“ನಾನು ಯಾರಿಗೆ ಹೆದರೇನು?”
“ಚತುರಂಗಬಲವು ಯುದ್ಧಸನ್ನದ್ಧವಾಗಿ ನಿಂತರೂ ಭರವಸವುಳ್ಳವನಾಗಿಯೇ ಇರುವೆನು.”—ಕೀರ್ತ. 27:3.
ಈ ವಚನಗಳಿಗನುಸಾರ, ಧೈರ್ಯದಿಂದಿರಲು ನಿಮಗೆ ಯಾವುದು ನೆರವಾಗುತ್ತದೆ?
1. ಕೀರ್ತನೆ 27 ಯಾವ ಪ್ರಶ್ನೆಗಳನ್ನು ಉತ್ತರಿಸುತ್ತದೆ?
ಲೋಕದ ಪರಿಸ್ಥಿತಿ ಅಧೋಗತಿಗೆ ಇಳಿಯುತ್ತಿರುವುದಾದರೂ ಸಾರುವ ಚಟುವಟಿಕೆ ಅಭಿವೃದ್ಧಿಯೆತ್ತರಕ್ಕೆ ಏರುತ್ತಿರಲು ಕಾರಣವೇನು? ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ನಾವಿರುವುದಾದರೂ ಹೆಚ್ಚೆಚ್ಚು ಸಮಯ, ಸಾಮರ್ಥ್ಯವನ್ನು ಸಾರುವ ಕೆಲಸಕ್ಕೆಂದು ಕೊಡುವುದೇಕೆ? ಅಧಿಕ ಮಂದಿ ನಾಳೆ ಏನಾಗುವುದೋ ಎಂಬ ಭಯದಿಂದ ಕಂಗೆಟ್ಟಿರುವುದಾದರೂ ನಾವು ತಲೆಯೆತ್ತಿ ಧೈರ್ಯದಿಂದ ಇರಲು ಹೇಗೆ ಸಾಧ್ಯವಾಗಿದೆ? ಉತ್ತರ ಕೀರ್ತನೆ 27ರಲ್ಲಿದೆ. ದೇವಪ್ರೇರಣೆಯಿಂದ ರಾಜ ದಾವೀದ ಬರೆದ ಗೀತೆ ಅದು.
2. (1) ಭಯ ಒಬ್ಬನನ್ನು ಎಂಥ ಸ್ಥಿತಿಗೆ ತರಬಲ್ಲದು? (2) ಆದರೆ ನಮಗೆ ಯಾವ ಖಾತ್ರಿ ಇದೆ?
2 “ಯೆಹೋವನು ನನಗೆ ಬೆಳಕೂ ರಕ್ಷಕನೂ ಆಗಿದ್ದಾನೆ; ನಾನು ಯಾರಿಗೆ ಭಯಪಟ್ಟೇನು? ಯೆಹೋವನು ನನ್ನ ಪ್ರಾಣದ ಆಧಾರವು; ನಾನು ಯಾರಿಗೆ ಹೆದರೇನು?” ಎಂಬ ಮಾತುಗಳಿಂದ ದಾವೀದನು ಆ ಗೀತೆಯನ್ನು ಆರಂಭಿಸುತ್ತಾನೆ. (ಕೀರ್ತ. 27:1) ಭಯ ಅಥವಾ ಹೆದರಿಕೆ ಇದ್ದಾಗ ಒಬ್ಬನ ಬಲ ಉಡುಗಿ ಹೋಗಿ ಅವನಿಂದ ಏನನ್ನೂ ಮಾಡಲಾಗುವುದಿಲ್ಲ. ಆದರೆ ಯೆಹೋವನಲ್ಲಿ ಭರವಸೆಯಿಟ್ಟ ವ್ಯಕ್ತಿ ಭಯದಿಂದ ಕಳವಳಪಡುವುದಿಲ್ಲ. (1 ಪೇತ್ರ 3:14) ಯೆಹೋವನನ್ನು ನಮ್ಮ “ಪ್ರಾಣದ ಆಧಾರ”ವಾಗಿ ಮಾಡಿಕೊಳ್ಳುವಲ್ಲಿ ‘ಯಾವ ಕೇಡಿಗೂ ಭಯಪಡದೆ ಸುರಕ್ಷಿತವಾಗಿ’ ಇರುವೆವು. (ಜ್ಞಾನೋ. 1:33; 3:25) ಏಕೆ?
“ಯೆಹೋವನು ನನಗೆ ಬೆಳಕೂ ರಕ್ಷಕನೂ ಆಗಿದ್ದಾನೆ”
3. (1) ಯೆಹೋವನು ನಮಗೆ ಬೆಳಕಾಗಿದ್ದಾನೆ ಎನ್ನುವುದರ ಅರ್ಥವೇನು? (2) ನಾವೇನು ಮಾಡಬೇಕು?
3 ‘ಯೆಹೋವನು ನನಗೆ ಬೆಳಕು’ ಎಂಬ ರೂಪಕಾಲಂಕಾರವು ಯೆಹೋವನು ನಮ್ಮನ್ನು ಅಜ್ಞಾನ ಮತ್ತು ಆಧ್ಯಾತ್ಮಿಕ ಕತ್ತಲೆಯಿಂದ ಹೊರತರುವುದನ್ನು ಸೂಚಿಸುತ್ತದೆ. (ಕೀರ್ತ. 27:1) ದಿನನಿತ್ಯ ಜೀವನದಲ್ಲಿ ಬೆಳಕು ನಾವು ನಡೆವ ದಾರಿಯಲ್ಲಿರುವ ಕಲ್ಲುಮುಳ್ಳು ಅಥವಾ ಅಪಾಯವನ್ನು ತೋರಿಸಿಕೊಡುತ್ತದೆ. ಆದರೆ ಅದನ್ನು ತೆಗೆದುಹಾಕುವುದಿಲ್ಲ. ನಾವೇ ವಿವೇಚನೆ ಬಳಸಿ ದಾಟಿಹೋಗಬೇಕು. ಅದೇ ರೀತಿ ನಮಗೆ ಬೆಳಕಾಗಿರುವ ಯೆಹೋವನು ಈ ಲೋಕದಲ್ಲಿ ನಡೆಯುತ್ತಿರುವ ಘಟನೆಗಳು ಏನನ್ನು ಸೂಚಿಸುತ್ತವೆ ಎಂದು ತಿಳಿಸಿದ್ದಾನೆ. ಈ ದುಷ್ಟ ಲೋಕದಿಂದ ನಮಗೆ ಯಾವ ಅಪಾಯವಿದೆ ಎಂದು ಎಚ್ಚರಿಸಿದ್ದಾನೆ. ನಮಗೆ ಸದಾ ಪ್ರಯೋಜನ ತರುವ ಬೈಬಲ್ ಮೂಲತತ್ವಗಳನ್ನು ಕೊಟ್ಟಿದ್ದಾನೆ. ದೇವರ ನಿಯಮಗಳು ತನ್ನನ್ನು ವೈರಿಗಳಿಗಿಂತಲೂ ಉಪಾಧ್ಯಾಯರಿಗಿಂತಲೂ ಹೆಚ್ಚು ವಿವೇಕಿಯನ್ನಾಗಿ ಮಾಡಿದವು ಎಂದು ಕೀರ್ತನೆಗಾರನು ಹೇಳಿದನು. ನಾವು ಸಹ ಬೈಬಲ್ ಮೂಲತತ್ವಗಳನ್ನು ಕಲಿತು ಅನ್ವಯಿಸಿದರೆ ಅವನಂತೆ ಹೆಚ್ಚು ವಿವೇಕಿಗಳಾಗುವೆವು.—ಕೀರ್ತ. 119:98, 99, 130.
4. (1) ‘ಯೆಹೋವನು ನನಗೆ ರಕ್ಷಕ’ ಎಂದು ದಾವೀದನು ಏಕೆ ದೃಢಭರವಸೆಯಿಂದ ಹೇಳಿದನು? (2) ವಿಶೇಷವಾಗಿ ಯಾವಾಗ ಯೆಹೋವನು ನಮಗೆ ರಕ್ಷಕನಾಗಿರುವನು?
4 ಯೆಹೋವನು ತನ್ನನ್ನು ಹಿಂದೆ ಯಾವೆಲ್ಲ ರೀತಿಗಳಲ್ಲಿ ರಕ್ಷಿಸಿದನು ಎಂಬುದನ್ನು ದಾವೀದನು ನೆನಪು ಮಾಡಿಕೊಂಡನೆಂದು ಕೀರ್ತನೆ 27:1 ತೋರಿಸುತ್ತದೆ. ಉದಾಹರಣೆಗೆ “ಸಿಂಹದ ಮತ್ತು ಕರಡಿಯ ಉಗುರುಗಳಿಗೆ” ಸಿಕ್ಕದಂತೆ ಯೆಹೋವನು ದಾವೀದನನ್ನು ರಕ್ಷಿಸಿದ್ದನು. ದೈತ್ಯ ಗೊಲ್ಯಾತನನ್ನು ಜಯಿಸಲು ಸಹಾಯ ಮಾಡಿದ್ದನು. ರಾಜ ಸೌಲನು ಈಟಿಯಿಂದ ತಿವಿಯಲು ಪ್ರಯತ್ನಿಸಿದ ಪ್ರತಿ ಸಂದರ್ಭದಲ್ಲೂ ಕಾಪಾಡಿದ್ದನು. (1 ಸಮು. 17:37, 49, 50; 18:11, 12; 19:10) ಆದ್ದರಿಂದಲೇ “ಯೆಹೋವನು ನನಗೆ . . . ರಕ್ಷಕ” ಎಂದು ದಾವೀದನು ದೃಢಭರವಸೆಯಿಂದ ಹೇಳಿದನು. ಯೆಹೋವನು ದಾವೀದನಿಗೆ ರಕ್ಷಕನಾಗಿ ಇದ್ದಂತೆ ಬರಲಿರುವ “ಮಹಾ ಸಂಕಟ”ದಲ್ಲಿ ತನ್ನ ಜನರನ್ನು ಕಾಪಾಡುವ ಮೂಲಕ ಅವರಿಗೂ ರಕ್ಷಕನಾಗಿರುವನು.—ಪ್ರಕ. 7:14; 2 ಪೇತ್ರ 2:9.
ಯೆಹೋವನು ಸಹಾಯ ಮಾಡಿದ ಪ್ರತಿ ಸಂದರ್ಭವನ್ನು ನೆನಪಿಸಿಕೊಳ್ಳಿ
5, 6. (1) ಯೆಹೋವನು ಸಹಾಯ ಮಾಡಿದ ವಿಧಗಳನ್ನು ನೆನಸುವುದು ಹೇಗೆ ಧೈರ್ಯ ತುಂಬಬಲ್ಲದು? (2) ಪ್ರಾಚೀನ ಸಮಯಗಳಲ್ಲಿ ಯೆಹೋವನು ತನ್ನ ಜನರಿಗೆ ಸಹಾಯ ಮಾಡಿದ್ದನ್ನು ಧ್ಯಾನಿಸುವುದು ನಮಗೆ ಹೇಗೆ ಪ್ರಯೋಜನಕಾರಿ?
5 ಧೈರ್ಯದಿಂದ ಇರಲು ನಮಗೆ ಅಗತ್ಯವಾದ ಒಂದು ವಿಷಯವನ್ನು ಕೀರ್ತನೆ 27:2, 3 (ಓದಿ.) ತಿಳಿಸುತ್ತದೆ. ಈ ವಚನಗಳಲ್ಲಿ ನಾವು ನೋಡುವಂತೆ ಯೆಹೋವನು ತನ್ನನ್ನು ರಕ್ಷಿಸಿದ ಸಂದರ್ಭಗಳನ್ನು ದಾವೀದನು ನೆನಪಿಸಿಕೊಂಡನು. (1 ಸಮು. 17:34-37) ಆ ನೆನಪುಗಳು ದೊಡ್ಡ ಸಂಕಷ್ಟಗಳನ್ನು ತಾಳಿಕೊಳ್ಳಲು ಅವನಲ್ಲಿ ಧೈರ್ಯ ತುಂಬಿದವು. ಅದೇ ರೀತಿ ಯೆಹೋವನು ಈ ಹಿಂದೆ ನಿಮಗೆ ಹೇಗೆ ಸಹಾಯ ಮಾಡಿದ್ದಾನೆಂದು ನೆನಪಿಸಿಕೊಳ್ಳಿ. ಅದು ನಿಮ್ಮಲ್ಲಿ ಧೈರ್ಯವನ್ನು ತುಂಬುವುದು. ಉದಾಹರಣೆಗೆ, ನಿಮಗೆ ತುಂಬ ನೋವನ್ನು ಉಂಟುಮಾಡಿದ ಒಂದು ಸಮಸ್ಯೆಯ ಕುರಿತು ಯೆಹೋವನಿಗೆ ಕಟ್ಟಾಸಕ್ತಿಯಿಂದ ಪ್ರಾರ್ಥಿಸಿದ್ದನ್ನು ನೆನಪಿಸಿಕೊಳ್ಳಬಲ್ಲಿರೋ? ಆ ಸಮಸ್ಯೆಯನ್ನು ನಿಭಾಯಿಸಲು ಯೆಹೋವನು ನಿಮಗೆ ವಿವೇಕ, ಬಲ ಕೊಟ್ಟನಲ್ಲವೇ? ಸಂತೋಷದಿಂದ ಆತನ ಸೇವೆ ಮಾಡಲು ಅಡ್ಡಿಯಾಗಿದ್ದ ವಿಷಯಗಳು ಹೇಗೆ ತೆಗೆದುಹಾಕಲ್ಪಟ್ಟವು? ಆತನ ಸೇವೆಯನ್ನು ಹೆಚ್ಚು ಮಾಡುವ ಅವಕಾಶದ ದೊಡ್ಡ ಬಾಗಿಲು ನಿಮಗಾಗಿ ತೆರೆದದ್ದು ಜ್ಞಾಪಕವುಂಟೋ? (1 ಕೊರಿಂ. 16:9) ಆ ಸಂದರ್ಭಗಳನ್ನು ನೆನಸುವಾಗೆಲ್ಲ ನಿಮಗೆ ಹೇಗನಿಸುತ್ತದೆ? ಹೆಚ್ಚು ಕಷ್ಟಕರ ಸನ್ನಿವೇಶವನ್ನು ನಿಭಾಯಿಸಲು ಮತ್ತು ಸಹಿಸಿಕೊಳ್ಳಲು ಆತನು ಈಗಲೂ ನಿಮಗೆ ಸಹಾಯ ಮಾಡುವನೆಂಬ ದೃಢಭರವಸೆಯನ್ನು ಅದು ಕೊಡುತ್ತದಲ್ಲವೇ?—ರೋಮ. 5:3-5.
6 ಯೆಹೋವನ ಸಾಕ್ಷಿಗಳನ್ನು ಸಂಪೂರ್ಣವಾಗಿ ಅಳಿಸಿಹಾಕಲು ಬಲಿಷ್ಠ ಸರ್ಕಾರಗಳು ಸಂಚುಹೂಡಿದರೆ ಆಗೇನು? ಇತ್ತೀಚಿನ ಸಮಯಗಳಲ್ಲಿ ಕೈಗೊಂಡ ಅಂಥ ಅನೇಕ ಪ್ರಯತ್ನಗಳು ಪೂರ್ಣವಾಗಿ ಸೋತಿವೆ. ಪ್ರಾಚೀನ ಸಮಯಗಳಲ್ಲಿ ಯೆಹೋವನು ತನ್ನ ಜನರಿಗೆ ಸಹಾಯ ಮಾಡಿದ ವಿಧಗಳನ್ನು ಧ್ಯಾನಿಸುವುದು ಭವಿಷ್ಯತ್ತಿನಲ್ಲಿ ಏನೇ ಬರಲಿ ಧೈರ್ಯದಿಂದ ಎದುರಿಸಲು ನಮಗೆ ಸಹಾಯ ಮಾಡುವುದು.—ದಾನಿ. 3:28.
ಸತ್ಯಾರಾಧನೆಗಾಗಿ ಪ್ರೀತಿ
7, 8. (1) ಕೀರ್ತನೆ 27:4ಕ್ಕನುಸಾರ ದಾವೀದನು ಯೆಹೋವನಲ್ಲಿ ಏನು ಕೇಳಿಕೊಂಡನು? (2) ಯೆಹೋವನ ಮಹಾ ಆಧ್ಯಾತ್ಮಿಕ ಆಲಯ ಏನಾಗಿದೆ? (3) ಅಲ್ಲಿ ನಾವು ಯಾವ ವಿಧಗಳಲ್ಲಿ ಆರಾಧನೆ ಸಲ್ಲಿಸುತ್ತೇವೆ?
7 ಧೈರ್ಯದಿಂದ ಇರಲು ನಮಗೆ ಅಗತ್ಯವಾದ ಇನ್ನೊಂದು ವಿಷಯವೆಂದರೆ ಸತ್ಯಾರಾಧನೆಗಾಗಿ ಪ್ರೀತಿ. (ಕೀರ್ತನೆ 27:4 ಓದಿ.) ದಾವೀದನ ದಿನಗಳಲ್ಲಿ “ಯೆಹೋವನ ಮನೆ” ದೇವದರ್ಶನ ಗುಡಾರವಾಗಿತ್ತು. ಅನಂತರ ದಾವೀದನು ಯೆಹೋವನಿಗಾಗಿ ಭವ್ಯ ದೇವಾಲಯದ ನಿರ್ಮಾಣಕಾರ್ಯಕ್ಕೆ ಸಕಲ ಸಿದ್ಧತೆ ಮಾಡಿದನು. ಮುಂದೆ ಸೊಲೊಮೋನ ಅದನ್ನು ಕಟ್ಟಿ ಮುಗಿಸಿದನು. ಆದರೆ ಯೆಹೋವನನ್ನು ಆರಾಧಿಸಲು ಆಲಯವು ಮುಂದೆಂದೂ ಅಗತ್ಯವಿರುವುದಿಲ್ಲ ಎಂದು ಶತಮಾನಗಳ ಬಳಿಕ ಯೇಸು ಹೇಳಿದನು. (ಯೋಹಾ. 4:21-23) ಇಬ್ರಿಯ 8 ರಿಂದ 10ನೇ ಅಧ್ಯಾಯಗಳಲ್ಲಿ ಅಪೊಸ್ತಲ ಪೌಲ ಮಹಾ ಆಧ್ಯಾತ್ಮಿಕ ಆಲಯದ ಕುರಿತು ಮಾತಾಡಿದನು. ಕ್ರಿ.ಶ. 29ರಲ್ಲಿ ಯೇಸು ದೀಕ್ಷಾಸ್ನಾನ ಪಡೆದು ಯೆಹೋವನ ಚಿತ್ತ ಮಾಡಲು ತನ್ನನ್ನು ಅರ್ಪಿಸಿಕೊಂಡಾಗ ಆ ಆಧ್ಯಾತ್ಮಿಕ ಆಲಯ ಅಸ್ತಿತ್ವಕ್ಕೆ ಬಂತೆಂದು ಪೌಲ ಹೇಳಿದನು. (ಇಬ್ರಿ. 10:10) ಈ ಮಹಾ ಆಧ್ಯಾತ್ಮಿಕ ಆಲಯ ಏನಾಗಿದೆ? ಯೇಸುವಿನ ವಿಮೋಚನಾ ಮೌಲ್ಯ ಯಜ್ಞದಲ್ಲಿ ನಂಬಿಕೆಯಿಡುವ ಮೂಲಕ ತನ್ನನ್ನು ಸ್ವೀಕಾರಾರ್ಹ ರೀತಿಯಲ್ಲಿ ಆರಾಧಿಸಲು ಸಾಧ್ಯವಾಗುವಂತೆ ಯೆಹೋವನು ಮಾಡಿರುವ ಏರ್ಪಾಡಾಗಿದೆ. ಆ ಆಲಯದಲ್ಲಿ ಆರಾಧನೆ ಸಲ್ಲಿಸುವುದು ಯಾವ ವಿಧಗಳಲ್ಲಿ? “ನಂಬಿಕೆಯ ಪೂರ್ಣ ಆಶ್ವಾಸನೆಯಲ್ಲಿ ಯಥಾರ್ಥ ಹೃದಯಗಳೊಂದಿಗೆ” ಪ್ರಾರ್ಥಿಸುವ ಮೂಲಕ, ಹೆದರದೆ ನಮ್ಮ ನಿರೀಕ್ಷೆಯನ್ನು ಎಲ್ಲರಿಗೆ ಪ್ರಕಟಿಸುವ ಮೂಲಕ, ಕುಟುಂಬ ಆರಾಧನೆ ಮತ್ತು ಸಭಾ ಕೂಟಗಳಲ್ಲಿ ಪರಸ್ಪರ ಹಿತಚಿಂತಕರಾಗಿದ್ದು ಪ್ರೇರೇಪಿಸಿ ಪ್ರೋತ್ಸಾಹಿಸುವ ಮೂಲಕ. (ಇಬ್ರಿ. 10:22-25) ಹೌದು, ಸತ್ಯಾರಾಧನೆಯ ಏರ್ಪಾಡಿಗಾಗಿ ನಮ್ಮಲ್ಲಿರುವ ಪ್ರೀತಿಯು ಈ ಕಡೇ ದಿನಗಳಲ್ಲಿ ನಮ್ಮ ಧೈರ್ಯವನ್ನು ಹೆಚ್ಚಿಸುವುದು.
8 ಯೆಹೋವನ ನಂಬಿಗಸ್ತ ಸೇವಕರು ಜಗತ್ತಿನಾದ್ಯಂತ ಸಾರುವ ಕೆಲಸಕ್ಕೆ ಅಧಿಕ ಸಮಯವನ್ನು ವ್ಯಯಿಸುತ್ತಿದ್ದಾರೆ. ಹೊಸ ಭಾಷೆಗಳನ್ನು ಕಲಿಯುತ್ತಿದ್ದಾರೆ. ಹೆಚ್ಚು ರಾಜ್ಯ ಪ್ರಚಾರಕರ ಅಗತ್ಯವಿರುವ ಸ್ಥಳಗಳಿಗೆ ಹೋಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಸತ್ಕಾರ್ಯಗಳು ದಾವೀದನಂತೆ ಅವರೂ ಯೆಹೋವನ ಪ್ರಸನ್ನತೆಯನ್ನು ನೋಡುತ್ತಾ ಪವಿತ್ರ ಸೇವೆ ಸಲ್ಲಿಸುವ ಒಂದೇ ವರವನ್ನು ಅಪೇಕ್ಷಿಸುತ್ತಾರೆಂದು ತೋರಿಸುತ್ತವೆ.—ಕೀರ್ತನೆ 27:6 ಓದಿ.
ಯೆಹೋವನ ಸಹಾಯದಲ್ಲಿ ಭರವಸವಿಡಿ
9, 10. ಕೀರ್ತನೆ 27:10ರಲ್ಲಿರುವ ಆಶ್ವಾಸನೆಯ ಅರ್ಥವೇನು?
9 ದಾವೀದನಿಗೆ ಯೆಹೋವನಲ್ಲಿ ಎಷ್ಟೊಂದು ಭರವಸೆ ಇತ್ತೆಂದು ಈ ಮಾತುಗಳಿಂದ ಗೊತ್ತಾಗುತ್ತದೆ: “ತಂದೆತಾಯಿಗಳು ನನ್ನನ್ನು ತೊರೆದುಬಿಟ್ಟರೇನು; ಯೆಹೋವನು ನನ್ನನ್ನು ಸೇರಿಸಿಕೊಳ್ಳುವನು.” (ಕೀರ್ತ. 27:10) ದಾವೀದನ ಹೆತ್ತವರು ಅವನನ್ನು ತೊರೆದಿರಲಿಲ್ಲ ಎನ್ನುವುದು 1 ಸಮುವೇಲ 22ನೇ ಅಧ್ಯಾಯ ಓದುವಾಗ ತಿಳಿದುಬರುತ್ತದೆ. ಆದರೆ ಇಂದು ಅನೇಕರನ್ನು ಅವರ ಕುಟುಂಬ ತೊರೆದಿದೆ. ಅಂಥವರು ಕ್ರೈಸ್ತ ಸಭೆಯ ಪ್ರೀತಿಯ ಸಾಹಚರ್ಯದಲ್ಲಿ ಸಹಾಯ, ಸಂರಕ್ಷಣೆ ಪಡೆದಿದ್ದಾರೆ.
10 ಬೇರೆಯವರು ಕೈಬಿಟ್ಟಾಗ ಯೆಹೋವನು ತನ್ನ ಸೇವಕರಿಗೆ ಆಸರೆ ಕೊಡಲು ಸಿದ್ಧನಿದ್ದಾನೆ ಎಂದಾದರೆ ಬೇರೆ ರೀತಿಯ ಸಂಕಷ್ಟದಲ್ಲಿರುವಾಗ ಪರಾಮರಿಸದೆ ಬಿಟ್ಟುಬಿಡುವನೇ? ಉದಾಹರಣೆಗೆ ಕುಟುಂಬದ ಅಗತ್ಯಗಳನ್ನು ಪೂರೈಸುವ ಬಗ್ಗೆ ನಿಮಗೆ ಚಿಂತೆಯಿದ್ದರೆ ಯೆಹೋವನು ಖಂಡಿತ ಸಹಾಯ ನೀಡುವನೆಂಬ ಖಾತ್ರಿ ನಿಮಗಿರಲಿ. (ಇಬ್ರಿ. 13:5, 6) ತನ್ನ ಪ್ರತಿಯೊಬ್ಬ ನಿಷ್ಠಾವಂತ ಸೇವಕನು ಯಾವ ಪರಿಸ್ಥಿತಿಯಲ್ಲಿದ್ದಾನೆ, ಅವನಿಗೆ ಏನೆಲ್ಲ ಅಗತ್ಯವಿದೆ ಎಂದು ಆತನು ಚೆನ್ನಾಗಿ ಬಲ್ಲನು.
11. ಯೆಹೋವನಲ್ಲಿ ನಮಗಿರುವ ಭರವಸೆ ಬೇರೆಯವರ ಮೇಲೆ ಯಾವ ಪ್ರಭಾವ ಬೀರಬಲ್ಲದು? ಉದಾಹರಣೆ ಕೊಡಿ.
11 ಲೈಬೀರಿಯದ ವಿಕ್ಟೋರಿಯ ಎಂಬಾಕೆಯ ಉದಾಹರಣೆ ಗಮನಿಸಿ. ಬೈಬಲ್ ವಿದ್ಯಾರ್ಥಿಯಾಗಿದ್ದ ಆಕೆ ಆಧ್ಯಾತ್ಮಿಕವಾಗಿ ಒಳ್ಳೇ ಪ್ರಗತಿ ಮಾಡುತ್ತಿದ್ದಾಗ ಆಕೆಯೊಂದಿಗೆ ಜೀವಿಸುತ್ತಿದ್ದ ಪುರುಷನು ಅವಳನ್ನೂ ಅವಳ ಮೂರು ಮಕ್ಕಳನ್ನೂ ಹೊರಗಟ್ಟಿದನು. ಉಳುಕೊಳ್ಳಲು ಮನೆಯಿಲ್ಲ, ಕೈಯಲ್ಲಿ ಕೆಲಸ ಕೂಡ ಇಲ್ಲ. ಆದರೂ ಆಕೆ ಆಧ್ಯಾತ್ಮಿಕ ಪ್ರಗತಿ ಮಾಡಿ ದೀಕ್ಷಾಸ್ನಾನ ಪಡೆದಳು. ಬಳಿಕ ಒಮ್ಮೆ ಆಕೆಯ 13ವರ್ಷದ ಮಗಳಿಗೆ ಒಂದು ಚಿಕ್ಕ ಬ್ಯಾಗ್ ಸಿಕ್ಕಿತು. ಅದರ ತುಂಬ ಹಣ ಇತ್ತು. ಎಷ್ಟಿದೆಯೆಂದು ಎಣಿಸಿದರೆ ಎಲ್ಲಿ ತಕ್ಕೊಳ್ಳುವ ಆಸೆ ಬಂದೀತೋ ಎಂಬ ಯೋಚನೆಯಿಂದ ಎಣಿಸುವ ಗೋಜಿಗೂ ಹೋಗಲಿಲ್ಲ. ಕೂಡಲೆ ಆ ಬ್ಯಾಗಿನ ಮಾಲೀಕನನ್ನು ಹುಡುಕಿ ಅದನ್ನು ಹಿಂತಿರುಗಿಸಿದರು. ಸೈನಿಕನಾಗಿದ್ದ ಅವನು ಅವರ ಪ್ರಾಮಾಣಿಕತೆಯನ್ನು ಮೆಚ್ಚಿ ಎಲ್ಲರೂ ಯೆಹೋವನ ಸಾಕ್ಷಿಗಳಂತೆ ಪ್ರಾಮಾಣಿಕರಾಗಿದ್ದರೆ ಪ್ರಪಂಚ ಎಷ್ಟು ಒಳ್ಳೇದಿರುತ್ತಿತ್ತು, ಎಷ್ಟೊಂದು ಶಾಂತಿ ನೆಲೆಸಿರುತ್ತಿತ್ತು ಎಂದು ಹೊಗಳಿದನು. ಆ ಸಂದರ್ಭವನ್ನು ಸದುಪಯೋಗಿಸುತ್ತಾ ವಿಕ್ಟೋರಿಯ ಬೈಬಲನ್ನು ತೆರೆದು ಹೊಸ ಲೋಕದ ಬಗ್ಗೆ ಯೆಹೋವ ದೇವರು ಮಾಡಿರುವ ವಾಗ್ದಾನವನ್ನು ತೋರಿಸಿದಳು. ಸೈನಿಕನು ಖುಷಿಯಾಗಿ ಬ್ಯಾಗ್ನಿಂದ ದೊಡ್ಡ ಮೊತ್ತದ ಹಣವನ್ನು ಆಕೆಗೆ ಕೊಟ್ಟನು. ಹೌದು, ಯೆಹೋವನ ಸಾಕ್ಷಿಗಳು ತಮ್ಮ ಪ್ರಾಮಾಣಿಕತೆಗಾಗಿ ಜಗದ್ವಿಖ್ಯಾತರು. ತಮ್ಮ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯ ಯೆಹೋವನಿಗಿದೆ ಎಂಬ ಪೂರ್ಣ ಭರವಸೆ ಅವರಿಗಿದೆ.
12. ಉದ್ಯೋಗ, ಸಂಪಾದನೆ ಹೋದರೂ ಯೆಹೋವನ ಸೇವೆಯನ್ನು ಮಾಡುತ್ತ ಮುಂದುವರಿಯುವಾಗ ನಾವೇನು ತೋರಿಸಿಕೊಡುತ್ತೇವೆ? ಉದಾಹರಣೆ ಕೊಡಿ.
12 ಸಿಯೆರಾ ಲಿಯೋನ್ ದೇಶದ ಥಾಮಸ್ನ ಉದಾಹರಣೆ ನೋಡೋಣ. ಅವನಿಗೆ ಇನ್ನೂ ದೀಕ್ಷಾಸ್ನಾನವಾಗಿರಲಿಲ್ಲ. ಪ್ರಚಾರಕನಾಗಿದ್ದ ಅವನು ಶಿಕ್ಷಕನಾಗಿ ಕೆಲಸಮಾಡುತ್ತಿದ್ದ. ಹೆಚ್ಚುಕಡಿಮೆ ಒಂದು ವರ್ಷದ ಸಂಬಳ ಅವನ ಕೈಸೇರಿರಲಿಲ್ಲ. ಅದನ್ನು ಪಡೆಯಲು ಶಾಲೆಯ ಕಾರ್ಯನಿರ್ವಾಹಕನಾಗಿದ್ದ ಪಾದ್ರಿಯ ಬಳಿ ಮಾತಾಡಬೇಕಿತ್ತು. ಹೋಗಿ ಮಾತಾಡಿದಾಗ ಯೆಹೋವನ ಸಾಕ್ಷಿಗಳ ನಂಬಿಕೆಗೂ ನಮ್ಮ ನಂಬಿಕೆಗೂ ಸರಿಹೊಂದುವುದಿಲ್ಲ, ನಿನಗೆ ಶಾಲೆಯಲ್ಲಿ ಕೆಲಸ ಉಳಿಸಿಕೊಳ್ಳಬೇಕಾದರೆ ಯೆಹೋವನ ಸಾಕ್ಷಿಯಾಗಿರಬಾರದು ಎಂದು ಪಾದ್ರಿ ಶರತ್ತು ಹಾಕಿದ. ಥಾಮಸ್ ಧೃತಿಗೆಡಲಿಲ್ಲ. ಕೆಲಸದ ಜೊತೆಗೆ ಒಂದು ವರ್ಷದ ಸಂಬಳವನ್ನೂ ಕೈಬಿಡಬೇಕಾಯಿತು. ಅನಂತರ ರೇಡಿಯೋ ಮತ್ತು ಮೊಬೈಲ್ಗಳನ್ನು ರಿಪೇರಿ ಮಾಡುವ ಕೆಲಸ ಸಿಕ್ಕಿತು. ಈ ಉದಾಹರಣೆ ಮತ್ತು ಇಂಥ ಅನೇಕ ಉದಾಹರಣೆಗಳು ತೋರಿಸುವಂತೆ ಯೆಹೋವನ ಮೇಲೆ ಭರವಸೆಯಿಡುವ ನಾವು ನಾಳೆಯನ್ನು ನೆನಸಿ ಭಯಪಡುವುದಿಲ್ಲ. ಲೋಕದ ಜನರು ಊಟಬಟ್ಟೆಯಿಲ್ಲದೆ ಪರದಾಡುವೆವು ಎಂದು ಭಯಪಡಬಹುದು. ನಮಗಾದರೋ ಸರ್ವವನ್ನು ಸೃಷ್ಟಿಸಿದಾತನೂ ಸದಾ ತನ್ನ ಜನರನ್ನು ಸಂರಕ್ಷಿಸುವಾತನೂ ಆದ ಯೆಹೋವನು ಖಂಡಿತ ನಮ್ಮನ್ನು ನೋಡಿಕೊಳ್ಳುವನೆಂಬ ಭರವಸೆಯಿದೆ.
13. ಬಡ ರಾಷ್ಟ್ರಗಳಲ್ಲಿ ಸಾರುವ ಕೆಲಸವು ಹೇಗೆ ಪ್ರಗತಿ ಹೊಂದುತ್ತಾ ಇದೆ?
13 ಅನೇಕ ಬಡ ರಾಷ್ಟ್ರಗಳಲ್ಲಿ ಸಹೋದರ ಸಹೋದರಿಯರು ಸಾರುವ ಕೆಲಸದಲ್ಲಿ ಹೆಚ್ಚು ಮಗ್ನರಾಗಿದ್ದಾರೆ. ಏಕೆ? ಒಂದು ಬ್ರಾಂಚ್ ಆಫೀಸ್ ಹೀಗೆ ಬರೆಯಿತು: “ಬೈಬಲ್ ಅಧ್ಯಯನ ಸ್ವೀಕರಿಸುವ ಅನೇಕರು ಉದ್ಯೋಗ ಸಿಗದೆ ಮನೆಯಲ್ಲಿ ಇರುವವರಾಗಿದ್ದಾರೆ. ಹಾಗಾಗಿ ಅವರಿಗೆ ಅಧ್ಯಯನ ಮಾಡಲು ಹೆಚ್ಚು ಸಮಯ ಸಿಗುತ್ತದೆ. ಸಹೋದರರಿಗೂ ಸಾರುವ ಕೆಲಸದಲ್ಲಿ ಪಾಲ್ಗೊಳ್ಳಲು ಹೆಚ್ಚು ಸಮಯ ಇದೆ. ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆ ಎನ್ನುವುದನ್ನು ಜನರು ಕೂಡಲೆ ಒಪ್ಪುತ್ತಾರೆ. ಏಕೆಂದರೆ ತಾವು ಜೀವಿಸುತ್ತಿರುವ ಪರಿಸ್ಥಿತಿ ಕೆಡುತ್ತಿರುವುದನ್ನು ಕಣ್ಣೆದುರೇ ನೋಡುತ್ತಿದ್ದಾರೆ.” ಒಬ್ಬ ಸಹೋದರನು ಮಿಷನರಿಯಾಗಿ ಹನ್ನೆರಡಕ್ಕಿಂತ ಹೆಚ್ಚು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಒಂದು ಸ್ಥಳದಲ್ಲಿ ಪ್ರತಿ ಪ್ರಚಾರಕರಿಗೆ ಮೂರಕ್ಕಿಂತ ಹೆಚ್ಚು ಬೈಬಲ್ ಅಧ್ಯಯನಗಳಿವೆ. ಆ ಮಿಷನರಿ ಹೀಗೆ ಬರೆದರು: “ಅನೇಕ ಪ್ರಚಾರಕರು ಸರಳ ಜೀವನ ನಡೆಸುವುದರಿಂದ ಅಪಕರ್ಷಣೆ ಕಡಿಮೆ. ಕ್ಷೇತ್ರ ಸೇವೆಗೆ ಹೋಗಲು, ಬೈಬಲ್ ಅಧ್ಯಯನ ನಡೆಸಲು ಅವರಿಗೆ ಹೆಚ್ಚು ಸಮಯವಿದೆ.”
14. ಮಹಾ ಸಮೂಹವನ್ನು ಯೆಹೋವನು ಯಾವ ವಿಧಗಳಲ್ಲಿ ಸಂರಕ್ಷಿಸುವನು?
14 ಒಂದು ಗುಂಪಾಗಿ ತನ್ನ ಜನರಿಗೆ ಶಾರೀರಿಕವಾಗಿಯೂ ಆಧ್ಯಾತ್ಮಿಕವಾಗಿಯೂ ಸಹಾಯ ಮಾಡಿ, ಅವರನ್ನು ಕಾಪಾಡಿ, ಪಾರುಗೊಳಿಸುವನೆಂದು ಯೆಹೋವನು ಮಾತುಕೊಟ್ಟಿದ್ದಾನೆ. ಆತನ ಮಾತಿನಲ್ಲಿ ನಮಗೆ ಸಂಪೂರ್ಣ ಭರವಸೆಯಿದೆ. (ಕೀರ್ತ. 37:28; 91:1-3) “ಮಹಾ ಸಂಕಟ”ವನ್ನು ಪಾರಾಗುವ ಜನರು ಮಹಾ ಸಮೂಹವಾಗಿರುವರು ಎಂದು ಬೈಬಲ್ ಹೇಳುತ್ತದೆ. (ಪ್ರಕ. 7:9, 14) ಆದ್ದರಿಂದ ಈ ಕಡೇ ದಿವಸಗಳಲ್ಲಿ ತನ್ನ ಜನರೆಲ್ಲರನ್ನು ನಾಶಗೊಳಿಸಲು ಯಾರೊಬ್ಬರಿಗೂ ಆತನು ಅನುಮತಿ ನೀಡುವುದಿಲ್ಲ ಎಂಬುದು ಸ್ಪಷ್ಟ. ಸಂಕಷ್ಟಗಳನ್ನು ತಾಳಿಕೊಳ್ಳಲು ಮತ್ತು ತನ್ನೊಂದಿಗಿನ ಸುಸಂಬಂಧವನ್ನು ಕಾಪಾಡಿಕೊಳ್ಳಲು ಅಗತ್ಯವಿರುವ ಎಲ್ಲವನ್ನೂ ಆತನು ತನ್ನ ಜನರಿಗೆ ಕೊಟ್ಟೇ ಕೊಡುತ್ತಾನೆ. ಮಾತ್ರವಲ್ಲ ಮಹಾ ಸಂಕಟದ ಪರಮಾವಧಿಯಲ್ಲಿ ಆತನು ತನ್ನ ಜನರನ್ನು ಸಂರಕ್ಷಿಸುತ್ತಾನೆ.
“ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ಬೋಧಿಸು”
15, 16. ದೈವಿಕ ಬೋಧನೆಯನ್ನು ಅನ್ವಯಿಸುವಾಗ ನಾವು ಹೇಗೆ ಪ್ರಯೋಜನ ಹೊಂದುತ್ತೇವೆ? ಉದಾಹರಣೆ ಕೊಡಿ.
15 ಧೈರ್ಯದಿಂದಿರಲು ಅಗತ್ಯವಾದ ಮತ್ತೊಂದು ವಿಷಯವೆಂದರೆ ದೇವರ ಮಾರ್ಗದ ಕುರಿತು ಬೋಧನೆಯನ್ನು ಪಡೆಯುತ್ತಾ ಇರುವುದೇ. ದಾವೀದನ ಈ ಬಿನ್ನಹದಿಂದ ಇದು ವ್ಯಕ್ತವಾಗುತ್ತದೆ. “ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ಬೋಧಿಸು; ಹೊಂಚುಹಾಕಿರುವವರಿಗೆ ಸಿಕ್ಕದ ಹಾಗೆ ನನ್ನನ್ನು ಸಮವಾದ ದಾರಿಯಲ್ಲಿ ನಡಿಸು.” (ಕೀರ್ತ. 27:11) ದೇವರ ಬೋಧನೆಯನ್ನು ನಾವು ಹೇಗೆ ಪಡೆಯುತ್ತೇವೆ? ಬೈಬಲ್ ಮತ್ತು ಯೆಹೋವನ ಸಂಘಟನೆ ಕೊಡುವ ಮಾರ್ಗದರ್ಶನದ ಮೂಲಕ. ನಾವದಕ್ಕೆ ಕಿವಿಗೊಡಬೇಕು ಮತ್ತು ಕೂಡಲೆ ಅನ್ವಯಿಸಿಕೊಳ್ಳಬೇಕು. ಉದಾಹರಣೆಗೆ ಸರಳ ಜೀವನ ನಡೆಸುವಂತೆ ಸಂಘಟನೆ ಮಾರ್ಗದರ್ಶನವನ್ನು ನೀಡುತ್ತಾ ಬಂದಿದೆ. ಅನೇಕರು ಆ ಸಲಹೆಯನ್ನು ಅನ್ವಯಿಸಿದ್ದರಿಂದ ಅನಗತ್ಯ ಸಾಲಗಳಿಂದ ಮುಕ್ತರಾಗಿದ್ದಾರೆ. ತಮಗೆ ನಿಜವಾಗಿಯೂ ಅಗತ್ಯವಿಲ್ಲದ ವಸ್ತುಗಳನ್ನು ಮಾರಿದ್ದಾರೆ. ಫಲಿತಾಂಶ? ಈಗಾಗಲೇ ಅವರು ತಮ್ಮ ಜೀವನವನ್ನು ಸರಳಗೊಳಿಸಿದ್ದರಿಂದ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಅವರಿಗೆ ಹೆಚ್ಚು ಕಷ್ಟವಾಗಲಿಲ್ಲ. ಸಾರುವ ಕೆಲಸಕ್ಕೆ ಹೆಚ್ಚು ಸಮಯ ಕೊಡಲು ಸಾಧ್ಯವಾಯಿತು. ನಮ್ಮ ಕುರಿತೇನು? ಪ್ರತಿಯೊಬ್ಬರು ಹೀಗೆ ಕೇಳಿಕೊಳ್ಳೋಣ: ‘ಬೈಬಲ್ ಮತ್ತು ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು ವರ್ಗ ಕೊಡುವ ಸಾಹಿತ್ಯದಲ್ಲಿ ಓದುವ ಪ್ರತಿಯೊಂದು ವಿಷಯವನ್ನು ನಾನು ಕೂಡಲೆ ಅನ್ವಯಿಸಿಕೊಳ್ಳುತ್ತೇನಾ? ಅದಕ್ಕಾಗಿ ತ್ಯಾಗಗಳನ್ನು ಮಾಡಲಿಕ್ಕೂ ಸಿದ್ಧನಿದ್ದೇನಾ?’—ಮತ್ತಾ. 24:45.
16 ಯೆಹೋವನ ಬೋಧನೆಯನ್ನು ಪಡೆದು ಆತನು ನಮ್ಮನ್ನು ಸಮವಾದ ದಾರಿಯಲ್ಲಿ ನಡೆಸುವಂತೆ ನಾವು ಬಿಟ್ಟುಕೊಟ್ಟಲ್ಲಿ ಭಯಪಡಲು ಯಾವುದೇ ಕಾರಣವಿರುವುದಿಲ್ಲ. ಯುನೈಟೆಡ್ ಸ್ಟೇಟ್ಸ್ನ ರೆಗ್ಯುಲರ್ ಪಯನೀಯರ್ ಸಹೋದರನ ಉದಾಹರಣೆ ಗಮನಿಸಿ. ಅವನು ತನ್ನ ಆಫೀಸಿನಲ್ಲಿ ಮೇಲ್ದರ್ಜೆಯ ಹುದ್ದೆಗೆ ಅರ್ಜಿ ಹಾಕಿದ. ಅದು ಸಿಕ್ಕಿದರೆ ಅವನ ಇಡೀ ಕುಟುಂಬ ಪೂರ್ಣ ಸಮಯದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿತ್ತು. ಆದರೆ ಸಹೋದರನು ಡಿಗ್ರಿ ಮಾಡಿರದ ಕಾರಣ ಈ ಹುದ್ದೆ ಸಿಗಲು ಸಾಧ್ಯವೇ ಇಲ್ಲ ಎಂದು ಮ್ಯಾನೇಜರ್ ಹೇಳಿದನು. ಆ ಸಹೋದರನ ಪರಿಸ್ಥಿತಿಯಲ್ಲಿ ನೀವು ಇದ್ದಿದ್ದರೆ ಉನ್ನತ ವಿದ್ಯಾಭ್ಯಾಸ ಪಡೆಯದೆ ಪೂರ್ಣ ಸಮಯದ ಸೇವೆ ಆರಂಭಿಸಿದ್ದಕ್ಕಾಗಿ ಬೇಸರಪಡುತ್ತಿದ್ದಿರೋ? ಆ ಸಹೋದರನಿಗೆ ಮುಂದೇನಾಯಿತೆಂದು ಗಮನಿಸಿ. ಎರಡು ವಾರಗಳ ನಂತರ ಆ ಮ್ಯಾನೇಜರನನ್ನು ಕೆಲಸದಿಂದ ತೆಗೆದುಹಾಕಲಾಯಿತು. ಹೊಸ ಮ್ಯಾನೇಜರ್ ಸಹೋದರನನ್ನು ಕರೆದು ಅವನ ಗುರಿಗಳ ಬಗ್ಗೆ ಕೇಳಿದರು. ಆಗ ಸಹೋದರನು, ಯೆಹೋವನ ಸಾಕ್ಷಿಯಾಗಿರುವ ತಾನೂ ತನ್ನ ಹೆಂಡತಿ ಪೂರ್ಣಸಮಯದ ಸೇವೆಯಲ್ಲಿದ್ದೇವೆ ಮತ್ತು ಅದನ್ನು ಮುಂದುವರಿಸಲು ಇಷ್ಟವಿದೆ ಎಂದು ಹೇಳಿ ಮಾತು ಮುಂದುವರಿಸುವಷ್ಟರಲ್ಲಿ ಹೊಸ ಮ್ಯಾನೇಜರ್ ಹೀಗಂದರು: “ನಾನು ಗಮನಿಸಿದೆ, ನೀವು ಬೇರೆಯವರಂತೆ ಇಲ್ಲ. ಏಕೆ ಅನ್ನೋದು ಈಗ ಗೊತ್ತಾಯಿತು. ನನ್ನ ತಂದೆ ಸಾಯುವ ಮುಂಚೆ ಹಾಸಿಗೆ ಹಿಡಿದಿದ್ದಾಗ ಇಬ್ಬರು ಸಾಕ್ಷಿಗಳು ಪ್ರತಿದಿನ ಬಂದು ಅವರಿಗೆ ಬೈಬಲ್ ಓದಿ ಹೇಳುತ್ತಿದ್ದರು. ಆ ಸಮಯದಿಂದ ನಾನು ಯೆಹೋವನ ಸಾಕ್ಷಿಗಳಿಗೆ ಸಹಾಯ ಮಾಡುವ ಅವಕಾಶ ಸಿಕ್ಕರೆ ಖಂಡಿತ ಕೈಲಾದದ್ದೆಲ್ಲ ಮಾಡುತ್ತೇನೆಂದು ನಿರ್ಧರಿಸಿದೆ.” ಯಾವ ಹುದ್ದೆಗೆ ನಮ್ಮ ಸಹೋದರನು ಅರ್ಹನಲ್ಲವೆಂದು ಹೇಳಲಾಗಿತ್ತೋ ಅದೇ ಹುದ್ದೆಯನ್ನು ಮರುದಿನ ಅವನಿಗೆ ಕೊಡಲಾಯಿತು. ದೇವರ ಚಿತ್ತವನ್ನು ಮಾಡುವುದಕ್ಕೆ ಜೀವನದಲ್ಲಿ ನಾವು ಆದ್ಯತೆ ಕೊಟ್ಟರೆ ಯೆಹೋವನು ನಮ್ಮ ಭೌತಿಕ ಅಗತ್ಯಗಳನ್ನು ಖಂಡಿತ ಪೂರೈಸುತ್ತಾನೆ. ಆತನೆಂದೂ ತನ್ನ ಮಾತಿಗೆ ತಪ್ಪುವುದಿಲ್ಲ.—ಮತ್ತಾ. 6:33.
ನಂಬಿಕೆ ಮತ್ತು ನಿರೀಕ್ಷೆ ಅತ್ಯಗತ್ಯ
17. ಭವಿಷ್ಯತ್ತನ್ನು ಭರವಸೆಯಿಂದ ಎದುರಿಸಲು ಯಾವುದು ನಮಗೆ ನೆರವಾಗುತ್ತದೆ?
17 ನಂಬಿಕೆ ಮತ್ತು ನಿರೀಕ್ಷೆಯ ಅಗತ್ಯವನ್ನು ದಾವೀದನು ಹೀಗೆ ಒತ್ತಿಹೇಳಿದನು: “ಜೀವಲೋಕದಲ್ಲಿಯೇ ಯೆಹೋವನ ದಯೆಯನ್ನು ಅನುಭವಿಸುವೆನೆಂದು ದೃಢವಾಗಿ ನಂಬಿದ್ದೇನೆ.” (ಕೀರ್ತ. 27:13) ದೇವರು ನಮಗೆ ನಿರೀಕ್ಷೆಯನ್ನು ಕೊಡದಿದ್ದಲ್ಲಿ ಮತ್ತು ಕೀರ್ತನೆ 27ರಲ್ಲಿರುವ ವಿಷಯಗಳು ತಿಳಿದಿರದಿದ್ದಲ್ಲಿ ನಾವು ಎಂಥ ಸ್ಥಿತಿಯಲ್ಲಿರುತ್ತಿದ್ದೆವು? ಅರ್ಮಗೆದೋನಿಗೆ ನಡೆಸುತ್ತಿರುವ ಲೋಕ ಘಟನೆಗಳನ್ನು ಎದುರಿಸುತ್ತಾ ಹೋದಂತೆ ನಾವು ಬಲಕ್ಕಾಗಿಯೂ ರಕ್ಷಣೆಗಾಗಿಯೂ ಸದಾ ಭರವಸೆಯಿಂದ ಯೆಹೋವನಲ್ಲಿ ಪ್ರಾರ್ಥಿಸುತ್ತಾ ಇರೋಣ.—ಕೀರ್ತನೆ 27:14 ಓದಿ.
[ಪುಟ 23ರಲ್ಲಿರುವ ಚಿತ್ರ]
ಯೆಹೋವನು ತನ್ನನ್ನು ರಕ್ಷಿಸಿದ ಸಂದರ್ಭಗಳನ್ನು ದಾವೀದ ನೆನಪಿಸಿಕೊಂಡು ಬಲ ಹೊಂದಿದನು
[ಪುಟ 25ರಲ್ಲಿರುವ ಚಿತ್ರ]
ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿಯನ್ನು ನಿಮ್ಮ ಸೇವೆ ಹೆಚ್ಚಿಸಲು ಸದುಪಯೋಗಿಸುತ್ತೀರೋ?