ಯೆಹೋವನೆಂಬವನು ಯಾರು?
“ಯೆಹೋವನೆಂಬವನು ಯಾರು?” ಆ ಪ್ರಶ್ನೆಯು ಐಗುಪ್ತದ ರಾಜನಾದ, ಅಹಂಕಾರಿ ಫರೋಹನ ಮೂಲಕ 3,500 ವರುಷಗಳ ಹಿಂದೆ ಕೇಳಲ್ಪಟ್ಟಿತ್ತು. “ಯೆಹೋವನು ಯಾರೋ ನನಗೆ ಗೊತ್ತಿಲ್ಲ” ಎಂದು ಕೂಡಿಸಿ ಹೇಳಲು ಪ್ರತಿಭಟನಾತ್ಮವು ಅವನನ್ನು ನಡಿಸಿದ್ದಿರಬೇಕು. ಫರೋಹನ ಮುಂದೆ ನಿಂತಿದ್ದ ಇಬ್ಬರು ಪುರುಷರಿಗೆ ಯೆಹೋವನು ಯಾರಾಗಿದ್ದನೆಂದು ತಿಳಿದಿತ್ತು. ಇಸ್ರಾಯೇಲಿನ ಲೇವಿ ಕುಲದ, ಮೋಶೆ ಮತ್ತು ಆರೋನರೆಂಬ ಶಾರೀರಿಕ ಸಹೋದರರು ಅವರಾಗಿದ್ದರು. ಅರಣ್ಯದೊಳಗೆ ಧಾರ್ಮಿಕ ಜಾತ್ರೆಯನ್ನು ನಡಿಸಲು ಇಸ್ರಾಯೇಲ್ಯರನ್ನು ಕಳುಹಿಸುವಂತೆ ಐಗುಪ್ತದ ಅರಸನನ್ನು ನಿರ್ಬಂಧಪಡಿಸಲು ಯೆಹೋವನು ಅವರನ್ನು ಕಳುಹಿಸಿದನು.—ವಿಮೋಚನಕಾಂಡ 5:1, 2, NW.
ಫರೋಹನಿಗೆ ಅವನ ಪ್ರಶ್ನೆಗೆ ಉತ್ತರವು ಬೇಕಾಗಿರಲಿಲ್ಲ. ಅವನ ಅಧಿಕಾರದಡಿಯಲ್ಲಿ, ಪುರೋಹಿತರು ನೂರಾರು ಸುಳ್ಳು ದೇವತೆಗಳ ಆರಾಧನೆಯನ್ನು ಉತ್ತೇಜಿಸಿದರು. ಫರೋಹನನ್ನೇ ಒಬ್ಬ ದೇವನಾಗಿ ಕಾಣುತ್ತಿದ್ದರು! ಐಗುಪ್ತ್ಯರ ದಂತಕಥೆಯಲ್ಲಿರುವಂತೆ, ಅವನು ಸೂರ್ಯ ದೇವನಾದ ರಾ ವಿನ ಮಗ ಮತ್ತು ಗಿಡುಗ ತಲೆಯ ದೇವತೆ ಹೋರಸ್ ನ ಅವತಾರವಾಗಿದ್ದನು. ಫರೋಹನು “ಬಲಿಷ್ಠ ದೇವರು” ಮತ್ತು “ನಿತ್ಯನಿರಂತರನು” ಎಂಬಂತಹ ಪದವಿಗಳಿಂದ ಕರೆಯಲ್ಪಟ್ಟಿದ್ದನು. ಆದುದರಿಂದ ಅವನು: “ಯೆಹೋವನೆಂಬವನು ಯಾರು? ನಾನು ಅವನ ಮಾತನ್ನು ಕೇಳಿ ಇಸ್ರಾಯೇಲ್ಯರನ್ನು ಹೋಗಗೊಡಿಸುವುದೇಕೆ?” ಎಂದು ತಿರಸ್ಕಾರದಿಂದ ಕೇಳುವುದು ಆಶ್ಚರ್ಯವಾಗಿರಲಿಲ್ಲ.
ಮೋಶೆ ಮತ್ತು ಆರೋನರು ಅವನ ಪ್ರಶ್ನೆಗೆ ಉತ್ತರಿಸಬೇಕಾದ ಅಗತ್ಯವಿರಲಿಲ್ಲ. ಅಂದು ಐಗುಪ್ತದ ಬಂಧನದಲ್ಲಿ ಕಷ್ಟಾನುಭವಿಸುತ್ತಿದ್ದ, ಇಸ್ರಾಯೇಲ್ಯರಿಂದ ಆರಾಧಿಸಲ್ಪಡುವ ದೇವರು ಯೆಹೋವನಾಗಿದ್ದನೆಂದು ಫರೋಹನಿಗೆ ತಿಳಿದಿತ್ತು. ಆದರೆ ಫರೋಹನು ಮತ್ತು ಇಡೀ ಐಗುಪ್ತವು ಯೆಹೋವನು ಸತ್ಯ ದೇವರಾಗಿರುತ್ತಾನೆಂದು ಬೇಗನೆ ತಿಳಿದುಕೊಳ್ಳಲಿದ್ದರು. ಅದೇ ವಿಧದಲ್ಲಿ ಇಂದು, ಯೆಹೋವನು ತನ್ನ ಹೆಸರನ್ನು ಮತ್ತು ದೇವತ್ವವನ್ನು ಭೂಮಿಯ ಮೇಲಿರುವ ಪ್ರತಿಯೊಬ್ಬರಿಗೆ ತಿಳಿಯುವಂತೆ ಮಾಡುವನು. (ಯೆಹೆಜ್ಕೇಲ 36:23) ಹೀಗೆ ಪ್ರಾಚೀನ ಐಗುಪ್ತದಲ್ಲಿ ತನ್ನ ಹೆಸರನ್ನು ಯೆಹೋವ ದೇವರು ಹೇಗೆ ಮಹೋನ್ನತಿಗೇರಿಸಿದನೆಂದು ಗಮನಿಸುವಲ್ಲಿ ನಾವು ಪ್ರಯೋಜನ ಹೊಂದಬಲ್ಲೆವು.
ಐಗುಪ್ತದ ದೇವರುಗಳಿಗಿಂತ ಉತ್ಕೃಷ್ಟನು
ಯೆಹೋವನು ಯಾರಾಗಿದ್ದಾನೆ ಎಂದು ಫರೋಹನು ಪ್ರತಿಭಟನಾತ್ಮಕವಾಗಿ ಕೇಳಿದಾಗ, ಅವನು ಅನುಭವಿಸಿದ ಪರಿಣಾಮಗಳನ್ನು ಅವನು ನಿರೀಕ್ಷಿಸಿರಲಿಲ್ಲ. ಐಗುಪ್ತದ ಮೇಲೆ ಹತ್ತು ಬಾಧೆಗಳನ್ನು ತರುವುದರ ಮೂಲಕ, ಯೆಹೋವನು ತಾನೇ ಪ್ರತ್ಯುತ್ತರಿಸಿದನು. ಆ ಬಾಧೆಗಳು ಕೇವಲ ಜನಾಂಗದ ವಿರುದ್ಧ ಹೊಡೆತಗಳಾಗಿರಲಿಲ್ಲ. ಅವು ಐಗುಪ್ತದ ದೇವರುಗಳ ವಿರುದ್ಧ ಹೊಡೆತಗಳಾಗಿದ್ದವು.
ಬಾಧೆಗಳು, ಐಗುಪ್ತದ ದೇವತೆಗಳ ಮೇಲೆ ಯೆಹೋವನ ಶ್ರೇಷ್ಠತೆಯನ್ನು ಪ್ರದರ್ಶಿಸಿದವು. (ವಿಮೋಚನಕಾಂಡ 12:12; ಅರಣ್ಯಕಾಂಡ 33:4) ಯೆಹೋವನು ಐಗುಪ್ತದ ನೈಲ್ ನದಿಯನ್ನು, ಎಲ್ಲಾ ನೀರುಗಳನ್ನು ರಕ್ತವನ್ನಾಗಿ ಮಾರ್ಪಡಿಸಿದಾಗಿನ ಗಲಿಬಿಲಿಯನ್ನು ಭಾವಿಸಿರಿ! ಈ ಅದ್ಭುತದ ಕಾರಣದಿಂದಾಗಿ, ನೈಲ್ ದೇವ, ಹಾಪಿಗಿಂತ ಯೆಹೋವನು ಶ್ರೇಷ್ಠನಾಗಿದ್ದಾನೆಂದು ಫರೋಹ ಮತ್ತು ಅವನ ಜನರು ಕಲಿತುಕೊಂಡರು. ನಿರ್ದಿಷ್ಟ ವಿಧದ ಮೀನುಗಳು ಪೂಜಿಸಲ್ಪಡುತ್ತಿದ್ದದ್ದರಿಂದ, ನೈಲ್ನಲ್ಲಿನ ಮೀನುಗಳ ಸಾವು ಐಗುಪ್ತದ ಧರ್ಮದ ಮೇಲೆಯೂ ಒಂದು ಹೊಡೆತವಾಗಿತ್ತು.—ವಿಮೋಚನಕಾಂಡ 7:19-21.
ಅನಂತರ, ಯೆಹೋವನು ಐಗುಪ್ತದ ಮೇಲೆ ಕಪ್ಪೆಗಳ ಬಾಧೆಯನ್ನು ಬರಮಾಡಿದನು. ಇದು ಐಗುಪ್ತದ ಕಪ್ಪೆ ದೇವತೆ ಹೆಕ್ಟ್ನ್ನು ಅವಮಾನಗೊಳಿಸಿತು. (ವಿಮೋಚನಕಾಂಡ 8:5-14) ದೂಳನ್ನು ಹೇನುಗಳನ್ನಾಗಿ ಪರಿವರ್ತಿಸುವ ಯೆಹೋವನ ಅದ್ಭುತವನ್ನು ನಕಲುಮಾಡಲಾಗದಿದ್ದ, ಜೋಯಿಸರನ್ನು ಮೂರನೇ ಬಾಧೆಯು ದಿಗ್ಭ್ರಮೆಗೊಳಿಸಿತು. “ಇದು ದೇವರ ಕೈಕೆಲಸವೇ ಸರಿ” ಎಂದು ಅವರು ಕೂಗಿದರು. (ವಿಮೋಚನಕಾಂಡ 8:16-19) ಮಾಟಮಂತ್ರಗಳ ನಿರ್ಮಾಪಕನೆಂದು ಗೌರವಿಸಲ್ಪಟ್ಟ, ಐಗುಪ್ತದ ದೇವ ತೋತನು ಆ ಪಂಡಿತ ವೇಷಿಗಳಿಗೆ ಸಹಾಯ ಮಾಡಲು ಅಶಕ್ತನಾಗಿದ್ದನು.
ಯೆಹೋವನು ಯಾರಾಗಿದ್ದಾನೆಂದು ಫರೋಹನು ಕಲಿಯುತ್ತಾ ಇದ್ದನು. ಮೋಶೆಯ ಮೂಲಕ ಆತನ ಉದ್ದೇಶಗಳನ್ನು ಪ್ರಕಟಿಸಬಲ್ಲ ಮತ್ತು ಐಗುಪ್ತ್ಯರ ಮೇಲೆ ಅದ್ಭುತಕರವಾದ ಬಾಧೆಗಳನ್ನು ತರುವುದರ ಮೂಲಕ ಅವುಗಳನ್ನು ಪೂರೈಸಬಲ್ಲ ದೇವರು ಯೆಹೋವನಾಗಿದ್ದನು. ಯೆಹೋವನು ತನ್ನ ಚಿತ್ತದ ಮೇರೆಗೆ ಹೊಡೆತಗಳನ್ನು ಆರಂಭಿಸಲು ಮತ್ತು ಅಂತ್ಯಗೊಳಿಸಲು ಕೂಡ ಶಕ್ತನಾಗಿದ್ದನು. ಹೇಗೂ, ಈ ಜ್ಞಾನವು ಯೆಹೋವನಿಗೆ ಅಧೀನನಾಗಲು ಫರೋಹನನ್ನು ನಡಿಸಲಿಲ್ಲ. ಅದರ ಬದಲಿಗೆ, ಐಗುಪ್ತದ ಅಹಂಕಾರಿ ಅರಸನು ಯೆಹೋವನನ್ನು ಎದುರಿಸಲು ಹಟಮಾರಿತನದಿಂದ ಮುಂದುವರಿದನು.
ನಾಲ್ಕನೇ ಬಾಧೆಯ ಸಮಯದಲ್ಲಿ, ದೇವ ಶೂ ಯಾ ಸ್ವರ್ಗದ ರಾಣಿ, ಐಸಿಸ್ ದೇವತೆಯಲ್ಲಿ ವ್ಯಕ್ತೀಕರಿಸಲ್ಪಟ್ಟ ಒಂದು ಆರಾಧನಾ ವಸ್ತುವೇ ಆದ ಹುಳಗಳು ಮನೆಗಳೊಳಗೆ ನುಗ್ಗಿ, ಮತ್ತು ಪ್ರಾಯಶಃ ಗಾಳಿಯಲ್ಲಿ ಹೇರಳವಾಗಿ ತುಂಬಿ, ದೇಶವನ್ನು ಹಾಳು ಮಾಡಿದವು. ಈ ಕೀಟಗಳಿಗೆ ಹೀಬ್ರೂ ಪದವು “ದನಗಳನ್ನು ಕಚ್ಚುವ ನೊಣ,” “ನಾಯಿ ನೊಣ,” ಮತ್ತು “ಜೀರುಂಡೆ” ಎಂದು ಭಾಷಾಂತರವಾಗುತ್ತದೆ. (ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್; ಸೆಪ್ಟುಎಜಿಂಟ್; ಯಂಗ್) ಪವಿತ್ರ ಜೀರುಂಡೆಯು ಒಳಗೂಡಿರುವಲ್ಲಿ, ಅವರು ಪವಿತ್ರವೆಂದು ಎಣಿಸಿದ ಕೀಟಗಳ ಮೂಲಕವೆ ಐಗುಪ್ತ್ಯರು ಬಾಧಿಸಲ್ಪಟ್ಟರು, ಮತ್ತು ಜನರು ಅವುಗಳನ್ನು ತಮ್ಮ ಪಾದಗಳ ಕೆಳಗೆ ಜಜ್ಜಲಾರದೆ ನಡೆಯಸಾಧ್ಯವಿರುತ್ತಿರಲಿಲ್ಲ. ಹೇಗೂ, ಈ ಬಾಧೆಯು ಯೆಹೋವನ ಕುರಿತು ಒಂದು ಹೊಸ ವಿಷಯವನ್ನು ಫರೋಹನಿಗೆ ಕಲಿಸಿತು. ಐಗುಪ್ತದ ದೇವತೆಗಳಿಗೆ ತಮ್ಮ ಆರಾಧಕರನ್ನು ಹುಳಗಳಿಂದ ಸಂರಕ್ಷಿಸಲಾಗದಿದ್ದರೂ, ಯೆಹೋವನು ತನ್ನ ಜನರನ್ನು ಸಂರಕ್ಷಿಸಸಾಧ್ಯವಿತ್ತು. ಈ ಮತ್ತು ಮುಂದಿನ ಬಾಧೆಗಳು ಐಗುಪ್ತ್ಯರನ್ನು ಹಿಂಸಿಸಿದವೆ ವಿನಾ ಇಸ್ರಾಯೇಲ್ಯರನ್ನಲ್ಲ.—ವಿಮೋಚನಕಾಂಡ 8:20-24.
ಐದನೇ ಬಾಧೆಯು ಐಗುಪ್ತದ ದನಕರುಗಳ ಮೇಲಿನ ವ್ಯಾಧಿಯಾಗಿತ್ತು. ಈ ಹೊಡೆತವು ಹ್ಯಾಥೊರ್, ಏಪಿಸ್, ಮತ್ತು ದನ ದೇಹದ ಆಕಾಶ ದೇವತೆ ನಟ್ಳನ್ನು ಅಪಕೀರ್ತಿಗೊಳಿಸಿತು. (ವಿಮೋಚನಕಾಂಡ 9:1-7) ಆರನೇ ಬಾಧೆಯು ಗುಣಪಡಿಸುವ ಸಾಮರ್ಥ್ಯಗಳುಳ್ಳವರೆಂದು ತಪ್ಪಾಗಿ ಪರಿಗಣಿಸಲ್ಪಟ್ಟ ತಾತ್, ಐಸಿಸ್, ಮತ್ತು ಪ್ಟಾ ದೇವತೆಗಳನ್ನು ಅವಮಾನಪಡಿಸಿ, ಮನುಷ್ಯ ಮತ್ತು ಪಶುಗಳ ಮೇಲೆ ಬೊಕ್ಕೆಗಳನ್ನು ಬರಮಾಡಿತು.—ವಿಮೋಚನಕಾಂಡ 9:8-11.
ಆಲಿಕಲ್ಲುಗಳ ನಡುವೆ ಬೆಂಕಿಯು ಹೊಳೆಯುವದರೊಂದಿಗಿನ ವಿಪರೀತ ಆಲಿಕಲ್ಲಿನ ಮಳೆಯು ಏಳನೇ ಬಾಧೆಯಾಗಿತ್ತು. ಈ ಬಾಧೆಯು ಮಿಂಚಿನ ಒಡೆಯನೆಂದಿರುವ, ದೇವ ರೆಶ್ಪೂವನ್ನು ಮತ್ತು ಮಳೆ ಮತ್ತು ಗುಡುಗಿನ ಅಧ್ಯಕ್ಷತೆಯನ್ನು ವಹಿಸುವವನೆಂದು ಹೇಳಲಾಗಿರುವ ತಾತ್ನನ್ನು ನಾಚಿಕೆಗೀಡು ಮಾಡಿತು. (ವಿಮೋಚನಕಾಂಡ 9:22-26) ಮಿಡಿತೆಗಳ ವ್ಯಾಧಿಯಾದ ಎಂಟನೇ ಹೊಡೆತವು, ಬೆಳೆಗಳ ಸಂರಕ್ಷಕನೆಂದೆಣಿಸಲಾಗಿದ್ದ ಫಲಶಕ್ತಿಯ ದೇವ ಮಿನ್ ನ ಮೇಲೆ ಯೆಹೋವನ ಶ್ರೇಷ್ಠತೆಯನ್ನು ತೋರಿಸಿಕೊಟ್ಟಿತು. (ವಿಮೋಚನಕಾಂಡ 10:12-15) ಐಗುಪ್ತದ ಮೇಲೆ ಮೂರು ದಿನದ ಕಾರ್ಗತ್ತಲೆಯ ಒಂಬತ್ತನೇ ಬಾಧೆಯು, ಸೂರ್ಯ ದೇವರುಗಳಾದ ರಾ ಮತ್ತು ಹೋರಸ್ರಂಥ ಐಗುಪ್ತದ ದೇವತೆಗಳ ಮೇಲೆ ತಿರಸ್ಕಾರವನ್ನು ಸುರಿಯಿತು.—ವಿಮೋಚನಕಾಂಡ 10:21-23.
ಒಂಬತ್ತು ಧ್ವಂಸಕಾರಕ ಬಾಧೆಗಳ ಎದುರಲ್ಲಿಯೂ, ಫರೋಹನು ಇಸ್ರಾಯೇಲ್ಯರನ್ನು ಬಿಡುಗಡೆಗೊಳಿಸಲು ನಿರಾಕರಿಸಿದನು. ಅವನ ಹೃದಯಕಾಠಿಣ್ಯವು ದೇವರು ಹತ್ತನೇ ಮತ್ತು ಅಂತಿಮ ಬಾಧೆಯನ್ನು—ಮನುಷ್ಯ ಮತ್ತು ಪಶುವಿನ ಚೊಚ್ಚಲಾದವುಗಳ ಮರಣ—ಬರಮಾಡಿದಾಗ ಅದು ಐಗುಪ್ತಕ್ಕೆ ಬಹಳ ಹಾನಿಯದ್ದಾಗಿ ಪರಿಣಮಿಸಿತು. ದೇವರೆಂದು ವೀಕ್ಷಿಸಲ್ಪಟ್ಟಿದ್ದರೂ, ಫರೋಹನ ಚೊಚ್ಚಲ ಮಗನು ಕೂಡ ನಾಶವಾದನು. ಹೀಗೆ ಯೆಹೋವನು ‘ಐಗುಪ್ತದ ಸಮಸ್ತ ದೇವದೇವತೆಗಳಿಗೆ ಶಿಕ್ಷೆಮಾಡಿದನು.’—ವಿಮೋಚನಕಾಂಡ 12:12, 29.
ಈಗ ಫರೋಹನು ಮೋಶೆ ಮತ್ತು ಆರೋನರನ್ನು ಕರೆಯಿಸಿ, ಅಂದದ್ದು: “ನೀವೂ ಇಸ್ರಾಯೇಲ್ಯರೆಲ್ಲರೂ ನನ್ನ ಜನರ ಮಧ್ಯದಿಂದ ಹೊರಟುಹೋಗಿರಿ; ನೀವು ಕೇಳಿಕೊಂಡ ಮೇರೆಗೆ ಯೆಹೋವನನ್ನು ಆರಾಧಿಸಿರಿ. ನೀವು ಕೇಳಿಕೊಂಡಂತೆ ನಿಮ್ಮ ಕುರಿದನಗಳನ್ನೂ ತೆಗೆದುಕೊಂಡು ಹೋಗಬಹುದು; ಅದಲ್ಲದೆ ನನ್ನ ಹಿತಕ್ಕಾಗಿಯೂ ಪ್ರಾರ್ಥಿಸಿರಿ.”—ವಿಮೋಚನಕಾಂಡ 12:31, 32.
ತನ್ನ ಜನರನ್ನು ಕಾಪಾಡುವವನು
ಇಸ್ರಾಯೇಲ್ಯರು ಬಿಟ್ಟು ಹೊರಟರು, ಆದರೆ ಬೇಗನೆ ಅವರು ಅರಣ್ಯದಲ್ಲಿ ಗೊತ್ತುಗುರಿ ಇಲ್ಲದೆ ಅಲೆದಾಡುತ್ತಿದ್ದ ಹಾಗೆ ಫರೋಹನಿಗೆ ತೋಚಿತು. ಈಗ ಅವನು ಮತ್ತು ಅವನ ಸೇವಕರು ಅಂದುಕೊಂಡದ್ದು: “ಇದೇನು ನಾವು ಮಾಡಿದ್ದು? ನಮಗೆ ದಾಸರಾಗಿದ್ದ ಇಸ್ರಾಯೇಲ್ಯರನ್ನು ಯಾತಕ್ಕೆ ಹೋಗಗೊಡಿಸಿದೆವು?” (ವಿಮೋಚನಕಾಂಡ 14:3-5) ಈ ದಾಸ ಜನಾಂಗದ ನಷ್ಟವು ಐಗುಪ್ತಕ್ಕೆ ಭಾರೀ ಆರ್ಥಿಕ ಹೊಡೆತವಾಗಲಿಕ್ಕಿತ್ತು.
ಫರೋಹನು ತನ್ನ ಸೇನಾ ಪಡೆಯನ್ನು ಒಟ್ಟುಗೂಡಿಸಿದನು ಮತ್ತು ಪೀಹಹೀರೋತಿನಷ್ಟು ದೂರ ಇಸ್ರಾಯೇಲ್ಯರನ್ನು ಹಿಂದಟ್ಟಿದನು. (ವಿಮೋಚನಕಾಂಡ 14:6-9) ಇಸ್ರಾಯೇಲ್ಯರು ಸಮುದ್ರ ಮತ್ತು ಬೆಟ್ಟಗಳ ನಡುವೆ ಸಿಕ್ಕಿ ಬಿದ್ದ ಕಾರಣ, ಮಿಲಿಟರಿ ರೀತಿಯಲ್ಲಿ ಐಗುಪ್ತ್ಯರಿಗೆ ಪರಿಸ್ಥಿತಿಯು ಒಳ್ಳೇದಾಗಿ ಕಂಡಿತು. ಆದರೆ ಅವರ ಮತ್ತು ಐಗುಪ್ತ್ಯರ ನಡುವೆ ಮೇಘವನ್ನು ಇಡುವುದರ ಮೂಲಕ ಇಸ್ರಾಯೇಲ್ಯರನ್ನು ಸಂರಕ್ಷಿಸಲು ಯೆಹೋವನು ಕ್ರಿಯೆಗೈದನು. ಹೀಗೆ ಆ ಮೇಘವು ಐಗುಪ್ತ್ಯರ ಬದಿಯಲ್ಲಿ “ಕತ್ತಲನ್ನು ಉಂಟುಮಾಡಿ,” ಆಕ್ರಮಣವನ್ನು ತಡೆಯಿತು. ಇನ್ನೊಂದು ಪಕ್ಕದಲ್ಲಿ, ಮೇಘವು ಉಜ್ವಲವಾಗಿದ್ದು, ಇಸ್ರಾಯೇಲ್ಯರಿಗೋಸ್ಕರ “ರಾತ್ರಿಯನ್ನು ಬೆಳಕುಮಾಡಿತು.”—ವಿಮೋಚನಕಾಂಡ 14:10-20.
ಐಗುಪ್ತ್ಯರು ಕೊಳ್ಳೆಹೊಡೆಯಲು ಮತ್ತು ನಾಶಮಾಡಲು ದೃಢನಿರ್ಧಾರ ಮಾಡಿದ್ದರು ಆದರೆ ಮೇಘದ ಮೂಲಕ ತಡೆಯಲ್ಪಟ್ಟಿದ್ದರು. (ವಿಮೋಚನಕಾಂಡ 15:9) ಅದು ಎತ್ತಲ್ಪಟ್ಟಾಗ, ಎಂತಹ ಬೆರಗು! ಕೆಂಪು ಸಮುದ್ರದ ನೀರುಗಳು ವಿಭಾಗಿಸಲ್ಪಟ್ಟಿದ್ದವು, ಮತ್ತು ಇಸ್ರಾಯೇಲ್ಯರು ಒಣನೆಲದ ಮೇಲೆ ಇನ್ನೊಂದು ಬದಿಗೆ ದಾಟುತ್ತಿದ್ದರು! ಫರೋಹ ಮತ್ತು ಅವನ ಪಡೆಗಳು ಅವರ ಮುಂಚಿನ ದಾಸರನ್ನು ಸೆರೆಹಿಡಿಯವ ಮತ್ತು ಸುಲುಕೊಳ್ಳವ ನಿರ್ಧಾರದಿಂದ, ಸಮುದ್ರ ತಳದೊಳಗೆ ಗುಡುಗಾಡುತ್ತಾ ಹೋದರು. ಹೇಗೂ, ಐಗುಪ್ತದ ಅಹಂಕಾರಿ ಅರಸನು ಇಬ್ರಿಯರ ದೇವರನ್ನು ಕಡಿಮೆಯಾಗಿ ಪರಿಗಣಿಸಲಿಲ್ಲ. ಯೆಹೋವನು ಅವರ ರಥಗಳ ಚಕ್ರಗಳನ್ನು ತೆಗೆದುಬಿಟ್ಟು ಐಗುಪ್ತ್ಯರನ್ನು ಗಲಿಬಿಲಿಯಲ್ಲಿ ಸಿಕ್ಕಿಸಿದನು.—ವಿಮೋಚನಕಾಂಡ 14:21-25ಎ.
“ನಾವು ಇಸ್ರಾಯೇಲ್ಯರ ಮುಂದೆ ನಿಲ್ಲಲಾರೆವು, ಓಡಿ ಹೋಗೋಣ; ಯೆಹೋವನು ಅವರಿಗೋಸ್ಕರ ನಮಗೆ ವಿರೋಧವಾಗಿ ಯುದ್ಧಮಾಡುತ್ತಾನೆ” ಎಂದು ಐಗುಪ್ತದ ಶೂರರು ಕೂಗಿದರು. ಫರೋಹನಿಗೆ ಮತ್ತು ಅವನ ಜನರಿಗೆ ಇಂಥ ವಾಸ್ತವಿಕ ತಿಳಿವಳಿಕೆಯು ಹೆಚ್ಚು ವಿಳಂಬವಾಗಿ ಬಂದಿತ್ತು. ಇನ್ನೊಂದು ದಡದಲ್ಲಿ ಸುರಕ್ಷಿತವಾಗಿದ್ದು, ಮೋಶೆಯು ತನ್ನ ಕೈಯನ್ನು ಸಮುದ್ರದ ಕಡೆಗೆ ಚಾಚಿದನು, ಮತ್ತು ನೀರು ಮೊದಲಿನಂತಾಗಿ ಫರೋಹ ಮತ್ತು ಅವನ ಪಡೆಯನ್ನು ಕೊಂದಿತು.—ವಿಮೋಚನಕಾಂಡ 14:25ಬಿ-28.
ಅನುಭವದ ಮೂಲಕ ಕಲಿಸಲಾದ ಪಾಠಗಳು
ಹಾಗಾದರೆ, ಯೆಹೋವನು ಯಾರು? ಅಹಂಕಾರದ ಫರೋಹನು ಆ ಪ್ರಶ್ನೆಗೆ ಉತ್ತರವನ್ನು ಪಡೆದನು. ‘ಜನಾಂಗಗಳ ಮೌಲ್ಯವಿಲ್ಲದ ದೇವರುಗಳಿಗೆ’ ಪೂರ್ತಿ ಅಸದೃಶವಾಗಿ ಯೆಹೋವನು ಒಬ್ಬನೆ ಸತ್ಯ ದೇವರೆಂದು ಐಗುಪ್ತದಲಿನ್ಲ ಘಟನೆಗಳು ತೋರಿಸಿಕೊಟ್ಟವು. (ಕೀರ್ತನೆ 96:4, 5) ಆತನ ಭಯಭಕ್ತಿ ಉತ್ಪಾದಕ ಶಕ್ತಿಯ ಮೂಲಕ, ಯೆಹೋವನು “ಭೂಮ್ಯಾಕಾಶಗಳನ್ನು ಸೃಷ್ಟಿಸಿದನು.” ‘ಮಹತ್ಕಾರ್ಯಗಳನ್ನು ಉತ್ಪಾತಗಳನ್ನು ನಡಿಸಿ ಭುಜಪರಾಕ್ರಮವನ್ನು ತೋರಿಸಿ ಮಹಾ ಭೀತಿಯನ್ನುಂಟುಮಾಡಿ ಅವನ ಜನರಾದ ಇಸ್ರಾಯೇಲ್ಯರನ್ನು ಐಗುಪ್ತದೇಶದೊಳಗಿಂದ’ ಬರಮಾಡಿದವನಾದ, ಮಹಾ ವಿಮೋಚಕನು ಕೂಡ ಆತನಾಗಿರುತ್ತಾನೆ. (ಯೆರೆಮೀಯ 32:17-21) ಯೆಹೋವನು ತನ್ನ ಜನರನ್ನು ಸಂರಕ್ಷಿಸ ಶಕ್ತನು ಎಂದು ಇದು ಎಷ್ಟು ಒಳ್ಳೇದಾಗಿ ರುಜುಪಡಿಸುತ್ತದೆ!
ಫರೋಹನು ಕಹಿ ಅನುಭವದ ಮೂಲಕ ಆ ಪಾಠಗಳನ್ನು ಕಲಿತನು. ನಿಜತ್ವದಲ್ಲಿ, ಅಂತಿಮ ಪಾಠವು ಅವನು ಜೀವವನ್ನು ತೆರುವಂತೆ ಮಾಡಿತು. (ಕೀರ್ತನೆ 136:1, 15) “ಯೆಹೋವನೆಂಬವನು ಯಾರು?” ಎಂದು ಅವನು ಕೇಳಿದಾಗ ಅವನು ದೀನತೆಯನ್ನು ತೋರಿಸುತ್ತಿದ್ದಲ್ಲಿ ಬಹಳಷ್ಟು ಬುದ್ಧಿವಂತನಾಗಿರುತ್ತಿದ್ದನು. ಆಗ ಆ ಅರಸನು ಅವನಿಗೆ ದೊರೆತ ಉತ್ತರದ ಹೊಂದಿಕೆಯಲ್ಲಿ ಕ್ರಿಯೆಗೈಯಬಹುದಿತ್ತು. ಸಂತೋಷಕರವಾಗಿಯೆ, ಇಂದು ಅನೇಕ ನಮ್ರ ಜನರು ಯೆಹೋವನು ಯಾರಾಗಿದ್ದಾನೆಂದು ಕಲಿಯುತ್ತಿದ್ದಾರೆ. ಮತ್ತು ಯಾವ ತರಹದ ವ್ಯಕ್ತಿತ್ವವನ್ನು ಆತನು ಹೊಂದಿರುತ್ತಾನೆ? ಆತನು ನಮ್ಮಿಂದ ಏನನ್ನು ಕೇಳಿಕೊಳ್ಳುತ್ತಾನೆ? ಮುಂದಿನ ಲೇಖನವು ಯೆಹೋವನೆಂಬ ನಾಮವುಳ್ಳ ಏಕಮಾತ್ರನಿಗೆ ನಿಮ್ಮ ಗಣ್ಯತೆಯನ್ನು ವಿಸ್ತರಿಸುವಂತೆ ಮಾಡಲಿ.—ಕೀರ್ತನೆ 83:18.
[ಪುಟ 3 ರಲ್ಲಿರುವ ಚಿತ್ರ ಕೃಪೆ]
Pictorial Archive (Near Eastern History) Est.