ಯೆಹೋವನು ನಮ್ಮ ಕುರುಬನು
“ಯೆಹೋವನು ನನಗೆ ಕುರುಬನು; ಕೊರತೆಪಡೆನು.”—ಕೀರ್ತನೆ 23:1.
ಯೆಹೋವನು ತನ್ನ ಜನರನ್ನು ಆರೈಕೆಮಾಡುವ ವಿಧವನ್ನು ವರ್ಣಿಸುವಂತೆ ನಿಮ್ಮನ್ನು ಕೇಳಿಕೊಳ್ಳುವುದಾದರೆ ನೀವೇನು ಹೇಳುವಿರಿ? ತನ್ನ ನಂಬಿಗಸ್ತ ಸೇವಕರನ್ನು ಆತನು ಕೋಮಲವಾದ ರೀತಿಯಲ್ಲಿ ಆರೈಕೆಮಾಡುವುದನ್ನು ಸ್ಪಷ್ಟವಾಗಿ ತಿಳಿಯಪಡಿಸುವಂಥ ಯಾವ ಹೋಲಿಕೆಯನ್ನು ನೀವು ಮಾಡಸಾಧ್ಯವಿದೆ? 3,000ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ ರಾಜನಾಗಿದ್ದ ಕೀರ್ತನೆಗಾರ ದಾವೀದನು, ತನ್ನ ಜೀವನದ ಆರಂಭದಲ್ಲಿ ಮಾಡುತ್ತಿದ್ದ ಒಂದು ವೃತ್ತಿಯಿಂದ ತೆಗೆದ ಹೋಲಿಕೆಯನ್ನು ಉಪಯೋಗಿಸುತ್ತಾ ಯೆಹೋವನ ಕುರಿತಾದ ಒಂದು ಸುಂದರ ವರ್ಣನೆಯನ್ನು ಲಿಖಿತರೂಪದಲ್ಲಿ ನಮೂದಿಸಿದನು.
2 ದಾವೀದನು ಯುವಪ್ರಾಯದವನಾಗಿದ್ದಾಗ ಒಬ್ಬ ಕುರುಬನಾಗಿದ್ದನು, ಆದುದರಿಂದ ಕುರಿಗಳನ್ನು ಆರೈಕೆಮಾಡುವುದರ ಬಗ್ಗೆ ಅವನಿಗೆ ಗೊತ್ತಿತ್ತು. ಒಂದುವೇಳೆ ಕುರಿಗಳನ್ನು ಅವುಗಳಷ್ಟಕ್ಕೇ ಬಿಡುವಲ್ಲಿ, ಅವು ಬೇಗನೆ ದಾರಿತಪ್ಪುತ್ತವೆ ಮತ್ತು ಕಳ್ಳರಿಗೆ ಅಥವಾ ಕಾಡುಮೃಗಗಳಿಗೆ ಸುಲಭವಾಗಿ ಬಲಿಬೀಳುತ್ತವೆ ಎಂಬುದು ಅವನಿಗೆ ಚೆನ್ನಾಗಿ ತಿಳಿದಿತ್ತು. (1 ಸಮುವೇಲ 17:34-36) ಆರೈಕೆಮಾಡುವಂಥ ಒಬ್ಬ ಕುರುಬನಿಲ್ಲದಿದ್ದರೆ ಅವು ತಮ್ಮ ಹುಲ್ಲುಗಾವಲನ್ನು ಹಾಗೂ ಆಹಾರವನ್ನು ಕಂಡುಕೊಳ್ಳಲಾರವು. ತದನಂತರದ ವರ್ಷಗಳಲ್ಲಿ ದಾವೀದನು, ಕುರಿಗಳನ್ನು ಮುನ್ನಡಿಸುವುದು, ಸಂರಕ್ಷಿಸುವುದು ಮತ್ತು ಮೇಯಿಸುವುದರಲ್ಲಿ ತಾನು ವ್ಯಯಿಸಿದ್ದ ಅನೇಕ ತಾಸುಗಳ ಕುರಿತಾದ ಸವಿನೆನಪುಗಳನ್ನು ಹೊಂದಿದ್ದನು ಎಂಬುದರಲ್ಲಿ ಸಂಶಯವೇ ಇಲ್ಲ.
3 ಆದುದರಿಂದ, ಯೆಹೋವನು ತನ್ನ ಜನರನ್ನು ಹೇಗೆ ಆರೈಕೆಮಾಡುತ್ತಾನೆ ಎಂಬುದನ್ನು ವರ್ಣಿಸುವಂತೆ ದಾವೀದನು ಪ್ರೇರಿಸಲ್ಪಟ್ಟಾಗ, ಅವನಿಗೆ ಒಬ್ಬ ಕುರುಬನ ಕೆಲಸವು ಮನಸ್ಸಿಗೆ ಬಂದದ್ದರಲ್ಲಿ ಆಶ್ಚರ್ಯವೇನಿಲ್ಲ. ದಾವೀದನಿಂದ ಬರೆಯಲ್ಪಟ್ಟ 23ನೇ ಕೀರ್ತನೆಯು ಈ ಮಾತುಗಳಿಂದ ಆರಂಭವಾಗುತ್ತದೆ: “ಯೆಹೋವನು ನನಗೆ ಕುರುಬನು; ಕೊರತೆಪಡೆನು.” ಇದು ಏಕೆ ಸೂಕ್ತವಾದ ಹೇಳಿಕೆಯಾಗಿದೆ ಎಂಬುದನ್ನು ನಾವೀಗ ಪರಿಗಣಿಸೋಣ. ತದನಂತರ, ಒಬ್ಬ ಕುರುಬನು ತನ್ನ ಕುರಿಗಳ ಆರೈಕೆಮಾಡುವಂತೆಯೇ ಯೆಹೋವನು ತನ್ನ ಆರಾಧಕರನ್ನು ಹೇಗೆ ಆರೈಕೆಮಾಡುತ್ತಾನೆ ಎಂಬುದನ್ನು ಕೀರ್ತನೆ 23ರ ಸಹಾಯದಿಂದ ನಾವು ನೋಡುವೆವು.—1 ಪೇತ್ರ 2:25.
ಸೂಕ್ತವಾದ ಹೋಲಿಕೆ
4 ಬೈಬಲ್ ಯೆಹೋವನನ್ನು ಅನೇಕ ಬಿರುದುಗಳಿಂದ ಸಂಬೋಧಿಸುತ್ತದಾದರೂ, “ಕುರುಬ” ಎಂಬ ಬಿರುದು ಅತ್ಯಂತ ಹೆಚ್ಚಿನ ಕೋಮಲಭಾವವನ್ನು ತಿಳಿಯಪಡಿಸುವಂಥದ್ದಾಗಿದೆ. (ಕೀರ್ತನೆ 80:1) ಸೂಕ್ತವಾಗಿಯೇ ಯೆಹೋವನನ್ನು ಏಕೆ ಒಬ್ಬ ಕುರುಬನೆಂದು ಕರೆಯಲಾಗಿದೆ ಎಂಬುದನ್ನು ಹೆಚ್ಚು ಉತ್ತಮವಾಗಿ ಅರ್ಥಮಾಡಿಕೊಳ್ಳಬೇಕಾದರೆ, ನಾವು ಎರಡು ವಿಷಯಗಳನ್ನು ತಿಳಿದುಕೊಳ್ಳುವುದು ಸಹಾಯಕರವಾಗಿದೆ: ಮೊದಲನೆಯದಾಗಿ ಕುರಿಗಳ ಸ್ವಭಾವದ ಕುರಿತು ತಿಳಿದುಕೊಳ್ಳಬೇಕು ಮತ್ತು ಎರಡನೆಯದಾಗಿ ಒಬ್ಬ ಒಳ್ಳೇ ಕುರುಬನ ಕರ್ತವ್ಯಗಳು ಹಾಗೂ ಗುಣಗಳ ಕುರಿತು ತಿಳಿದುಕೊಳ್ಳಬೇಕು.
5 ಬೈಬಲ್ ಅನೇಕವೇಳೆ ಕುರಿಗಳ ಸ್ವಭಾವದ ಕುರಿತು ಸೂಚಿಸಿ ಮಾತಾಡುತ್ತದೆ; ಅವು ಒಬ್ಬ ಕುರುಬನ ಮಮತೆಗೆ ಸುಲಭವಾಗಿ ಪ್ರತಿಕ್ರಿಯೆ ತೋರಿಸುತ್ತವೆ (2 ಸಮುವೇಲ 12:3), ಅವುಗಳಿಗೆ ಆಕ್ರಮಣಮಾಡುವ ಸ್ವಭಾವವಿರುವುದಿಲ್ಲ (ಯೆಶಾಯ 53:7) ಮತ್ತು ರಕ್ಷಣಾರಹಿತವಾಗಿರುತ್ತವೆ (ಮೀಕ 5:8) ಎಂದು ಅದು ವರ್ಣಿಸುತ್ತದೆ. ಅನೇಕ ವರ್ಷಗಳ ವರೆಗೆ ಕುರಿಗಳನ್ನು ಸಾಕುತ್ತಿದ್ದ ಒಬ್ಬ ಬರಹಗಾರನು ಹೀಗೆ ಬರೆದನು: “ಕೆಲವರು ಭಾವಿಸಬಹುದಾದಂತೆ ಕುರಿಗಳು ‘ತಮ್ಮ ಆರೈಕೆಯನ್ನು ತಾವೇ ಮಾಡಿಕೊಳ್ಳುವುದಿಲ್ಲ.’ ಬೇರೆ ಯಾವುದೇ ಜಾನುವಾರುಗಳಿಗಿಂತಲೂ ಹೆಚ್ಚಾಗಿ ಇವುಗಳಿಗೆ ನಿರಂತರ ಗಮನ ಹಾಗೂ ಬಹಳ ಜಾಗರೂಕವಾದ ಆರೈಕೆಯ ಅಗತ್ಯವಿರುತ್ತದೆ.” ಈ ನಿಸ್ಸಹಾಯಕ ಜೀವಿಗಳು ಬದುಕಿ ಉಳಿಯಬೇಕಾದರೆ, ಆರೈಕೆಮಾಡುವಂಥ ಒಬ್ಬ ಕುರುಬನ ಆವಶ್ಯಕತೆ ಅವುಗಳಿಗಿದೆ.—ಯೆಹೆಜ್ಕೇಲ 34:5.
6 ಪುರಾತನ ಕಾಲದ ಕುರುಬನೊಬ್ಬನಿಗೆ ಸಾಮಾನ್ಯವಾಗಿ ಒಂದು ದಿನದಲ್ಲಿ ಏನೆಲ್ಲ ಮಾಡಲಿಕ್ಕಿರುತ್ತಿತ್ತು? ಒಂದು ಬೈಬಲ್ ಶಬ್ದಕೋಶವು ಹೀಗೆ ವಿವರಿಸುತ್ತದೆ: “ನಸುಕಿನಲ್ಲಿಯೇ ಅವನು ಕುರಿಹಟ್ಟಿಯಿಂದ ಮಂದೆಯನ್ನು ಹೊರಗೆ ತಂದು, ಹಿಂಡಿನ ಮುಂದೆ ನಡೆಯುತ್ತಾ ಹುಲ್ಲುಗಾವಲಿನಲ್ಲಿ ಅವುಗಳನ್ನು ಎಲ್ಲಿ ಮೇಯಿಸಬೇಕೋ ಆ ಜಾಗಕ್ಕೆ ಕರೆದೊಯ್ಯುತ್ತಿದ್ದನು. ಅಲ್ಲಿ ಅವನು ಇಡೀ ದಿನ ಅವುಗಳ ಮೇಲೆ ನಿಗವಿಡುತ್ತಿದ್ದನು, ಕುರಿಗಳಲ್ಲಿ ಯಾವುದೂ ಮಂದೆಯಿಂದ ದಾರಿತಪ್ಪಿ ಅಲೆಯದಿರುವಂತೆ ನೋಡಿಕೊಳ್ಳುತ್ತಿದ್ದನು ಮತ್ತು ಯಾವುದಾದರೊಂದು ಕುರಿಯು ಸ್ವಲ್ಪ ಸಮಯ ಅವನ ಕಣ್ತಪ್ಪಿಸಿ ಮಂದೆಯಿಂದ ದೂರಹೋಗಿಬಿಡುತ್ತಿದ್ದಲ್ಲಿ, ಅದು ಸಿಗುವ ತನಕ ಪಟ್ಟುಹಿಡಿದು ಹುಡುಕಿ ಅದನ್ನು ಹಿಂದೆ ಕರೆದುತರುತ್ತಿದ್ದನು. . . . ರಾತ್ರಿ ಹೊತ್ತಿನಲ್ಲಿ ಅವನು ಮಂದೆಯನ್ನು ಕುರಿಹಟ್ಟಿಗೆ ಹಿಂದೆ ಕರೆದುತರುತ್ತಿದ್ದನು ಮತ್ತು ಅವುಗಳಲ್ಲಿ ಒಂದು ಸಹ ತಪ್ಪಿಸಿಕೊಂಡಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ ಹಟ್ಟಿಯ ಬಾಗಿಲಿಗೆ ಅಡ್ಡಲಾಗಿರುವ ಕೋಲಿನ ಕೆಳಗಿನಿಂದ ಅವು ಒಳಸರಿಯುವಾಗ ಅವುಗಳನ್ನು ಎಣಿಸುತ್ತಿದ್ದನು. . . . ಅನೇಕವೇಳೆ ಅವನು ರಾತ್ರಿ ಸಮಯದಲ್ಲಿ ಕಾಡುಮೃಗಗಳ ಆಕ್ರಮಣವನ್ನು ಅಥವಾ ಕಳ್ಳರ ಕುಟಿಲ ಪ್ರಯತ್ನಗಳನ್ನು ತಡೆಗಟ್ಟಲಿಕ್ಕಾಗಿ ಕುರಿಹಟ್ಟಿಯನ್ನು ಕಾವಲು ಕಾಯಬೇಕಾಗಿತ್ತು.”a
7 ಕೆಲವೊಂದು ಸಂದರ್ಭಗಳಲ್ಲಿ ಕುರಿಗಳಿಗೆ, ಅದರಲ್ಲೂ ವಿಶೇಷವಾಗಿ ಗರ್ಭಧರಿಸಿರುವ ಕುರಿಗಳಿಗೆ ಮತ್ತು ಮರಿಗಳಿಗೆ ಹೆಚ್ಚಿನ ತಾಳ್ಮೆ ಹಾಗೂ ಕೋಮಲಭಾವವನ್ನು ತೋರಿಸುವ ಅಗತ್ಯವಿರುತ್ತಿತ್ತು. (ಆದಿಕಾಂಡ 33:13) ಒಂದು ಬೈಬಲ್ ಪರಾಮರ್ಶೆ ಕೃತಿಯು ತಿಳಿಸುವುದು: “ಅನೇಕವೇಳೆ ಒಂದು ಮಂದೆಯಲ್ಲಿ ಮರಿಯ ಜನನವು ದೂರದಲ್ಲಿರುವ ಪರ್ವತದ ಬಳಿಯಲ್ಲಾಗುತ್ತದೆ. ತಾಯಿಕುರಿಯ ಅಸಹಾಯಕ ಕ್ಷಣಗಳಲ್ಲಿ ಕುರುಬನು ತೀವ್ರಾಸಕ್ತಿಯಿಂದ ಅದನ್ನು ಕಾವಲು ಕಾಯುತ್ತಾನೆ ಮತ್ತು ಕುರಿಮರಿಯನ್ನು ಎತ್ತಿಕೊಂಡು ಹಟ್ಟಿಗೆ ತಂದುಬಿಡುತ್ತಾನೆ. ಆ ಮರಿಯು ನಡೆಯಲು ಶಕ್ತವಾಗುವ ತನಕ ಅವನು ಅದನ್ನು ತನ್ನ ಕೈಗಳಲ್ಲಿ ಅಥವಾ ತನ್ನ ಹೊರಉಡುಪಿನ ಮಡಿಕೆಗಳಲ್ಲಿ ಹೊತ್ತುಕೊಂಡುಹೋಗಬಹುದು.” (ಯೆಶಾಯ 40:10, 11) ಒಬ್ಬ ಒಳ್ಳೇ ಕುರುಬನಲ್ಲಿ ಪ್ರಬಲವಾದ ಗುಣಗಳೂ ಇರಬೇಕು ಮತ್ತು ಅದೇ ಸಮಯದಲ್ಲಿ ಕೋಮಲವಾದ ಗುಣಗಳೂ ಇರಬೇಕು ಎಂಬುದಂತೂ ಸುಸ್ಪಷ್ಟ.
8 “ಯೆಹೋವನು ನನಗೆ ಕುರುಬನು” ಎಂಬುದು ನಮ್ಮ ಸ್ವರ್ಗೀಯ ತಂದೆಗೆ ಸೂಕ್ತವಾಗಿ ಅನ್ವಯವಾಗುವ ವರ್ಣನೆಯಾಗಿಲ್ಲವೆ? ನಾವು ಕೀರ್ತನೆ 23ನ್ನು ಪರಿಶೀಲಿಸುವಾಗ, ಒಬ್ಬ ಕುರುಬನಿಗಿರುವಂಥ ಬಲ ಹಾಗೂ ಕೋಮಲಭಾವದೊಂದಿಗೆ ದೇವರು ಹೇಗೆ ನಮ್ಮನ್ನು ಆರೈಕೆಮಾಡುತ್ತಾನೆ ಎಂಬುದನ್ನು ನೋಡುವೆವು. ಒಂದನೆಯ ವಚನದಲ್ಲಿ, ತನ್ನ ಕುರಿಗಳು ‘ಕೊರತೆಪಡದಂತೆ’ ದೇವರು ಅವರಿಗೋಸ್ಕರ ಅಗತ್ಯವಿರುವ ಎಲ್ಲ ಒದಗಿಸುವಿಕೆಗಳನ್ನು ಮಾಡುವನು ಎಂಬ ದೃಢವಿಶ್ವಾಸವನ್ನು ದಾವೀದನು ವ್ಯಕ್ತಪಡಿಸಿದನು. ತದನಂತರದ ವಚನಗಳಲ್ಲಿ ದಾವೀದನು ಈ ದೃಢವಿಶ್ವಾಸಕ್ಕಾಗಿರುವ ಮೂರು ಕಾರಣಗಳನ್ನು ತಿಳಿಸಿದನು. ಅವು, ಯೆಹೋವನು ತನ್ನ ಕುರಿಗಳನ್ನು ನಡಿಸುತ್ತಾನೆ, ಸಂರಕ್ಷಿಸುತ್ತಾನೆ ಮತ್ತು ಆಹಾರವನ್ನು ಒದಗಿಸುತ್ತಾನೆ ಎಂದಾಗಿವೆ. ನಾವೀಗ ಇವುಗಳನ್ನು ಒಂದೊಂದಾಗಿ ಚರ್ಚಿಸೋಣ.
“ನನ್ನನ್ನು ನಡಿಸುತ್ತಾನೆ”
9 ಮೊದಲನೆಯದಾಗಿ, ಯೆಹೋವನು ತನ್ನ ಜನರನ್ನು ನಡಿಸುತ್ತಾನೆ. ದಾವೀದನು ಬರೆಯುವುದು: “ಆತನು ಹಸುರುಗಾವಲುಗಳಲ್ಲಿ ನನ್ನನ್ನು ತಂಗಿಸುತ್ತಾನೆ; ವಿಶ್ರಾಂತಿಕರವಾದ ನೀರುಗಳ ಬಳಿಗೆ ಬರಮಾಡುತ್ತಾನೆ. ನನ್ನ ಪ್ರಾಣವನ್ನು ಉಜ್ಜೀವಿಸಮಾಡಿ ತನ್ನ ಹೆಸರಿಗೆ ತಕ್ಕಂತೆ ನೀತಿಮಾರ್ಗದಲ್ಲಿ ನನ್ನನ್ನು ನಡಿಸುತ್ತಾನೆ.” (ಕೀರ್ತನೆ 23:2, 3) ಪುಷ್ಕಳತೆಯ ಮಧ್ಯೆ ನೆಮ್ಮದಿಯಿಂದ ಬಿದ್ದುಕೊಂಡಿರುವ ಒಂದು ಮಂದೆ—ಈ ಮಾತುಗಳಿಂದ ದಾವೀದನು ಸಂತೃಪ್ತಿ, ಚೈತನ್ಯ ಮತ್ತು ಭದ್ರತೆಯ ದೃಶ್ಯವನ್ನು ಚಿತ್ರಿಸುತ್ತಿದ್ದಾನೆ. ‘ಹಸುರುಗಾವಲುಗಳು’ ಎಂದು ಭಾಷಾಂತರಿಸಲ್ಪಟ್ಟಿರುವ ಹೀಬ್ರು ಪದಕ್ಕೆ “ಆಹ್ಲಾದಕರ ಸ್ಥಳ” ಎಂಬ ಅರ್ಥವಿರಸಾಧ್ಯವಿದೆ. ನೆಮ್ಮದಿಯಿಂದ ಬಿದ್ದುಕೊಳ್ಳಲಿಕ್ಕಾಗಿ ಕುರಿಗಳು ತಮ್ಮಷ್ಟಕ್ಕೆ ತಾವೇ ವಿಶ್ರಾಂತಿಕರವಾದ ಸ್ಥಳವನ್ನು ಕಂಡುಕೊಳ್ಳುವುದಿಲ್ಲ. ಅವುಗಳ ಕುರುಬನು ಅವುಗಳನ್ನು ಅಂಥ ಒಂದು ‘ಆಹ್ಲಾದಕರ ಸ್ಥಳಕ್ಕೆ’ ನಡಿಸಬೇಕಾಗಿದೆ.
10 ಇಂದು ಯೆಹೋವನು ನಮ್ಮನ್ನು ಹೇಗೆ ನಡಿಸುತ್ತಾನೆ? ಆತನು ನಮ್ಮನ್ನು ನಡಿಸುವ ಒಂದು ವಿಧವು ತನ್ನ ಮಾದರಿಯ ಮೂಲಕವೇ. ದೇವರನ್ನು “ಅನುಸರಿಸುವವರಾಗಿರಿ” ಎಂದು ಆತನ ವಾಕ್ಯವು ನಮ್ಮನ್ನು ಉತ್ತೇಜಿಸುತ್ತದೆ. (ಎಫೆಸ 5:1) ಈ ಮಾತುಗಳ ಪೂರ್ವಾಪರವು ಕರುಣೆ, ಕ್ಷಮಾಪಣೆ ಮತ್ತು ಪ್ರೀತಿಯ ಕುರಿತು ಪ್ರಸ್ತಾಪಿಸುತ್ತದೆ. (ಎಫೆಸ 4:32; 5:2) ಇಂಥ ಆದರಣೀಯ ಗುಣಗಳನ್ನು ತೋರಿಸುವುದರಲ್ಲಿ ಯೆಹೋವನು ಅತ್ಯುತ್ತಮ ಮಾದರಿಯನ್ನಿಡುತ್ತಾನೆ ಎಂಬುದಂತೂ ನಿಶ್ಚಯ. ಆತನು ತನ್ನನ್ನು ಅನುಸರಿಸುವಂತೆ ನಮ್ಮನ್ನು ಕೇಳಿಕೊಳ್ಳುವುದು ಅವಾಸ್ತವಿಕವಾದ ಸಂಗತಿಯಾಗಿದೆಯೋ? ಇಲ್ಲ. ಈ ಪ್ರೇರಿತ ಸಲಹೆಯು ವಾಸ್ತವದಲ್ಲಿ ಆತನಿಗೆ ನಮ್ಮಲ್ಲಿರುವ ದೃಢವಿಶ್ವಾಸದ ಅಪೂರ್ವ ಅಭಿವ್ಯಕ್ತಿಯಾಗಿದೆ. ಯಾವ ವಿಧದಲ್ಲಿ? ನಾವು ದೇವರ ಸ್ವರೂಪದಲ್ಲಿ ಉಂಟುಮಾಡಲ್ಪಟ್ಟಿದ್ದೇವೆ. ಇದರರ್ಥ ನಮಗೆ ನೈತಿಕ ಗುಣಗಳು ಮತ್ತು ಆಧ್ಯಾತ್ಮಿಕತೆಗಾಗಿರುವ ಸಾಮರ್ಥ್ಯವು ಕೊಡಲ್ಪಟ್ಟಿದೆ. (ಆದಿಕಾಂಡ 1:26) ಆದುದರಿಂದ, ನಮ್ಮಲ್ಲಿ ಅಪರಿಪೂರ್ಣತೆಗಳು ಇರುವುದಾದರೂ, ತಾನು ತೋರ್ಪಡಿಸುವಂಥದ್ದೇ ಗುಣಗಳನ್ನು ಬೆಳೆಸಿಕೊಳ್ಳಲಿಕ್ಕಾಗಿರುವ ಸಾಮರ್ಥ್ಯ ನಮಗಿದೆ ಎಂಬುದು ಯೆಹೋವನಿಗೆ ತಿಳಿದಿದೆ. ಸ್ವಲ್ಪ ಯೋಚಿಸಿರಿ, ನಮ್ಮ ಪ್ರೀತಿಯ ದೇವರಿಗೆ, ನಾವು ಆತನಂತಿರಸಾಧ್ಯವಿದೆ ಎಂಬ ದೃಢವಿಶ್ವಾಸವಿದೆ. ನಾವು ಆತನ ಮಾದರಿಯನ್ನು ಅನುಸರಿಸುವಲ್ಲಿ, ಆತನು ನಮ್ಮನ್ನು ಸಾಂಕೇತಿಕ ರೀತಿಯಲ್ಲಿ ಆಹ್ಲಾದಕರವಾದ ‘ಹಸುರುಗಾವಲುಗಳಿಗೆ’ ನಡಿಸುತ್ತಾನೆ. ಈ ಹಿಂಸಾತ್ಮಕ ಲೋಕದ ಮಧ್ಯೆ ನಾವು ‘ಯಾವ ಅಪಾಯವೂ ಇಲ್ಲದೆ ಸುರಕ್ಷಿತರಾಗಿ’ ಇರುವೆವು, ಅಂದರೆ ನಮಗೆ ದೇವರ ಅನುಗ್ರಹವಿದೆ ಎಂಬುದನ್ನು ತಿಳಿಯುವುದರಿಂದ ಬರುವ ಶಾಂತಿಯನ್ನು ಅನುಭವಿಸುವೆವು.—ಕೀರ್ತನೆ 4:8; 29:11.
11 ನಮ್ಮನ್ನು ನಡಿಸುವಾಗ ಯೆಹೋವನು ಕೋಮಲಭಾವವನ್ನು ಮತ್ತು ತಾಳ್ಮೆಯನ್ನು ತೋರಿಸುತ್ತಾನೆ. ಒಬ್ಬ ಕುರುಬನು ತನ್ನ ಕುರಿಗಳ ಇತಿಮಿತಿಯನ್ನು ಗಣನೆಗೆ ತೆಗೆದುಕೊಳ್ಳುತ್ತಾನೆ, ಆದುದರಿಂದಲೇ ಅವನು ‘ಕುರಿಗಳ ನಡಿಗೆಗೆ ಸರಿಯಾಗಿ’ ಅವುಗಳನ್ನು ನಡಿಸುತ್ತಾನೆ. (ಆದಿಕಾಂಡ 33:14) ತದ್ರೀತಿಯಲ್ಲಿ ಯೆಹೋವನು ತನ್ನ ಕುರಿಗಳ ‘ನಡಿಗೆಗೆ ಸರಿಯಾಗಿ’ ಅವುಗಳನ್ನು ನಡಿಸುತ್ತಾನೆ. ಆತನು ನಮ್ಮ ಸಾಮರ್ಥ್ಯಗಳು ಮತ್ತು ಪರಿಸ್ಥಿತಿಗಳನ್ನು ಗಣನೆಗೆ ತೆಗೆದುಕೊಳ್ಳುತ್ತಾನೆ. ಕಾರ್ಯತಃ ಆತನು ತನ್ನ ನಡಿಗೆಯನ್ನು ಹೊಂದಿಸಿಕೊಳ್ಳುತ್ತಾನೆ. ನಾವು ಏನನ್ನು ಕೊಡಸಾಧ್ಯವಿದೆಯೋ ಅದಕ್ಕಿಂತ ಹೆಚ್ಚನ್ನು ಆತನು ನಮ್ಮಿಂದ ಕೇಳಿಕೊಳ್ಳುವುದಿಲ್ಲ. ನಾವು ಮನಃಪೂರ್ವಕವಾಗಿ ಕೊಡಲಿಚ್ಛಿಸುವುದನ್ನು ಮಾತ್ರವೇ ಆತನು ನಮ್ಮಿಂದ ಕೇಳಿಕೊಳ್ಳುತ್ತಾನೆ. (ಕೊಲೊಸ್ಸೆ 3:23) ಆದರೆ ನೀವು ವೃದ್ಧಾರಾಗಿದ್ದು ಈ ಮುಂಚೆ ಎಷ್ಟನ್ನು ಮಾಡುತ್ತಿದ್ದಿರೋ ಅಷ್ಟನ್ನು ಮಾಡಲು ಅಸಮರ್ಥರಾಗಿರುವಲ್ಲಿ ಆಗೇನು? ಅಥವಾ ನಿಮಗೆ ಗುರುತರವಾದ ಒಂದು ಅಸ್ವಸ್ಥತೆಯಿದ್ದು ಅದು ನಿಮ್ಮನ್ನು ನಿರ್ಬಂಧಿಸುತ್ತಿರುವಲ್ಲಿ ಆಗೇನು? ವಿಶೇಷವಾಗಿ ಇಂಥ ಪರಿಸ್ಥಿತಿಗಳಲ್ಲಿ, ಮನಃಪೂರ್ವಕವಾಗಿ ಸೇವೆಸಲ್ಲಿಸುವ ಆವಶ್ಯಕತೆಯು ಹೆಚ್ಚು ಸಾಂತ್ವನದಾಯಕವಾದದ್ದಾಗಿದೆ. ಯಾರೇ ಇಬ್ಬರು ವ್ಯಕ್ತಿಗಳು ನಿರ್ದಿಷ್ಟವಾಗಿ ಒಂದೇ ರೀತಿ ಇರುವುದಿಲ್ಲ. ಮನಃಪೂರ್ವಕವಾಗಿ ಸೇವೆಮಾಡುವುದು ಎಂದರೆ, ದೇವರ ಸೇವೆಯಲ್ಲಿ ನಿಮಗೆ ಸಾಧ್ಯವಿರುವಷ್ಟು ಪೂರ್ಣ ಮಟ್ಟಿಗೆ ನಿಮ್ಮೆಲ್ಲ ಬಲ ಮತ್ತು ಶಕ್ತಿಯನ್ನು ಉಪಯೋಗಿಸುವುದೇ ಆಗಿದೆ. ನಮ್ಮ ನಡಿಗೆಯನ್ನು ಬಾಧಿಸುವಂಥ ದೌರ್ಬಲ್ಯಗಳು ನಮಗಿರುವುದಾದರೂ, ಯೆಹೋವನು ನಮ್ಮ ಮನಃಪೂರ್ವಕ ಆರಾಧನೆಯನ್ನು ಅಮೂಲ್ಯವಾಗಿ ಪರಿಗಣಿಸುತ್ತಾನೆ.—ಮಾರ್ಕ 12:29, 30.
12 ಯೆಹೋವನು ತನ್ನ ಕುರಿಗಳ ‘ನಡಿಗೆಗೆ ಸರಿಯಾಗಿ’ ಅವುಗಳನ್ನು ನಡಿಸುತ್ತಾನೆ ಎಂಬುದನ್ನು ದೃಷ್ಟಾಂತಿಸಲಿಕ್ಕಾಗಿ, ಮೋಶೆಯ ಧರ್ಮಶಾಸ್ತ್ರದಲ್ಲಿ ತಿಳಿಸಲ್ಪಟ್ಟಿರುವ ಕೆಲವೊಂದು ದೋಷಪರಿಹಾರಕಯಜ್ಞಗಳ ಕುರಿತು ಪರಿಗಣಿಸಿರಿ. ಕೃತಜ್ಞತೆ ತುಂಬಿದ ಹೃದಯಗಳಿಂದ ಪ್ರಚೋದಿತವಾದ ಅತ್ಯುತ್ತಮ ಯಜ್ಞಗಳನ್ನು ಯೆಹೋವನು ಬಯಸಿದನು. ಅದೇ ಸಮಯದಲ್ಲಿ, ಅರ್ಪಿಸಲ್ಪಡುವ ಯಜ್ಞಗಳು ಅವುಗಳನ್ನು ಕೊಡುವವನ ಸಾಮರ್ಥ್ಯಕ್ಕನುಸಾರ ವರ್ಗೀಕರಿಸಲ್ಪಟ್ಟಿದ್ದವು. ಧರ್ಮಶಾಸ್ತ್ರವು ಹೀಗೆ ತಿಳಿಸಿತ್ತು: ‘ಕುರಿಯನ್ನು ಕೊಡುವದಕ್ಕೆ ಅವನಿಗೆ ಗತಿಯಿಲ್ಲದ ಪಕ್ಷದಲ್ಲಿ ಎರಡು ಬೆಳವಕ್ಕಿಗಳನ್ನಾಗಲಿ ಎರಡು ಪಾರಿವಾಳದ ಮರಿಗಳನ್ನಾಗಲಿ ತೆಗೆದುಕೊಂಡು ಬರಬೇಕು.’ ಮತ್ತು ಒಬ್ಬನು ಎರಡು ಪಾರಿವಾಳದ ಮರಿಗಳನ್ನು ಕೊಡುವುದಕ್ಕೂ ಅಶಕ್ತನಾಗಿರುವಲ್ಲಿ ಆಗೇನು? ಅವನು ಸ್ವಲ್ಪ “ಗೋದಿಹಿಟ್ಟನ್ನು” ತರಸಾಧ್ಯವಿತ್ತು. (ಯಾಜಕಕಾಂಡ 5:7, 11) ಯಜ್ಞವನ್ನು ಅರ್ಪಿಸಲು ಬಯಸುವಾತನ ಸಾಮರ್ಥ್ಯಕ್ಕೆ ಮೀರಿದ್ದನ್ನು ದೇವರು ತಗಾದೆಮಾಡಲಿಲ್ಲ ಎಂಬುದನ್ನು ಇದು ತೋರಿಸುತ್ತದೆ. ದೇವರು ಬದಲಾಗದವನಾಗಿರುವುದರಿಂದ, ನಾವು ಏನನ್ನು ಕೊಡಶಕ್ತರಾಗಿದ್ದೇವೋ ಅದಕ್ಕಿಂತ ಹೆಚ್ಚಿನದ್ದನ್ನು ಆತನು ಎಂದಿಗೂ ಕೇಳುವುದಿಲ್ಲ; ನಾವು ಏನನ್ನು ಕೊಡಲು ಶಕ್ತರಾಗಿದ್ದೇವೋ ಅದನ್ನು ಅಂಗೀಕರಿಸಲು ಆತನು ಇಷ್ಟಪಡುತ್ತಾನೆ ಎಂಬುದನ್ನು ತಿಳಿಯುವುದರಲ್ಲಿ ನಾವು ಸಾಂತ್ವನವನ್ನು ಕಂಡುಕೊಳ್ಳಸಾಧ್ಯವಿದೆ. (ಮಲಾಕಿಯ 3:6) ಸಹಾನುಭೂತಿಯುಳ್ಳ ಇಂಥ ಕುರುಬನಿಂದ ನಡೆಸಲ್ಪಡುವುದು ಎಷ್ಟು ಹಿತಕರವಾದದ್ದಾಗಿದೆ!
“ನೀನು ಹತ್ತಿರವಿರುವದರಿಂದ ಕೇಡಿಗೆ ಹೆದರೆನು”
13 ದಾವೀದನು ತನ್ನ ದೃಢವಿಶ್ವಾಸಕ್ಕಾಗಿರುವ ಎರಡನೆಯ ಕಾರಣವನ್ನು ಕೊಡುತ್ತಾನೆ: ಯೆಹೋವನು ತನ್ನ ಕುರಿಗಳನ್ನು ಸಂರಕ್ಷಿಸುತ್ತಾನೆ. ನಾವು ಓದುವುದು: “ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ ನೀನು ಹತ್ತಿರವಿರುವದರಿಂದ ಕೇಡಿಗೆ ಹೆದರೆನು; ನಿನ್ನ ದೊಣ್ಣೆಯೂ ನಿನ್ನ ಕೋಲೂ ನನಗೆ ಧೈರ್ಯಕೊಡುತ್ತವೆ.” (ಕೀರ್ತನೆ 23:4) ಈಗ ದಾವೀದನು ಹೆಚ್ಚು ಆಪ್ತತೆಯಿಂದ, ಯೆಹೋವನನ್ನು “ನೀನು” ಎಂಬ ಸರ್ವನಾಮದಿಂದ ಸಂಬೋಧಿಸಿ ಮಾತಾಡುತ್ತಾನೆ. ಇದು ಆಶ್ಚರ್ಯಕರವೇನಲ್ಲ, ಏಕೆಂದರೆ ಪ್ರತಿಕೂಲ ಪರಿಸ್ಥಿತಿಯನ್ನು ತಾಳಿಕೊಳ್ಳಲು ದೇವರು ತನಗೆ ಹೇಗೆ ಸಹಾಯಮಾಡಿದನು ಎಂಬುದರ ಕುರಿತು ದಾವೀದನು ಇಲ್ಲಿ ಮಾತಾಡುತ್ತಿದ್ದಾನೆ. ದಾವೀದನು ಅನೇಕ ಕಾರ್ಗತ್ತಲಿನ ಕಣಿವೆಗಳನ್ನು, ಅಂದರೆ ಅವನ ಜೀವವೇ ಅಪಾಯದಲ್ಲಿದ್ದ ಸಮಯಗಳನ್ನು ದಾಟಿಬಂದನು. ಆದರೆ ಭಯವು ತನ್ನ ಮೇಲೆ ಅಧಿಕಾರ ನಡಿಸುವಂತೆ ಅವನು ಬಿಡಲಿಲ್ಲ, ಏಕೆಂದರೆ ಅಗತ್ಯವಿರುವಾಗ ಕ್ರಿಯೆಗೈಯಲು ಸಿದ್ಧನಾಗಿ ತನ್ನ “ದೊಣ್ಣೆ” ಮತ್ತು ‘ಕೋಲಿನೊಂದಿಗೆ’ ದೇವರು ತನ್ನೊಂದಿಗಿದ್ದಾನೆ ಎಂಬುದನ್ನು ಅವನು ಮನಗಂಡನು. ಸಂರಕ್ಷಣೆಯ ಈ ಅರಿವು ದಾವೀದನನ್ನು ಸಂತೈಸಿತು ಮತ್ತು ಅವನನ್ನು ಯೆಹೋವನ ಸಮೀಪಕ್ಕೆ ಬರುವಂತೆ ಮಾಡಿತು ಎಂಬುದರಲ್ಲಿ ಸಂದೇಹವೇ ಇಲ್ಲ.b
14 ಇಂದು ಯೆಹೋವನು ತನ್ನ ಕುರಿಗಳನ್ನು ಹೇಗೆ ಸಂರಕ್ಷಿಸುತ್ತಾನೆ? ದೆವ್ವಗಳಾಗಲಿ ಮಾನವರಾಗಲಿ, ಯಾವುದೇ ವಿರೋಧಿಗಳು ಆತನ ಕುರಿಗಳನ್ನು ಭೂಮಿಯಿಂದ ನಿರ್ಮೂಲನಮಾಡುವುದರಲ್ಲಿ ಎಂದಿಗೂ ಸಫಲರಾಗುವುದಿಲ್ಲ ಎಂದು ಬೈಬಲ್ ನಮಗೆ ಆಶ್ವಾಸನೆ ನೀಡುತ್ತದೆ. ಯೆಹೋವನು ಎಂದಿಗೂ ಇದನ್ನು ಅನುಮತಿಸನು. (ಯೆಶಾಯ 54:17; 2 ಪೇತ್ರ 2:9) ಆದರೆ, ನಮ್ಮ ಕುರುಬನು ಎಲ್ಲ ರೀತಿಯ ವಿಪತ್ತುಗಳಿಂದ ನಮ್ಮನ್ನು ಕಾಪಾಡುವನು ಎಂಬುದು ಇದರ ಅರ್ಥವಲ್ಲ. ಮಾನವರು ಸಾಮಾನ್ಯವಾಗಿ ಅನುಭವಿಸುವ ಪರೀಕ್ಷೆಗಳನ್ನು ನಾವು ಅನುಭವಿಸುತ್ತೇವೆ ಮತ್ತು ಎಲ್ಲ ಸತ್ಯ ಕ್ರೈಸ್ತರ ಮೇಲೆ ಬರುವ ಹಿಂಸೆಯನ್ನು ನಾವು ಎದುರಿಸುತ್ತೇವೆ. (2 ತಿಮೊಥೆಯ 3:12; ಯಾಕೋಬ 1:2) ಕೆಲವೊಮ್ಮೆ ನಾವು ‘ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯಬಹುದಾದ’ ಸಮಯಗಳಿರುತ್ತವೆ. ಉದಾಹರಣೆಗೆ, ಹಿಂಸೆಯ ಕಾರಣದಿಂದ ಇಲ್ಲವೆ ಯಾವುದೋ ಆರೋಗ್ಯ ಸಮಸ್ಯೆಯ ಪರಿಣಾಮವಾಗಿ ನಾವು ಸಾವಿನಂಚಿಗೆ ಬಂದು ತಲಪಬಹುದು. ಅಥವಾ ನಾವು ತುಂಬ ಪ್ರೀತಿಸುವಂಥ ಯಾರಾದರೊಬ್ಬರು ಸಾವುಬದುಕಿನ ನಡುವೆ ಹೋರಾಡುತ್ತಿರಬಹುದು ಅಥವಾ ಸಾವಿಗೀಡಾಗಬಹುದು. ಹೀಗೆ ಘೋರ ಕಾರ್ಗತ್ತಲಿನ ಕ್ಷಣಗಳಾಗಿ ತೋರುವ ಇಂಥ ಸಮಯದಲ್ಲಿ ನಮ್ಮ ಕುರುಬನು ನಮ್ಮೊಂದಿಗಿದ್ದಾನೆ ಮತ್ತು ಆತನು ನಮ್ಮನ್ನು ಕಾಪಾಡುತ್ತಾನೆ. ಹೇಗೆ?
15 ಯೆಹೋವನು ಅದ್ಭುತಕರವಾದ ರೀತಿಯಲ್ಲಿ ಹಸ್ತಕ್ಷೇಪಮಾಡುವುದಾಗಿ ವಾಗ್ದಾನಿಸುವುದಿಲ್ಲ.c ಆದರೆ ನಾವು ಎದುರಿಸಬಹುದಾದ ಯಾವುದೇ ಅಡಚಣೆಗಳನ್ನು ಜಯಿಸಲು ಯೆಹೋವನು ನಮಗೆ ಸಹಾಯಮಾಡುವನು ಎಂಬ ಖಾತ್ರಿ ನಮಗಿರಸಾಧ್ಯವಿದೆ. ‘ನಾನಾವಿಧವಾದ ಕಷ್ಟಗಳನ್ನು’ ನಿಭಾಯಿಸಲು ಬೇಕಾದ ವಿವೇಕವನ್ನು ಆತನು ನಮಗೆ ದಯಪಾಲಿಸಬಲ್ಲನು. (ಯಾಕೋಬ 1:2-5) ಒಬ್ಬ ಕುರುಬನು ತನ್ನ ದೊಣ್ಣೆ ಅಥವಾ ಕೋಲನ್ನು ಪರಭಕ್ಷಕ ಪ್ರಾಣಿಗಳನ್ನು ಅಟ್ಟಿಸಲಿಕ್ಕಾಗಿ ಮಾತ್ರವಲ್ಲ ತನ್ನ ಕುರಿಗಳನ್ನು ಸರಿಯಾದ ದಿಕ್ಕಿನಲ್ಲಿ ನಡೆಸಲು ಮೃದುವಾಗಿ ತಿವಿಯಲಿಕ್ಕಾಗಿಯೂ ಉಪಯೋಗಿಸುತ್ತಾನೆ. ನಮ್ಮ ಪರಿಸ್ಥಿತಿಯಲ್ಲಿ ಗಮನಾರ್ಹವಾದ ಬದಲಾವಣೆಯನ್ನು ಉಂಟುಮಾಡಬಹುದಾದ ಬೈಬಲ್ ಆಧಾರಿತ ಸಲಹೆಯನ್ನು ನಾವು ಅನ್ವಯಿಸಲಿಕ್ಕಾಗಿ ಯೆಹೋವನು ನಮ್ಮನ್ನು ಮೃದುವಾಗಿ “ತಿವಿಯ”ಸಾಧ್ಯವಿದೆ. ಇದಕ್ಕಾಗಿ ಆತನು ಬಹುಶಃ ಒಬ್ಬ ಜೊತೆ ಆರಾಧಕನನ್ನು ಬಳಸಬಹುದು. ಅಷ್ಟುಮಾತ್ರವಲ್ಲ, ತಾಳಿಕೊಳ್ಳಲು ಅಗತ್ಯವಿರುವ ಬಲವನ್ನು ಯೆಹೋವನು ನಮಗೆ ನೀಡಶಕ್ತನಾಗಿದ್ದಾನೆ. (ಫಿಲಿಪ್ಪಿ 4:13) ತನ್ನ ಪವಿತ್ರಾತ್ಮದ ಮೂಲಕ ಆತನು ನಮ್ಮನ್ನು “ಬಲಾಧಿಕ್ಯ”ದೊಂದಿಗೆ ಸಜ್ಜುಗೊಳಿಸುತ್ತಾನೆ. (2 ಕೊರಿಂಥ 4:7) ಸೈತಾನನು ನಮ್ಮ ಮೇಲೆ ತರಬಹುದಾದ ಯಾವುದೇ ಪರೀಕ್ಷೆಯನ್ನು ತಾಳಿಕೊಳ್ಳುವಂತೆ ದೇವರ ಆತ್ಮವು ನಮ್ಮನ್ನು ಶಕ್ತರನ್ನಾಗಿ ಮಾಡಬಲ್ಲದು. (1 ಕೊರಿಂಥ 10:13) ಯೆಹೋವನು ನಮಗೆ ಸಹಾಯಮಾಡಲು ಸದಾ ಸಿದ್ಧನಾಗಿದ್ದಾನೆ ಎಂಬುದನ್ನು ತಿಳಿಯುವುದು ಸಾಂತ್ವನದಾಯಕವಾಗಿಲ್ಲವೊ?
16 ಹೌದು, ನಾವು ಯಾವ ಕಾರ್ಗತ್ತಲಿನ ಕಣಿವೆಯಲ್ಲಿರಬಹುದಾದರೂ, ಅದರಲ್ಲಿ ನಾವು ಒಬ್ಬರೇ ನಡೆಯಬೇಕಾಗಿರುವುದಿಲ್ಲ. ನಮ್ಮ ಕುರುಬನು ನಮ್ಮೊಂದಿಗಿದ್ದಾನೆ ಮತ್ತು ಆರಂಭದಲ್ಲಿ ನಾವು ಪೂರ್ಣವಾಗಿ ಅರ್ಥಮಾಡಿಕೊಳ್ಳದೆ ಇರಬಹುದಾದ ವಿಧಗಳಲ್ಲಿ ನಮಗೆ ಸಹಾಯಮಾಡುತ್ತಾನೆ. ತನಗೆ ಮಾರಕವಾದ ಮಿದುಳಿನ ಟ್ಯೂಮರ್ ಇದೆಯೆಂದು ಕಂಡುಕೊಂಡ ಒಬ್ಬ ಕ್ರೈಸ್ತ ಹಿರಿಯನ ಅನುಭವವನ್ನು ತೆಗೆದುಕೊಳ್ಳಿ. “ಆರಂಭದಲ್ಲಿ, ಯೆಹೋವನಿಗೆ ನನ್ನ ಮೇಲೆ ಕೋಪ ಬಂದಿದೆ ಅಥವಾ ಆತನು ನನ್ನನ್ನು ಪ್ರೀತಿಸುತ್ತಾನೊ ಇಲ್ಲವೊ ಎಂದು ನಾನು ಆಲೋಚಿಸುತ್ತಾ ಇದ್ದೆ ಎಂಬುದನ್ನು ನಾನು ಒಪ್ಪಿಕೊಳ್ಳಲೇಬೇಕು. ಆದರೆ ಯೆಹೋವನಿಂದ ದೂರಸರಿಯಬಾರದು ಎಂಬ ದೃಢನಿರ್ಧಾರವನ್ನು ನಾನು ಮಾಡಿದೆ. ನನ್ನ ಚಿಂತೆಗಳನ್ನು ಆತನಿಗೆ ವ್ಯಕ್ತಪಡಿಸಿದೆ. ಮತ್ತು ಯೆಹೋವನು ನನಗೆ ಸಹಾಯಮಾಡಿದನು, ಅನೇಕವೇಳೆ ನನ್ನ ಸಹೋದರ ಸಹೋದರಿಯರ ಮೂಲಕ ನನ್ನನ್ನು ಸಂತೈಸಿದನು. ಅನೇಕರು, ಗುರುತರವಾದ ಅಸ್ವಸ್ಥತೆಯೊಂದಿಗೆ ಹೆಣಗಾಡಿದ್ದರ ಕುರಿತಾದ ತಮ್ಮ ಸ್ವಂತ ಅನುಭವದ ಮೇಲಾಧಾರಿತವಾದ ಸಹಾಯಕರ ವಿಷಯಗಳನ್ನು ನನ್ನೊಂದಿಗೆ ಹಂಚಿಕೊಂಡರು. ಅವರ ಸಮತೂಕ ಹೇಳಿಕೆಗಳು, ನಾನು ಏನನ್ನು ಅನುಭವಿಸುತ್ತಿದ್ದೇನೋ ಅದು ಅಸಾಮಾನ್ಯವಾದದ್ದೇನಲ್ಲ ಎಂಬುದನ್ನು ನನಗೆ ನೆನಪುಹುಟ್ಟಿಸಿದವು. ಪ್ರಾಯೋಗಿಕ ಸಹಾಯ ಮತ್ತು ನನಗೆ ನೆರವನ್ನು ನೀಡಲಿಕ್ಕಾಗಿ ಅನೇಕರು ಮುಂದೆ ಬಂದದ್ದು, ಯೆಹೋವನಿಗೆ ನನ್ನ ವಿಷಯದಲ್ಲಿ ಅಸಮಾಧಾನವಿಲ್ಲ ಎಂಬ ಪುನರಾಶ್ವಾಸನೆಯನ್ನು ನೀಡಿತು. ಏನೇ ಆದರೂ ನನ್ನ ಅಸ್ವಸ್ಥತೆಯೊಂದಿಗೆ ನಾನು ಹೋರಾಟ ನಡೆಸಲೇಬೇಕಾಗಿದೆ ಮತ್ತು ಇದರ ಫಲಿತಾಂಶವೇನು ಎಂಬುದು ಸಹ ನನಗೆ ತಿಳಿದಿದೆ. ಆದರೆ ಯೆಹೋವನು ನನ್ನೊಂದಿಗಿದ್ದಾನೆ ಮತ್ತು ಈ ಪರೀಕ್ಷೆಯಾದ್ಯಂತ ಆತನು ನನಗೆ ಸಹಾಯಮಾಡುತ್ತಾ ಇರುವನು ಎಂಬ ನಿಶ್ಚಿತಾಭಿಪ್ರಾಯ ನನಗಿದೆ.”
“ನೀನು ನನಗೋಸ್ಕರ ಔತಣವನ್ನು ಸಿದ್ಧಪಡಿಸುತ್ತೀ”
17 ಈಗ ದಾವೀದನು ತನ್ನ ಕುರುಬನಲ್ಲಿನ ದೃಢವಿಶ್ವಾಸಕ್ಕಾಗಿರುವ ಮೂರನೆಯ ಕಾರಣವನ್ನು ತಿಳಿಸುತ್ತಾನೆ: ಯೆಹೋವನು ತನ್ನ ಕುರಿಗಳಿಗೆ ಆಹಾರವನ್ನು ಒದಗಿಸುತ್ತಾನೆ, ಅದು ಕೂಡ ಯಥೇಚ್ಛವಾಗಿ. ದಾವೀದನು ಬರೆಯುವುದು: “ವೈರಿಗಳ ಮುಂದೆಯೇ ನೀನು ನನಗೋಸ್ಕರ ಔತಣವನ್ನು ಸಿದ್ಧಪಡಿಸುತ್ತೀ; ನನ್ನ ತಲೆಗೆ ತೈಲವನ್ನು ಹಚ್ಚಿಸುತ್ತೀ. ನನ್ನ ಪಾತ್ರೆಯು ತುಂಬಿ ಹೊರಸೂಸುತ್ತದೆ.” (ಕೀರ್ತನೆ 23:5) ಈ ವಚನದಲ್ಲಿ ದಾವೀದನು ತನ್ನ ಕುರುಬನನ್ನು, ಯಥೇಚ್ಛವಾಗಿ ಆಹಾರ ಪಾನೀಯಗಳನ್ನು ಒದಗಿಸುವಂಥ ಉದಾರಮನೋಭಾವದ ಒಬ್ಬ ಆತಿಥೇಯನಾಗಿ ವರ್ಣಿಸುತ್ತಾನೆ. ಆರೈಕೆಮಾಡುವ ಕುರುಬ ಮತ್ತು ಉದಾರಮನೋಭಾವದ ಆತಿಥೇಯ ಎಂಬ ಎರಡು ದೃಷ್ಟಾಂತಗಳು ವಿರೋಧೋಕ್ತಿಗಳಾಗಿರುವುದಿಲ್ಲ. ಎಷ್ಟೆಂದರೂ, ತನ್ನ ಮಂದೆಯು ‘ಕೊರತೆಪಡದಂತೆ’ ನೋಡಿಕೊಳ್ಳಲಿಕ್ಕಾಗಿ, ಸಮೃದ್ಧವಾದ ಮೇವಿನ ಹುಲ್ಲುಗಾವಲುಗಳು ಎಲ್ಲಿ ಕಂಡುಬರುತ್ತವೆ ಮತ್ತು ಸಾಕಷ್ಟು ಕುಡಿಯುವ ನೀರು ಎಲ್ಲಿ ಲಭ್ಯವಿದೆ ಎಂಬುದು ಒಬ್ಬ ಒಳ್ಳೇ ಕುರುಬನಿಗೆ ತಿಳಿದಿರಬೇಕು.—ಕೀರ್ತನೆ 23:1, 2.
18 ನಮ್ಮ ಕುರುಬನು ಸಹ ಉದಾರಮನೋಭಾವದ ಆತಿಥೇಯನಾಗಿದ್ದಾನೋ? ಇದರಲ್ಲಿ ಸಂದೇಹವೇ ಇಲ್ಲ! ಈಗ ನಾವು ಆನಂದಿಸುತ್ತಿರುವ ಆಧ್ಯಾತ್ಮಿಕ ಆಹಾರದ ಗುಣಮಟ್ಟ, ಪ್ರಮಾಣ ಮತ್ತು ವೈವಿಧ್ಯದ ಕುರಿತು ಸ್ವಲ್ಪ ಆಲೋಚಿಸಿರಿ. ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗದ ಮೂಲಕ ಯೆಹೋವನು ನಮಗೆ ಸಹಾಯಕರ ಪ್ರಕಾಶನಗಳನ್ನು ಮತ್ತು ಕೂಟಗಳು, ಸಮ್ಮೇಳನಗಳು ಹಾಗೂ ಅಧಿವೇಶನಗಳಲ್ಲಿ ಬೋಧಪ್ರದವಾದ ಕಾರ್ಯಕ್ರಮಗಳನ್ನು ಒದಗಿಸುತ್ತಿದ್ದಾನೆ. ಇವೆಲ್ಲವೂ ನಮ್ಮ ಆಧ್ಯಾತ್ಮಿಕ ಆವಶ್ಯಕತೆಗಳನ್ನು ಪೂರೈಸುತ್ತವೆ. (ಮತ್ತಾಯ 24:45-47) ಆಧ್ಯಾತ್ಮಿಕ ಆಹಾರಕ್ಕೆ ಸ್ವಲ್ಪವೂ ಕೊರತೆಯಿಲ್ಲ ಎಂಬುದಂತೂ ನಿಶ್ಚಯ. “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಕೋಟಿಗಟ್ಟಲೆ ಬೈಬಲುಗಳನ್ನು ಮತ್ತು ಬೈಬಲ್ ಅಧ್ಯಯನ ಸಹಾಯಕಗಳನ್ನು ಒದಗಿಸಿದೆ. ಇಂಥ ಪ್ರಕಾಶನಗಳು ಈಗ 413 ಭಾಷೆಗಳಲ್ಲಿ ದೊರೆಯುತ್ತವೆ. ಯೆಹೋವನು ಈ ಆಧ್ಯಾತ್ಮಿಕ ಆಹಾರವನ್ನು ವೈವಿಧ್ಯಮಯವಾದ ರೀತಿಯಲ್ಲಿ—‘ಹಾಲಿನಂತಿರುವ’ ಮೂಲಭೂತ ಬೈಬಲ್ ಬೋಧನೆಗಳಿಂದ ಹಿಡಿದು ‘ಗಟ್ಟಿಯಾದ ಆಹಾರದಂತಿರುವ’ ಗಹನವಾದ ಆಧ್ಯಾತ್ಮಿಕ ಮಾಹಿತಿಯ ತನಕ—ಒದಗಿಸಿದ್ದಾನೆ. (ಇಬ್ರಿಯ 5:11-14) ಇದರ ಫಲಿತಾಂಶವಾಗಿ, ನಾವು ಸಮಸ್ಯೆಗಳನ್ನು ಎದುರಿಸುವಾಗ ಅಥವಾ ನಿರ್ಣಯಗಳನ್ನು ಮಾಡಲಿಕ್ಕಿರುವಾಗ, ಸಾಮಾನ್ಯವಾಗಿ ನಮಗೆ ಏನು ಅಗತ್ಯವಿದೆಯೋ ಅದನ್ನೇ ನಾವು ಕಂಡುಕೊಳ್ಳಸಾಧ್ಯವಿದೆ. ಇಂಥ ಆಧ್ಯಾತ್ಮಿಕ ಆಹಾರವಿಲ್ಲದಿರುತ್ತಿದ್ದರೆ ನಾವು ಹೇಗಿರುತ್ತಿದ್ದೆವು? ನಮ್ಮ ಕುರುಬನು ನಿಜವಾಗಿಯೂ ಅತ್ಯಂತ ಉದಾರಮನೋಭಾವದಿಂದ ಒದಗಿಸುವಾತನಾಗಿದ್ದಾನೆ!—ಯೆಶಾಯ 25:6; 65:13.
“ನಾನು . . . ಯೆಹೋವನ ಮಂದಿರದಲ್ಲಿ ವಾಸಿಸುವೆನು”
19 ತನ್ನ ಕುರುಬನ ಮತ್ತು ತನಗೆ ಒದಗಿಸುವಿಕೆಗಳನ್ನು ಮಾಡುವಾತನ ಮಾರ್ಗಗಳನ್ನು ಪರಿಗಣಿಸಿದ ಬಳಿಕ ದಾವೀದನು ಮುಕ್ತಾಯಗೊಳಿಸುವುದು: “ನಿಶ್ಚಯವಾಗಿ ನನ್ನ ಜೀವಮಾನದಲ್ಲೆಲ್ಲಾ ಶುಭವೂ ಕೃಪೆಯೂ ನನ್ನನ್ನು ಹಿಂಬಾಲಿಸುವವು. ನಾನು ಸದಾಕಾಲವೂ ಯೆಹೋವನ ಮಂದಿರದಲ್ಲಿ ವಾಸಿಸುವೆನು.” (ಕೀರ್ತನೆ 23:6) ದಾವೀದನು ಕೃತಜ್ಞತೆ ಮತ್ತು ನಂಬಿಕೆಯಿಂದ ತುಂಬಿದ ಹೃದಯದಿಂದ ಮಾತಾಡಿದನು, ಅಂದರೆ ಗತ ವಿಷಯಗಳನ್ನು ಜ್ಞಾಪಿಸಿಕೊಳ್ಳುವುದರಲ್ಲಿ ಕೃತಜ್ಞತೆ ಮತ್ತು ಭವಿಷ್ಯತ್ತನ್ನು ಎದುರುನೋಡುವುದರಲ್ಲಿ ನಂಬಿಕೆಯನ್ನು ತೋರಿಸಿದನು. ಈ ಮುಂಚೆ ಒಬ್ಬ ಕುರುಬನಾಗಿದ್ದ ದಾವೀದನಿಗೆ ಸುಭದ್ರ ಅನಿಸಿಕೆ ಇದೆ, ಏಕೆಂದರೆ ತನ್ನ ಸ್ವರ್ಗೀಯ ಕುರುಬನಾದ ಯೆಹೋವನಿಗೆ ಸಮೀಪವಾಗಿ ಉಳಿಯುವಷ್ಟು ಸಮಯ ತಾನು ಯಾವಾಗಲೂ ಆತನ ಪ್ರೀತಿಪರ ಆರೈಕೆಯ ಕೆಳಗಿರುವೆನು ಎಂಬುದು ಅವನಿಗೆ ತಿಳಿದಿದೆ.
20 ಕೀರ್ತನೆ 23ರಲ್ಲಿ ದಾಖಲಿಸಲ್ಪಟ್ಟಿರುವ ಸುಂದರವಾದ ಮಾತುಗಳಿಗಾಗಿ ನಾವೆಷ್ಟು ಆಭಾರಿಗಳಾಗಿದ್ದೇವೆ! ಯೆಹೋವನು ತನ್ನ ಕುರಿಗಳನ್ನು ಹೇಗೆ ನಡಿಸುತ್ತಾನೆ, ಸಂರಕ್ಷಿಸುತ್ತಾನೆ ಮತ್ತು ಅವುಗಳಿಗೆ ಆಹಾರವನ್ನು ಒದಗಿಸುತ್ತಾನೆ ಎಂಬುದನ್ನು ವರ್ಣಿಸಲು ದಾವೀದನು ಅತ್ಯಂತ ಸೂಕ್ತವಾದ ವಿಧವನ್ನು ಕಂಡುಕೊಂಡನು. ದಾವೀದನ ಹೃತ್ಪೂರ್ವಕ ಅಭಿವ್ಯಕ್ತಿಗಳು, ನಮ್ಮ ಕುರುಬನಾಗಿರುವ ಯೆಹೋವನ ಕಡೆಗೆ ನಾವೂ ನೋಡಸಾಧ್ಯವಿದೆ ಎಂಬ ದೃಢವಿಶ್ವಾಸವನ್ನು ನಮ್ಮಲ್ಲಿ ಮೂಡಿಸಲಿಕ್ಕಾಗಿ ಬೈಬಲಿನಲ್ಲಿ ದಾಖಲಿಸಲ್ಪಟ್ಟಿವೆ. ಹೌದು, ನಾವು ಯೆಹೋವನಿಗೆ ಸಮೀಪವಾಗಿ ಉಳಿಯುವಷ್ಟು ಸಮಯ ಆತನು “ಸದಾಕಾಲವೂ” ಒಬ್ಬ ಪ್ರೀತಿಯ ಕುರುಬನೋಪಾದಿ ನಮ್ಮನ್ನು ಆರೈಕೆಮಾಡುವನು. ಆದರೆ, ನಮ್ಮ ಮಹಾನ್ ಕುರುಬನಾಗಿರುವ ಯೆಹೋವನ ಕುರಿಗಳಾಗಿ ಆತನೊಂದಿಗೆ ನಡೆಯುವ ಜವಾಬ್ದಾರಿ ನಮಗಿದೆ. ಇದರಲ್ಲಿ ಏನು ಒಳಗೂಡಿದೆ ಎಂಬುದನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಾಗುವುದು.
[ಪಾದಟಿಪ್ಪಣಿಗಳು]
b ದಾವೀದನು ಅನೇಕ ಕೀರ್ತನೆಗಳನ್ನು ರಚಿಸಿದನು ಮತ್ತು ಅವನನ್ನು ಅಪಾಯದಿಂದ ಕಾಪಾಡಿದ್ದಕ್ಕಾಗಿ ಅವುಗಳಲ್ಲಿ ಯೆಹೋವನನ್ನು ಸ್ತುತಿಸಿದನು.—ಉದಾಹರಣೆಗೆ 18, 34, 56, 57, 59 ಮತ್ತು 63ನೇ ಕೀರ್ತನೆಗಳ ಮೇಲ್ಬರಹಗಳನ್ನು ನೋಡಿರಿ.
c ಅಕ್ಟೋಬರ್ 1, 2003ರ ಕಾವಲಿನಬುರುಜು ಸಂಚಿಕೆಯಲ್ಲಿರುವ “ದೈವಿಕ ಹಸ್ತಕ್ಷೇಪ—ನಾವು ಏನನ್ನು ನಿರೀಕ್ಷಿಸಸಾಧ್ಯವಿದೆ?” ಎಂಬ ಲೇಖನವನ್ನು ನೋಡಿ.
ನಿಮಗೆ ನೆನಪಿದೆಯೆ?
• ದಾವೀದನು ಯೆಹೋವನನ್ನು ಒಬ್ಬ ಕುರುಬನಿಗೆ ಹೋಲಿಸಿದ್ದು ಸೂಕ್ತವಾದದ್ದಾಗಿದೆ ಏಕೆ?
• ಯೆಹೋವನು ನಮ್ಮನ್ನು ನಡೆಸುವಾಗ ಹೇಗೆ ಸಹಾನುಭೂತಿಯನ್ನು ತೋರಿಸುತ್ತಾನೆ?
• ಯಾವ ವಿಧಗಳಲ್ಲಿ ಯೆಹೋವನು ನಮಗೆ ಪರೀಕ್ಷೆಗಳನ್ನು ತಾಳಿಕೊಳ್ಳಲು ಸಹಾಯಮಾಡುತ್ತಾನೆ?
• ಯೆಹೋವನು ಉದಾರಮನೋಭಾವದ ಒಬ್ಬ ಆತಿಥೇಯನಾಗಿದ್ದಾನೆ ಎಂಬುದನ್ನು ಯಾವುದು ತೋರಿಸುತ್ತದೆ?
[ಅಧ್ಯಯನ ಪ್ರಶ್ನೆಗಳು]
1-3. ದಾವೀದನು ಯೆಹೋವನನ್ನು ಒಬ್ಬ ಕುರುಬನಿಗೆ ಹೋಲಿಸಿದ್ದು ಆಶ್ಚರ್ಯಕರ ಸಂಗತಿಯಲ್ಲವೇಕೆ?
4, 5. ಬೈಬಲು ಕುರಿಗಳ ಸ್ವಭಾವವನ್ನು ಹೇಗೆ ವರ್ಣಿಸುತ್ತದೆ?
6. ಪುರಾತನ ಕಾಲದ ಕುರುಬನೊಬ್ಬನು ಸಾಮಾನ್ಯವಾಗಿ ಒಂದು ದಿನದಲ್ಲಿ ಏನೆಲ್ಲ ಮಾಡಲಿಕ್ಕಿರುತ್ತಿತ್ತು ಎಂಬುದನ್ನು ಒಂದು ಬೈಬಲ್ ಶಬ್ದಕೋಶವು ಹೇಗೆ ವಿವರಿಸುತ್ತದೆ?
7. ಕೆಲವೊಮ್ಮೆ ಒಬ್ಬ ಕುರುಬನು ಹೆಚ್ಚಿನ ತಾಳ್ಮೆ ಮತ್ತು ಕೋಮಲಭಾವವನ್ನು ತೋರಿಸುವ ಅಗತ್ಯವಿತ್ತೇಕೆ?
8. ಯೆಹೋವನಲ್ಲಿನ ತನ್ನ ದೃಢವಿಶ್ವಾಸಕ್ಕಾಗಿ ದಾವೀದನು ಯಾವ ಕಾರಣಗಳನ್ನು ಕೊಡುತ್ತಾನೆ?
9. ನೆಮ್ಮದಿಯ ಯಾವ ದೃಶ್ಯವನ್ನು ದಾವೀದನು ಚಿತ್ರಿಸಿದನು, ಮತ್ತು ಕುರಿಗಳು ಇಂಥ ಒಂದು ಪ್ರಶಾಂತ ಸನ್ನಿವೇಶಕ್ಕೆ ಬಂದು ಮುಟ್ಟುವುದು ಹೇಗೆ?
10. ಯಾವ ರೀತಿಯಲ್ಲಿ ದೇವರು ನಮ್ಮಲ್ಲಿ ದೃಢವಿಶ್ವಾಸವನ್ನು ತೋರಿಸುತ್ತಾನೆ?
11. ತನ್ನ ಕುರಿಗಳನ್ನು ನಡಿಸುವಾಗ ಯೆಹೋವನು ಏನನ್ನು ಗಣನೆಗೆ ತೆಗೆದುಕೊಳ್ಳುತ್ತಾನೆ, ಮತ್ತು ಆತನು ನಮ್ಮಿಂದ ಏನನ್ನು ಕೇಳಿಕೊಳ್ಳುತ್ತಾನೋ ಅದರಲ್ಲಿ ಇದು ಹೇಗೆ ಪ್ರತಿಬಿಂಬಿಸಲ್ಪಟ್ಟಿದೆ?
12. ಮೋಶೆಯ ಧರ್ಮಶಾಸ್ತ್ರದ ಯಾವ ಉದಾಹರಣೆಯು, ಯೆಹೋವನು ತನ್ನ ಕುರಿಗಳ ‘ನಡಿಗೆಗೆ ಸರಿಯಾಗಿ’ ಅವುಗಳನ್ನು ನಡಿಸುತ್ತಾನೆ ಎಂಬುದನ್ನು ದೃಷ್ಟಾಂತಿಸುತ್ತದೆ?
13. ಕೀರ್ತನೆ 23:4ರಲ್ಲಿ ದಾವೀದನು ಹೇಗೆ ಹೆಚ್ಚು ಆಪ್ತತೆಯಿಂದ ಮಾತಾಡಿದನು, ಮತ್ತು ಇದು ಆಶ್ಚರ್ಯಕರವಲ್ಲವೇಕೆ?
14. ಯೆಹೋವನ ಸಂರಕ್ಷಣೆಯ ವಿಷಯದಲ್ಲಿ ಬೈಬಲ್ ನಮಗೆ ಯಾವ ಆಶ್ವಾಸನೆಯನ್ನು ನೀಡುತ್ತದೆ, ಆದರೆ ಇದರ ಅರ್ಥ ಏನಾಗಿರುವುದಿಲ್ಲ?
15, 16. (ಎ) ನಾವು ಎದುರಿಸಬಹುದಾದ ಯಾವುದೇ ಅಡಚಣೆಗಳನ್ನು ನಿಭಾಯಿಸಲು ಯೆಹೋವನು ಯಾವ ವಿಧಗಳಲ್ಲಿ ನಮಗೆ ಸಹಾಯಮಾಡುತ್ತಾನೆ? (ಬಿ) ಪರೀಕ್ಷೆಯ ಸಮಯಗಳಲ್ಲಿ ಯೆಹೋವನು ನಮಗೆ ಹೇಗೆ ಸಹಾಯಮಾಡುತ್ತಾನೆ ಎಂಬುದನ್ನು ತೋರಿಸಲಿಕ್ಕಾಗಿ ಒಂದು ಅನುಭವವನ್ನು ತಿಳಿಸಿರಿ.
17. ಕೀರ್ತನೆ 23:5ರಲ್ಲಿ ದಾವೀದನು ಯೆಹೋವನನ್ನು ಹೇಗೆ ವರ್ಣಿಸುತ್ತಾನೆ, ಮತ್ತು ಒಬ್ಬ ಕುರುಬನ ದೃಷ್ಟಾಂತಕ್ಕೆ ಇದು ವ್ಯತಿರಿಕ್ತವಾಗಿಲ್ಲ ಏಕೆ?
18. ಯೆಹೋವನು ಉದಾರಮನೋಭಾವದ ಆತಿಥೇಯನಾಗಿದ್ದಾನೆ ಎಂಬುದನ್ನು ಯಾವುದು ತೋರಿಸುತ್ತದೆ?
19, 20. (ಎ) ಕೀರ್ತನೆ 23:6ರಲ್ಲಿ ದಾವೀದನು ಯಾವ ದೃಢವಿಶ್ವಾಸವನ್ನು ವ್ಯಕ್ತಪಡಿಸಿದನು, ಮತ್ತು ನಮಗೂ ಈ ದೃಢವಿಶ್ವಾಸವು ಹೇಗೆ ಇರಸಾಧ್ಯವಿದೆ? (ಬಿ) ಮುಂದಿನ ಲೇಖನದಲ್ಲಿ ಏನನ್ನು ಚರ್ಚಿಸಲಾಗುವುದು?
[ಪುಟ 18ರಲ್ಲಿರುವ ಚಿತ್ರ]
ಇಸ್ರಾಯೇಲಿನಲ್ಲಿದ್ದ ಒಬ್ಬ ಕುರುಬನಂತೆ ಯೆಹೋವನು ತನ್ನ ಕುರಿಗಳನ್ನು ನಡಿಸುತ್ತಾನೆ