ಮೊದಲು ‘ದೇವರ ನೀತಿಯನ್ನು’ ಹುಡುಕುತ್ತಾ ಇರ್ರಿ
“ಆದುದರಿಂದ ಮೊದಲು ರಾಜ್ಯವನ್ನೂ ಆತನ ನೀತಿಯನ್ನೂ ಹುಡುಕುತ್ತಾ ಇರಿ; ಆಗ ಈ ಎಲ್ಲ ಇತರ ವಸ್ತುಗಳು ನಿಮಗೆ ಕೂಡಿಸಲ್ಪಡುವವು.”—ಮತ್ತಾ. 6:33.
1, 2. ದೇವರ ನೀತಿ ಎಂದರೇನು? ಇದು ಯಾವುದರ ಮೇಲೆ ಆಧರಿತವಾಗಿದೆ?
‘ಮೊದಲು [ದೇವರ] ರಾಜ್ಯವನ್ನು ಹುಡುಕುತ್ತಾ ಇರಿ.’ (ಮತ್ತಾ. 6:33) ಯೇಸು ಕ್ರಿಸ್ತನು ತನ್ನ ಪರ್ವತ ಪ್ರಸಂಗದಲ್ಲಿ ಕೊಟ್ಟ ಈ ಬುದ್ಧಿವಾದವು ಇಂದು ಯೆಹೋವನ ಸಾಕ್ಷಿಗಳಿಗೆ ಸುಪರಿಚಿತ. ನಾವು ಆ ರಾಜ್ಯ ಸರ್ಕಾರವನ್ನು ಪ್ರೀತಿಸುತ್ತೇವೆಂದೂ ಅದಕ್ಕೆ ನಿಷ್ಠರಾಗಿರಲು ಬಯಸುತ್ತೇವೆಂದೂ ನಮ್ಮ ಜೀವನದ ಎಲ್ಲ ಅಂಶಗಳಲ್ಲಿ ತೋರಿಸಿಕೊಡಲು ಶ್ರಮಿಸುತ್ತೇವೆ. ಅಷ್ಟೇ ಅಲ್ಲದೆ ಅದೇ ವಾಕ್ಯದ ಕೊನೆಯಲ್ಲಿ ಕೊಡಲಾದ ‘ಆತನ ನೀತಿಯನ್ನು ಹುಡುಕುತ್ತಾ ಇರಿ’ ಎಂಬ ಅಭಿವ್ಯಕ್ತಿಯನ್ನೂ ನಾವು ಮನಸ್ಸಿನಲ್ಲಿಡಬೇಕು. ಹಾಗಾದರೆ ದೇವರ ನೀತಿ ಎಂದರೇನು? ಅದನ್ನು ಮೊದಲು ಹುಡುಕುವುದರ ಅರ್ಥವೇನು?
2 “ನೀತಿ” ಎಂಬುದರ ಮೂಲಭಾಷಾ ಪದಗಳನ್ನು “ನ್ಯಾಯ” ಅಥವಾ “ಸತ್ಯತೆ” ಎಂದೂ ಭಾಷಾಂತರಿಸಬಹುದು. ಹೀಗೆ ದೇವರ ನೀತಿ ಅಂದರೆ ಆತನ ವೈಯಕ್ತಿಕ ಮಟ್ಟಗಳು ಹಾಗೂ ಮೌಲ್ಯಗಳಿಗೆ ಅನುಗುಣವಾದ ಸತ್ಯತೆಯಾಗಿದೆ. ಯೆಹೋವನು ಸೃಷ್ಟಿಕರ್ತನಾಗಿರಲಾಗಿ ಯಾವುದು ಒಳ್ಳೇದು, ಯಾವುದು ಕೆಟ್ಟದ್ದು ಹಾಗೂ ಯಾವುದು ಸರಿ, ಯಾವುದು ತಪ್ಪು ಎಂಬುದರ ಮಟ್ಟಗಳನ್ನು ಸ್ಥಾಪಿಸುವ ಹಕ್ಕು ಆತನಿಗಿದೆ. (ಪ್ರಕ. 4:11) ಹಾಗೆಂದ ಮಾತ್ರಕ್ಕೆ ದೇವರ ನೀತಿಯು ಭಾವಶೂನ್ಯವಾದ ಕಟ್ಟುನಿಟ್ಟಿನ ನಿಯಮಗಳಲ್ಲ ಅಥವಾ ನಿಯಮ ಹಾಗೂ ಕಟ್ಟಳೆಗಳ ಕೊನೆಯಿಲ್ಲದ ಪಟ್ಟಿಯಲ್ಲ. ಬದಲಿಗೆ ಅದು ಯೆಹೋವನ ವ್ಯಕ್ತಿತ್ವ ಹಾಗೂ ಆತನ ಪ್ರಧಾನ ಗುಣವಾದ ನ್ಯಾಯದೊಂದಿಗೆ ಕೂಡಿದ್ದು ಆತನ ಇತರ ಪ್ರಧಾನ ಗುಣಗಳಾದ ಪ್ರೀತಿ, ವಿವೇಕ, ಶಕ್ತಿಯ ಮೇಲೆ ಆಧರಿತವಾಗಿದೆ. ಹೀಗೆ ದೇವರ ನೀತಿಯು ಆತನ ಚಿತ್ತ ಹಾಗೂ ಉದ್ದೇಶಕ್ಕೆ ಸಂಬಂಧಿಸಿದೆ. ಅದರಲ್ಲಿ, ಆತನ ಸೇವೆಮಾಡಲು ಬಯಸುವವರಿಂದ ಆತನು ಏನನ್ನು ಅಪೇಕ್ಷಿಸುತ್ತಾನೋ ಆ ವಿಷಯಗಳು ಒಳಗೂಡಿವೆ.
3. (ಎ) ಮೊದಲು ದೇವರ ನೀತಿಯನ್ನು ಹುಡುಕಿರಿ ಎಂಬುದರ ಅರ್ಥವೇನು? (ಬಿ) ನಾವೇಕೆ ಯೆಹೋವನ ನೀತಿಯ ಮಟ್ಟಗಳನ್ನು ಎತ್ತಿಹಿಡಿಯುತ್ತೇವೆ?
3 ಮೊದಲು ದೇವರ ನೀತಿಯನ್ನು ಹುಡುಕಿರಿ ಎಂಬುದರ ಅರ್ಥವೇನು? ದೇವರನ್ನು ಮೆಚ್ಚಿಸಲಿಕ್ಕಾಗಿ ಆತನ ಚಿತ್ತವನ್ನು ಮಾಡುವುದೇ ಇದರ ಸರಳ ಅರ್ಥ. ದೇವರ ನೀತಿಯನ್ನು ಹುಡುಕುವುದರಲ್ಲಿ ಆತನ ಮೌಲ್ಯಗಳು ಹಾಗೂ ಪರಿಪೂರ್ಣ ಮಟ್ಟಗಳಿಗನುಸಾರ ಜೀವಿಸಲು ಪ್ರಯತ್ನಿಸುವುದೂ ಸೇರಿದೆ, ನಮ್ಮ ಸ್ವಂತ ಮಟ್ಟಗಳಿಗೆ ಅನುಸಾರವಾಗಿ ಅಲ್ಲ. (ರೋಮನ್ನರಿಗೆ 12:2 ಓದಿ.) ಈ ರೀತಿಯ ಜೀವಿತವು ಯೆಹೋವನೊಂದಿಗಿನ ಸುಸಂಬಂಧಕ್ಕಾಗಿ ನಮಗೆ ಬೇಕೇ ಬೇಕು. ಶಿಕ್ಷೆಯಾಗುತ್ತದೆಂಬ ಭಯದಿಂದಾಗಿ ಆತನ ನಿಯಮಗಳಿಗೆ ವಿಧೇಯರಾಗುವ ವಿಷಯವು ಇದಲ್ಲ. ಬದಲಾಗಿ ದೇವರ ಮೇಲಿರುವ ಪ್ರೀತಿಯು ಆತನ ಮಟ್ಟಗಳನ್ನು ಎತ್ತಿಹಿಡಿಯುವ ಮೂಲಕ ಆತನನ್ನು ಮೆಚ್ಚಿಸುವಂತೆ ನಮ್ಮನ್ನು ಪ್ರಚೋದಿಸುತ್ತದೆ; ನಮ್ಮ ಸ್ವಂತ ಮಟ್ಟಗಳನ್ನು ಸ್ಥಾಪಿಸುವಂತೆ ಬಿಡುವುದಿಲ್ಲ. ಇದೇ ಸರಿಯಾದ ಮಾರ್ಗ ಎಂದು ನಾವು ಮನಗಾಣುತ್ತೇವೆ. ನಾವು ನಿರ್ಮಿಸಲ್ಪಟ್ಟದ್ದು ಕೂಡ ಆತನ ಮಟ್ಟಗಳನ್ನು ಎತ್ತಿಹಿಡಿಯಲಿಕ್ಕಾಗಿಯೇ. ದೇವರ ರಾಜ್ಯದ ರಾಜನಾದ ಯೇಸು ಕ್ರಿಸ್ತನಂತೆ ನಾವು ಸಹ ನೀತಿಯನ್ನು ಪ್ರೀತಿಸಬೇಕು.—ಇಬ್ರಿ. 1:8, 9.
4. ದೇವರ ನೀತಿಯನ್ನು ಹುಡುಕುವುದು ಅತಿ ಪ್ರಾಮುಖ್ಯವೇಕೆ?
4 ಯೆಹೋವನ ನೀತಿಯನ್ನು ಹುಡುಕುವುದು ಎಷ್ಟು ಪ್ರಾಮುಖ್ಯ? ಈ ನಿಜತ್ವವನ್ನು ಪರಿಗಣಿಸಿ: ನೀತಿಯ ಮಟ್ಟಗಳನ್ನು ಸ್ಥಾಪಿಸಲು ಯೆಹೋವನಿಗೆ ಪೂರ್ಣ ಹಕ್ಕಿದೆ. ಆದರೆ ಆದಾಮಹವ್ವರು ಈ ಹಕ್ಕನ್ನು ಅಂಗೀಕರಿಸುತ್ತಾರೋ ಇಲ್ಲವೋ ಎಂಬುದೇ ಏದೆನ್ ತೋಟದಲ್ಲಿ ಅವರಿಗಾದ ಪ್ರಥಮ ಪರೀಕ್ಷೆಯಾಗಿತ್ತು. (ಆದಿ. 2:17; 3:5) ಅದನ್ನು ಅಂಗೀಕರಿಸಲು ಅವರು ತಪ್ಪಿದ್ದು ಅವರ ವಂಶಜರಾದ ನಮ್ಮ ಮೇಲೆ ದುರವಸ್ಥೆ ಹಾಗೂ ಮರಣವನ್ನು ತಂದಿತು. (ರೋಮ. 5:12) ಅದೇ ಸಮಯದಲ್ಲಿ ಬೈಬಲ್ ಹೇಳುವುದು: “ನೀತಿ ಕೃಪೆಗಳನ್ನು ಹುಡುಕುವವನು ನೀತಿ ಜೀವಕೀರ್ತಿಗಳನ್ನು ಪಡೆಯುವನು.” (ಜ್ಞಾನೋ. 21:21) ಹೌದು, ಮೊದಲು ಯೆಹೋವನ ನೀತಿಯನ್ನು ಹುಡುಕುವುದರಿಂದ ಆತನೊಂದಿಗೆ ಶಾಂತಿ ಸಂಬಂಧವು ದೊರಕುತ್ತದೆ. ಇದು ನಮ್ಮನ್ನು ನಿತ್ಯ ರಕ್ಷಣೆಗೆ ನಡೆಸುತ್ತದೆ.—ರೋಮ. 3:23, 24.
ಸ್ವನೀತಿವಂತರಾಗುವ ಅಪಾಯ
5. ನಾವು ಯಾವ ಅಪಾಯವನ್ನು ವರ್ಜಿಸುವ ಅಗತ್ಯವಿದೆ?
5 ಮೊದಲು ದೇವರ ನೀತಿಯನ್ನು ಹುಡುಕುವುದರಲ್ಲಿ ಸಫಲರಾಗಬೇಕಾದರೆ ನಾವೆಲ್ಲರೂ ಯಾವ ಅಪಾಯವನ್ನು ವರ್ಜಿಸಬೇಕೆಂದು ಅಪೊಸ್ತಲ ಪೌಲನು ರೋಮ್ನ ಕ್ರೈಸ್ತರಿಗೆ ಬರೆಯುವಾಗ ಹೇಳಿದನು. ಜೊತೆ ಯೆಹೂದ್ಯರ ಕುರಿತು ಅವನು ಹೇಳಿದ್ದು: “ಅವರಿಗೆ ದೇವರ ವಿಷಯದಲ್ಲಿ ಹುರುಪಿದೆ ಎಂದು ನಾನು ಸಾಕ್ಷಿನೀಡುತ್ತೇನೆ; ಆದರೆ ಅವರ ಹುರುಪು ನಿಷ್ಕೃಷ್ಟ ಜ್ಞಾನಕ್ಕನುಸಾರವಾದುದಲ್ಲ; ಅವರು ದೇವರ ನೀತಿಯನ್ನು ತಿಳಿಯದೆ ತಮ್ಮ ಸ್ವಂತ ನೀತಿಯನ್ನು ಸ್ಥಾಪಿಸಲು ಪ್ರಯತ್ನಿಸುತ್ತಾ ಇದ್ದುದರಿಂದ ದೇವರ ನೀತಿಗೆ ತಮ್ಮನ್ನು ಅಧೀನಪಡಿಸಿಕೊಳ್ಳಲಿಲ್ಲ.” (ರೋಮ. 10:2, 3) ಪೌಲನು ಹೇಳಿದಂತೆ ಆ ಯೆಹೂದ್ಯರು ದೇವರ ನೀತಿಯನ್ನು ಅರ್ಥಮಾಡಿಕೊಳ್ಳಲಿಲ್ಲ. ಏಕೆಂದರೆ ತಮ್ಮ ಸ್ವಂತ ನೀತಿಯನ್ನು ಸ್ಥಾಪಿಸುವುದರಲ್ಲೇ ಅವರು ಮಗ್ನರಾಗಿದ್ದರು.a
6. ನಾವು ಯಾವ ಮನೋಭಾವವನ್ನು ವರ್ಜಿಸಬೇಕು? ಏಕೆ?
6 ನಾವು ಸ್ವನೀತಿವಂತರಾಗುವ ಪಾಶದಲ್ಲಿ ಸಿಕ್ಕಿಬೀಳಸಾಧ್ಯವಿರುವ ಒಂದು ವಿಧ, ದೇವರಿಗೆ ನಾವು ಸಲ್ಲಿಸುವ ಸೇವೆಯನ್ನು ಸ್ಪರ್ಧಾತ್ಮಕವಾಗಿ ವೀಕ್ಷಿಸುತ್ತಾ ಇತರರ ಸೇವೆಯೊಂದಿಗೆ ಹೋಲಿಸುವುದೇ. ಈ ಮನೋಭಾವವು ನಮ್ಮ ಸಾಮರ್ಥ್ಯಗಳ ವಿಷಯದಲ್ಲಿ ನಾವು ಮಿತಿಮೀರಿದ ಆತ್ಮವಿಶ್ವಾಸದಿಂದಿರುವಂತೆ ಮಾಡಬಲ್ಲದು. ಆದರೆ ಹಾಗೆ ಮಾಡಿದಲ್ಲಿ ನಾವು ಯೆಹೋವನ ನೀತಿಯನ್ನು ಮರೆತುಬಿಡುತ್ತೇವೆ. (ಗಲಾ. 6:3, 4) ಆದುದರಿಂದ ಯೆಹೋವನ ಮೇಲಿರುವ ಪ್ರೀತಿಯೇ ಸರಿಯಾದದ್ದನ್ನು ಮಾಡಲು ನಮ್ಮನ್ನು ಪ್ರಚೋದಿಸಬೇಕು. ನಮ್ಮ ಸ್ವಂತ ನೀತಿಯನ್ನು ತೋರಿಸಲು ಯಾವುದೇ ರೀತಿಯಲ್ಲಿ ಪ್ರಯತ್ನಿಸುವುದಾದರೆ ದೇವರ ಮೇಲೆ ನಮಗೆ ಪ್ರೀತಿಯಿಲ್ಲ ಎಂಬುದನ್ನು ದೃಢಪಡಿಸುತ್ತೇವೆ.—ಲೂಕ 16:15 ಓದಿ.
7. ಸ್ವನೀತಿಯ ಸಮಸ್ಯೆಯ ಕುರಿತಾಗಿ ಯೇಸು ಏನು ಹೇಳಿದನು?
7 “ತಾವು ನೀತಿವಂತರೆಂದು ತಮ್ಮಲ್ಲಿ ತಾವೇ ಭರವಸೆಯಿಟ್ಟು ಉಳಿದವರನ್ನು ಕಡೆಗಣಿಸುತ್ತಿದ್ದ” ಜನರ ಬಗ್ಗೆ ಯೇಸು ಚಿಂತೆ ವ್ಯಕ್ತಪಡಿಸಿದನು. ಅವನು ಸ್ವನೀತಿಯ ಸಮಸ್ಯೆಗೆ ಗಮನಸೆಳೆಯುತ್ತಾ ಈ ದೃಷ್ಟಾಂತವನ್ನು ಹೇಳಿದನು: “ಇಬ್ಬರು ಪುರುಷರು ಪ್ರಾರ್ಥಿಸಲಿಕ್ಕಾಗಿ ದೇವಾಲಯಕ್ಕೆ ಹೋದರು; ಅವರಲ್ಲಿ ಒಬ್ಬನು ಫರಿಸಾಯನು, ಮತ್ತೊಬ್ಬನು ತೆರಿಗೆ ವಸೂಲಿಗಾರನು. ಫರಿಸಾಯನು ನಿಂತುಕೊಂಡು, ‘ದೇವರೇ, ಸುಲುಕೊಳ್ಳುವವರೂ ಅನೀತಿವಂತರೂ ವ್ಯಭಿಚಾರಿಗಳೂ ಆಗಿರುವ ಉಳಿದ ಜನರಂತೆ ನಾನಲ್ಲ ಅಥವಾ ಈ ತೆರಿಗೆ ವಸೂಲಿಗಾರನಂತೆಯೂ ಅಲ್ಲದಿರುವುದರಿಂದ ನಿನಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಾನು ವಾರಕ್ಕೆ ಎರಡಾವರ್ತಿ ಉಪವಾಸಮಾಡುತ್ತೇನೆ; ನಾನು ಗಳಿಸುವ ಎಲ್ಲದರಲ್ಲಿ ಹತ್ತರಲ್ಲೊಂದು ಭಾಗವನ್ನು ಕೊಡುತ್ತೇನೆ’ ಎಂದು ತನ್ನೊಳಗೆ ಪ್ರಾರ್ಥಿಸತೊಡಗಿದನು. ಆದರೆ ತೆರಿಗೆ ವಸೂಲಿಗಾರನು ದೂರದಲ್ಲಿ ನಿಂತುಕೊಂಡು ಆಕಾಶದ ಕಡೆಗೆ ಕಣ್ಣೆತ್ತಿ ನೋಡಲೂ ಇಷ್ಟಪಡದೆ ತನ್ನ ಎದೆಯನ್ನು ಬಡಿದುಕೊಳ್ಳುತ್ತಾ, ‘ದೇವರೇ, ಪಾಪಿಯಾದ ನನಗೆ ಕರುಣೆ ತೋರಿಸು’ ಎಂದು ಹೇಳಿದನು.” ಕೊನೆಯಲ್ಲಿ ಯೇಸು ಹೇಳಿದ್ದು: “ಈ ಮನುಷ್ಯನು ಆ ಮನುಷ್ಯನಿಗಿಂತ ಹೆಚ್ಚು ನೀತಿವಂತನೆಂದು ರುಜುಪಡಿಸುತ್ತಾ ತನ್ನ ಮನೆಗೆ ಹಿಂದಿರುಗಿ ಹೋದನೆಂದು ನಿಮಗೆ ಹೇಳುತ್ತೇನೆ; ಏಕೆಂದರೆ ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು ಮತ್ತು ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು.”—ಲೂಕ 18:9-14.
‘ಅತಿ ನೀತಿವಂತರಾಗುವ’ ಅಪಾಯ
8, 9. ‘ಅತಿಯಾಗಿ ನೀತಿವಂತರಾಗಿರುವುದರ’ ಅರ್ಥವೇನು? ಇದು ನಾವು ಏನು ಮಾಡುವಂತೆ ನಡೆಸಬಲ್ಲದು?
8 ನಾವು ವರ್ಜಿಸಬೇಕಾದ ಇನ್ನೊಂದು ಅಪಾಯವನ್ನು ಪ್ರಸಂಗಿ 7:16ರಲ್ಲಿ (NIBV) ಹೇಳಲಾಗಿದೆ: “ನೀನು ಅತಿಯಾಗಿ ನೀತಿವಂತನಾಗಿರಬೇಡ, ಅಲ್ಲದೆ ಅತಿಯಾಗಿ ನಿನ್ನನ್ನು ಜ್ಞಾನಿಯನ್ನಾಗಿ ಮಾಡಿಕೊಳ್ಳಬೇಡ. ನಿನ್ನನ್ನು ನೀನೇ ಏಕೆ ನಾಶಪಡಿಸಿಕೊಳ್ಳುವೆ?” ಇಂಥ ಮನೋಭಾವವನ್ನು ಏಕೆ ವರ್ಜಿಸಬೇಕೆಂಬುದಕ್ಕೆ ಕಾರಣ ಕೊಡುತ್ತಾ ಪ್ರೇರಿತ ಬೈಬಲ್ ಲೇಖಕನು ವಚನ 20ರಲ್ಲಿ ಮತ್ತೂ ಅಂದದ್ದು: “ಪಾಪಮಾಡದೆ ಒಳ್ಳೆಯದನ್ನೇ ನಡೆಸುವ ನೀತಿವಂತನು ಭೂಮಿಯ ಮೇಲೆ ಒಬ್ಬನೂ ಇಲ್ಲ.” ‘ಅತಿ ನೀತಿವಂತ’ ವ್ಯಕ್ತಿಯು ತನ್ನ ಸ್ವಂತ ನೀತಿಯ ಮಟ್ಟಗಳನ್ನು ಸ್ಥಾಪಿಸಿ ಅವುಗಳಿಂದ ಬೇರೆಯವರನ್ನು ತೀರ್ಪುಮಾಡುತ್ತಾನೆ. ಆದರೆ ಅವನು ಹಾಗೆ ಮಾಡುವ ಮೂಲಕ ದೇವರ ಮಟ್ಟಗಳಿಗಿಂತ ತನ್ನ ಮಟ್ಟಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದಾನೆಂದು ಮನಗಾಣುವುದಿಲ್ಲ. ಇದರಿಂದಾಗಿ ದೇವರ ದೃಷ್ಟಿಯಲ್ಲಿ ಅವನು ಅನೀತಿವಂತನಾಗಿ ತೋರಿಬರುತ್ತಾನೆ.
9 ‘ಅತಿಯಾಗಿ ನೀತಿವಂತರಾಗಿರುವುದು’ ಅಥವಾ ಬೇರೆ ಕೆಲವು ಬೈಬಲ್ ಭಾಷಾಂತರಗಳು ಹೇಳುವಂತೆ ‘ಬಹಳ ನೀತಿವಂತರು’ ಅಥವಾ ‘ಧರ್ಮವನ್ನು ಅತಿಯಾಗಿ ಆಚರಿಸುವವರು’ ಆಗಿರುವುದು ನಾವು ಯೆಹೋವನು ವಿಷಯಗಳನ್ನು ನಿರ್ವಹಿಸುವ ವಿಧವನ್ನು ಕೂಡ ಪ್ರಶ್ನಿಸುವಂತೆ ಮಾಡಬಲ್ಲದು. ಒಂದು ವಿಷಯವನ್ನು ನಾವು ನೆನಪಿನಲ್ಲಿಡಬೇಕು ಏನೆಂದರೆ ಒಂದುವೇಳೆ ನಾವು ಯೆಹೋವನ ನಿರ್ಣಯಗಳಲ್ಲಿರುವ ನ್ಯಾಯವನ್ನು ಅಥವಾ ಯುಕ್ತತೆಯನ್ನು ಪ್ರಶ್ನಿಸುವುದಾದರೆ ವಾಸ್ತವದಲ್ಲಿ ಯೆಹೋವನ ಮಟ್ಟಕ್ಕಿಂತ ನಮ್ಮ ಮಟ್ಟವನ್ನು ಶ್ರೇಷ್ಠವೆಂದು ಪರಿಗಣಿಸಲು ತೊಡಗುತ್ತೇವೆ. ಇದು ನಾವು ಯೆಹೋವನನ್ನೇ ವಿಚಾರಣೆ ಮಾಡುವಂತಿದ್ದು ಸರಿತಪ್ಪುಗಳ ಕುರಿತ ನಮ್ಮ ಸ್ವಂತ ಮಟ್ಟಗಳಿಂದ ಆತನ ಬಗ್ಗೆ ತೀರ್ಪುಮಾಡುವುದಾಗಿದೆ. ಆದರೆ ನೀತಿಯ ಮಟ್ಟಗಳನ್ನು ಸ್ಥಾಪಿಸುವ ಹಕ್ಕು ಯೆಹೋವನಿಗೆ ಮಾತ್ರ ಇದೆಯೇ ಹೊರತು ನಮಗಿಲ್ಲ!—ರೋಮ. 14:10.
10. ಯೋಬನಂತೆ ದೇವರನ್ನು ತೀರ್ಪುಮಾಡಲು ಯಾವುದು ನಮ್ಮನ್ನು ಪ್ರಚೋದಿಸಬಹುದು?
10 ನಾವ್ಯಾರೂ ದೇವರನ್ನು ಬೇಕುಬೇಕೆಂದೇ ತೀರ್ಪುಮಾಡಲು ಬಯಸುವುದಿಲ್ಲ ನಿಜ. ಆದರೂ ನಮ್ಮ ಅಪರಿಪೂರ್ಣ ಪ್ರವೃತ್ತಿಯಿಂದಾಗಿ ನಾವು ಒಂದುವೇಳೆ ಹಾಗೆ ಮಾಡಬಹುದು. ಯಾವುದಾದರೊಂದು ವಿಷಯ ಅನ್ಯಾಯವೆಂಬಂತೆ ತೋರುವಾಗ ಅಥವಾ ನಾವೇ ವೈಯಕ್ತಿಕವಾಗಿ ಸಂಕಷ್ಟಕ್ಕೆ ಗುರಿಯಾಗುವಾಗ ಹೀಗಾಗುವುದಂತೂ ಸುಲಭ. ಈ ತಪ್ಪನ್ನು ನಂಬಿಗಸ್ತನಾದ ಯೋಬನು ಸಹ ಮಾಡಿದನು. ಯೋಬನನ್ನು “ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ ಯಥಾರ್ಥಚಿತ್ತನೂ” ಆಗಿದ್ದಾನೆ ಎಂದು ಪ್ರಾರಂಭದಲ್ಲಿ ವರ್ಣಿಸಲಾಗಿತ್ತು. (ಯೋಬ 1:1) ಆದರೆ ಅವನ ಮೇಲೆ ಒಂದರ ಮೇಲೊಂದು ಸಂಕಷ್ಟಗಳು ಬಂದೆರಗಿದಾಗ ಅದು ಅವನಿಗೆ ಅನ್ಯಾಯವೆಂಬಂತೆ ಕಂಡಿತು. ಇದರಿಂದಾಗಿ ಯೋಬನು “ದೇವರಿಗಿಂತಲೂ ತಾನೇ ನ್ಯಾಯವಂತನೆಂದು” ಹೇಳಿಕೊಂಡನು. (ಯೋಬ 32:1, 2) ಆದರೆ ಯೋಬನ ದೃಷ್ಟಿಕೋನವು ಸರಿಪಡಿಸಲ್ಪಟ್ಟಿತು. ಕಷ್ಟದ ಸನ್ನಿವೇಶದಲ್ಲಿರುವಾಗ ಕೆಲವೊಮ್ಮೆ ನಾವು ಸಹ ಯೋಬನಂತೆ ನೆನಸುವುದು ಆಶ್ಚರ್ಯವೇನಲ್ಲ. ಆಗ ನಮ್ಮ ಯೋಚನೆಯನ್ನು ಸರಿಪಡಿಸಲು ಯಾವುದು ಸಹಾಯಮಾಡುತ್ತದೆ?
ಎಲ್ಲ ನಿಜತ್ವಗಳು ನಮಗೆ ತಿಳಿದಿರಲಿಕ್ಕಿಲ್ಲ
11, 12. (ಎ) ಯಾವದಾದರೊಂದು ವಿಷಯ ಅನ್ಯಾಯವೆಂದು ತೋರುವುದಾದರೆ ನಾವೇನನ್ನು ಮನಸ್ಸಿನಲ್ಲಿಡಬೇಕು? (ಬಿ) ಯೇಸುವಿನ ದೃಷ್ಟಾಂತದಲ್ಲಿ ದ್ರಾಕ್ಷೀ ತೋಟದ ಕೂಲಿಯಾಳುಗಳಿಗೆ ಅನ್ಯಾಯವಾಗಿದೆಯೆಂದು ಕೆಲವರಿಗೆ ಅನಿಸಬಹುದೇಕೆ?
11 ಮೊದಲನೆಯದಾಗಿ ನಮಗೆ ಯಾವಾಗಲೂ ನಿಜತ್ವಗಳೆಲ್ಲ ಗೊತ್ತಿರುವುದಿಲ್ಲ ಎಂಬುದನ್ನು ನಾವು ಮನಸ್ಸಿನಲ್ಲಿಡಬೇಕು. ಯೋಬನ ವಿಷಯದಲ್ಲೂ ಇದು ಸತ್ಯವಾಗಿತ್ತು. ದೇವದೂತರು ಸ್ವರ್ಗದಲ್ಲಿ ಸಭೆಗೂಡಿದ್ದ ವಿಷಯವಾಗಲಿ ಸೈತಾನನು ಅವನ ಮೇಲೆ ಆರೋಪ ಹೊರಿಸಿದ್ದಾಗಲಿ ಅವನಿಗೆ ತಿಳಿದಿರಲಿಲ್ಲ. (ಯೋಬ 1:7-12; 2:1-6) ತನ್ನ ಮೇಲೆ ಬಂದ ವಿಪತ್ತುಗಳಿಗೆ ಸೈತಾನನೇ ಕಾರಣನೆಂದು ಯೋಬನು ಗ್ರಹಿಸಲಿಲ್ಲ. ನಿಜವೇನೆಂದರೆ ಸೈತಾನನು ಯಾರೆಂದು ಯೋಬನಿಗೆ ತಿಳಿದಿತ್ತೆಂದು ಕೂಡ ನಾವು ನಿಶ್ಚಯವಾಗಿ ಹೇಳಲಾರೆವು! ಆದುದರಿಂದಲೇ ತನ್ನ ಸಮಸ್ಯೆಗಳಿಗೆ ದೇವರು ಕಾರಣನೆಂದು ಅವನು ತಪ್ಪಾಗಿ ನೆನಸಿದ್ದನು. ಹೌದು, ನಮಗೆ ಎಲ್ಲ ನಿಜತ್ವಗಳು ತಿಳಿಯದಿರುವಾಗ ನಾವು ಸುಲಭವಾಗಿ ತಪ್ಪಾದ ತೀರ್ಮಾನಕ್ಕೆ ಬರುತ್ತೇವೆ.
12 ಉದಾಹರಣೆಗೆ, ದ್ರಾಕ್ಷೀ ತೋಟದ ಕೂಲಿಯಾಳುಗಳ ಬಗ್ಗೆ ಯೇಸು ಹೇಳಿದ ದೃಷ್ಟಾಂತವನ್ನು ಗಮನಿಸಿರಿ. (ಮತ್ತಾಯ 20:8-16 ಓದಿ.) ದಿನವಿಡೀ ಕೆಲಸಮಾಡಿದ ಹಾಗೂ ಒಂದೇ ಒಂದು ತಾಸು ಕೆಲಸಮಾಡಿದ ಎಲ್ಲ ಕೂಲಿಯಾಳುಗಳಿಗೆ ಮನೇ ಯಜಮಾನನು ಸರಿಸಮನಾಗಿ ಕೂಲಿಕೊಟ್ಟನೆಂದು ಯೇಸು ಹೇಳಿದನು. ಇದರ ಬಗ್ಗೆ ನಿಮಗೆ ಹೇಗನಿಸುತ್ತದೆ? ಯಜಮಾನನು ಮಾಡಿದ್ದು ನ್ಯಾಯವೆಂದು ತೋರುತ್ತದೊ? ದಿನವಿಡೀ ಉರಿ ಬಿಸಿಲಲ್ಲಿ ದುಡಿದ ಕೆಲಸಗಾರರ ವಿಷಯದಲ್ಲಿ ನಿಮಗೆ ಮರುಕ ಹುಟ್ಟೀತು. ಅವರಿಗೆ ಹೆಚ್ಚು ಕೂಲಿ ಸಿಗಬೇಕಿತ್ತು ಎಂದು ನೀವು ಹೇಳಬಹುದು. ಹಾಗಾಗಿ ಆ ಮನೇ ಯಜಮಾನನು ನಿರ್ದಯಿಯೂ ಅನ್ಯಾಯಗಾರನೂ ಎಂದು ಅನಿಸಲೂಬಹುದು. ತಮ್ಮ ಕೂಲಿಯ ವಿಷಯದಲ್ಲಿ ದೂರಿದ ಕೂಲಿಯಾಳುಗಳಿಗೆ ಅವನು ಕೊಟ್ಟ ಉತ್ತರದಿಂದಲೂ ಅವನು ತನ್ನ ಅಧಿಕಾರವನ್ನು ಸ್ವೇಚ್ಛಾನುಸಾರ ಬಳಸುವವನೆಂದು ಕಾಣಬಹುದು. ಆದರೆ ಎಲ್ಲ ನಿಜತ್ವಗಳು ನಮಗೆ ತಿಳಿದಿವೆಯೊ?
13. ದ್ರಾಕ್ಷೀ ತೋಟದ ಕೂಲಿಯಾಳುಗಳ ಕುರಿತ ಯೇಸುವಿನ ದೃಷ್ಟಾಂತವನ್ನು ಯಾವ ಇನ್ನೊಂದು ದೃಷ್ಟಿಕೋನದಿಂದ ನಾವು ನೋಡಸಾಧ್ಯವಿದೆ?
13 ಈ ದೃಷ್ಟಾಂತವನ್ನು ಇನ್ನೊಂದು ದೃಷ್ಟಿಕೋನದಿಂದ ಪರಿಶೀಲಿಸೋಣ. ಎಲ್ಲ ಕೂಲಿಯಾಳುಗಳಿಗೆ ತಮ್ಮ ಕುಟುಂಬವನ್ನು ಪಾಲಿಸಲಿಕ್ಕಿದೆಯೆಂದು ಮನೇ ಯಜಮಾನನಿಗೆ ಖಂಡಿತ ತಿಳಿದಿತ್ತು. ಯೇಸುವಿನ ದಿನಗಳಲ್ಲಿ ಹೊಲದ ಕೆಲಸಗಾರರಿಗೆ ದಿನಗೂಲಿಯನ್ನು ಕೊಡಲಾಗುತ್ತಿತ್ತು. ಅವರ ಕುಟುಂಬಗಳು ದಿನಗೂಲಿಯನ್ನೇ ನಂಬಿಕೊಂಡಿರುತ್ತಿದ್ದವು. ಇದನ್ನು ಮನಸ್ಸಿನಲ್ಲಿಟ್ಟು, ಸಾಯಂಕಾಲ ಕೆಲಸಕ್ಕೆ ಬಂದ ಅಂದರೆ ಒಂದೇ ಒಂದು ತಾಸು ಕೆಲಸಮಾಡಿದ ಕೂಲಿಯಾಳುಗಳ ಪರಿಸ್ಥಿತಿಯನ್ನು ಸ್ವಲ್ಪ ಯೋಚಿಸಿ. ಒಂದು ತಾಸಿನ ಕೂಲಿಯಿಂದ ಅವರು ತಮ್ಮ ಕುಟುಂಬದ ಹೊಟ್ಟೆಹೊರೆಯುವುದು ಹೇಗೆ? ಅವರು ಕೆಲಸಮಾಡಲು ಬಯಸಿದ್ದರು ಮತ್ತು ಕೆಲಸಕ್ಕಾಗಿ ಇಡೀ ದಿನ ಕಾದಿದ್ದರು. (ಮತ್ತಾ. 20:1-7) ಇಡೀ ದಿನ ಕೆಲಸ ಸಿಗದಿದ್ದದ್ದು ಅವರ ತಪ್ಪೇನಲ್ಲ. ಅವರು ಕೆಲಸಗಳ್ಳರಾಗಿದ್ದರು ಎಂಬುದಕ್ಕೆ ಯಾವ ಸೂಚನೆಯೂ ಇಲ್ಲ. ಯೋಚಿಸಿ, ನಿಮ್ಮ ದಿನಗೂಲಿಯ ಮೇಲೆ ಇತರರು ಆತುಕೊಂಡಿದ್ದಾರೆ, ಆದರೆ ಇಡೀ ದಿನ ಕೆಲಸವೇ ಸಿಗದಿದ್ದಲ್ಲಿ ನಿಮಗೆ ಹೇಗನಿಸುತ್ತದೆ? ಸ್ವಲ್ಪ ಸಮಯವಾದರೂ ಕೆಲಸಮಾಡಲು ಸಿಕ್ಕಿದ್ದಲ್ಲಿ ನೀವೆಷ್ಟು ಕೃತಜ್ಞರಾಗಿರುವಿರಿ! ಅದರಲ್ಲೂ ನಿಮ್ಮ ಕುಟುಂಬಕ್ಕೆ ಉಣಿಸಲು ಸಾಕಾಗುವಷ್ಟು ಕೂಲಿ ಸಿಕ್ಕುವಲ್ಲಿ ನೀವೆಷ್ಟು ಚಕಿತಗೊಳ್ಳುವಿರಿ!
14. ದ್ರಾಕ್ಷೀ ತೋಟದ ದೃಷ್ಟಾಂತದಿಂದ ನಾವು ಯಾವ ಮಹತ್ವದ ಪಾಠ ಕಲಿಯುತ್ತೇವೆ?
14 ನಾವೀಗ ಮನೇ ಯಜಮಾನನ ಕ್ರಿಯೆಗಳನ್ನು ಪುನಃ ಪರಿಶೀಲಿಸೋಣ. ಅವನು ಯಾರಿಗೂ ಕಡಿಮೆ ಕೂಲಿಯನ್ನು ಕೊಡಲಿಲ್ಲ. ಅವನು ಪ್ರತಿ ಕೂಲಿಯಾಳನ್ನು ಹಣಸಂಪಾದಿಸಿ ಜೀವಿಸುವ ಹಕ್ಕುಳ್ಳವನಾಗಿ ವೀಕ್ಷಿಸಿದನು. ಬೇಕಾದಷ್ಟು ಕೂಲಿಯಾಳುಗಳು ಅಲ್ಲಿರಲಾಗಿ ಯಜಮಾನನು ಕಡಿಮೆ ಕೂಲಿ ಕೊಟ್ಟೇ ಅವರಿಂದ ತನ್ನ ಕೆಲಸ ಮಾಡಿಸಬಹುದಿತ್ತು. ಆದರೆ ಅವನು ಹಾಗೆ ಮಾಡಲಿಲ್ಲ. ಅವನ ಕೂಲಿಯಾಳುಗಳೆಲ್ಲ ತಮ್ಮ ಮನೆಮಂದಿಯ ಊಟಕ್ಕೆ ಸಾಕಾಗುವಷ್ಟು ಕೂಲಿಯನ್ನು ಪಡೆದು ಮನೆಗೆ ಹಿಂದಿರುಗಿದರು. ಈ ಹೆಚ್ಚಿನ ವಿವರಗಳನ್ನು ಪರಿಗಣಿಸುವುದರಿಂದ ಯಜಮಾನನ ಕ್ರಿಯೆಗಳ ವಿಷಯದಲ್ಲಿದ್ದ ನಮ್ಮ ದೃಷ್ಟಿಕೋನ ಬದಲಾಗಬಹುದು. ಅವನ ನಿರ್ಣಯವು ದಯಾಭರಿತವಾಗಿತ್ತು. ಅವನು ತನ್ನ ಅಧಿಕಾರವನ್ನು ಸ್ವೇಚ್ಛಾನುಸಾರ ಬಳಸಲಿಲ್ಲ. ನಮಗಿರುವ ಪಾಠ? ಕೇವಲ ಕೆಲವೇ ನಿಜತ್ವಗಳನ್ನು ಪರಿಗಣಿಸುವುದು ದುಡುಕಿ ತಪ್ಪಾದ ನಿರ್ಣಯ ಮಾಡುವಂತೆ ನಮ್ಮನ್ನು ನಡಿಸಬಲ್ಲದು. ವಾಸ್ತವದಲ್ಲಿ ಈ ದೃಷ್ಟಾಂತವು ದೇವರ ನೀತಿಯ ಶ್ರೇಷ್ಠತೆಯನ್ನು ಒತ್ತಿಹೇಳುತ್ತದೆ. ಈ ನೀತಿಯು ಕಾನೂನು ಸಂಬಂಧಿತ ನಿಯಮಗಳ ಮೇಲಾಗಲಿ ಮಾನವರು ಅದಕ್ಕೆ ಅರ್ಹರೋ ಇಲ್ಲವೋ ಎಂಬುದರ ಮೇಲಾಗಲಿ ಆಧರಿಸಿಲ್ಲ.
ತಿರುಚಿದ, ಸೀಮಿತ ದೃಷ್ಟಿಕೋನ
15. ನ್ಯಾಯ-ಅನ್ಯಾಯದ ಕುರಿತಾದ ನಮ್ಮ ದೃಷ್ಟಿಕೋನವು ಏಕೆ ತಿರುಚಲ್ಪಟ್ಟದ್ದೂ ಸೀಮಿತವೂ ಆಗಿರಬಹುದು?
15 ಯಾವುದಾದರೊಂದು ಸನ್ನಿವೇಶ ಅನ್ಯಾಯವೆಂದು ತೋರುವಲ್ಲಿ ನಾವು ಮನಸ್ಸಿನಲ್ಲಿಡಬೇಕಾದ ಎರಡನೇ ಅಂಶ ಏನೆಂದರೆ ನಮ್ಮ ದೃಷ್ಟಿಕೋನ ತಿರುಚಲ್ಪಟ್ಟದ್ದು ಅಥವಾ ಸೀಮಿತವೂ ಆಗಿರಬಹುದು ಎಂದೇ. ಅಪರಿಪೂರ್ಣತೆ, ಪೂರ್ವಗ್ರಹ ಅಥವಾ ಸಾಂಸ್ಕೃತಿಕ ಹಿನ್ನೆಲೆಯಿಂದಾಗಿ ನಮ್ಮ ದೃಷ್ಟಿಕೋನ ತಪ್ಪಾಗಿರಬಹುದು. ಮಾತ್ರವಲ್ಲ ಜನರ ಹೇತುಗಳನ್ನು ಮತ್ತು ಅವರ ಮನಸ್ಸಿನಲ್ಲಿರುವುದನ್ನು ತಿಳಿದುಕೊಳ್ಳಲು ನಮಗೆ ಸಾಧ್ಯವಿಲ್ಲದ್ದರಿಂದ ಅದು ಸೀಮಿತವೂ ಆಗಿದೆ. ಆದರೆ ಯೆಹೋವನಿಗೂ ಯೇಸುವಿಗೂ ಅಂಥ ಯಾವ ಸೀಮಿತಗಳೂ ಇಲ್ಲ.—ಜ್ಞಾನೋ. 24:12; ಮತ್ತಾ. 9:4; ಲೂಕ 5:22.
16, 17. ದಾವೀದ ಹಾಗೂ ಬತ್ಷೆಬೆಯ ವ್ಯಭಿಚಾರದ ಸಂಬಂಧದಲ್ಲಿ ಯೆಹೋವನು ಧರ್ಮಶಾಸ್ತ್ರದ ತನ್ನ ಸ್ವಂತ ನಿಯಮವನ್ನು ಏಕೆ ಅನುಸರಿಸಲಿಲ್ಲ?
16 ದಾವೀದನು ಬತ್ಷೆಬೆಯೊಂದಿಗೆ ವ್ಯಭಿಚಾರಗೈದ ವೃತ್ತಾಂತದ ಕುರಿತೇನು? ಅದನ್ನು ನಾವೀಗ ಪರಿಶೀಲಿಸೋಣ. (2 ಸಮು. 11:2-5) ಆ ತಪ್ಪಿಗಾಗಿ ಮೋಶೆಯ ಧರ್ಮಶಾಸ್ತ್ರಕ್ಕನುಸಾರ ಅವರಿಬ್ಬರಿಗೂ ಮರಣಶಿಕ್ಷೆಯಾಗಬೇಕಿತ್ತು. (ಯಾಜ. 20:10; ಧರ್ಮೋ. 22:22) ಯೆಹೋವನು ಅವರನ್ನು ಶಿಕ್ಷಿಸಿದನಾದರೂ ತನ್ನ ಸ್ವಂತ ನಿಯಮಕ್ಕನುಸಾರ ಶಿಕ್ಷೆ ನೀಡಲಿಲ್ಲ. ಯೆಹೋವನು ಹಾಗೆ ಮಾಡಿದ್ದು ಅನ್ಯಾಯವಾಗಿತ್ತೊ? ದಾವೀದನ ವಿಷಯದಲ್ಲಿ ಪಕ್ಷಪಾತ ತೋರಿಸುತ್ತಾ ಆತನು ತನ್ನ ಸ್ವಂತ ನೀತಿಯ ಮಟ್ಟಗಳನ್ನು ಉಲ್ಲಂಘಿಸಿದನೊ? ಬೈಬಲನ್ನು ಓದುವಾಗ ಕೆಲವರಿಗೆ ಹಾಗನಿಸಿದೆ.
17 ಆದರೆ ವ್ಯಭಿಚಾರದ ಕುರಿತಾದ ಈ ನಿಯಮವನ್ನು ಯೆಹೋವನು ಕೊಟ್ಟದ್ದು ನ್ಯಾಯತೀರಿಸುವ ಅಧಿಕಾರವುಳ್ಳ ಅಪರಿಪೂರ್ಣ ನ್ಯಾಯಾಧಿಪತಿಗಳಿಗೆ. ಏಕೆಂದರೆ ಹೃದಯದಲ್ಲಿ ಏನಿದೆಯೆಂದು ತಿಳಿಯಲು ಅವರು ಅಶಕ್ತರಾಗಿದ್ದರು. ಇತಿಮಿತಿಗಳ ಹೊರತೂ ಅವರು ಒಂದೇ ರೀತಿಯ ನ್ಯಾಯತೀರ್ಪನ್ನು ಕೊಡುವಂತೆ ಆ ನಿಯಮವು ಸಾಧ್ಯಮಾಡಿತು. ಆದರೆ ಯೆಹೋವನು ಹೃದಯವನ್ನು ಓದಬಲ್ಲನು. (ಆದಿ. 18:25; 1 ಪೂರ್ವ. 29:17) ಆದುದರಿಂದ ಅಪರಿಪೂರ್ಣ ನ್ಯಾಯಾಧಿಪತಿಗಳಿಗಾಗಿ ಕೊಟ್ಟ ನಿಯಮವನ್ನು ಯೆಹೋವನು ಸಹ ಅನುಸರಿಸಲೇಬೇಕೆಂದು ನಾವು ಅಪೇಕ್ಷಿಸಬಾರದು. ಹಾಗೆ ಅಪೇಕ್ಷಿಸುವುದಾದರೆ ಅದು, ದೃಷ್ಟಿದೋಷವೇ ಇಲ್ಲದವನಿಗೆ ದೃಷ್ಟಿ ಸರಿಪಡಿಸುವ ಕನ್ನಡಕವನ್ನು ಹಾಕಲು ಒತ್ತಾಯಿಸಿದಂತೆ ಆಗುವುದಿಲ್ಲವೆ? ಯೆಹೋವನು ದಾವೀದ ಹಾಗೂ ಬತ್ಷೆಬೆಯ ಹೃದಯವನ್ನು ಓದಿದನು ಹಾಗೂ ಅವರ ನಿಜ ಪಶ್ಚಾತ್ತಾಪವನ್ನು ಕಂಡನು. ಅದನ್ನು ಪರಿಗಣನೆಗೆ ತಕ್ಕೊಂಡು ಅದಕ್ಕನುಸಾರ ಕರುಣೆ ಮತ್ತು ಪ್ರೀತಿಯಿಂದ ತೀರ್ಪುಮಾಡಿದನು.
ಯೆಹೋವನ ನೀತಿಯನ್ನು ಹುಡುಕುತ್ತಾ ಇರ್ರಿ
18, 19. ನಮ್ಮ ಸ್ವಂತ ನೀತಿಯ ಮಟ್ಟಗಳಿಗನುಸಾರ ಯೆಹೋವನನ್ನು ಎಂದಿಗೂ ತೀರ್ಪುಮಾಡದಿರಲು ಯಾವುದು ಸಹಾಯಮಾಡುತ್ತದೆ?
18 ಬೈಬಲ್ ವೃತ್ತಾಂತವನ್ನು ಓದುವಾಗ ಅಥವಾ ನಮ್ಮ ವೈಯಕ್ತಿಕ ಜೀವನದಲ್ಲಿ ಯೆಹೋವನು ಅನ್ಯಾಯವಾದದ್ದೇನನ್ನೋ ಮಾಡಿದ್ದಾನೆಂದು ನಮಗನಿಸುವಲ್ಲಿ ಆತನನ್ನು ನಮ್ಮ ಸ್ವಂತ ಮಟ್ಟಗಳಿಗನುಸಾರ ಎಂದೂ ತೀರ್ಪು ಮಾಡದಿರೋಣ. ನಮಗೆ ಯಾವಾಗಲೂ ಎಲ್ಲ ನಿಜತ್ವಗಳು ತಿಳಿದಿರುವುದಿಲ್ಲ ಹಾಗೂ ನಮ್ಮ ದೃಷ್ಟಿಕೋನ ತಿರುಚಲ್ಪಟ್ಟದ್ದೂ ಇಲ್ಲವೆ ಸೀಮಿತವೂ ಆಗಿರಸಾಧ್ಯವಿದೆ ಎಂಬುದನ್ನು ಮನಸ್ಸಿನಲ್ಲಿಡಿ. “ಮನುಷ್ಯನ ಕೋಪವು ದೇವರ ನೀತಿಯನ್ನು ಸಾಧಿಸುವುದಿಲ್ಲ” ಎಂಬುದನ್ನೆಂದೂ ಮರೆಯದಿರಿ. (ಯಾಕೋ. 1:19, 20) ಈ ರೀತಿಯಲ್ಲಿ ನಮ್ಮ ಹೃದಯಗಳು ಎಂದೂ ‘ಯೆಹೋವನ ಮೇಲೆ ಕುದಿಯವು.’—ಜ್ಞಾನೋ. 19:3.
19 ಯಾವುದು ನೀತಿ ಮತ್ತು ಯಾವುದು ಒಳ್ಳೇದು ಎಂಬ ಮಟ್ಟಗಳನ್ನು ಸ್ಥಾಪಿಸುವ ಹಕ್ಕು ಯೆಹೋವನಿಗೆ ಮಾತ್ರ ಇದೆಯೆಂದು ಯೇಸುವಿನಂತೆ ನಾವು ಸಹ ಯಾವಾಗಲೂ ಒಪ್ಪಿಕೊಳ್ಳೋಣ. (ಮಾರ್ಕ 10:17, 18) ಆತನ ಮಟ್ಟಗಳ ಕುರಿತಾದ “ನಿಷ್ಕೃಷ್ಟ ಜ್ಞಾನ” ಪಡೆದುಕೊಳ್ಳಲು ಶ್ರಮಿಸೋಣ. (ರೋಮ. 10:2; 2 ತಿಮೊ. 3:7) ಇವೆಲ್ಲವನ್ನು ಒಪ್ಪಿಕೊಳ್ಳುತ್ತಾ ಯೆಹೋವನ ಚಿತ್ತಕ್ಕನುಸಾರ ನಮ್ಮ ಜೀವನವನ್ನು ನಡೆಸುವ ಮೂಲಕ ನಾವು ಮೊದಲು ‘ಆತನ ನೀತಿಯನ್ನು’ ಹುಡುಕುತ್ತಿದ್ದೇವೆ ಎಂದು ತೋರಿಸಿಕೊಡುತ್ತೇವೆ.—ಮತ್ತಾ. 6:33.
[ಪಾದಟಿಪ್ಪಣಿ]
a “ಸ್ಥಾಪಿಸಲು” ಎಂದು ಭಾಷಾಂತರವಾಗಿರುವ ಮೂಲಭಾಷಾ ಪದವು ‘ಸ್ಮಾರಕ ಕಟ್ಟಡ ಕಟ್ಟಲು’ ಎಂಬ ಅರ್ಥವನ್ನು ಸಹ ಕೊಡಬಹುದೆಂದು ಒಬ್ಬ ಪರಿಣತನು ಹೇಳುತ್ತಾನೆ. ಹೀಗೆ ಆ ಯೆಹೂದ್ಯರು ಸಾಂಕೇತಿಕ ಸ್ಮಾರಕವನ್ನು ತಮ್ಮ ಸ್ವಂತ ಸ್ತುತಿಗಾಗಿ ಕಟ್ಟುತ್ತಿದ್ದರೇ ಹೊರತು ದೇವರ ಸ್ತುತಿಗಾಗಿ ಅಲ್ಲ.
ನಿಮಗೆ ನೆನಪಿದೆಯೇ?
• ಯೆಹೋವನ ನೀತಿಯನ್ನು ಹುಡುಕುವುದು ಪ್ರಾಮುಖ್ಯವೇಕೆ?
• ನಾವು ಯಾವ ಎರಡು ಅಪಾಯಗಳನ್ನು ವರ್ಜಿಸಬೇಕು?
• ಮೊದಲು ದೇವರ ನೀತಿಯನ್ನು ನಾವು ಹೇಗೆ ಹುಡುಕಸಾಧ್ಯ?
[ಪುಟ 9ರಲ್ಲಿರುವ ಚಿತ್ರ]
ದೇವಾಲಯದಲ್ಲಿ ಪ್ರಾರ್ಥಿಸಿದ ಇಬ್ಬರು ವ್ಯಕ್ತಿಗಳ ಕುರಿತು ಯೇಸು ಹೇಳಿದ ದೃಷ್ಟಾಂತದಿಂದ ನಾವು ಯಾವ ಪಾಠ ಕಲಿಯುತ್ತೇವೆ?
[ಪುಟ 10ರಲ್ಲಿರುವ ಚಿತ್ರ]
ದಿನವಿಡೀ ಕೆಲಸಮಾಡಿದ ಹಾಗೂ ಒಂದೇ ತಾಸು ಕೆಲಸಮಾಡಿದ ಎಲ್ಲ ಕೂಲಿಯಾಳುಗಳಿಗೆ ಸರಿಸಮನಾಗಿ ಕೂಲಿಕೊಟ್ಟದ್ದು ಅನ್ಯಾಯವಾಗಿತ್ತೊ?