“ಎಲ್ಲರೊಂದಿಗೆ ಶಾಂತಿಶೀಲರಾಗಿರಿ”
“ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರೊಂದಿಗೆ ಶಾಂತಿಶೀಲರಾಗಿರಿ.” —ರೋಮ. 12:18.
1, 2. (ಎ) ತನ್ನ ಹಿಂಬಾಲಕರಿಗೆ ಯೇಸು ಯಾವ ಎಚ್ಚರಿಕೆ ಕೊಟ್ಟನು? (ಬಿ) ವಿರೋಧ ಬಂದಾಗ ಪ್ರತಿಕ್ರಿಯಿಸುವುದು ಹೇಗೆಂಬುದರ ಬಗ್ಗೆ ಸಲಹೆ ಎಲ್ಲಿದೆ?
ಲೋಕದ ಜನಾಂಗಗಳಿಂದ ವಿರೋಧವು ಬರುವುದೆಂದು ಯೇಸು ತನ್ನ ಹಿಂಬಾಲಕರಿಗೆ ಎಚ್ಚರಿಸಿದನು ಮತ್ತು ತನ್ನ ಮರಣದ ಹಿಂದಿನ ರಾತ್ರಿಯಂದು ಅದಕ್ಕೆ ಕಾರಣವನ್ನೂ ವಿವರಿಸಿದನು. ಅವನು ತನ್ನ ಅಪೊಸ್ತಲರಿಗಂದದ್ದು: “ನೀವು ಲೋಕದ ಭಾಗವಾಗಿರುತ್ತಿದ್ದರೆ ಲೋಕವು ನಿಮ್ಮನ್ನು ತನ್ನವರೆಂದು ಪ್ರೀತಿಸುತ್ತಿತ್ತು. ಆದರೆ ನೀವು ಲೋಕದ ಭಾಗವಾಗಿರದ ಕಾರಣ ಮತ್ತು ನಾನು ನಿಮ್ಮನ್ನು ಈ ಲೋಕದಿಂದ ಆರಿಸಿಕೊಂಡಿರುವ ಕಾರಣ ಲೋಕವು ನಿಮ್ಮನ್ನು ದ್ವೇಷಿಸುತ್ತದೆ.”—ಯೋಹಾ. 15:19.
2 ಯೇಸುವಿನ ಮಾತುಗಳ ಸತ್ಯತೆಯನ್ನು ಅಪೊಸ್ತಲ ಪೌಲನು ಅನುಭವಿಸಿದನು. ತನ್ನ ಯುವ ಸಂಗಡಿಗನಾದ ತಿಮೊಥೆಯನಿಗೆ ತನ್ನ ಎರಡನೇ ಪತ್ರದಲ್ಲಿ ಅವನು ಬರೆದದ್ದು: “ನೀನಾದರೋ ನನ್ನ ಬೋಧನೆಯನ್ನೂ ನನ್ನ ಜೀವನ ರೀತಿಯನ್ನೂ ನನ್ನ ಉದ್ದೇಶವನ್ನೂ ನನ್ನ ನಂಬಿಕೆಯನ್ನೂ ನನ್ನ ದೀರ್ಘ ಸಹನೆಯನ್ನೂ ನನ್ನ ಪ್ರೀತಿಯನ್ನೂ ನನ್ನ ತಾಳ್ಮೆಯನ್ನೂ ನಿಕಟವಾಗಿ ಅನುಸರಿಸಿದ್ದೀ ಮತ್ತು ನನ್ನ ಹಿಂಸೆಗಳನ್ನೂ ನನ್ನ ಕಷ್ಟಗಳನ್ನೂ . . . ತಿಳಿದವನಾಗಿದ್ದೀ.” ನಂತರ ಅವನು ಕೂಡಿಸಿ ಹೇಳಿದ್ದು: “ವಾಸ್ತವದಲ್ಲಿ, ಕ್ರಿಸ್ತ ಯೇಸುವಿನ ಸಂಬಂಧದಲ್ಲಿ ದೇವಭಕ್ತಿಯಿಂದ ಜೀವಿಸಲು ಬಯಸುವವರೆಲ್ಲರೂ ಹಿಂಸೆಗೂ ಒಳಗಾಗುವರು.” (2 ತಿಮೊ. 3:10-12) ರೋಮ್ನಲ್ಲಿನ ಕ್ರೈಸ್ತರಿಗೆ ತಾನು ಬರೆದ ಪತ್ರದ 12ನೇ ಅಧ್ಯಾಯದಲ್ಲಿ ಪೌಲನು, ವಿರೋಧ ಬಂದಾಗ ಪ್ರತಿಕ್ರಿಯಿಸುವುದು ಹೇಗೆ ಎಂಬ ವಿಷಯದಲ್ಲಿ ವಿವೇಕಯುತ ಸಲಹೆ ಕೊಟ್ಟಿದ್ದಾನೆ. ಅಂತ್ಯದ ಈ ಸಮಯದಲ್ಲಿ ಅವನ ಮಾತುಗಳು ನಮಗೆ ಮಾರ್ಗದರ್ಶನ ಕೊಡಬಲ್ಲವು.
“ಒಳ್ಳೇದಾಗಿರುವುದನ್ನೇ ಮಾಡಿರಿ”
3, 4. ರೋಮನ್ನರಿಗೆ 12:17ರಲ್ಲಿರುವ ಸಲಹೆಯನ್ನು ಧಾರ್ಮಿಕವಾಗಿ ವಿಭಜಿತವಾಗಿರುವ ಕುಟುಂಬದಲ್ಲಿ ಹಾಗೂ ನೆರೆಯವರೊಂದಿಗಿನ ನಮ್ಮ ವ್ಯವಹಾರದಲ್ಲಿ ಹೇಗೆ ಅನ್ವಯಿಸಿಕೊಳ್ಳಬಹುದು?
3 ರೋಮನ್ನರಿಗೆ 12:17 ಓದಿ. ಇತರರು ನಮ್ಮನ್ನು ವಿರೋಧಿಸುವಾಗ ನಾವು ಹಗೆಸಾಧಿಸಲು ಪ್ರಯತ್ನಿಸಬಾರದು ಎಂದು ಪೌಲನು ವಿವರಿಸಿದನು. ವಿಶೇಷವಾಗಿ, ಧಾರ್ಮಿಕವಾಗಿ ವಿಭಜಿತವಾಗಿರುವ ಕುಟುಂಬಗಳಲ್ಲಿ ಈ ಸಲಹೆ ಪಾಲಿಸುವುದು ತುಂಬ ಪ್ರಾಮುಖ್ಯ. ಕ್ರೈಸ್ತ ಸಂಗಾತಿಯಾದವರು ತಮ್ಮ ಅವಿಶ್ವಾಸಿ ಸಂಗಾತಿಯ ದಯಾಹೀನ ಮಾತು ಅಥವಾ ಕ್ರಿಯೆಗೆ ಪ್ರತೀಕಾರದಲ್ಲಿ ಅದನ್ನೇ ಹಿಂದಿರುಗಿಸುವ ಪ್ರವೃತ್ತಿಯನ್ನು ಹತ್ತಿಕ್ಕುತ್ತಾರೆ. ‘ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡುವುದರಿಂದ’ ಏನೂ ಒಳಿತಾಗದು. ಅದಕ್ಕೆ ಬದಲಾಗಿ ಅಂಥ ಮನೋಭಾವ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ ಅಷ್ಟೇ.
4 “ಎಲ್ಲರ ದೃಷ್ಟಿಯಲ್ಲಿ ಒಳ್ಳೇದಾಗಿರುವುದನ್ನೇ ಮಾಡಿರಿ” ಎಂಬ ಉತ್ತಮ ಮಾರ್ಗವನ್ನು ಪೌಲನು ಶಿಫಾರಸ್ಸು ಮಾಡುತ್ತಾನೆ. ಒಂದು ಮನೆಯಲ್ಲಿ, ಗಂಡನು ತನ್ನ ಹೆಂಡತಿಯ ನಂಬಿಕೆಗಳ ಬಗ್ಗೆ ಅಲ್ಲಸಲ್ಲದ ಮಾತುಗಳನ್ನಾಡಿದ ಬಳಿಕವೂ ಆಕೆ ಯಥಾರ್ಥವಾಗಿ ದಯೆ ತೋರಿಸುವಲ್ಲಿ ಆ ಸ್ಫೋಟಕ ಸನ್ನಿವೇಶವು ಅಲ್ಲೇ ತಣ್ಣಗಾಗುವುದು. (ಜ್ಞಾನೋ. 31:12) ಈಗ ಬೆತೆಲ್ ಕುಟುಂಬದ ಸದಸ್ಯನಾಗಿರುವ ಕಾರ್ಲೋಸ್ ಎಂಬಾತನು, ತಂದೆಯ ಕಡುವಿರೋಧವನ್ನು ತಾಯಿ ಹೇಗೆ ನಿಭಾಯಿಸಿದರು ಎಂಬುದನ್ನು ವಿವರಿಸಿದನು. ಅವರು ದಯೆಯಿಂದ ನಡೆದುಕೊಳ್ಳುತ್ತಿದ್ದರು ಮತ್ತು ಕುಟುಂಬ ಹಾಗೂ ಮನೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. “ತಂದೆಗೆ ಯಾವಾಗಲೂ ಗೌರವ ತೋರಿಸುವಂತೆ ಮಕ್ಕಳಾದ ನಮ್ಮನ್ನು ತಾಯಿ ಪ್ರೋತ್ಸಾಹಿಸಿದರು. ನನಗೆ ಬೋಲ್ (ಫ್ರೆಂಚ್ ಚೆಂಡಾಟ) ಅಷ್ಟೇನೂ ಇಷ್ಟವಿರದಿದ್ದರೂ ತಂದೆಯೊಂದಿಗೆ ಅದನ್ನಾಡುವಂತೆ ಅವರು ಒತ್ತಾಯ ಮಾಡುತ್ತಿದ್ದರು. ಏಕೆಂದರೆ ಈ ಆಟವಾಡಿದ ಮೇಲೆ ತಂದೆ ಒಳ್ಳೇ ಮೂಡ್ನಲ್ಲಿರುತ್ತಿದ್ದರು.” ಕ್ರಮೇಣ ಅವರು ಬೈಬಲ್ ಅಧ್ಯಯನಮಾಡಲಾರಂಭಿಸಿ ದೀಕ್ಷಾಸ್ನಾನ ಪಡೆದುಕೊಂಡರು. ಯೆಹೋವನ ಸಾಕ್ಷಿಗಳು “ಎಲ್ಲರ ದೃಷ್ಟಿಯಲ್ಲಿ ಒಳ್ಳೇದಾಗಿರುವುದನ್ನೇ” ಮಾಡಲಿಕ್ಕಾಗಿ ವಿಪತ್ತುಗಳ ಸಮಯದಲ್ಲಿ ತಮ್ಮ ನೆರೆಯವರಿಗೆ ಪ್ರಾಯೋಗಿಕ ನೆರವನ್ನು ಕೊಡುತ್ತಾ ಅನೇಕವೇಳೆ ಪೂರ್ವಗ್ರಹವನ್ನು ಜಯಿಸಿದ್ದಾರೆ.
ವಿರೋಧವನ್ನು ‘ಕೆಂಡಗಳಿಂದ’ ಕರಗಿಸುವುದು
5, 6. (ಎ) ವಿರೋಧಿಗಳ ತಲೆಯ ಮೇಲೆ ‘ಕೆಂಡಗಳನ್ನು’ ಹೇರುವುದರ ಅರ್ಥವೇನು? (ಬಿ) ರೋಮನ್ನರಿಗೆ 12:20ರಲ್ಲಿರುವ ಸಲಹೆಯನ್ನು ಅನ್ವಯಿಸುವುದು ಒಳ್ಳೇ ಫಲಿತಾಂಶಗಳನ್ನು ತರುತ್ತದೆಂದು ತೋರಿಸುವ ಸ್ಥಳಿಕ ಅನುಭವವೊಂದನ್ನು ತಿಳಿಸಿ.
5 ರೋಮನ್ನರಿಗೆ 12:20 ಓದಿ. ಪೌಲನು ಈ ವಚನದಲ್ಲಿರುವ ಮಾತುಗಳನ್ನು ಬರೆಯುವಾಗ ಖಂಡಿತವಾಗಿಯೂ ಅವನ ಮನಸ್ಸಿನಲ್ಲಿ ಜ್ಞಾನೋಕ್ತಿ 25:21, 22ರಲ್ಲಿನ ಈ ಮಾತುಗಳಿದ್ದಿರಬಹುದು: “ನಿನ್ನ ವೈರಿ ಹಸಿದಿದ್ದರೆ ಅನ್ನವಿಡು, ಬಾಯಾರಿದ್ದರೆ ನೀರುಕೊಡು; ಹೀಗೆ ಅವನ ತಲೆಯ ಮೇಲೆ ಕೆಂಡಸುರಿದಂತಾಗುವದು; ಯೆಹೋವನೇ ನಿನಗೆ ಪ್ರತಿಫಲಕೊಡುವನು.” ರೋಮನ್ನರಿಗೆ 12ನೇ ಅಧ್ಯಾಯದಲ್ಲಿ ಪೌಲನು ಕೊಟ್ಟಿರುವ ಸಲಹೆಯನ್ನು ಪರಿಗಣಿಸುವಾಗ, 20ನೇ ವಚನದಲ್ಲಿ ಅವನು ತಿಳಿಸಿರುವ ಕೆಂಡಗಳು, ನಾವು ಒಬ್ಬ ವಿರೋಧಿಯನ್ನು ಶಿಕ್ಷಿಸಬೇಕು ಅಥವಾ ಅವಮಾನಿಸಬೇಕು ಎಂಬರ್ಥ ಕೊಡುವುದಿಲ್ಲ. ಅದಕ್ಕೆ ಬದಲಾಗಿ, ಆ ಜ್ಞಾನೋಕ್ತಿ ಹಾಗೂ ರೋಮನ್ನರಿಗೆ ಪೌಲನು ಬರೆದ ತದ್ರೂಪದ ಮಾತುಗಳು ಲೋಹದ ಅದಿರನ್ನು ಕರಗಿಸುವ ಪುರಾತನ ವಿಧಾನಕ್ಕೆ ಸೂಚಿಸುತ್ತಿರಬಹುದು. 19ನೇ ಶತಮಾನದ ಇಂಗ್ಲೆಂಡ್ನ ವಿದ್ವಾಂಸರಾದ ಚಾರ್ಲ್ಸ್ ಬ್ರಿಜಸ್ ಹೇಳಿದ್ದು: “ಸುತ್ತಿಗೆಯಿಂದ ಹದಮಾಡಲಾಗದ ಲೋಹದ ಸುತ್ತಲೂ ಅಂದರೆ, ಅದರ ಕೆಳಗೂ ಬೆಂಕಿ ಹಾಕಲಾಗುತ್ತಿತ್ತು ಮಾತ್ರವಲ್ಲ ಅದರ ಮೇಲೂ ಕೆಂಡಗಳನ್ನು ಹೇರಲಾಗುತ್ತಿತ್ತು. ತಾಳ್ಮೆಯಿಂದ ಕೂಡಿದ, ತನ್ನನ್ನೇ ನಿರಾಕರಿಸುವ ಉತ್ಕಟ ಪ್ರೀತಿಯ ತಾಕತ್ತಿಗೆ ಕರಗದ ಮೊಂಡ ಹೃದಯಗಳು ಬಲು ಕೊಂಚವೇ ಎನ್ನಬಹುದು.”
6 ‘ಕೆಂಡಗಳಂತೆ’ ದಯಾಭರಿತ ಕ್ರಿಯೆಗಳು ವಿರೋಧಿಗಳ ಹೃದಯವನ್ನು ಹದಗೊಳಿಸಿ ಅವರಲ್ಲಿರುವ ದ್ವೇಷವನ್ನು ಬಹುಶಃ ಕರಗಿಸಬಲ್ಲವು. ನಮ್ಮ ದಯಾಭರಿತ ಕ್ರಿಯೆಗಳಿಂದಾಗಿ ಜನರು ಪ್ರಭಾವಿತರಾಗಿ ಯೆಹೋವನ ಜನರ ಕುರಿತು ಮತ್ತು ಅವರು ಸಾರುವ ಬೈಬಲ್ ಸಂದೇಶದ ಕುರಿತು ಒಳ್ಳೇ ಅಭಿಪ್ರಾಯವನ್ನು ತಾಳಬಹುದು. ಅಪೊಸ್ತಲ ಪೇತ್ರನು ಬರೆದದ್ದು: “ಅನ್ಯಜನಾಂಗಗಳ ಮಧ್ಯೆ ನಿಮ್ಮ ನಡತೆಯನ್ನು ಉತ್ತಮವಾಗಿ ಕಾಪಾಡಿಕೊಳ್ಳಿರಿ; ಆಗ ಯಾವ ವಿಷಯದಲ್ಲಿ ಅವರು ನಿಮ್ಮನ್ನು ಕೆಡುಕರೆಂದು ನಿಂದಿಸುತ್ತಾರೊ ಆ ವಿಷಯದಲ್ಲಿಯೇ ನಿಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆ ಕಾಣುವ ಪರಿಣಾಮವಾಗಿ ದೇವರ ವಿಚಾರಣೆಯ ದಿನದಲ್ಲಿ ಆತನನ್ನು ಮಹಿಮೆಪಡಿಸುವರು.”—1 ಪೇತ್ರ 2:12.
“ಎಲ್ಲರೊಂದಿಗೆ ಶಾಂತಿಶೀಲರಾಗಿರಿ”
7. ಕ್ರಿಸ್ತನು ತನ್ನ ಶಿಷ್ಯರಿಗೆ ಬಿಟ್ಟುಹೋಗಿರುವ ಶಾಂತಿ ಏನಾಗಿದೆ, ಮತ್ತು ಅದು ಏನನ್ನು ಮಾಡುವಂತೆ ನಮ್ಮನ್ನು ಪ್ರಚೋದಿಸಬೇಕು?
7 ರೋಮನ್ನರಿಗೆ 12:18 ಓದಿ. ಯೇಸು ತನ್ನ ಅಪೊಸ್ತಲರೊಂದಿಗೆ ಕಳೆದ ಕೊನೆಯ ಸಂಜೆಯಂದು ಅವರಿಗಂದದ್ದು: “ನಾನು ನಿಮಗೆ ಶಾಂತಿಯನ್ನು ಬಿಟ್ಟುಹೋಗುತ್ತೇನೆ; ನನ್ನ ಶಾಂತಿಯನ್ನು ನಿಮಗೆ ಕೊಡುತ್ತೇನೆ.” (ಯೋಹಾ. 14:27) ಕ್ರಿಸ್ತನು ತನ್ನ ಶಿಷ್ಯರಿಗೆ ಬಿಟ್ಟುಹೋಗಿರುವ ಶಾಂತಿಯು, ಯೆಹೋವ ದೇವರು ಮತ್ತು ಆತನ ಪ್ರಿಯ ಮಗನು ತಮ್ಮನ್ನು ಪ್ರೀತಿಸುತ್ತಾರೆ ಹಾಗೂ ಮೆಚ್ಚುತ್ತಾರೆ ಎಂಬ ಅನಿಸಿಕೆಯಿಂದಾಗಿ ಅವರು ಅನುಭವಿಸುವ ಆಂತರಿಕ ನೆಮ್ಮದಿಯಾಗಿದೆ. ಈ ನೆಮ್ಮದಿಯು ಇತರರೊಂದಿಗೆ ಶಾಂತಿಯಿಂದ ಜೀವಿಸಲು ನಮ್ಮನ್ನು ಪ್ರಚೋದಿಸಬೇಕು. ನಿಜ ಕ್ರೈಸ್ತರು ಶಾಂತಿಪ್ರಿಯರು ಮತ್ತು ಶಾಂತಿಮಾಡಿಸುವವರು ಆಗಿರುತ್ತಾರೆ.—ಮತ್ತಾ. 5:9.
8. ನಾವು ಮನೆಯಲ್ಲಿ ಮತ್ತು ಸಭೆಯಲ್ಲಿ ಹೇಗೆ ಶಾಂತಿಮಾಡಿಸುವವರಾಗಿರಬಹುದು?
8 ಕುಟುಂಬ ವೃತ್ತದಲ್ಲಿ ಶಾಂತಿಮಾಡಿಸುವವರಾಗಿರುವ ಒಂದು ವಿಧವು, ಪರಿಸ್ಥಿತಿ ವಿಕೋಪಕ್ಕೆ ತಿರುಗುವ ತನಕ ಕಾಯದೇ ಮನಸ್ತಾಪಗಳೆದ್ದ ಕೂಡಲೇ ಅವನ್ನು ಬಗೆಹರಿಸುವುದಾಗಿದೆ. (ಜ್ಞಾನೋ. 15:18; ಎಫೆ. 4:26) ಇದು ಕ್ರೈಸ್ತ ಸಭೆಯೊಳಗೂ ಅನ್ವಯಿಸುತ್ತದೆ. ಶಾಂತಿಯನ್ನು ಬೆನ್ನಟ್ಟುವುದಕ್ಕೂ ನಾಲಿಗೆಯನ್ನು ಬಿಗಿಹಿಡಿಯುವುದಕ್ಕೂ ಸಂಬಂಧವಿದೆಯೆಂದು ಅಪೊಸ್ತಲ ಪೇತ್ರನು ಸೂಚಿಸಿದನು. (1 ಪೇತ್ರ 3:10, 11) ಯಾಕೋಬನು ಕೂಡ ನಾಲಿಗೆಯ ಸರಿಯಾದ ಉಪಯೋಗದ ಕುರಿತು ಮತ್ತು ಹೊಟ್ಚೆಕಿಚ್ಚನ್ನೂ ಕಲಹಶೀಲ ಮನೋಭಾವವನ್ನೂ ತ್ಯಜಿಸುವುದರ ಕುರಿತು ಸಲಹೆಕೊಟ್ಟನು. ತದನಂತರ ಅವನು ಬರೆದದ್ದು: “ಮೇಲಣಿಂದ ಬರುವ ವಿವೇಕವು ಮೊದಲು ಶುದ್ಧವಾದದ್ದು, ತರುವಾಯ ಶಾಂತಿಶೀಲವಾದದ್ದು, ನ್ಯಾಯಸಮ್ಮತವಾದದ್ದು, ವಿಧೇಯತೆ ತೋರಿಸಲು ಸಿದ್ಧವಾದದ್ದು, ಕರುಣೆ ಮತ್ತು ಒಳ್ಳೇ ಫಲಗಳಿಂದ ತುಂಬಿರುವಂಥದ್ದು ಆಗಿದೆ; ಅದು ಪಕ್ಷಭೇದಗಳನ್ನು ಮಾಡುವುದಿಲ್ಲ, ಅದರಲ್ಲಿ ಕಪಟವೂ ಇಲ್ಲ. ಇದಲ್ಲದೆ, ನೀತಿಯ ಫಲದ ಬೀಜವು ಶಾಂತ ಪರಿಸ್ಥಿತಿಗಳಲ್ಲಿ ಶಾಂತಿಕರ್ತರಿಗಾಗಿ ಬಿತ್ತಲ್ಪಡುತ್ತದೆ.”—ಯಾಕೋ. 3:17, 18.
9. ‘ಎಲ್ಲರೊಂದಿಗೆ ಶಾಂತಿಶೀಲರಾಗಿರಲು’ ಪ್ರಯತ್ನಿಸುವಾಗ ನಾವೇನನ್ನು ಮನಸ್ಸಿನಲ್ಲಿಡಬೇಕು?
9 ರೋಮನ್ನರಿಗೆ 12:18ರಲ್ಲಿ ಪೌಲನು, ಕುಟುಂಬ ವೃತ್ತದಲ್ಲಿ ಮತ್ತು ಸಭೆಯಲ್ಲಿ ಶಾಂತಿಶೀಲರಾಗಿರುವುದರ ಕುರಿತು ಮಾತ್ರ ಹೇಳುವುದಿಲ್ಲ. “ಎಲ್ಲರೊಂದಿಗೆ ಶಾಂತಿಶೀಲರಾಗಿರಿ” ಎಂದವನು ಹೇಳುತ್ತಾನೆ. ಎಲ್ಲರೂ ಎಂದು ಹೇಳುವಾಗ ಅದರಲ್ಲಿ, ನೆರೆಹೊರೆಯವರು, ಸಹಕರ್ಮಿಗಳು, ಸಹಪಾಠಿಗಳು ಮತ್ತು ಶುಶ್ರೂಷೆಯಲ್ಲಿ ನಾವು ಭೇಟಿಯಾಗುವ ಜನರು ಸೇರಿರುತ್ತಾರೆ. ಆದರೆ, “ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ” ಎಂದು ಹೇಳುವ ಮೂಲಕ ಅಪೊಸ್ತಲ ಪೌಲನು ತನ್ನ ಸಲಹೆಯ ವ್ಯಾಪ್ತಿಯನ್ನು ಸೀಮಿತಗೊಳಿಸುತ್ತಾನೆ. ಇದರರ್ಥ ನಾವು “ಎಲ್ಲರೊಂದಿಗೆ ಶಾಂತಿಶೀಲರಾಗಿ” ಇರಲು ಕೈಲಾದದ್ದೆಲ್ಲವನ್ನೂ ಮಾಡಬೇಕಾದರೂ ಹಾಗೆ ಮಾಡುವಾಗ ದೇವರ ನೀತಿಯುತ ಮೂಲತತ್ತ್ವಗಳನ್ನೆಂದೂ ಮೀರಿಹೋಗಬಾರದು.
ಮುಯ್ಯಿ ತೀರಿಸುವುದು ಯೆಹೋವನ ಕೆಲಸ
10, 11. ರೋಮನ್ನರಿಗೆ 12:19ರಲ್ಲಿ ಪೌಲನು ಯಾವ ಸಲಹೆ ಕೊಟ್ಟಿದ್ದಾನೆ, ಮತ್ತು ಅದು ಸೂಕ್ತವೇಕೆ?
10 ರೋಮನ್ನರಿಗೆ 12:19 ಓದಿ. ನಮ್ಮ ಕೆಲಸ ಮತ್ತು ಸಂದೇಶವನ್ನು ‘ಎದುರಿಸುವವರಿಂದ,’ ಅಂದರೆ ಅದನ್ನು ಇಷ್ಟಪಡದವರು ಮಾತ್ರವಲ್ಲ ಅದನ್ನು ನೇರವಾಗಿ ವಿರೋಧಿಸುವವರಿಂದ ನಾವು ‘ಕೇಡನ್ನು ಅನುಭವಿಸುತ್ತಿರುವಾಗ ತಾಳಿಕೊಳ್ಳುವವರೂ’ “ಸೌಮ್ಯಭಾವದಿಂದ” ನಡಕೊಳ್ಳುವವರೂ ಆಗಿರಬೇಕು. (2 ತಿಮೊ. 2:23-25) ಪೌಲನು ಕ್ರೈಸ್ತರಿಗೆ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ “ದೇವರ ಕ್ರೋಧಕ್ಕೆ ಎಡೆಮಾಡಿಕೊಡಿರಿ” ಎಂಬ ಸಲಹೆ ಕೊಡುತ್ತಾನೆ. ಮುಯ್ಯಿ ತೀರಿಸುವುದು ನಮ್ಮ ಕೆಲಸವಲ್ಲ ಎಂಬುದಾಗಿ ಕ್ರೈಸ್ತರಾದ ನಮಗೆ ತಿಳಿದಿದೆ. “ಕೋಪವನ್ನು ಅಣಗಿಸಿಕೋ; ರೋಷವನ್ನು ಬಿಡು. ಉರಿಗೊಳ್ಳಬೇಡ; ಕೆಡುಕಿಗೆ ಕಾರಣವಾದೀತು” ಎಂದು ಕೀರ್ತನೆಗಾರನು ಬರೆದನು. (ಕೀರ್ತ. 37:8) ಅಲ್ಲದೇ ಸೊಲೊಮೋನನು ಸಲಹೆನೀಡಿದ್ದು: “ಕೇಡಿಗೆ ಮುಯ್ಯಿತೀರಿಸುವೆನು ಅನ್ನಬೇಡ; ಯೆಹೋವನನ್ನು ನಿರೀಕ್ಷಿಸಿಕೊಂಡಿರು, ಆತನೇ ನಿನ್ನನ್ನುದ್ಧರಿಸುವನು.”—ಜ್ಞಾನೋ. 20:22.
11 ವಿರೋಧಿಗಳು ನಮಗೇನಾದರೂ ಹಾನಿಮಾಡುವಲ್ಲಿ, ಅವರನ್ನು ಶಿಕ್ಷಿಸುವುದು ಸೂಕ್ತವೆಂದು ಯೆಹೋವನಿಗೆ ಅನಿಸಿದರೆ ಅದನ್ನು ಆತನು ತನ್ನ ಕ್ಲುಪ್ತ ಸಮಯದಲ್ಲಿ ಮಾಡಲಿ ಎಂದು ಆತನಿಗೇ ಬಿಟ್ಟುಬಿಡುವುದು ವಿವೇಕಯುತ. ಪೌಲನು ಹೇಳಿದ್ದು: “‘ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು ಎಂದು ಯೆಹೋವನು ಹೇಳುತ್ತಾನೆ’ ಎಂದು ಬರೆದಿದೆ.” (ಧರ್ಮೋಪದೇಶಕಾಂಡ 32:35 ಹೋಲಿಸಿ.) ಒಂದುವೇಳೆ ನಾವೇ ಮುಯ್ಯಿ ತೀರಿಸಲು ಪ್ರಯತ್ನಿಸುವಲ್ಲಿ, ಯೆಹೋವನು ಯಾವುದನ್ನು ತನ್ನ ವಿಶೇಷಾಧಿಕಾರವಾಗಿ ಇಟ್ಟುಕೊಂಡಿದ್ದಾನೋ ಅದಕ್ಕೆ ಕೈಹಾಕುತ್ತಾ ನಾವು ಅಹಂಕಾರದಿಂದ ವರ್ತಿಸಿದಂತಾಗುವುದು. ಅಷ್ಟೇ ಅಲ್ಲ, “ನಾನೇ ಪ್ರತಿಫಲವನ್ನು ಕೊಡುವೆನು” ಎಂಬ ಯೆಹೋವನ ಮಾತಿನಲ್ಲಿ ನಮಗೆ ನಂಬಿಕೆಯಿಲ್ಲ ಎಂದು ತೋರಿಸಿದಂತಾಗುವುದು.
12. ಯೆಹೋವನ ಕ್ರೋಧವು ಯಾವಾಗ ಪ್ರಕಟವಾಗಲಿದೆ, ಮತ್ತು ಹೇಗೆ?
12 ರೋಮನ್ನರಿಗೆ ಬರೆದ ತನ್ನ ಪತ್ರದ ಆರಂಭದಲ್ಲಿ ಪೌಲನು ಹೇಳಿದ್ದು: “ಅನೀತಿಯ ವಿಧದಿಂದ ಸತ್ಯವನ್ನು ಅಡಗಿಸುವವರಾದ ಮನುಷ್ಯರ ಎಲ್ಲ ಭಕ್ತಿಹೀನತೆಯ ಮತ್ತು ಅನೀತಿಯ ವಿರುದ್ಧವಾಗಿ ದೇವರ ಕ್ರೋಧವು ಸ್ವರ್ಗದಿಂದ ಪ್ರಕಟವಾಗುತ್ತಲಿದೆ.” (ರೋಮ. 1:18) ‘ಮಹಾ ಸಂಕಟದ’ ಸಮಯದಲ್ಲಿ ಯೆಹೋವನ ಕ್ರೋಧವು ಆತನ ಮಗನ ಮೂಲಕ ಸ್ವರ್ಗದಿಂದ ಪ್ರಕಟವಾಗಲಿದೆ. (ಪ್ರಕ. 7:14) ಇದು “ದೇವರ ನೀತಿಯ ನ್ಯಾಯತೀರ್ಪಿನ ರುಜುವಾತಾಗಿದೆ.” ಇದನ್ನೇ ಪೌಲನು ದೇವಪ್ರೇರಣೆಯಿಂದ ಬರೆದ ಇನ್ನೊಂದು ಪತ್ರದಲ್ಲಿ ವಿವರಿಸುತ್ತಾ ಹೇಳಿದ್ದು: “ಇದರಿಂದಾಗಿ ನಿಮಗೆ ಸಂಕಟವನ್ನು ಉಂಟುಮಾಡುವವರಿಗೆ ಪ್ರತಿಯಾಗಿ ಸಂಕಟವನ್ನೂ ಆದರೆ ಸಂಕಟವನ್ನು ಅನುಭವಿಸುವವರಾದ ನಿಮಗೆ ನಮ್ಮೊಂದಿಗೆ ಉಪಶಮನವನ್ನೂ ಕೊಡುವುದು ದೇವರ ಎಣಿಕೆಯಲ್ಲಿ ನೀತಿಯುತವಾದದ್ದಾಗಿದೆ. ಕರ್ತನಾದ ಯೇಸು ಸ್ವರ್ಗದಿಂದ ತನ್ನ ಬಲಿಷ್ಠ ದೂತರೊಂದಿಗೆ ಉರಿಯುವ ಬೆಂಕಿಯಲ್ಲಿ ಪ್ರಕಟವಾಗುವ ಸಮಯದಲ್ಲಿ ಇದು ಸಂಭವಿಸುವುದು. ಆಗ ಅವನು ದೇವರನ್ನು ಅರಿಯದವರಿಗೂ ನಮ್ಮ ಕರ್ತನಾದ ಯೇಸುವಿನ ಕುರಿತಾದ ಸುವಾರ್ತೆಗೆ ವಿಧೇಯರಾಗದವರಿಗೂ ಮುಯ್ಯಿತೀರಿಸುವನು.”—2 ಥೆಸ. 1:5-8.
ಒಳ್ಳೇದರಿಂದ ಕೆಟ್ಟದ್ದನ್ನು ಜಯಿಸುವುದು
13, 14. (ಎ) ವಿರೋಧ ಬರುವಾಗ ನಮಗೇಕೆ ಆಶ್ಚರ್ಯವಾಗುವುದಿಲ್ಲ? (ಬಿ) ನಮ್ಮನ್ನು ಹಿಂಸಿಸುವವರನ್ನು ನಾವು ಹೇಗೆ ಆಶೀರ್ವದಿಸಬಲ್ಲೆವು?
13 ರೋಮನ್ನರಿಗೆ 12:14, 21 ಓದಿ. ಯೆಹೋವನು ತನ್ನ ಉದ್ದೇಶಗಳನ್ನು ಪೂರೈಸುವನೆಂಬ ಪೂರ್ಣ ಭರವಸೆಯೊಂದಿಗೆ, ‘ರಾಜ್ಯದ ಈ ಸುವಾರ್ತೆಯನ್ನು’ “ನಿವಾಸಿತ ಭೂಮಿಯಾದ್ಯಂತ” ಸಾರುವಂತೆ ಆತನು ಕೊಟ್ಟಿರುವ ಕೆಲಸವನ್ನು ಪೂರೈಸಲು ನಮ್ಮಿಂದಾದದ್ದೆಲ್ಲವನ್ನೂ ಮಾಡಬಲ್ಲೆವು. (ಮತ್ತಾ. 24:14) “ನನ್ನ ಹೆಸರಿನ ನಿಮಿತ್ತ ನೀವು ಎಲ್ಲ ಜನಾಂಗಗಳ ದ್ವೇಷಕ್ಕೆ ಗುರಿಯಾಗುವಿರಿ” ಎಂದು ಯೇಸು ನೀಡಿದ ಎಚ್ಚರಿಕೆಗನುಗುಣವಾಗಿ ನಮ್ಮ ಕ್ರೈಸ್ತ ಚಟುವಟಿಕೆ ವೈರಿಗಳ ಕೋಪವನ್ನು ಕೆರಳಿಸುವುದೆಂದು ನಮಗೆ ಚೆನ್ನಾಗಿ ತಿಳಿದಿದೆ. (ಮತ್ತಾ. 24:9) ಆದ್ದರಿಂದ, ವಿರೋಧ ಬರುವಾಗ ನಮಗೆ ಆಶ್ಚರ್ಯವೂ ಆಗುವುದಿಲ್ಲ ನಿರುತ್ಸಾಹವೂ ಆಗುವುದಿಲ್ಲ. ಅಪೊಸ್ತಲ ಪೇತ್ರನು ಬರೆದದ್ದು: “ಪ್ರಿಯರೇ, ವಿಚಿತ್ರವಾದದ್ದೇನೋ ನಿಮಗೆ ಸಂಭವಿಸುತ್ತಿದೆಯೋ ಎಂಬಂತೆ ನಿಮ್ಮ ಮಧ್ಯೆ ಉರಿಯುತ್ತಿರುವ ಬೆಂಕಿಯಿಂದಾಗಿ ಕಳವಳಗೊಳ್ಳಬೇಡಿ; ಅದು ಪರೀಕ್ಷೆಗಾಗಿ ನಿಮಗೆ ಸಂಭವಿಸುತ್ತಿದೆ. ಅದಕ್ಕೆ ಬದಲಾಗಿ ಕ್ರಿಸ್ತನ ಕಷ್ಟಗಳಲ್ಲಿ ನೀವು ಎಷ್ಟರ ಮಟ್ಟಿಗೆ ಪಾಲುಗಾರರಾಗಿದ್ದೀರೋ ಅಷ್ಟರ ಮಟ್ಟಿಗೆ ಹರ್ಷಿಸುತ್ತಾ ಇರಿ.”—1 ಪೇತ್ರ 4:12, 13.
14 ನಮ್ಮನ್ನು ಹಿಂಸಿಸುವವರ ಮೇಲೆ ಕಿಡಿಕಾರುವ ಬದಲು, ಅವರಲ್ಲಿ ಕೆಲವರು ಅಜ್ಞಾನದ ನಿಮಿತ್ತ ಹಾಗೆ ವರ್ತಿಸುತ್ತಿರಬಹುದೆಂದು ಗ್ರಹಿಸುತ್ತಾ ನಾವು ಅವರಲ್ಲಿ ಅರಿವು ಮೂಡಿಸಲು ಪ್ರಯತ್ನಿಸುತ್ತೇವೆ. (2 ಕೊರಿಂ. 4:4) ಪೌಲನ ಈ ಸಲಹೆಯನ್ನು ನಾವು ಪಾಲಿಸುತ್ತೇವೆ: “ಹಿಂಸಿಸುವವರನ್ನು ಆಶೀರ್ವದಿಸುತ್ತಾ ಇರಿ; ಅವರನ್ನು ಶಪಿಸದೆ ಆಶೀರ್ವದಿಸಿರಿ.” (ರೋಮ. 12:14) ವಿರೋಧಿಗಳನ್ನು ಆಶೀರ್ವದಿಸುವ ಒಂದು ವಿಧ, ಅವರಿಗಾಗಿ ಪ್ರಾರ್ಥಿಸುವುದೇ ಆಗಿದೆ. ಯೇಸು ಪರ್ವತ ಪ್ರಸಂಗದಲ್ಲಿ ಹೇಳಿದ್ದು: “ನಿಮ್ಮ ವೈರಿಗಳನ್ನು ಪ್ರೀತಿಸಿರಿ; ನಿಮ್ಮನ್ನು ಹಗೆಮಾಡುವವರಿಗೆ ಉಪಕಾರಮಾಡಿರಿ; ನಿಮ್ಮನ್ನು ಶಪಿಸುವವರಿಗೆ ಆಶೀರ್ವಾದಮಾಡಿರಿ; ನಿಮ್ಮನ್ನು ಬಯ್ಯುವವರಿಗೋಸ್ಕರ ದೇವರನ್ನು ಪ್ರಾರ್ಥಿಸಿರಿ.” (ಲೂಕ 6:27, 28) ಒಬ್ಬ ಹಿಂಸಕನು ಸಹ ಕ್ರಿಸ್ತನ ನಂಬಿಗಸ್ತ ಶಿಷ್ಯನೂ ಯೆಹೋವನ ಹುರುಪಿನ ಸೇವಕನೂ ಆಗಸಾಧ್ಯವಿದೆ ಎಂಬುದನ್ನು ಅಪೊಸ್ತಲ ಪೌಲನು ತನ್ನ ಸ್ವಂತ ಅನುಭವದಿಂದ ತಿಳಿದಿದ್ದನು. (ಗಲಾ. 1:13-16, 23) ಇನ್ನೊಂದು ಪತ್ರದಲ್ಲಿ ಪೌಲನು ಹೇಳಿದ್ದು: “ಬೈಸಿಕೊಳ್ಳುತ್ತಿರುವಾಗಲೂ ಆಶೀರ್ವದಿಸುತ್ತೇವೆ; ಹಿಂಸಿಸಲ್ಪಡುವಾಗಲೂ ಸಹಿಸಿಕೊಳ್ಳುತ್ತೇವೆ; ನಾವು ಅಪಕೀರ್ತಿ ಹೊಂದುತ್ತಿರುವಾಗಲೂ ಬೇಡಿಕೊಳ್ಳುತ್ತೇವೆ.”—1 ಕೊರಿಂ. 4:12, 13.
15. ಒಳ್ಳೇದರಿಂದ ಕೆಟ್ಟದ್ದನ್ನು ಜಯಿಸುವ ಅತ್ಯುತ್ತಮ ವಿಧವು ಯಾವುದು?
15 ಅದೇ ರೀತಿಯಲ್ಲಿ ನಿಜ ಕ್ರೈಸ್ತನೊಬ್ಬನು ರೋಮನ್ನರಿಗೆ 12ನೇ ಅಧ್ಯಾಯದ ಈ ಕೊನೆಯ ವಚನವನ್ನು ಪಾಲಿಸುತ್ತಾನೆ: “ಕೆಟ್ಟದ್ದು ನಿನ್ನನ್ನು ಜಯಿಸುವಂತೆ ಬಿಡಬೇಡ, ಒಳ್ಳೇದರಿಂದ ಕೆಟ್ಟದ್ದನ್ನು ಜಯಿಸುತ್ತಾ ಇರು.” ಎಲ್ಲಾ ಕೆಟ್ಟ ಸಂಗತಿಗಳ ಮೂಲ ಸೈತಾನನು. (ಯೋಹಾ. 8:44; 1 ಯೋಹಾ. 5:19) ಅಪೊಸ್ತಲ ಯೋಹಾನನಿಗೆ ಕೊಡಲಾದ ಪ್ರಕಟನೆಯಲ್ಲಿ, ತನ್ನ ಅಭಿಷಿಕ್ತ ಸಹೋದರರು ‘ಕುರಿಮರಿಯ ರಕ್ತದಿಂದಲೂ ತಾವು ಸಾಕ್ಷಿನೀಡುವ ವಾಕ್ಯದಿಂದಲೂ ಸೈತಾನನನ್ನು ಜಯಿಸಿದರು’ ಎಂದು ಯೇಸು ಪ್ರಕಟಪಡಿಸಿದನು. (ಪ್ರಕ. 12:11) ಇದು, ದೇವರ ರಾಜ್ಯದ ಸುವಾರ್ತೆ ಸಾರುವ ನಮ್ಮ ಕೆಲಸದ ಮೂಲಕ ಒಳ್ಳೇದನ್ನು ಮಾಡುವುದೇ ಸೈತಾನನನ್ನೂ ಅವನು ಈ ವಿಷಯಗಳ ವ್ಯವಸ್ಥೆಯ ಮೇಲೆ ಬೀರುತ್ತಿರುವ ಕೆಟ್ಟ ಪ್ರಭಾವವನ್ನೂ ಜಯಿಸುವ ಅತ್ಯುತ್ತಮ ವಿಧವಾಗಿದೆಯೆಂದು ತೋರಿಸುತ್ತದೆ.
ನಿರೀಕ್ಷೆಯಲ್ಲಿ ಆನಂದಿಸುವುದು
16, 17. (ಎ) ನಮ್ಮ ಜೀವನವನ್ನು ಹೇಗೆ ಉಯೋಗಿಸಬೇಕು, (ಬಿ) ನಾವು ಸಭೆಯಲ್ಲಿ ಹೇಗೆ ನಡೆದುಕೊಳ್ಳಬೇಕು, (ಸಿ) ನಮ್ಮ ನಂಬಿಕೆಯನ್ನು ವಿರೋಧಿಸುವ ಜನರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದರ ಕುರಿತು ರೋಮನ್ನರಿಗೆ 12ನೇ ಅಧ್ಯಾಯ ನಮಗೇನನ್ನು ಕಲಿಸಿದೆ?
16 ಪೌಲನು ರೋಮ್ನಲ್ಲಿದ್ದ ಕ್ರೈಸ್ತರಿಗೆ ಬರೆದ ಪತ್ರದ 12ನೇ ಅಧ್ಯಾಯದ ಈ ಸಂಕ್ಷಿಪ್ತ ಪರಿಗಣನೆಯು ಅನೇಕ ವಿಷಯಗಳನ್ನು ನಮಗೆ ನೆನಪುಹುಟ್ಟಿಸಿತು. ಯೆಹೋವನ ಸಮರ್ಪಿತ ಸೇವಕರಾಗಿರುವ ನಾವು ತ್ಯಾಗಗಳನ್ನು ಮಾಡಲು ಸಿದ್ಧರಿರಬೇಕು ಎಂಬುದನ್ನು ಕಲಿತೆವು. ದೇವರ ಆತ್ಮದಿಂದ ಪ್ರಚೋದಿತರಾಗಿ ನಾವು ಆ ತ್ಯಾಗಗಳನ್ನು ಸಿದ್ಧಮನಸ್ಸಿನಿಂದ ಮಾಡುತ್ತೇವೆ. ಏಕೆಂದರೆ ಅದುವೇ ದೇವರ ಚಿತ್ತವಾಗಿದೆಯೆಂದು ನಮ್ಮ ವಿವೇಚನಾಶಕ್ತಿಯು ನಮಗೆ ಮನಗಾಣಿಸಿದೆ. ನಾವು ಪವಿತ್ರಾತ್ಮದಿಂದ ಪ್ರಜ್ವಲಿಸುತ್ತಿದ್ದೇವೆ ಮತ್ತು ನಮ್ಮಲ್ಲಿರುವ ವಿಭಿನ್ನ ವರಗಳನ್ನು ಹುರುಪಿನಿಂದ ಉಪಯೋಗಿಸುತ್ತೇವೆ. ನಾವು ದೀನಭಾವದಿಂದ ಸೇವೆ ಸಲ್ಲಿಸುತ್ತೇವೆ ಮತ್ತು ಕ್ರೈಸ್ತ ಐಕ್ಯವನ್ನು ಕಾಪಾಡಲಿಕ್ಕಾಗಿ ನಮ್ಮಿಂದ ಸಾಧ್ಯವಿರುವುದೆಲ್ಲವನ್ನೂ ಮಾಡುತ್ತೇವೆ. ನಾವು ಅತಿಥಿಸತ್ಕಾರದ ಪಥವನ್ನು ಅನುಸರಿಸುತ್ತೇವೆ ಮತ್ತು ಯಥಾರ್ಥ ಅನುಕಂಪವನ್ನು ತೋರಿಸುತ್ತೇವೆ.
17 ವಿರೋಧ ಬಂದಾಗ ನಾವು ಹೇಗೆ ಪ್ರತಿಕ್ರಿಯಿಸಬೇಕೆಂಬುದರ ಬಗ್ಗೆಯೂ ರೋಮನ್ನರಿಗೆ 12ನೇ ಅಧ್ಯಾಯ ನಮಗೆ ಅನೇಕ ಸಲಹೆಗಳನ್ನು ಕೊಡುತ್ತದೆ. ನಾವು ಸೇಡು ತೀರಿಸಬಾರದು. ದಯಾಭರಿತ ಕ್ರಿಯೆಗಳಿಂದ ವಿರೋಧವನ್ನು ಜಯಿಸಲು ಪ್ರಯತ್ನಿಸಬೇಕು. ಬೈಬಲ್ ಮೂಲತತ್ತ್ವಗಳನ್ನು ಮುರಿಯದೇ ಸಾಧ್ಯವಾದಷ್ಟು ಮಟ್ಟಿಗೆ ಎಲ್ಲರೊಂದಿಗೆ ಶಾಂತಿಯಿಂದಿರಲು ಪ್ರಯತ್ನಿಸಬೇಕು. ಇದು ಕುಟುಂಬ ವೃತ್ತದೊಳಗೆ, ಸಭೆಯೊಳಗೆ, ನೆರೆಯವರೊಂದಿಗೆ, ಕೆಲಸದ ಸ್ಥಳದಲ್ಲಿ, ಶಾಲೆಯಲ್ಲಿ ಮತ್ತು ನಮ್ಮ ಸಾರ್ವಜನಿಕ ಶುಶ್ರೂಷೆಯಲ್ಲಿ ಅನ್ವಯವಾಗುತ್ತದೆ. ನೇರವಾದ ಹಿಂಸೆಯನ್ನು ಎದುರಿಸುವಾಗಲೂ, ಮುಯ್ಯಿ ತೀರಿಸುವುದು ಯೆಹೋವನ ಕೆಲಸ ಎಂಬುದನ್ನು ನೆನಪಿನಲ್ಲಿಡುತ್ತಾ ನಾವು ಒಳ್ಳೇದರಿಂದ ಕೆಟ್ಟದ್ದನ್ನು ಜಯಿಸಲು ನಮ್ಮ ಕೈಲಾದದ್ದೆಲ್ಲವನ್ನೂ ಮಾಡುತ್ತೇವೆ.
18. ರೋಮನ್ನರಿಗೆ 12:12ರಲ್ಲಿ ಯಾವ ಮೂರು ವಿಷಯಗಳನ್ನು ಶಿಫಾರಸ್ಸು ಮಾಡಲಾಗಿದೆ?
18 ರೋಮನ್ನರಿಗೆ 12:12 ಓದಿ. ಈ ಎಲ್ಲಾ ವಿವೇಕಯುತ, ಪ್ರಾಯೋಗಿಕ ಸಲಹೆಗಳಿಗೆ ಕೂಡಿಸುತ್ತಾ ಪೌಲನು ಇನ್ನೂ ಮೂರು ಬುದ್ಧಿವಾದಗಳನ್ನು ಕೊಡುತ್ತಾನೆ. ನಾವು ಇವೆಲ್ಲವುಗಳನ್ನು ಯೆಹೋವನ ಸಹಾಯವಿಲ್ಲದೇ ಪೂರೈಸಲು ಸಾಧ್ಯವಿಲ್ಲ. ಆದುದರಿಂದ ಅಪೊಸ್ತಲನು ನಮಗೆ “ಪಟ್ಟುಹಿಡಿದು ಪ್ರಾರ್ಥಿಸಿರಿ” ಎಂಬ ಸಲಹೆ ನೀಡುತ್ತಾನೆ. ಇದು, “ಸಂಕಟದಲ್ಲಿರುವಾಗ ತಾಳಿಕೊಳ್ಳಿರಿ” ಎಂಬುದಾಗಿ ಅವನು ಕೊಟ್ಟ ಸಲಹೆಯನ್ನು ಪಾಲಿಸಲು ನಮಗೆ ಸಹಾಯ ಮಾಡುತ್ತದೆ. ಅಂತಿಮವಾಗಿ, ನಾವು ಯೆಹೋವನು ವಾಗ್ದಾನಿಸಿರುವ ಭವಿಷ್ಯತ್ತಿನ ಮೇಲೆ ನಮ್ಮ ಮನಸ್ಸನ್ನು ಕೇಂದ್ರೀಕರಿಸಬೇಕು ಮತ್ತು ನಮಗೆ ಸ್ವರ್ಗೀಯ ನಿರೀಕ್ಷೆಯಿರಲಿ ಭೂನಿರೀಕ್ಷೆಯಿರಲಿ, ನಿತ್ಯಜೀವದ ‘ನಿರೀಕ್ಷೆಯಲ್ಲಿ ಆನಂದಿಸಬೇಕು.’
ಪುನರ್ವಿಮರ್ಶೆಗಾಗಿ
• ವಿರೋಧ ಬಂದಾಗ ನಾವು ಹೇಗೆ ಪ್ರತಿಕ್ರಿಯಿಸಬೇಕು?
• ಯಾವ ಕ್ಷೇತ್ರಗಳಲ್ಲಿ ನಾವು ಶಾಂತಿಮಾಡಿಸುವವರಾಗಿರಬೇಕು, ಮತ್ತು ಹೇಗೆ?
• ನಾವು ಮುಯ್ಯಿ ತೀರಿಸಲು ಪ್ರಯತ್ನಿಸಬಾರದೇಕೆ?
[ಪುಟ 8ರಲ್ಲಿರುವ ಚಿತ್ರ]
ನಮ್ಮ ನೆರೆಯವರಿಗೆ ಪ್ರಾಯೋಗಿಕ ವಿಧಗಳಲ್ಲಿ ನೆರವು ನೀಡುವುದರಿಂದ ಪೂರ್ವಗ್ರಹವನ್ನು ಜಯಿಸಲು ಸಾಧ್ಯವಾಗಬಹುದು
[ಪುಟ 9ರಲ್ಲಿರುವ ಚಿತ್ರ]
ಸಭೆಯಲ್ಲಿ ಶಾಂತಿಮಾಡಿಸುವವರಾಗಿರಲು ನೀವು ಶ್ರಮಿಸುತ್ತೀರೋ?