ಲೂಕ
15 ತೆರಿಗೆ ವಸೂಲಿ ಮಾಡೋರು, ಪಾಪಿಗಳು ಎಲ್ರೂ ಯೇಸುವಿನ ಮಾತುಗಳನ್ನ ಕೇಳಿಸ್ಕೊಳ್ಳೋಕೆ ಬಂದ್ರು.+ 2 ಇದನ್ನ ನೋಡಿದ ಫರಿಸಾಯರು, ಪಂಡಿತರು “ಈ ಮನುಷ್ಯ ಎಲ್ಲ ಪಾಪಿಗಳನ್ನ ಕರೆದು ಅವ್ರ ಜೊತೆ ಊಟ ಮಾಡ್ತಾ ಇದ್ದಾನೆ” ಅಂತ ಗುಣುಗುಟ್ತಾ ಇದ್ರು. 3 ಆಗ ಆತನು ಅವ್ರಿಗೆ ಈ ಉದಾಹರಣೆ ಹೇಳಿದನು. 4 “ನಿಮ್ಮಲ್ಲಿ ಒಬ್ಬನ ಹತ್ರ 100 ಕುರಿ ಇದೆ ಅಂದ್ಕೊಳ್ಳಿ. ಅದ್ರಲ್ಲಿ ಒಂದು ಕಳೆದುಹೋಯ್ತು. ನೀವು ಆ 99 ಕುರಿನ ಅಲ್ಲೇ ಬಿಟ್ಟು ಕಳೆದುಹೋಗಿರೋ ಒಂದು ಕುರಿಗಾಗಿ ಹುಡುಕಿಕೊಂಡು ಹೋಗಲ್ವಾ?+ 5 ಅದು ಸಿಕ್ಕಾಗ ಅದನ್ನ ಹೆಗಲ ಮೇಲೆ ಹಾಕೊಂಡು ಖುಷಿಪಡ್ತೀರ. 6 ಮನೆಗೆ ವಾಪಸ್ ಬಂದಮೇಲೆ ಸ್ನೇಹಿತರನ್ನ, ಅಕ್ಕಪಕ್ಕದವ್ರನ್ನ ಕರೆದು ‘ನೀವೂ ಖುಷಿಪಡಿ. ಯಾಕಂದ್ರೆ ಕಳೆದುಹೋಗಿದ್ದ ನನ್ನ ಕುರಿ ಸಿಕ್ತು’ ಅಂತೀರ.+ 7 ಅದೇ ರೀತಿ ಪಶ್ಚಾತ್ತಾಪಪಡೋ ಅಗತ್ಯ ಇಲ್ಲದಿರೋ 99 ಜನ ನೀತಿವಂತರಿಗಿಂತ ಪಶ್ಚಾತ್ತಾಪಪಡೋ+ ಒಬ್ಬ ಪಾಪಿ ಬಗ್ಗೆ ಸ್ವರ್ಗದಲ್ಲಿ ಇರೋರು ತುಂಬ ಸಂತೋಷ ಪಡ್ತಾರೆ ಅಂತ ಹೇಳ್ತೀನಿ.
8 ಒಬ್ಬ ಸ್ತ್ರೀ ಹತ್ರ ಹತ್ತು ಬೆಳ್ಳಿ* ನಾಣ್ಯ ಇದೆ ಅಂದ್ಕೊಳ್ಳಿ. ಅದ್ರಲ್ಲಿ ಒಂದು ಕಳೆದುಹೋದ್ರೆ ಅವಳು ದೀಪ ಹಚ್ಚಿ ಮನೆಯೆಲ್ಲ ಗುಡಿಸಿ ಅದು ಸಿಗೋ ತನಕ ಹುಡುಕದೆ ಇರ್ತಾಳಾ? 9 ಅವಳಿಗೆ ಅದು ಸಿಕ್ಕಾಗ ಗೆಳತಿಯರನ್ನ, ಅಕ್ಕಪಕ್ಕದವರನ್ನ ಕರೆದು ‘ನನ್ನ ಜೊತೆ ಖುಷಿಪಡಿ. ಯಾಕಂದ್ರೆ ಕಳೆದುಹೋಗಿದ್ದ ಬೆಳ್ಳಿ* ನಾಣ್ಯ ಸಿಕ್ತು’ ಅಂತಾಳೆ. 10 ಅದೇ ರೀತಿ ಪಶ್ಚಾತ್ತಾಪಪಡೋ ಒಬ್ಬ ಪಾಪಿಯನ್ನ ನೋಡಿ ದೇವದೂತರು ಸಹ ತುಂಬ ಖುಷಿ ಪಡ್ತಾರೆ ಅಂತ ಹೇಳ್ತೀನಿ.”+
11 ಆಮೇಲೆ ಹೀಗಂದನು “ಒಬ್ಬ ಮನುಷ್ಯನಿಗೆ ಇಬ್ಬರು ಗಂಡುಮಕ್ಕಳಿದ್ರು. 12 ಚಿಕ್ಕ ಮಗ ಅಪ್ಪನ ಹತ್ರ ಬಂದು ‘ಅಪ್ಪಾ, ಆಸ್ತಿಯಲ್ಲಿ ನನ್ನ ಪಾಲು ಕೊಡು’ ಅಂತ ಕೇಳಿದ. ಆಗ ಅಪ್ಪ ಅವನ ಪಾಲು ಕೊಟ್ಟ. 13 ಸ್ವಲ್ಪ ದಿನ ಆದಮೇಲೆ ಅವನು ತನ್ನ ವಸ್ತುಗಳನ್ನೆಲ್ಲ ಗಂಟುಮೂಟೆ ಕಟ್ಕೊಂಡು ದೂರದೇಶಕ್ಕೆ ಹೋದ. ಅಲ್ಲಿ ಬೇಕಾಬಿಟ್ಟಿ* ಜೀವನ ಮಾಡಿ ಆಸ್ತಿಯನ್ನೆಲ್ಲ ಕಳ್ಕೊಂಡ. 14 ಹೀಗೆ ಎಲ್ಲ ಹಾಳುಮಾಡಿದ. ಆಮೇಲೆ ಆ ದೇಶದಲ್ಲಿ ದೊಡ್ಡ ಬರ ಬಂತು. ಆಗ ಅವನ ಹತ್ರ ಏನೂ ಇರ್ಲಿಲ್ಲ. 15 ಕೊನೆಗೆ ಆ ದೇಶದಲ್ಲಿ ಒಬ್ಬನ ಹತ್ರ ಕೆಲಸಕ್ಕೆ ಸೇರ್ಕೊಂಡ. ಆ ವ್ಯಕ್ತಿ ಹಂದಿ+ ಮೇಯಿಸೋ ಕೆಲಸ ಕೊಟ್ಟು ಹೊಲಕ್ಕೆ ಕಳಿಸಿದ. 16 ಅವನು ಹಂದಿಗಳು ತಿಂತಿದ್ದ ಕಾಯಿಗಳನ್ನ ತಿಂದು ಹೊಟ್ಟೆ ತುಂಬಿಸ್ಕೊಳ್ಳಬೇಕು ಅಂತ ಆಸೆಪಟ್ಟ. ಆದ್ರೆ ಅವನಿಗೆ ಯಾರೂ ಏನೂ ಕೊಡ್ಲಿಲ್ಲ.
17 ಆಮೇಲೆ ಅವನಿಗೆ ಬುದ್ಧಿ ಬಂತು. ‘ನನ್ನ ಅಪ್ಪನ ಹತ್ರ ಎಷ್ಟೋ ಜನ ಕೂಲಿಗಳು ಇದ್ದಾರೆ. ಅವ್ರಿಗೆ ಬೇಕಾದಷ್ಟು ಊಟ ಇರುತ್ತೆ. ಆದ್ರೆ ಇಲ್ಲಿ ಬರ ಬಂದು ನಾನು ಊಟ ಇಲ್ಲದೆ ಸಾಯ್ತಾ ಇದ್ದೀನಿ! 18 ಅಪ್ಪನ ಹತ್ರ ಹೋಗಿ “ಅಪ್ಪಾ, ನಾನು ದೇವರ ವಿರುದ್ಧ, ನಿನ್ನ ವಿರುದ್ಧ ತಪ್ಪು ಮಾಡಿಬಿಟ್ಟೆ. 19 ನಿನ್ನ ಮಗ ಅಂತ ಹೇಳಕ್ಕೂ ನಂಗೆ ಯೋಗ್ಯತೆ ಇಲ್ಲ. ನನ್ನನ್ನೂ ನಿನ್ನ ಕೂಲಿಗಳಲ್ಲಿ ಒಬ್ಬನ ತರ ಕೆಲಸಕ್ಕೆ ಇಟ್ಕೊ” ಅಂತ ಹೇಳ್ತೀನಿ’ ಅಂದ್ಕೊಂಡ. 20 ಆಮೇಲೆ ಅಪ್ಪನ ಹತ್ರ ಹೋದ. ಮಗ ಇನ್ನೂ ತುಂಬ ದೂರ ಇರುವಾಗಲೇ ಅಪ್ಪ ಅವನನ್ನ ನೋಡಿ ಕನಿಕರಪಟ್ಟು ಓಡೋಡಿ ಬಂದು ಅಪ್ಕೊಂಡು ಮುತ್ತು ಕೊಟ್ಟ. 21 ಆಗ ಮಗ ‘ಅಪ್ಪಾ, ನಾನು ದೇವರ ವಿರುದ್ಧ, ನಿನ್ನ ವಿರುದ್ಧ ತಪ್ಪು ಮಾಡಿಬಿಟ್ಟೆ.+ ನಿನ್ನ ಮಗ ಅಂತ ಹೇಳಕ್ಕೂ ನಂಗೆ ಯೋಗ್ಯತೆ ಇಲ್ಲ. ನನ್ನನ್ನೂ ನಿನ್ನ ಕೂಲಿಗಳಲ್ಲಿ ಒಬ್ಬನ ತರ ಕೆಲಸಕ್ಕೆ ಇಟ್ಕೊ’ ಅಂದ. 22 ಆದ್ರೆ ಆ ಅಪ್ಪ ಸೇವಕರಿಗೆ ‘ಬೇಗ ಹೋಗಿ ಒಳ್ಳೇ ಬಟ್ಟೆ ತಂದು ಇವನಿಗೆ ಹಾಕಿ. ಇವನ ಬೆರಳಿಗೆ ಉಂಗುರ ಹಾಕಿ. ಕಾಲಿಗೆ ಚಪ್ಪಲಿ ಹಾಕಿ. 23 ಅಷ್ಟೇ ಅಲ್ಲ ಒಂದು ಕೊಬ್ಬಿದ ಕರು ತಂದು ಕಡಿರಿ. ಊಟಮಾಡಿ ಖುಷಿಪಡೋಣ, ಹಬ್ಬ ಮಾಡೋಣ. 24 ಯಾಕಂದ್ರೆ ನನ್ನ ಚಿಕ್ಕ ಮಗ ಸತ್ತುಹೋಗಿದ್ದ, ಆದ್ರೆ ಈಗ ಬದುಕಿದ್ದಾನೆ.+ ಕಳೆದುಹೋಗಿದ್ದ, ಈಗ ಸಿಕ್ಕಿದ್ದಾನೆ’ ಅಂದ. ಅವ್ರೆಲ್ಲ ಖುಷಿಪಡ್ತಾ ಹಬ್ಬ ಮಾಡಿದ್ರು.
25 ಆಗ ದೊಡ್ಡ ಮಗ ಹೊಲದಲ್ಲಿದ್ದ. ಅವನು ಮನೆ ಹತ್ರ ಬರ್ತಿದ್ದಾಗ ಹಬ್ಬದ ಸಂಗೀತ, ಕುಣಿದಾಡೋ ಸದ್ದು ಕೇಳಿಸ್ತು. 26 ಒಬ್ಬ ಸೇವಕನನ್ನ ಕರೆದು ‘ಏನಾಗ್ತಿದೆ ಇಲ್ಲಿ’ ಅಂತ ಕೇಳಿದ. 27 ಅದಕ್ಕೆ ಸೇವಕ ‘ನಿನ್ನ ತಮ್ಮ ಬಂದಿದ್ದಾನೆ. ಅವನು ಸುರಕ್ಷಿತವಾಗಿ* ವಾಪಸ್ ಬಂದಿರೋದಕ್ಕೆ ನಿನ್ನ ತಂದೆ ಕೊಬ್ಬಿದ ಕರು ಕೊಯ್ಸಿದ್ದಾನೆ’ ಅಂದ. 28 ಅವನು ಸಿಟ್ಟು ಮಾಡ್ಕೊಂಡು ಒಳಗೆ ಹೋಗಲಿಲ್ಲ. ಆಗ ಅಪ್ಪ ಬಂದು ಒಳಗೆ ಬಾ ಅಂತ ಬೇಡ್ಕೊಂಡ. 29 ಅದಕ್ಕೆ ಮಗ ‘ನಾನು ತುಂಬ ವರ್ಷ ಕಷ್ಟಪಟ್ಟು ದುಡಿದೆ. ಒಂದು ಸಲನೂ ನಿನ್ನ ಮಾತು ಮೀರಿಲ್ಲ. ಹಾಗಿದ್ರೂ ಸ್ನೇಹಿತರ ಜೊತೆ ಖುಷಿಪಡು ಅಂತ ನೀನು ನನಗೆ ಒಂದು ಆಡುಮರಿನೂ ಕೊಟ್ಟಿಲ್ಲ. 30 ಆದ್ರೆ ವೇಶ್ಯೆಯರ ಜೊತೆ ಸುತ್ತಾಡಿ ನಿನ್ನ ಆಸ್ತಿಯೆಲ್ಲ ಹಾಳುಮಾಡಿ* ಬಂದಿರೋ ಅವನಿಗಾಗಿ ಕೊಬ್ಬಿದ ಕರುವನ್ನೇ ಕೊಯ್ಸಿದ್ದೀಯ’ ಅಂದ. 31 ಆಗ ಅಪ್ಪ ‘ಕಂದಾ, ನೀನು ಯಾವಾಗ್ಲೂ ನನ್ನ ಜೊತೆನೇ ಇದ್ದೆ. ನನ್ನದೆಲ್ಲಾ ನಿಂದೇ. 32 ಆದ್ರೆ ನಾವೀಗ ಖುಷಿಪಡಬೇಕು. ಹಬ್ಬ ಮಾಡಬೇಕು. ಯಾಕಂದ್ರೆ ನಿನ್ನ ತಮ್ಮ ಸತ್ತುಹೋಗಿದ್ದ, ಈಗ ಬದುಕಿ ಬಂದಿದ್ದಾನೆ. ಕಳೆದುಹೋಗಿದ್ದ, ಈಗ ಸಿಕ್ಕಿದ್ದಾನೆ.’”