ದೇವ-ದತ್ತ ಸ್ವಾತಂತ್ರ್ಯ ಆನಂದವನ್ನು ತರುತ್ತದೆ
“ಯೆಹೋವನ ಆನಂದವೇ ನಿಮ್ಮ ಆಶ್ರಯವಾಗಿದೆ.”—ನೆಹೆಮೀಯ 8:10.
1. ಆನಂದವು ಏನಾಗಿರುತ್ತದೆ, ಮತ್ತು ದೇವರಿಗೆ ಸಮರ್ಪಿತರಾದವರು ಅದನ್ನು ಏಕೆ ಅನುಭವಿಸಬಹುದು?
ಯೆಹೋವನು ಆತನ ಜನರ ಹೃದಯಗಳಲ್ಲಿ ಆನಂದವನ್ನು ತುಂಬಿಸುತ್ತಾನೆ. ಮಹಾ ಸಂತೋಷ ಯಾ ಅತ್ಯಾನಂದದ ಈ ಸ್ಥಿತಿಯು, ಒಳ್ಳೆಯದರ ಸಂಪಾದನೆ ಅಥವಾ ನಿರೀಕ್ಷಣೆಯಿಂದ ಪರಿಣಮಿಸುತ್ತದೆ. ದೇವರಿಗೆ ಸಮರ್ಪಿತರಾದ ಮಾನವರು ಇಂಥ ಒಂದು ಭಾವನೆಯನ್ನು ಅನುಭವಿಸಬಹುದು ಯಾಕಂದರೆ ಆನಂದ ಅವನ ಪವಿತ್ರಾತ್ಮದ ಅಥವಾ ಕಾರ್ಯಕಾರಿ ಶಕ್ತಿಯ ಒಂದು ಫಲವಾಗಿದೆ. (ಗಲಾತ್ಯ 5:22, 23) ಆದುದರಿಂದ ಅತಿ ಕಷ್ಟದ ಪರೀಕ್ಷೆಯು ನಮ್ಮೆದುರಿಗೆ ಬಂದರೂ, ಆತನ ಆತ್ಮದಿಂದ ನಡಿಸಲ್ಪಟ್ಟ ಯೆಹೋವನ ಸೇವಕರಾಗಿ ನಾವು ಆನಂದಿತರಾಗಿರಬಲ್ಲೆವು.
2. ಎಜ್ರನ ದಿನಗಳಲ್ಲಿ ಒಂದು ವಿಶೇಷ ಸಂದರ್ಭದಲ್ಲಿ ಯೆಹೂದ್ಯರು ಸಂತೋಷಿಸಿದ್ದು ಯಾಕೆ?
2 ಸಾ.ಶ.ಪೂ. ಐದನೆಯ ಶತಮಾನದಲ್ಲಿ ಒಂದು ವಿಶೇಷ ಸಂದರ್ಭದಲ್ಲಿ ಯೆಹೂದ್ಯರು ಅವರ ದೇವ-ದತ್ತ ಸ್ವಾತಂತ್ರ್ಯವನ್ನು ಯೆರೂಸಲೇಮಿನಲ್ಲಿ ಆನಂದದಾಯಕ ಪರ್ಣಶಾಲೆಗಳ ಹಬ್ಬವನ್ನು ಆಚರಿಸಲು ಉಪಯೋಗಿಸಿದರು. ಎಜ್ರ ಮತ್ತು ಇತರ ಲೇವ್ಯರು ದೇವರ ನಿಯಮವನ್ನು ಅವರಿಗಾಗಿ ಓದಿ ವಿವರಿಸಿದ ನಂತರ “ತಮಗೆ ತಿಳಿಯಪಡಿಸಿದ ಮಾತುಗಳನ್ನು ಜನರೆಲ್ಲರೂ ಗಮನಿಸಿದ ನಂತರ ಅನ್ನಪಾನಗಳನ್ನು ತೆಗೆದುಕೊಂಡು ಏನೂ ಇಲ್ಲದವರಿಗೆ ಭಾಗಗಳನ್ನು ಕಳುಹಿಸಿ ಬಹಳವಾಗಿ ಸಂತೋಷಪಟ್ಟರು.”—ನೆಹೆಮೀಯ 8:5-12.
ಯೆಹೋವನ ಆನಂದವು ನಮ್ಮ ಆಶ್ರಯವಾಗಿದೆ
3. ಯಾವ ಪರಿಸ್ಥಿತಿಗಳ ಕೆಳಗೆ “ಯೆಹೋವನ ಆನಂದವು” ನಮ್ಮ ಆಶ್ರಯಸ್ಥಾನವಾಗಿರಬಲ್ಲದು?
3 ಆ ಹಬ್ಬದಲ್ಲಿ ಯೆಹೂದ್ಯರು ಈ ವಾಕ್ಯಗಳ ಸತ್ಯತೆಯನ್ನು ಗ್ರಹಿಸಿದರು: “ಯೆಹೋವನ ಆನಂದವೇ ನಿಮ್ಮ ಆಶ್ರಯವಾಗಿದೆ.” (ನೆಹೆಮೀಯ 8:10) ಯೆಹೋವನ ಸಮರ್ಪಿತ, ಸ್ನಾನಿತ ಸಾಕ್ಷಿಗಳಾಗಿ ದೇವ-ದತ್ತ ಸ್ವಾತಂತ್ರ್ಯಕ್ಕಾಗಿ ನಾವು ಸ್ಥಿರನಿಂತಿರುವುದಾದರೆ, ಈ ಆನಂದವು ನಮ್ಮ ಆಶ್ರಯಸ್ಥಾನವೂ ಆಗಬಹುದು. ನಮ್ಮಲ್ಲಿ ಕೆಲವರು ಪವಿತ್ರಾತ್ಮದಿಂದ ಅಭಿಷೇಕವನ್ನು ಮತ್ತು ಕ್ರಿಸ್ತನೊಂದಿಗೆ ಸ್ವರ್ಗೀಯ ಜತೆಬಾಧ್ಯಸ್ಥರಾಗಿ ದೇವರ ಕುಟುಂಬದೊಳಗೆ ಸ್ವೀಕರಿಸಲ್ಪಡುವ ಅನುಭವಹೊಂದಿರುತ್ತಾರೆ. (ರೋಮಾಪುರ 8:15-23) ಇಂದು ನಮ್ಮಲ್ಲಿ ಅಧಿಕಾಂಶ ಮಂದಿಗೆ ಐಹಿಕ ಪರದೈಸದಲ್ಲಿ ಒಂದು ಜೀವಿತದ ಪ್ರತೀಕ್ಷೆಯು ಇರುತ್ತದೆ. (ಲೂಕ 23:43) ನಾವು ಎಷ್ಟು ಆನಂದಿತರಾಗಿರಬೇಕು!
4. ಕ್ರೈಸ್ತರು ಬಾಧೆಗಳನ್ನು ಮತ್ತು ಹಿಂಸೆಯನ್ನು ಏಕೆ ಸಹಿಸಶಕ್ತರು?
4 ನಮಗೆ ಅದ್ಭುತವಾದ ಪ್ರತೀಕ್ಷೆಗಳಿದ್ದರೂ, ಬಾಧೆಗಳನ್ನು ಮತ್ತು ಹಿಂಸೆಯನ್ನು ತಾಳಿಕೊಳ್ಳುವದು ಅಷ್ಟು ಸುಲಭವಲ್ಲ. ಆದರೂ, ನಾವದನ್ನು ಮಾಡಸಾಧ್ಯವಿದೆ ಯಾಕಂದರೆ ದೇವರು ನಮಗೆ ಆತನ ಪವಿತ್ರಾತ್ಮವನ್ನು ಕೊಡುತ್ತಾನೆ. ಅದರೊಂದಿಗೆ ನಮಗೆ ಆನಂದ ಮತ್ತು ನಮ್ಮಿಂದ ನಮ್ಮ ನಿರೀಕ್ಷೆ ಮತ್ತು ದೇವರ ಪ್ರೀತಿಯನ್ನು ಅಪಹರಿಸುವಂತಹದ್ದು ಯಾವುದೂ ಇಲ್ಲ ಎಂಬ ಮನವರಿಕೆ ನಮಗದೆ. ಅದಲ್ಲದೆ, ನಾವು ಆತನನ್ನು ನಮ್ಮ ಪೂರ್ಣ ಹೃದಯ, ಆತ್ಮ, ಶಕ್ತಿ ಮತ್ತು ಬುದಿಯ್ಧಿಂದ ಪ್ರೀತಿಸುವ ವರೆಗೆ, ಯೆಹೋವನು ನಮ್ಮ ಆಶ್ರಯಸ್ಥಾನವಾಗಿ ಇರುವನು ಎಂಬುದರ ಕುರಿತಾಗಿ ನಾವು ಖಾತ್ರಿಯಿಂದಿರಬಲ್ಲೆವು.—ಲೂಕ 10:27.
5. ಆನಂದಪಡಲು ಕಾರಣಗಳನ್ನು ನಾವು ಎಲ್ಲಿ ಪಡೆಯಬಹುದು?
5 ಯೆಹೋವನ ಜನರು ಹೇರಳವಾದ ಆಶೀರ್ವಾದಗಳಲ್ಲಿ ಆನಂದಿಸುತ್ತಾರೆ ಮತ್ತು ಹರ್ಷಿಸಲು ಅನೇಕ ಕಾರಣಗಳು ಕೂಡ ಇವೆ. ಗಲಾತ್ಯದವರಿಗೆ ಪೌಲನು ಬರೆದ ಪತ್ರದಲ್ಲಿ ಆನಂದಿಸಲಿಕ್ಕಾಗಿರುವ ಕೆಲವು ಕಾರಣಗಳು ಸೂಚಿಸಲ್ಪಟ್ಟಿವೆ. ಇತರ ಕಾರಣಗಳು ಶಾಸ್ತ್ರವಚನಗಳಲ್ಲಿ ಬೇರೆ ಕಡೆಗಳಲ್ಲೂ ಕೊಡಲ್ಪಟ್ಟಿವೆ. ಅಂಥ ಆನಂದದಾಯಕ ಆಶೀರ್ವಾದಗಳನ್ನು ಪರಿಗಣಿಸುವುದರಿಂದ ನಮ್ಮ ಮನಸ್ಸು ಉಲ್ಲಾಸಿಸುವುದು.
ದೇವ-ದತ್ತ ಸ್ವಾತಂತ್ರ್ಯಕ್ಕೆ ಮೂಲ್ಯತೆ ನೀಡಿರಿ
6. ಗಲಾತ್ಯದ ಕ್ರೈಸ್ತರು ಸ್ಥಿರನಿಲ್ಲುವಂತೆ ಪೌಲನು ಏಕೆ ಪ್ರೇರೇಪಿಸುತ್ತಾನೆ?
6 ಕ್ರೈಸ್ತರೋಪಾದಿ ನಮಗೆ ದೇವರೊಂದಿಗೆ ಒಂದು ಸ್ವೀಕೃತವಾದ ಸ್ಥಾನವಿರುವ ಆನಂದದಾಯಕ ಆಶೀರ್ವಾದವಿರುತ್ತದೆ. ಕ್ರಿಸ್ತನು ಆತನ ಹಿಂಬಾಲಕರನ್ನು ಮೋಶೆಯ ನಿಯಮಶಾಸ್ತ್ರದಿಂದ ಬಿಡುಗಡೆಗೊಳಿಸಿದ್ದರಿಂದ, ಗಲಾತ್ಯದವರು ಸ್ಥಿರನಿಲ್ಲುವಂತೆ ಮತ್ತು ಆ “ದಾಸತ್ವದ ನೊಗ” ದೊಳಗೆ ಪುನಃ ಬಂಧಿಸಲ್ಪಡದಂತೆ ಪ್ರೇರೇಪಿಸಲ್ಪಟ್ಟರು. ನಮ್ಮ ವಿಷಯದಲ್ಲೇನು? ನಿಯಮವನ್ನು ಪಾಲಿಸುವದರ ಮೂಲಕ ನೀತಿವಂತರೆಂದು ಎಣಿಸಿಕೊಳ್ಳಲು ನಾವು ಪ್ರಯತ್ನಿಸಿದ್ದರೆ, ನಾವು ಕ್ರಿಸ್ತನಿಂದ ಬೇರ್ಪಡಿಸಲ್ಪಡುತ್ತಿದ್ದೆವು. ಆದಾಗ್ಯೂ, ದೇವರ ಆತ್ಮದ ನೆರವಿನಿಂದ, ಮಾಂಸಿಕ ಸುನ್ನತಿ ಅಥವಾ ನಿಯಮಶಾಸ್ತ್ರದ ಇತರ ಕೆಲಸಗಳಿಂದ ಅದಿರದೆ, ಪ್ರೀತಿಯ ಮೂಲಕ ಕಾರ್ಯನಡಿಸುವ ನಂಬಿಕೆಯಿಂದ ಪರಿಣಮಿಸುವ ನಿರೀಕ್ಷಿಸಲ್ಪಡುವ ನೀತಿಗಾಗಿ ನಾವು ಕಾಯುತ್ತಿದ್ದೇವೆ.—ಗಲಾತ್ಯ 5:1-6.
7. ಯೆಹೋವನಿಗೆ ಸಲ್ಲಿಸುವ ಪವಿತ್ರ ಸೇವೆಯನ್ನು ನಾವು ಹೇಗೆ ವೀಕ್ಷಿಸಬೇಕು?
7 ನಮ್ಮ ದೇವ-ದತ್ತ ಸ್ವಾತಂತ್ರ್ಯವನ್ನು “ಯೆಹೋವನನ್ನು ಸಂತೋಷದಿಂದ ಸೇವಿಸು”ವಂತೆ ಉಪಯೋಗಿಸುವುದು ಒಂದು ಆಶೀರ್ವಾದವಾಗಿದೆ. (ಕೀರ್ತನೆ 100:2) ನಿಜವಾಗಿಯೂ, “ದೇವರಾದ ಯೆಹೋವನು ಸರ್ವಶಕ್ತನು” “ಸರ್ವಯುಗಗಳ ಅರಸನು” ಆದ ಅವನಿಗೆ ಪವಿತ್ರ ಸೇವೆಯನ್ನು ಸಲ್ಲಿಸುವುದು ಒಂದು ಅತ್ಯುತ್ಕೃಷ್ಟ ಸುಯೋಗವಾಗಿದೆ! (ಪ್ರಕಟನೆ 15:3) ಕೀಳಾದ ಸ್ವಾಭಿಮಾನದ ಅಲೆಗಳು ಎಂದಾದರೂ ನಿಮ್ಮ ಮೇಲೆ ಪಸರಿಸಿದರೆ, ದೇವರು ನಿಮ್ಮನ್ನು ಯೇಸು ಕ್ರಿಸ್ತನ ಮೂಲಕ ತನ್ನೆಡೆಗೆ ಸ್ವತಃ ಸೆಳೆದಿರುತ್ತಾನೆ ಮತ್ತು “ದೇವರ ಸುವಾರ್ತೆಯ ಪವಿತ್ರ ಸೇವೆಯಲ್ಲಿ” ಒಂದು ಪಾಲನ್ನು ನಿಮಗೆ ಕೊಟ್ಟಿರುತ್ತಾನೆ ಎಂದು ತಿಳಿದುಕೊಳ್ಳುವುದು ಸಹಾಯಕಾರಿಯಾಗಿರಬಲ್ಲದು. (ರೋಮಾಪುರ 15:16; ಯೋಹಾನ 6:44; 14:6) ಆನಂದಕ್ಕಾಗಿ ಮತ್ತು ದೇವರಿಗೆ ಕೃತಜ್ಞರಾಗಿ ಇರಲಿಕ್ಕಾಗಿ ಎಂಥ ಕಾರಣಗಳು!
8. ಮಹಾಬಾಬೆಲಿನ ವಿಷಯದಲ್ಲಿ, ದೇವರ ಜನರಿಗೆ ಆನಂದಿಸಲು ಯಾವ ಕಾರಣವಿದೆ?
8 ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾಗಿರುವ ಮಹಾ ಬಾಬೆಲ್ನಿಂದ ನಮ್ಮ ದೇವ-ದತ್ತ ಸ್ವಾತಂತ್ರ್ಯವು ಕೂಡ ಆನಂದಕ್ಕಾಗಿರುವ ಇನ್ನೊಂದು ಕಾರಣವಾಗಿರುತ್ತದೆ. (ಪ್ರಕಟನೆ 18:2, 4, 5) ಈ ಧಾರ್ಮಿಕ ಸೂಳೆಯು ಸಾಂಕೇತಿಕವಾಗಿ, “ಪ್ರಜೆ ಸಮೂಹ ಜನ ಭಾಷೆಗಳ” ಎಂಬರ್ಥವಿರುವ “ಬಹಳ ನೀರುಗಳ ಮೇಲೆ ಕುಳಿತಿರುವುದಾದರೂ, ಅವಳು ಯೆಹೋವನ ಸೇವಕರ ಮೇಲೆ ಕುಳಿತುಕೊಂಡಿಲ್ಲ ಯಾ ಧಾರ್ಮಿಕವಾಗಿ ಪ್ರಭಾವಿಸುವುದಿಲ್ಲ ಅಥವಾ ಅಧಿಕಾರ ನಡಿಸುವುದಿಲ್ಲ. (ಪ್ರಕಟನೆ 17:1, 15) ಮಹಾ ಬಾಬೆಲಿನ ಬೆಂಬಲಿಗರು ಆತ್ಮಿಕವಾಗಿ ಅಂಧಕಾರದಲ್ಲಿರುವಾಗ ನಾವು ದೇವರ ಅದ್ಭುತವಾದ ಬೆಳಕಿನಲ್ಲಿ ಸಂತೋಷಿಸುತ್ತೇವೆ. (1 ಪೇತ್ರ 2:9) ಹೌದು, “ದೇವರ ಅಗಾಧ ವಿಷಯ”ಗಳಲ್ಲಿ ಕೆಲವನ್ನು ಅರ್ಥೈಸುವುದು ಕಷ್ಟಕರವಾಗಿರಬಲ್ಲದು. (1 ಕೊರಿಂಥ 2:10) ಆದರೆ ವಿವೇಕಕ್ಕಾಗಿ ಮತ್ತು ಪವಿತ್ರಾತ್ಮನಿಂದ ಸಹಾಯವು, ಯಾರ ಬಳಿಯಲ್ಲಿ ಅದು ಇರುತ್ತದೊ ಅವರನ್ನು ಆತ್ಮಿಕವಾಗಿ ಸ್ವಾತಂತ್ರ್ಯಗೊಳಿಸುವ ಆ ಶಾಸ್ತ್ರೀಯ ಸತ್ಯವನ್ನು ಗ್ರಹಿಸಿಕೊಳ್ಳಲು ನಮಗೆ ನೆರವನ್ನೀಯುತ್ತದೆ.—ಯೋಹಾನ 8:31, 32; ಯಾಕೋಬ 1:5-8.
9. ಧಾರ್ಮಿಕ ಪ್ರಮಾದದಿಂದ ಸತತ ಸ್ವಾತಂತ್ರ್ಯದ ಆಶೀರ್ವಾದಗಳಲ್ಲಿ ನಾವು ಆನಂದಿಸಬೇಕಾದರೆ, ನಾವೇನನ್ನು ಮಾಡಬೇಕು?
9 ನಾವು ಧಾರ್ಮಿಕ ಪ್ರಮಾದದಿಂದ ಸತತ ಸ್ವಾತಂತ್ರ್ಯದ ಆಶೀರ್ವಾದವನ್ನು ಆನಂದಿಸುತ್ತೇವೆ, ಆದರೆ ಆ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಲು ಧರ್ಮಭೃಷ್ಟತೆಯನ್ನು ನಾವು ನಿರಾಕರಿಸತಕ್ಕದ್ದು. ಗಲಾತ್ಯದವರು ಕ್ರೈಸ್ತ ಓಟವನ್ನು ಚೆನ್ನಾಗಿ ಓಡುತ್ತಿದ್ದರು, ಆದರೆ ಅವರು ಸತ್ಯಕ್ಕೆ ವಿಧೇಯರಾಗುವುದರಿಂದ ಕೆಲವರು ಆತಂಕವನ್ನೊಡ್ಡುತ್ತಿದ್ದರು. ಅಂಥ ದುಷ್ಟ ಮನದೊಡಂಬಡಿಸುವಿಕೆಯು ದೇವರಿಂದ ಬಂದದ್ದಲ್ಲ, ಮತ್ತು ಅದು ನಿರ್ಬಂಧಿಸಲ್ಪಡಬೇಕಿತ್ತು. ಸ್ವಲ್ಪ ಹುಳಿಯು ಕಣಿಕವನ್ನೆಲ್ಲಾ ಹುಳಿಮಾಡುವಂತೆ, ಸುಳ್ಳು ಬೋಧಕರು ಅಥವಾ ಧರ್ಮಭೃಷ್ಟತೆಯ ಕಡೆಗಿನ ಒಲವು ಇಡೀ ಸಭೆಯನ್ನು ಭೃಷ್ಟಗೊಳಿಸಸಾಧ್ಯವಿದೆ. ಗಲಾತ್ಯದವರ ನಂಬಿಕೆಯನ್ನು ಉರುಳಿಸಲು ಹುಡುಕುತ್ತಿದ್ದ ಸುನ್ನತಿಯ ಪಕ್ಷವಾದಿಗಳು ಸುನ್ನತಿ ಮಾಡಿಸಿಕೊಳ್ಳಬೇಕು ಮಾತ್ರವಲ್ಲದೆ, ಅವರು ಲೈಂಗಿಕವಾಗಿ ತಮ್ಮ ಅಂಗಚ್ಛೇದನೆಯನ್ನು ಮಾಡಿಸಿಕೊಳ್ಳಬೇಕು ಎಂದು ಪೌಲನು ಬಯಸಿದನು. ಖಂಡಿತವಾಗಿಯೂ ಕಠಿಣತಮ ಭಾಷೆಯೆ ಸೈ! ಆದರೆ ಧಾರ್ಮಿಕ ಪ್ರಮಾದದಿಂದ ನಮ್ಮ ದೇವ-ದತ್ತ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕಾದರೆ, ಧರ್ಮಭೃಷ್ಟತೆಯನ್ನು ತಿರಸ್ಕರಿಸುವುದರಲ್ಲಿ ನಾವು ಅಷ್ಟೇ ಸ್ಥಿರರಾಗಿರತಕ್ಕದ್ದು.—ಗಲಾತ್ಯ 5:7-12.
ಪ್ರೀತಿಯಿಂದ ಒಬ್ಬರಿಗೊಬ್ಬರು ಸೇವೆ ಮಾಡಿರಿ
10. ಕ್ರಿಸ್ತೀಯ ಸಹೋದರತ್ವದ ಭಾಗವಾಗಿ ನಮ್ಮ ಜವಾಬ್ದಾರಿ ಏನಾಗಿರುತ್ತದೆ?
10 ದೇವ-ದತ್ತ ಸ್ವಾತಂತ್ರ್ಯತೆಯು ನಮ್ಮನ್ನು ಒಂದು ಪ್ರೀತಿಯ ಸಹೋದರತ್ವದ ಸಹವಾಸದೊಳಗೆ ತಂದಿರುತ್ತದೆ, ಆದರೆ ಪ್ರೀತಿಯನ್ನು ತೋರಿಸುವುದರಲ್ಲಿ ನಾವು ನಮ್ಮ ಪಾತ್ರವನ್ನು ಆಡಬೇಕು. ಗಲಾತ್ಯದವರು ತಮ್ಮ ಸ್ವಾತಂತ್ರ್ಯವನ್ನು “ಶರೀರಾಧೀನ ಸ್ವಭಾವಕ್ಕೆ ಆಸ್ಪದವಾಗಿ” ಅಥವಾ ಪ್ರೀತಿರಹಿತವಾದ ಸ್ವಾರ್ಥತೆಗಾಗಿ ಒಂದು ನೆವನವಾಗಿ ಬಳಸಬಾರದಾಗಿತ್ತು. ಪ್ರಚೋದನೆಯಾಗಿರುವ ಪ್ರೀತಿಯೊಂದಿಗೆ ಅವರು ಒಬ್ಬರಿಗೊಬ್ಬರು ಸೇವೆ ಮಾಡಬೇಕಾಗಿತ್ತು. (ಯಾಜಕಕಾಂಡ 19:18; ಯೋಹಾನ 13:35) ಒಬ್ಬರಿಂದೊಬ್ಬರು ನಾವು ನಾಶವಾಗುವಂತೆ ನಡಿಸುವ ಚಾಡಿಗಳನ್ನಾಡುವುದನ್ನು ಮತ್ತು ದ್ವೇಷವನ್ನು ಸಹ ನಾವು ವರ್ಜಿಸಬೇಕು. ನಾವು ಸಹೋದರತ್ವದ ಪ್ರೀತಿಯನ್ನು ತೋರಿಸಿದರೆ, ಇದು ಖಂಡಿತವಾಗಿಯೂ ಸಂಭವಿಸಲಿಕ್ಕಿಲ್ಲ.—ಗಲಾತ್ಯ 5:13-15.
11. ನಾವು ಇತರರಿಗೆ ಒಂದು ಆಶೀರ್ವಾದವಾಗಿ ಹೇಗೆ ಇರಬಹುದು, ಮತ್ತು ಅವರು ನಮ್ಮನ್ನು ಹೇಗೆ ಆಶೀರ್ವದಿಸಬಹುದು?
11 ನಮ್ಮ ದೇವ-ದತ್ತ ಸ್ವಾತಂತ್ರ್ಯವನ್ನು ದೇವರ ಆತ್ಮದ ಮಾರ್ಗದರ್ಶಕಗಳ ಹೊಂದಿಕೆಯಲ್ಲಿ ಉಪಯೋಗಿಸುವುದರಿಂದ, ನಾವು ಪ್ರೀತಿಯನ್ನು ತೋರಿಸುವೆವು ಮತ್ತು ಇತರರಿಗೆ ಒಂದು ಆಶೀರ್ವಾದವಾಗಿ ಇರುವೆವು. ಪವಿತ್ರಾತ್ಮದ ಮೂಲಕ ನಿಗ್ರಹಿಸಲ್ಪಡಲು ಮತ್ತು ನಡಿಸಲ್ಪಡಲು ಬಿಡುವುದನ್ನು ಒಂದು ಹವ್ಯಾಸವಾಗಿ ಇರತಕ್ಕದ್ದು. ಆಗ ನಾವು, “ಆತ್ಮನಿಗೆ ವಿರುದ್ಧವಾಗಿರುವ ಅಭಿಲಾಷೆಗಳಾಗಿರುವ” ಪಾಪಪೂರ್ಣ ಶರೀರವನ್ನು ಪ್ರೀತಿರಾಹಿತ್ಯತೆಯಿಂದ ತೃಪ್ತಿಗೊಳಿಸಲು ಬಗ್ಗುವುದಿಲ್ಲ. ನಾವು ದೇವರ ಆತ್ಮದಿಂದ ನಡಿಸಲ್ಪಟ್ಟವರಾಗಿರುವುದಾದರೆ, ಏನು ಪ್ರೀತಿಪಾತ್ರವಾಗಿದೆಯೋ ಅದನ್ನು ನಾವು ಮಾಡುವೆವು, ಆದರೆ ನಿಯಮಗಳು ಅದನ್ನು ಕೇಳಿಕೊಳ್ಳುತ್ತವೆ ಮತ್ತು ತಪ್ಪಿತಸ್ಥರಿಗೆ ದಂಡನೆಯನ್ನು ವಿಧಿಸುತ್ತವೆ ಎಂಬ ಕಾರಣದಿಂದಾಗಿ ಅಲ್ಲ. ಉದಾಹರಣೆಗೆ, ಪ್ರೀತಿ—ಕೇವಲ ಒಂದು ನಿಯಮವಲ್ಲ—ಇತರರನ್ನು ನಿಂದಿಸುವುದರಿಂದ ನಮ್ಮನ್ನು ದೂರವಿರಿಸುತ್ತದೆ. (ಯಾಜಕಕಾಂಡ 19:16) ಪ್ರೀತಿಯು ನಮಗೆ ದಯಾಪರ ರೀತಿಗಳಲ್ಲಿ ಮಾತಾಡಲು ಮತ್ತು ವರ್ತಿಸಲು ಪ್ರಚೋದಿಸುವುದು. ನಾವು ಆತ್ಮದ ಫಲವಾಗಿರುವ ಪ್ರೀತಿಯನ್ನು ಪ್ರದರ್ಶಿಸುವುದರಿಂದ, ಇತರರು ನಮ್ಮನ್ನು ಆಶೀರ್ವದಿಸುವರು ಮಾತ್ರವಲ್ಲ, ನಮ್ಮೊಂದಿಗಿನ ಅವರ ಸಹವಾಸವು ಅವರಿಗೆ ಆಶೀರ್ವಾದಪ್ರದವಾಗಿರುವುದು.—ಗಲಾತ್ಯ 5:16-18.
ವೈದೃಶ್ಯ ಫಲಗಳು
12. ಪಾಪಭರಿತ “ಶರೀರಭಾವದ ಕರ್ಮಗಳನ್ನು” ವರ್ಜಿಸುವದರೊಂದಿಗೆ ಸಂಬಂಧಿಸಿರುವ ಕೆಲವು ಆಶೀರ್ವಾದಗಳು ಯಾವುವು?
12 ಪಾಪಭರಿತ “ಶರೀರಭಾವದ ಕರ್ಮಗಳನ್ನು” ವರ್ಜಿಸುವುದರಿಂದ ನಮ್ಮ ದೇವ-ದತ್ತ ಸ್ವಾತಂತ್ರ್ಯದೊಂದಿಗೆ ಸಂಬಂಧಿಸಿದ ಅನೇಕ ಆಶೀರ್ವಾದಗಳು ಫಲವಾಗಿ ಬರುವುವು. ದೇವರ ಜನರೋಪಾದಿ, ನಾವು ಸಾಮಾನ್ಯವಾಗಿ ಅನೇಕ ಸಂಕಟಗಳಿಂದ ದೂರವಿರುತ್ತೇವೆ ಯಾಕಂದರೆ ನಾವು ಹಾದರ, ಅಶುದ್ಧತೆ, ಮತ್ತು ಸಡಿಲು ನಡತೆಯನ್ನು ಆಚರಿಸುವುದಿಲ್ಲ. ವಿಗ್ರಹಾರಾಧನೆಯನ್ನು ತೊರೆದಿರುವುದರಿಂದ, ಆ ವಿಷಯದಲ್ಲಿ ಯೆಹೋವನನ್ನು ಮೆಚ್ಚಿಸುವುದರಿಂದ ಬರುವ ಆನಂದವು ನಮಗಿರುತ್ತದೆ. (1 ಯೋಹಾನ 5:21) ನಾವು ಪ್ರೇತವ್ಯವಹಾರವನ್ನು ಆಚರಿಸದಿರುವುದರಿಂದ, ದೆವ್ವಗಳ ಆಧಿಪತ್ಯದಿಂದ ಮುಕ್ತರಾಗಿರುತ್ತೇವೆ. ನಮ್ಮ ಕ್ರೈಸ್ತ ಸಹೋದರತ್ವವು ಜಗಳ, ಹೊಟ್ಟೆಕಿಚ್ಚು, ಸಿಟ್ಟು, ಕಕ್ಷಭೇದ, ಭಿನ್ನಮತಗಳಿಂದ ಹಾಳುಗೆಡವಲ್ಪಟ್ಟಿಲ್ಲ. ಮತ್ತು ನಮ್ಮ ಆನಂದವು ಕುಡಿಕತನ ಮತ್ತು ದುಂದೌತನದಲ್ಲಿ ಕಳಕೊಳ್ಳಲ್ಪಟ್ಟಿಲ್ಲ. ಪೌಲನು ಎಚ್ಚರಿಸಿದ್ದೇನಂದರೆ ಶರೀರಭಾವದ ಕರ್ಮಗಳನ್ನು ಆಚರಿಸುವವರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ. ಆದಾಗ್ಯೂ, ನಾವು ಆತನ ವಾಕ್ಯಗಳಿಗೆ ಲಕ್ಷ್ಯಕೊಟ್ಟಿರುವುದರಿಂದ, ನಾವು ರಾಜ್ಯದ ನಿರೀಕ್ಷೆಗೆ ಅಂಟಿಕೊಂಡಿರಸಾಧ್ಯವಿದೆ.—ಗಲಾತ್ಯ 5:19-21.
13. ಯೆಹೋವನ ಪವಿತ್ರಾತ್ಮ ಯಾವ ಫಲವನ್ನು ಉತ್ಪಾದಿಸುತ್ತದೆ?
13 ದೇವ-ದತ್ತ ಸ್ವಾತಂತ್ರ್ಯವು ನಮಗೆ ಆನಂದವನ್ನು ತರುತ್ತದೆ ಯಾಕಂದರೆ ಕ್ರೈಸ್ತರು ಯೆಹೋವನ ಆತ್ಮದ ಫಲವನ್ನು ಪ್ರದರ್ಶಿಸುತ್ತಾರೆ. ಗಲಾತ್ಯದವರಿಗೆ ಪೌಲನು ಬರೆದಿದ್ದ ಮಾತುಗಳಿಂದ, ದೈವಭಕ್ತಿಯುಳ್ಳ ಹೃದಯಗಳಲ್ಲಿ ನೆಲೆಗೊಳಿಸಿರುವ ಪ್ರೀತಿ, ಸಂತೋಷ, ಸಮಾಧಾನ, ದೀರ್ಘಶಾಂತಿ, ದಯೆ, ಉಪಕಾರ, ನಂಬಿಕೆ, ಸಾಧುತ್ವ, ಶಮೆದಮೆ ಎಂಬ ಆತ್ಮದ ಅತ್ಯುತ್ಕೃಷ್ಟ ಫಲಗಳಿಗೆ ವ್ಯತಿರಿಕ್ತವಾಗಿ ಪಾಪಪೂರ್ಣ ಶರೀರದ ಕರ್ಮಗಳು ಮುಳ್ಳುಗಳಂತಿವೆ ಎಂಬುದನ್ನು ನೋಡಲು ಸುಲಭವಾಗುತ್ತದೆ. ಪಾಪಪೂರ್ಣ ಶರೀರದ ಆಶೆಗಳಿಗೆ ಪ್ರತಿಕೂಲವಾಗಿ ಜೀವಿಸಲು ಸ್ಥಿರಚಿತ್ತವುಳ್ಳವರಾಗಿದ್ದು, ನಾವು ದೇವರ ಆತ್ಮದಿಂದ ನಡಿಸಲ್ಪಡಲು ಮತ್ತು ಅದರ ಪ್ರಕಾರ ಜೀವಿಸಲು ಇಚ್ಛಿಸುತ್ತೇವೆ. ಆತ್ಮವು ನಮ್ಮನ್ನು ನಮ್ರರನ್ನಾಗಿ ಮತ್ತು ಶಾಂತರನ್ನಾಗಿ ಮಾಡುತ್ತದೆ, “ಅಹಂಕಾರಿಗಳೂ ಒಬ್ಬರನ್ನೊಬ್ಬರು ಕೆಣಕುವವರೂ ಒಬ್ಬರ ಮೇಲೊಬ್ಬರು ಮತ್ಸರವುಳ್ಳವರೂ” ಆಗಿ ಮಾಡುವುದಿಲ್ಲ. ಆತ್ಮದ ಫಲವನ್ನು ಪ್ರದರ್ಶಿಸುವವರೊಂದಿಗೆ ಸಹವಸಿಸುವುದು ಒಂದು ಆನಂದವಾಗಿರುವುದು ಆಶ್ಚರ್ಯಕರವಲ್ಲ!—ಗಲಾತ್ಯ 5:22-26.
ಆನಂದಕ್ಕಾಗಿ ಇನ್ನಿತರ ಕಾರಣಗಳು
14. ದುರಾತ್ಮ ಸೇನೆಗಳ ವಿರುದ್ಧದ ಹೋರಾಟದಲ್ಲಿ ನಮಗೆ ಯಾವ ಸರ್ವಾಯುಧಗಳ ಅಗತ್ಯವಿದೆ?
14 ಸೈತಾನನು ಮತ್ತು ದೆವ್ವಗಳ ವಿರುದ್ಧ ಸಂರಕ್ಷಣೆಯ ಆಶೀರ್ವಾದವು ನಮ್ಮ ದೇವ-ದತ್ತ ಸ್ವಾತಂತ್ರ್ಯದೊಂದಿಗೆ ಸಂಬಂಧಿಸಿದೆ. ದುರಾತ್ಮಗಳ ಸೇನೆಯ ವಿರುದ್ಧದ ನಮ್ಮ ಹೋರಾಟದಲ್ಲಿ ಯಶಸ್ವಿಯಾಗಲು, ನಾವು “ದೇವರು ದಯಪಾಲಿಸುವ ಸರ್ವಾಯುಧಗಳನ್ನು” ಧರಿಸಿಕೊಳ್ಳಬೇಕು. ನಮಗೆ ಸತ್ಯವೆಂಬ ನಡುಕಟ್ಟಿನ ಮತ್ತು ನೀತಿಯೆಂಬ ವಜ್ರಕವಚದ ಅಗತ್ಯತೆ ಇದೆ. ನಮ್ಮ ಪಾದಗಳು ಸಮಾಧಾನದ ವಿಷಯವಾದ ಸುವಾರ್ತೆಯನ್ನು ತಿಳಿಸುವುದರಲ್ಲಿ ಸಿದ್ಧವಾದ ಮನಸ್ಸೆಂಬ ಕೆರಗಳನ್ನು ಮೆಟ್ಟಿಕೊಂಡಿರಬೇಕು. ದುಷ್ಟನ ಅಗ್ನಿಬಾಣಗಳನ್ನೆಲ್ಲಾ ಆರಿಸಲು ಶಿರಸ್ತ್ರಾಣವನ್ನು ಇಟ್ಟುಕೊಳ್ಳಬೇಕು ಮತ್ತು “ಪವಿತ್ರಾತ್ಮನು ಕೊಡುವ ದೇವರ ವಾಕ್ಯವೆಂಬ ಕತ್ತಿಯನ್ನು” ಹಿಡಿಯಬೇಕು. ನಾವು “ಪವಿತ್ರಾತ್ಮಪ್ರೇರಿತರಾಗಿ ಎಲ್ಲಾ ಸಮಯಗಳಲ್ಲಿ ಸಕಲ ವಿಧವಾದ ಪ್ರಾರ್ಥನೆಯಿಂದಲೂ ದೇವರನ್ನು ಪ್ರಾರ್ಥಿಸು”ತಿರ್ತೋಣ. (ಎಫೆಸ್ಯ 6:11-18) ನಾವು ಆತ್ಮಿಕವಾಗಿ ಸರ್ವಾಯುಧಗಳನ್ನು ಧರಿಸಿಕೊಂಡು, ಭೂತ-ಪ್ರೇತಗಳ ನಂಬಿಕೆಯನ್ನು ತಿರಸ್ಕರಿಸಿದರೆ, ನಾವು ನಿರ್ಭೀತರು ಮತ್ತು ಆನಂದಿತರು ಆಗಿರಬಲ್ಲೆವು.—ಅ. ಕೃತ್ಯಗಳು 19:18-20 ನ್ನು ಹೋಲಿಸಿರಿ.
15. ದೇವರ ವಾಕ್ಯಕ್ಕೆ ಹೊಂದಿಕೆಯಾಗಿ ನಮ್ಮನ್ನು ನಡಿಸಿಕೊಳ್ಳುವದರಿಂದ ಯಾವ ಆನಂದಕರ ಆಶೀರ್ವಾದವು ನಮ್ಮದಾಗಿರುತ್ತದೆ?
15 ನಮ್ಮ ನಡತೆಯು ದೇವರ ವಾಕ್ಯಕ್ಕೆ ಹೊಂದಿಕೆಯಲ್ಲಿರುವ ಮತ್ತು ಹಲವಾರು ತಪ್ಪಿತಸ್ಥರನ್ನು ಪೀಡಿಸುವ ದೋಷದಿಂದ ನಾವು ಮುಕ್ತರಾಗಿರುವ ಕಾರಣದಿಂದಾಗಿ ಆನಂದವು ನಮ್ಮದಾಗಿರುತ್ತದೆ. ‘ದೇವರ ವಿಷಯದಲ್ಲಿಯೂ ಮನುಷ್ಯರ ವಿಷಯದಲ್ಲಿಯೂ ನಾವು ನಿರ್ದೋಷಿ ಎಂದು ಸಾಕ್ಷಿ ಹೇಳುವ ಮನಸ್ಸು ನಮಗೆ ಯಾವಾಗಲೂ ಇರಬೇಕೆಂದು ಅಭ್ಯಾಸಮಾಡಿಕೊಳ್ಳುತ್ತೇವೆ.’ (ಅ. ಕೃತ್ಯಗಳು 24:16) ಹೀಗಿರುವುದರಿಂದ, ಉದ್ದೇಶಪೂರ್ವಕ, ಪಶ್ಚಾತ್ತಾಪ ಪಡದ ಪಾಪಿಗಳ ಮೇಲೆ ಬರಲಿರುವ ದೈವಿಕ ಶಿಕ್ಷೆಯ ಕುರಿತು ನಾವು ಭಯಪಡುವ ಅಗತ್ಯವಿಲ್ಲ. (ಮತ್ತಾಯ 12:22-32; ಇಬ್ರಿಯ 10:26-31) ನಾವು ಜ್ಞಾನೋಕ್ತಿ 3:21-26 ರ ಸಲಹೆಯನ್ನು ಆನ್ವಯಿಸುವ ಮೂಲಕ, ಆ ಮಾತುಗಳ ನೆರವೇರಿಕೆಯನ್ನು ತಿಳಿಯಶಕ್ತರಾಗಿದ್ದೇವೆ: “ಸುಜ್ಞಾನವನ್ನೂ ಬುದ್ಧಿಯನ್ನೂ ಭದ್ರವಾಗಿಟ್ಟುಕೋ, ನಿನ್ನ ದೃಷ್ಟಿಯು ಅವುಗಳ ಮೇಲೆ ತಪ್ಪದೇ ಇರಲಿ. ಅವು ನಿನಗೆ ಜೀವವೂ ನಿನ್ನ ಕೊರಳಿಗೆ ಭೂಷಣವೂ ಆಗಿರುವುವು. ಆಗ ನೀನು ಎಡವದೆ ನಿನ್ನ ಮಾರ್ಗದಲ್ಲಿ ನಿರ್ಭಯವಾಗಿ ನಡೆಯುವಿ. ನೀನು ಮಲಗುವಾಗ ಹೆದರಿಕೆ ಅಪಾಯಕ್ಕಾಗಲಿ ದುಷ್ಟರಿಗೆ ಸಂಭವಿಸುವ ನಾಶನಕ್ಕಾಗಲಿ ನೀನು ಅಂಜುವದೇ ಇಲ್ಲ. ಯೆಹೋವನು ನಿನ್ನ ಭರವಸಕ್ಕೆ ಆಧಾರನಾಗಿದ್ದು ನಿನ್ನ ಕಾಲು ಪಾಶಕ್ಕೆ ಸಿಕ್ಕದಂತೆ ನಿನ್ನನ್ನು ಕಾಪಾಡುವನು.”
16. ಪ್ರಾರ್ಥನೆಯು ಆನಂದಕ್ಕಾಗಿ ಹೇಗೆ ಒಂದು ಕಾರಣವಾಗಿದೆ, ಮತ್ತು ಈ ವಿಷಯದಲ್ಲಿ ಯೆಹೋವನ ಆತ್ಮವು ಯಾವ ಪಾತ್ರವನ್ನಾಡುತ್ತದೆ?
16 ನಮಗೆ ಕಿವಿಗೊಡುವನು ಎಂಬ ಆಶ್ವಾಸನೆಯೊಂದಿಗೆ ಯೆಹೋವನನ್ನು ಪ್ರಾರ್ಥನೆಯಲ್ಲಿ ಸಮೀಪಿಸಲು ನಮ್ಮ ದೇವ-ದತ್ತ ಸ್ವಾತಂತ್ರ್ಯವು ಆನಂದಕ್ಕೆ ಇನ್ನೊಂದು ಕಾರಣವಾಗಿದೆ. ಹೌದು, ನಮ್ಮ ಪ್ರಾರ್ಥನೆಗಳು ಉತ್ತರಿಸಲ್ಪಡುತ್ತವೆ ಯಾಕಂದರೆ ನಮಗೆ ಪೂಜ್ಯಭಾವನೆಯ “ಯೆಹೋವನ ಭಯ” ಇದೆ. (ಜ್ಞಾನೋಕ್ತಿ 1:7) ಅಲ್ಲದೆ, “ಪವಿತ್ರಾತ್ಮ ಪ್ರೇರಿತರಾಗಿ ಪ್ರಾರ್ಥನೆ ಮಾಡುವ” ಮೂಲಕ ದೇವರ ಪ್ರೀತಿಯಲ್ಲಿ ನಮ್ಮನ್ನು ಸ್ವತಃ ಇಟ್ಟುಕೊಳ್ಳುವಂತೆ ನಮಗೆ ಸಹಾಯವಾಗುತ್ತದೆ. (ಯೂದ 20, 21) ಯೆಹೋವನಿಗೆ ಸ್ವೀಕೃತವಾಗಿರುವ ಹೃದಯದ ಒಂದು ಸ್ಥಿತಿಯನ್ನು ವ್ಯಕ್ತಪಡಿಸುವುದರಿಂದ ಮತ್ತು ಆತನ ಚಿತ್ತಕ್ಕೆ ಹಾಗೂ ನಾವು ಹೇಗೆ ಪ್ರಾರ್ಥಿಸಬೇಕು ಮತ್ತು ಪ್ರಾರ್ಥನೆಯಲ್ಲಿ ಯಾವುದಕ್ಕಾಗಿ ಪ್ರಾರ್ಥಿಸಬೇಕೆಂದು ತೋರಿಸುವ ಅವನ ವಾಕ್ಯಕ್ಕೆ ಹೊಂದಿಕೆಯಲ್ಲಿರುವ ವಿಷಯಗಳಿಗಾಗಿ ಆತ್ಮದ ಪ್ರಭಾವದ ಕೆಳಗೆ ಪ್ರಾರ್ಥಿಸುವ ಮೂಲಕ ನಾವಿದನ್ನು ಮಾಡುತ್ತೇವೆ. (1 ಯೋಹಾನ 5:13-15) ನಾವು ದುಃಖಕರವಾಗಿ ಶೋಧನೆಗೊಳಪಟ್ಟಿದ್ದರೆ ಮತ್ತು ಯಾವುದಕ್ಕಾಗಿ ಪ್ರಾರ್ಥಿಸಬೇಕೆಂದು ತಿಳಿಯದಿರುವಲ್ಲಿ, ‘ಪವಿತ್ರಾತ್ಮನು ತಾನೇ ಮಾತಿಲ್ಲದಂಥ ನರಳಾಟದಿಂದ ನಮಗೋಸ್ಕರ ಬೇಡಿಕೊಳ್ಳುತ್ತಾನೆ.’ ದೇವರು ಅಂಥ ಪ್ರಾರ್ಥನೆಗಳನ್ನು ಉತ್ತರಿಸುತ್ತಾನೆ. (ರೋಮಾಪುರ 8:26, 27) ನಾವು ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸೋಣ ಮತ್ತು ಒಂದು ನಿರ್ದಿಷ್ಟ ಸಂಶೋಧನೆಯನ್ನು ಎದುರಿಸಲು ಆವಶ್ಯಕವಾಗಿರುವ ಅದರ ಫಲಗಳನ್ನು ಉತ್ಪಾದಿಸುವಂತೆ ನಾವು ಅದಕ್ಕೆ ಅನುಮತಿಸೋಣ. (ಲೂಕ 11:13) ದೇವರ ಆತ್ಮ-ಪ್ರೇರಿತವಾದ ವಾಕ್ಯ ಮತ್ತು ಆತ್ಮದ ಮಾರ್ಗದರ್ಶನೆಯ ಕೆಳಗೆ ತಯಾರಿಸಲ್ಪಟ್ಟ ಕ್ರಿಸ್ತೀಯ ಪ್ರಕಾಶನಗಳನ್ನು ಪ್ರಾರ್ಥನಾಪೂರ್ವಕವಾಗಿ ಮತ್ತು ಶೃದ್ಧೆಯಿಂದ ಅಭ್ಯಾಸಿಸಿದರೆ ಸಹ ನಾವು ನಮ್ಮ ಆನಂದವನ್ನು ಹೆಚ್ಚಿಸಬಹುದು.
ಸದಾ-ಇರುವ ಸಹಾಯದಿಂದ ಆಶೀರ್ವದಿಸಲ್ಪಟ್ಟಿದ್ದೇವೆ
17. ಮೋಶೆಯ ಅನುಭವಗಳು ಮತ್ತು ದಾವೀದನ ಮಾತುಗಳು, ಯೆಹೋವನು ತನ್ನ ಜನರೊಂದಿಗಿದ್ದಾನೆ ಎಂಬುದನ್ನು ಹೇಗೆ ತೋರಿಸುತ್ತವೆ?
17 ನಮ್ಮ ದೇವ-ದತ್ತ ಸ್ವಾತಂತ್ರ್ಯವನ್ನು ಯುಕ್ತವಾಗಿ ಉಪಯೋಗಿಸುವುದರಿಂದ, ಯೆಹೋವನು ನಮ್ಮೊಂದಿಗೆ ಇದ್ದಾನೆ ಎಂಬುದನ್ನು ತಿಳಿಯುವ ಆನಂದವು ನಮಗಿರುತ್ತದೆ. ಪ್ರತಿಕೂಲವಾದ ಪರಿಸ್ಥಿತಿಗಳು ಮೋಶೆಗೆ ಐಗುಪ್ತವನ್ನು ಬಿಡುವಂತೆ ಕಾರಣವಾದರೂ, ನಂಬಿಕೆಯ ಮೂಲಕ “ಅವನು ಅದೃಶ್ಯನಾಗಿರುವಾತನನ್ನು ದೃಷ್ಟಿಸುವವನೋ ಎಂಬಂತೆ ದೃಢಚಿತ್ತನಾಗಿದ್ದನು.” (ಇಬ್ರಿಯ 11:27) ಮೋಶೆಯು ಒಬ್ಬಂಟಿಗನಾಗಿ ನಡೆಯಲಿಲ್ಲ; ಯೆಹೋವನು ಅವನೊಂದಿಗೆ ಇದ್ದಾನೆಂದು ಅವನು ತಿಳಿದಿದ್ದನು. ತದ್ರೀತಿಯಲ್ಲಿ, ಕೋರಹನ ಪುತ್ರರು ಹೀಗೆ ಹಾಡಿದರು: “ದೇವರು ನಮಗೆ ಆಶ್ರಯ ದುರ್ಗವಾಗಿದ್ದಾನೆ; ಆತನು ಇಕ್ಕಟ್ಟಿನಲ್ಲಿ ನಮಗೆ ವಿಶೇಷ ಸಹಾಯಕನು. ಆದದರಿಂದ ಭೂಮಿಯು ಮಾರ್ಪಟ್ಟರೂ ಬೆಟ್ಟಗಳು ಸಮುದ್ರದಲ್ಲಿ ಮುಣುಗಿಹೋದರೂ, ನಮಗೇನು ಭಯವಿಲ್ಲ. ಸಮುದ್ರವು ಘೋಷಿಸುತ್ತಾ ನೊರೆಯನ್ನು ಕಾರಿದರೇನು? ಅದರ ಅಲ್ಲೋಲಕಲ್ಲೋಲಗಳಿಂದ ಪರ್ವತಗಳು ಚಲಿಸಿದರೇನು?” (ಕೀರ್ತನೆ 46:1-3) ದೇವರಲ್ಲಿ ನಿಮಗೆ ಅಂಥ ವಿಶ್ವಾಸವಿದ್ದರೆ, ಅವನು ನಿಮ್ಮನ್ನೆಂದೂ ಕೈಬಿಡುವುದಿಲ್ಲ. ದಾವೀದನಂದದ್ದು: “ತಂದೆ ತಾಯಿಗಳು ನನ್ನನ್ನು ತೊರೆದು ಬಿಟ್ಟರೇನು, ಯೆಹೋವನು ನನ್ನನ್ನು ಸೇರಿಸಿಕೊಳ್ಳುವನು.” (ಕೀರ್ತನೆ 27:10) ದೇವರು ತನ್ನ ಸೇವಕರನ್ನು ಎಷ್ಟು ಹೆಚ್ಚಾಗಿ ಲಕ್ಷ್ಯಿಸುತ್ತಾನೆಂದು ತಿಳಿಯುವುದರಲ್ಲಿ ತಾನೇ ಎಷ್ಟೊಂದು ಆನಂದವಿದೆ!—1 ಪೇತ್ರ 5:6, 7.
18. ಯೆಹೋವನ ಆನಂದವಿರುವವರು ತಡೆಯಲಸಾಧ್ಯವಾದ ಚಿಂತೆಯ ನಡುವೆ ದೇವ-ದತ್ತ ಸ್ವಾತಂತ್ರ್ಯವನ್ನು ಹೇಗೆ ಪಡೆದಿರುತ್ತಾರೆ?
18 ಯೆಹೋವನ ಆನಂದವು ನಮಗಿರುವುದರಿಂದ, ತಡೆಯಲಸಾಧ್ಯವಾದ ಚಿಂತೆಯ ನಡುವೆಯೂ ನಾವು ದೇವ-ದತ್ತ ಸ್ವಾತಂತ್ರ್ಯವನ್ನು ಪಡೆದಿರುತ್ತೇವೆ. ಪೌಲನು ಅಂದದ್ದು: “ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವ ವಿಷಯದಲ್ಲಿ ದೇವರ ಮುಂದೆ ಕೃತಜ್ಞತಾ ಸ್ತುತಿಯನ್ನೂ ಪ್ರಾರ್ಥನೆ ವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ. ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವ ಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.” (ಫಿಲಿಪ್ಪಿಯ 4:6, 7) ಅತೀ ಕಷ್ಟದ ಪರಿಸ್ಥಿತಿಗಳಲ್ಲೂ ಒಂದು ಸರಿಸಾಟಿಯಿಲ್ಲದ ಪ್ರಶಾಂತತೆಯು ದೇವ ಶಾಂತಿಯಾಗಿದೆ. ಅದರೊಂದಿಗೆ ನಮ್ಮ ಹೃದಯಗಳು ಪ್ರಶಾಂತವಾಗಿ ಉಳಿಯುತ್ತವೆ—ಆತ್ಮಿಕವಾಗಿ, ಭಾವನಾತ್ಮಕವಾಗಿ ಮತ್ತು ಶಾರೀರಿಕವಾಗಿ ನಮಗೆ ಅದು ಉತ್ತಮ ಸಂಗತಿಯಾಗಿದೆ. (ಜ್ಞಾನೋಕ್ತಿ 14:30) ಮಾನಸಿಕ ಸಮತೋಲನವನ್ನು ಕಾಪಾಡಲೂ ಅದು ನಮಗೆ ಸಹಾಯ ಮಾಡುವುದು ಯಾಕಂದರೆ ನಮಗೆ ತಿಳಿದದೆ ಏನಂದರೆ ದೇವರು ಅನುಮತಿಸುವ ಯಾವ ವಿಷಯವೂ ನಮಗೆ ಅನಂತ ಹಾನಿಯನ್ನು ಮಾಡಲಾರದು. (ಮತ್ತಾಯ 10:28) ಕ್ರಿಸ್ತನ ಮೂಲಕ ದೇವರೊಂದಿಗೆ ಒಂದು ನಿಕಟವಾದ ಸಂಬಂಧದ ಫಲವಾಗಿ ಶಾಂತಿಯು ನಮ್ಮದಾಗಿ ಪರಿಣಮಿಸುವುದು ಯಾಕಂದರೆ ನಾವು ಯೆಹೋವನಿಗೆ ಸಮರ್ಪಿಸಿಕೊಂಡವರಾಗಿದ್ದೇವೆ ಮತ್ತು ಸಂತೋಷ ಹಾಗೂ ಶಾಂತಿಯಂಥ ಫಲಗಳನ್ನು ಉತ್ಪಾದಿಸುವ ಆತನ ಆತ್ಮದ ಮಾರ್ಗದರ್ಶನೆಗೆ ಅಧೀನಪಡಿಸಿಕೊಳ್ಳುತ್ತೇವೆ.
19. ಯಾವುದರ ಮೇಲೆ ನಮ್ಮ ಹೃದಯಗಳು ನೆಲೆಗೊಂಡಿದ್ದರೆ, ನಾವು ಆನಂದಿತರಾಗಿರಲು ನೆರವಾಗುತ್ತದೆ?
19 ನಮ್ಮ ದೇವ-ದತ್ತ ಸ್ವಾತಂತ್ರ್ಯ ಹಾಗೂ ರಾಜ್ಯ ನಿರೀಕ್ಷೆಯ ಮೇಲೆ ನಮ್ಮ ಹೃದಯಗಳನ್ನು ನೆಲೆಗೊಳಿಸಿರುವುದು ನಾವು ಆನಂದಿತರಾಗಿರುವಂತೆ ಸಹಾಯ ಮಾಡುವುದು. ದೃಷ್ಟಾಂತಕ್ಕಾಗಿ, ಕೆಲವೊಮ್ಮೆ ಅನಾರೋಗ್ಯದ ಕುರಿತಾಗಿ ನಾವು ಕೊಂಚವನ್ನೇ ಮಾಡಶಕ್ಯರಾಗುತ್ತೇವೆ, ಆದರೆ ನಾವು ಅದರೊಂದಿಗೆ ಹೆಣಗಾಡಲು ವಿವೇಕ ಮತ್ತು ಸೈರಣೆಗಾಗಿ ಪ್ರಾರ್ಥಿಸಬಹುದು ಮತ್ತು ನಾವೀಗ ಆನಂದಿಸುತ್ತಿರುವ ಆತ್ಮಿಕ ಆರೋಗ್ಯ ಹಾಗೂ ರಾಜ್ಯದಾಳಿಕೆಯ ಕೆಳಗೆ ಸಂಭವಿಸಲಿರುವ ಶಾರೀರಿಕ ಗುಣಪಡಿಸುವಿಕೆಗಳ ಕುರಿತಾಗಿ ಯೋಚಿಸುವ ಮೂಲಕ ನಾವು ಸಾಂತ್ವನವನ್ನು ಪಡೆಯಬಹುದು. (ಕೀರ್ತನೆ 41:1-3; ಯೆಶಾಯ 33:24) ನಾವಿಂದು ಕೊರತೆಗಳನ್ನು ಸಹಿಸಬೇಕಾದರೂ, ಸಮೀಪದಲ್ಲಿರುವ ಪರದೈಸ ಭೂಮಿಯಲ್ಲಿ ಜೀವನದ ಅಗತ್ಯತೆಗಳ ಅಭಾವವು ಇರಲಾರದು. (ಕೀರ್ತನೆ 72:14, 16; ಯೆಶಾಯ 65:21-23) ಹೌದು, ನಮ್ಮ ಸ್ವರ್ಗೀಯ ತಂದೆಯು ನಮ್ಮನ್ನು ಈಗ ಪೋಷಿಸುವನು ಮತ್ತು ಕಟ್ಟಕಡೆಗೆ ನಮ್ಮ ಆನಂದವನ್ನು ಪೂರ್ಣಗೊಳಿಸಲಿರುವನು.—ಕೀರ್ತನೆ 145:14-21.
ನಿಮ್ಮ ದೇವ-ದತ್ತ ಸ್ವಾತಂತ್ರ್ಯವನ್ನು ನೆಚ್ಚಿಕೊಂಡಿರುವುದು
20. ಕೀರ್ತನೆ 100:1-5 ಕ್ಕನುಸಾರವಾಗಿ, ನಾವು ಯೆಹೋವನ ಮುಂದೆ ನಮ್ಮನ್ನು ಸ್ವತಃ ಹೇಗೆ ನೀಡಿಕೊಳ್ಳತಕ್ಕದ್ದು?
20 ಯೆಹೋವನ ಜನರೋಪಾದಿ, ನಮಗೆ ಆನಂದ ಮತ್ತು ಇಷ್ಟೊಂದು ಆಶೀರ್ವಾದಗಳನ್ನು ತಂದಂತಹ ದೇವ-ದತ್ತ ಸ್ವಾತಂತ್ರ್ಯವನ್ನು ಖಂಡಿತವಾಗಿಯೂ ನಾವು ನೆಚ್ಚಿಕೊಂಡಿರಬೇಕು. ಕೀರ್ತನೆ 100:1-5 ನಮಗೆ ಯೆಹೋವನ ಸನ್ನಿಧಿಗೆ “ಉತ್ಸಾಹಧ್ವನಿಯೊಂದಿಗೆ” ಬರುವಂತೆ ಪ್ರೇರೇಪಿಸಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಯೆಹೋವನು ನಮ್ಮ ಒಡೆಯನಾಗಿರುತ್ತಾನೆ ಮತ್ತು ಒಬ್ಬ ಪ್ರೀತಿಯ ಕುರುಬನೋಪಾದಿ ನಮ್ಮನ್ನು ಪಾಲಿಸುತ್ತಾನೆ. ಹೌದು, “ನಾವು ಆತನ ಪ್ರಜೆಯು ಆತನು ಪಾಲಿಸುವ ಹಿಂಡೂ ಆಗಿದ್ದೇವೆ.” ಆತನ ನಿರ್ಮಾಣಿಕತನವು ಮತ್ತು ಭವ್ಯವಾದ ಗುಣಗಳು, ಆತನ ಪವಿತ್ರ ಸ್ಥಳದ ಅಂಗಳದೊಳಗೆ ಸ್ತುತಿ ಮತ್ತು ಉಪಕಾರಸ್ಮರಣೆಯೊಂದಿಗೆ ಪ್ರವೇಶಿಸಲು ನಮಗೆ ಉತ್ತೇಜನವನ್ನು ಒದಗಿಸುತ್ತದೆ. “ಆತನ ನಾಮವನ್ನು ಕೊಂಡಾಡಲು,” ಯೆಹೋವ ದೇವರ ಕುರಿತಾಗಿ ಒಳ್ಳೇದನ್ನು ಮಾತಾಡಲು ನಾವು ನಡಿಸಲ್ಪಡುತ್ತೇವೆ. ಇನ್ನೂ ಹೆಚ್ಚಾಗಿ, ನಮಗಾಗಿ ಆತನಿಗಿರುವ ಪ್ರೀತಿ-ಕಾರುಣ್ಯಗಳ ಅಥವಾ ಕನಿಕರದ ಮೇಲೆ ನಾವು ಯಾವಾಗಲೂ ಆತುಕೊಳ್ಳಸಾಧ್ಯವಿದೆ. “ತಲತಲಾಂತರಕ್ಕೂ” ಯೆಹೋವನು ನಂಬಿಗಸ್ತನಾಗಿರುತ್ತಾನೆ, ಆತನ ಚಿತ್ತವನ್ನು ಮಾಡುವವರಿಗೆ ಪ್ರೀತಿಯನ್ನು ತೋರಿಸುವುದರಲ್ಲಿ ಅವನು ಅಚಲನಾಗಿರುತ್ತಾನೆ.
21. ಈ ಪತ್ರಿಕೆಯ ಮೊದಲ ಸಂಚಿಕೆಯಲ್ಲಿ ಯಾವ ಉತ್ತೇಜನವು ನೀಡಲ್ಪಟ್ಟಿತ್ತು, ಮತ್ತು ದೇವ-ದತ್ತ ಸ್ವಾತಂತ್ರ್ಯದ ಕುರಿತಾಗಿ ನಾವೇನು ಮಾಡಬೇಕು?
21 ಅಪರಿಪೂರ್ಣ ಮಾನವರೋಪಾದಿ, ನಾವು ಈ ಎಲ್ಲಾ ಸಂಶೋಧನೆಗಳಿಂದ ತಪ್ಪಿಸಿಕೊಳ್ಳಲಾರೆವು. ಆದರೂ, ದೈವಿಕ ಸಹಾಯದೊಂದಿಗೆ ನಾವು ಯೆಹೋವನ ಧೈರ್ಯಶಾಲಿ ಹಾಗೂ ಆನಂದಭರಿತ ಸಾಕ್ಷಿಗಳಾಗಿರಬಲ್ಲೆವು. ಈ ಪತ್ರಿಕೆಯ ಮೊದಲ ಸಂಚಿಕೆಯಲ್ಲಿ (ಜುಲೈ, 1879) ನೋಡಲು ಸಿಗುವ ಈ ನುಡಿಗಳು ಇದರ ಸಂಬಂಧದಲ್ಲಿ ಗಮನಾರ್ಹವಾಗಿವೆ: “ಧೈರ್ಯ . . . ಇಕ್ಕಟ್ಟಾದ ಮಾರ್ಗದಲ್ಲಿ ಓಡಲು ಶ್ರಮಭರಿತ ಹೆಜ್ಜೆಗಳನ್ನು ತಕ್ಕೊಳ್ಳುವ ನನ್ನ ಕ್ರೈಸ್ತ ಸಹೋದರ ಯಾ ಸಹೋದರಿಯರೇ. ಸಂಕಷ್ಟಕರ ಪಥದ ಕುರಿತು ಹಿಮ್ಮೆಟ್ಟದಿರ್ರಿ; ಅದು ನಮ್ಮ ಬೋಧಕನ ಆಶೀರ್ವದಿತ ಪಾದಗಳಿಂದ ಪರಿಶುದ್ಧಗೊಳಿಸಲ್ಪಟ್ಟಿದೆ ಮತ್ತು ಪವಿತ್ರೀಕರಿಸಲ್ಪಟ್ಟಿದೆ. ಪ್ರತಿಯೊಂದು ಮುಳ್ಳನ್ನು ಒಂದು ಪುಷ್ಪದೋಪಾದಿ ಎಣಿಸಿರಿ; ಪ್ರತಿಯೊಂದು ಚೂಪಾದ ಕಲ್ಲುಬಂಡೆಯು ಒಂದು ಮೈಲಿಗಲ್ಲಾಗಲಿ, ಧ್ಯೇಯದೆಡೆಗೆ ನೀವು ಮುಂದೊತ್ತುವಾಗ ಧಾವಿಸುವಂತೆ ಮಾಡಲಿ. . . . ಬಹುಮಾನದ ಮೇಲೆ ನಿಮ್ಮ ಕಣ್ಣುಗಳು ನೆಲೆಗೊಂಡಿರಲಿ.” ಇಂದು ಯೆಹೋವನನ್ನು ಸೇವಿಸುತ್ತಿರುವ ಲಕ್ಷಾಂತರ ಮಂದಿ ತಮ್ಮ ಕಣ್ಣುಗಳನ್ನು ಬಹುಮಾನದ ಮೇಲೆ ಇಟ್ಟಿದ್ದಾರೆ ಮತ್ತು ಧೈರ್ಯ ಹಾಗೂ ಆನಂದಕ್ಕಾಗಿ ಹಲವಾರು ಕಾರಣಗಳನ್ನು ಪಡೆದಿರುತ್ತಾರೆ. ಅವರೊಂದಿಗೆ, ದೇವ-ದತ್ತ ಸ್ವಾತಂತ್ರ್ಯಕ್ಕಾಗಿ ಸ್ಥಿರ ನಿಲ್ಲಿರಿ. ಅದರ ಉದ್ದೇಶವನ್ನು ತಪ್ಪದಿರ್ರಿ ಮತ್ತು ಯೆಹೋವನ ಆನಂದವೇ ಸದಾಕಾಲವೂ ನಿಮ್ಮ ಆಶ್ರಯವಾಗಿರಲಿ. (w92 3/15)
ನೀವು ಹೇಗೆ ಉತ್ತರಿಸುವಿರಿ?
▫ “ಯೆಹೋವನ ಆನಂದವು” ನಮ್ಮ ಆಶ್ರಯದುರ್ಗವಾಗಿ ಹೇಗಿರಬಲ್ಲದು?
▫ ಧಾರ್ಮಿಕವಾಗಿ, ದೇವ-ದತ್ತ ಸ್ವಾತಂತ್ರ್ಯವು ಯೆಹೋವನ ಜನರಿಗೆ ಯಾವ ಆಶೀರ್ವಾದಗಳನ್ನು ತಂದಿದೆ?
▫ ಪ್ರೀತಿಯಲ್ಲಿ ಏಕೆ ಒಬ್ಬರಿಗೊಬ್ಬರು ಸೇವೆ ಮಾಡಬೇಕು?
▫ ದೇವ-ದತ್ತ ಸ್ವಾತಂತ್ರ್ಯದೊಂದಿಗೆ ಸಂಬಂಧಿಸಿರುವ ಕೆಲವು ಆಶೀರ್ವಾದಗಳು ಯಾವುವು?
▫ ದೇವಜನರು ಹೇಗೆ ಆನಂದಭರಿತರಾಗಿ ಉಳಿಯಸಾಧ್ಯವಿದೆ?
[ಪುಟ 23 ರಲ್ಲಿರುವ ಚಿತ್ರ]
“ಪ್ರತಿಯೊಂದು ಮುಳ್ಳನ್ನು ಒಂದು ಪುಷ್ಪದೋಪಾದಿ ಎಣಿಸಿರಿ; ಪ್ರತಿಯೊಂದು ಚೂಪಾದ ಕಲ್ಲುಬಂಡೆಯು ಒಂದು ಮೈಲಿಗಲ್ಲಾಗಲಿ, ಧ್ಯೇಯದೆಡೆಗೆ ನೀವು ಮುಂದೊತ್ತುವಾಗ ಧಾವಿಸುವಂತೆ ಮಾಡಲಿ”