್ದೇನಲ್ಲ. ದೈನಂದಿನ ಸಮಸ್ಯೆಗಳಿಗೆ ಗಮನವನ್ನು ಹರಿಸುವ ಒತ್ತಡ ನಮಗಿರುತ್ತದೆ, ಮತ್ತು ಅಪಕರ್ಷಣೆಗಳು, ಶೋಧನೆಗಳು ಸಹ ನಮ್ಮ ಹಾದಿಯಲ್ಲಿ ಹೊಂಚುಹಾಕಿಕೊಂಡಿರಬಹುದು. ಈ ರೀತಿಯ ಸನ್ನಿವೇಶಗಳ ಕೆಳಗೆ, ನಾವು ಇತರ ಅವಶ್ಯ ಚಟುವಟಿಕೆಗಳನ್ನು ಅಲಕ್ಷಿಸದೆ, ರಾಜ್ಯದ ಮೇಲೆ ಮತ್ತು ದೇವರ ವಾಗ್ದತ್ತ ಹೊಸ ಲೋಕದ ಮೇಲೆ ದೃಷ್ಟಿಯನ್ನು ಹೇಗೆ ಕೇಂದ್ರೀಕರಿಸುತ್ತಾ ಉಳಿಯಸಾಧ್ಯವಿದೆ? ನಾವೀಗ ಮೂರು ವಿಧಗಳನ್ನು ಪರಿಗಣಿಸೋಣ.
ಪ್ರತಿದಿನವೂ ದೇವರ ವಾಕ್ಯದ ಅಧ್ಯಯನ ಮಾಡಿರಿ. ಕ್ರಮವಾಗಿ ಬೈಬಲ್ ಓದುವುದು ಮತ್ತು ಬೈಬಲ್ ಆಧಾರಿತ ಪ್ರಕಾಶನಗಳ ಅಧ್ಯಯನವನ್ನು ಮಾಡುವುದು, ಆಧ್ಯಾತ್ಮಿಕ ವಿಷಯಗಳ ಮೇಲೆ ನಮ್ಮ ಮನಸ್ಸುಗಳು ಕೇಂದ್ರೀಕೃತವಾಗಿ ಉಳಿಯುವಂತೆ ಸಹಾಯಮಾಡುತ್ತದೆ. ನಾವು ಅನೇಕ ವರ್ಷಗಳಿಂದ ದೇವರ ವಾಕ್ಯದ ಅಧ್ಯಯನ ಮಾಡುತ್ತಿರಬಹುದು ನಿಜ, ಆದರೆ ನಮ್ಮ ಜೀವಗಳನ್ನು ಪೋಷಿಸಲಿಕ್ಕಾಗಿ ನಾವು ಭೌತಿಕ ಆಹಾರವನ್ನು ತಿನ್ನುತ್ತಾ ಇರುವ ಆವಶ್ಯಕತೆಯಿರುವಂತೆಯೇ, ನಾವದನ್ನು ಅಧ್ಯಯನ ಮಾಡುತ್ತಾ ಮುಂದುವರಿಯುವ ಅಗತ್ಯವಿದೆ. ಈ ಹಿಂದೆ ನಾವು ಸಾವಿರಾರು ಸಲ ಊಟಮಾಡಿದ್ದೇವೆ ಎಂದಮಾತ್ರಕ್ಕೆ ನಾವು ಈಗ ಊಟಮಾಡುವುದನ್ನು ನಿಲ್ಲಿಸಿಬಿಡುವುದಿಲ್ಲ. ಆದುದರಿಂದ, ನಾವು ಬೈಬಲಿನೊಂದಿಗೆ ಎಷ್ಟೇ ಚಿರಪರಿಚಿತರಾಗಿರಲಿ, ನಮ್ಮ ನಿರೀಕ್ಷೆಯನ್ನು ಸಜೀವವಾಗಿಡಲಿಕ್ಕಾಗಿ ಮತ್ತು ನಮ್ಮ ನಂಬಿಕೆ ಹಾಗೂ ಪ್ರೀತಿಯನ್ನು ಬಲಪಡಿಸಲಿಕ್ಕಾಗಿ ನಾವು ಅದರಿಂದ ಸತತವಾಗಿ, ಕ್ರಮವಾದ ರೀತಿಯಲ್ಲಿ ಆಧ್ಯಾತ್ಮಿಕ ಪೋಷಣೆಯನ್ನು ಪಡೆದುಕೊಳ್ಳುವ ಆವಶ್ಯಕತೆಯಿದೆ.—ಕೀರ್ತನೆ 1:1-3.
ದೇವರ ವಾಕ್ಯದ ಕುರಿತು ಗಣ್ಯತಾಭಾವದಿಂದ ಧ್ಯಾನಿಸಿರಿ. ಧ್ಯಾನಿಸುವುದು ಏಕೆ ಅತ್ಯಾವಶ್ಯಕವಾಗಿದೆ? ಎರಡು ಕಾರಣಗಳಿಗಾಗಿ ಇದು ಅತ್ಯಾವಶ್ಯಕವಾಗಿದೆ. ಮೊದಲನೆಯದಾಗಿ, ಧ್ಯಾನಿಸುವಿಕೆಯು ನಾವು ಏನನ್ನು ಓದುತ್ತೇವೋ ಅದನ್ನು ಜೀರ್ಣಿಸಿಕೊಳ್ಳುವಂತೆ ಮತ್ತು ಅದಕ್ಕಾಗಿ ಹೃತ್ಪೂರ್ವಕ ಗಣ್ಯತೆಯನ್ನು ಬೆಳೆಸಿಕೊಳ್ಳುವಂತೆ ನಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ. ಎರಡನೆಯದಾಗಿ, ಧ್ಯಾನಿಸುವಿಕೆಯು ಯೆಹೋವನನ್ನು, ಆತನ ಅದ್ಭುತಕಾರ್ಯಗಳನ್ನು, ಮತ್ತು ಆತನು ನಮ್ಮ ಮುಂದೆ ಇಟ್ಟಿರುವ ನಿರೀಕ್ಷೆಯನ್ನು ಮರೆತುಬಿಡುವುದರಿಂದ ನಮ್ಮನ್ನು ತಡೆಯುತ್ತದೆ. ದೃಷ್ಟಾಂತಕ್ಕಾಗಿ, ಮೋಶೆಯೊಂದಿಗೆ ಐಗುಪ್ತ ದೇಶವನ್ನು ಬಿಟ್ಟುಹೋದ ಇಸ್ರಾಯೇಲ್ಯರು, ಯೆಹೋವನ ಭಯಭಕ್ತಿಪ್ರೇರಕ ಶಕ್ತಿಯ ಪ್ರದರ್ಶನಗಳನ್ನು ಕಣ್ಣಾರೆ ಕಂಡರು. ಅವರ ಸ್ವಾಸ್ತ್ಯದ ಕಡೆಗೆ ಅವರನ್ನು ಮುನ್ನಡಿಸುತ್ತಿದ್ದಾಗ ಆತನು ತೋರಿಸಿದ ಪ್ರೀತಿಭರಿತ ಸಂರಕ್ಷಣೆಯ ಅನುಭವವೂ ಅವರಿಗಾಯಿತು. ಆದರೂ, ವಾಗ್ದತ್ತ ದೇಶಕ್ಕೆ ಹೋಗುವ ಮಾರ್ಗದಲ್ಲಿ ಇಸ್ರಾಯೇಲ್ಯರು ಅರಣ್ಯವನ್ನು ತಲಪಿದ ಕೂಡಲೆ ಅವರು ಗಂಭೀರವಾದ ನಂಬಿಕೆಯ ಕೊರತೆಯನ್ನು ತೋರ್ಪಡಿಸುತ್ತಾ ಗುಣುಗುಟ್ಟಲು ಆರಂಭಿಸಿದರು. (ಕೀರ್ತನೆ 78:11-17) ಅವರ ಸಮಸ್ಯೆಯೇನಾಗಿತ್ತು?
ಆ ಜನರು ಯೆಹೋವನಿಂದ ಹಾಗೂ ಅವರ ಮುಂದೆ ಆತನು ಇಟ್ಟಿದ್ದಂಥ ಅದ್ಭುತಕರ ನಿರೀಕ್ಷೆಯಿಂದ ತಮ್ಮ ದೃಷ್ಟಿಯನ್ನು ಬದಲಾಯಿಸಿ, ತಮ್ಮ ತತ್ಕ್ಷಣದ ಸುಖಸೌಕರ್ಯಗಳು ಹಾಗೂ ಶಾರೀರಿಕ ಬಯಕೆಗಳ ಮೇಲೆ ಕೇಂದ್ರೀಕರಿಸಿದರು. ಅನೇಕ ಇಸ್ರಾಯೇಲ್ಯರು ವೈಯಕ್ತಿಕವಾಗಿ ಅದ್ಭುತಕರ ಸೂಚಕಕಾರ್ಯಗಳನ್ನೂ ಮಹತ್ಕಾರ್ಯಗಳನ್ನೂ ಕಣ್ಣಾರೆ ಕಂಡಿದ್ದರಾದರೂ, ಅವರು ನಂಬಿಕೆಹೀನ ಆಪಾದಕರಾಗಿ ಪರಿಣಮಿಸಿದರು. ‘ಅವರು ಬೇಗನೆ ಯೆಹೋವನ ಕೆಲಸಗಳನ್ನು ಮರೆತುಬಿಟ್ಟರು’ ಎಂದು ಕೀರ್ತನೆ 106:13 ಹೇಳುತ್ತದೆ. ಇಂಥ ಅಕ್ಷಮ್ಯ ಅಲಕ್ಷ್ಯವು, ಆ ಸಂತತಿಯು ವಾಗ್ದತ್ತ ದೇಶಕ್ಕೆ ಪ್ರವೇಶಿಸುವ ಅವಕಾಶವನ್ನು ಕಳೆದುಕೊಳ್ಳುವಂತೆ ಮಾಡಿತು.
ಹೀಗಿರುವುದರಿಂದ, ಶಾಸ್ತ್ರವಚನಗಳನ್ನು ಅಥವಾ ಬೈಬಲ್ ಅಧ್ಯಯನ ಸಹಾಯಕಗಳನ್ನು ಓದುವಾಗ, ನೀವು ಏನನ್ನು ಓದುತ್ತೀರೋ ಅದರ ಕುರಿತು ಧ್ಯಾನಿಸಲು ಸಮಯವನ್ನು ತೆಗೆದುಕೊಳ್ಳಿರಿ. ಈ ರೀತಿಯ ಧ್ಯಾನಿಸುವಿಕೆಯು ನಿಮ್ಮ ಆಧ್ಯಾತ್ಮಿಕ ಆರೋಗ್ಯ ಹಾಗೂ ಬೆಳವಣಿಗೆಗೆ ಅತ್ಯಾವಶ್ಯಕವಾಗಿದೆ. ಉದಾಹರಣೆಗೆ, ಮೇಲೆ ಭಾಗಶಃ ಉಲ್ಲೇಖಿಸಲ್ಪಟ್ಟಿರುವ 106ನೆಯ ಕೀರ್ತನೆಯನ್ನು ಓದುತ್ತಿರುವಾಗ, ಯೆಹೋವನ ಗುಣಗಳ ಕುರಿತು ಧ್ಯಾನಿಸಿರಿ. ಇಸ್ರಾಯೇಲ್ಯರೊಂದಿಗೆ ಆತನು ಎಷ್ಟು ತಾಳ್ಮೆಯಿಂದ ಮತ್ತು ಕರುಣೆಯಿಂದ ವ್ಯವಹರಿಸಿದನು ಎಂಬುದನ್ನು ಗಮನಿಸಿರಿ. ವಾಗ್ದತ್ತ ದೇಶವನ್ನು ತಲಪುವಂತೆ ಅವರಿಗೆ ಸಹಾಯಮಾಡಲಿಕ್ಕಾಗಿ ಆತನು ಸಾಧ್ಯವಿರುವುದನ್ನೆಲ್ಲಾ ಹೇಗೆ ಮಾಡಿದನು ಎಂಬುದನ್ನು ನೋಡಿರಿ. ಆದರೂ ಅವರು ಪುನಃ ಪುನಃ ಆತನ ವಿರುದ್ಧ ಹೇಗೆ ದಂಗೆಯೆದ್ದರು ಎಂಬುದನ್ನು ಅವಲೋಕಿಸಿರಿ. ಕಲ್ಲೆದೆಯಿಂದ ಗಣ್ಯತೆಯಿಲ್ಲದವರಾಗಿ ವರ್ತಿಸಿದಂಥ ಜನರಿಂದ ಯೆಹೋವನ ಕರುಣೆ ಹಾಗೂ ತಾಳ್ಮೆಯು ಅದರ ತೀರ ಅಂಚನ್ನು ತಲಪಿದಾಗ, ಆತನಿಗಾದ ಸಂಕಟವನ್ನು ಮತ್ತು ನೋವನ್ನು ಊಹಿಸಿಕೊಳ್ಳಿರಿ. ಅಷ್ಟುಮಾತ್ರವಲ್ಲ, ನೀತಿಗಾಗಿ ಫಿನೆಹಾಸನು ತೆಗೆದುಕೊಂಡ ದೃಢವಾದ, ದಿಟ್ಟ ನಿಲುವನ್ನು ವರ್ಣಿಸುವಂಥ 30 ಹಾಗೂ 31ನೆಯ ವಚನಗಳ ಕುರಿತು ಧ್ಯಾನಿಸುವ ಮೂಲಕ, ಯೆಹೋವನೆಂದೂ ತನ್ನ ನಿಷ್ಠಾವಂತ ಸೇವಕರನ್ನು ಮರೆಯುವುದಿಲ್ಲ ಮತ್ತು ಆತನು ಅವರಿಗೆ ಹೇರಳವಾಗಿ ಪ್ರತಿಫಲವನ್ನು ನೀಡುತ್ತಾನೆ ಎಂಬ ಆಶ್ವಾಸನೆ ನಮಗೆ ಸಿಗುತ್ತದೆ.
ಬೈಬಲ್ ಮೂಲತತ್ತ್ವಗಳನ್ನು ನಿಮ್ಮ ಜೀವಿತದಲ್ಲಿ ಅನ್ವಯಿಸಿಕೊಳ್ಳಿರಿ. ನಾವು ಬೈಬಲ್ ಮೂಲತತ್ತ್ವಗಳನ್ನು ಅನುಸರಿಸುವಾಗ, ಯೆಹೋವನ ಸಲಹೆಯು ಕಾರ್ಯಸಾಧಕವಾಗಿದೆ ಎಂಬುದನ್ನು ಸ್ವತಃ ನಾವೇ ಮನಗಾಣುತ್ತೇವೆ. ಜ್ಞಾನೋಕ್ತಿ 3:5, 6 ಹೇಳುವುದು: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಿಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.” ಅನೇಕರ ಅನೈತಿಕ ಮಾರ್ಗಗಳು ಮಾನಸಿಕ, ಭಾವನಾತ್ಮಕ, ಮತ್ತು ಭೌತಿಕ ಸಮಸ್ಯೆಗಳನ್ನು ಹೇಗೆ ತಂದೊಡ್ಡಿವೆ ಎಂಬುದರ ಕುರಿತು ಆಲೋಚಿಸಿರಿ. ಕ್ಷಣಿಕ ಸುಖಭೋಗಗಳಲ್ಲಿ ಒಳಗೂಡುವ ಮೂಲಕ ಇಂತಹ ಜನರು ಅನೇಕ ವರ್ಷಗಳ ಕಾಲ—ಇಡೀ ಜೀವಮಾನದಾದ್ಯಂತ—ವಿಪತ್ತುಗಳನ್ನು ಅನುಭವಿಸುತ್ತಾರೆ. ಇದಕ್ಕೆ ತದ್ವಿರುದ್ಧವಾಗಿ, ‘ಇಕ್ಕಟ್ಟಾದ ಬಾಗಲಿನ’ ಮೂಲಕ ನಡೆಯುವವರು ಹೊಸ ವ್ಯವಸ್ಥೆಯ ಜೀವನದ ಪೂರ್ವಾನುಭವವನ್ನು ಪಡೆಯುತ್ತಾರೆ, ಮತ್ತು ಇದು ಜೀವದ ಮಾರ್ಗದಲ್ಲಿ ಮುಂದುವರಿಯುವಂತೆ ಅವರನ್ನು ಉತ್ತೇಜಿಸುತ್ತದೆ.—ಮತ್ತಾಯ 7:13, 14; ಕೀರ್ತನೆ 34:8.
ಬೈಬಲ್ ಮೂಲತತ್ತ್ವಗಳನ್ನು ಅನ್ವಯಿಸುವುದು ಒಂದು ಪಂಥಾಹ್ವಾನವಾಗಿರಸಾಧ್ಯವಿದೆ. ಕೆಲವೊಮ್ಮೆ, ಪರೀಕ್ಷಾತ್ಮಕ ಸನ್ನಿವೇಶವೊಂದರಲ್ಲಿ ಅಶಾಸ್ತ್ರೀಯವಾದ ಒಂದು ಪರಿಹಾರವು ತತ್ಕ್ಷಣ ಭರವಸದಾಯಕವಾಗಿ ತೋರಬಹುದು. ಉದಾಹರಣೆಗೆ, ಹಣಕಾಸಿನ ತೊಂದರೆಯ ಸಮಯದಲ್ಲಿ, ರಾಜ್ಯಾಭಿರುಚಿಗಳನ್ನು ಎರಡನೆಯ ಸ್ಥಾನಕ್ಕೆ ತಳ್ಳಿಬಿಡುವುದು ಒಂದು ಶೋಧನೆಯಾಗಿರಬಹುದು. ಆದರೂ, ಯಾರು ನಂಬಿಕೆಯಿಂದ ಕ್ರಿಯೆಗೈದು, ತಮ್ಮ ಆಧ್ಯಾತ್ಮಿಕ ದೃಷ್ಟಿಯನ್ನು ಸರಿಯಾಗಿ ಕಾಪಾಡಿಕೊಳ್ಳುತ್ತಾರೋ ಅವರಿಗೆ, ಕಟ್ಟಕಡೆಗೆ ‘ದೇವರ ಮುಂದೆ ಹೆದರಿ ಆತನಲ್ಲಿ ಭಯಭಕ್ತಿಯುಳ್ಳವರಿಗೆ ಮೇಲೇ ಆಗುವುದು’ ಎಂಬ ಆಶ್ವಾಸನೆಯು ಕೊಡಲ್ಪಟ್ಟಿದೆ. (ಪ್ರಸಂಗಿ 8:12) ಕ್ರೈಸ್ತನೊಬ್ಬನು ಕೆಲವೊಮ್ಮೆ ಓವರ್ಟೈಮ್ ಮಾಡಬೇಕಾಗಬಹುದು, ಆದರೆ ಆಧ್ಯಾತ್ಮಿಕ ವಿಷಯಗಳಿಗೆ ಯಾವುದೇ ಮಹತ್ವವನ್ನು ನೀಡದೆ ಅವುಗಳನ್ನು ಕಡೆಗಣಿಸಿದಂಥ ಏಸಾವನ ಸ್ಥಿತಿಗೆ ಅವನೆಂದೂ ಇಳಿಯುವುದಿಲ್ಲ.—ಆದಿಕಾಂಡ 25:34; ಇಬ್ರಿಯ 12:16.
ಕ್ರೈಸ್ತರೋಪಾದಿ ನಮ್ಮ ಜವಾಬ್ದಾರಿಗಳೇನು ಎಂಬುದನ್ನು ಯೇಸು ಸ್ಪಷ್ಟವಾಗಿ ವಿವರಿಸಿದನು. ನಾವು ‘ದೇವರ ರಾಜ್ಯಕ್ಕಾಗಿಯೂ ಆತನ ನೀತಿಗಾಗಿಯೂ’ ಮೊದಲಾಗಿ ತವಕಪಡಬೇಕು. (ಮತ್ತಾಯ 6:33) ಒಂದುವೇಳೆ ನಾವು ಹಾಗೆ ಮಾಡುವಲ್ಲಿ, ನಮಗೆ ಅಗತ್ಯವಿರುವ ಭೌತಿಕ ವಸ್ತುಗಳು ನಮಗಿವೆ ಎಂಬುದನ್ನು ಖಚಿತಪಡಿಸುತ್ತಾ, ಯೆಹೋವನು ತನ್ನ ಪಿತೃಸದೃಶ ಪ್ರೀತಿಯನ್ನು ನಮಗೆ ತೋರಿಸುವನು. ಯಾವ ವಿಷಯಗಳು ತನ್ನ ಉಸ್ತುವಾರಿಯ ಕೆಳಗೆ ಬರುತ್ತವೆ ಎಂದು ಆತನು ಹೇಳುತ್ತಾನೋ ಆ ವಿಷಯಗಳ ಕುರಿತು ಚಿಂತಿಸುವ ಮೂಲಕ ನಾವು ನಮ್ಮ ಮೇಲೆ ಇನ್ನಷ್ಟು ಭಾರವನ್ನು ಹೊತ್ತುಕೊಳ್ಳುವುದನ್ನು ಆತನೆಂದೂ ಬಯಸುವುದಿಲ್ಲ ಎಂಬುದಂತೂ ನಿಶ್ಚಯ. ಇಂಥ ಅನಗತ್ಯ ಚಿಂತೆಯು ಆಧ್ಯಾತ್ಮಿಕ ಗ್ಲಾಕೋಮದಂತಿರಸಾಧ್ಯವಿದೆ. ಇದನ್ನು ಅಲಕ್ಷಿಸುವಲ್ಲಿ, ಕ್ರಮೇಣ ಇದು ನಮ್ಮ ದೃಷ್ಟಿಯನ್ನು ಕೇವಲ ಭೌತಿಕ ಚಿಂತೆಗಳನ್ನು ಮಾತ್ರ ನೋಡುವಷ್ಟರ ಮಟ್ಟಿಗೆ ಸಂಕುಚಿತಗೊಳಿಸುತ್ತದೆ ಮತ್ತು ಕಟ್ಟಕಡೆಗೆ ನಮ್ಮನ್ನು ಆಧ್ಯಾತ್ಮಿಕವಾಗಿ ದೃಷ್ಟಿಹೀನರನ್ನಾಗಿ ಮಾಡುತ್ತದೆ. ನಾವು ಈ ಸ್ಥಿತಿಯಲ್ಲೇ ಉಳಿಯುವಲ್ಲಿ, ಯೆಹೋವನ ದಿನವು ನಮ್ಮ ಮೇಲೆ “ಉರ್ಲಿನಂತೆ ಫಕ್ಕನೆ” ಬರುವುದು. ಅದೆಷ್ಟು ದುರಂತಕರವಾಗಿರುವುದು!—ಲೂಕ 21:34-36.
ಯೆಹೋಶುವನಂತೆ ದೃಷ್ಟಿಯನ್ನು ಕೇಂದ್ರೀಕರಿಸುವವರಾಗಿರಿ
ಇತರ ಜವಾಬ್ದಾರಿಗಳನ್ನು ಅವುಗಳ ಯೋಗ್ಯ ಸ್ಥಾನದಲ್ಲಿರಿಸುವ ಮೂಲಕ ನಮ್ಮ ಮಹಿಮಾಭರಿತ ರಾಜ್ಯದ ನಿರೀಕ್ಷೆಯ ಮೇಲೆ ನಾವು ಸರಿಯಾಗಿ ದೃಷ್ಟಿಯನ್ನು ಕೇಂದ್ರೀಕರಿಸೋಣ. ಬೈಬಲ್ ಮೂಲತತ್ತ್ವಗಳ ಅಧ್ಯಯನ, ಧ್ಯಾನ, ಹಾಗೂ ಅನ್ವಯದ ನಿಯತಕ್ರಮವನ್ನು ಬೆನ್ನಟ್ಟುತ್ತಾ ಮುಂದುವರಿಯುವ ಮೂಲಕ, ಯೆಹೋಶುವನಂತೆಯೇ ನಾವು ಸಹ ನಮ್ಮ ನಿರೀಕ್ಷೆಯ ಕುರಿತು ದೃಢವಿಶ್ವಾಸದಿಂದಿರಬಲ್ಲೆವು. ಇಸ್ರಾಯೇಲ್ಯರನ್ನು ವಾಗ್ದತ್ತ ದೇಶಕ್ಕೆ ನಡೆಸಿದ ಬಳಿಕ ಅವನು ಹೇಳಿದ್ದು: “ನಿಮ್ಮ ದೇವರಾದ ಯೆಹೋವನು ನಿಮ್ಮ ವಿಷಯದಲ್ಲಿ ನುಡಿದ ಆಶೀರ್ವಚನಗಳಲ್ಲಿ ಒಂದೂ ವ್ಯರ್ಥವಾಗಲಿಲ್ಲ; ಎಲ್ಲವೂ ತಪ್ಪದೆ ನೆರವೇರಿದವೆಂಬದು ನಿಮಗೆ ಮಂದಟ್ಟಾಯಿತಲ್ಲಾ.”—ಯೆಹೋಶುವ 23:14.
ರಾಜ್ಯದ ನಿರೀಕ್ಷೆಯು ನಿಮ್ಮನ್ನು ಸಚೇತನಗೊಳಿಸಲಿ, ಮತ್ತು ಅದು ನಿಮ್ಮ ಆಲೋಚನೆಗಳು, ಭಾವನೆಗಳು, ನಿರ್ಣಯಗಳು, ಹಾಗೂ ಚಟುವಟಿಕೆಗಳಲ್ಲಿ ಪ್ರತಿಬಿಂಬಿಸಲ್ಪಡುವಾಗ ನಿಮಗೆ ಅಪಾರ ಸಂತೋಷವನ್ನುಂಟುಮಾಡಲಿ.—ಜ್ಞಾನೋಕ್ತಿ 15:15; ರೋಮಾಪುರ 12:12.
[ಪುಟ 21ರಲ್ಲಿರುವ ಚಿತ್ರ]
ಹೊಸ ಲೋಕವನ್ನು ನೀವು ಪ್ರವೇಶಿಸುವಿರೋ ಇಲ್ಲವೋ ಎಂದು ನೀವೆಂದಾದರೂ ಸಂದೇಹಪಟ್ಟಿದ್ದೀರೋ?
[ಪುಟ 22ರಲ್ಲಿರುವ ಚಿತ್ರ]
ಧ್ಯಾನಿಸುವಿಕೆಯು ಬೈಬಲ್ ಅಧ್ಯಯನದ ಅತ್ಯಾವಶ್ಯಕ ಭಾಗವಾಗಿದೆ
[ಪುಟ 23ರಲ್ಲಿರುವ ಚಿತ್ರಗಳು]
ರಾಜ್ಯಾಭಿರುಚಿಗಳ ಮೇಲೆ ಗಮನವನ್ನು ಕೇಂದ್ರೀಕರಿಸಿರಿ