ನಿಮ್ಮ ಚಿಂತಾಭಾರವನ್ನು ಯಾವಾಗಲೂ ಯೆಹೋವನ ಮೇಲೆ ಹಾಕಿರಿ
ಅನೇಕರಿಗೆ ಇಂದು ಚಿಂತಾಭಾರಗಳಿಂದ ಹಿಸುಕಲ್ಪಟ್ಟಂತೆ ಅನಿಸುತ್ತದೆ. ಆರ್ಥಿಕ ಕಷ್ಟದೆಸೆಗಳು, ಉಪದ್ರವಕರವಾದ ಕುಟುಂಬದ ಸಮಸ್ಯೆಗಳು, ಆರೋಗ್ಯ ಸಮಸ್ಯೆಗಳು, ದಬ್ಬಾಳಿಕೆ ಹಾಗೂ ಪೀಡಕ ಪ್ರಭುತ್ವದ ಕಾರಣದಿಂದ ವೇದನೆ ಮತ್ತು ಕಷ್ಟಾನುಭವ, ಮತ್ತು ಇತರ ಬೇಗುದಿಗಳ ಒಂದು ಸಮೂಹವು, ಅವರ ಕತ್ತುಗಳ ಸುತ್ತಲೂ ಬೀಸುವ ಕಲ್ಲುಗಳೋಪಾದಿ ತೂಗಾಡುತ್ತಿದೆ. ಈ ಬಾಹ್ಯ ಒತ್ತಡಗಳ ಹೊರತಾಗಿಯೂ ಕೆಲವರು ವೈಯಕ್ತಿಕ ಅಯೋಗ್ಯತೆ ಮತ್ತು ತಮ್ಮ ಸ್ವಂತ ಅಪರಿಪೂರ್ಣತೆಗಳ ಕಾರಣದಿಂದಾದ ಅಪಜಯದ ಅನುಭವದಿಂದಲೂ ಕುಗ್ಗಿಸಲ್ಪಟ್ಟ ಭಾವನೆಯುಳ್ಳವರಾಗಿರುತ್ತಾರೆ. ಅನೇಕರು ಒಟ್ಟಿನಲ್ಲಿ ಹೋರಾಟವನ್ನು ಬಿಟ್ಟುಬಿಡಲು ಪ್ರಯತ್ನಿಸುವ ಶೋಧನೆಗೆ ಒಳಗಾಗುತ್ತಾರೆ. ಚಿಂತಾಭಾರಗಳು ಅಸಹನೀಯವಾದವುಗಳಾಗಿ ತೋರುವಾಗ ನೀವು ಹೇಗೆ ನಿಭಾಯಿಸಬಲ್ಲಿರಿ?
ಒಂದು ಸಮಯದಲ್ಲಿ ಇಸ್ರಾಯೇಲಿನ ಅರಸನಾದ ದಾವೀದನಿಗೆ ಒತ್ತಡವು ಬಹುಮಟ್ಟಿಗೆ ಅಸಹನೀಯವಾದದ್ದಾಗಿ ಅನಿಸಿತು. ಕೀರ್ತನೆ 55 ಕ್ಕನುಸಾರವಾಗಿ, ಅವನ ವೈರಿಗಳಿಂದ ಬಂದ ಒತ್ತಡಗಳು ಮತ್ತು ಬದ್ಧದ್ವೇಷದ ಕಾರಣದಿಂದ ಉಂಟಾದ ಚಿಂತೆಯಿಂದ ಅವನು ವಿಪರೀತವಾಗಿ ಕ್ಷೋಭೆಗೊಂಡನು. ಅವನಿಗೆ ಭಾರಿ ಮನೋವ್ಯಥೆ ಮತ್ತು ಭಯದ ಅನಿಸಿಕೆಯಾಯಿತು. ಅವನು ತನ್ನ ವ್ಯಥೆಯಲ್ಲಿ ಸಂಕಟಪಡಲು ಮಾತ್ರವೇ ಶಕ್ತನಿದ್ದನು. (ಕೀರ್ತನೆ 55:2, 5, 17) ಹಾಗಿದ್ದರೂ, ತನ್ನ ಎಲ್ಲಾ ಬೇಗುದಿಯ ಹೊರತಾಗಿಯೂ, ನಿಭಾಯಿಸಲು ಒಂದು ದಾರಿಯನ್ನು ಅವನು ಕಂಡುಕೊಂಡನು. ಹೇಗೆ? ಬೆಂಬಲಕ್ಕಾಗಿ ಅವನು ತನ್ನ ದೇವರ ಕಡೆಗೆ ನೋಡಿದನು. ಅವನಿಗನಿಸಿದಂತೆ ಅನಿಸುವ ಇತರರಿಗೆ ಅವನು ನೀಡಿದ ಬುದ್ಧಿವಾದವು ಹೀಗಿತ್ತು: “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು.”—ಕೀರ್ತನೆ 55:22.
“ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು” ಎಂಬ ವಿಷಯದಿಂದ ಅವನು ಏನನ್ನು ಅರ್ಥೈಸಿದನು? ಯೆಹೋವನನ್ನು ಕೇವಲ ಪ್ರಾರ್ಥನೆಯಲ್ಲಿ ಸಮೀಪಿಸಿ, ನಮ್ಮ ಚಿಂತೆಯನ್ನು ವ್ಯಕ್ತಪಡಿಸುವ ಒಂದು ವಿಷಯವು ಇದಾಗಿದೆಯೊ? ಅಥವಾ ಸನ್ನಿವೇಶದಿಂದ ಪರಿಹಾರ ಪಡೆಯುವಂತೆ ಸಹಾಯ ಮಾಡಲು ನಾವು ಸ್ವತಃ ಏನನ್ನಾದರೂ ಮಾಡಬಲ್ಲೆವೊ? ಯೆಹೋವನನ್ನು ಸಮೀಪಿಸಲು ನಾವು ತೀರ ಅಯೋಗ್ಯರೆಂಬ ಅನಿಸಿಕೆ ನಮಗಿರುವಲ್ಲಿ ಆಗೇನು? ದಾವೀದನು ಆ ಮಾತುಗಳನ್ನು ಬರೆದಾಗ, ತಾನು ಸುವ್ಯಕ್ತವಾಗಿ ಜ್ಞಾಪಿಸಿಕೊಂಡಿದ್ದಿರಬಹುದಾದ ಕೆಲವು ಅನುಭವಗಳ ಕಡೆಗೆ ನೋಡುವುದರ ಮೂಲಕ ಅವನು ಏನನ್ನು ಅರ್ಥೈಸಿದನೆಂಬುದನ್ನು ನಾವು ಕಂಡುಕೊಳ್ಳಬಲ್ಲೆವು.
ಯೆಹೋವನ ಬಲದಲ್ಲಿ ವಿಷಯಗಳನ್ನು ಮಾಡಿರಿ
ಇಸ್ರಾಯೇಲಿನ ಯುದ್ಧಭಟರ ಹೃದಯಗಳೊಳಗೆ ಗೊಲ್ಯಾತನು ಭಯವನ್ನು ಹೇಗೆ ಉಂಟುಮಾಡಿದನೆಂಬದನ್ನು ನೀವು ನೆನಪಿಸಿಕೊಳ್ಳುತ್ತೀರೊ? ಒಂಬತ್ತು ಅಡಿಗಳಿಗಿಂತಲೂ ಎತ್ತರದವನಾಗಿದ್ದ, ಬೃಹದಾಕಾರದ ಈ ಮನುಷ್ಯನು, ಅವರನ್ನು ದಿಗಿಲುಗೊಳಿಸಿದನು. (1 ಸಮುವೇಲ 17:4-11, 24) ಆದರೆ ದಾವೀದನು ಭಯಪಡಲಿಲ್ಲ. ಏಕೆ? ಏಕೆಂದರೆ ಅವನು ತನ್ನ ಸ್ವಂತ ಬಲದಲ್ಲಿ ಗೊಲ್ಯಾತನೊಂದಿಗೆ ವ್ಯವಹರಿಸಲು ಪ್ರಯತ್ನಿಸದೆ ಇದ್ದುದರಿಂದಲೇ. ಅವನು ಇಸ್ರಾಯೇಲ್ನ ಭಾವೀ ಅರಸನೋಪಾದಿ ಅಭಿಷೇಕಿಸಲ್ಪಟ್ಟ ಸಮಯದಂದಿನಿಂದ, ದೇವರ ಆತ್ಮವು ತನ್ನನ್ನು ಮಾರ್ಗದರ್ಶಿಸುವಂತೆ ಮತ್ತು ತಾನು ಮಾಡಿದ ಎಲ್ಲಾ ಕೆಲಸಗಳಲ್ಲಿ ತನ್ನನ್ನು ಬಲಪಡಿಸುವಂತೆ ಅವನು ಅನುಮತಿಸಿದ್ದನು. (1 ಸಮುವೇಲ 16:13) ಆದುದರಿಂದ ಅವನು ಗೊಲ್ಯಾತನಿಗೆ ಹೇಳಿದ್ದು: “ನಾನಾದರೋ ನೀನು ಹೀಯಾಳಿಸಿದಂಥ ಸೇನಾಧೀಶ್ವರನೂ ಇಸ್ರಾಯೇಲ್ಯರ ಯುದ್ಧಭಟರ ದೇವರೂ ಆಗಿರುವ ಯೆಹೋವನ ನಾಮದೊಡನೆ ನಿನ್ನ ಬಳಿಗೆ ಬರುತ್ತೇನೆ. ಆತನು ಈ ಹೊತ್ತು ನಿನ್ನನ್ನು ನನ್ನ ಕೈಗೆ ಒಪ್ಪಿಸಿಕೊಡುವನು.” (1 ಸಮುವೇಲ 17:45, 46) ಕವಣೆಗಾರನೋಪಾದಿ ದಾವೀದನು ಕೌಶಲವುಳ್ಳವನಾಗಿದ್ದನು, ಆದರೆ ಯೆಹೋವನ ಪವಿತ್ರಾತ್ಮವು ಗೊಲ್ಯಾತನೆಡೆಗೆ ಅವನು ಎಸೆದ ಕವಣೆಯ ಕಲ್ಲನ್ನು ಮಾರ್ಗದರ್ಶಿಸಿ, ಹೆಚ್ಚು ಮಾರಕವನ್ನಾಗಿ ಮಾಡಿತೆಂಬುದರಲ್ಲಿ ನಾವು ಖಾತ್ರಿಯಿಂದಿರಸಾಧ್ಯವಿದೆ.—1 ಸಮುವೇಲ 17:48-51.
ದೇವರು ತನ್ನನ್ನು ಬೆಂಬಲಿಸಿ, ಬಲಪಡಿಸುತ್ತಾನೆಂಬ ಭರವಸೆಯನ್ನು ಹೊಂದುವ ಮೂಲಕ, ಈ ಬಹು ದೊಡ್ಡ ಪಂಥಾಹ್ವಾನವನ್ನು ದಾವೀದನು ನಿಭಾಯಿಸಿದನು ಮತ್ತು ಜಯಶೀಲನಾಗಿ ಹೊರಬಂದನು. ಅವನು ದೇವರೊಂದಿಗೆ ಒಂದು ಒಳ್ಳೆಯ, ಭರವಸಯೋಗ್ಯವಾದ ಸಂಬಂಧವನ್ನು ವಿಕಸಿಸಿಕೊಂಡಿದ್ದನು. ಈ ಮುಂಚೆ ಯೆಹೋವನು ಅವನನ್ನು ಬಿಡುಗಡೆಗೊಳಿಸಿದ್ದ ರೀತಿಯಿಂದ ಇದು ಬಲಪಡಿಸಲ್ಪಟ್ಟಿತೆಂಬುದರಲ್ಲಿ ಯಾವುದೇ ಸಂದೇಹವಿರಲಿಲ್ಲ. (1 ಸಮುವೇಲ 17:34-37) ದಾವೀದನಂತೆ, ನೀವು ಯೆಹೋವನೊಂದಿಗೆ ಒಂದು ಬಲವಾದ ವೈಯಕ್ತಿಕ ಸಂಬಂಧವನ್ನು ಕಾಪಾಡಿಕೊಳ್ಳಬಲ್ಲಿರಿ ಮತ್ತು ಎಲ್ಲಾ ಸನ್ನಿವೇಶಗಳಲ್ಲಿ ನಿಮ್ಮನ್ನು ಬಲಪಡಿಸಲು ಮತ್ತು ಸಂರಕ್ಷಿಸಲಿಕ್ಕಾಗಿರುವ ಆತನ ಸಾಮರ್ಥ್ಯ ಮತ್ತು ಸಿದ್ಧಮನಸ್ಸಿನಲ್ಲಿ ಸಂಪೂರ್ಣ ಭರವಸೆಯನ್ನು ಹೊಂದಿರಸಾಧ್ಯವಿದೆ.—ಕೀರ್ತನೆ 34:7, 8.
ಸಮಸ್ಯೆಯನ್ನು ಪರಿಹರಿಸಲಿಕ್ಕಾಗಿ ನಿಮಗೆ ಸಾಧ್ಯವಿರುವುದನ್ನು ಮಾಡಿರಿ
ಆದರೂ, ಕೀರ್ತನೆ 55 ಸ್ಪಷ್ಟವಾಗಿ ತೋರಿಸುವಂತೆ, ತೀವ್ರವಾದ ವೇದನೆ, ಚಿಂತೆ, ಮತ್ತು ಭಯದ ಸಮಯಗಳು ಸಹ ಎಂದಿಗೂ ಇರುವುದಿಲ್ಲ ಎಂಬುದನ್ನು ಇದು ಅರ್ಥೈಸುವುದಿಲ್ಲ. ಉದಾಹರಣೆಗಾಗಿ, ಯೆಹೋವನಲ್ಲಿನ ಈ ಭಯರಹಿತವಾದ ಭರವಸೆಯನ್ನು ತೋರಿಸಿದ ಕೆಲವು ವರ್ಷಗಳ ಬಳಿಕ, ತನ್ನ ವೈರಿಗಳ ಎದುರಿನಲ್ಲಿ ದಾವೀದನು ಬಹಳ ಭಯವನ್ನು ಅನುಭವಿಸಿದನು. ಅರಸನಾದ ಸೌಲನೊಂದಿಗಿದ್ದ ಅವನ ಅನುಗ್ರಹವನ್ನು ಅವನು ಕಳೆದುಕೊಂಡನು ಮತ್ತು ತನ್ನ ಜೀವಕ್ಕಾಗಿ ಅವನು ಪಲಾಯನಗೈಯಬೇಕಾಯಿತು. ಇದು ದಾವೀದನಿಗೆ ಉಂಟುಮಾಡಿದ್ದಿರಬಹುದಾದ ಭಾವನಾತ್ಮಕ ಸಂಕ್ಷೋಭೆಯನ್ನು, ಯೆಹೋವನ ಉದ್ದೇಶದ ಪೂರ್ಣಗೊಳಿಸುವಿಕೆಯ ಕುರಿತಾಗಿ ಅವನ ಮನಸ್ಸಿನಲ್ಲಿ ಅದು ಉಂಟುಮಾಡಿದ್ದಿರಬಹುದಾದ ಪ್ರಶ್ನೆಗಳನ್ನು ಊಹಿಸಿಕೊಳ್ಳಲು ಪ್ರಯತ್ನಿಸಿರಿ. ಎಷ್ಟೆಂದರೂ ಅವನು ಇಸ್ರಾಯೇಲಿನ ಭಾವೀ ಅರಸನೋಪಾದಿ ಅಭಿಷೇಕಿಸಲ್ಪಟ್ಟಿದ್ದನಾದರೂ, ಒಂದು ಕಾಡು ಪ್ರಾಣಿಯೋಪಾದಿ ಬೇಟೆಯಾಡಲ್ಪಟ್ಟು, ಕಾಡಿನಲ್ಲಿ ದೇಶಭ್ರಷ್ಟನೋಪಾದಿ ಅವನು ಬದುಕಬೇಕಾಗಿತ್ತು. ಗೊಲ್ಯಾತನ ಸ್ವದೇಶವಾದ ಗತ್ ಊರಿನಲ್ಲಿ ಆಶ್ರಯವನ್ನು ಕಂಡುಕೊಳ್ಳಲು ಅವನು ಪ್ರಯತ್ನಿಸಿದಾಗ, ಅವನು ಗುರುತಿಸಲ್ಪಟ್ಟನು. ಯಾವ ಫಲಿತಾಂಶದೊಂದಿಗೆ? ಅವನು “ಬಹಳವಾಗಿ ಹೆದರಿ”ದನೆಂದು ದಾಖಲೆಯು ಹೇಳುತ್ತದೆ.—1 ಸಮುವೇಲ 21:10-12.
ಆದರೆ ತನ್ನ ಭಯ ಮತ್ತು ತೀವ್ರವಾದ ಚಿಂತೆಯು, ಸಹಾಯಕ್ಕಾಗಿ ಯೆಹೋವನ ಕಡೆಗೆ ನೋಡುವುದರಿಂದ ತನ್ನನ್ನು ತಡೆಯುವಂತೆ ಅವನು ಅನುಮತಿಸಲಿಲ್ಲ. (ಈ ಅನುಭವದ ಫಲಿತಾಂಶದೋಪಾದಿ ಬರೆಯಲ್ಪಟ್ಟಿರುವ) ಕೀರ್ತನೆ 34ಕಕ್ಕೆ ಅನುಸಾರವಾಗಿ, ದಾವೀದನು ಹೇಳಿದ್ದು: “ನಾನು ಯೆಹೋವನ ಸನ್ನಿಧಿಯಲ್ಲಿ ಬೇಡಿಕೊಳ್ಳಲು ಆತನು ಸದುತ್ತರವನ್ನು ಕೊಟ್ಟು ಎಲ್ಲಾ ಭೀತಿಯಿಂದ ನನ್ನನ್ನು ತಪ್ಪಿಸಿದನು. ಕಷ್ಟದಲ್ಲಿದ್ದ ಈ ಮನುಷ್ಯನು ಮೊರೆಯಿಡಲು ಯೆಹೋವನು ಕೇಳಿ ಎಲ್ಲಾ ಬಾಧೆಗಳಿಂದ ಬಿಡಿಸಿದನು.”—ಕೀರ್ತನೆ 34:4, 6.
ಖಂಡಿತವಾಗಿ ಯೆಹೋವನು ಅವನಿಗೆ ಬೆಂಬಲ ನೀಡಿದನು. ಆದರೂ ಯೆಹೋವನು ತನ್ನನ್ನು ಕಾಪಾಡುವಂತೆ ದಾವೀದನು ಕುಳಿತುಕೊಂಡು ಕಾಯಲಿಲ್ಲ ಎಂಬುದನ್ನು ಗಮನಿಸಿರಿ. ಆ ಕಷ್ಟಕರವಾದ ಸನ್ನಿವೇಶದಿಂದ ಹೊರಬರಲಿಕ್ಕಾಗಿರುವ ಪರಿಸ್ಥಿತಿಗಳ ಕೆಳಗೆ, ತನ್ನಿಂದ ಸಾಧ್ಯವಿದ್ದದ್ದೆಲ್ಲವನ್ನೂ ಮಾಡುವ ಅಗತ್ಯವನ್ನು ಅವನು ಗ್ರಹಿಸಿದನು. ತನ್ನ ಬಿಡುಗಡೆಯಲ್ಲಿ ಯೆಹೋವನ ಹಸ್ತವಿದೆಯೆಂಬುದನ್ನು ಅವನು ಅಂಗೀಕರಿಸಿದನು, ಆದರೆ ಸ್ವತಃ ತಾನೇ ಕ್ರಿಯೆಕೈಕೊಂಡನು—ಗತ್ ಊರಿನ ಅರಸನು ತನ್ನನ್ನು ಕೊಲ್ಲದಿರುವಂತೆ ಮಾಡಲಿಕ್ಕಾಗಿ ಹುಚ್ಚನಂತೆ ನಟಿಸಿದನು. (1 ಸಮುವೇಲ 21:14–22:1) ನಮ್ಮನ್ನು ಕಾಪಾಡುವಂತೆ ಯೆಹೋವನ ಮೇಲೆ ಕೇವಲ ಆತುಕೊಳ್ಳುವ ಬದಲಾಗಿ, ಚಿಂತಾಭಾರವನ್ನು ನಿಭಾಯಿಸಲಿಕ್ಕಾಗಿ ನಮ್ಮಿಂದ ಸಾಧ್ಯವಿರುವುದೆಲ್ಲವನ್ನು ಮಾಡುವ ಅಗತ್ಯ ನಮಗೂ ಇದೆ.—ಯಾಕೋಬ 1:5, 6; 2:26.
ನಿಮ್ಮ ಚಿಂತಾಭಾರಗಳಿಗೆ ಹೆಚ್ಚನ್ನು ಕೂಡಿಸಬೇಡಿರಿ
ತನ್ನ ತದನಂತರದ ಜೀವನದಲ್ಲಿ ದಾವೀದನು ಇನ್ನೊಂದು ಪಾಠವನ್ನು, ಒಂದು ವೇದನಾಭರಿತವಾದ ಪಾಠವನ್ನು ಕಲಿತುಕೊಂಡನು. ಅದು ಏನಾಗಿತ್ತು? ಕೆಲವೊಮ್ಮೆ ನಾವು ನಮ್ಮ ಸ್ವಂತ ಚಿಂತಾಭಾರಗಳಿಗೆ ಹೆಚ್ಚನ್ನು ಕೂಡಿಸುತ್ತೇವೆ ಎಂಬುದನ್ನೇ. ಫಿಲಿಷ್ಟಿಯರ ವಿರುದ್ಧವಾದ ವಿಜಯವನ್ನು ಹಿಂಬಾಲಿಸಿ, ದಾವೀದನು ಒಡಂಬಡಿಕೆಯ ಮಂಜೂಷವನ್ನು ಯೆರೂಸಲೇಮಿಗೆ ಕೊಂಡೊಯ್ಯಲು ನಿರ್ಧರಿಸಿದಾಗ, ವಿಷಯಗಳು ಅಸಮರ್ಪಕವಾಗಿ ಪರಿಣಮಿಸಿದವು. ಐತಿಹಾಸಿಕ ವೃತ್ತಾಂತವು ನಮಗೆ ಹೇಳುವುದು: “ಅನಂತರ ದಾವೀದನು ಇಸ್ರಾಯೇಲ್ಯರಲ್ಲಿ ಮೂವತ್ತುಸಾವಿರ ಮಂದಿ ಶ್ರೇಷ್ಠ ಸೈನಿಕರನ್ನು ಆರಿಸಿಕೊಂಡು ದೇವರ ಮಂಜೂಷವನ್ನು ತರುವದಕ್ಕಾಗಿ ಅವರೆಲ್ಲರ ಸಹಿತ ಯೆಹೂದದೇಶದ ಬಾಳಾ ಎಂಬಲ್ಲಿಗೆ ಹೋದನು. . . . ಅವರು ದೇವರ ಮಂಜೂಷವನ್ನು . . . ಒಂದು ಹೊಸ ಬಂಡಿಯ ಮೇಲೆ ಏರಿಸಿದರು. ಅಬೀನಾದಾಬನ ಮಕ್ಕಳಾದ ಉಜ್ಜನೂ ಅಹಿಯೋವನೂ ಬಂಡಿಯನ್ನು ಹೊಡೆದರು.”—2 ಸಮುವೇಲ 6:1-3.
ಮಂಜೂಷವನ್ನು ರವಾನಿಸಲಿಕ್ಕಾಗಿ ಒಂದು ಬಂಡಿಯನ್ನು ಉಪಯೋಗಿಸುವುದು, ಅದರ ಕುರಿತಾಗಿ ಯೆಹೋವನು ಕೊಟ್ಟಿದ್ದಂತಹ ಎಲ್ಲ ಉಪದೇಶಗಳನ್ನು ಉಲ್ಲಂಘಿಸಿತು. ಕೇವಲ ಅಧಿಕೃತ ಹೊರೆಯಾಳುಗಳಾದ ಕೆಹಾತ್ಯರಾದ ಲೇವ್ಯರು, ಮಂಜೂಷದೊಳಗೆ ವಿಶೇಷವಾಗಿ ಕಟ್ಟಲ್ಪಟ್ಟ ಬಳೆಗಳ ಮೂಲಕ ಸೇರಿಸಲ್ಪಟ್ಟ ಕೋಲುಗಳನ್ನು ಉಪಯೋಗಿಸಿ, ತಮ್ಮ ಭುಜಗಳ ಮೇಲೆ ಮಂಜೂಷವನ್ನು ಹೊರಬೇಕೆಂದು ಸ್ಪಷ್ಟವಾಗಿ ಹೇಳಲ್ಪಟ್ಟಿತ್ತು. (ವಿಮೋಚನಕಾಂಡ 25:13, 14; ಅರಣ್ಯಕಾಂಡ 4:15, 19; 7:7-9) ಈ ಉಪದೇಶಗಳ ಅಲಕ್ಷ್ಯ ಮಾಡುವಿಕೆಯು ವಿಪತ್ತನ್ನು ತಂದಿತು. ಬಂಡಿಯನ್ನು ಎಳೆಯುತ್ತಿದ್ದ ಎತ್ತುಗಳು ಎಡವಿ, ಅದನ್ನು ಬಹುಮಟ್ಟಿಗೆ ಮಗುಚಿ ಬೀಳಿಸಲಿದ್ದಾಗ, ಮಂಜೂಷವನ್ನು ಸರಿಪಡಿಸಲಿಕ್ಕಾಗಿ ಲೇವ್ಯನಾಗಿದ್ದಿರಬಹುದಾಗಿದ್ದ—ಆದರೆ ನಿಶ್ಚಯವಾಗಿ ಯಾಜಕನಾಗಿರದ—ಉಜ್ಜನು ಕೈಚಾಚಿ ಅದನ್ನು ಹಿಡಿದುಕೊಂಡನು ಮತ್ತು ತನ್ನ ಅಪೂಜ್ಯಭಾವನೆಗಾಗಿ ಯೆಹೋವನಿಂದ ಹತಮಾಡಲ್ಪಟ್ಟನು.—2 ಸಮುವೇಲ 6:6, 7.
ಇದಕ್ಕಾಗಿ ಅರಸನೋಪಾದಿ ದಾವೀದನು ಸ್ವಲ್ಪ ಜವಾಬ್ದಾರಿಯನ್ನು ವಹಿಸಬೇಕಿತ್ತು. ಯೆಹೋವನೊಂದಿಗೆ ಒಂದು ಒಳ್ಳೆಯ ಸಂಬಂಧವನ್ನು ಹೊಂದಿರುವವರು ಸಹ, ಪರೀಕ್ಷಾತ್ಮಕವಾದ ಸನ್ನಿವೇಶಗಳಿಗೆ ಸಾಂದರ್ಭಿಕವಾಗಿ ಕೆಟ್ಟದಾಗಿ ಪ್ರತಿವರ್ತಿಸಸಾಧ್ಯವಿದೆ ಎಂಬುದನ್ನು ಅವನ ಪ್ರತಿವರ್ತನೆಯು ತೋರಿಸುತ್ತದೆ. ಮೊದಲು ದಾವೀದನು ಕೋಪಗೊಂಡನು. ತದನಂತರ ಅವನು ಭಯಗೊಂಡನು. (2 ಸಮುವೇಲ 6:8, 9) ಯೆಹೋವನೊಂದಿಗೆ ಅವನಿಗಿದ್ದ ಭರವಸಾತ್ಮಕವಾದ ಸಂಬಂಧವು ಗಂಭೀರವಾಗಿ ಪರೀಕ್ಷಿಸಲ್ಪಟ್ಟಿತು. ಅವನು ಯೆಹೋವನ ಆಜ್ಞೆಗಳನ್ನು ಅನುಸರಿಸದಿದ್ದ, ಅವನು ಯೆಹೋವನ ಮೇಲೆ ತನ್ನ ಚಿಂತಾಭಾರವನ್ನು ಹಾಕಲು ಸೋತುಹೋದಂತೆ ಭಾಸವಾದ ಒಂದು ಸಂದರ್ಭವು ಇಲ್ಲಿತ್ತು. ಕೆಲವೊಮ್ಮೆ ನಮ್ಮ ವಿಷಯದಲ್ಲಿಯೂ ಸನ್ನಿವೇಶವು ಅದೇ ಆಗಿರಬಹುದೊ? ನಾವು ಯೆಹೋವನ ಉಪದೇಶಗಳನ್ನು ಅಲಕ್ಷ್ಯ ಮಾಡಿದುದರಿಂದಾಗಿ ಫಲಿಸುವ ಸಮಸ್ಯೆಗಳಿಗಾಗಿ ನಾವು ಎಂದಾದರೂ ಯೆಹೋವನನ್ನು ದೂಷಿಸುತ್ತೇವೊ?—ಜ್ಞಾನೋಕ್ತಿ 19:3.
ದೋಷಿ ಭಾವದ ಚಿಂತಾಭಾರದೊಂದಿಗೆ ನಿಭಾಯಿಸುವುದು
ತದನಂತರ, ಯೆಹೋವನ ನೈತಿಕ ಮಟ್ಟಗಳ ವಿರುದ್ಧವಾಗಿ ಘೋರವಾದ ಪಾಪವನ್ನು ಮಾಡುವ ಮೂಲಕ, ದಾವೀದನು ಸ್ವತಃ ತನ್ನ ಮೇಲೆ ದೊಡ್ಡದೊಂದು ಚಿಂತಾಭಾರವನ್ನು ಸೃಷ್ಟಿಸಿಕೊಂಡನು. ಈ ಸಂದರ್ಭದಲ್ಲಿ ದಾವೀದನು ಕದನದಲ್ಲಿ ತನ್ನ ಜನರನ್ನು ಮುನ್ನಡೆಸಲಿಕ್ಕಿದ್ದ ತನ್ನ ಜವಾಬ್ದಾರಿಯನ್ನು ಪದಚ್ಯುತಿಗೊಳಿಸಿದ್ದನು. ಅವರು ಹೋರಾಟ ನಡೆಸಲು ಹೊರಗೆಹೋಗಿದ್ದಾಗ, ಅವನು ಯೆರೂಸಲೇಮಿನಲ್ಲಿ ಉಳಿದನು. ಇದು ಗಂಭೀರವಾದ ತೊಂದರೆಗೆ ನಡಿಸಿತು.—2 ಸಮುವೇಲ 11:1.
ಅರಸನಾದ ದಾವೀದನು ಸುಂದರಿಯಾದ ಬತ್ಷೆಬೆಯು ಸ್ನಾನಮಾಡುತ್ತಿರುವುದನ್ನು ಕಂಡನು. ಅವನು ಅವಳೊಂದಿಗೆ ಅನೈತಿಕ ಸಂಬಂಧದಲ್ಲಿ ಒಳಗೊಂಡನು, ಮತ್ತು ಅವಳು ಗರ್ಭಿಣಿಯಾದಳು. (2 ಸಮುವೇಲ 11:2-5) ಈ ತಪ್ಪು ನಡತೆಯನ್ನು ಮುಚ್ಚಲಿಕ್ಕಾಗಿ, ಅವನು ಅವಳ ಗಂಡನಾದ ಊರೀಯನನ್ನು, ಯುದ್ಧ ಕ್ಷೇತ್ರದಿಂದ ಯೆರೂಸಲೇಮಿಗೆ ಹಿಂದಿರುಗಿ ಕಳುಹಿಸುವಂತೆ ಏರ್ಪಾಡನ್ನು ಮಾಡಿದನು. ಇಸ್ರಾಯೇಲು ಕದನದಲ್ಲಿ ಒಳಗೊಂಡಿರುವಾಗ, ತನ್ನ ಹೆಂಡತಿಯೊಂದಿಗೆ ವೈವಾಹಿಕ ಸಂಬಂಧಗಳನ್ನು ಹೊಂದಲು ಊರೀಯನು ನಿರಾಕರಿಸಿದನು. (2 ಸಮುವೇಲ 11:6-11) ಈಗ ದಾವೀದನು ತನ್ನ ಪಾಪವನ್ನು ಮುಚ್ಚಲಿಕ್ಕಾಗಿ ದುಷ್ಟವಾದ ಮತ್ತು ವಂಚನೆಯ ಸಾಧನೋಪಾಯವನ್ನು ಆಶ್ರಯಿಸಿದನು. ಅವನು ಕೊಲ್ಲಲ್ಪಡುವಂತೆ ಮಾಡಲಿಕ್ಕಾಗಿ, ಕದನದಲ್ಲಿ ಊರೀಯನನ್ನು ಆಕ್ರಮಣಸಾಧ್ಯವಾದ ಸ್ಥಳದಲ್ಲಿ ಬಿಡುವಂತೆ, ಊರೀಯನ ಜೊತೆ ಸೈನಿಕರನ್ನು ಅವನು ಏರ್ಪಡಿಸಿದನು. ಬಹಳ ಹೇಯವಾದ, ಘೋರವಾದ ಒಂದು ಪಾಪ!—2 ಸಮುವೇಲ 11:12-17.
ಕಟ್ಟಕಡೆಗೆ, ದಾವೀದನು ತನ್ನ ಪಾಪಕ್ಕಾಗಿ ಲೆಕ್ಕ ಕೊಡಬೇಕಾಯಿತು ಮತ್ತು ಅವನು ಬಯಲುಗೊಳಿಸಲ್ಪಟ್ಟನು ಎಂಬುದು ನಿಶ್ಚಯ. (2 ಸಮುವೇಲ 12:7-12) ತಾನು ಬತ್ಷೆಬೆಯೊಂದಿಗೆ ಗೈದ ಪಾಪದ ವೈಪರೀತ್ಯವನ್ನು ದಾವೀದನು ಗ್ರಹಿಸಿದಾಗ, ಅವನಿಗಾದ ದುಃಖ ಮತ್ತು ದೋಷಿ ಭಾವದ ತೀವ್ರತೆಯನ್ನು ಊಹಿಸಿಕೊಳ್ಳಲು ಪ್ರಯತ್ನಿಸಿರಿ. ತನ್ನ ಸ್ವಂತ ಅಪಜಯದ—ವಿಶೇಷವಾಗಿ ಅವನು ಭಾವನಾತ್ಮಕ, ಸೂಕ್ಷ್ಮಪರಿಜ್ಞಾನವುಳ್ಳ ವ್ಯಕ್ತಿಯಾಗಿದ್ದದ್ದು ಸಂಭವನೀಯವಾಗಿರುವುದರಿಂದ—ಪರಿಜ್ಞಾನದಿಂದ ಅವನು ಭಾವಪರವಶಗೊಳಿಸಲ್ಪಟ್ಟಿದ್ದಿರಸಾಧ್ಯವಿದೆ. ತಾನು ಸಂಪೂರ್ಣವಾಗಿ ಅಯೋಗ್ಯನೆಂಬ ಅನಿಸಿಕೆ ಅವನಿಗಾಗಿದ್ದಿರಬಹುದು!
ಹಾಗಿದ್ದರೂ, ಪ್ರವಾದಿಯಾದ ನಾತಾನನಿಗೆ ಹೀಗೆ ಹೇಳುವುದರ ಮೂಲಕ ದಾವೀದನು ಕೂಡಲೆ ತನ್ನ ತಪ್ಪನ್ನು ಒಪ್ಪಿಕೊಂಡನು: “ನಾನು ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದ್ದೇನೆ.” (2 ಸಮುವೇಲ 12:13) ಅವನಿಗೆ ಹೇಗನಿಸಿತು ಮತ್ತು ತನ್ನನ್ನು ಪರಿಶುದ್ಧಗೊಳಿಸಲು ಹಾಗೂ ಕ್ಷಮಿಸಲು ಅವನು ಯೆಹೋವ ದೇವರಿಗೆ ಹೇಗೆ ವಿಜ್ಞಾಪಿಸಿಕೊಂಡನು ಎಂಬುದನ್ನು ಕೀರ್ತನೆ 51 ನಮಗೆ ಹೇಳುತ್ತದೆ. ಅವನು ಪ್ರಾರ್ಥಿಸಿದ್ದು: “ನನ್ನ ಪಾಪವನ್ನು ಸಂಪೂರ್ಣವಾಗಿ ತೊಳೆದುಬಿಡು; ನನ್ನ ದೋಷವನ್ನು ಪರಿಹರಿಸಿ ನನ್ನನ್ನು ಶುದ್ಧಿಗೊಳಿಸು. ನಾನು ದ್ರೋಹಿ ಎಂದು ನಾನೇ ಒಪ್ಪಿಕೊಂಡಿದ್ದೇನೆ; ನನ್ನ ಪಾಪವು ಯಾವಾಗಲೂ ನನ್ನ ಮುಂದೆ ಇದೆ.” (ಕೀರ್ತನೆ 51:2, 3) ಅವನು ನಿಜವಾಗಿಯೂ ಪಶ್ಚಾತ್ತಾಪಪಟ್ಟದ್ದರಿಂದ, ಅವನು ಯೆಹೋವನೊಂದಿಗಿನ ತನ್ನ ಬಲವಾದ, ಆಪ್ತ ಸಂಬಂಧವನ್ನು ಪುನಃ ನಿರ್ಮಿಸಲು ಶಕ್ತನಾದನು. ದಾವೀದನು ತೀಕ್ಷ್ಣಪರಿತಾಪ ಮತ್ತು ಅಯೋಗ್ಯತೆಯ ಭಾವನೆಗಳ ಕುರಿತಾಗಿ ವಿಸ್ತಾರವಾಗಿ ಚಿಂತಿಸಲಿಲ್ಲ. ತನ್ನ ದೋಷವನ್ನು ನಮ್ರನಾಗಿ ಒಪ್ಪಿಕೊಳ್ಳುವ ಮೂಲಕ, ನಿಷ್ಕಪಟವಾದ ಪಶ್ಚಾತ್ತಾಪವನ್ನು ಪ್ರದರ್ಶಿಸುವ ಮೂಲಕ, ಮತ್ತು ಯೆಹೋವನ ಕ್ಷಮಾಪಣೆಗಾಗಿ ತೀವ್ರವಾಗಿ ಪ್ರಾರ್ಥಿಸುವ ಮೂಲಕ, ಅವನು ತನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕಿದನು. ಅವನು ದೇವರ ಅನುಗ್ರಹವನ್ನು ಪುನಃ ದೊರಕಿಸಿಕೊಂಡನು.—ಕೀರ್ತನೆ 51:7-12, 15-19.
ವಿಶ್ವಾಸಘಾತಕತೆಯನ್ನು ನಿಭಾಯಿಸುವುದು
ಇದು ಕೀರ್ತನೆ 55 ನ್ನು ಬರೆಯುವಂತೆ ದಾವೀದನನ್ನು ಪ್ರಚೋದಿಸಿದ ಘಟನಾವಳಿಯ ಕಡೆಗೆ ನಮ್ಮನ್ನು ತರುತ್ತದೆ. ಅವನು ಬಹಳ ಭಾವನಾತ್ಮಕ ಒತ್ತಡದ ಕೆಳಗೆ ಇದ್ದನು. “ನನ್ನ ಹೃದಯವು ನೊಂದು ಬೆಂದದೆ; ಮರಣಭಯವು ಆವರಿಸಿಕೊಂಡದೆ” ಎಂದು ಅವನು ಬರೆದನು. (ಕೀರ್ತನೆ 55:4) ಈ ವೇದನೆಯನ್ನು ಯಾವುದು ಉಂಟುಮಾಡಿತು? ದಾವೀದನ ಮಗನಾದ ಅಬ್ಷಾಲೋಮನು, ದಾವೀದನಿಂದ ಅರಸುತನವನ್ನು ಕದಿಯಲು ತಂತ್ರ ಹೂಡಿದ್ದನು. (2 ಸಮುವೇಲ 15:1-6) ತನ್ನ ಸ್ವಂತ ಮಗನಿಂದ ಮಾಡಲ್ಪಟ್ಟ ಈ ವಿಶ್ವಾಸಘಾತಕತೆಯು ಸಹಿಸಲು ಬಹಳ ಕಠಿನವಾಗಿತ್ತು, ಆದರೆ ದಾವೀದನ ಅತ್ಯಂತ ವಿಶ್ವಾಸಾರ್ಹ ಸಲಹೆಗಾರನಾದ ಅಹೀತೋಫೆಲನೆಂಬ ಹೆಸರಿನ ಮನುಷ್ಯನು, ದಾವೀದನ ವಿರುದ್ಧವಾದ ಒಳಸಂಚಿನೊಂದಿಗೆ ಜೊತೆಗೂಡಿದ್ದದ್ದು, ಅದನ್ನು ಸಹಿಸಲು ಇನ್ನೂ ಹೆಚ್ಚು ಕಷ್ಟಕರವನ್ನಾಗಿ ಮಾಡಿತ್ತು. ಕೀರ್ತನೆ 55:12-14ರಲ್ಲಿ ದಾವೀದನು ವರ್ಣಿಸುವುದು, ಅಹೀತೋಫೆಲನ ಕುರಿತಾಗಿಯೇ ಆಗಿದೆ. ಒಳಸಂಚು ಮತ್ತು ವಿಶ್ವಾಸಘಾತಕತೆಯ ಫಲಿತಾಂಶವಾಗಿ, ದಾವೀದನು ಯೆರೂಸಲೇಮಿಗೆ ಪಲಾಯನಗೈಯಬೇಕಾಯಿತು. (2 ಸಮುವೇಲ 15:13, 14) ಇದು ಅವನಿಗೆ ಎಂತಹ ಕಡುಸಂಕಟವನ್ನು ಉಂಟುಮಾಡಿದ್ದಿರಬೇಕು!
ಆದರೂ, ತನ್ನ ತೀವ್ರವಾದ ಭಾವೋದ್ರೇಕ ಮತ್ತು ದುಃಖವು, ಯೆಹೋವನಲ್ಲಿದ್ದಂತಹ ತನ್ನ ಭರವಸೆಯನ್ನೂ ವಿಶ್ವಾಸವನ್ನೂ ದುರ್ಬಲಗೊಳಿಸುವಂತೆ ಅವನು ಅನುಮತಿಸಲಿಲ್ಲ. ಒಳಸಂಚುಗಾರರ ಯೋಜನೆಗಳನ್ನು ಆಶಾಭಂಗಗೊಳಿಸುವಂತೆ ಅವನು ಯೆಹೋವನಿಗೆ ಪ್ರಾರ್ಥಿಸಿದನು. (2 ಸಮುವೇಲ 15:30, 31) ಎಲ್ಲಾ ಕೆಲಸವನ್ನು ಯೆಹೋವನು ಮಾಡುವಂತೆ ಆತನಿಗಾಗಿ ಅವನು ಜಡವಾಗಿ ಕಾಯುತ್ತಾ ಕುಳಿತುಕೊಳ್ಳಲಿಲ್ಲವೆಂಬುದನ್ನು ನಾವು ಪುನಃ ನೋಡುತ್ತೇವೆ. ಅವಕಾಶವು ತನ್ನನ್ನು ತೋರಿಸಿಕೊಟ್ಟ ಕೂಡಲೆ, ತನ್ನ ವಿರುದ್ಧವಾದ ಒಳಸಂಚನ್ನು ಎದುರಿಸಲಿಕ್ಕಾಗಿ ತನ್ನಿಂದ ಸಾಧ್ಯವಿದ್ದದ್ದನ್ನು ಅವನು ಮಾಡಿದನು. ಆ ಒಳಸಂಚನ್ನು ಸೇರುವವನಂತೆ ನಟಿಸಲಿಕ್ಕಾಗಿ, ಅವನು ತನ್ನ ಸಲಹೆಗಾರರಲ್ಲಿ ಇನ್ನೊಬ್ಬನಾದ ಹೂಷೈ ಎಂಬವನನ್ನು ಹಿಂದಿರುಗಿ ಯೆರೂಸಲೇಮಿಗೆ ಕಳುಹಿಸಿದನು. ಆದರೆ ವಾಸ್ತವವಾಗಿ, ಅವನು ಒಳಸಂಚನ್ನು ಹಾಳುಮಾಡಲು ಹೋಗಿದ್ದನು. (2 ಸಮುವೇಲ 15:32-34) ಯೆಹೋವನ ಬೆಂಬಲದಿಂದ, ಈ ಯೋಜನೆಯು ಕಾರ್ಯನಡಿಸಿತು. ದಾವೀದನು ಗುಂಪನ್ನು ಪುನಃ ಒಟ್ಟುಗೂಡಿಸುವ ಮತ್ತು ಸ್ವತಃ ತನ್ನನ್ನು ರಕ್ಷಿಸಿಕೊಳ್ಳಲಿಕ್ಕಾಗಿ ವ್ಯವಸ್ಥೆಯನ್ನು ಮಾಡಲು ಸಾಕಾಗುವಷ್ಟು ಸಮಯವನ್ನು ಹೂಷೈ ಗಳಿಸಿದನು.—2 ಸಮುವೇಲ 17:14.
ತನ್ನ ಜೀವಿತದಲ್ಲೆಲ್ಲಾ ದಾವೀದನು ಯೆಹೋವನ ಸಂರಕ್ಷಣಾತ್ಮಕ ಪರಾಮರಿಕೆಯನ್ನು ಹಾಗೂ ಕ್ಷಮಿಸಲಿಕ್ಕಾಗಿರುವ ಆತನ ತಾಳ್ಮೆಯನ್ನೂ ಸಿದ್ಧಮನಸ್ಸನ್ನೂ ಎಷ್ಟೊಂದು ಗಣ್ಯಮಾಡಿದ್ದಿರಬೇಕು! (ಕೀರ್ತನೆ 34:18, 19; 51:17) ಈ ಹಿನ್ನೆಲೆಯಿಂದಾಗಿಯೇ ದಾವೀದನು, ‘ನಮ್ಮ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕಲು,’ ನಮ್ಮ ಬೇಗುದಿಯ ಸಮಯಗಳಲ್ಲಿ ಸಹಾಯಕ್ಕಾಗಿ ಯೆಹೋವನ ಕಡೆಗೆ ತಿರುಗಿಕೊಳ್ಳಲು, ನಮ್ಮನ್ನು ಭರವಸಾತ್ಮಕವಾಗಿ ಉತ್ತೇಜಿಸುತ್ತಾನೆ.—ಹೋಲಿಸಿರಿ 1 ಪೇತ್ರ 5:6, 7.
ಯೆಹೋವನೊಂದಿಗೆ ಒಂದು ಬಲವಾದ, ಭರವಸಾರ್ಹವಾದ ಸಂಬಂಧವನ್ನು ಕಟ್ಟಿರಿ ಮತ್ತು ಕಾಪಾಡಿಕೊಳ್ಳಿರಿ
ದಾವೀದನಿಗೆ ಯೆಹೋವನೊಂದಿಗಿದ್ದಂತಹ—ಭಾರಿ ಪರೀಕ್ಷೆಯ ಮತ್ತು ಸಂಕಟದ ಸಮಯಗಳಲ್ಲಿ ಅವನನ್ನು ಪೋಷಿಸಿದಂತಹ—ರೀತಿಯ ಒಂದು ಸಂಬಂಧವನ್ನು ನಾವು ಹೇಗೆ ಪಡೆದುಕೊಳ್ಳಬಲ್ಲೆವು? ದೇವರ ವಾಕ್ಯವಾದ ಬೈಬಲಿನ ಶ್ರದ್ಧಾಪೂರ್ವಕ ವಿದ್ಯಾರ್ಥಿಗಳಾಗಿರುವ ಮೂಲಕ ನಾವು ಅಂತಹ ಒಂದು ಸಂಬಂಧವನ್ನು ಕಟ್ಟುತ್ತೇವೆ. ಆತನ ನಿಯಮಗಳು, ಮೂಲತತ್ವಗಳು, ಮತ್ತು ವ್ಯಕ್ತಿತ್ವದ ಕುರಿತಾಗಿ ನಮಗೆ ಬೋಧಿಸುವಂತೆ ನಾವು ಆತನನ್ನು ಅನುಮತಿಸುತ್ತೇವೆ. (ಕೀರ್ತನೆ 19:7-11) ನಾವು ದೇವರ ವಾಕ್ಯದ ಕುರಿತಾಗಿ ಧ್ಯಾನಿಸಿದಂತೆ, ಆತನಿಗೆ ಇನ್ನೂ ಹೆಚ್ಚು ನಿಕಟವಾಗಿ ಬೆಳೆಯುತ್ತೇವೆ ಮತ್ತು ಸಂಪೂರ್ಣವಾಗಿ ಆತನ ಮೇಲೆ ಭರವಸೆಯಿಡಲು ಕಲಿಯುತ್ತೇವೆ. (ಕೀರ್ತನೆ 143:1-5) ಇನ್ನೂ ಹೆಚ್ಚಾಗಿ ಯೆಹೋವನಿಂದ ಶಿಕ್ಷಿತರಾಗಲು ಜೊತೆ ಆರಾಧಕರೊಂದಿಗೆ ನಾವು ಸಹವಾಸಿಸಿದಂತೆ, ಆ ಸಂಬಂಧವನ್ನು ನಾವು ಹೆಚ್ಚು ಆಳಗೊಳಿಸುತ್ತೇವೆ ಮತ್ತು ಬಲಪಡಿಸುತ್ತೇವೆ. (ಕೀರ್ತನೆ 122:1-4) ನಮ್ಮ ಹೃತ್ಪೂರ್ವಕವಾದ ಪ್ರಾರ್ಥನೆಯ ಮೂಲಕ ನಾವು ಯೆಹೋವನೊಂದಿಗಿನ ನಮ್ಮ ಸಂಬಂಧವನ್ನು ಆಳಗೊಳಿಸುತ್ತೇವೆ.—ಕೀರ್ತನೆ 55:1.
ಯೆಹೋವನೊಂದಿಗಿನ ದಾವೀದನ ಸಂಬಂಧವು ಈ ಹಿಂದೆ ಎಷ್ಟು ಪ್ರಬಲವಾಗಿತ್ತೊ ಅಷ್ಟು ಪ್ರಬಲವಾಗಿ ಇಲ್ಲದಿದ್ದಂತಹ ಸಂದರ್ಭಗಳಲ್ಲಿ, ನಮ್ಮಂತೆ ಅವನು ಖಿನ್ನನಾಗಿದ್ದಿರಬೇಕೆಂಬುದು ನಿಜ. ದಬ್ಬಾಳಿಕೆಯು ನಮ್ಮನ್ನು “ಆವೇಶದಿಂದ ವರ್ತಿಸು”ವಂತೆ ಮಾಡಬಲ್ಲದು. (ಪ್ರಸಂಗಿ 7:7, NW) ಆದರೆ ಏನು ಸಂಭವಿಸುತ್ತಿದೆ ಎಂಬುದನ್ನು ಯೆಹೋವನು ನೋಡುತ್ತಾನೆ, ಮತ್ತು ನಮ್ಮ ಹೃದಯದಲ್ಲಿ ಏನಿದೆ ಎಂಬುದು ಆತನಿಗೆ ತಿಳಿದಿದೆ. (ಪ್ರಸಂಗಿ 4:1; 5:8) ಯೆಹೋವನೊಂದಿಗಿನ ನಮ್ಮ ಸಂಬಂಧವನ್ನು ಬಲವಾಗಿರಿಸಲು ನಾವು ಕಷ್ಟಪಟ್ಟು ಕಾರ್ಯನಡಿಸುವ ಅಗತ್ಯವಿದೆ. ಆಗ, ನಾವು ಯಾವುದೇ ಚಿಂತಾಭಾರಗಳನ್ನು ಹೊರಬೇಕಾಗಿರಲಿ, ಒತ್ತಡವನ್ನು ಪರಿಹರಿಸಲು ಅಥವಾ ನಮ್ಮ ಸನ್ನಿವೇಶದೊಂದಿಗೆ ನಿಭಾಯಿಸಲಿಕ್ಕಾಗಿ ನಮಗೆ ಬಲವನ್ನು ಒದಗಿಸಲು ಯೆಹೋವನ ಮೇಲೆ ಆತುಕೊಳ್ಳಬಲ್ಲೆವು. (ಫಿಲಿಪ್ಪಿ 4:6, 7, 13) ಯೆಹೋವನಿಗೆ ನಾವು ನಿಕಟವಾಗಿ ಉಳಿಯುವುದರ ಕುರಿತಾದ ವಿಷಯವು ಇದಾಗಿದೆ. ದಾವೀದನು ಇದನ್ನು ಮಾಡಿದಾಗ, ಅವನು ಸಂಪೂರ್ಣವಾಗಿ ಸುರಕ್ಷಿತನಾಗಿದ್ದನು.
ಆದುದರಿಂದ, ನಿಮ್ಮ ಪರಿಸ್ಥಿತಿಗಳು ಏನೇ ಆಗಿರಲಿ, ಯಾವಾಗಲೂ ನಿಮ್ಮ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕಿರಿ ಎಂದು ದಾವೀದನು ಹೇಳುತ್ತಾನೆ. ಆಗ ನಾವು ಈ ವಾಗ್ದಾನದ ಸತ್ಯತೆಯನ್ನು ಅನುಭವಿಸುವೆವು: “ಆತನು ನಿನ್ನನ್ನು ಉದ್ಧಾರಮಾಡುವನು. ನೀತಿವಂತನನ್ನು ಎಂದಿಗೂ ಕದಲಗೊಡಿಸನು.”—ಕೀರ್ತನೆ 55:22.