ಅಧ್ಯಯನ ಲೇಖನ 12
ಸೃಷ್ಟಿ ನೋಡಿ ಯೆಹೋವನ ಬಗ್ಗೆ ಕಲಿರಿ
“ಕಣ್ಣಿಗೆ ಕಾಣದಿರೋ ದೇವರ ಗುಣಗಳನ್ನ ಸೃಷ್ಟಿ ಆದಾಗಿಂದ ನಮಗೆ ಸ್ಪಷ್ಟವಾಗಿ ನೋಡೋಕೆ ಆಗ್ತಿದೆ.”—ರೋಮ. 1:20.
ಗೀತೆ 105 ಆಕಾಶ ಘೋಷಿಸುತೆ ದೇವರ ಮಹಿಮೆ
ಈ ಲೇಖನದಲ್ಲಿ ಏನಿದೆ?a
1. ಯೋಬ ಏನನ್ನ ನೋಡಿ ಯೆಹೋವನ ಬಗ್ಗೆ ಇನ್ನೂ ಜಾಸ್ತಿ ತಿಳ್ಕೊಂಡ?
ಯೋಬ ತನ್ನ ಜೀವನದಲ್ಲಿ ಎಷ್ಟೋ ಜನ್ರ ಹತ್ರ ಮಾತಾಡಿರ್ತಾನೆ. ಆದ್ರೆ ಯೆಹೋವನ ಹತ್ರ ಮಾತಾಡಿದ್ದನ್ನ ಅವನು ಯಾವತ್ತೂ ಮರೆತಿರಲ್ಲ. ಯಾಕಂದ್ರೆ ಯೆಹೋವ ತನಗೆ ಎಷ್ಟು ವಿವೇಕ ಇದೆ, ತನ್ನ ಜನ್ರನ್ನ ಎಷ್ಟು ಚೆನ್ನಾಗಿ ನೋಡ್ಕೊಳ್ತಾ ಇದ್ದಾನೆ ಅಂತ ಸೃಷ್ಟಿನ ತೋರಿಸಿ ಯೋಬನಿಗೆ ಅರ್ಥ ಮಾಡಿಸಿದನು. ಇದ್ರಿಂದ ಅವನಿಗೆ ಯೆಹೋವನ ಮೇಲೆ ನಂಬಿಕೆ ಜಾಸ್ತಿ ಆಯ್ತು. ಪ್ರಾಣಿಗಳನ್ನೇ ಇಷ್ಟು ಚೆನ್ನಾಗಿ ನೋಡ್ಕೊಳ್ತಾನೆ ಅಂದ್ಮೇಲೆ ತನ್ನನ್ನೂ ಖಂಡಿತ ನೋಡ್ಕೊಳ್ತಾನೆ ಅಂತ ಯೋಬನಿಗೆ ಅನಿಸ್ತು. (ಯೋಬ 38:39-41; 39:1, 5, 13-16) ಹೀಗೆ ಅವನು ಸೃಷ್ಟಿನ ನೋಡಿ ಯೆಹೋವನ ಗುಣಗಳ ಬಗ್ಗೆ ಚೆನ್ನಾಗಿ ತಿಳ್ಕೊಂಡ.
2. ಸೃಷ್ಟಿನ ನೋಡಿ ಕಲಿಯೋಕೆ ಕೆಲವ್ರಿಗೆ ಯಾಕೆ ಕಷ್ಟ ಆಗಬಹುದು?
2 ಸೃಷ್ಟಿಯಿಂದ ನಾವು ಕೂಡ ಯೆಹೋವನ ಬಗ್ಗೆ ಜಾಸ್ತಿ ಕಲಿಬಹುದು. ಆದ್ರೆ ಸಿಟಿಯಲ್ಲಿ ಇರೋರಿಗೆ ಪ್ರಕೃತಿ ಸೊಬಗನ್ನ ನೋಡೋಕೇ ಆಗ್ತಿಲ್ಲ. ಯಾಕಂದ್ರೆ ಎಲ್ಲಿ ನೋಡಿದ್ರೂ ಬಿಲ್ಡಿಂಗ್ಗಳೇ ಕಾಣುತ್ತೆ. ಇನ್ನು ಕೆಲವ್ರಿಗೆ ಇದನ್ನೆಲ್ಲ ನೋಡೋಕೆ ಪುರುಸೊತ್ತೇ ಇರಲ್ಲ. ಆದ್ರೂ ಸೃಷ್ಟಿನ ನೋಡಿ ಅದ್ರ ಬಗ್ಗೆ ಚೆನ್ನಾಗಿ ಕಲಿಯೋಕೆ ನಾವ್ಯಾಕೆ ಸಮಯ ಮಾಡ್ಕೊಬೇಕು? ಯೆಹೋವ ಮತ್ತು ಯೇಸು ಸೃಷ್ಟಿಯಿಂದ ನಮ್ಗೆ ಏನ್ ಕಲಿಸ್ತಿದ್ದಾರೆ? ಅದನ್ನ ಈಗ ತಿಳ್ಕೊಳ್ಳೋಣ.
ಸೃಷ್ಟಿನ ನೋಡೋಕೆ ಯಾಕೆ ಸಮಯ ಮಾಡ್ಕೊಬೇಕು?
3. ಆದಾಮ ಸೃಷ್ಟಿನ ನೋಡಿ ಖುಷಿ ಪಡಬೇಕು ಅಂತ ಯೆಹೋವ ಬಯಸಿದನು ಅನ್ನೋದು ನಮಗೆ ಹೇಗೆ ಗೊತ್ತು?
3 ಯೆಹೋವ ಈ ಪ್ರಕೃತಿನ ಇಷ್ಟು ಚೆನ್ನಾಗಿ ಸೃಷ್ಟಿ ಮಾಡಿರೋದು ನಮಗೋಸ್ಕರಾನೇ. ಆತನು ಆದಾಮನನ್ನ ಸೃಷ್ಟಿ ಮಾಡಿ ಅವನನ್ನ ಸುಂದರವಾದ ತೋಟದಲ್ಲಿ ಬಿಟ್ಟನು. ಆಮೇಲೆ ಇಡೀ ಭೂಮಿನ ಪರದೈಸಾಗಿ ಮಾಡೋ ಕೆಲಸನ ಅವನಿಗೆ ಕೊಟ್ಟನು. (ಆದಿ. 2:8, 9, 15) ಒಂದು ಬೀಜ ಮೊಳಕೆಯೊಡೆದು, ಗಿಡ ಆಗಿ, ಹೂ ಬಿಡೋದನ್ನ ಆದಾಮ ನೋಡಿದಾಗ ಅವನಿಗೆ ಎಷ್ಟು ಸಂತೋಷ ಆಗಿರುತ್ತಲ್ವಾ? ಅವನಿಗೆ ಅದೆಲ್ಲಾ ಹೊಸದು ಅನಿಸಿರುತ್ತೆ. ಯೆಹೋವ ಆದಾಮನಿಗೆ ಇನ್ನೂ ಒಂದು ಕೆಲಸ ಕೊಟ್ಟನು. ಆದಾಮ ಪ್ರಾಣಿಗಳಿಗೆಲ್ಲ ಹೆಸ್ರು ಇಡಬೇಕಿತ್ತು. (ಆದಿ. 2:19, 20) ಯೆಹೋವನೇ ಅವಕ್ಕೆ ಹೆಸ್ರು ಇಡಬಹುದಿತ್ತು. ಆದ್ರೆ ಆ ಕೆಲಸನ ಆದಾಮ ಮಾಡಿದ್ರೆ ಅವನಿಗೆ ತುಂಬ ಖುಷಿಯಾಗುತ್ತೆ ಅಂತ ಆತನಿಗೆ ಗೊತ್ತಿತ್ತು. ಅದಕ್ಕೆ ಆ ಕೆಲಸನ ಅವನಿಗೆ ಕೊಟ್ಟನು. ಆದಾಮ ಒಂದೊಂದು ಪ್ರಾಣಿಯ ಸ್ವಭಾವವನ್ನ ಚೆನ್ನಾಗಿ ಗಮನಿಸಿರ್ತಾನೆ. ಆಮೇಲೆ ಅದಕ್ಕೆ ತಕ್ಕ ಹಾಗೆ ಅವಕ್ಕೆ ಹೆಸ್ರು ಇಟ್ಟಿರ್ತಾನೆ. ಅವನು ಸೃಷ್ಟಿನ ನೋಡಿದಾಗ ತುಂಬ ಖುಷಿ ಪಟ್ಟಿರ್ತಾನೆ. ಯೆಹೋವ ತುಂಬ ವಿವೇಕಿ ಅಂತಾನೂ ಅರ್ಥ ಮಾಡ್ಕೊಂಡಿರ್ತಾನೆ.
4. (ಎ) ನಾವು ಸೃಷ್ಟಿನ ಯಾಕೆ ಗಮನಿಸಬೇಕು ಅನ್ನೋದಕ್ಕೆ ಒಂದು ಕಾರಣ ಕೊಡಿ. (ಬಿ) ಯೆಹೋವ ಮಾಡಿರೋ ಸೃಷ್ಟಿಯಲ್ಲಿ ನಿಮಗೆ ಯಾವುದು ಇಷ್ಟ?
4 ನಾವು ನಮ್ಮ ಸುತ್ತಮುತ್ತ ಇರೋ ಸೃಷ್ಟಿನ ಯಾಕೆ ಸೂಕ್ಷ್ಮವಾಗಿ ಗಮನಿಸಬೇಕು? ಯಾಕಂದ್ರೆ ಯೆಹೋವನೇ ನಮಗೆ ಅದನ್ನ ಮಾಡೋಕೆ ಹೇಳ್ತಿದ್ದಾನೆ. “ನಿಮ್ಮ ಕಣ್ಣುಗಳನ್ನ ಮೇಲೆತ್ತಿ, ಆಕಾಶದ ಕಡೆ ನೋಡಿ. [ಅದನ್ನೆಲ್ಲ] ಸೃಷ್ಟಿ ಮಾಡಿದವರು ಯಾರು?” ಅಂತ ಆತನು ಕೇಳ್ತಿದ್ದಾನೆ. (ಯೆಶಾ. 40:26) ಅದಕ್ಕೆ ಉತ್ರ ನಮಗೆ ಚೆನ್ನಾಗಿ ಗೊತ್ತು. ಇದನ್ನ ಮಾಡಿದ್ದು ಯೆಹೋವನೇ. ಯೆಹೋವ ಸ್ವರ್ಗದಲ್ಲಷ್ಟೇ ಅಲ್ಲ, ಭೂಮಿ ಮತ್ತು ಸಮುದ್ರದಲ್ಲೂ ಎಲ್ಲಾನೂ ಸೃಷ್ಟಿ ಮಾಡಿದ್ದಾನೆ. ಅದ್ರಿಂದ ನಾವು ತುಂಬ ಕಲಿಬಹುದು. (ಕೀರ್ತ. 104:24, 25) ಅಷ್ಟೇ ಅಲ್ಲ, ಯೆಹೋವ ನಮ್ಮನ್ನ ಹೇಗೆ ಸೃಷ್ಟಿಸಿದ್ದಾನೆ ಅಂತ ಸ್ವಲ್ಪ ಗಮನಿಸಿ. ಪ್ರಕೃತಿ ಸೌಂದರ್ಯನ ನೋಡಿ ಆನಂದಿಸೋ ತರ ಯೆಹೋವ ನಮ್ಮನ್ನ ಸೃಷ್ಟಿ ಮಾಡಿದ್ದಾನೆ. ನಮಗೆ ನೋಡೋ, ಕೇಳಿಸ್ಕೊಳ್ಳೋ, ಸ್ಪರ್ಶಿಸೋ, ರುಚಿ ನೋಡೋ ಮತ್ತು ವಾಸನೆ ನೋಡೋ ಸಾಮರ್ಥ್ಯನ ಯೆಹೋವ ಯಾಕೆ ಕೊಟ್ಟಿದ್ದಾನೆ? ನಾವು ಸೃಷ್ಟಿನ ನೋಡಿ ಖುಷಿಪಡಬೇಕು ಅಂತನೇ ನಮಗೆ ಅವನ್ನ ಕೊಟ್ಟಿದ್ದಾನೆ.
5. ಯೆಹೋವ ಮಾಡಿರೋ ಸೃಷ್ಟಿನ ಗಮನಿಸೋದ್ರಿಂದ ಏನು ಪ್ರಯೋಜನ ಇದೆ? (ರೋಮನ್ನರಿಗೆ 1:20)
5 ನಾವು ಸೃಷ್ಟಿನ ಗಮನಿಸೋದ್ರಿಂದ ಇನ್ನೊಂದು ಪ್ರಯೋಜನನೂ ಆಗುತ್ತೆ. ಅದ್ರಿಂದ ನಾವು ಯೆಹೋವನ ಗುಣಗಳ ಬಗ್ಗೆ ತಿಳ್ಕೊಳ್ತೀವಿ. (ರೋಮನ್ನರಿಗೆ 1:20 ಓದಿ.) ಆತನು ಮಾಡಿರೋ ಒಂದೊಂದು ಸೃಷ್ಟಿನೂ ತುಂಬ ಅದ್ಭುತವಾಗಿದೆ. ಇದ್ರಿಂದ ಆತನು ತುಂಬ ವಿವೇಕಿ ಅಂತ ನಮಗೆ ಗೊತ್ತಾಗುತ್ತೆ. ಅಷ್ಟೇ ಅಲ್ಲ, ಆತನು ನಮಗೆ ಒಂದೇ ತರದ ಆಹಾರ ಕೊಟ್ಟಿಲ್ಲ, ವಿಧವಿಧವಾದ ಆಹಾರ ಕೊಟ್ಟಿದ್ದಾನೆ. ಇದ್ರಿಂದ ಆತನು ನಮ್ಮನ್ನ ಎಷ್ಟು ಪ್ರೀತಿಸ್ತಾನೆ ಅಂತ ಗೊತ್ತಾಗುತ್ತೆ. ಹೀಗೆ ನಾವು ಆತನು ಮಾಡಿರೋ ಪ್ರತಿಯೊಂದು ಸೃಷ್ಟಿಯ ಬಗ್ಗೆ ಕಲೀತಾ ಇರಬೇಕು. ಆಗ ಆತನನ್ನ ಚೆನ್ನಾಗಿ ಅರ್ಥ ಮಾಡ್ಕೊಳ್ತೀವಿ, ಆತನಿಗೆ ಹತ್ರ ಆಗ್ತಾ ಹೋಗ್ತೀವಿ. ಈ ಸೃಷ್ಟಿನ ಉಪಯೋಗಿಸಿ ಯೆಹೋವ ತನ್ನ ಬಗ್ಗೆ ಜನ್ರಿಗೆ ಕಲಿಸಿದ್ದಾನೆ. ಅವುಗಳಲ್ಲಿ ಕೆಲವನ್ನ ಈಗ ನೋಡೋಣ.
ಸೃಷ್ಟಿ, ಯೆಹೋವನ ಬಗ್ಗೆ ಏನು ಹೇಳುತ್ತೆ?
6. ವಲಸೆ ಹೋಗೋ ಪಕ್ಷಿಗಳಿಂದ ಯೆಹೋವನ ಬಗ್ಗೆ ನಾವೇನು ಕಲಿತೀವಿ?
6 ಯೆಹೋವ ಎಲ್ಲದಕ್ಕೂ ಒಂದು ಸಮಯ ಇಟ್ಟಿದ್ದಾನೆ. ಕೊಕ್ಕರೆಗಳು ಪ್ರತೀ ವರ್ಷ ವಲಸೆ ಹೋಗ್ತವೆ. ಫೆಬ್ರವರಿ ಕೊನೆಯಿಂದ ಮೇ ತಿಂಗಳ ಮಧ್ಯದ ವರೆಗೆ ಅವು ಉತ್ತರ ದಿಕ್ಕಿಗೆ ಹೋಗ್ತಾ ಇದ್ದಿದ್ದನ್ನ ಇಸ್ರಾಯೇಲ್ಯರು ನೋಡ್ತಾ ಇದ್ರು. “ಆಕಾಶದಲ್ಲಿ ಹಾರಾಡೋ ಕೊಕ್ಕರೆಗೆ ಸಹ ತಾನು ವಲಸೆ ಹೋಗಬೇಕಾದ ಸಮಯ ಯಾವುದು ಅಂತ ಗೊತ್ತು” ಅಂತ ಯೆಹೋವ ಇಸ್ರಾಯೇಲ್ಯರಿಗೆ ಹೇಳಿದ್ದನು. (ಯೆರೆ. 8:7) ಪಕ್ಷಿಗಳು ಯಾವಾಗ ವಲಸೆ ಹೋಗಬೇಕು ಅನ್ನೋದನ್ನೂ ಯೆಹೋವ ಗೊತ್ತುಮಾಡಿದ್ದಾನೆ. ಅದೇ ತರಾನೇ ಇವತ್ತಿಗೂ ಪಕ್ಷಿಗಳು ವಲಸೆ ಹೋಗ್ತವೆ. ಇದ್ರಿಂದ ಯೆಹೋವನ ಬಗ್ಗೆ ಏನು ಗೊತ್ತಾಗುತ್ತೆ? ಯೆಹೋವ ತಾನು “ನಿರ್ಧರಿಸಿದ ಸಮಯಕ್ಕೆ” ಈ ಕೆಟ್ಟ ಲೋಕನ ನಾಶ ಮಾಡೇ ಮಾಡ್ತಾನೆ ಅಂತ ಗೊತ್ತಾಗುತ್ತೆ.—ಹಬ. 2:3.
7. ಪಕ್ಷಿಗಳು ಹಾರೋದನ್ನ ನೋಡಿದಾಗ ಯೆಹೋವನ ಬಗ್ಗೆ ಏನು ಕಲಿತೀವಿ? (ಯೆಶಾಯ 40:31)
7 ಯೆಹೋವ ತನ್ನ ಜನ್ರಿಗೆ ಶಕ್ತಿ ಕೊಡ್ತಾನೆ. ತನ್ನ ಜನ್ರು ದಣಿದು ಹೋದಾಗ ಬೇಜಾರಲ್ಲಿದ್ದಾಗ “ಹದ್ದಿನ ತರ ರೆಕ್ಕೆಗಳನ್ನ ಚಾಚಿ ಅವರು ಎತ್ರದಲ್ಲಿ ಹಾರ್ತಾರೆ” ಅಂತ ಯೆಶಾಯನ ಮೂಲಕ ಹೇಳಿದನು. (ಯೆಶಾಯ 40:31 ಓದಿ.) ಹದ್ದುಗಳು ಸಾಮಾನ್ಯವಾಗಿ ರೆಕ್ಕೆ ಬಡಿಯದೇ ತುಂಬ ಎತ್ರದಲ್ಲಿ ಹಾರಾಡೋದನ್ನ ಇಸ್ರಾಯೇಲ್ಯರು ನೋಡಿರ್ತಾರೆ. ಯೆಹೋವ ಪಕ್ಷಿಗಳಿಗೇ ಇಷ್ಟು ಬಲ ಕೊಡ್ತಾನೆ ಅಂದ್ರೆ ನಮಗೂ ಖಂಡಿತ ಬಲ ಕೊಡ್ತಾನೆ ಅಂತ ಆಗ ಅವರಿಗೆ ಅನಿಸಿರುತ್ತೆ. ಹಕ್ಕಿಗಳಿಗೆ ಯೆಹೋವ ಶಕ್ತಿ ಕೊಡೋದ್ರಿಂದ ಅವು ಆಕಾಶದಲ್ಲಿ ತುಂಬ ಎತ್ರದಲ್ಲಿ ಹಾರಾಡ್ತವೆ. ಅದೇ ತರ ಯೆಹೋವ ನಮಗೆ ಶಕ್ತಿ ಕೊಡೋದ್ರಿಂದ ಕಷ್ಟಗಳನ್ನ ಸಹಿಸ್ಕೊಳ್ಳೋಕೆ ನಮ್ಮಿಂದ ಆಗುತ್ತೆ.
8. (ಎ) ಯೆಹೋವ ಮಾಡಿರೋ ಸೃಷ್ಟಿಯಿಂದ ಯೋಬ ಏನು ಕಲಿತ? (ಬಿ) ನಾವೇನು ಕಲಿಬಹುದು?
8 ನಾವು ಯೆಹೋವನನ್ನು ಪೂರ್ತಿಯಾಗಿ ನಂಬಬಹುದು. ತನ್ನ ಮೇಲೆ ಜಾಸ್ತಿ ನಂಬಿಕೆ ಬೆಳೆಸ್ಕೊಳ್ಳೋಕೆ ಯೆಹೋವ ಯೋಬನಿಗೆ ಸಹಾಯ ಮಾಡಿದನು. (ಯೋಬ 32:2; 40:6-8) ಅದಕ್ಕೆ ಯೆಹೋವ ಅವನಿಗೆ ಸೃಷ್ಟಿ ಬಗ್ಗೆ ಅಂದ್ರೆ ನಕ್ಷತ್ರ, ಮೋಡಗಳು ಮತ್ತು ಮಿಂಚಿನ ಬಗ್ಗೆ ಹೇಳಿದನು. ಅಷ್ಟೇ ಅಲ್ಲ ಕಾಡುಕೋಣ, ಕುದುರೆ ಮತ್ತು ಇನ್ನೂ ಕೆಲವು ಪ್ರಾಣಿಗಳ ಬಗ್ಗೆ ಮಾತಾಡಿದನು. (ಯೋಬ 38:32-35; 39:9, 19, 20) ಇದನ್ನೆಲ್ಲ ಕೇಳಿದಾಗ ಯೆಹೋವನಿಗೆ ಎಷ್ಟು ಶಕ್ತಿ ಇದೆ ಅಂತ ಮಾತ್ರ ಅಲ್ಲ, ಎಷ್ಟು ಪ್ರೀತಿ ಇದೆ, ವಿವೇಕ ಇದೆ ಅಂತನೂ ಯೋಬ ಅರ್ಥ ಮಾಡ್ಕೊಂಡ. ಯೆಹೋವನ ಮೇಲೆ ಅವನಿಗೆ ಮುಂಚೆಗಿಂತ ನಂಬಿಕೆ ಜಾಸ್ತಿ ಆಯ್ತು. (ಯೋಬ 42:1-6) ಅದೇ ತರ ನಾವೂ ಸೃಷ್ಟಿ ಬಗ್ಗೆ ಓದಿದಾಗ ಯೆಹೋವನಿಗೆ ಇರೋಷ್ಟು ವಿವೇಕ ಯಾರಿಗೂ ಇಲ್ಲ, ನಮ್ಮೆಲ್ಲರಿಗಿಂತ ಆತನು ಶಕ್ತಿಶಾಲಿ ಅಂತ ಅರ್ಥ ಮಾಡ್ಕೊಳ್ತೀವಿ. ನಮ್ಮ ಕಷ್ಟಗಳನ್ನೆಲ್ಲ ಆತನು ಬೇಗ ಪರಿಹಾರ ಮಾಡ್ತಾನೆ ಅನ್ನೋ ನಂಬಿಕೆನೂ ಇದ್ರಿಂದ ಜಾಸ್ತಿಯಾಗುತ್ತೆ.
ಯೇಸು ಸೃಷ್ಟಿ ತೋರಿಸಿ ಯೆಹೋವನ ಬಗ್ಗೆ ಕಲಿಸಿದನು
9-10. ಸೂರ್ಯನ ಕಿರಣ ಮತ್ತು ಮಳೆಯಿಂದ ನಾವು ಯೆಹೋವನ ಬಗ್ಗೆ ಏನು ಕಲಿತೀವಿ?
9 ಯೆಹೋವ ದೇವರು ಸೃಷ್ಟಿ ಮಾಡುವಾಗ ಯೇಸು ಆತನ ಜೊತೆ “ನಿಪುಣ ಕೆಲಸಗಾರನ ತರ” ಇದ್ದ. (ಜ್ಞಾನೋ. 8:30) ಅದಕ್ಕೇ ವಿಶ್ವದಲ್ಲಿರೋ ಎಲ್ಲಾ ಸೃಷ್ಟಿಗಳ ಬಗ್ಗೆ ನಮಗಿಂತ ಆತನಿಗೆ ಚೆನ್ನಾಗಿ ಗೊತ್ತು. ಯೇಸು ಭೂಮಿಲಿದ್ದಾಗ ಸೃಷ್ಟಿನ ತೋರಿಸಿ ಯೆಹೋವನ ಬಗ್ಗೆ ತನ್ನ ಶಿಷ್ಯರಿಗೆ ಕಲಿಸಿದನು. ಆತನು ಕಲಿಸಿದ ಕೆಲವು ವಿಷ್ಯಗಳ ಬಗ್ಗೆ ಈಗ ನೋಡೋಣ.
10 ಯೆಹೋವ ಬೇಧಭಾವ ಮಾಡದೆ ಎಲ್ರಿಗೂ ಪ್ರೀತಿ ತೋರಿಸ್ತಾನೆ. ಯೇಸು ಬೆಟ್ಟದ ಭಾಷಣದಲ್ಲಿ ತನ್ನ ಶಿಷ್ಯರ ಹತ್ರ ಸೂರ್ಯನ ಕಿರಣ ಮತ್ತು ಮಳೆ ಬಗ್ಗೆ ಮಾತಾಡಿದನು. ಮನುಷ್ಯರಿಗೆ ಬದುಕೋಕೆ ಇವೆರಡೂ ತುಂಬ ಮುಖ್ಯ. ‘ನನ್ನನ್ನ ಆರಾಧಿಸೋರಿಗೆ ಮಾತ್ರ ಇವು ಸಿಗೋ ಹಾಗೆ ಮಾಡ್ತೀನಿ, ಬೇರೆಯವ್ರಿಗೆ ಸಿಗಬಾರದು’ ಅಂತ ಯೆಹೋವ ಯಾವತ್ತೂ ಅಂದ್ಕೊಳ್ಳಿಲ್ಲ. ಬದಲಿಗೆ ಎಲ್ರಿಗೂ ಸಿಗೋ ತರ ಮಾಡಿದ್ದಾನೆ. (ಮತ್ತಾ. 5:43-45) ಇದ್ರಿಂದ ಯೇಸು ನಮಗೆ ಏನು ಕಲಿಸ್ತಿದ್ದಾನೆ? ನಾವು ಕೂಡ ಭೇದಭಾವ ಮಾಡದೆ ಎಲ್ರನ್ನೂ ಪ್ರೀತಿಸಬೇಕು. ಕಣ್ಮನ ಸೆಳೆಯೋ ಸೂರ್ಯಾಸ್ತಮಾನ ಅಥವಾ ಮಳೆ ಹನಿಯನ್ನ ನೋಡಿದಾಗ ಯೆಹೋವ ಎಲ್ರಿಗೂ ತೋರಿಸ್ತಿರೋ ಪ್ರೀತಿ ನಮಗೆ ಕಾಣಿಸುತ್ತೆ. ನಾವು ಕೂಡ ಎಲ್ರಿಗೂ ಸಿಹಿಸುದ್ದಿ ಸಾರುವಾಗ ಆತನ ತರ ಪ್ರೀತಿ ತೋರಿಸ್ತೀವಿ.
11. ಪಕ್ಷಿಗಳನ್ನ ನೋಡಿದಾಗ ನಿಮಗೇನು ಅನಿಸುತ್ತೆ?
11 ನಾವು ಬದುಕೋಕೆ ಬೇಕಾಗಿರೋದನ್ನೆಲ್ಲ ಯೆಹೋವ ಕೊಡ್ತಾನೆ. ಬೆಟ್ಟದ ಭಾಷಣದಲ್ಲಿ ಯೇಸು “ಆಕಾಶದಲ್ಲಿ ಹಾರೋ ಪಕ್ಷಿಗಳನ್ನ ಚೆನ್ನಾಗಿ ನೋಡಿ. ಅವು ಬಿತ್ತಲ್ಲ, ಕೊಯ್ಯಲ್ಲ, ಗೋಡೌನಲ್ಲಿ ತುಂಬಿಡಲ್ಲ. ಹಾಗಿದ್ರೂ ಸ್ವರ್ಗದಲ್ಲಿರೋ ನಿಮ್ಮ ತಂದೆ ಅವುಗಳನ್ನ ನೋಡ್ಕೊಳ್ತಾನೆ” ಅಂತ ಹೇಳಿದನು. ಯೇಸು ಈ ಮಾತುಗಳನ್ನ ಹೇಳ್ತಿದ್ದಾಗ ಅಲ್ಲಿದ್ದ ಜನ್ರು, ಆಕಾಶದಲ್ಲಿ ಹಾರಾಡ್ತಿರೋ ಹಕ್ಕಿಗಳನ್ನ ನೋಡಿರ್ತಾರೆ. ಇದನ್ನ ಹೇಳಿದ ಮೇಲೆ ಯೇಸು “ನೀವು ಪಕ್ಷಿಗಳಿಗಿಂತ ಹೆಚ್ಚು ಅಮೂಲ್ಯ ಅಲ್ವಾ?” ಅಂತ ಕೇಳಿದನು. (ಮತ್ತಾ. 6:26) ಇದ್ರಿಂದ ಯೇಸು ಏನು ಕಲಿಸ್ತಿದ್ದಾನೆ? ನಾವು ಬದುಕೋಕೆ ಬೇಕಾಗಿರೋದನ್ನ ಯೆಹೋವ ಕೊಟ್ಟೇ ಕೊಡ್ತಾನೆ ಅಂತ ಅರ್ಥ ಮಾಡಿಸ್ತಿದ್ದಾನೆ. (ಮತ್ತಾ. 6:31, 32) ಯೇಸು ಕೊಟ್ಟ ಈ ಉದಾಹರಣೆ ಕಷ್ಟದಲ್ಲಿರೋ ನಮ್ಮ ಸಹೋದರ ಸಹೋದರಿಯರಿಗೆ ಧೈರ್ಯ ತುಂಬಿದೆ. ಸ್ಪೇನ್ನಲ್ಲಿರೋ ಒಬ್ಬ ಯುವ ಪಯನೀಯರ್ ಸಹೋದರಿಯ ಉದಾಹರಣೆ ನೋಡಿ. ಅವ್ರಿಗೆ ಉಳ್ಕೊಳ್ಳೋಕೆ ಒಂದು ಮನೆ ಬೇಕಿತ್ತು. ಎಷ್ಟು ಹುಡುಕಿದ್ರೂ ಅವ್ರಿಗೆ ಸಿಗಲಿಲ್ಲ. ಆದ್ರೆ ಒಂದಿನ ಪಕ್ಷಿಗಳು ಗುಂಪಾಗಿ ಕಾಳು ತಿಂತಾ ಇರೋದನ್ನ ನೋಡಿದ್ರು. ಆಗ ಅವ್ರಿಗೆ “ಯೆಹೋವ ಈ ಪಕ್ಷಿಗಳನ್ನೇ ಇಷ್ಟು ಚೆನ್ನಾಗಿ ನೋಡ್ಕೊಳ್ತಿದ್ದಾನೆ ಅಂದ್ಮೇಲೆ ನನ್ನನ್ನ ಇನ್ನೂ ಚೆನ್ನಾಗಿ ನೋಡ್ಕೊಳ್ತಾನೆ” ಅಂತ ಅನಿಸ್ತು. ಅವ್ರ ನಂಬಿಕೆ ಸುಳ್ಳಾಗಲಿಲ್ಲ. ಸ್ವಲ್ಪ ದಿನದಲ್ಲೇ ಅವ್ರಿಗೆ ಮನೆ ಸಿಕ್ತು.
12. ಮತ್ತಾಯ 10:29-31ರಲ್ಲಿ ಹೇಳಿರೋ ತರ ಗುಬ್ಬಿಗಳಿಂದ ಯೆಹೋವನ ಬಗ್ಗೆ ನಾವೇನು ಕಲಿತೀವಿ?
12 ಯೆಹೋವ ನಮ್ಮಲ್ಲಿ ಒಬ್ಬೊಬ್ರನ್ನೂ ಅಮೂಲ್ಯವಾಗಿ ನೋಡ್ತಾನೆ. ಯೇಸು ಅಪೊಸ್ತಲರನ್ನ ಸಿಹಿಸುದ್ದಿ ಸಾರೋಕೆ ಕಳಿಸಿದಾಗ ಜನ ನಿಮ್ಮನ್ನ ವಿರೋಧಿಸಿದ್ರೆ ಭಯಪಡಬೇಡಿ ಅಂತ ಧೈರ್ಯ ಹೇಳಿ ಕಳಿಸಿದನು. (ಮತ್ತಾಯ 10:29-31 ಓದಿ.) ಇದನ್ನ ಅರ್ಥ ಮಾಡಿಸೋಕೆ ಗುಬ್ಬಚ್ಚಿಯ ಉದಾಹರಣೆ ಹೇಳಿದನು. ಆ ಕಾಲದಲ್ಲಿ ಎಲ್ಲಾ ಕಡೆ ಗುಬ್ಬಿಗಳು ಇರ್ತಿದ್ವು. ಜನ್ರು ಅವಕ್ಕೆ ಅಷ್ಟೇನು ಬೆಲೆ ಕೊಡ್ತಿರಲಿಲ್ಲ. ಆದ್ರೆ ಯೇಸು ತನ್ನ ಶಿಷ್ಯರಿಗೆ “ನಿಮ್ಮ ತಂದೆಗೆ ಗೊತ್ತಾಗದೆ ಒಂದು ಗುಬ್ಬಿನೂ ನೆಲಕ್ಕೆ ಬೀಳಲ್ಲ . . . ನಿಮಗೆ ಈ ಚಿಕ್ಕ ಗುಬ್ಬಿಗಳಿಗಿಂತ ತುಂಬ ಬೆಲೆ ಇದೆ” ಅಂತ ಹೇಳಿದನು. ಹೀಗೆ ಯೇಸು ತನ್ನ ಶಿಷ್ಯರಿಗೆ ಯೆಹೋವ ಒಬ್ಬೊಬ್ರನ್ನೂ ತುಂಬ ಪ್ರೀತಿಸ್ತಾನೆ ಅನ್ನೋದನ್ನ ಅರ್ಥ ಮಾಡಿಸಿದನು. ಹಾಗಾಗಿ ಶಿಷ್ಯರು ವಿರೋಧ ಬಂದಾಗ ಹೆದರಿಕೊಳ್ಳೋ ಅವಶ್ಯಕತೆ ಇರಲಿಲ್ಲ. ಆ ಶಿಷ್ಯರು ಹಳ್ಳಿಗಳಿಗೆ, ಪಟ್ಟಣಗಳಿಗೆ ಹೋಗಿ ಸಿಹಿಸುದ್ದಿ ಸಾರುತ್ತಾ ಇದ್ದಾಗ ಎಷ್ಟೋ ಗುಬ್ಬಿಗಳನ್ನ ನೋಡಿರ್ತಾರೆ. ಆಗೆಲ್ಲಾ ಯೇಸು ಹೇಳಿದ ಮಾತು ಅವ್ರ ನೆನಪಿಗೆ ಬಂದಿರುತ್ತೆ. ನೀವೂ ಇವತ್ತು ಇಂಥ ಚಿಕ್ಕಚಿಕ್ಕ ಪಕ್ಷಿಗಳನ್ನ ನೋಡಿದಾಗ ನಿಮ್ಮ ನೆನಪಿಗೆ ಏನು ಬರಬೇಕು? “ನಿಮಗೆ ಈ ಚಿಕ್ಕ ಗುಬ್ಬಿಗಳಿಗಿಂತ ತುಂಬ ಬೆಲೆ ಇದೆ” ಅಂತ ಯೇಸು ಹೇಳಿದ ಮಾತು ನಿಮ್ಮ ನೆನಪಿಗೆ ಬರಬೇಕು. ಆಗ ಎಂಥ ವಿರೋಧ ಹಿಂಸೆ ಬಂದ್ರೂ ನೀವು ಭಯಪಡಲ್ಲ.—ಕೀರ್ತ. 118:6.
ಸೃಷ್ಟಿ ನೋಡಿ ಯೆಹೋವನ ಬಗ್ಗೆ ಇನ್ನೂ ಜಾಸ್ತಿ ಕಲಿಯೋದು ಹೇಗೆ?
13. ಸೃಷ್ಟಿಯಿಂದ ಕಲಿಯೋಕೆ ನಾವೇನು ಮಾಡಬೇಕು?
13 ಸೃಷ್ಟಿಯಿಂದ ನಾವು ಯೆಹೋವನ ಬಗ್ಗೆ ಇನ್ನೂ ತುಂಬ ವಿಷ್ಯಗಳನ್ನ ಕಲಿಬಹುದು. ಅದಕ್ಕಾಗಿ ನಾವೇನು ಮಾಡಬೇಕು? ಮೊದಲು, ನಾವು ಈ ಸೃಷ್ಟಿಯನ್ನ ಗಮನಿಸೋಕೆ ಸಮಯ ಮಾಡ್ಕೊಬೇಕು. ಆಮೇಲೆ ಅದು ಯೆಹೋವನ ಬಗ್ಗೆ ಏನು ಕಲಿಸುತ್ತೆ ಅಂತ ಯೋಚ್ನೆ ಮಾಡಬೇಕು. ಇದನ್ನ ಮಾಡೋಕೆ ನಮಗೆ ಸ್ವಲ್ಪ ಕಷ್ಟ ಆಗಬಹುದು. ಕ್ಯಾಮರೂನ್ನಲ್ಲಿರೋ ಸಹೋದರಿ ಜೆರಾಲ್ಡಿನ್ ಹೇಳಿದ್ದು, “ನಾನು ಚಿಕ್ಕವಯಸ್ಸಿಂದನೂ ಸಿಟಿಯಲ್ಲೇ ಬೆಳೆದೆ. ಹಾಗಾಗಿ ಪ್ರಕೃತಿ ಸೌಂದರ್ಯನ ನೋಡೋ ಅವಕಾಶಗಳು ಅಷ್ಟಾಗಿ ನನಗೆ ಸಿಗಲಿಲ್ಲ. ಹಾಗಾಗಿ ನಾನು ತುಂಬ ಪ್ರಯತ್ನ ಮಾಡಬೇಕಿತ್ತು.” ಹಿರಿಯರಾಗಿ ಸೇವೆ ಮಾಡ್ತಿರೋ ಸಹೋದರ ಅಲ್ಫಾನ್ಸೋ ಏನು ಹೇಳ್ತಾರೆ ನೋಡಿ: “ಸೃಷ್ಟಿನ ನೋಡೋಕೆ ಅದ್ರ ಬಗ್ಗೆ ಯೋಚ್ನೆ ಮಾಡ್ತಾ ಯೆಹೋವನ ಬಗ್ಗೆ ತಿಳ್ಕೊಳ್ಳೋಕೆ ನಾನು ಸಮಯ ಮಾಡ್ಕೊಬೇಕು. ಅದಕ್ಕೆ ನಾನು ಶೆಡ್ಯೂಲ್ ಮಾಡ್ಕೊಬೇಕು ಅಂತ ನಂಗೆ ಗೊತ್ತಾಯ್ತು.”
14. ಸೃಷ್ಟಿ ಬಗ್ಗೆ ಯೋಚ್ನೆ ಮಾಡಿದಾಗ ದಾವೀದ ಏನು ಕಲಿತ?
14 ಯೆಹೋವ ಮಾಡಿರೋ ಸೃಷ್ಟಿ ಬಗ್ಗೆ ದಾವೀದ ತುಂಬ ಯೋಚಿಸಿದ. “ನೀನು ಸೃಷ್ಟಿಸಿರೋ ಆಕಾಶವನ್ನ, ನೀನು ರಚಿಸಿರೋ ಚಂದ್ರ ಮತ್ತು ನಕ್ಷತ್ರಗಳನ್ನ ನೋಡಿ, . . . ‘ಇವತ್ತು ಇದ್ದು ನಾಳೆ ಸಾಯೋ ಮನುಷ್ಯನನ್ನ ನೀನು ಯಾಕೆ ನೆನಪಿಸ್ಕೊಳ್ತೀಯ?’” ಅಂತ ಅವನು ಯೆಹೋವನಿಗೆ ಕೇಳಿದ. (ಕೀರ್ತ. 8:3, 4) ರಾತ್ರಿಯಲ್ಲಿ ದಾವೀದ ನಕ್ಷತ್ರಗಳನ್ನ ನೋಡಿದಾಗ ಯೆಹೋವ ಎಷ್ಟು ಶಕ್ತಿಶಾಲಿ ದೇವರು ಅಂತ ತಿಳ್ಕೊಂಡ. ಅಮ್ಮನ ಹೊಟ್ಟೆಯಲ್ಲಿ ತನ್ನನ್ನ ಎಷ್ಟು ಅದ್ಭುತವಾಗಿ ಸೃಷ್ಟಿ ಮಾಡಿದನು ಅಂತ ಯೋಚಿಸಿದಾಗ ಯೆಹೋವನಿಗೆ ಎಷ್ಟು ವಿವೇಕ ಇದೆ ಅಂತ ಅರ್ಥ ಮಾಡ್ಕೊಂಡ. ಅದ್ಕೆ ಆತನನ್ನ ಹಾಡಿ ಹೊಗಳಿದ.—ಕೀರ್ತ. 139:14-17.
15. ಯೆಹೋವ ಮಾಡಿರೋ ಸೃಷ್ಟಿಯಲ್ಲಿ ನಿಮಗೆ ಯಾವುದು ಇಷ್ಟ ಮತ್ತು ಯಾಕೆ? (ಕೀರ್ತನೆ 148:7-10)
15 ದಾವೀದನ ತರ ನಾವೂ ನಮ್ಮ ಸುತ್ತಮುತ್ತ ಇರೋ ಸೃಷ್ಟಿನ ನೋಡಿ ಯೆಹೋವನ ಗುಣಗಳ ಬಗ್ಗೆ ಚೆನ್ನಾಗಿ ಕಲಿಬಹುದು. ಉದಾಹರಣೆಗೆ ಸೂರ್ಯನ ಶಾಖ ನಮ್ಮ ಮೈಮೇಲೆ ಬಿದ್ದಾಗ ಯೆಹೋವನ ಶಕ್ತಿ ಎಷ್ಟಿದೆ ಅಂತ ನಮಗೆ ಗೊತ್ತಾಗುತ್ತೆ. (ಯೆರೆ. 31:35) ಒಂದು ಪಕ್ಷಿ ಗೂಡು ಕಟ್ಟೋದನ್ನ ನೋಡುವಾಗ ಅದ್ರಲ್ಲಿ ಯೆಹೋವನ ವಿವೇಕ ಕಾಣುತ್ತೆ. ಒಂದು ನಾಯಿಮರಿ ತನ್ನ ಬಾಲ ಕಚ್ಚೋಕೆ ಸುತ್ತುತ್ತಾ ಇರೋದನ್ನ ನೋಡಿದಾಗ ಯೆಹೋವ ದೇವರಿಗೆ ತಮಾಷೆನೂ ಇಷ್ಟ ಆಗುತ್ತೆ ಅಂತ ಗೊತ್ತಾಗುತ್ತೆ. ಅಮ್ಮ ತನ್ನ ಮಗುನ ಮುದ್ದು ಮಾಡೋದನ್ನ ನೋಡಿದಾಗ ಯೆಹೋವನ ಪ್ರೀತಿ ಎದ್ದುಕಾಣುತ್ತೆ. ಹೀಗೆ ಚಿಕ್ಕಚಿಕ್ಕ ವಿಷ್ಯಗಳಲ್ಲೂ ನಾವು ಯೆಹೋವನ ಗುಣಗಳ ಬಗ್ಗೆ ತಿಳ್ಕೊಬಹುದು. ಅದನ್ನ ತಿಳ್ಕೊಳ್ಳೋಕೆ ಬೇರೆಲ್ಲೋ ದೂರ ಹೋಗಬೇಕಾಗಿಲ್ಲ. ನಮ್ಮ ಸುತ್ತಮುತ್ತ ನೋಡಿದ್ರೇ ಸಾಕು. ಈ ಎಲ್ಲಾ ಸೃಷ್ಟಿಗಳು ಯೆಹೋವನನ್ನು ಹಾಡಿ ಹೊಗಳುತ್ತೆ.—ಕೀರ್ತನೆ 148:7-10 ಓದಿ.
16. ಇನ್ಮುಂದೆ ನೀವೇನು ಮಾಡಬೇಕು ಅಂದ್ಕೊಡಿದ್ದೀರಾ?
16 ಯೆಹೋವ ದೇವರಲ್ಲಿರೋ ಜ್ಞಾನ, ವಿವೇಕಕ್ಕೆ ಮಿತಿನೇ ಇಲ್ಲ. ಆತನಷ್ಟು ಪ್ರೀತಿ, ಕಾಳಜಿಯನ್ನ ಯಾರಿಂದನೂ ತೋರಿಸೋಕಾಗಲ್ಲ. ಆತನು ತುಂಬ ಶಕ್ತಿಶಾಲಿ ದೇವರು. ಒಬ್ಬ ಒಳ್ಳೇ ಕಲೆಗಾರ. ಇದಕ್ಕೆ ನಮ್ಮ ಸುತ್ತಮುತ್ತ ಇರೋ ಸೃಷ್ಟಿನೇ ಸಾಕ್ಷಿ. ಹಾಗಾಗಿ ಆ ಸೃಷ್ಟಿಯನ್ನ ನೋಡೋಕೆ, ಅದ್ರಿಂದ ಯೆಹೋವನ ಬಗ್ಗೆ ಕಲಿಯೋಕೆ ನಾವು ದಿನಾ ಸಮಯ ಮಾಡ್ಕೊಳ್ಳೋಣ. ಇದ್ರಿಂದ ನಾವು ಯೆಹೋವನಿಗೆ ಹತ್ರ ಆಗ್ತೀವಿ. (ಯಾಕೋ. 4:8) ಇದನ್ನ ನಾವಷ್ಟೇ ಅಲ್ಲ, ನಮ್ಮ ಮಕ್ಕಳಿಗೂ ಕಲಿಸಬೇಕು. ಅದಕ್ಕೆ ಏನು ಮಾಡಬೇಕು ಅಂತ ಮುಂದಿನ ಲೇಖನದಲ್ಲಿ ನೋಡೋಣ.
ಗೀತೆ 110 ದೇವರ ಅದ್ಭುತಕಾರ್ಯಗಳು
a ಯೆಹೋವ ಮಾಡಿರೋ ಸೃಷ್ಟಿನ ನೋಡಿದಾಗ ನಮ್ಮ ಮೈ ಜುಮ್ ಅನ್ನುತ್ತೆ. ಮೃದುವಾದ ಹೂವಿಂದ ಹಿಡಿದು ಬೆಂಕಿ ಚೆಂಡಿನ ತರ ಇರೋ ಸೂರ್ಯನ ತನಕ ಎಲ್ಲಾನೂ ಯೆಹೋವನೇ ಸೃಷ್ಟಿ ಮಾಡಿದ್ದು. ಈ ಪ್ರಕೃತಿ ಸೌಂದರ್ಯನ ನೋಡಿದಾಗ ನಾವು ಬೆರಗಾಗಿ ಹೋಗ್ತೀವಿ. ಈ ಸೃಷ್ಟಿಗಳು ಯೆಹೋವನ ಬಗ್ಗೆ ಎಷ್ಟೋ ವಿಷ್ಯಗಳನ್ನ ಕಲಿಸ್ಕೊಡುತ್ತೆ. ಹಾಗಾಗಿ ಸೃಷ್ಟಿ ಬಗ್ಗೆ ತಿಳ್ಕೊಳ್ಳೋಕೆ ನಾವ್ಯಾಕೆ ಸಮಯ ಮಾಡ್ಕೊಬೇಕು ಮತ್ತು ಇದ್ರಿಂದ ನಾವು ಯೆಹೋವನಿಗೆ ಹೇಗೆ ಹತ್ರ ಆಗ್ತೀವಿ ಅಂತ ಈ ಲೇಖನದಲ್ಲಿ ನೋಡೋಣ.