ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್ಗಳು
ನವೆಂಬರ್ 2-8
ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 39-40
“ಯೆಹೋವನು ಹೇಳಿದ ಹಾಗೇ ಮಾಡಿದ ಮೋಶೆ”
(ವಿಮೋಚನಕಾಂಡ 39:32) ಈ ರೀತಿಯಲ್ಲಿ ದೇವದರ್ಶನದ ಗುಡಾರದ ಕೆಲಸವೆಲ್ಲಾ ಸಂಪೂರ್ತಿಯಾಯಿತು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಾಯೇಲ್ಯರು ಅದನ್ನು ಮಾಡಿದ್ದರು.
ಕಾವಲಿನಬುರುಜು11 9/15 ಪುಟ 27 ಪ್ಯಾರ 13
ಯೆಹೋವನು ನಿಮ್ಮನ್ನು ತನ್ನವರೆಂದು ಹೇಳುತ್ತಾನಾ?
13 ಮೋಶೆ ಕೋರಹನಂತಿರಲಿಲ್ಲ. ಅವನು “ಭೂಮಿಯ ಮೇಲಿರುವ ಎಲ್ಲಾ ಮನುಷ್ಯರಿಗಿಂತಲೂ ಬಹುಸಾತ್ವಿಕ” ವ್ಯಕ್ತಿಯಾಗಿದ್ದನು. (ಅರ. 12:3) ಯೆಹೋವನ ನಿರ್ದೇಶನಗಳನ್ನು ಚಾಚೂತಪ್ಪದೆ ಪಾಲಿಸುವ ಮೂಲಕ ತಾನು ಸಾತ್ವಿಕನು, ನಮ್ರನು ಎಂದು ರುಜುಪಡಿಸಿದನು. (ವಿಮೋ. 7:6; 40:16) ಯೆಹೋವನ ಕಾರ್ಯವಿಧಾನಗಳ ಬಗ್ಗೆ ಅವನು ಆಗಾಗ ಸಂದೇಹ ಎಬ್ಬಿಸಿದ ಬಗ್ಗೆಯಾಗಲಿ ಅವುಗಳನ್ನು ಪಾಲಿಸಲು ಅಸಾಧ್ಯವೆಂದು ಸೊಲ್ಲೆತ್ತಿದ ಕುರಿತಾಗಲಿ ಬೈಬಲಿನಲ್ಲಿ ಯಾವ ಸುಳಿವು ಇಲ್ಲ. ಈ ಉದಾಹರಣೆ ತಕ್ಕೊಳ್ಳಿ. ದೇವದರ್ಶನ ಗುಡಾರದ ನಿರ್ಮಾಣದ ಬಗ್ಗೆ ಚಿಕ್ಕಪುಟ್ಟ ವಿವರಗಳನ್ನೂ ಯೆಹೋವನು ಅವನಿಗೆ ನೀಡಿದ್ದನು. ಗುಡಾರದ ಬಟ್ಟೆಯಲ್ಲಿ ಯಾವ ಬಣ್ಣದ ದಾರ ಬಳಸಬೇಕು, ಎಷ್ಟು ಕುಣಿಕೆಗಳಿರಬೇಕು ಎಂಬೆಲ್ಲ ಸೂಕ್ಷ್ಮ ವಿವರಗಳು ಇದ್ದವು. (ವಿಮೋ. 26:1-6) ಈ ರೀತಿ ಸೂಕ್ಷ್ಮಾತಿಸೂಕ್ಷ್ಮ ವಿವರಗಳನ್ನು ದೇವರ ಸಂಘಟನೆಯಲ್ಲಿರುವ ಮೇಲ್ವಿಚಾರಕರೊಬ್ಬರು ನಿಮಗೆ ನೀಡುವಲ್ಲಿ ಹೇಗಾಗುವುದು? ಕೆಲವೊಮ್ಮೆ ಕಿರಿಕಿರಿ ಆಗುವುದಲ್ಲವೆ? ಆದರೆ ಯೆಹೋವ ದೇವರು ಪರಿಪೂರ್ಣ ಮೇಲ್ವಿಚಾರಕನಾಗಿದ್ದಾನೆ. ತನ್ನ ಸೇವಕರಲ್ಲಿ ಭರವಸೆಯಿಟ್ಟು ಧಾರಳವಾಗಿ ಕೆಲಸಗಳನ್ನು ವಹಿಸಿಕೊಡುತ್ತಾನೆ. ಸೂಕ್ಷ್ಮ ಮಾಹಿತಿ ನೀಡುವಲ್ಲಿ ಸದುದ್ದೇಶ ಇದ್ದೇ ಇರುತ್ತೆ. ಸ್ವಲ್ಪ ಗಮನಿಸಿ. ಯೆಹೋವನು ಇಷ್ಟೊಂದು ವಿವರಗಳನ್ನು ನೀಡುತ್ತಿದ್ದಾನೆಂದು ಮೋಶೆ ಕಿರಿಕಿರಿಗೊಳ್ಳಲಿಲ್ಲ. ನಿಷ್ಪ್ರಯೋಜಕ ವ್ಯಕ್ತಿಯಂತೆ ತನ್ನನ್ನು ಉಪಚರಿಸುತ್ತಿದ್ದಾನೆ, ಸ್ವಾತಂತ್ರ್ಯಕ್ಕಿಂತ ನಿರ್ಬಂಧವೇ ಹೆಚ್ಚಾಯಿತೆಂದು ಭಾವಿಸಲಿಲ್ಲ. “ಯೆಹೋವನು [ತನಗೆ] ಆಜ್ಞಾಪಿಸಿದಂತೆಯೇ” ಕೆಲಸಗಾರರು ಸಕಲವನ್ನೂ ಮಾಡಿಮುಗಿಸುವಂತೆ ನೋಡಿಕೊಂಡನು. (ವಿಮೋ. 39:32) ಎಂತಹ ನಮ್ರತೆ, ದೀನ ಸ್ವಭಾವ! ತಾನು ಮಾಡುತ್ತಿರುವುದು ಯೆಹೋವ ದೇವರ ಕೆಲಸ, ತಾನು ಆತನ ಕೈಯಲ್ಲಿ ಒಂದು ಸಾಧನವಷ್ಟೇ ಎಂದು ಮೋಶೆ ಅರಿತಿದ್ದನು.
(ವಿಮೋಚನಕಾಂಡ 39:43) ಅವರು ಮಾಡಿದ್ದ ಕೆಲಸವನ್ನು ಮೋಶೆ ಪರೀಕ್ಷಿಸಲಾಗಿ ಯೆಹೋವನ ಅಪ್ಪಣೆಯಂತೆಯೇ ಅವರು ಎಲ್ಲವನ್ನು ಮಾಡಿ ಮುಗಿಸಿದರೆಂದು ತಿಳುಕೊಂಡು ಅವರನ್ನು ಆಶೀರ್ವದಿಸಿದನು.
(ವಿಮೋಚನಕಾಂಡ 40:1, 2) ಯೆಹೋವನು ಮೋಶೆಗೆ— 2 ಮೊದಲನೆಯ ತಿಂಗಳಿನ ಪ್ರಥಮದಿನದಲ್ಲಿ ನೀನು ದೇವದರ್ಶನದ ಗುಡಾರವನ್ನು ಎತ್ತಿ ನಿಲ್ಲಿಸಬೇಕು.
(ವಿಮೋಚನಕಾಂಡ 40:16) ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆ ಎಲ್ಲವನ್ನು ಮಾಡಿದನು.
ಕಾವಲಿನಬುರುಜು05 7/15 ಪುಟ 27 ಪ್ಯಾರ 3
ನೀವು ಎಲ್ಲ ವಿಷಯಗಳಲ್ಲಿ ನಂಬಿಗಸ್ತರಾಗಿದ್ದೀರೊ?
3 “ಮೋಶೆಯು ಸೇವಕನಾಗಿ ದೇವರ ಮನೆಯಲ್ಲೆಲ್ಲಾ ನಂಬಿಗಸ್ತನಾಗಿದ್ದನು” ಎಂದು ಇಬ್ರಿಯ 3:5 ತಿಳಿಸುತ್ತದೆ. ಪ್ರವಾದಿಯಾದ ಮೋಶೆಯನ್ನು ಯಾವುದು ನಂಬಿಗಸ್ತನನ್ನಾಗಿ ಮಾಡಿತು? ದೇವದರ್ಶನ ಗುಡಾರದ ನಿರ್ಮಾಣ ಹಾಗೂ ಸ್ಥಾಪನೆಯಲ್ಲಿ, “ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆ ಎಲ್ಲವನ್ನು ಮಾಡಿದನು.” (ವಿಮೋಚನಕಾಂಡ 40:16) ಯೆಹೋವನ ಆರಾಧಕರಾಗಿರುವ ನಾವು ವಿಧೇಯತೆಯಿಂದ ಆತನ ಸೇವೆಮಾಡುವ ಮೂಲಕ ನಂಬಿಗಸ್ತಿಕೆಯನ್ನು ತೋರಿಸುತ್ತೇವೆ. ನಾವು ಕಷ್ಟಕರವಾದ ಪರೀಕ್ಷೆಗಳನ್ನು ಅಥವಾ ಗಂಭೀರವಾದ ಶೋಧನೆಗಳನ್ನು ಎದುರಿಸುತ್ತಿರುವಾಗ ಯೆಹೋವನಿಗೆ ನಿಷ್ಠರಾಗಿ ಉಳಿಯುವುದು ಇದರಲ್ಲಿ ಒಳಗೂಡಿದೆ ಎಂಬುದಂತೂ ನಿಶ್ಚಯ. ಆದರೂ, ದೊಡ್ಡ ಪರೀಕ್ಷೆಗಳೊಂದಿಗೆ ವ್ಯವಹರಿಸುವುದರಲ್ಲಿ ಸಫಲರಾಗುವುದು ತಾನೇ ನಮ್ಮ ನಂಬಿಗಸ್ತಿಕೆಯನ್ನು ನಿರ್ಧರಿಸುವ ಏಕಮಾತ್ರ ಅಂಶವಾಗಿರುವುದಿಲ್ಲ. ಯೇಸು ಹೇಳಿದ್ದು: “ಸ್ವಲ್ಪವಾದದ್ದರಲ್ಲಿ ನಂಬಿಗಸ್ತನಾದವನು ಬಹಳವಾದದ್ದರಲ್ಲಿಯೂ ನಂಬಿಗಸ್ತನಾಗುವನು; ಸ್ವಲ್ಪವಾದದ್ದರಲ್ಲಿ ಅನ್ಯಾಯಗಾರನಾದವನು ಬಹಳವಾದದ್ದರಲ್ಲಿಯೂ ಅನ್ಯಾಯಗಾರನಾಗುವನು.” (ಲೂಕ 16:10) ಅಲ್ಪವೆಂದು ತೋರುವ ವಿಷಯಗಳಲ್ಲಿಯೂ ನಾವು ನಂಬಿಗಸ್ತರಾಗಿ ಉಳಿಯಬೇಕು.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
(ವಿಮೋಚನಕಾಂಡ 39:34) ಹದಮಾಡಿರುವ ಕೆಂಪುಬಣ್ಣದ ಕುರಿದೊಗಲುಗಳಿಂದುಂಟಾದ ಮೇಲ್ಹೊದಿಕೆಯು ಕಡಲುಹಂದಿಯ ತೊಗಲುಗಳಿಂದುಂಟಾದ ಮೇಲ್ಹೊದಿಕೆಯು, [ಮಹಾಪವಿತ್ರಸ್ಥಾನವನ್ನು] ಮರೆಮಾಡುವ ತೆರೆಯು ಇವುಗಳನ್ನೂ;
it-2-E ಪುಟ 884 ಪ್ಯಾರ 3
ಕಡಲುಹಂದಿಯ ಚರ್ಮ
ಇದು ಇಸ್ರಾಯೇಲ್ಯರಿಗೆ ಹೇಗೆ ಸಿಕ್ಕಿರಬಹುದು? ಬೈಬಲಿನ ಮೂಲಪ್ರತಿಯಲ್ಲಿರೋ ತಕಾಶ್ ಅನ್ನೋ ಪದ ಕಡಲುಹಂದಿಯನ್ನು (ಸೀಲ್) ಸೂಚಿಸೋದಾದ್ರೆ ಒಂದು ಪ್ರಶ್ನೆ ಬರುತ್ತೆ. ಈ ಕಡಲುಹಂದಿಯ ಚರ್ಮ ಇಸ್ರಾಯೇಲ್ಯರಿಗೆ ಹೇಗೆ ಸಿಕ್ಕಿರಬಹುದು? ಕಡಲುಹಂದಿಗಳು ಸಾಮಾನ್ಯವಾಗಿ ಆರ್ಕ್ಟಿಕ್ ಮತ್ತು ಅಂಟಾರ್ಟಿಕ್ನ ಕೆಲವು ಭಾಗಗಳಲ್ಲಿ ಕಂಡುಬರುತ್ತವೆ. ಆದ್ರೆ ಕೆಲವು ಕಡಲುಹಂದಿಗಳು ಬೆಚ್ಚಗಿನ ವಾತಾವರಣದಲ್ಲಿ ಇರೋಕೆ ಇಷ್ಟಪಡುತ್ತವೆ. ಇಂದು ಸಹ ಮೆಡಿಟರೇನಿಯನ್ ಸಮುದ್ರದ ಕೆಲವು ಭಾಗಗಳಲ್ಲಿ ಮತ್ತು ಎಲ್ಲಿ ಹೆಚ್ಚು ಚಳಿ ಇರಲ್ವೋ ಅಂಥ ಸಮುದ್ರಗಳ ಭಾಗಗಳಲ್ಲಿ ಒಂದು ಜಾತಿಯ ಕಡಲು ಹಂದಿ ಕಂಡುಬರುತ್ತೆ. ಅವನ್ನು ಮಾಂಕ್ ಸೀಲ್ ಎಂದು ಕರೆಯಲಾಗುತ್ತೆ. ನೂರಾರು ವರ್ಷಗಳಿಂದ ಮನುಷ್ಯರು ಕಡಲುಹಂದಿಗಳನ್ನ ಬೇಟೆಯಾಡ್ತಾ ಬಂದಿರೋದ್ರಿಂದ ಅವುಗಳ ಸಂಖ್ಯೆ ಈಗ ಕಡಿಮೆಯಾಗಿದೆ. ಆದ್ರೆ ಬೈಬಲ್ ಸಮಯದಲ್ಲಿ ಅವು ಮೆಡಿಟರೇನಿಯನ್ ಸಮುದ್ರದಲ್ಲಿ ಮತ್ತು ಕೆಂಪು ಸಮುದ್ರದಲ್ಲಿ ತುಂಬ ಸಂಖ್ಯೆಯಲ್ಲಿ ಕಂಡುಬರುತ್ತಿದ್ದವು. 1832 ರಲ್ಲಿ ಬರೆಯಲಾದ ಒಂದು ಪುಸ್ತಕದಲ್ಲಿ ಅದರ ಬಗ್ಗೆ ಹೀಗೆ ತಿಳಿಸಲಾಗಿದೆ: “ಸೀನಾಯಿ ಪರ್ವತದ ಹತ್ತಿರ ಕೆಂಪು ಸಮುದ್ರದಲ್ಲಿ ಇದ್ದ ಚಿಕ್ಕಚಿಕ್ಕ ದ್ವೀಪಗಳಲ್ಲಿ ಕಡಲುಹಂದಿಗಳು ಇದ್ದವು.” (ಕಾಲ್ಮೆಟ್ರ ಡಿಕ್ಷನರಿ ಆಫ್ ದ ಹೋಲಿ ಬೈಬಲ್ ಪುಟ 139, ಇಂಗ್ಲಿಷ್)—ಲಂಡನ್ನಿನ ಎ.ಜೆ. ಪೊಲ್ಲೋಕ್ ಬರೆದ ದ ಟ್ಯಾಬರ್ನ್ಯಾಕಲ್ಸ್ ಟಿಪಿಕಲ್ ಟೀಚಿಂಗ್ನ ಪುಟ 47 ಸಹ ನೋಡಿ.
(ವಿಮೋಚನಕಾಂಡ 40:34) ಆಗ ಮೇಘವು ದೇವದರ್ಶನದ ಗುಡಾರವನ್ನು ಮುಚ್ಚಿತು; ಯೆಹೋವನ ತೇಜಸ್ಸು ಗುಡಾರವನ್ನು ತುಂಬಿತು.
ಕಾವಲಿನಬುರುಜು15 7/15 ಪುಟ 21 ಪ್ಯಾರ 1
ನಿಮ್ಮ ಕೆಲಸವನ್ನು ಜನ ನೋಡಿ ಮೆಚ್ಚುವುದು ಮುಖ್ಯನಾ?
ದೇವಗುಡಾರದ ಕೆಲಸವೆಲ್ಲಾ ಮುಗಿದ ಮೇಲೆ ಮೇಘವೊಂದು “ದೇವದರ್ಶನದ ಗುಡಾರವನ್ನು ಮುಚ್ಚಿತು; ಯೆಹೋವನ ತೇಜಸ್ಸು ಗುಡಾರವನ್ನು ತುಂಬಿತು.” (ವಿಮೋ. 40:34) ಇದು ಯೆಹೋವನ ಒಪ್ಪಿಗೆಯ ಸ್ಪಷ್ಟ ಸೂಚನೆಯಲ್ಲವೇ! ಆ ಕ್ಷಣ ಬೆಚಲೇಲ ಮತ್ತು ಒಹೊಲೀಯಾಬರಿಗೆ ಹೇಗೆ ಅನಿಸಿರಬಹುದೆಂದು ನೆನಸುತ್ತೀರಿ? ತಮ್ಮ ಕೈಯಿಂದ ಮಾಡಿದ ವಸ್ತುಗಳ ಮೇಲೆ ಅವರ ಹೆಸರು ಕೆತ್ತಲ್ಪಟ್ಟಿರಲಿಲ್ಲ. ಆದರೂ ಅವರ ಶ್ರಮದ ಮೇಲೆ ಯೆಹೋವನ ಆಶೀರ್ವಾದವಿತ್ತೆಂದು ತಿಳಿದಾಗ ಅವರಿಗೆ ಸಂತೃಪ್ತಿ ಸಿಕ್ಕಿರಬೇಕು. (ಜ್ಞಾನೋ. 10:22) ಆ ವಸ್ತುಗಳು ಮುಂದಕ್ಕೆ ಯೆಹೋವನ ಸೇವೆಯಲ್ಲಿ ಬಳಸಲ್ಪಡುವುದನ್ನು ನೋಡಿ ಅವರಿಗೆ ಸಂತೋಷ ಆಗಿರಬೇಕು. ಹೊಸ ಲೋಕದಲ್ಲಿ ಬೆಚಲೇಲ, ಒಹೊಲೀಯಾಬರು ಪುನಃ ಜೀವಕ್ಕೆ ಬಂದಾಗ ದೇವಗುಡಾರವನ್ನು ಸತ್ಯ ಆರಾಧನೆಯಲ್ಲಿ 500 ವರ್ಷ ಬಳಸಲಾಯಿತೆಂದು ತಿಳಿದಾಗ ಅವರ ಮೈಜುಂ ಎನ್ನುವುದಲ್ಲವೇ!
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಕಾವಲಿನಬುರುಜು16.04 ಪುಟ 29 ಪ್ಯಾರ 8-10
ವಿಭಜಿತ ಲೋಕದಲ್ಲಿ ತಟಸ್ಥರಾಗಿ ಉಳಿಯಿರಿ
8 ತಟಸ್ಥರಾಗಿ ಉಳಿಯುವ ಎರಡನೇ ವಿಧ, “ಹಾವುಗಳಂತೆ ಜಾಗರೂಕರೂ, ಆದರೆ ಪಾರಿವಾಳಗಳಂತೆ ನಿಷ್ಕಪಟಿಗಳೂ” ಆಗಿರುವ ಮೂಲಕವೇ. (ಮತ್ತಾಯ 10:16, 17 ಓದಿ.) ನಾವು ‘ಜಾಗರೂಕರು’ ಆಗಿರುವುದು ಹೇಗೆ? ಮುಂದೆ ಬರುವ ಕಷ್ಟಗಳ ಬಗ್ಗೆ ಮೊದಲೇ ಯೋಚಿಸುವ ಮೂಲಕ. ‘ನಿಷ್ಕಪಟಿಗಳು’ ಆಗಿರುವುದು ಹೇಗೆ? ಆ ಕಷ್ಟದ ಸನ್ನಿವೇಶಗಳಲ್ಲಿ ತಟಸ್ಥರಾಗಿ ಉಳಿಯುವ ಮೂಲಕ. ನಾವೀಗ ಕೆಲವು ಸನ್ನಿವೇಶಗಳನ್ನು ಗಮನಿಸೋಣ. ಆ ಸನ್ನಿವೇಶಗಳಲ್ಲಿ ತಟಸ್ಥರಾಗಿರುವುದು ಹೇಗೆಂದು ಕಲಿಯೋಣ.
9 ನಮ್ಮ ಮಾತು. ಜನರು ರಾಜಕೀಯ ವಿಷಯಗಳನ್ನು ಮಾತನಾಡಲು ಶುರುಮಾಡುವಾಗ ನಾವು ತುಂಬ ಜಾಗರೂಕರಾಗಿರಬೇಕು. ಉದಾಹರಣೆಗೆ, ಈ ಸನ್ನಿವೇಶದ ಬಗ್ಗೆ ಯೋಚಿಸಿ. ದೇವರ ರಾಜ್ಯದ ಕುರಿತು ಇತರರಿಗೆ ತಿಳಿಸುತ್ತಿರುವಾಗ ಒಂದು ನಿರ್ದಿಷ್ಟ ರಾಜಕೀಯ ಪಕ್ಷದ ಅಥವಾ ನಾಯಕನ ಯೋಜನೆ, ಅಭಿಪ್ರಾಯಗಳನ್ನು ನೀವು ಮೆಚ್ಚುತ್ತೀರಿ ಎಂದಾಗಲಿ ಮೆಚ್ಚುವುದಿಲ್ಲ ಎಂದಾಗಲಿ ಹೇಳಬೇಡಿ. ಕಷ್ಟಗಳನ್ನು ಬಗೆಹರಿಸಲು ಮಾನವ ಸರ್ಕಾರಗಳು ಮಾಡಿರುವ ಯೋಜನೆಗಳ ಬಗ್ಗೆ ಮಾತನಾಡದೆ ದೇವರ ರಾಜ್ಯ ಆ ಕಷ್ಟಗಳನ್ನು ಹೇಗೆ ಶಾಶ್ವತವಾಗಿ ತೆಗೆದುಹಾಕಲಿದೆ ಎಂದು ಬೈಬಲಿನಿಂದ ತೋರಿಸಿ. ಒಂದುವೇಳೆ ಗರ್ಭಪಾತ, ಸಮಲಿಂಗ ವಿವಾಹ ಮುಂತಾದ ವಿಷಯಗಳ ಬಗ್ಗೆ ಜನರು ವಾದಕ್ಕಿಳಿದರೆ ಅದರ ಬಗ್ಗೆ ಬೈಬಲ್ ಏನು ಹೇಳುತ್ತದೆ, ನೀವದನ್ನು ಹೇಗೆ ಅನ್ವಯಿಸಲು ಪ್ರಯತ್ನಿಸುತ್ತೀರಿ ಎಂದು ತಿಳಿಸಿ. ಯಾರಾದರೂ ‘ಆ ನಿಯಮ ತೆಗೆದುಹಾಕಿ ಬೇರೆ ನಿಯಮ ತರಬೇಕು’ ಎಂದು ಹೇಳಿದರೆ ನಾವಾಗ ‘ಹೌದು ಹೌದು ನೀವು ಹೇಳೋದು ಸರಿ’ ಎಂದಾಗಲಿ ‘ಇಲ್ಲ, ಹಾಗಲ್ಲ ಹೀಗೆ’ ಎಂದಾಗಲಿ ಹೇಳಬಾರದು. ನಮ್ಮ ಯೋಚನೆಯನ್ನು ಅವರು ಒಪ್ಪಿಕೊಳ್ಳುವಂತೆ ಸಹ ಒತ್ತಾಯಿಸಬಾರದು.
10 ವಾರ್ತಾಮಾಧ್ಯಮ. ಕೆಲವು ವಾರ್ತಾಮಾಧ್ಯಮಗಳು ನಡೆದ ಘಟನೆಯ ಬಗ್ಗೆ ಬಣ್ಣಹಚ್ಚಿ ಪಕ್ಷವಹಿಸಿ ಮಾತಾಡುತ್ತವೆ. ವಾರ್ತಾಮಾಧ್ಯಮಗಳು ಸರ್ಕಾರದ ನಿಯಂತ್ರಣದಲ್ಲಿರುವ ದೇಶಗಳಲ್ಲಂತೂ ಇದು ಸತ್ಯ. ವಾರ್ತಾ ಸಂಸ್ಥೆಗಳು ಅಥವಾ ವರದಿಗಾರರು ಬೇರೆ ಬೇರೆ ಪಕ್ಷವಹಿಸಿದರೂ ಅವರ ಯೋಚನೆ ನಮ್ಮಲ್ಲಿ ಬಾರದಂತೆ ನೋಡಿಕೊಳ್ಳಬೇಕು. ಹೀಗೆ ಕೇಳಿಕೊಳ್ಳಿ: ‘ಈ ವರದಿಗಾರ ಹೇಳೋದು ನನಗ್ಯಾಕೆ ಇಷ್ಟ? ಅವನು ಹೇಳುವ ರಾಜಕೀಯ ವಿಚಾರ ನಾನು ಒಪ್ಪುವುದರಿಂದನಾ?’ ತಟಸ್ಥರಾಗಿರಬೇಕಾದರೆ ಪಕ್ಷವಹಿಸಿ ಮಾತಾಡುವ ವರದಿಗಳನ್ನು ವೀಕ್ಷಿಸಬೇಡಿ, ಓದಬೇಡಿ. ಪಕ್ಷವಹಿಸದ ವರದಿಗಳನ್ನು ಕಂಡುಹಿಡಿಯಿರಿ. ಎಲ್ಲಕ್ಕಿಂತ ಮುಖ್ಯವಾಗಿ, ನೀವು ಕೇಳಿಸಿಕೊಳ್ಳುವ ವಿಷಯ ಬೈಬಲಿನ ‘ಸ್ವಸ್ಥಕರವಾದ ಮಾತುಗಳ ನಮೂನೆಗೆ’ ಅನುಸಾರವಾಗಿ ಇದೆಯಾ ಎಂದು ಹೋಲಿಸಿ ನೋಡಿ.—2 ತಿಮೊ. 1:13.
ನವೆಂಬರ್ 9-15
ಬೈಬಲಿನಲ್ಲಿರುವ ರತ್ನಗಳು | ಯಾಜಕಕಾಂಡ 1-3
“ಯಜ್ಞಗಳನ್ನ ಯಾಕೆ ಅರ್ಪಿಸುತ್ತಿದ್ರು?”
(ಯಾಜಕಕಾಂಡ 1:3) ಅವನು ದನವನ್ನು ಸರ್ವಾಂಗಹೋಮವಾಗಿ ಸಮರ್ಪಿಸುವದಾದರೆ ಪೂರ್ಣಾಂಗವಾದ ಗಂಡನ್ನು ತರಬೇಕು. ತನಗೆ ಯೆಹೋವನು ಒಲೆಯುವಂತೆ ದೇವದರ್ಶನದ ಗುಡಾರದ ಬಾಗಲಿಗೆ ಅದನ್ನು ತರಬೇಕು.
(ಯಾಜಕಕಾಂಡ 2:1) ಯಾವನಾದರೂ ಯೆಹೋವನಿಗೆ ಧಾನ್ಯ ನೈವೇದ್ಯ ಮಾಡಬೇಕೆಂದಿದ್ದರೆ ಅದು ಗೋದಿಹಿಟ್ಟಾಗಿರಬೇಕು. ಅವನು ಅದರ ಮೇಲೆ ಎಣ್ಣೆಯನ್ನು ಹೊಯಿದು ಧೂಪವನ್ನಿಟ್ಟು
(ಯಾಜಕಕಾಂಡ 2:12) ಅವುಗಳನ್ನು ಪ್ರಥಮಫಲವಾಗಿ ಯೆಹೋವನಿಗೆ ಸಮರ್ಪಿಸಬಹುದೇ ಹೊರತು ಯಜ್ಞವೇದಿಯ ಮೇಲೆ ಸುವಾಸನೆಯನ್ನುಂಟುಮಾಡುವದಕ್ಕಾಗಿ ಹೋಮಮಾಡಕೂಡದು.
it-2-E ಪುಟ 525
ಯಜ್ಞಗಳು
ಸರ್ವಾಂಗಹೋಮ. ಸರ್ವಾಂಗಹೋಮಕ್ಕಾಗಿ ಬಲಿ ಕೊಡುತ್ತಿದ್ದ ಪ್ರಾಣಿಯನ್ನು ದೇವರಿಗೆ ಸಂಪೂರ್ಣವಾಗಿ ಅರ್ಪಿಸಬೇಕಿತ್ತು. ಆ ಪ್ರಾಣಿಯ ಯಾವ ಭಾಗವನ್ನೂ ಯಜ್ಞ ಕೊಡ್ತಿದ್ದ ವ್ಯಕ್ತಿ ಇಟ್ಟುಕೊಳ್ಳಬಾರದಿತ್ತು. (ನ್ಯಾಯ 11:30, 31, 39, 40 ಹೋಲಿಸಿ.) ಕೆಲವೊಮ್ಮೆ ಸರ್ವಾಂಗಹೋಮವನ್ನು ದೋಷಪರಿಹಾರಕ ಯಜ್ಞದ ಜೊತೆ ಅರ್ಪಿಸಲಾಗುತ್ತಿತ್ತು. ದೋಷಪರಿಹಾರಕ ಯಜ್ಞವನ್ನು ಯೆಹೋವನು ಸ್ವೀಕರಿಸಬೇಕು ಅಂತ ಬೇಡಿಕೊಳ್ಳಲಿಕ್ಕಾಗಿ ಅಥವಾ ಈ ಯಜ್ಞವನ್ನು ಯೆಹೋವನು ಸ್ವೀಕರಿಸಿದ್ದಾನೆ ಅನ್ನೋದನ್ನ ಖಚಿತಪಡಿಸಿಕೊಳ್ಳಲಿಕ್ಕಾಗಿ ಸರ್ವಾಂಗಹೋಮವನ್ನು ಅರ್ಪಿಸಬೇಕಿತ್ತು. ಒಂದರ್ಥದಲ್ಲಿ ಯೇಸು “ಸರ್ವಾಂಗಹೋಮ” ಆಗಿದ್ದಾನೆ. ಯಾಕಂದ್ರೆ ಆತನು ತನ್ನನ್ನು ದೇವರಿಗೆ ಪೂರ್ತಿಯಾಗಿ ಅರ್ಪಿಸಿಕೊಂಡನು.
it-2-E ಪುಟ 528 ಪ್ಯಾರ 4
ಯಜ್ಞಗಳು
ಧಾನ್ಯನೈವೇದ್ಯ. ಧಾನ್ಯನೈವೇದ್ಯವನ್ನು ಸಮಾಧಾನ ಯಜ್ಞ, ಸರ್ವಾಂಗಹೋಮ ಮತ್ತು ದೋಷಪರಿಹಾರಕ ಯಜ್ಞದ ಜೊತೆ ಕೊಡಲಾಗುತ್ತಿತ್ತು. ಅಷ್ಟೇ ಅಲ್ಲ, ಅದನ್ನ ಪ್ರಥಮಫಲವಾಗಿಯೂ ಅರ್ಪಿಸಲಾಗುತ್ತಿತ್ತು. ಕೆಲವೊಮ್ಮೆ ಈ ನೈವೇದ್ಯವನ್ನು ಪ್ರತ್ಯೇಕವಾಗಿಯೂ ಅರ್ಪಿಸಲಾಗುತ್ತಿತ್ತು. (ವಿಮೋ 29:40-42; ಯಾಜ 23:10-13, 15-18; ಅರ 15:8, 9, 22-24; 28:9, 10, 20, 26-28; ಅಧ್ಯಾ 29) ಯೆಹೋವನು ಅನೇಕ ವಿಧಗಳಲ್ಲಿ ಸಮೃದ್ಧವಾಗಿ ಆಶೀರ್ವದಿಸಿರೋದಕ್ಕೆ ಕೃತಜ್ಞನಾಗಿದ್ದೇನೆ ಅಂತ ತೋರಿಸಿಕೊಡಲಿಕ್ಕಾಗಿ ಒಬ್ಬ ವ್ಯಕ್ತಿ ಈ ಯಜ್ಞವನ್ನ ಕೊಡ್ತಿದ್ದ. ಈ ಯಜ್ಞದ ಜೊತೆ ಎಣ್ಣೆ ಮತ್ತು ಧೂಪ (ಪರಿಮಳ ಬೀರುವ ಪದಾರ್ಥ) ಇರುತ್ತಿತ್ತು. ಹಿಟ್ಟು, ಸುಟ್ಟತೆನೆ, ಹೋಳಿಗೆಯಾಕಾರ ಅಥವಾ ಕಡುಬಿನಾಕಾರದ ಪದಾರ್ಥಗಳನ್ನ ಧಾನ್ಯನೈವೇದ್ಯವಾಗಿ ಕೊಡಲಾಗುತ್ತಿತ್ತು. ಇದನ್ನ ಒಲೆಯಲ್ಲಿ ಅಥವಾ ಕಬ್ಬಿಣದ ಹಂಚಿನ ಮೇಲೆ ಅಥವಾ ಬಾಂಡ್ಲಿಯಲ್ಲಿ ಸುಡಲಾಗುತ್ತಿತ್ತು. ಈ ಧಾನ್ಯನೈವೇದ್ಯದ ಸ್ವಲ್ಪ ಭಾಗವನ್ನು ಸರ್ವಾಂಗಹೋಮದ ವೇದಿಯ ಮೇಲೆ ಇಡಲಾಗುತ್ತಿತ್ತು. ಇನ್ನು ಸ್ವಲ್ಪ ಭಾಗವನ್ನು ಯಾಜಕರು ತಿನ್ನುತ್ತಿದ್ದರು. ಒಂದುವೇಳೆ ಸಮಾಧಾನಯಜ್ಞದ ಜೊತೆ ಧಾನ್ಯನೈವೇದ್ಯವನ್ನು ಅರ್ಪಿಸೋದಾದ್ರೆ ಆ ಯಜ್ಞವನ್ನು ಅರ್ಪಿಸುತ್ತಿದ್ದ ವ್ಯಕ್ತಿ ಸಹ ಇದ್ರಲ್ಲಿ ಸ್ವಲ್ಪ ಭಾಗವನ್ನ ತಿನ್ನುತ್ತಿದ್ದ. (ಯಾಜ 6:14-23; 7:11-13; ಅರ 18:8-11) ವೇದಿಯ ಮೇಲೆ ಧಾನ್ಯನೈವೇದ್ಯವಾಗಿ ಅರ್ಪಿಸುತ್ತಿದ್ದ ಯಾವ ಪದಾರ್ಥದಲ್ಲಿಯೂ ಹುಳಿ ಅಥವಾ ‘ಸಿಹಿಪದಾರ್ಥವನ್ನು’ (ಇಲ್ಲವೇ “ಜೇನು,” ಅಂದರೆ ಬಹುಶಃ ಇದು ಅಂಜೂರದ ರಸ ಅಥವಾ ಹಣ್ಣುಗಳ ರಸ) ಬೆರೆಸಬಾರದಿತ್ತು. ಹಾಗೆ ಬೆರೆಸಿದಲ್ಲಿ ಧಾನ್ಯನೈವೇದ್ಯ ಹುಳಿಯಾಗೋ ಸಾಧ್ಯತೆ ಇರ್ತಿತ್ತು.—ಯಾಜ 2:1-16.
(ಯಾಜಕಕಾಂಡ 3:1) ಯಾವನಾದರೂ ಸಮಾಧಾನಯಜ್ಞಮಾಡಬೇಕಾದರೆ ಅವನು ಸಮರ್ಪಿಸುವ ಪಶುವು ದನವಾಗಿದ್ದ ಪಕ್ಷಕ್ಕೆ ಅದು ಗಂಡಾಗಲಿ ಹೆಣ್ಣಾಗಲಿ ಪೂರ್ಣಾಂಗವಾಗಿಯೇ ಇರಬೇಕು.
it-2-E ಪುಟ 526 ಪ್ಯಾರ 1
ಯಜ್ಞಗಳು
ಸಮಾಧಾನ ಯಜ್ಞ. ಯೆಹೋವನು ಸಮಾಧಾನ ಯಜ್ಞವನ್ನು ಸ್ವೀಕರಿಸಿದಾಗ ಅದು, ಆ ಯಜ್ಞ ಕೊಟ್ಟವನು ಮತ್ತು ಯೆಹೋವನ ಮಧ್ಯೆ ಸಮಾಧಾನ ಸಂಬಂಧ ಇದೆ ಅನ್ನೋದನ್ನ ಸೂಚಿಸ್ತಿತ್ತು. ಆ ಯಜ್ಞವನ್ನು ಕೊಟ್ಟವನು ಮತ್ತು ಅವನ ಮನೆಯವರು (ದೇವದರ್ಶನ ಗುಡಾರದ ಅಂಗಳದಲ್ಲಿ ಅಥವಾ ಯೆಹೂದಿ ಸಂಪ್ರದಾಯದ ಪ್ರಕಾರ ಅಂಗಳದಲ್ಲಿ ಹಾಕಲಾದ ಚಪ್ಪರಗಳಲ್ಲಿ, ದೇವಾಲಯ ಕಟ್ಟಿದ ನಂತ್ರ ಭೋಜನ ಕೋಣೆಗಳಲ್ಲಿ) ಊಟ ಮಾಡುತ್ತಿದ್ದರು. ಈ ಯಜ್ಞದಲ್ಲಿ ಒಂದು ಭಾಗವನ್ನ ಯಜ್ಞ ಕೊಟ್ಟ ಯಾಜಕನು ತಗೊಳ್ಳುತ್ತಿದ್ದನು. ಇನ್ನೊಂದು ಭಾಗವನ್ನು ಅಲ್ಲಿ ಕೆಲಸ ಮಾಡುತ್ತಿದ್ದ ಯಾಜಕರು ತಗೊಳ್ಳುತ್ತಿದ್ದರು. ಯಜ್ಞದ ಪ್ರಾಣಿಯ ಕೊಬ್ಬನ್ನು ಸುಡುವಾಗ ಅದ್ರಿಂದ ಬರುತ್ತಿದ್ದ ಸುವಾಸನೆಯನ್ನು ಯೆಹೋವನು ಸ್ವೀಕರಿಸುತ್ತಿದ್ದನು. ಪ್ರಾಣಿಯ ರಕ್ತವು ಜೀವವನ್ನು ಸೂಚಿಸುತ್ತಿತ್ತು. ಅದನ್ನು ಕೂಡ ಯೆಹೋವನಿಗೆ ಯಜ್ಞವಾಗಿ ಅರ್ಪಿಸಲಾಗುತ್ತಿತ್ತು. ಹೀಗೆ ಯಾಜಕರು, ಆ ಯಜ್ಞವನ್ನು ಕೊಟ್ಟವರು ಮತ್ತು ಯೆಹೋವ ದೇವರು ಎಲ್ರೂ ಸೇರಿ ಒಟ್ಟಾಗಿ ಊಟ ಮಾಡಿದ ಹಾಗೆ ಇರುತ್ತಿತ್ತು. ಇದು ಒಂದರ್ಥದಲ್ಲಿ ಅವರ ಮಧ್ಯೆ ಸಮಾಧಾನ ಸಂಬಂಧ ಇದೆ ಅನ್ನೋದನ್ನ ಸೂಚಿಸುತ್ತಿತ್ತು. ಯಜ್ಞವಾಗಿ ಅರ್ಪಿಸಿದ್ದನ್ನು ತಿನ್ನುತ್ತಿದ್ದ ವ್ಯಕ್ತಿ ಅಶುದ್ಧನಾಗಿದ್ದರೆ (ಅಂದ್ರೆ ಧರ್ಮಶಾಸ್ತ್ರದಲ್ಲಿ ತಿಳಿಸಲಾಗಿರೋ ಯಾವುದೇ ಅಶುದ್ಧತೆ ಅವನಲ್ಲಿ ಇದ್ದರೆ) ಅಥವಾ ಯಜ್ಞಕ್ಕೆ ಕೊಟ್ಟ ಪ್ರಾಣಿಯ ಮಾಂಸವನ್ನು ಒಬ್ಬ ವ್ಯಕ್ತಿ ಮೂರನೇ ದಿನನೂ ಇಟ್ಟು ತಿನ್ನೋದಾದ್ರೆ (ಬೇಸಗೆ ಕಾಲದಲ್ಲಿ ಅದು ಬೇಗ ಹಾಳಾಗ್ತಿತ್ತು) ಅವನನ್ನು ಕುಲದಿಂದ ತೆಗೆದುಹಾಕಬೇಕಿತ್ತು. ಯಾಕಂದ್ರೆ ಅವನು ಹಾಗೆ ಮಾಡೋದು ಪರಿಶುದ್ಧ ವಸ್ತುಗಳ ಕಡೆಗೆ ಅವನಿಗೆ ಗೌರವ ಇಲ್ಲ ಅನ್ನೋದನ್ನ ತೋರಿಸಿಕೊಡ್ತಿತ್ತು.—ಯಾಜ 7:16-21; 19:5-8.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
(ಯಾಜಕಕಾಂಡ 2:13) ಎಲ್ಲಾ ನೈವೇದ್ಯ ಪದಾರ್ಥಗಳಿಗೂ ಉಪ್ಪುಹಾಕಿ ಸಮರ್ಪಿಸಬೇಕು. ಉಪ್ಪು ಯೆಹೋವನ ಸಂಗಡ ನಿಮಗಿರುವ ಒಡಂಬಡಿಕೆಯನ್ನು ಸೂಚಿಸುವದರಿಂದ ಅದು ಯಾವ ನೈವೇದ್ಯದ್ರವ್ಯವಾದರೂ ಉಪ್ಪಿಲ್ಲದೆ ಇರಬಾರದು. ನೀವು ಅರ್ಪಿಸುವ ಎಲ್ಲಾ ಪದಾರ್ಥಗಳಲ್ಲಿಯೂ ಉಪ್ಪು ಸೇರೇ ಇರಬೇಕು.
(ಯೆಹೆಜ್ಕೇಲ 43:24) ನೀನು ಅವುಗಳನ್ನು ಯೆಹೋವನಿಗೆ ಸಮರ್ಪಿಸಲು ಯಾಜಕರು ಅವುಗಳ ಮೇಲೆ ಉಪ್ಪನ್ನು ಚೆಲ್ಲಿ ಯೆಹೋವನಿಗಾಗಿ ಸರ್ವಾಂಗಹೋಮ ಮಾಡಬೇಕು.
ಕಾವಲಿನಬುರುಜು04 5/15 ಪುಟ 22 ಪ್ಯಾರ 1
ಯಾಜಕಕಾಂಡ ಪುಸ್ತಕದ ಮುಖ್ಯಾಂಶಗಳು
ಯಾಜಕಕಾಂಡ 2:13—“ಎಲ್ಲಾ ನೈವೇದ್ಯ”ಗಳಿಗೆ ಉಪ್ಪನ್ನು ಏಕೆ ಸೇರಿಸಬೇಕಾಗಿತ್ತು? ಯಜ್ಞಗಳ ಸ್ವಾದವನ್ನು ಹೆಚ್ಚಿಸಲಿಕ್ಕಾಗಿ ಇದನ್ನು ಮಾಡಲಾಗುತ್ತಿರಲಿಲ್ಲ. ಭೂಸುತ್ತಲೂ ಉಪ್ಪನ್ನು, ಆಹಾರ ಸಂರಕ್ಷಣೆಗಾಗಿ ಉಪಯೋಗಿಸಲಾಗುತ್ತದೆ. ಅದು ಕೊಳೆಯುವಿಕೆ ಹಾಗೂ ಹಾಳಾಗುವಿಕೆಯಿಂದ ಮುಕ್ತಿಯನ್ನು ಪ್ರತಿನಿಧಿಸುವುದರಿಂದ, ನೈವೇದ್ಯಗಳೊಂದಿಗೆ ಅರ್ಪಿಸಲಾಗುತ್ತಿತ್ತೆಂದು ವ್ಯಕ್ತವಾಗುತ್ತದೆ.
(ಯಾಜಕಕಾಂಡ 3:17) ಯಜ್ಞಪಶುಗಳ ಕೊಬ್ಬೆಲ್ಲವೂ ಯೆಹೋವನದು. ಕೊಬ್ಬನ್ನಾಗಲಿ ರಕ್ತವನ್ನಾಗಲಿ ತಿನ್ನಕೂಡದೆಂಬದು ನಿಮಗೂ ನಿಮ್ಮ ಸಂತತಿಯವರಿಗೂ ನೀವು ವಾಸಿಸುವ ಎಲ್ಲಾ ಸ್ಥಳಗಳಲ್ಲಿಯೂ ಶಾಶ್ವತ ನಿಯಮ.
it-1-E ಪುಟ 813
ಕೊಬ್ಬು
ಈ ನಿಯಮದ ಹಿಂದಿರುವ ಕಾರಣ. ಧರ್ಮಶಾಸ್ತ್ರದ ಪ್ರಕಾರ ಯಜ್ಞವಾಗಿ ಅರ್ಪಿಸಲಾಗುತ್ತಿದ್ದ ಪ್ರಾಣಿಯ ರಕ್ತ ಮತ್ತು ಕೊಬ್ಬನ್ನು ಯೆಹೋವನಿಗೆ ಮಾತ್ರ ಮೀಸಲಾಗಿಡಬೇಕಿತ್ತು. ರಕ್ತವು ಜೀವವನ್ನು ಸೂಚಿಸುತ್ತದೆ ಮತ್ತು ಜೀವವನ್ನು ಕೊಡೋ ಶಕ್ತಿ ಯೆಹೋವನಿಗೆ ಮಾತ್ರ ಇದೆ. ಹಾಗಾಗಿ ರಕ್ತ ಆತನಿಗೆ ಮಾತ್ರ ಮೀಸಲಾಗಿತ್ತು. (ಯಾಜ 17:11, 14) ಪ್ರಾಣಿಯ ಮಾಂಸದಲ್ಲಿ ಕೊಬ್ಬನ್ನು ಅತ್ಯುತ್ತಮ ಭಾಗವಾಗಿ ನೋಡಲಾಗುತ್ತಿತ್ತು. ಒಬ್ಬ ವ್ಯಕ್ತಿ ಪ್ರಾಣಿಯ ಕೊಬ್ಬನ್ನು ಯಜ್ಞವಾಗಿ ಅರ್ಪಿಸಿದ್ದಲ್ಲಿ ಅದು, ಯೆಹೋವನಿಗೆ ಅತ್ಯುತ್ತಮವಾದ ಭಾಗವನ್ನು ಕೊಡೋಕೆ ಅವನಿಗೆ ಇಷ್ಟ ಇದೆ ಅನ್ನೋದನ್ನ ಸೂಚಿಸುತ್ತಿತ್ತು. ಯೆಹೋವನು ಸಹ ಅದಕ್ಕೆ ಅರ್ಹನಾಗಿದ್ದನು. ಯಾಕಂದ್ರೆ ಆತನು ಸಹ ಅತ್ಯುತ್ತಮವಾದದ್ದನ್ನ ಸಮೃದ್ಧವಾಗಿ ಕೊಡ್ತಾನೆ. ಈ ಕಾರಣದಿಂದಲೇ ಇಸ್ರಾಯೇಲ್ಯರು ಕೊಬ್ಬನ್ನು ‘ಆಹಾರದ’ ರೂಪದಲ್ಲಿ ವೇದಿಯ ಮೇಲೆ ಸುಡುತ್ತಿದ್ರು. ಅದ್ರಿಂದ ಬರೋ ‘ಸುಗಂಧವು’ ಯೆಹೋವನಿಗೆ ಖುಷಿ ಕೊಡ್ತಿತ್ತು. (ಯಾಜ 3:11, 16) ಒಂದುವೇಳೆ ಯಾರಾದ್ರೂ ಕೊಬ್ಬನ್ನು ತಿಂದಲ್ಲಿ ಆ ವ್ಯಕ್ತಿ ಯೆಹೋವನಿಗೆ ಮೀಸಲಾಗಿಟ್ಟಿದ್ದನ್ನೇ ತಿಂದ ಹಾಗೆ ಇರುತ್ತಿತ್ತು. ಹಾಗಾಗಿ ಆ ವ್ಯಕ್ತಿಗೆ ಮರಣದಂಡನೆ ಆಗಬೇಕಿತ್ತು. ಆದ್ರೆ ಒಂದು ಪ್ರಾಣಿ ಸತ್ತಲ್ಲಿ ಅಥವಾ ಒಂದು ಕ್ರೂರ ಪ್ರಾಣಿ ಅದನ್ನ ಕೊಂದಲ್ಲಿ ಅದರ ಕೊಬ್ಬನ್ನು ಬೇರೆ ಉದ್ದೇಶಕ್ಕಾಗಿ ಉಪಯೋಗಿಸಬಹುದಿತ್ತೇ ಹೊರತು ತಿನ್ನಬಾರದಾಗಿತ್ತು. ಆದ್ರೆ ರಕ್ತವನ್ನು, ಯಜ್ಞಕ್ಕಾಗಿ ಮಾತ್ರ ಉಪಯೋಗಿಸಬಹುದಿತ್ತೇ ಹೊರತು ಬೇರೆ ಯಾವುದಕ್ಕೂ ಉಪಯೋಗಿಸಬಾರದಿತ್ತು.—ಯಾಜ 7:23-25.
ಕಾವಲಿನಬುರುಜು04 5/15 ಪುಟ 22 ಪ್ಯಾರ 2
ಯಾಜಕಕಾಂಡ ಪುಸ್ತಕದ ಮುಖ್ಯಾಂಶಗಳು
ಯಾಜಕಕಾಂಡ 3:17. ಕೊಬ್ಬನ್ನು ಅತ್ಯುತ್ತಮ ಇಲ್ಲವೆ ಅತ್ಯಂತ ರುಚಿಕರವಾದ ಭಾಗವಾಗಿ ಎಣಿಸಲಾಗುತ್ತಿದ್ದುದರಿಂದ, ಅದನ್ನು ತಿನ್ನುವುದರ ಕುರಿತಾದ ನಿಷೇಧವು, ಅತ್ಯುತ್ತಮವಾದ ಭಾಗವು ಯೆಹೋವನಿಗೆ ಸೇರಿದಂಥದ್ದಾಗಿದೆ ಎಂಬ ವಿಷಯವನ್ನು ಇಸ್ರಾಯೇಲ್ಯರ ಮನಸ್ಸಿನಲ್ಲಿ ಆಳವಾಗಿ ಅಚ್ಚೊತ್ತಿಸಿರಬೇಕೆಂದು ವ್ಯಕ್ತವಾಗುತ್ತದೆ. (ಆದಿಕಾಂಡ 45:18) ನಾವು ಯೆಹೋವನಿಗೆ ನಮ್ಮ ಸರ್ವೋತ್ತಮವಾದುದ್ದನ್ನು ಕೊಡಬೇಕೆಂಬುದನ್ನು ಇದು ನಮಗೆ ಜ್ಞಾಪಕಹುಟ್ಟಿಸುತ್ತದೆ.—ಜ್ಞಾನೋಕ್ತಿ 3:9, 10; ಕೊಲೊಸ್ಸೆ 3:23, 24.
ನಮ್ಮ ಕ್ರೈಸ್ತ ಜೀವನ
ಲೂಕ 21:4 ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ
ಲೂಕ 21:2 ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ ಪ್ರಕಾರ ಆ ವಿಧವೆಯು ಕಾಣಿಕೆ ಪೆಟ್ಟಿಗೆಯಲ್ಲಿ ಹಾಕಿದ ನಾಣ್ಯಗಳು “ಎರಡು ಲೆಪ್ಟಾ” ಆಗಿದ್ದವು. ಇದು ಒಂದು ದಿನದ ಕೂಲಿಯ 1/64 (ಅಂದ್ರೆ 64 ರಲ್ಲಿ 1) ಭಾಗಕ್ಕೆ ಸಮವಾಗಿತ್ತು. ಆ ಸಮಯದಲ್ಲಿ ಇಸ್ರಾಯೇಲಿನಲ್ಲಿ ಉಪಯೋಗಿಸಲಾಗುತ್ತಿದ್ದ ಅತಿ ಕಡಿಮೆ ಬೆಲೆಯ ನಾಣ್ಯ ಇದಾಗಿತ್ತು. ಮತ್ತಾಯ 10:29 ರಲ್ಲಿ ತಿಳಿಸಲಾಗಿರುವ ‘ಸಣ್ಣ ಮೌಲ್ಯವಿರುವ ಒಂದು ಕಾಸು’ ಅಂದ್ರೆ ಒಂದು ಅಸೇರಿಯನ್ ನಾಣ್ಯಕ್ಕೆ (ಇದು ಎಂಟು ಲೆಪ್ಟಾಗೆ ಸಮ) ಎರಡು ಗುಬ್ಬಿಗಳನ್ನ ಕೊಂಡುಕೊಳ್ಳಬಹುದಿತ್ತು. ಈ ಗುಬ್ಬಿಗಳು ಇಸ್ರಾಯೇಲ್ಯರು ಆಹಾರಕ್ಕಾಗಿ ಉಪಯೋಗಿಸ್ತಿದ್ದ ಪಕ್ಷಿಗಳಲ್ಲೇ ತುಂಬ ಕಡಿಮೆ ಬೆಲೆಯ ಪಕ್ಷಿಗಳಾಗಿದ್ದವು. ಹಾಗಾಗಿ ವಿಧವೆ ಹತ್ರ ಒಂದು ಗುಬ್ಬಿಯ ಬೆಲೆಯ ಅರ್ಧದಷ್ಟು ಹಣ ಮಾತ್ರ ಇತ್ತು. ಅಂದ್ರೆ ಒಂದು ಹೊತ್ತಿನ ಊಟಕ್ಕೆ ಸಾಕಾಗುವಷ್ಟು ಹಣನೂ ಇರಲಿಲ್ಲ.
ನವೆಂಬರ್ 16-22
ಬೈಬಲಿನಲ್ಲಿರುವ ರತ್ನಗಳು | ಯಾಜಕಕಾಂಡ 4-5
“ಯೆಹೋವನಿಗೆ ಅತ್ಯುತ್ತಮ ಉಡುಗೊರೆ ಕೊಡಿ”
(ಯಾಜಕಕಾಂಡ 5:5, 6) ಅವನು ಈ ವಿಷಯಗಳಲ್ಲಿ ಯಾವದಾದರೂ ಒಂದರಲ್ಲಿ ದೋಷಿಯಾದಾಗ ತಾನು ಮಾಡಿದ ತಪ್ಪನ್ನು ಒಪ್ಪಿಕೊಳ್ಳಬೇಕು; 6 ಮತ್ತು ದೋಷದ ಪ್ರಾಯಶ್ಚಿತ್ತಕ್ಕಾಗಿ ಹೆಣ್ಣು ಕುರಿಯನ್ನಾಗಲಿ ಹೆಣ್ಣು ಮೇಕೆಯನ್ನಾಗಲಿ ಯೆಹೋವನಿಗೆ ಸಮರ್ಪಿಸಬೇಕು. ಯಾಜಕನು ಅವನಿಗೋಸ್ಕರ ದೋಷಪರಿಹಾರಮಾಡುವನು.
it-2-E ಪುಟ 527 ಪ್ಯಾರ 9
ಯಜ್ಞಗಳು
ಪ್ರಾಯಶ್ಚಿತ್ತಕ್ಕಾಗಿ ಕೊಡುತ್ತಿದ್ದ ದೋಷಪರಿಹಾರಕ ಯಜ್ಞಗಳು. ಈ ಯಜ್ಞಗಳನ್ನ ಸಹ ಪಾಪ ಮಾಡಿದ ಕಾರಣದಿಂದಲೇ ಕೊಡಬೇಕಿತ್ತು. ಧರ್ಮಶಾಸ್ತ್ರದ ಪ್ರಕಾರ ಪಾಪ ಮಾಡಿದವನು ಅಪರಾಧಿ ಸ್ಥಾನದಲ್ಲಿ ಇರುತ್ತಿದ್ದನು. ಕೆಲವು ನಿರ್ದಿಷ್ಟ ಕಾರಣಗಳಿಗಾಗಿ ಈ ಯಜ್ಞಗಳನ್ನ ಅರ್ಪಿಸಬೇಕಿತ್ತು. ಈ ಯಜ್ಞಗಳು ಬೇರೆ ದೋಷಪರಿಹಾರಕ ಯಜ್ಞಗಳಿಗಿಂತ ಸ್ವಲ್ಪ ಭಿನ್ನವಾಗಿದ್ದವು. ಒಬ್ಬ ವ್ಯಕ್ತಿ ಯೆಹೋವನ ವಿರುದ್ಧನೋ ಬೇರೆ ವ್ಯಕ್ತಿಯ ವಿರುದ್ಧನೋ ತಪ್ಪು ಮಾಡಿದಾಗ ಈ ಯಜ್ಞವನ್ನು ಕೊಡಬೇಕಿತ್ತು ಅಂತ ಅನಿಸುತ್ತೆ. ಈ ಯಜ್ಞವು ಯೆಹೋವನ ನ್ಯಾಯದ ಮಟ್ಟವನ್ನು ಎತ್ತಿಹಿಡಿಯಲಿಕ್ಕಾಗಿ ಕೊಡಲಾಗುತ್ತಿತ್ತು. ಅಷ್ಟೇ ಅಲ್ಲ, ತಪ್ಪು ಮಾಡಿ ಪಶ್ಚಾತ್ತಾಪಪಡುತ್ತಿದ್ದ ವ್ಯಕ್ತಿ ಅವನು ಮಾಡಿದ ತಪ್ಪಿನ ಪರಿಣಾಮಗಳಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಮತ್ತು ಅವನು ಮುಂಚಿನ ತರನೇ ಜೀವನ ನಡೆಸಲಿಕ್ಕಾಗಿ ಇದನ್ನು ಕೊಡಲಾಗ್ತಿತ್ತು.—ಯೆಶಾ 53:10 ಹೋಲಿಸಿ.
(ಯಾಜಕಕಾಂಡ 5:7) ಕುರಿಯನ್ನು ಕೊಡುವದಕ್ಕೆ ಅವನಿಗೆ ಗತಿಯಿಲ್ಲದ ಪಕ್ಷದಲ್ಲಿ ದೋಷದ ಪ್ರಾಯಶ್ಚಿತ್ತಕ್ಕಾಗಿ ಎರಡು ಬೆಳವಕ್ಕಿಗಳನ್ನಾಗಲಿ ಎರಡು ಪಾರಿವಾಳದ ಮರಿಗಳನ್ನಾಗಲಿ ತೆಗೆದುಕೊಂಡು ಬಂದು ಸರ್ವಾಂಗಹೋಮವಾಗಿ ಒಂದನ್ನೂ ದೋಷಪರಿಹಾರಕಯಜ್ಞವಾಗಿ ಮತ್ತೊಂದನ್ನೂ ಯೆಹೋವನಿಗೆ ಸಮರ್ಪಿಸಬೇಕು.
ಕಾವಲಿನಬುರುಜು09 10/1 ಪುಟ 32 ಪ್ಯಾರ 3
ನಮ್ಮ ಇತಿಮಿತಿಗಳನ್ನು ಬಲ್ಲಾತನು
ಯೆಹೋವನ ಕೋಮಲ ಪರಿಗಣನೆಯ ಕುರಿತು ಧರ್ಮಶಾಸ್ತ್ರವು ತಿಳಿಸಿದ್ದು: “ಕುರಿಯನ್ನು ಕೊಡುವದಕ್ಕೆ ಅವನಿಗೆ ಗತಿಯಿಲ್ಲದ ಪಕ್ಷದಲ್ಲಿ ದೋಷದ ಪ್ರಾಯಶ್ಚಿತ್ತಕ್ಕಾಗಿ ಎರಡು ಬೆಳವಕ್ಕಿಗಳನ್ನಾಗಲಿ ಎರಡು ಪಾರಿವಾಳದ ಮರಿಗಳನ್ನಾಗಲಿ ತೆಗೆದುಕೊಂಡು ಬಂದು . . . ಯೆಹೋವನಿಗೆ ಸಮರ್ಪಿಸಬೇಕು.” (ವಚನ 7) “ಕೊಡುವುದಕ್ಕೆ ಅವನಿಗೆ ಗತಿಯಿಲ್ಲದ ಪಕ್ಷದಲ್ಲಿ” ಎಂಬ ವಾಕ್ಯವನ್ನು “ಅದು ಅವನ ಕೈಲಾಗದಿದ್ದಲ್ಲಿ” ಎಂದೂ ಅನುವಾದಿಸಬಹುದಾಗಿದೆ. ಒಬ್ಬ ಇಸ್ರಾಯೇಲ್ಯನು ಕುರಿಯನ್ನು ಕೊಳ್ಳಲಾಗದಷ್ಟು ತೀರಾ ಬಡವನಾಗಿದ್ದಲ್ಲಿ, ಆಗ ಅವನು ಏನನ್ನು ಅರ್ಪಿಸಶಕ್ತನೋ ಅದನ್ನು ಅಂದರೆ ಎರಡು ಬೆಳವಕ್ಕಿಗಳನ್ನು ಅಥವಾ ಎರಡು ಪಾರಿವಾಳಗಳನ್ನು ನೀಡುವುದಾದರೆ ದೇವರು ಅದನ್ನು ಮೆಚ್ಚಿಕೆಯಿಂದ ಸ್ವೀಕರಿಸುತ್ತಿದ್ದನು.
(ಯಾಜಕಕಾಂಡ 5:11) ಎರಡು ಬೆಳವಕ್ಕಿಗಳನ್ನಾಗಲಿ ಎರಡು ಪಾರಿವಾಳದ ಮರಿಗಳನ್ನಾಗಲಿ ಕೊಡುವದಕ್ಕೂ ಗತಿಯಿಲ್ಲದೆ ಹೋದರೆ ಅವನು ದೋಷಪರಿಹಾರಕ್ಕಾಗಿ ಮೂರು ಸೇರು ಗೋದಿಹಿಟ್ಟನ್ನು ತರಬೇಕು. ಆ ಹೋಮದ್ರವ್ಯವು ದೋಷಪರಿಹಾರಾರ್ಥವಾದ್ದರಿಂದ ಅದರ ಮೇಲೆ ಎಣ್ಣೆಯನ್ನು ಹೊಯ್ಯಕೂಡದು, ಧೂಪವನ್ನು ಇಡಕೂಡದು.
ಕಾವಲಿನಬುರುಜು09 10/1 ಪುಟ 32 ಪ್ಯಾರ 4
ನಮ್ಮ ಇತಿಮಿತಿಗಳನ್ನು ಬಲ್ಲಾತನು
ಒಂದುವೇಳೆ ಆ ವ್ಯಕ್ತಿಗೆ ಆ ಎರಡು ಹಕ್ಕಿಗಳನ್ನು ಕೊಡಲು ಸಹ ಸಾಧ್ಯವಿಲ್ಲವಾದರೆ ಆಗೇನು? ಆಗ “ಅವನು ದೋಷಪರಿಹಾರಕ್ಕಾಗಿ ಮೂರು ಸೇರು ಗೋದಿಹಿಟ್ಟನ್ನು ತರಬೇಕು” ಎಂದು ಧರ್ಮಶಾಸ್ತ್ರವು ಹೇಳಿತ್ತು. (ವಚನ 11) ಕಡುಬಡವರಿಗಾಗಿ ಯೆಹೋವನು ವಿನಾಯತಿಯನ್ನು ತೋರಿಸಿ, ಈ ರೀತಿಯ ರಕ್ತರಹಿತ ಅರ್ಪಣೆಯನ್ನು ನೀಡುವಂತೆ ಅನುಮತಿಸಿದನು. ಇಸ್ರಾಯೇಲಿನಲ್ಲಿ ದೋಷಪರಿಹಾರಕ ಯಜ್ಞದ ಆಶೀರ್ವಾದವನ್ನು ಅಥವಾ ದೇವರೊಂದಿಗೆ ಸಮಾಧಾನವಾಗುವ ಸುಯೋಗವನ್ನು ಆನಂದಿಸಲು ಬಡತನವು ಯಾರಿಗೂ ಅಡ್ಡಿಯಾಗಿರಲಿಲ್ಲ.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
(ಯಾಜಕಕಾಂಡ 5:1) ನ್ಯಾಯಾಧಿಕಾರಿಯು ತಿಳಿಸಬೇಕೆಂದು ಆಣೆ ಇಟ್ಟರೂ ಯಾವನಾದರೂ ತಾನು ಕಂಡು ಕೇಳಿದ್ದನ್ನು ತಿಳಿಸದೆಹೋದರೆ ಅವನು ಪಾಪಕ್ಕೆ ಗುರಿಯಾಗುವನು.
ಕಾವಲಿನಬುರುಜು16.02 ಪುಟ 29-30 ಪ್ಯಾರ 14
ಯೆಹೋವನ ನಿಷ್ಠಾವಂತ ಸೇವಕರಿಂದ ಕಲಿಯೋಣ
14 ನೀವು ಮೊದಲು ಯೆಹೋವನಿಗೆ, ನಂತರ ಇತರರಿಗೆ ನಿಷ್ಠರಾಗಿ ಉಳಿಯಬೇಕು. ಇದನ್ನು ಮಾಡಲು ದಯೆ ಅವಶ್ಯಕ. ಒಂದು ಸನ್ನಿವೇಶ ಗಮನಿಸಿ. ಒಬ್ಬ ಸಹೋದರ ಗಂಭೀರ ತಪ್ಪು ಮಾಡಿರುವ ಪುರಾವೆ ನಿಮ್ಮ ಹತ್ತಿರವಿರಬಹುದು. ಆ ವ್ಯಕ್ತಿಗೆ, ವಿಶೇಷವಾಗಿ ಅವರು ನಿಮ್ಮ ಆಪ್ತ ಸ್ನೇಹಿತ ಅಥವಾ ಕುಟುಂಬದವರು ಆಗಿದ್ದರೆ ನಿಷ್ಠರಾಗಿ ಉಳಿಯಲು ನಿಮಗೆ ಮನಸ್ಸಿದೆ. ಆದರೆ ಅವರಿಗಿಂತಲೂ ಹೆಚ್ಚಾಗಿ ಯೆಹೋವನಿಗೆ ನಿಷ್ಠೆ ತೋರಿಸಬೇಕೆಂದು ನಿಮಗೆ ಗೊತ್ತು. ಹಾಗಾಗಿ ನಾತಾನನಂತೆ ಯೆಹೋವನಿಗೆ ವಿಧೇಯರಾಗಿರಿ. ಅದೇ ಸಮಯದಲ್ಲಿ ನಿಮ್ಮ ಸಹೋದರನೊಟ್ಟಿಗೆ ದಯೆಯಿಂದ ವರ್ತಿಸಿರಿ. ಹಿರಿಯರ ಜೊತೆ ಆದಷ್ಟು ಬೇಗನೆ ಮಾತಾಡಿ ಅವರ ಸಹಾಯ ಪಡೆಯಲು ಹೇಳಿರಿ. ಆ ವ್ಯಕ್ತಿ ಹಾಗೆ ಮಾಡದಿದ್ದರೆ ನೀವೇ ಹೋಗಿ ಹಿರಿಯರಿಗೆ ತಿಳಿಸಿ. ಹೀಗೆ ಯೆಹೋವನಿಗೆ ನಿಷ್ಠರಾಗಿ ಉಳಿಯುತ್ತೀರಿ. ಅಷ್ಟೇ ಅಲ್ಲ, ಆ ಸಹೋದರನಿಗೂ ದಯೆ ತೋರಿಸುತ್ತಿದ್ದೀರಿ. ಯಾಕೆಂದರೆ ಆ ವ್ಯಕ್ತಿ ಮತ್ತೆ ಯೆಹೋವನೊಟ್ಟಿಗೆ ಒಳ್ಳೇ ಸಂಬಂಧ ಇಟ್ಟುಕೊಳ್ಳಲು ಹಿರಿಯರು ಅವನಿಗೆ ಸಹಾಯ ಮಾಡುತ್ತಾರೆ. ಅವರು ಅವನನ್ನು ದಯೆಯಿಂದ ಮತ್ತು ಕೋಮಲಭಾವದಿಂದ ತಿದ್ದುತ್ತಾರೆ.—ಯಾಜಕಕಾಂಡ 5:1; ಗಲಾತ್ಯ 6:1 ಓದಿ.
(ಯಾಜಕಕಾಂಡ 5:15, 16) ಯೆಹೋವನಿಗೆ ಸಲ್ಲಿಸಬೇಕಾದ ದೇವರ ವಸ್ತುಗಳನ್ನು ಸಮರ್ಪಿಸುವದರಲ್ಲಿ ಅಜಾಗ್ರತೆಯಿಂದ ದ್ರೋಹಮಾಡಿ ದೋಷಕ್ಕೆ ಒಳಗಾದರೆ ಅವನು ಆ ಅಪರಾಧಪ್ರಾಯಶ್ಚಿತ್ತಕ್ಕಾಗಿ ದೇವರ ಸೇವೆಗೆ ನೇಮಕವಾದ ರೂಪಾಯಿಯ ಮೇರೆಗೆ ಎರಡು ಅಥವಾ ಹೆಚ್ಚು ರೂಪಾಯಿ ಬಾಳುವದೆಂದು ನಿಮಗೆ ತೋರುವ ಪೂರ್ಣಾಂಗವಾದ ಟಗರನ್ನು ಆಡುಕುರಿಗಳ ಹಿಂಡಿನಿಂದ ತೆಗೆದುಕೊಂಡು ಬಂದು ಯೆಹೋವನಿಗೆ ಸಮರ್ಪಿಸಬೇಕು. 16 ಮತ್ತು ತಾನು ಅನ್ಯಾಯವಾಗಿ ಇಟ್ಟುಕೊಂಡಿರುವ ದೇವರ ವಸ್ತುಗಳನ್ನು ಅಲ್ಲದೆ ಐದನೆಯ ಒಂದು ಭಾಗವನ್ನು ಹೆಚ್ಚಾಗಿ ಯಾಜಕನಿಗೆ ತಂದುಕೊಡಬೇಕು. ಅವನು ಪ್ರಾಯಶ್ಚಿತ್ತಕ್ಕಾಗಿ ತಂದ ಟಗರಿನಿಂದ ಯಾಜಕನು ಅವನಿಗೋಸ್ಕರ ದೋಷಪರಿಹಾರಮಾಡಿದಾಗ ಅವನಿಗೆ ಕ್ಷಮಾಪಣೆಯಾಗುವದು.
it-1-E ಪುಟ 1130 ಪ್ಯಾರ 2
ಪವಿತ್ರತೆ
ಪ್ರಾಣಿಗಳು ಮತ್ತು ಬೆಳೆ. ಆಕಳುಗಳ ಮತ್ತು ಆಡುಕುರಿಗಳ ಚೊಚ್ಚಲು ಗಂಡು ಮರಿಗಳು ಯೆಹೋವನಿಗೆ ಪವಿತ್ರವಾಗಿದ್ದವು ಮತ್ತು ಆ ಪವಿತ್ರತೆಯಿಂದ ಇಸ್ರಾಯೇಲ್ಯರು ಅವುಗಳನ್ನು ಬಿಡಿಸಬಾರದಿತ್ತು. ಅವುಗಳನ್ನು ಯೆಹೋವನಿಗೆ ಯಜ್ಞವಾಗಿ ಕೊಡಬೇಕಿತ್ತು ಮತ್ತು ಅವುಗಳ ಸ್ವಲ್ಪ ಭಾಗವನ್ನು ಯಾಜಕರಿಗೆ ಕೊಡ್ಬೇಕಿತ್ತು. (ಅರ 18:17-19) ಗುಡಾರದ ಸೇವೆಗೆ ಮೀಸಲಾಗಿದ್ದ ಎಲ್ಲಾ ಯಜ್ಞಗಳು ಮತ್ತು ಕಾಣಿಕೆಗಳು ಹೇಗೆ ಪವಿತ್ರವಾಗಿದ್ದವೋ ಹಾಗೇ ಪ್ರಥಮಫಲ ಮತ್ತು ದಶಮಾಂಶವು ಸಹ ಪವಿತ್ರವಾಗಿದ್ದವು. (ವಿಮೋ 28:38) ಯೆಹೋವನಿಗೆ ಪವಿತ್ರವಾಗಿದ್ದ ಎಲ್ಲಾ ವಸ್ತುಗಳನ್ನ ಆತನ ಸೇವೆಗೆ ಬಳಸಬೇಕಿತ್ತೇ ಹೊರತು ಬೇರೆ ಯಾವುದಕ್ಕೂ ಬಳಸಬಾರದಿತ್ತು. ಉದಾಹರಣೆಗೆ, ದಶಮಾಂಶದ ಬಗ್ಗೆ ಇದ್ದ ನಿಯಮವನ್ನು ನೋಡಿ. ಒಬ್ಬ ವ್ಯಕ್ತಿ ಒಂದು ವಸ್ತುವನ್ನ ದಶಮಾಂಶಕ್ಕಂತ ಎತ್ತಿಟ್ಟಿದ್ದಾನೆ ಅಂದ್ಕೊಳ್ಳಿ. ಉದಾಹರಣೆಗೆ ಗೋದಿ ಬೆಳೆ. ನಂತ್ರ ಅವನೋ ಅಥ್ವಾ ಅವ್ನ ಮನೆಲಿರೋವ್ರೋ ಆ ಗೋದಿಯಲ್ಲಿ ಸ್ವಲ್ಪ ಭಾಗವನ್ನ ಗೊತ್ತಿಲ್ಲದೇ ಅಡಿಗೆಗಾಗಿ ತಗೊಂಡ್ರೆ ಏನಾಗ್ತಿತ್ತು? ಆ ವ್ಯಕ್ತಿ ದೇವರಿಗೆ ಸೇರಿದ ವಸ್ತುಗಳ ಮೇಲೆ ಇದ್ದ ನಿಯಮವನ್ನ ಮುರಿದಂತಾಗುತ್ತಿತ್ತು. ಅವ್ನು ದಂಡದ ರೂಪದಲ್ಲಿ ಆ ಪೂರ್ತಿ ದಶಮಾಂಶದ ಜೊತೆಗೆ ಇನ್ನೂ ಇಪ್ಪತ್ತು ಶೇಕಡ ಸೇರಿಸಿ ಕೊಡಬೇಕಿತ್ತು. ಅದ್ರ ಜೊತೆಗೆ ಪೂರ್ಣಾಂಗವಾದ ಟಗರು ಅಂದ್ರೆ ಯಾವುದೇ ದೋಷವಿಲ್ಲದ ಟಗರನ್ನು ಯಜ್ಞವಾಗಿ ಅರ್ಪಿಸಬೇಕಿತ್ತು. ಹೀಗೆ ಮಾಡೋದು ಯೆಹೋವನಿಗೆ ಸೇರಿದ ಪವಿತ್ರ ವಸ್ತುಗಳನ್ನು ಗೌರವಿಸಬೇಕು ಅನ್ನೋದನ್ನು ತೋರಿಸಿಕೊಡ್ತಿತ್ತು.—ಯಾಜ 5:14-16.
ನವೆಂಬರ್ 23-29
ಬೈಬಲಿನಲ್ಲಿರುವ ರತ್ನಗಳು | ಯಾಜಕಕಾಂಡ 6-7
“ಯೆಹೋವನಿಗೆ ಕೃತಜ್ಞತೆ ತೋರಿಸಲು ಯಜ್ಞ”
(ಯಾಜಕಕಾಂಡ 7:11) ಸಮಾಧಾನಯಜ್ಞ ನಿಯಮಗಳು. ಯಾರಾದರೂ ಕೃತಜ್ಞತೆಯನ್ನು ತೋರಿಸುವದಕ್ಕಾಗಿ ಸಮಾಧಾನಯಜ್ಞವನ್ನು ಯೆಹೋವನಿಗೆ ಮಾಡುವದಾದರೆ ಅದರೊಡನೆ ಎಣ್ಣೆ ಮಿಶ್ರವಾದ ಹುಳಿಯಿಲ್ಲದ ಹೋಳಿಗೆಗಳನ್ನೂ ಎಣ್ಣೆ ಹಾಕಿದ ಹುಳಿಯಿಲ್ಲದ ಕಡುಬುಗಳನ್ನೂ ಎಣ್ಣೆಯಿಂದ ಪೂರಾ ನೆನಸಿದ ಗೋದಿಹಿಟ್ಟಿನ ಹೋಳಿಗೆಗಳನ್ನೂ ಸಮರ್ಪಿಸಬೇಕು.
ಕಾವಲಿನಬುರುಜು19.11 ಪುಟ 22 ಪ್ಯಾರ 9
ಯಾಜಕಕಾಂಡ ಪುಸ್ತಕದಿಂದ ನಮಗಿರುವ ಪಾಠಗಳು
9 ಎರಡನೇ ಪಾಠ: ನಾವು ಯೆಹೋವನಿಗೆ ಕೃತಜ್ಞರಾಗಿರುವುದರಿಂದ ಆತನ ಸೇವೆ ಮಾಡುತ್ತೇವೆ. ಇದರ ಬಗ್ಗೆ ಹೆಚ್ಚನ್ನು ತಿಳುಕೊಳ್ಳಲು ಪ್ರಾಚೀನ ಇಸ್ರಾಯೇಲ್ಯರು ಅರ್ಪಿಸುತ್ತಿದ್ದ ಸಮಾಧಾನಯಜ್ಞಗಳ ಬಗ್ಗೆ ನೋಡೋಣ. ಇಸ್ರಾಯೇಲ್ಯರು “ಕೃತಜ್ಞತೆಯನ್ನು ತೋರಿಸುವದಕ್ಕಾಗಿ” ಸಮಾಧಾನಯಜ್ಞಗಳನ್ನು ಅರ್ಪಿಸುತ್ತಿದ್ದರು ಎಂದು ಯಾಜಕಕಾಂಡ ಪುಸ್ತಕದಲ್ಲಿ ತಿಳಿಸಲಾಗಿದೆ. (ಯಾಜ. 7:11-13, 16-18) ಇದು ಕಡ್ಡಾಯವಾಗಿ ಕೊಡಬೇಕಾಗಿದ್ದ ಯಜ್ಞವಾಗಿರಲಿಲ್ಲ. ಸ್ವಇಷ್ಟದಿಂದ ಕೊಡುತ್ತಿದ್ದ ಯಜ್ಞ ಇದಾಗಿತ್ತು. ಯೆಹೋವನನ್ನು ಮನದಾಳದಿಂದ ಪ್ರೀತಿಸುತ್ತಿದ್ದ ಕಾರಣ ಸ್ವಯಂ ಪ್ರೇರಿತವಾಗಿ ಈ ಯಜ್ಞವನ್ನು ಕೊಡಲಾಗುತ್ತಿತ್ತು. ಈ ಯಜ್ಞವನ್ನು ಅರ್ಪಿಸುತ್ತಿದ್ದ ವ್ಯಕ್ತಿ, ಅವನ ಕುಟುಂಬ ಮತ್ತು ಯಾಜಕರು ಯಜ್ಞವಾಗಿ ಕೊಟ್ಟ ಪ್ರಾಣಿಯ ಮಾಂಸವನ್ನು ತಿನ್ನುತ್ತಿದ್ದರು. ಆದರೆ ಆ ಪ್ರಾಣಿಯ ಕೆಲವು ಭಾಗಗಳನ್ನು ಯೆಹೋವನಿಗೆ ಮಾತ್ರ ಅರ್ಪಿಸಬೇಕಿತ್ತು. ಅವು ಯಾವ ಭಾಗಗಳು?
(ಯಾಜಕಕಾಂಡ 7:13-15) ಕೃತಜ್ಞತೆಯನ್ನು ತೋರಿಸುವದಕ್ಕಾಗಿ ಸಮಾಧಾನಯಜ್ಞದಲ್ಲಿ ಒಪ್ಪಿಸುವ ಪಶುವಿನೊಡನೆ ಹುಳಿರೊಟ್ಟಿಗಳನ್ನೂ ಸಮರ್ಪಿಸಬೇಕು. 14 ಸಮರ್ಪಿಸಿದ ಪ್ರತಿಯೊಂದು ವಿಧವಾದ ಪದಾರ್ಥಗಳಲ್ಲಿಯೂ ಒಂದೊಂದನ್ನು ಯೆಹೋವನಿಗೋಸ್ಕರ ಪ್ರತ್ಯೇಕಿಸಬೇಕು. ಅವು ವೇದಿಗೆ ಯಜ್ಞಪಶುವಿನ ರಕ್ತವನ್ನು ಎರಚಿದ ಯಾಜಕನಿಗೆ ಆಗಬೇಕು. 15 ಕೃತಜ್ಞತಾಯಜ್ಞಪಶುವಿನ ಮಾಂಸವನ್ನು ಯಜ್ಞವು ನಡೆದ ದಿನದಲ್ಲೇ ಭೋಜನ ಮಾಡಬೇಕು; ಮರುದಿನದ ವರೆಗೆ ಸ್ವಲ್ಪವನ್ನಾದರೂ ಉಳಿಸಕೂಡದು.
ಕಾವಲಿನಬುರುಜು00 8/15 ಪುಟ 15 ಪ್ಯಾರ 15
ದೇವರನ್ನು ಸಂತೋಷಗೊಳಿಸಿದಂತಹ ಯಜ್ಞಗಳು
15 ಇನ್ನೊಂದು ಸ್ವಯಂಪ್ರೇರಿತ ನೈವೇದ್ಯವು, ಸಮಾಧಾನ ಯಜ್ಞವಾಗಿತ್ತು. ಇದನ್ನು ಯಾಜಕಕಾಂಡ 3ನೆಯ ಅಧ್ಯಾಯದಲ್ಲಿ ವರ್ಣಿಸಲಾಗಿದೆ. . . . ಹೀಬ್ರು ಭಾಷೆಯಲ್ಲಿ, “ಸಮಾಧಾನ” ಎಂಬ ಪದವು ಕೇವಲ ಯುದ್ಧ ಅಥವಾ ಕಲಹದಿಂದ ಮುಕ್ತವಾಗಿರುವುದಕ್ಕಿಂತಲೂ ಹೆಚ್ಚನ್ನು ಸೂಚಿಸುತ್ತದೆ. “ಬೈಬಲಿನಲ್ಲಿ” ಆ ಪದವು “ಇದನ್ನೇ ಸೂಚಿಸುತ್ತದೆ. ಅದಲ್ಲದೆ, ದೇವರೊಂದಿಗೆ ಸಮಾಧಾನದ ಸ್ಥಿತಿ ಅಥವಾ ಸಂಬಂಧವನ್ನು, ಸಮೃದ್ಧಿ, ಆನಂದ ಮತ್ತು ಸಂತೋಷವನ್ನು ಸಹ ಸೂಚಿಸುತ್ತದೆ” ಎಂದು ಸ್ಟಡೀಸ್ ಇನ್ ದ ಮೊಸಾಯಿಕ್ ಇನ್ಸ್ಟಿಟ್ಯುಷನ್ಸ್ ಪುಸ್ತಕವು ಹೇಳುತ್ತದೆ. ಹೀಗೆ, ಸಮಾಧಾನ ಯಜ್ಞಗಳು ದೇವರನ್ನು ಸಮಾಧಾನಗೊಳಿಸಲಿಕ್ಕಾಗಿಯೋ ಎಂಬಂತೆ ಆತನಿಂದ ಶಾಂತಿಯನ್ನು ಸಂಪಾದಿಸಲಿಕ್ಕಾಗಿ ಅರ್ಪಿಸಲ್ಪಡುತ್ತಿರಲಿಲ್ಲ. ಬದಲಾಗಿ, ಆತನಿಂದ ಸಮ್ಮತಿಯನ್ನು ಪಡೆದಿರುವವರು ಆತನೊಂದಿಗೆ ಆನಂದಿಸುವಂತಹ ಸಮಾಧಾನದ ಧನ್ಯ ಸ್ಥಿತಿಗಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಲು ಅಥವಾ ಕೊಂಡಾಡಲು ಅರ್ಪಿಸಲಾಗುತ್ತಿತ್ತು. ರಕ್ತ ಮತ್ತು ಕೊಬ್ಬನ್ನು ಯೆಹೋವನಿಗೆ ಅರ್ಪಿಸಿದ ನಂತರ, ಯಾಜಕರು ಮತ್ತು ಯಜ್ಞವನ್ನು ಅರ್ಪಿಸುತ್ತಿದ್ದವನು ಉಳಿದ ಮಾಂಸವನ್ನು ತಿನ್ನುತ್ತಿದ್ದರು. (ಯಾಜಕಕಾಂಡ 3:17; 7:16-21; 19:5-8) ಯಜ್ಞವನ್ನು ಕೊಡುತ್ತಿದ್ದವನು, ಯಾಜಕರು ಮತ್ತು ಯೆಹೋವ ದೇವರು ಒಂದು ಮನೋಹರವಾದ ಮತ್ತು ಸಾಂಕೇತಿಕವಾದ ರೀತಿಯಲ್ಲಿ ಒಂದು ಊಟದಲ್ಲಿ ಪಾಲ್ಗೊಳ್ಳುತ್ತಿದ್ದರು. ಇದು ಅವರ ನಡುವಿನ ಸಮಾಧಾನದ ಸಂಬಂಧವನ್ನು ಸೂಚಿಸುತ್ತಿತ್ತು.
(ಯಾಜಕಕಾಂಡ 7:20) ಯಾವನಾದರೂ ಅಶುದ್ಧನಾಗಿದ್ದು ಯೆಹೋವನಿಗೆ ಸಮರ್ಪಿತವಾದ ಸಮಾಧಾನಯಜ್ಞಪಶುವಿನ ಮಾಂಸವನ್ನು ತಿಂದರೆ ಅವನು ತನ್ನ ಕುಲದಿಂದ ತೆಗೆದುಹಾಕಲ್ಪಡಬೇಕು.
ಕಾವಲಿನಬುರುಜು00 8/15 ಪುಟ 19 ಪ್ಯಾರ 8
ಯೆಹೋವನಿಗೆ ಸಂತೋಷವನ್ನು ತರುವ ಸ್ತೋತ್ರಯಜ್ಞಗಳು
8 ಆ ನೈವೇದ್ಯವನ್ನು ಅರ್ಪಿಸುತ್ತಿದ್ದ ವ್ಯಕ್ತಿಯ ಕುರಿತೇನು? ಯೆಹೋವನ ಮುಂದೆ ಬರುವ ಯಾವುದೇ ವ್ಯಕ್ತಿಯು ಶುದ್ಧ ಹಾಗೂ ನಿರ್ಮಲನಾಗಿರಬೇಕಿತ್ತೆಂದು ಧರ್ಮಶಾಸ್ತ್ರವು ತಿಳಿಸಿತ್ತು. ಯಾವುದೇ ರೀತಿಯಲ್ಲಿ ಅಶುದ್ಧನಾಗಿರುವ ಒಬ್ಬ ವ್ಯಕ್ತಿಯು, ಯೆಹೋವನ ಮುಂದೆ ತನ್ನ ಶುದ್ಧ ನಿಲುವನ್ನು ಪುನಃ ಪಡೆದುಕೊಳ್ಳಲು, ಮೊದಲು ಒಂದು ದೋಷಪರಿಹಾರಕ ಯಜ್ಞ ಅಥವಾ ಪ್ರಾಯಶ್ಚಿತ್ತ ಯಜ್ಞವನ್ನು ಅರ್ಪಿಸಬೇಕಾಗಿತ್ತು. ಆಗ ಮಾತ್ರವೇ ಅವನ ಸರ್ವಾಂಗಹೋಮ ಅಥವಾ ಸಮಾಧಾನಯಜ್ಞವನ್ನು ದೇವರು ಸ್ವೀಕರಿಸುತ್ತಿದ್ದನು. (ಯಾಜಕಕಾಂಡ 5:1-6, 15, 17) ನಾವು ಯೆಹೋವನ ಮುಂದೆ ಯಾವಾಗಲೂ ಒಂದು ಶುದ್ಧವಾದ ನಿಲುವನ್ನು ಕಾಪಾಡಿಕೊಳ್ಳುವುದು ಎಷ್ಟು ಮಹತ್ವಪೂರ್ಣವಾಗಿದೆ ಎಂಬುದನ್ನು ಇದರಿಂದ ಗ್ರಹಿಸಬಹುದಲ್ಲವೊ? ನಮ್ಮ ಆರಾಧನೆಯನ್ನು ದೇವರು ಸ್ವೀಕರಿಸಬೇಕಾದರೆ, ದೇವರ ನಿಯಮಗಳನ್ನು ಉಲ್ಲಂಘಿಸುವ ಮೂಲಕ ನಾವು ಮಾಡಿರುವ ಯಾವುದೇ ತಪ್ಪುಗಳನ್ನು ಸರಿಪಡಿಸಲು ನಾವು ತಡಮಾಡಬಾರದು. ನಮಗೆ ಸಹಾಯಮಾಡಲು ದೇವರು ಲಭ್ಯಗೊಳಿಸಿರುವ ಮಾಧ್ಯಮಗಳಿಂದ ನಾವು ಪ್ರಯೋಜನವನ್ನು ಪಡೆದುಕೊಳ್ಳಬೇಕು. ಅಂದರೆ ನಾವು ‘ಸಭೆಯ ಹಿರಿಯರನ್ನು’ ಮತ್ತು ‘ನಮ್ಮ ಪಾಪಗಳನ್ನು ನಿವಾರಣಮಾಡುವ ಯಜ್ಞವಾಗಿರುವ’ ಯೇಸು ಕ್ರಿಸ್ತನ ಸಹಾಯವನ್ನು ಕೋರಬೇಕು.—ಯಾಕೋಬ 5:14; 1 ಯೋಹಾನ 2:1, 2.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
(ಯಾಜಕಕಾಂಡ 6:13) ಬೆಂಕಿಯು ಯಜ್ಞವೇದಿಯ ಮೇಲೆ ಯಾವಾಗಲೂ ಉರಿಯುತ್ತಿರಬೇಕು; ಆರಿ ಹೋಗಬಾರದು.
it-1-E ಪುಟ 833 ಪ್ಯಾರ 1
ಬೆಂಕಿ
ದೇವದರ್ಶನ ಗುಡಾರದಲ್ಲಿ ಮತ್ತು ದೇವಾಲಯದಲ್ಲಿ ಉರಿಯುತ್ತಿದ್ದ ಬೆಂಕಿ. ಮಹಾಯಾಜಕನು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಯಜ್ಞವೇದಿಯ ಮೇಲೆ ಸುಗಂಧಧೂಪದ್ರವ್ಯವನ್ನ ಸುಡಬೇಕಿತ್ತು. (ವಿಮೋ 30:7, 8) ಈ ಯಜ್ಞವೇದಿಯ ಮೇಲೆ ಯಾವಾಗಲೂ ಬೆಂಕಿ ಉರಿಯಬೇಕು ಅನ್ನೋದು ದೇವರ ನಿಯಮವಾಗಿತ್ತು. (ಯಾಜ 6:12, 13) ಯೆಹೂದಿ ಸಂಪ್ರದಾಯದ ಪ್ರಕಾರ ಮೊದಲಿಗೆ ದೇವರು ಅದ್ಭುತವಾಗಿ ಬೆಂಕಿ ಉರಿಸಿದನು. ಇದನ್ನು ಅನೇಕರು ನಂಬುತ್ತಾರೆ. ಆದ್ರೆ ಬೈಬಲಿನಲ್ಲಿ ಈ ರೀತಿ ತಿಳಿಸಲಾಗಿಲ್ಲ. ಮೋಶೆಗೆ, ಯೆಹೋವನು ಆರಂಭದಲ್ಲಿ ಕೊಟ್ಟ ನಿರ್ದೇಶನದ ಪ್ರಕಾರ ಆರೋನನ ಮಕ್ಕಳು ಒಂದು ಯಜ್ಞವನ್ನು ವೇದಿಯ ಮೇಲೆ ಅರ್ಪಿಸೋ ಮುಂಚೆ ಅವರು ವೇದಿಯಲ್ಲಿ ‘ಬೆಂಕಿಯನ್ನ ಹಚ್ಚಿ ಅದರ ಮೇಲೆ ಕಟ್ಟಿಗೆಗಳನ್ನ’ ಕ್ರಮವಾಗಿ ಇಡಬೇಕಿತ್ತು. (ಯಾಜ 1:7, 8) ಆರೋನ ಮತ್ತು ಅವನ ಮಕ್ಕಳನ್ನ ಯಾಜಕರಾಗಿ ಅಭಿಷೇಕಿಸಿದ ಮೇಲೆ ಅವರು ಯೆಹೋವ ಕೊಟ್ಟ ನಿರ್ದೇಶನದ ಪ್ರಕಾರ ಯಜ್ಞವೇದಿಯಲ್ಲಿ ಬೆಂಕಿಯನ್ನು ಹಚ್ಚಿದ್ರು ಮತ್ತು ಮೊದಲ ಯಜ್ಞವನ್ನು ಅರ್ಪಿಸಿದರು. ಅದರ ನಂತರನೇ ಯೆಹೋವನು ಯಜ್ಞವೇದಿಯ ಮೇಲೆ ಬೆಂಕಿಯನ್ನು ಸುರಿಸಿದನು. ಈ ಬೆಂಕಿ ಬಹುಶಃ ದೇವದರ್ಶನ ಗುಡಾರದ ಮೇಲಿದ್ದ ಮೇಘಸ್ತಂಭದಿಂದ ಬಂದಿರಬಹುದು. ಯೆಹೋವನು ಯಜ್ಞದ ಕಟ್ಟಿಗೆಯನ್ನು ಸುಡಲಿಕ್ಕಾಗಿ ಬೆಂಕಿಯನ್ನು ಕಳುಹಿಸಲಿಲ್ಲ, ಬದಲಿಗೆ ‘ಯಜ್ಞವೇದಿಯ ಮೇಲಿದ್ದ ಸರ್ವಾಂಗಹೋಮದ್ರವ್ಯವನ್ನು, ಕೊಬ್ಬನ್ನು ದಹಿಸಲಿಕ್ಕಾಗಿ’ ಬೆಂಕಿಯನ್ನು ಕಳುಹಿಸಿದನು. ದೇವರು ಕಳಿಸಿದ ಬೆಂಕಿ ಮತ್ತು ಯಜ್ಞವೇದಿಯಲ್ಲಿ ಈಗಾಗಲೇ ಇದ್ದ ಬೆಂಕಿಯಿಂದಾಗಿ ವೇದಿಯಲ್ಲಿ ತುಂಬ ಹೊತ್ತು ಬೆಂಕಿ ಉರಿಯಿತು. (ಯಾಜ 8:14–9:24) ಯೆಹೋವನು ಇನ್ನೂ ಅನೇಕ ಸಂದರ್ಭಗಳಲ್ಲಿ ತಾನು ಯಜ್ಞವನ್ನು ಸ್ವೀಕರಿಸಿದ್ದೇನೆ ಅನ್ನೋದನ್ನ ತೋರಿಸಲಿಕ್ಕಾಗಿ ಆಕಾಶದಿಂದ ಬೆಂಕಿಯನ್ನು ಕಳಿಸಿದನು. ಉದಾಹರಣೆಗೆ, ದೇವಾಲಯದ ಪ್ರತಿಷ್ಠಾಪನೆಯ ಸಮಯದಲ್ಲಿ ಸೊಲೊಮೋನನು ಪ್ರಾರ್ಥನೆ ಮಾಡಿ ಮುಗಿಸಿದ ತಕ್ಷಣ ಯೆಹೋವನು ಆಕಾಶದಿಂದ ಬೆಂಕಿಯನ್ನು ಸುರಿಸಿದನು ಮತ್ತು ಯಜ್ಞವನ್ನು ದಹಿಸಿಬಿಟ್ಟನು. ಯೆಹೋವನು ತನ್ನ ಸೇವಕರು ಅರ್ಪಿಸಿದ ಯಜ್ಞಗಳನ್ನ ಸ್ವೀಕರಿಸಿದ್ದೇನೆ ಅಂತ ತೋರಿಸಲಿಕ್ಕಾಗಿ ಇನ್ನು ಯಾವಾಗೆಲ್ಲಾ ಅದ್ಭುತಕರವಾಗಿ ಬೆಂಕಿಯನ್ನು ಕಳುಹಿಸಿದನು ಅಂತ ತಿಳುಕೊಳ್ಳಲು ನ್ಯಾಯ 6:21; 1ಅರ 18:21-39; 1ಪೂರ್ವ 21:26 ಸಹ ನೋಡಿ.
(ಯಾಜಕಕಾಂಡ 6:25) ಆರೋನನಿಗೂ ಅವನ ವಂಶದವರಿಗೂ ಹೀಗೆ ಆಜ್ಞಾಪಿಸು—ದೋಷಪರಿಹಾರಕಯಜ್ಞನಿಯಮಗಳು. ಸರ್ವಾಂಗಹೋಮದ ಪಶುವನ್ನು ವಧಿಸುವ ಸ್ಥಳದಲ್ಲೇ ದೋಷಪರಿಹಾರಕಯಜ್ಞಪಶುವನ್ನೂ ಯೆಹೋವನ ಸನ್ನಿಧಿಯಲ್ಲಿ ವಧಿಸಬೇಕು. ಅದು ಮಹಾಪರಿಶುದ್ಧವಾದದ್ದರಿಂದ
si-E ಪುಟ 27 ಪ್ಯಾರ 15
ಬೈಬಲ್ ಪುಸ್ತಕ ಸಂಖ್ಯೆ 3—ಯಾಜಕಕಾಂಡ
15 (3) ಒಬ್ಬ ವ್ಯಕ್ತಿ ತಿಳಿಯದೇ ತಪ್ಪು ಮಾಡಿದ್ರೆ ಅವನು ದೋಷಪರಿಹಾರಕ ಯಜ್ಞವನ್ನ ಕೊಡಬೇಕಿತ್ತು. ಈ ಯಜ್ಞಕ್ಕಾಗಿ ಯಾವ ಪ್ರಾಣಿಯನ್ನ ಬಲಿಕೊಡಬೇಕು ಅನ್ನೋದು ಯಾರ ದೋಷಕ್ಕಾಗಿ ಈ ಯಜ್ಞವನ್ನ ಕೊಡಲಾಗುತ್ತಿದೆ ಅನ್ನೋದ್ರ ಮೇಲೆ ಹೊಂದಿಕೊಂಡಿತ್ತು. ಅಂದ್ರೆ ಆ ದೋಷಿ ಯಾಜಕನಾ, ಇಡೀ ಇಸ್ರಾಯೇಲ್ ಜನಾಂಗನಾ, ಒಬ್ಬ ಮುಖ್ಯಾಧಿಕಾರಿನಾ, ಒಬ್ಬ ಸಾಮಾನ್ಯ ವ್ಯಕ್ತಿನಾ ಅನ್ನೋದ್ರ ಮೇಲೆ ಯಾವ ಪ್ರಾಣಿಯನ್ನ ಬಲಿ ಕೊಡಬೇಕು ಅನ್ನೋದು ಹೊಂದಿಕೊಂಡಿತ್ತು. ಸರ್ವಾಂಗಹೋಮ ಮತ್ತು ಸಮಾಧಾನ ಯಜ್ಞ ಜನರು ಸ್ವಇಚ್ಛೆಯಿಂದ ಕೊಡೋ ಯಜ್ಞಗಳಾಗಿದ್ದವು. ಆದ್ರೆ ಒಬ್ಬ ವ್ಯಕ್ತಿ ತಪ್ಪು ಮಾಡಿದ್ದಲ್ಲಿ ಅವನು ದೋಷಪರಿಹಾರಕ ಯಜ್ಞವನ್ನು ಅರ್ಪಿಸಲೇಬೇಕಿತ್ತು.—ಯಾಜಕಕಾಂಡ 4:1-35; 6:24-30.
ನವೆಂಬರ್ 30–ಡಿಸೆಂಬರ್ 6
ಬೈಬಲಿನಲ್ಲಿರುವ ರತ್ನಗಳು | ಯಾಜಕಕಾಂಡ 8-9
“ಯೆಹೋವನ ಆಶೀರ್ವಾದದ ರುಜುವಾತು”
(ಯಾಜಕಕಾಂಡ 8:6-9) ಆಗ ಮೋಶೆ ಆರೋನನನ್ನೂ ಅವನ ಮಕ್ಕಳನ್ನೂ ಹತ್ತಿರಕ್ಕೆ ಬರಮಾಡಿಕೊಂಡು ಸ್ನಾನಮಾಡಿಸಿದನು. 7 ಆ ಮೇಲೆ ಯೆಹೋವನು ಆಜ್ಞಾಪಿಸಿದಂತೆ ಆರೋನನಿಗೆ ನಿಲುವಂಗಿಯನ್ನು ತೊಡಿಸಿ ನಡುಕಟ್ಟನ್ನು ಸುತ್ತಿ ಮೇಲಂಗಿಯನ್ನು ತೊಡಿಸಿ ಕವಚವನ್ನು ಹಾಕಿಸಿ ಕವಚದ ಮೇಲಣ ವಿಚಿತ್ರವಾದ ನಡುಕಟ್ಟನ್ನು ಕಟ್ಟಿ ಅದರಿಂದ ಕವಚವನ್ನು ಅವನಿಗೆ ಬಂಧಿಸಿ 8 ಚೀಲದ ಪದಕವನ್ನು ಅವನಿಗೆ ಬಿಗಿಸಿ ಅದರೊಳಗೆ ಊರೀಮ್ ತುಮ್ಮೀಮ್ ಎಂಬ ವಸ್ತುಗಳನ್ನು ಹಾಕಿ 9 ಅವನ ತಲೆಗೆ ಮುಂಡಾಸನ್ನು ಇಟ್ಟು ಅದರ ಮುಂಭಾಗದಲ್ಲಿ ಬಂಗಾರದ ಪಟ್ಟವನ್ನು ಕಟ್ಟಿದನು; ಅದೇ ಅವನಿಗೆ ಪರಿಶುದ್ಧ ಕಿರೀಟವು.
(ಯಾಜಕಕಾಂಡ 8:12) ಅದರಲ್ಲಿ ಸ್ವಲ್ಪವನ್ನು ಆರೋನನ ತಲೆಯ ಮೇಲೆ ಹೊಯಿದು ಅವನನ್ನು ಅಭಿಷೇಕಿಸಿ ಪ್ರತಿಷ್ಠಿಸಿದನು.
it-1-E ಪುಟ 1207
ಯಾಜಕ ಸೇವೆಗಾಗಿ ಅಭಿಷೇಕ
ಮೋಶೆಯು ಆರೋನ ಮತ್ತು ಆರೋನನ ಮಕ್ಕಳಾದ ನಾದಾಬ್, ಅಬೀಹೂ, ಎಲ್ಲಾಜಾರ್ ಮತ್ತು ಈತಾಮಾರ್ಗೆ ಸ್ನಾನ ಮಾಡಿಸಿದನು. (ಅಥವಾ ಅವರಿಗೆ ಸ್ನಾನ ಮಾಡುವಂತೆ ಹೇಳಿದನು.) ಅವರು ದೇವದರ್ಶನ ಗುಡಾರದ ಅಂಗಳದಲ್ಲಿಟ್ಟಿದ್ದ ತಾಮ್ರದ ಗಂಗಾಳದಲ್ಲಿನ ನೀರಿನಿಂದ ಸ್ನಾನ ಮಾಡಬೇಕಿತ್ತು. ನಂತರ ಮೋಶೆಯು ಆರೋನನಿಗೆ ಮಹಾ ಯಾಜಕನು ತೊಡಬೇಕಿದ್ದ ಎಲ್ಲಾ ಉಡುಪುಗಳನ್ನು ತೊಡಿಸಿದನು. (ಅರ 3:2, 3) ಈ ಬಟ್ಟೆಗಳಿಂದ ಆರೋನನಿಗೆ ವಿಶೇಷ ಜವಾಬ್ದಾರಿಯನ್ನು ಕೊಡಲಾಗಿದೆ ಅನ್ನೋದು ಗೊತ್ತಾಗುತ್ತಿತ್ತು. ನಂತರ ಮೋಶೆ ದೇವದರ್ಶನದ ಗುಡಾರ, ಅದರಲ್ಲಿದ್ದ ಪೀಠೋಪಕರಣಗಳು ಮತ್ತು ಪಾತ್ರೆಗಳು ಹಾಗೂ ಯಜ್ಞವೇದಿಯನ್ನು, ಅದಕ್ಕೆ ಸಂಬಂಧಪಟ್ಟ ಪಾತ್ರೆಗಳನ್ನ ಮತ್ತು ಗಂಗಾಳವನ್ನು ಅಭಿಷೇಕಿಸಿದನು. ಹೀಗೆ ಅವು ಪವಿತ್ರವಾದವು. ಅವನ್ನು ಯೆಹೋವನ ಸೇವೆಗಾಗಿ ಮಾತ್ರ ಉಪಯೋಗಿಸಬೇಕಿತ್ತು. ಕೊನೆಗೆ, ಮೋಶೆಯು ಆರೋನನ ತಲೆ ಮೇಲೆ ತೈಲ ಸುರಿಸಿ ಅವನನ್ನು ಅಭಿಷೇಕಿಸಿದನು.—ಯಾಜ 8:6-12; ವಿಮೋ 30:22-33; ಕೀರ್ತ 133:2.
(ಯಾಜಕಕಾಂಡ 9:1-5) ಎಂಟನೆಯ ದಿನದಲ್ಲಿ ಮೋಶೆ ಆರೋನನನ್ನೂ ಅವನ ಮಕ್ಕಳನ್ನೂ ಇಸ್ರಾಯೇಲ್ಯರ ಹಿರಿಯರನ್ನೂ ಕರೆದು ಆರೋನನಿಗೆ ಹೀಗಂದನು—2 ನೀನು ದೋಷಪರಿಹಾರಕಯಜ್ಞಕ್ಕಾಗಿ ಪೂರ್ಣಾಂಗವಾದ ಹೋರಿಕರುವನ್ನೂ ಸರ್ವಾಂಗಹೋಮಕ್ಕಾಗಿ ಪೂರ್ಣಾಂಗವಾದ ಟಗರನ್ನೂ ನಿನಗೋಸ್ಕರ ತೆಗೆದುಕೊಂಡು ಯೆಹೋವನ ಸನ್ನಿಧಿಯಲ್ಲಿ ಸಮರ್ಪಿಸಬೇಕು. 3 ಮತ್ತು ನೀನು ಇಸ್ರಾಯೇಲ್ಯರ ಸಂಗಡ ಮಾತಾಡಿ ಅವರಿಗೆ—ಈ ಹೊತ್ತು ಯೆಹೋವನು ಪ್ರತ್ಯಕ್ಷನಾಗುತ್ತಾನಾದದರಿಂದ ನೀವು ಆತನ ಸನ್ನಿಧಿಯಲ್ಲಿ ಸಮರ್ಪಿಸುವದಕ್ಕೋಸ್ಕರ ದೋಷಪರಿಹಾರಕ್ಕಾಗಿ ಹೋತವನ್ನೂ ಸರ್ವಾಂಗಹೋಮಕ್ಕಾಗಿ ಒಂದು ವರುಷದ ಪೂರ್ಣಾಂಗವಾದ ಕರುವನ್ನೂ ಕುರಿಯನ್ನೂ 4 ಸಮಾಧಾನಯಜ್ಞಕ್ಕಾಗಿ ಒಂದು ಹೋರಿಯನ್ನೂ ಟಗರನ್ನೂ ನೈವೇದ್ಯಕ್ಕಾಗಿ ಎಣ್ಣೆಮಿಶ್ರವಾದ ಪದಾರ್ಥವನ್ನೂ ತೆಗೆದುಕೊಂಡು ಬರಬೇಕೆಂದು ಆಜ್ಞಾಪಿಸು ಅಂದನು. 5 ಮೋಶೆ ಆಜ್ಞಾಪಿಸಿದ ಮೇರೆಗೆ ಅವರು ದೇವದರ್ಶನದ ಗುಡಾರದ ಹತ್ತಿರಕ್ಕೆ ತಂದರು. ಸಮೂಹದವರೆಲ್ಲರೂ ಹತ್ತಿರಕ್ಕೆ ಬಂದು ಯೆಹೋವನ ಸನ್ನಿಧಿಯಲ್ಲಿ ನಿಂತಿರಲಾಗಿ
it-1-E ಪುಟ 1208 ಪ್ಯಾರ 8
ಯಾಜಕ ಸೇವೆಗಾಗಿ ಅಭಿಷೇಕ
ಆರೋನ ಮತ್ತು ಅವನ ಮಕ್ಕಳನ್ನು ಯಾಜಕರಾಗಿ ಅಭಿಷೇಕಿಸಿ ಏಳು ದಿನಗಳಾದ ನಂತರ ಅಂದರೆ ಎಂಟನೇ ದಿನದಲ್ಲಿ ಅವರು ಮೊದಲ ಬಾರಿಗೆ ಇಸ್ರಾಯೇಲ್ ಜನಾಂಗಕ್ಕಾಗಿ ದೋಷಪರಿಹಾರಕ ಯಜ್ಞವನ್ನು (ಮೋಶೆಯ ಸಹಾಯ ಇಲ್ಲದೆ) ಅರ್ಪಿಸಿದರು. ಯಾಕಂದ್ರೆ ಇಸ್ರಾಯೇಲ್ಯರು ಪಾಪಿಗಳಾಗಿದ್ದರು ಮತ್ತು ಅವರು ಚಿನ್ನದ ಬಸವನನ್ನ ಮಾಡಿ ಆರಾಧಿಸಿದ್ರು. ಯೆಹೋವನಿಗೆ ಇದು ಇಷ್ಟ ಆಗಲಿಲ್ಲ. ಹಾಗಾಗಿ ಅವರಿಗೆ ಕ್ಷಮೆಯ ಅಗತ್ಯ ಇತ್ತು. (ಯಾಜ 9:1-7; ವಿಮೋ 32:1-10) ಆರೋನ ಮತ್ತು ಅವನ ಮಕ್ಕಳು ಯಜ್ಞವನ್ನು ಅರ್ಪಿಸಿದಾಗ ಯೆಹೋವನು ಬೆಂಕಿಯನ್ನು ಸುರಿಸಿದನು. ಆ ಬೆಂಕಿ ಗುಡಾರದ ಮೇಲಿದ್ದ ಮೇಘಸ್ತಂಭದಿಂದ ಬಂದಿರಬಹುದು. ಬೆಂಕಿಗೆ ಯಜ್ಞದಲ್ಲಿದ್ದ ಎಲ್ಲಾ ವಸ್ತುಗಳು ಸುಟ್ಟುಹೋದವು. ಹೀಗೆ ಯೆಹೋವನು, ಹೊಸದಾಗಿ ನೇಮಿತರಾದ ಯಾಜಕರನ್ನು ತಾನು ಮೆಚ್ಚಿದ್ದೇನೆ ಅಂತ ತೋರಿಸಿಕೊಟ್ಟನು.—ಯಾಜ 9:23, 24.
(ಯಾಜಕಕಾಂಡ 9:23, 24) ತರುವಾಯ ಮೋಶೆಯೂ ಆರೋನನೂ ದೇವದರ್ಶನದ ಗುಡಾರದೊಳಗೆ ಹೋದರು. ಅವರು ಅಲ್ಲಿಂದ ಹೊರಗೆ ಬಂದಾಗ ಜನರನ್ನು ಆಶೀರ್ವದಿಸಿದರು. ಆಗ ಯೆಹೋವನ ಮಹಿಮೆಯು ಜನರೆಲ್ಲರಿಗೆ ಪ್ರತ್ಯಕ್ಷವಾಯಿತು. 24 ಯೆಹೋವನ ಸನ್ನಿಧಿಯಿಂದ ಬೆಂಕಿಯು ಹೊರಟು ಯಜ್ಞವೇದಿಯ ಮೇಲಿದ್ದ ಸರ್ವಾಂಗಹೋಮದ್ರವ್ಯವನ್ನೂ ಕೊಬ್ಬನ್ನೂ ದಹಿಸಿಬಿಟ್ಟಿತು. ಜನರೆಲ್ಲರೂ ಅದನ್ನು ಕಂಡು ಉತ್ಸಾಹದಿಂದ ಆರ್ಭಟಿಸಿ ಅಡ್ಡಬಿದ್ದು ನಮಸ್ಕರಿಸಿದರು.
ಕಾವಲಿನಬುರುಜು19.11 ಪುಟ 23 ಪ್ಯಾರ 13
ಯಾಜಕಕಾಂಡ ಪುಸ್ತಕದಿಂದ ನಮಗಿರುವ ಪಾಠಗಳು
13 ನಾಲ್ಕನೇ ಪಾಠ: ಯೆಹೋವನು ತನ್ನ ಸಂಘಟನೆಯ ಭೂಭಾಗವನ್ನು ಆಶೀರ್ವದಿಸುತ್ತಿದ್ದಾನೆ. ಕ್ರಿ.ಪೂ. 1512 ರಲ್ಲಿ ದೇವದರ್ಶನ ಗುಡಾರವನ್ನು ಸೀನಾಯಿ ಬೆಟ್ಟದ ತಪ್ಪಲಲ್ಲಿ ಇಟ್ಟಾಗ ಏನಾಯಿತೆಂದು ನೋಡಿ. (ವಿಮೋ. 40:17) ಮೋಶೆಯು ಆರೋನ ಮತ್ತು ಅವನ ಮಕ್ಕಳನ್ನು ಯಾಜಕರನ್ನಾಗಿ ಅಭಿಷೇಕಿಸಿದನು. ಆ ಸಂದರ್ಭದಲ್ಲಿ ಯಾಜಕರು ತಮ್ಮ ಮೊದಲ ಯಜ್ಞಗಳನ್ನು ಕೊಡುವಾಗ ಅದನ್ನು ನೋಡಲು ಇಡೀ ಇಸ್ರಾಯೇಲ್ ಜನಾಂಗವೇ ಅಲ್ಲಿ ಕೂಡಿಬಂದಿತ್ತು. (ಯಾಜ. 9:1-5) ಹೊಸದಾಗಿ ನೇಮಿತವಾದ ಯಾಜಕರಿಗೆ ತನ್ನ ಬೆಂಬಲ ಇದೆ ಎಂದು ಯೆಹೋವನು ಹೇಗೆ ತೋರಿಸಿದನು? ಆರೋನ ಮತ್ತು ಮೋಶೆ ಜನರನ್ನು ಆಶೀರ್ವದಿಸುತ್ತಿದ್ದಂತೆ ಯೆಹೋವನ ಸನ್ನಿಧಿಯಿಂದ ಬೆಂಕಿ ಹೊರಟು ಯಜ್ಞವೇದಿಯ ಮೇಲಿದ್ದ ಪ್ರಾಣಿಯಜ್ಞವನ್ನು ಸಂಪೂರ್ಣವಾಗಿ ದಹಿಸಿಬಿಟ್ಟಿತು.—ಯಾಜಕಕಾಂಡ 9:23, 24 ಓದಿ.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
(ಯಾಜಕಕಾಂಡ 8:6) ಆಗ ಮೋಶೆ ಆರೋನನನ್ನೂ ಅವನ ಮಕ್ಕಳನ್ನೂ ಹತ್ತಿರಕ್ಕೆ ಬರಮಾಡಿಕೊಂಡು ಸ್ನಾನಮಾಡಿಸಿದನು.
ಕಾವಲಿನಬುರುಜು14 11/15 ಪುಟ 9 ಪ್ಯಾರ 6
ನಾವು ಪರಿಶುದ್ಧರಾಗಿರಬೇಕು—ಏಕೆ?
6 ದೈಹಿಕ ಶುದ್ಧತೆ ಕಾಪಾಡುವಂತೆ ಇಸ್ರಾಯೇಲಿನ ಯಾಜಕರಿಗೆ ಕೊಡಲಾದ ನಿಯಮವು ಇಂದು ಯೆಹೋವನ ಜನರಿಗೆ ಮಹತ್ವದ್ದಾಗಿದೆ. ನಾವು ಯಾರೊಟ್ಟಿಗೆ ಬೈಬಲ್ ಅಧ್ಯಯನ ನಡೆಸುತ್ತೇವೊ ಅವರು ನಮ್ಮ ಆರಾಧನಾ ಸ್ಥಳಗಳ ಸ್ವಚ್ಛತೆಯನ್ನು ಗಮನಿಸುತ್ತಾರೆ. ಅಲ್ಲದೆ ನಾವು ನೀಟಾಗಿರುವುದನ್ನು, ನಮ್ಮ ಉಡುಪು ಸಭ್ಯವಾಗಿರುವುದನ್ನು ಗಮನಿಸುತ್ತಾರೆ. ಯಾಜಕರಿಗೆ ಶುದ್ಧತೆಯ ಕುರಿತಾಗಿ ಕೊಡಲಾದ ಆಜ್ಞೆಯು ಇನ್ನೊಂದು ಮಾತನ್ನೂ ಎತ್ತಿತೋರಿಸುತ್ತದೆ. ಅದೇನೆಂದರೆ, ಯೆಹೋವನ ಆರಾಧನೆಯೆಂಬ ಉನ್ನತ ಪರ್ವತವನ್ನು ಹತ್ತುವವರು ‘ನಿರ್ಮಲಮನಸ್ಸಿನವರೂ’ ಆಗಿರಬೇಕು. (ಕೀರ್ತನೆ 24:3, 4 ಓದಿ; ಯೆಶಾ. 2:2, 3.) ನಾವು ದೇವರಿಗೆ ಪವಿತ್ರ ಸೇವೆ ಸಲ್ಲಿಸುವಾಗ ನಮ್ಮ ಹೃದಮನಗಳು ಮಾತ್ರವಲ್ಲ ನಮ್ಮ ದೇಹಗಳೂ ಶುದ್ಧವಾಗಿರಬೇಕು. ಈ ವಿಷಯದಲ್ಲಿ ನಾವು ಆಗಾಗ್ಗೆ ಸ್ವಪರೀಕ್ಷೆ ಮಾಡುತ್ತಾ ಇರಬೇಕು ಮತ್ತು ಆಗ ನಮ್ಮಲ್ಲಿ ಕೆಲವರು ಅಗತ್ಯವಾದ ಗಮನಾರ್ಹ ಬದಲಾವಣೆಗಳನ್ನು ಮಾಡಬಹುದು. ಹೀಗೆ ನಾವು ಪರಿಶುದ್ಧರಾಗಿರಲು ಸಾಧ್ಯ. (2 ಕೊರಿಂ. 13:5) ಉದಾಹರಣೆಗೆ, ದೀಕ್ಷಾಸ್ನಾನ ಪಡೆದಿರುವ ಒಬ್ಬ ವ್ಯಕ್ತಿ ಬೇಕುಬೇಕೆಂದು ಅಶ್ಲೀಲ ಚಿತ್ರಗಳನ್ನು ನೋಡುತ್ತಿರುವಲ್ಲಿ ‘ನಾನು ಪರಿಶುದ್ಧನಾಗಿದ್ದೇನಾ?’ ಎಂದು ತನ್ನನ್ನೇ ಕೇಳಿಕೊಳ್ಳಬೇಕು. ನಂತರ ಆ ದುಷ್ಟ ಚಟವನ್ನು ನಿಲ್ಲಿಸಲು ಬೇಕಾದ ಸಹಾಯವನ್ನು ಪಡೆದುಕೊಳ್ಳಬೇಕು.—ಯಾಕೋ. 5:14.
(ಯಾಜಕಕಾಂಡ 8:14-17) ಆನಂತರ ಅವನು ದೋಷಪರಿಹಾರಾರ್ಥವಾದ ಹೋರಿಯನ್ನು ತರಿಸಿದನು. ಆರೋನನೂ ಅವನ ಮಕ್ಕಳೂ ತಮ್ಮ ಕೈಗಳನ್ನು ಅದರ ತಲೆಯ ಮೇಲೆ ಇಟ್ಟರು. 15 ಆ ಹೋರಿಯನ್ನು ವಧಿಸಿದ ಮೇಲೆ ಮೋಶೆ ಅದರ ರಕ್ತವನ್ನು ತನ್ನ ಬೆರಳಿನಿಂದ ಯಜ್ಞವೇದಿಯ ಕೊಂಬುಗಳಿಗೆ ಸುತ್ತಲೂ ಹೆಚ್ಚಿ ಯಜ್ಞವೇದಿಯನ್ನು ಶುದ್ಧಪಡಿಸಿ ಮಿಕ್ಕ ರಕ್ತವನ್ನು ಯಜ್ಞವೇದಿಯ ಬುಡದಲ್ಲಿ ಸುರಿದುಬಿಟ್ಟನು. ಹೀಗೆ ಯಜ್ಞವೇದಿಯ ನಿಮಿತ್ತ ದೋಷಪರಿಹಾರಕಾಚಾರವನ್ನು ನಡಿಸಿ ಅದನ್ನು ಪ್ರತಿಷ್ಠಿಸಿದನು. 16 ಆ ಹೋರಿಯ ಕರುಳುಗಳ ಮೇಲಣ ಕೊಬ್ಬನ್ನೂ ಕಾಳಿಜದ ಹತ್ತಿರವಿರುವ ಕೊಬ್ಬನ್ನೂ ಎರಡು ಹುರುಳಿಕಾಯಿಗಳನ್ನೂ ಅವುಗಳ ಮೇಲಿರುವ ಕೊಬ್ಬನ್ನೂ ಮೋಶೆ ತೆಗೆದುಕೊಂಡು ಯಜ್ಞವೇದಿಯ ಮೇಲೆ ಹೋಮ ಮಾಡಿದನು. 17 ಯೆಹೋವನು ಆಜ್ಞಾಪಿಸಿದಂತೆ ಅದರಲ್ಲಿ ಮಿಕ್ಕದ್ದನ್ನೆಲ್ಲಾ ಅಂದರೆ ಅದರ ಚರ್ಮವನ್ನೂ ಮಾಂಸವನ್ನೂ ಕಲ್ಮಷವನ್ನೂ ಪಾಳೆಯದ ಹೊರಗೆ ಬೆಂಕಿಯಿಂದ ಸುಡಿಸಿಬಿಟ್ಟನು.
it-2-E ಪುಟ 437 ಪ್ಯಾರ 3
ಮೋಶೆ
ಯೆಹೋವನು ಮೋಶೆಯನ್ನು ಇಸ್ರಾಯೇಲ್ಯರ ಜೊತೆ ಮಾಡಿಕೊಂಡ ಒಡಂಬಡಿಕೆಯ ಮಧ್ಯಸ್ಥನಾಗಿ ನೇಮಿಸಿದನು. ಮೋಶೆಯನ್ನ ಬಿಟ್ರೆ, ಹೊಸ ಒಂಡಂಬಡಿಕೆಯ ಮಧ್ಯಸ್ಥನಾದ ಯೇಸುವಿಗೆ ಮಾತ್ರ ಯೆಹೋವ ದೇವರೊಟ್ಟಿಗೆ ಇಷ್ಟೊಂದು ಆಪ್ತ ಸಂಬಂಧ ಇತ್ತು. ಬೇರೆ ಯಾವ ಮನುಷ್ಯರಿಗೂ ಇಷ್ಟು ಆಪ್ತತೆ ಇರಲಿಲ್ಲ. ಈ ಧರ್ಮಶಾಸ್ತ್ರದ ಒಡಂಬಡಿಕೆ ಅಥವಾ ಕರಾರು ಎರಡು ಪಕ್ಷಗಳ ನಡುವೆ ನಡೆಯಲಿತ್ತು. ಒಂದು ಕಡೆ ಯೆಹೋವ ಇದ್ದನು ಮತ್ತು ಇನ್ನೊಂದು ಕಡೆ ಇಡೀ ಇಸ್ರಾಯೇಲ್ ಜನಾಂಗ (ಅಂದ್ರೆ ಇಸ್ರಾಯೇಲ್ಯರನ್ನು ಪ್ರತಿನಿಧಿಸುತ್ತಿದ್ದ ಹಿರೀಪುರುಷರು) ಇತ್ತು. ಮೋಶೆಯು ನಿಬಂಧನ ಗ್ರಂಥದಲ್ಲಿ ಇದ್ದಿದ್ದನ್ನು ಜನರಿಗೆ ಓದಿ ಹೇಳಿದನು. ನಂತರ ಜನರು “ಯೆಹೋವನ ಆಜ್ಞೆಗಳನ್ನೆಲ್ಲ ನಾವು ಅನುಸರಿಸಿ ವಿಧೇಯರಾಗಿರುವೆವು” ಅಂದರು. ಆಗ ಮೋಶೆಯು ನಿಬಂಧನ ಗ್ರಂಥದ ಮೇಲೆ ಯಜ್ಞವಾಗಿ ಕೊಟ್ಟ ಪ್ರಾಣಿಯ ರಕ್ತವನ್ನು ಚಿಮುಕಿಸಿದನು. (ವಿಮೋ 24:3, 8; ಇಬ್ರಿ 9:19) ಮೋಶೆಯು ಧರ್ಮಶಾಸ್ತ್ರದ ಒಡಂಬಡಿಕೆಯ ಮಧ್ಯಸ್ಥನಾಗಿದ್ದರಿಂದ ದೇವದರ್ಶನದ ಗುಡಾರವನ್ನ ಮತ್ತು ಅದರಲ್ಲಿರೋ ವಸ್ತುಗಳನ್ನ ತಯಾರಿಸುವ ಕೆಲಸವನ್ನ ನೋಡಿಕೊಳ್ಳಬೇಕಿತ್ತು. ಅದನ್ನು ದೇವರು ಹೇಳಿದ ತರನೇ ಮಾಡಬೇಕಿತ್ತು. ಅಷ್ಟೇ ಅಲ್ಲ, ಯಾಜಕರನ್ನ ಅಭಿಷೇಕಿಸುವ ಜವಾಬ್ದಾರಿ ಅವನಿಗಿತ್ತು. ಗುಡಾರವನ್ನ ಅಭಿಷೇಕಿಸುವ ಜವಾಬ್ದಾರಿ ಮತ್ತು ಆರೋನನ ತಲೆ ಮೇಲೆ ಸುರಿಯಲಿದ್ದ ತೈಲವನ್ನ ತಯಾರಿಸೋ ಜವಾಬ್ದಾರಿನೂ ಇತ್ತು. ನಂತರ ಅವನ ನೇತೃತ್ವದಲ್ಲೇ ಹೊಸದಾಗಿ ಅಭಿಷೇಕಿತರಾದ ಯಾಜಕರು ಮೊದಲ ಯಜ್ಞವನ್ನ ಅರ್ಪಿಸಿದರು.—ವಿಮೋ ಅಧ್ಯಾ 25-29; ಯಾಜ ಅಧ್ಯಾ 8, 9.