ಕೆಲಸದ ವಿಷಯದಲ್ಲಿ ಸಮತೂಕ ನೋಟವನ್ನು ಬೆಳೆಸಿಕೊಳ್ಳುವ ವಿಧ
ಜಾಗತಿಕ ಮಾರುಕಟ್ಟೆಗಳು, ತೀವ್ರ ಪೈಪೋಟಿ, ಮತ್ತು ದೊಡ್ಡ ಪ್ರಮಾಣದ ಉತ್ಪಾದನೆಯಿಂದ ಕೂಡಿರುವ ಇಂದಿನ ಹೆಚ್ಚು ಒತ್ತಡಭರಿತ ಲೋಕದಲ್ಲಿ, ಅನೇಕ ಜನರು ಪ್ರತಿನಿತ್ಯ ಕೆಲಸಕ್ಕೆ ಹೋಗಲು ಇಷ್ಟಪಡುವುದಿಲ್ಲ. ಆದರೂ, ನಾವು ನಮ್ಮ ಕೆಲಸದಲ್ಲಿ ಆನಂದಿಸಬೇಕು. ಏಕೆ? ಏಕೆಂದರೆ ನಾವು ದೇವರ ಸ್ವರೂಪದಲ್ಲಿ ಉಂಟುಮಾಡಲ್ಪಟ್ಟಿದ್ದೇವೆ ಮತ್ತು ದೇವರಾದರೋ ತನ್ನ ಕೆಲಸದಲ್ಲಿ ಆನಂದವನ್ನು ಕಂಡುಕೊಳ್ಳುತ್ತಾನೆ. ಉದಾಹರಣೆಗೆ, ಸೃಷ್ಟಿಯ ಆರು “ದಿನಗಳಲ್ಲಿ” ಅಥವಾ ದೀರ್ಘ ಕಾಲಾವಧಿಯ ಅಂತ್ಯದಲ್ಲಿ ತಾನು ಏನು ಮಾಡಿದ್ದನೋ ಅದನ್ನು ಪುನಃ ಪರಿಶೀಲಿಸಿದಾಗ, “ದೇವರು ತಾನು ಉಂಟುಮಾಡಿದ್ದನ್ನೆಲ್ಲಾ ನೋಡಲಾಗಿ ಅದು ಬಹು ಒಳ್ಳೇದಾಗಿತ್ತು” ಎಂದು ಆದಿಕಾಂಡ 1:31 ತಿಳಿಸುತ್ತದೆ.
ಯೆಹೋವನಿಗೆ ಕೆಲಸದ ವಿಷಯದಲ್ಲಿರುವ ಪ್ರೀತಿಯ ಕಾರಣದಿಂದಾಗಿಯೇ ಆತನು “ಸಂತೋಷಭರಿತ ದೇವರು” ಎಂದು ಕರೆಯಲ್ಪಟ್ಟಿದ್ದಾನೆ ಎಂಬುದರಲ್ಲಿ ಸಂಶಯವಿಲ್ಲ. (1 ತಿಮೊಥೆಯ 1:11, NW) ಹೀಗಿರುವಾಗ, ನಾವು ಆತನನ್ನು ಎಷ್ಟು ಹೆಚ್ಚಾಗಿ ಅನುಕರಿಸುತ್ತೇವೋ ನಮ್ಮ ಸಂತೋಷವೂ ಅಷ್ಟೇ ಹೆಚ್ಚಾಗುವುದು ಎಂಬುದು ತರ್ಕಬದ್ಧವಾದ ಸಂಗತಿಯಾಗಿಲ್ಲವೋ? ಈ ವಿಷಯದಲ್ಲಿ ಪುರಾತನ ಇಸ್ರಾಯೇಲಿನ ಅರಸನೂ ಅತ್ಯುತ್ತಮ ಕಟ್ಟಡನಿರ್ಮಾಪಕನೂ ವ್ಯವಸ್ಥಾಪಕನೂ ಆಗಿದ್ದ ಸೊಲೊಮೋನನು ಬರೆದುದು: “ಇದಲ್ಲದೆ ಪ್ರತಿಯೊಬ್ಬನು ಅನ್ನಪಾನಗಳನ್ನು ತೆಗೆದುಕೊಂಡು ತನ್ನ ನಾನಾ ಪ್ರಯಾಸಗಳಲ್ಲಿಯೂ ಸುಖವನ್ನನುಭವಿಸುವದು ದೇವರ ಅನುಗ್ರಹವೇ.”—ಪ್ರಸಂಗಿ 3:13.
ಇಂದಿನ ಕೆಲಸದ ಸ್ಥಳಗಳಲ್ಲಿ ವಿಷಯಗಳು ತ್ವರಿತಗತಿಯಲ್ಲಿ ಬದಲಾಗುತ್ತಿರುವುದರಿಂದ, ಕೆಲಸದ ಕುರಿತು ಒಂದು ಸಮತೂಕವಾದ ಹಾಗೂ ಹಿತಕರ ನೋಟವನ್ನು ಬೆಳೆಸಿಕೊಳ್ಳುವುದು ತುಂಬ ಕಷ್ಟಕರ. ಆದರೆ ತನ್ನ ಪ್ರೀತಿಯ ಮಾರ್ಗದರ್ಶನವನ್ನು ಅನುಸರಿಸುವವರನ್ನು ಯೆಹೋವ ದೇವರು ಆಶೀರ್ವದಿಸುತ್ತಾನೆ. (ಕೀರ್ತನೆ 119:99, 100) ಅಂಥವರು ಅಮೂಲ್ಯರಾದ ಹಾಗೂ ಭರವಸಾರ್ಹ ಕೆಲಸಗಾರರಾಗುತ್ತಾರೆ ಮತ್ತು ಈ ಕಾರಣದಿಂದ ಅವರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುವ ಸಾಧ್ಯತೆಗಳು ವಿರಳವಾಗಿರುತ್ತವೆ. ಅವರು ತಮ್ಮ ಜೀವನ ಹಾಗೂ ಕೆಲಸವನ್ನು ಕೇವಲ ಪ್ರಾಪಂಚಿಕ ದೃಷ್ಟಿಕೋನದಿಂದ ಅಲ್ಲ, ಬದಲಾಗಿ ಆಧ್ಯಾತ್ಮಿಕ ದೃಷ್ಟಿಕೋನದಿಂದಲೂ ಪರಿಗಣಿಸಲು ಕಲಿಯುತ್ತಾರೆ. ಇದು ಅವರು ಜೀವನದಲ್ಲಿ ಜವಾಬ್ದಾರಿಯುತ ನಿರ್ಣಯಗಳನ್ನು ಮಾಡುವಂತೆ ಹಾಗೂ ತಮ್ಮ ಸಂತೋಷ ಹಾಗೂ ಸುರಕ್ಷೆಯು ತಮ್ಮ ಉದ್ಯೋಗಕ್ಕೆ ಮಾತ್ರ ಸೀಮಿತವಾಗಿಲ್ಲ ಅಥವಾ ಅವಿಶ್ವಾಸಾರ್ಹ ಉದ್ಯೋಗ ಮಾರುಕಟ್ಟೆಯ ಮೇಲೆ ಕೇಂದ್ರೀಕೃತವಾಗಿಲ್ಲ ಎಂಬುದನ್ನು ಮನಗಾಣುವಂತೆ ಮಾಡುತ್ತದೆ. (ಮತ್ತಾಯ 6:31-33; 1 ಕೊರಿಂಥ 2:14, 15) ಇದು ನಿಜವಾಗಿಯೂ ಸಮತೂಕವಾಗಿರುವ ಕೆಲಸದ ರೀತಿನೀತಿಗಳನ್ನು ಬೆಳೆಸಿಕೊಳ್ಳುವಂತೆ ಅವರಿಗೆ ಸಹಾಯಮಾಡುತ್ತದೆ.
ದೇವರಿಗೆ ಮೆಚ್ಚಿಕೆಯಾಗಿರುವ ಕೆಲಸದ ರೀತಿನೀತಿಗಳನ್ನು ಬೆಳೆಸಿಕೊಳ್ಳಿರಿ
ಕೆಲವು ಜನರು ಕೆಲಸದ ಗೀಳು ಹಿಡಿದವರಾಗಿದ್ದಾರೆ, ಅಂದರೆ ತಮ್ಮ ಉದ್ಯೋಗಕ್ಕೆ ಎಲ್ಲದಕ್ಕಿಂತಲೂ ಅತ್ಯಧಿಕವಾದ ಆದ್ಯತೆಯನ್ನು ನೀಡುವವರಾಗಿದ್ದಾರೆ. ಇತರರು, ಕೆಲಸ ಮುಗಿಸಿ ಮನೆಗೆ ಹೋಗಲಿಕ್ಕಾಗಿ ತಮ್ಮ ಕೆಲಸದ ದಿನವು ಕೊನೆಗೊಳ್ಳುವುದಕ್ಕಾಗಿಯೇ ಆತುರರಾಗಿ ಕಾಯುತ್ತಿರುತ್ತಾರೆ. ಹಾಗಾದರೆ ಯಾವುದು ಸಮತೂಕ ನೋಟವಾಗಿದೆ? ಬೈಬಲು ಉತ್ತರಿಸುವುದು: “ಗಾಳಿಯನ್ನು ಹಿಂದಟ್ಟುವ ವ್ಯರ್ಥ ಪ್ರಯಾಸದ ಬೊಗಸೆಗಿಂತಲೂ ನೆಮ್ಮದಿಯ ಸೇರೆಯೇ ಲೇಸು.” (ಪ್ರಸಂಗಿ 4:6) ವಾಸ್ತವದಲ್ಲಿ, ತುಂಬ ಕಷ್ಟಪಟ್ಟು ಕೆಲಸಮಾಡುವುದು ಅಥವಾ ದೀರ್ಘ ಸಮಯದ ವರೆಗೆ ಕೆಲಸಮಾಡುವುದು ಪ್ರತಿಫಲದಾಯಕವಾಗಿರುವುದಿಲ್ಲ—ಅದು “ಗಾಳಿಯನ್ನು ಹಿಂದಟ್ಟುವ” ಹಾಗೆ ವ್ಯರ್ಥವಾಗಿದೆ. ಹಾಗೇಕೆ? ಏಕೆಂದರೆ ಹೀಗೆ ಮಾಡುವುದರಿಂದ ನಾವು ನಮ್ಮ ಅತಿ ಹೆಚ್ಚಿನ ಸಂತೋಷಕ್ಕೆ ಕಾರಣವಾಗಿರುವ ಅನೇಕ ವಿಷಯಗಳಿಗೆ, ಅಂದರೆ ಕುಟುಂಬ ಹಾಗೂ ಸ್ನೇಹಿತರೊಂದಿಗಿನ ನಮ್ಮ ಸಂಬಂಧ, ನಮ್ಮ ಆತ್ಮಿಕತೆ, ನಮ್ಮ ಆರೋಗ್ಯ, ಮತ್ತು ನಮ್ಮ ದೀರ್ಘಾಯುಷ್ಯಕ್ಕೂ ಹಾನಿಯನ್ನು ತಂದೊಡ್ಡಬಹುದು. (1 ತಿಮೊಥೆಯ 6:9, 10) ಸಮತೂಕ ನೋಟವೇನೆಂದರೆ, ವಿಪರೀತವಾದ ಕೆಲಸದ ಹೊರೆಯೊಂದಿಗೆ ಆಂತರಿಕ ಹೋರಾಟ ಹಾಗೂ ದುರವಸ್ಥೆಯಿಂದ ಕುಗ್ಗಿಹೋಗುವುದಕ್ಕೆ ಬದಲಾಗಿ, ಸ್ವಲ್ಪ ಮಟ್ಟಿಗಿನ ಆರ್ಥಿಕ ಸಂಪನ್ಮೂಲಗಳಲ್ಲೇ ಸಂತೃಪ್ತರಾಗಿದ್ದುಕೊಂಡು, ಸ್ವಲ್ಪ ಪ್ರಮಾಣದ ಶಾಂತಿಯನ್ನು ಅನುಭವಿಸುವುದೇ.
ಅಂಥ ಸಮತೂಕ ನೋಟವನ್ನು ಬೈಬಲು ಉತ್ತೇಜಿಸುತ್ತದಾದರೂ ಅದು ಮೈಗಳ್ಳತನವನ್ನು ಸಮ್ಮತಿಸುವುದಿಲ್ಲ. (ಜ್ಞಾನೋಕ್ತಿ 20:4) ಮೈಗಳ್ಳತನವು ಸ್ವಗೌರವವನ್ನು ಮತ್ತು ಇತರರಿಗೆ ನಮ್ಮ ಬಗ್ಗೆ ಇರಬಹುದಾದ ಗೌರವವನ್ನು ಕ್ರಮೇಣವಾಗಿ ಹಾಳುಮಾಡುತ್ತದೆ. ಅದಕ್ಕಿಂತಲೂ ಕೆಟ್ಟ ಸಂಗತಿಯೇನೆಂದರೆ ಅದು ದೇವರೊಂದಿಗಿನ ನಮ್ಮ ಸಂಬಂಧಕ್ಕೆ ಹಾನಿಯನ್ನುಂಟುಮಾಡುತ್ತದೆ. ಒಬ್ಬ ವ್ಯಕ್ತಿಯು ಕೆಲಸಮಾಡಲು ನಿರಾಕರಿಸುವುದಾದರೆ ಅವನು ಇತರರ ಖರ್ಚಿನಲ್ಲಿ ಊಟಮಾಡಲು ಅನರ್ಹನಾಗಿದ್ದಾನೆಂದು ಬೈಬಲು ಮುಚ್ಚುಮರೆಯಿಲ್ಲದೆ ತಿಳಿಸುತ್ತದೆ. (2 ಥೆಸಲೊನೀಕ 3:10) ಅದಕ್ಕೆ ಬದಲಾಗಿ, ಅವನು ತನ್ನ ಮಾರ್ಗಗಳನ್ನು ಬದಲಾಯಿಸಿ, ಕಷ್ಟಪಟ್ಟು ಕೆಲಸಮಾಡಬೇಕು. ಹೀಗೆ ತನ್ನನ್ನೂ ತನ್ನ ಮೇಲೆ ಅವಲಂಬಿಸಿರುವವರನ್ನೂ ಅವನು ಪೋಷಿಸಬೇಕು. ಕಷ್ಟಪಟ್ಟು ಕೆಲಸಮಾಡುವ ಮೂಲಕ ಅವನು ನಿಜವಾಗಿಯೂ ಅಗತ್ಯದಲ್ಲಿರುವವರಿಗೆ ಸಹಾಯಮಾಡಲು ಶಕ್ತನಾಗಿರುವನು ಮತ್ತು ಈ ರೀತಿಯ ರೂಢಿಯನ್ನು ದೇವರ ವಾಕ್ಯವು ಉತ್ತೇಜಿಸುತ್ತದೆ.—ಜ್ಞಾನೋಕ್ತಿ 21:25, 26; ಎಫೆಸ 4:28.
ಕೆಲಸವನ್ನು ಅಮೂಲ್ಯವಾಗಿ ಪರಿಗಣಿಸಲು ಬಾಲ್ಯದಿಂದಲೇ ತರಬೇತಿ
ಒಳ್ಳೇ ಕೆಲಸದ ಹವ್ಯಾಸಗಳು ಆಕಸ್ಮಿಕವಾಗಿ ಬರುವುದಿಲ್ಲ; ಅವುಗಳನ್ನು ಚಿಕ್ಕಪ್ರಾಯದಿಂದಲೇ ಕಲಿಯಬೇಕಾಗಿದೆ. ಆದುದರಿಂದ, ಬೈಬಲು ಹೆತ್ತವರಿಗೆ ಹೀಗೆ ಬುದ್ಧಿವಾದ ನೀಡುತ್ತದೆ: “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು [ಅಥವಾ ಹುಡುಗಿಯನ್ನು] ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು.” (ಜ್ಞಾನೋಕ್ತಿ 22:6) ಬುದ್ಧಿವಂತ ಹೆತ್ತವರು ಸ್ವತಃ ಕೆಲಸಮಾಡುವ ಮೂಲಕ ಒಂದು ಒಳ್ಳೇ ಮಾದರಿಯನ್ನಿಡುವುದರ ಜೊತೆಗೆ, ತಮ್ಮ ಚಿಕ್ಕ ಮಕ್ಕಳ ವಯಸ್ಸಿಗೆ ಸೂಕ್ತವಾದ ಕೆಲಸಗಳನ್ನು ಮನೆಯಲ್ಲಿ ವಹಿಸಿಕೊಡುವ ಮೂಲಕ ಅವರಿಗೆ ತರಬೇತಿಯನ್ನು ನೀಡಲು ಆರಂಭಿಸುತ್ತಾರೆ. ಮನೆಯಲ್ಲಿ ಕೆಲವೊಂದು ಚಿಕ್ಕಪುಟ್ಟ ಕೆಲಸಗಳನ್ನು ಮಾಡುವಂತೆ ಹೇಳುವಾಗ ಮಕ್ಕಳು ರೇಗಬಹುದಾದರೂ, ತಾವು ಕುಟುಂಬದ ಅಮೂಲ್ಯ ಸದಸ್ಯರಾಗಿದ್ದೇವೆಂಬುದನ್ನು ಅವರು ಕ್ರಮೇಣ ತಿಳಿದುಕೊಳ್ಳುವರು—ಅದರಲ್ಲೂ ವಿಶೇಷವಾಗಿ ತಂದೆ ಮತ್ತು ತಾಯಿಯರು, ಚೆನ್ನಾಗಿ ಮಾಡಲ್ಪಟ್ಟ ಒಂದು ಕೆಲಸಕ್ಕಾಗಿ ಮಕ್ಕಳನ್ನು ಪ್ರಶಂಸಿಸುವಾಗ ಅವರಿಗೆ ಹೀಗನಿಸುವುದು. ದುಃಖಕರ ಸಂಗತಿಯೇನೆಂದರೆ, ಬಹುಶಃ ತಪ್ಪಾದ ದಯೆಯಿಂದಾಗಿ ಕೆಲವು ಹೆತ್ತವರು ತಮ್ಮ ಮಕ್ಕಳಿಗಾಗಿ ಕಾರ್ಯತಃ ಎಲ್ಲಾ ಕೆಲಸಗಳನ್ನು ಮಾಡಿಬಿಡುತ್ತಾರೆ. ಅಂಥ ಹೆತ್ತವರು ಜ್ಞಾನೋಕ್ತಿ 29:21ರಲ್ಲಿರುವ ವಿಷಯವನ್ನು ಪರ್ಯಾಲೋಚಿಸತಕ್ಕದ್ದು. ಅದು ಹೀಗನ್ನುತ್ತದೆ: “ಆಳನ್ನು [ಅಥವಾ ಮಕ್ಕಳನ್ನು] ಚಿಕ್ಕತನದಿಂದ ಕೋಮಲವಾಗಿ ಸಾಕಿದರೆ ತರುವಾಯ ಅವನು ಎದುರುಬೀಳುವನು.”
ಜವಾಬ್ದಾರಿಯುತ ಹೆತ್ತವರು ತಮ್ಮ ಮಕ್ಕಳ ಶಾಲಾ ಕೆಲಸಗಳಲ್ಲೂ ತೀವ್ರ ಆಸಕ್ತಿಯನ್ನು ತೋರಿಸುತ್ತಾರೆ, ಮತ್ತು ಶಾಲೆಯಲ್ಲಿ ಚೆನ್ನಾಗಿ ಕಲಿಯುವಂತೆ ಹಾಗೂ ಕಷ್ಟಪಟ್ಟು ಓದುವಂತೆ ಉತ್ತೇಜಿಸುತ್ತಾರೆ. ಇದು ಮಕ್ಕಳಿಗೆ ಪ್ರಯೋಜನದಾಯಕವಾಗಿರುವುದು, ಏಕೆಂದರೆ ಮುಂದೆ ಅವರು ಐಹಿಕವಾಗಿ ಕೆಲಸಮಾಡಬೇಕಾದಾಗ ಇದು ಅವರಿಗೆ ಉಪಯುಕ್ತವಾಗುವುದು.
ಕೆಲಸದ ಆಯ್ಕೆಯಲ್ಲಿ ವಿವೇಕಿಗಳಾಗಿರಿ
ನಾವು ಯಾವ ರೀತಿಯ ಕೆಲಸವನ್ನು ಬೆನ್ನಟ್ಟಬೇಕು ಎಂಬುದನ್ನು ಬೈಬಲು ನಮಗೆ ಹೇಳದಿರುವುದಾದರೂ, ನಮ್ಮ ಆತ್ಮಿಕ ಪ್ರಗತಿ, ದೇವರ ಸೇವೆ, ಹಾಗೂ ಇನ್ನಿತರ ಪ್ರಮುಖ ಜವಾಬ್ದಾರಿಗಳನ್ನು ಅಪಾಯಕ್ಕೆ ಒಡ್ಡಬಾರದೆಂಬ ವಿಷಯದಲ್ಲಿ ಅದು ನಮಗೆ ಅತ್ಯುತ್ತಮ ನಿರ್ದೇಶನಗಳನ್ನು ನೀಡುತ್ತದೆ. ಉದಾಹರಣೆಗೆ, ಅಪೊಸ್ತಲ ಪೌಲನು ಬರೆದುದು: “ಸಮಯವು ಸಂಕೋಚವಾದದ್ದರಿಂದ . . . ಇನ್ನು ಮೇಲೆ ಲೋಕವನ್ನು ಅನುಭೋಗಿಸುವವರು ಅದನ್ನು ಪರಿಪೂರ್ಣವಾಗಿ ಅನುಭೋಗಿಸದವರಂತೆಯೂ ಇರಬೇಕು; ಯಾಕಂದರೆ ಈ ಪ್ರಪಂಚದ ತೋರಿಕೆಯು ಗತಿಸಿಹೋಗುತ್ತಾ ಅದೆ.” (1 ಕೊರಿಂಥ 7:29-31) ಸದ್ಯದ ವಿಷಯಗಳ ವ್ಯವಸ್ಥೆಯಲ್ಲಿ ಯಾವುದೂ ಶಾಶ್ವತವಾದದ್ದಲ್ಲ ಅಥವಾ ಸಂಪೂರ್ಣವಾಗಿ ಸ್ಥಿರವಾದದ್ದಲ್ಲ. ಇದಕ್ಕಾಗಿಯೇ ನಮ್ಮ ಎಲ್ಲಾ ಸಮಯ ಹಾಗೂ ಶಕ್ತಿಯನ್ನು ವಿನಿಯೋಗಿಸುವುದು, ನಮ್ಮ ಇಡೀ ಜೀವನದ ಉಳಿತಾಯ ಹಣವನ್ನು, ನೆರೆಹಾವಳಿಯಾಗುವಂಥ ಕ್ಷೇತ್ರವೊಂದರಲ್ಲಿ ಕಟ್ಟಲ್ಪಟ್ಟಿರುವ ಮನೆಗೆ ಬಂಡವಾಳ ಹೂಡುವುದಕ್ಕೆ ಸಮಾನವಾಗಿದೆ. ಇದೆಷ್ಟು ಮೂರ್ಖ ಕೃತ್ಯವಾಗಿರುತ್ತದೆ!
ಇತರ ಬೈಬಲ್ ಭಾಷಾಂತರಗಳು, “ಅದನ್ನು ಪರಿಪೂರ್ಣವಾಗಿ ಅನುಭೋಗಿಸದಿರುವುದು” ಎಂಬ ವಾಕ್ಸರಣಿಯನ್ನು, “ಅದರಲ್ಲಿ ಸಂಪೂರ್ಣವಾಗಿ ತಲ್ಲೀನರಾಗದಿರುವುದು” ಹಾಗೂ “ಅವುಗಳಲ್ಲೇ ಪೂರ್ಣವಾಗಿ ಮಗ್ನರಾಗದಿರುವುದು” ಎಂದು ಭಾಷಾಂತರಿಸುತ್ತವೆ. (ದ ಜೆರೂಸಲೆಮ್ ಬೈಬಲ್; ಟುಡೇಸ್ ಇಂಗ್ಲಿಷ್ ವರ್ಷನ್) ಸದ್ಯದ ವ್ಯವಸ್ಥೆಗಾಗಿರುವ ಸಮಯವು “ಸಂಕೋಚ”ವಾಗಿದೆ ಮತ್ತು ಅದರಲ್ಲಿ ‘ತಲ್ಲೀನರಾಗಿರುವುದು’ ಅಥವಾ ‘ಪೂರ್ಣವಾಗಿ ಮಗ್ನರಾಗಿರುವುದು’ ಅನಿವಾರ್ಯವಾಗಿ ಆಶಾಭಂಗ ಹಾಗೂ ವಿಷಾದಕ್ಕೆ ನಡಿಸುವುದು ಎಂಬ ವಾಸ್ತವಾಂಶವನ್ನು ವಿವೇಕಿಗಳು ಎಂದೂ ಅಲಕ್ಷಿಸುವುದಿಲ್ಲ.—1 ಯೋಹಾನ 2:15-17.
‘ದೇವರು ನಿಮ್ಮನ್ನು ಎಂದಿಗೂ ತೊರೆಯುವುದಿಲ್ಲ’
ನಮ್ಮ ಆವಶ್ಯಕತೆಗಳೇನು ಎಂಬುದು ನಮಗಿಂತಲೂ ಹೆಚ್ಚಾಗಿ ಯೆಹೋವನಿಗೆ ಗೊತ್ತಿದೆ. ತನ್ನ ಉದ್ದೇಶದ ನೆರವೇರಿಕೆಯ ಕಾಲಪ್ರವಾಹದಲ್ಲಿ ನಾವೆಲ್ಲಿದ್ದೇವೆ ಎಂಬುದೂ ಆತನಿಗೆ ತಿಳಿದಿದೆ. ಆದುದರಿಂದ ಆತನು ನಮಗೆ ಹೀಗೆ ಜ್ಞಾಪಕ ಹುಟ್ಟಿಸುತ್ತಾನೆ: “ದ್ರವ್ಯಾಶೆಯಿಲ್ಲದವರಾಗಿರಿ; ನಿಮಗಿರುವವುಗಳಲ್ಲಿ ತೃಪ್ತರಾಗಿರಿ; ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ, ಎಂದಿಗೂ ತೊರೆಯುವದಿಲ್ಲವೆಂದು ದೇವರು ತಾನೇ ಹೇಳಿದ್ದಾನೆ.” (ಇಬ್ರಿಯ 13:5) ಈ ಮಾತುಗಳು ಎಷ್ಟು ಸಾಂತ್ವನದಾಯಕವಾಗಿವೆ! ತನ್ನ ಜನರಿಗಾಗಿ ದೇವರಿಗಿರುವ ಪ್ರೀತಿಯ ಚಿಂತೆಯನ್ನು ಅನುಕರಿಸುತ್ತಾ, ತನ್ನ ಪ್ರಸಿದ್ಧ ಪರ್ವತ ಪ್ರಸಂಗದ ಬಹುತೇಕ ಭಾಗವನ್ನು ಯೇಸು, ಕೆಲಸ ಹಾಗೂ ಪ್ರಾಪಂಚಿಕ ವಿಷಯಗಳ ಕುರಿತಾದ ಯೋಗ್ಯ ನೋಟವನ್ನು ತನ್ನ ಶಿಷ್ಯರಿಗೆ ಕಲಿಸಲಿಕ್ಕಾಗಿ ವಿನಿಯೋಗಿಸಿದನು.—ಮತ್ತಾಯ 6:19-33.
ಯೆಹೋವನ ಸಾಕ್ಷಿಗಳು ಈ ಬೋಧನೆಗಳನ್ನು ಕಾರ್ಯರೂಪಕ್ಕೆ ಹಾಕಲು ಪ್ರಯತ್ನಿಸುತ್ತಾರೆ. ಉದಾಹರಣೆಗೆ, ಒಬ್ಬ ಧಣಿಯು, ಇಲೆಕ್ಟ್ರೀಷಿಯನ್ ಆಗಿದ್ದ ಯೆಹೋವನ ಸಾಕ್ಷಿಯೊಬ್ಬನಿಗೆ ನಿಯತ ಕ್ರಮವಾಗಿ ಓವರ್ಟೈಮ್ ಕೆಲಸಮಾಡುವಂತೆ ಕೇಳಿಕೊಂಡನು. ಈ ಸಂದರ್ಭದಲ್ಲಿ ಆ ನೌಕರನು ಅದನ್ನು ನಿರಾಕರಿಸಿದನು. ಏಕೆ? ಏಕೆಂದರೆ ತನ್ನ ಕುಟುಂಬಕ್ಕಾಗಿ ಮತ್ತು ಆತ್ಮಿಕ ವಿಚಾರಗಳಿಗಾಗಿ ಅವನು ಬದಿಗಿರಿಸುತ್ತಿದ್ದ ಸಮಯಕ್ಕೆ ಅವನ ಐಹಿಕ ಕೆಲಸವು ಅಡ್ಡಬರುವಂತೆ ಬಿಡಲು ಅವನು ಬಯಸಲಿಲ್ಲ. ಅವನು ಒಬ್ಬ ಅತ್ಯುತ್ತಮ ಹಾಗೂ ಭರವಸಾರ್ಹ ಕೆಲಸಗಾರನಾಗಿದ್ದರಿಂದ, ಅವನ ಧಣಿಯು ಅವನ ಇಚ್ಛೆಗಳಿಗೆ ಪರಿಗಣನೆಯನ್ನು ತೋರಿಸಿದನು. ವಿಷಯಗಳು ಯಾವಾಗಲೂ ಇದೇ ರೀತಿ ಕೊನೆಗೊಳ್ಳುವುದಿಲ್ಲ ಎಂಬುದಂತೂ ಖಂಡಿತ, ಮತ್ತು ಇಂತಹ ಸನ್ನಿವೇಶಗಳಲ್ಲಿ ಒಬ್ಬನು ಒಂದು ಸಮತೂಕ ಜೀವನ ಶೈಲಿಯನ್ನು ಕಾಪಾಡಿಕೊಳ್ಳುವ ಸಲುವಾಗಿ ಬೇರೊಂದು ಉದ್ಯೋಗವನ್ನು ಹುಡುಕಬೇಕಾಗಬಹುದು. ಆದರೂ, ಯಾರು ಯೆಹೋವನಲ್ಲಿ ತಮ್ಮ ಪೂರ್ಣ ಭರವಸೆಯನ್ನು ಇಡುತ್ತಾರೋ ಅವರು ಸಾಮಾನ್ಯವಾಗಿ, ತಮ್ಮ ಒಳ್ಳೇ ನಡತೆ ಹಾಗೂ ಕಾರ್ಯನೀತಿಯು ತಮ್ಮನ್ನು ಧಣಿಯ ಅನುಗ್ರಹಕ್ಕೆ ಪಾತ್ರರನ್ನಾಗಿ ಮಾಡಿದೆ ಎಂಬುದನ್ನು ಕಂಡುಕೊಂಡಿದ್ದಾರೆ.—ಜ್ಞಾನೋಕ್ತಿ 3:5, 6.
ಎಲ್ಲಾ ಕೆಲಸಗಳು ಪ್ರತಿಫಲದಾಯಕವಾಗಿರುವ ಸಮಯ
ಸದ್ಯದ ಅಪರಿಪೂರ್ಣ ವಿಷಯಗಳ ವ್ಯವಸ್ಥೆಯಲ್ಲಿ, ಉದ್ಯೋಗ ಹಾಗೂ ಉದ್ಯೋಗದ ಪ್ರತೀಕ್ಷೆಗಳು, ಸಮಸ್ಯೆಗಳು ಹಾಗೂ ಅನಿಶ್ಚಿತತೆಗಳಿಂದ ಮುಕ್ತವಾಗಿರುವುದಿಲ್ಲ. ವಾಸ್ತವದಲ್ಲಿ, ಲೋಕವು ಹೆಚ್ಚೆಚ್ಚು ಅಸ್ಥಿರವಾಗುತ್ತಾ ಹೋಗುವಾಗ ಮತ್ತು ಆರ್ಥಿಕ ವ್ಯವಸ್ಥೆಗಳಲ್ಲಿ ಏರುಪೇರುಗಳಾಗುವಾಗ ಅಥವಾ ಅವು ವಿಫಲಗೊಂಡಾಗ, ಪರಿಸ್ಥಿತಿಗಳು ತುಂಬ ಹೀನಮಟ್ಟಕ್ಕಿಳಿಯಬಹುದು. ಆದರೆ ಈ ಸನ್ನಿವೇಶವು ತಾತ್ಕಾಲಿಕವಾಗಿದೆ. ಅತಿ ಬೇಗನೆ ಯಾರಿಗೂ ಉದ್ಯೋಗದ ಸಮಸ್ಯೆಯಿರದು. ಇದಲ್ಲದೆ, ಎಲ್ಲಾ ಕೆಲಸಗಳು ನಿಜವಾಗಿಯೂ ನಮ್ಮನ್ನು ಕಾರ್ಯಮಗ್ನರನ್ನಾಗಿ ಇರಿಸುವವು ಹಾಗೂ ಪ್ರತಿಫಲದಾಯಕವಾಗಿರುವವು. ಇದು ಹೇಗೆ ಸಾಧ್ಯ? ಯಾವುದು ಇಂಥ ಬದಲಾವಣೆಯನ್ನು ತರುವುದು?
ಯೆಹೋವನು ತನ್ನ ಪ್ರವಾದಿಯಾಗಿದ್ದ ಯೆಶಾಯನ ಮೂಲಕ ಅಂಥ ಒಂದು ಸಮಯದ ಕುರಿತು ಸೂಚಿಸುತ್ತಾ ಹೇಳಿದ್ದು: “ಇಗೋ, ನೂತನಾಕಾಶಮಂಡಲವನ್ನೂ ನೂತನ ಭೂಮಂಡಲವನ್ನೂ ಸೃಷ್ಟಿಸುವೆನು; ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು.” (ಯೆಶಾಯ 65:17) ಇಲ್ಲಿ ಆತನು ತನ್ನ ಹೊಸ ಸರಕಾರದ ಕುರಿತು ಮಾತಾಡುತ್ತಿದ್ದನು. ಅದರ ಕೆಳಗೆ ಸಂಪೂರ್ಣವಾಗಿ ಹೊಸತಾದ ಮತ್ತು ಭಿನ್ನವಾದ ಮಾನವ ಸಮಾಜವು ಒಂದು ವಾಸ್ತವಿಕತೆಯಾಗಿ ಪರಿಣಮಿಸುವುದು.—ದಾನಿಯೇಲ 2:44.
ಆಗ ಜನರು ಜೀವಿಸುವ ಹಾಗೂ ಕೆಲಸಮಾಡುವ ವಿಧದ ಕುರಿತು ಹೇಳುತ್ತಾ ಆ ಪ್ರವಾದನೆಯು ಮುಂದುವರಿಸುವುದು: “ಅಲ್ಲಿನ ಜನರು ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ತೋಟಗಳ ಫಲವನ್ನು ತಾವೇ ಅನುಭವಿಸುವರು. ಒಬ್ಬನು ಕಟ್ಟಿದ ಮನೆಯಲ್ಲಿ ಬೇರೊಬ್ಬನು ವಾಸಿಸನು; ಒಬ್ಬನು ಮಾಡಿದ ತೋಟದ ಫಲವು ಇನ್ನೊಬ್ಬನಿಗೆ ವಶವಾಗದು; ನನ್ನ ಜನರ ಆಯುಸ್ಸು ವೃಕ್ಷದ ಆಯುಸ್ಸಿನಂತಿರುವದು; ನನ್ನ ಆಪ್ತರು ತಮ್ಮ ಕೈಕೆಲಸದ ಆದಾಯವನ್ನು ಪೂರಾ ಅನುಭವಿಸುವರು. ಅವರು ವ್ಯರ್ಥವಾಗಿ ದುಡಿಯರು, ಅವರಿಗೆ ಹುಟ್ಟುವ ಮಕ್ಕಳು ಘೋರವ್ಯಾಧಿಗೆ ಗುರಿಯಾಗರು. ಅವರು ಯೆಹೋವನ ಆಶೀರ್ವಾದವನ್ನು ಹೊಂದಿದವರ ಸಂತಾನವಷ್ಟೆ; ಅವರ ಸಂತತಿಯವರು ಅವರೊಂದಿಗೆ ಬಹುದಿನವಿರುವರು.”—ಯೆಶಾಯ 65:21-23.
ದೇವರ ವಿನ್ಯಾಸದ ಹೊಸ ಲೋಕವು ಎಷ್ಟು ಅರ್ಥಗರ್ಭಿತ ಬದಲಾವಣೆಯನ್ನು ತರುವುದು! ಅಂಥ ಒಂದು ಲೋಕದಲ್ಲಿ, ನೀವು ‘ವ್ಯರ್ಥವಾಗಿ ದುಡಿಯಬೇಕಾಗಿಲ್ಲದ,’ ಆದರೆ ನಿಮ್ಮ ಕೈಕೆಲಸದ “ಆದಾಯವನ್ನು” ಪೂರಾ ಅನುಭವಿಸುವಂಥ ಒಂದು ಲೋಕದಲ್ಲಿ ನೀವು ಜೀವಿಸಲು ಬಯಸುವುದಿಲ್ಲವೋ? ಆದರೂ, ಅಂಥ ಆಶೀರ್ವಾದಗಳನ್ನು ಯಾರು ಆನಂದಿಸುವರು ಎಂಬುದನ್ನು ಗಮನಿಸಿರಿ: “ಯೆಹೋವನ ಆಶೀರ್ವಾದವನ್ನು ಹೊಂದಿದವರ ಸಂತಾನ”ದವರೇ. ಯೆಹೋವನ ಕುರಿತು ಕಲಿಯುವ ಮೂಲಕ ಹಾಗೂ ಆತನ ಆವಶ್ಯಕತೆಗಳನ್ನು ಪೂರೈಸುವ ಮೂಲಕ, ‘ಆಶೀರ್ವಾದವನ್ನು ಹೊಂದಿರುವ’ವರಲ್ಲಿ ನೀವೂ ಒಬ್ಬರಾಗಸಾಧ್ಯವಿದೆ. ಯೇಸು ಹೇಳಿದ್ದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.” (ಯೋಹಾನ 17:3) ದೇವರ ವಾಕ್ಯವಾಗಿರುವ ಬೈಬಲಿನ ಕ್ರಮಬದ್ಧವಾದ ಅಧ್ಯಯನದ ಮೂಲಕ ಆ ಜೀವದಾಯಕ ಜ್ಞಾನವನ್ನು ನೀವು ಪಡೆದುಕೊಳ್ಳುವಂತೆ ನಿಮಗೆ ಸಹಾಯಮಾಡಲು ಯೆಹೋವನ ಸಾಕ್ಷಿಗಳು ಸಂತೋಷಿಸುತ್ತಾರೆ.
[ಪುಟ 6ರಲ್ಲಿರುವ ಚೌಕ]
“ಸತತ ಬೇಡಿಕೆಯಲ್ಲಿದ್ದಾರೆ”
“ನೀವು ಯಾವ ಕೆಲಸವನ್ನು ಮಾಡಿದರೂ ಅದನ್ನು ಮನುಷ್ಯರಿಗೋಸ್ಕರವೆಂದು ಮಾಡದೆ ಕರ್ತ [“ಯೆಹೋವ,” NW]ನಿಗೋಸ್ಕರವೇ ಎಂದು ಮನಃಪೂರ್ವಕವಾಗಿ ಮಾಡಿರಿ” ಎಂದು ಬೈಬಲ್ ಹೇಳುತ್ತದೆ. (ಕೊಲೊಸ್ಸೆ 3:23) ಯಾವ ವ್ಯಕ್ತಿಯ ರೀತಿನೀತಿಯು ಈ ಅತ್ಯುತ್ತಮ ಮೂಲತತ್ತ್ವದಿಂದ ನಿಯಂತ್ರಿಸಲ್ಪಟ್ಟಿದೆಯೋ ಅಂಥ ವ್ಯಕ್ತಿಯು ಒಬ್ಬ ಅಪೇಕ್ಷಣೀಯ ನೌಕರನಾಗಿರುತ್ತಾನೆ ಎಂಬುದು ಸುವ್ಯಕ್ತ. ಈ ಕಾರಣದಿಂದಲೇ, ನಿಮ್ಮ ಗುರುತನ್ನು ಕಾಪಾಡಿಕೊಳ್ಳುವ ವಿಧ (ಇಂಗ್ಲಿಷ್) ಎಂಬ ತಮ್ಮ ಕೃತಿಯಲ್ಲಿ ಜೆ. ಜೆ. ಲೂನ ಅವರು ಕೆಲಸಗಾರರನ್ನು ಹುಡುಕಲು ಪ್ರಯತ್ನಿಸುತ್ತಿರುವ ಧಣಿಗಳಿಗೆ, ನಿರ್ದಿಷ್ಟ ಧಾರ್ಮಿಕ ಗುಂಪುಗಳ ಕ್ರಿಯಾಶೀಲ ಸದಸ್ಯರನ್ನು ಹುಡುಕಿರಿ ಎಂದು ಸಲಹೆ ನೀಡುತ್ತಾರೆ. ಆದರೆ ಅವರು ಕೂಡಿಸಿ ಹೇಳುವುದು: “ವಾಸ್ತವದಲ್ಲಿ ನಾವು ಸಾಮಾನ್ಯವಾಗಿ [ಯೆಹೋವನ] ಸಾಕ್ಷಿಗಳನ್ನು ಕೆಲಸಕ್ಕಿಟ್ಟುಕೊಳ್ಳಲು ನಿರ್ಧರಿಸುತ್ತೇವೆ.” ಅವರು ಕೊಡುವಂಥ ಅನೇಕ ಕಾರಣಗಳಲ್ಲಿ ಒಂದು, ಸಾಕ್ಷಿಗಳು ತಮ್ಮ ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದಾರೆ, ಮತ್ತು ಇದರಿಂದಾಗಿಯೇ ಅವರು ಬೇರೆ ಬೇರೆ ಕಾರ್ಯ ಕ್ಷೇತ್ರಗಳಲ್ಲಿ “ಸತತ ಬೇಡಿಕೆಯಲ್ಲಿದ್ದಾರೆ.”
[ಪುಟ 5ರಲ್ಲಿರುವ ಚಿತ್ರಗಳು]
ಆತ್ಮಿಕ ಚಟುವಟಿಕೆಗಳು ಹಾಗೂ ಮನೋರಂಜನೆಯೊಂದಿಗೆ ಕೆಲಸವನ್ನು ಸಮತೂಕಗೊಳಿಸುವುದು ಸಂತೃಪ್ತಿಯನ್ನು ತರುತ್ತದೆ