ಲೇವಿಯರ ಪ್ರಾರ್ಥನೆಯಿಂದ ಪಾಠಗಳು
“ನಿನ್ನ ಮಹಾನಾಮಕ್ಕೆ ಕೊಂಡಾಟವಾಗಲಿ.”—ನೆಹೆ. 9:5.
1. (1) ದೇವಜನರ ಯಾವ ಸಮ್ಮೇಳನದ ಕುರಿತು ನಾವು ಪರಿಗಣಿಸಲಿದ್ದೇವೆ? (2) ಯಾವ ಪ್ರಶ್ನೆಗಳನ್ನು ನಾವು ಕೇಳಿಕೊಳ್ಳಬೇಕು?
“ಏಳಿರಿ, ನಮ್ಮ ದೇವರಾದ ಯೆಹೋವನಿಗೆ ಯುಗಯುಗಕ್ಕೂ ಸ್ತೋತ್ರವಾಗಲಿ ಅನ್ನಿರಿ.” ಈ ಮಾತುಗಳಿಂದ ಪುರಾತನಕಾಲದ ದೇವಜನರನ್ನು ಒಂದು ವಿಶೇಷ ಪ್ರಾರ್ಥನೆಗಾಗಿ ಒಟ್ಟುಗೂಡುವಂತೆ ಉತ್ತೇಜಿಸಲಾಯಿತು. ಬೈಬಲಲ್ಲಿ ದಾಖಲಾದ ದೊಡ್ಡ ಪ್ರಾರ್ಥನೆ ಇದಾಗಿದೆ. (ನೆಹೆ. 9:4, 5) ಈ ಸಮ್ಮೇಳನ ಕ್ರಿ.ಪೂ. 455ರ ಏಳನೆಯ ಯೆಹೂದಿ ತಿಂಗಳಾದ ತಿಶ್ರಿಯ 24ನೇ ದಿನದಂದು ನಡೆಯಿತು. ಆ ವಿಶೇಷ ದಿನಕ್ಕಿಂತ ಮುಂಚೆ ಏನೆಲ್ಲ ನಡೆಯಿತು ಎನ್ನುವುದನ್ನು ನಾವೀಗ ಪರಿಗಣಿಸುವಾಗ ಈ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯಿರಿ: ಆ ಸಂದರ್ಭ ಯಶಸ್ವಿಕರವಾಗಿ ಜರಗುವಂತೆ ಯಾವುದು ಸಹಾಯಮಾಡಿತು? ಚೆನ್ನಾಗಿ ತಯಾರಿಸಿದ ಈ ಪ್ರಾರ್ಥನೆಯಿಂದ ಸ್ವತಃ ನಾನು ಯಾವ ಪಾಠಗಳನ್ನು ಕಲಿಯಬಹುದು?—ಕೀರ್ತ. 141:2.
ವಿಶೇಷ ತಿಂಗಳು
2. ಆ ಸಮ್ಮೇಳನದಲ್ಲಿ ಇಸ್ರಾಯೇಲ್ಯರು ನಮಗೆ ಯಾವ ಉತ್ತಮ ಮಾದರಿಯನ್ನಿಟ್ಟರು?
2 ಈ ಮೇಲಿನ ಸಮ್ಮೇಳನಕ್ಕೆ ಒಂದು ತಿಂಗಳು ಮುಂಚೆ ಯೆಹೂದ್ಯರು ಯೆರೂಸಲೇಮಿನ ಗೋಡೆಗಳ ಪುನರ್ನಿರ್ಮಾಣ ಮಾಡಿದ್ದರು. (ನೆಹೆ. 6:15) ದೇವಜನರು ಆ ಕೆಲಸವನ್ನು ಬರೀ 52 ದಿನಗಳಲ್ಲಿ ಮಾಡಿ, ಬಳಿಕ ತಮ್ಮ ಆಧ್ಯಾತ್ಮಿಕ ಅವಶ್ಯಕತೆಗಳಿಗೆ ಗಮನವನ್ನು ಕೊಡಲಾರಂಭಿಸಿದರು. ಹೊಸ ತಿಂಗಳಾದ ತಿಶ್ರಿಯ ಪ್ರಥಮದಿನ, ಅವರು ಅಲ್ಲಿಯ ಸಾರ್ವಜನಿಕ ಚೌಕದಲ್ಲಿ ಕೂಡಿಬಂದರು. ಎಜ್ರನೂ ಇತರ ಲೇವ್ಯರೂ ಧರ್ಮಶಾಸ್ತ್ರ ಓದುವುದನ್ನು ಅಲ್ಲಿ ಅವರು ಕೇಳಿಸಿಕೊಳ್ಳಲಿದ್ದರು. “ಗ್ರಹಿಸಶಕ್ತರಾದ” ಎಲ್ಲ ಕುಟುಂಬಗಳು “ಪ್ರಾತಃಕಾಲದಿಂದ ಮಧ್ಯಾಹ್ನದ ವರೆಗೂ” ನಿಂತುಕೊಂಡು ಕೇಳಿದರು. ಇಂದು, ಎಲ್ಲ ಸೌಕರ್ಯಗಳಿರುವ ರಾಜ್ಯ ಸಭಾಗೃಹದಲ್ಲಿ ಕೂಟಗಳಿಗೆ ನೆರೆದುಬರುವ ನಮಗೆ ಇದೆಷ್ಟು ಉತ್ತಮ ಮಾದರಿ! ಆದರೂ, ಕೆಲವೊಮ್ಮೆ ಇಂಥ ಸಂದರ್ಭಗಳಲ್ಲಿ ನಿಮ್ಮ ಮನಸ್ಸು ಅತ್ತಿತ್ತ ಅಲೆದಾಡುತ್ತಾ ಅಷ್ಟೇನು ಪ್ರಮುಖವಲ್ಲದ ವಿಷಯಗಳ ಕುರಿತು ಯೋಚಿಸುತ್ತಿದೆ ಎಂದು ನಿಮಗನಿಸುತ್ತಾ? ಹಾಗಿರುವಲ್ಲಿ ಆ ಪೂರ್ವಕಾಲದ ಇಸ್ರಾಯೇಲ್ಯರ ಮಾದರಿಯನ್ನು ಪುನಃ ಪರಿಗಣಿಸಿ. ಅವರು ಕೇಳಿಸಿಕೊಂಡದ್ದು ಮಾತ್ರವಲ್ಲ ಕೇಳಿದ್ದನ್ನು ಎಷ್ಟರಮಟ್ಟಿಗೆ ಮನಸ್ಸಿಗೆ ತಕ್ಕೊಂಡರೆಂದರೆ ಜನಾಂಗವಾಗಿ ದೇವರ ನಿಯಮಗಳಿಗೆ ವಿಧೇಯರಾಗಲು ತಪ್ಪಿದ್ದಕ್ಕೆ ಅಳತೊಡಗಿದರು.—ನೆಹೆ. 8:1-9.
3. ಇಸ್ರಾಯೇಲ್ಯರು ವಿಧೇಯತೆಯಿಂದ ಯಾವ ನಿರ್ದೇಶನವನ್ನು ಪಾಲಿಸಿದರು?
3 ಪಾಪಗಳನ್ನು ಬಹಿರಂಗ ಅರಿಕೆಮಾಡುವ ಸಮಯ ಅದಾಗಿರಲಿಲ್ಲ. ಅದು ಹಬ್ಬದ ದಿನವಾಗಿತ್ತು. ಯೆಹೋವ ದೇವರ ಆರಾಧನೆಯಲ್ಲಿ ಉಲ್ಲಾಸಪಡುವ ಸಮಯವಾಗಿತ್ತು. (ಅರ. 29:1) ಆದುದರಿಂದ, ನೆಹೆಮೀಯ ಜನರಿಗೆ ಹೇಳಿದ್ದು: “ಹೋಗಿ ಮೃಷ್ಟಾನ್ನವನ್ನೂ ಮಧುರಪಾನವನ್ನೂ ತೆಗೆದುಕೊಳ್ಳಿರಿ; ತಮಗೋಸ್ಕರ ಏನೂ ಸಿದ್ಧಮಾಡದವರಿಗೆ ಭಾಗಗಳನ್ನು ಕಳುಹಿಸಿರಿ. ಈ ದಿನವು ನಮ್ಮ ಕರ್ತನಿಗೆ ಪ್ರತಿಷ್ಠಿತ ದಿನವಾಗಿರುವದರಿಂದ ವ್ಯಸನಪಡಬೇಡಿರಿ; ಯೆಹೋವನ ಆನಂದವೇ ನಿಮ್ಮ ಆಶ್ರಯವಾಗಿದೆ.” ಸಂತೋಷಕರವಾಗಿ, ಜನರು ಇದಕ್ಕೆ ವಿಧೇಯರಾದರು ಮತ್ತು ಆ ದಿನ “ಬಹಳವಾಗಿ ಸಂತೋಷಪಟ್ಟರು.”—ನೆಹೆ. 8:10-12.
4. (1) ಇಸ್ರಾಯೇಲ್ಯ ಕುಟುಂಬದ ತಲೆಗಳು ಏನು ಮಾಡಿದರು? (2) ಪರ್ಣಶಾಲೆಗಳ ಹಬ್ಬದ ವಿಶೇಷತೆ ಏನಾಗಿತ್ತು?
4 ಇಡೀ ಜನಾಂಗವು ದೇವರ ಧರ್ಮಶಾಸ್ತ್ರ ವನ್ನು ಅನುಸರಿಸಲು ಇನ್ನೇನು ಮಾಡಬೇಕು ಎಂದು ತಿಳಿದುಕೊಳ್ಳಲು ಮರುದಿನವೇ ಕುಟುಂಬದ ತಲೆಗಳನ್ನು ಒಟ್ಟುಸೇರಿಸಲಾಯಿತು. ಈ ತಿಶ್ರಿ ತಿಂಗಳಿನ 15ರಿಂದ 22ನೇ ತಾರೀಖಿನ ವರೆಗೆ ಪರ್ಣಶಾಲೆಗಳ ಹಬ್ಬವನ್ನು ಆಚರಿಸಬೇಕೆಂದು ಮತ್ತು ಹಬ್ಬದ ಕೊನೆಯಲ್ಲಿ ಸಭೆ ಸೇರಬೇಕೆಂದು ಶಾಸ್ತ್ರವಚನಗಳನ್ನು ಓದಿದಾಗ ಅವರಿಗೆ ತಿಳಿದುಬಂತು. ಆ ತಕ್ಷಣವೇ ಅದರ ಸಿದ್ಧತೆ ಮಾಡಲಾರಂಭಿಸಿದರು. ಹೀಗೆ, ಯೆಹೋಶುವನ ದಿನಗಳಿಂದ ಹಿಡಿದು ಅಲ್ಲಿಯವರೆಗೆ ನಡೆದ ಅತಿ ಯಶಸ್ವಿಕರವಾಗಿ ನಡೆದ ಹಬ್ಬ ಅದಾಗಿತ್ತು. ಅವರು “ಬಹಳವಾಗಿ ಸಂತೋಷಪಟ್ಟರು.” ಈ ಹಬ್ಬದ ಒಂದು ಪ್ರಮುಖ ವೈಶಿಷ್ಟ್ಯವೇನೆಂದರೆ “ಮೊದಲನೆಯ ದಿನದಿಂದ ಕಡೆಯ ದಿನದ ವರೆಗೆ ಪ್ರತಿದಿನವೂ” ಧರ್ಮಶಾಸ್ತ್ರವನ್ನು ಓದುವುದಾಗಿತ್ತು.—ನೆಹೆ. 8:13-18.
ಪಾಪ ಅರಿಕೆಯ ದಿನ
5. ಲೇವಿಯರು ಯೆಹೋವನಿಗೆ ಇಸ್ರಾಯೇಲ್ಯರ ಪರವಾಗಿ ಪ್ರಾರ್ಥನೆ ಮಾಡುವುದಕ್ಕಿಂತ ಮುಂಚೆ ದೇವಜನರು ಏನು ಮಾಡಿದರು?
5 ಎರಡು ದಿನಗಳ ನಂತರ, ಇಸ್ರಾಯೇಲ್ಯರು ತಾವು ಧರ್ಮಶಾಸ್ತ್ರವನ್ನು ವಿಧೇಯರಾಗಲು ತಪ್ಪಿದ್ದಕ್ಕಾಗಿ ಬಹಿರಂಗವಾಗಿ ಪಾಪ ಅರಿಕೆ ಮಾಡಲು ಕೂಡಿಬರಬೇಕಿತ್ತು. ಇದು ಹಬ್ಬದ ಅಥವಾ ಔತಣದ ದಿನವಾಗಿರಲಿಲ್ಲ. ಬದಲಿಗೆ, ದೇವಜನರು ಉಪವಾಸವಿದ್ದು, ಗೋಣಿತಟ್ಟನ್ನು ಕಟ್ಟಿಕೊಂಡು ಶೋಕಪಡುವ ದಿನವಾಗಿತ್ತು. ಆ ದಿನ, ದೇವರ ಧರ್ಮಶಾಸ್ತ್ರವನ್ನು ಬೆಳಗ್ಗೆ ಸುಮಾರು ಮೂರು ತಾಸು ಜನರಿಗೆ ಓದಿ ಹೇಳಲಾಯಿತು. ಮಧ್ಯಾಹ್ನದ ನಂತರ ಅವರು “ತಮ್ಮ ದೇವರಾದ ಯೆಹೋವನಿಗೆ ಅಡ್ಡಬಿದ್ದು ಪಾಪಗಳನ್ನು ಅರಿಕೆಮಾಡಿದರು.” ಆ ಬಳಿಕ ಲೇವಿಯರು ಎಲ್ಲರ ಪರವಾಗಿ ಪ್ರಾರ್ಥಿಸಿದರು. —ನೆಹೆ. 9:1-4.
6. (1) ಲೇವಿಯರು ಮಾಡಿದ ಅರ್ಥಪೂರ್ಣ ಪ್ರಾರ್ಥನೆಗೆ ಯಾವುದು ನೆರವಾಯಿತು? (2) ಇದರಿಂದ ನಮಗೆ ಯಾವ ಪಾಠ?
6 ಲೇವಿಯರು ಪದೇಪದೇ ಧರ್ಮಶಾಸ್ತ್ರವನ್ನು ಓದಿದ್ದು ಅರ್ಥಗರ್ಭಿತ ಪ್ರಾರ್ಥನೆಯನ್ನು ಸಿದ್ಧಪಡಿಸಲು ಅವರಿಗೆ ಸಹಾಯಮಾಡಿತು ಎನ್ನುವುದರಲ್ಲಿ ಸಂದೇಹವಿಲ್ಲ. ಆ ಪ್ರಾರ್ಥನೆಯ ವೃತ್ತಾಂತವನ್ನು ಬೈಬಲಿನಲ್ಲಿ ನೋಡುವುದಾದರೆ ಮೊದಲ ಹತ್ತು ವಚನಗಳು ಯೆಹೋವನ ಕೆಲಸಗಳು ಮತ್ತು ಗುಣಗಳ ಕುರಿತು ಹೇಳಲಾಗಿದೆ. ಪ್ರಾರ್ಥನೆಯ ಉಳಿದ ಭಾಗದಲ್ಲಿ ಯೆಹೋವನು “ಕರುಣಾನಿಧಿ” ಎನ್ನುವುದನ್ನು ಪದೇಪದೇ ಎತ್ತಿಹೇಳುತ್ತಾ, ಇಸ್ರಾಯೇಲ್ಯರು ಅಂಥ ಕರುಣೆಗೆ ಅರ್ಹರಲ್ಲವೆಂಬದನ್ನೂ ಅರಿಕೆಮಾಡಲಾಗಿದೆ. (ನೆಹೆ. 9:19, 27, 28, 31) ಲೇವಿಯರಂತೆಯೇ ನಾವು ಸಹ ಪ್ರಾರ್ಥನೆ ಮಾಡುವ ಮೊದಲು ದೇವರ ವಾಕ್ಯವನ್ನು ಓದಿ ಮನನ ಮಾಡಬೇಕು. ಆಗ ಯೆಹೋವನಿಗೆ ನಮ್ಮೊಂದಿಗೆ ಮಾತಾಡುವಂತೆ ನಾವು ಬಿಟ್ಟುಕೊಡುತ್ತೇವೆ. ಹೀಗೆ ಮಾಡಿದರೆ ನಮ್ಮ ಪ್ರಾರ್ಥನೆ ತಾಜಾ ವಿಷಯಗಳಿಂದ ಕೂಡಿರುತ್ತದೆ ಹಾಗೂ ಅರ್ಥವೂ ಇರುತ್ತದೆ.—ಕೀರ್ತ. 1:1, 2.
7. (1) ಲೇವಿಯರು ದೇವರಲ್ಲಿ ಏನೆಂದು ಕೇಳಿಕೊಂಡರು? (2) ಇದರಿಂದ ನಮಗೆ ಯಾವ ಪಾಠ?
7 ಈ ಪ್ರಾರ್ಥನೆಯಲ್ಲಿ ಒಂದೇ ಒಂದು ಸರಳ ವಿನಂತಿಯನ್ನು ಮಾಡಲಾಯಿತು. ಅದು 32ನೆಯ ವಚನದ ಕೊನೆಯ ಭಾಗದಲ್ಲಿದೆ. ಅಲ್ಲಿ ಹೀಗಿದೆ: “ನಮ್ಮ ದೇವರೇ, ಮಹೋನ್ನತನೂ ಪರಾಕ್ರಮಿಯೂ ಭಯಂಕರನೂ ಆಗಿರುವಾತನೇ, ಕೃಪಾವಾಗ್ದಾನಗಳನ್ನು ನೆರವೇರಿಸುವ ದೇವರೇ, ಅಶ್ಶೂರದ ರಾಜರ ಕಾಲದಿಂದ ಇಂದಿನ ವರೆಗೆ ನಮ್ಮ ಅರಸರಿಗೂ ಪ್ರಭುಗಳಿಗೂ ಯಾಜಕರಿಗೂ ಪ್ರವಾದಿಗಳಿಗೂ ಹಿರಿಯರಿಗೂ ನಿನ್ನ ಎಲ್ಲಾ ಪ್ರಜೆಗಳಿಗೂ ಪ್ರಾಪ್ತವಾದ ಕಷ್ಟವು ಅಲ್ಪವು ಎಂದೆಣಿಸಬೇಡ.” ನಮ್ಮ ಪ್ರಾರ್ಥನೆಗಳಲ್ಲಿ ಸಹ ನಾವು ನಮ್ಮ ಸ್ವಂತ ವಿನಂತಿಗಳನ್ನು ಮಾಡುವ ಮೊದಲು ಯೆಹೋವನಿಗೆ ಸ್ತುತಿ ಮತ್ತು ಧನ್ಯವಾದವನ್ನು ಹೇಳಬೇಕು ಎನ್ನುವ ಉತ್ತಮ ಮಾದರಿಯನ್ನು ಲೇವಿಯರಿಟ್ಟಿದ್ದಾರೆ.
ದೇವರ ಮಹಿಮಾಭರಿತ ನಾಮವನ್ನು ಸ್ತುತಿಸುವುದು
8, 9. (1) ಲೇವಿಯರು ಪ್ರಾರ್ಥನೆಯಲ್ಲಿ ದೀನಭಾವವನ್ನು ಹೇಗೆ ತೋರಿಸಿದರು? (2) ಲೇವಿಯರು ಪ್ರಾರ್ಥನೆಯಲ್ಲಿ ಹೇಳಿದ ಆ ಎರಡು ಸೈನ್ಯಗಳು ಯಾವುವು?
8 ಈ ಲೇವಿಯರು ಪ್ರಾರ್ಥನೆಯನ್ನು ಚೆನ್ನಾಗಿ ತಯಾರಿಸಿದ್ದರೂ ದೀನತೆಯಿಂದ ಮಾಡಿದರು. ಯೆಹೋವನು ನಿಜವಾಗಿಯೂ ಸ್ತುತಿಗೆ ಎಷ್ಟು ಅರ್ಹನು ಎಂದು ತಮ್ಮ ಮಾತುಗಳಲ್ಲಿ ಎಷ್ಟೇ ವರ್ಣಿಸಿದರೂ ಅದು ಕಡಿಮೆಯೇ ಎಂದವರು ಒಪ್ಪಿಕೊಂಡರು. ಹೀಗೆ, ಈ ಇಡೀ ಜನಾಂಗದ ಪರವಾಗಿ ದೀನತೆಯಿಂದ ಯೆಹೋವನಿಗೆ ಹೀಗೆ ಬಿನ್ನಹಿಸಿದರು: “ಸರ್ವಸ್ತುತಿಕೀರ್ತನೆಗಳಿಗೆ ಮಿಗಿಲಾಗಿರುವ ನಿನ್ನ ಮಹಾನಾಮಕ್ಕೆ ಕೊಂಡಾಟವಾಗಲಿ.”—ನೆಹೆ. 9:5.
9 ಆ ಪ್ರಾರ್ಥನೆ ಹೀಗೆ ಮುಂದುವರಿಯುತ್ತದೆ: “[ಯೆಹೋವನೇ,] ನೀನೊಬ್ಬನೇ ದೇವರು. ನೀನು ಉನ್ನತೋನ್ನತವಾದ ಆಕಾಶವನ್ನೂ ಅದರ ಸೈನ್ಯವನ್ನೂ ಭೂಮಿಯನ್ನೂ ಅದರ ಮೇಲಿರುವದನ್ನೂ ಸಮುದ್ರಗಳನ್ನೂ ಎಲ್ಲಾ ಜಲಚರಗಳನ್ನೂ ಉಂಟುಮಾಡಿ ಸಮಸ್ತಪ್ರಾಣಿಗಳ ಜೀವಾಧಾರನಾಗಿರುತ್ತೀ. ಆಕಾಶಸೈನ್ಯದವರು ನಿನಗೆ ಅಡ್ಡಬೀಳುತ್ತಾರೆ.” (ನೆಹೆ. 9:6) ಹೌದು, ಯೆಹೋವ ದೇವರು ಅಸಂಖ್ಯಾತ ತಾರೆಗಳಿರುವ ನಕ್ಷತ್ರಪುಂಜಗಳನ್ನು, ಇಡೀ ವಿಶ್ವವನ್ನೇ ಸೃಷ್ಟಿಸಿದನು. ಇದರಷ್ಟೇ ಸೋಜಿಗವಾಗಿ ಆತನು ನಮ್ಮ ಸುಂದರ ಭೂಗ್ರಹವನ್ನೂ ಅದರಲ್ಲಿರುವ ಸಮಸ್ತವನ್ನೂ ಸೃಷ್ಟಿಸಿದನು. ಆಶ್ಚರ್ಯವನ್ನುಂಟುಮಾಡುವ ಭಿನ್ನಭಿನ್ನ ಜೀವರಾಶಿಗಳನ್ನೂ ಸೃಷ್ಟಿಸಿದನು. ಪುನರುತ್ಪತ್ತಿಯಾಗುವ ಅದ್ಭುತ ಸಾಮರ್ಥ್ಯವನ್ನು ಅವುಗಳಲ್ಲಿ ಇಟ್ಟನು. ಇವೆಲ್ಲವುಗಳಿಗೆ ದೇವರ ಪವಿತ್ರ ದೂತರೇ ಪ್ರತ್ಯಕ್ಷ ಸಾಕ್ಷಿಗಳು. ಅವರನ್ನು “ಪರಲೋಕಸೈನ್ಯಗಳು” ಎಂದು ವರ್ಣಿಸಲಾಗಿದೆ. (1 ಅರ. 22:19; ಯೋಬ 38:4, 7) ಇದಲ್ಲದೆ, “ರಕ್ಷಣೆಯನ್ನು ಹೊಂದಲಿಕ್ಕಿರುವ” ಪಾಪಿಗಳಾದ ಮಾನವರಿಗೆ ಈ ದೇವದೂತರು ನೆರವಾಗುವ ಮೂಲಕ ದೈನ್ಯದಿಂದ ದೇವರ ಚಿತ್ತವನ್ನು ಮಾಡುತ್ತಾರೆ. (ಇಬ್ರಿ. 1:14) ಸುಸಜ್ಜಿತ ಸೇನೆಯಂತೆ ಯೆಹೋವನನ್ನು ಐಕ್ಯದಿಂದ ಸೇವಿಸುವ ನಮಗೆ ಈ ದೇವದೂತರು ಎಷ್ಟು ಉಜ್ವಲ ಮಾದರಿ!—1 ಕೊರಿಂ. 14:33, 40.
10. ದೇವರು ಅಬ್ರಹಾಮನೊಂದಿಗೆ ವ್ಯವಹರಿಸಿದ್ದರಲ್ಲಿ ನಮಗೇನು ಪಾಠ?
10 ಅನಂತರ, ಈ ಲೇವಿಯರು ದೇವರು ಅಬ್ರಹಾಮನೊಂದಿಗೆ ವ್ಯವಹರಿಸಿದ್ದರ ಕುರಿತು ಹೇಳಿದರು. ಅಬ್ರಾಮನಿಗೆ 99 ವಯಸ್ಸಾದಾಗಲೂ ಅವನ ಹೆಂಡತಿ ಸಾರಳಿಗೆ ಒಂದು ಮಗುವೂ ಹುಟ್ಟಿರಲಿಲ್ಲ. ಯೆಹೋವನು ಅವನ ಹೆಸರನ್ನು ಅಬ್ರಹಾಮ ಅಂದರೆ “ಅನೇಕ ಜನಾಂಗಗಳಿಗೆ ಮೂಲಪುರುಷ” ಎಂದು ಬದಲಾಯಿಸಿದನು. (ಆದಿ. 17:1-6, 15, 16) ದೇವರು ಅಬ್ರಹಾಮನಿಗೆ, ಅವನ ಸಂತಾನ ವಾಗ್ದತ್ತ ದೇಶವನ್ನು ಬಾಧ್ಯತೆಯಾಗಿ ಪಡೆಯುವುದು ಎಂದು ವಾಗ್ದಾನಿಸಿದನು. ಮನುಷ್ಯರಾದರೋ ವಾಗ್ದಾನಗಳನ್ನು ಅನೇಕ ಸಲ ಮರೆತುಬಿಡುತ್ತಾರೆ, ಆದರೆ ಯೆಹೋವನು ಹಾಗಲ್ಲ. ಲೇವಿಯರ ಪ್ರಾರ್ಥನೆ ತಿಳಿಸುವಂತೆ “ಯೆಹೋವನೇ, ಅಬ್ರಾಮನನ್ನು ಆರಿಸಿಕೊಂಡು ಕಸ್ದೀಯರ ಊರ್ ಎಂಬ ಪಟ್ಟಣದಿಂದ ಬರಮಾಡಿ ಅವನಿಗೆ ಅಬ್ರಹಾಮನೆಂಬ ಹೆಸರನ್ನು ಕೊಟ್ಟ ದೇವರು ನೀನೇ. ಅವನು ಯಥಾರ್ಥಚಿತ್ತನೆಂದು ಕಂಡು ಅವನಿಗೆ—ಕಾನಾನ್ಯ[ರ] . . . ದೇಶವನ್ನು ನಿನ್ನ ಸಂತಾನದವರಿಗೆ ಕೊಡುತ್ತೇನೆಂದು ವಾಗ್ದಾನಮಾಡಿ ಅದನ್ನು ನೆರವೇರಿಸಿದ್ದೀ; ನೀನು ಧರ್ಮಸ್ವರೂಪನೇ.” (ನೆಹೆ. 9:7, 8) ನಾವು ಸಹ ನಮ್ಮ ಮಾತಿಗೆ ತಕ್ಕಂತೆ ನಡೆಯಲು ಸದಾ ಶ್ರಮಿಸುತ್ತಾ ನಮ್ಮ ನೀತಿವಂತ ದೇವರನ್ನು ಅನುಕರಿಸೋಣ.—ಮತ್ತಾ. 5:37.
ಯೆಹೋವನ ಸಾಧನೆಗಳನ್ನು ಸ್ಮರಿಸುವುದು
11, 12. (1) ಯೆಹೋವನ ಹೆಸರಿನ ಅರ್ಥವೇನು? ವಿವರಿಸಿ. (2) ಅಬ್ರಹಾಮನ ವಂಶಜರೊಂದಿಗೆ ಆತನು ತನ್ನ ಹೆಸರಿನ ಅರ್ಥದ ಪ್ರಕಾರ ಹೇಗೆ ನಡೆದುಕೊಂಡನು?
11 ಯೆಹೋವ ಎಂಬ ಹೆಸರಿನ ಅರ್ಥ “ಆತನು ಆಗುವಂತೆ ಮಾಡುತ್ತಾನೆ” ಎಂದು. ಹಂತಹಂತವಾಗಿ ತನ್ನ ವಾಗ್ದಾನಗಳನ್ನು ಸತ್ಯವಾಗುವಂತೆ ಆತನು ಮಾಡುತ್ತಾನೆಂದು ಇದು ಸೂಚಿಸುತ್ತದೆ. ಅಬ್ರಹಾಮನ ಸಂತಾನದವರು ಈಜಿಪ್ಟಿನಲ್ಲಿ ದಾಸರಾಗಿದ್ದಾಗ ದೇವರು ಅವರೊಂದಿಗೆ ವ್ಯವಹರಿಸಿದ್ದರಲ್ಲಿ ಇದು ಚೆನ್ನಾಗಿ ತಿಳಿದುಬರುತ್ತದೆ. ಈ ಜನಾಂಗವನ್ನು ಬಿಡುಗಡೆಗೊಳಿಸಿ ವಾಗ್ದತ್ತ ದೇಶಕ್ಕೆ ನಡೆಸುವುದು ಅಸಾಧ್ಯವೆಂದು ತೋರುತ್ತಿತ್ತು. ಆದರೆ ಹಂತಹಂತವಾಗಿ ಯೆಹೋವನು ಕ್ರಿಯೆಗೈಯುವ ಮೂಲಕ ತನ್ನ ವಾಗ್ದಾನವು ನೆರವೇರುವಂತೆ ಮಾಡಿದನು. ಹೀಗೆ ತನ್ನ ಅದ್ವಿತೀಯವೂ ಪ್ರಖ್ಯಾತವೂ ಆದ ನಾಮಕ್ಕೆ ತಾನು ಅರ್ಹನು ಎಂದು ತೋರಿಸಿಕೊಟ್ಟನು.
12 ನೆಹೆಮೀಯನು ದಾಖಲಿಸಿರುವ ಪ್ರಾರ್ಥನೆ ಯೆಹೋವನ ಬಗ್ಗೆ ಹೇಳುವುದು: “ಐಗುಪ್ತದೇಶದಲ್ಲಿ ನಮ್ಮ ಪಿತೃಗಳಿಗಿದ್ದ ಕಷ್ಟವನ್ನು ನೋಡಿದಿ; ಕೆಂಪುಸಮುದ್ರದ ಬಳಿಯಲ್ಲಿ ಅವರು ಮೊರೆಯಿಟ್ಟಾಗ ನೀನು ಲಾಲಿಸಿದಿ, ಐಗುಪ್ತ್ಯರು ಗರ್ವಿಗಳಾಗಿ ಅವರನ್ನು ಕುಗ್ಗಿಸಿದಾಗ ನೀನು ಫರೋಹನಲ್ಲಿಯೂ ಅವನ ಸೇವಕರಲ್ಲಿಯೂ ಅವನ ದೇಶದ ಜನರಲ್ಲಿಯೂ ಅದ್ಭುತಕಾರ್ಯಗಳನ್ನೂ ಸೂಚಕಕಾರ್ಯಗಳನ್ನೂ ನಡಿಸಿ ಈಗ ನಿನಗಿರುವ ಕೀರ್ತಿಯನ್ನು ಸ್ಥಾಪಿಸಿದಿ. ನಮ್ಮ ಪಿತೃಗಳು ಸಮುದ್ರಮಧ್ಯದಲ್ಲಿ ಒಣನೆಲದಲ್ಲೇ ಹಾದುಹೋಗುವಂತೆ ಅವರ ಮುಂದೆ ಸಮುದ್ರವನ್ನು ಭೇದಿಸಿದಿ. ಅವರನ್ನು ಹಿಂದಟ್ಟುವವರನ್ನು ಕಲ್ಲಿನಂತೆ ಮಹಾಜಲರಾಶಿಯ ತಳದಲ್ಲಿ ಮುಳುಗಿಸಿಬಿಟ್ಟಿ.” ಆ ಬಳಿಕ, ಪ್ರಾರ್ಥನೆ ಮುಂದುವರಿಯುತ್ತಾ, ಯೆಹೋವನು ತನ್ನ ಜನರಿಗಾಗಿ ಇನ್ನೇನು ಮಾಡಿದ್ದಾನೆಂದು ತಿಳಿಯಪಡಿಸುತ್ತದೆ: “ನೀನು ಅವರ ಮುಂದೆ ದೇಶನಿವಾಸಿಗಳಾಗಿದ್ದ ಕಾನಾನ್ಯರನ್ನು ಕುಗ್ಗಿಸಿ[ದಿ]. . . . ಅವರು ಕೋಟೆಕೊತ್ತಲುಗಳುಳ್ಳ ಪಟ್ಟಣಗಳನ್ನೂ ಸಾರವುಳ್ಳ ಭೂಮಿಯನ್ನೂ ಸಮಸ್ತ ವಿಧವಾದ ಉತ್ತಮವಸ್ತುಗಳಿಂದ ತುಂಬಿದ ಮನೆಗಳನ್ನೂ ತೋಡಿದ ಬಾವಿಗಳನ್ನೂ ದ್ರಾಕ್ಷೇತೋಟ, ಎಣ್ಣೇಮರಗಳ ತೋಪು, ಎಷ್ಟೋ ಹಣ್ಣಿನ ಮರ ಇವುಗಳನ್ನೂ ವಶಮಾಡಿಕೊಂಡು ಚೆನ್ನಾಗಿ ತಿಂದು ತೃಪ್ತರಾಗಿ ಕೊಬ್ಬಿ ನೀನು ಕೊಟ್ಟ ಸಮೃದ್ಧಿಯಲ್ಲಿ ಆನಂದಿಸುತ್ತಿದ್ದರು.”—ನೆಹೆ. 9:9-11, 24, 25.
13. (1) ಯೆಹೋವನು ಇಸ್ರಾಯೇಲ್ಯರ ಆಧ್ಯಾತ್ಮಿಕ ಅಗತ್ಯಗಳನ್ನು ಹೇಗೆ ಪೂರೈಸಿದನು? (2) ಆದರೆ ಜನರು ಏನು ಮಾಡಿದರು?
13 ದೇವರು ತನ್ನ ಉದ್ದೇಶವನ್ನು ನೆರವೇರಿಸಲು ಇನ್ನೂ ಅನೇಕ ವಿಷಯಗಳನ್ನು ಮಾಡಿದನು. ಉದಾಹರಣೆಗೆ, ಇಸ್ರಾಯೇಲ್ಯರು ಐಗುಪ್ತವನ್ನು ಬಿಟ್ಟುಬಂದ ಕೂಡಲೇ ಯೆಹೋವನು ಅವರ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸಿದನು. ಇದನ್ನು ನೆನಪಿಸಿಕೊಳ್ಳುತ್ತಾ ಲೇವಿಯರು ದೇವರಿಗೆ ಹೀಗೆ ಪ್ರಾರ್ಥಿಸಿದರು: “ಸೀನಾಯಿ ಬೆಟ್ಟದ ಮೇಲೆ ಇಳಿದುಬಂದು ಆಕಾಶದ ಕಡೆಯಿಂದ ಅವರೊಡನೆ ಮಾತಾಡಿ ಅವರಿಗೆ ನೀತಿನಿಯಮಗಳನ್ನೂ ಯಥಾರ್ಥ ಧರ್ಮೋಪದೇಶವನ್ನೂ ಶ್ರೇಷ್ಠವಾದ ಆಜ್ಞಾವಿಧಿಗಳನ್ನೂ ಅನುಗ್ರಹಿಸಿದಿ.” (ನೆಹೆ. 9:13) ವಾಗ್ದತ್ತ ದೇಶದ ವಾರಸುದಾರರಾಗಲಿದ್ದ ತನ್ನ ಜನರು ತನ್ನ ಪವಿತ್ರ ನಾಮವನ್ನು ಧರಿಸಲು ಯೋಗ್ಯರಾಗುವಂತೆ ಯೆಹೋವನು ಅವರಿಗೆ ಬೋಧಿಸಿದನು. ಆದರೆ ತಾವು ಕಲಿತ ಆ ಒಳ್ಳೇ ವಿಷಯಗಳನ್ನು ಅವರು ತೊರೆದುಬಿಟ್ಟರು.—ನೆಹೆಮೀಯ 9:16-18 ಓದಿ.
ಶಿಸ್ತಿನ ಅಗತ್ಯ
14, 15. (1) ಪಾಪಿಗಳಾದ ತನ್ನ ಜನರನ್ನು ಯೆಹೋವನು ಹೇಗೆ ಕರುಣೆಯಿಂದ ಪರಾಮರಿಸಿದನು? (2) ತಾನು ಆಯ್ದುಕೊಂಡಿದ್ದ ಜನರೊಂದಿಗೆ ದೇವರು ವ್ಯವಹರಿಸಿದ ರೀತಿಯಿಂದ ನಾವೇನು ಕಲಿಯುತ್ತೇವೆ?
14 ತಾವು ಧರ್ಮಶಾಸ್ತ್ರವನ್ನು ಪಾಲಿಸುತ್ತೇವೆಂದು ವಚನಕೊಟ್ಟು ಸ್ವಲ್ಪ ಸಮಯದಲ್ಲೇ ಇಸ್ರಾಯೇಲ್ಯರು ಪಾಪಮಾಡಿದರು. ಅವರು ಮಾಡಿದ ಎರಡು ನಿರ್ದಿಷ್ಟ ಪಾಪಗಳನ್ನು ಲೇವಿಯರು ಪ್ರಾರ್ಥನೆಯಲ್ಲಿ ಹೇಳಿದ್ದಾರೆ. ಅವರು ಮಾಡಿದ ಪಾಪಗಳಿಗಾಗಿ ಅವರು ಸಾಯಲು ಅರ್ಹರಾಗಿದ್ದರು. ಆದರೆ ಆ ಪ್ರಾರ್ಥನೆಯಲ್ಲಿ ಯೆಹೋವನನ್ನು ಹೀಗೆ ಸ್ತುತಿಸಲಾಗಿದೆ: “ಕರುಣಾನಿಧಿಯಾದ ನೀನು ಅವರನ್ನು ಅರಣ್ಯದಲ್ಲಿ ಕೈಬಿಡಲಿಲ್ಲ. . . . ನಾಲ್ವತ್ತು ವರುಷ ಅವರನ್ನು . . . ಸಾಕುತ್ತಾ ಇದ್ದಿ; ಅವರಿಗೆ ಯಾವ ಕೊರತೆಯೂ ಇರಲಿಲ್ಲ. ಅವರ ಬಟ್ಟೆಗಳು ಜೀರ್ಣವಾಗಲಿಲ್ಲ, ಕಾಲುಗಳು ಬಾತುಹೋಗಲಿಲ್ಲ.” (ನೆಹೆ. 9:19, 21) ಹಾಗೆಯೇ ಇಂದು ನಾವು ನಂಬಿಗಸ್ತಿಕೆಯಿಂದ ಸೇವೆಮಾಡುವಂತೆ ನಮಗೆ ಬೇಕಾಗಿರುವ ಎಲ್ಲವನ್ನು ಯೆಹೋವನು ಒದಗಿಸುತ್ತಾನೆ. ಆದುದರಿಂದ ಅವಿಧೇಯತೆ ಮತ್ತು ನಂಬಿಕೆಯ ಕೊರತೆಯಿಂದ ಅರಣ್ಯದಲ್ಲಿ ಸತ್ತ ಆ ಸಾವಿರಾರು ಮಂದಿ ಇಸ್ರಾಯೇಲ್ಯರಂತೆ ನಾವಾಗದಿರೋಣ. “ವಿಷಯಗಳ ವ್ಯವಸ್ಥೆಗಳ ಅಂತ್ಯವನ್ನು ಸಮೀಪಿಸಿರುವ ನಮಗೆ ಇವು ಎಚ್ಚರಿಕೆ ನೀಡಲಿಕ್ಕಾಗಿ ಬರೆಯಲ್ಪಟ್ಟವು.”—1 ಕೊರಿಂ. 10:1-11.
15 ಆದರೆ ಇಸ್ರಾಯೇಲ್ಯರು ವಾಗ್ದತ್ತ ದೇಶದಲ್ಲಿ ನೆಲೆಸಿದ ಬಳಿಕ, ಕಾನಾನ್ಯ ದೇವತೆಗಳ ಆರಾಧನೆಯನ್ನು ಮಾಡತೊಡಗಿದರು. ಅದರಲ್ಲಿ ಅನೈತಿಕತೆ, ನರಹತ್ಯೆ ಒಳಗೂಡಿತ್ತು. ಹಾಗಾಗಿ, ದೇವರು ತಾನು ಆಯ್ದುಕೊಂಡ ಜನರ ಮೇಲೆ ನೆರೆಯ ಜನಾಂಗಗಳು ದಬ್ಬಾಳಿಕೆ ಮಾಡುವಂತೆ ಬಿಟ್ಟುಕೊಟ್ಟನು. ಅವರು ಪಶ್ಚಾತ್ತಾಪಪಟ್ಟಾಗ ಯೆಹೋವನು ಕರುಣೆಯಿಂದ ಅವರನ್ನು ಕ್ಷಮಿಸಿ ಶತ್ರುಗಳ ಕೈಯಿಂದ ರಕ್ಷಿಸಿದನು. ಈ ರೀತಿ “ಅನೇಕಾವರ್ತಿ” ಸಂಭವಿಸಿತು. (ನೆಹೆಮೀಯ 9:26-28, 31 ಓದಿ.) ಲೇವಿಯರು ಅರಿಕೆ ಮಾಡಿದ್ದು: “ನೀನು ಅನೇಕವರ್ಷಗಳ ತನಕ ಅವರ ವಿಷಯದಲ್ಲಿ ತಾಳಿಕೊಂಡು ಪ್ರವಾದಿಗಳ ಮುಖಾಂತರ ಮಾತಾಡುತ್ತಿದ್ದ ನಿನ್ನ ಆತ್ಮನಿಂದ ಅವರನ್ನು ಎಷ್ಟು ಎಚ್ಚರಿಸುತ್ತಿದ್ದರೂ ಅವರು ಕಿವಿಗೊಡದೆ ಹೋದಮೇಲೆ ನೀನು ಅವರನ್ನು ಅನ್ಯದೇಶಗಳವರ ಕೈಗೆ ಒಪ್ಪಿಸಿಬಿಟ್ಟಿ.”—ನೆಹೆ. 9:30.
16, 17. (1) ಬಂಧಿವಾಸದ ಬಳಿಕ ಇಸ್ರಾಯೇಲ್ಯರ ಸನ್ನಿವೇಶ ಅವರ ಪೂರ್ವಜರು ಮೊದಲು ವಾಗ್ದತ್ತ ದೇಶದಲ್ಲಿ ನೆಲೆಸಿದಾಗ ಇದ್ದದಕ್ಕಿಂತ ಹೇಗೆ ಭಿನ್ನವಾಗಿತ್ತು? (2) ಇಸ್ರಾಯೇಲ್ಯರು ಏನೆಂದು ಅರಿಕೆಮಾಡಿದರು? ಏನು ಮಾಡುತ್ತೇವೆಂದು ಮಾತುಕೊಟ್ಟರು?
16 ಇಸ್ರಾಯೇಲ್ಯರು ಬಂಧಿವಾಸದಿಂದ ಹಿಂದಿರುಗಿದ ಬಳಿಕ ಪುನಃ ಪುನಃ ಅವಿಧೇಯತೆ ತೋರಿಸಿದರು. ಆದರೆ ಇವರಿಗೂ ಇವರ ಪಿತೃಗಳಿಗೂ ಯಾವ ವ್ಯತ್ಯಾಸವಿತ್ತು? ಲೇವಿಯರು ಪ್ರಾರ್ಥಿಸಿದ್ದು: “ನಾವು ಈಗ ದಾಸರಾಗಿದ್ದೇವೆ. ನೀನು ನಮ್ಮ ಪಿತೃಗಳಿಗೆ—ಇದರ ಉತ್ಪನ್ನವನ್ನೂ ಸಮೃದ್ಧಿಯನ್ನೂ ಅನುಭವಿಸಿರಿ ಎಂದು ಹೇಳಿ ಕೊಟ್ಟ ದೇಶದಲ್ಲೇ ನಾವು ದಾಸರಾಗಿರಬೇಕಾಗಿದೆ. ನಮ್ಮ ಪಾಪಗಳ ನಿಮಿತ್ತವಾಗಿ ನಿನ್ನಿಂದ ನಮ್ಮ ಮೇಲೆ ನೇಮಿಸಲ್ಪಟ್ಟ ರಾಜರಿಗೆ ಈ ದೇಶದ ಹೇರಳವಾದ ಹುಟ್ಟುವಳಿಯು ಹೋಗುತ್ತದೆ. . . . ನಾವು ಮಹಾಸಂಕಟದಲ್ಲಿರುತ್ತೇವೆ ಅಯ್ಯೋ.”—ನೆಹೆ. 9:36, 37.
17 ಈ ಸಂಕಟವನ್ನು ಅನುಮತಿಸುವ ಮೂಲಕ ದೇವರು ತಮಗೆ ಅನ್ಯಾಯ ಮಾಡಿದನೆಂದು ಲೇವಿಯರು ಹೇಳುತ್ತಿದ್ದರೋ? ಖಂಡಿತ ಇಲ್ಲ! “ನೀನು ನಮ್ಮ ಮೇಲೆ ಎಷ್ಟು ಕೇಡನ್ನು ಬರಮಾಡಿದರೂ ನೀನು ಧರ್ಮಸ್ವರೂಪನೇ; ನೀನು ಸತ್ಯವನ್ನೇ ನಡಿಸಿದಿ; ನಾವಾದರೋ ದುಷ್ಟರು” ಎಂದು ಅವರು ಒಪ್ಪಿಕೊಂಡರು. (ನೆಹೆ. 9:33) ಬಳಿಕ ಈ ಸ್ವಾರ್ಥವಿಲ್ಲದ ಪ್ರಾರ್ಥನೆಯ ಕೊನೆಯಲ್ಲಿ, ಆ ಜನಾಂಗವು ಇನ್ನು ಮುಂದೆ ಧರ್ಮಶಾಸ್ತ್ರವನ್ನು ತಪ್ಪದೆ ಪಾಲಿಸುತ್ತದೆಂದು ಮಾತುಕೊಡುತ್ತದೆ. (ನೆಹೆಮೀಯ 9:38 ಓದಿ; ನೆಹೆಮೀಯ 10:29) ಅದಕ್ಕಾಗಿ ಒಂದು ಲಿಖಿತ ದಾಖಲೆ ಮಾಡಿ ಅದರಲ್ಲಿ 84 ಮಂದಿ ಯೆಹೂದಿ ನಾಯಕರು ಮುದ್ರೆ ಹಾಕಿ ಸಹಿ ಮಾಡಿದರು.—ನೆಹೆ. 10:1-27.
18, 19. (1) ದೇವರ ನೂತನ ಲೋಕಕ್ಕೆ ಹೋಗಬೇಕಾದರೆ ನಾವೇನು ಮಾಡಬೇಕು? (2) ನಾವು ಯಾವುದಕ್ಕಾಗಿ ಪ್ರಾರ್ಥಿಸುತ್ತಾ ಇರಬೇಕು? (3) ಏಕೆ?
18 ನಾವು ಯೆಹೋವನ ನೀತಿಭರಿತ ನೂತನ ಲೋಕಕ್ಕೆ ಹೋಗಲು ನಮಗೆ ಆತನಿಂದ ಶಿಸ್ತು ಬೇಕು. “ತಂದೆಯಿಂದ ಶಿಸ್ತನ್ನು ಹೊಂದದಿರುವ ಮಗನಿದ್ದಾನೊ?” ಎಂದು ಅಪೊಸ್ತಲ ಪೌಲನು ಕೇಳಿದನು. (ಇಬ್ರಿ. 12:7) ನಾವು ತಾಳಿಕೊಂಡು ದೇವರ ಸೇವೆಯನ್ನು ನಂಬಿಗಸ್ತಿಕೆಯಿಂದ ಮಾಡುತ್ತಾ ಆತನ ಪವಿತ್ರಾತ್ಮ ನಮ್ಮನ್ನು ಪರಿಷ್ಕರಿಸುವಂತೆ ಬಿಡುವ ಮೂಲಕ ನಮ್ಮ ಜೀವಿತದಲ್ಲಿ ದೇವರ ಮಾರ್ಗದರ್ಶನವನ್ನು ಅಂಗೀಕರಿಸುತ್ತೇವೆಂದು ತೋರಿಸುತ್ತೇವೆ. ನಾವು ಗಂಭೀರ ಪಾಪವನ್ನು ಮಾಡುವಲ್ಲಿ, ನಿಜ ಪಶ್ಚಾತ್ತಾಪಪಟ್ಟು ಶಿಸ್ತನ್ನು ಒಪ್ಪಿಕೊಂಡರೆ ಯೆಹೋವನು ನಮ್ಮನ್ನು ಕ್ಷಮಿಸುವನೆಂಬ ಭರವಸೆ ನಮಗಿರಬಲ್ಲದು.
19 ಬೇಗನೆ ಯೆಹೋವನ ಹೆಸರು, ಇಸ್ರಾಯೇಲ್ಯರನ್ನು ಐಗುಪ್ತದಿಂದ ಬಿಡುಗಡೆ ಮಾಡಿದಾಗ ಆದದ್ದಕ್ಕಿಂತಲೂ ಹೆಚ್ಚು ಮಹಿಮಾನ್ವಿತವಾಗುವುದು. (ಯೆಹೆ. 38:23) ಇಸ್ರಾಯೇಲ್ ಜನಾಂಗವು ವಾಗ್ದತ್ತ ದೇಶವನ್ನು ಬಾಧ್ಯತೆಯಾಗಿ ಪಡೆದಂತೆಯೇ ಯೆಹೋವನ ನಂಬಿಗಸ್ತ ಆರಾಧಕರಾಗಿದ್ದು ಕೊನೆವರೆಗೂ ತಾಳಿಕೊಳ್ಳುವವರು ದೇವರ ನೀತಿಭರಿತ ನೂತನ ಲೋಕವನ್ನು ಬಾಧ್ಯತೆಯಾಗಿ ಪಡೆಯುವರು. (2 ಪೇತ್ರ 3:13) ಇಂಥ ಆಶ್ಚರ್ಯಕರ ಪ್ರತೀಕ್ಷೆಗಳು ನಮ್ಮ ಮುಂದಿರುವುದರಿಂದ, ನಾವು ದೇವರ ಮಹಿಮಾಭರಿತ ಹೆಸರಿನ ಪವಿತ್ರೀಕರಣಕ್ಕಾಗಿ ಪ್ರಾರ್ಥಿಸುವುದನ್ನು ನಿಲ್ಲಿಸದಿರೋಣ. ಮುಂದಿನ ಲೇಖನದಲ್ಲಿ ನಾವು ಇನ್ನೊಂದು ಪ್ರಾರ್ಥನೆಯ ಕುರಿತು ಕಲಿಯೋಣ. ಆ ಪ್ರಾರ್ಥನೆಗೆ ಅನುಗುಣವಾಗಿ ನಡೆಯುವಲ್ಲಿ ನಾವು ಈಗಲೂ ಮುಂದೆಯೂ ದೇವರ ಆಶೀರ್ವಾದದಲ್ಲಿ ಆನಂದಿಸುತ್ತೇವೆ.