ಪ್ರೀತಿ ತೋರಿಸಿ ಬಲಪಡಿಸಿ
“ಪ್ರೀತಿಯು ಭಕ್ತಿವೃದ್ಧಿಮಾಡುತ್ತದೆ.”—1 ಕೊರಿಂ. 8:1.
1. ಯೇಸು ತಾನು ಸಾಯುವ ಹಿಂದಿನ ರಾತ್ರಿ ತನ್ನ ಶಿಷ್ಯರ ಹತ್ತಿರ ಮುಖ್ಯವಾಗಿ ಯಾವುದರ ಬಗ್ಗೆ ಮಾತಾಡಿದನು?
ಯೇಸು ತಾನು ಸಾಯುವ ಹಿಂದಿನ ರಾತ್ರಿ ತನ್ನ ಶಿಷ್ಯರ ಹತ್ತಿರ ಮಾತಾಡುತ್ತಿರುವಾಗ ಪ್ರೀತಿ ಎಂಬ ಪದವನ್ನು ಹೆಚ್ಚುಕಡಿಮೆ 30 ಸಲ ಬಳಸಿದನು. ಅವರೆಲ್ಲರೂ ‘ಒಬ್ಬರನ್ನೊಬ್ಬರು ಪ್ರೀತಿಸಬೇಕು’ ಎಂದು ಹೇಳಿದನು. (ಯೋಹಾ. 15:12, 17) ಅವರ ಮಧ್ಯೆ ಎಷ್ಟೊಂದು ಪ್ರೀತಿ ಇರಬೇಕಿತ್ತೆಂದರೆ, ಅದನ್ನು ನೋಡಿಯೇ ಅವರು ಕ್ರಿಸ್ತನ ನಿಜ ಶಿಷ್ಯರೆಂದು ಜನರು ಗುರುತಿಸಬೇಕಿತ್ತು. (ಯೋಹಾ. 13:34, 35) ಯೇಸು ಹೇಳಿದ ಈ ಪ್ರೀತಿ ಕೇವಲ ಭಾವನೆಯಿಂದ ಕೂಡಿರುವಂಥದ್ದಲ್ಲ ಬದಲಿಗೆ ಶಕ್ತಿಶಾಲಿಯಾದ ಸ್ವತ್ಯಾಗದಿಂದ ಕೂಡಿದೆ. “ಒಬ್ಬನು ತನ್ನ ಸ್ನೇಹಿತರಿಗೋಸ್ಕರ ತನ್ನ ಪ್ರಾಣವನ್ನೇ ಒಪ್ಪಿಸಿಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾರಲ್ಲಿಯೂ ಇಲ್ಲ. ನಾನು ಆಜ್ಞಾಪಿಸುತ್ತಿರುವುದನ್ನು ನೀವು ಮಾಡುವುದಾದರೆ ನೀವು ನನ್ನ ಸ್ನೇಹಿತರು” ಎಂದು ಯೇಸು ಹೇಳಿದನು.—ಯೋಹಾ. 15:13, 14.
2. (ಎ) ಇಂದಿರುವ ಯೆಹೋವನ ಸೇವಕರು ಯಾವುದಕ್ಕೆ ಹೆಸರುವಾಸಿ? (ಬಿ) ಈ ಲೇಖನದಲ್ಲಿ ನಾವು ಯಾವ ಪ್ರಶ್ನೆಗಳನ್ನು ಚರ್ಚಿಸಲಿದ್ದೇವೆ?
2 ಇಂದಿರುವ ಯೆಹೋವನ ಸೇವಕರು ತಮ್ಮ ಅಪ್ಪಟ, ಸ್ವತ್ಯಾಗದ ಪ್ರೀತಿಗೆ ಮತ್ತು ಅನ್ಯೋನ್ಯತೆಗೆ ಹೆಸರುವಾಸಿ. (1 ಯೋಹಾ. 3:10, 11) ನಮ್ಮ ಮಧ್ಯೆ ದೇಶ, ಜನಾಂಗ, ಭಾಷೆ, ಹಿನ್ನೆಲೆ ಎಂಬ ತಾರತಮ್ಯವಿಲ್ಲ. ಲೋಕವ್ಯಾಪಕವಾಗಿರುವ ಯೆಹೋವನ ಸೇವಕರೆಲ್ಲರೂ ಒಬ್ಬರನ್ನೊಬ್ಬರು ನಿಜವಾಗಿಯೂ ಪ್ರೀತಿಸುತ್ತಾರೆ. ಇಂಥ ಪ್ರೀತಿಯನ್ನು ಮುಖ್ಯವಾಗಿ ಈಗ ಯಾಕೆ ತೋರಿಸಬೇಕು? ಯೆಹೋವ ಮತ್ತು ಯೇಸು ಈ ಪ್ರೀತಿಯನ್ನು ತೋರಿಸುತ್ತಾ ನಮ್ಮನ್ನು ಹೇಗೆ ಬಲಪಡಿಸುತ್ತಾರೆ? ಬೇರೆಯವರಿಗೆ ಸಾಂತ್ವನ ನೀಡಿ ಬಲಪಡಿಸಲು ನಾವು ಹೇಗೆ ಈ ಪ್ರೀತಿಯನ್ನು ತೋರಿಸಬಹುದು?—1 ಕೊರಿಂ. 8:1.
ನಾವು ಈಗ ಯಾಕೆ ಪ್ರೀತಿ ತೋರಿಸಬೇಕು?
3. ಈಗಿರುವ ‘ಕಠಿನಕಾಲ’ ಜನರ ಮೇಲೆ ಯಾವ ಪರಿಣಾಮ ಬೀರಿದೆ?
3 ನಾವು ‘ಕಠಿನಕಾಲದಲ್ಲಿ’ ಜೀವಿಸುತ್ತಿದ್ದೇವೆ ಮತ್ತು ನಮ್ಮ ಜೀವನ ‘ಕಷ್ಟಸಂಕಟಗಳಿಂದ’ ತುಂಬಿದೆ. (2 ತಿಮೊ. 3:1-5; ಕೀರ್ತ. 90:10) ಅನೇಕರು ತಮ್ಮ ಕಷ್ಟಗಳನ್ನು ಸಹಿಸಕ್ಕಾಗದೆ ‘ಸತ್ತರೆ ಚೆನ್ನಾಗಿರುತ್ತದೆ’ ಎಂದು ಯೋಚಿಸುತ್ತಾರೆ. ಪ್ರತಿವರ್ಷ 8 ಲಕ್ಷಕ್ಕಿಂತ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಂದರೆ 40 ಸೆಕೆಂಡಿಗೊಮ್ಮೆ ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ದುಃಖಕರವಾಗಿ ಯೆಹೋವನ ಆರಾಧಕರಲ್ಲಿ ಸಹ ಕೆಲವರು ಈ ರೀತಿ ಯೋಚನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
4. ಬೈಬಲಿನಲ್ಲಿರುವ ಯಾವ ವ್ಯಕ್ತಿಗಳಿಗೆ ಸಾಯಬೇಕೆಂಬ ಯೋಚನೆ ಬಂತು?
4 ಬೈಬಲ್ ಕಾಲದಲ್ಲಿ, ದೇವರ ಕೆಲವು ನಂಬಿಗಸ್ತ ಸೇವಕರು ತಮಗಿದ್ದ ಸಮಸ್ಯೆಗಳಿಂದಾಗಿ ಸಾಯಬೇಕು ಅಂದುಕೊಳ್ಳುವಷ್ಟು ಕುಗ್ಗಿಹೋಗಿದ್ದರು. ಉದಾಹರಣೆಗೆ, ಯೋಬನು ತುಂಬ ನೋವಿನಿಂದ “ನಾನು ಬೇಸರಗೊಂಡಿದ್ದೇನೆ, . . . ಬದುಕುವದಕ್ಕೆ ಇಷ್ಟವಿಲ್ಲ” ಎಂದು ಹೇಳಿದನು. (ಯೋಬ 7:16; 14:13) ಯೋನ ತುಂಬ ನಿರುತ್ಸಾಹದಿಂದ “ಈಗ, ಯೆಹೋವನೇ, ನನ್ನ ಪ್ರಾಣವನ್ನು ತೆಗೆ; ನಾನು ಬದುಕುವದಕ್ಕಿಂತ ಸಾಯುವದೇ ಲೇಸು” ಎಂದು ಹೇಳಿದನು. (ಯೋನ 4:3) ಪ್ರವಾದಿ ಎಲೀಯನು ಎಲ್ಲಾ ನಿರೀಕ್ಷೆ ಕಳಕೊಂಡು “ಯೆಹೋವನೇ, ನನಗೆ ಸಾಕಾಯಿತು; ನನ್ನ ಪ್ರಾಣವನ್ನು ತೆಗೆದುಬಿಡು” ಎಂದನು. (1 ಅರ. 19:4) ಆದರೆ ಯೆಹೋವನು ಈ ನಿಷ್ಠಾವಂತ ಸೇವಕರನ್ನು ಪ್ರೀತಿಸಿದನು ಮತ್ತು ಅವರು ಬದುಕಬೇಕೆಂದು ಬಯಸಿದನು. ಅವರು ಆ ರೀತಿ ಯೋಚಿಸಿದ್ದಕ್ಕೆ ಅವರನ್ನು ಬೈಯಲಿಲ್ಲ. ಬದಲಿಗೆ ಜೀವಿಸಬೇಕೆಂಬ ಆಸೆ ಪುನಃ ಚಿಗುರುವಂತೆ ಅವರಿಗೆ ಸಹಾಯ ಮಾಡಿದನು. ಹೀಗೆ ಅವರು ಆತನ ಸೇವೆಯನ್ನು ನಂಬಿಗಸ್ತಿಕೆಯಿಂದ ಮುಂದುವರಿಸಿಕೊಂಡು ಹೋಗಲು ಸಾಧ್ಯವಾಯಿತು.
5. ಇಂದು ನಮ್ಮ ಸಹೋದರ-ಸಹೋದರಿಯರಿಗೆ ಯಾಕೆ ನಮ್ಮ ಪ್ರೀತಿ ಬೇಕೇಬೇಕು?
5 ಇಂದು ನಮ್ಮ ಅನೇಕ ಸಹೋದರ-ಸಹೋದರಿಯರು ಒತ್ತಡಭರಿತ ಸನ್ನಿವೇಶಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ನಮ್ಮ ಪ್ರೀತಿ ಬೇಕಾಗಿದೆ. ಕೆಲವರು ಗೇಲಿಗೆ ಅಥವಾ ಹಿಂಸೆಗೆ ಒಳಗಾಗುತ್ತಿದ್ದಾರೆ. ಇನ್ನೂ ಕೆಲವರು ಕೆಲಸದ ಸ್ಥಳದಲ್ಲಿ ಬೇರೆ ದಾರಿ ಇಲ್ಲದೆ ದಬ್ಬಾಳಿಕೆಯನ್ನು ತಾಳಿಕೊಳ್ಳುತ್ತಿದ್ದಾರೆ ಅಥವಾ ಅವರ ಬಗ್ಗೆ ಸುಳ್ಳುಸುದ್ದಿ ಹಬ್ಬಿಸಿದರೂ ಸಹಿಸಿಕೊಳ್ಳುತ್ತಿದ್ದಾರೆ. ಅಥವಾ ಅವರು ಹೆಚ್ಚು ತಾಸು ಕೆಲಸ ಮಾಡುತ್ತಿರುವುದರಿಂದ, ತುಂಬ ಒತ್ತಡದಲ್ಲಿ ಕೆಲಸ ಮಾಡುತ್ತಿರುವುದರಿಂದ ಸೋತು-ಸುಣ್ಣ ಆಗಿದ್ದಾರೆ. ಇನ್ನು ಕೆಲವರಿಗೆ ಕುಟುಂಬದಲ್ಲಿ ಗಂಭೀರವಾದ ಸಮಸ್ಯೆಗಳಿವೆ. ಅವರ ಸಂಗಾತಿ ಸತ್ಯದಲ್ಲಿ ಇಲ್ಲದಿರಬಹುದು ಮತ್ತು ಯಾವಾಗಲೂ ಹೀಯಾಳಿಸುತ್ತಿರಬಹುದು. ಇಂಥ ಕೆಲವು ಒತ್ತಡಗಳಿಂದ ಅನೇಕರಿಗೆ ‘ಇನ್ನು ನನ್ನಿಂದ ಸಹಿಸಕ್ಕಾಗಲ್ಲ’ ಅಂತನಿಸಬಹುದು ಮತ್ತು ತಾವೇ ಸರಿಯಿಲ್ಲವೇನೋ ಎಂಬ ಯೋಚನೆನೂ ಬರಬಹುದು. ಇವರಿಗೆ ಯಾರು ಸಹಾಯ ಮಾಡುತ್ತಾರೆ?
ಯೆಹೋವನ ಪ್ರೀತಿ ನಮ್ಮನ್ನು ಬಲಪಡಿಸುತ್ತದೆ
6. ಯೆಹೋವನ ಪ್ರೀತಿ ಆತನ ಸೇವಕರನ್ನು ಹೇಗೆ ಬಲಪಡಿಸುತ್ತದೆ?
6 ಯೆಹೋವನು ತನ್ನ ಸೇವಕರಿಗೆ ‘ನಾನು ನಿಮ್ಮನ್ನು ಈಗಲೂ ಪ್ರೀತಿಸುತ್ತೇನೆ, ಮುಂದಕ್ಕೂ ಪ್ರೀತಿಸುತ್ತೇನೆ’ ಎಂದು ಭರವಸೆ ಕೊಡುತ್ತಾನೆ. ಇಸ್ರಾಯೇಲ್ ಜನಾಂಗಕ್ಕೆ ‘ನೀನು ನನ್ನ ದೃಷ್ಟಿಯಲ್ಲಿ ಅಮೂಲ್ಯನೂ ಮಾನ್ಯನೂ ಪ್ರಿಯನೂ ಆಗಿದ್ದೀ’ “ಭಯಪಡಬೇಡ, ನಾನು ನಿನ್ನ ಸಂಗಡ ಇದ್ದೇನೆ” ಎಂದು ಆತನು ಹೇಳಿದಾಗ ಆ ಜನಾಂಗಕ್ಕೆ ಹೇಗನಿಸಿರಬಹುದೆಂದು ಯೋಚಿಸಿ! (ಯೆಶಾ. 43:4, 5) ಯೆಹೋವನು ನಿಮ್ಮನ್ನು ತುಂಬ ಪ್ರೀತಿಸುತ್ತಾನೆ ಎಂಬ ಭರವಸೆ ನಿಮಗಿರಲಿ.a “ಯೆಹೋವನು . . . ಶೂರನಾಗಿದ್ದಾನೆ, ನಿನ್ನನ್ನು ರಕ್ಷಿಸುವನು; ನಿನ್ನಲ್ಲಿ ಉಲ್ಲಾಸಿಸೇ ಉಲ್ಲಾಸಿಸುವನು” ಎಂದು ಬೈಬಲ್ ಮಾತು ಕೊಡುತ್ತದೆ.—ಚೆಫ. 3:16, 17.
7. ಯೆಹೋವನ ಪ್ರೀತಿ ಹೇಗೆ ಒಬ್ಬ ತಾಯಿಯ ಪ್ರೀತಿಯಂತೆ ಇದೆ? (ಲೇಖನದ ಆರಂಭದ ಚಿತ್ರ ನೋಡಿ.)
7 ತನ್ನ ಜನರಿಗೆ ಯಾವ ಸಮಸ್ಯೆಯಿದ್ದರೂ ತಾನು ಬಲಪಡಿಸಿ ಸಾಂತ್ವನ ನೀಡುತ್ತೇನೆ ಎಂದು ಯೆಹೋವನು ಮಾತು ಕೊಟ್ಟಿದ್ದಾನೆ. ಆತನು ಹೇಳಿದ್ದು: “ನಿಮ್ಮನ್ನು ಕಂಕುಳಲ್ಲಿ ಎತ್ತಿಕೊಂಡು ಹೋಗುವರು, ತೊಡೆಯ ಮೇಲೆ ನಲಿದಾಡಿಸುವರು. ತಾಯಿ ಮಗನನ್ನು ಸಂತೈಸುವ ಪ್ರಕಾರ ನಾನು ನಿಮ್ಮನ್ನು ಸಂತೈಸುವೆನು.” (ಯೆಶಾ. 66:12, 13) ಒಂದು ಪುಟ್ಟ ಮಗು ತನ್ನ ತಾಯಿಯ ಕಂಕುಳಲ್ಲಿ ಇರುವಾಗ ಅಥವಾ ತಾಯಿಯ ತೊಡೆಯ ಮೇಲೆ ಆಡುತ್ತಿರುವಾಗ ಆ ಕಂದಮ್ಮ ಎಷ್ಟು ಸುರಕ್ಷಿತವಾಗಿರುತ್ತದೆ ಎಂದು ಯೋಚಿಸಿ! ಯೆಹೋವನು ನಿಮ್ಮನ್ನು ತುಂಬ ಪ್ರೀತಿಸುತ್ತಾನೆ ಮತ್ತು ಸುರಕ್ಷಿತ ಭಾವನೆಯನ್ನು ನಿಮ್ಮಲ್ಲಿ ಮೂಡಿಸುತ್ತಾನೆ. ‘ಯೆಹೋವನಿಗೆ ನನ್ನನ್ನು ಕಂಡರೆ ಇಷ್ಟ ಆಗುತ್ತದಾ, ನನ್ನನ್ನು ನಿಜವಾಗಲೂ ಪ್ರೀತಿಸುತ್ತಾನಾ’ ಎಂದು ಯಾವತ್ತೂ ಸಂಶಯಪಡಬೇಡಿ.—ಯೆರೆ. 31:3.
8, 9. ಯೇಸುವಿನ ಪ್ರೀತಿ ನಮ್ಮನ್ನು ಹೇಗೆ ಬಲಪಡಿಸುತ್ತದೆ?
8 ಯೆಹೋವನು ನಮ್ಮನ್ನು ಪ್ರೀತಿಸುತ್ತಾನೆ ಎನ್ನುವುದಕ್ಕಿರುವ ಇನ್ನೊಂದು ಕಾರಣ ಇಲ್ಲಿದೆ. ಅದೇನೆಂದರೆ “ದೇವರು ಲೋಕವನ್ನು ಎಷ್ಟೊಂದು ಪ್ರೀತಿಸಿದನೆಂದರೆ ಆತನು ತನ್ನ ಏಕೈಕಜಾತ ಪುತ್ರನನ್ನು ಕೊಟ್ಟನು; ಅವನಲ್ಲಿ ನಂಬಿಕೆಯಿಡುವ ಯಾವನೂ ನಾಶವಾಗದೆ ನಿತ್ಯಜೀವವನ್ನು ಪಡೆದುಕೊಳ್ಳಬೇಕೆಂದು ಅವನನ್ನು ಕೊಟ್ಟನು.” (ಯೋಹಾ. 3:16) ಯೇಸು ಮಾಡಿದ ತ್ಯಾಗದಿಂದ, ಅವನೂ ನಮ್ಮನ್ನು ಪ್ರೀತಿಸಿ ಬಲಪಡಿಸುತ್ತಾನೆ ಎನ್ನುವುದು ರುಜುವಾಗುತ್ತದೆ. ನಮಗೆ ಬರುವ ಯಾವುದೇ ‘ಸಂಕಟ ಅಥವಾ ಇಕ್ಕಟ್ಟು’ ‘ಕ್ರಿಸ್ತನ ಪ್ರೀತಿಯಿಂದ ನಮ್ಮನ್ನು ಅಗಲಿಸಲು’ ಸಾಧ್ಯವಿಲ್ಲ ಎಂದು ಬೈಬಲ್ ಹೇಳುತ್ತದೆ.—ರೋಮ. 8:35, 38, 39.
9 ಕೆಲವೊಮ್ಮೆ ನಮಗೆ ಬರುವ ಸಮಸ್ಯೆಗಳು ನಮ್ಮನ್ನು ಶಾರೀರಿಕವಾಗಿ ಅಥವಾ ಮಾನಸಿಕವಾಗಿ ಬಲಹೀನಗೊಳಿಸುತ್ತವೆ ಅಥವಾ ಯೆಹೋವನ ಸೇವೆಯಲ್ಲಿ ನಮಗಿರುವ ಆನಂದವನ್ನು ಕಸಿದುಕೊಳ್ಳುತ್ತವೆ. ಆದರೆ ಕ್ರಿಸ್ತನು ನಮ್ಮನ್ನು ಎಷ್ಟು ಪ್ರೀತಿಸುತ್ತಾನೆಂದು ಯೋಚಿಸುವಾಗ ಅವುಗಳನ್ನು ತಾಳಿಕೊಳ್ಳಲು ನಮಗೆ ಬಲ ಸಿಗುತ್ತದೆ. (2 ಕೊರಿಂಥ 5:14, 15 ಓದಿ.) ಸದಾಕಾಲ ಬದುಕಲು ಮತ್ತು ಯೆಹೋವನ ಸೇವೆ ಮಾಡಲು ಈ ಪ್ರೀತಿ ನಮ್ಮಲ್ಲಿ ಆಸೆ ಮೂಡಿಸುತ್ತದೆ. ವಿಪತ್ತು, ಹಿಂಸೆ, ನಿರಾಶೆ ಅಥವಾ ಒತ್ತಡ ಹೀಗೆ ಎಂಥದ್ದೇ ಕಷ್ಟ ಬಂದರೂ ನಾವು ಜೀವನದಲ್ಲಿ ಸೋತುಹೋಗದಿರಲು ಯೇಸುವಿನ ಪ್ರೀತಿ ಸಹಾಯ ಮಾಡುತ್ತದೆ.
ನಮ್ಮ ಸಹೋದರ-ಸಹೋದರಿಯರಿಗೆ ನಮ್ಮ ಪ್ರೀತಿ ಬೇಕು
10, 11. ನಿರುತ್ತೇಜನಗೊಂಡಿರುವ ಸಹೋದರರನ್ನು ಬಲಪಡಿಸುವ ಜವಾಬ್ದಾರಿ ಯಾರಿಗಿದೆ? ವಿವರಿಸಿ.
10 ಯೆಹೋವನು ನಮ್ಮನ್ನು ಪ್ರೀತಿಯಿಂದ ಬಲಪಡಿಸಲು ಸಭೆಯನ್ನೂ ಉಪಯೋಗಿಸುತ್ತಾನೆ. ನಾವು ನಮ್ಮ ಸಹೋದರ-ಸಹೋದರಿಯರನ್ನು ಪ್ರೀತಿಸುವಾಗ ಯೆಹೋವನ ಮೇಲಿರುವ ನಮ್ಮ ಪ್ರೀತಿಯನ್ನು ತೋರಿಸುತ್ತೇವೆ. ಯೆಹೋವನು ತಮ್ಮನ್ನು ತುಂಬ ಅಮೂಲ್ಯವಾಗಿ ಕಾಣುತ್ತಾನೆ, ತುಂಬ ಪ್ರೀತಿಸುತ್ತಾನೆ ಎಂಬ ಭಾವನೆ ನಮ್ಮ ಸಹೋದರರಿಗೆ ಬರಲು ನಾವು ನಮ್ಮಿಂದಾದ ಎಲ್ಲ ಪ್ರಯತ್ನ ಮಾಡುತ್ತೇವೆ. (1 ಯೋಹಾ. 4:19-21) ಅಪೊಸ್ತಲ ಪೌಲನು “ನೀವು ಈಗಾಗಲೇ ಮಾಡುತ್ತಿರುವಂತೆ ಒಬ್ಬರನ್ನೊಬ್ಬರು ಸಾಂತ್ವನಗೊಳಿಸುತ್ತಾ ಪರಸ್ಪರ ಭಕ್ತಿವೃದ್ಧಿಮಾಡುತ್ತಾ ಇರಿ” ಎಂದು ಬರೆದನು. (1 ಥೆಸ. 5:11) ಇದನ್ನು ಹಿರಿಯರು ಮಾತ್ರ ಮಾಡಬೇಕು ಅಂತೇನಿಲ್ಲ. ನಮ್ಮಲ್ಲಿ ಪ್ರತಿಯೊಬ್ಬರು ನಮ್ಮ ಸಹೋದರ-ಸಹೋದರಿಯರಿಗೆ ಸಾಂತ್ವನ ನೀಡುವ ಮೂಲಕ ಯೆಹೋವ ಮತ್ತು ಯೇಸುವನ್ನು ಅನುಕರಿಸಬಹುದು.—ರೋಮನ್ನರಿಗೆ 15:1, 2 ಓದಿ.
11 ಸಭೆಯಲ್ಲಿ ಕೆಲವರಿಗೆ ಖಿನ್ನತೆ ಅಥವಾ ಒತ್ತಡ ಇರುವುದರಿಂದ ವೈದ್ಯರ ಅವಶ್ಯಕತೆ ಬರಬಹುದು, ಔಷಧಿ ತೆಗೆದುಕೊಳ್ಳಬೇಕಾಗಿರಬಹುದು. (ಲೂಕ 5:31) ಹಿರಿಯರು ಅಥವಾ ಸಭೆಯಲ್ಲಿರುವ ಬೇರೆಯವರು ತರಬೇತಿ ಹೊಂದಿರುವ ವೈದ್ಯರಲ್ಲದಿದ್ದರೂ ಅವರಿಂದ ಸಿಗುವ ಸಹಾಯ ಮತ್ತು ಸಾಂತ್ವನ ತುಂಬ ಪ್ರಾಮುಖ್ಯವಾಗಿದೆ. ಸಭೆಯಲ್ಲಿರುವವರೆಲ್ಲರೂ ‘ಮನಗುಂದಿದವರಿಗೆ ಸಾಂತ್ವನಗೊಳಿಸುವಂಥ ರೀತಿಯಲ್ಲಿ ಮಾತಾಡಬಹುದು, ಬಲಹೀನರಿಗೆ ಆಧಾರವಾಗಿರಬಹುದು, ಎಲ್ಲರ ಕಡೆಗೆ ದೀರ್ಘ ಸಹನೆಯನ್ನು ತೋರಿಸಬಹುದು.’ (1 ಥೆಸ. 5:14) ನಮ್ಮ ಸಹೋದರರಿಗೆ ಆಗುತ್ತಿರುವ ಕಷ್ಟವನ್ನು ನಾವು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಅವರಿಗೆ ನಿರುತ್ತೇಜನ ಕಾಡುತ್ತಿರುವಾಗ ನಾವು ಅವರ ಜೊತೆ ತಾಳ್ಮೆಯಿಂದ ನಡಕೊಳ್ಳಬೇಕು ಮತ್ತು ಅವರಿಗೆ ಸಾಂತ್ವನ ಸಿಗುವ ತರ ಮಾತಾಡಬೇಕು. ಬೇರೆಯವರನ್ನು ಬಲಪಡಿಸಲು ನೀವು ಪ್ರಯತ್ನಿಸುತ್ತೀರಾ? ಸಾಂತ್ವನ ನೀಡಲು ಮತ್ತು ಉತ್ತೇಜಿಸಲು ನೀವು ಇನ್ನೂ ಏನೆಲ್ಲ ಮಾಡಬಹುದು?
12. ಸಭೆಯವರು ತೋರಿಸಿದ ಪ್ರೀತಿಯಿಂದ ಉತ್ತೇಜನ ಪಡಕೊಂಡ ಒಬ್ಬ ಸಹೋದರಿಯ ಅನುಭವ ಹೇಳಿ.
12 ಯೂರೋಪಿನಲ್ಲಿರುವ ಸಹೋದರಿಯೊಬ್ಬಳು ಹೀಗೆ ಹೇಳುತ್ತಾಳೆ: “ಕೆಲವೊಮ್ಮೆ ನನಗೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಅಂತ ಅನಿಸುತ್ತೆ. ಆದರೆ ನನ್ನ ಸಭೆ ನನ್ನ ಕೈಬಿಟ್ಟಿಲ್ಲ. ಅದು ನನ್ನ ಜೀವ ಕಾಪಾಡಿದೆ. ಸಹೋದರ-ಸಹೋದರಿಯರು ನನಗೆ ಯಾವಾಗಲೂ ಉತ್ತೇಜನ ಕೊಡುತ್ತಾರೆ, ನನ್ನನ್ನು ತುಂಬ ಪ್ರೀತಿ ಮಾಡುತ್ತಾರೆ. ನನಗಿರುವ ಖಿನ್ನತೆ ಬಗ್ಗೆ ಕೆಲವರಿಗೆ ಮಾತ್ರ ಗೊತ್ತಿದ್ದರೂ ಸಭೆಯಲ್ಲಿರುವ ಎಲ್ಲರೂ ನನಗೆ ಸಹಾಯ ಮಾಡಕ್ಕೆ ಯಾವಾಗಲೂ ತುದಿಗಾಲಲ್ಲಿ ನಿಂತಿರುತ್ತಾರೆ. ಒಬ್ಬ ದಂಪತಿಯಂತೂ ನನಗೆ ಆಧ್ಯಾತ್ಮಿಕ ಹೆತ್ತವರ ತರ ಇದ್ದಾರೆ. ಅವರು ನನ್ನನ್ನು ತುಂಬ ಚೆನ್ನಾಗಿ ನೋಡಿಕೊಳ್ಳುತ್ತಾರೆ. ದಿನದ 24 ಗಂಟೆನೂ ನನ್ನನ್ನು ನೋಡಿಕೊಳ್ಳಲು ಸಿದ್ಧರಿದ್ದಾರೆ.” ಎಲ್ಲರೂ ಇದೇ ರೀತಿ ಸಹಾಯ ಮಾಡಕ್ಕಾಗಲ್ಲ. ಆದರೆ ನಾವೆಲ್ಲರೂ ನಮ್ಮ ಸಹೋದರ-ಸಹೋದರಿಯರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡಬೇಕು.b
ಬೇರೆಯವರನ್ನು ಹೇಗೆ ಪ್ರೀತಿಯಿಂದ ಬಲಪಡಿಸಬಹುದು?
13. ಬೇರೆಯವರಿಗೆ ಸಾಂತ್ವನ ನೀಡಲು ನಾವೇನು ಮಾಡಬೇಕು?
13 ಮನಗುಂದಿದವರು ಮನಬಿಚ್ಚಿ ಮಾತಾಡುವಾಗ ಗಮನಕೊಟ್ಟು ಕೇಳಿಸಿಕೊಳ್ಳಿ. (ಯಾಕೋ. 1:19) ಮನಗುಂದಿದವರು ತಮ್ಮ ಮನಸ್ಸಲ್ಲಿ ಇರುವುದನ್ನು ಹೇಳಿಕೊಳ್ಳುವಾಗ ಸಹಾನುಭೂತಿಯಿಂದ ಕೇಳಿಸಿಕೊಂಡರೆ ನಮಗೆ ಅವರ ಮೇಲೆ ಪ್ರೀತಿ ಇದೆ ಎಂದು ಅವರಿಗೆ ಗೊತ್ತಾಗುತ್ತದೆ. ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ದಯೆಯಿಂದ ಪ್ರಶ್ನೆಗಳನ್ನು ಕೇಳಿ. ನಿಮಗೆ ಅವರ ಬಗ್ಗೆ ನಿಜವಾಗಲೂ ಕಾಳಜಿ ಇದೆ ಅಂತ ನಿಮ್ಮ ಮುಖಭಾವದಿಂದ ಅವರಿಗೆ ಗೊತ್ತಾಗುತ್ತದೆ. ಅವರು ಮಾತಾಡುವಾಗ ತಾಳ್ಮೆಯಿಂದ ಇರಿ, ತಮ್ಮ ಭಾವನೆಗಳನ್ನೆಲ್ಲ ಹೇಳಿಕೊಳ್ಳಲು ಬಿಡಿ. ನೀವು ಚೆನ್ನಾಗಿ ಕಿವಿಗೊಟ್ಟರೆ ಅವರನ್ನು ಹೆಚ್ಚು ಅರ್ಥಮಾಡಿಕೊಳ್ಳಲು ಮತ್ತು ನಿಮ್ಮನ್ನು ಅವರು ನಂಬಲು ಸಾಧ್ಯವಾಗುತ್ತದೆ. ಆಗ ನೀವು ಸಹಾಯ ಮಾಡುವ ಉದ್ದೇಶದಿಂದ ಹೇಳುವ ಮಾತುಗಳನ್ನು ಕೇಳಿಸಿಕೊಳ್ಳಲು ಅವರಿಗೆ ಸುಲಭವಾಗುತ್ತದೆ. ನೀವು ನಿಜವಾದ ಕಾಳಜಿ ತೋರಿಸಿದರೆ ಬೇರೆಯವರು ನಿಮ್ಮ ಹತ್ತಿರ ಸಾಂತ್ವನ ಪಡೆಯಲು ಬರುತ್ತಾರೆ.
14. ಬೇರೆಯವರನ್ನು ನಾವು ಯಾಕೆ ಖಂಡಿಸಬಾರದು?
14 ಖಿನ್ನರಾಗಿರುವವರನ್ನು ಖಂಡಿಸಬೇಡಿ. ಖಿನ್ನತೆ ಇರುವ ವ್ಯಕ್ತಿಯೊಟ್ಟಿಗೆ ನಾವು ಮಾತಾಡುತ್ತಿರುವಾಗ ಅವರನ್ನು ಖಂಡಿಸುತ್ತಿದ್ದೇವೆ ಅಂತ ಅವರಿಗೆ ಅನಿಸಿದರೆ ಇನ್ನೂ ಕುಗ್ಗಿಹೋಗುತ್ತಾರೆ. ಆಗ ಅವರಿಗೆ ಸಹಾಯ ಮಾಡಲು ನಮಗೆ ತುಂಬ ಕಷ್ಟವಾಗುತ್ತದೆ. “ಕತ್ತಿತಿವಿದ ಹಾಗೆ ದುಡುಕಿ ಮಾತಾಡುವವರುಂಟು; ಮತಿವಂತರ ಮಾತೇ ಮದ್ದು” ಎಂದು ಬೈಬಲ್ ಹೇಳುತ್ತದೆ. (ಜ್ಞಾನೋ. 12:18) ನಾವು ಬೇಕುಬೇಕೆಂದೇ ಖಿನ್ನನಾಗಿರುವ ವ್ಯಕ್ತಿಯ ಮನಸ್ಸಿಗೆ ನೋವಾಗುವ ತರ ಮಾತಾಡದೇ ಇರಬಹುದು. ಆದರೆ ನಾವು ಯೋಚಿಸದೆ ಏನಾದರೂ ಹೇಳಿದಾಗ ಆ ವ್ಯಕ್ತಿಗೆ ತುಂಬ ನೋವಾಗುತ್ತದೆ. ನಮ್ಮ ಸಹೋದರರನ್ನು ಬಲಪಡಿಸಬೇಕೆಂದರೆ, ನಾವು ಅವರ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು.—ಮತ್ತಾ. 7:12.
15. ಬೇರೆಯವರಿಗೆ ಸಾಂತ್ವನ ನೀಡಲು ಯಾವ ಅಮೂಲ್ಯ ಸಾಧನವನ್ನು ನಾವು ಬಳಸಬಹುದು?
15 ಸಾಂತ್ವನ ನೀಡಲು ದೇವರ ವಾಕ್ಯವನ್ನು ಬಳಸಿ. (ರೋಮನ್ನರಿಗೆ 15:4, 5 ಓದಿ.) ಬೈಬಲ್ ‘ತಾಳ್ಮೆಯನ್ನೂ ಸಾಂತ್ವನವನ್ನೂ ಒದಗಿಸುವ ದೇವರಿಂದ’ ಬಂದಿರುವುದರಿಂದ ಅದರಲ್ಲಿ ನಮಗೆ ಸಾಂತ್ವನ ನೀಡುವಂಥ ಎಷ್ಟೋ ವಿಷಯಗಳು ಸಿಗುತ್ತವೆ. ಜೊತೆಗೆ ವಾಚ್ ಟವರ್ ಪಬ್ಲಿಕೇಷನ್ಸ್ ಇಂಡೆಕ್ಸ್ ಮತ್ತು ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ ಪ್ರಕಾಶನಗಳು ಸಹ ನಮ್ಮ ಬಳಿ ಇದೆ. ನಮ್ಮ ಸಹೋದರ-ಸಹೋದರಿಯರಿಗೆ ಸಾಂತ್ವನ ಮತ್ತು ಉತ್ತೇಜನ ನೀಡುವಂಥ ವಚನಗಳನ್ನು, ಪ್ರಕಾಶನಗಳನ್ನು ಹುಡುಕುವುದಕ್ಕೆ ಈ ಸಾಧನಗಳು ಸಹಾಯ ಮಾಡುತ್ತವೆ.
16. ಖಿನ್ನತೆಯಿಂದ ಬಳಲುತ್ತಿರುವವರಿಗೆ ಉತ್ತೇಜನ ನೀಡಲು ಯಾವ ಗುಣ ಸಹಾಯ ಮಾಡುತ್ತದೆ?
16 ಕೋಮಲಭಾವ ತೋರಿಸಿ. ಯೆಹೋವನು “ಕೋಮಲ ಕರುಣೆಯ ತಂದೆಯೂ ಸಕಲ ಸಾಂತ್ವನದ ದೇವರೂ” ಆಗಿದ್ದಾನೆ ಮತ್ತು ತನ್ನ ಸೇವಕರಿಗೆ “ಸಹಾನುಭೂತಿ” ತೋರಿಸುತ್ತಾನೆ. (2 ಕೊರಿಂಥ 1:3-6 ಓದಿ; ಲೂಕ 1:78; ರೋಮ. 15:13) ಈ ವಿಷಯದಲ್ಲಿ ಪೌಲನು ಯೆಹೋವನನ್ನು ಅನುಕರಿಸುತ್ತಾ ಒಳ್ಳೆಯ ಮಾದರಿ ಇಟ್ಟಿದ್ದಾನೆ. ಅವನು ಬರೆದದ್ದು: “ಒಬ್ಬ ತಾಯಿಯು ತನ್ನ ಮಕ್ಕಳಿಗೆ ಹಾಲುಣಿಸಿ ಪೋಷಿಸುವಂತೆಯೇ ನಾವು ನಿಮ್ಮ ಮಧ್ಯೆ ವಾತ್ಸಲ್ಯದಿಂದ ನಡೆದುಕೊಂಡೆವು. ನೀವು ನಮಗೆ ಅತಿ ಪ್ರಿಯರಾದ ಕಾರಣ ನಿಮ್ಮ ವಿಷಯದಲ್ಲಿ ಕೋಮಲ ಮಮತೆಯುಳ್ಳವರಾಗಿದ್ದು ದೇವರ ಸುವಾರ್ತೆಯನ್ನು ಹೇಳುವುದಕ್ಕೆ ಮಾತ್ರವಲ್ಲದೆ ನಮ್ಮ ಸ್ವಂತ ಪ್ರಾಣಗಳನ್ನೇ ಕೊಡುವುದಕ್ಕೂ ಸಂತೋಷಿಸಿದೆವು.” (1 ಥೆಸ. 2:7, 8) ನಾವು ಯೆಹೋವ ದೇವರಂತೆ ಕೋಮಲಭಾವವನ್ನು ತೋರಿಸುವಾಗ ಸಾಂತ್ವನಕ್ಕಾಗಿ ನಮ್ಮ ಸಹೋದರರು ಬೇಡುತ್ತಿರುವ ಪ್ರಾರ್ಥನೆಗೆ ಉತ್ತರವಾಗಿರುತ್ತೇವೆ.
17. ನಮ್ಮ ಸಹೋದರರಿಗೆ ಉತ್ತೇಜನ ನೀಡಲು ಯಾವ ವಾಸ್ತವಿಕ ನೋಟ ನಮಗೆ ಸಹಾಯ ಮಾಡುತ್ತದೆ?
17 ಪರಿಪೂರ್ಣತೆ ನಿರೀಕ್ಷಿಸಬೇಡಿ. ನಿಮ್ಮ ಸಹೋದರರು ತಪ್ಪೇ ಮಾಡಬಾರದು ಎಂದು ನಿರೀಕ್ಷಿಸಬೇಡಿ. ಹಾಗೆ ಯೋಚಿಸಿದರೆ ನಿಮಗೆ ನಿರಾಶೆಯಾಗುತ್ತದೆ. (ಪ್ರಸಂ. 7:21, 22) ನೆನಪಿಡಿ, ಯೆಹೋವನು ವಾಸ್ತವಿಕ ನೋಟವಿರುವ ದೇವರು. ಅಂದರೆ ಆತನು ನಮ್ಮಿಂದ ಎಷ್ಟು ಮಾಡಕ್ಕಾಗುತ್ತದೋ ಅಷ್ಟನ್ನೇ ಬಯಸುತ್ತಾನೆ. ಹಾಗಾಗಿ ನಾವು ಒಬ್ಬರಿಗೊಬ್ಬರು ತಾಳ್ಮೆಯಿಂದ ಇರಬೇಕು. (ಎಫೆ. 4:2, 32) ‘ನನ್ನ ಕೈಯಲ್ಲಿ ತುಂಬ ಮಾಡಕ್ಕಾಗುತ್ತಿಲ್ಲ’ ಅಥವಾ ‘ಬೇರೆಯವರ ಮುಂದೆ ನಾನು ಏನೂ ಅಲ್ಲ’ ಎಂದು ನಮ್ಮ ಸಹೋದರರು ನೆನಸಬೇಕೆಂದು ನಾವು ಬಯಸುವುದಿಲ್ಲ. ಬದಲಿಗೆ ಅವರಿಗೆ ಪ್ರೋತ್ಸಾಹಿಸುತ್ತೇವೆ ಮತ್ತು ಅವರು ಮಾಡುತ್ತಿರುವ ಒಳ್ಳೇ ವಿಷಯಗಳನ್ನು ಗುರುತಿಸಿ ಪ್ರಶಂಸಿಸುತ್ತೇವೆ. ನಾವು ಈ ರೀತಿ ಮಾಡಿದರೆ ಅವರು ಯೆಹೋವನನ್ನು ಸಂತೋಷದಿಂದ ಆರಾಧಿಸಲು ಸಾಧ್ಯವಾಗುತ್ತದೆ.—ಗಲಾ. 6:4.
18. ನಾವು ಯಾಕೆ ಬೇರೆಯವರನ್ನು ಪ್ರೀತಿಯಿಂದ ಬಲಪಡಿಸಲು ಇಷ್ಟಪಡುತ್ತೇವೆ?
18 ನಮ್ಮಲ್ಲಿ ಪ್ರತಿಯೊಬ್ಬರೂ ಯೆಹೋವನಿಗೆ ಮತ್ತು ಯೇಸುವಿಗೆ ಕಣ್ಮಣಿಗಳಾಗಿ ಇದ್ದೇವೆ. (ಗಲಾ. 2:20) ನಾವು ನಮ್ಮ ಸಹೋದರ-ಸಹೋದರಿಯರನ್ನು ತುಂಬ ಪ್ರೀತಿಸುವುದರಿಂದ ಅವರ ಜೊತೆ ಕೋಮಲಭಾವದಿಂದ ನಡಕೊಳ್ಳಬೇಕು. “ನಾವು ಶಾಂತಿಯನ್ನು ಉಂಟುಮಾಡುವ ಮತ್ತು ಪರಸ್ಪರ ಭಕ್ತಿವೃದ್ಧಿಮಾಡುವ ವಿಷಯಗಳನ್ನು ಬೆನ್ನಟ್ಟೋಣ.” (ರೋಮ. 14:19) ಹೊಸ ಲೋಕದಲ್ಲಿ ಯಾರೂ ಯಾವುದಕ್ಕಾಗಿಯೂ ನಿರುತ್ತೇಜನಗೊಳ್ಳುವ ಅವಶ್ಯಕತೆ ಇರುವುದಿಲ್ಲ. ಆಗ ಜೀವನ ಎಷ್ಟು ಚೆನ್ನಾಗಿರುವುದೆಂದು ಯೋಚಿಸಿ! ಅಲ್ಲಿ ಕಾಯಿಲೆ ಆಗಲಿ, ಯುದ್ಧ ಆಗಲಿ ಇರುವುದಿಲ್ಲ. ಜನರು ಬಾಧ್ಯತೆಯಾಗಿ ಬರುವ ಪಾಪದಿಂದ ಸಾಯುವುದಿಲ್ಲ. ಅಲ್ಲಿ ಹಿಂಸೆ, ಕುಟುಂಬ ಸಮಸ್ಯೆ ಅಥವಾ ನಿರಾಶೆಯ ಸುಳಿವೇ ಇರುವುದಿಲ್ಲ. ಸಾವಿರ ವರ್ಷಗಳ ಕೊನೆಯಲ್ಲಿ ಎಲ್ಲ ಮನುಷ್ಯರು ಪರಿಪೂರ್ಣರಾಗುತ್ತಾರೆ. ಯಾರು ಅಂತಿಮ ಪರೀಕ್ಷೆಯಲ್ಲಿ ನಂಬಿಗಸ್ತರಾಗಿರುತ್ತಾರೋ ಅವರನ್ನು ಯೆಹೋವನು ಈ ಭೂಮಿಯ ಮೇಲೆ ತನ್ನ ಪುತ್ರರಾಗಿ ದತ್ತು ತೆಗೆದುಕೊಳ್ಳುತ್ತಾನೆ. ಅವರು “ದೇವರ ಮಕ್ಕಳ ಮಹಿಮಾಭರಿತ ಸ್ವಾತಂತ್ರ್ಯವನ್ನು” ಆನಂದಿಸುತ್ತಾರೆ. (ರೋಮ. 8:21) ಹಾಗಾಗಿ ನಾವು ಬೇರೆಯವರನ್ನು ಪ್ರೀತಿಯಿಂದ ಬಲಪಡಿಸೋಣ. ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ ಯೆಹೋವ ದೇವರು ಕೊಡುವ ಅದ್ಭುತವಾದ ಹೊಸ ಲೋಕಕ್ಕೆ ಹೋಗಿ ಸೇರೋಣ.
a ಯೆಹೋವನ ಸಮೀಪಕ್ಕೆ ಬನ್ನಿರಿ ಪುಸ್ತಕದ ಅಧ್ಯಾಯ 24ನ್ನು ನೋಡಿ.
b ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂಬ ಯೋಚನೆ ಬರುವವರಿಗೆ ಸಹಾಯ ಮಾಡಲು ಎಚ್ಚರ! ಪತ್ರಿಕೆಯಲ್ಲಿರುವ ಈ ಲೇಖನಗಳನ್ನು ನೋಡಿ.“‘ನಾನ್ಯಾಕೆ ಬದುಕಿರಬೇಕು?’—ಬದುಕಲು ನಿಮಗಿದೆ ಕಾರಣ!” (ಜುಲೈ-ಸೆಪ್ಟೆಂಬರ್ 2014); “‘ಬದುಕುವುದೇ ಬೇಡ’ ಎಂದು ಅನಿಸುತ್ತಿದೆಯೇ?” (ಏಪ್ರಿಲ್-ಜೂನ್ 2012) ಮತ್ತು ಅಕ್ಟೋಬರ್ 22, 2001ರ (ಇಂಗ್ಲಿಷ್) ಸಂಚಿಕೆಯ ಪುಟ 3, 5, 8ರಲ್ಲಿರುವ ಲೇಖನಗಳು.