ಪಾಠ 55
ಯೆಹೋವನ ದೂತನು ಹಿಜ್ಕೀಯನನ್ನು ಕಾಪಾಡಿದ
ಇಸ್ರಾಯೇಲ್ ರಾಜ್ಯದ ಹತ್ತು ಕುಲಗಳು ಅಶ್ಶೂರರ ಆಳ್ವಿಕೆಯ ಕೆಳಗಿತ್ತು. ಅಶ್ಶೂರದ ರಾಜ ಸನ್ಹೇರೀಬನಿಗೆ ಯೆಹೂದದ ಎರಡು ಕುಲಗಳನ್ನು ತನ್ನದಾಗಿಸಿಕೊಳ್ಳುವ ಬಯಕೆಯಿತ್ತು. ಹಾಗಾಗಿ ಯೆಹೂದ ರಾಜ್ಯದ ಒಂದೊಂದೇ ಪಟ್ಟಣಗಳನ್ನು ವಶಪಡಿಸಿಕೊಳ್ಳಲು ಆರಂಭಿಸಿದ. ಅದರಲ್ಲೂ ಅವನ ಮುಖ್ಯ ಗುರಿ ಯೆರೂಸಲೇಮ್ ಆಗಿತ್ತು. ಆದರೆ ಯೆರೂಸಲೇಮನ್ನು ರಕ್ಷಿಸುತ್ತಿರುವುದು ಯೆಹೋವನೇ ಎಂಬ ವಿಷಯ ಸನ್ಹೇರೀಬನಿಗೆ ಗೊತ್ತಿರಲಿಲ್ಲ.
ಯೆಹೂದದ ರಾಜ ಹಿಜ್ಕೀಯ ಯೆರೂಸಲೇಮನ್ನು ಉಳಿಸಿಕೊಳ್ಳಲು ಸನ್ಹೇರೀಬನಿಗೆ ತುಂಬ ಹಣ ಕೊಟ್ಟ. ಆದರೆ ಸನ್ಹೇರೀಬ ಹಣ ತೆಗೆದುಕೊಂಡ ಮೇಲೂ ಯೆರೂಸಲೇಮನ್ನು ಆಕ್ರಮಿಸಲು ತನ್ನ ಬಲಾಢ್ಯ ಸೈನ್ಯವನ್ನು ಕಳುಹಿಸಿದ. ಅಶ್ಶೂರ ಸೈನ್ಯ ಹತ್ತಿರ ಹತ್ತಿರ ಬರುತ್ತಿದ್ದಂತೆ ಯೆರೂಸಲೇಮಿನ ಜನರು ಭಯಭೀತರಾದರು. ಆಗ ಹಿಜ್ಕೀಯ ಅವರಿಗೆ ‘ಹೆದರಬೇಡಿ. ಅಶ್ಶೂರರು ಬಲಶಾಲಿಗಳೇ ಇರಬಹುದು, ಆದರೆ ಯೆಹೋವನು ನಮ್ಮನ್ನು ಅವರಿಗಿಂತ ಬಲಶಾಲಿಗಳನ್ನಾಗಿ ಮಾಡುವನು’ ಅಂದನು.
ಜನರನ್ನು ಗೇಲಿ ಮಾಡಲು ಸನ್ಹೇರೀಬ ತನ್ನ ಸಂದೇಶವಾಹಕ ರಬ್ಷಾಕೆಯನ್ನು ಯೆರೂಸಲೇಮಿಗೆ ಕಳುಹಿಸಿದ. ಅವನು ಪಟ್ಟಣದ ಹೊರಗೆ ನಿಂತು ‘ನಿಮಗೆ ಸಹಾಯ ಮಾಡೋದಕ್ಕೆ ಯೆಹೋವನ ಕೈಯಲ್ಲಿ ಆಗಲ್ಲ. ಹಿಜ್ಕೀಯನ ಮಾತು ಕೇಳಿ ಮೋಸ ಹೋಗಬೇಡಿ. ನಿಮ್ಮನ್ನು ನಮ್ಮಿಂದ ಕಾಪಾಡೋಕೆ ಯಾವ ದೇವರಿಗೂ ಆಗಲ್ಲ’ ಎಂದು ಕೂಗಿ ಹೇಳಿದ.
ಹಿಜ್ಕೀಯ ತಾನೇನು ಮಾಡಬೇಕು ಎಂದು ಯೆಹೋವನ ಹತ್ತಿರ ಕೇಳಿದ. ಆಗ ಯೆಹೋವನು ‘ರಬ್ಷಾಕೆಯ ಮಾತುಗಳಿಗೆ ಭಯಪಡಬೇಡಿ. ಸನ್ಹೇರೀಬ ಯೆರೂಸಲೇಮನ್ನು ವಶಪಡಿಸಿಕೊಳ್ಳುವುದಿಲ್ಲ’ ಅಂದನು. ಆಮೇಲೆ ಸನ್ಹೇರಿಬ ಹಿಜ್ಕೀಯನಿಗೆ ಕೆಲವು ಪತ್ರಗಳನ್ನು ಕಳುಹಿಸಿದ. ಅದರಲ್ಲಿ ‘ಯೆಹೋವನಿಗೆ ನಿಮ್ಮನ್ನು ಕಾಪಾಡಲು ಆಗಲ್ಲ. ನಮಗೆ ಶರಣಾಗಿ’ ಎಂದು ಬರೆಯಲಾಗಿತ್ತು. ಹಿಜ್ಕೀಯ ಯೆಹೋವನಿಗೆ ‘ಯೆಹೋವನೇ ದಯವಿಟ್ಟು ನಮ್ಮನ್ನು ಕಾಪಾಡು. ಆಗ ನೀನೊಬ್ಬನೇ ಸತ್ಯ ದೇವರು ಎಂದು ಎಲ್ಲರೂ ತಿಳಿದುಕೊಳ್ಳುವರು’ ಎಂದು ಪ್ರಾರ್ಥಿಸಿದನು. ಅದಕ್ಕೆ ಯೆಹೋವನು ‘ಅಶ್ಶೂರರ ರಾಜ ಯೆರೂಸಲೇಮಿಗೆ ಬರುವುದಿಲ್ಲ. ನಾನು ನನ್ನ ಪಟ್ಟಣವನ್ನು ಕಾಪಾಡುತ್ತೇನೆ’ ಎಂದನು.
ಸನ್ಹೇರೀಬ ಯೆರೂಸಲೇಮ್ ಖಂಡಿತ ತನ್ನ ಕೈವಶವಾಗುತ್ತದೆ ಎಂದು ನೆನಸಿದ್ದ. ಅಶ್ಶೂರ ಸೈನಿಕರು ಯೆರೂಸಲೇಮಿನ ಹೊರಗೆ ಪಾಳೆಯ ಹಾಕಿದ್ದರು. ಅದೇ ರಾತ್ರಿ ಯೆಹೋವನು ಒಬ್ಬ ದೂತನನ್ನು ಅಲ್ಲಿಗೆ ಕಳುಹಿಸಿದ. ಆ ದೂತನು 1,85,000 ಮಂದಿ ಸೈನಿಕರನ್ನು ಕೊಂದನು! ರಾಜ ಸನ್ಹೇರೀಬ ತನ್ನ ಬಲಿಷ್ಠ ಸೈನ್ಯವನ್ನು ಕಳೆದುಕೊಂಡ. ಸೋತು ಮನೆಗೆ ಹೋದ. ಕೊಟ್ಟ ಮಾತಿನಂತೆ ಯೆಹೋವನು ಹಿಜ್ಕೀಯನನ್ನು ಮತ್ತು ಯೆರೂಸಲೇಮನ್ನು ರಕ್ಷಿಸಿದ. ಒಂದುವೇಳೆ ನೀವು ಯೆರೂಸಲೇಮಿನಲ್ಲಿ ಇದ್ದಿದ್ದರೆ ಯೆಹೋವನ ಮೇಲೆ ಭರವಸೆ ಇಡುತ್ತಿದ್ದೀರಾ?
“ಯೆಹೋವನ ಭಯಭಕ್ತಿಯುಳ್ಳವರ ಸುತ್ತಲು ಆತನ ದೂತನು ದಂಡಿಳಿಸಿ ಕಾವಲಾಗಿದ್ದು ಕಾಪಾಡುತ್ತಾನೆ.”—ಕೀರ್ತನೆ 34:7