ಕ್ರಿಸ್ತನ ನಿಜ ಹಿಂಬಾಲಕರಾಗಿದ್ದೀರೆಂದು ತೋರಿಸಿಕೊಡಿ
“ಪ್ರತಿಯೊಂದು ಒಳ್ಳೆಯ ಮರವು ಉತ್ತಮ ಫಲವನ್ನು ಕೊಡುತ್ತದೆ, ಆದರೆ ಪ್ರತಿಯೊಂದು ಹುಳುಕು ಮರವು ಹುಳುಕು ಫಲವನ್ನು ಕೊಡುತ್ತದೆ.”—ಮತ್ತಾ. 7:17.
1, 2. ವಿಶೇಷವಾಗಿ ಈ ಅಂತ್ಯದ ಸಮಯದಲ್ಲಿ ಕ್ರಿಸ್ತನ ನಿಜ ಹಿಂಬಾಲಕರು ಸುಳ್ಳು ಹಿಂಬಾಲಕರಿಂದ ಹೇಗೆ ಭಿನ್ನವಾಗಿದ್ದಾರೆ?
ತನ್ನ ನಿಜ ಹಿಂಬಾಲಕರಿಗೂ ಸುಳ್ಳು ಹಿಂಬಾಲಕರಿಗೂ ಇರುವ ವ್ಯತ್ಯಾಸವನ್ನು ತಿಳಿಸುತ್ತಾ ಅವರ ಫಲಗಳಿಂದ ಅಂದರೆ ಅವರ ಬೋಧನೆ ಮತ್ತು ನಡವಳಿಕೆಯಿಂದ ಅವರನ್ನು ಗುರುತಿಸುವಿರಿ ಎಂದು ಯೇಸು ಹೇಳಿದನು. (ಮತ್ತಾ. 7:15-17, 20) ನಿಶ್ಚಯವಾಗಿಯೂ ಜನರು ತಮ್ಮ ಹೃದಮನದೊಳಗೆ ತಕ್ಕೊಳ್ಳುವ ವಿಷಯಗಳಿಂದ ಅನಿವಾರ್ಯವಾಗಿ ಪ್ರಭಾವಿತರಾಗುತ್ತಾರೆ. (ಮತ್ತಾ. 15:18, 19) ಯಾರಿಗೆ ಸುಳ್ಳು ವಿಷಯಗಳನ್ನು ಉಣಿಸಲಾಗುತ್ತದೋ ಅವರು “ಹುಳುಕು ಫಲವನ್ನು” ಕೊಡುತ್ತಾರೆ. ಆದರೆ ಆಧ್ಯಾತ್ಮಿಕ ಸತ್ಯವು ಯಾರಿಗೆ ಕಲಿಸಲ್ಪಡುತ್ತದೋ ಅವರು “ಉತ್ತಮ ಫಲವನ್ನು” ಕೊಡುತ್ತಾರೆ.
2 ಈ ಅಂತ್ಯದ ಸಮಯದಲ್ಲಿ ಆ ಎರಡು ರೀತಿಯ ಫಲಗಳು ಸ್ಪಷ್ಟವಾಗಿ ತೋರಿಬಂದಿವೆ. (ದಾನಿಯೇಲ 12:3, 10 ಓದಿ.) ಸುಳ್ಳು ಕ್ರೈಸ್ತರಲ್ಲಿ ದೇವರ ಕಡೆಗೆ ಸೊಟ್ಟಾದ ನೋಟವಿದೆ ಹಾಗೂ ಅವರ ದೇವಭಕ್ತಿಯು ಹೆಚ್ಚಾಗಿ ಕಪಟತನದ್ದು. ಆದರೆ ಆಧ್ಯಾತ್ಮಿಕ ವಿವೇಚನೆ ಇರುವವರು ದೇವರನ್ನು “ಪವಿತ್ರಾತ್ಮದಿಂದಲೂ ಸತ್ಯದಿಂದಲೂ” ಆರಾಧಿಸುತ್ತಾರೆ. (ಯೋಹಾ. 4:24; 2 ತಿಮೊ. 3:1-5) ಅವರು ಕ್ರಿಸ್ತಸದೃಶ ಗುಣಗಳನ್ನು ತೋರಿಸಲು ಪ್ರಯಾಸಪಡುತ್ತಾರೆ. ಆದರೆ ವೈಯಕ್ತಿಕವಾಗಿ ನಮ್ಮ ಕುರಿತೇನು? ನಿಜ ಕ್ರೈಸ್ತತ್ವದ ಮುಂದಿನ ಐದು ಗುರುತುಚಿಹ್ನೆಗಳನ್ನು ಪರಿಗಣಿಸುವಾಗ ನಿಮ್ಮನ್ನು ಹೀಗೆ ಕೇಳಿಕೊಳ್ಳಿ: ‘ನನ್ನ ನಡತೆ ಮತ್ತು ನಾನು ಕಲಿಸುವ ಬೋಧನೆಗಳು ದೇವರ ವಾಕ್ಯಕ್ಕೆ ಸ್ಪಷ್ಟ ಹೊಂದಿಕೆಯಲ್ಲಿವೆಯೊ? ನನ್ನ ನಡವಳಿಕೆ ಮತ್ತು ಬೋಧನೆ ಸತ್ಯವನ್ನು ಹುಡುಕುವವರಿಗೆ ಅದನ್ನು ಆಕರ್ಷಣೀಯವಾಗಿ ಮಾಡುತ್ತದೊ?’
ದೇವರ ವಾಕ್ಯಕ್ಕನುಸಾರ ಜೀವಿಸಿ
3. ಯೆಹೋವನನ್ನು ಮೆಚ್ಚಿಸುವಂಥದ್ದು ಯಾವುದು, ಮತ್ತು ಇದು ನಿಜ ಕ್ರೈಸ್ತರನ್ನು ಏನು ಮಾಡುವಂತೆ ಪ್ರೇರಿಸುತ್ತದೆ?
3 ಯೇಸು ಅಂದದ್ದು: “ನನ್ನನ್ನು ‘ಕರ್ತನೇ, ಕರ್ತನೇ’ ಎಂದು ಹೇಳುವ ಪ್ರತಿಯೊಬ್ಬನೂ ಸ್ವರ್ಗದ ರಾಜ್ಯವನ್ನು ಪ್ರವೇಶಿಸುವುದಿಲ್ಲ; ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತವನ್ನು ಮಾಡುವವನೇ ಪ್ರವೇಶಿಸುವನು.” (ಮತ್ತಾ. 7:21) ಹೌದು, ಕ್ರೈಸ್ತರೆಂದು ಬರೇ ಹೇಳಿಕೊಳ್ಳುವುದು ಯೆಹೋವನನ್ನು ಸಂತೋಷಪಡಿಸುವುದಿಲ್ಲ, ಬದಲಿಗೆ ಕ್ರೈಸ್ತತ್ವದ ಬೋಧನೆಗಳನ್ನು ಪಾಲಿಸುವುದೇ ಸಂತೋಷಪಡಿಸುತ್ತದೆ. ಕ್ರಿಸ್ತನ ನಿಜ ಹಿಂಬಾಲಕರ ಇಡೀ ಜೀವನ ಮಾರ್ಗವು ಈ ಬೋಧನೆಗಳನ್ನು ಪಾಲಿಸುವುದನ್ನು ಒಳಗೂಡಿರುತ್ತದೆ. ಅದರಲ್ಲಿ ಹಣ, ಐಹಿಕ ಉದ್ಯೋಗ, ಮನೋರಂಜನೆ, ಲೌಕಿಕ ಪದ್ಧತಿಗಳು ಹಾಗೂ ಆಚರಣೆಗಳು, ವಿವಾಹ ಮತ್ತು ಜೊತೆಮಾನವರೊಂದಿಗಿನ ಇತರ ಸಂಬಂಧಗಳ ಕಡೆಗೆ ಅವರು ತೋರಿಸುವ ಮನೋಭಾವ ಸೇರಿರುತ್ತದೆ. ಸುಳ್ಳು ಕ್ರೈಸ್ತರಾದರೋ ಈ ಕಡೇ ದಿನಗಳಲ್ಲಿ ಹೆಚ್ಚೆಚ್ಚಾಗಿ ಭಕ್ತಿಹೀನ ನಡತೆ ತೋರಿಸುವ ಲೋಕದ ಯೋಚನಾಧಾಟಿ ಮತ್ತು ಮಾರ್ಗಗಳನ್ನು ಸ್ವೀಕರಿಸುತ್ತಾರೆ.—ಕೀರ್ತ. 92:7.
4, 5. ಮಲಾಕಿಯ 3:18ರಲ್ಲಿ ಕಂಡುಬರುವ ಯೆಹೋವನ ಮಾತುಗಳನ್ನು ನಾವು ನಮ್ಮ ಜೀವನದಲ್ಲಿ ಹೇಗೆ ಅನ್ವಯಿಸಬಲ್ಲೆವು?
4 ಇದಕ್ಕನುಸಾರ, ಪ್ರವಾದಿ ಮಲಾಕಿಯನು ಬರೆದದ್ದು: “ಶಿಷ್ಟರಿಗೂ ದುಷ್ಟರಿಗೂ ದೇವರನ್ನು ಸೇವಿಸುವವರಿಗೂ ಸೇವಿಸದವರಿಗೂ ಇರುವ ತಾರತಮ್ಯವನ್ನು ಮತ್ತೆ ಕಾಣುವಿರಿ.” (ಮಲಾ. 3:18) ಆ ಮಾತುಗಳ ಕುರಿತು ನೀವು ಯೋಚಿಸುವಾಗ ಹೀಗೆ ಕೇಳಿಕೊಳ್ಳಿ: ‘ನಾನು ಈ ಲೋಕದ ಜನರಂತೆಯೇ ಇದ್ದೇನೊ ಅಥವಾ ಅವರಿಗಿಂತ ಭಿನ್ನವಾಗಿದ್ದೇನೊ? ಶಾಲೆಯಲ್ಲಾಗಲಿ ಕೆಲಸದಲ್ಲಾಗಲಿ ನನ್ನ ಲೌಕಿಕ ಒಡನಾಡಿಗಳೊಂದಿಗೆ ಹೊಂದಿಕೆಯಲ್ಲಿರಲು ಪ್ರಯತ್ನಿಸುತ್ತೇನೊ ಅಥವಾ ಬೈಬಲಿನ ಮೂಲತತ್ತ್ವಗಳಿಗೆ ದೃಢವಾಗಿ ನಿಂತು ಸೂಕ್ತ ಸಮಯದಲ್ಲಿ ಸಾಕ್ಷಿ ನೀಡಲೂ ಹಿಂತೆಗೆಯದೆ ಇದ್ದೇನೊ?’ (1 ಪೇತ್ರ 3:16 ಓದಿ.) ಸ್ವನೀತಿವಂತರಂತೆ ತೋರಿಸಿಕೊಡಲು ನಾವು ಇಷ್ಟಪಡುವುದಿಲ್ಲ ನಿಜ. ಆದರೆ ಯೆಹೋವನನ್ನು ಪ್ರೀತಿಸದ ಮತ್ತು ಸೇವಿಸದವರಿಗಿಂತ ನಾವು ಭಿನ್ನರಾಗಿ ಎದ್ದುಕಾಣುವಂತಿರಬೇಕು.
5 ನಿಮ್ಮ ನಡವಳಿಕೆಯನ್ನು ಉತ್ತಮಗೊಳಿಸುವ ಅಗತ್ಯವಿರುವುದಾದರೆ, ಆ ವಿಷಯದ ಕುರಿತು ಪ್ರಾರ್ಥಿಸಿ, ಅನಂತರ ಕ್ರಮದ ಬೈಬಲ್ ಅಧ್ಯಯನ, ಪ್ರಾರ್ಥನೆ ಮತ್ತು ಕೂಟದ ಹಾಜರಿಯ ಮೂಲಕ ಆಧ್ಯಾತ್ಮಿಕ ಬಲವನ್ನು ಯಾಕೆ ಕೋರಬಾರದು? ದೇವರ ವಾಕ್ಯವನ್ನು ನೀವು ಎಷ್ಟು ಹೆಚ್ಚಾಗಿ ಅನ್ವಯಿಸುತ್ತೀರೊ ಅಷ್ಟು ಹೆಚ್ಚಾಗಿ “ಉತ್ತಮ ಫಲವನ್ನು” ಕೊಡುವಿರಿ. ಅದರಲ್ಲಿ ‘[ದೇವರ] ಹೆಸರಿಗೆ ಬಹಿರಂಗ ಪ್ರಕಟನೆಯನ್ನು ಮಾಡುವ ತುಟಿಗಳ ಫಲವೂ’ ಸೇರಿರುತ್ತದೆ.—ಇಬ್ರಿ. 13:15.
ದೇವರ ರಾಜ್ಯವನ್ನು ಸಾರಿರಿ
6, 7. ರಾಜ್ಯ ಸಂದೇಶದ ಸಂಬಂಧದಲ್ಲಿ ನಿಜ ಕ್ರೈಸ್ತರ ಮತ್ತು ಸುಳ್ಳು ಕ್ರೈಸ್ತರ ನಡುವೆ ಯಾವ ವ್ಯತ್ಯಾಸವು ಕಂಡುಬರುತ್ತದೆ?
6 ಯೇಸು ಅಂದದ್ದು: “ನಾನು ದೇವರ ರಾಜ್ಯದ ಸುವಾರ್ತೆಯನ್ನು ಬೇರೆ ಊರುಗಳಿಗೂ ಪ್ರಕಟಿಸಬೇಕಾಗಿದೆ; ನಾನು ಇದಕ್ಕಾಗಿಯೇ ಕಳುಹಿಸಲ್ಪಟ್ಟಿದ್ದೇನೆ.” (ಲೂಕ 4:43) ದೇವರ ರಾಜ್ಯವನ್ನು ತನ್ನ ಶುಶ್ರೂಷೆಯ ಮುಖ್ಯ ವಿಷಯವನ್ನಾಗಿ ಯೇಸು ಮಾಡಿದ್ದು ಏಕೆ? ಏಕೆಂದರೆ ಅವನು ಆ ರಾಜ್ಯದ ಅರಸನಾಗಲಿದ್ದನು ಮತ್ತು ಪುನರುತ್ಥಿತರಾದ ಅವನ ಆತ್ಮಜಾತ ಸಹೋದರರೊಂದಿಗೆ ಕೂಡಿ ಲೋಕದ ದುರವಸ್ಥೆಗೆ ಮೂಲಕಾರಣಗಳಾದ ಪಾಪವನ್ನೂ ಪಿಶಾಚನನ್ನೂ ತಾನು ಅಳಿಸಿಬಿಡುವೆನು ಎಂದವನಿಗೆ ಗೊತ್ತಿತ್ತು. (ರೋಮ. 5:12; ಪ್ರಕ. 20:10) ಆದಕಾರಣ ಸದ್ಯದ ವ್ಯವಸ್ಥೆಯ ಅಂತ್ಯದ ತನಕ ಆ ರಾಜ್ಯವನ್ನು ಸಾರುವಂತೆ ತನ್ನ ಹಿಂಬಾಲಕರಿಗೆ ಅವನು ಆಜ್ಞೆ ಕೊಟ್ಟನು. (ಮತ್ತಾ. 24:14) ಕ್ರಿಸ್ತನ ಹಿಂಬಾಲಕರೆಂದು ಬರೇ ಹೇಳಿಕೊಳ್ಳುವವರು ಈ ಕೆಲಸದಲ್ಲಿ ಪಾಲ್ಗೊಳ್ಳುವುದಿಲ್ಲ; ವಾಸ್ತವದಲ್ಲಿ ಅವರು ಪಾಲ್ಗೊಳ್ಳಸಾಧ್ಯವಿಲ್ಲ ಕೂಡ. ಏಕೆ? ಕಡಿಮೆಪಕ್ಷ ಮೂರು ಕಾರಣಗಳಿಂದಾಗಿ. ಒಂದನೆಯದಾಗಿ, ತಮಗೆ ತಿಳಿಯದ ಒಂದು ವಿಷಯವನ್ನು ಅವರು ಸಾರುವುದು ಹೇಗೆ? ಎರಡನೆಯದಾಗಿ, ರಾಜ್ಯದ ಸಂದೇಶವನ್ನು ನೆರೆಯವರಿಗೆ ಸಾರುವುದರಿಂದ ಬರಬಲ್ಲ ನಿಂದೆ ಮತ್ತು ವಿರೋಧವನ್ನು ಎದುರಿಸಲು ಬೇಕಾದ ದೀನತೆ ಮತ್ತು ಧೈರ್ಯ ಅವರಲ್ಲಿ ಹೆಚ್ಚಿನವರಲ್ಲಿಲ್ಲ. (ಮತ್ತಾ. 24:9; 1 ಪೇತ್ರ 2:23) ಮೂರನೆಯದಾಗಿ, ಸುಳ್ಳು ಕ್ರೈಸ್ತರಲ್ಲಿ ದೇವರ ಪವಿತ್ರಾತ್ಮವು ಇಲ್ಲವೇ ಇಲ್ಲ.—ಯೋಹಾ. 14:16, 17.
7 ಕ್ರಿಸ್ತನ ನಿಜ ಹಿಂಬಾಲಕರಾದರೋ ದೇವರ ರಾಜ್ಯವೆಂದರೇನು ಮತ್ತು ಅದೇನನ್ನು ಪೂರೈಸಲಿದೆ ಎಂಬುದನ್ನು ತಿಳಿದಿದ್ದಾರೆ. ಅದಲ್ಲದೆ ಆ ರಾಜ್ಯದ ಅಭಿರುಚಿಗಳಿಗೆ ಅವರು ತಮ್ಮ ಜೀವನದಲ್ಲಿ ಆದ್ಯತೆ ನೀಡುತ್ತಾ ಯೆಹೋವನ ಆತ್ಮದ ಸಹಾಯದಿಂದ ಅದನ್ನು ಲೋಕವ್ಯಾಪಕವಾಗಿ ಘೋಷಿಸುತ್ತಿದ್ದಾರೆ. (ಜೆಕ. 4:6) ಆ ಕಾರ್ಯದಲ್ಲಿ ನೀವು ಕ್ರಮವಾಗಿ ಪಾಲ್ಗೊಳ್ಳುತ್ತೀರೊ? ಪ್ರಾಯಶಃ ಶುಶ್ರೂಷೆಯಲ್ಲಿ ಹೆಚ್ಚು ಸಮಯ ಕಳೆಯುವ ಮೂಲಕ ಅಥವಾ ಅದರಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುವ ಮೂಲಕ ರಾಜ್ಯದ ಪ್ರಚಾರಕರಾದ ನೀವು ಪ್ರಗತಿಮಾಡಲು ಪ್ರಯತ್ನಿಸುತ್ತಿದ್ದೀರೊ? ಬೈಬಲಿನ ಉತ್ತಮ ಉಪಯೋಗವನ್ನು ಮಾಡುವ ಮೂಲಕ ಕೆಲವರು ತಮ್ಮ ಶುಶ್ರೂಷೆಯ ಗುಣಮಟ್ಟವನ್ನು ಉತ್ತಮಿಸಲು ಪ್ರಯತ್ನಿಸಿದ್ದಾರೆ. ಶಾಸ್ತ್ರಗ್ರಂಥದಿಂದ ತರ್ಕಬದ್ಧವಾಗಿ ವಿವರಿಸುವುದನ್ನು ತನ್ನ ವಾಡಿಕೆಯನ್ನಾಗಿ ಮಾಡಿದ ಅಪೊಸ್ತಲ ಪೌಲನು ಬರೆದದ್ದು: “ದೇವರ ವಾಕ್ಯವು ಸಜೀವವಾದದ್ದೂ ಪ್ರಬಲವಾದದ್ದೂ . . . ಆಗಿದೆ.”—ಇಬ್ರಿ. 4:12; ಅ. ಕಾ. 17:2, 3.
8, 9. (ಎ) ನಮ್ಮ ಶುಶ್ರೂಷೆಯಲ್ಲಿ ಬೈಬಲನ್ನು ಬಳಸುವ ಪ್ರಮುಖತೆಯನ್ನು ಯಾವ ಅನುಭವಗಳು ಎತ್ತಿಹೇಳುತ್ತವೆ? (ಬಿ) ದೇವರ ವಾಕ್ಯವನ್ನು ಉಪಯೋಗಿಸುವುದರಲ್ಲಿ ನಾವು ಹೇಗೆ ಹೆಚ್ಚು ನುರಿತವರಾಗಬಲ್ಲೆವು?
8 ಒಬ್ಬ ಸಹೋದರನು ಮನೆಮನೆಯ ಸೇವೆಯಲ್ಲಿ ಕ್ಯಾಥೊಲಿಕ್ ವ್ಯಕ್ತಿಯೊಬ್ಬನಿಗೆ ದಾನಿಯೇಲ 2:44ನ್ನು ಓದಿಹೇಳುತ್ತಾ, ದೇವರ ರಾಜ್ಯವು ನಿಜಶಾಂತಿ ಮತ್ತು ಭದ್ರತೆಯನ್ನು ಹೇಗೆ ತರಲಿದೆ ಎಂಬುದನ್ನು ವಿವರಿಸಿದನು. ಆ ಮನುಷ್ಯನು ಪ್ರತಿಕ್ರಿಯಿಸಿದ್ದು: “ನೀವು ವಿಷಯವನ್ನು ಬರೇ ಬಾಯಿಮಾತಿನಿಂದ ತಿಳಿಸಲಿಲ್ಲ. ಬದಲಾಗಿ ಬೈಬಲನ್ನು ತೆರೆದು ಆ ವಚನವು ಏನನ್ನುತ್ತದೆ ಎಂದು ತೋರಿಸಿದಿರಿ. ಇದು ನನಗೆ ತುಂಬ ಇಷ್ಟವಾಯಿತು.” ಗ್ರೀಕ್ ಆರ್ತಡಾಕ್ಸ್ ಚರ್ಚಿನ ಮಹಿಳೆಯೊಬ್ಬಳಿಗೆ ಒಬ್ಬ ಸಹೋದರನು ಬೈಬಲಿನಿಂದ ವಚನವನ್ನು ಓದಿಹೇಳಿದಾಗ ಆಕೆ ಅನೇಕ ಆಸಕ್ತಿಕರ ಪ್ರಶ್ನೆಗಳನ್ನು ಕೇಳಿದಳು. ಈ ಸಂದರ್ಭದಲ್ಲಿ ಸಹ ಆ ಸಹೋದರನೂ ಅವನ ಪತ್ನಿಯೂ ಬೈಬಲಿನಿಂದಲೇ ಉತ್ತರವನ್ನು ಕೊಟ್ಟರು. ತದನಂತರ ಆ ಮಹಿಳೆಯು ಅಂದದ್ದು: “ನಿಮ್ಮೊಂದಿಗೆ ಮಾತಾಡಲು ನನಗೆ ತುಂಬ ಇಷ್ಟವಾದದ್ದು ಏಕೆಂದು ನಿಮಗೆ ಗೊತ್ತೊ? ಏಕೆಂದರೆ ನೀವು ನನ್ನ ಮನೆಗೆ ಬೈಬಲಿನ ಸಮೇತ ಬಂದಿರಿ ಮಾತ್ರವಲ್ಲ ಅದರಿಂದ ಓದಿ ಹೇಳಿದಿರಿ ಕೂಡ.”
9 ನಿಶ್ಚಯವಾಗಿ ನಮ್ಮ ಪ್ರಕಾಶನಗಳೂ ಪ್ರಾಮುಖ್ಯವಾಗಿವೆ ಮತ್ತು ಕ್ಷೇತ್ರದಲ್ಲಿ ಅವು ನೀಡಲ್ಪಡಬೇಕು. ಆದರೆ ಬೈಬಲು ನಮ್ಮ ಪ್ರಮುಖ ನಿತ್ಯೋಪಯೋಗಿ ಸಾಧನ. ಆದುದರಿಂದ ಶುಶ್ರೂಷೆಯಲ್ಲಿ ಅದನ್ನು ಕ್ರಮವಾಗಿ ಬಳಸುವ ವಾಡಿಕೆ ನಿಮ್ಮದಾಗಿರಬೇಕು. ಇಲ್ಲವಾದರೆ ಹಾಗೆ ಮಾಡುವ ಗುರಿಯನ್ನು ನೀವು ಏಕೆ ಇಡಬಾರದು? ದೇವರ ರಾಜ್ಯದ ಕುರಿತು ಮತ್ತು ನೆರೆಹೊರೆಯಲ್ಲಿ ಜನರಿಗಿರುವ ಸಮಸ್ಯೆಗಳನ್ನು ಅದು ಹೇಗೆ ಪರಿಹರಿಸುತ್ತದೆ ಎಂಬುದರ ಕುರಿತು ಕೆಲವು ಮುಖ್ಯ ವಚನಗಳನ್ನು ನೀವು ಆರಿಸಿ ತೆಗೆದಿಡಿ. ಅನಂತರ, ಮನೆಯಿಂದ ಮನೆಗೆ ಸಾರುವಾಗ ಅವನ್ನು ಓದಲು ಸಿದ್ಧರಾಗಿರಿ.
ದೇವರ ನಾಮಧಾರಿಗಳಾಗಿರಲು ಹೆಮ್ಮೆಪಡಿರಿ
10, 11. ದೇವರ ನಾಮದ ಉಪಯೋಗದ ಬಗ್ಗೆ ಯೇಸು ಮತ್ತು ಅವನನ್ನು ಹಿಂಬಾಲಿಸುತ್ತೇವೆಂದು ಹೇಳಿಕೊಳ್ಳುವ ಇತರ ಅನೇಕರ ಮಧ್ಯೆ ಯಾವ ಭಿನ್ನತೆಯಿದೆ?
10 ‘ಯೆಹೋವನ ಮಾತೇನಂದರೆ—ನೀವೇ ನನ್ನ ಸಾಕ್ಷಿಗಳು, ನಾನೊಬ್ಬನೇ ದೇವರು.’ (ಯೆಶಾ. 43:10, 12) ಯೆಹೋವನ ಸರ್ವೋಚ್ಛ ಸಾಕ್ಷಿಯಾದ ಯೇಸು ಕ್ರಿಸ್ತನು ದೇವರ ನಾಮಧಾರಿಯಾಗಿರುವುದನ್ನು ಮತ್ತು ಅದನ್ನು ಪ್ರಕಟಿಸುವುದನ್ನು ಗೌರವವೆಂದೆಣಿಸಿದನು. (ವಿಮೋಚನಕಾಂಡ 3:15; ಯೋಹಾನ 17:6; ಇಬ್ರಿಯ 2:12 ಓದಿ.) ವಾಸ್ತವದಲ್ಲಿ ತನ್ನ ತಂದೆಯ ನಾಮವನ್ನು ಘೋಷಿಸಿದ ಕಾರಣದಿಂದಲೇ ಅವನನ್ನು “ನಂಬಿಗಸ್ತ ಸಾಕ್ಷಿ” ಎಂದು ಕರೆಯಲಾಯಿತು.—ಪ್ರಕ. 1:5; ಮತ್ತಾ. 6:9.
11 ತದ್ವಿರುದ್ಧವಾಗಿ, ದೇವರನ್ನೂ ಆತನ ಕುಮಾರನನ್ನೂ ಪ್ರತಿನಿಧಿಸುತ್ತೇವೆಂದು ಹೇಳಿಕೊಳ್ಳುವ ಅನೇಕರು ದೇವರ ನಾಮಕ್ಕೆ ನಿರ್ಲಜ್ಜೆಯ ಮನೋಭಾವವನ್ನು ತೋರಿಸಿದ್ದಾರೆ. ತಮ್ಮ ಬೈಬಲ್ ಭಾಷಾಂತರಗಳಿಂದ ಆ ನಾಮವನ್ನು ತೆಗೆದುಹಾಕುವುದಕ್ಕೂ ಹಿಂಜರಿದಿರುವುದಿಲ್ಲ. ತದ್ರೀತಿಯ ಮನೋಭಾವವನ್ನೇ ತೋರಿಸುತ್ತಾ ಇತ್ತೀಚೆಗೆ ಕ್ಯಾಥೊಲಿಕ್ ಬಿಷಪರುಗಳಿಗೆ ಕಳುಹಿಸಿಸಲಾದ ನಿರ್ದೇಶಕವೊಂದು ಹೇಳಿದ್ದೇನಂದರೆ, ಆರಾಧನೆಯಲ್ಲಿ “ಚತುರಕ್ಷರಿ (YHWH) ರೂಪದಲ್ಲಿರುವ ದೇವರ ನಾಮವನ್ನು ಉಪಯೋಗಿಸಲೂ ಬಾರದು ಉಚ್ಚರಿಸಲೂ ಬಾರದು.”a ಎಂಥ ನಿಂದನೀಯ ವಿಚಾರಧಾಟಿ ಇದು!
12. ಇಸವಿ 1931ರಲ್ಲಿ ಯೆಹೋವನ ಸೇವಕರು ಇನ್ನಷ್ಟು ಹೆಚ್ಚು ಆಪ್ತವಾಗಿ ಯೆಹೋವನೊಂದಿಗೆ ಗುರುತಿಸಿಕೊಂಡದ್ದು ಹೇಗೆ?
12 ಕ್ರಿಸ್ತನ ಅನುಕರಣೆಯಲ್ಲಿ ಮತ್ತು ಅವನ ಮುಂಚಿದ್ದ ‘ದೊಡ್ಡ ಮೇಘದಂತಿರುವ ಸಾಕ್ಷಿಗಳ’ ಅನುಕರಣೆಯಲ್ಲಿ ನಿಜ ಕ್ರೈಸ್ತರು ದೇವರ ನಾಮವನ್ನು ಹೆಮ್ಮೆಯಿಂದ ಬಳಸುತ್ತಾರೆ. (ಇಬ್ರಿ. 12:1) ನಿಜವಾಗಿ 1931ರಲ್ಲಿ ಯೆಹೋವನ ಸಾಕ್ಷಿಗಳು ಎಂಬ ನಾಮವನ್ನು ಸ್ವೀಕರಿಸುವ ಮೂಲಕ ದೇವರ ಸೇವಕರು ಯೆಹೋವನೊಂದಿಗೆ ತಮ್ಮನ್ನು ಇನ್ನಷ್ಟು ಆಪ್ತವಾಗಿ ಗುರುತಿಸಿಕೊಂಡರು. (ಯೆಶಾಯ 43:10-12 ಓದಿ.) ಹೀಗೆ ಒಂದು ಅತಿ ವಿಶೇಷಾರ್ಥದಲ್ಲಿ ಕ್ರಿಸ್ತನ ನಿಜ ಹಿಂಬಾಲಕರು ‘[ದೇವರ] ಹೆಸರಿನಿಂದ ಕರೆಯಲ್ಪಡುವ ಜನರಾದರು.’—ಅ. ಕಾ. 15:14, 17.
13. ನಮ್ಮ ದೇವದತ್ತ ಹೆಸರಿಗೆ ಅನುಸಾರವಾಗಿ ನಾವು ಹೇಗೆ ಜೀವಿಸಬಲ್ಲೆವು?
13 ನಮಗಿರುವ ಈ ಅನನ್ಯ ಹೆಸರಿಗೆ ತಕ್ಕಂತೆ ನಾವು ವೈಯಕ್ತಿಕವಾಗಿ ಹೇಗೆ ಜೀವಿಸಬಲ್ಲೆವು? ಮುಖ್ಯವಾಗಿ ದೇವರ ಹೆಸರಿಗೆ ನಂಬಿಗಸ್ತಿಕೆಯಿಂದ ಸಾಕ್ಷಿಕೊಡುವ ಮೂಲಕವೇ. ಯಾಕೆಂದರೆ ಪೌಲನು ಬರೆದದ್ದು: “ಯೆಹೋವನ ನಾಮದಲ್ಲಿ ಕೋರುವ ಪ್ರತಿಯೊಬ್ಬನೂ ರಕ್ಷಿಸಲ್ಪಡುವನು.” ಅವನು ಮತ್ತೂ ಹೇಳಿದ್ದು: “ಆದರೆ ತಾವು ಯಾರ ಮೇಲೆ ನಂಬಿಕೆಯಿಟ್ಟಿಲ್ಲವೋ ಆತನನ್ನು ಕೋರುವುದು ಹೇಗೆ? ತಾವು ಯಾರ ಕುರಿತು ಕೇಳಿಸಿಕೊಂಡಿಲ್ಲವೋ ಆತನಲ್ಲಿ ನಂಬಿಕೆಯಿಡುವುದು ಹೇಗೆ? ಸಾರಿಹೇಳುವವನಿಲ್ಲದೆ ಕೇಳಿಸಿಕೊಳ್ಳುವುದು ಹೇಗೆ? ಕಳುಹಿಸಲ್ಪಟ್ಟ ಹೊರತು ಅವರು ಸಾರುವುದು ಹೇಗೆ?” (ರೋಮ. 10:13-15) ಅದಲ್ಲದೆ, ನಮ್ಮ ನಿರ್ಮಾಣಿಕನ ಮೇಲೆ ನಿಂದೆಯನ್ನು ಹೊರಿಸುವ ಧಾರ್ಮಿಕ ಸುಳ್ಳುಗಳನ್ನು ಅಂದರೆ ನರಕಾಗ್ನಿಯಂಥ ಬೋಧನೆಗಳನ್ನು ನಾವು ಜಾಣತನದಿಂದ ಬಯಲುಪಡಿಸಬೇಕು. ವಾಸ್ತವದಲ್ಲಿ ಈ ಬೋಧನೆಯು ಪ್ರೀತಿಯ ದೇವರು ಪಿಶಾಚನಂತಹ ಕ್ರೂರ ಪ್ರವೃತ್ತಿಯುಳ್ಳವನೆಂದು ಆರೋಪಿಸುತ್ತದೆ.—ಯೆರೆ. 7:31; 1 ಯೋಹಾ. 4:8; ಮಾರ್ಕ 9:17-27 ಹೋಲಿಸಿ.
14. ದೇವರ ವೈಯಕ್ತಿಕ ನಾಮದ ಕುರಿತು ತಿಳಿದುಬಂದಾಗ ಕೆಲವರು ಹೇಗೆ ಪ್ರತಿಕ್ರಿಯೆ ತೋರಿಸಿದರು?
14 ನಿಮ್ಮ ಸ್ವರ್ಗೀಯ ತಂದೆಯ ನಾಮಧಾರಿಗಳಾಗಿರಲು ನೀವು ಹೆಮ್ಮೆಪಡುತ್ತೀರೊ? ಆ ಪವಿತ್ರ ನಾಮವನ್ನು ತಿಳಿಯುವಂತಾಗಲು ನೀವು ಇತರರಿಗೆ ಸಹಾಯಮಾಡುತ್ತೀರೊ? ಯೆಹೋವನ ಸಾಕ್ಷಿಗಳಿಗೆ ದೇವರ ಹೆಸರು ಗೊತ್ತಿರುವ ವಿಷಯವು ಫ್ರಾನ್ಸ್ನ ಪ್ಯಾರಿಸ್ನಲ್ಲಿರುವ ಮಹಿಳೆಯೊಬ್ಬಳಿಗೆ ತಿಳಿಯಿತು. ಇದರ ನಂತರ ಸಿಕ್ಕಿದ ಮೊದಲ ಸಾಕ್ಷಿಗೆ ಅವಳು, ‘ದೇವರ ಹೆಸರು ಎಲ್ಲಿದೆಯೆಂದು ನನ್ನ ಬೈಬಲಿನಲ್ಲಿ ತೋರಿಸುತ್ತೀರಾ?’ ಎಂದು ಹೇಳಿದಳು. ಕೀರ್ತನೆ 83:18 ನ್ನು ಓದಿದಾಗ ಅವಳಿಗಾದ ಆಶ್ಚರ್ಯವಾದರೋ ಅಗಾಧ. ತದನಂತರ ಅವಳು ಬೈಬಲನ್ನು ಅಧ್ಯಯನಿಸ ತೊಡಗಿದಳು ಮತ್ತು ಈಗ ಬೇರೊಂದು ದೇಶದಲ್ಲಿ ನಂಬಿಗಸ್ತಿಕೆಯಿಂದ ಸೇವೆಮಾಡುತ್ತಿದ್ದಾಳೆ. ಆಸ್ಟ್ರೇಲಿಯದಲ್ಲಿರುವ ಕ್ಯಾಥೊಲಿಕ್ ಮಹಿಳೆಯೊಬ್ಬಳು ದೇವರ ಹೆಸರನ್ನು ಬೈಬಲಿನಲ್ಲಿ ಮೊತ್ತಮೊದಲ ಬಾರಿ ಕಂಡಾಗ ಸಂತೋಷದಿಂದ ಹೃದಯ ಉಕ್ಕಿಬಂದು ಅತ್ತಳು. ಈಗ ಅನೇಕ ವರ್ಷಗಳಿಂದ ಅವಳು ರೆಗ್ಯುಲರ್ ಪಯನೀಯರ್ ಸೇವೆ ಮಾಡುತ್ತಿದ್ದಾಳೆ. ಇತ್ತೀಚೆಗೆ ಜಮೇಕಾದ ಸಾಕ್ಷಿಗಳು ಸ್ತ್ರೀಯೊಬ್ಬಳಿಗೆ ದೇವರ ನಾಮವನ್ನು ಅವಳ ಸ್ವಂತ ಬೈಬಲಿನಲ್ಲಿ ತೋರಿಸಿದಾಗ ಅವಳ ಕಣ್ಗಳು ಆನಂದಾಶ್ರುವಿನಿಂದ ತುಂಬಿದವು. ಆದ್ದರಿಂದ ದೇವರ ನಾಮಧಾರಿಗಳಾಗಿರಲು ಮತ್ತು ಯೇಸುವಿನ ಅನುಕರಣೆಯಲ್ಲಿ ಆ ಅಮೂಲ್ಯ ನಾಮವನ್ನು ಎಲ್ಲರಿಗೂ ಪ್ರಕಟಪಡಿಸಲು ಹೆಮ್ಮೆಪಡಿರಿ.
‘ಲೋಕವನ್ನು ಪ್ರೀತಿಸಬೇಡಿರಿ’
15, 16. ಈ ಲೋಕದ ಬಗ್ಗೆ ನಿಜ ಕ್ರೈಸ್ತರ ವೀಕ್ಷಣೆಯೇನು, ಮತ್ತು ನಾವು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು?
15 “ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕವನ್ನು ಪ್ರೀತಿಸುವುದಾದರೆ ತಂದೆಯ ಪ್ರೀತಿಯು ಅವನಲ್ಲಿ ಇಲ್ಲ.” (1 ಯೋಹಾ. 2:15) ಈ ಲೋಕ ಮತ್ತು ಅದರ ಶರೀರಭಾವಗಳು ಯೆಹೋವ ದೇವರಿಗೆ ಮತ್ತು ಆತನ ಪವಿತ್ರಾತ್ಮಕ್ಕೆ ಪ್ರತಿವಿರುದ್ಧವಾಗಿವೆ. ಆದ್ದರಿಂದ ಕ್ರಿಸ್ತನ ನಿಜ ಹಿಂಬಾಲಕರು ಲೋಕದ ಭಾಗವಾಗಿರುವುದರಿಂದ ಬರೇ ದೂರವಿರುವುದು ಮಾತ್ರವಲ್ಲ ಅವರು ಅದನ್ನು ಮನಸಾರೆ ತಿರಸ್ಕರಿಸುತ್ತಾರೆ ಸಹ. ಶಿಷ್ಯ ಯಾಕೋಬನು ಬರೆದ ಪ್ರಕಾರ “ಲೋಕದೊಂದಿಗೆ ಸ್ನೇಹವು ದೇವರೊಂದಿಗೆ ವೈರತ್ವವಾಗಿದೆ” ಎಂಬುದು ಅವರಿಗೆ ತಿಳಿದಿದೆ.—ಯಾಕೋ. 4:4.
16 ಅಗಣಿತ ಪ್ರಲೋಭನೆಗಳನ್ನು ನೀಡುತ್ತಿರುವ ಈ ಲೋಕದಲ್ಲಿ ಯಾಕೋಬನ ಮಾತುಗಳನ್ನು ಪರಿಪಾಲಿಸುವುದು ಒಂದು ಸವಾಲಾಗಿರಬಲ್ಲದು. (2 ತಿಮೊ. 4:10) ಆದುದರಿಂದಲೇ ಯೇಸು ತನ್ನ ಹಿಂಬಾಲಕರಿಗಾಗಿ ಪ್ರಾರ್ಥಿಸಿದ್ದು: “ಇವರನ್ನು ಲೋಕದಿಂದ ತೆಗೆದುಬಿಡುವಂತೆ ನಾನು ಕೇಳಿಕೊಳ್ಳದೆ ಕೆಡುಕನಿಂದ ಕಾಪಾಡುವಂತೆ ಕೇಳಿಕೊಳ್ಳುತ್ತೇನೆ. ನಾನು ಲೋಕದ ಭಾಗವಾಗಿಲ್ಲದ ಪ್ರಕಾರ ಇವರೂ ಲೋಕದ ಭಾಗವಾಗಿಲ್ಲ.” (ಯೋಹಾ. 17:15, 16) ನಿಮ್ಮನ್ನು ಕೇಳಿಕೊಳ್ಳಿ: ‘ನಾನು ಈ ಲೋಕದ ಭಾಗವಾಗದೆ ಇರಲು ಪ್ರಯಾಸಪಡುತ್ತೇನೊ? ಅಶಾಸ್ತ್ರೀಯ ಆಚರಣೆಗಳ ಮತ್ತು ಪದ್ಧತಿಗಳ ಬಗ್ಗೆ ಹಾಗೂ ವಿಧರ್ಮಿ ಮೂಲದ್ದಲ್ಲವಾದರೂ ಲೋಕದ ಮನೋಭಾವವನ್ನು ಸ್ಪಷ್ಟವಾಗಿ ತೋರಿಸುವ ಪದ್ಧತಿಗಳ ಬಗ್ಗೆ ನನ್ನ ನಿಲುವೇನು ಎಂಬದು ಇತರರಿಗೆ ತಿಳಿದಿದೆಯೇ?’—2 ಕೊರಿಂ. 6:17; 1 ಪೇತ್ರ 4:3, 4.
17. ಯೆಹೋವನ ಪಕ್ಷವನ್ನು ತಕ್ಕೊಳ್ಳುವಂತೆ ಪ್ರಾಮಾಣಿಕ ಜನರನ್ನು ಯಾವುದು ಪ್ರೇರಿಸಬಹುದು?
17 ನಮ್ಮ ಬೈಬಲಾಧಾರಿತ ನಿಲುವು ಲೋಕದ ಮೆಚ್ಚಿಗೆಯನ್ನು ಗಳಿಸಲಾರದೆಂಬುದು ಖಂಡಿತ. ಆದರೆ ಅದು ಪ್ರಾಮಾಣಿಕ ಜನರ ಕುತೂಹಲವನ್ನು ಎಬ್ಬಿಸಬಹುದು. ಅಂಥ ಜನರು, ನಮ್ಮ ನಂಬಿಕೆಯು ಶಾಸ್ತ್ರಗ್ರಂಥದಲ್ಲಿ ದೃಢವಾಗಿ ಬೇರೂರಿದೆ ಹಾಗೂ ನಮ್ಮ ಇಡೀ ಜೀವನ ಮಾರ್ಗವನ್ನು ಅದು ಒಳಗೂಡಿದೆ ಎಂದು ನೋಡುವಾಗ, ಅಭಿಷಿಕ್ತರಿಗೆ ಕಾರ್ಯತಃ ಹೀಗನ್ನಲು ಪ್ರೇರಿಸಲ್ಪಟ್ಟಾರು: “ನಾವು ನಿಮ್ಮೊಂದಿಗೆ ಬರುವೆವು, ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿದೆ.”—ಜೆಕ. 8:23.
ನಿಜ ಕ್ರೈಸ್ತ ಪ್ರೀತಿಯನ್ನು ತೋರಿಸಿ
18. ಯೆಹೋವನಿಗೆ ಮತ್ತು ನಮ್ಮ ನೆರೆಯವರಿಗೆ ಪ್ರೀತಿ ತೋರಿಸುವುದರಲ್ಲಿ ಏನು ಒಳಗೂಡಿದೆ?
18 ಯೇಸುವಂದದ್ದು: “ನಿನ್ನ ದೇವರಾದ ಯೆಹೋವನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸಬೇಕು.” ಮತ್ತು “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು.” (ಮತ್ತಾ. 22:37, 39) ಆ ಪ್ರೀತಿ (ಗ್ರೀಕ್ನಲ್ಲಿ ಆಘಾಪೀ) ನೈತಿಕ ಪ್ರೀತಿಯಾಗಿದ್ದು ಅದರಲ್ಲಿ ಕರ್ತವ್ಯ, ಮೂಲತತ್ತ್ವ ಮತ್ತು ಶಿಷ್ಟಾಚಾರವು ಮುಖ್ಯವಾಗಿವೆಯಾದರೂ ಬಲವಾದ ಭಾವುಕತೆಯೂ ಅದರಲ್ಲಿ ಒಳಗೂಡಿದೆ. ಅದು ಹೃತ್ಪೂರ್ವಕವೂ ಅತಿ ಗಾಢವೂ ಆಗಿರಬಲ್ಲದು. (1 ಪೇತ್ರ 1:22) ನಿಸ್ವಾರ್ಥ ನಡೆನುಡಿಗಳಲ್ಲಿ ಅದು ತೋರಿಸಲ್ಪಡುವುದರಿಂದ ಸ್ವಾರ್ಥಪರತೆಗೆ ತೀರ ವಿರುದ್ಧವಾದದ್ದೂ ಆಗಿದೆ.—1 ಕೊರಿಂಥ 13:4-7 ಓದಿ.
19, 20. ಕ್ರೈಸ್ತ ಪ್ರೀತಿಯ ಶಕ್ತಿಯನ್ನು ತೋರಿಸುವ ಕೆಲವು ಅನುಭವಗಳನ್ನು ತಿಳಿಸಿರಿ.
19 ಪ್ರೀತಿಯು ದೇವರ ಪವಿತ್ರಾತ್ಮದ ಉತ್ಪನ್ನವಾಗಿರುವುದರಿಂದ ಅದು ಬೇರೆಯವರಿಂದ ಮಾಡಲಾಗದ ವಿಷಯಗಳನ್ನು ನಿಜ ಕ್ರೈಸ್ತರು ಮಾಡುವಂತೆ ಅಂದರೆ ಜಾತೀಯ, ಸಾಂಸ್ಕೃತಿಕ ಹಾಗೂ ರಾಜಕೀಯದಂಥ ತಡೆಗಟ್ಟುಗಳನ್ನು ಪರಿಹರಿಸಿಕೊಳ್ಳುವಂತೆ ಸಾಧ್ಯಮಾಡುತ್ತದೆ. (ಯೋಹಾನ 13:34, 35 ಓದಿ; ಗಲಾ. 5:22) ಅಂಥ ಪ್ರೀತಿಯನ್ನು ಕುರಿಸದೃಶ ಜನರು ಕಾಣುವಾಗ ಪ್ರೇರೇಪಿಸಲ್ಪಡದೇ ಇರಲಾರರು ಖಂಡಿತ. ಉದಾಹರಣೆಗೆ, ಇಸ್ರೇಲ್ನಲ್ಲಿ ಒಬ್ಬ ಯೆಹೂದಿ ಯುವಕನು ಮೊದಲ ಬಾರಿ ಕ್ರೈಸ್ತ ಕೂಟಕ್ಕೆ ಹಾಜರಾದಾಗ ಯೆಹೂದಿ ಮತ್ತು ಅರಬ್ಬಿ ಸಹೋದರರು ಜೊತೆಜೊತೆಯಾಗಿ ಯೆಹೋವನನ್ನು ಆರಾಧಿಸುತ್ತಿರುವುದನ್ನು ಕಂಡು ಬೆಚ್ಚಬೆರಗಾದನು. ಫಲಿತಾಂಶವಾಗಿ ಅವನು ಕೂಟಗಳಿಗೆ ಕ್ರಮವಾಗಿ ಹಾಜರಾಗತೊಡಗಿದನು ಹಾಗೂ ಬೈಬಲ್ ಅಧ್ಯಯನವನ್ನು ಸ್ವೀಕರಿಸಿದನು. ನಿಮ್ಮ ಸಹೋದರರಿಗೆ ಅಂಥ ಹೃತ್ಪೂರ್ವಕ ಪ್ರೀತಿಯನ್ನು ನೀವು ತೋರಿಸುತ್ತೀರೊ? ನಿಮ್ಮ ರಾಜ್ಯ ಸಭಾಗೃಹಕ್ಕೆ ಹೊಸಬರು ಬರುವಾಗ ಅವರ ದೇಶ, ಬಣ್ಣ, ಸಾಮಾಜಿಕ ಅಂತಸ್ತು ಯಾವುದೇ ಆಗಿರಲಿ ಅವರಿಗೆ ಹೃತ್ಪೂರ್ವಕ ಸ್ವಾಗತವನ್ನು ಕೋರಲು ನೀವು ಸಿದ್ಧರಾಗಿದ್ದೀರೊ?
20 ನಿಜ ಕ್ರೈಸ್ತರಾದ ನಾವು ಎಲ್ಲರ ಕಡೆಗೂ ಪ್ರೀತಿಯನ್ನು ತೋರಿಸಲು ಪ್ರಯಾಸಪಡುತ್ತೇವೆ. ಎಲ್ ಸಾಲ್ವಡಾರ್ನಲ್ಲಿ ಒಬ್ಬ ಯುವ ಪ್ರಚಾರಕಳು ಚರ್ಚಿಗೆ ಅತಿನಿಷ್ಠಳಾಗಿದ್ದ 87 ವಯಸ್ಸಿನ ಕ್ಯಾಥೊಲಿಕ್ ಮಹಿಳೆಯೊಂದಿಗೆ ಬೈಬಲ್ ಅಧ್ಯಯನ ನಡೆಸುತ್ತಿದ್ದಳು. ಒಂದು ದಿನ ಆ ಮಹಿಳೆ ತೀರಾ ಅಸ್ವಸ್ಥಳಾಗಿ ಆಸ್ಪತ್ರೆಗೆ ಸೇರಿಸಲ್ಪಟ್ಟಳು. ಆಕೆ ಮನೆಗೆ ಹಿಂದಿರುಗಿದಾಗ ಸಾಕ್ಷಿಗಳು ಅವಳನ್ನು ಸಂದರ್ಶಿಸಿ ಊಟ-ಉಪಚಾರಗಳನ್ನು ಕೊಟ್ಟು ಸುಮಾರು ಒಂದು ತಿಂಗಳ ತನಕ ನೋಡಿಕೊಂಡರು. ಆದರೆ ಚರ್ಚಿನ ಯಾರೂ ಅವಳನ್ನು ಸಂದರ್ಶಿಸಲಿಲ್ಲ. ಫಲಿತಾಂಶ? ಅವಳು ತನ್ನ ಪೂಜಾ ವಿಗ್ರಹಗಳನ್ನು ತೆಗೆದುಬಿಟ್ಟಳು. ಚರ್ಚಿಗೆ ರಾಜೀನಾಮೆ ಕೊಟ್ಟಳು. ಬೈಬಲ್ ಅಧ್ಯಯನವನ್ನು ಮುಂದುವರಿಸಿದಳು. ಹೌದು, ಕ್ರೈಸ್ತ ಪ್ರೀತಿ ಬಹು ಶಕ್ತಿಶಾಲಿ! ನಾವು ಆಡುವ ಮಾತು ಒಂದುವೇಳೆ ಹೃದಯವನ್ನು ತಲಪಲಿಕ್ಕಿಲ್ಲ, ಆದರೆ ಪ್ರೀತಿ ಖಂಡಿತ ತಲಪಬಲ್ಲದು.
21. ನಮ್ಮ ಭವಿಷ್ಯತ್ತನ್ನು ನಾವು ಹೇಗೆ ಸುಭದ್ರವಾಗಿಡಬಲ್ಲೆವು?
21 ಶೀಘ್ರದಲ್ಲೇ ಯೇಸು ತನ್ನ ಸುಳ್ಳು ಹಿಂಬಾಲಕರೆಲ್ಲರಿಗೆ ಹೀಗನ್ನುವನು: “ನನಗೆ ನಿಮ್ಮ ಪರಿಚಯವೇ ಇಲ್ಲ! ಅನ್ಯಾಯದ ಕೆಲಸಗಾರರೇ, ನನ್ನಿಂದ ತೊಲಗಿಹೋಗಿರಿ.” (ಮತ್ತಾ. 7:23) ಆದ್ದರಿಂದ ತಂದೆಯನ್ನೂ ಮಗನನ್ನೂ ಗೌರವಿಸುವಂಥ ಫಲವನ್ನು ನಾವು ಉತ್ಪಾದಿಸೋಣ. ಯೇಸು ಹೇಳಿದ್ದು: “ನನ್ನ ಈ ಮಾತುಗಳನ್ನು ಕೇಳಿಸಿಕೊಂಡು ಅವುಗಳಂತೆ ಮಾಡುವ ಪ್ರತಿಯೊಬ್ಬನೂ ದೊಡ್ಡ ಬಂಡೆಯ ಮೇಲೆ ತನ್ನ ಮನೆಯನ್ನು ಕಟ್ಟಿದ ವಿವೇಚನೆಯುಳ್ಳ ಒಬ್ಬ ಮನುಷ್ಯನಂತಿರುವನು.” (ಮತ್ತಾ. 7:24) ಹೌದು, ನಾವು ಕ್ರಿಸ್ತನ ನಿಜ ಹಿಂಬಾಲಕರಾಗಿದ್ದೇವೆಂಬುದನ್ನು ತೋರಿಸಿಕೊಟ್ಟಲ್ಲಿ ನಿಶ್ಚಯವಾಗಿ ದೇವರ ಮೆಚ್ಚಿಗೆಯನ್ನು ಪಡೆಯುವೆವು ಹಾಗೂ ಬಂಡೆಯ ಮೇಲೆ ಕಟ್ಟಿದ ಮನೆಯೋ ಎಂಬಂತೆ ನಮ್ಮ ಭವಿಷ್ಯತ್ತು ಸುಭದ್ರವಾಗಿರುವುದು!
[ಪಾದಟಿಪ್ಪಣಿ]
a ‘ಕರ್ನಾಟಕ ಪ್ರಾಂತೀಯ ಕಥೋಲಿಕ ಧರ್ಮಾಧ್ಯಕ್ಷರುಗಳ ಸಮಿತಿ’ಯ ಪ್ರಕಾಶನವಾಗಿರುವ ಪವಿತ್ರ ಬೈಬಲ್ ದೇವರ ನಾಮದ ಚತುರಕ್ಷರಿಯನ್ನು “ಯಾಹ್ವೆ” ಎಂದು ಅನುವಾದಿಸಿದೆ.
ನಿಮಗೆ ನೆನಪಿದೆಯೇ?
• ಕ್ರಿಸ್ತನ ನಿಜ ಹಿಂಬಾಲಕರು ಸುಳ್ಳು ಹಿಂಬಾಲಕರಿಗಿಂತ ಹೇಗೆ ಭಿನ್ನವಾಗಿದ್ದಾರೆ?
• ನಿಜ ಕ್ರೈಸ್ತರನ್ನು ಗುರುತಿಸುವ ಕೆಲವು ‘ಫಲಗಳನ್ನು’ ಹೆಸರಿಸಿ.
• ಕ್ರೈಸ್ತ ಫಲವನ್ನು ಉತ್ಪಾದಿಸುವುದರಲ್ಲಿ ನೀವು ಯಾವ ಗುರಿಗಳನ್ನು ಇಡಬಲ್ಲಿರಿ?
[ಪುಟ 13ರಲ್ಲಿರುವ ಚಿತ್ರ]
ಶುಶ್ರೂಷೆಯಲ್ಲಿ ಬೈಬಲನ್ನು ಕ್ರಮವಾಗಿ ಉಪಯೋಗಿಸುವುದು ನಿಮ್ಮ ವಾಡಿಕೆಯೊ?
[ಪುಟ 15ರಲ್ಲಿರುವ ಚಿತ್ರ]
ಅಶಾಸ್ತ್ರೀಯ ಆಚರಣೆಗಳಲ್ಲಿ ನಿಮ್ಮ ನಿಲುವು ಏನೆಂಬುದು ಇತರರಿಗೆ ತಿಳಿದಿದೆಯೊ?