ವೃದ್ಧರಿಗೆ ಕ್ರಿಸ್ತೀಯ ಪ್ರೀತಿಯನ್ನು ತೋರಿಸುವುದು
ಹದಿನೆಂಟನೆಯ ಶತಮಾನದ ಗ್ರಂಥಕರ್ತನಾದ ಸ್ಯಾಮ್ವೆಲ್ ಜಾನ್ಸನ್, ಗೆಳೆಯರನ್ನು ಭೇಟಿಯಾಗುವಾಗ ತನ್ನ ಹ್ಯಾಟನ್ನು ಎಲ್ಲಿ ಬಿಟ್ಟನೆಂದು ಮರೆತ ಒಬ್ಬ ಯುವ ಪುರುಷನ ಕಥೆಯನ್ನು ಹೇಳಿದನು. ಇದು ಯಾವುದೇ ಹೇಳಿಕೆಯನ್ನು ಪ್ರೇರಿಸಲಿಲ್ಲ. “ಆದರೆ ಅದೇ ಅಲಕ್ಷ್ಯವು ಒಬ್ಬ ವೃದ್ಧ ಪುರುಷನಲ್ಲಿ ಕಂಡುಹಿಡಿಯಲ್ಪಟ್ಟರೆ,” ಜಾನ್ಸನ್ ಮುಂದುವರಿಸುತ್ತಾನೆ, “ಜನರು ತಮ್ಮ ಭುಜಗಳನ್ನು ಎಗುರಿಸಿ, ‘ತನ್ನ ಜ್ಞಾಪಕಶಕ್ತಿಯನ್ನು ಅವನು ಕಳೆದುಕೊಳ್ಳುತ್ತಿದ್ದಾನೆ’ ಎಂದು ಹೇಳುವರು.”
ವೃದ್ಧರು, ಬಹುಶಃ ಇತರ ಅಲ್ಪಸಂಖ್ಯಾತ ಗುಂಪುಗಳಂತೆ, ತರವಲ್ಲದ ಪಡಿಯಚ್ಚಿಗೆ ಗುರಿಯಾಗಿದ್ದಾರೆಂದು ಜಾನ್ಸನ್ನ ಕಥೆಯು ಪ್ರದರ್ಶಿಸುತ್ತದೆ. ವಯಸ್ಸಾದವರ ಅಗತ್ಯಗಳಿಗಾಗಿ ಲಕ್ಷಿಸುವುದು ಒಂದು ಸವಾಲಾಗಿದ್ದಾಗ್ಯೂ, ಒಳಗೊಂಡ ಎಲ್ಲ ಪಕ್ಷದವರಿಗೆ ಪ್ರಯೋಜನಗಳು ಒದಗಿಬರುತ್ತವೆ. ಸವಾಲುಗಳು ಮತ್ತು ಪ್ರತಿಫಲಗಳು ಏನಾಗಿವೆ, ಮತ್ತು ಯಾಕೆ ಈ ವಿಷಯವು ಹೆಚ್ಚು ಹೆಚ್ಚಾಗಿ ಜನರನ್ನು ಪ್ರಭಾವಿಸುತ್ತದೆ?
ಅಂಕೆಸಂಖ್ಯೆಗಳನುಸಾರ, ಲೋಕದ ಜನಸಂಖ್ಯೆಯ 6 ಪ್ರತಿಶತ ಜನರು 65 ವರ್ಷ ಪ್ರಾಯದವರು ಯಾ ಇನ್ನೂ ಹೆಚ್ಚು ವಯಸ್ಸಾದವರು ಆಗಿದ್ದಾರೆ, ಮತ್ತು ಅಭಿವೃದ್ಧಿಗೊಂಡ ರಾಷ್ಟ್ರಗಳಲ್ಲಿ ಪ್ರತಿಶತವು ಎರಡು ಪಟ್ಟು ಹೆಚ್ಚಾಗಿದೆ. ಇಸವಿ 1993ನ್ನು “ವೃದ್ಧ ಜನರ ಮತ್ತು ಸಂತತಿಗಳ ನಡುವೆ ಐಕಮತ್ಯದ ಯೂರೋಪಿಯನ್ ವರ್ಷ” ವೆಂದು ವರ್ಣಿಸಿದ ಯೂರೋಪಿಯನ್ ಸಮುದಾಯದಲ್ಲಿ, ಮೂವರಲ್ಲಿ ಒಬ್ಬರು 50 ಕ್ಕಿಂತ ಹೆಚ್ಚು ವಯಸ್ಸಿನವರು. ಅನೇಕ ಔದ್ಯೋಗೀಕೃತ ರಾಷ್ಟ್ರಗಳಲ್ಲಿ ಇರುವಂತೆ ಅಲ್ಲಿ, ಇಳಿಮುಖವಾಗುತ್ತಿರುವ ಜನನಪ್ರಮಾಣಗಳು ಮತ್ತು ಹೆಚ್ಚಾಗುತ್ತಿರುವ ಸರಾಸರಿ ಆಯುಷ್ಯವು ಜನಸಂಖ್ಯಾ ಹಂಚಿಕೆಯನ್ನು ಭಾರವಾಗಿ ಮಾಡುತ್ತಿದೆ. ಇಂತಹ ಪರಿಸ್ಥಿತಿಗಳಲ್ಲಿ ವಯಸ್ಸಾದವರನ್ನು ನೋಡಿಕೊಳ್ಳುವುದು ಸ್ಪಷ್ಟವಾಗಿಗಿಯೂ ಒಂದು ಗುರುತರವಾದ ಕೆಲಸವಾಗಿದೆ. ಪೂರ್ವದ ಪ್ರಾಚ್ಯದಲ್ಲಿ ವಿಷಯಗಳು ಎಷ್ಟು ಭಿನ್ನವಾಗಿರುತ್ತಿದ್ದವು!
“ಜ್ಞಾನದ ಭಂಡಾರಗಳು”
ಪೂರ್ವದಲ್ಲಿ “ವೃದ್ಧರು ವಿವೇಕ ಮತ್ತು ಉನ್ನತ ಜ್ಞಾನದ ಸಾಂಪ್ರದಾಯಿಕ ಮೌಲ್ಯಗಳ ರಕ್ಷಕರೆಂದು ವೀಕ್ಷಿಸಲ್ಪಡುತ್ತಿದ್ದರು, ಆ ಕಾರಣಕ್ಕಾಗಿ ಎಳೆಯರು ಅವರ ಸಾಹಚರ್ಯವನ್ನು ಹುಡುಕುವಂತೆ ಮತ್ತು ಅವರಿಂದ ಕಲಿಯುವಂತೆ ಹೇಳಲ್ಪಟ್ಟರು,” ಎಂದು ಹಾಂಡ್ವೂರ್ಟರ್ಬುಕ್ ಡಾಸ್ ಬೀಬಿಶ್ಲೆನ್ ಆಲ್ಟರ್ಟೂಮ್ಸ್ ಫಾರ್ ಗೆಬಿಲ್ಡೆಟ ಬೀಬೆಲೇಜರ್ (ಬೈಬಲಿನ ಶಿಕ್ಷಿತ ಓದುಗರಿಗೆ ಬೈಬಲಿನ ಪ್ರಾಚೀನತೆಯ ಕೈಪಿಡಿ) ಸೂಚಿಸುತ್ತದೆ. ಸ್ಮಿತ್ಸ್ ಬೈಬಲ್ ಡಿಕ್ಷನೆರಿಯು ವಿವರಿಸುವುದು: “ಖಾಸಗಿ ಜೀವಿತದಲ್ಲಿ [ವಯಸ್ಸಾದವರು] ಜ್ಞಾನದ ಭಂಡಾರಗಳಂತೆ ವೀಕ್ಷಿಸಲ್ಪಡುತ್ತಿದ್ದರು . . . ತಮ್ಮ ಅಭಿಪ್ರಾಯವನ್ನು ಮೊದಲು ಕೊಡುವಂತೆ [ಎಳೆಯರು] ಅವರನ್ನು ಅನುಮತಿಸಿದರು.”
ವಯಸ್ಸಾದವರಿಗಾಗಿ ಪೂಜ್ಯಭಾವವು ಮೋಶೆಯ ಧರ್ಮಶಾಸ್ತ್ರದಲ್ಲಿ ಯಾಜಕಕಾಂಡ 19:22 ರಲ್ಲಿ ಪ್ರತಿಬಿಂಬಿಸಲ್ಪಟ್ಟಿತು: “ತಲೆನರೆತ ವೃದ್ಧರ ಮುಂದೆ ಎದ್ದು ನಿಂತು ಅವರನ್ನು ಸನ್ಮಾನಿಸಬೇಕು.” ಹೀಗೆ ವಯಸ್ಸಾದವರು ಸಮಾಜದೊಳಗೆ ಸುಯೋಗದ ಸ್ಥಾನವನ್ನು ವಹಿಸಿಕೊಂಡರು ಮತ್ತು ಬೆಲೆಬಾಳುವ ಸ್ವತ್ತುಗಳಂತೆ ಪರಿಗಣಿಸಲ್ಪಡುತ್ತಿದ್ದರು. ಇದು ಸ್ಪಷ್ಟವಾಗಿಗಿಯೇ ಮೋವಾಬ್ಯಳಾದ ರೂತಳು ಆಕೆಯ ಇಸ್ರಾಯೇಲ್ಯ ಅತೆಯ್ತಾದ ನೊವೊಮಿಯನ್ನು ವೀಕ್ಷಿಸಿದ ವಿಧವಾಗಿದೆ.
ಮೋವಾಬಿನಿಂದ ಇಸ್ರಾಯೇಲಿಗೆ ನೊವೊಮಿಯೊಂದಿಗೆ ಒಡಗೂಡಿಹೋಗಲು ರೂತಳು ದೃಢವಾಗಿ ನಿರ್ಣಯಿಸಿದಳು, ತದನಂತರ ನೊವೊಮಿಯ ಬುದ್ಧಿವಾದಕ್ಕೆ ಜಾಗ್ರತೆಯಿಂದ ಕಿವಿಗೊಟ್ಟಳು. ಅವರು ಬೆತ್ಲೆಹೇಮನ್ನು ತಲಪಿದಾಗ, ವಿಷಯಗಳನ್ನು ಯೆಹೋವನ ಹಸ್ತವು ನಿರ್ದೇಶಿಸುತ್ತಿದೆ ಎಂಬುದನ್ನು ಗಮನಿಸಿದವಳು ಮತ್ತು ಆಮೇಲೆ ಹೇಗೆ ವರ್ತಿಸಬೇಕೆಂದು ರೂತಳಿಗೆ ಉಪದೇಶ ನೀಡಿದವಳು ನೊವೊಮಿಯಾಗಿದ್ದಳು. (ರೂತಳು 2:20; 3:3, 4, 18) ಅನುಭವಸ್ಥ ನೊವೊಮಿಯಿಂದ ಆಕೆ ಕಲಿತಂತೆ, ರೂತಳ ಜೀವಿತವು ದೇವಪ್ರಭುತ್ವ ರೀತಿಯಲ್ಲಿ ರೂಪಿಸಲ್ಪಟ್ಟಿತು. ಆಕೆಯ ಅತೆಯ್ತು ಜ್ಞಾನದ ಭಂಡಾರವಾಗಿ ಪರಿಣಮಿಸಿದಳು.
ಅದೇ ರೀತಿಯಲ್ಲಿ ಇಂದು ಎಳೆಯ ಕ್ರೈಸ್ತ ಸ್ತ್ರೀಯರು ಸಭೆಯಲ್ಲಿರುವ ವೃದ್ಧ ಸ್ತ್ರೀಯರೊಂದಿಗೆ ಸಹವಸಿಸುವ ಮೂಲಕ ಪ್ರಯೋಜನಪಡೆಯಬಲ್ಲರು. ಬಹುಶಃ ಒಬ್ಬಾಕೆ ಸಹೋದರಿಯು ಮದುವೆಯ ಕುರಿತು ಯೋಚಿಸುತ್ತಿದ್ದಾಳೆ ಇಲ್ಲವೆ ಒಂದು ತಿದ್ದಲಾಗದ ವೈಯಕ್ತಿಕ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದಾಳೆ. ವಿಷಯದಲ್ಲಿ ಅನುಭವವಿರುವ ಒಬ್ಬಾಕೆ ಪ್ರೌಢ ವೃದ್ಧ ಸಹೋದರಿಯ ಸಲಹೆ ಮತ್ತು ಬೆಂಬಲವನ್ನು ಕೋರುವುದು ಎಷ್ಟು ವಿವೇಕವುಳ್ಳದ್ದಾಗಿರುವುದು!
ಇನ್ನೂ ಹೆಚ್ಚಾಗಿ, ತಮ್ಮ ಮಧ್ಯದಲ್ಲಿರುವ ವಯಸ್ಸಾದವರ ಅನುಭವವನ್ನು ತಮಗಾಗಿ ಗಿಟ್ಟಿಸಿಕೊಳ್ಳುವ ಮೂಲಕ ಹಿರಿಯರ ಮಂಡಲಿಯು ಪ್ರಯೋಜನಪಡೆಯಬಲ್ಲದು. ಇದನ್ನು ಮಾಡಲು ತಪ್ಪಿದ ಲೋಟನಿಂದ ನಾವು ಕಲಿಯಬಲ್ಲೆವು. ಅಬ್ರಹಾಮ ಮತ್ತು ಲೋಟರ ದನಕರುಗಳನ್ನು ಕಾಯುವವರನ್ನೊಳಗೊಂಡ ಒಂದು ಜಗಳವು, ಎಲ್ಲರನ್ನು ಪ್ರಭಾವಿಸುವ ಒಂದು ನಿರ್ಧಾರಕ್ಕೆ ಕರೆನೀಡಿತು. ಲೋಟನು ಬುದ್ಧಿಹೀನವಾದ ಒಂದು ಆಯ್ಕೆಯನ್ನು ಮಾಡಿದನು. ಪ್ರಥಮವಾಗಿ ಅಬ್ರಹಾಮನ ಸಲಹೆಗಾಗಿ ಕೇಳುವುದು ಎಷ್ಟೊಂದು ಉತ್ತಮವಾಗಿರುತ್ತಿತ್ತು! ಲೋಟನಿಗೆ ಪ್ರೌಢ ಮಾರ್ಗದರ್ಶನವು ಸಿಗುತ್ತಿತ್ತು ಮತ್ತು ತನ್ನ ಕ್ಷಿಪ್ರ ಆಯ್ಕೆಯಿಂದ ಫಲಿಸಿದ ಸಂಕಟದಿಂದ ಅವನು ತನ್ನ ಕುಟುಂಬವನ್ನು ಕಾಪಾಡಬಹುದಿತ್ತು. (ಆದಿಕಾಂಡ 13:7-13; 14:12; 19:4, 5, 9, 26, 29) ಪ್ರಶ್ನೆಯೊಂದರ ಮೇಲೆ ನಿಮ್ಮ ಸ್ವಂತ ತೀರ್ಮಾನಕ್ಕೆ ತಲಪುವ ಮೊದಲು ಪ್ರೌಢ ಹಿರಿಯರು ಹೇಳುವ ವಿಷಯವನ್ನು ನೀವು ಜಾಗರೂಕವಾಗಿ ಆಲಿಸುತ್ತೀರೊ?
ಪ್ರಥಮ ಶತಮಾನದಲ್ಲಿ ಸಿಮೆಯೋನ ಮತ್ತು ಅನ್ನಳಿಗೆ ಇದ್ದಂತೆ, ಅಸಂಖ್ಯಾತ ವಯಸ್ಕರಿಗೆ ಯೆಹೋವನ ಕೆಲಸಕ್ಕಾಗಿ ಬಾಳಿಕೆಬರುವ ಹುರುಪಿದೆ. (ಲೂಕ 2:25, 36, 37) ಅವರ ಬಲವು ಅನುಮತಿಸುವ ಮಟ್ಟಿಗೆ, ತೀರ ವೃದ್ಧರಾಗದಾಗಲೂ, ಅವರನ್ನು ಸಭಾ ಚಟುವಟಿಕೆಗಳಲ್ಲಿ ಒಳಗೂಡಿಸುವುದು, ಅಂತಹ ವೃದ್ಧರಿಗಾಗಿರುವ ಗೌರವದ ಸೂಚನೆಯೂ ಲಕ್ಷಿಸುವ ಮನೋಭಾವದ ಪ್ರತಿಬಿಂಬವೂ ಆಗಿರುತ್ತದೆ. ಬಹುಶಃ ದೇವಪ್ರಭುತ್ವ ಶುಶ್ರೂಷಾ ಶಾಲೆಗಾಗಿ ಒಂದು ನೇಮಕವನ್ನು ತಯಾರಿಸಲು ಒಬ್ಬ ಎಳೆಯನಿಗೆ ಸಹಾಯದ ಅಗತ್ಯವಿದೆ. ಆದರ್ಶ ಸಲಹೆಗಾರನು—ಪಕ್ವವಾದ ವಿವೇಕ, ಉಪಕಾರಬುದ್ಧಿ, ಮತ್ತು ಲಭ್ಯ ಸಮಯವಿರುವ—ಸಭೆಯಲ್ಲಿನ ಒಬ್ಬ ವಯಸ್ಸಾದ ಸದಸ್ಯನಾಗಿರುವನೆಂದು ಒಬ್ಬ ಚತುರ ಹಿರಿಯನು ತೀರ್ಮಾನಿಸಬಹುದು.
ಹಾಗಿದ್ದರೂ, ವಯಸ್ಸಾದವರ ವಿಶೇಷ ಅಗತ್ಯಗಳಿಗಾಗಿ ಲಕ್ಷಿಸುವುದು ಹೆಚ್ಚಿನದನ್ನು ಒಳಗೊಳ್ಳುತ್ತದೆ. ಅನೇಕರು ಒಂಟಿತನದಿಂದ, ಪಾತಕದ ಭಯದಿಂದ, ಮತ್ತು ಆರ್ಥಿಕ ತೊಂದರೆಗಳಿಂದ ಭಾದಿಸಲ್ಪಡುತ್ತಾರೆ. ಇನ್ನೂ ಹೆಚ್ಚಾಗಿ, ವೃದ್ಧರು ಒಮ್ಮೆ ದುರ್ಬಲರಾದರೆ, ಈ ಸಮಸ್ಯೆಗಳು ನ್ಯೂನ ಆರೋಗ್ಯದಿಂದ ಮತ್ತು ಕುಗ್ಗುತ್ತಿರುವ ತಮ್ಮ ಸ್ವಂತ ದೇಹಶಕ್ತಿಯ ಕಾರಣ ಉಂಟಾಗುವ ನಿರಾಶೆಯಿಂದ ಅಧಿಕಗೊಳಿಸುತ್ತದೆ. ಆಗ ಅವರಿಗೆ ಇನ್ನೂ ಹೆಚ್ಚಿನ ಗಮನದ ಅಗತ್ಯವಿರುತ್ತದೆ. ಒಬ್ಬೊಬ್ಬರಾಗಿ ಮತ್ತು ಸಭೆಯು ಒಟ್ಟಾಗಿ ಹೇಗೆ ಪ್ರತಿಕ್ರಿಯಿಸಬೇಕು?
“ದಿವ್ಯ ಭಕ್ತಿಯನ್ನು ಆಚರಿಸಿರಿ”
ಪ್ರಥಮ ಶತಮಾನದಲ್ಲಿ, ಪೌಲನು ಪ್ರೇರಣೆಯ ಕಳೆಗೆ 1 ತಿಮೊಥೆಯ 5:4, 16 ರಲ್ಲಿ ಬರೆದದ್ದು: “ಒಬ್ಬ ವಿಧವೆಗೆ ಮಕ್ಕಳಾಗಲಿ ಮೊಮ್ಮಕ್ಕಳಾಗಲಿ ಇದ್ದರೆ ಅವರೇ ಮೊದಲು ತಮ್ಮ ಮನೆಯವರಿಗೆ ಭಕ್ತಿ [ದಿವ್ಯ ಭಕ್ತಿ, NW] ತೋರಿಸುವದಕ್ಕೂ ತಂದೆತಾಯಿಗಳಿಗೆ ಪ್ರತ್ಯುಪಕಾರ ಮಾಡುವದಕ್ಕೂ ಕಲಿತುಕೊಳ್ಳಲಿ. ನಂಬುವವಳಾದ ಸ್ತ್ರೀಯ ಅಧೀನದಲ್ಲಿ ವಿಧವೆಯರಿದ್ದರೆ ಆಕೆಯೇ ಅವರನ್ನು ಸಂರಕ್ಷಿಸಲಿ. ಸಭೆಯು ದಿಕ್ಕಿಲ್ಲದ ವಿಧವೆಯರಿಗೆ ಸಹಾಯಮಾಡಬೇಕಾಗಿರುವದರಿಂದ ಆಕೆಯು ಆ ಭಾರವನ್ನು ಅದರ ಮೇಲೆ ಹಾಕಬಾರದು.” ವಯಸ್ಸಾದವರನ್ನು ನೋಡಿಕೊಳ್ಳುವುದು ಕುಟುಂಬದ ಜವಾಬ್ದಾರಿಯಾಗಿತ್ತು. ಸಹಾಯ ಮಾಡಲು ಸಾಧ್ಯವಾಗಿದ್ದ ಎಲ್ಲವನ್ನು ಕುಟುಂಬವು ಮಾಡಿಯಾದ ಅನಂತರ, ಸಭೆಯಲ್ಲಿನ ಒಬ್ಬ ವೃದ್ಧ ಸದಸ್ಯನಿಗೆ ಸಹಾಯದ ಅಗತ್ಯವಿರುವಲ್ಲಿ, ಜವಾಬ್ದಾರಿಯು ಸಭೆಯ ಮೇಲೆ ನೆಲೆಸಿತ್ತು. ಈ ತತ್ವಗಳು ಬದಲಾಗಿಲ್ಲ.
ತಮ್ಮ ಸ್ವಂತ ಮನೆವಾರ್ತೆಗಳಲ್ಲಿ ದಿವ್ಯ ಭಕ್ತಿಯನ್ನು ಆಚರಿಸುವ ಮೂಲಕ ವೃದ್ಧರ ಕಡೆಗೆ ಕ್ರಿಸ್ತೀಯ ಪ್ರೀತಿಯನ್ನು ತೋರಿಸುವಂತೆ ಯಾವುದು ಕ್ರೈಸ್ತರಿಗೆ ಸಹಾಯ ಮಾಡಿದೆ? ವಯಸ್ಸಾದವರನ್ನು ನೋಡಿಕೊಳ್ಳುವುದರಲ್ಲಿ ಸ್ವಲ್ಪ ಅನುಭವವಿರುವ ಹಲವಾರು ಸಾಕ್ಷಿಗಳ ಮುಂದಿನ ಹೇಳಿಕೆಗಳನ್ನು ಗಮನಿಸಿರಿ.
ಆತ್ಮಿಕ ಅಗತ್ಯಗಳಿಗೆ ಕ್ರಮವಾದ ಗಮನ
ತನ್ನ ಹೆಂಡತಿಯ ಹೆತ್ತವರನ್ನು ನೋಡಿಕೊಳ್ಳಲು ಆಕೆಗೆ ಸಹಾಯ ಮಾಡಿದ ಫೆಲಿಕ್ಸ್ ಜ್ಞಾಪಿಸಿಕೊಳ್ಳುವುದು, “ದಿನದ ವಚನವನ್ನು ಒಟ್ಟಿಗೆ ಪರಿಗಣಿಸುವುದು ಅಮೂಲ್ಯವಾದ ಒತ್ತಾಸೆ ಆಗಿತ್ತು.” “ವೈಯಕ್ತಿಕ ಅನುಭವಗಳು ಮತ್ತು ಬಯಕೆಗಳು ಯೆಹೋವನ ತತ್ವಗಳೊಂದಿಗೆ ಅನ್ಯೋನ್ಯವಾಗಿ ಬೆರೆತಿದ್ದವು.” ವೃದ್ಧ ಸಂಬಂಧಿಕರನ್ನು ನೋಡಿಕೊಳ್ಳುವ ಕೆಲಸವನ್ನು ವಹಿಸಿಕೊಳ್ಳುವುದರಲ್ಲಿ, ಅವರ ಆತ್ಮಿಕ ಆತ್ಮೋನ್ನತಿಗೆ ತಕ್ಕದಾದ ಗಮನವನ್ನು ಕೊಡುವುದು ಮೂಲ ಅಂಶವಾಗಿದೆ. ಇದು ಮತ್ತಾಯ 5:3 (NW) ರಲ್ಲಿರುವ ಯೇಸುವಿನ ಮಾತುಗಳ ನೋಟದಲ್ಲಿ ತರ್ಕಬದ್ಧವಾಗಿದೆ: “ತಮ್ಮ ಆತ್ಮಿಕ ಅಗತ್ಯದ ಅರಿವಿರುವವರು ಧನ್ಯರು.” ದಿನದ ವಚನವನ್ನು ಬೈಬಲ್ ವಾಚನದ ಕಾರ್ಯಕ್ರಮದ ಮೂಲಕ, ಬೈಬಲಾಧಾರಿತ ಪ್ರಕಾಶನಗಳ ಚರ್ಚೆಯ ಮೂಲಕ, ಮತ್ತು ಪ್ರಾರ್ಥನೆಯ ಮೂಲಕ ಹೆಚ್ಚಿಸಸಾಧ್ಯವಿದೆ. “ವೃದ್ಧರು ಸ್ವಲ್ಪ ಮಟ್ಟಿಗೆ ನಿಯತಕ್ರಮವನ್ನು ಇಷ್ಟಪಡುವಂತೆ ತೋರುತ್ತದೆ,” ಎಂದು ಪೇಟರ್ ಹೇಳುತ್ತಾನೆ.
ಹೌದು, ಆತ್ಮಿಕ ವಿಷಯಗಳಲ್ಲಿ ಕ್ರಮಬದ್ಧತೆಯು ಅವಶ್ಯವಾಗಿದೆ. ಕೇವಲ ಆತ್ಮಿಕ ವಿಷಯಗಳಲ್ಲಿ ಮಾತ್ರವಲ್ಲ ಆದರೆ ದಿನನಿತ್ಯದ ಜೀವಿತದಲ್ಲಿಯೂ ವೃದ್ಧರು ನಿಯತಕ್ರಮವನ್ನು ಗಣ್ಯಮಾಡುತ್ತಾರೆ. ಅಲ್ಪವಾದ ದುರ್ಬಲತೆಗಳಿರುವವರೂ ಕೂಡ “ಹಾಸಿಗೆಯಿಂದ ಎದ್ದು ಪ್ರತಿ ದಿನ ಯೋಗ್ಯವಾಗಿ ಉಡುಪು ತೊಟ್ಟುಕೊಳ್ಳುವಂತೆ” ಆದರದಿಂದ ಉತ್ತೇಜಿಸಲ್ಪಡಬಲ್ಲರೆಂದು, ಉರ್ಸೂಲ ಹೇಳುತ್ತಾಳೆ. ವಯಸ್ಸಾದವರಿಗೆ ಆಜ್ಞೆ ವಿಧಿಸುವ ಭಾವನೆಯನ್ನು ತೊರೆಯಲು ನಾವು ನಿಸ್ಸಂದೇಹವಾಗಿ ಬಯಸುತ್ತೇವೆ. ತನ್ನ ಸದುದ್ದೇಶದ ಪ್ರಯತ್ನಗಳು ಅನೇಕ ವೇಳೆ ದುಃಖಕರವಾಗಿ ದಾರಿತಪ್ಪಿ ಹೋದವೆಂದು ಡೊರೀಸ್ ಒಪ್ಪಿಕೊಳ್ಳುತ್ತಾಳೆ. “ನಾನು ಎಲ್ಲ ಬಗೆಯ ತಪ್ಪುಗಳನ್ನು ಮಾಡಿದೆ. ತನ್ನ ಶರ್ಟನ್ನು ಪ್ರತಿದಿನ ಬದಲಾಯಿಸುವಂತೆ ನನ್ನ ತಂದೆಯನ್ನು ನಾನು ಒಂದು ದಿನ ಕೇಳಿಕೊಂಡೆ. ಆಗ ನನ್ನ ತಾಯಿ ನನಗೆ ಮರುಜ್ಞಾಪಿಸಿದ್ದು: ‘ಆತನು ಇನ್ನೂ ನನ್ನ ಗಂಡನಾಗಿದ್ದಾನೆ!’”
ವೃದ್ಧರು ಒಮ್ಮೆ ಎಳೆಯರಾಗಿದ್ದರು, ಆದರೆ ವಯಸ್ಸಾದವರಿಗೆ ಅನುಭೂತಿ ಮತ್ತು ಸೂಕ್ಷ್ಮತೆಯನ್ನು ತೋರಿಸುವುದು, ಎಳೆಯರಿಗಾಗಿರುವ ಒಂದು ದುಸ್ತರವಾದ ಕೆಲಸವಾಗಿದೆ. ಆದರೂ, ಅವರ ವಿಶೇಷ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವ ಕೀಲಿ ಕೈ ಅದೇ ಆಗಿರುತ್ತದೆ. ಮುಂದುವರಿಯುತ್ತಿರುವ ವಯಸ್ಸು ಆಶಾಭಂಗವನ್ನು ತರುತ್ತದೆ. ಗೇರ್ಹಾರ್ಟ್ ವಿವರಿಸುವುದು: “ತಾವು ಮಾಡುತ್ತಿದ್ದ ಎಲ್ಲವನ್ನು ಇನ್ನು ಮುಂದೆ ಅವರಿಗೆ ಮಾಡಲು ಸಾಧ್ಯವಾಗದಿದ್ದ ಕಾರಣ ನನ್ನ ಮಾವನವರು ಸ್ವತಃ ತಮ್ಮ ಮೇಲೆಯೇ ಕೋಪಗೊಂಡರು. ಸನ್ನಿವೇಶವನ್ನು ಒಪ್ಪಿಕೊಳ್ಳುವುದು ಅವರಿಗೆ ಬಹಳ ವೇದನಾಮಯವಾಗಿತ್ತು. ಅವರ ವ್ಯಕ್ತಿತ್ವವು ಬದಲಾಯಿತು.”
ಬದಲಾಗುತ್ತಿರುವ ಪರಿಸ್ಥಿತಿಗಳ ಕಳೆಗೆ, ಒಬ್ಬ ವೃದ್ಧನು ಇತರರನ್ನು—ವಿಶೇಷವಾಗಿ ಅವನನ್ನು ನೋಡಿಕೊಳ್ಳುತ್ತಿರುವವರನ್ನು ಟೀಕಿಸುವ ಮೂಲಕ, ತನ್ನೊಳಗೆ ಬೆಳೆದಿರುವ ಆಶಾಭಂಗದ ಅನಿಸಿಕೆಗಳನ್ನು ವ್ಯಕ್ತಪಡಿಸುವುದು, ಅಸಾಮಾನ್ಯವಾಗಿರುವುದಿಲ್ಲ. ಕಾರಣವು ಸರಳವಾಗಿದೆ. ಅವರ ಪ್ರೀತಿಯ ಗಮನವು ತನ್ನ ಸ್ವಂತ ನ್ಯೂನ ದೇಹಶಕ್ತಿಯನ್ನು ಅವನಿಗೆ ನೆನಪಿಸುತ್ತದೆ. ಈ ಅನ್ಯಾಯದ ಟೀಕೆಗೆ ಯಾ ದೂರಿಗೆ ನೀವು ಹೇಗೆ ಪ್ರತಿಕ್ರಿಯಿಸಬೇಕು?
ಅಂತಹ ನಕಾರಾತ್ಮಕ ಅನಿಸಿಕೆಗಳು ನಿಮ್ಮ ಪ್ರಯತ್ನಗಳ ಬಗ್ಗೆ ಯೆಹೋವನ ದೃಷ್ಟಿಕೋನವನ್ನು ಪ್ರತಿಬಿಂಬಿಸುವುದಿಲ್ಲವೆಂದು ಜ್ಞಾಪಿಸಿಕೊಳ್ಳಿರಿ. ಒಳ್ಳೆಯದನ್ನು ಮಾಡಲು ಮುಂದುವರಿಯಿರಿ, ಮತ್ತು ಕೆಲವೊಮ್ಮೆ ನ್ಯಾಯವಲ್ಲದ ಹೇಳಿಕೆಗಳನ್ನು ಪಡೆದರೂ ಕೂಡ ಶುದ್ಧವಾದ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳಿರಿ. (ಹೋಲಿಸಿ 1 ಪೇತ್ರ 2:19.) ಸ್ಥಳಿಕ ಸಭೆಯು ಹೆಚ್ಚಿನ ಬೆಂಬಲವನ್ನು ನೀಡಬಲ್ಲದು.
ಸಭೆಯು ಮಾಡಬಲ್ಲ ವಿಷಯ
ಅನೇಕ ಸಭೆಗಳಿಗೆ ನಮ್ಮ ಪ್ರಿಯ ವೃದ್ಧ ಸಹೋದರ ಮತ್ತು ಸಹೋದರಿಯರ ಗತಕಾಲದ ಪ್ರಯತ್ನಗಳಿಗೆ ಆಳವಾಗಿ ಕೃತಜ್ಞರಾಗಿರುವ ಕಾರಣವಿದೆ. ದಶಕಗಳ ಹಿಂದೆ ಕೇವಲ ಕೆಲವು ಪ್ರಚಾರಕರಿಂದ ಅದನ್ನು ವೃದ್ಧಿಪಡಿಸುತ್ತಾ, ಸಭೆಗಾಗಿ ತಳಪಾಯವನ್ನು ಹಾಕಿದವರು ಬಹುಶಃ ಅವರಾಗಿದ್ದರು. ಅವರ ಗತಕಾಲದ ಹುರುಪಿನ ಚಟುವಟಿಕೆ ಮತ್ತು ಪ್ರಾಯಶಃ ಪ್ರಸ್ತುತ ಆರ್ಥಿಕ ಬೆಂಬಲವಿಲ್ಲದೆ ಸಭೆಯು ಎಲ್ಲಿರುತ್ತಿತ್ತು?
ವಯಸ್ಸಾದ ಒಬ್ಬ ಪ್ರಚಾರಕನ ವಿಷಯದಲ್ಲಿ ಹೆಚ್ಚಿನ ಕಾಳಜಿಯು ಅವಶ್ಯವಾದಾಗ, ಜವಾಬ್ದಾರಿಯನ್ನು ಸಂಬಂಧಿಕರು ಮಾತ್ರ ವಹಿಸಿಕೊಳ್ಳುವ ಅಗತ್ಯವಿಲ್ಲ. ಅವರಿಗಾಗಿ ಏನಾದರೂ ಮಾಡುವ ಯಾ ಏನನ್ನಾದರೂ ತರುವ ಮೂಲಕ, ಅಡಿಗೆ ಮಾಡುವ ಮೂಲಕ, ಶುಚಿಮಾಡುವ ಮೂಲಕ, ವಯಸ್ಸಾದವರನ್ನು ತಿರುಗಾಡಲು ಕರೆದುಕೊಂಡುಹೋಗುವ ಮೂಲಕ, ಕ್ರೈಸ್ತ ಕೂಟಗಳಿಗೆ ವಾಹನ ಸೌಕರ್ಯವನ್ನು ನೀಡುವ ಮೂಲಕ, ಯಾ ಕೇವಲ ಅವರೊಂದಿಗೆ ರಾಜ್ಯ ಸಭಾಗೃಹದಲ್ಲಿ ಸಂಭಾಷಿಸುವ ಮೂಲಕ ಇತರರು ಸಹಾಯ ಮಾಡಬಲ್ಲರು. ಎಲ್ಲರೂ ಸೇರಬಲ್ಲರಾದರೂ, ಪ್ರಯತ್ನಗಳನ್ನು ಸುಸಂಘಟಿತಗೊಳಿಸುವಲ್ಲಿ ಕಾರ್ಯಸಾಧಕತೆ ಮತ್ತು ನಿಯತಕ್ರಮವು ಅತ್ಯುತ್ತಮವಾಗಿ ಸಾಧಿಸಲ್ಪಡುವುವು.
ಕುರಿ ಪಾಲನೆಯ ಸಂದರ್ಶನಗಳನ್ನು ಸಂಘಟಿಸುವಾಗ, ಹಿರಿಯರು ಜ್ಞಾಪಕದಲ್ಲಿಟ್ಟುಕೊಳ್ಳಬಲ್ಲ ಒಂದು ವಿಷಯವು ಸುಸಂಘಟನೆಯಾಗಿದೆ. ಕ್ರಮವಾದ ಕುರಿ ಪಾಲನೆಯ ಸಂದರ್ಶನಗಳು ವಯಸ್ಸಾದವರಿಗೆ ಮತ್ತು ಬಲಹೀನರಾದವರಿಗೆ—ತಮ್ಮ ಕುಟುಂಬಗಳಿಂದ ಚೆನ್ನಾಗಿ ನೋಡಿಕೊಳ್ಳಲ್ಪಡುವ ವ್ಯಕ್ತಿಗಳಿಗೆ ಸಹ—ಮಾಡಲಾಗುತ್ತಿವೆ ಎಂಬುದನ್ನು ಹಿರಿಯರು ಖಚಿತಪಡಿಸಿಕೊಳ್ಳುವುದರಿಂದ, ಈ ವಿಷಯದಲ್ಲಿ ಕೆಲವು ಸಭೆಗಳು ಆದರ್ಶಪ್ರಾಯವಾಗಿವೆ. ಹಾಗಿದ್ದರೂ, ವೃದ್ಧರ ಕಡೆಗೆ ತಮ್ಮ ಕರ್ತವ್ಯದ ಕುರಿತು ಇತರ ಸಭೆಗಳು ಅಧಿಕ ಜಾಗರೂಕರಾಗಿರಬೇಕೆಂದು ತೋರುತ್ತದೆ.
ಎಂಬತ್ತರ ಅಂತ್ಯ ವರ್ಷಗಳಲ್ಲಿರುವ ಒಬ್ಬ ನಂಬಿಗಸ್ತ ಸಹೋದರನು, ಅವನನ್ನು ನೋಡಿಕೊಳ್ಳಲು ಬೆತೆಲನ್ನು ಬಿಟ್ಟ ಅವನ ಮಗಳು ಮತ್ತು ಅಳಿಯನಿಂದ ನೋಡಿಕೊಳ್ಳಲ್ಪಡುತ್ತಿದ್ದನು. ಆದರೂ, ಸಭೆಯ ಇತರ ಸದಸ್ಯರ ಮೂಲಕ ಮಾಡಲಾದ ಭೇಟಿಗಳು ಅವನಿಗೆ ಇನ್ನೂ ಪ್ರಾಮುಖ್ಯವಾಗಿದ್ದವು. “ಅಸ್ವಸ್ಥರನ್ನು ನಾನು ಭೇಟಿಯಾಗುತ್ತಿದ್ದಾಗ,” ಸಹೋದರನು ಪ್ರಲಾಪಿಸಿದ್ದು, “ನಾನು ಅವರೊಂದಿಗೆ ಪ್ರಾರ್ಥಿಸಿದ್ದೆ. ಆದರೆ ನನ್ನೊಂದಿಗೆ ಯಾರೂ ಎಂದಿಗೂ ಪ್ರಾರ್ಥಿಸಿಲ್ಲ.” ಸಂಬಂಧಿಕರ ಪ್ರೀತಿಪರ ಗಮನವು, ‘ತಮ್ಮ ವಶದಲ್ಲಿರುವ ದೇವರ ಮಂದೆಯನ್ನು ಕಾಯುವ’ ಕರ್ತವ್ಯದಿಂದ ಹಿರಿಯರನ್ನು ಮನ್ನಿಸುವುದಿಲ್ಲ. (1 ಪೇತ್ರ 5:2) ಇನ್ನೂ ಹೆಚ್ಚಾಗಿ, ವೃದ್ಧರನ್ನು ನೋಡಿಕೊಳ್ಳುವವರು ತಮ್ಮ ಉತ್ತಮ ಕೆಲಸದಲ್ಲಿ ಮುಂದುವರಿಯುವಂತೆ ಭಕ್ತಿವೃದ್ಧಿಮಾಡಲ್ಪಡಬೇಕು ಮತ್ತು ಉತ್ತೇಜಿಸಲ್ಪಡಬೇಕು.
“ಮುಪ್ಪಿನ ಮುದುಕನೂ ತೃಪ್ತನೂ”
ಹತ್ತೊಂಬತ್ತನೆಯ ಶತಮಾನದ ಜರ್ಮನ್ ವಿಜ್ಞಾನಿಯಾದ ಆ್ಯಲೆಗ್ಜಾಂಡರ್ ವಾನ್ ಹುಮ್ಬಾಲ್ಟ್ನನ್ನು, ಅವನು ಮುದುಕನಾಗುವುದನ್ನು ಆಯಾಸಕರವಾಗಿ ಕಂಡನೊ ಇಲ್ಲವೊ ಎಂಬುದಾಗಿ ಒಬ್ಬಾಕೆ ಯುವತಿಯು ಕೇಳಿದಾಗ, ಅವನು ತುಂಬ ಮುದುಕನಾಗಿದ್ದನು. “ನೀನು ಹೇಳುವುದು ನಿಜ,” ಎಂದು ಆ ವಿದ್ಯಾವಂತನು ಉತ್ತರಿಸಿದನು. “ಆದರೆ ಇದು ಒಂದು ದೀರ್ಘ ಸಮಯ ಜೀವಿಸುವ ಏಕೈಕ ಮಾರ್ಗವಾಗಿದೆ.” ಅದೇ ರೀತಿಯಲ್ಲಿ, ಇಂದು ಅನೇಕ ಸಹೋದರ ಹಾಗೂ ಸಹೋದರಿಯರು, ಒಂದು ದೀರ್ಘ ಜೀವಿತವನ್ನು ನಡೆಸುವ ಘನತೆಗೆ ಪ್ರತಿಯಾಗಿ ಮುಪ್ಪಿನ ಎಡರುಗಳನ್ನು ಸ್ವೀಕರಿಸುವ ಉತ್ತಮ ಮಾದರಿಯನ್ನು ಇಡುತ್ತಾರೆ. “ಮುಪ್ಪಿನ ಮುದುಕರೂ ತೃಪ್ತರೂ” ಆಗಿದ್ದ ಅಬ್ರಹಾಮ, ಇಸಾಕ, ದಾವೀದ, ಮತ್ತು ಯೋಬನ ಮೂಲಕ ತೋರಿಸಲ್ಪಟ್ಟ ಮನೋಭಾವವನ್ನು ಅವರು ಪ್ರತಿಬಿಂಬಿಸುತ್ತಾರೆ.—ಆದಿಕಾಂಡ 25:8; 35:29; 1 ಪೂರ್ವಕಾಲವೃತ್ತಾಂತ 23:1; ಯೋಬ 42:17, NW.
ಮುಂದುವರಿಯುತ್ತಿರುವ ವಯಸ್ಸು, ಸಹಾಯವನ್ನು ನಯದಿಂದ ಸ್ವೀಕರಿಸುವ ಮತ್ತು ಕೃತಜ್ಞತೆಯನ್ನು ಪ್ರಾಮಾಣಿಕವಾಗಿ ವ್ಯಕ್ತಪಡಿಸುವ ಪಂಥಾಹ್ವಾನವನ್ನು ತರುತ್ತದೆ. ಪ್ರತಿಯೊಬ್ಬನು ತನ್ನ ಬಲದ ಎಲ್ಲೆಗಳನ್ನು ಗುರುತಿಸುವಂತೆ ವಿವೇಕವು ಕೇಳಿಕೊಳ್ಳುತ್ತದೆ. ಹಾಗಿದ್ದರೂ, ಅದು ವಯಸ್ಸಾಗುತ್ತಿರುವ ಒಬ್ಬ ವ್ಯಕ್ತಿಯನ್ನು ನಿಷ್ಕ್ರಿಯ ಸ್ಥಿತಿಗೆ ಗುರಿಮಾಡುವುದಿಲ್ಲ. ಮರೀಯ ಈಗ 90 ವರ್ಷಕ್ಕಿಂತಲೂ ಅಧಿಕ ಪ್ರಾಯದವರಾಗಿದ್ದರೂ, ಸಭಾ ಕೂಟಗಳನ್ನು ಅವರು ಹಾಜರಾಗುತ್ತಾರೆ ಮತ್ತು ಅಲ್ಲಿ ಹೇಳಿಕೆಗಳನ್ನು ನೀಡುತ್ತಾರೆ. ಇದನ್ನು ಅವರು ಹೇಗೆ ಮಾಡುತ್ತಾರೆ? “ನನಗೆ ಇನ್ನು ಓದಲು ಸಾಧ್ಯವಿಲ್ಲ, ಆದರೆ ನಾನು ಕಾವಲಿನಬುರುಜನ್ನು ಕಸ್ಸೆಟ್ನಲ್ಲಿ ಕೇಳುತ್ತೇನೆ. ಹೆಚ್ಚಿನದನ್ನು ನಾನು ಮರೆಯುತ್ತೇನೆ, ಆದರೆ ಸಾಮಾನ್ಯವಾಗಿ ಒಂದು ಹೇಳಿಕೆಯನ್ನು ಕೊಡಲು ನಾನು ಶಕ್ತಳಾಗುತ್ತೇನೆ.” ಮರೀಯಳಂತೆ, ಭಕ್ತಿವೃದ್ಧಿಯನ್ನು ಉಂಟುಮಾಡುವ ವಿಷಯಗಳೊಂದಿಗೆ ಕಾರ್ಯಮಗ್ನರಾಗಿರುವುದು, ಒಬ್ಬ ವ್ಯಕ್ತಿಯನ್ನು ಸಕ್ರಿಯವಾಗಿ ಉಳಿಯುವಂತೆ ಮತ್ತು ಕ್ರೈಸ್ತ ವ್ಯಕ್ತಿತ್ವವನ್ನು ಕಾಪಾಡಿಕೊಳ್ಳುವಂತೆ ಸಹಾಯ ಮಾಡುತ್ತದೆ.
ದೇವರ ರಾಜ್ಯದ ಕೆಳಗೆ, ವೃದ್ಧಾಪ್ಯವು ಇನ್ನಿರದು. ಆ ಸಮಯದಲ್ಲಿ ಈ ವ್ಯವಸ್ಥೆಯಲ್ಲಿ ವೃದ್ಧರಾಗಿ ಮತ್ತು ಬಹುಶಃ ಸತ್ತು ಹೋದವರಿಗೆ, ತಮಗೆ ತೋರಿಸಲಾದ ಕಾಳಜಿ ಮತ್ತು ಗಮನದ ಸವಿ ನೆನಪುಗಳಿರುವುವು. ಇಂತಹ ವೃದ್ಧರು ಜೀವವನ್ನು ಮತ್ತು ದೇಹಶಕ್ತಿಯನ್ನು ಪುನಃ ಪಡೆದಂತೆ, ಯೆಹೋವನಿಗಾಗಿ ತೀಕ್ಷೈವಾದ ಪ್ರೀತಿಯನ್ನು ಮತ್ತು ಈ ಹಳೆಯ ವ್ಯವಸ್ಥೆಯಲ್ಲಿ ತಮ್ಮೊಂದಿಗೆ ತಮ್ಮ ಸಂಕಟಗಳ ಸಮಯದಲ್ಲಿ ಅಂಟಿಕೊಂಡಿದವ್ದರಿಗಾಗಿ ಆಳವಾದ ಕೃತಜ್ಞತೆಯನ್ನು ನಿಜವಾಗಿಯೂ ಅನುಭವಿಸುವರು.—ಹೋಲಿಸಿ ಲೂಕ 22:28.
ವಯಸ್ಸಾದವರನ್ನು ಈಗ ನೋಡಿಕೊಳ್ಳುವವರ ಕುರಿತೇನು? ಬಹಳ ಬೇಗನೆ, ಭೂಮಿಯ ಸಂಪೂರ್ಣ ನಿಯಂತ್ರಣವನ್ನು ರಾಜ್ಯವು ತೆಗೆದುಕೊಂಡಾಗ, ತಮ್ಮ ಕರ್ತವ್ಯವನ್ನು ತಾವು ಅಲಕ್ಷಿಸಲಿಲ್ಲ ಆದರೆ ವೃದ್ಧರಿಗೆ ಕ್ರಿಸ್ತೀಯ ಪ್ರೀತಿಯನ್ನು ತೋರಿಸುವ ಮೂಲಕ ದಿವ್ಯ ಭಕ್ತಿಯನ್ನು ಆಚರಿಸಿದೆವೆಂದು ಅವರು ಆನಂದ ಮತ್ತು ನೆಮ್ಮದಿಯಿಂದ ಹಿಂದಿನ ಘಟನೆಯ ಕಡೆಗೆ ನೋಡುವರು.—1 ತಿಮೊಥೆಯ 5:4.
[ಪುಟ 30 ರಲ್ಲಿರುವ ಚೌಕ]
ವೃದ್ಧರು ನಿಮ್ಮ ಸಂದರ್ಶನಗಳನ್ನು ಗಣ್ಯಮಾಡುವರು
ಸಾರುವ ಚಟುವಟಿಕೆಯ ತರುವಾಯ ಒಬ್ಬ ವೃದ್ಧನಿಗೆ ಬಹುಶಃ 15 ನಿಮಿಷಗಳ ಒಂದು ಭೇಟಿಯನ್ನು ಯೋಜಿಸುವ ಮೂಲಕ ಅಧಿಕ ಒಳಿತನ್ನು ಸಾಧಿಸಸಾಧ್ಯವಿದೆ. ಮುಂದಿನ ಅನುಭವವು ತೋರಿಸುವಂತೆ, ಅಂತಹ ಭೇಟಿಗಳನ್ನು ಯೋಗಕ್ಕೆ ಬಿಡದಿರುವುದು ಉತ್ತಮವಾಗಿದೆ.
ಬಾಗಿಲಿನಲ್ಲಿ ಒಬ್ಬ ವೃದ್ಧನನ್ನು ಸಂಭಾಷಣೆಯಲ್ಲಿ ತೊಡಗಿಸುತ್ತಾ, ಬ್ರೀಜಿಟ್ ಮತ್ತು ಹಾನೆಲೊರ್ ಒಟ್ಟಿಗೆ ಸಾರುತ್ತಿದ್ದರು. ಅವನು ಕೂಡ ಯೆಹೋವನ ಒಬ್ಬ ಸಾಕ್ಷಿ, ಅದೇ ಸಭೆಯ ಒಬ್ಬ ಸದಸ್ಯನೆಂದು ಕಂಡುಹಿಡಿಯುವ ಮುಂಚೆ ಅವನೊಂದಿಗೆ ಸಹೋದರಿಯರು ಐದು ನಿಮಿಷಗಳ ಕಾಲ ಮಾತಾಡಿದರು. ಎಂತಹ ಪೇಚಾಟ! ಆದರೆ ಅನುಭವವು ಸಕಾರಾತ್ಮಕ ವೈಶಿಷ್ಟ್ಯದೊಂದಿಗೆ ಕೊನೆಗೊಂಡಿತು. ಆ ಸಹೋದರನನ್ನು ಸಂದರ್ಶಿಸಲು ಮತ್ತು ಸಭಾ ಕೂಟಗಳನ್ನು ಹಾಜರಾಗುವಂತೆ ಅವನಿಗೆ ಸಹಾಯ ಮಾಡಲು, ಹ್ಯಾನೆಲೊರ್ ತತ್ಕ್ಷಣ ಯೋಜನೆಗಳನ್ನು ಮಾಡಿದಳು.
ನೀವು ಸಾರುವ ಟೆರಿಟೊರಿಯಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬ ವೃದ್ಧ ಪ್ರಚಾರಕನ ಹೆಸರು ಮತ್ತು ವಿಳಾಸ ನಿಮಗೆ ಗೊತ್ತಿದೆಯೊ? ಸಂಕ್ಷಿಪ್ತವಾದೊಂದು ಭೇಟಿಯನ್ನು ನೀಡಲು ನೀವು ಏರ್ಪಡಿಸಬಲ್ಲಿರೊ? ಅದು ಬಹಳವಾಗಿ ಗಣ್ಯಮಾಡಲ್ಪಡಬಹುದು.