“ನೀವು ನನ್ನ ಸಾಕ್ಷಿ”
“ಯೆಹೋವನ ಮಾತೇನಂದರೆ—ನೀವು ನನ್ನ ಸಾಕ್ಷಿ.”—ಯೆಶಾ. 43:10.
1, 2. (ಎ) ಸಾಕ್ಷಿ ಎಂದು ಯಾರಿಗೆ ಹೇಳುತ್ತಾರೆ? (ಬಿ) ವಾರ್ತಾಮಾಧ್ಯಮ ಯಾವ ಪ್ರಾಮುಖ್ಯ ವಿಷಯದಲ್ಲಿ ಸೋತುಹೋಗಿದೆ? (ಸಿ) ಯೆಹೋವನು ಈ ಲೋಕದ ವಾರ್ತಾಮಾಧ್ಯಮದ ಮೇಲೆ ಹೊಂದಿಕೊಂಡಿಲ್ಲ ಯಾಕೆ?
ಸಾಕ್ಷಿ ಎಂದು ಯಾರಿಗೆ ಹೇಳುತ್ತಾರೆ? “ಒಂದು ಘಟನೆಯನ್ನು ಕಣ್ಣಾರೆ ಕಂಡು ನಡೆದದ್ದನ್ನು ನಡೆದ ಹಾಗೇ ವರದಿಸುವವನು” ಎಂದು ಅರ್ಥ ನೀಡುತ್ತದೆ ಒಂದು ಪದಕೋಶ. ದಕ್ಷಿಣ ಆಫ್ರಿಕದ ಪೀಟರ್ಮಾರಿಟ್ಸ್ಬರ್ಗ್ ನಗರದಲ್ಲಿ 160 ವರ್ಷಗಳಿಂದ ಸಾಕ್ಷಿ ಎಂಬ ವಾರ್ತಾಪತ್ರಿಕೆ ಪ್ರಕಟವಾಗುತ್ತಿದೆ. ಆ ಹೆಸರು ಸೂಕ್ತವಾಗಿದೆ ಏಕೆಂದರೆ ಲೋಕದ ಘಟನೆಗಳನ್ನು ಯಥಾವತ್ತಾಗಿ ವರದಿಸುವುದೇ ಅದರ ಗುರಿ. ಈ ವಾರ್ತಾಪತ್ರಿಕೆ “ಸತ್ಯವನ್ನು, ಪೂರ್ಣ ಸತ್ಯವನ್ನು, ಸತ್ಯವನ್ನು ಬಿಟ್ಟು ಬೇರೇನನ್ನೂ ಹೇಳುವುದಿಲ್ಲ” ಎಂದು ಅದನ್ನು ಆರಂಭಿಸಿದ ಸಂಪಾದಕರು ಪ್ರತಿಜ್ಞೆ ಮಾಡಿದ್ದರು.
2 ಆದರೆ ಇಂದು ಹೆಚ್ಚಾಗಿ ಜಗತ್ತಿನ ವಾರ್ತಾಮಾಧ್ಯಮ ಮಾನವ ಇತಿಹಾಸದ ಎಷ್ಟೋ ಪ್ರಾಮುಖ್ಯ ನಿಜಾಂಶಗಳನ್ನು ತಳ್ಳಿಹಾಕಿದೆ. ಒಂದುವೇಳೆ ವರದಿಸಿದರೂ ಅವನ್ನು ತಿರುಚಿಬಿಟ್ಟಿದೆ. ಇದನ್ನವರು ಸರ್ವಶಕ್ತ ದೇವರ ಒಂದು ಮಾತಿನ ವಿಷಯದಲ್ಲೂ ಮಾಡಿದ್ದಾರೆ. ಆ ಮಾತನ್ನು ದೇವರು ಪ್ರಾಚೀನಕಾಲದ ತನ್ನ ಪ್ರವಾದಿಯಾದ ಯೆಹೆಜ್ಕೇಲನ ಮೂಲಕ ಹೇಳಿದ್ದನು: “ನಾನೇ ಯೆಹೋವ . . . ಎಂದು ಜನಾಂಗಗಳಿಗೆ ಗೊತ್ತಾಗುವದು.” (ಯೆಹೆ. 39:7) ಆದರೆ ಇದನ್ನು ಸಾಧಿಸಲಿಕ್ಕಾಗಿ ವಿಶ್ವದ ಪರಮಾಧಿಕಾರಿಯು ಈ ಲೋಕದ ವಾರ್ತಾಮಾಧ್ಯಮದ ಮೇಲೆ ಹೊಂದಿಕೊಂಡಿಲ್ಲ. ಆತನಿಗೆ ಸುಮಾರು 80 ಲಕ್ಷ ಮಂದಿ ಸಾಕ್ಷಿಗಳಿದ್ದಾರೆ. ಆತನ ಬಗ್ಗೆ ಮತ್ತು ಆತನು ಮಾನವಕುಲದ ಜೊತೆಗೆ ಈ ಹಿಂದೆ ಹೇಗೆ ನಡೆದುಕೊಂಡಿದ್ದಾನೆ, ಈಗ ಹೇಗೆ ನಡೆದುಕೊಳ್ಳುತ್ತಿದ್ದಾನೆ ಎಂಬುದರ ಬಗ್ಗೆ ಎಲ್ಲ ಜನಾಂಗಗಳವರಿಗೆ ತಿಳಿಸುತ್ತಾರೆ. ಅಷ್ಟೇ ಅಲ್ಲ ಭವಿಷ್ಯದಲ್ಲಿ ದೇವರು ಮನುಷ್ಯರಿಗೆ ಕೊಡಲಿರುವ ಆಶೀರ್ವಾದಗಳ ಬಗ್ಗೆ ಕೂಡ ಸಾಕ್ಷಿಗಳ ಈ ಸೈನ್ಯ ಪ್ರಕಟಿಸುತ್ತದೆ. ಈ ಸಾಕ್ಷಿಕಾರ್ಯಕ್ಕೆ ಆದ್ಯತೆ ಕೊಡುವ ಮೂಲಕ ನಮ್ಮ ಹೆಸರಿಗೆ ತಕ್ಕಂತೆ ಜೀವಿಸುತ್ತೇವೆ. ಯೆಶಾಯ 43:10ಕ್ಕನುಸಾರ ಈ ಹೆಸರನ್ನು ದೇವರೇ ನಮಗೆ ಕೊಟ್ಟಿದ್ದಾನೆ. ಈ ವಚನ ಹೇಳುವುದು: “ಯೆಹೋವನ ಮಾತೇನಂದರೆ—ನೀವು ನನ್ನ ಸಾಕ್ಷಿ, ನಾನು ಆರಿಸಿಕೊಂಡಿರುವ ಸೇವಕ.”
3, 4. (ಎ) ಬೈಬಲ್ ವಿದ್ಯಾರ್ಥಿಗಳು ಹೊಸ ಹೆಸರನ್ನು ಉಪಯೋಗಿಸಲು ಆರಂಭಿಸಿದ್ದು ಯಾವಾಗ? (ಶೀರ್ಷಿಕೆ ಚಿತ್ರ ನೋಡಿ.) (ಬಿ) ಈ ಹೊಸ ಹೆಸರಿನ ಬಗ್ಗೆ ಅವರಿಗೆ ಹೇಗನಿಸಿತು? (ಸಿ) ನಾವೀಗ ಯಾವ ಪ್ರಶ್ನೆಗಳನ್ನು ಚರ್ಚಿಸಲಿದ್ದೇವೆ?
3 ಯೆಹೋವನ ನಾಮಧಾರಿಗಳಾಗಿರುವುದು ನಮಗಿರುವ ಸುಯೋಗ. ಏಕೆಂದರೆ ಆತನು “ನಿತ್ಯತೆಯ ಅರಸ.” ಆತನು ತನ್ನ ಹೆಸರಿನ ಬಗ್ಗೆ ಹೀಗನ್ನುತ್ತಾನೆ: “ಇದು ಸದಾಕಾಲಕ್ಕೂ ನನ್ನ ಹೆಸರು; ಇದು ತಲತಲಾಂತರಕ್ಕೂ ನನ್ನನ್ನು ಸ್ಮರಿಸಬೇಕಾದ ನಾಮ”! (1 ತಿಮೊ. 1:17; ವಿಮೋ. 3:15; ಪ್ರಸಂಗಿ 2:16 ಹೋಲಿಸಿ.) 1931ರಲ್ಲಿ ಬೈಬಲ್ ವಿದ್ಯಾರ್ಥಿಗಳು ‘ಯೆಹೋವನ ಸಾಕ್ಷಿಗಳು’ ಎಂಬ ಹೆಸರನ್ನು ಉಪಯೋಗಿಸಲು ಆರಂಭಿಸಿದರು. ಈ ಹೆಸರಿನ ಬಗ್ಗೆ ಸಾಕಷ್ಟು ಮೆಚ್ಚುಗೆಯ ಪತ್ರಗಳು ಕಾವಲಿನಬುರುಜು ಪತ್ರಿಕೆಯಲ್ಲಿ ಪ್ರಕಟಗೊಂಡವು. ಕೆನಡದ ಸಭೆಯೊಂದು ಬರೆದ ಪತ್ರದಲ್ಲಿ ಹೀಗಿತ್ತು: “ನಾವು ‘ಯೆಹೋವನ ಸಾಕ್ಷಿಗಳು’ ಎಂಬ ಸಿಹಿಸುದ್ದಿಯಿಂದ ಪುಳಕಿತರಾಗಿದ್ದೇವೆ. ಈ ಹೊಸ ಹೆಸರಿನ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕೆಂಬ ಹೊಸ ಸಂಕಲ್ಪವನ್ನು ಇದು ನಮ್ಮಲ್ಲಿ ತುಂಬಿಸಿದೆ.”
4 ದೇವರ ನಾಮಧಾರಿಗಳಾಗಿರುವ ಸುಯೋಗಕ್ಕೆ ನೀವು ಹೇಗೆ ಕೃತಜ್ಞತೆ ವ್ಯಕ್ತಪಡಿಸುತ್ತೀರಿ? ಯೆಹೋವನ ಸಾಕ್ಷಿಗಳು ಎಂಬ ನಮ್ಮ ಹೆಸರು ಯಾವ ವಚನದ ಮೇಲೆ ಆಧಾರಿತವಾಗಿದೆಯೊ ಅದರ ಪೂರ್ವಾಪರವನ್ನು ವಿವರಿಸಬಲ್ಲಿರೊ?
ಪ್ರಾಚೀನ ಕಾಲದಲ್ಲಿ ದೇವರ ಸಾಕ್ಷಿಗಳು
5, 6. (ಎ) ಇಸ್ರಾಯೇಲ್ಯ ಹೆತ್ತವರು ಯಾವ ವಿಧದಲ್ಲಿ ಯೆಹೋವನಿಗೆ ಸಾಕ್ಷಿಗಳಾಗಿದ್ದರು? (ಬಿ) ಇನ್ನೂ ಏನು ಮಾಡುವಂತೆ ಅವರಿಗೆ ಆಜ್ಞೆ ನೀಡಲಾಗಿತ್ತು? (ಸಿ) ಇಂದಿನ ಕ್ರೈಸ್ತ ಹೆತ್ತವರು ಕೂಡ ಅದನ್ನೇ ಮಾಡಬೇಕು ಯಾಕೆ?
5 ಯೆಶಾಯನ ಕಾಲದಲ್ಲಿದ್ದ ಇಸ್ರಾಯೇಲ್ಯರಲ್ಲಿ ಪ್ರತಿಯೊಬ್ಬರು ಯೆಹೋವನ “ಸಾಕ್ಷಿ” ಆಗಿದ್ದರು ಮತ್ತು ಇಡೀ ಜನಾಂಗ ದೇವರ “ಸೇವಕ” ಆಗಿತ್ತು. (ಯೆಶಾ. 43:10) ಇಸ್ರಾಯೇಲ್ಯ ಹೆತ್ತವರು ಸಾಕ್ಷಿ ನೀಡಿದ ಒಂದು ವಿಧ ತಮ್ಮ ಮಕ್ಕಳಿಗೆ ದೇವರ ಕುರಿತು ಬೋಧಿಸುವ ಮೂಲಕ. ಉದಾಹರಣೆಗೆ, ಪ್ರತಿ ವರ್ಷ ಪಸ್ಕಹಬ್ಬವನ್ನು ಆಚರಿಸಬೇಕೆಂಬ ಆಜ್ಞೆ ಕೊಡಲಾದಾಗ ಜನರಿಗೆ ಹೀಗನ್ನಲಾಗಿತ್ತು: “ನಿಮ್ಮ ಮಕ್ಕಳು—ನೀವು ನಡಿಸುವ ಈ ಆಚಾರವೇನೆಂದು ನಿಮ್ಮನ್ನು ಕೇಳುವಾಗ ನೀವು ಅವರಿಗೆ—ಯೆಹೋವನು ಐಗುಪ್ತ್ಯರನ್ನು ಸಂಹರಿಸಿದಾಗ ಐಗುಪ್ತದೇಶದಲ್ಲಿದ್ದ ಇಸ್ರಾಯೇಲ್ಯರ ಮನೆಗಳಲ್ಲಿ ಪ್ರವೇಶಿಸದೆ ಮುಂದಕ್ಕೆ ದಾಟಿ ನಮ್ಮವರನ್ನು ಉಳಿಸಿದದರಿಂದ ನಾವು ಯೆಹೋವನ ಪಸ್ಕವೆಂಬ ಈ ಯಜ್ಞಾಚಾರವನ್ನು ನಡಿಸುವದುಂಟು ಎಂದು ಹೇಳಬೇಕು.” (ವಿಮೋ. 12:26, 27) ಅದರ ಜೊತೆಗೆ ಯೆಹೋವನನ್ನು ಅರಣ್ಯದಲ್ಲಿ ಆರಾಧಿಸಲು ಇಸ್ರಾಯೇಲ್ಯರನ್ನು ಅನುಮತಿಸುವಂತೆ ಐಗುಪ್ತದ ರಾಜನನ್ನು ಮೋಶೆ ಮೊದಲ ಬಾರಿ ಕೇಳಿದ್ದರ ಬಗ್ಗೆ ವಿವರಿಸಿರಬಹುದು. ಆಗ ಫರೋಹನು “ಯೆಹೋವನೆಂಬವನು ಯಾರು? ನಾನು ಅವನ ಮಾತನ್ನು ಕೇಳಿ ಇಸ್ರಾಯೇಲ್ಯರನ್ನು ಹೋಗಗೊಡಿಸುವದೇಕೆ?” ಎಂದು ಕೇಳಿದ್ದನ್ನು ಅವರು ಮಕ್ಕಳಿಗೆ ಹೇಳಿರಬಹುದು. (ವಿಮೋ. 5:2) ಆ ಪ್ರಶ್ನೆಗೆ ಉತ್ತರವಾಗಿ ಯೆಹೋವನು ಹತ್ತು ಬಾಧೆಗಳ ಮೂಲಕ ಐಗುಪ್ತವನ್ನು ಧ್ವಂಸಗೊಳಿಸಿದಾಗ, ಕೆಂಪು ಸಮುದ್ರದಲ್ಲಿ ಐಗುಪ್ತದ ಸೈನ್ಯದಿಂದ ಇಸ್ರಾಯೇಲ್ಯರನ್ನು ರಕ್ಷಿಸಿದಾಗ ಆತನೇ ಸರ್ವಶಕ್ತ ದೇವರೆಂದು ಎಲ್ಲರಿಗೂ ಸ್ಪಷ್ಟವಾದದ್ದನ್ನು ವಿವರಿಸಿರಬೇಕು. ಆತನೇ ಸತ್ಯ ದೇವರು ಮತ್ತು ಕೊಟ್ಟ ಮಾತನ್ನು ಪಾಲಿಸುವವನು ಎನ್ನುವುದಕ್ಕೆ ಆ ಇಸ್ರಾಯೇಲ್ ಜನಾಂಗ ಜೀವಂತ ಸಾಕ್ಷಿಯಾಯಿತು. ಯೆಹೋವನು ಅಂದು ಹೇಗೊ ಹಾಗೆ ಇಂದಿಗೂ ಸರ್ವಶಕ್ತನು.
6 ಯೆಹೋವನಿಗೆ ಸಾಕ್ಷಿಗಳಾಗಿರುವ ಸುಯೋಗವನ್ನು ಮಾನ್ಯಮಾಡಿದ ಇಸ್ರಾಯೇಲ್ಯರು ಈ ಎಲ್ಲ ಘಟನೆಗಳ ಬಗ್ಗೆ ತಮ್ಮ ಮಕ್ಕಳಿಗೆ ಮಾತ್ರವಲ್ಲ ತಮ್ಮ ಮನೆಗಳಲ್ಲಿ ಆಳುಗಳಾಗಿದ್ದ ಪರದೇಶಿಯರಿಗೂ ಖಂಡಿತ ಹೇಳಿರಬೇಕು. ಅಷ್ಟೇ ಮಹತ್ವಪೂರ್ಣವಾದ ಇನ್ನೊಂದು ಕೆಲಸವನ್ನೂ ಇಸ್ರಾಯೇಲ್ಯರಿಗೆ ಕೊಡಲಾಗಿತ್ತು. ಅದೇನೆಂದರೆ ಪರಿಶುದ್ಧತೆಯ ಬಗ್ಗೆ ದೇವರಿಟ್ಟ ನಿಯಮಗಳನ್ನು ಪಾಲಿಸಲು ತಮ್ಮ ಮಕ್ಕಳಿಗೆ ತರಬೇತಿ ಕೊಡುವುದೇ. “ನಿಮ್ಮ ದೇವರಾದ ಯೆಹೋವನೆಂಬ ನಾನು ಪರಿಶುದ್ಧನಾಗಿರುವದರಿಂದ ನೀವೂ ಪರಿಶುದ್ಧರಾಗಿರಬೇಕು” ಎಂದು ಯೆಹೋವನು ಹೇಳಿದ್ದನು. (ಯಾಜ. 19:2; ಧರ್ಮೋ. 6:6, 7) ಇದು ಇಂದಿರುವ ಕ್ರೈಸ್ತ ಹೆತ್ತವರಿಗೆ ಎಂಥ ಉತ್ತಮ ಮಾದರಿ! ಅವರು ಕೂಡ ತಮ್ಮ ಮಕ್ಕಳನ್ನು ಪರಿಶುದ್ಧತೆಯ ಹಾದಿಯಲ್ಲಿ ನಡೆಯಲು ತರಬೇತುಗೊಳಿಸಬೇಕು. ಹೀಗೆ ಮಾಡುವುದರಿಂದ ಅವರು ದೇವರ ಭವ್ಯ ನಾಮಕ್ಕೆ ಗೌರವ ತರಲು ಮಕ್ಕಳಿಗೆ ಸಹಾಯಮಾಡುತ್ತಾರೆ!—ಜ್ಞಾನೋಕ್ತಿ 1:8; ಎಫೆಸ 6:4 ಓದಿ.
7. (ಎ) ಇಸ್ರಾಯೇಲ್ಯರು ಯೆಹೋವನಿಗೆ ನಂಬಿಗಸ್ತರಾಗಿದ್ದಾಗ ಸುತ್ತಲಿನ ಜನಾಂಗಗಳ ಮೇಲೆ ಇದು ಯಾವ ಪರಿಣಾಮ ಬೀರಿತು? (ಬಿ) ದೇವರ ನಾಮಧಾರಿಗಳಾಗಿರುವ ಎಲ್ಲರಿಗೆ ಯಾವ ಜವಾಬ್ದಾರಿ ಇದೆ?
7 ಹೀಗೆ ಇಸ್ರಾಯೇಲ್ಯರು ನಂಬಿಗಸ್ತರಾಗಿದ್ದಾಗ ದೇವರ ಹೆಸರಿಗೆ ಉತ್ತಮ ಸಾಕ್ಷಿ ಕೊಟ್ಟರು. “ಆಗ ಭೂಲೋಕದ ಜನರೆಲ್ಲರೂ ಯೆಹೋವನ ಹೆಸರಿನಿಂದ ನೀವು ಕರೆಯಲ್ಪಡುವುದನ್ನು ನೋಡಿ ನಿಮಗೆ ಭಯಪಡುವರು” ಎಂದವರಿಗೆ ಹೇಳಲಾಗಿತ್ತು. (ಧರ್ಮೋ. 28:10, ಪವಿತ್ರ ಗ್ರಂಥ ಭಾಷಾಂತರ) ಆದರೆ, ಅವರ ಇತಿಹಾಸದ ಪುಟಗಳಲ್ಲಿ ಹೆಚ್ಚಾಗಿ ತುಂಬಿರುವುದು ದೇವರಿಗೆ ಅವರು ತೋರಿಸಿದ ಅಪನಂಬಿಗಸ್ತಿಕೆ. ಒಂದಲ್ಲ ಎರಡಲ್ಲ ಎಷ್ಟೋ ಬಾರಿ ಅವರು ಕಾನಾನ್ಯರು ಆರಾಧಿಸಿದ ವಿಗ್ರಹಗಳನ್ನು ಆರಾಧಿಸಿದರು. ಅಷ್ಟೇ ಅಲ್ಲ ಅವರು ಆ ದೇವರುಗಳಂತೆಯೇ ಕ್ರೂರಿಗಳಾದರು. ತಮ್ಮ ಮಕ್ಕಳನ್ನು ಬಲಿಕೊಟ್ಟರು, ಬಡವರ ಮೇಲೆ ದಬ್ಬಾಳಿಕೆ ಮಾಡಿದರು. ಇದರಿಂದ ನಮಗೊಂದು ದೊಡ್ಡ ಪಾಠ ಇದೆ. ಅದೇನೆಂದರೆ ಪರಿಶುದ್ಧನಾದ ಯೆಹೋವ ದೇವರ ನಾಮಧಾರಿಗಳಾಗಿರುವ ನಾವು ಯಾವಾಗಲೂ ಆತನಂತೆ ಪರಿಶುದ್ಧರಾಗಿರಲು ಶ್ರಮಿಸಬೇಕು.
“ಇಗೋ, ಹೊಸ ಕಾರ್ಯವನ್ನು ಮಾಡುವೆನು”
8. (ಎ) ಯೆಶಾಯನಿಗೆ ಯೆಹೋವನಿಂದ ಯಾವ ನೇಮಕ ಸಿಕ್ಕಿತು? (ಬಿ) ಯೆಶಾಯನ ಪ್ರತಿಕ್ರಿಯೆ ಏನಾಗಿತ್ತು?
8 ಇಸ್ರಾಯೇಲ್ಯರು ಬಂಧನಕ್ಕೆ ಒಳಗಾಗುವರು, ನಂತರ ಅವರನ್ನು ಅತ್ಯದ್ಭುತವಾಗಿ ಬಿಡಿಸುವೆನೆಂದು ಯೆಹೋವನು ಪ್ರವಾದನೆ ನುಡಿದಿದ್ದನು. (ಯೆಶಾ. 43:19) ಯೆಶಾಯನ ಪುಸ್ತಕದ ಮೊದಲ ಆರು ಅಧ್ಯಾಯಗಳಲ್ಲಿ ಹೆಚ್ಚಾಗಿ ಇರುವುದು ಯೆರೂಸಲೇಮಿಗೂ, ಅದರ ಸುತ್ತಮುತ್ತಲಿನ ಪಟ್ಟಣಗಳಿಗೂ ಆಗುವ ದುರಂತದ ಕುರಿತ ಎಚ್ಚರಿಕೆಗಳು. ಹೃದಯಗಳನ್ನು ಓದಬಲ್ಲ ಯೆಹೋವನಿಗೆ ಜನರು ಈ ಎಚ್ಚರಿಕೆಗಳಿಗೆ ನಕಾರಾತ್ಮಕ ಪ್ರತಿಕ್ರಿಯೆ ತೋರಿಸುವರೆಂದು ತಿಳಿದಿತ್ತು. ಆದರೂ ಅದನ್ನು ಘೋಷಿಸುತ್ತಾ ಇರುವಂತೆ ಯೆಶಾಯನಿಗೆ ಹೇಳಿದನು. ಇದಕ್ಕೆ ಪ್ರತಿಕ್ರಿಯಿಸುತ್ತಾ ಯೆಶಾಯನು ಈ ಜನಾಂಗ ಎಷ್ಟು ಕಾಲ ಹೀಗೆ ಪಶ್ಚಾತ್ತಾಪಪಡದೆ ಇರುತ್ತದೆಂದು ಕೇಳಿದನು. ದೇವರು ಕೊಟ್ಟ ಉತ್ತರ? “ಯೆಹೋವನು ಜನರನ್ನು ದೂರ ತೊಲಗಿಸಿ ದೇಶದಲ್ಲಿ ಹಾಳು ಹೆಚ್ಚಿ ಪಟ್ಟಣಗಳು ಜನರಿಲ್ಲದೆ ಮನೆಗಳು ನಿವಾಸಿಗಳಿಲ್ಲದೆ ಧ್ವಂಸವಾಗಿ ಭೂಮಿಯು ತೀರಾ ಹಾಳಾಗುವ ತನಕ ಹೀಗಿರುವದು.”—ಯೆಶಾಯ 6:8-12 ಓದಿ.
9. (ಎ) ಯೆರೂಸಲೇಮಿನ ಕುರಿತ ಯೆಶಾಯನ ಪ್ರವಾದನೆ ಯಾವಾಗ ನೆರವೇರಿತು? (ಬಿ) ಇಂದು ನಾವು ಯಾವ ನಿಜತ್ವಕ್ಕೆ ಗಮನಕೊಟ್ಟು ಎಚ್ಚರದಿಂದಿರಬೇಕು?
9 ಯೆಶಾಯನಿಗೆ ಈ ನೇಮಕ ಸಿಕ್ಕಿದ್ದು ರಾಜನಾದ ಉಜ್ಜೀಯನ ಆಳ್ವಿಕೆಯ ಕೊನೇ ವರ್ಷದಲ್ಲಿ ಅಂದರೆ ಸುಮಾರು ಕ್ರಿ.ಪೂ. 778ರಲ್ಲಿ. ಪ್ರವಾದಿಯಾಗಿ ಅವನು ಈ ಕೆಲಸವನ್ನು 46 ಅಥವಾ ಅದಕ್ಕಿಂತ ಹೆಚ್ಚು ವರ್ಷ ಮಾಡಿದನು. ಹಿಜ್ಕೀಯ ರಾಜನ ಆಳ್ವಿಕೆಯ ಸಮಯದಲ್ಲಿ ಅಂದರೆ ಕ್ರಿ.ಪೂ. 732ರ ವರೆಗೂ ಮಾಡಿದನು. ಆದರೆ ಯೆರೂಸಲೇಮಿನ ನಾಶನವಾದದ್ದು 125 ವರ್ಷಗಳ ನಂತರ, ಕ್ರಿ.ಪೂ. 607ರಲ್ಲಿ. ಹೀಗೆ, ಭವಿಷ್ಯದಲ್ಲಿ ತಮ್ಮ ಜನಾಂಗಕ್ಕೆ ಏನಾಗಲಿದೆ ಎಂದು ದೇವಜನರಿಗೆ ಸಾಕಷ್ಟು ಮುಂಚೆಯೇ ತಿಳಿಸಲಾಗಿತ್ತು. ಇಂದು ಕೂಡ ಯೆಹೋವನು ಮುಂದೆ ಏನಾಗಲಿದೆ ಎಂಬುದರ ಬಗ್ಗೆ ತನ್ನ ಜನರ ಮೂಲಕ ಸಾಕಷ್ಟು ಸಮಯದಿಂದ ತಿಳಿಸುತ್ತಾ ಬಂದಿದ್ದಾನೆ. ಸೈತಾನನ ದುಷ್ಟ ಆಳ್ವಿಕೆ ಬೇಗನೆ ಅಂತ್ಯವಾಗಿ ಕ್ರಿಸ್ತನ ಸಾವಿರ ವರ್ಷದ ಆಳ್ವಿಕೆ ಆರಂಭವಾಗಲಿದೆ ಎಂಬ ನಿಜತ್ವಕ್ಕೆ ಗಮನಕೊಟ್ಟು ಎಚ್ಚರವಾಗಿರುವಂತೆ ಕಾವಲಿನಬುರುಜು ಪತ್ರಿಕೆ ಅದರ ಮೊದಲ ಸಂಚಿಕೆಯಿಂದ ಅಂದರೆ 135 ವರ್ಷಗಳಿಂದ ಓದುಗರನ್ನು ಉತ್ತೇಜಿಸುತ್ತಿದೆ.—ಪ್ರಕ. 20:1-3, 6.
10, 11. ಬಾಬೆಲಿನಲ್ಲಿ ಯೆಶಾಯನ ಯಾವ ಪ್ರವಾದನೆಯ ನೆರವೇರಿಕೆಗೆ ಇಸ್ರಾಯೇಲ್ಯರು ಸಾಕ್ಷಿಗಳಾದರು?
10 ಬಾಬೆಲ್ಗೆ ಶರಣಾಗುವಂತೆ ಹೇಳಲಾದ ನಿರ್ದೇಶನಕ್ಕೆ ವಿಧೇಯರಾದ ಯೆಹೂದ್ಯರು ಯೆರೂಸಲೇಮಿನ ನಾಶನದಿಂದ ಪಾರಾದರು. ಅವರನ್ನು ಬಾಬೆಲಿಗೆ ಬಂಧಿವಾಸಿಗಳಾಗಿ ಕೊಂಡೊಯ್ಯಲಾಯಿತು. (ಯೆರೆ. 27:11,12) ಅಲ್ಲಿ 70 ವರ್ಷಗಳ ನಂತರ ವಿಸ್ಮಯಕಾರಿ ಪ್ರವಾದನೆಯೊಂದರ ನೆರವೇರಿಕೆಗೆ ಆ ದೇವಜನರು ಸಾಕ್ಷಿಗಳಾದರು. ಆ ಪ್ರವಾದನೆ ಹೀಗಿತ್ತು: ‘ನಿಮ್ಮ ವಿಮೋಚಕನೂ ಇಸ್ರಾಯೇಲ್ಯರ ಸದಮಲಸ್ವಾಮಿಯೂ ಆದ ಯೆಹೋವನು ಹೀಗೆನ್ನುತ್ತಾನೆ—ನಾನು ನಿಮಗೋಸ್ಕರ ದೂತನನ್ನು ಬಾಬೆಲಿಗೆ ಕಳುಹಿಸುವೆನು.’—ಯೆಶಾ. 43:14.
11 ಈ ಪ್ರವಾದನೆಯನ್ನು ನೆರವೇರಿಸುತ್ತಾ ಕ್ರಿ.ಪೂ. 539ರ ಅಕ್ಟೋಬರ್ ತಿಂಗಳ ಒಂದು ರಾತ್ರಿ ಇಡೀ ಜಗತ್ತನ್ನೇ ನಡುಗಿಸಿದ ಘಟನೆಯೊಂದು ನಡೆಯಿತು. ಆ ರಾತ್ರಿ ಬಾಬೆಲಿನ ರಾಜ ಮತ್ತು ರಾಜ್ಯದ ಮುಖಂಡರು ಯೆರೂಸಲೇಮ್ ಆಲಯದಿಂದ ತಂದ ಪವಿತ್ರ ಪಾತ್ರೆಗಳಿಂದ ದ್ರಾಕ್ಷಾಮದ್ಯ ಕುಡಿಯುತ್ತಾ ತಮ್ಮ ದೇವರುಗಳ ಗುಣಗಾನ ಮಾಡುತ್ತಾ ಇದ್ದರು. ಆಗ ಮೇದ್ಯ-ಪಾರಸೀಯ ಸೈನ್ಯ ಬಾಬೆಲನ್ನು ವಶಪಡಿಸಿಕೊಂಡಿತು. ಬಾಬೆಲನ್ನು ಗೆದ್ದ ದೊರೆ ಕೋರೆಷ ಕ್ರಿ.ಪೂ. 538 ಅಥವಾ 537ರಲ್ಲಿ ಯೆಹೂದ್ಯರು ಯೆರೂಸಲೇಮಿಗೆ ಮರಳಿ ದೇವಾಲಯವನ್ನು ಪುನಃ ಕಟ್ಟುವಂತೆ ಆದೇಶಿಸಿದನು. ಯೆಶಾಯನ ಮೂಲಕ ದೇವರು ಇದೆಲ್ಲವನ್ನು ಮೊದಲೇ ಹೇಳಿದ್ದನು. ಮಾತ್ರವಲ್ಲ, ಪಶ್ಚಾತ್ತಾಪಪಟ್ಟಿರುವ ತನ್ನ ಜನರು ಯೆರೂಸಲೇಮಿಗೆ ಹಿಂದಿರುಗುವಾಗ ಅವರಿಗೆ ದಾರಿಯಲ್ಲಿ ಪೋಷಣೆ, ಸಂರಕ್ಷಣೆ ಕೊಡುತ್ತೇನೆ ಎಂದೂ ಮಾತುಕೊಟ್ಟಿದ್ದನು. ‘ನನ್ನ ಸ್ತೋತ್ರವನ್ನು ಪ್ರಚಾರಪಡಿಸಲಿ ಎಂದು ನಾನು ಸೃಷ್ಟಿಸಿಕೊಂಡ ಆಪ್ತಜನರು’ ಎಂದು ದೇವರು ಅವರನ್ನು ಕರೆದನು. (ಯೆಶಾ. 43:20; 44:26-28) ಹೀಗೆ ಬಂಧಿವಾಸದಿಂದ ಬಿಡುಗಡೆಗೊಂಡು ಯೆರೂಸಲೇಮಿಗೆ ಮರಳಿ ದೇವಾಲಯವನ್ನು ಪುನಃ ಕಟ್ಟಿದ ಯೆಹೂದ್ಯರು ಒಬ್ಬನೇ ಸತ್ಯ ದೇವರಾದ ಯೆಹೋವನು ಯಾವಾಗಲೂ ತನ್ನ ಮಾತನ್ನು ನೆರವೇರಿಸುವವನು ಎಂಬದಕ್ಕೆ ಸಾಕ್ಷಿಗಳಾದರು.
12, 13. (ಎ) ಯೆಹೋವನ ಆರಾಧನೆಯ ಪುನಸ್ಥಾಪನೆಯಲ್ಲಿ ಇಸ್ರಾಯೇಲ್ಯರೊಟ್ಟಿಗೆ ಯಾರನ್ನು ಸಹ ಒಳಗೂಡಿಸಲಾಯಿತು? (ಬಿ) ‘ದೇವರ ಇಸ್ರಾಯೇಲ್ಗೆ’ ‘ಬೇರೆ ಕುರಿಗಳು’ ಬೆಂಬಲ ನೀಡುವಾಗ ಅವರಿಂದ ಏನನ್ನು ಅಪೇಕ್ಷಿಸಲಾಗುತ್ತದೆ? (ಸಿ) ಬೇರೆ ಕುರಿಗಳಿಗಿರುವ ನಿರೀಕ್ಷೆ ಏನು?
12 ಹಿಂದಿರುಗಿ ಬಂದ ಈ ಇಸ್ರಾಯೇಲ್ಯರೊಂದಿಗೆ ಇಸ್ರಾಯೇಲ್ಯರಲ್ಲದ ಸಾವಿರಾರು ಜನರು ಸೇರಿಕೊಂಡರು. ಮುಂದಕ್ಕೆ, ಅನ್ಯಜನಾಂಗದ ಜನರಲ್ಲಿ ಅನೇಕರು ಯೆಹೂದಿ ಮತಾವಲಂಬಿಗಳಾದರು. (ಎಜ್ರ 2:58, 64, 65; ಎಸ್ತೇ. 8:17) ಇಂದು ಯೇಸುವಿನ ‘ಬೇರೆ ಕುರಿಗಳ’ “ಮಹಾ ಸಮೂಹ” ಅಭಿಷಿಕ್ತ ಕ್ರೈಸ್ತರಿಗೆ ನಿಷ್ಠೆಯ ಬೆಂಬಲ ನೀಡುತ್ತದೆ. ಈ ಅಭಿಷಿಕ್ತ ಕ್ರೈಸ್ತರೇ ‘ದೇವರ ಇಸ್ರಾಯೇಲ್’ ಆಗಿದ್ದಾರೆ. (ಪ್ರಕ. 7:9, 10; ಯೋಹಾ. 10:16; ಗಲಾ. 6:16) ಇವರಿಗೆ ಮಾತ್ರವಲ್ಲ ಮಹಾ ಸಮೂಹದವರಿಗೂ ಯೆಹೋವನ ಸಾಕ್ಷಿಗಳು ಎಂಬ ದೇವದತ್ತ ಹೆಸರಿದೆ.
13 ಕ್ರಿಸ್ತನ ಸಾವಿರ ವರ್ಷದ ಆಳ್ವಿಕೆಯ ಸಮಯದಲ್ಲಿ ಮಹಾ ಸಮೂಹದವರಿಗೆ ಒಂದು ವಿಶೇಷ ಅವಕಾಶ ಸಿಗಲಿದೆ. ಅದೇನೆಂದರೆ, ಪುನರುತ್ಥಾನವಾಗಿ ಬಂದವರಿಗೆ ತಾವು ಕಡೇ ದಿವಸಗಳಲ್ಲಿ ಹೇಗೆ ಯೆಹೋವನಿಗೆ ಸಾಕ್ಷಿಗಳಾಗಿ ಇದ್ದೆವು ಎಂಬುದನ್ನು ವಿವರಿಸುವುದೇ. ಆದರೆ ಈ ಆನಂದ ಸವಿಯಬೇಕಾದರೆ ನಾವಿಂದು ನಮ್ಮ ಹೆಸರಿಗೆ ತಕ್ಕಂತೆ ಜೀವಿಸಬೇಕು ಮತ್ತು ಪರಿಶುದ್ಧರಾಗಿರಲು ಶ್ರಮಿಸಬೇಕು. ಆದರೆ ನಾವು ಎಷ್ಟೇ ಕಷ್ಟಪಟ್ಟರೂ ಒಮ್ಮೊಮ್ಮೆ ಪರಿಶುದ್ಧರಾಗಿರಲು ತಪ್ಪಿಬೀಳುತ್ತೇವೆ. ಇದಕ್ಕಾಗಿ ಪ್ರತಿದಿನ ಕ್ಷಮೆ ಕೇಳುತ್ತಾ ನಾವು ಪಾಪಿಗಳು ಎಂದು ಒಪ್ಪಿಕೊಳ್ಳಬೇಕು. ಪರಿಶುದ್ಧರಾಗಿರಲು ಶ್ರಮಿಸುವ ಮೂಲಕ ದೇವರ ಪರಿಶುದ್ಧ ಹೆಸರನ್ನು ಹೊಂದಿರುವುದು ವರ್ಣಿಸಲಾಗದಷ್ಟು ದೊಡ್ಡ ಸನ್ಮಾನ ಆಗಿದೆಯೆಂದು ತೋರಿಸಿಕೊಡುತ್ತೇವೆ.—1 ಯೋಹಾನ 1:8, 9 ಓದಿ.
ದೇವರ ಹೆಸರಿನ ಅರ್ಥ
14. ಯೆಹೋವ ಎಂಬ ಹೆಸರಿನ ಅರ್ಥವೇನು?
14 ದೇವರ ನಾಮಧಾರಿಗಳಾಗಿರುವುದು ಎಷ್ಟೊಂದು ದೊಡ್ಡ ಸನ್ಮಾನ ಎಂಬದನ್ನು ಇನ್ನಷ್ಟು ಅರ್ಥಮಾಡಿಕೊಳ್ಳಲು ಆ ಹೆಸರಿನ ಅರ್ಥದ ಬಗ್ಗೆ ನಾವು ಧ್ಯಾನಿಸಬೇಕು. “ಯೆಹೋವ” ಎಂಬ ಪವಿತ್ರ ಹೆಸರು “ಆಗಲು” ಎಂದು ಭಾಷಾಂತರಿಸಲಾಗುವ ಹೀಬ್ರು ಕ್ರಿಯಾಪದದಿಂದ ಬಂದಿದೆ. ಆದ್ದರಿಂದ ಆ ಹೆಸರಿನ ಅರ್ಥ “ಆತನು ಆಗುವಂತೆ ಮಾಡುತ್ತಾನೆ” ಎಂದು ತಿಳಿದುಬರುತ್ತದೆ. ಇಡೀ ವಿಶ್ವ ಮತ್ತು ಬುದ್ಧಿಶಕ್ತಿಯುಳ್ಳ ಜೀವಿಗಳ ಸೃಷ್ಟಿಕರ್ತನಾದ ಹಾಗೂ ತನ್ನ ಉದ್ದೇಶವನ್ನು ನೆರವೇರಿಸುವವನಾದ ಯೆಹೋವನಿಗೆ ಇದು ತಕ್ಕದಾದ ಹೆಸರು. ದೇವರ ಚಿತ್ತ ಹಾಗೂ ಉದ್ದೇಶ ನೆರವೇರಿಕೆಯತ್ತ ಸಾಗುತ್ತಿದ್ದಂತೆ ಅದನ್ನು ಭಂಗಪಡಿಸಲು ಸೈತಾನನಾಗಲಿ ಇನ್ನಾವ ವಿರೋಧಿಯಾಗಲಿ ಎಷ್ಟೇ ಪ್ರಯತ್ನಪಟ್ಟರೂ ತನ್ನ ಚಿತ್ತ ನೆರವೇರುವಂತೆ ಯೆಹೋವನು ನೋಡಿಕೊಳ್ಳುತ್ತಾನೆ.
15. ಯೆಹೋವನು ಮೋಶೆಗೆ ಹೇಳಿದ ವಿಷಯದಿಂದ ಆತನ ಹೆಸರಿನ ಬಗ್ಗೆ ನಾವೇನು ಕಲಿಯುತ್ತೇವೆ? (“ಅರ್ಥಗರ್ಭಿತ ಹೆಸರು” ಚೌಕ ನೋಡಿ.)
15 ಯೆಹೋವನು ತನ್ನ ಹೆಸರಿನ ಅರ್ಥದ ಬಗ್ಗೆ ಇನ್ನಷ್ಟು ವಿಷಯಗಳನ್ನು ಮೋಶೆಗೆ ತಿಳಿಸಿದನು. ಐಗುಪ್ತದಿಂದ ತನ್ನ ಜನರನ್ನು ಬಿಡಿಸಿ ಹೊರತರಲು ಮೋಶೆಯನ್ನು ನೇಮಿಸಿದಾಗ ಯೆಹೋವನು ಹೇಳಿದ್ದು: “ನಾನು ಏನಾಗಲು ಬಯಸುತ್ತೇನೊ ಹಾಗೆಯೇ ಆಗುತ್ತೇನೆ.” ಆತನು ಮುಂದುವರಿಸಿ ಹೇಳಿದ್ದು: “‘ಆಗುತ್ತೇನೆ’ ಎಂಬಾತನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ.” (ವಿಮೋ. 3:14, ಇಂಗ್ಲಿಷ್ NW 2013ರ ಆವೃತ್ತಿ.) ಇದರರ್ಥ ಯೆಹೋವನು ತನ್ನ ಉದ್ದೇಶವನ್ನು ನೆರವೇರಿಸಲು ಏನೇನು ಆಗಬೇಕೋ ಅದೆಲ್ಲ ಆಗುತ್ತಾನೆ. ಇಸ್ರಾಯೇಲ್ಯರಿಗಾಗಿ ಆತನು ಏನೆಲ್ಲ ಆಗುವ ಅವಶ್ಯಕತೆ ಇತ್ತೋ ಅದೆಲ್ಲ ಅಂದರೆ ವಿಮೋಚಕ, ಸಂರಕ್ಷಕ, ಮಾರ್ಗದರ್ಶಕ, ಪೋಷಕ ಆದನು.
ಕೃತಜ್ಞತೆ ತೋರಿಸೋಣ
16, 17. (ಎ) ದೇವರ ನಾಮಧಾರಿಗಳಾಗಿರಲು ನಮಗಿರುವ ಸುಯೋಗಕ್ಕಾಗಿ ಹೇಗೆ ಕೃತಜ್ಞತೆ ತೋರಿಸಬಲ್ಲೆವು? (ಬಿ) ಮುಂದಿನ ಲೇಖನದಲ್ಲಿ ಏನನ್ನು ಚರ್ಚಿಸಲಾಗುವುದು?
16 ಇಂದು ಕೂಡ ಯೆಹೋವನು ನಮ್ಮ ಆಧ್ಯಾತ್ಮಿಕ ಹಾಗೂ ಶಾರೀರಿಕ ಅಗತ್ಯಗಳನ್ನು ಪೂರೈಸುವ ಮೂಲಕ ತನ್ನ ಹೆಸರಿನ ಅರ್ಥಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದ್ದಾನೆ. ಆತನ ಹೆಸರಿನ ಅರ್ಥದಲ್ಲಿ ಬರೀ ಆತನು ಏನಾಗಲು ಬಯಸುತ್ತಾನೊ ಅದಾಗುವುದು ಮಾತ್ರ ಸೇರಿಲ್ಲ. ತನ್ನ ಉದ್ದೇಶವನ್ನು ನೆರವೇರಿಸಲು ತನ್ನ ಸಾಕ್ಷಿಗಳ ಕೆಲಸಕ್ಕೆ ಏನಾಗುವಂತೆ ಮಾಡುತ್ತಾನೊ ಅದೂ ಸೇರಿದೆ. ಇದರ ಬಗ್ಗೆ ಧ್ಯಾನಿಸುವಾಗ ನಾವು ಆತನ ಹೆಸರಿಗೆ ತಕ್ಕಂತೆ ಜೀವಿಸುತ್ತಾ ಇರಲು ಸ್ಫೂರ್ತಿ ಸಿಗುತ್ತದೆ. 70 ವರ್ಷಗಳಿಂದ ಯೆಹೋವನ ಸಾಕ್ಷಿಯಾಗಿರುವ ನಾರ್ವೆ ದೇಶದ ಕೋರಾ (84 ವರ್ಷ) ಹೇಳುತ್ತಾರೆ: “ನಿತ್ಯತೆಯ ಅರಸನಾದ ಯೆಹೋವನ ಸೇವೆಮಾಡುವುದು ಮತ್ತು ಆತನ ಪವಿತ್ರ ನಾಮವಿರುವ ಜನರ ಭಾಗವಾಗಿರುವುದು ಒಂದು ದೊಡ್ಡ ಸನ್ಮಾನವೆಂದು ನನಗನಿಸುತ್ತದೆ. ಜನರಿಗೆ ಬೈಬಲ್ ಸತ್ಯವನ್ನು ವಿವರಿಸುವಾಗ ಅದವರಿಗೆ ಅರ್ಥವಾಗಿ ಅವರ ಕಣ್ಣುಗಳು ಆನಂದದಿಂದ ಬೆಳಗುವುದನ್ನು ನೋಡುವುದು ಮಹಾ ಸುಯೋಗ. ಉದಾಹರಣೆಗೆ, ಕ್ರಿಸ್ತನ ವಿಮೋಚನಾ ಮೌಲ್ಯದಿಂದ ಏನು ಪ್ರಯೋಜನವಿದೆ ಮತ್ತು ಅದರ ಮೂಲಕ ಅವರು ಶಾಂತಿಯುತ, ನೀತಿಭರಿತ ಹೊಸ ಲೋಕದಲ್ಲಿ ಹೇಗೆ ನಿತ್ಯಜೀವ ಪಡೆಯಬಲ್ಲರು ಎಂದು ಜನರಿಗೆ ಕಲಿಸುವಾಗ ನನಗೆ ಗಾಢ ತೃಪ್ತಿ ಸಿಗುತ್ತದೆ.”
17 ಕೆಲವೊಂದು ಸೇವಾಕ್ಷೇತ್ರಗಳಲ್ಲಿ ದೇವರ ಬಗ್ಗೆ ತಿಳಿಯಲಿಚ್ಛಿಸುವ ಜನರನ್ನು ಕಂಡುಕೊಳ್ಳುವುದು ಹೆಚ್ಚೆಚ್ಚು ಕಷ್ಟಕರವಾಗುತ್ತಿದೆ ನಿಜ. ಹಾಗಿದ್ದರೂ ಕಿವಿಗೊಡುವ ಮನಸ್ಸುಳ್ಳ ಒಬ್ಬ ವ್ಯಕ್ತಿ ಸಿಕ್ಕಿದಾಗ ಮತ್ತು ಆ ವ್ಯಕ್ತಿಗೆ ಯೆಹೋವನ ಹೆಸರಿನ ಬಗ್ಗೆ ಕಲಿಸಲು ನಿಮಗೆ ಸಾಧ್ಯವಾದಾಗ ನಿಮಗೂ ಸಹೋದರ ಕೋರಾರಂತೆ ತುಂಬಾ ಖುಷಿಯಾಗುತ್ತದಲ್ಲವೇ? ಆದರೆ ನಾವು ಯೆಹೋವನಿಗೂ ಅದೇ ಸಮಯದಲ್ಲಿ ಯೇಸುವಿಗೂ ಹೇಗೆ ಸಾಕ್ಷಿಗಳಾಗಿರಬಲ್ಲೆವು? ಈ ಪ್ರಶ್ನೆಯನ್ನೇ ಮುಂದಿನ ಲೇಖನದಲ್ಲಿ ಚರ್ಚಿಸುವೆವು.